ಗುಳ್ಯ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಆಚರಣೆ :ದೇವಸ್ಥಾನ ಪ್ರವೇಶಿಸುವ ಮೂಲಕ ಅನಿಷ್ಟ ಪದ್ಧತಿಗೆ ಅಂತ್ಯವಾಡಿದ ದಲಿತರು

ದೊಡ್ಡಬಳ್ಳಾಪುರ : ತಾಲ್ಲೂಕಿನ ಗೂಳ್ಯ ಗ್ರಾಮದ ವೇಯಿಗಣ್ಣಮ್ಮ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಆಚರಣೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಾಲ್ಲೂಕಿನ ದಂಡಾಧಿಕಾರಿ ವಿಭಾ ವಿದ್ಯಾ ರಾಥೋಡ್ ಅವರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿ ದಲಿತರು ದೇವಸ್ಥಾನ ಪ್ರವೇಶಿಸಿದರು.

ತಾಲೂಕಿನ ತೂಬಗೆರೆ ಹೋಬಳಿಯ ಗೂಳ್ಯ ಗ್ರಾಮದ ವೇಯಿಗಣ್ಣಮ್ಮ ದೇವಸ್ಥಾನಕ್ಕೆ ದಲಿತರ ಪ್ರವೇಶ ನಿಷೇಧಿಸಲಾಗಿತ್ತು, ಈ ಕುರಿತು ಗ್ರಾಮದ ಶಕುಂತಲಮ್ಮ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಗ್ರಾಮದಲ್ಲಿನ ಅಸ್ಪೃಶ್ಯತೆ ಆಚರಣೆಯನ್ನು ತೊಲಗಿಸುವಂತೆ ಮನವಿ ಮಾಡಿದ್ರು ಈ ಹಿನ್ನೆಲೆಯಲ್ಲಿ ಶುಕ್ರವಾರ ಕಂದಾಯ, ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ದಲಿತರು ದೇವಾಲಯ ಪ್ರವೇಶಿಸಿದರು, ದೇವರಿಗೆ ಪೂಜೆ ಮಾಡಿಸಿದ ದಲಿತರು ಗ್ರಾಮದಲ್ಲಿನ ಅನಿಷ್ಟ ಪದ್ಧತಿಗೆ ಅಂತ್ಯವಾಡಿದರು.

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಗೂಳ್ಯ ಗ್ರಾಮದಲ್ಲಿ 100 ವರ್ಷಗಳ ವೇಯಿಗಣ್ಣಮ್ಮ ದೇವಾಲಯವಿದೆ. ಕಳೆದ ಕೆಲವು ವರ್ಷಗಳ ಹಿಂದೆ ಊರಿನ ಸರ್ವರೂ ಸೇರಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಆದರೆ, ಇಂದಿಗೂ ಈ ದೇವಾಲಯಕ್ಕೆ ದಲಿತರಿಗೆ ಪ್ರವೇಶ ಇರಲಿಲ್ಲ, ದೇವಾಲದ ಆರ್ಚಕ ದಲಿತರು ದೇವಾಲಯ ಪ್ರವೇಶಿಸದಂತೆ ನಿಂದನಾತ್ಮಕವಾಗಿ ದಲಿತರನ್ನು ಹಿಯಾಳಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.

ಶುಕ್ರವಾರ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಡಿವೈಎಸ್ಪಿ ರವಿ.ಪಿ, ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಸಾಧಿಕ್ ಪಾಷ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪ್ರೇಮ, ಹಾಗೂ ಸಹಾಯಕ ನಿರ್ದೇಶಕರಾದ ಉಮಾಪತಿ, ರಾಜಸ್ವ ನಿರೀಕ್ಷಕ ನರಸಿಂಹ ಅವರುಗಳು ಭೇಟಿ ನೀಡಿ, ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅಧಿಕಾರಿಗಳು ದೇವಸ್ಥಾನ ಸಾರ್ಜನಿಕರ ಸ್ವತ್ತಾಗಿದ್ದು ಯಾರು ಬೇಕಾದರೂ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಬಹುದು, ಅಸ್ಪೃಷ್ಯತೆ ಆಚರಣೆ ಸಂವಿಧಾನ ವಿರೋಧಿಯಾಗಿದ್ದು, ತಾರತಮ್ಯ ನಡೆಸುವವರು ಕಠಿಣ ಕಾನೂನು ಕ್ರಮ ಎಸುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಾವೆಲ್ಲರೂ ಸೋದರ ಸಹೋದರಿಯರಂತೆ ಬದುಕಬೇಕು. ಇಂತಹ ಅನಿಷ್ಟ ಪದ್ದತಿಯನ್ನು ತೊಲಗಿಸಲು ನಾವೆಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.

ದೇವಸ್ಥಾನ ಪ್ರವೇಶಿಸಿದ ದಲಿತರು ದೇವರಿಗೆ ಪೂಜೆ ಮಾಡಿಸುವ ಮೂಲಕ ಗ್ರಾಮಕ್ಕೆ ಅಂಟಿದ ಅನಿಷ್ಟ ಪದ್ಧತಿಗೆ ಅಂತ್ಯವಾಡಿದರು.

 

 

 

 

Comments

Leave a Reply

Your email address will not be published. Required fields are marked *