Blog

  • ನಗರ ದೇವತೆ ಮುತ್ಯಾಲಮ್ಮ ದೇವಿಗೆ ನವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ

    ನವರಾತ್ರಿ ಹಬ್ಬದ ಪ್ರಯುಕ್ತ ನಗರ ದೇವತೆ ಮುತ್ಯಾಲಮ್ಮ ದೇವಿಗೆ ಶ್ರೀ ಮುತ್ಯಾಲಮ್ಮ ಸೇವಾದತ್ತಿ ಟ್ರಸ್ಟ್ ವತಿಯಿಂದ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಮುತ್ಯಾಲಮ್ಮ ಸೇವಾದತ್ತಿ ಟ್ರಸ್ಟ್ ನ ಕಾರ್ಯಾಧ್ಯಕ್ಷ ಡಿ ಎನ್ ತಿಮ್ಮರಾಜು ಮಾತನಾಡಿ ದೊಡ್ಡ ನಂಜುಂಡಪ್ಪ ಹಾಗೂ ಕುಟುಂಬಸ್ಥರ ವತಿಯಿಂದ ಈ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದೇವಿಗೆ ವಿಶೇಷವಾಗಿ ಅರಿಶಿನ ಕುಂಕುಮದಿಂದ ಅಲಂಕಾರ ಮಾಡಿದ್ದು, ದೇವಾಲಯಕ್ಕೆ ಬರುವ ನೂರಾರು ಭಕ್ತಾದಿಗಳು ತಾಯಿ ದರ್ಶನ ಪಡೆದು ಕಣ್ತುಂಬಿಕೊಳ್ಳುತ್ತಿದ್ದಾರೆ ಎಂದರು.

     

    ಸಾಮಾನ್ಯವಾಗಿ ಪ್ರತಿನಿತ್ಯ ತಾಲೂಕು ಜಿಲ್ಲೆ ಅಷ್ಟೇ ಅಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ದೇವಾಲಯಕ್ಕೆ ಭಕ್ತಾದಿಗಳ ಆಗಮವಿರುತ್ತದೆ. ನವರಾತ್ರಿ ಪ್ರಯುಕ್ತ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದು ಮುತ್ಯಾಲಮ್ಮ ದೇವಿಗೆ ಪ್ರತಿನಿತ್ಯ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಶ್ರೀ ಮುತ್ಯಾಲಮ್ಮ ಸೇವಾದತ್ತಿ ಟ್ರಸ್ಟ್ ವತಿಯಿಂದ ಆಯೋಜನೆ ಮಾಡಲಾಗಿತ್ತು.

    ಈ ಸಂದರ್ಭದಲ್ಲಿ ಟ್ರಸ್ಟಿನ ಕಾರ್ಯಧ್ಯಕ್ಷರಾದ ತಿಮ್ಮರಾಜು , ಟ್ರಸ್ಟ್ ಅಧ್ಯಕ್ಷ ಹನುಮಂತು, ಉಪಾಧ್ಯಕ್ಷ ಕೆ ನಾಗೇಶ್, ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಜೆ ವೈ ಮಲ್ಲಪ್ಪ,ಕಾರ್ಯದರ್ಶಿ ಪ್ರಭಾಕರ್, ಸಂಘಟನಾ ಕಾರ್ಯದರ್ಶಿ ಜೆ ಕುಮಾರ್, ದರ್ಗಾಜೋಗಹಳ್ಳಿ ಮಲ್ಲೇಶ್ ಸೇರಿದಂತೆ ಹಲವರು ಹಾಜರಿದ್ದರು.

  • ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನುಡಿನಮನ‌ ಕಾರ್ಯಕ್ರಮ

    ಕನ್ನಡ ಓದುಗರ ಸಂಖ್ಯೆಯನ್ನು ಕಾದಂಬರಿಗಳ ಮೂಲಕ ಹೆಚ್ಚಿಸಿದವರು ಎಸ್.ಎಲ್.ಭೈರಪ್ಪ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ರಾಜಘಟ್ಟ ರವಿ ತಿಳಿಸಿದರು.

     

    ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನುಡಿನಮನ‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಎಸ್.ಎಲ್.ಭೈರಪ್ಪ ಅವರು ತಮ್ಮ ಪ್ರತಿಯೊಂದೂ ಕಾದಂಬರಿ ಬರೆಯುವುದಕ್ಕೆ ನಡೆಸುತ್ತಿದ್ದ ಪೂರ್ವ ತಯಾರಿ, ವ್ಯಾಪಕ ಅಧ್ಯಯನ, ಸಂಚಾರ ಗಮನಾರ್ಹವಾದುದು. ಸುದೀರ್ಘ ಕಾಲ ಭೈರಪ್ಪನವರ ಕಾದಂಬರಿಗಳು ಓದುಗರ ಮನಸ್ಸನ್ನು ಆಕರ್ಷಣೆಗೊಳಿಸಿವೆ. ಭೈರಪ್ಪ ಅವರ ಕಾದಂಬರಿಗಳು ಭಾರತದ ವಿವಿಧ ಭಾಷೆಗಳಿಗೆ ಅನುವಾದವಾಗಿವೆ. ವಂಶವೃಕ್ಷ, ಸಾಕ್ಷಿ ಮತ್ತು ಪರ್ವ ಕೃತಿಗಳು ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ ಎಂದರು.

    ಜವಾಹರ ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ, ಸಾಹಿತಿಗಳಿಗೆ ಓದುಗರೇ ಪ್ರಶಸ್ತಿ ಮತ್ತು ಪುರಸ್ಕಾರಗಳು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಗಳನ್ನು ಎಸ್.ಎಲ್.ಭೈರಪ್ಪ ಅವರು ತಮ್ಮ ಸಾಹಿತ್ಯದ ಮೂಲಕ‌ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಗೊಳಿದರು. ಬದುಕು ಮತ್ತು ಅನುಭವಗಳಿಗೆ ಸೃಜನಾತ್ಮಕವಾಗಿ ಅಭಿವ್ಯಕ್ತಪಡಿಸಲು ಕಾದಂಬರಿ ಪ್ರಕಾರವನ್ನು ಮಾಧ್ಯಮವಾಗಿಸಿಕೊಂಡರು. ಯಾವ ಸಾಹಿತ್ಯ ಪಂಥಗಳ ಗುಂಪಿಗೂ ಒಳಗಾಗದೆ ತಮ್ಮದೇ ವ್ಯಕ್ತಿತ್ವದ ಛಾಪು ಮೂಡಿಸಿದರು ಎಂದರು..

     

    ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ಎಸ್.ಎಲ್.ಭೈರಪ್ಪ ಅವರ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೇ, ಮತದಾನ, ನಾಯಿನೆರಳು ಕಾದಂಬರಿಗಳು ಚಲನಚಿತ್ರಗಳಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳಿಗೆ ಪುರಸ್ಕೃತವಾಗಿವೆ. ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದಿದೆ. ಅಪಾರ ಓದುಗ ಮತ್ತು ಅಭಿಮಾನ ಬಳಗವನ್ನು ಹೊಂದಿದ್ದ ಎಸ್.ಎಲ್.ಭೈರಪ್ಪ ಅವರು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.

     

     

    ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಕೋಶಾಧ್ಯಕ್ಷ ಜಿ.ಸುರೇಶ್ ಮಾತನಾಡಿ, ಎಸ್.ಎಲ್.ಭೈರಪ್ಪ ಅವರ ಸಾಹಿತ್ಯ ಸಾಧನೆಯನ್ನು ಪುರಸ್ಕರಿಸಿ ಪದ್ಮಶ್ರೀ  ಪ್ರಶಸ್ತಿ,   ‘ಸರಸ್ವತಿ ಸನ್ಮಾನ್ ಮುಂತಾದ  ಹಲವಾರು ‌ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಎಸ್.ಎಲ್. ಭೈರಪ್ಪನವರು ಚಿಂತನಶೀಲತೆ ಮತ್ತು ಅನನ್ಯ ಅಧ್ಯಯನಶೀಲತೆ ಯುವ ಮತ್ತು ಉದಯೋನ್ಮುಖ ಬರಹಗಾರರಿಗೆ ಸದಾ ದಾರಿದೀಪವಾಗಿರುತ್ತದೆ ಎಂದರು.

     

    ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ ಜಿಲ್ಲಾ ಆಯುಕ್ತ ವೆಂಕಟರಾಜು, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಕಸಾಪ ತೂಬಗೆರೆ ಹೋಬಳಿ ಘಟಕದ ಅಧ್ಯಕ್ಷ ಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ಮೇಲ್ವಿಚಾರಕ ಎ.ಅಣ್ಣಯ್ಯ, ಇಸ್ತೂರು ಕೋದಂಡರಾಮ ಭಜನಾ ಮಂಡಳಿಯು ಕಾರ್ಯದರ್ಶಿ ರಂಗಸ್ವಾಮಯ್ಯ, ಶಿಕ್ಷಕ ಕೋದಂಡರಾಮ್, ಕಲಾವಿದರಾದ ಬಾಶೆಟ್ಟಿಹಳ್ಳಿ ಮಂಜುನಾಥ್, ದರ್ಗಾಜೋಗಿಹಳ್ಳಿ ಮಲ್ಲೇಶ್ ಮುಂತಾದವರು ಭಾಗವಹಿಸಿದ್ದರು.

     

     

  • ಅಕ್ಟೋಬರ್ 2 ರಂದು ನಡೆಯಲಿದೆ ಹಳ್ಳಿಕಾರ್ ರಾಸುಗಳ ಫ್ಯಾಷನ್ ಶೋ

    ಹಳ್ಳಿಕಾರ್ ತಳಿಯನ್ನು ಉಳಿಸುವ ನಿಟ್ಟಿನಲ್ಲಿ ಅಕ್ಟೋಬರ್ 2 ರಂದು ತಾಲ್ಲೂಕಿನ ತೂಬಗೆರೆ ಹೋಬಳಿಯ ದೊಡ್ಡತಿಮ್ಮನಹಳ್ಳಿ ಗ್ರಾಮದ ಶ್ರೀ ಸಪ್ಪಲಮ್ಮ ದೇವಿ ದೇವಾಲಯದ ಬಳಿ ಹಳ್ಳಿಕಾರ್ ಫ್ಯಾಷನ್ ಶೋ ಆಯೋಜನೆ ಮಾಡಲಾಗಿದೆ ಎಂದು ನವಕರ್ನಾಟಕ ಯುವ ಶಕ್ತಿ ವೇದಿಕೆ ತಿಳಿಸಿದೆ.

     

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಹಳ್ಳಿಕಾರ್ ಫ್ಯಾಷನ್ ಶೋ ಕುರಿತು ನವಕರ್ನಾಟಕ ಯುವ ಶಕ್ತಿ ವೇದಿಕೆ ಮುಖಂಡರು ಮಾಹಿತಿ ನೀಡಿದರು.ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಒಟ್ಟಾರೆ ಒಂದು ಹಳ್ಳಿಕಾರ್ ತಳಿಯ ಜೋಡಿಯನ್ನು “ಚಾಂಪಿಯನ್’ ಎಂದು ಆಯ್ಕೆ ಮಾಡಿ ಸದರಿ ರಾಸುಗಳ ಮಾಲೀಕರಿಗೆ ಹೀರೋ ದ್ವಿಚಕ್ರ ವಾಹನವನ್ನು ಬಹುಮಾನವಾಗಿ ಕೊಡಲಾಗುವುದು ಎಂದು ಸಮಿತಿ ತಿಳಿಸಿದೆ.

     

    ಒಟ್ಟು 5 ವಿಭಾಗಗಳಲ್ಲಿ ಈ ಹಳ್ಳಿಕಾರ್ ಫ್ಯಾಷನ್ ಶೋ ನಡೆಯಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಹಳ್ಳಿಕಾರ್ ತಳಿಯ ರಾಸುಗಳಿಗೆ ಸಮಾಧಾನಕರ ಬಹುಮಾನ ನೀಡಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ರಾಸುಗಳನ್ನು ನೋಂದಣಿ ಮಾಡಿಸುವಂತೆ ಮನವಿ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ಕೋರಿದೆ : +917259429132

     

  • K R S (ಕರ್ನಾಟಕ ರಾಜ್ಯ ಸರ್ವ ಶಕ್ತಿ )ಸಮಿತಿಯ ಗೌರವ ರಾಜ್ಯಾಧ್ಯಕ್ಷರಾಗಿ ಬಿ.ಶಿವಶಂಕರ್ ಆಯ್ಕೆ

    K R S (ಕರ್ನಾಟಕ ರಾಜ್ಯ ಸರ್ವ ಶಕ್ತಿ )ಸಮಿತಿಯ ಗೌರವ ರಾಜ್ಯಾಧ್ಯಕ್ಷರಾಗಿ ಬಿ.ಶಿವ ಶಂಕರ್ ರವರನ್ನು ನೇಮಕ ಮಾಡಲಾಗಿದೆ.

     

    ಈ ಕುರಿತು ಮಾತನಾಡಿರುವ ಅವರು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಸದಾ ಜೀವಂತ ಲಂಚಮುಕ್ತ ಸಮಾಜ ನಿರ್ಮಿಸಲು ನಮ್ಮ ಸಮಿತಿ ಪ್ರಾಮಾಣಿಕವಾಗಿ ಶ್ರಮಿಸಲಿದೆ ಎಂದರು.

    ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ನನ್ನ ಮೇಲೆ ನಂಬಿಕೆ ಹಾಗೂ ವಿಶ್ವಾಸದಿಂದ ಹೊಸ ಜವಾಬ್ದಾರಿ ನೀಡಿದ್ದು, ರಾಜ್ಯದ ಪ್ರತಿ ಗ್ರಾಮ ಮಟ್ಟದಿಂದ ಸಮಿತಿ ಬಲಪಡಿಸಲು ಯೋಜನೆ ರೂಪಿಸಲಾಗುವುದು ಭ್ರಷ್ಟಾಚಾರ ಮುಕ್ತ ಸಮಾಜದ ತತ್ವ ಸಿದ್ಧಾಂತಗಳನ್ನು ಹೊತ್ತು ರಾಜ್ಯದ 31 ಜಿಲ್ಲೆಗಳಲ್ಲಿ ಸಮಿತಿಯ ನೂತನ ಸದಸ್ಯರ ತಂಡ ಕಟ್ಟಲಾಗುವುದು ಎಂದರು.

    ನೂತನ ಗೌರವ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಶಿವಶಂಕರ್ ರವರಿಗೆ K R S (ಕರ್ನಾಟಕ ರಾಜ್ಯ ಸರ್ವ ಶಕ್ತಿ )ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಿತೈಷಿ ಗಳು ಅಭಿನಂದನೆ ಸಲ್ಲಿಸಿದ್ದಾರೆ.

     

     

  • ನಿರಂತರ ಅನ್ನದಾಸೋಹ ಸಮಿತಿಗೆ ದಾನಿಗಳ ಅವಶ್ಯಕತೆ ಇದೆ – ಶಶಿಕಲಾ ನಾಗರಾಜ್

    ದೊಡ್ಡಬಳ್ಳಾಪುರ : ಕಳೆದ ಐದು ವರ್ಷಗಳಿಂದ ನಿರಂತರವಾಗಿ ಬಡವರಿಗೆ ನಿರಾಶ್ರಿತರಿಗೆ ನಿರಂತರ ಅನ್ನದಾಸೋಹ ಮಾಡುವ ಕಾರ್ಯವನ್ನು ಮಾಡುತ್ತಿರುವ ನಿರಂತರ ಅನ್ನದಾಸೋಹ ಸಮಿತಿ ಇಂದು 2008 ನೇ ದಿನಕ್ಕೆ ಕಾಲಿಟ್ಟಿದೆ ಈ ಕಾರ್ಯವು ಮತ್ತಷ್ಟು ಉನ್ನತ ಮಟ್ಟದಲ್ಲಿ ಮುಂದುವರೆಯಲಿ ಎಂದು ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ತಿಳಿಸಿದರು.

    ನಿರಂತರ ಅನ್ನದಾಸೋಹ ಸಮಿತಿಯ 2008ನೇ ದಿನದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಪ್ರತಿನಿತ್ಯ ನೂರಾರು ಕುಟುಂಬಗಳು ಅನ್ನದಾಸೋಹ ಸಮಿತಿಯ ಮೇಲೆ ಅವಲಂಬಿತರಾಗಿದ್ದಾರೆ ನಿತ್ಯ ನಿರಂತರ ಸಾಗುತ್ತಿರುವ ಈ ಕಾರ್ಯಕ್ಕೆ ದಾನಿಗಳ ನೆರವು ಅಗತ್ಯವಾಗಿದ್ದು ನಿರಂತರ ಅನ್ನದಾಸೋಹ ಸಮಿತಿಗೆ ಸಹಾಯಸ್ತದ ಅವಶ್ಯಕತೆ ಇದೆ ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ (ಅಪ್ಪಿ) ಮಾತನಾಡಿ ಇಂದಿನ ಈ ಕಾರ್ಯಕ್ರಮದ ಗರಿಮೆ ಮಲ್ಲೇಶ್ ಮತ್ತು ತಂಡಕ್ಕೆ ಸಲ್ಲುತ್ತದೆ ದಾನಿಗಳನ್ನು ಹುಡುಕಿ ಅವರನ್ನು ಕರೆತಂದು ಅವರ ವಿಶೇಷ ದಿನಗಳನ್ನು ಈ ವೇದಿಕೆಯಲ್ಲಿ ಸಂಭ್ರಮಿಸುವ ಮೂಲಕ ನೂರಾರು ಕುಟುಂಬಗಳಿಗೆ ಆಹಾರ ವಿತರಣೆ ಮಾಡುತ್ತಿರುವ ಅನ್ನ ದಾಸೋಹ ಸಮಿತಿಗೆ ಶುಭವಾಗಲಿ ಎಂದರು.

     

    ನಾಯಕ ನಟ (ವೀಡೆ) ಸುಧೀರ್ ನಮ್ಮ ದೈವಪುತ್ರ ಚಿತ್ರದ ಚಿತ್ರೀಕರಣಕ್ಕೆ ಮಲ್ಲೇಶ್ ಸಾಕಷ್ಟು ಸಹಕರಿಸಿದ್ದಾರೆ. ಅವರು ನನಗೆ ಕಲಾವಿದರಾಗಿಗೊತ್ತು ಆದರೆ ಅವರ ಸಮಾಜ ಸೇವೆ ಇಷ್ಟು ವಿಶಾಲವಾಗಿದೆ ಎಂಬುದು ಈ ಕಾರ್ಯಕ್ರಮಕ್ಕೆ ಬಂದ ನಂತರ ತಿಳಿದಿದೆ . ಈ ಸ್ಥಳದಲ್ಲಿ ಪ್ರತಿನಿತ್ಯ ನೂರಾರು ಕಡು ಬಡವರು, ನಿರಾಶ್ರಿತರು, ಬಡ ಕುಟುಂಬಗಳು ಆಹಾರ ಸೇವಿಸುತ್ತವೆ . ಪ್ರತಿನಿತ್ಯ ಆಹಾರ ಒದಗಿಸುವುದು ಸುಲಭದ ಕೆಲಸವಲ್ಲ ಅಂತಹ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿರುವ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ ಎಂದರು.

    ಈ ಸಂದರ್ಭದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ನಾಗರಾಜು, ಸಂಖ್ಯಾ ಶಾಸ್ತ್ರಜ್ಞ ಪುಷ್ಪಲತಾ, ನಿರ್ದೇಶಕ ಸೈಯದ್ ಆಲಿ,ನಟ ರಾಮ್ ಜೀ,ನಟಿ ಅನಿತಾ ಸೇರಿದಂತೆ ಸ್ಥಳೀಯ ಮುಖಂಡರು, ಕಲಾವಿದರು, ಗ್ರಾಮಸ್ಥರು ಹಾಜರಿದ್ದರು.

  • ಆರ್‌ಎಲ್‌ಜೆಐಟಿ ಬೆಳ್ಳಿ ಹಬ್ಬ, ಜಾಲಪ್ಪ ಶತಮಾನೋತ್ಸವಕ್ಕೆ ಚಾಲನೆ

    ದೊಡ್ಡಬಳ್ಳಾಪುರ :ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಯ ರಜತ ಮಹೋತ್ಸವ ಹಾಗೂ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಆರ್.ಎಲ್.ಜಾಲಪ್ಪ ಜನ್ಮ ಶತಮಾನೋತ್ಸವ ಹಿನ್ನಲೆ 1 ತಿಂಗಳ ಕಾರ್ಯಕ್ರಮ ಸರಣಿಗೆ ಚಾಲನೆ ನೀಡಲಾಯಿತು.

     

    ಶ್ರೀ ದೇವರಾಜ್ ಅರಸ್‌ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮತ್ತು ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಆರ್‌ಎಲ್‌ಜೆಐಟಿ ಬೆಳ್ಳಿ ಹಬ್ಬ ಮತ್ತು ಜಾಲಪ್ಪ ಶತಮಾನೋತ್ಸವ ಸಮಾರಂಭಗಳ ಲಾಂಛನ ಅನಾವರಣ ಮಾಡಿದರು. ಸಂಸ್ಥೆಯ ಆವರಣದಲ್ಲಿ ಗಣಹೋಮ ನಡೆಯಿತು.

    ಅವರು ಮಾತನಾಡಿ, ಅಕ್ಟೋಬರ್‌ 17, 18ರಂದು ಕ್ಯಾಂಪಸ್‌ನ ರಜತ ಮಹೋತ್ಸವ ನಡೆಯಲಿದ್ದು, ಈ ವೇಳೆ ಘಟಿಕೋತ್ಸವ, ಹಳೆಯ ವಿದ್ಯಾರ್ಥಿಗಳ ಸಮಾಗಮ, ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ, ಸಾಂಸ್ಕೃತಿಕ ಸಂಜೆ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್‌ 19ರಂದು ಜಾಲಪ್ಪ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

     

    ಈ ಹಿನ್ನಲೆಯಲ್ಲಿ 1 ತಿಂಗಳಿಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲೋತ್ಸವ-2025 ಶೀರ್ಷಿಕೆಯಡಿ ಹಮ್ಮಿಕೊಳ್ಳಲಾಗಿದ್ದು, ಪ್ರತಿ ದಿನ 2 ಸಾಂಸ್ಕೃತಿಕ ಚಟುವಟಿಕೆ, ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

     

    ಗೌರ್ನಿಂಗ್‌ ಕೌನ್ಸಿಲ್ ಸದಸ್ಯ ಜೆ.ಆರ್.ರಾಕೇಶ್, ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಡೀನ್‌ ಡಾ.ಶ್ರೀನಿವಾಸರೆಡ್ಡಿ, ಕಾರ್ಯಕ್ರಮ ಸಂಯೋಜಕ ಡಾ.ಎನ್.ಬಿ.ಶಂಕರ್, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಲಯನ್ಸ್‌ ಜಿಎಂಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ವಿವಿಧ ಶೈಕ್ಷಣಿಕ ಘಟಕಗಳು ಮತ್ತು ವಿಭಾಗಗಳ ಮುಖ್ಯಸ್ಥರು, ಕಾರ್ಯಕ್ರಮ ಆಯೋಜನಾ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

     

  • ದೊಡ್ಡಬಳ್ಳಾಪುರ : ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಮತ್ತೊಂದು ವಿಭಾಗ ಕಾರ್ಯರಂಭ : ಪ್ರಥಮ ವರ್ಷದ ಎಲ್ ಎಲ್ ಬಿ(law) ತರಗತಿಗಳು ಪ್ರಾರಂಭ

    ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಲಾ ಕಾಲೇಜಿನಲ್ಲಿ ನಾಳೆ (ಸೆ.24) ಯಿಂದ ಪ್ರಥಮ ವರ್ಷದ ಎಲ್ ಎಲ್ ಬಿ(law) ತರಗತಿಗಳು ಅಧಿಕೃತವಾಗಿ ಪ್ರಾರಂಭವಾಗಲಿವೆ ಎಂದು ಪ್ರಾಂಶುಪಾಲ ಡಾ.ವೆಂಕಟೇಶ್ ಟಿ.ಬಿ ತಿಳಿಸಿದ್ದಾರೆ.

     

    ಸೆ.24ರ ಬುಧವಾರ ಬೆಳಗ್ಗೆ 9:30ರಿಂದ ತರಗತಿಗಳು ಪ್ರಾರಂಭವಾಗಿ ಮಧ್ಯಾಹ್ನ 2:30ಕ್ಕೆ ಮುಕ್ತಾಯವಾಗಲಿವೆ. ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಇರಲಿದೆ. ಈಗಾಗಲೇ ಮೂರು ವರ್ಷದ ಎಲ್ ಎಲ್ ಬಿ ಪದವಿಗೆ ದಾಖಲಾಗಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ‌ ನಾಳೆಯಿಂದ ಪ್ರಾರಂಭವಾಗುವ ತರಗತಿಗಳಿಗೆ ಹಾಜರಾಗಬೇಕು ಎಂದು ತಿಳಿಸಿದರು.

    ಮೂರು ವರ್ಷದ ಎಲ್ ಎಲ್ ಬಿ ಪದವಿಯ ಮೊದಲ ಬ್ಯಾಚ್ ನಲ್ಲಿ ಒಟ್ಟು 9 ಮಂದಿ ವಿದ್ಯಾರ್ಥಿನಿಯರು, 51 ಮಂದಿ ವಿದ್ಯಾರ್ಥಿಗಳು ಸೇರಿ 60 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

     

    ಕಾನೂನು ಪದವಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗಾಗಿ ಇದೇ ಮೊದಲ ಬಾರಿಗೆ ಶ್ರೀ ಕೊಂಗಾಡಿಯಪ್ಪ ಕಾಲೇಜ್ ಕ್ಯಾಂಪಸ್ ನಲ್ಲಿ ಲಾ ಕೋರ್ಸ್ ಪ್ರಾರಂಭ ಮಾಡಲಾಗಿದೆ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯಲು ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ದೂರದ ಜಿಲ್ಲೆಗಳಿಗೆ ಹೋಗಿ ಪದವಿ ಪಡೆಯಲಾಗುತ್ತಿತ್ತು. ಇದೀಗ ಜಿಲ್ಲೆಯ ಅದರಲ್ಲೂ ದೊಡ್ಡಬಳ್ಳಾಪುರ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಲಾ ಕೋರ್ಸ್ ನ್ನು ಈ ವರ್ಷದಿಂದ ಆರಂಭಿಸಲಾಗಿದೆ ಎಂದು ಹೇಳಿದರು.

     

    ತರಗತಿಗಳನ್ನು ಪ್ರಾರಂಭ ಮಾಡಲು ಈಗಾಗಲೇ ಸಕಲ ಸಿದ್ಧತೆ ನಡೆಸಲಾಗಿದೆ. ನುರಿತ ಉಪನ್ಯಾಸಕರು, ಮೂಟ್ ಕೋರ್ಟ್ ವ್ಯವಸ್ಥೆ, ಮಧ್ಯಾಹ್ನದ ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರೆ ಪಾಠ ಪ್ರವಚನಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

    ತರಗತಿಗಳಿಗೆ ನ್ಯಾಯಾಧೀಶರು, ಪ್ರಖ್ಯಾತ ವಕೀಲರು, ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಕಾನೂನು ತರಬೇತಿ ನೀಡಲಾಗುವುದು ಎಂದರು.

  • 2008ನೇ ದಿನಕ್ಕೆ ಕಾಲಿಟ್ಟ ನಿರಂತರ ಅನ್ನದಾಸೋಹ ಕಾರ್ಯಕ್ರಮ : ದಾನಿಗಳ ನೆರವು ಕಾರ್ಯಕ್ರಮಕ್ಕೆ ಶಕ್ತಿ ಎಂದ ದಾಸೋಹ ಸಮಿತಿ

    ದೊಡ್ಡಬಳ್ಳಾಪುರ : ಕೊರೊನಾ ಸಮಯದಲ್ಲಿ ಹಸಿದ ಹೊಟ್ಟೆಗಳನ್ನು ತುಂಬಿಸುವ ಆಶಯದಿಂದ ಮಲ್ಲೇಶ್ ನೇತೃತ್ವದಲ್ಲಿ ಪ್ರಾರಂಭವಾದ ನಿರಂತರ ಅನ್ನದಾಸೋಹ ಕಾರ್ಯಕ್ರಮವು ಇಂದಿಗೆ 2,000 ದಿನಗಳನ್ನು ಪೂರೈಸಿ ಮುಂದೆ ಸಾಗುತ್ತಿದೆ ಎಂದು ಖ್ಯಾತ ವಕೀಲ ಹಾಗೂ ಸಮಾಜ ಸೇವಕ ರವಿ ಮಾವಿನಕುಂಟೆ ತಿಳಿಸಿದರು.

    ನಗರದ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿರಂತರ ಅನ್ನದಾಸೋಹ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಕೇವಲ ಒಂದೆರಡು ದಿನ ಆಹಾರ ವಿತರಣೆ ಮಾಡುವುದೇ ಕಷ್ಟಕರವಾಗಿದೆ ಇಂತಹ ಸಂದರ್ಭದಲ್ಲಿ ಮಲ್ಲೇಶ್ ಮತ್ತು ತಂಡ ದಾನಿಗಳ ನರವಿನಿಂದ ಕಳೆದ 2008 ದಿನಗಳಿಂದಲೂ ನಿರಂತರ ಕಡು ಬಡವರಿಗೆ ನಿರಾಶ್ರಿತರಿಗೆ ಆಹಾರ ಒದಗಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಷ್ಟೇ ಯೋಜನೆಗಳನ್ನು ರೂಪಿಸಿದರು ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಗಲಿಲ್ಲ ನಮ್ಮ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳುವ ರಾಜ್ಯ ಹಾಗೂ ಕೇಂದ್ರ ರಾಜಕಾರಣಿಗಳು ಒಮ್ಮೆ ಬಂದು ಬಡವರ ಕಾಲೋನಿಗಳಲ್ಲಿ ವಾಸ್ತವಂಶ ಪರಿಶೀಲಿಸಲಿ ಬಡತನ ರೇಖೆಗಿಂತ ಕೆಳಗೆ ಜೀವನ ನಡೆಸುವ ಎಷ್ಟೋ ಕುಟುಂಬಗಳು ದಿನ ಹಸಿವಿನಿಂದ ಸಾಯುತ್ತಿವೆ ಅಂತಹ ಕುಟುಂಬಗಳಿಗೆ ನಿರಂತರ ಅನ್ನದಾಸೋಹಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.

    ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಮಾತನಾಡಿ ಪ್ರತಿನಿತ್ಯ ಹಸಿದವರಿಗೆ ಆಹಾರ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಈ ಕಾರ್ಯಕ್ರಮವು ಕೇವಲ ಆಹಾರ ವಿತರಣೆಗೆ ಸೀಮಿತವಾಗದೆ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ , ವೃದ್ಧರ ಆರೋಗ್ಯಕ್ಕೆ, ಕಡುಬಡ ಕುಟುಂಬಗಳ ದೈನಂದಿಕ ಬದುಕಿಗೆ ಸಾಕಷ್ಟು ಸಹಕಾರಿಯಾಗಿದೆ . ಈ ಉತ್ತಮ ಕಾರ್ಯ ಮತ್ತಷ್ಟು ಹೆಚ್ಚಾಗಿ ನಡೆಯಲಿ ಮಲ್ಲೇಶ್ ಮತ್ತು ದಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

    ಸಮಾಜ ಸೇವಕರಾದ ಸೇಲ್ವಮ್ ಮಾತನಾಡಿ ಪ್ರತಿನಿತ್ಯ ದಾನಿಗಳ ವಿಶೇಷಗಳನ್ನು ನಿರಂತರ ಅನ್ನದಾಸೋಹ ಸಮಿತಿ ವೇದಿಕೆಯಲ್ಲಿ ಸಂಭ್ರಮಿಸಲಾಗುತ್ತದೆ. ದಾನಿಗಳ ಸಂಭ್ರಮ ನೂರಾರು ಜನರಿಗೆ ಆಹಾರ ಒದಗಿಸುತ್ತದೆ. ದುಂದು ವೆಚ್ಚ ಮಾಡಿ ಸಂಭ್ರಮಿಸುವ ಬದಲು ಅರ್ಥಪೂರ್ಣವಾಗಿ ನೂರಾರು ಮಕ್ಕಳಿಗೆ, ವಯೋವೃದ್ದರಿಗೆ , ಹಸಿದವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ತಮ್ಮ ವಿಶೇಷ ದಿನಗಳನ್ನು ಆಚರಿಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಕಾರ್ಯಕ್ರಮ ಪ್ರಾರಂಭಿಸಿದ ಸಂದರ್ಭದಲ್ಲಿ ಕೆಲವು ಮಂದಿ ಮಾತ್ರ ಬರುತ್ತಿದ್ದರು. ದಿನಕಳೆದಂತೆ ಇಲ್ಲಿಗೆ ಬರುವ ನಿರಾಶ್ರಿತ ಕಡುಬಡವರ ಸಂಖ್ಯೆ ಹೆಚ್ಚಾಗುತ್ತಿದೆ. ದಾನಿಗಳ ನೆರವಿನಿಂದ ಶಕ್ತಿ ಮೀರಿ ಕಾರ್ಯಕ್ರಮ ಕೈಗೊಳ್ಳುತ್ತಿದ್ದೇವೆ . ಈ ಕಾರ್ಯಕ್ರಮಕ್ಕೆ ದಾನಿಗಳ ಅವಶ್ಯಕತೆ ಇದೆ ಸಮಾಜದಲ್ಲಿ ಉಳ್ಳವರು ಸಾಕಷ್ಟು ಮಂದಿ ಇದ್ದಾರೆ ತಮ್ಮ ವಿಶೇಷ ದಿನಗಳನ್ನು ನಮ್ಮ ಸಮಿತಿಯೊಟ್ಟಿಗೆ ಆಚರಿಸುವ ಮೂಲಕ ಹಸಿದ ಹೊಟ್ಟೆ ಗಳಿಗೆ ಆಹಾರ ವಿತರಣೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ರೈಲ್ವೆ ಸ್ಟೇಷನ್ ಮಲ್ಲೇಶ್, ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಶಿಕಲಾ ನಾಗರಾಜು, ಕಸವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಅಪ್ಪಿ, ಪಿ ಸಿ ಲಕ್ಷ್ಮೀನಾರಾಯಣ, ಶಿವಕುಮಾರ್, ರಾಘವೇಂದ್ರ, ಶಕ್ತಿ ಜ್ಞಾನದೇವಿ ವೀರಭದ್ರ ಬಸಪ್ಪ ಕ್ಷೇತ್ರದ ಪ್ರಧಾನ ಅರ್ಚಕರಾದ ನವೀನ್ ಕುಮಾರ್, ದೊಡ್ಡಬಳ್ಳಾಪುರ ಕಲಾವಿದರ ಸಂಘದ ಅಧ್ಯಕ್ಷ ಎ ಸಿ ಅಶೋಕ್,ಬಿ ಜಿ ಅಮರ್ ನಾಥ್ , ಸೇಲ್ವಮ್, ಶ್ರೀನಿವಾಸ್ ಗುರೂಜಿ, ಶ್ರೀನಿವಾಸ್ ದೊಡ್ಡಬೆಳವಂಗಲ, ನಟ ವೀಡೆ ಸುಧೀರ್, ಸಮಾಜ ಸೇವಕಿ ಅಮೀನಾ ಕೊಡಗು, ದೈವ ಪುತ್ರ ಚಿತ್ರ ತಂಡದ ಎಲ್ಲಾ ಕಲಾವಿದರು ಹಾಜರಿದ್ದರು.

  • ಯಲಹಂಕ : 1982ನೇ ಮದ್ಯವರ್ಜನ ಶಿಬಿರ ಉದ್ಘಾಟನಾ ಸಮಾರಂಭ

    ಯಲಹಂಕ : ಮದ್ಯವರ್ಜನ ಶಿಬಿರ ಇದೊಂದು ಪವಿತ್ರ ಕಾರ್ಯಕ್ರಮ. ಇದು ಕೇವಲ ಧರ್ಮಸ್ಥಳದ ಕಾರ್ಯಕ್ರಮವಲ್ಲ. ಬದಲಾಗಿ ಇದೊಂದು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮ. ಆದ್ದರಿಂದ ಸಾರ್ವಜನಿಕರ ತನು – ಮನ – ಧನ ಸಹಕಾರದೊಂದಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಜಿಲ್ಲಾ ನಿರ್ದೇಶಕ ಉಮರಬ್ಬ ತಿಳಿಸಿದರು.

     

    ರಾಜನಕುಂಟೆ ಅದ್ದಿಗಾನಹಳ್ಳಿಯ ಶ್ರೀ ಪಟಾಲಮ್ಮ ದೇವಿ ಕಲ್ಯಾಣ ಮಂಟಪದಲ್ಲಿ ನಡೆದ 1982ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರಂಭ, ವಿಸ್ತರಣೆಯ ಅನುಭವ ಹಾಗೂ ಅಸಾಮಾನ್ಯ ಸಾಧನೆಗಳ ಪರಿಚಯದೊಂದಿಗೆ ಸಮುದಾಯದ ಕಾರ್ಯಕ್ರಮಗಳಾದ ನಮ್ಮೂರು ನಮ್ಮ ಕೆರೆ, ರುದ್ರಭೂಮಿ ಅನುದಾನ, ಶಿಥಿಲಗೊಂಡ ದೇವಸ್ಥಾನಗಳ ಜೀರ್ಣೋದ್ಧಾರ, ಶಾಲೆಗಳಿಗೆ ಪೀಠೋಪಕರಣ ಒದಗಣೆ, ಜ್ಞಾನದೀಪ ಕಾರ್ಯಕ್ರಮದ ಮುಖೇನ ಗೌರವ ಶಿಕ್ಷಕರ ಒದಗಣೆ, ಶಿಷ್ಯವೇತನ, ಮಾಸಾಶನ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ, ಹಾಗೂ ಧಾರ್ಮಿಕ ಕ್ಷೇತ್ರ ಹೀಗೆ ಹಲವು ವಿಭಾಗಗಳಲ್ಲಿ ಜನಮೆಚ್ಚುಗೆಯೊಂದಿಗೆ ಸಂಸ್ಥೆಯು ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದೆ ಎಂದರು.

     

    ಕಾರ್ಯಕ್ರಮದ ಉದ್ಘಾಟನೆಯನ್ನು ಸಾಂಕೇತಿಕವಾಗಿ ವೇದಿಕೆಯಲ್ಲಿದ್ದ ಗಣ್ಯರು ನೆರವೇರಿಸಿದರು

     

     

    ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯನಾಯಕ್ ಜನಜಾಗೃತಿ ವೇದಿಕೆ ಪ್ರಾರಂಭ, ಜನಜಾಗೃತಿ ವೇದಿಕೆ ಮೂಲಕ ಸಾಮಾಜಿಕ ಆಂದೋಲನ, ಮದ್ಯವರ್ಜನ ಶಿಬಿರ ಅನುಷ್ಠಾನ, ಮದ್ಯವರ್ಜನ ಶಿಬಿರದ ರೂಪುರೇಷೆ, ಮದ್ಯವರ್ಜನ ಶಿಬಿರದ ದೈನಂದಿನ ದಿನಚರಿ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು

     

    ನಂದಕುಮಾರ್ ಪಿ ಪಿ ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀಮತಿ ಪ್ರೆಸಿಲ್ಲಾ ಡಿಸೋಜಾ ಆರೋಗ್ಯ ಸಹಾಯಕಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಶ್ರೀ ದರ್ಶನ್ ಎಂ.ಎಸ್ ಮೇಲ್ವಿಚಾರಕರು ಜನಜಾಗೃತಿ ವಿಭಾಗ ಪ್ರಾದೇಶಿಕ ಕಛೇರಿ ಬೆಂಗಳೂರು ಇವರುಗಳು ಉಪಸ್ಥಿತರಿದ್ದು ಎಂಟು ದಿನಗಳ ಮದ್ಯವರ್ಜನ ಶಿಬಿರವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

     

     

    ಕಾರ್ಯಕ್ರಮದಲ್ಲಿ ಯೋಜನೆಯ ಮಾರಸಂದ್ರ ವಲಯದ ಮೇಲ್ವಿಚಾರಕರಾದ ಭಾರತಿ, ಸೇವಾಪ್ರತಿನಿಧಿಗಳು, ಯಲಹಂಕ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು , ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಸೇವಾಪ್ರತಿನಿಧಿಗಳಾದ ಮಾಲಾ, ಶಾರದ ನೀಲಮ್ಮ ಪಾಟೀಲ್, ಸವಿತಾ ಶೆಟ್ಟಿ, ಸೇರಿದಂತೆ ಹಲವರು ಹಾಜರಿದ್ದರು.

  • ಲಾವಣ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ “ಶಿಕ್ಷಕರ ದಿನಾಚರಣೆ” ಸಂಭ್ರಮ

    ದೊಡ್ಡಬಳ್ಳಾಪುರ : ಲಾವಣ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ವಿನೂತನವಾಗಿ ಆಚರಣೆ ಮಾಡಿದರು. ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಜೊತೆಗೆ ಸಂಸ್ಥೆಯ ಎಲ್ಲಾ ಉಪನ್ಯಾಸಕರುಗಳಿಗೆ ಶಿಕ್ಷಕರಿಗೆ ಗಿಡಗಳನ್ನು ನೀಡುವ ಮೂಲಕ ಆಚರಿಸಲಾಯಿತು.

    ಈ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಗೌರವಕಾರ್ಯದರ್ಶಿಗಳಾದ ವಿಶ್ವಾಸ್ ಹನುಮಂತೇಗೌಡ ರವರು ಮಾತನಾಡಿ ವಿದ್ಯಾರ್ಥಿಗಳು ಗುರು ಹಿರಿಯರ ಹಾಗೂ ಗುರುಗಳಿಗೆ ಗೌರವವನ್ನು ಸಲ್ಲಿಸಿದಾಗ ಮಾತ್ರ ಶಿಕ್ಷಕರ ದಿನಾಚರಣೆಗೆ ಅರ್ಥ ಬರುತ್ತದೆ ಹಾಗೂ ಪರಿಸರವನ್ನು ರಕ್ಷಿಸುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಿರುತ್ತದೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು.

    ಪ್ರಾಂಶುಪಾಲ ಎಂ ಸಿ ಮಂಜುನಾಥ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಉತ್ತಮ ನಡವಳಿಕೆ ರೂಡಿಸಿಕೊಳ್ಳಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.