Blog

  • ದೊಡ್ಡಬಳ್ಳಾಪುರದ ಆರ್‌ಎಲ್‌ಜೆಐಟಿಯಲ್ಲಿ ಸಾಲು ಮರದ ತಿಮ್ಮಕ್ಕಗೆ ಶ್ರದ್ದಾಂಜಲಿ, ಸಸಿ ನಮನ ಹಾಗೂ ನುಡಿನಮನ ಕಾರ್ಯಕ್ರಮ

    *ದೊಡ್ಡಬಳ್ಳಾಪುರ* : ಹಸಿರು ಸಿರಿಯಲ್ಲಿ ಸಾರ್ಥಕ್ಯವನ್ನು ಕಂಡ ಶತಾಯುಷಿ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ನಿಧನರಾದ ಹಿನ್ನಲೆ ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸಂಜೆ ಶ್ರದ್ದಾಂಜಲಿ, ಸಸಿ ನಮನ ಹಾಗೂ ನುಡಿನಮನ ಕಾರ್ಯಕ್ರಮ ನಡೆಯಿತು.

    ಸಾಲು ಮರದ ತಿಮ್ಮಕ್ಕ ನೆನಪಿನಲ್ಲಿ ಕ್ಯಾಂಪಸ್‌ ಆವರಣದಲ್ಲಿ ಹೊಂಗೆ ಸಸಿಗಳನ್ನು ನೆಟ್ಟು ವೃಕ್ಷ ಮಾತೆಗೆ ಹಸಿರು ನಮನ ಸಲ್ಲಿಸಲಾಯಿತು.


    ನುಡಿ ನಮನ ಸಲ್ಲಿಸಿ ಮಾತನಾಡಿದ ಪ್ರಾಂಶುಪಾಲ ಡಾ.ವಿಜಯಕಾರ್ತಿಕ್, ಸಾಲು ಮರದ ತಿಮ್ಮಕ್ಕ ಅವರ ಜೀವನವನ್ನು ಆದರ್ಶವಾಗಿ ಪರಿಗಣಿಸಿ, ಹಸಿರು ಸಂಪತ್ತನ್ನು ವೃದ್ದಿಸುವ ಸಂಕಲ್ಪ ಮಾಡಬೇಕು. ಜನ್ಮದಿನ, ನೆನಪಿನ ಕಾರ್ಯಕ್ರಮಗಳಲ್ಲಿ ಸಸಿಗಳನ್ನು ಉಡುಗೊರೆ ನೀಡುವ ಹಾಗೂ ನೆಟ್ಟು ಬೆಳೆಸುವ ಪರಿಪಾಠ ಬೆಳೆಯಬೇಕು ಎಂದರು.


    ಲಯನ್ಸ್‌ ಕ್ಲಬ್‌ ಅಧ್ಯಕ್ಷ ಪ್ರೊ.ರವಿಕಿರಣ್ ಕೆ.ಆರ್ ಮಾತನಾಡಿ, ಮಕ್ಕಳಿಲ್ಲದ ತಿಮ್ಮಕ್ಕ ದಂಪತಿಗಳು ಸಾಲು ಮರಗಳನ್ನು ನೆಟ್ಟು ಮಕ್ಕಳ ರೀತಿಯಲ್ಲಿ ಆರೈಕೆ ಮಾಡಿ ಬೆಳೆಸಿವ ಮೂಲಕ ಪರಿಸರದ ಕೈಂಕರ್ಯವನ್ನು ನಿಸ್ವಾರ್ಥವಾಗಿ ಮಾಡಿದ್ದಾರೆ. ಹಸಿರೀಕರಣದ ಆಶಯವನ್ನು ಸಾಕಾರಗೊಳಿಸಿದ ಅವರು, ಎಲೆಮರೆ ಕಾಯಿಯಂತೆ ಪರಿಸರದ ಕಾಯಕ ಮಾಡುತ್ತಿದ್ದರು. ದಿನಪತ್ರಿಕೆಯೊಂದರ ವರದಿ ಅವರನ್ನು ಇಡೀ ದೇಶಕ್ಕೆ ಪರಿಚಯಿಸಿತ್ತು. ಬಳಿಕ ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಅವರಿಗೆ ರಾಷ್ಟ್ರೀಯ ಪುರಸ್ಕಾರ ಘೋಷಿಸಿದ್ದರು. ಅವರ ಅನನ್ಯ ಸೇವೆ ಇಂದಿಗೂ ಮಾದರಿಯಾಗಿ ಉಳಿದಿದೆ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಕೆ.ಸುನಿಲ್‌ಕುಮಾರ್‌, ಡಾ.ಮಂಜುನಾಥ್‌, ಮೀನಾಕ್ಷಿ, ಅಲ್ಲಾಭಕ್ಷ್‌, ಡಾ.ಮಮತ, ಡಾ.ಶಿಲ್ಪಕಲಾ ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್‌, ವ್ಯವಸ್ಥಾಪಕ ಎಸ್.ಯತಿನ್‌ ಮತ್ತಿತರರು ಉಪಸ್ಥಿತರಿದ್ದರು.

  • ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್‌ ತರಗತಿ ಮೂಲಕ ಕಲಿಕೆ ವಿದ್ಯಾಮಿತ್ರ ಆ‍್ಯಪ್‌ ಬಿಡುಗಡೆ ಮಾಡಿದ ಶಾಸಕ ಧೀರಜ್ ಮುನಿರಾಜು

    ದೊಡ್ಡಬಳ್ಳಾಪುರ : ಕಳೆದ ಬಾರಿ 10ನೇ ತರಗತಿ ಫಲಿತಾಂಶ ಪ್ರಕಟವಾದಾಗ ನಮ್ಮ ತಾಲ್ಲೂಕಿನ ಫಲಿತಾಂಶದಲ್ಲಿ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳು ಶೇಕಡ 50ಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದಿದ್ದು ನೋಡಿ ನನಗೆ ಬಹಳ ಬೇಸರವಾಗಿತ್ತು ಆದ ಕಾರಣ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾಮಿತ್ರ ಆ‍್ಯಪ್‌ ಅನ್ನು ಮಕ್ಕಳ ದಿನಾಚರಣೆಯಂದು ಲೋಕಾರ್ಪಣೆ ಮಾಡಲಾಗಿದೆ ಎಂದು ಸ್ಥಳೀಯ ಶಾಸಕ ಧೀರಜ್ ಮುನಿರಾಜು ತಿಳಿಸಿದರು.

     

    ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಪೋಷಕರು ಮತ್ತು ಶಿಕ್ಷಕರ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್‌ ತರಗತಿ ಮೂಲಕ ಕಲಿಕೆಯನ್ನು ಸರಳಗೊಳಿಸಲು ಈ ಪ್ರಯತ್ನಕ್ಕೆ ಮುಂದಾಗಿದ್ದು, ವಿಶೇಷವಾಗಿ ಮಕ್ಕಳ ದಿನಾಚರಣೆಯಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ. ಈ ಬಾರಿ ತಾಲೂಕಿನಲ್ಲಿ ಒಟ್ಟು 3451 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಅದರಲ್ಲಿ 2016 ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆ ಮಕ್ಕಳಿದ್ದಾರೆ.ಅವರ ಕಲಿಕೆ ಹಾಗೂ ಮುಂಬರುವ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಅಂಜನಾದ್ರಿ ಚಾರಿಟೇಬಲ್‌ ಟ್ರಸ್ಟ್‌, ದೊಡ್ಡಬಳ್ಳಾಪುರ ಮತ್ತು ಅಮೋಘವರ್ಷ ಎಜುಕೇಷನ್ ಟ್ರಸ್ಟ್ ಇವರ ವತಿಯಿಂದ ಹತ್ತನೇ ತರಗತಿಯ ಎಲ್ಲಾ ವಿಷಯಗಳ ಪಠ್ಯಗಳಿಗೆ ಸಂಬಂಧಪಟ್ಟ ಆನ್ಲೈನ್ ತರಗತಿಗಳು ಜೊತೆಗೆ ಐದು ಪ್ರಶ್ನೆ ಪತ್ರಿಕೆ ಹಾಗೂ ಅದಕ್ಕೆ ಉತ್ತರವನ್ನು ಈ ಆಪ್ ನಲ್ಲಿ ನೀಡಲಾಗಿದೆ ಎಂದರು.

     

    ಆಪ್ ಬಳಕೆ ಹೇಗೆ… ಆಪ್ ನಲ್ಲಿ ಏನುಂಟು..???

    ವಿದ್ಯಾ ಮಿತ್ರ ಆಪ್ ಸಂಬಂಧಿತ ಕ್ಯೂಆರ್ ಕೋಡನ್ನು ತಾಲ್ಲೂಕಿನ ಪ್ರತಿ ಶಾಲೆಗೆ ನೀಡಲಾಗಿದ್ದು ಮಕ್ಕಳು ತಮ್ಮ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದಾಗ ಗೂಗಲ್ ಪ್ಲೇ ಸ್ಟೋರ್ ಮೂಲಕ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಅಥವಾ ನೇರವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ವಿದ್ಯಾಮಿತ್ರ ಆಪ್ ಪಡೆಯಬಹುದಾಗಿದೆ. ನಂತರ ವಿದ್ಯಾಮಿತ್ರ ಆಪ್ ಪ್ರಾಥಮಿಕವಾಗಿ ಕೇಳುವ ಅಗತ್ಯ ದೂರವಾಣಿ ಸಂಖ್ಯೆ, ಹೆಸರು,ಸ್ಥಳ,ಶಾಲೆ ಇತರೆ ಮಾಹಿತಿ ನಮೂದಿಸಿ ಒಪ್ಪಿಗೆ ನೀಡಿದ ಕೆಲವು ಗಂಟೆಗಳಲ್ಲಿ ವಿದ್ಯಾ ಮಿತ್ರ ಆಪ್ ಕಚೇರಿಯಿಂದ ಕರೆ ಮಾಡಿ ಆಪ್ ಲಾಗಿನ್ ಮಾಡಲು ಬಳಕೆಯ ಹೆಸರು ಹಾಗೂ ಲೋಗಿನ್ ಪಾಸ್ವರ್ಡ್ ನೀಡಲಾಗುವುದು ನಂತರ ಮಕ್ಕಳು ಈ ಆಪ್ ಬಳಸಬಹುದಾಗಿದೆ.

     

    ಪಠ್ಯ ವಿಷಯಗಳಲ್ಲಿ ಪರಿಣಿತಿ ಪಡೆದ ಶಿಕ್ಷಕರು ಪ್ರತಿ ಪಠ್ಯಗಳನ್ನು ಸರಳ ರೀತಿಯಲ್ಲಿ ಬೋಧಿಸಿರುವ ವಿಡಿಯೋಗಳು ಆಪ್ ನಲ್ಲಿ ಲಭ್ಯವಿದ್ದು, ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಕಷ್ಟ ಎನಿಸುವ ಯಾವುದೇ ಪಠ್ಯ ವಿಷಯವನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ವೀಕ್ಷಿಸುವ ಮೂಲಕ ಕಲಿಕೆ ಸುಲಭವಾಗಲಿದೆ ಈ ಆಪ್ ಅನ್ನು ವಿದ್ಯಾರ್ಥಿಗಳು ವಿಶೇಷ ತರಗತಿ ಅಥವಾ ಟ್ಯೂಷನ್ ರೀತಿ ಬಳಸಬಹುದಾಗಿದೆ. ತಾಲೂಕಿನ ಎಸ್.ಎಸ್.ಎಲ್. ಸಿ ಫಲಿತಾಂಶ ಉನ್ನತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು .

    ಈ ವೇಳೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಜರಿದ್ದರು.

  • ದೊಡ್ಡಬಳ್ಳಾಪುರದ ಶ್ರೀ ರಾಮ ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆ

    ಭಾರತದಲ್ಲಿ ಚಿಕ್ಕ ಮಕ್ಕಳಿಗೂ ಸೇರಿದಂತೆ ದಿನೇ ದಿನೇ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಮಧುಮೇಹವನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ನಿಯಂತ್ರಣದಲ್ಲಿಡಬಹುದು ಎಂದು ತಜ್ಞ ವೈದ್ಯರಾದ ಡಾ.ಕೆ.ವಿ.ರಾಘವೇಂದ್ರ ತಿಳಿಸಿದರು.

     

    ಇಲ್ಲಿನ ಶ್ರೀ ರಾಮ ಆಸ್ಪತ್ರೆಯಲ್ಲಿ , ಶ್ರೀ ರಾಮ ನರ್ಸಿಂಗ್ ಕಾಲೇಜಿನ ಸಹಯೋಗದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಮಧುಮೇಹ ಸತಪಾಸಣೆ ಶಿಬಿರ ಮತ್ತು ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಧುಮೇಹದ ಲಕ್ಷಣಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಇದಕ್ಕೆ ಚಿಕಿತ್ಸೆಯೊಂದಿಗೆ ಸಮತೋಲನ ಆಹಾರ, ನಡಿಗೆ, ಸೂರ್ಯ ನಮಸ್ಕಾರದಂತಹ ನಿಯಮಿತ ವ್ಯಾಯಾಮ ಸಹ ಅವಶ್ಯವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಒತ್ತಡದ ಬದುಕು, ನಾವು ದೇಹಕ್ಕೆ ಸಾಕಷ್ಟುವ್ಯಾಯಾಮ ನೀಡದ ಪರಿಣಾಮ, ಮಧುಮೇಹ ರಕ್ತದೊತ್ತಡಗಳು ಹೆಚ್ಚಾಗುತ್ತಿವೆ. ಇತರೆ ಕಾಯಿಲೆಗಳಿಗೂ ಕಾರಣವಾಗಿರುವ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಿ, ರೋಗ ನಿಯಂತ್ರಣದ ಅಂಶಗಳನ್ನು ತಿಳಿಸುವ ಸಲುವಾಗಿ ಮಧುಮೇಹ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಬೇಕಿದೆ ಹಾಗೂ ಸಮತೋಲನ ಆಹಾರ ನೀಡುತ್ತಿಲ್ಲ. ಇದರ ಫಲವಾಗಿ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿವೆ. ಇದರಲ್ಲಿ ಮಧುಮೇಹವೂ ಒಂದಾಗಿದೆ. ಮಧುಮೇಹ ಬರೀ ರಕ್ತ ಮೂತ್ರದಲ್ಲಿ ಕಾಣಿಸಿಕೊಂಡು ದೇಹವನ್ನು ನಿಶ್ಚಕ್ತಿ ಮಾಡುವುದಷ್ಟೇ ಅಲ್ಲದೇ, ಮಧುಮೇಹದಿಂದ ಹೃದಯ ಸಂಬಂಧಿ ಕಾಯಿಲೆಗಳು, ಮೂತ್ರಪಿಂಡಕ್ಕೆ ಹನಿ, ಕಣ್ಣಿನ ತೊಂದರೆ, ನರಗಳ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ. ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಧುಮೇಹಿಗಳಿದ್ದಾರೆ. ಮೇದೋಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಪ್ರಮಾಣದಲ್ಲಿ ಕಡಿಮೆಯಾಗುವುದರಿಂದ ರಕ್ತದಲ್ಲಿರುವ ಸಿಹಿ ಅಂಶವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದು ಕಷ್ಟವಾಗುವ ಪರಿಸ್ಥಿತಿ ಎದುರಾಗುತ್ತದೆ. ಮಕ್ಕಳಿಂದ ಹಿಡಿದು ಯಾವುದೇ ವಯೋಮಾನದವರಲ್ಲಿ ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ ಅತಿ ಹೆಚ್ಚು ಅರುವತ್ತಕ್ಕೆ ಮೇಲ್ಪಟ್ಟವರಲ್ಲೇ ಮಧುಮೇಹ ಹೆಚ್ಚಾಗಿ ಬಾಧಿಸಲ್ಪಡುತ್ತಿದೆ. ಇನ್ಸುಲಿನ್ ಉತ್ಪತ್ತಿ ಸ್ಥಗಿತವಾದಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ವಿಭಜನೆಗೊಳ್ಳುವುದಿಲ್ಲ. ಇದನ್ನೇ ಮಧುಮೇಹ ಎನ್ನುತ್ತೇವೆ. ಇತ್ತೀಚಿನ ದಿನಗಳಲ್ಲಿ ಒಂದನೇ ಹಂತದ ಮಧುಮೇಹ ಸಾಮಾನ್ಯವಾಗಿ ನಿಯಂತ್ರಣದಲ್ಲಿಡಬಹುದು. ಆದರೆ ಎರಡನೇ ಹಂತದ ಮಧುಮೇಹಕ್ಕೆ ಕಾಲಕಾಲಕ್ಕೆ ತಪಾಸಣೆ ಅಗತ್ಯವಾಗಿದೆ. ವೈದ್ಯರೊಂದಿಗೆ ನಿಮ್ಮ ಕಾಯಿಲೆಯ ಪೂರ್ಣ ವಿವರಗಳನ್ನು ತಿಳಿಸಿ ಸೂಕ್ತ ಚಿಕಿತ್ಸೆ ಪಡೆಯ ಬೇಕಿದೆ. ಔಷಧಿಯೊಂದಿಗೆ ಆಹಾರ ಪದ್ದತಿಯು ಅತಿ ಮುಖ್ಯವಾಗುತ್ತದೆ. ಮಧುಮೇಹದ ಕಾರಣಗಳನ್ನು ಸರಿಯಾಗಿ ತಿಳಿದುಕೊಂಡು ಮುಂಜಾಗ್ರತೆ ವಹಿಸಿದರೆ ಮಾತ್ರ ರೋಗ ನಿಯಂತ್ರಣದಲ್ಲಿಡಬಹುದು ಎಂದರು.

     

    ಶ್ರೀ ರಾಮ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ.ವಿಜಯ ಕುಮಾರ್ ಮಾತನಾಡಿ, ಜೀವನದ ಎಲ್ಲಾ ಹಂತಗಳಲ್ಲಿ ಮಧುಮೇಹ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಮಧುಮೇಹ ನಿರ್ವಹಣೆಯ ಪ್ರಾಮುಖ್ಯತೆ ಹಾಗೂ ಬದ್ದತೆಯನ್ನು ಒತ್ತಿ ಹೇಳುವುದಾಗಿದೆ. ಶುಶ್ರೂಷಾ ವಿದ್ಯಾರ್ಥಿಗಳು ಮತ್ತು ಭವಿಷ್ಯದ ಆರೋಗ್ಯ ವೃತ್ತಿಪರರಾಗಿ, ಇದನ್ನು ಮಾಡುವಲ್ಲಿ ನೀವು ಪ್ರಮುಖ ಪಾತ್ರ ವಹಿಸುತ್ತೀರಿ. ಮಧುಮೇಹ, ಅದರ ಅಪಾಯಗಳು ಮತ್ತು ನಿರ್ವಹಣೆಯ ಬಗ್ಗೆ ನಮಗೆ ಮತ್ತು ಇತರರಿಗೆ ಶಿಕ್ಷಣ ನೀಡೋಣ. ಮಧುಮೇಹದಿಂದ ಬಳಲುತ್ತಿರುವವರನ್ನು ಬೆಂಬಲಿಸೋಣ, ಕಾಳಜಿ, ಸಹಾನುಭೂತಿ ಮತ್ತು ತಿಳುವಳಿಕೆಯನ್ನು ನೀಡೋಣ. ಎಲ್ಲರಿಗೂ ಮಧುಮೇಹ ಆರೈಕೆಯ ಪ್ರವೇಶವನ್ನು ಸುಧಾರಿಸುವ ನೀತಿಗಳು ಮತ್ತು ಉಪಕ್ರಮಗಳಿಗಾಗಿ ನಾವು ಪ್ರತಿಪಾದಿಸೋಣ ಎನ್ನುವ ಸಂಕಲ್ಪ ಮಾಡಬೇಕಿದೆ ಎಂದರು.

     

    ಕಾರ್ಯಕ್ರಮದಲ್ಲಿ ಶ್ರೀ ರಾಮ ಆಸ್ಪತ್ರೆಯ ವೈದ್ಯೆ ಡಾ.ಮಾಲಾ ವಿಜಯಕುಮಾರ್, ಮತ್ತಿತರರು ಭಾಗವಹಿಸಿದ್ದರು.

  • ದೊಡ್ಡಬಳ್ಳಾಪುರಕ್ಕೆ ನೂತನ ತಾಲ್ಲೂಕು ತಹಶೀಲ್ದಾರ್ ಆಗಿ ಮಲ್ಲಣ್ಣ ನೇಮಕ : ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದ ನೂತನ ಅಧಿಕಾರಿ : ಶುಭ ಕೋರಿದ ಗಣ್ಯರು

    ದೊಡ್ಡಬಳ್ಳಾಪುರ : ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ತಹಶೀಲ್ದಾರ್  ಮಲ್ಲಪ್ಪ ಭೇಟಿ ನೀಡಿ ದರ್ಶನ ಪಡೆದರು.

     

    ಈ ವೇಳೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಸದಸ್ಯ ರಾಮಣ್ಣ, ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದ ಅಭಿವೃದ್ಧಿ ಪ್ರಧಿಕಾರದ ಸದಸ್ಯ ಆರ್.ವಿ ಮಹೇಶ್, ದೊಡ್ಡಬಳ್ಳಾಪುರ ಕೃಷಿ ಸಮಾಜದ ಆಧ್ಯಕ್ಷ ಆರ್.ಮುರುಳಿಧರ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

    ದೊಡ್ಡಬಳ್ಳಾಪುರ ತಾಲೂಕಿನ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರನ್ನು ವರ್ಗಾವಣೆ ಮಾಡಲಾಗಿದ್ದು. ತಹಶೀಲ್ದಾರ್  ವಿಭಾ ವಿದ್ಯಾ ರಾಥೋಡ್ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ರಾಯಚೂರು ಮಹಾನಗರ ಪಾಲಿಕೆ ಕಂದಾಯ ಅಧಿಕಾರಿಯಾಗಿದ್ದ ಮಲ್ಲಪ್ಪ ಅವರನ್ನು ನೇಮಿಸಲಾಗಿದೆ ಈ ಕುರಿತಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆಯ ಮುಕ್ತಾರ್ ಪಾಷಾ ಹೆಚ್‌.ಜಿ. ಆದೇಶಿಸಿದ್ದಾರೆ.

     

    ಸದ್ಯ ಆದೇಶ ಪತ್ರದಲ್ಲಿ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರಿಗೆ ಯಾವುದೇ ಸ್ಥಾನ ಸೂಚಿಸಿಲ್ಲ.

  • ನವಜಾತಾ ಶಿಶು ಜೀವ ಉಳಿಸಿದ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ ವೈದ್ಯರು : ವೈದ್ಯರಿಗೆ ಅಭಿನಂದನೆ ಸಲ್ಲಿಸಿದ K R S (ಕರ್ನಾಟಕ ರಾಜ್ಯ ಸರ್ವ ಶಕ್ತಿ )ಸಮಿತಿ

    ದೊಡ್ಡಬಳ್ಳಾಪುರ : ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ನವಜಾತಾ ಶಿಶುವನ್ನು ವೈದ್ಯರು ಸಕಾಲಕ್ಕೆ ಚಿಕೆತ್ಸೆ ನೀಡುವ ಮೂಲಕ ಕಾಪಾಡಿದ್ದು, ವೈದ್ಯರ ಸಮಯಪ್ರಜ್ಞೆ ಹಾಗೂ ಸೇವಾ ಮನೋಭಾವವನ್ನು K R S (ಕರ್ನಾಟಕ ರಾಜ್ಯ ಸರ್ವ ಶಕ್ತಿ )ಸಮಿತಿಯ ಗೌರವ ರಾಜ್ಯಾಧ್ಯಕ್ಷ ಬಿ.ಶಿವ ಶಂಕರ್ ಅಭಿನಂದಿಸಿದ್ದಾರೆ.

     

    ಮಗುವಿನ ಜೀವ ಉಳಿಸಿದ್ದು ವೈದ್ಯರು ಹಾಗೂ. ಸಿಬ್ಬಂದಿಗಳ ಸಮಯಪ್ರಜ್ಞೆ…

    ಅಕ್ಟೋಬರ್ 07ರ ಮುಂಜಾನೆ ಉತ್ತರ ಪ್ರದೇಶದ ಆದರ್ಶ ಮತ್ತು ಗುಡಿಯ ಕುಮಾರಿ ದಂಪತಿಗಳ 19ದಿನಗಳ ನವಜಾತಾ ಶಿಶು ಉಸಿರಾಟ ಇಲ್ಲದೆ,ತನ್ನ ದೇಹದ ಸಂಪೂರ್ಣ ಸ್ವಾದಿನ ಕಳೆದುಕೊಂಡ ಸ್ಥಿತಿಯಲ್ಲಿದೆ ಎಂದ ಕೂಡಲೇ ತಡ ಮಾಡದೆ ತುರ್ತು ವಾಹನ ಚಾಲಕ ಮಧು ಸ್ಥಳಕ್ಕೆ ಧಾವಿಸಿ ಮಗುವನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ತಲುಪಿಸಿದ್ದರು. ಪೋಷಕರೇ ನಮ್ಮ ಮಗು ನಮ್ಮ ಪಾಲಿಗಿಲ್ಲ ಎಂದು ಕೈಚಲ್ಲಿ ಕೂತಿದ್ದರು ಆದರೆ ಮಕ್ಕಳ ತಜ್ಞರಾದ ಡಾ. ಗಾಯತ್ರಿ. ಸಹ ವೈದ್ಯರಾದ ಲಲಿತಾ,ಶ್ರುಶುಷಕಾಧಿಕಾರಿಗಳಾದ ಶೋಭಾ, ಲಾವಣ್ಯ ರವರ ಸಹಕಾರದೊಂದಿಗೆ ಕೂಡಲೇ ಕಾರ್ಯ ಪ್ರವೃತ್ತರಾಗಿ ತಮ್ಮ ಸೇವಾ ನಿಷ್ಠೆ ಮರೆಯದೇ ಮಗುವನ್ನುಎನ್.ಬಿ.ಎಸ್.ಯು(NBSU) ತುರ್ತು ಘಟಕಕ್ಕೆ ರವಾನಿಸಿ ಅವಶ್ಯಕ ತುರ್ತು ಚಿಕಿತ್ಸೆ ನೀಡಿ ಮಗು ಮತ್ತೆ ಉಸಿರಾಡುವಂತೆ ಮಾಡಿದ್ದಾರೆ. ಮಗುವಿನ ಉಸಿರಾಟದ ಸ್ಥಿತಿ ಹತೋಟಿಗೆ ಬಂದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ರವಾನಿಸಿದ್ದು ಇಂದು ಮಗು ಸಂಪೂರ್ಣ ಚೇತರಿಕೆ ಕಂಡು ತನ್ನ ಮನೆಗೆ ಹಿಂದಿರುಗಿದೆ. ಜೀವ ಉಳಿಸಿದ ಸಾರ್ವಜನಿಕ ಆಸ್ಪತ್ರೆ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಪೋಷಕರು ಅಭಿನಂದನೆ ಸಲ್ಲಿಸಿದ್ದು, ಸಾಮಾಜಿಕ ವಲಯದಲ್ಲಿ ವೈದ್ಯರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.

     

    ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯ ಪದಾಧಿಕಾರಿಗಳ ಜೊತೆ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಬಿ ಶಿವಶಂಕರ್ ಮತ್ತು ತಂಡ ತೆರಳಿ ಸಮಯಪ್ರಜ್ಞೆ ಮೆರೆದು ಮಗುವಿನ ಜೀವ ಉಳಿಸಿದ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ತಾಲ್ಲೂಕಿನ ವೈದ್ಯರು ನಂಬಿಕೆ ಹಾಗೂ ವಿಶ್ವಾಸದಿಂದ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ , ವೈದ್ಯರು ತಪ್ಪು ಮಾಡಿದಾಗ ಅವರ ವಿರುದ್ಧ ಮಾತನಾಡುವ ನಾವು ಅವರು ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಅಭಿನಂದಿಸುವುದು ನಮ್ಮ ಜವಾಬ್ದಾರಿ ಎಂದು ಭಾವಿಸಿ ಇಂದು ಪುಟ್ಟ ಮಗುವಿನ ಜೀವ ಉಳಿಸಿರುವ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ನಮ್ಮ ತಂಡದಿಂದ ಪೋಷಕರ ಪರವಾಗಿ ಅಭಿನಂದನೆ ಸಲ್ಲಿಸಿದ್ದೇವೆ. ಪೋಷಕರೇ ಮಗು ಉಳಿಯುವುದಿಲ್ಲ ಎಂದುಕೊಂಡಿದ್ದರು ಆದರೆ ವೈದ್ಯರು ಕೈಕಟ್ಟಿಕೂರಲಿಲ್ಲ ಅವರ ನಿರ್ಧಾರ ಹಾಗೂ ನೀಡಿದ ಚಿಕಿತ್ಸೆಯಿಂದಾಗಿ ಇಂದು ಮಗು ಜೀವಂತವಾಗಿದೆ ಎಂದರು.

    ಮಗುವಿನ ಜೀವ ಉಳಿಸಿದ ಆಸ್ಪತ್ರೆ ಸಿಬ್ಬಂದಿಗೆ ಕೆ ಆರ್ ಎಸ್ ಸಮಿತಿ ಪದಾಧಿಕಾರಿಗಳು ಹಾಗೂ ಮಗುವಿನ ಪೋಷಕರು ಸಿಹಿ ನೀಡಿ ಅಭಿನಂದನೆ ಸಲ್ಲಿಸಿದರು.ಈ ವೇಳೆ ಉತ್ತರ ಪ್ರದೇಶದ ಆದರ್ಶ ಮತ್ತು ಗುಡಿಯ ಕುಮಾರಿ ದಂಪತಿಗಳು ಮತ್ತು ಕೆ ಆರ್ ಎಸ್ ಸಮಿತಿ ಮುಖಂಡರಾದ ಹೆಚ್ ಎನ್ ವೇಣು,ಮಾರುತಿ,ಜಿ ಕೆ ವೆಂಕಟೇಶ್, ಸಿ. ರಂಜಿತಾ, ಆರ್ ರಾಜೇಶ್, ಟಿ ಎಂ ಶ್ರೀನಿವಾಸ್, ಸರಸ್ವತಿ, ಪದ್ಮಾವತಿ ಸೇರಿದಂತೆ ಹಲವರು ಹಾಜರಿದ್ದರು.

     

     

     

  • ಜನಗಣತಿ-2027 ಕ್ಕೆ ಅಗತ್ಯ ಪೂರ್ವ ತಯಾರಿ:ಡಿಸಿ ಎ.ಬಿ ಬಸವರಾಜು

     

    2027 ಕ್ಕೆ ಜನಗಣತಿ ಶುರುವಾಗಲಿದ್ದು ಜಿಲ್ಲೆಯಲ್ಲಿ ಜನಗಣತಿ ಕಾರ್ಯ ಕೈಗೊಳ್ಳಲು ಇಂದಿನಿಂದಲೇ ಪೂರ್ವ ಸಿದ್ಧತೆ ಕೈಗೊಂಡು ಗ್ರಾಮ, ಪಟ್ಟಣಗಳ ಗಡಿ ಗುರುತಿಸುವಿಕೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಬಿ ಬಸವರಾಜು ಅವರು ಸೂಚಿಸಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನಗಣತಿ-2027 ಕ್ಕೆ ಸಂಬಂಧಿಸಿದಂತೆ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜನಗಣತಿಯ ಮೂಲ ಉದ್ದೇಶವು ದೇಶದ ಎಲ್ಲಾ ವ್ಯಕ್ತಿಗಳ ಎಣಿಕೆಯನ್ನು ಯಾವುದೇ ಲೋಪದೋಷ ಇಲ್ಲದಂತೆ ಸಿದ್ಧಪಡಿಸುವುದು. ಹಾಗಾಗಿ ಮೊದಲು ಗ್ರಾಮಗಳ ಬೌಂಡರಿ ಗುರುತಿಸುವಿಕೆ ಕಾರ್ಯ ನಡೆಯಲಿದೆ ಎಂದರು.

     

    *ಜನಗಣತಿ-2027 ಹಂತಗಳು*

    ಜನಗಣತಿ 2027ಕ್ಕೆ ಸಂಬಂಧಿಸಿದಂತೆ ಹೌಸ್ ಲಿಸ್ಟಿಂಗ್ ಮತ್ತು ಮನೆ ಗಣತಿ (ಹಂತ-01) ಕಾರ್ಯವು ಏಪ್ರಿಲ್ 2026 ರಿಂದ ಸೆಪ್ಟೆಂಬರ್ 2026ರ ಅವಧಿಯಲ್ಲಿ ನಡೆಯಲಿದೆ. ಜನಸಂಖ್ಯೆ ಗಣತಿ ಕಾರ್ಯವು (ಹಂತ-02) ಫೆಬ್ರವರಿ 2027ರಲ್ಲಿ ನಡೆಯಲಿದೆ.

     

    *ಗ್ರಾಮಗಳ ಗಡಿ ಗುರುತಿಸುವಿಕೆ ಕಾರ್ಯ*

    ಜನಗಣತಿಯ ನಿರ್ದೇಶನಾಲಯವು 2011ರ ಜನಗಣತಿಯಂತೆ ಗ್ರಾಮ ಮತ್ತು ಪಟ್ಟಣಗಳ ಪಟ್ಟಿ ನೀಡಿದ್ದು ಪರಿಷ್ಕೃತ ಪಟ್ಟಿ ನೀಡಲು ಸೂಚಿಸಿದೆ. ಅದರಂತೆ ಪ್ರಸ್ತುತ ಗ್ರಾಮಗಳು ಮತ್ತು ಪಟ್ಟಣಗಳಿಗೆ ಸಂಬಂಧಿಸಿದಂತೆ ಸೆಕ್ಷನ್-ಎ(ಗ್ರಾಮೀಣ ಪ್ರದೇಶಗಳು) ಮತ್ತು ಸೆಕ್ಷನ್-ಬಿ (ಪಟ್ಟಣ ಪ್ರದೇಶಗಳು) ಪಟ್ಟಿಯನ್ನು ಪರಿಷ್ಕರಿಸಿ ಸಿದ್ದಪಡಿಸಬೇಕಿದೆ. ಗ್ರಾಮಗಳ ಪಟ್ಟಿ ಆಧರಿಸಿ ಗ್ರಾಮಗಳ ಗಡಿ ಗುರ್ತಿಸುವಿಕೆಯಲ್ಲಿ ತಹಶೀಲ್ದಾರ್ಗಳು ಜವಾಬ್ದಾರಿ ವಹಿಸಬೇಕು. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಗಡಿ ಗುರ್ತಿಸುವಲ್ಲಿ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮ ವಹಿಸಬೇಕು. ಯಾವ ಗ್ರಾಮಗಳು ಬಿಟ್ಟು ಹೋಗಿದೆ, ಯಾವ ಗ್ರಾಮಗಳು ಸೇರ್ಪಡೆ ಆಗಿವೆ, ವ್ಯತ್ಯಾಸಗಳೇನು ಎಂಬುದನ್ನು ದೃಢೀಕರಿಸಿ ಗ್ರಾಮಗಳ,ಪಟ್ಟಣಗಳ ಗಡಿ(ಬೌಂಡರಿ)ಯನ್ನು ಗುರ್ತಿಸಿ ನವೆಂಬರ್ ಅಂತ್ಯದೊಳಗೆ ವರದಿ ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

     

    *ಗ್ರಾಮಗಳ ಪಟ್ಟಿ ವಿವರ*

    ದೇವನಹಳ್ಳಿ-230

    ಹೊಸಕೋಟೆ-302

    ದೊಡ್ಡಬಳ್ಳಾಪುರ-309

    ನೆಲಮಂಗಲ-252

    ಒಟ್ಟು-1093 ಗ್ರಾಮಗಳ ಗಡಿ ಗುರುತಿಸುವ ಕಾರ್ಯ ನಡೆಯಲಿದೆ.

     

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಉಪವಿಭಾಗಾಧಿಕಾರಿ ದುರ್ಗಶ್ರೀ, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ಕೃಷಿ ಕಲಿತು ಸ್ವಯಂ ಕೃಷಿ ಮಾಡುವ ಮೂಲಕ ಮಾದರಿ ಕೃಷಿಕರಾದ ಹಾಡೋನಹಳ್ಳಿ ಅನುಷಾ ಅರುಣ್ : ಮಾದರಿ ರೈತ ಮಹಿಳೆಯ ಬಗ್ಗೆ ಒಂದಿಷ್ಟು ಮಾಹಿತಿ 

     

    ದೊಡ್ಡಬಳ್ಳಾಪುರ : ರೈತ ಅನ್ನದಾತ, ರೈತ ಕೊಡುವವನೇ ಹೊರತು ಬೇಡುವವನಲ್ಲ ಎಂದು ನಂಬಿದ ಪದವೀಧರೆ ಕೃಷಿಕನನ್ನು ಮದುವೆಯಾಗಿ ಇಬ್ಬರು ಮಕ್ಕಳಿಗೆ ತಾಯಿಯಾಗಿ ಮುಂದೆ ತಾನೇ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡಿರುವ ತಾಜಾ ಉದಾಹರಣೆ ನಮ್ಮ ದೊಡ್ಡಬಳ್ಳಾಪುರದ ಹಾಡೋನಹಳ್ಳಿ ಗ್ರಾಮದಲ್ಲಿದೆ…

     

    ಹೌದು, ರೈತನಿಗೆ ಹೆಣ್ಣು ಸಿಗುವುದು ಅಪರೂಪ, ಅಂತಹದರಲ್ಲಿ ಇಲ್ಲೊಬ್ಬ ತಂದೆತಾಯಿ ಬಿಕಾಂ ಪದವೀಧರೆಯನ್ನು ರೈತನಿಗೆ ಕೊಟ್ಟು ಮದುವೆ ಮಾಡುತ್ತಾರೆ. ಕೃಷಿಕನನ್ನು ಮದುವೆಯಾದ ಪದವೀಧರೆ ಯಾವ ಕಾರ್ಪೋರೇಟ್ ಕೆಲಸಕ್ಕೆ ಹೋಗದೇ, ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸದೇ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಗಂಡನ‌ ಜೊತೆ ಕೃಷಿಯಲ್ಲಿ ಭಾಗಿಯಾಗಿ, ಕೃಷಿ ಕೆಲಸವನ್ನು ಕಲಿತು, ಇದೀಗ ಗಂಡನ ಸಹಾಯ ಪಡಿಯದೇ ತಾನೇ ಬೆಳೆಗಳನ್ನು ಬೆಳೆದು ಅದರಲ್ಲಿ ಯಶಸ್ಸು ಕಂಡು ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ.

     

    ಕೃಷಿಯಲ್ಲಿ ಯಶಸ್ಸು ಕಂಡ ಹಲವು ಮಹಿಳೆಯರಿದ್ದಾರೆ. ಅವರಲ್ಲಿ ಕೆಲವರು ಸಾವಯವ ಕೃಷಿ, ಹೈನುಗಾರಿಕೆ ಮತ್ತು ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ಮೂಲಕ ಯಶಸ್ವಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಗ್ರಾಮದ ಪ್ರತಿಭಾನ್ವಿತ ರೈತ ಮಹಿಳೆ ಅನುಷಾ ಅರುಣ್(28)ಅವರು ಕೃಷಿಯಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಅನುಷಾ ಹಾಗೂ ಪತಿ ಅರುಣ್ ಕುಟುಂಬ ಸರಿಸುಮಾರು 6 ಎಕರೆಯ ಭೂಮಿ ಹೊಂದಿದ್ದು ತಮ್ಮ ಹಿರಿಯರು ಮಾಡುತ್ತಿದ್ದ ಪಾರಂಪರಿಕವಾಗಿ ವ್ಯವಸಾಯವನ್ನು ಈ ಕುಟುಂಬ ಮುಂದುವೆರೆಸಿದೆ. ವ್ಯವಸಾಯ ಮಾಡಿ ಏನಾದರೂ ಸಾಧನೆ ಮಾಡಬೇಕೆಂಬ ಛಲದೊಂದಿಗೆ ಅರುಣ್ ಜೊತೆ ಬೆಂಬಲಕ್ಕೆ ಪತ್ನಿ ಅನುಷಾ ನಿಂತಿದ್ದು ಈ ಹಿನ್ನೆಲೆ ಮೊದಲು ತನ್ನ ಪತಿ ಅರುಣ್ ಸಹಾಯ ಪಡೆದುಕೊಂಡು ಕೃಷಿ ಚಟುವಟಿಕೆಗಳ ಬಗ್ಗೆ ಅರಿತು, ಈಗ ತಾನೇ ಸ್ವತಹ ಉಳುಮೆ‌ ಮಾಡುವುದರಿಂದ ಹಿಡಿದು ಬೆಳೆ ಬೆಳೆದು ಫಸಲನ್ನು ಮಾರುಕಟ್ಟೆಗೆ ಹಾಕಿ ಲಕ್ಷ‌ಲಕ್ಷ ಹಣ ಎಣಿಸಿ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿ, ಎಲ್ಲರಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾರೆ ಅನುಷಾ ಅರುಣ್.

    ಕೃಷಿಯಲ್ಲಿ ಯಶಸ್ಸು ಕಾಣುತ್ತಿರುವ ಅನುಷಾ ತಮ್ಮ ಊರಿನ ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.ಕೃಷಿ ಎಸಿ ರೂಂನಲ್ಲಿ ಕುಳಿತು ಲಕ್ಷಗಟ್ಟಲೇ ಹಣ ಎಣಿಸುವ ವೃತ್ತಿಯಲ್ಲ. ಕೃಷಿಯನ್ನು ಹೆಚ್ಚಾಗಿ ಪುರುಷರೇ ನೋಡಿಕೊಳ್ಳುತ್ತಾರೆ. ಇದಕ್ಕೆ ಸೆಡ್ಡು ಹೊಡೆದು ಮಹಿಳೆಯರೂ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಕಾಣಬಹುದು ಎಂದು ಅನುಷಾ ಅವರು ಸಾಧಿಸಿ ತೋರಿಸಿದ್ದಾರೆ.

     

    ಅನುಷಾ ಹಾಗೂ ಅರುಣ್ ದಂಪತಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಈಕೆ ಬೆಳಗ್ಗೆ ಸುಮಾರು 4 ಗಂಟೆಗೆ ಎದ್ದು, ಹಾಲು ಕರೆದು ಡೈರಿಗೆ ಹಾಕಿ, ಮನೆ ಕೆಲಸ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸಿ, ಅತ್ತೆ, ಮಾವ, ಗಂಡನಿಗೆ ಹಾಗೂ ಸಂಬಂಧಿಕರಿಗೆ ಊಟ ಕೊಟ್ಟು, ನೇರವಾಗಿ ಹೊಲದ‌‌ ಕಡೆ ನಡೆದು ಹೂ ಬಿಡಿಸಿ ಮಾರುಕಟ್ಟೆಗೆ ಹಾಕಿ ಮತ್ತೆ, ಹೊಲದಲ್ಲಿ ಬೆಳೆಗಳಿಗೆ ನೀರು ಹಾಯಿಸುವುದು, ಔಷಧಿ ಸಿಂಪಡಣೆ, ಉಳುಮೆ, ಕಳೆ‌ ಕೀಳುವುದು ಹೀಗೆ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ ಮತ್ತೆ ಸಾಯಂಕಾಲ ಹಾಲು ಕರೆದು ಡೈರಿಗೆ ಹಾಕಿ ಶಾಲೆಯಿಂದ ಬಂದ ಮಕ್ಕಳನ್ನು ಮುದ್ದಾಡಿ, ಅವರಿಗೆ ಸ್ವಲ್ಪ ಓದಿಸಿ ಮತ್ತೆ ಅಡುಗೆ ಮಾಡಿ ಎಲ್ಲರೊಟ್ಟಿಗೆ ಊಟ ಮಾಡಿ ಮಲಗುವಷ್ಟರಲ್ಲಿ ರಾತ್ರಿ ಹತ್ತಾಗುತ್ತದೆ. ಮತ್ತದೇ ಬೆಳಗ್ಗೆ ಎದ್ದ ಕೂಡಲೇ ಅದೇ ಕೆಲಸ.

    ಸದ್ಯ ಅನುಷಾ ಅವರು ಒಂದೂವರೆ ಎಕರೆಯಲ್ಲಿ ರೋಜ್ (ಮಿರಾಬಲ್), ಮುಕ್ಕಾಲು ಎಕರೆಯಲ್ಲಿ ಟೊಮೆಟೊ, ಮುಕ್ಕಾಲು ಎಕರೆಯಲ್ಲಿ ಸೇವಂತಿಗೆ, ಅರ್ಧ ಎಕರೆಯಲ್ಲಿ ಅಡಿಕೆ ಹಾಕಿದ್ದಾರೆ. ಎಲ್ಲಾ ತರಕಾರಿ ಬೆಳೆಗಳನ್ನು ಬೆಳೆದು ಫಸಲನ್ನು ಸ್ವತಃ ತಾವೇ ಟ್ರ್ಯಾಕ್ಟರ್ ಗೆ ತುಂಬಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಾರೆ. ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡುವುದು, ಬೈಕ್, ಕಾರು, ಟೆಂಪೋ ಸೇರಿದಂತೆ ಇತರೆ ವಾಹನಗಳನ್ನು ಲೀಲಾಜಾಲವಾಗಿ ಚಲಾಯಿಸುವುದು ಇವರೇ.

     

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರೈತ ಮಹಿಳೆ ಅನುಷಾ, ನಮ್ಮ ಊರು ಮಾರಹಳ್ಳಿ, ನಾನು ಬಿಕಾಂ ಪದವೀಧರೆ, ಕಳೆದ ಒಂಬತ್ತು ವರ್ಷದಿಂದೆ ಗುರುಹಿರಿಯರ ನಿಶ್ವಯದಂತೆ ಹಾಡೋನಹಳ್ಳಿಯ ಕೃಷಿಕ‌ ಕುಟುಂಬದಲ್ಲಿ ಜನಿಸಿರೋ ಅರುಣ್ ಅವರೊಂದಿಗೆ ಮದುವೆಯಾಯಿತು. ಮದುವೆಯಾದಗಿನಿಂದಲೂ ಗಂಡನ ಜೊತೆ ಕೃಷಿ‌ ಮಾಡುತ್ತಿದ್ದೇನೆ. ನನ್ನ ಗಂಡ ಬೇರೆ ಕೆಲಸದಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಗಂಡನ ಸಹಾಯಪಡಿಯದೇ ನಾನೇ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನನಗೆ ಯಾರ ಬಲವಂತವಿಲ್ಲ. ಕೃಷಿಯನ್ನು ಇಷ್ಟಾಪಟ್ಟು ಮಾಡುತ್ತಿದ್ದೇನೆ. ಕೃಷಿ ಮಾಡುವುದರಿಂದ ನನಗೆ ಮುಜುಗರವಿಲ್ಲ ಸಂತೋಷವಿದೆ ಎಂದು ಬಹಳ ಹೆಮ್ಮೆಯಿಂದ ಹೇಳಿದರು.

    ನನ್ನ ಗಂಡ ರೈತ. ರೈತನನ್ನು ಮದುವೆಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ.‌ ದೇಶದ ಬೆನ್ನೆಲೆಬು ರೈತ, ದೇಶಕ್ಕೆ ಅನ್ನ ಹಾಕೋ ರೈತ ಕಟ್ಟಿಕೊಂಡಿರುವ ಹೆಂಡತಿಗೆ ಹಾಕಲ್ವಾ…‌ಅದಕ್ಕೆ ಇಷ್ಟಾ ಪಟ್ಟು ರೈತನನ್ನು ಮದುವೆಯಾದೆ. ನಾನು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿರುವುದರಿಂದ ನನ್ನ ಗಂಡ ಬೋರ್ ವೆಲ್ ಲಿಫ್ಟಿಂಗ್ ಕೆಲಸಕ್ಕೆ ಹೋಗುತ್ತಿದ್ದಾರೆ. ಕೃಷಿಯಲ್ಲಿ ಲಾಭನೂ ಇದೆ ನಷ್ಟನೂ ಇದೆ ಎದೆಗುಂದದೆ ಭೂಮಿ ತಾಯಿಯನ್ನು ನಂಬಿ ಬೆಳೀಬೇಕು. ನಾನು ಎಲ್ಲಾದರೂ ಕಂಪನಿಯಲ್ಲಿ ಕೆಲಸಕ್ಕೆ ಹೋಗಿದ್ದರು ಕನಿಷ್ಟ 10-15ಸಾವಿರ ಸಂಬಳ ಪಡೆಯುತ್ತಿದೆ. ಅದು ನಮ್ಮ ಮಕ್ಕಳ ಶಾಲೆಯ ಫೀಸ್ ಕಟ್ಟೋದಕ್ಕೆ ಆಗುತ್ತಿರಲಿಲ್ಲ. ಆದರೆ ಬೆಳೆಯಲ್ಲಿ ತಿಂಗಳಿಗೆ ಒಂದೂವರೆ ಲಕ್ಷ ಆದಾಯ ಪಡೆಯುತ್ತೇವೆ ಎಂದರು.

    ನಂತರ ಅನುಷಾ ಗಂಡ ರೈತ ಅರುಣ್ ಮಾತನಾಡಿ, ಚೆನ್ನಾಗಿ ಓದಿರುವ ಹೆಣ್ಣನ್ನು ನನಗೆ ಮಾದುವೆ ಮಾಡಿದರು.‌ ಬಿಸಲನ್ನೇ ನೋಡದ ನನ್ನ ಹೆಂಡತಿ ಈಗ ಕೃಷಿಯಲ್ಲಿ ಯಶಸ್ಸು ಕಂಡು ಎಲ್ಲರಿಗೂ ಮಾದರಿಯಾಗಿರುವುದು ನನಗೆ ಸಂತೋಷ ತಂದಿದೆ. ಮೊದಮೊದಲು ಕೃಷಿ ಮಾಡಬೇಕಾದರೆ ಅವರಿಗೆ ಕಷ್ಟ ಅನಿಸಿತು. ನಂತರ ಎಲ್ಲಾ ಕಲಿತನಂತರ ಈಗ ನನ್ನ ಉಪಸ್ಥಿತಿ ಇಲ್ಲದಿದ್ದರೂ ಬೆಳೆಗಳನ್ನು ಬೆಳೆಯುತ್ತಾರೆ. ನಾನು ಅನುಷಾ ಅವರನ್ನು ಮದುವೆಯಾಗುವುದಕ್ಕೆ ಪುಣ್ಯ ಮಾಡಿದ್ದೆ. ನನಗೆ ಒಳ್ಳೆ ಹೆಂಡತಿ‌ ಸಿಕ್ಕಿದ್ದಾಳೆ. ರೈತನಿಗಿರುವ ಬೆಲೆ ಯಾವುದಕ್ಕೂ ಇಲ್ಲ. ಒಂದು ಎಕರೆ ಕೋಟಿಗಟ್ಟಲೇ ಬೆಲೆ ಬಾಳುತ್ತದೆ. ಇವತ್ತು ಜಮೀನು ಮಾರಿ ಸರ್ಕಾರಿ ಪಡೆಯುವ ಕಾಲ. ಅದೇ ಜಮೀನು ಇದ್ದು, ಇನ್ನು‌ ಮೂವತ್ತು ಕಳೆದರೆ ಅದಕ್ಕೆ ಚಿನ್ನದ ಬೆಲೆ ಸಿಕ್ಕಿ ಅವರ ಮಕ್ಕಳು ಮೊಮ್ಮಕ್ಕಳಿಗೆ ಅನುಕೂಲವಾಗುತ್ತದೆ ಎಂಬುದು ಗೊತ್ತಿಲ್ಲ. ಆದ್ದರಿಂದ ಯಾರೂ ಜಮೀನು ಕಳೆದುಳ್ಳಬಾರದು ಎಂದರು.

    ಒಟ್ಟಿನಲ್ಲಿ ಜಗತ್ತು ರೈತನಿಗೆ ನೀಡುವ ಗೌರವದಲ್ಲಿ ಬದಲಾಗಬೇಕಿದೆ. ಈ ರೈತನ ಚಿತ್ರ ಬಿಡಿಸಲು ಹೇಳಿದರೆ ಹರಕು ಪಂಚೆ ಉಟ್ಟು ಮೋಡ ನೋಡುತ್ತಿರುವ ರೈತರನ್ನು ಮಕ್ಕಳು ಚಿತ್ರಿಸುತ್ತಾರೆ. ಆದರೆ, ಇದು ಬದಲಾಗಬೇಕು ರೈತರ ಚಿತ್ರ ಬಿಡಿಸಲು ಹೇಳಿದರೆ ಎಸಿ ಕಾರ್ ನಲ್ಲಿ ಕೋಟ್ ಹಾಕಿ ಕುಳಿತು ಸೆಲ್ಫಿ ಕ್ಲಿಕ್ಕಿಸುವ ಚಿತ್ರವನ್ನು ಬಿಡಿಸುವಂತಾಗಬೇಕು ಎಂಬುದೇ ನಮ್ಮ ವಿಜಯ ಮಿತ್ರ ಆಶಯ

  • ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆ : ಬಿಸುವನಹಳ್ಳಿ ಹಾಗೂ ಕಸವನಹಳ್ಳಿ ಗೆ ಪ್ರತ್ಯೇಕ ವಾರ್ಡ್ ನೀಡಿ ಇಲ್ಲವೇ ಚುನಾವಣೆ ಬಹಿಷ್ಕರಿಸುತ್ತೇವೆ ಎಂದ ಗ್ರಾಮಸ್ಥರು

    ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಸವನಹಳ್ಳಿ ಹಾಗೂ ಬಿಸುವನಹಳ್ಳಿ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡಬೇಕು ಇಲ್ಲದ ಪಕ್ಷದಲ್ಲಿ ಮುಂಬರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡದೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಸ್ಥಳೀಯ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

    ಕಳೆದ ಹಲವಾರು ವರ್ಷಗಳಿಂದ ನಮ್ಮ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನೆನೆಗುದ್ದಿಗೆ ಬಿದ್ದಿವೆ, ಹೆಚ್ಚು ಜನಸಂಖ್ಯೆ, ಹೆಚ್ಚಾದ ವಿಸ್ತೀರ್ಣ ಹೊಂದಿರುವ ನಮ್ಮ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡದೆ ಮೋಸ ಮಾಡಲಾಗಿದೆ. ಪ್ರಶ್ನೆ ಮಾಡದ ಪ್ರತಿನಿಧಿಗಳಿಲ್ಲದೆ ಪಟ್ಟಣ ಪಂಚಾಯತಿ ಅಧಿಕಾರಿಗಳೇ ಸರ್ವಧಿಕಾರಿಗಳಂತೆ ವರ್ತಿಸುತ್ತಿದ್ದು ಅವರಿಗೆ ನಮ್ಮ ಗ್ರಾಮಗಳ ಅಭಿವೃದ್ಧಿಕಡೆ ಗಮನವೇ ಇಲ್ಲದಂಥಗಿದೆ ಎಂದು ಆರೋಪಿಸಿದರು.

     

    ಸ್ಥಳೀಯ ಮುಖಂಡ ರವಿ ಕುಮಾರ್ ಮಾತನಾಡಿ 2020ರಲ್ಲಿ ಸ್ಥಳೀಯ ಬಾಶೆಟ್ಟಿಹಳ್ಳಿ ಪಂಚಾಯತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ್ದು 2022ರಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ವಿಂಗಡಣೆ ಮಾಡಲಾಗಿದೆ . ಆದರೆ ಈ ವಾರ್ಡ್ ವಿಂಗಡಣೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲೇ ಅತಿಹೆಚ್ಚು ಜನಸಾಂದ್ರತೆ ಹೊಂದಿರುವ ಭೌಗೋಳಿಕವಾಗಿ ಹೆಚ್ಚು ಪ್ರದೇಶ, ಹಾಗೂ ಅತಿ ಹೆಚ್ಚು ಕೃಷಿಕರನ್ನು ಹೊಂದಿರುವ ನಮ್ಮ ಕಸವನಹಳ್ಳಿ ಹಾಗೂ ಬಿಸುವನಹಳ್ಳಿ ಗ್ರಾಮಗಳನ್ನು ಒಂದೇ ವಾರ್ಡ್ ಎಂದು ಪರಿಗಣಿಸಲಾಗಿದೆ .ದಲಿತ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಬೇಕು ಎಂತಲೇ ಉದ್ದೇಶಪೂರವಾಗಿಯೇ ವಾರ್ಡು ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆ. ನಮಗಿಂತಲೂ ಕಡಿಮೆ ಜನಸಾಂದ್ರತೆ ಹೊಂದಿರುವ ತಮಗೆ ಬೇಕಿರುವ ಹಲವು ಬಡಾವಣೆಗಳನ್ನು ವಾರ್ಡ್ ಎಂದು ಪರಿಗಣಿಸಲಾಗಿದೆ.

    2011 ಹಾಗೂ 2015 ರ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ನಮ್ಮ ಬಿಸುವನಹಳ್ಳಿ ಹಾಗೂ ಕಸವನಹಳ್ಳಿ ಗ್ರಾಮಗಳಿಗೆ ಪ್ರತ್ಯೇಕ ಮತದಾನ ಕೇಂದ್ರಗಳನ್ನು(ಬೂತ್) ಮಾಡಲಾಗಿತ್ತು ಆದರೆ ವಾರ್ಡ್ ವಿಂಗಡಣೆ ಸಮಯದಲ್ಲಿ ನಮ್ಮ ಗ್ರಾಮಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಏಕ ಪಕ್ಷಿಯ ನಿರ್ಧಾರ ಕೈಗೊಳ್ಳಲಾಗಿದೆ . ಪಟ್ಟಣ ಪಂಚಾಯತಿ ವ್ಯಾಪ್ತಿಯ 19 ವಾರ್ಡುಗಳ ಪೈಕಿ ನಮ್ಮ ವಾರ್ಡ್ ಅತಿ ಹೆಚ್ಚು ಮತದಾರರನ್ನು ಹೊಂದಿದೆ .

     

    ಮುಂದಿನ ದಿನಗಳಲ್ಲಿ ನಾಯಕನಿಲ್ಲದ ಊರು ನಡೆಸಬೇಕಾಗುತ್ತದೆ 

     

    ಬಾಶೆಟ್ಟಿ ಪಟ್ಟಣ ಪಂಚಾಯಿತಿಯು ವಾರ್ಡ್ ವಿಂಗಡಣೆ ಸಮಯದಲ್ಲಿ ಅವೈಜ್ಞಾನಿಕ ನೀತಿಯನ್ನು ಅನುಸರಿಸಿದೆ ಕೇವಲ 369 ಮತದಾರರಿರುವ ಸ್ಥಳಗಳಿಗೆ ವಾರ್ಡ್ ನೀಡಿರುವ ಪಂಚಾಯತಿ 1448 ಮತದಾರರನ್ನು ಹಾಗೂ ಭೌಗೋಳಿಕ ಅರ್ಹತೆ ಹೊಂದಿರುವ ನಮ್ಮ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡದೆ ಇರುವುದು ವಿಪರ್ಯಾಸವೇ ಸರಿ. ಈಗಲಾದರೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಾಯಕರ ಇಲ್ಲದ ಗ್ರಾಮಗಳನ್ನು ನೋಡಬೇಕಾಗುತ್ತದೆ. ಪ್ರಶ್ನೆ ಮಾಡಲು ಪ್ರತಿನಿಧಿಗಳೇ ಇಲ್ಲದೆ ಇದ್ದಲ್ಲಿ ಅಧಿಕಾರಿಗಳ ದರ್ಬಾರ್ ನಡೆಯಲಿದೆ . ಈ ನಡವಳಿಕೆ ಬದಲಾಗಬೇಕು ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ನಮ್ಮ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡುವ ಮೂಲಕ ಸಹಕರಿಸಬೇಕು ಪಟ್ಟಣ ಪಂಚಾಯತಿ ಅಧಿಕಾರಿಗಳು ಈ ಕೂಡಲೇ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಬೇಕು ಇಲ್ಲದೇ ಹೋದರೇ ಚುನಾವಣೆ ಸ್ಥಗಿತಗೊಳಿಸಿ ಎಂದು ಮುಖಂಡರು ಅಗ್ರಹಿದರು

     

    ಸ್ಥಳೀಯ ಮುಖಂಡ ನಾರಾಯಣಸ್ವಾಮಿ ಮಾತನಾಡಿ ಬಿಸುವನಹಳ್ಳಿ ಹಾಗೂ ಕಸವನಹಳ್ಳಿ ಗ್ರಾಮಗಳನ್ನು ಒಂದೇ ವಾರ್ಡ್ ಎಂದು ಪರಿಗಣಿಸಿ ತರಾತುರಿಯಲ್ಲಿ ಬಾಷೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆ ಘೋಷಣೆ ಮಾಡಿದೆ.ಸ್ಥಳೀಯ ಗ್ರಾಮಸ್ಥರು ಕಳೆದ 2022ರಿಂದಲ್ಲೂ ನಮಗೆ ಪ್ರತ್ಯೇಕ ವಾರ್ಡ್ ಕಲ್ಪಿಸಬೇಕೆಂದು ಮನವಿ ಮಾಡಿ ಮಾನ್ಯ ನ್ಯಾಯಾಲಯದ ಮೊರೆ ಹೋಗಿದ್ದೇವೆ . ಆದರೆ ಈವರೆಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹೋಗಿ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿರುವ ಅಧಿಕಾರಿಗಳು ಕೇವಲ ತಮ್ಮ ಸ್ವಾಹಿತಾಸಕ್ತಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ನಮ್ಮ ಪಟ್ಟಣ ಪಂಚಾಯಿತಿಯೇ ಉತ್ತಮ ಉದಾಹರಣೆ. ಯಾವ ಮಾನದಂಡಗಳ ಆಧಾರದ ಮೇಲೆ ವಾರ್ಡ್ ವಿಂಗಡಣೆ ಮಾಡಲಾಗಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ, ಕೆಲ ಪ್ರಮುಖರ ಒತ್ತಡಕ್ಕೆ ಮಣಿದು ರಾಜಕೀಯ ಪ್ರೇರಿತರಾಗಿ ವಾರ್ಡ್ ವಿಂಗಡಣೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದಿ ನಾರಾಯಣ ಹೊಸಹಳ್ಳಿ, ಮೋಸರಹಳ್ಳಿ ಹಾಗೂ ನಾಗದೇನಹಳ್ಳಿ ಮೂರು ಗ್ರಾಮಗಳನ್ನು ಸೇರಿಸಿ ಒಂದು ವಾರ್ಡ್ ಮಾಡಲಾಗಿದೆ . ಅಂತೇ ಕಸವನಹಳ್ಳಿ ಹಾಗೂ ಬಿಸುವನಹಳ್ಳಿ ಗ್ರಾಮಗಳನ್ನು ಸೇರಿಸಿ ಒಂದು ವಾರ್ಡ್ ಮಾಡಲಾಗಿದೆ ಇದು ಸಂಪೂರ್ಣ ಅವೈಜ್ಞಾನಿಕ ವಿಂಗಡಣೆಯಾಗಿದೆ. ನಮ್ಮ ಗ್ರಾಮದಲ್ಲಿ ವೃದ್ಧರು ಅಂಗವಿಕಲರು ಇದ್ದಾರೆ ಕಸವನಹಳ್ಳಿಯ ಮತ ಕೇಂದ್ರಕ್ಕೆ ತೆರಳಿ ಮತ ಹಾಕಬೇಕಾದರೆ ಕನಿಷ್ಠ 3ಕಿಲೋ ಮೀಟರ್ ನಡೆದುಸಾಗಬೇಕಿದೆ ನಮ್ಮ ಗ್ರಾಮದಲ್ಲೇ ಮತಕೇಂದ್ರ ನೀಡಿ ನಮ್ಮ ಗ್ರಾಮಕ್ಕೆ ಪ್ರತ್ಯೇಕ ವಾರ್ಡ್ ನೀಡಬೇಕು ಎಂದು ಅಗ್ರಹಿಸಿದರು.

     

     

    ನಮ್ಮ ಗ್ರಾಮಸ್ಥರನ್ನು ಮನವೊರಿಸಿ ಮತದಾನ ಮಾಡಿಸುತ್ತೇವೆ ಎಂದು ಅಧಿಕಾರಿಗಳು ಭಾವಿಸಿದ್ದರೇ ಅದು ಖಂಡಿತ ಸಾಧ್ಯವಿಲ್ಲ , ನಮ್ಮ ಗ್ರಾಮಕ್ಕೆ ಪ್ರತ್ಯೇಕ ವಾರ್ಡ್ ನೀಡಿದರೆ ನಾವು ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಮತದಾನ ಮಾಡುತ್ತೇವೆ ಇಲ್ಲವಾದಲ್ಲಿ ಎಲ್ಲ ಗ್ರಾಮಸ್ಥರು ಒಮ್ಮತದಿಂದ ಮತದಾನಮಾಡದೆ ಚುನಾವಣೆ ಬಹಿಷ್ಕರಿಸುವ ಮೂಲಕ ಅಧಿಕಾರಿಗಳ ಧೋರಣೆವಿರುದ್ಧ ಹೋರಾಟ ನಡೆಸಲಿದ್ದೆವೆ ಎಂದರು.

     

    ಈ ಸಂದರ್ಭದಲ್ಲೊ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಯಶೋದಮ್ಮ, ವೆಂಕಟರಮಣಪ್ಪ, ತಿಮ್ಮರಾಯ,ಎನ್.ಶೇಖರ್ , ಬಿ ಕೆ ಪರಶುರಾಮ,ನಾರಾಯಣಸ್ವಾಮಿ, ಎಂ ಮಾರಪ್ಪ,ಲೋಕೇಶ್, ಮುನಿಯಪ್ಪ, ಸತೀಶ್, ಮಂಜುನಾಥ್, ಕಸುವನಹಳ್ಳಿ ಕಾನೂನು ವಿದ್ಯಾರ್ಥಿ ಮತ್ತು ಜನಧ್ವನಿ ವೇದಿಕೆಯ ಮುಖಂಡ ರವಿಕುಮಾರ್, ನಾರಾಯಣಸ್ವಾಮಿ, ಮುನಿರಾಜು ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಮುಖಂಡರು ಸ್ತ್ರೀ ಶಕ್ತಿ ಸ್ವಹಾಯಕ ಸಂಘದ ಮಹಿಳೆಯರು, ಅಂಬೇಡ್ಕರ್ ಸಂಘದ ಮುಖಂಡರು ವಾಲ್ಮೀಕಿ ಸಂಘದ ಮುಖಂಡರು ಮತ್ತು ಯುವಕರು ಹಾಜರಿದ್ದರು.

  • ಶಿಕ್ಷಣ ಕ್ಷೇತ್ರ ಚುನಾವಣೆ : ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಉಸ್ತುವರಿಯಾಗಿ ಡಾ|| ಸೌಮ್ಯ ರವರನ್ನು ನೇಮಿಸಿದ ಕೆಪಿಸಿಸಿ

    ಬೆಂಗಳೂರು ಗ್ರಾಮಾಂತರ : 2026ರ ಶಿಕ್ಷಣ ಕ್ಷೇತ್ರ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಉಸ್ತುವರಿಯಾಗಿ ಡಾ|| ಸೌಮ್ಯ ರವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಪದವೀಧರರ ವಿಭಾಗ)ನೇಮಿಸಿ ಆದೇಶ ಹೊರಡಿಸಿದೆ

    ಮುಂಬರುವ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕೆಪಿಸಿಸಿ ಪದವೀಧರರ ವಿಭಾಗದ ವತಿಯಿಂದ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿ ಕೆಪಿಸಿಸಿ ಮುಖ್ಯ ವಕ್ತಾರರು ಹಾಗೂ ಕೆಪಿಸಿಸಿ ಪದವಿದರ ವಿಭಾಗದ ಅಧ್ಯಕ್ಷರಾದ ಎ ಎನ್ ನಟರಾಜ್ ಗೌಡ ಉಸ್ತುವಾರಿಗಳ ಪಟ್ಟಿಗೆ ಅನುಮೋದನೆ ನೀಡುವಂತೆ ಕೋರಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ರವಾನಿಸಿದ್ದಾರೆ.

    2026ರಲ್ಲಿ ನಡೆಯುವ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪದವೀಧರರ ವಿಭಾಗದ ಪದಾಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿಗಳನ್ನಾಗಿ ಆಯ್ಕೆ ಮಾಡಿದ್ದು ಸದರಿ ಪದಾಧಿಕಾರಿಗಳು ತಮಗೆ ವಹಿಸಲಾಗಿರುವ ಕ್ಷೇತ್ರದಲ್ಲಿ ಪಕ್ಷದ ಮುಖಂಡರುಗಳ ಸಹಯೋಗದೊಂದಿಗೆ ಮತದಾರರ ಪಟ್ಟಿಗೆ ಸದಸ್ಯತ್ವವನ್ನು ನೋಂದಣಿ ಮಾಡಿಸಲು ಕ್ರಮವಹಿಸುವಂತೆ ನಿರ್ದೇಶಿಸಲಾಗಿದೆ. ಆದ್ದರಿಂದ ತಾವು ದಯಮಾಡಿ ಈ ಆಯ್ಕೆ ಪಟ್ಟಿಗೆ ಅನುಮೋದನೆ ನೀಡುವಂತೆ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ

    ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಉಸ್ತುವಾರಿಗಳ ಪಟ್ಟಿ ಇಂತಿದೆ :-

    ಭರತ್ ಬೆಂಗಳೂರು ಉತ್ತರ, ಪ್ರಶಾಂತ್ ಬೆಂಗಳೂರು ದಕ್ಷಿಣ, ವೆಂಕಟೇಶ್ ಬೆಂಗಳೂರು ಕೇಂದ್ರ, ಶಿಕಂದರ್ ಬೆಂಗಳೂರು ಪೂರ್ವ, ಮದೂಸೂದನ ಬೆಂಗಳೂರು ಪಶ್ಚಿಮ, ಡಾ. ಸೌಮ್ಯ ಬೆಂಗಳೂರು ಗ್ರಾಮಾಂತರ, ಎನ್ ಶೋಭಾ ರಾಮನಗರ.

     

    ಈ ಕುರಿತು ಬೆಂಗಳೂರು ಗ್ರಾಮಾಂತರ ಉಸ್ತುವಾರಿಗಳಾಗಿ ಆಯ್ಕೆಯಾಗಿರುವ ಡಾ. ಸೌಮ್ಯ ಮಾತನಾಡಿ ನನ್ನ ಮೇಲೆ ಭರವಸೆ ಇಟ್ಟು ನನಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿಭಾಯಿಸುತ್ತೇನೆ . ನನ್ನನ್ನು ನೇಮಕ ಮಾಡಿದ ರಾಜ್ಯದ ಹೆಮ್ಮೆಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್, ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪ ಜೀ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

    ಈ ಸಂದರ್ಭದಲ್ಲಿ ಪ್ರಮುಖವಾಗಿ ನನ್ನಗೆ ಸದಾ ಬೆಂಬಲವಾಗಿರುವ ನನ್ನ ರಾಜಕೀಯ ಗುರುಗಳಾದ ದಿವಂಗತ ವೆಂಕಟಸ್ವಾಮಿ, ತಾಲ್ಲೂಕಿನ ಮಾಜಿ ಶಾಸಕರಾದ ಟಿ ವೆಂಕಟರಮಣಯ್ಯ, ಶಾಸಕರಾದ ಶರತ್ ಬಚ್ಚೇಗೌಡ, ಮಾರ್ಗದರ್ಶಕರಾದ ಜಿ ಸಿ ಚಂದ್ರಶೇಖರ್ ನಟರಾಜ್ ಗೌಡ , ಶ್ರೀನಿವಾಸ್ , ಸಿ ಆರ್ ಗೌಡ , ರಾಮೋಜಿ ಗೌಡ , ಪುಟ್ಟಣ್ಣ, ಎಸ್ ರವಿ, ರಕ್ಷಾರಾಮಯ್ಯ, ಎಸ್ ಆರ್ ಮುನಿರಾಜು , ಅರವಿಂದ ನರಸಿಂಹಸ್ವಾಮಿ , ಮುನಿಕೃಷ್ಣಪ್ಪ , ಜಯಕಾಂತಮ್ಮ , ರೇವತಿ ಅನಂತರಾಮ್ , ರವಿ ಸಿದ್ದಪ್ಪ, ಎಚ್ ಎನ್ ನರಸಿಂಹಮೂರ್ತಿ , ಅಶ್ವಥಪ್ಪ , ಆದಿನಾರಾಯಣ ಸೇರಿದಂತೆ ತೂಬಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಎಲ್ಲ ಮುಖಂಡರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

  • ದೊಡ್ಡಬಳ್ಳಾಪುರ: ಹೊಸಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಹೊನ್ನಮ್ಮ ಚಿಕ್ಕಪಾಪಯ್ಯ ಆಯ್ಕೆ

     

    ವಿಜಯಮಿತ್ರ ದೊಡ್ಡಬಳ್ಳಾಪುರ :

    ನಾಗರತ್ನಮ್ಮ ಲಕ್ಷ್ಮೀನಾರಾಯಣಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಹೊನ್ನಮ್ಮ ಚಿಕ್ಕಪಾಪಯ್ಯ ಆಯ್ಕೆಯಾಗಿದ್ದಾರೆ.

     

     

    24 ಮಂದಿ ಸದಸ್ಯತ್ವ ಬಲ ಹೊಂದಿರುವ ಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಧಿಕಾರಿ ಕೃಷಿ ಇಲಾಖೆಯ ರಾಘವೇಂದ್ರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.

     

    ಈ ವೇಳೆ ಬಿಜೆಪಿ ಬೆಂಬಲಿತ ಹೊನ್ನಮ್ಮ ಚಿಕ್ಕಪಾಪಯ್ಯ ಹಾಗೂ ಕಾಂಗ್ರೆಸ್ ಬೆಂಬಲಿತ ನಾಗವೇಣಿ ನರಸಿಂಹ ಮೂರ್ತಿ ಅವರು ನಾಮಪತ್ರ ಸಲ್ಲಿಸಿದ್ದು.ಚುನಾವಣೆಯಲ್ಲಿ ಓರ್ವ ಸದಸ್ಯ ಗೈರು ಹಾಜರಾಗಿದ್ದು 23 ಮಂದಿ ಸದಸ್ಯರು ಮತದಾನ ಮಾಡಿದ್ದಾರೆ.

     

    ಬಳಿಕ ನಡೆದ ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ನಾಗವೇಣಿ ನರಸಿಂಹ ಮೂರ್ತಿ 8 ಮತಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ಹೊನ್ನಮ್ಮ ಚಿಕ್ಕಪಾಪಯ್ಯ ಅವರು 15 ಮತಗಳನ್ನು ಪಡೆಯುವ ಮೂಲಕ 7 ಮತಗಳ ಅಂತರದಿಂದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

     

     

    ನೂತನ ಅಧ್ಯಕ್ಷರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್.ಎಸ್. ಅಶ್ವಥ್ ನಾರಾಯಣಕುಮಾರ್, ಮುಖಂಡರಾದ ಲಕ್ಷ್ಮೀನಾರಾಯಣಪ್ಪ, ತಿಮ್ಮೇಗೌಡ, ಪ್ರಕಾಶ್ ರೆಡ್ಡಿ, ಮಂಜುನಾಥ್, ರಂಗಾಚಾರಿ, ಪ್ರಭು, ಅಶ್ವಥ್ ನಾರಾಯಣ ಸೇರಿದಂತೆ ಬಿಜೆಪಿ ಬೆಂಬಲಿತ ಸದಸ್ಯರು ಅಭಿನಂದನೆ ಸಲ್ಲಿಸಿದರು.