Blog

  • ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಲಿ, ಪೌರ ಕಾರ್ಮಿಕರಾಗಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲ ಸೇವಗಳೂ ಪವಿತ್ರವೇ: ಸಿಎಂ

    ಮೇ 1 ರ ಕಾರ್ಮಿಕ ದಿನಾಚರಣೆಯಂದು ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದರು.

     

    ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಮಹಾ ಸಂಘದ 25 ನೇ ವಾರ್ಷಿಕೋತ್ಸವ ಮತ್ತು ಪೌರ ಕಾರ್ಮಿಕ ಸಮುದಾಯದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಬಸವಣ್ಣನವರ ವಚನದಂತೆ ಕಾಯಕವೇ ಕೈಲಾಸ ಎಂದು ಶ್ರಮಿಸುತ್ತಿದ್ದೀರಿ. ಪೌರ ಕಾರ್ಮಿಕರು ಮಾಡುವ ಕೆಲಸಕ್ಕೆ ಇತರರು ಬರುವುದು ಕಡಿಮೆ. ಹೀಗಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ, ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯ ಎಂದರು.

     

    ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಲಿ, ಪೌರ ಕಾರ್ಮಿಕರಾಗಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲ ಸೇವಗಳೂ ಪವಿತ್ರವೇ. ನಿಮ್ಮನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುವುದು ಸರಿಯಲ್ಲ. ನಿಮಗೂ ವೃತ್ತಿಗೌರವ, ಘನತೆ ಸಿಗಬೇಕು. ಇದಕ್ಕಾಗಿ ಸೇವೆ ಕಾಯಂ ಮಾಡಲಾಗುವುದು ಎಂದರು.

     

    *ವಾಹನ ಚಾಲಕರಿಗೂ ಕಾಯಂ*

    ಪೌರ ಕಾರ್ಮಿಕರ ಜೊತೆಗೆ ವಾಹನ ಚಾಲಕರ ಸೇವೆಯನ್ನೂ ಗುತ್ತಿಗೆಯಿಂದ ತೆಗೆದು ಕಾಯಂ‌ಮಾಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

    ಪೌರ ಕಾರ್ಮಿಕರ ಮಕ್ಕಳು ವಿದ್ಯಾವಂತರಾಗಬೇಕು. ವಿದ್ಯಾವಂತರಾದರೆ ಮಾತ್ರ ಸ್ವಾಭಿಮಾನಿಗಳಾಗಲು ಸಾಧ್ಯ. ಮಕ್ಕಳಿಗೆಲ್ಲಾ ಶಿಕ್ಷಣ ಕೊಡಿಸಿ. ಪ್ರತಿಯೊಬ್ಬರೂ ಪ್ರತಿಭಾವಂತರೇ. ಅವಕಾಶ ಸಿಗುವುದಷ್ಟೆ ಮುಖ್ಯ. ಅವಕಾಶ ಸಿಕ್ಕರೆ ಎಲ್ಲರೊಳಗಿನ ಪ್ರತಿಭೆ ಹೊರಗೆ ಬರುತ್ತದೆ ಎಂದರು.

    *ನಗದು ರಹಿತ ಆರೋಗ್ಯ ಕಾರ್ಡ್*

    ಪೌರಕಾರ್ಮಿಕ ಸಮುದಾಯಕ್ಕೆ ನಗದು ರಹಿತ ಆರೋಗ್ಯ ಕಾರ್ಡ್ ನೀಡಲಾಗುವುದು‌. ಕಾರ್ಮಿಕರ ಸಿಂಧುತ್ವದ ಸಮಸ್ಯೆ ಬಗೆಹರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಿಎಂ ಭರವಸೆ ನೀಡಿದರು. ನೀವೆಲ್ಲಾ ಈಗ ಕಷ್ಟ ಪಟ್ಟು ಶುಚಿತ್ವದ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಮಕ್ಕಳೂ ಇದೇ ಕೆಲಸ ಮಾಡಬಾರದು. ನಿಮ್ಮ ಮಕ್ಕಳು ಇತರೆ ಕೆಲಸಗಳಿಗೆ ಹೋಗಬೇಕು. ಆ ರೀತಿ ನೀವು ಬೆಳೆಯಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

    ಪ್ರತೀ ವರ್ಷ ಒಂದು ಸಾವಿರ ಪೌರ ಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಪೌರ ಕಾರ್ಮಿಕ ಸಮುದಾಯವೂ ವಿಶ್ವ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

  • ಸರ್ಕಾರಿ ಕಚೇರಿಗಳಲ್ಲಿ ಹುಟ್ಟು ಹಬ್ಬದ ಆಚರಣೆ ನಿಲ್ಲಿಸಿ ಸರ್ಕಾರದ ಆದೇಶವನ್ನು ಪಾಲಿಸಿ – ಪುರುಷೋತ್ತಮ್ ಗೌಡ

    ದೊಡ್ಡಬಳ್ಳಾಪುರ: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹುಟ್ಟು ಹಬ್ಬ ಆಚರಿಸಿಕೊಳ್ಳುವುದನ್ನು ನಿಲ್ಲಿಸಬೇಕು, ಸರ್ಕಾರಿ ಆದೇಶವಿದ್ದರೂ ಕೆಲ ಅಧಿಕಾರಿಗಳು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ಇಂತಹ ಆಚರಣೆಗಳನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ) ಖಂಡಿಸುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

    ಈ ಕುರಿತು ಮಾತನಾಡಿರುವ ಅವರು ಸರ್ಕಾರಿ ಹುದ್ದೆಯಲ್ಲಿರುವ ಅಧಿಕಾರಿಗಳು ತಮ್ಮ ಹುಟ್ಟುಹಬ್ಬವನ್ನು ಸರ್ಕಾರಿ ಕಚೇರಿಗಳಲ್ಲಿ ಆಚರಿಸಿಕೊಳ್ಳದಂತೆ ಸರ್ಕಾರ ಈಗಾಗಲೇ ಅಧಿಕೃತ ಆದೇಶ ಹೊರಡಿಸಿದ್ದರು, ಕೆಲ ಅಧಿಕಾರಿಗಳು ಸರ್ಕಾರದ ಆದೇಶವನ್ನು ಲೆಕ್ಕಿಸದೆ ತಮ್ಮ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವುದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಹರಿಬಿಡುತ್ತಿದ್ದು, ಸರ್ಕಾರದ ಆದೇಶವನ್ನು ಧಿಕ್ಕರಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಹುದ್ದೆಯ ಅಧಿಕಾರಿಗಳು ಈ ಕುರಿತು ಗಮನವಹಿಸಬೇಕಿದೆ. ಇಂತಹ ಆಚರಣೆ ಸರ್ಕಾರಿ ಅಧಿಕಾರಿಗಳಿಗೆ ಶೋಭೆತರುವಂತದ್ದಲ್ಲ ಸಂಘಟನೆಯ ಮುಖಂಡರು ಪ್ರತಿಭಟನೆಗಳಿಗೆ ಮುಂದಾಗುವ ಮುನ್ನವೇ ಅಧಿಕಾರಿಗಳು ಎಚ್ಚರಗೊಂಡರೆ ಸೂಕ್ತ..ಎಂದು ತಿಳಿಸಿದ್ದಾರೆ.

  • ಜನಪದ ಕಲಾವಿದೆ ನಾಗಸಂದ್ರ ಪಾರ್ವತಮ್ಮ ರವರಿಗೆ ಗೌರವ ಡಾಕ್ಟರೇಟ್

    ದೊಡ್ಡಬಳ್ಳಾಪುರ : ಹದಿನೆಂಟು ವರ್ಷಗಳ ನಿರಂತರ ಕಲಾ ಸೇವೆ ಗುರುತಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿ ಹಳ್ಳಿ ಪ್ರತಿಭೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿರುವುದು ಸಂತಸ ತಂದಿದೆ ಎಂದು ಕಲಾವಿದೆ ಪಾರ್ವತಮ್ಮ ತಿಳಿಸಿದ್ದಾರೆ.

    ಸೋಬಾನೇ ಪದ, ಭಜನೆ,ಭಕ್ತಿ ಗೀತೆ ,ಚಿತ್ರಗೀತೆಗಳು ಸೇರಿದಂತೆ ಹಲವು ಬಗೆಯ ಹಾಡುಗಳನ್ನು ಹಾಡುವ ಮೂಲಕ ಸತತ 18 ವರ್ಷಗಳ ಕಲಾ ಸೇವೆ ಸಲ್ಲಿಸಿದ್ದೇನೆ, ಕೌಟುಂಬಿಕ ಸಂಕಷ್ಟಗಳ ನಡುವೆಯೂ ಛಲ ಬಿಡದೆ ನಿರಂತರ ಕಲಾ ಸೇವೆಗೆ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ , ಬೇರೆಯವರು ಹಾಡುವಾಗ ನನಗೂ ಆಡಬೇಕು ಅನಿಸುತ್ತಿತ್ತು ಹಾಗಾಗಿ ಹಾಡುವುದನ್ನು ಕಲಿತೆ ಮನೆಯಲ್ಲಿ ನಿರಂತರ ವಿರೋಧ ವ್ಯಕ್ತವಾಗುತ್ತಿದ್ದರು ಛಲ ಬಿಡದೆ ನನ್ನದೇ ಸ್ವಂತ ತಂಡವನ್ನು ಕಟ್ಟಿಕೊಂಡು ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದೇನೆ, ಇಂದು ನಾನು ಮಾಡಿರುವ ಸೇವೆಯನ್ನು ಗುರುತಿಸಿ

    ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿ ಗೌರವ ಡಾಕ್ಟರ ನೀಡಿದೆ, ಮುಂದೆ ನನ್ನಂತೆ ನಾ ತಂಡದವರು ಸಹ ಡಾಕ್ಟರೇಟ್ ಪಡೆಯುವ ಮಟ್ಟಕ್ಕೆ ಬೆಳೆಯಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ಕಲಾವಿದೆ ಪಾರ್ವತಮ್ಮ ಹೇಳಿದ್ದಾರೆ .

    ಇಂದಿನ ಮಕ್ಕಳು ಕೇವಲ ಮೊಬೈಲ್ ಗೆ ಸೀಮಿತರಾಗಿದ್ದಾರೆ ಅವರನ್ನು ಇಂತಹ ಜನಪದ ಕಲೆಗಳತ್ತಾ ಸೆಳೆಯುವರಿಟ್ಟಿನಲ್ಲಿ ತರಬೇತಿ ಕೊಡಿಸುವ ಉದ್ದೇಶ ನನ್ನದು ಹಾಗಾಗಿ ಮನೆಯಲ್ಲಿ ಅಗತ್ಯವಿರುವ ಸಂಗೀತ ವಾದ್ಯಗಳನ್ನು ಪರಿಮಿತಿ ಪಡೆದಿರುವ ಶಿಕ್ಷಕರನ್ನು ನೇಮಿಸುವ ಮೂಲಕ ಮಕ್ಕಳಿಗೆ ಸಂಗೀತ ಜ್ಞಾನ ಕೊಡಲು ಮುಂದಾಗಿದ್ದೇವೆ ಎಂದಿದ್ದಾರೆ.

     

    ಕಲಾವಿದ ಅರುಣ್ ಮಾತನಾಡಿ ಯಾವುದೇ ಅಪೇಕ್ಷೆ ಇಲ್ಲದೆ ಕೇವಲ ಜನಪದ ಸಾಹಿತ್ಯವನ್ನು ಉಳಿಸುವ ನಿಟ್ಟಿನಲ್ಲಿ ನಿತ್ಯ ನಿರಂತರ ಸೇವೆ ಸಲ್ಲಿಸುತ್ತಿದ್ದೇವೆ ನಮ್ಮ ಸೇವೆಯನ್ನು ಗುರುತಿಸಿ ನಮ್ಮ ತಾಯಿಯವರಿಗೆ ಗೌರವ ಡಾಕ್ಟರೇಟ್ ನೀಡಿರುವುದು ಸಂತಸದ ವಿಷಯವಾಗಿದೆ , ಈ ಗೌರವ ಡಾಕ್ಟರೇಟ್ ಪದವಿ ನಾವು ಮತ್ತಷ್ಟು ಹೆಚ್ಚಿನ ಕೆಲಸ ನಿರ್ವಹಿಸಲು, ಮತ್ತಷ್ಟು ಸೇವೆ ಸಲ್ಲಿಸಲು ಶಕ್ತಿ ತುಂಬಿದೆ, ಕಲಾವಿದರನ್ನು ಬೆಳೆಸುವ ಹಾರೈಸುವ ಇಂತಹ ಸಂಸ್ಥೆಗಳು ಮತ್ತಷ್ಟು ಹೆಚ್ಚಾಗಲಿ , ಮೂಲ ಜನಪದ ಉಳಿಯಲಿ ಎಂದು ತಿಳಿಸಿದರು.

    ನಮ್ಮ ತಂಡದಲ್ಲಿ ( ಪಾರ್ವತಮ್ಮ, ಒಬ್ಬಮ್ಮ,ಮುನಿಯಮ್ಮ, ನರಸಮ್ಮ, ಅರ್ಚನಾ, ರಾಜಮ್ಮ,ಕಮಲಮ್ಮ,ರತ್ನಮ್ಮ ) 12ಕ್ಕೂ ಹೆಚ್ಚು ಮಂದಿ ಗಾಯಕರಿದ್ದು ಸೌಲಭ್ಯಗಳ ಕೊರತೆಯಿಂದ ಸೂಕ್ತ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ, ಸರ್ಕಾರವು ಜನಪದ ಕಲಾವಿದರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ಮೂಲಕ ಜನಪದ ಉಳಿವಿಗೆ ಸಹಕರಿಸಬೇಕಿದೆ ಎಂದರು.

  • ಏಪ್ರಿಲ್ 10ರಂದು ಓಂ ಶ್ರೀ ಬಗಳಾಮುಖಿ ದೇವಾಲಯ ಟ್ರಸ್ಟ್‌ (ರಿ.) ಉದ್ಘಾಟನಾ ಸಮಾರಂಭ

    ಇದೇ ಏಪ್ರಿಲ್ 10ರ ಗುರುವಾರದಂದು ಓಂ ಶ್ರೀ ಬಗಳಾಮುಖಿ ದೇವಾಲಯ ಟ್ರಸ್ಟ್‌ (ರಿ.) ಉದ್ಘಾಟನಾ ಕಾರ್ಯಕ್ರಮವು ಸುಕ್ಷೇತ್ರ ಶ್ರೀ ಕೋಡಿಮಠ ಮಹಾಸಂಸ್ಥಾನದ ಮಹಾಸ್ವಾಮಿಗಳಾದ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳ ಅಮೃತಹಸ್ತದಿಂದ ನೆರವೇರಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ .

    ಅರದೇಶನಹಳ್ಳಿ, ಕುಂದಾಣ ಹೋಬಳಿಯ ಅರದೇಶನಹಳ್ಳಿಯ ಶ್ರೀ ಬಗಳಾಮುಖಿದೇವಿ ದೇವಾಲಯದ ಅಭಿವೃದ್ಧಿಗಾಗಿ ಓಂ ಶ್ರೀ ಬಗಳಾಮುಖಿ ದೇವಾಲಯ ಟ್ರಸ್ಟ್‌ (ರಿ.) ಸ್ಥಾಪಿಸಿದ್ದು, ಸದರಿ ಟ್ರಸ್ಟ್ ನ ಉದ್ಘಾಟನೆಯನ್ನು ಅಮ್ಮನವರಿಗೆ ಮಂಗಳಾರತಿ ಸಲ್ಲಿಸುವ ಮೂಲಕ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಯವರು ಏಪ್ರಿಲ್ 10 ರಂದು ಉದ್ಘಾಟಿಸಲಿದ್ದಾರೆ.

    ಗುರುವಾರ ಬೆಳಗ್ಗೆ 9-00 ಗಂಟೆಗೆ ಭೂಶುದ್ದಿ, ಪಂಚಗವ್ಯ, ಸ್ವಸ್ತಿಪುಣ್ಯಾಹ, ನವಗ್ರಹಾರಾಧನೆ, ಕಳಶಸ್ಥಾಪನೆ, ದೇವಿ ಆರಾಧನೆ, ಗಣಪತಿ ಮಾದಕ ಹೋಮ, ಶ್ರೀ ಲಕ್ಷ್ಮೀ ಹೋಮ ಸಂಜೆ 3-30 ರಿಂದ 4-40 ಗಂಟೆಯೊಳಗೆ ಸಲ್ಲುವ ಶುಭ ಸಿಂಹ ಲಗ್ನದಲ್ಲಿ ಪೂರ್ಣಕುಂಭ ಮಂಗಳವಾದ್ಯಗಳೊಂದಿಗೆ ಸುಕ್ಷೇತ್ರ ಶ್ರೀ ಕೋಡಿಮಠ ಮಹಾಸಂಸ್ಥಾನದ ಮಹಾಸ್ವಾಮಿಗಳಾದ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಹಾಗೂ ಅಲ್ಲೂರು ಗೇಟ್ ಬಳಿಯ ಶನೇಶ್ವರ ಮಠದ ಶ್ರೀಶ್ರೀಶ್ರೀ ಸೋಮಶೇಖರಸ್ವಾಮಿಯವರನ್ನು ಸ್ವಾಗತಿಸಿ ಅವರ ನೇತೃತ್ವದಲ್ಲಿ ಶ್ರೀ ಬಗಳಾಮುಖಿದೇವಿ ಅಮ್ಮನವರಿಗೆ ಮಂಗಳಾರತಿ ಸಲ್ಲಿಸುವ ಮೂಲಕ ಸ್ವಾಮಿಯವರ ಅಮೃತಹಸ್ತದಿಂದ ನೂತನವಾಗಿ ಸ್ಥಾಪಿಸಿರುವ ಓಂ ಶ್ರೀ ಬಗಳಾಮುಖಿ ದೇವಾಲಯ ಟ್ರಸ್ಟ್‌ (ರಿ.) ಉದ್ಘಾಟನೆ ಮಾಡಲಾಗುವುದು ಎಂದು ಟ್ರಸ್ಟ್ ನ ಅಧ್ಯಕ್ಷರು ಹಾಗೂ ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಮಣಿ ತಿಳಿಸಿದ್ದಾರೆ.

    ಅಲ್ಲದೇ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಮಧ್ಯಾಹ್ನ 1-00 ಗಂಟೆಗೆ “ಅನ್ನಸಂತರ್ಪಣೆ” ಕಾರ್ಯಕ್ರಮ ಆಯೋಜಿಸಿದ್ದು , ನಂತರ ಭಕ್ತಿ ಗೀತೆಗಳು ಮತ್ತು ಶ್ರೀ ನಂದಿ ಡಾನ್ಸ್ ಅಕಾಡೆಮಿ ಮಕ್ಕಳಿಂದ “ಭರತ್ಯನಾಟ್ಯ” ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು .

    ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಗಳಾಮುಖಿ ದೇವಿಯ ಕೃಪೆ ಹಾಗೂ ಆಶೀರ್ವಾದ ಪಡೆದುಕೊಳ್ಳಬೇಕಾಗಿ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ತನು-ಮನ-ಧನ-ಸಹಾಯ ಮಾಡಬೇಕೆಂದು ಭಕ್ತಾಧಿಗಳಲ್ಲಿ ಆಡಳಿತ ಮಂಡಳಿ ವಿನಂತಿ ಮಾಡಿದೆ.

     

  • ಮಾಗಿ ಉಳುಮೆಗೆ ಇದು ಸಕಾಲ: ಕೃಷಿ ಇಲಾಖೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ದಗೊಳಿಸುವ “ಮಾಗಿ ಉಳುಮೆ” ಪಾರಂಪರಿಕ ಕೃಷಿ ಪದ್ಧತಿಯಾಗಿದೆ. ಮುಂಗಾರಿಗಿಂತ ಮುಂಚೆ ಹಾಗೂ ಹಿಂಗಾರು ಬೆಳೆಗಳ ಕಟಾವಿನ ನಂತರ ಅಂದರೆ ಬೇಸಿಗೆಯಲ್ಲಿ ಕೈಗೊಳ್ಳಬೇಕಾದ ಕಡಿಮೆ ಖರ್ಚಿನ ನೆಲ ಅಗೆತ ಅಥವಾ ತಿರುವಿ ಹಾಕುವಿಕೆಗೆ ಈಗ ಸಕಾಲ ರೈತರು ಈ ಸಮಯದ ಸದುಪಯೋಗ ಪಡೆದುಕೊಳ್ಳುವಂತೆ ಕೃಷಿ ಇಲಾಖೆ ತಿಳಿಸಿದೆ.

     

    ಜನವರಿ ಮತ್ತು ಫೆಬ್ರವರಿ ತಿಂಗಳೊಳಗೆ ರೈತರು ಬೆಳೆದ ಕೃಷಿ ಬೆಳೆಗಳನ್ನು ಕಟಾವು ಮಾಡಲು ಸೂಕ್ತ ಸಮಯವಾಗಿದೆ. ಭೂಮಿಯನ್ನು ಹದವಾಗಿ ಉಳುಮೆ ಮಾಡಬೇಕು. ಅಂದರೆ, ಪೂರ್ಣ ಅವಧಿ ಮುಗಿದ ನಂತರ ಮುಂದಿನ ಹಂಗಾಮಿನಲ್ಲಿ ಬೆಳೆ ಬೆಳೆಯಲು ಭೂಮಿ ಸಿದ್ಧಗೊಳಿಸುವುದಕ್ಕೆ “ಮಾಗಿ ಉಳುಮೆ” ಎನ್ನುವರು.

     

    ಸಾಮಾನ್ಯವಾಗಿ ನೀರಾವರಿ ಸೌಲಭ್ಯವಿದ್ದಲ್ಲಿ ಮಾತ್ರ ರೈತರು ಬೇಸಿಗೆ ಹಂಗಾಮಿನಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ. ಬೇಸಿಗೆ ಬೆಳೆಗೆ ಅವಕಾಶವಿಲ್ಲದ ಸಂದರ್ಭದಲ್ಲಿ ಮಾರ್ಚ್, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮೊದಲ ಮಳೆ ಬಿದ್ದ ತಕ್ಷಣ ಟ್ರಾಕ್ಟರ್ ಚಾಲಿತ ನೇಗಿಲು ಅಥವಾ ಎತ್ತಿನ ನೇಗಿಲಿನಿಂದ ಉಳುಮೆಯನ್ನು ಕೈಗೊಳ್ಳಬೇಕು. ಕೆಂಪು ಮಣ್ಣಿನಲ್ಲಿ ವರ್ಷಕ್ಕೊಮ್ಮೆ ಮಾಗಿ ಉಳುಮೆ ಕೈಗೊಳ್ಳಬೇಕು.

     

    ಬಹುತೇಕ ರೈತರು ಮಾಗಿ ಉಳುಮೆ ಮಾಡುವುದನ್ನು ಮರೆತಿರುವುದರಿಂದ ಅನೇಕ ರೀತಿಯ ಸಸ್ಯರೋಗ, ಕೀಟರೋಗ ಭಾದೆ ಹೆಚ್ಚಾಗಲು ಕಾರಣವಾಗಿದೆ. ಈ ವರ್ಷದಲ್ಲಿ ಅವಧಿಗಿಂತ ಮುಂಚಿತವಾಗಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವುರಿಂದ, ಮಾಗಿ ಉಳುಮೆ ಮಾಡಿದರೆ ಮಣ್ಣಿನ ಕೆಳ ಪದರದಲ್ಲಿ ಇರುವ ರೋಗಾಣುಗಳ ಶಿಲೀಂದ್ರಗಳು ನಾಶವಾಗುತ್ತವೆ.

     

    ಮಾಗಿ ಉಳುಮೆಯ ಪ್ರಯೋಜನಗಳು

     

    ಹಿಂದಿನ ಹಂಗಾಮಿನಲ್ಲಿ ಬೆಳೆದ ಬೆಳೆಯ ತ್ಯಾಜ್ಯ ವಸ್ತುಗಳನ್ನು ಮಣ್ಣಿನಲ್ಲಿ ಸೇರುವಂತೆ ಮಾಡಲಾಗುವುದರಿಂದ ತ್ಯಾಜ್ಯವು ಕೊಳೆತು ಸಾವಯವ ಗೊಬ್ಬರವಾಗುತ್ತದೆ ಮಾಗಿ ಉಳುಮೆಯಿಂದ ಮಣ್ಣು ಸಡಿಲಗೊಳ್ಳುತ್ತದೆ. ಇದರಿಂದ ಮಳೆ ನೀರು ಸಾಕಾಷ್ಟು ಪ್ರಮಾಣದಲ್ಲಿ ಭೂಮಿಯಲ್ಲಿ ಇಂಗಲು ಸಹಕಾರಿಯಾಗುತ್ತದೆ. ಹಿಂದಿನ ಹಂಗಾಮುಗಳಲ್ಲಿ ಬೆಳೆದ ಬೆಳೆಗಳಲ್ಲಿದ್ದ ಅಥವಾ ಮಣ್ಣಿನಲ್ಲಿರುವ ಕೀಟ,ಮೊಟ್ಟೆಗಳು ಹಾಗೂ ರೋಗಗಳು ಸೂರ್ಯನ ಬಿಸಿಲಿನ ತಾಪಕ್ಕೆ ನಾಶವಾಗುವುದರಿಂದ ಕೀಟ ಮತ್ತು ರೋಗಗಳನ್ನು ನಿಯಂತ್ರಿಸಬಹುದು.

    ಮಾಗಿ ಉಳುಮೆಯನ್ನು ಇಳಿಜಾರಿಗೆ ಅಡ್ಡಲಾಗಿ ಮಾಡುವುದರಿಂದ ಅಕಾಲಿಕ ರಭಸದ ಮಳೆಯಿಂದ ಮಣ್ಣು ಕೊಚ್ಚಿ ಹೋಗದಂತೆ ತಡೆಯಬಹುದು, ಬಿದ್ದಂತಹ ಮಳೆ ನೀರು ಉಳುಮೆಯ ಕಿರುಪಾತಿಗಳಲ್ಲೇ ಶೇಖರಣೆಯಾಗುತ್ತದೆ. ಮಾಗಿ ಉಳುಮೆಯಿಂದ ಕಳೆಗಳಾದ ಗರಿಕೆಯ ಬೇರು ಮತ್ತು ಜೇಕಿನ ಗಡ್ಡೆಗಳನ್ನು ಆರಿಸಿ ತೆಗೆಯಲು ಅನುಕೂಲ ಆಗುವುದರಿಂದ ಬಹುವಾರ್ಷಿಕ ಕಳೆ ನಿಯಂತ್ರಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.

  • ಏ.11ರಿಂದ ಮೂರು ದಿನಗಳ ಕಾಲ ಶ್ರೀ ರಾಮೋತ್ಸವ : ಬೃಹತ್ ಶ್ರೀರಾಮ ಶೋಭಾಯಾತ್ರೆಗೆ ಸಕಲ ಸಿದ್ಧತೆ

    ದೊಡ್ಡಬಳ್ಳಾಪುರ : ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ನಗರದ ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ ಶ್ರೀ ರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆ ಏ.11ರಿಂದ ಮೂರು ದಿನಗಳ ಕಾಲ ಆಯೋಜನೆ ಮಾಡಲಾಗಿದ್ದು, ಏ.13ರಂದು ಬೃಹತ್ ಶ್ರೀರಾಮ ಶೋಭಾಯಾತ್ರೆ ನಡೆಯಲಿದೆ ಎಂದು ಬಜರಂಗದಳ ಕೋಲಾರ ವಿಭಾಗಿಯ ಸಂಯೋಜಕ ನರೇಶ್ ರೆಡ್ಡಿ ತಿಳಿಸಿದ್ದಾರೆ.

    ನಗರದ ಬಜರಂಗದಳದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಶ್ರೀರಾಮೋತ್ಸವ ಹಾಗೂ ಬೃಹತ್ ಶ್ರೀರಾಮ ಶೋಭಾಯಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ , 3 ವರ್ಷಗಳಿಂದ ಈ ಕಾರ್ಯಕ್ರಮವು ಬೃಹತ್ ಉತ್ಸವವಾಗಿ ನಡೆಯುತ್ತಿದೆ. ಕಾರ್ಯಕ್ರಮದ ಅಂಗವಾಗಿ ವಾಹನ ಜಾಥಾ, ಹೋಮ ಹವನಾದಿಗಳು, ಕಲ್ಯಾಣೋತ್ಸವ, ವಿವಿಧ ದೇವರುಗಳ ಬೃಹತ್ ಶೋಭಾ ಯಾತ್ರೆ ನಡೆಯಲಿದೆ,ಈ ಬಾರಿ ನೆಡೆಯುವ ಹೋಮದ ಪೂಜೆಯಲ್ಲಿ ಪೌರಕಾರ್ಮಿಕ ದಂಪತಿಗಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದರು.

     

    ಕಾರ್ಯಕ್ರಮಗಳು : 

    * ಏ.11ರಂದು ಸಂಜೆ 4 ಗಂಟೆಗೆ ನಗರದ ದರ್ಗಾಜೋಗಿಹಳ್ಳಿಯ ಕೆಂಪಮ್ಮ ದೇವಾಲಯದ ಬಳಿಯಿಂದ ಬೈಕ್, ಕಾರು ಸೇರಿದಂತೆ ವಿವಿಧ ವಾಹನಗಳ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಸಂಜೆ 6.30 ಗಂಟೆಗೆ ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

    * ಏ.12ರಂದು ಬೆಳಿಗ್ಗೆ 7 ಗಂಟೆಯಿಂದ ಗೋ ಪೂಜೆ, ಮಹಾಗಣಪತಿ ಹೋಮ, ರಾಮ ತಾರಕ ಹೋಮ, ದುರ್ಗಾ ಹೋಮಗಳಿವೆ. ಮಧ್ಯಾಹ್ನ ಸಾವಿರಾರು ಮಹಿಳೆಯರಿಂದ ಲಲಿತ ಸಹಸ್ರನಾಮ ಮತ್ತು ಹನುಮಾನ್ ಚಾಲಿಸ್ ಸಾಮೂಹಿಕ ಪಠಣ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ.

    * ಏ.13 ರಂದು ಮಧ್ಯಾಹ್ನ 12.30ಕ್ಕೆ ಭಗತ್‍ಸಿಂಗ್ ಕ್ರೀಡಾಂಗಣದಿಂದ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಮೆರವಣಿಗೆಯಲ್ಲಿ ಭಾರತ ಮಾತೆ, ಶ್ರೀರಾಮ, ಹನುಮ, ಶಿವ, ಭುವನೇಶ್ವರಿ, ಅಂಬೇಡ್ಕರ್, ಶಿವಾಜಿ ಪ್ರತಿಮೆಗಳೊಂದಿಗೆ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ನಂತರ ಕಾಸರಗೂಡಿನ ಕುಂಟಾರು ರವೀಶ್ ತಂತ್ರಿ ಅವರಿಂದ ದಿಕ್ಸೂಚಿ ಭಾಷಣ. ಸಂಜೆ ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ ಲೇಸರ್ ಶೋ, ಬೃಹತ್ ರಾವಣ ದಹನ ಮತ್ತು ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ಕಾರ್ಯಕ್ರಮಗಳು ನೆಡೆಯಲಿವೆ .

     

    ಹಿಂದೂ ಸಮಾಜದ ಪ್ರತೀಕವಾಗಿ ಶಕ್ತಿ ತೋರಿಸುವ ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಭಾಂದವರು ಭಾಗವಹಿಸಬೇಕೆಂದು ಈ ಮೂಲಕ ಮನವಿ ಮಾಡಲಾಗುತ್ತಿದೆ ಎಂದರು.

     

    ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹ ಕಾರ್ಯದರ್ಶಿ ಭಾಸ್ಕರ್ ಭಗತ್, ನಗರ ಘಟಕದ ಅಧ್ಯಕ್ಷ ಮಧುಸೂದನ್, ತಾಲೂಕು ಸಂಯೋಜಕ ವಿರಾಜ್ ಮೊದಲಾದವರು ಹಾಜರಿದ್ದರು.

     

     

  • ಶಿವಮೊಗ್ಗ : ಮಕ್ಕಳಕಲಿಕಾ ನ್ಯೂನತೆ ಮತ್ತು ವರ್ತನಾ ಸಮಸ್ಯೆಗಳ ಬಗ್ಗೆ ಪೋಷಕರ ಗಮನ ಅಗತ್ಯ: ಡಾ. ರಾಮಪ್ರಸಾದ್

    ಶಿವಮೊಗ್ಗ : ಚಿಕ್ಕಂದಿನಿಂದ ಮಕ್ಕಳಲ್ಲಿ ಕಲಿಕಾ ನ್ಯೂನ್ಯತೆ ಹಾಗೂ ವರ್ತನಾ ಸಮಸ್ಯೆಗಳ ಬಗ್ಗೆ ಪೋಷಕರು ಶಿಕ್ಷಕರು ಹೆಚ್ಚು ಗಮನಹರಿಸುತ್ತಿರಬೇಕು ಇದರಿಂದ ಮುಂದೆ ಆಗುವ ದೊಡ್ಡ ಪರಿಣಾಮಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಮೇಘನಾ ಆಸ್ಪತ್ರೆಯ ಮನಶಾಸ್ತ್ರ ಮಾನಸಿಕ ತಜ್ಞ ರೋಗದ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ರಾಮ್ ಪ್ರಸಾದ್ ಅವರು ಅಭಿಮತ ವ್ಯಕ್ತಪಡಿಸಿದರು

     

    ಅವರು ರೋಟರಿ ಬ್ಲಡ್ ಬ್ಯಾಂಕ್ ಆವರಣದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಿಟ್ ಟೌನ್ ವತಿಯಿಂದ ಆಯೋಜಿಸಲಾಗಿದ್ದ ಆಟಿಸಂ. ಏಡಿ ಎಚ್ ಡಿ. ಕಲಿಕಾ ನ್ಯೂನ್ಯತೆ ಮತ್ತು ವರ್ತನಾ ಸಮಸ್ಯೆಗಳ ಬಗ್ಗೆ ಪೋಷಕರಿಗೆ ಆಯೋಜಿಸಲಾದ ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅಣುವಂಶಿತಿಯಿಂದ ಪರಿಸರದಿಂದ ಹಾಗೂ ಗರ್ಭಾವಸ್ಥೆಯಲ್ಲಿ ಇದ್ದಾಗ ಆಗುವ ಸಮಸ್ಯೆಗಳಿಂದ ಮಕ್ಕಳ ಬೆಳವಣಿಗೆಯಲ್ಲಿ ಈ ರೀತಿಯಾದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಇದನ್ನು ಪ್ರಾರ್ಥಮಿಕ ಹಂತದಲ್ಲೇ ಗುರುತು ಹಚ್ಚಿ ಅವರಿಗೆ ನೀಡುವ ತರಪಿಗಳ ಮುಖಾಂತರ ಇದನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

     

    ಇದೇ ಸಂದರ್ಭದಲ್ಲಿ ಹೈದರಾಬಾದ್ ಟೋಟಲ್ ಸೊಲ್ಯೂಷನ್ ಪುನರ್ವಸತಿ ಸೊಸೈಟಿಯ ಪ್ರಖ್ಯಾತ ಮಾನಸಿಕ ತಜ್ಞರಾದ ಡಾಕ್ಟರ್ ಪೂಜಾ ಜಾ ನಾಯರ್. ರವರು ಮಾತನಾಡುತ್ತಾ ಮಕ್ಕಳು ನಾವು ಹೇಳುವ ವಿಷಯದ ಕಡೆ ಗಮನ ಕೊಡುತ್ತಿಲ್ಲ ಸೂಚನೆಗಳನ್ನು ಪಾಲಿಸುತ್ತಿಲ್ಲ ಹಾಗೂ ಹೆಸರಿಗೆ ಪ್ರತಿಕ್ರಿಯೆ ನೀಡುತ್ತಾ ಇಲ್ಲ ಹಾಗೂ ಒಂದೇ ಸ್ಥಳದಲ್ಲಿ ಪೂರನು ಕಷ್ಟವಾಗುತ್ತಿರುವ ಈ ಸಮಸ್ಯೆಗಳನ್ನು ಗುರುತು ಹಚ್ಚಿ ಕೂಡಲೇ ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಇತ್ತೀಚಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮಕ್ಕಳಲ್ಲಿ ತುಂಬಾ ಕಾಡುತ್ತಿವೆ ಎಂದರು.

     

    ಇದೇ ಸಂದರ್ಭದಲ್ಲಿ ಹೈದರಾಬಾದಿನ ಮಕ್ಕಳ ಮಾನಸಿಕ ತಜ್ಞ ಸಂಸ್ಥೆಯ ಉಪಾಧ್ಯಕ್ಷರಾದ ಸುಮಾ ಸಿಂಗ್ ಅವರು ಮಾತನಾಡುತ್ತಾ ಈಗಾಗಲೇ ಹೈದರಾಬಾದಿನಲ್ಲಿ 11 ಸೆಂಟರ್ ಗಳಲ್ಲಿ ಈ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಾ ಇದ್ದೇವೆ ಆದ್ದರಿಂದ ಇಂದು ಪೋಷಕರಿಗೆ ಹಾಗೂ ವೈದ್ಯರಿಗೆ ಇದರ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿದಾಗ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದರು.

     

    ರೋಟರಿ ಕ್ಲಬ್ ಮಿಟ್ ಟೌನ್ ನ ಅಧ್ಯಕ್ಷ ಸುರೇಶ್ ದುರ್ಗಪ್ಪ ಮಾತನಾಡುತ್ತಾ ಇಂದು ಈ ಜಾಗೃತಿ ಕಾರ್ಯಗಾರಕ್ಕೆ 150ಕ್ಕೂ ಹೆಚ್ಚು ಪೋಷಕರು ಆಗಮಿಸಿರುವುದು ತುಂಬಾ ಸಂತೋಷವಾಗುತ್ತಿದೆ ಈ ಒಂದು ದಿನದ ಕಾರ್ಯಗಾರವನ್ನು ಪೋಷಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

     

    ವೇದಿಕೆಯಲ್ಲಿ ರೋಟರಿ ಮಾಜಿ ಸಹಾಯಕ ಗೌರ್ನರ್ಜಿ.ಜಿ ವಿಜಯಕುಮಾರ್. ಮಾಜಿ ಅಧ್ಯಕ್ಷರು ಹಾಗೂ ಯೋಜನಾ ನಿರ್ದೇಶಕಿ. ರೋ ವೀಣಾ ಸುರೇಶ್. ಮಾನಸಿಕ ತಜ್ಞ ಡಾಕ್ಟರ್ ಎಸ್ ಟಿ ಅರವಿಂದ್ ಕಾರ್ಯದರ್ಶಿ ಪಹಿಂ ಹುಸೇನ್. ಸಹಕಾರದ ಶ್ರೀ ಕೆವಿಎಲ್ ರಾಜು ಉಪಸ್ಥಿತರಿದ್ದರು ಕಾರ್ಯಗಾರಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪೋಷಕರು ಹಾಜರಿದ್ದರು.

  • DODDABALLAPURA: ರಾಜ್ಯ ಸಂಯೋಜಕ ಅಶೋಕ್ ಚಕ್ರವರ್ತಿ ನೇತೃತ್ವದಲ್ಲಿ BSP ಕಾರ್ಯಕರ್ತರ ಆತ್ಮವಲೋಕನ ಸಭೆ

    ದೊಡ್ಡಬಳ್ಳಾಪುರ : ಸ್ಥಳೀಯವಾಗಿ ಪಕ್ಷ ಸಂಘಟನೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಆತ್ಮವಲೋಕನ ಸಭೆಯನ್ನು ಆಯೋಜನೆ ಮಾಡಲಾಗಿದ್ದು ತಾಲೂಕು ಹಾಗೂ ಹೋಬಳಿ ಮಟ್ಟಗಳ ಪುನರ್ ರಚನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕುರಿತಂತೆ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕರಾದ ಅಶೋಕ್ ಚಕ್ರವರ್ತಿ ತಿಳಿಸಿದರು

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಕ್ಕ ಮಾಯಾವತಿಯವರ ನೇತೃತ್ವದ ಬಹುಜನ ಸಮಾಜ ಪಾರ್ಟಿ ಹೊಸ ಹುಮ್ಮಸ್ಸಿನೊಂದಿಗೆ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಮುಂದಾಗಿದ್ದು, ಇಂದು ಬೆಂಗಳೂರು ವಲಯದ ಕಾರ್ಯಕರ್ತರೊಂದಿಗೆ ಸಂವಾದ ನೆಡೆಸಿದ್ದು, ಪಕ್ಷ ಸಂಘಟನೆಗೆ ಹೆಚ್ಚು ನೀಡಲಾಗುತ್ತಿದೆ ಎಂದರು

    ಪ್ರಮುಖವಾಗಿ ರಾಜ್ಯದ ಪ್ರತಿ ಗ್ರಾಮಗಳಲ್ಲಿಯೂ ಬಹುಜನ ಸಮಾಜ ಪಕ್ಷದ ಸಂಘಟನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಕ್ರಮ ಯೋಜನೆ ಮಾಡಿದ್ದು, ದಲಿತ ಹಾಗೂ ಇನ್ನುಳಿದ ವರ್ಗಗಳ ಧ್ವನಿಯಾಗಿ ಬಹುಜನ ಸಮಾಜ ಪಾರ್ಟಿ ನಿಲ್ಲಲಿದೆ ಎಂದರು.

    ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ನರಸಿಂಹಯ್ಯ ಮಾತನಾಡಿ ಇಂದು ಬೆಂಗಳೂರು ವಲಯ ( ರಾಮನಗರ ಚಿಕ್ಕಬಳ್ಳಾಪುರ ತುಮಕೂರು ಕೋಲಾರ ಬೆಂಗಳೂರು ಗ್ರಾಮಾಂತರ ಬೆಂಗಳೂರು ನಗರ ) ಮಟ್ಟದ ಕಾರ್ಯಕರ್ತರ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಈ ಸಭೆಯಲ್ಲಿ ಮುಖ್ಯವಾಗಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕಾರ್ಯಕರ್ತರ ಆತ್ಮವಿಶ್ವಾಸವನ್ನು ವೃದ್ಧಿಸುವ ಆತ್ಮವಲೋಕನ ಕಾರ್ಯ ನಡೆಯಲಿದೆ , ಅಲ್ಲದೆ ರಾಜ್ಯ ಕೇಂದ್ರ ಕಚೇರಿಗೆ ಆಗಮಿಸುತ್ತಿರುವ ರಾಷ್ಟ್ರೀಯ ಸಂಯೋಜಕರಾದ ರಾಮ್ ಜಿ ರವರಿಗೆ ಕಾರ್ಯಕರ್ತರ ಸಿದ್ಧಪಟ್ಟಿಯನ್ನು ಕೊಡುವ ನಿಟ್ಟಿನಲ್ಲಿ ಇಂದು ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸುಲು ಈ ಸಭೆ ಸಹಕಾರಿಯಾಗಿದೆ ಎಂದರು.

    ದೇಶದ ಮೂರನೇ ಅತಿದೊಡ್ಡ ರಾಜಕೀಯ ಪಕ್ಷವೆಂದರೆ ಬಹುಶಃ ಅದು ನಮ್ಮ ಬಹುಜನ ಸಮಾಜ ಪಾರ್ಟಿ ಎಂದರೆ ತಪ್ಪಾಗಲಾರದು ಭಾರತದ ಸಂವಿಧಾನವನ್ನೇ ತನ್ನ ಪ್ರಣಾಳಿಕೆ ಹಾಕಿಸಿಕೊಂಡಿರುವ ಬಹುಜನ ಸಮಾಜ ಪಕ್ಷ ಕಾರ್ಯಕರ್ತರ ಪಕ್ಷವಾಗಿದೆ ಇದನ್ನು ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ಇಂದು ನೂತನ ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುತ್ತಿದ್ದೇವೆ ಎಂದರು.

    ಸುದ್ದಿಗೊಷ್ಟಿಯಲ್ಲಿ ಜಿಲ್ಲಾ ಸಂಚಾಲಕರಾದ ನಂಜಪ್ಪ,ತಾಲೂಕು ಅಧ್ಯಕ್ಷರಾದ ಪಿ. ಏನ್. ಫಿಳ್ಳಪ್ಪ,ಕಾರ್ಯದರ್ಶಿ ಅಂಜಿನಪ್ಪ,ಜಿಲ್ಲಾಧ್ಯಕ್ಷರು ನರಸಿಂಹರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾ (ಹಿಂದುಳಿದ ವರ್ಗ) ಆರ್. ಸೋಮಶೇಖರ್, ಸೇರಿದಂತೆ ತಾಲ್ಲೂಕಿನ ಹಲವು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

     

  • ಒಳಮೀಸಲಾತಿ ಜಾರಿ ವಿಚಾರ : ವಿಳಂಬಮಾಡದೆ ಮುಂದಿನ 40 ದಿನಗಳಲ್ಲಿ ಮುಖ್ಯಮಂತ್ರಿಗಳು ಅನುಷ್ಠಾನ ಮಾಡಲಿದ್ದಾರೆ – ಸಚಿವ ಕೆ ಎಚ್ ಮುನಿಯಪ್ಪ

    ಬೆಂಗಳೂರು : ಡಾ. ಬಾಬು ಜಗಜೀವನ್ ರಾಮ್ ರವರ 118ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೀಸಲಾತಿ ವಿಷಯದಲ್ಲಿಯೂ ಯಾವುದೇ ತಡ ವಿಲ್ಲದೆ ಮುಂದಿನ 30ರಿಂದ 40 ದಿನಗಳ ಹೊಳಗಾಗಿ ಒಳ ಮೀಸಲಾತಿ ಅನುಷ್ಠಾನವಾಗಲಿದೆ ಎಂದರು.

     

     

    ಬಾಬೂಜಿಯವರ ಆಶಯದಂತೆ ಕರ್ನಾಟಕ ಸರ್ಕಾರದ ದೀನದಲಿತರ ಬಡವರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ಇನ್ನೂ 30ರಿಂದ 40 ದಿನಗಳ ಒಳಗಾಗಿ ಒಳ ಮೀಸಲಾತಿ ಅನುಷ್ಠಾನವಾಗಲಿದೆ ಎಂದರು.

     

    ನಮ್ಮ ಸೋದರ ಸಚಿವರುಗಳಾದ ಪರಮೇಶ್ವರ್, ಮಹದೇವಪ್ಪ,ಶಿವರಾಜ್ ತಂಗಡಗಿ, ಪ್ರಿಯಾಂಕ್ ಖರ್ಗೆ ಎಲ್ಲಾ ಸಚಿವರು ಒಗ್ಗಟ್ಟಾಗಿದ್ದು ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಅನುಷ್ಠಾನಗೊಳಿಸಲು ಬದ್ದರಾಗಿದ್ದೇವೆ ಎಂದರು.

     

     

  • ಭಾರತದ ಪುಟವಿಟ್ಟ ಬಂಗಾರ ಎಂದು ಡಾ. ಬಾಬು ಜಗಜೀವನ್ ರಾಮ್ ಅವರನ್ನು ಸಂಭೋದಿಸಿದರು:-ಆಹಾರ ಸಚಿವ ಕೆಹೆಚ್. ಮುನಿಯಪ್ಪ

    ವಿಧಾನ ಸೌಧ : ಹಸಿರುಕ್ರಾಂತಿ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪ ಪ್ರಧಾನಿ ಸಮರ್ಥ ಸಂಸದೀಯ ಪಟು, ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿರಿಯ ದಲಿತ ಚೇತನ ಡಾ. ಬಾಬು ಜಗಜೀವನ್ ರಾಮ್ ರವರ 118ನೇ ಜನ್ಮ ದಿನೋತ್ಸವದ ಶುಭಾಷಯಗಳನ್ನು ಕೋರುತ್ತಾ ಮಾತನಾಡಿದರು.

    ಬಾಬೂಜಿಯವರು ಇತರರಂಗಗಳಲ್ಲಿ ಸೇವೆ ಸಲ್ಲಿಸಿರುವಂತೆ “ಭಾರತ ಸಂವಿಧಾನ ರಚನೆ ಸಂಬಂಧವಾಗಿಯೂ ಅಷ್ಟೇ ಸಮರ್ಥವಾಗಿ ಸೇವೆ ಸಲ್ಲಿಸಿ, ಸಂವಿಧಾನ ಶಿಲ್ಪಿಗಳಲ್ಲಿ ಒಬ್ಬರಾಗಿದ್ದರು, ಸಂವಿಧಾನ ರಚನಾ ಸಮಿತಿಗಳಲ್ಲಿ ಬಾಬೂಜಿಯವರು ಕೆಲಸ ನಿರ್ವಹಿಸಿದ್ದಾರೆ.

     

    ಜಗಜೀವನ್ ರಾಮ್ 1936 ರಿಂದ 1986 ರವರೆಗೆ ನಿರಂತರವಾಗಿ ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಇದು ವಿಶ್ವ ದಾಖಲೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕಾಲ (30 ವರ್ಷಗಳು) ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮತ್ತೊಂದು ದಾಖಲೆಯನ್ನೂ ಅವರು ಹೊಂದಿದ್ದಾರೆ.

     

    ಬಾಬೂಜಿ ಕಾರ್ಮಿಕ ಮಂತ್ರಿಯಾಗಿದ್ದಾಗ ಕನಿಷ್ಠ ಕೂಲಿ ಮತ್ತು ಗೊತ್ತುವಳಿ ಕಾಯ್ದೆಯನ್ನು ಜಾರಿಗೆ ಕೊಟ್ಟರು ಮತ್ತು ಕಾರ್ಮಿಕ ಭವಿಷ್ಯನಿಧಿ, ಇ.ಎಸ್.ಐ. ಆಸ್ಪತ್ರೆ ಸೌಲಭ್ಯ, ಕಾರ್ಮಿಕರ ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಧನಸಹಾಯ ಮುಂತಾದ ಅನುಕೂಲಗಳನ್ನು ಕಲ್ಪಿಸಿದರು.

    ಬಾಬೂಜಿ ರವರು ಆಹಾರ ಮತ್ತು ಕೃಷಿ ಮಂತ್ರಿಯಾಗಿದ್ದಾಗ ದೇಶದಲ್ಲಿ ಆಹಾರ ಕೊರತೆಯನ್ನು ಮನಗಂಡು ವ್ಯವಸಾಯ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತಂದರು. ಕಡಿಮೆ ಬೆಲೆ ಮತ್ತು ಉಚಿತವಾಗಿ ಹೆಚ್ಚು ಇಳುವರಿ ತರುವಂಥ ಬೀಜದ ಕಾಳುಗಳು, ರಸಗೊಬ್ಬರ, ಕೀಟನಾಶಕಗಳು ಮತ್ತು ಆಧುನಿಕ ಉಪಕರಣಗಳನ್ನು ರೈತರಿಗೆ ವಿತರಿಸಿ, ರಾಷ್ಟ್ರದ ಆಹಾರ ಉತ್ಪತ್ತಿಯಲ್ಲಿ ಮುನ್ನಡೆ ಕಾಣುವಂತೆ ಮಾಡಿದ್ದರಿಂದ ಬಾಬೂಜಿಯವರನ್ನು “ಹಸಿರು ಕ್ರಾಂತಿಯ ಹರಿಕಾರ” ನೆಂದು ರಾಷ್ಟ್ರದ ಮಹಾಜನತೆ ಗೌರವದಿಂದ ಕರೆಯಿತು ಎಂದರು.

     

    ಬಾಬೂಜಿ ರಕ್ಷಣಾ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಸೈನ್ಯದಲ್ಲಿ ಜಾತಿ ಮತ್ತು ಪ್ರಾದೇಶಿಕ ಪ್ರಜ್ಞೆ ಮಾಯವಾಗಿ, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಭಾವನೆ ಬೆಳೆಯುವಂತಾಯಿತು ದೇಶದ ಬಡವರ ಹಸಿವು ನೀಗಿಸುವ ಉದ್ದೇಶದಿಂದ FCI (Food Corporation of India) ಸ್ಥಾಪಿಸಿ ದೇಶದ ಅಸಂಖ್ಯಾತ ಹಸಿದವರಿಗೆ “ಅನ್ನದಾತ” ಆದರು.

     

    ಡಾ. ಬಿ.ಆರ್. ಅಂಬೇಡ್ಕರ್ ರವರು ಒಬ್ಬ ಸಮಾಜ ಸುಧಾಕರಾಗಿ, ಸಮ ಸಮಾಜ ನಿರ್ಮಾಣ ಮಾಡಬೇಕೆನ್ನುವ ಅವರ ಹೋರಾಟ ಹಾಗೂ ಸಂವಿಧಾನದಲ್ಲಿ ನೀಡಿದ ಚಿಂತನೆಗಳನ್ನು ಡಾ. ಬಾಬು ಜೀವನರಾಮ್ ರವರು ಅವರ ಅಧಿಕಾರ ಅವಧಿಯಲ್ಲಿ ಜಾರಿಗೆ ತರಲು ಅಹರ್ನಹಿಸಿ ಶ್ರಮಿಸಿದರು. ಈ ಎರಡು ಚೇತನಗಳು ದಲಿತ ಸಮುದಾಯದ ಎರಡು ಕಣ್ಣುಗಳು ಇದ್ದಹಾಗೇ, ಇವರ ಚಿಂತನೆ, ಹೋರಾಟದ ಫಲವಾಗಿ, ತಳ ಸಮುದಾಯಗಳು ತಲೆ ಎತ್ತಿ ನಿಲ್ಲುವಂತಾಗಿ ಸಮಾಜದಲ್ಲಿ ಸಂವಿಧಾನತ್ಮಕ ಗೌರವ ಸ್ಥಾನ ಮಾನಗಳು ಲಭಿಸುವಂತಾಗಿದೆ ಎಂದರು.

    ಡಾ. ಬಾಬು ಜಗಜೀವನರಾಮ್ ರವರು ವಿದ್ವತ್, ತಳ ಸಮುದಾಯಗಳ ಬಗ್ಗೆ ಇದ್ದ ಅವರ ಕಾಳಜಿ ಹಾಗೂ ಆಡಳಿತದ ದಕ್ಷತೆಯನ್ನು ಕಂಡು ಮಹಾತ್ಮ ಗಾಂಧಿಜಿಯವರು ಡಾ. ಬಾಬು ಜಗಜೀವನರಾಮ್ ಅವರನ್ನು “ಭಾರತದ ಪುಟವಿಟ್ಟ ಬಂಗಾರ” ಎಂದು ಸಂಭೋದಿಸಿದರು.

     

    ಈ ಸಂದರ್ಭದಲ್ಲಿ ಉಪ ಮುಖ್ಯ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ , ವಿಧಾನ ಪರಿಷತ್ ನ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಪರಮೇಶ್ವರ್,ಮಹದೇವಪ್ಪ,ಶಾಸಕ ಬಸವಂತಪ್ಪ,ಮುಖ್ಯ ಕಾರ್ಯದರ್ಶಿ ಶಾಲನಿ ರಜನೀಶ್,ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್,ಆಯುಕ್ತರಾದ ರಾಕೇಶ್ ಕುಮಾರ್ ಉಪಸ್ಥಿತರಿದ್ದರು.