Month: July 2024

  • *ಕೆರೆ ಸೇರುತ್ತಿದೆ ಕಲುಷಿತ ನೀರು : ಕಾರ್ಖಾನೆ ವಿರುದ್ಧ ಓಬದೇನಹಳ್ಳಿ ಜನಧ್ವನಿ ವೇದಿಕೆ ಆಕ್ರೋಶ*

    ದೊಡ್ಡಬಳ್ಳಾಪುರ ( ವಿಜಯಮಿತ್ರ) : ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕೈಗಾರಿಕ ಪ್ರದೇಶದ ವಿಗ್ನೇಷ್ ಟೆಕ್ ಪ್ಯಾಕ್ ಪ್ರವೈಟ್ ಲಿಮಿಟೆಡ್ ಕಾರ್ಖಾನೆಯು ಇಂದು ಸುಮಾರು 4 ಗಂಟೆಯಿಂದ ಸುರಿಯುತ್ತಿರುವ ಮಳೆ ನೀರಿಗೆ ಕಿಮಿಕಲ್ ನೀರು ಮತ್ತು ಕಲುಷಿತ ನೀರನ್ನು ಹರಿದು ಬಿಟ್ಟಿದ್ದಾರೆ ಇಂದು ಸ್ಥಳೀಯರು ಆರೋಪಿಸಿದ್ದಾರೆ.


    ಜನಧ್ವನಿ ವೇದಿಕೆಯ ಮುಖಂಡರಾದ ರಾಜೇಂದ್ರ ಮಾತನಾಡಿ ಮಳೆ ಬೀಳುವ ಸಮಯ ಗಮನಿಸಿರುವ  ಕಾರ್ಖಾನೆಯ HR. ಮೇನೇಜರ್ ಲೋಕೇಶ್ ರವರು ತಾವೂ ಶೇಖರಿಸಿದ್ದ ಕಲುಷಿತ ನೀರನ್ನು ಓಬದೇನಹಳ್ಳಿ ಕೆರೆಗೆ ಮಳೆಯ ನೀರಿನ ಜೊತೆಗೆ ಬಿಟ್ಟಿದ್ದಾರೆ ಇದನ್ನು ಗಮನಿಸಿದ ನಮ್ಮ ಓಬದೇನಹಳ್ಳಿ ಜನಧ್ವನಿ ವೇದಿಕೆಯ ನವೀನಅಜಯ್ ಕುಮಾರ್.ಕುಮಾರ್,ಕಾಂತರಾಜು,
    ಅರ್ನಾಲ್ಡ್‌ ಮುನಿರಾಜು ರವರು ಕಾರ್ಖಾನೆಯ ಮ್ಯಾನೇಜರ್ ರವರಿಗೆ ಈ ಕುರಿತು ಏಕೆ ಈ ರೀತಿ ಮಳೆಯ ನೀರಿನ ಜೊತೆಗೆ ಕಲುಷಿತ ನೀರನ್ನು ಬಿಟ್ಟು ಚೆನ್ನಾಗಿರುವ ನೀರನ್ನು ಕಲುಷಿತಗೊಳಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡಲಾಗಿ ಲೋಕೇಶ್ ರವರು ಕೂಡಲೇ ಕಾರ್ಖಾನೆಯ ಗೇಟ್ ನ್ನು ಮುಚ್ಚಿ ನೀವೂ ನಮಗೆ ಕೇಳುವ ಅವಶ್ಯಕತೆ ಇಲ್ಲ ಕೆಐಎಡಿಬಿಯನ್ನು ಪ್ರಶ್ನಿಸಿ ಅಥವಾ ಪರಿಸರ ಮಾಲಿನ್ಯ ಕೇಂದ್ರ ಕ್ಕೆ ದೂರು ನೀಡಿ ಎಂಬ ಉತ್ತರವನ್ನು ದೌರ್ಜನ್ಯದಿಂದ ಬೇಜವಾಬ್ದಾರಿಯುತವಾಗಿ ನೀಡಿದ್ದಾರೆ ಎಂದು ತಿಳಿಸಿದರು.


    ಮಳೆ ನೀರಿಗೆ ಕಲುಷಿತ ನೀರನ್ನು ಬಿಡುತ್ತಿರುವ ಕಾರ್ಖಾನೆಯ ವಿರುದ್ದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಪರಿಸರ ವನ್ನು ಕಾಪಾಡಬೇಕು ಎಂದು ಜನಧ್ವನಿ ವೇದಿಕೆಯ ಮುಖಂಡರು ಆಗ್ರಹಿಸುತ್ತೇವೆ . ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಕೇಂದ್ರದ ಮುಂದೆ ದರಣಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

  • *ದೊಡ್ಡಬಳ್ಳಾಪುರ ಫೋಟೋ ಮತ್ತು ವಿಡಿಯೋ ಛಾಯಾಗ್ರಹಕರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ : ಸಂಘದ ನೂತನ ಸಾರಥಿಯಾಗಿ ಅಂಚರಹಳ್ಳಿ ಮೋಹನ್ ಅವಿರೋಧ ಆಯ್ಕೆ*

    ದೊಡ್ಡಬಳ್ಳಾಪುರ ಫೋಟೋ ಮತ್ತು ವಿಡಿಯೋ ಛಾಯಾಗ್ರಹಕರ ಸಂಘದ ನೂತನ ಅಧ್ಯಕ್ಷರಾಗಿ ಅಂಚರಹಳ್ಳಿ ಮೋಹನ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ತಾಲ್ಲೂಕಿನ ಫೋಟೋ ಮತ್ತು ವಿಡಿಯೋ ಛಾಯಾಗ್ರಹಕರ ಸಂಘಕ್ಕೆ 2024 -25 ಹಾಗೂ 2025 -26 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು.

     

     

    ಸಂಘದ ಗೌರವ ಅಧ್ಯಕ್ಷರಾಗಿ ಸಂಪತ್ ಕುಮಾರ್, ಉಪಾಧ್ಯಕ್ಷರುಗಳಾಗಿ ಹನುಮಗೌಡ,ಗೋಪಾಲಚಾರಿ, ಮುನಿರಾಜು,ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್,ಸಹ ಕಾರ್ಯದರ್ಶಿಯಾಗಿ ಬೃಂದಾ, ಕಾರ್ಯಾಧ್ಯಕ್ಷರಾಗಿ ಅರುಣ್ ರಾಜಘಟ್ಟ ,ಖಜಾಂಚಿಯಾಗಿ ರಾಜಪ್ಪಿ, ಸಹ ಖಜಾಂಚಿಯಾಗಿ ಬಾಬು, ಸಂಘಟನಾ ಕಾರ್ಯದರ್ಶಿಯಾಗಿ ರಘು ಕಾರ್ಲಾಪುರ, ರಾಜೇಶ್ ಶ್ರವಣೂರು,ಸಂಚಾಲಕರಾಗಿ ಹರೀಶ್ ಮತ್ತು ಮಂಜುನಾಥ್ ನಿರ್ದೇಶಕರುಗಳಾಗಿ ಸುನಿಲ್, ಪ್ರವೀಣ್,ಮಲ್ಲೇಶ್, ಸುರೇಶ್ .ರಾಮಚಂದ್ರ .ನಂದ. ಬಾಬು .ಕವಿತಾ .ನೇತ್ರ .ಮಂಜುನಾಥ್. ಮನು ವಿಲಾಸ್. ಅವಿನಾಶ್ .ನವೀನ್. ಅಶೋಕ್. ಮಹಾಂತೇಶ್ ಮತ್ತು ಮಾರುತಿ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • *ಒತ್ತುವರಿ ಜೊತೆಗೆ ರಾಜಕಾಲುವೆ ಮುಚ್ಚಿ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪ: ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ರಾಜೀವ್ ಗಾಂಧಿ ಬಡಾವಣೆ ನಿವಾಸಿಗಳ ಪ್ರತಿಭಟನೆ*

    ದೊಡ್ಡಬಳ್ಳಾಪುರ( ವಿಜಯಮಿತ್ರ) : ತಾಲ್ಲೂಕಿನ ರಾಜೀವ್ ಗಾಂಧಿ ಬಡಾವಣೆಯ ರಾಜಕಾಲುವೆ ಹಾಗೂ 66 ಅಡಿಗಳ ಸಂಪರ್ಕ ರಸ್ತೆ ಒತ್ತುವರಿಯಾಗಿದೆ, ಮಳೆನೀರು ಹರಿದು ಹೋಗಲು ಇರುವ ರಾಜಕಾಲುವೆ ಮುಚ್ಚಿ ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ, ಸರ್ಕಾರಿ ಸ್ಥಳವು ಒತ್ತುವರಿಯಾಗಿದ್ದು ಸದರಿ ಸ್ಥಳದ ಒತ್ತುವರಿಯನ್ನು ತೆರವು ಮಾಡುವ ಮೂಲಕ ಸಾರ್ವಜನಿಕರಿಗೆ ರಾಜಕಾಲುವೆ ಹಾಗೂ ರಸ್ತೆ ಉಳಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

    ಜೆಡಿಎಸ್ ಮುಖಂಡರಾದ ಪ್ರವೀಣ್ ಕುಮಾರ್ ಮತನಾಡಿ ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡ್ ( ರಾಜೀವ್ ಗಾಂಧಿ ಬಡಾವಣೆ) ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಹಳಷ್ಟಿದೆ. ಇದೀಗ ಹೊಸ ಸಮಸ್ಯೆಯೊಂದು ಸೇರಿಕೊಂಡಿದ್ದು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲಾಗಿದೆ. ನಗರದಿಂದ ರಾಜೀವ್ ಗಾಂಧಿ ಬಡವಾಣೆಗೆ ಸಂಪರ್ಕಿಸುವ ಹಳೇ ಮಧುಗಿರಿ ರಸ್ತೆಗೆ ಸಂಬಂಧಿಸಿದಂತೆ ನಾಕಾಶೆ ಹಾಗೂ ಸರ್ಕಾರಿ ದಾಖಲೆಗಳಲ್ಲಿ 66 ಆಡಿಗಳ ಅಗಲದ ರಸ್ತೆ ಇದ್ದು ಪ್ರಸ್ತುತ 20 ಆಡಿಗಳ ರಸ್ತೆ ಇದೆ ಇದಕ್ಕೆ ಮುಖ್ಯ ಕಾರಣ ರಸ್ತೆಯ ಎರಡು ಬದಿಗಳು ಒತ್ತುವರಿಯಾಗಿರುವುದು.
    ಕಿರಿದಾದ ರಸ್ತೆಯಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಸಾವಿರಾರು ಜನರು ಸಂಚರಿಸುವ ರಸ್ತೆ ಇದಾಗಿದ್ದು, ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ನೆಡೆಯಬೇಕಿದೆ. ಹಾಗೂ ಇದೀಗ ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ರಾಜಕಾಲುವೆಯನ್ನು ಮುಚ್ಚಿ ಲೇಔಟ್ ನಿರ್ಮಾಣಕ್ಕೆ ಕೆಲ ಪ್ರಭಾವಿಗಳು ಮುಂದಾಗಿದ್ದಾರೆ.ರಾಜಕಾಲುವೆಗೆ ಅಡ್ಡಲಾಗಿ ಗೋಡೆ ನಿರ್ಮಾಣ ಮಾಡುವ ಮೂಲಕ ರಾಜಕಾಲುವೆ ಮುಚ್ಚುವ ಪ್ರಯತ್ನ ನೆಡೆಯುತ್ತಿದೆ ಇದರಿಂದ ಮಳೆನೀರು ಹರಿದು ಹೋಗದೆ ರಸ್ತೆಯಲ್ಲಿ ನಿಲ್ಲುತ್ತದೆ, ರಸ್ತೆಯಲ್ಲಿ ನೀರು ನಿಲ್ಲುವ ಕಾರಣ ರಾಜೀವ್ ಗಾಂಧಿ ಬಡಾವಣೆ ಸಂಪರ್ಕವೇ ಕಡಿತವಾಗಲಿದೆ ಎಂದರು.


    ಈ ಕುರಿತು ಸ್ಥಳೀಯರಾದ ಶಿವಣ್ಣ ಮಾತನಾಡಿ ರಸ್ತೆ ವಿಚಾರವಾಗಿ ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನೆಡೆಸುತ್ತಿದ್ದೇವೆ ಆದರೆ ಈವರೆಗೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದು ವಿಪರ್ಯಾಸ.ನಮಗೆ ಯಾರಿಗೂ ತೊಂದರೆ ಕೊಡುವ ಉದ್ದೇಶವಿಲ್ಲ ಆದರೆ ಈಗ ಒತ್ತುವರಿ ಸಮಸ್ಯೆ ಜೊತೆಗೆ ರಾಜಕಾಲುವೆಗೆ ಅಡ್ಡಲಾಗಿ ಗೋಡೆ ನಿರ್ಮಾಣ ಮಾಡುವ ಮೂಲಕ ರಾಜಕಾಲುವೆ ಮುಚ್ಚುವ ಹುನ್ನಾರ ನೆಡೆಯುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಕ್ರಮ ಕೈಗೊಳ್ಳಬೇಕಿದೆ . ನಮ್ಮ ಬಡಾವಣೆಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ ಈಗ ರಸ್ತೆ ಹಾಗೂ ರಾಜಕಾಲುವೆ ಕಸಿದುಕೊಳ್ಳುವ ಪ್ರಯತ್ನ ನೆಡೆಯುತ್ತಿದೆ ತಾಲ್ಲೂಕು ಆಡಳಿತ ಈ ಕುರಿತು ಗಮನಹರಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದರು.

    ಇಷ್ಟು ವರ್ಷಗಳು ಈ ರಾಜಕಾಲುವೆ ಮೂಲಕವೇ ಮಳೆನೀರು ಸರಾಗವಾಗಿ ಹರಿದು ಹೋಗುತ್ತಿತ್ತು, ಆದರೆ ಈಗ ಏಕಾಏಕಿ ರಾಜಕಾಲುವೆ ಗೆ ಅಡ್ಡಲಾಗಿ ಗೋಡೆ ನಿರ್ಮಾಣ ಮಾಡುವ ಮೂಲಕ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ, ಈಗಾಗಲೇ ಹಲವು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿರುವ ಜನರು , ರಾಜಕಾಲುವೆ ಮುಚ್ಚಿದಲ್ಲಿ ಮಳೆನೀರು ರಸ್ತೆ ಮೇಲೆ ನಿಲ್ಲುವುದರಿಂದ ಮತ್ತಷ್ಟು ಸಮಸ್ಯೆ ಎದುರಿಸಲಿದ್ದಾರೆ. ಒತ್ತುವರಿ ಹಾಗೂ ರಾಜಕಾಲುವೆ ಸಮಸ್ಯೆಯನ್ನು ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಕೂಡಲೇ ಬಗೆಹರಿಸಬೇಕಿದೆ ಮೂಲಭೂತ ಸೌಕರ್ಯಗಳನ್ನು ಪ್ರತಿಭಟಿಸಿ ಪಡೆಯುವ ಸಮಾಜದಲ್ಲಿ ನಾವಿದ್ದೇವೆ ಎಂಬುದು ನೋವಿನ ಸಂಗತಿ. ಈ ಸಮಸ್ಯೆಗಳನ್ನು ತಾಲ್ಲೂಕು ಹಾಗೂ ನಗರ ಸಭೆ ಆಡಳಿತ ತ್ವರಿತವಾಗಿ ಪರಿಹರಿಸಲಿ ಎಂದು ಅಕ್ರೋಶ ವ್ಯಕ್ತಪಡಿಸಿದರು.


    ಸ್ಥಳೀಯ ಮುಖಂಡರಾದ ಶಶಿಕುಮಾರ್ ಮಾತನಾಡಿ, ರಾಜೀವ್ ಗಾಂಧಿ ಬಡವಾಣೆ ನಿರ್ಮಾಣವಾಗಿ 20 ವರ್ಷ ಕಳೆದರು ಮೂಲಭೂತ ಸೌಕರ್ಯಗಳಿಂದ ನಾವು ವಂಚಿತರು, ನಮ್ಮ ಬಡಾವಣೆಗೆ ಮೂಲಭೂತ ಸೌಕರ್ಯ ಕೊಡಲು ಸ್ಥಳೀಯ ಆಡಳಿತ ವ್ಯವಸ್ಥೆ ಅಸಡ್ಡೆ ತೋರುತ್ತಿದೆ , ಈ ಕುರಿತು ಧ್ವನಿಯಾಗಬೇಕಿರುವ ಸ್ಥಳೀಯ ವಾರ್ಡ್ ಸದಸ್ಯರು ಸುಮ್ಮನಿರುವುದು ಬೇಸರತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.

  • *ರಾಜ್ಯ ಮಟ್ಟದ ಕ್ರೀಡಾ ಯೋಗಾಸನ ಚಾಂಪಿಯನ್ ಶಿಪ್ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಭಾಗಿ : 5 ಚಿನ್ನ, 5 ಬೆಳ್ಳಿ,4 ಕಂಚು ಸೇರಿದಂತೆ 25 ಬಹುಮಾನಗಳಿಸಿದ ಯೋಗಪಟುಗಳು*

    ದೊಡ್ಡಬಳ್ಳಾಪುರ ( ವಿಜಯಮಿತ್ರ) : ತಾಲ್ಲೂಕಿನ  ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ ಷಿಪ್,2024 ರಲ್ಲಿ ಭಾಗವಹಿಸಿ ಒಟ್ಟು 25 ಬಹುಮಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಯೋಗಕೇಂದ್ರದ ಗೌರವ ಕಾರ್ಯದರ್ಶಿ ನಟರಾಜು ತಿಳಿಸಿದ್ದಾರೆ.

    ಚಿಕ್ಕಮಂಗಳೂರು ಜಿಲ್ಲೆಯ ಕಡೂರಿನ ಪುಟ್ಟಮ್ಮ ಬೆಂಕಿಲಕ್ಷ್ಮಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಂಪಿಯನ್ ಷಿಪ್,2024 ರಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಭಾಗವಹಿಸಿ 5 ಚಿನ್ನ, 5 ಬೆಳ್ಳಿ, 4 ಕಂಚು ಸೇರಿದಂತೆ ಒಟ್ಟು 25 ಬಹುಮಾನಗಳನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

    ಬಹುಮಾನ ಪಡೆದ ಯೋಗಪಟುಗಳ ಪಟ್ಟಿ ಇಂತಿದೆ :-

    8 ರಿಂದ 10 ವರ್ಷದ ಬಾಲಕರ ವಿಭಾಗದಲ್ಲಿ ಜೆ.ಸಿ.ಪ್ರಥಮಶೆಟ್ಟಿ ದ್ವಿತೀಯ ಸ್ಥಾನ, ಯಶ್ವಿನ್.ಎಸ್ 5 ಸ್ಥಾನ,8 ರಿಂದ 10 ವರ್ಷದ ಬಾಲಕೀಯರ ವಿಭಾಗದಲ್ಲಿ ಎಸ್.ಅಪೂರ್ವ ದ್ವಿತೀಯ ಸ್ಥಾನ,ಎನ್ ಖುಷಿಪ್ರಿಯ ತೃತೀಯ ಸ್ಥಾನ,ಸಾನ್ವಿ.ಎಂ.ರಾಜು 6ನೇ ಸ್ಥಾನ,10ರಿಂದ 12 ವರ್ಷದ ಬಾಲಕರ ವಿಭಾಗದಲ್ಲಿಎಸ್.ಕುಶಲ್ ಪ್ರಥಮ ಸ್ಥಾನ, ನೀರಜ್.ಎಲ್ ತೃತೀಯ ಸ್ಥಾನ, ವೇದಿಕ್ ಶೆಟ್ಟಿ 5ನೇ ಸ್ಥಾನ, ಹಿತೇಶ್.ಎ 6ನೇ ಸ್ಥಾನ, 10ರಿಂದ12 ವರ್ಷದ ಬಾಲಕೀರ ವಿಭಾಗದಲ್ಲಿ ಗೌತಮಿ.ಹೆಚ್.ಆರ್. ಪ್ರಥಮ ಸ್ಥಾನ,ಯಶಸ್ವಿನಿ.ಟಿ. ದ್ವಿತೀಯ ಸ್ಥಾನ, ಹಿತಶ್ರೀ ಕೆ.ಎಂ ತೃತೀಯ ಸ್ಥಾನ,12ರಿಂದ 14 ವರ್ಷದ ಬಾಲಕರ ವಿಭಾಗದಲ್ಲಿ ಶಶಾಂಕ್.ಪಿ.ಎಸ್ ಪ್ರಥಮ ಸ್ಥಾನ, ಕೆ.ಎನ್.ವಿಶ್ವನಾಥ್ ತೃತೀಯ ಸ್ಥಾನ, ಎ.ಸಂಜಯ್ ಕುಮಾರ್ 5ನೇ ಸ್ಥಾನ,12ರಿಂದ15 ಬಾಲಕಿಯರ ವಿಭಾಗದಲ್ಲಿ ರನಿತಾ.ಆರ್ 5ನೇ ಸ್ಥಾನ,14ರಿಂಧ16 ವರ್ಷದ ಬಾಲಕೀಯರ ವಿಭಾಗದಲ್ಲಿ ಮಧುಶಾಲಿನಿ.ಡಿ.ಎಸ್ 5ನೇಸ್ಥಾನ, 16ರಿಂದ18 ವರ್ಷದ ಯುವತಿಯರ ವಿಭಾಗದಲ್ಲಿ ಎಂ.ಆರ್.ಜಾಹ್ನವಿ,ದ್ವಿತೀಯ ಸ್ಥಾನ 18ರಿಂದ 21 ವರ್ಶದ ಯುವಕರು ಕೆ.ವಿನಯ್ ಕುಮಾರ್, ಪ್ರಥಮ ಸ್ಥಾನ, ವರಪ್ರಸಾದ್.ವಿ ದ್ವಿತೀಯ ಸ್ಥಾನ, ಚೇತನ್ ರಾಮ್.ಕೆ.ಎಮ್ 6ನೇ ಸ್ಥಾನ, 21ರಿಂದ25 ವರ್ಷದ ಯುವತಿಯರು ಗಾನಶ್ರೀ.ಎ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

     

    ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿರುವ ಯೋಗಪಟುಗಳಿಗೆ ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶುಭಹಾರೈಸಿದ್ದಾರೆ.

  • *ದೊಡ್ಡಬಳ್ಳಾಪುರ : ಕುರಿ ಕಳ್ಳತನ ಪ್ರಕರಣ ಬೇಧಿಸಿ ಲಕ್ಷಾಂತರ ಮೌಲ್ಯದ ಕುರಿಗಳನ್ನು ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸ್*

    ದೊಡ್ಡಬಳ್ಳಾಪುರ: ಕುರಿ ಕಳ್ಳತನ ಮಾಡಿದ ಇಬ್ಬರು ಖದೀಮರನ್ನು ಬಂಧಿಸಿ, ಅವರಿಂದ 2.30 ಲಕ್ಷ ಮೌಲ್ಯದ 18 ಕುರಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ತಾಲೂಕಿನ ವಿವಿಧೆಡೆ ನಡೆದಿದ್ದ ಕುರಿ ಕಳ್ಳತನ ಪ್ರಕರಣಗಳನ್ನು ಬೇಧಿಸಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ , ಬಂಧಿತರನ್ನು ದರ್ಗಾ ಪೇಟೆಯ ನಿವಾಸಿ ನೂರುಲ್ಲಾ, ರೋಜಿಪುರದ ನಿವಾಸಿ ಮಹಮ್ಮದ್ ಅಬೀಬ್ ಎಂದು ಗುರುತಿಸಲಾಗಿದೆ. ಜುಲೈ 21 ರಂದು ಸಂತೋಷ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

     

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜು, ಡಿವೈಎಸ್ಪಿ ಪಿ. ರವಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಕುರಿ ಕಳ್ಳರನ್ನು ಬಂಧಿಸಿದ ಗ್ರಾಮಾಂತರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಶ್ಲಾಘಿಸಿದ್ದಾರೆ.

  • *ಉದ್ಯಮಿ ಸಮಾಜಸೇವಕ ಸಂದೀಪ್ ರವರಿಗೆ ಹುಟ್ಟುಹಬ್ಬದ ಸಂಭ್ರಮ : ವಿಜೃಂಭಣೆಯ ಕಾರ್ಯಕ್ರಮ ಆಯೋಜನೆ ಮಾಡಲಿರುವ ಅಭಿಮಾನಿ ವರ್ಗ *

    ದೊಡ್ಡಬಳ್ಳಾಪುರ:ಯುವ ಮುಖಂಡ ಉದ್ಯಮಿ ಹಾಗೂ ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ
    ಜನ್ಮ ದಿನಾಚರಣೆ ಜುಲೈ 31 ಬುಧವಾರದಂದು ಅವರ ಸ್ವಗ್ರಾಮದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಅಭಿಮಾನಿ ಬಳಗ ತಿಳಿಸಿದೆ.

    ನಿರಂತರ ಸಮಾಜಸೇವೆ ಹಾಗೂ ಕನ್ನಡಪರ ಧ್ವನಿಯಾಗಿ ಶ್ರಮಿಸುವ ಸಂದೀಪ್ ರವರ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಯೋಜನೆ ರೂಪಿಸಲಾಗಿದ್ದು ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು,ಹಿತೈಷಿಗಳು ಸೇರಿದಂತೆ ಅಭಿಮಾನಿ ವರ್ಗ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    ಕಾರ್ಯಕ್ರಮವನ್ನು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಿ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಬ್ಯಾಗ್ ವಿತರಣೆ ಕಾರ್ಯನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು.

    ಕಾರ್ಯಕ್ರಮಕ್ಕೆ ದೇವನಹಳ್ಳಿ ಮಾಜಿಶಾಸಕ ನಿಸರ್ಗ ನಾರಾಯಣಸ್ವಾಮಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು ಕರವೇ ಕುಟುಂಬ ಬಳಗಸೇರಿದಂತೆ ತಾಲ್ಲೂಕಿನ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಸಂಘಟಕರು ತಿಳಿಸಿದ್ದಾರೆ.

  • *ನಿಗಮ ಮಂಡಳಿಗಳು ಲೂಟಿ ಕೇಂದ್ರಗಳಾಗಿವೆ – ಡಾ. ವೆಂಕಟಸ್ವಾಮಿ*

    ದೊಡ್ಡಬಳ್ಳಾಪುರ( ವಿಜಯಮಿತ್ರ) : ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸಮತಾ ಸೈನಿಕ ದಾಳ ಹಾಗೂ ಸ್ವಾಭಿಮಾನಿ ಎಸ್.ಸಿ./ಎಸ್.ಟಿ. ಸಂಘಟನೆಗಳ ಒಕ್ಕೂಟದ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಮತ್ತು ಹಗರಣಗಳನ್ನು ಸಿ.ಬಿ.ಐ. ತೆನಿಖೆಗೆ ನೀಡುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನೆಡೆಸಲಾಯಿತು.

    ಪ್ರತಿಭಟನೆಯಲ್ಲಿ ದಲಿತನಾಯಕ ಹಾಗೂ ಎಸ್ ಎಸ್ ಡಿ ರಾಜ್ಯಾಧ್ಯಕ್ಷರ ಡಾ. ವೆಂಕಟಾಸ್ವಾಮಿ ನೇತೃತ್ವದಲ್ಲಿ ತಾಲ್ಲೂಕಿನ ಉಪವಿಭಾಗ ಅಧಿಕಾರಿಗಳ ಮುಖೇನ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

     

    ನಂತರ ಮಾತನಾಡಿದ ಅವರು ಕರ್ನಾಟಕ ಪರಿಶಿಷ್ಟ ಜಾತಿ/ಪಂಗಡಗಳ ಅಭಿವೃದಿದು ನಿಗಮವೊಂದೇ ಅಸ್ತಿತ್ವದಲ್ಲಿದ್ದಾಗ ಲೂಟಿ ದಂಧೆಗಳ ಮುಕ್ತವಾಗಿ ಆಡಳಿತ ನಡೆದು ಈ ಜನಾಂಗಗಳ ಫಲಾನುಭವಿಗಳಿಗೆ ಯೋಜನೆಗಳ ಉಪಯೋಗ ದೊರೆಯುತ್ತಿತ್ತು.ಆದರೆ ಈ ನಿಗಮವು ವಿವಿಧ ಜಾತಿ, ಉಪಜಾತಿಗಳ ಹೆಸರಲ್ಲಿ ವಿಭಜನೆಗೊಂಡು ಅಂತಹ ನಿಗಮಗಳಲ್ಲಿ ಇದೀಗ ಲೂಟಿ ದಂಧೆಯು ಅವ್ಯಾಹತವಾಗಿ ನಡೆದಿವೆ. ಈ ನಿಗಮಗಳ ಆಡಳಿತವು ಆಯಾಉಪಜಾತಿಗಳ ಶಾಸಕರ,ಜಾತಿ ಸಂಘಟನೆಗಳ ಮುಖಂಡರ ಕೈ ಸೇರಿ ಅವು ಲೂಟಿ ಕೇಂದ್ರಗಳಾಗಿವೆ ಎನ್ನಲು ಇಂದಿನ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವು ಜೀವಂತ ಸಾಕ್ಷಿಯಾಗಿದೆ ಎಂದರು.

     

    Ad

    ಈ ಪ್ರಕರಣದ ನೇರ ಹೊಣೆಯನ್ನು ರಾಜ್ಯದ ಮುಖ್ಯಮಂತ್ರಿಗಳು ಹೊರುವಂತಹ ಘಟ ತಲುಪಿದೆ.ನಿಗಮದ ಬಹುದೊಡ್ಡ ಹಣವು ಹೈದರಬಾದಿಗೆ ವರ್ಗಾವಣೆಯಾಗಿ ಅದು ವಿವಿಧ ಅನೇಕ ವ್ಯಾಪಾರ ಕೇಂದ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಬಳಕೆಯಾಗಿರುವುದನ್ನು ಮುಖ್ಯಮಂತ್ರಿಗಳು ಲಘುವಾಗಿ ಪರಿಗಣಿಸಿರುವುದು ಮತ್ತು ತನ್ನ ಸಹೋದ್ಯೋಗಿ ಸಚಿವರಿಂದ ಹೇಳಿಕೆಗಳನ್ನು ಕೊಡಿಸುವ ಮೂಲಕ ತನ್ನ ತಲೆದಂಡ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಲಾಗಿದೆ.ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊರಬೇಕು ಸದನದ ಸಭಾಪತಿಗಳು ಮುಖ್ಯಮಂತ್ರಿಗಳ ರಾಜೀನಾಮೆಯನ್ನು ಪಡೆದು ಪರಿಶಿಷ್ಟ ಜನಾಂಗಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅಗ್ರಹಿಸಿದರು.

     

     

    ಪಂಚಮರ ಹಣ ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡಿರುವುದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ.ಪರಿಶಿಷ್ಟರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಮತ್ತು ವಿದೇಶಿ ವಿದ್ಯಾರ್ಥಿ ವೇತನ ಕಡಿತಗೊಳಿಸುವ ಮೂಲಕ ಮುಖ್ಯಮಂತ್ರಿಗಳು ದಲಿತ ದ್ರೋಹಿಯಾಗಿದ್ದಾರೆ. ಈ ಕಾರಣಗಳಿಗಾಗಿ ಸ್ವಾಭಿಮಾನಿ ಎಸ್ಸಿ/ಎಸ್ಟಿ ಸಂಘಟನೆಗಳ ಒಕ್ಕೂಟವು ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸುತ್ತದೆ ಎಂದರು.

     

    ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರು, ಮುತ್ತೂರು ಬಿ. ಎನ್, ಓಬಳೇಶ್,ನಗರ ಅಧ್ಯಕ್ಷರು ಇಮ್ರಾನ್ ಪಾಷ,ತಾಲ್ಲೂಕು ಮಹಿಳಾ ಅಧ್ಯಕ್ಷರು ರತ್ನಮ್ಮ ಕೊನಘಟ್ಟ, ಸುನಂದಮ್ಮ , ನಗರ ಸಮಿತಿ ಸದಸ್ಯರಾದ ದೊಡ್ಡರಾಜು ಟಿ ಸಿ, ಜಿಲ್ಲಾಧ್ಯಕ್ಷರು ಪಿವಿಸಿ ಸ್ವಾಭಿಮಾನ ಸಿದ್ದಲಿಂಗಮ್ಮ, ವಿಜಯಲಕ್ಷ್ಮೀ.ಸಿದ್ದಗಂಗಮ್ಮ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • *ನಿಧನ ವಾರ್ತೆ : ಸಾವಿನ ಮನೆಯಲ್ಲಿ ಭಜನೆ ಮಾಡುತ್ತಿದ್ದ ಧ್ವನಿ ಇನ್ನಿಲ್ಲ : ನೇತ್ರಾದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ*

    ದೊಡ್ಡಬಳ್ಳಾಪುರ (ವಿಜಯಮಿತ್ರ) : ತಮ್ಮ ಭಜನೆಗಳ ಮೂಲಕವೇ ಪ್ರಸಿದ್ದಿ ಪಡೆದಿದ್ದ ಕೊನಘಟ್ಟ ಹನುಮಂತರಾಯಪ್ಪ ರವರು ಇಂದು ವಿಧಿವಶರಾಗಿದ್ದಾರೆ.

     

    ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಜನೆ ಮಾಡುವ( ತಿಥಿ ಕಾರ್ಯಕ್ರಮಗಳಲ್ಲಿ ) ಮೂಲಕ ಹೆಸರುವಾಸಿಯಾಗಿದ್ದ ಅವರು ಇನ್ನು ನೆನಪು ಮಾತ್ರ.

     

    ಹನುಮಂತರಾಯಪ್ಪನವರ ನೇತ್ರಾದಾನ ಮಾಡುವ ಮೂಲಕ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

     

    ಕೊನಘಟ್ಟ ಗ್ರಾಮದಲ್ಲಿ ಅಂತ್ಯಸಂಸ್ಕಾರ ಕ್ರಿಯೆ ನೆಡೆಯಲಿದೆ ಎಂದು ಕುಟುಂಬದ ಮೂಲಗಳು ತಿ.ಳಿಸಿವೆ.

  • *ಆರೋಗ್ಯ ಸಮಸ್ಯೆ ಕುರಿತು ಗ್ರಾಮಸ್ಥರ ದೂರು : ಆರೋಗ್ಯ ತಪಾಸಣಾ ಶಿಬಿರದ ಮೂಲಕ ಪರಿಶೀಲನೆಗೆ ಮುಂದಾದ ನ್ಯಾಯಾಂಗ ಇಲಾಖೆ*

    ದೊಡ್ಡಬಳ್ಳಾಪುರ : ಸ್ಥಳೀಯ ಇಂಡೇನ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ವಿರುದ್ಧ ಸ್ಥಳೀಯ ಗ್ರಾಮಸ್ಥರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ನ್ಯಾಯಾಂಗ ಇಲಾಖೆಯ ಸಹಯೋಗದೊಂದಿಗೆ ಜುಲೈ 27ರಂದು ರಘುನಾಥಪುರ ಗ್ರಾಮದಲ್ಲಿ ಗ್ರಾಮಸ್ಥರಿಗೆ ಆರೋಗ್ಯ ತಪಾಸರ ಶಿಬಿರ ಆಯೋಜನೆ ಮಾಡಲಾಗಿತ್ತು.

     

    ಶಿಬಿರದಲ್ಲಿ ನೂರಾರು ಗ್ರಾಮಸ್ಥರು ಪಾಲ್ಗೊಂಡು ಡಿಪಿ, ಶುಗರ್, ತಲೆನೋವು, ಜ್ವರ,ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವು ಸಮಸ್ಯೆಗಳಿಗೆ ಆರೋಗ್ಯ ಇಲಾಖೆಯಿಂದ ಪ್ರಾಥಮಿಕವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ ಆರ್ ಎಂ ಮಹದೇವ್ ಮಾತನಾಡಿ ರಘುನಾಥಪುರ ಗ್ರಾಮಸ್ಥರು ಆರೋಗ್ಯ ಸಮಸ್ಯೆ ಕುರಿತಾಗಿ ನ್ಯಾಯಾಲಯಕ್ಕೆ ದೂರು ನೀಡಿದ್ದು ಈ ಸಂಬಂಧ ನ್ಯಾಯಾಂಗ ಇಲಾಖೆಯ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಗ್ರಾಮಸ್ಥರ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದೆ.

     

    ಶಿಬಿರದಲ್ಲಿ ಪಾಲ್ಗೊಂಡ ಗ್ರಾಮಸ್ಥರಲ್ಲಿ ಸಾಮಾನ್ಯವಾಗಿ ಜ್ವರ,ಮೈ ಕೈ ನೋವು, ತಲೆ ನೋವು, ಸೇರಿದಂತೆ ಉಸಿರಾಟದ ತೊಂದರೆ ಕಂಡುಬರುತ್ತಿದ್ದು. ಈ ಕುರಿತು ಆರೋಗ್ಯ ಇಲಾಖೆ ಸೂಕ್ಷ್ಮವಾಗಿ ಗಮನಿಸಬೇಕಿದೆ. ನಮ್ಮ ಗ್ರಾಮಸ್ಥರ ಆರೋಗ್ಯ ಸಮಸ್ಯೆಗಳಿಗೆ ಮುಖ್ಯ ಕಾರಣ ಸ್ಥಳೀಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಂಡೇನ ಕಾರ್ಖಾನೆಯಿಂದ ಹೊರಬರುವ ವಿಷಕಾರಿ ಅನಿಲವೇ ಆಗಿದೆ. ಕಾರ್ಖಾನೆಯನ್ನು ಈ ಕೂಡಲೇ ವರ್ಗಾಯಿಸುವ ಮೂಲಕ ಸ್ಥಳೀಯರ ಜೀವ ಉಳಿಸಬೇಕಿದೆ. ಎಂದು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು .

    ಗ್ರಾಮಸ್ಥರಾದ ಮುನಿರಾಜಪ್ಪ ಮಾತನಾಡಿ ಈಗಾಗಲೇ ತಾಲೂಕಿನ ಜನತೆ ಅಧಿಕಾರಿಗಳಿಗೆ ಗ್ರಾಮದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದು ಗ್ರಾಮಸ್ಥರ ಆರೋಗ್ಯ ಕಾಪಾಡುವಂತೆ ಮನವಿ ಮಾಡಿದ್ದೇವೆ, ನ್ಯಾಯಾಲಯಕ್ಕೆ ಗ್ರಾಮಸ್ಥರು ನೀಡಿದ ದೂರಿನ ಹಿನ್ನೆಲೆಯಲ್ಲಿ ಇಂದು ಗ್ರಾಮದಲ್ಲಿ ಸರ್ಕಾರದ ವತಿಯಿಂದ ಆರೋಗ್ಯ ತಪಾಸದ ಶಿಬಿರವನ್ನು ಯೋಜನೆ ಮಾಡಲಾಗಿದೆ. ಈಗಾಗಲೇ ನೂರಾರು ಗ್ರಾಮಸ್ಥರು ವೈದ್ಯರ ಬಳಿ ಬಂದು ಸಲಹೆ ಪಡೆದಿದ್ದಾರೆ. ಬರ ಬರುತ್ತಾ ಗ್ರಾಮದಲ್ಲಿ ಆರೋಗ್ಯ ಕ್ಷೀಣಿಸುತ್ತಿದ್ದು. ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕಿದೆ ಎಂದರು.

     

    ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರ್ ಎಚ್ ಚನ್ನಪ್ಪ, ಆರ್. ಎಂ ಲಕ್ಷ್ಮೀಪತಿ,ನರಸಿಂಹಮೂರ್ತಿ, ಆರ್. ಜಿ.ಗಂಗರಾಜು, ಜಗದೀಶ್ ಸೇರಿದಂತೆ ಗ್ರಾಮದ ಹಲವು ಮುಖಂಡರು ಉಪಸ್ಥಿತರಿದ್ದರು.

  • *ವಿಶೇಷ ರೀತಿಯಲ್ಲಿ ಸಮಾಜಮುಖಿ ಕಾರ್ಯಾ ಮಾಡುವ ಮೂಲಕ ಗಾನಕೋಗಿಲೆ ಕೆ ಎಸ್ ಚಿತ್ರಮ್ಮನವರ ಹುಟ್ಟು ಹಬ್ಬ ಆಚರಿಸಿದ ವೀರ ಅಭಿಮಾನಿ ಮುಕ್ಕೇನಹಳ್ಳಿ ರವಿ*

    ದೊಡ್ಡಬಳ್ಳಾಪುರ : ಹಿನ್ನೆಲೆ ಗಾಯನದಲ್ಲಿ ಭಾರತ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ಪದ್ಮಶ್ರೀ, ಪದ್ಮ ವಿಭೂಷಣ ಪುರಸ್ಕೃತ ಗಾನಕೋಗಿಲೆ ಕೆ.ಎಸ್. ಚಿತ್ರಮ್ಮನವರ 61ನೇ ಹುಟ್ಟು ಹಬ್ಬವನ್ನು ವೀರ ಅಭಿಮಾನಿ ಮುಕ್ಕೆನಹಳ್ಳಿ ರವಿ ನೇತೃತ್ವದಲ್ಲಿ ಅನ್ನದಾಸೋಹ ಮಾಡುವ ಮೂಲಕ ಆಚರಿಸಲಾಯಿತು.

    ತಾಲ್ಲೂಕಿನ ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನ್ನದಾಸೋಹ ಸಮಿತಿಯ ಸಹಕಾರದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ )ದ ವತಿಯಿಂದ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ, ವೃದ್ಧರಿಗೆ ಹೊದಿಕೆ ವಿತರಣೆ ಹಾಗೂ ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಕೆಎಸ್ ಚಿತ್ರಮ್ಮರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

    ಮಾಜಿ ನಗರಸಭಾ ಸದಸ್ಯ ಪಿ. ಸಿ. ಲಕ್ಷ್ಮೀನಾರಾಯಣ್ ಮಾತನಾಡಿ ಕೊರೋನ ಸಂದರ್ಭದಲ್ಲಿ ಮಿತ್ರರ ಸಲಹೆ ಮೇರೆಗೆ ಅನ್ನದಾಸೋಹ ಸಮಿತಿಯೊಟ್ಟಿಗೆ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೆ. ಅಂದಿನಿಂದ ಇಂದಿನವರೆಗೂ ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಅನ್ನ ದಾಸೋಹಕ್ಕೆ ಸಹಾಯ ನೀಡುತ್ತಿದ್ದು ಮುಂದೆಯೂ ಇದೇ ರೀತಿ ಸಹಕಾರ ನೀಡಲಾಗುವುದು ಎಂದರು.

    ಈ ಕಾರ್ಯಕ್ರಮಕ್ಕೆ ಧನಸಹಾಯ ಮಾಡುವುದು ಸುಲಭ ಆದರೆ ಅದನ್ನು ಸಮರ್ಪಕವಾಗಿ ಪ್ರತಿಯೊಬ್ಬರಿಗೂ ಹಂಚಿಕೆಯಾಗುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸುವುದು ಅತ್ಯಂತ ಕಷ್ಟಕರ ಸಂಗತಿಯಾಗಿದೆ ಅಂತಹ ಕಾರ್ಯವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಮಲ್ಲೇಶ್ ನೆಡೆಸಿಕೊಂಡು ಬರುತ್ತಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸಿದರು

     

    ಕರ್ನಾಟಕ ರಕ್ಷಣಾ ವೇದಿಕೆಯ( ಪ್ರವೀಣ್ ಕುಮಾರ್ ಶೆಟ್ಟಿ ಬಣ ) ತಾಲ್ಲೂಕು ಘಟಕ ಅಧ್ಯಕ್ಷರಾದ ಹಮಾಮ್ ವೆಂಕಟೇಶ್ ಮಾತನಾಡಿ ಇಂದಿನ ಕಾರ್ಯಕ್ರಮ ತುಂಬಾ ವಿಶೇಷವಾಗಿದ್ದು ಸುಮಾರು 21 ಭಾಷೆಗಳಲ್ಲಿ 25,000ಕ್ಕೂ ಅಧಿಕ ಹಾಡುಗಳನ್ನು ಹಾಡಿ ಗಾನಕೋಗಿಲೆ ಎಂದು ಹೆಸರುವಾಸಿ ಪಡೆದಿರುವ ಶ್ರೀಮತಿ ಕೆ ಎಸ್ ಚಿತ್ರಮ್ಮನವರ 61ನೇ ಹುಟ್ಟು ಹಬ್ಬದ ಆಚರಣೆಯನ್ನು ಅನ್ನದಾಸೋಹ ಸಮಿತಿಯೊಟ್ಟಿಗೆ ಆಹಾರ ವಿತರಣೆ,ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಹಾಗೂ ವೃದ್ಧರಿಗೆ ಹೊದಿಕೆ ವಿತರಣೆ ಮಾಡುವ ಮೂಲಕ ಆಚರಿಸುತ್ತಿರುವುದು ಸಂತಸ ತಂದಿದೆ.

    ಕಾರ್ಯಕ್ರಮವನ್ನು ಕೆ ಎಸ್ ಚಿತ್ರಮ್ಮನವರ ವೀರಾಭಿಮಾನಿ ಮುಕ್ಕೇನ ಹಳ್ಳಿ ರವಿಯವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದ್ದು. ಇದೊಂದು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಾರ್ಯಕ್ರಮವಾಗಿದೆ ಎಂದರು.

     

    ಕಾರ್ಯಕ್ರಮದಲ್ಲಿ ಮುಕ್ಕೇನಹಳ್ಳಿ ರವಿ ಮಾತನಾಡಿ ಕೆ ಎಸ್ ಚಿತ್ರಮ್ಮನವರ 61ನೇ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದೇವೆ. ಸತತವಾಗಿ ಕಳೆದ ಹಲವು ವರ್ಷಗಳಿಂದ ಅನ್ನದಾಸೋಹಿ ಮಲ್ಲೇಶ್ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಶಾಲಾ ಮಕ್ಕಳಿಗೆ ಹಾಗೂ ವೃದ್ಧರಿಗೆ ಅವಶ್ಯಕತೆ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದು ಮುಂದೆಯೂ ಈ ಕಾರ್ಯಕ್ರಮವು ನಡೆಯಲಿದೆ ಎಂದರು.

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಇಂದು ಸಂಗೀತ ಲೋಕದಲ್ಲಿ ಮಿನುಗು ತಾರೆಯಂತೆ ಮಿಂಚುತ್ತಿರುವ ಅದ್ಭುತ ಗಾಯಕಿ, ಗಾನಕೋಗಿಲೆ ಎಂದೇ ಪ್ರಸಿದ್ಧಿ ಪಡೆದಿರುವ ಪದ್ಮಶ್ರೀ ಪದ್ಮಭೂಷಣ ಕೆಎಸ್ ಚಿತ್ರಮ್ಮನವರ 61ನೇ ಹುಟ್ಟು ಹಬ್ಬವನ್ನು ಅವರ ವೀರ ಅಭಿಮಾನಿ ಮುಕ್ಕೆನಹಳ್ಳಿ ರವಿ ಅವರ ನೇತೃತ್ವದಲ್ಲಿ ವಿಶೇಷವಾಗಿ ಆಚರಿಸಿದ್ದೇವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟ ಅಥವಾ ನಟಿಯರ ಹುಟ್ಟು ಹಬ್ಬಗಳಲ್ಲಿ ದುಂದು ವೆಚ್ಚ ಮಾಡುವ ಮೂಲಕ ಸಂಭ್ರಮಿಸುತ್ತಾರೆ ಆದರೆ ಪ್ರತಿಯೊಬ್ಬ ಅಭಿಮಾನಿಯೂ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕ ನಟರಿಗೆ ಅಥವಾ ನಟಿಯರಿಗೆ ಗೌರವ ಸಲ್ಲಿಸಬೇಕಿದೆ ಅದಕ್ಕೆ ಉತ್ತಮ ಉದಾಹರಣೆ ಇಂದಿನ ಕಾರ್ಯಕ್ರಮವಾಗಿದೆ ಶ್ರೀಯುತ ರವಿಯವರು ತಮ್ಮ ನೆಚ್ಚಿನ ಗಾಯಕರಾದ ಕೆ ಎಸ್ ಚಿತ್ರಮ್ಮನವರ ಹುಟ್ಟು ಹಬ್ಬದ ಆಚರಣೆಯನ್ನು ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಜೊತೆಗೆ ವೃದ್ಧರಿಗೆ, ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಮಾಡಿದ್ದಾರೆ ಇದು ಸಮಾಜಕ್ಕೆ ಉತ್ತಮ ಮಾದರಿಯಾಗಿದೆ. ಅಭಿಮಾನಿಗಳು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಲಿ ಎಂದರು.

     

    ಕರ್ನಾಟಕ ರಕ್ಷಣಾ ವೇದಿಕೆಯ( ಪ್ರವೀಣ್ ಕುಮಾರ್ ಶೆಟ್ಟಿ ಬಣ ) ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್ ಎಲ್ ಎನ್ ವೇಣು,ತಾಲ್ಲೂಕು ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಕಾರ್ಯದರ್ಶಿ ಕಾರಳ್ಳಿ ಮಂಜು, ಮುಖಂಡರಾದ ಸೂರಿ, ಶಿವು, ರಂಗ, ಸೇರಿದಂತೆ ಹಲವು ಮುಖಂಡರು ಉಪಸ್ಥಿರಿದರು.