Blog

  • ಶಾಲಾ ಪ್ರವೇಶಕ್ಕೆ ಮಕ್ಕಳ ಕನಿಷ್ಠ ವಯಸ್ಸಿನ ವಯೋಮಿತಿ ಸಡಿಲಿಸಿ – ಸಂಜೀವ್ ನಾಯಕ್

    ದೊಡ್ಡಬಳ್ಳಾಪುರ:ಮಕ್ಕಳ ಶಾಲಾ ಪ್ರವೇಶಕ್ಕೆ ಕನಿಷ್ಠ ವಯಸ್ಸಿನ ವಯೋಮಿತಿ ಸಡಿಲಿಸುವಂತೆ ಒತ್ತಾಯಿಸಿ ತಾಲೂಕು ಕನ್ನಡ ಪಕ್ಷ ಶಿವರಾಜ್ ಅಭಿಮಾನಿಗಳ ಸಂಘ, ಕನ್ನಡ ಜಾಗೃತ ಪರಿಷತ್ ಸೇರಿದಂತೆ ಹಲವು ಪ್ರಗತಿ ಪರ ಸಂಘಟನೆಗಳ ವತಿಯಿಂದ ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

     

    ಪ್ರತಿಭಟನೆಯನ್ನು ಉದ್ದೇಶಿಸಿ ಕನ್ನಡ ಪಕ್ಷದ ರಾಜ್ಯಉಪಾಧ್ಯಕ್ಷರಾದ ಸಂಜೀವ್ ನಾಯಕ್ ಮಾತನಾಡಿ ಮಕ್ಕಳ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷಗಳು ಕಡ್ಡಾಯ ಎಂಬ ರಾಜ್ಯ ಸರ್ಕಾರದ ಆದೇಶ ಅವೈಜ್ಞಾನಿಕವಾಗಿದೆ. ನರ್ಸರಿ, ಎಲ್. ಕ್. ಜಿ., ಯು. ಕೆ. ಜಿ. ಓದಿದ ಮಕ್ಕಳು ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷ ತುಂಬುವವರೆಗೂ ಕಾಯಬೇಕಿದೆ. ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯುವಂತಿಲ್ಲ. ಸಿದ್ದರಾಮಯ್ಯ ಸರ್ಕಾರದ ಈ ಆದೇಶ ಯು. ಕೆ. ಜಿ. ಓದುತ್ತಿರುವ ರಾಜ್ಯದ ಸುಮಾರು ಆರು ಲಕ್ಷ ಮಕ್ಕಳ ಒಂದು ವರ್ಷದ ಭವಿಷ್ಯವನ್ನು ಹಾಳು ಮಾಡುತ್ತದೆ. ಅಷ್ಟೇ ಅಲ್ಲದೆ ವ್ಯರ್ಥವಾಗುವ ಒಂದು ವರ್ಷಮತ್ತೆ ಯು. ಕೆ. ಜಿ. ಯಲ್ಲಿಯೇ ಮುಂದುವರೆಯಬೇಕು. ಸಾಲದ್ದಕ್ಕೆ ಪೋಷಕರಿಗೆ ಒಂದು ವರ್ಷದ ಸುಮಾರು ಎಪ್ಪತ್ತು ಸಾವಿರ ಶಿಕ್ಷಣ ವೆಚ್ಚ ಹೊರೆಯಾಗಲಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರು ಸಹ ಪ್ರಾಥಮಿಕ ಪ್ರೌಢ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಯಾವುದೇ ಪೂರ್ವಪರ ಚಿಂತನೆಗಳಿಲ್ಲದೆ ಹೊಸ ನೀತಿ ಜಾರಿಗೆ ಅದೇಶಿಸಿರುವುದು ತೀರಾ ಖಂಡನೀಯ. ಇದನ್ನು ಕೈ ಬಿಟ್ಟು ಹಳೆಯ ಶಿಕ್ಷಣ ನೀತಿಯನ್ನೇ ಮುಂದುವರೆಸಬೇಕು. ಇಲ್ಲವಾದಲ್ಲಿ ರಾಜ್ಯದ ಎಲ್ಲಾ ಕನ್ನಡಪರ ರೈತಪರ, ದಲಿತ ಪರ ಪ್ರಗತಿಪರ ಸಂಘಟನೆಗಳು ಸರ್ಕಾರದ ವಿರುದ್ಧ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸಂಜೀವ್ ನಾಯಕ್ ಹೇಳಿದರು.

     

    ಪ್ರಗತಿಪರ ಚಿಂತಕ ಗುರುರಾಜಪ್ಪ ಮಾತನಾಡಿ ಶೈಕ್ಷಣಿಕವಾಗಿ ಕನಿಷ್ಠ ಪ್ರಜ್ಞೆ ಇಲ್ಲದ ಶಿಕ್ಷಣ ಸಚಿವ ಮಧು ಬಂಗಾರಪ್ಪ ನವರ ಆದೇಶ ಹಾಸ್ಯಾಸ್ಪದವಾಗಿದೆ. ಸಾಲದ್ದಕ್ಕೆ ಮಕ್ಕಳ ಭವಿಷ್ಯ ಹಾಗೂ ಬಡ ಪೋಷಕರಿಗೆ ಹೊರೆ ಎನಿಸುವ ಸರ್ಕಾರದ ಹೊಸ ಶಿಕ್ಷಣ ನೀತಿ ತೀರಾ ಅವೈಜ್ಞಾನಿಕವಾಗಿದ್ದು ಈ ಕೂಡಲೇ ಸರ್ಕಾರ ಹೊಸ ಆದೇಶವನ್ನು ಹಿಂಪಡೆದು ಹಳೆಯ ಶಿಕ್ಷಣ ನೀತಿಯನ್ನು ಮುಂದುವರೆಸಬೇಕು. ಜೊತೆಗೆ ಅವೈಜ್ಞಾನಿಕ ನೀತಿಯನ್ನು ಅದೇಶಿಸಿದ ವಿದ್ಯಾ ಮಂತ್ರಿ ಮಧು ಬಂಗಾರಪ್ಪ ನವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು. ಇಲ್ಲವಾದಲ್ಲಿ ರಾಜ್ಯ ವ್ಯಾಪಿ ಉಗ್ರ ಹೋರಾಟವನ್ನು ಸರ್ಕಾರದ ವಿರುದ್ಧ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

     

    ಕನ್ನಡ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಡಿ. ಪಿ. ಆಂಜನೇಯ ಮಾತನಾಡಿ ಒಂದನೇ ತರಗತಿಗೆ ಮಕ್ಕಳು ಪ್ರವೇಶ ಪಡೆಯುವ ವಯಸ್ಸಿನ ವಿಚಾರವು ರಾಜ್ಯದಲ್ಲಿ ಪೋಷಕರ ಕಳವಳಕ್ಕೆ ಕಾರಣವಾಗಿದೆ. ಒಂದನೇ ತರಗತಿ ಪ್ರವೇಶಕ್ಕೆ ಮಕ್ಕಳಿಗೆ ಕಡ್ಡಾಯ ಆರು ವರ್ಷ ಪೂರೈಸಿರಬೇಕು ಎನ್ನುವ ರಾಜ್ಯ ಸರ್ಕಾರದ 2022ರ ಆದೇಶವನ್ನು ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪಾಲಿಸಲು ಮುಂದಾಗಿವೆ. ಇದರಿಂದ ರಾಜ್ಯದ ಲಕ್ಷಾಂತರ ಮಕ್ಕಳು ಮತ್ತೊಂದು ವರ್ಷ ಯು. ಕೆ. ಜಿ. ಯಲ್ಲೇ ಕೊಳೆಯಬೇಕಾಗುತ್ತದೆ. ಇದರಿಂದ ಪೋಷಕರ ಆರ್ಥಿಕ ಹೊರೆ ಹಾಗೂ ಮಕ್ಕಳ ಮಾನಸಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 1983ರ ಶಿಕ್ಷಣ ನೀತಿಯನ್ನು ಮುಂದುವರೆಸಬೇಕೆಂದು ಪೋಷಕರ ಒತ್ತಾಯವಾಗಿದೆ. ವರ್ಷಮ್ ಪ್ರತಿ ಇದೆ ಸಮಸ್ಯೆ ಉದ್ಭವಿಸುವುದರಿಂದ ನಿಯಮದ ಪ್ರಕಾರ 2025 ಜೂನ್ 1ಕ್ಕೆ ಆರು ವರ್ಷ ತುಂಬಲಿರುವ ಮಕ್ಕಳಿಗೆ ಒಂದನೇ ತರಗತಿ ಪ್ರವೇಶದ ಸರ್ಕಾರದ ಆದೇಶವನ್ನು ಮರು ಪರಿಶೀಲಿಸ ಬೇಕು. ಇದೆ ಆದೇಶ ಮುಂದುವರೆದರೆ ರಾಜ್ಯದ ಎಲ್ಲಾ ಸಂಘಟನೆ ಗಳೊಂದಿಗೆ ವಿಧಾನ ಸೌದಕ್ಕೆ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಂಜನೇಯ ಹೇಳಿದರು.

    ಪ್ರತಿಭಟನೆಯಲ್ಲಿ ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ. ವೆಂಕಟೇಶ್, ತಾಲೂಕು ಕನ್ನಡ ಪಕ್ಷದ ಅಧ್ಯಕ್ಷ ವೆಂಕಟೇಶ್, ಜಿಲ್ಲಾಧ್ಯಕ್ಷ ಮುನಿ ಪಾಪಯ್ಯ, ವಿ. ಪರಮೇಶ, ಕೇಬಲ್ ಮುನಿರಾಜ್, ಮಂಜುನಾಥ್, ರಂಗನಾಥ್, ಬೋರೇಗೌಡ, ಕುಮಾರ್, ಸೂರಿ, ರಾಮಚಂದ್ರ, ರಾಮು, ಆನಂದ್, ಚಂದ್ರಣ್ಣ, ಮುನಿಸ್ವಾಮಿ ಸೇರಿದಂತೆ ವಿವಿಧ ಸಂಘಟನೆಗಳ ಹಲವಾರು ಮುಖಂಡರು ಭಾಗವಹಿಸಿದ್ದರು.

  • ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಗ್ರಾಮ ಪಂಚಾಯಿತಿ ಸದಸ್ಯ

    ತೂಬಗೆರೆ: ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಯುವಕರಲ್ಲಿ ಕ್ರೀಡಾ ಮನೋಭಾವ ಹೆಚ್ಚಿಸುವ ನಿಟ್ಟಿನಲ್ಲಿ “ಕಿಟ್ಟಿ ಕಪ್ ” ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ತಾಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯ ಟಿ ಎನ್ ಕೃಷ್ಣಪ್ಪ ( ಕಿಟ್ಟಿ ) ಆಚರಿಸಿಕೊಂಡಿದ್ದಾರೆ.

    ಹುಟ್ಟುಹಬ್ಬದ ಶುಭಾಶಯ ಕೋರಿದ ನಂತರ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಥಳೀಯವಾಗಿ ಬಿಜೆಪಿ ಪಕ್ಷವನ್ನು ಸಂಘಟಿಸಲು ನಿರಂತರ ಶ್ರಮಿಸುತ್ತಿರುವ ಕೃಷ್ಣಪ್ಪ (ಕಿಟ್ಟಿ ) ಸಮಾಜದ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸುವದಷ್ಟೇ ಅಲ್ಲದೇ ಅವರ ಸಮಸ್ಯೆಗಳ ಪರಿಹಾರಕ್ಕೆ ಸದಾ ಮುಂದಿದ್ದು, ಮುಂದಾಳತ್ವ ವಹಿಸಿ ಪರಿಹಾರ ಕಲ್ಪಿಸುವುದು ಶ್ಲಾಘನೀಯ ವಿಷಯವಾಗಿದೆ, ಅವರ ಸೇವಾ ಕರೆಗಳು ಹೀಗೆ ಮುಂದುವರೆಯಲಿ ಎಂದರು.

    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕಾರ್ಯಗಳ ಕಡೆಗೆ ಗಮನ ಕೊಡುವ ಕೃಷ್ಣಪ್ಪ(ಕಿಟ್ಟಿ)ರವರು ಗ್ರಾಮದ ಸಮಸ್ಯೆಗಳನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಿಗೆ ತಲುಪಿಸುವ ಪರಿ ಮೆಚ್ಚುವಂಥದ್ದು , ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದಂತೆ ಸಂಸದರ ಗಮನಕ್ಕೆ ತರುವ ಮೂಲಕ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿದ್ದಾರೆ ಎಂದರು .

    ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಪ್ಪ (ಕಿಟ್ಟಿ) ಮಾತನಾಡಿ ಈ ಹಿಂದೆ ಬಿಜೆಪಿ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬಿಜೆಪಿ ನಾಯಕರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಆದ ಪಿಳ್ಳ ಮುನಿಶಾಮಪ್ಪ ರವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದೆವು. ಅಂದಿನಿಂದ ಇಂದಿನವರೆಗೂ ಪಕ್ಷ ಸಿದ್ದಂತವನ್ನು ಬಿಟ್ಟುಕೊಡದೆ ಸರ್ಕಾರದ ಯೋಜನೆಗಳನ್ನು ಗ್ರಾಮಸ್ಥರಿಗೆ ತಲುಪಿಸುವುದು ಅವರಿಗೆ ಅನ್ಯಾಯವಾದಾಗ ನ್ಯಾಯಪರ ಹೋರಾಟಗಳನ್ನು ಮಾಡುವ ಮೂಲಕ ಸದಾ ಅವರ ಬೆಂಬಲವಾಗಿ ನಿಂತಿದ್ದೇನೆ , ಜೊತೆಗೆ ನಿರಂತರ ನಮ್ಮ ಕೈಲಾದಷ್ಟು ಸೇವೆ ಮಾಡಿಕೊಳ್ಳುತ್ತಾ ಬರುತ್ತಿದ್ದೇವೆ, ಮುಂದೆಯೂ ಸಹ ನಮ್ಮ ಜನರ ಧ್ವನಿಯಾಗಿ ಅನ್ಯಾಯದ ವಿರುದ್ಧವಾಗಿ ಹೋರಾಟಗಳನ್ನು ನಡೆಸುತ್ತಾ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನನ್ನ ಕೈಲಾದ ಸೇವೆಯನ್ನು ಸದಾ ಮಾಡುತ್ತೇನೆ ಎಂದರು.

    ಈ ಸಲದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಾದ ನಾರಾಯಣಪ್ಪ,ಆರ್ ಪ್ರತಾಪ್, ತೂಬಗೆರೆ ಬಿಜೆಪಿ ಅಧ್ಯಕ್ಷ ವಾಸು, ಗ್ರಾಮ ಪಂಚಾಯತ್ ಸದಸ್ಯರಾದ ಪುಟ್ಟರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್, ಗಂಗರಾಜು ನಾರಸಿಂಹನಹಳ್ಳಿ,  ರಂಗರಾಜು, ಸುರೇಶ್, ಮುನೇಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

  • ಓಂ ಶ್ರೀ ಬಗಳಾಮುಖಿ ದೇವಾಲಯ ಟ್ರಸ್ಟ್‌ (ರಿ.) ಉದ್ಘಾಟನಾ ಸಮಾರಂಭ ಸಂಪನ್ನ : ನೂತನ ಟ್ರಸ್ಟ್ ಪದಾಧಿಕಾರಿಗಳಿಗೆ ಶುಭ ಹಾರೈಸಿದ ಶ್ರೀಗಳು

    ಇದೇ ಏಪ್ರಿಲ್ 10ರ ಗುರುವಾರದಂದು ಓಂ ಶ್ರೀ ಬಗಳಾಮುಖಿ ದೇವಾಲಯ ಟ್ರಸ್ಟ್‌ (ರಿ.) ಉದ್ಘಾಟನಾ ಕಾರ್ಯಕ್ರಮವು ಸುಕ್ಷೇತ್ರ ಶ್ರೀ ಕೋಡಿಮಠ ಮಹಾಸಂಸ್ಥಾನದ ಮಹಾಸ್ವಾಮಿಗಳಾದ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳ ಶುಭಶೀರ್ವಾದದಿಂದ ಅದ್ದೂರಿಯಾಗಿ ನೆರವೇರಿತು ಎಂದು ಟ್ರಸ್ಟ್ ನ ಅಧ್ಯಕ್ಷ ವೈ.ಸುಬ್ರಮಣಿ ತಿಳಿಸಿದರು.

     

    ಅರದೇಶನಹಳ್ಳಿ, ಕುಂದಾಣ ಹೋಬಳಿಯ ಅರದೇಶನಹಳ್ಳಿಯ ಶ್ರೀ ಬಗಳಾಮುಖಿದೇವಿ ದೇವಾಲಯದ ಸರ್ವತೋಮುಖ ಅಭಿವೃದ್ಧಿಗಾಗಿ ಓಂ ಶ್ರೀ ಬಗಳಾಮುಖಿ ದೇವಾಲಯ ಟ್ರಸ್ಟ್‌ (ರಿ.) ಸ್ಥಾಪಿಸಿದ್ದು, ಸದರಿ ಟ್ರಸ್ಟ್ ನ ಉದ್ಘಾಟನೆಯನ್ನು ಹಲವು ಗಣ್ಯರ ಜೊತೆಗೂಡಿ ದೀಪ ಬೆಳಗಿಸಿ ಬಗಳಾಮುಖಿದೇವಿ ಅಮ್ಮನವರಿಗೆ ಮಂಗಳಾರತಿ ಸಲ್ಲಿಸುವ ಮೂಲಕ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಯವರು ನೂತನ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು,ಬಗಳಾಮುಖಿ ದೇವಿಯ ಕೃಪಾಶಿರ್ವಾದಿಂದ ಇಂದು ನೂತನ ಟ್ರಸ್ಟ್ ಸ್ಥಾಪಿಸಿ, ದೇವಾಲಯದ ಅಭಿವೃದ್ಧಿಗೆ ಮುಂದಾಗಿರುವ ಸುಬ್ರಮಣಿ ಹಾಗೂ ತಂಡಕ್ಕೆ ಶುಭವಾಗಲಿ, ಇಲ್ಲಿಗೆ ಬರುವ ಸಕಲ ಭಕ್ತರ ಸಂಕಷ್ಟಗಳನ್ನು ನೀವಾರಿಸುವ ಮೂಲಕ ಕೇವಲ ತಾಲ್ಲೂಕು ಜಿಲ್ಲೆ ಅಷ್ಟೇ ಅಲ್ಲದೇ ರಾಜ್ಯ ಎಲ್ಲೆಡೆ ತಾಯಿಯ ಪ್ರಸಿದ್ದಿ ಪಸರಿಸಲಿ ಎಂದರು.

    ಶಕ್ತಿ ದೇವಿಯ ಆಲಯ ಸ್ಥಾಪನೆ, ನಿರ್ವಹಣೆ ಸುಲಭದ ಕೆಲಸವಲ್ಲ ಇಂತಹ ಮಹಾತ್ಕಾರ್ಯಕ್ಕೆ ಪೂರಕವಾಗಿ ಶ್ರಮಿಸಿರುವ ಎಲ್ಲರಿಗೂ ತಾಯಿ ಬಗಳಾಮುಖಿ ಶುಭ ಉಂಟುಮಾಡಲಿ ಎಂದರು.

    ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಹನುಮಂತರಾಜು,ಕಾರ್ಯದರ್ಶಿಗಳಾದ ಕು|| ಯಮುನ, ಎಸ್. (ವಕೀಲರು), ಸಹಕಾರ್ಯದರ್ಶಿ ಎಸ್.ಎನ್. ನರಸಿಂಹಮೂರ್ತಿ, ವಿಜಯಲಕ್ಷ್ಮೀ,ನಾಗರಾಜು, ಸದಸ್ಯರಾದ ಹೆಚ್. ಹರೀಶ್,ಯಶ್ವಂತ್,ಯಲ್ಲಮ್ಮ,ಶಾರದಮ್ಮ,ರಾಮಮೂರ್ತಿ, ಆರ್. ಸಂತೋಷ, ಜಯರಾಮ್, ಮಂಜುನಾಥ್,ಪುನೀತ್, ಸಂಚಾಲಕರಾದ ಕೆ ಸಿ ಗೋಪಾಲ್,ಮಾರುತಿ, ಹನುಮಂತರಾಜು ಸೇರಿದಂತೆ ಹಲವರು ಹಾಜರಿದ್ದರು.

     

  • ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಪ್ರಥಮ ದರ್ಜೆ ಕಾಲೇಜಿನ ಅರಿವು ಸಾಹಿತ್ಯ ವೇದಿಕೆಯಿಂದ ಸಾಹಿತ್ಯ ಸಂವಾದ

    ದೊಡ್ಡಬಳ್ಳಾಪುರ : ಆಧುನಿಕ ಮಾಧ್ಯಮಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಪುಸ್ತಕದ ಓದು ನೀಡುವ ಆತ್ಮೀಯ ಭಾವ ಅನನ್ಯವಾಗಿಯೇ ಉಳಿದಿದೆ ಎಂದು ಕವಯತ್ರಿ ಮಂಜುಳಾ ಹುಲಿಕುಂಟೆ ಹೇಳಿದರು.

    ಇಲ್ಲಿನ ಕೊಂಗಾಡಿಯಪ್ಪ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಅರಿವು ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ ನಡೆದ ಸಾಹಿತ್ಯ ಚರ್ಚೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿಯ ಆಯಾಮಗಳು ಭಿನ್ನವಾಗಿರುತ್ತವೆ. ಸಮಕಾಲೀನ ಬರೆಹಗಾರರ ಬರೆಹಗಳು ಅವರನ್ನು ತಲುಪಬೇಕು. ಕೃತಕ ಬುದ್ದಿಮತ್ತೆಯ ಯುಗದಲ್ಲಿ ಸೃಜನಶೀಲತೆಯೂ ಸರಕಾಗುತ್ತಿದೆ. ಆದರೆ ಮನುಷ್ಯ ಸಂವೇದನೆಯನ್ನು ಪ್ರಜ್ಞಾಪೂರ್ವಕವಾಗಿ ಬಳಸಿಕೊಳ್ಳುವ ಕೆಲಸ ಆಗಬೇಕು. ಬದಲಾಗುತ್ತಿರುವ ಸಾಮಾಜಿಕ ಸಂದರ್ಭಗಳಲ್ಲಿ ಸಾಹಿತ್ಯದ ಪ್ರಭಾವ ಹಾಗೂ ಔಚಿತ್ಯದ ಕುರಿತು ಅಕಾಡೆಮಿಕ್‌ ಆದ ಚರ್ಚೆಗಳು ಅಗತ್ಯ. ಎಲ್ಲ ಕಾಲಕ್ಕೂ ಸಲ್ಲುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಚಿಂತನೆಗಳ ಬಗ್ಗೆ ಮರು ವಿಮರ್ಶೆ ಅಗತ್ಯವಿದೆ ಎಂದರು.

    ಸಾಹಿತ್ಯ ಸಂವೇದನೆಯ ಒಳನೋಟಗಳ ಕುರಿತು ಮಾತನಾಡಿದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ರವಿಕಿರಣ್ ಕೆ.ಆರ್, ಸಾಹಿತ್ಯದ ಓದು ವ್ಯಕ್ತಿಯನ್ನು ಎಂದಿಗೂ ಏಕಾಂಗಿಯಾಗಿರಲು ಬಿಡುವುದಿಲ್ಲ. ಸಾಹಿತ್ಯ ಸಂವೇದನಾಶೀಲ ವ್ಯಕ್ತಿತ್ವದ ನೈಜ ಜತೆಗಾರನಿದ್ದಂತೆ. ಭಾವನೆಗಳ ಅನನ್ಯತೆ ಅರಿತರೆ ಸಂಬಂಧಗಳ ಮಹತ್ವ ತಿಳಿಯುತ್ತದೆ. ಸಾಹಿತ್ಯ ಗತಕಾಲದ ಸರಕು ಮಾತ್ರವಾಗದೆ, ಸಮಾಜ ಹಾಗೂ ವರ್ತಮಾನದ ಕುರಿತ ಆಲೋಚನೆಗಳ ಜೊತೆಗೆ ಭವಿಷ್ಯದ ಬಗೆಗಿನ ಎಚ್ಚರಗಳನ್ನೂ ಒಳಗೊಂಡಿರುತ್ತದೆ ಎಂದರು.

     

    ಯುವ ಮನಸ್ಸುಗಳಲ್ಲಿ ಮೂಡುವ ರಸಭಾವಗಳಿಗೆ ಅಕ್ಷರದ ರೂಪ ದೊರೆಯಬೇಕು. ಅನ್ನಿಸಿದ್ದನ್ನು ಹೇಳಿಬಿಡುವ ಮುಕ್ತತೆ ಸಾಹಿತಿಗೆ ಅಗತ್ಯ. ಕನ್ನಡದ ನಾಳೆಗಳ ಬಗ್ಗೆ ಚಿಂತಿಸುವ ಜತೆಗೆ ಸಶಕ್ತ ಚಿಂತನೆಗಳನ್ನು ಪ್ರಚೋದಿಸಿ, ಮಾನವೀಯ ಆಲೋಚನೆಗಳಿಗೆ ಮುಖಾಮುಖಿಯಾಗಿಸುವ ಪ್ರಕ್ರಿಯೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

    ಕನ್ನಡ ವಿಭಾಗದ ಮುಖ್ಯಸ್ಥ ಪ್ರವೀಣ್‌ ತಳಗವಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಓದು ಮತ್ತು ಗ್ರಹಿಕೆಯ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಸಾಹಿತ್ಯಿಕ ಚರ್ಚೆಗಳು ಹೆಚ್ಚು ಮಹತ್ವ ಪಡೆದಿವೆ ಎಂದರು.

     

    ಪ್ರಾಂಶುಪಾಲ ಪ್ರೊ.ಆರ್.ಎನ್.ಪಂಚಾಕ್ಷರಯ್ಯ ಅಧ್ಯಕ್ಷತೆ ವಹಿಸಿದ್ದರು. ಮಂಜುಳಾ ಹುಲಿಕುಂಟೆ ಹಾಗೂ ಪ್ರೊ.ಕೆ.ಆರ್.ರವಿಕಿರಣ್ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ವಿದ್ಯಾರ್ಥಿಗಳೊಂದಿಗೆ ಸಾಹತ್ಯ ಸಂವಾದ ನಡೆಯಿತು. ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

  • ಸವಾಲುಗಳ ನಡುವೆಯು ಮುನ್ನಡೆಯುತ್ತಿದೆ ನಾಟಕ ಕ್ಷೇತ್ರ – ನಟ ಪ್ರಕಾಶ್ ಬೆಳವಾಡಿ

    ಶಿವಮೊಗ್ಗ: ರಂಗಭೂಮಿ ಕ್ಷೇತ್ರವು ತಂತ್ರಜ್ಞಾನದ ಪರಿಣಾಮ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಉತ್ತಮ ಪ್ರೇಕ್ಷಕರು ಇರುವವರೆಗೂ ನಾಟಕ ಕ್ಷೇತ್ರ ನಿರಂತರವಾಗಿ ಮುನ್ನಡೆಯುತ್ತದೆ ಎಂದು ನಟ ಪ್ರಕಾಶ್ ಬೆಳವಾಡಿ ಹೇಳಿದರು.

     

     

    ಬಹುಮುಖಿ ಸಂಘಟನೆಯಿಂದ ಬುಧವಾರ ಆಯೋಜಿಸಿದ್ದ 50ನೇ ಕಾರ್ಯಕ್ರಮದಲ್ಲಿ ರಂಗಭೂಮಿ ತಂತ್ರಜ್ಞಾನ ಕುರಿತು ಮಾತನಾಡಿ, ತಂತ್ರಜ್ಞಾನ ಅನೇಕ ಕ್ಷೇತ್ರಗಳ ಅನುಕೂಲ ಮತ್ತು ಪ್ರತಕೂಲ ಪರಿಣಾಮ ಬೀರುತ್ತಿರುವುದು ವಾಸ್ತವ ಸಂಗತಿ. ರಂಗಭೂಮಿ ಮೇಲೂ ತಂತ್ರಜ್ಞಾನ ಪರಿಣಾಮ ಬೀರಿದೆ ಎಂದು ತಿಳಿಸಿದರು.

     

     

    ಸಿನಿಮಾ ಒಂದೇ ಸಮಯದಲ್ಲಿ ಸಾವಿರಾರು ಪರದೆಗಳ ಮೇಲೆ ಪ್ರದರ್ಶನ ಆಗಲು ಸಾಧ್ಯವಿದೆ. ಈ ಮೂಲಕ ಕೋಟ್ಯಂತರ ರೂ. ಹಣ ಗಳಿಸಲು ಸಾಧ್ಯವಿದೆ. ಆದರೆ ನಾಟಕ ಕ್ಷೇತ್ರ ಕಲಾವಿದ ಮತ್ತು ಪ್ರೇಕ್ಷಕನ ನಡುವೆ ಬಾಂಧವ್ಯ ಮೂಡಿಸುತ್ತದೆ. ತಂತ್ರಜ್ಞಾನ ದುಬಾರಿ ಆಗಿರುವುದರಿಂದ ಅಳವಡಿಸಿಕೊಳ್ಳಲು ಕಷ್ಟ. ಹೆಚ್ಚಿನ ಹಣ ಅವಶ್ಯಕವಾಗಿ ಬೇಕಾಗುತ್ತದೆ. ಆದರೆ ತಂತ್ರಜ್ಞಾನದ ಹೊರತಾಗಿ ಉತ್ತಮ ನಾಟಕ ಮೂಡಿಬರಲು ಸಾಧ್ಯವಿದೆ ಎಂದರು.

    ಸಿನಿಮಾ ಏಕಕಾಲಕ್ಕೆ ಸಾವಿರಾರು ಪರದೆಗಳಲ್ಲಿ ಪ್ರದರ್ಶನಗೊಂಡು ವಿಮರ್ಶೆ ಪ್ರಕಟ ಆಗುವ ಮುನ್ನವೇ ಕೋಟ್ಯಂತರ ರೂಪಾಯಿ ಗಳಿಸುತ್ತದೆ. ಆದರೆ ನಾಟಕ ಹತ್ತಾರು ಕಡೆ ಪ್ರದರ್ಶನ ಏಕಕಾಲದಲ್ಲಿ ಸಾಧ್ಯವಾಗುವುದಿಲ್ಲ.ಸಿನಿಮಾಗಳಿಗೆ ದೊಡ್ಡ ಮಟ್ಟದ ಪ್ರಚಾರ ನೀಡಿದಂತೆ ನಾಟಕಗಳಿಗೂ ದೊಡ್ಡ ಪ್ರಚಾರ ನೀಡಲು ಸಾಧ್ಯವಿಲ್ಲ. ಇದರಿಂದ ನಾಟಕ ಕ್ಷೇತ್ರ ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.

    ಬಹುಮುಖಿ ಸಂಘಟಕ ಪ್ರೊ ಎಚ್.ಎಸ್.ನಾಗಭೂಷಣ, ಜಿ.ವಿಜಯಕುಮಾರ್, ಅನಿಲಕುಮಾರ್ ಭೂಮರಡ್ಡಿ, ಡಾ. ಉಷಾ ರಮೇಶ್, ಕಾಂತೇಶ್ ಕದರಮಂಡಲಗಿ, ಡಾ. ಕೆ.ಜಿ.ವೆಂಕಟೇಶ್ ಇತರರಿದ್ದರು.

  • ಏಪ್ರಿಲ್ 12ಮತ್ತು 13ಕ್ಕೆ 26ನೇ ಕನ್ನಡ ಸಾಹಿತ್ಯ ಸಮ್ಮೇಳನ : ಕನಸವಾಡಿಯಲ್ಲಿ ನೆಡೆಯಲಿದೆ ಎರಡು ದಿನಗಳ ಅಕ್ಷರ ಜಾತ್ರೆ – ಬಿ.ಎನ್.ಕೃಷ್ಣಪ್ಪ

    ದೊಡ್ಡಬಳ್ಳಾಪುರ: ತಾಲೂಕಿನ ಮಧುರೆ ಹೋಬಳಿ ಕನಸವಾಡಿಯಲ್ಲಿ ಏ.12 ಮತ್ತು 13ರಂದು ಶನಿವಾರ ಮತ್ತು ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಬೆಂ.ಗ್ರಾ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ತಿಳಿಸಿದರು.

     

    ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 26ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಕನಸವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವೇದಿಕೆ ಸಜ್ಜಗುತ್ತಿದ್ದು . ಈ ಬಾರಿ ಸಮ್ಮೇಳನದ ವೇದಿಕೆಗೆ ಹಿರಿಯ ಕ್ರೀಡಾಪಟು ದಿವಂಗತ ಜಿ.ಗೋಪಿನಾಥ್ ಅವರ ಹೆಸರನ್ನು ಮತ್ತು ಮಹಾದ್ವಾರಕ್ಕೆ ಮುತ್ಸ್ದದಿ ರಾಜಕಾರಣಿ ದಿವಂಗತ ಸಿ.ಡಿ,ಸತ್ಯನಾರಾಯಣಗೌಡರ ಹೆಸರನ್ನು ಇಡಲಾಗಿದೆ ಜೊತೆಗೆ ಹಿರಿಯ ಛಾಯಾಗ್ರಾಹಕ, ಸಾಕ್ಷ್ಯಚಿತ್ರ ಕಲಾವಿದ ಟಿ.ಕೆಂಪಣ್ಣ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಮಧುರೆ ಹೋಬಳಿಯ ಸ್ಥಳೀಯ ಆಡಳಿತ, ಮುಖಂಡರು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ, ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್‌ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಡಾ.ಕೆ.ಸುಧಾಕರ್, ಶಾಸಕ ಧೀರಜ್‌ ಮುನಿರಾಜ್‌ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

    ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರು ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕನ್ನಡಪರ ಚಿಂತಕರು, ಸಾಹಿತಿಗಳು, ಸ್ಥಳೀಯ ಸಾಧಕರು ವಿವಿಧ ವಿಚಾರಗೋಷ್ಠಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. 50ಕ್ಕೂ ಹೆಚ್ಚಿನ ಸಾಧಕ ಗಣ್ಯರಿಗೆ ಪುರಸ್ಕಾರ ನೀಡಲಾಗುತ್ತಿದೆ. ವಿವಿಧ ಇಲಾಖೆಗಳಿಂದ ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲು ಜಿಲ್ಲಾಡಳಿತ ಯೋಜಿಸಿದೆ. ಎರಡೂ ದಿನಗಳ ಕಾಲ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.

    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, 2 ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಮೊದಲ ದಿನ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಕಾರ್ಯಕ್ರಮ, ಕನ್ನಡದ ಅರಿವು ಮತ್ತು ಅಭಿಯಾನ ಕುರಿತ ವಿಚಾರಗೋಷ್ಠಿ ತ.ನ.ಪ್ರಭುದೇವ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಚಿಂತಕ ಕೆ.ರಾಜಕುಮಾರ್ ವಿಚಾರ ಮಂಡನೆ ಮಾಡಲಿದ್ದಾರೆ. ಯುವ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

     

    2ನೇ ದಿನವಾದ ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭಿವೃದ್ದಿ ಮತ್ತು ಆತಂಕಗಳು ಕುರಿತ ವಿಚಾರಗೋಷ್ಠಿ ವಿಮರ್ಶಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಾವಯವ ಕೃಷಿ ತಜ್ಞ ಡಾ.ಶಿವನಾಪುರ ರಮೇಶ್, ಜಗನ್ನಾಥ್‌ಪ್ರಕಾಶ್‌ ವಿಷಯ ಮಂಡನೆ ಮಾಡುವರು. ಬಳಿಕ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಬಹಿರಂಗ ಅಧಿವೇಶನ, ಸನ್ಮಾ ಹಾಗೂ ಸಮಾರೋಪ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ವಿವರಿಸಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ಕಾರ್ಯದರ್ಶಿ ಅಶ್ವತ್ಥಗೌಡ, ಜಿಲ್ಲಾ ಪ್ರತಿನಿಧಿ ಶರಣಯ್ಯ ಹಿರೇಮಠ, ದೇವನಹಳ್ಳಿ ತಾಲೂಕು ಅಧ್ಯಕ್ಷ ನಂಜೇಗೌಡ, ನೆಲಮಂಗಲ ತಾಲೂಕು ಕಾರ್ಯದರ್ಶಿಗಳಾದ ಸದಾನಂದ ಆರಾಧ್ಯ, ಭಾನುಪ್ರಕಾಶ್, ಮಧುರೆ ಹೋಬಳಿ ಕಾರ್ಯದರ್ಶಿ ಚಂದ್ರಶೇಖರಯ್ಯ, ಕಸಬಾ ಹೋಬಳಿ ಕಾರ್ಯದರ್ಶಿ ಸುರೇಶ್, ತಾಲೂಕು ಘಟಕದ ಪ್ರತಿನಿಧಿ ಸಫೀರ್ ಮತ್ತಿತರರು ಹಾಜರಿದ್ದರು.

     

  • ಗುಡುಗು-ಸಿಡಿಲಿನ ಅಪಾಯದಿಂದ ಪಾರಾಗಲು ಏನು ಮಾಡಬೇಕು….??? ಇಲ್ಲಿದೆ ಮಾಹಿತಿ

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸಲಹೆ ಸೂಚನೆಗಳನ್ನು ನೀಡಲಾಗಿದ್ದು.

     

    ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು-ಸಿಡಿಲು ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾರ್ವಜನಿಕರು ಗುಡುಗು-ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತದಿಂದ ಸಲಹೆ ಸೂಚನೆಗಳನ್ನು ನೀಡಿದೆ.

     

    *ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಸಾರ್ವಜನಿಕರು ಪಾಲಿಸಬೇಕಾದ ಸಲಹೆ ಸೂಚನೆಗಳು*

     

    ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ Common Alerting Protocol (CAP) ಮುಖಾಂತರ ಬರುವ Alerts / ಸಂದೇಶಗಳನ್ನು ಮೊಬೈಲ್ ನಲ್ಲಿ ಗಮನಿಸುವುದು. ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗದಿರುವುದು. ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಲ್ಲಿ ಆಶ್ರಯ ಪಡೆಯುವುದು.

     

    ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಇಳಿದು ಪ್ರವಾಹ ಬರದಂತಹ ತಗ್ಗು ಪ್ರದೇಶವನ್ನು ಖಚಿತಪಡಿಸಿಕೊಂಡು ಆಶ್ರಯ ಪಡೆಯುವುದು. ನೀರಿನ ಮೂಲಗಳಾದ ಕೆರೆ ಮತ್ತು ನದಿಗಳಿಂದ ದೂರವಿರುವುದು. ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು, ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರುವುದು.

     

    ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು. ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು. ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸಾಕಷ್ಟು ಸಮಯವಿಲ್ಲದಿದ್ದರೆ ಎರಡು ಕಾಲುಗಳನ್ನು ಜೋಡಿಸಿ ಮಂಡಿಯೂರಿ ಕುಳಿತುಕೊಂಡು ತಲೆಯನ್ನು ಬಗ್ಗಿಸಿ ಕಿವಿಗಳನ್ನು ಮುಚ್ಚಿಕೊಳ್ಳುವುದು.

     

    ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಇವು ಸಿಡಿಲನ್ನು ಆಕರ್ಷಿಸುತ್ತವೆ. ಅರಣ್ಯ ಪ್ರದೇಶದಲ್ಲಿದ್ದರೆ ಸಣ್ಣ/ಚಿಕ್ಕ ಮರಗಳ ಕೆಳಗೆ ಆಶ್ರಯ ಪಡೆಯುವುದು. ಲೋಹದ ವಸ್ತುಗಳನ್ನು ಬಳಸಬಾರದು ಮತ್ತು ದ್ವಿಚಕ್ರ ವಾಹನಗಳು, ವಿದ್ಯುತ್ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರುವುದು. ಸಿಡಿಲು ಸಂದರ್ಭದಲ್ಲಿ ಮೊಬೈಲ್ ಫೋನ್ ಗಳನ್ನು ಬಳಸಬಾರದು. ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು. ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ. ಬೆಂಕಿ ಮತ್ತು ವಿದ್ಯುತ್ ಶಕ್ತಿ ಸಂಪರ್ಕದಿಂದ ದೂರವಿರುವುದು.

     

    ಮಕ್ಕಳು, ವಯೋವೃದ್ಧರು, ಜಾನುವಾರುಗಳನ್ನು ಹಾಗೂ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸುವುದು. ಹಾರುವ ಮತ್ತು ಅಪಘಾತಕ್ಕೆ ಕಾರಣವಾಗಬಹುದಾದ ಮರದ ಕಟ್ಟಿಗೆ ಅಥವಾ ಇತರೆ ಯಾವುದೇ ಅವಶೇಷಗಳನ್ನು ತೆಗೆದುಹಾಕುವುದು. ಸಿಡಿಲು ಸಂದರ್ಭದಲ್ಲಿ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇರುವುದರಿಂದ ಸಿಡಿಲು ಉಂಟಾಗುವ ಸಂದರ್ಭದಲ್ಲಿ ಸ್ನಾನ ಅಥವಾ ಶವರ್ ತೆಗೆದುಕೊಳ್ಳಬಾರದು, ಪಾತ್ರೆಗಳನ್ನು ತೊಳೆಯಬಾರದು, ಬಟ್ಟೆ ಒಗೆಯಬಾರದು.

     

    ವಿದ್ಯುತ್ ಸಂಪರ್ಕ ಹೊಂದಿರುವ ದೂರವಾಣಿಯನ್ನು ಬಳಸಬಾರದು. ಗುಡುಗು ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣವನ್ನು ಮುಂದೂಡುವುದು. ಗುಡುಗು ಸಿಡಿಲಿನ ಸಮಯದಲ್ಲಿ ಮೋಟಾರ್ ಸೈಕಲ್ ಅಥವಾ ಇನ್ನಿತರೆ ಯಾವುದೇ ತೆರೆದ ವಾಹನಗಳ ಸಂಚಾರವನ್ನು ಮಾಡದಿರುವುದು. ಆಟದ ಮೈದಾನ, ಉದ್ಯಾನವನಗಳು, ಈಜುಕೊಳ ಮತ್ತು ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸುವುದು.

    ದೋಣಿ ವಿಹಾರ ಅಥವಾ ಈಜುತ್ತಿದ್ದರೆ ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು. ಸಿಡಿಲಿನ ಸಂದರ್ಭದಲ್ಲಿ ವಾಹನ ಕಿಟಕಿಗಳನ್ನು ಮುಚ್ಚಿ ವಾಹನದ ಒಳಗೆ ಇರುವುದು. ಮಿಂಚಿನ ಒಡೆತದಿಂದಾಗಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆ ಇರುವುದರಿಂದ ಅರಣ್ಯ ಪ್ರದೇಶದಿಂದ ದೂರವಿದ್ದು ಗಿಡಗಡ್ಡೆಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಚಲಿಸುವುದು.

  • ತಿಂಡಿ ಗಾಡಿಗಳ ಹಾನಿಯನ್ನು ತಪ್ಪಿಸುವಂತೆ ಗೋಪಾಲಗೌಡ ಬಡಾವಣೆಯವರಿಂದ ಮನವಿ

    ಶಿವಮೊಗ್ಗ : ನಗರದ ಗೋಪಾಲ ಬಡಾವಣೆಯ ಮುಖ್ಯ ರಸ್ತೆಯಲ್ಲಿ ತಿಂಡಿ ಗಾಡಿಗಳಿಂದ ಆಗುತ್ತಿರುವ ಹಾನಿಯನ್ನು ತಪ್ಪಿಸುವಂತೆ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಹಾಗೂ ಸ್ಥಳೀಯ ನಾಗರೀಕರು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

    ಈ ವೇಳೆ ಮಾತನಾಡಿದ ಫ್ರೆಂಡ್ಸ್ ಸೆಂಟರ್ ಸಂಸ್ಥೆಯ ಪ್ರಮುಖರು, ಫ್ರೆಂಡ್ಸ್ ಸೆಂಟರ್ ಸಂಸ್ಥೆಯು 1966 ರಿಂದಲೂ ವಿವಿಧ ಸಮಾಜ ಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು, ಹಾಲಿ. ಗೋಪಾಳ ಮುಖ್ಯ ರಸ್ತೆಯಲ್ಲಿರುವ ವಿಶಾಲ್ ಮಾಟ್ ಎದುರು ನಮ್ಮ ಸಂಸ್ಥೆಯ ವತಿಯಿಂದ ಫ್ರೆಂಡ್ನ ಸೆಂಟರ್ ನೇತ್ರ ಭಂಡಾರದ ಕಟ್ಟಡವನ್ನು ಹೊಂದಿದ್ದು, ಸಾರ್ವಜನಿಕರಿಗಾಗಿ ಆರೋಗ್ಯದ ದೃಷ್ಟಿಯಿಂದ ಲ್ಯಾಬೋರೇಟರಿ ಕ್ಲಿನಿಕ್ ಮತ್ತು ನಮ್ಮ ಸಭೆ ನೆಡೆಸಲು ಸಭಾಂಗಣವನ್ನು ಹೊಂದಿರುತ್ತೇವೆ.

     

    ಆದರೆ ಈಗ ಪ್ರತಿದಿನ ಸಂಜೆಯ ನಂತರ ತಿಂಡಿಗಾಡಿಗಳನ್ನಿಟ್ಟುಕೊಂಡು ತಮ್ಮ ವ್ಯಾಪಾರ ವ್ಯವಹಾರಗಳನ್ನು ಮಾಡಿಕೊಂಡು ಮತ್ತು ಅದರ ತ್ಯಾಜ್ಯ ವಸ್ತುಗಳನ್ನು ನಮ್ಮ ಫ್ರೆಂಡ್ಸ್ ಸೆಂಟರ್ ನೇತ್ರ ಭಂಡಾರದ ಹತ್ತಿರದಲ್ಲೇ ಹಾಕಿ ಹೋಗುತ್ತಿದ್ದಾರೆ. ಇದರಿಂದ ಬೀಡಾಡಿ ಪ್ರಾಣಿಗಳು ಅವುಗಳನ್ನು ಸೇವಿಸಿ, ಮತ್ತದರ ಉಳಿದ ಭಾಗಗಳನ್ನು ಬಿಟ್ಟು ಹೋಗುತ್ತಿವೆ. ಆದುದರಿಂದ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ತಿಂಡಿಗಾಡಿಗಳ ಮಾಲೀಕರಿಗೆ ಬೇರೆಡೆ ತೆರಳಲು ಸೂಚನೆ ನೀಡಿ ನಮ್ಮ ನೇತ್ರ ಭಂಡಾರದ ಆವರಣವನ್ನು ಶುಚಿ ಶುಚಿಯಾಗಿಟ್ಟುಕೊಳ್ಳಲು ಸಹಕರಿಸಬೇಕು. ಇದರಿಂದ ಅಲ್ಲಿನ ಪರಿಸರದ ಸ್ವಚ್ಚತೆಯನ್ನು ಕಾಪಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ದಯಮಾಡಿ ಈ ಬಗ್ಗೆ ಕೂಡಲೇ ಗಮನ ಹರಿಸಬೇಕಾಗಿ ಮನವಿಯಲ್ಲಿ ಕೋರಿದ್ದಾರೆ

     

    ಈ ಸಂದರ್ಭದಲ್ಲಿ ಫ್ರೆಂಡ್ಸ್ ಸೆಂಟರ್ ಸಂಸ್ಥೆಯ ಅಧ್ಯಕ್ಷರಾದ ಬಿ.ಜಿ.ಧನರಾಜ್, ನೇತ್ರ ಭಂಡಾರದ, ಚೇರ್ಮನ್ ವಿ.ನಾಗರಾಜ್, ಕಾರ್ಯದರ್ಶಿ ಜಿ.ವಿಜಯಕುಮಾರ್, ಖಜಾಂಚಿ ರಮೇಶ್, ನಿಯೋಜಿತ ಅಧ್ಯಕ್ಷ ಮಲ್ಲಿಕಾರ್ಜುನ ಕಾನೂರು, ನಿರ್ದೇಶಕ ಎಂ.ಮೋಹನ್ ಮತ್ತು ಫ್ರೆಂಡ್ ಸೆಂಟರ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

     

  • ದೊಡ್ಡಬಳ್ಳಾಪುರ : ರೈತ ಮಹಿಳೆ ಮೇಲೆ ಬೀದಿನಾಯಿ ಬರ್ಬರ ದಾಳಿ : ಜೇವನಮರಣದ ನಡುವೆ ಮಹಿಳೆ ಹೋರಾಟ

    ದೊಡ್ಡಬಳ್ಳಾಪುರ : ಹೊಲಕ್ಕೆ ಹೋದ ವೇಳೆ ಮಹಿಳೆಯ ಮೇಲೆ ನಾಯಿಗಳು ದಾಳಿಮಾಡಿದ್ದು ಲಕ್ಷ್ಮಮ್ಮ ರಾಜಪ್ಪ (30ವರ್ಷ) ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.

     

    ತಾಲ್ಲೂಕಿನ ಹೊಸಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಸೋಣ್ಣೆನಹಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಘಟನೆ ಸಂಭವಿಸಿದ್ದು, ಲಕ್ಷ್ಮಮ್ಮ ನವರ ಗಂಡ ರಾಜಪ್ಪ ಕಿಟನಾಶಕ ತರಲು ನಗರಕ್ಕೆ ತೆರಳಿದ್ದು,ಈ ವೇಳೆ ತೋಟದಲ್ಲಿ ಒಂಟಿಯಾಗಿದ್ದ ಲಕ್ಷ್ಮಮ್ಮರ ಮೇಲೆ ಬೀದಿನಾಯಿಗಳ ಹಿಂಡು ದಾಳಿ ಮಾಡಿದೆ.

    ನಾಯಿಗಳ ದಾಳಿಯಲ್ಲಿ ಲಕ್ಷ್ಮಮ್ಮರ ಮುಖ ಸೇರಿದಂತೆ ದೇಹದ ಹಲವು ಭಾಗಗಳು ಗಾಯವಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

     

    ತಾಲ್ಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನೆಡೆದಿದೆ.

  • ಅರ್ಕಾವತಿ ನದಿ ಹೋರಾಟ ಸಮಿತಿ : ಏಪ್ರಿಲ್ 14 ಡಾ. ಬಿ.ಆರ್ ಅಂಬೇಡ್ಕರ್ ರವರ ಜಯಂತಿ ದಿನದಂದು ದಿನದ ಉಪವಾಸ ಸತ್ಯಾಗ್ರಹ

    ದೊಡ್ಡಬಳ್ಳಾಪುರ : ಏಪ್ರಿಲ್ 14 ಡಾ. ಬಿ.ಆರ್ ಅಂಬೇಡ್ಕರ್ ರವರ ಜಯಂತಿ ದಿನದಂದು ಸಂವಿಧಾನ ಉಳಿಸಿ ಕಾನೂನು ರಕ್ಷಣೆಗಾಗಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಅರ್ಕಾವತಿ ನದಿ ಹೋರಾಟ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂದೆ ನಡೆಸುತ್ತಿದ್ದೇವೆ ಎಂದು ಸಮಿತಿಯ ಸದಸ್ಯರು ತಿಳಿಸಿದರು.

    ತಾಲ್ಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯಿತಿ ಹಾಗೂ ಮಜಾರಹೊಸಹಳ್ಳಿ ಗ್ರಾಮ ಪಂಚಾಯಿತಿಗಳ ಸಂಪೂರ್ಣ ಜೀವ ಜಲವು ಹಾಳಾಗಿದ್ದು ಪ್ರಸ್ತುತ ನಮ್ಮ ಭಾಗದಲ್ಲಿ ಅನೇಕ ಜನರು ಕ್ಯಾನ್ಸ‌ರ್ ಕಾಯಿಲೆಗೆ ತುತ್ತಾಗಿ ಕಿಡ್ನಿ ಸೇರಿದಂತೆ ಹಲವು ಅಂಗಾಂಗ ವೈಫಲ್ಯಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಹೋರಾಟ ಹಲವು ವರ್ಷಗಳಿಂದ ನಿರಂತರವಾಗಿ ನೆಡೆಸುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ಏಪ್ರಿಲ್ 14 ರಂದು ಸಂಕೇತಿಕ ಹೋರಾಟ ( ಉಪವಾಸ ಸತ್ಯಗ್ರಹ ) ನೆಡೆಸುತ್ತಿದೆ ಎಂದು ರೈತ ಮುಖಂಡ ವಸಂತ್ ಕುಮಾರ್ ತಿಳಿಸಿದರು.

     

    ಒತ್ತಾಯಗಳೇನು…..???

    1. ದೊಡ್ಡ ತುಮಕೂರು ಗ್ರಾಮ ಪಂಚಾಯಿತಿ ಹಾಗೂ ಮಜುರ ಹೊಸಳ್ಳಿ ಗ್ರಾಮ ಪಂಚಾಯಿತಿಗಳಿಗೆ ಕುಡಿಯಲು ಮಳೆ ಕೊಯ್ದು ಮಾಡಿಕೊಡಬೇಕು.

    2. ಜನ ಬಳಸಲು ನೀರನ್ನು ಈ ಹಿಂದೆ ನೀಡಿದಂತೆ ಪಕ್ಕದ ಪಂಚಾಯಿತಿಯಿಂದ ಕೊಳವೆ ಕೊರೆಸಿ ನೀರು ಕೊಡಬೇಕು.

    3. ದೊಡ್ಡಬಳ್ಳಾಪುರ ನಗರಸಭೆ, ಮತ್ತು ಭಾಷೆಟಿಹಳಿ ಪಟ್ಟಣ ಪಂಚಾಯಿತಿ ಬಿಡುವ ಕೊಳಚೆನೀರಿಗೆ ಮೂರನೇ ಹಂತದ ಶುದ್ದೀಕರಣ ಘಟಕ ಸ್ಥಾಪಿಸಬೇಕು.

    4. ಕಾರ್ಖಾನೆಗಳು ಕಾನೂನು ವಿರುದ್ಧವಾಗಿ ನೀರು ಬಿಡುತ್ತಿರುವ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು.

    5. ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಬೇಕು.

    6. ಕೈಗಾರಿಕೆಗಳಿಗೆ ಕೊಳವೆಬಾವಿ ಕೊರೆಯಲು ಇನ್ನು ಮುಂದೆ ಅನುಮತಿ ಕೊಡಬಾರದು.

    7. ಕೆಲ ಕಾರ್ಖಾನೆಗಳು ತಮ್ಮಲ್ಲಿ ಇರುವ ಕೊಳವೆ ಬಾವಿಗಳಿಗೆ ಕೊಳಚೆ ನೀರನ್ನು ಬಿಡುತ್ತಿದ್ದಾರೆ ಅಂತಹ ಕಾರ್ಖಾನೆಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು

    ಸುದ್ದಿಗೋಷ್ಠಿಯಲ್ಲಿ ಅರ್ಕಾವತಿ ನದಿ ಹೋರಾಟ ಸಮಿತಿಯ ವಸಂತ್ ಕುಮಾರ್, ರಮೇಶ್, ಸತೀಶ್ ಕುಮಾರ್, ಮುನಿಕೃಷ್ಣ, ನರಸಿಂಹಮೂರ್ತಿ,ಕಾಳೆಗೌಡ, ವಿಜಯ್ ಕುಮಾರ್, ಗೋಪಾಲ್, ರಮೇಶ್, ರೈತ ಸಂಘ ನಾರಾಯಣಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.