Blog

  • *ಸ್ವಯಂ ಸೇವಕ ಗೃಹರಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 22, 2024(ವಿಜಯಮಿತ್ರ ):- ಗೃಹರಕ್ಷಕ ದಳದ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ 586 ಸ್ವಯಂ ಸೇವಕ ಗೃಹರಕ್ಷಕರ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 14 ಘಟಕಗಳಿದ್ದು, ಅದರಲ್ಲಿ ಹೊಸದಾಗಿ ಪರಪ್ಪನ ಅಗ್ರಹಾರ, ವರ್ತೂರು, ಚಿಕ್ಕಜಾಲ, ಚಿಕ್ಕಬಾಣಾವರ, ಕೊತ್ತನೂರು, ವೈಟ್ ಫೀಲ್ಡ್, ಹೆಬ್ಬಗೋಡಿ ಈ ಘಟಕಗಳು ನೂತವಾಗಿ ಆರಂಭಿಸಬೇಕಾಗಿರುತ್ತದೆ ಸದರಿ ಘಟಕಗಳ ಹೆಸರುಗಳು ಮತ್ತು ಖಾಲಿ ಇರುವ ಗೃಹರಕ್ಷಕದ ಸಂಖ್ಯೆ ಹಾಗೂ ಖಾಲಿ ಇರುವ ಸ್ಥಳಗಳು:- ಹೊಸಕೋಟೆ- 06, ದೊಡ್ಡಬಳ್ಳಾಪುರ- 09, ನೆಲಮಂಗಲ – 09, ದಾಬಸ್ಪೇಟೆ – 09 ರಾಜಾನುಕುಂಟೆ – 11, ಆವಲಹಳ್ಳಿ – 08, ದೊಡ್ಡಬೆಳವಂಗಲ – 23, ದೇವನಹಳ್ಳಿ – 05, ಆನೇಕಲ್- 04, ಅತ್ತಿಬೆಲೆ- 03, ಮಾದನಾಯಕನಹಳ್ಳಿ- 03, ಸರ್ಜಾಪುರ- 07, ವಿಜಯಪುರ– 07 ಹಾಗೂ ನೂತನ ಘಟಕಗಳು:- ಪರಪ್ಪನ ಅಗ್ರಹಾರ- 70, ವರ್ತೂರು- 70, ಚಿಕ್ಕಜಾಲ- 65, ಚಿಕ್ಕಬಾಣಾವರ- 70, ಕೊತ್ತನೂರು- 65, ವೈಟ್ಫೀಲ್ಡ್- 70, ಹೆಬ್ಬಗೋಡಿ- 70 ಸೇರಿದಂತೆ ಒಟ್ಟು 586 ಸ್ಥಳಗಳು ಖಾಲಿ ಇರುತ್ತವೆ.

     

    ಕಂಪ್ಯೂಟರ್ ಟೈಪಿಂಗ್ (ಕನ್ನಡ ಮತ್ತು ಇಂಗ್ಲೀಷ್), ಡ್ರೈವರ್ಸ್, ಅಡುಗೆ ಭಟ್ಟರು. ಕಾರ್ಪೆಂಟರ್, ಎಲೆಕ್ಟ್ರೀಷಿಯನ್, ಪೇಂಟರ್, ಜೆಸಿಬಿ ಡ್ರೈವರ್ಸ್, ಟೆಂಟಿಪಿಕ್ಕಿಂಗ್, ಸ್ವಿಮ್ಮರ್ಸ್. ವೆಲ್ಡರ್ಸ್, ಗಾರ್ಡನರ್ಸ್, ಮೆಕಾನಿಕ್, ದೋಬಿ ಮತ್ತು ಸ್ಕಬಾ ಡೈವಿಂಗ್, ಪ್ಲಂಬರ್ ರವರುಗಳಿಗೆ ಆದ್ಯತೆ ನೀಡಲಾಗುವುದು.

     

    ವಿದ್ಯಾರ್ಹತೆ:- 10ನೇ ತರಗತಿ ಉತ್ತೀರ್ಣ ಆಗಿರಬೇಕು. 19 ವರ್ಷದಿಂದ 50 ವರ್ಷದೊಳಗಿರಬೇಕು. ದೈಹಿಕ ದೃಢಕಾಯರಾಗಿರಬೇಕು. ಯಾವುದೇ ದೈಹಿಕ ನ್ಯೂನತೆ ಇರಬಾರದು. ಅರ್ಜಿ ನಮೂನೆ ಪಡೆಯುವ ಸಂದರ್ಭದಲ್ಲಿ ಜನ್ಮ ದಿನಾಂಕವುಳ್ಳ ಶಾಲೆಯ ಒರಿಜಿನಲ್ ಟಿ.ಸಿ ಅಥವಾ ಒರಿಜಿನಲ್ ಅಂಕಪಟ್ಟಿ ತರಬೇಕು.

     

    ಬೆಂಗಳೂರಿನ ಸಮಾದೇಷ್ಟರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಗೃಹರಕ್ಷಕದಳ ಕಛೇರಿ, ಶೇಷಾದ್ರಿ ರಸ್ತೆ, ಸ್ವಾತಂತ್ರ್ಯ ಉದ್ಯಾನವನ ಎದುರು, ಬೆಂಗಳೂರು-560009 ಇಲ್ಲಿ ಅಕ್ಟೋಬರ್ 18 ರಿಂದ ನವ್ಹೆಂಬರ್ 16 ರ ವರೆಗೆ ಮಧ್ಯಾಹ್ನ 2:30 ರಿಂದ ಸಂಜೆ 5:00 ಗಂಟೆಯ ವರೆಗೆ ಉಚಿತವಾಗಿ ಅರ್ಜಿಗಳನ್ನು ವಿತರಿಸಲಾಗುವುದು.

     

    ವಿಶೇಷ ಸೂಚನೆ:- ಗೃಹರಕ್ಷಕದಳದ ಸಂಸ್ಥೆಯು ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿ 03 ವರ್ಷಗಳ ಅವಧಿಗೆ ಮಾತ್ರ ಸೇವೆ ಸಲ್ಲಿಸಬಹುದಾಗಿರುತ್ತದೆ. ಇದು ಖಾಯಂ ನೌಕರಿಯಾಗಿರುವುದಿಲ್ಲ. ಯಾವುದೇ ರೀತಿಯ ಮಾಸಿಕ ಸಂಬಳ/ವಿಶೇಷ ಭತ್ಯೆಗಳನ್ನು ಈ ಸಂಸ್ಥೆಯು ನೀಡುವುದಿಲ್ಲ. ಸರ್ಕಾರವು ನಿಗಧಿ ಪಡಿಸಿರುವ ಗೌರವ ಧನವನ್ನು ಕರ್ತವ್ಯ ನಿರ್ವಹಿಸುವ ಅವಧಿಗೆ ಮಾತ್ರ ಪಾವತಿಸಲಾಗುವುದು.

     

    ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ- 080-22263447 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ನವೆಂಬರ್ 22 ರೊಳಗೆ 2500 ನಿವೇಶನ ನೀಡುವ ಗುರಿ : ಕೆ.ಹೆಚ್ ಮುನಿಯಪ್ಪ

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್22(ವಿಜಯಮಿತ್ರ ):- ದೇವನಹಳ್ಳಿ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ 4,557 ನಿವೇಶನ ರಹಿತರಿದ್ದು ಮೊದಲ ಹಂತದಲ್ಲಿ2500 ನಿವೇಶನ ನೀಡುವ ಗುರಿ ಇದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ತಿಳಿಸಿದರು.

     

    ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದೇವನಹಳ್ಳಿ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     

    ತಾಲ್ಲೂಕುವಾರು ಹಲವರು ನಿವೇಶನ ರಹಿತ, ವಸತಿ ರಹಿತ ಜನರಿದ್ದಾರೆ. ಸರ್ಕಾರ ವು ಅವರನ್ನು ಗುರ್ತಿಸಿ ನಿವೇಶನ, ವಸತಿ ನೀಡಲು ಕಾರ್ಯಕ್ರಮ ರೂಪಿಸಿದೆ. ದೇವನಹಳ್ಳಿಯಲ್ಲಿ 4557 ನಿವೇಶನ ರಹಿತರಿದ್ದು ಈಗಾಗಲೇ 296 ಜನರಿಗೆ ಹಕ್ಕು ಪತ್ರ ನೀಡಲು ಕ್ರಮವಹಿಸಲಾಗುತ್ತಿದೆ. ಉಳಿದ 4261 ಜನರಿಗೆ ತುರ್ತಾಗಿ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ಒಂದು ತಿಂಗಳ ಒಳಗೆ ಸರ್ಕಾರಿ ಜಮೀನು ನಿವೇಶನಗಳನ್ನು ಗುರುತುಪಡಿಸಿ, ವಸತಿ ರಹಿತರ ಪಟ್ಟಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಕಂದಾಯ ಇಲಾಖೆಯವರು ಅಧಿಕಾರಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

     

    ನವೆಂಬರ್ ಅಂತ್ಯದೊಳಗೆ ಮೊದಲ ಹಂತದಲ್ಲಿ ಕನಿಷ್ಟ 2500 ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದರು.

     

    ಯಾವುದೇ ಗ್ರಾಮದಲ್ಲಿ ರೈತರ ಜಮೀನುಗಳಿಗೆ ತೆರಳಲು , ಸ್ಮಶಾನ ಕ್ಕೆ ಹೋಗಲು ರಸ್ತೆ ಇಲ್ಲದಿದ್ದಲ್ಲಿ ಅಂತಹ ರೈತರು , ಸಾರ್ವಜನಿಕರು ತಾಲ್ಲೂಕು ಕಚೇರಿಗೆ ಒಂದು ವಾರದೊಳಗೆ ಅರ್ಜಿ ಸಲ್ಲಿಸಿ, ಅರ್ಜಿಯನ್ನು ಅಧಿಕಾರಿಗಳು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳುವರು ಎಂದರು.

     

    ಜೆ.ಜೆ.ಎಂ.ಯೋಜನೆಯಡಿ ಮನೆ ಮನೆಗೂ ಕೊಳವೆ ನಲ್ಲಿಗಾಗಿ ರಸ್ತೆ ಅಗೆದಿದ್ದು, ಅದನ್ನು ಮುಚ್ಚಿದ ನಂತರವೇ ಗುತ್ತಿಗೆದಾರರಿಗೆ ಬಿಲ್ಲು ಪಾವತಿಸುವಂತೆ ಸೂಚಿಸಲಾಯಿತು. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯರಂಭ ಮಾಡುತ್ತಿದ್ದು ದುರಸ್ಥಿಯಾಗಬೇಕಿರುವ ಘಟಕಗಳನ್ನು ತುರ್ತಾಗಿ ದುರಸ್ಥಿಗೊಳಿಸುವಂತೆ ಸೂಚಿಸಿದರು.

     

    ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸಿ.ಎಸ್.ಆರ್ ಅನುದಾನದಲ್ಲಿ 10 ಶಾಲೆಗಳನ್ನು ಉನ್ನತಿಕರಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ. ಶಾಲೆಗಳು ಸಣ್ಣ ಹಾಗೂ ದೊಡ್ಡ ಪ್ರಮಾಣದ ದುರಸ್ಥಿ ಇದ್ದಲ್ಲಿ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಬಳಕೆ ಮಾಡಿ, ಗ್ರಾಮ ಪಂಚಾಯಿತಿಗಳ ಅನುದಾನ ಬಳಕೆ ಮಾಡಿ ಕೂಡಲೇ ದುರಸ್ಥಿಗೊಳಿಸಬೇಕು. 17 ವಿವೇಕ್ ಶಾಲೆಗಳ ಕೊಠಡಿಗಳ ಪ್ರಾರಂಭವಾಗಿದ್ದು ಮಕ್ಕಳಿಗೆ ಬಳಕೆಯಾಗುತ್ತಿವೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರು ಹೆಚ್ಚು ಶ್ರಮ ವಹಿಸಬೇಕಿದೆ. ಸಿ.ಆರ್.ಪಿ./ ಬಿ.ಆರ್.ಪಿ. ಗಳು ಶಾಲೆಗಳಿಗೆ ಹೆಚ್ಚಿನ ಭೇಟಿ ನೀಡಿಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದರು.

     

    ಎಸ್.ಎಸ್.ಎಲ್.ಸಿ / ಪಿ.ಯು.ಸಿ. ಪರೀಕ್ಷೆ ಫಲಿತಾಂಶ ಶೇ.100 ಆಗಬೇಕಿದ್ದು ಈಗಿನಿಂದಲೇ ಕ್ರಿಯಾಯೋಜನೆ ರೂಪಿಸಿಕೊಂಡು ಜಿಲ್ಲೆಗೆ ಉತ್ತಮ ಹೆಸರು ತರಲು ಶಿಕ್ಷಕರು ಶ್ರಮಿಸಬೇಕು.

     

    ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳಿಂದ 2,556 ಮನೆಗಳ ಬೇಡಿಕೆ ಇದ್ದು ಈಗಾಗಲೇ 1,500 ಮನೆಗಳ ಮಂಜೂರಾತಿಗಾಗಿ ವಸತಿ ಸಚಿವರಿಗೆ ಮನವಿ ಮಾಡಲಾಗಿದೆ.

     

    ಮನೆ ನಿರ್ಮಾಣದ ಘಟಕ ವೆಚ್ಚ ಸಾಮಾನ್ಯರಿಗೆ ರೂ. 1.20 ಲಕ್ಷ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡರವರಿಗೆ ರೂ. 1.75 ಲಕ್ಷವಿದ್ದು ರಾಜ್ಯ ಸರ್ಕಾರದಿಂದ ಅಂಬೇಡ್ಕರ್ ಯೋಜನೆಯಡಿ ರೂ. 2.00 ಲಕ್ಷ ಇದ್ದು ಘಟಕ ವೆಚ್ಚ ಹೆಚ್ಚಿಸಲು ಸರ್ಕಾರ ಕ್ಕೆ ಮನವಿ ಮಾಡಲಾಗಿದೆ ಎಂದರು.

     

    ಗ್ರಾಮೀಣ ಭಾಗಗಳಲ್ಲಿ ಅನಧಿಕೃತವಾಗಿ ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟ ತಡೆಯಲು ಅಬಕಾರಿ ಅಧಿಕಾರಿಗಳು ಕಾಲಕಾಲಕ್ಕೆ ದಾಳಿಗಳನ್ನು ನಡೆಸಿ ಅಕ್ರಮ ಮಾರಾಟ ತಡೆಗಟ್ಟಲು ಕ್ರಮವಹಿಸಿ ಎಂದರು.

     

    ಪೋಡಿ ಮುಕ್ತ ತಾಲ್ಲೂಕು ಹಾಗೂ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡಳಿತದಿಂದ ಕಾರ್ಯ ನಡೆಯುತ್ತಿದ್ದು , ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪೋಡಿ ಮುಕ್ತ ವಾಗುವ ಜಿಲ್ಲೆಗಳಲ್ಲಿ ಮೊದಲ ಸ್ಥಾನದಲ್ಲಿ ಇದೆ. ಕಂದಾಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.

     

    ಗುಣಮಟ್ಟದ ಆಹಾರ ಪದಾರ್ಥಗಳನ್ನು, ತರಕಾರಿಗಳನ್ನು ಬೆಳೆಯಲು ರೈತರಿಗೆ ಅರಿವು ಮೂಡಿಸಿ , ರೈತರು ಪಾಲಿಹೌಸ್ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿ ಎಂದು ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.

     

    ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನಸಮಿತಿ ಜಿಲ್ಲಾ ಅಧ್ಯಕ್ಷರಾದ ರಾಜಣ್ಣ ,ತಾಲ್ಲೂಕು ಗ್ಯಾರಂಟಿ ಅನುಷ್ಠನ ಅಧ್ಯಕ್ಷರಾದ ಜಗನ್ನಾಥ್,ಬಯ್ಯಪ್ಪಾ ಸದಸ್ಯರಾದ ಮಂಜುನಾಥ್, ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ಗೌಡ,ತಹಶಿಲ್ದಾರ್ ಬಾಲಕೃಷ್ಣ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ: ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ಸಮಾರೋಪ ಸಮಾರಂಭ : ರಾಜ್ಯದ ವಿವಿಧ 29 ಜಿಲ್ಲೆಗಳ ಯೋಗಪಟುಗಳು ಭಾಗಿ

    2024-2025 ನೇ ಸಾಲಿನ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯನ್ನು ತಾಲ್ಲೂಕಿನ ದೇವರಾಜು ಅರಸು ಕಾಲೇಜಿನಲ್ಲಿ 2 ದಿನಗಳ ಕಾಲ ಆಯೋಜಿಸಲಾಗಿತ್ತು ಸ್ಪರ್ಧೆಯಲ್ಲಿ ವಿವಿಧ 29 ಜಿಲ್ಲೆಗಳ ಯೋಗಪಟುಗಳು ಭಾಗವಹಿಸಿದ್ದರು.

    ಸದರಿ ಕಾರ್ಯಕ್ರಮದ ಅಂತಿಮ ಘಟ್ಟದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ ಯೋಗ ಮಾಡುವುದರಿಂದ ಮನುಷ್ಯನ ಹಲವು ಕಾಯಿಲೆಗಳು ದೂರವಾಗಿ ಒಳ್ಳೆಯ ಆರೋಗ್ಯ ಹಾಗೂ ದಿನನಿತ್ಯದ ಜೀವನದಲ್ಲಿ ಮನುಷ್ಯ ತುಂಬ ಚಟುವಟಿಕೆಯಿಂದ ಇರಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿನಿತ್ಯ ಯೋಗ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದರು.

    29 ಜಿಲ್ಲೆಗಳಿಂದ ಆಗಮಿಸಿದ್ದ ಯೋಗ ಪಟುಗಳನ್ನು ಕುರಿತು ನಾವು ಓದುವ ದಿನಗಳಲ್ಲಿ ಇಷ್ಟೋಂದು ಅನುಕೂಲಗಳು ಇರಲಿಲ್ಲ ಅಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಊಟದ ವ್ಯವಸ್ಥೆ.ಬಟ್ಟೆ.ಇತರೆ ಯಾವುದು ಸರಿಯಾಗಿ ಸಿಗುತ್ತಿರಲಿಲ್ಲ ಎಂದು ನೆನೆಯುತ್ತಾ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ರಾಜ್ಯ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಯೋಗಪಟುಗಳು ಭಾಗವಹಿಸುವುದರ ಮೂಲಕ ಯೋಗ ಅಭ್ಯಾಸ ಕಲಿಸಿದ ಗುರುಗಳಿಗೆ ಹಾಗೂ ಪೋಷಕರಿಗೆ ಕೀರ್ತಿ ತರುವ ಕೆಲಸ ಆಗಲಿ ಹಾರೈಸಿದರು.

    ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಎನ್.ಮೋಹನ್ ಕುಮಾರ್, ದೇವರಾಜು ಅರಸು ಸಂಸ್ಥೆಯ ರಾಕೇಶ್,ಯೋಗ ಅಮರನಾಥ್,ಯೋಗ ನಟರಾಜ್,ಪ್ರವೀಣ್ ಶಾಂತಿನಗರ, ಬಾಬಣ್ಣ, ಸಂಜೀವ್,ಕೋದಂಡರಾಮ,ಅಂತರಾಷ್ಟ್ರೀಯ ಯೋಗ ಪಟು ವರುಣ್ ಸೇರಿದಂತೆ .ಕಾಲೇಜಿನ ಪ್ರಾಂಶುಪಾಲರು,ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು….

  • ಒಳ ಮೀಸಲಾತಿ ಜಾರಿಗೊಳಿಸುವಂತೆ ಅಗ್ರಹಿಸಿ ದಲಿತ ಸಂಘಟನೆಗಳ ಪ್ರತಿಭಟನೆ

    ಬೀರಸಂದ್ರ ( ವಿಜಯಮಿತ್ರ ): ಸುಪ್ರೀಂ ಕೋರ್ಟ್ ಈಗಾಗಲೇ ಜಾರಿಗೊಳಿಸಿರುವ ಒಳಬಿಸಲಾತಿ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ ಸಮುದಾಯದ ಮುಖಂಡರ ಜೊತೆ ವಿವಿಧ ದಲಿತ ಸಂಘಟನೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದವು.

    ಪ್ರತಿಭಟನೆಯಲ್ಲಿ ರಾಜ್ಯ ಮುಖಂಡರಾದ ಬುಳ್ಳಳಿ ರಾಜು ಮಾತನಾಡಿ ಪ್ರತಿ ಚುನಾವಣೆಯಲ್ಲೂ ನಿರ್ಣಾಯಕ ಮತಗಳನ್ನು ಹೊಂದಿರುವ ಮಾದಿಗ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದರು ರಾಜ್ಯ ಸರ್ಕಾರ ಆದೇಶವನ್ನು ಜಾರಿಗೆ ತರಲು ಮುಂದಾಗುತ್ತಿಲ್ಲ , ಈ ಕುರಿತಂತೆ ಏಕಕಾಲದಲ್ಲಿ ರಾಜ್ಯದ್ಯಂತ ಮಾದಿಗ ಸಮುದಾಯವು ಈ ಚಳುವಳಿಯನ್ನು ಹಮ್ಮಿಕೊಂಡಿದೆ ಮುಖ್ಯಮಂತ್ರಿಗಳು ಈ ಕೂಡಲೇ ಯಥಾವತ್ತಾಗಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರುವ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು

    Ad

    ದಲಿತ ಮುಖಂಡ ಮಾ. ಮುನಿರಾಜು ಮಾತನಾಡಿ ಸದಾ ಸಮಪಾಲು ಸಮ ಬಾಳು, ಸಾಮಾಜಿಕ ನ್ಯಾಯ ಕುರಿತು ಮಾತನಾಡುವ ಸಮುದಾಯದ ಮುಖಂಡರು ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಟ್ಟಿದ್ದರೆ ನಾವೇಗೆ ಹೋರಾಟಕ್ಕೆ ಮುಂದಾಗಬೇಕಿತ್ತು. ಇದು ನಮ್ಮ ಹಕ್ಕು, ಸುಪ್ರೀಂ ಕೋರ್ಟ್ ನೀಡುವ ಆದೇಶವನ್ನು ಯಥಾವತ್ತಾಗಿ ಸರ್ಕಾರ ಜಾರಿಗೊಳಿಸಬೇಕು ಇಲ್ಲವಾದಲ್ಲಿ ಮುಂದೆ ಮಾದಿಗ ಸಮುದಾಯ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದರು.

    ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರಾದ ದೇವನಹಳ್ಳಿ ನರಸಿಂಹಮೂರ್ತಿ, ಆದಿತ್ಯ ನಾಗೇಶ್, ಟಿ.ಡಿ.ಮುನಿಯಪ್ಪ, ಅಂಜನಮೂರ್ತಿ, ಮಾರಪ್ಪ, ರಾಮಕೃಷ್ಣಪ್ಪ, ಮುತ್ತುರಾಜು, ನರೇಂದ್ರ ಮೂರ್ತಿ, ಹರ್ಷ, ಹನುಮಯ್ಯ.ಬಿ ಸೇರಿದಂತೆ ಹಲವು ಸಂಘಟನೆಗಳ ದಲಿತ ಮುಖಂಡರು ಉಪಸ್ಥಿತರಿದ್ದರು .

  • ಡಾ. ಬಿ.ಆರ್. ಅಂಬೇಡ್ಕ‌ರ್ ರವರ ಧಮ್ಮ ಧೀಕ್ಷರ 68ನೇ ವರ್ಷದ ಸ್ಮರಣೆ:ಕ್ಯಾಂಡಲ್ ಸಹಿತ ಧಮ್ಮ ಮೈತ್ರಿ ಮೆರವಣಿಗೆ

    ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದರೆ ಅವರು ಸ್ವೀಕರಿಸಿದ ಬೌದ್ಧ ಧರ್ಮದಲ್ಲಿ ನೀಡಿರುವ ಪಂಚಶೀಲ ತತ್ವಗಳನ್ನು ಕೂಡ ಅಳವಡಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಪ್ರಜ್ಞಾವಂತರು ಇಂದು ಸಾಮೂಹಿಕವಾಗಿ ಬೌದ್ಧ ಧರ್ಮ ಸ್ವೀಕರಿಸುತ್ತಿದ್ದಾರೆ ಎಂದು ನ್ಯಾನ ಲೋಕ ಭಂತೆ ತಿಳಿಸಿದರು

    ನಗರದಲ್ಲಿ ಬೌದ್ಧ ಸಮಾಜ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ವತಿಯಿಂದ  ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್‌ ಬಿ.ಆರ್. ಅಂಬೇಡ್ಕ‌ರ್ ರವರ ಧಮ್ಮ ಧೀಕ್ಷರ 68ನೇ ವರ್ಷದ ಸ್ಮರಣೆಗಾಗಿ ತಾಲ್ಲೂಕು ಕಛೇರಿ ವೃತ್ತದಿಂದ ಹಳೆ ಬಸ್ ನಿಲ್ದಾಣದ ಬಾಬಾ ಸಾಹೇಬರ ಪ್ರತಿಮೆಯವರೆಗೆ ಕ್ಯಾಂಡಲ್ ಸಹಿತ ಧಮ್ಮ ಮೈತ್ರಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕೇವಲ ಭಾರತ ರಸ್ತೆಯಲ್ಲಿದೆ 48 ದೇಶಗಳಲ್ಲಿ ಆರಾಧಿಸುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಸಮಾನತೆಗಾಗಿ ಅವರು ಮಾಡಿದ ಹೋರಾಟ ಮತ್ತು ಅಂಬೇಡ್ಕರ ಬೌದ್ಧ ಧರ್ಮ ಸ್ವೀಕಾರ, ಬೌದ್ಧ ಧರ್ಮದಲ್ಲಿರುವ ಪಂಚಶೀಲ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಪಂಚಕ್ಕೆ ಮಾದರಿ ಜೀವನ ತೋರಿಸಿದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಹಾದಿಯಲ್ಲಿ ಇಂದಿನ ಯುವ ಪೀಳಿಗೆ ಸಾಗುತ್ತಿದೆ ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಇಂದು ಹಲವಾರು ಯುವಕರು ಬೌದ್ಧ ಧರ್ಮ ಸ್ವೀಕಾರ ಮಾಡುತ್ತಿರುವುದು ಹಾಗೂ ಪಂಚಶೀಲ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸುತ್ತಿರುವುದೇ ಆಗಿದೆ ಎಂದರು

    Ad

    ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವರು ಸಾಮೂಹಿಕವಾಗಿ ಬೌದ್ಧ ಧರ್ಮ ಸ್ವೀಕಾರ ಮಾಡಿದರು.

    ಅನಂತ್ ಕುಮಾರ್ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಆದರ್ಶ ಮಾರ್ಗದಲ್ಲಿ ಜೀವನ ಸಾಗಿಸುತ್ತಿದ್ದು,ಅವರ ಧಮ್ಮ ಧೀಕ್ಷೆಯ 68ನೇ ವರ್ಷದ ಈ ಸುದಿನದಂದು ನಾನು ಸಹ ಧಮ್ಮ ಧೀಕ್ಷೆ ಪಡೆಯುವ ಮೂಲಕ ಪಂಚಾಶೀಲ ತತ್ವವನ್ನು ಸ್ವೀಕರಿಸಿ,ಪಾಲಿಸುವ ಮೂಲಕ ಜೀವನ ಸಾಗಿಸಲು ನಿರ್ಣಯಿಸಿದ್ದೇನೆ ಭಗವಾನ್ ಬುದ್ದರು ನೀಡಿರುವ ಉನ್ನತ ಮೌಲ್ಯಗಳನ್ನು ಅನುಸರಿಸುವ ಮೂಲಕ ಸಮಾಜದಲ್ಲಿ ಉತ್ತಮ ಜೀವನ ನೆಡೆಸಲು ನಿರ್ಧಾರಿಸಿದ್ದೇನೆ ಎಂದರು.

    ಕಾರ್ಯಕ್ರಮದಲ್ಲಿ ಮುಖಂಡರಾದ ರಾಜು ಸಣ್ಣಕ್ಕಿ, ಗುಳ್ಯ ಹನುಮಣ್ಣ, ರಾಜಗೋಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

     

     

  • ಯುವಜನತೆಯಲ್ಲಿ ತಂಬಾಕು ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ :ತಂಬಾಕು ಮುಕ್ತ ಯುವ ಅಭಿಯಾನ 2.0 ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

    ಮಾದಕವಸ್ತುಗಳ ನಿಯಂತ್ರಣಕ್ಕೆ ಕಾನೂನುಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ತರಲು ಸರ್ಕಾರ ಯೋಚಿಸುತ್ತಿದೆ. ಯುವಜನತೆ ಈ ದುಶ್ಚಟಕ್ಕೆ ಬಲಿಯಾಗದಂತೆ, ಮಾದಕ ವಸ್ತುಗಳ ದಂಧೆಯನ್ನು ನಿಗ್ರಹಿಸುವುದೇ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ತಂಬಾಕು ಮುಕ್ತ ಯುವ ಅಭಿಯಾನ ಬೃಹತ್ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಯುವಜನತೆಯಲ್ಲಿ ತಂಬಾಕು ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ತಂಬಾಕು ಮುಕ್ತ ಯುವ ಅಭಿಯಾನ 2.0 ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ತಂಬಾಕು ಬಳಕೆಯನ್ನು ಮಾಡುವುದಿಲ್ಲ, ಮಾಡಲೂ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಇಂದು ಪ್ರತಿಜ್ಞೆ ಕೈಗೊಂಡಿದ್ದಾರೆ. ಈ ಪ್ರತಿಜ್ಞೆಯನ್ನು ಅಕ್ಷರಶ: ಪಾಲಿಸಬೇಕು.

    Ad

    ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಯಂತೆ ಭಾರತದಲ್ಲಿ ಪ್ರತಿ ವರ್ಷ 13.5 ಲಕ್ಷ ಜನರು ತಂಬಾಕು ಸೇವನೆಯಿಂದ ಸಾವಿಗೆ ಈಡಾಗುತ್ತಿದ್ದಾರೆ ಎಂಬುದು ಆತಂಕಕಾರಿ ವಿಷಯ. ಯುವಜನತೆ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಬದಲು ಈ ದುಶ್ಚಟಗಳಿಗೆ ಬಲಿಯಾಗುತ್ತಿರುವುದರಿಂದ ಈ ಪ್ರಮಾಣದ ಸಾವು ಸಂಭವಿಸುತ್ತಿದೆ. ತಂಬಾಕು ಸೇವಿಸುತ್ತಿರುವವರಲ್ಲಿ ಶೇ.50 ರಷ್ಟು ಜನ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಯುವಜನತೆ ತಂಬಾಕು ಸೇವನೆ ಹಾಗೂ ಮಾದಕವಸ್ತುಗಳ ವ್ಯಸನಕ್ಕೆ ಒಳಗಾಗಬಾರದು.

     

    ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಿದ್ದು, ಇದನ್ನು ನಿಗ್ರಹಿಸಲು ಸರ್ಕಾರ ಅನೇಕ ಕಾನೂನುಗಳನ್ನು ರಚಿಸಿದೆ. ಯುವಕ – ಯುವತಿಯರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಲ್ಲಿ, ಕೂಡಲೇ ಇದನ್ನು ನಿಲ್ಲಿಸಬೇಕು.

    ರಾಜ್ಯದಲ್ಲಿ ಉತ್ತಮ ಮಳೆ – ಬೆಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದಂತೆ, ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯಕರ ಜೀವನ ನಡೆಸಿ ಯುವ ಸಮುದಾಯದವರಲ್ಲೂ ಸಂತಸ ಮೂಡುವಂತಾಗಲಿ ಎಂದು ಹಾರೈಸುತ್ತೇನೆ ಎಂದರು.

  • ಕಾಂಗ್ರೆಸ್ ಪ್ರೆಸ್ ಮೀಟ್ : ಹೆಸರಿಗಷ್ಟೇ ಸೀಮಿತವಾದ “ನವ ದೊಡ್ಡಬಳ್ಳಾಪುರ” : ತಾಲ್ಲೂಕಿನಲ್ಲಿ ಅಭಿವೃದ್ಧಿ ಶೂನ್ಯ ಎಂದ ಮುಖಂಡರು

    ದೊಡ್ಡಬಳ್ಳಾಪುರ : ಹೆಸರಿಗಷ್ಟೇ ಸೀಮಿತವಾದ ನವ ದೊಡ್ಡಬಳ್ಳಾಪುರ, ನೂತನ ಶಾಸಕರು ಅಧಿಕಾರಕ್ಕೆ ಬಂದ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳು ನೆಡೆದಿಲ್ಲ, ಶಾಸಕರು ಯಾವುದೇ ಆಧಾರವಿಲ್ಲದೆ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ, ತಾಲ್ಲೂಕಿನ ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇರುತ್ತೆದೆ ಎಂದು ನಗರಸಭಾ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಶಿವಶಂಕರ್ (ಶಂಕ್ರಿ) ತಿಳಿಸಿದರು

     

    ನಗರದ ಪ್ರವಾಸಿಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಯಾವುದೇ ಯೋಜನೆ, ಅಭಿವೃದ್ಧಿ ಕಾರ್ಯಕ್ರಮಗಳು ಆಗಿಲ್ಲ… ಯಾವುದಾದರು ಆಗಿದ್ದರೆ ಶಾಸಕರು ತಿಳಿಸಲಿ… ಈಗಾಗಲೇ ನಿರ್ಮಾಣವಾಗಿರುವ ಇ ಎಸ್ ಐ ಆಸ್ಪತ್ರೆಯನ್ನು ಉದ್ಘಾಟಿಸಲು ಸಾಧ್ಯವಾಗಲಿಲ್ಲ ಅದನ್ನು ಈ ಕೂಡಲೇ ಉದ್ಘಾಟನೆ ಮಾಡುವಲ್ಲಿ ಕ್ರಮ ವಹಿಸಲಿ. ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಕಳೆದ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಆಗಿರುವುದು ಬಿಟ್ಟರೆ ಪ್ರಸ್ತುತ ಯಾವುದೇ ಕಾಮಗಾರಿ ನೆಡೆದಿಲ್ಲ ಎಂದರು.

     

    ಕ್ರಿಯಾ ಯೋಜನೆ ರೂಪಿಸುವ ಸಂದರ್ಭದಲ್ಲಿ ನಗರಸಭೆಯ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಮಾಡಬೇಕಿತ್ತು. ಆದರೆ ಅಲ್ಪಸಂಖ್ಯಾತರ ಅನುದಾನಗಳ ಬಳಕೆ ಶೇಕಡಾ 50%ರಷ್ಟು ಅಲ್ಪಸಂಖ್ಯಾತರಿರುವ ವಾರ್ಡ್ ಗಳಲ್ಲಿ ನೆಡೆದಿಲ್ಲ, ಪ್ರತಿ ವಾರ್ಡ್ ನಲ್ಲಿ 20ಲಕ್ಷ ಯೋಜನೆ ತೋರಿದ್ದಾರೆ ಆದರೆ ಆ ಮೊತ್ತದ ಕಾಮಗಾರಿ ಎಲ್ಲೂ ನೆಡೆದಿಲ್ಲ, ಕೇವಲ ಬಿಜೆಪಿ ಜೆಡಿಎಸ್ ಸದಸ್ಯರ ವಾರ್ಡ್ ಗಳಿಗೆ ಮಾತ್ರ ಅನುದಾನ ನೀಡಿದ್ದು, ಕಾಂಗ್ರೆಸ್ ಸದಸ್ಯರ ವಾರ್ಡ್ ಗಳಿಗೆ ಯಾವುದೇ ಅನುದಾನ ನೀಡಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ನೀಡಿರುವ ಅನುದಾನ ಕಾಂಗ್ರೆಸ್ ನಗರಸಭಾ ಸದಸ್ಯರಿಗೆ ಅನುದಾನ ನೀಡಿಲ್ಲ,ಪ್ರತಿ ಕಾಮಗಾರಿ ಮತ್ತು ಯೋಜನೆಗಳ ಅನುಷ್ಠಾನಕ್ಕೆ ನಿಷ್ಠಾಚಾರ ಪಾಲನೆ ಮಾಡಿ ಪಕ್ಷ ತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ತಾಲ್ಲೂಕಿನ ಅಭಿವೃದ್ಧಿಯ ಕಡೆ ಗಮನ ಹರಿಸಿ ಎಂದರು.

    ಬೈರೇಗೌಡ ಮಾತನಾಡಿ ಕಾಂಗ್ರೆಸ್ ಪಕ್ಷದ ಶಾಸಕರಾಗಲಿ ಯಾವುದೇ ಮುಖಂಡರಾಗಲಿ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಮಾಡುವ ಮನಸ್ಥಿತಿ ಇಲ್ಲ, ನಮ್ಮಿಂದ ಯಾವುದೇ ಕಾರ್ಯಕ್ಕೆ ಅಡ್ಡಿಯಿಲ್ಲ, ನಮ್ಮ ನಗರಸಭಾ ಸದಸ್ಯ ಮಧ್ಯೆ ಜಗಳ ಮೂಡಿಸುವ ಹೇಳಿಕೆ ನೀಡುವುದು ಸರಿಯಿಲ್ಲ ನಮ್ಮಲ್ಲಿ ಒಗ್ಗಟ್ಟಿದೆ ನಮ್ಮಲ್ಲಿ ಒಡಕುಗಳಿಲ್ಲ ಎಂದರು.

     

    Ad

     

    ನೇಕಾರ ಸಮಸ್ಯೆಗಳ ಬಗ್ಗೆ 

     

    ನೇಕಾರರು ಇತಿಹಾಸದಲ್ಲಿ ಯಾರಿಗೂ ನೀಡದಷ್ಟು ಹೆಚ್ಚು ಮತಗಳನ್ನು ತಾಲ್ಲೂಕಿನ ಜನತೆ ಶಾಸಕರಿಗೆ ನೀಡಿದ್ದಾರೆ, ನೇಕರರಿಗೆ ಸಂಬಂಧಪಟ್ಟಂತೆ ಅವರ ಯೋಜನೆ ತಂತ್ರಜ್ಞಾನ ಬದಲಾದಂತೆ ಮುಂದೆ ಬದಲಾವಣೆ ಆಗುತ್ತದೆ, ಆದರೆ ನೇಕಾರರಿಗೆ ಮುಖ್ಯವಾಗಿ ಬೇಕಿರುವುದು ಮಾರುಕಟ್ಟೆ ವ್ಯವಸ್ಥೆ ಅದರ ಕಡೆ ಗಮನ ಹರಿಸುವ ಮೂಲಕ ತಾಲ್ಲೂಕಿನ ನೇಕಾರರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡಬೇಕಿದೆ.ನೇಕಾರರ ಮಾರುಕಟ್ಟೆಗೆ ಮಿಸಲಿಟ್ಟಿದ ಸ್ಥಳದಲ್ಲಿ AC ಕಚೇರಿ ನಿರ್ಮಿಸಲು ಮುಂದಾಗಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ. ಶಾಸಕರು ಈ ಕುರಿತು ಮೊದಲೇ ನಿರ್ಧಾರಿಸಿರುವ ಜಗದಲ್ಲೇ ಮಾರುಕಟ್ಟೆ ನಿರ್ಮಿಸುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಸಹಕರಿಸಬೇಕಿದೆ ಎಂದರು.

     

    ಸುದ್ದಿಗೊಷ್ಟಿಯಲ್ಲಿ ನಗರ ಘಟಕ ಅಧ್ಯಕ್ಷ ಕೆ ಪಿ ಜಗನ್ನಾಥ್, ನಗರ ಸಭಾ ಸದಸ್ಯರಾದ ಶಿವಶಂಕರ್, ಶಿವು, ಕಸಭಾ ಬ್ಲಾಕ್ ಅಧ್ಯಕ್ಷ ವೆಂಕಟೇಶ್, ಅಲ್ಪಸಂಖ್ಯಾತರ ಅಧ್ಯಕ್ಷ ಬಷೀರ್, ನಗರಸಭಾ ಸದಸ್ಯರಾದ ಆನಂದ್, ಅಲ್ತಾಫ್, ನಾಗವೇಣಿ, ನಾಗರಾಜು, ಶಿವಣ್ಣ, ಎಚ್.ಬಿ ಅಖಿಲೇಶ್, ವಾಣಿ, ಕಾಂಗ್ರೆಸ್ ಮುಖಂಡ ಮಂಜುನಾಥ್, ಸುಬ್ರಮಣಿ, ಶ್ರೀವಾಸ್, ಫಯಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ಗೃಹಲಕ್ಷ್ಮಿ ಯೋಜನೆಯಿಂದ ಗ್ರಂಥಾಲಯ ನಿರ್ಮಾಣ : ಕಾನೂರು ಹೆಗ್ಗಡತಿ ಪುಸ್ತಕ ರವಾನಿಸಿ ಶುಭ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

    ಕರ್ನಾಟಕ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ವತಿಯಿಂದ ಹಲವು ಗ್ಯಾರೆಂಟಿ ಯೋಜನೆಗಳ ಅನುಷ್ಠಾನವನ್ನು ನೀಡಿದ್ದು. ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆ ಅತ್ಯಂತ ಜನಮಣನೆ ಪಡೆದಿದೆ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಮಹಿಳೆಯರು ಸಾಕಷ್ಟು ವಿಶೇಷ ಕಾರ್ಯಗಳನ್ನು ಆರಂಭಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದಾಗಿದೆ ಅಂತೆಯೇ..

     

    ರಾಯಬಾಗ್ ತಾಲೂಕಿನ ಮಂಟೂರು ಗ್ರಾಮದ ಮಲ್ಲವ್ವ ಮೇಟಿ ಅವರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಂಥಾಲಯ ನಿರ್ಮಿಸಿದ್ದಾರೆ.

    Ad

    ಈ ಕುರಿತು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಗ್ರಂಥಾಲಯಕ್ಕೆ ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ‘ಕಾನೂರು ಹೆಗ್ಗಡಿತಿ’ ಎಂಬ ಪುಸ್ತಕವನ್ನು ನೀಡುವ ಮೂಲಕ ಶುಭ ಹಾರೈಸಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

     

    ಪೋಸ್ಟ್ ನಲ್ಲಿ ಏನಿದೆ??

     

    ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯು ರಾಜ್ಯದ ಜನರ ಮನ ಗೆದ್ದಿರುವುದಕ್ಕೆ ರಾಯಬಾಗ್ ತಾಲೂಕಿನ ಮಂಟೂರು ಗ್ರಾಮದ ಮಲ್ಲವ್ವ ಮೇಟಿ ಅವರು ನಿರ್ಮಿಸಿರುವ ಗ್ರಂಥಾಲಯ ಜ್ವಲಂತ ಉದಾಹರಣೆಯಾಗಿದೆ, ಅವರ ಈ ಕಾರ್ಯ ನಿಜಕ್ಕೂ ಕಾಣಬಹುದಾಗಿದೆ ಆವಿಸ್ಮರಣೀಯ.

     

    ಮಲ್ಲವಕ್ಕ ಮೇಟಿ ಅವರ ನಿಸ್ವಾರ್ಥ ಸೇವೆಯ ಹಿನ್ನೆಲೆಯಲ್ಲಿ ಚಿಕ್ಕ ಉಡುಗೊರೆಯಾಗಿ ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ‘ಕಾನೂರು ಹೆಗ್ಗಡಿತಿ’ ಎಂಬ ಪುಸ್ತಕವನ್ನು ಗ್ರಂಥಾಲಯಕ್ಕೆ ಕಳುಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

  • ನನ್ನ ಹಾಗೂ ಕಲರ್ಸ್‌ ನಡುವಿನ ಬಾಂಧವ್ಯ ಅದ್ಭುತವಾಗಿದೆ – ನಟ ಕಿಚ್ಚ ಸುದೀಪ್ ಮರು ಸಂದೇಶ….

    ಬಿಗ್‌ ಬಾಸ್‌ ಕನ್ನಡ (Bigg Boss Kannada) ಕಾರ್ಯಕ್ರಮ ನಿರೂಪಣೆ ಬಗ್ಗೆ ಕಿಚ್ಚ ಸುದೀಪ್‌ (Kiccha Sudeep) ಮಾಡಿದ ಆ ಒಂದು ಎಕ್ಸ್ ಸಂದೇಶ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ.

     

    ಕಳೆದ 10 ಸೀಸನ್‌ ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸುದೀಪ್‌ 11ನೇ ಸೀಸನ್‌ ಆರಂಭದಲ್ಲೇ ಇದು ನನ್ನ ಕೊನೆಯ ಸೀಸನ್‌ ಎಂದು ಹೇಳಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು ಇದರ ಹಿಂದಿನ ಕಾರಣವೇನು ಎಂಬುದರ ಬಗ್ಗೆ ಹಲವಾರು ಊಹಾಪೋಹಗಳು ಚರ್ಚೆಗಳು ಪ್ರಾರಂಭವಾದವು.

     

    ಬಿಗ್‌ ಬಾಸ್‌ ನಲ್ಲಿ ಕನ್ನಡ ಹೆಚ್ಚಾಗಿ ಬಳಕೆ ಆಗುತ್ತಿಲ್ಲ. ಕಾರ್ಯಕ್ರಮದ ನಿರ್ದೇಶಕರು ಬದಲಾಗಿದ್ದು, ಅವರು ತಮಿಳಿನವರಾಗಿದ್ದಾರೆ. ಶೋ ಆಯೋಜಕಿ ಮರಾಠಿಯವರಾಗಿದ್ದಾರೆ. ಹಾಗಾಗಿ ಅಲ್ಲಿ ಕನ್ನಡ ಹೆಚ್ಚು ಬಳಕೆ ಆಗುತ್ತಿಲ್ಲ. ಸ್ವರ್ಗ – ನರಕದ ಕಾನ್ಸೆಪ್ಟ್‌ ಬಗ್ಗೆ ಸುದೀಪ್ ರವರಿಗೆ ಮೊದಲಿನಿಂದಲೂ ಅಸಮಾಧಾನ ಇತ್ತು ಎಂಬ ಹಲವು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

    Ad

    ಇದರ ಬೆನ್ನಲ್ಲೇ ಕಿಚ್ಚ ಸುದೀಪ್‌ ಅವರು ಎಲ್ಲಾ ಗೊಂದಲಕ್ಕೂ ತೆರೆ ಎಳೆಯುವ ನಿಟ್ಟಿನಲ್ಲಿ ಟ್ವೀಟ್‌ ಮಾಡಿದ್ದಾರೆ.

     

    ಕಿಚ್ಚನ ಸಂದೇಶದಲ್ಲಿ ಏನಿದೆ?:

     

    “ನಾನು ಇತ್ತೀಚೆಗೆ ಮಾಡಿದ ಟ್ವೀಟ್‌ ಬಗ್ಗೆ ನೀವೆಲ್ಲ ತೋರಿಸಿದ ಬೆಂಬಲ ಹಾಗೂ ಪ್ರೀತಿಯನ್ನು ಪ್ರಶಂಸಿಸುತ್ತೇನೆ. ಆದರೆ ಚಾನೆಲ್ ಮತ್ತು ನನ್ನ ನಡುವೆ ಯಾವುದೇ ರೀತಿಯ ಗೊಂದಲ ಇರುವಂತೆ ಊಹಿಸಿ ಮಾತನಾಡುವುದನ್ನು, ವಿಡಿಯೋ ಮಾಡಿ ಮಾತನಾಡುವುದನ್ನು ದಯವಿಟ್ಟು ನಿಲ್ಲಿಸಿ. ನನ್ನ ಹಾಗೂ ಚಾನೆಲ್‌ ನಡುವೆ ಒಂದು ಸುದೀರ್ಘ ಪಾಸಿಟಿವ್‌ ಜರ್ನಿಯಿದೆ. ಈ ಪಯಣಕ್ಕೆ ʼಅಗೌರವʼವನ್ನು ಸೇರಿಸಿ ಮಾತನಾಡಬೇಡಿ. ನೀವೆಲ್ಲ ಊಹಿಸುತ್ತಿರುವ ವಿಚಾರ ಆಧಾರರಹಿತವಾಗಿದೆ. ನಾನು ಮಾಡಿರುವ ಟ್ವೀಟ್‌ ನೇರ ಮತ್ತು ಪ್ರಾಮಾಣಿಕವಾಗಿದೆ. ನನ್ನ ಹಾಗೂ ಕಲರ್ಸ್‌ ನಡುವಿನ ಬಾಂಧವ್ಯ ಅದ್ಭುತವಾಗಿದೆ. ನನ್ನನ್ನು ಅವರು ಯಾವಾಗಲೂ ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಕಾರ್ಯಕ್ರಮ ನಿರ್ದೇಶಕರಾಗಿರುವ ಪ್ರಕಾಶ್‌ ಅವರು ಒಬ್ಬ ಪ್ರತಿಭಾವಂತ ವ್ಯಕ್ತಿ. ನಾನು ಅವರ ತುಂಬಾ ಗೌರವವನ್ನು ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸು ವ್ಯಕ್ತಿ ನನ್ನಲ್ಲ” ಸುದೀಪ್‌ ಬರೆದುಕೊಂಡಿದ್ದಾರೆ.

  • ಅನುದಾನಿತ ನೌಕರರ ಪ್ರಸ್ತುತ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ  ಚರ್ಚಿಸಿ  ಸರ್ಕಾರದ ಗಮನ ಸೆಳೆದು ಪರಿಹಾರ ಕಂಡುಕೊಳ್ಳಲಾಗುವುದು- ಎಸ್.ಬೋರಪ್ಪ

    ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ  ಎರಡನೇ ರಾಜ್ಯ ಮಟ್ಟದ ಪೂರ್ವಭಾವಿ ಸಭೆ  ತುಮಕೂರಿನಲ್ಲಿ ನಡೆಯಲಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಶ್ರೀ ಕೊಂಗಾಡಿಯಪ್ಪ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಎಸ್.ಬೋರಪ್ಪ ತಿಳಿಸಿದ್ದಾರೆ.

    Ad

    ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಪೂರ್ವಭಾವಿ ಸಭೆ ಕುರಿತು ಮಾತನಾಡಿ,  ಅ.20 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ  ತುಮಕೂರಿನ ರವೀಂದ್ರ ಕಲಾನಿಕೇತನ, ಆರ್.ಟಿ ನಗರ (ಸರ್ವೋದಯ ಪದವಿಪೂರ್ವ ಕಾಲೇಜಿನ ಹತ್ತಿರ) ಸಭೆ  ನಡೆಯಲಿದೆ.   ಈ ಸಭೆಯಲ್ಲಿ ಅನುದಾನಿತ ನೌಕರರ ಪ್ರಸ್ತುತ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ  ಚರ್ಚಿಸಿ  ಸರ್ಕಾರದ ಗಮನ ಸೆಳೆದು ಪರಿಹಾರ ಕಂಡುಕೊಳ್ಳಲಾಗುವುದು.   ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ರಾಜ್ಯ ಮಟ್ಟದ ಸಮಾವೇಶದಲ್ಲಿ  ಕೈಗೊಳ್ಳುವ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು ಯೋಜನೆ ರೂಪಿಸಲಾಗುತ್ತದೆ.

     

    ತುಮಕೂರಿನಲ್ಲಿ ನಡೆಯುವ ಕರ್ನಾಟಕ ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ‌ ರಾಜ್ಯಮಟ್ಟದ ಸಮಾವೇಶದಲ್ಲಿ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಹಾಗೂ  ಹೊಸಕೋಟೆ ತಾಲ್ಲೂಕಿನ  ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರು ಭಾಗವಹಿಸಬೇಕೆಂದು ಕೋರಿದ್ದಾರೆ.  ಸಮಾವೇಶದಲ್ಲಿ    ಕರ್ನಾಟಕ ರಾಜ್ಯ ಖಾಸಗಿ  ಅನುದಾನಿತ ಪದವಿ ಪೂರ್ವ ಕಾಲೇಜುಗಳ‌ ನೌಕರರ ಸಂಘದ  ಎಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಎಲ್ಲ ಪದಾಧಿಕಾರಿಗಳು   ಭಾಗವಹಿಸಲಿದ್ದಾರೆ ಎಂದರು.