Blog

  • ಮಹಿಳೆಯರು ಶೌರ್ಯ-ಧೈರ್ಯ ಬೆಳೆಸಿಕೊಳ್ಳಿ: ಸಚಿವ ಕೆ.ಹೆಚ್.ಮುನಿಯಪ್ಪ

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ನ.11: ಮಹಿಳೆಯರು ವೀರ ವನಿತೆ ಒನಕೆ ಓಬವ್ವರ ಆತ್ಮಸ್ಥೈರ್ಯದೊಂದಿಗೆ ಸಮಯ ಪ್ರಜ್ಞೆ, ಧೈರ್ಯ, ಶೌರ್ಯ ಮತ್ತು ಸಾಹಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಹೇಳಿದರು.

    ದೇವನಹಳ್ಳಿ ಟೌನ್ ನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮನ್ನು ಉದ್ಘಾಟಿಸಿ, ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

     

    ವೀರ ವಿನಿತೆ ಒನಕೆ ಓಬವ್ವ ನಮಗೆಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ. ಮಹಿಳೆಯರು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ನಾಡಿನ ರಕ್ಷಣೆ ಪಣತೊಡಬೇಕು ಎಂದರು.

     

    ಎದುರಾಳಿ ಸೈನಿಕರು ಕೋಟೆಯನ್ನು ಮುತ್ತಿಗೆ ಹಾಕಿದಾಗ ಮನೆಯಲ್ಲಿದ್ದ ಒನಕೆಯನ್ನೇ ಆಯುಧವನ್ನಾಗಿಸಿ ಎದುರಾಳಿ ಸೈನಿಕರ ಹೊಡೆದುರುಳಿಸಿ ಕೋಟೆಯನ್ನು ರಕ್ಷಿಸಿದರು. ಅಂತಹ ವೀರ ವನಿತೆ ಒನಕೆ ಓಬವ್ವ ಅವರ ಕಾಯಕ ನಿಷ್ಠೆ, ಧೈರ್ಯ ನಾಡಿನ ಮಹಿಳೆಯರಿಗೆ ಆದರ್ಶವಾಗಿದೆ. ನಿಜ ಜೀವನದಲ್ಲಿ ಧೈರ್ಯ, ಸಾಹಸವನ್ನು ಮಹಿಳೆಯರು ಅಳವಡಿಸಿಕೊಂಡಲ್ಲಿ ಕರ್ತವ್ಯ ನಿಷ್ಠೆ, ಕಾಯಕ ನಿಷ್ಠೆಯಿಂದ ಧೈರ್ಯವಾಗಿ ಬದುಕಬಹುದು ಎಂದು ಸಚಿವರು ಹೇಳಿದರು.

     

     

    ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಮಾತನಾಡಿ ಓಬವ್ವ ಅವರ ಧೈರ್ಯ ಹಾಗೂ ಸಾಹಸದಿಂದ ಹತ್ತಾರು ಸೈನಿಕರನ್ನು ಹೊಡೆದುರುಳಿಸಿ ಕೋಟೆಯನ್ನು ರಕ್ಷಿಸಿದ್ದಕ್ಕಾಗಿ ವೀರವನಿತೆ ಓಬವ್ವ ಎಂದು ಕರೆಯುತ್ತಾರೆ. ಮಹಿಳೆಯರ ಧೈರ್ಯಕ್ಕೆ ಒಂದು ಸ್ಪೂರ್ತಿ ವೀರವನಿತೆ ಓಬವ್ವ, ಎಲ್ಲರು ಅವರು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

     

     

    ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

     

    ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್ ಅನುರಾಧ, ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ , ತಾಲೂಕು ಪಂಚಾಯಿತಿ ಇಒ ಶ್ರೀನಾಥಗೌಡ, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸಮುದಾಯದ ವಿವಿಧ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಹಕರಿಯಾಗಿದೆ – ಪ್ರೊ. ಕೆ. ಆರ್.ರವಿಕಿರಣ್

    ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ತಾಲ್ಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜನೆ ಮಾಡಲಾಗಿತ್ತು.

     

     

    ಕ್ಷೇತ್ರ ಯೋಜನಾಧಿಕಾರಿಗಳಾದ ಸುಧಾ ಭಾಸ್ಕರ್ ನಾಯಕ್ ಕಾರ್ಯಕ್ರಮ ಕುರಿತು ಪ್ರಸ್ತಾವಿಕ ಮಾತನಾಡುವ ಮೂಲಕ ಯೋಜನೆಯಿಂದ ರಾಜ್ಯದಾದ್ಯಂತ ಜನತೆ ಪಡೆದುಕೊಂಡಿರುವ ಉಪಯೋಗವನ್ನು ಹಾಗೂ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಹೇಗೆ ಜೀವನ ಸಾಗಿಸುತ್ತಾರೆ ಎಂಬುದನ್ನು ಸಭಿಕರಿಗೆ ತಿಳಿಸಿದರು.

    ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

     

    ಕಾರ್ಯಕ್ರಮದಲ್ಲಿ ಪ್ರೊ ರವಿಕಿರಣ್ ಮಾತನಾಡಿ ಕ್ಷೇತ್ರದಿಂದ ಬರುವ ಅನುದಾನವನ್ನು ಒಕ್ಕೂಟದ ಮೂಲಕ ಸಧಸ್ಯರಿಗೆ ಒದಗಿಸಲು ಒಕ್ಕೂಟದ ಪದಾಧಿಕಾರಿಗಳ ಪಾತ್ರ ಪ್ರಮುಖವಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಹತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿದೆ ಪ್ರತಿ ಹಳ್ಳಿ ಹಳ್ಳಿಗಳಿಗೂ ಯೋಜನೆಯ ಸೇವೆ ಲಭಿಸುತ್ತಿದ್ದು ವೀರೇಂದ್ರ ಹೆಗ್ಗಡೆಯವರ ಪಾತ್ರ ಶ್ಲಾಘನೀಯ ಎಂದರು.

     

    ಯೋಜನೆಯ ಜಿಲ್ಲಾ ನಿರ್ದೇಶಕ ಉಮರಬ್ಬ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ,ನಾಯಕತ್ವ ಗುಣ, ಸಹಕಾರ ಮನೋಭಾವನೆ ಬಗ್ಗೆ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೋಜನೆಯಿಂದ ಕೇವಲ ಆರ್ಥಿಕ ನೆರವು ಅಷ್ಟೇ ಅಲ್ಲದೆ, ಪ್ರತಿಯೊಬ್ಬರು ತಮ್ಮದೇ ರೀತಿಯ ಸಮಾಜಕ್ಕೆ ಪೂರಕವಾದಂತ ಕಾರ್ಯಗಳಲ್ಲಿ ತೊಡಗಿಸುವ ಕಾರ್ಯಕ್ರಮ ಯೋಜನೆಯಿಂದ ಆಗುತ್ತಿದೆ. ಈ ಮೂಲಕ ಪ್ರತಿಯೊಬ್ಬರು ವಿಶೇಷ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಸಂಘದ ಪದಾಧಿಕಾರಿಗಳಿಂದ ಸಮಾಜಕ್ಕೆ ಮತ್ತಷ್ಟು ಉತ್ತಮ ಕಾರ್ಯಗಳು ದೊರೆಯುವಂತಾಗಲಿ ಎಂದರು.

     

    ಸಿರಿ ಮಾರಾಟ ಮಳಿಗೆ ಮತ್ತು ಸಿ.ಎಸ್.ಸಿ ಮಾಹಿತಿ ಕೇಂದ್ರಗಳು ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ವಿಶೇಷವಾಗಿ ಆಕರ್ಷಿಸಿದವು.

     

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ H.S ನಾಗೇಶ್ ಮಾತನಾಡಿ ಇದೊಂದು ಉತ್ತಮ ಕಾರ್ಯಕ್ರಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ ಸಾರ್ವಜನಿಕರ ಜೇವನೋಪಾಯಕ್ಕೆ ಮಾರ್ಗವಾಗಿದೆ, ಗ್ರಾಮೀಣ ಜನತೆಗೆ ಉದ್ಯೋಗವಕಾಶ ಕಲ್ಪಿಸುವ ಮೂಲಕ ಗುಡಿ ಕೈಗಾರಿಕೆ, ಹಾಗೂ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಯೋಜನೆ ಮಧ್ಯಮ ವರ್ಗದ ಜನರಲ್ಲಿ ನೂತನ ಹುಮ್ಮಸ್ಸನ್ನು ಮೂಡಿಸಿದೆ ಎಂದರೆ ತಪ್ಪಾಗಲಾರದು, ಯೋಜನೆಯ ಸೇವಾ ವ್ಯಾಪ್ತಿಯು ಮತ್ತಷ್ಟು ಬೆಳೆಯಲಿ , ಸಾರ್ವಜನಿಕರಿಗೆ ಉತ್ತಮ ಅವಕಾಶಗಳು ದೊರೆಯಲಿ ಎಂದು ಹಾರೈಸಿದರು.

     

    ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡ ಸಹಾಯಕ ಪ್ರಬಂಧಕರಾದ ಮಧುಸೂದನ್, ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ತಾಲೂಕಿನ 9 ವಲಯಗಳ ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ,CSC ಸೇವಾದಾರರು, ಕಛೇರಿ ಸಿಬ್ಬಂದಿಗಳು ಹಾಜರಿದ್ದರು.

     

     

     

  • ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಪ್ರೋತ್ಸಾಹ ಧನ 1 ರಿಂದ 2 ಲಕ್ಷಕ್ಕೆ ಹೆಚ್ಚಳ : ಸಚಿವ ಡಾ ಹೆಚ್ ಸಿ ಮಹದೇವಪ್ಪ

    IIT/IIM/IISC /NIT ಯಂತಹ ರಾಷ್ಟ್ರೀಯ ಸಂಸ್ಥೆಗಳಲ್ಲಿ ಓದುವ SC/ST ವಿದ್ಯಾರ್ಥಿಗಳ ಪ್ರೋತ್ಸಾಹ ಧನವನ್ನು 1 ರಿಂದ 2 ಲಕ್ಷಕ್ಕೆ ಹೆಚ್ಚಳ ಮಾಡಿ ಸರ್ಕಾರವು ಆದೇಶ ಹೊರಡಿಸಿದ್ದು ಇದು ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ಹೆಚ್ಚಿನ ಶೈಕ್ಷಣಿಕ ಸಾಧನೆಗೆ ಕಾರಣವಾಗಲಿದೆ ಎಂದು ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

    ಇನ್ನು ಪಿಯುಸಿ ಪರೀಕ್ಷೆಯಲ್ಲಿ 95 ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದು, ನೀಟ್ ಪ್ರವೇಶ ಪರೀಕ್ಷೆಯ ಮೂಲಕ ಸರ್ಕಾರಿ ಕೋಟಾದಡಿ ಪ್ರವೇಶ ದೊರಕದೇ ಮ್ಯಾನೇಜ್ ಮೆಂಟ್ ಕೋಟಾದಡಿ ಎಂಬಿಬಿಎಸ್ ಕೋರ್ಸ್ ಗೆ ಸೀಟು ಪಡೆದುಕೊಂಡ ಪರಿಶಿಷ್ಟ ಜಾತಿಯ ಮಕ್ಕಳಿಗೆ 25 ಲಕ್ಷ ರೂಪಾಯಿಗಳ ಶುಲ್ಕ ಧನವನ್ನು ಒದಗಿಸಲು ಸರ್ಕಾರ ತೀರ್ಮಾನಿಸಿದೆ.

     

    ಎಂಬಿಬಿಎಸ್ ಪದವಿಯನ್ನು ಪಡೆಯುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮೊದಲ ವರ್ಷ 60% ಗೂ ಹೆಚ್ಚಿನ ಅಂಕಗಗಳನ್ನು ಪಡೆದು ಉತ್ತೀರ್ಣ ರಾದರೆ ಅವರಿಗೆ ಅವರಿಗೆ ಮತ್ತೆ 25 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು.

     

    ಶಿಕ್ಷಣವೇ ಸಮಾಜವನ್ನು ಬದಲಿಸುವ ಕೀಲಿಕೈ ಎಂಬ ಅಂಶವನ್ನು ಮನಗಂಡು ಈ ಒಂದು ಮಹತ್ವದ ಘೋಷಣೆಯನ್ನು ಸರ್ಕಾರವು ಮಾಡಿದ್ದು, ಇದರಿಂದ ಉನ್ನತ ಶಿಕ್ಷಣ ಮಾಡಬೇಕೆಂಬ ವಿದ್ಯಾರ್ಥಿಗಳ ಕನಸ್ಸು ನನಸಾಗಲಿದೆ.

     

    ಐಐಟಿ ಐಐಎಂ ನಂತಹ ಶಿಕ್ಷಣ ಸಂಸ್ಥೆಗಳಲ್ಲಿ ಓದುವಂತಹ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳು ದೇಶ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಬೇಕು, ಆ ಮೂಲಕ ಸಮೃದ್ಧ ಮತ್ತು ಸಶಕ್ತ ರಾಷ್ಟ್ರದ ನಿರ್ಮಾಣವಾಗಬೇಕು ಎಂದು ಮಾನ್ಯ ಸಚಿವರು ತಿಳಿಸಿದರು.

     

     

    ಇನ್ನು ಬಡತನದ ಬೇಗೆಗೆ ಸಿಲುಕಿ ಎಂಬಿಬಿಎಸ್ ಓದುವ ಬಯಕೆ ಇರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಡಿ ಸೀಟು ಸಿಗದೇ ಅವರು ಖಾಸಗೀ ಸಂಸ್ಥೆಗಳಲ್ಲಿ ಓದುತ್ತಿದ್ದರೆ, ಅಂತಹ ಪ್ರತಿಭಾವಂತ ಮಕ್ಕಳ ಶುಲ್ಕವನ್ನು ಸರ್ಕಾರ ಭರಿಸಲಿದ್ದು, ಇದಕ್ಕಾಗಿ ಆರಂಭಿಕವಾಗಿ 25 ಲಕ್ಷ ರೂಪಾಯಿಗಳನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ.

     

    ಈಗಾಗಲೇ ಪ್ರಬುದ್ಧ ಯೋಜನೆಯಡಿ ವಿದೇಶಿ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿರುವ ನಮ್ಮ ಸರ್ಕಾರವು ಇದೀಗ ಮಕ್ಕಳ ಉತ್ತಮ ಶಿಕ್ಷಣವನ್ನು ಗಮನದಲ್ಲಿಟುಕೊಂಡು ಮುಖ್ಯ ಘೋಷಣೆಯನ್ನು ಮಾಡಿರುತ್ತದೆ.

     

    ಹೀಗಾಗಿ ಬಾಬಾ ಸಾಹೇಬರ ಆಶಯದಂತೆ ನಮ್ಮೆಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ಹೊಂದಿ, ಶ್ರಮ ಹಾಕಿ ಓದಬೇಕೆಂದು ಮಾನ್ಯ ಸಚಿವರು ಆಶಯವನ್ನು ವ್ಯಕ್ತಪಡಿಸಿದ್ದಾರೆ.

  • ಶೈಕ್ಷಣಿಕ ಸಾಲಕ್ಕಾಗಿ ಅರ್ಜಿ ಆಹ್ವಾನ

    ಬೆಂಗಳೂರು ಗ್ರಾಮಾಂತರ ಜಿಲ್ಲೆ: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯವನ್ನು ಪಡೆಯಲು ಆರ್ಯ ವೈಶ್ಯ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

     

     

    ಅರಿವು ಯೊಜನೆಯಡಿ ಶೈಕ್ಷಣಿಕ ಸಾಲ ಪಡೆಯಲು ಸಿ.ಇ.ಟಿ./ ಎನ್.ಇ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಹಾಗೂ ಪಿ.ಹೆಚ್.ಡಿನಲ್ಲಿ ವ್ಯಾಸಂಗ ಮಾಡುವ ಆರ್ಯ ವೈಶ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ 1,00,000 ರೂ.ಗಳ ಸಾಲವನ್ನು ಶೇ.02 ರ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ನೀಡಲಾಗುವುದು.

     

    ವ್ಯಾಸಂಗ ಪೂರ್ಣಗೊಂಡ ನಂತರ 04 ತಿಂಗಳ ವಿರಾಮಾವಧಿ ಇರುತ್ತದೆ. ನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು.

     

    ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದ ಒಳಗಿನವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ 6,00,000 ರೂ.ಗಳ ಮಿತಿಯೊಳಗಿರಬೇಕು.

     

    ಅರ್ಜಿಗಳನ್ನು ಆನ್ಲೈನ್ kacdc.karnataka.gov.in ಮೂಲಕ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ.

     

     

    ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ. 9448451111 ಅನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಮಕ್ಕಳ ಮಾರಾಟ ಶಿಕ್ಷಾರ್ಹ ಅಪರಾಧ*: ಜಿಲ್ಲಾಧಿಕಾರಿ ಎನ್. ಶಿವಶಂಕರ

    ಬೆಂಗಳೂರು ಗ್ರಾಮಾಂತರ ಜಿಲ್ಲೆ: ಮಕ್ಕಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಮಕ್ಕಳನ್ನು ಮಾರುವ ಹಾಗೂ ಕೊಳ್ಳುವವರಿಗೆ ಬಾಲನ್ಯಾಯ ಕಾಯ್ದೆ-2015 ರ ಸೆಕ್ಷನ್ 80 ಮತ್ತು 81 ರನ್ವಯ 05 ವರ್ಷಗಳವರೆಗೂ ಸೆರೆಮನೆ ವಾಸದೊಂದಿಗೆ 01 ಲಕ್ಷ ರೂಗಳ ದಂಡ ವಿಧಿಸಲಾಗುವುದು.

     

    ಇಂತಹ ಅಪರಾಧಗಳಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯ ಅವಧಿ 03 ವರ್ಷಗಳಿಗೆ ಕಡಿಮೆ ಇಲ್ಲದಂತೆ 07 ವರ್ಷಗಳವರೆಗೆ ವಿಸ್ತರಣೆ’ ಮಾಡಬಹುದಾಗಿದೆ.

     

     

    ಈ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಮಕ್ಕಳ ಮಾರಾಟ ಅಪರಾಧದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅನಾಥ ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳ ಮಾಹಿತಿಯು ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೂ.ಸಂಖ್ಯೆ:080-29560034 ನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಇಂಗ್ಲಿಷ್ ನಾಮಫಲಕ ಬದಲಿಸಿ : ಎಸ್ಸಿಲರ್ ಕಂಪನಿ ನಾಮಫಲಕ ಬದಲಿಸುವಂತೆ ಕರವೇ ಆಗ್ರಹ

    ದೊದ್ದಬಳ್ಳಾಪುರ : ತಾಲ್ಲೂಕಿನ ಎಸ್ಸಿಲೊರ್ (essilorluxottica) ಕಂಪನಿಯ ನಾಮಫಲಕವನ್ನು ಕನ್ನಡ ಭಾಷೆಯಲ್ಲಿ ಬದಲಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ( ನಾರಾಯಣ ಗೌಡರ ಬಣ )ಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಅಗ್ರಹಿಸಿದ್ದಾರೆ.

     

    ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿರಬೇಕು, ಕರ್ನಾಟಕದ ನೆಲ ಜಲ ಸಂಪನ್ಮೂಲಗಳನ್ನು ಬಳಸಿ ಜೀವನ ಕಟ್ಟಿಕೊಂಡಿರುವ ಕಂಪನಿಗಳು ವಾಣಿಜ್ಯ ಕಾರಣಗಳಿಗಾಗಿ ಭಾಷೆ ನಿರಾಕರಿಸುವುದು ಎಷ್ಟು ಸರಿ, ಇದಕ್ಕೆ ಪುಷ್ಟಿ ಎಂಬಂತೆ ಪ್ರತಿಷ್ಠಿತ ಬಹು ರಾಷ್ಟ್ರೀಯ ಕಂಪನಿ ಎಸ್ಸಿಲೊರ್ ಲೂಕ್ಸೋಟ್ಟಿಕಾ (essilorluxottica) ತನ್ನ ಕಂಪನಿ ನಾಮಫಲಕವನ್ನು ಆಂಗ್ಲ ಭಾಷೆಯಲ್ಲಿ ಬಳಕೆ ಮಾಡಿದ್ದೂ ಸದರಿ ನಾಮಫಲಕವನ್ನು ಕನ್ನಡ ಭಾಷೆಯಲ್ಲಿ ಬದಲಿಸುವಂತೆ ಅಗ್ರಹಿಸಿದ್ದೇವೆ ಎಂದು ತಿಳಿಸಿದರು.

     

    ಕಂಪನಿಯ ಸಿಬ್ಬಂದಿಯೋಟ್ಟಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದು ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ನಾಮಫಲಕವನ್ನು ಕನ್ನಡದಲ್ಲಿ ಬದಲಿಸುವುದ್ದಾಗಿ ತಿಳಿಸಿ ಕಾಲಾವಕಾಶ ಕೇಳಿದ್ದಾರೆ,ಕಂಪನಿಯು ತನ್ನ ನಾಮ ಫಲಕವನ್ನು ಬದಲಿಸಲು ಮುಂದಾಗಿದ್ದು ಕರವೇ (ನಾರಾಯಣಗೌಡರ ಬಣ )ಸಂತಸ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.

     

  • ದೊಡ್ಡಬಳ್ಳಾಪುರ : ಚೀಟಿ ಹಣದೊಂದಿಗೆ ಮಹಿಳೆ ಪರಾರಿ : ಕಂಗಾಲದ 250ಕ್ಕೂ ಅಧಿಕ ಕುಟುಂಬಗಳು

    ದೊಡ್ಡಬಳ್ಳಾಪುರ : ಸುಮಾರು 250ಕ್ಕೂ ಅಧಿಕ ಜನರನ್ನು ವಂಚಿಸಿ ಚೀಟಿ ಹಣ ನೀಡದೆ ಮಹಿಳೆಯೊಬ್ಬರು ಪರಾರಿಯಾಗಿರುವ ಘಟನೆ ತಾಲೂಕಿನ ಮೂಕಾಂಬಿಕಾ ಬಡಾವಣೆಯಲ್ಲಿ ನಡೆದಿದೆ.

     

     

    ಹೌದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಪುಷ್ಪಕಲಾ ಎಂಬ ಮಹಿಳೆಯು ಯಾವುದೇ ಕಾನೂನು ಅನುಮತಿ ಇಲ್ಲದೆ ಅಕ್ರಮವಾಗಿ ಚೀಟಿ ದಂಧೆ ನೆಡೆಸುತ್ತಿದ್ದು , ಆಕೆಯ ಮೇಲೆ ನಂಬಿಕೆ ಇಟ್ಟು ಚೀಟಿ ಹಾಕಿದ್ದ 250ಕ್ಕೂ ಹೆಚ್ಚು ಚೀಟಿದಾರರಿಗೆ ಹಣ ನೀಡದೆ ವಂಚಿಸಿ ಪರಾರಿಯಾಗಿದ್ದಾರೆ , ಹಣ ಕಳೆದುಕೊಂಡ ಬಡ ಮಹಿಳೆಯರು ಹಿಡಿ ಶಾಪ ಹಾಕಿದ್ದಾರೆ.

     

    ದೊಡ್ಡಬಳ್ಳಾಪುರ ನಗರದ ಮುಕ್ತಾಂಭಿಕ ಬಡಾವಣೆಯ ನಿವಾಸಿ ಈ ಪುಷ್ಪಕಲಾ, ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಈಕೆ ಕಳೆದ ನಾಲ್ದೈದು ವರ್ಷಗಳಿಂದ ಚೀಟಿ ವ್ಯವಹಾರವನ್ನು ನಡೆಸುತ್ತಿದ್ದರು, ಕಳೆದ ನಾಲ್ಕು ವರ್ಷದಿಂದ ಕಟ್ಟುನಿಟ್ಟಾಗಿ ಚೀಟಿ ವ್ಯವಹಾರ ನಡೆಸುವ ಮೂಲಕ ಸುತ್ತಮುತ್ತಲಿನ ಜನರ ನಂಬಿಕೆ ಗಳಿಸಿದ್ದ ಪುಷ್ಪಾಕಲಾ ಬಳಿ ಸುತ್ತಮುತ್ತಲಿನ ಸುಮಾರು 250ಕ್ಕೂ ಹೆಚ್ಚು ಜನರು ತಮ್ಮ ಮಗಳ ಮದುವೆಗಾಗಿ, ಮನೆ ಕಟ್ಟಲು, ಬ್ಯುಸಿನೆಸ್ ಮಾಡುವ ಸಲುವಾಗಿ ಚೀಟಿ ಹಾಕಿದ್ದರು.

     

    ಆಕ್ಟೋಬರ್ 27ರಂದು ಗಂಡ ರುದ್ರಆರಾಧ್ಯ ಜಮೀನು ಕೆಲಸಕ್ಕೆಂದು ಊರಿಗೆ ಹೋಗಿದ್ದಾರೆ, ಮಕ್ಕಳು ಕಾಲೇಜಿಗೆ ಹೋಗಿದ್ದ ವೇಳೆ ಪುಷ್ಪಕಲಾ ಮನೆಯಿಂದ ನಾಪತ್ತೆಯಾಗಿದ್ದಾರೆ, ಮನೆಯಿಂದ ನಾಪತ್ತೆಯಾದ ಪುಷ್ಪಕಲಾ ಗಂಡನಿಗೆ ವಾಟ್ಸಾಪ್ ನಲ್ಲಿ ಆಡಿಯೋ ಮೆಸೇಜ್ ಕಳಿಸಿದ್ದು, ತನ್ನಗೆ ಯಾರೋ ಮೋಸ ಮಾಡಿದ್ದು, ವಿಷ ಕುಡಿದು ಸಾಯುವುದ್ದಾಗಿ ಹೇಳಿದ್ದಾಳೆ, ಗಂಡ ರುದ್ರಆರಾಧ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೆಂಡತಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ.

     

    ಪುಷ್ಪಕಲಾ ನಾಪತ್ತೆ ಪ್ರಕರಣ ಚೀಟಿದಾರರ ಆತಂಕಕ್ಕೆ ಕಾರಣವಾಗಿದೆ, ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಸೇರಿದ ಚೀಟಿದಾರರು ಪುಷ್ಪಕಲಾ ಮಾಡಿರುವ ವಂಚನೆಯನ್ನು ಬಯಲು ಮಾಡಿದ್ದಾರೆ, ಇದೇ ವೇಳೆ ಕನ್ನಡಪರ ಹೋರಾಟಗಾರ ರಾಮಕೃಷ್ಣ ಮಾಧ್ಯಮಗಳೊಂದಿಗೆ ಮಾತನಾಡಿ ಬಡ ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಮಹಿಳೆಯರು, ಗಾರೆ ಕೆಲಸಗಾರರು ತಮ್ಮ ದುಡಿಮೆ ಹಣದೊಂದಿಗೆ ಪುಷ್ಪಕಲಾ ಪರಾರಿಯಾಗಿದ್ದಾರೆ, ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಕ್ರಮದ ಮೂಲಕ ಬಡವರಿಗೆ ಹಣ ಕೊಡಿಸುವ ಕೆಲಸ ಮಾಡುವುದ್ದಾಗಿ ತಿಳಿಸಿದರು.

     

    ನಿವೃತ್ತ ಶಿಕ್ಷಕರಾದ ಗಜೇಂದ್ರ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ಪುಷ್ಪಕಲಾ ಶಿಸ್ತಿನಿಂದ ಚೀಟಿ ವ್ಯವಹಾರ ನೆಡೆಸುತ್ತಿದ್ದರು, ಇದೇ ನಂಬಿಕೆ ಮೇಲೆ ನಾನು ಸಹ ನಾಲ್ಕೈದು ಚೀಟಿಗಳ ಹಾಕಿದ್ದೇ, ಚೀಟಿ ಕಂತು ಕಟ್ಟಲು ಪ್ರತಿ ತಿಂಗಳು 1 ಲಕ್ಷಕ್ಕೂ ಹೆಚ್ಚು ಹಣವನ್ನ ಪೋನ್ ಪೇ, ಅಕೌಂಟ್ ಮೂಲಕ ಪಾವತಿ ಮಾಡಿದ್ದೇನೆ, ಆಕೆಯ ವಂಚನೆಯಿಂದ ಸುಮಾರು 35 ಲಕ್ಷ ಹಣವನ್ನ ಕಳೆದುಕೊಂಡಿದ್ದೇನೆ. ಇನ್ನೂ ದೊಡ್ಡಬಳ್ಳಾಪುರದಲ್ಲಿ ಅಕ್ರಮ ಚೀಟಿ ದಂಧೆ ನಡೆಯುತ್ತಿದ್ದು ಇವುಗಳಿಗೆ ಕಡಿವಾಣ ಹಾಕಿದ್ದಾಗ ಮಾತ್ರ ಇಂತಹ ವಂಚನೆಯ ಪ್ರಕರಣಗಳನ್ನು ತಡೆಯಲು ಸಾಧ್ಯ ಎಂದರು.

  • ನಮ್ಮ ಸಮುದಾಯ ಬಲಿಷ್ಠ ಸಮುದಾಯವಾಗಿ ಹೊರ ಹೊಮ್ಮುಲು ಎಲ್ಲರೂ ಶ್ರಮಿಸಬೇಕಾಗಿದೆ -ಕೆ. ಎಂ. ಕೃಷ್ಣಮೂರ್ತಿ

    ದೊಡ್ಡಬಳ್ಳಾಪುರ : ನಗರ ತಾಲ್ಲೂಕು ಕುರುಬ ಸಂಘದ ಹಾಗು ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ದೊಂದಿಗೆ ನ.18 ರಂದು ದಾಸ ಶ್ರೇಷ್ಠ ಕನಕದಾಸ ಜಯಂತೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಸಲುವಾಗಿ ತಾಲ್ಲೂಕಿನ ಎಲ್ಲಾ ಮುಖಂಡರನ್ನು ಪೂರ್ವಬಾವಿ ಸಭೆಯಲ್ಲಿ ಚರ್ಚಿಸಲಾಯಿತು.

     

    ನಗರದ ಕೊಂಗಾಡಿಯಪ್ಪ ರಸ್ತೆಯಲ್ಲಿನ ಕನಕ ಭವನದಲ್ಲಿ ಕರೆಯಲಾಗಿತ್ತು ಸಭೆಯಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯ ಖಜಾಂಚಿ ಕೆ ಎಂ ಕೃಷ್ಣಮೂರ್ತಿ ಮಾತನಾಡಿ ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿವಾಗಿಲ್ಲ, ಅವರಿಗೆ ಸಂಬಂಧಿಸಿದ ವಿಶೇಷ ದಿನವನ್ನು ಅತ್ಯಂತ ಗೌರವ ಹಾಗೂ ನಿಷ್ಠೆಯಿಂದ ಆಚರಣೆ ಮಾಡಬೇಕಾಗಿದೆ.

    ನಮ್ಮ ಸಮುದಾಯದ ಎಲ್ಲಾ ಮುಖಂಡರನ್ನು ಒಗ್ಗೂಡುವ ಮೂಲಕ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಬೇಕಿದೆ ನಮ್ಮ ಸಮುದಾಯ ಬಲಿಷ್ಠ ಸಮುದಾಯವಾಗಿ ಹೊರ ಹೊಮ್ಮುಲು ಎಲ್ಲರೂ ಶ್ರಮಿಸಬೇಕಾಗಿದೆ ಅದರಿಂದ ತಾಲ್ಲೂಕಿನ ಎಲ್ಲಾ ಗ್ರಾಮ, ನಗರ,ಪಟ್ಟಣ ಪ್ರದೇಶಗಳನ್ನು ಒಳಗೊಂಡಂತೆ ತಾಲ್ಲೂಕಿನ ಕಟ್ಟ ಕಡೆಯ ಗ್ರಾಮಗಳನ್ನು ಗಣನೆಗೆ ತೆಗೆದುಕೊಂಡು ಕಾರ್ಯಕ್ರಮದ ಯೋಜನೆ ರೂಪಿಸಬೇಕಿದೆ ಎಂದರು.

    ತಮ್ಮ ತಮ್ಮ ಗ್ರಾಮಗಳಲ್ಲಿ ಯುವಕರು ಕನಕದಾಸರ ಹೆಸರಿನಲ್ಲಿ ವಿವಿಧ ಸಂಘಗಳನ್ನು ಕಟ್ಟಿಕೊಂಡು ಹಲವು ರೀತಿಯಲ್ಲಿ ಕನಕ ಜಯಂತಿಯನ್ನು ಆಚರಣೆ ಮಾಡುತ್ತಿದ್ದಾರೆ, ಅಂತಹ ಉತ್ಸಾಹಿ ಯುವಕರನ್ನು ಕಾರ್ಯಕ್ರಮಕ್ಕೆ ಕರೆತರುವ ಕಾರ್ಯ ನೆಡೆಯಬೇಕಿದೆ,ತಾಲ್ಲೂಕಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜನೆ ಮಾಡಲಾಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ತಮ್ಮ ಗ್ರಾಮಗಳಲ್ಲಿ ಕಾರ್ಯಕ್ರಮ ರೂಪಿಸುವಂತೆ ತಿಳಿ ಹೇಳಬೇಕಿದೆ, ತಾಲೂಕು ಆಡಳಿತ ವತಿಯಿಂದ ನಡೆಸುವ ಕಾರ್ಯಕ್ರಮಕ್ಕೆ ನಮ್ಮ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಿವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.

     

    ತಾಲ್ಲೂಕು ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಕೃಷ್ಣ ಮೂರ್ತಿ ಮಾತನಾಡಿ ತಾಲ್ಲೂಕಿನ ತೂಬಗೆರೆ ಹೋಬಳಿ ಸಾಸಲು ಹೋಬಳಿ ಮಧುರೆ ಹೋಬಳಿ ದೊಡ್ಡಬೆಳವಂಗಲ ಹೋಬಳಿ ಕಸಬಾ ನಗರದ ಎಲ್ಲಾ ಯುವ ಸಮುದಾಯವನ್ನು ಒಗ್ಗೂಡಿಸಿ ಎಲ್ಲಾರು ಒಂದು ಕಡೆ ಕನಕ ಜಯಂತಿಯನ್ನು ಆಚರಣೆ ಮಾಡುವಂತೆ ಸಲಹೆ ನೀಡಿದರು.

     

     

    ಪೂರ್ವಬಾವಿ ಸಭೆಯಲ್ಲಿ ತಾಲ್ಲೂಕು ಕುರುಬ ಸಂಘದ ನಿಕಟ ಪೂರ್ವ ಅಧ್ಯಕ್ಷ ಬಂಡೆ ನರಸಿಂಹಮೂರ್ತಿ,ಗೌರವಾಧ್ಯಕ್ಷ ತಿಮ್ಮೇಗೌಡ,ನಗರಸಭೆಯ ಉಪಾಧ್ಯಕ್ಷ ರೈಲ್ವೇ ಸ್ಟೇಷನ್ ಮಲ್ಲೇಶ್, ಸಮಾಜ ಸೇವಕ ಹೊಸಹುಡ್ಯ ಮಲ್ಲೇಶ,ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಹಕಾರ ಸಂಘದ ಅಧ್ಯಕ್ಷ ಮಾರಣ್ಣ, ಎಂ ಸಿ ಮಂಜುನಾಥ,ನಗರಸಭಾ ಸದಸ್ಯ ಚಂದ್ರ ಮೋಹನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

     

  • ಕೆಆರ್‌ಎಸ್ ಪಕ್ಷದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ : ಬೈಕ್ ರ್ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೆ ಆರ್ ಎಸ್ ಪಕ್ಷದ ವತಿಯಿಂದ ಪಕ್ಷದ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು, ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ವಿಶೇಷವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳುವ ಮೂಲಕ ಶುಭಾಶಯ ಕೋಲಾಯಿತು.

    ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷರಾದ ಬಿ ಶಿವಶಂಕರ್ ನೇತೃತ್ವದಲ್ಲಿ ಕಾರ್ಮಿಕ ಘಟಕದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಹಾಗೂ ಮಹಿಳಾ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಬಿ ಶಿವಶಂಕರ್ ಮಾತನಾಡಿ ನಾಡು ನುಡಿ ಭಾಷೆಯ ಉಳಿವಿಗಾಗಿ ನಮ್ಮ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಶ್ರಮಿಸುತ್ತದೆ. ಕನ್ನಡ ರಾಜ್ಯೋತ್ಸವ ಎಂಬುದು ನಮ್ಮೆಲ್ಲರ ಹಬ್ಬ ಇದು ರಾಜ್ಯದಲ್ಲಿ ಬದುಕು ಕಟ್ಟಿಕೊಂಡ ಪ್ರತಿಯೊಬ್ಬರಿಗೂ ಹಬ್ಬವಾಗಬೇಕಿದೆ . ಉತ್ತಮ ಜೀವನ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟ ಕರ್ನಾಟಕ ರಾಜ್ಯಕ್ಕೆ ಹೊರ ರಾಜ್ಯದವರು ನಮ್ಮ ಕನ್ನಡ ಭಾಷೆಯನ್ನು ಕಲಿಯುವ ಮೂಲಕ ಗೌರವ ಸಲ್ಲಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕಿದೆ . ಕನ್ನಡ ಭಾಷೆ ಕೇವಲ ಭಾಷೆಯಲ್ಲ ಅದು ನಮ್ಮ ಜೀವನಾಡಿ ಕನ್ನಡ ಭಾಷೆ ಉಳಿಯುವುದಕ್ಕಾಗಿ ನಮ್ಮ ಹೋರಾಟ ಸದಾ ಇರುತ್ತದೆ ಎಂದರು.

     

    ಈ ಬಾರಿ ಶಿಗ್ಗಾವಿಯಲ್ಲಿ ಕೆ ಆರ್ ಎಸ್ ಬಾವುಟ ಹಾರುತ್ತದೆ

    ಶಿಗ್ಗಾವಿ ಉಪಚುನಾವಣೆ ಕುರಿತು ಮಾತನಾಡಿದವರು ಕಳೆದ ಮೂರು ನಾಲ್ಕು ತಿಂಗಳಿನಲ್ಲಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕೆಲಸಗಳು ಕೆಆರ್‌ಎಸ್‌ ಪಕ್ಷದಿಂದ ನಡೆದಿದೆ. ನಮ್ಮ ನಾಯಕರ ರವಿಕೃಷ್ಣ ರೆಡ್ಡಿ ಅವರು ಈ ಬಾರಿಯ ಚುನಾವಣೆಯಲ್ಲಿ ಜಯ ಸಾಧಿಸಲಿದ್ದಾರೆ. ಶಿಗ್ಗಾವಿ ಜನತೆಯ ಒಲವು ಕೆ ಆರ್ ಎಸ್ ಪಕ್ಷದ ಕಡೆ ಹೆಚ್ಚಾಗಿದೆ, ಸ್ವಚ್ಛ ನಿಷ್ಠೆ ಪ್ರಾಮಾಣಿಕತೆಯ ರಾಜಕೀಯವನ್ನು ಶಿಗ್ಗಾವಿ ಬಯಸುತ್ತಿದ್ದು, ಶಿಗ್ಗಾವಿ ಜನತೆಗೆ ಇದೊಂದು ಉತ್ತಮ ಅವಕಾಶವಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ವೆಂದರೆ ಹೇಗಿರುತ್ತದೆ ಎಂಬುದನ್ನು ಅರಿಯಬೇಕಾದರೆ ಒಮ್ಮೆ ಕೆ ಆರ್ ಎಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರ ನೀಡಬೇಕಿದೆ ಎಂದರು.

     

    ತಾಲ್ಲೂಕಿನ ಮಲ್ಲತ್ಹಳ್ಳಿ ದೇವಾಲಯದ ಒಳಗಡೆ ದಲಿತರನ್ನು ನಿಷೇಧಿಸಿದ ಪ್ರಕರಣ ಕುರಿತು ಮಾತಾಡಿದವರು 21ನೇ ಶತಮಾನದಲ್ಲಿ ಇದ್ದರೂ ಇಂತಹ ಪ್ರಕರಣಗಳು ದಾಖಲಾಗುತ್ತಿರುವುದು ವಿಪರ್ಯಾಸವೇ ಸರಿ, ಈ ಕುರಿತು ಅಧಿಕಾರಿಗಳು ಕೂಡಲೇ ಪ್ರತಿಕ್ರಿಯಿಸಿ ನನ್ನ ಸಮುದಾಯಕ್ಕೆ ಸೂಕ್ತ ಪರಿಹಾರ ಸೂಚಿಸಬೇಕಿದೆ. ನಗರಕ್ಕೆ ಕೇವಲ 3 ಕಿ.ಮೀ ಅಂತರದಲ್ಲಿರುವ ಗ್ರಾಮದಲ್ಲಿ ಈ ಪರಿಸ್ಥಿತಿ ಆದರೆ ಬೇರೆ ಗ್ರಾಮಗಳ ಕಥೆ ಏನು …?? ಈ ರೀತಿಯ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ನಮ್ಮ ಕೆ ಆರ್ ಎಸ್ ಪಕ್ಷದ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಗೌರವ ಅಧ್ಯಕ್ಷ ವೆಂಕಟೇಶ್ ಮೂರ್ತಿ,ಜಿಲ್ಲೆ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಲೀಲಾ ರಾಮ್,ವಕೀಲರಾದ ನರೇಂದ್ರ, ತಾಲೂಕು ಘಟಕದ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಶ್ರೀನಿವಾಸ್, ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಬಾಷಾ,ತಾಲ್ಲೂಕು ಸಮಿತಿಯ ಆರೂಢಿ ಮಣಿ,ಮುಖಂಡರಾದ ವೇಣು, ಚಂದ್ರಶೇಖರ್ ಡಿ ಉಪ್ಪಾರ್, ಮಹಿಳಾ ಘಟಕ ಪದಾಧಿಕಾರಿಗಳಾದ ರಂಜಿತಾ, ಸರಸ್ವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

     

     

  • ಮಲ್ಲಾತಹಳ್ಳಿ ಜಾತ್ರಾಮಹೋತ್ಸವ : ಜಾತಿ ತಾರತಮ್ಯ ಹಿನ್ನಲೆ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

    ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ನಗರ ಕೇಂದ್ರದಿಂದ ಕೇವಲ 3 ಕಿ.ಮೀ ಅಂತರದಲ್ಲಿರುವ ಮಲ್ಲಾತಹಳ್ಳಿ ಗ್ರಾಮದಲ್ಲಿ ಇವತ್ತಿಗೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ, ಇಲ್ಲಿನ ದೇವಸ್ಥಾನಗಳಿಗೆ ದಲಿತರ ಪ್ರವೇಶವಿಲ್ಲ, ಬಾಗಿಲಲ್ಲೇ ನಿಂತು ದೇವರಿಗೆ ಕೈ ಮುಗಿಯ ಬೇಕು, ದಲಿತರ ಪೂಜಾ ಸಾಮಾಗ್ರಿಗಳನ್ನು ಸಹ ದೇವಸ್ಥಾನದ ಒಳಗೆ ತೆಗೆದುಕೊಂಡು ಹೋಗುವುದಿಲ್ಲ, ಕಾಂಪೌಂಡ್ ಹೊರಗಡೆಯ ದೇವರಿಗೆ ಹಣ್ಣುಕಾಯಿ ಕೊಟ್ಟು ಪೂಜೆ ಮಾಡಿಸಿಕೊಂಡು ಬರುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮದ ಅಶೋಕ್ ತಿಳಿಸಿದ್ದಾರೆ.

     

    ಭಾರತದಲ್ಲಿ ಇವತ್ತಿಗೂ ಅಸ್ಪೃಶ್ಯತೆ ಆಚರಣೆ ಜೀವಂತವಿದೆ ಎನ್ನುವಂತೆ ದಲಿತರ ಮೇಲೆ ನಿರಂತರ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಲೇ ಇವೆ, ಆದರೂ ಬುದ್ದಿ ಕಲಿಯದ ಕೆಲವರು ದಲಿತರ ಮೇಲೆ ದೌರ್ಜನ್ಯವನ್ನ ನಡೆಸುತ್ತಲೇ ಬಂದಿದ್ದಾರೆ.ಹಿಂದಿನಿಂದ ಮಲ್ಲಾತಹಳ್ಳಿ ಗ್ರಾಮದಲ್ಲಿ ಕೆಲ ಸಮುದಾಯದವರು ಅಸ್ಪೃಶ್ಯತೆಯನ್ನ ಆಚರಿಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ , ಹಳೆ ತಲೆಮಾರಿನ ದಲಿತರು ಇದ್ಯಾವುದನ್ನು ಪ್ರಶ್ನೆ ಮಾಡದೆ ತಮ್ಮ ಮೇಲಿನ ದೌರ್ಜನ್ಯಗಳನ್ನ ಸಹಿಸಿಕೊಂಡಿದ್ದರು. ಆದರೆ ಇವತ್ತಿನ ವಿದ್ಯಾವಂತ ಹುಡುಗರು ದಲಿತರ ಮೇಲೆ ನಡೆಸುತ್ತಿರುವ ಅಸ್ಪೃಶ್ಯತೆ ಆಚರಣೆಯನ್ನ ಪಶ್ನೆ ಮಾಡಲು ಪ್ರಾರಂಭಿಸಿದ್ದಾರೆ, ಇದೇ ಇವತ್ತು ಗ್ರಾಮದಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಗಿದೆ.

     

     

    ಮಲ್ಲಾತಹಳ್ಳಿ ಗ್ರಾಮದಲ್ಲಿ ಚನ್ನಕೇಶವ, ಮದ್ದೂರಮ್ಮ, ಗಂಗಮ್ಮ ಮತ್ತು ಮಾರಮ್ಮ ದೇವಸ್ಥಾನಗಳಿವೆ, ಚನ್ನಕೇಶ ಮತ್ತು ಮದ್ದೂರಮ್ಮ ದೇವಾಲಯಗಳ ಒಳಗೆ ದಲಿತರಿಗೆ ಪ್ರವೇಶವಿಲ್ಲ , ಗಂಗಮ್ಮ ದೇವಸ್ಥಾನ ದಲಿತರ ಒಡೆತನದಲ್ಲಿದೆ, ಇವು ಸುಮಾರು 40 ವರ್ಷಗಳ ಹಳೆಯ ದೇವಸ್ಥಾನಗಳಾಗಿದ್ದು, ವರ್ಷದ ಹಿಂದೆ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗಿತ್ತು, 15 ದಿನಗಳ ಹಿಂದೆ ಗ್ರಾಮದಲ್ಲಿ ಸಭೆ ಮಾಡಿ ಗಂಗಮ್ಮ, ಮದ್ದೂರಮ್ಮ ಮತ್ತು ಚನ್ನಕೇಶವ ದೇವರಿಗೆ ದೀಪಾವಳಿ ಹಬ್ಬದಂದು ಆರತಿ ಮಾಡುವ ಬಗ್ಗೆ ಮಾತುಕಥೆ ಮಾಡಲಾಗಿತ್ತು.

     

    ಶುಕ್ರವಾರ ಬೆಳಗ್ಗೆ 12 ಗಂಟೆ ಸಮಯದಲ್ಲಿ ದಲಿತ ಮಹಿಳೆಯರು ಆರತಿಗಳನ್ನ ಹೊತ್ತುಕೊಂಡು ಚನ್ನಕೇಶವ ಮತ್ತು ಮದ್ದೂರಮ್ಮ ದೇವಸ್ಥಾನಗಳ ಬಳಿ ಹೋದಾಗ, ಮೊದಲು ಅನ್ಯ ಸಮುದಾಯದ ಮಹಿಳೆಯರ ಆರತಿಗಳನ್ನ ಒಳಗೆ ಬಿಡಲಾಗಿದೆ, ದೇವಸ್ಥಾನದ ಒಳಗೆ ಆರತಿಗಳನ್ನ ಬೆಳಗಿ ಪೂಜೆ ಮಾಡಿದ್ದಾರೆ, ದಲಿತ ಮಹಿಳೆಯರು ಸಹ ಆರತಿಗಳನ್ನ ದೇವರಿಗೆ ಬೆಳಗಲು ಮುಂದಾಗಿದ್ದಾರೆ, ಈ ವೇಳೆ ದೇವಸ್ಥಾನದ ಕಾಂಪೌಂಡ್ ನಲ್ಲಿಯೇ ತಡೆದು ಕೌಂಪೌಂಡ್ ನಿಂದ ಹೊರಗೆ ನಿಂತು ಹೊರಗಿನಿಂದಲೇ ಪೂಜೆ ಮಾಡಿಕೊಂಡು ಹೋಗುವಂತೆ ಸೂಚಿಸಿದ್ದು ಅದನ್ನು ಪ್ರಶ್ನಿಸಿ ಒಳ ಹೋಗಲು ಪ್ರಯತ್ನಿಸಿದ್ದಾಗ ಕಾಂಪೌಂಡ್ ಗೆ ಬೀಗ ಹಾಕಿದ್ದಾರೆ, ಇವತ್ತಿನ ಕಾಲದಲ್ಲೂ ಇಂತಹ ಆಚರಣೆಗಳು ನಡೆಯುತ್ತಿರುವುದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ದಲಿತ ಯುವಕ ಅಶೋಕ್ ತಮ್ಮ ನೋವು ಹಂಚಿಕೊಂಡರು.

     

    ದೇವಸ್ಥಾನ ಪ್ರವೇಶ ನಿರಾಕರಣೆ ವಿಚಾರಕ್ಕೆ ಸಂಬಂಧಿದಂತೆ ಗ್ರಾಮದ ಮುಖಂಡರ ಜೊತೆ ಮಾತನಾಡಲು ದಲಿತರು ಹೋದಾಗ, ದಲಿತರ ವಿರುದ್ಧವೇ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ , ಈ ವೇಳೆ ದಲಿತ ಯುವಕ ಪ್ರಶಾಂತ್ ಎಂಬುವರನ್ನ ತಳ್ಳಲಾಗಿದ್ದು, ಅವರ ಕೈ ಕಾಲುಗಳಿಗೆ ತರಚಿದ ಗಾಯವಾಗಿದೆ, ದೇವಸ್ಥಾನಕ್ಕೆ ದಲಿತರ ಪ್ರವೇಶ ನಿರಾಕರಣೆಗೆ ಸಂಬಂಧಿಸಿದಂತೆ ದಲಿತರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.