Blog

  • ಬಾಬುಜೀ ಅಮೋಘ ಸಾಧನೆ ನಮ್ಮ ಬದುಕಿಗೆ ಪ್ರೇರಣೆಯಾಗಬೇಕು: ಎ.ಬಿ ಬಸವರಾಜು

    ಬೆಂಗಳೂರು ಗ್ರಾಮಾಂತರ : ಬಾಬು ಜಗಜೀವನರಾಂ ಅವರು ನಮಗೆಲ್ಲರಿಗೂ ಮಾರ್ಗದರ್ಶಕರು,ಅವರ ಬದುಕು ನಮಗೆ ಪ್ರೇರಣೆಯಾಗಬೇಕು. ಅವರ ಮಾರ್ಗದಲ್ಲಿ ನಡೆಯುವ ಪ್ರಯತ್ನವೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಹೇಳಿದರು.

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ.ಬಾಬು ಜಗಜೀವನ ರಾಮ್ ರವರ 118 ನೇ ಜಯಂತಿಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು ಆಡು ಮುಟ್ಟದ ಸೊಪ್ಪಿಲ್ಲ ಬಾಬೂಜೀ ನಿರ್ವಹಿಸದ ಖಾತೆಗಳಿಲ್ಲ’ ಎಂಬ ಮಾತೇ ಇದೆ. ಭಾರತದ ಉಪ ಪ್ರಧಾನಿಗಳಾಗಿ, ವಾರ್ತಾ ಮತ್ತು ಪ್ರಚಾರ, ಸಾರಿಗೆ, ರೈಲ್ವೆ, ಕಾರ್ಮಿಕ ಮತ್ತು ಪುನರ್ವಸತಿ, ಆಹಾರ, ಕೃಷಿ, ಸಹಕಾರ, ನೀರಾವರಿ ಇತ್ಯಾದಿ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಬಾಬು ಜಗಜೀವನರಾಮ್ ಅವರು ವಿಶೇಷವಾಗಿ 1970-74ರಲ್ಲಿ ರಕ್ಷಣಾ ಸಚಿವರಾಗಿ ಅಮೋಘ ಸಾಧನೆ ಮಾಡಿದರು. ಅವರ ಕಾಯಕ ನಿಷ್ಠೆ ನಮ್ಮೆಲ್ಲರಿಗೂ ಪ್ರೇರಣೆ ಎಂದರು.

     

    ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ಎನ್.ಅನುರಾಧ, ಅವರು ಮಾತಾನಡಿ ಡಾ.ಬಾಬು ಜಗಜೀವನ ರಾಮ್ ಅವರು ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ. ತಳಸಮುದಾಯದ ಜನರಿಗೆ ಸಂವಿಧಾನಬದ್ಧ ನ್ಯಾಯ ದೊರಕಿಸಲು ಹೋರಾಡಿದರು.ಅವರ ದಕ್ಷ ಆಡಳಿತದಿಂದ ನಮ್ಮ ಮುಂದೆ ಅವರು ಆದರ್ಶಪ್ರಾಯರಾಗಿದ್ದಾರೆ. ಕೃಷಿ ಸಚಿವರಾಗಿ ಅವರು ಮಾಡಿದ ವಿನೂತನ, ಅಮೋಘ ಸೇವೆಗೆ ದೇಶ ಅವರನ್ನು ‘ಹಸಿರು ಕ್ರಾಂತಿಯ ಹರಿಕಾರ’ ಎಂದೇ ಕರೆಯಿತು. ಇಂದು ಭವಿಷ್ಯದ ಭಾರತಕ್ಕೆ ನಮ್ಮೆಲ್ಲರಿಗೂ ಆದರ್ಶರಾಗಿದ್ದಾರೆ.

    ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಟಿ.ಎಲ್.ಎಸ್.ಪ್ರೇಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ, ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಶಂಕರ್ ಮೂರ್ತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ಏಪ್ರಿಲ್ 5 ರಂದು ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ

    ಬೆಂಗಳೂರು ಗ್ರಾಮಾಂತರ :ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದಲ್ಲಿ 2024-25 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವು ಏಪ್ರಿಲ್ 5 (ಶನಿವಾರ) ರಂದು ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

     

    ಕಾರ್ಯಕ್ರಮದ ಉದ್ಘಾಟನೆಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ನೆರವೇರಿಸಲಿದ್ದಾರೆ.

     

    ಘನ ಉಪಸ್ಥಿತಿಯಲ್ಲಿ ಕರ್ನಾಟಕ ಸರ್ಕಾರದ 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ ಹಾಗೂ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಹೊಸಕೋಟೆ ಶಾಸಕರಾದ ಶರತ್ ಕುಮಾರ ಬಚ್ಚೇಗೌಡ ವಹಿಸಿಕೊಳ್ಳಲಿದ್ದಾರೆ.

     

    ಮುಖ್ಯ ಅತಿಥಿಗಳಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ.ಕೆ.ಸುಧಾಕರ್, , ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ರವಿ, ಪುಟ್ಟಣ್ಣ, ಎನ್.ನಾಗರಾಜು(ಎಂ.ಟಿ.ಬಿ), ರಾಮೋಜಿಗೌಡ, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ನೆಲಮಂಗಲ ಶಾಸಕರಾದ ಎನ್.ಶ್ರೀನಿವಾಸ್. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಬಿ.ರಾಜಣ್ಣ, ಬೆಂಗಳೂರು ಅಂತರಾಷ್ಟೀಯ ವಿಮಾನ ನಿಲ್ದಾಣ ಪ್ರದೇಶಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ವಿ. ಶಾಂತ ಕುಮಾರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷರಾದ ಜಗನ್ನಾಥ್, ದೇವನಹಳ್ಳಿ ಪುರಸಭೆ ಅಧ್ಯಕ್ಷರಾದ ಡಿ.ಎಂ.ಮುನಿಕೃಷ್ಣ, ಸರ್ಕಾರದ ಕಾರ್ಯದರ್ಶಿಗಳು,ಆರ್ಥಿಕ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪಿ.ಸಿ.ಜಾಫರ್ ಉಪಸ್ತಿತರಿರುವರು.

     

    ವಿಶೇಷ ಆಹ್ವಾನಿತರಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿ, ವಿಭಾಗೀಯ ಉಪಾಧ್ಯಕ್ಷರಾದ ಪಿ.ಗಂಗಾಧರಪ್ಪ, ದೇವನಹಳ್ಳಿ ತಹಶೀಲ್ದಾರ್ ಹೆಚ್.ಬಾಲಕೃಷ್ಣ ಹಾಗೂ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಎಲ್ಲಾ ನಾಮ ನಿರ್ದೇಶಿತ ಸದಸ್ಯರು, ಮಾಧ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳು ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಮುಖಂಡರುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿರುತ್ತಾರೆ.

    ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ಎ.ಬಿ.ಬಸವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧ, ಜಿಲ್ಲಾ ಪೊಲೀಸ್ ಅಧೀಕ್ಷಕರು ಸಿ.ಕೆ.ಬಾಬಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮಿ, ಖಜಾಂಚಿ ಉಮಾಶಂಕರ್, ರಾಜ್ಯ ಪರಿಷತ್ ಸದಸ್ಯ ನಾರಾಯಣ ಗೌಡ, ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್ ಎಲ್.ಎಸ್, ಹೊಸಕೋಟೆ ತಾಲ್ಲೂಕು ಅಧ್ಯಕ್ಷ ಸಿ.ಎನ್.ನಾರಾಯಣ ಸ್ವಾಮಿ, ನೆಲಮಂಗಲ ತಾಲ್ಲೂಕು ಅಧ್ಯಕ್ಷ ನಾಗೇಶ್ ಕೆ.ಎನ್, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ರಾಜಶೇಖರ್ ಉಪಸ್ಥಿತರಿರುತ್ತಾರೆ.

  • ತನ್ನೆಲ್ಲ ಪ್ರತಿಭೆಗಳನ್ನು ಬೆಳೆಸಿಕೊಂಡು ಉತ್ತಮ ಶಿಕ್ಷಕಿಯಾಗಿ ಹೊರಹೊಮ್ಮಲು ರೋಟರಿ ಪೂರ್ವ ವಿದ್ಯಾ ಸಂಸ್ಥೆಯು ಸದಾವಕಾಶ ಕಲ್ಪಿಸಿದೆ _ ಜಯಶೀಲಾ ಬಾಯಿ ಎಸ್.

    ತನ್ನಲ್ಲಿರುವ ಎಲ್ಲಾ ಪ್ರತಿಭೆಗಳನ್ನು ಗುರುತಿಸಿ ಅದನ್ನು ವೃದ್ಧಿಸಿಕೊಳ್ಳಲು ಅನುವು ಮಾಡಿಕೊಟ್ಟು ಶಿಕ್ಷಕ ವೃತ್ತಿಯಲ್ಲಿ ಸುಮಾರು ೩೭ ವರ್ಷಗಳ ಕಾಲ ಶಿವಮೊಗ್ಗ ನಗರದಲ್ಲಿಯೇ ಕಾರ್ಯನಿರ್ವಹಿಸಲು ಅವಕಾಶ ಕೊಟ್ಟಿರುವುದು ತನಗೆ ಅತ್ಯಂತ ನೆಮ್ಮದಿ ತಂದಿದೆ ಎಂದು ಸೇವೆಯಿಂದ ನಿವೃತ್ತರಾದ ಶ್ರೀಮತಿ ಜಯಶೀಲಾ ಬಾಯಿ ಎಸ್., ಇವರು ಅಭಿಪ್ರಾಯ ಪಟ್ಟರು.

     

     

    ರಾಜೇಂದ್ರನಗರದ ರೋಟರಿ ಪೂರ್ವ ಎಜುಕೇಷನಲ್ & ಚಾರಿಟೇಬಲ್ ಟ್ರಸ್ಟ್ (ರಿ.,), ಏರ್ಪಡಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಟ್ರಸ್ಟ್ ಹಾಗೂ ಇತರ ಸಂಘ ಸಂಸ್ಥೆ, ಸಹದ್ಯೋಗಿಗಳು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿವಮೊಗ್ಗದ ರಾಜೇಂದ್ರನಗರದಲ್ಲಿರುವ ರೋಟರಿ ಪೂರ್ವ ವಿದ್ಯಾ ಸಂಸ್ಥೆಯು ತನ್ನ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತನಗೆ ಕರೆದು ಕೆಲಸವನ್ನು ಕೊಟ್ಟು, ಮಕ್ಕಳಿಗೆ ಉತ್ತಮ ಬೋಧನೆ ಮಾಡುವ ವಾತಾವರಣವನ್ನು ಒದಗಿಸಿಕೊಟ್ಟು, ತನ್ನ ಜೀವನ ನಿರ್ವಹಣೆಗೆ ಶಾಶ್ವತ ಆಸರೆಯನ್ನು ಕಲ್ಪಿಸಿ, ಶಿಷ್ಯ ಕೋಟಿಯ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟ ಶಾಲಾ ಆಡಳಿತ ಮಂಡಳಿಯವರಿಗೆ ಅಭಿವೃದ್ಧಿ ಸಲ್ಲಿಸುತ್ತೇನೆ ಎಂದರು

     

     

     

    ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರೋಟರಿ ಪೂರ್ವ ವಿದ್ಯಾ ಸಂಸ್ಥೆಯ ಮಾಜಿ ಕಾರ್ಯದರ್ಶಿ, ರೊ. ಎಂ.ಎನ್. ಸುಂದರ್‌ರಾಜ್ ಮಾತನಾಡಿ, ರೋಟರಿ ಪೂರ್ವ ಕನ್ನಡ ಶಾಲೆಯನ್ನು ಅನುದಾನಕ್ಕೆ ಒಳಪಡಿಸುವಾಗ ತಾನು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಆಗಿದ್ದು, ವಿದ್ಯಾ ಸಂಸ್ಥೆಗೆ ಶಿಕ್ಷಕರಿಂದ ಯಾವ ದೇಣಿಗೆಯನ್ನು ನಿರೀಕ್ಷಿಸದೆ ಶಾಲೆಯನ್ನು ಅನುದಾನಕ್ಕೆ ಒಳಪಡಿಸಿ, ಶ್ರೀಮತಿ ಜಯಶೀಲಾ ಬಾಯಿ ಎಸ್., ಸೇರಿದಂತೆ ಸುಮಾರು ೭ ಮಂದಿ ಶಿಕ್ಷಕರಿಗೆ ಜೀವನ ಮಾರ್ಗ ಕಲ್ಪಿಸಿದ ತೃಪ್ತಿ ತಮಗಿದೆ ಎಂದರು.

     

    ಸಮಾರಂಭದ ಅಧ್ಯಕ್ಷತೆ ವಹಿಸಿದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ ಎಂ., ಮಾತನಾಡುತ್ತಾ, ಆರೋಗ್ಯ ಸಂಸ್ಥೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ರೋಟರಿ ಸಂಸ್ಥೆಯು ತನ್ನ ದಾಪುಗಾಲುಗಳನ್ನು ಇಟ್ಟಿದ್ದು, ಅಂತರರಾಷ್ಟ್ರೀಯ ರೋಟರಿ ಜಿಲ್ಲೆಯಾದ್ಯಂತ ಅನೇಕ ಆರೋಗ್ಯ ಕೇಂದ್ರಗಳನ್ನು ಹಾಗೂ ಶಾಲೆಗಳನ್ನು ನಡೆಸುತ್ತಿದೆ. ಅಂತೆಯೇ ರೋಟರಿ ಶಿವಮೊಗ್ಗ ಪೂರ್ವದಲ್ಲಿಯೂ ಸುಮಾರು ೪೦ ವರ್ಷಗಳಿಂದ ರೋಟರಿ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದೆ. ಇತರೆ ಎಲ್ಲಾ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಂತೆ ಈ ಶಾಲೆಯಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿದ್ದರಿಂದ ಅದನ್ನು ಮುಚ್ಚಬೇಕಾಗಿ ಬಂದಿದ್ದರೂ ಶಿಕ್ಷಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಯನ್ನು ಇಲಾಖೆಯಿಂದ ಮಾಡಿಸಲಾಗಿದೆ. ಶ್ರೀಮತಿ ಜಯಶೀಲಾ ಬಾಯಿ ಉತ್ತಮ ಶಿಕ್ಷಕಿಯಾಗಿದ್ದು, ಶಾಲೆಯ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣಕರ್ತರಾಗಿರುವುದರ ಜೊತೆಗೆ ತನ್ನ ಸ್ವಂತ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿರುವುದು ಸಂತೋಷದ ವಿಷಯ ಎಂದು ಶ್ಲಾಘಿಸಿದರು.

     

    ಸಮಾರಂಭದಲ್ಲಿ ಪೇಟ್ರನ್ ಟ್ರಸ್ಟಿ ರೊ. ಕಡಿದಾಳ್ ಗೋಪಾಲ್, ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ ಅಧ್ಯಕ್ಷ ರೊ. ಅರುಣ್ ದೀಕ್ಷಿತ್, ಕ್ಲಬ್ ಕಾರ್ಯದರ್ಶಿ ರೊ. ಶಶಿಕಾಂತ್ ನಾಡಿಗ್, ಟ್ರಸ್ಟಿನ ಉಪಾಧ್ಯಕ್ಷರಾದ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಖಜಾಂಚಿ ರೊ. ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಬೋಡ್ ಆಫ್ ಟ್ರಸ್ಟಿ ರೊ. ರವಿಶಂಕರ್ ಕೆ.ಬಿ., ಟ್ರಸ್ಟಿ ರೊ. ಆದಿಮೂರ್ತಿ ಹೆಚ್.ಬಿ., ಹಾಗೂ ಹಲವಾರು ರೋಟರಿ ಮುಖಂಡರು, ಸಹದ್ಯೋಗಿಗಳಾಗಿದ್ದ, ಸುಲೋಚನ, ವಿಶಾಲಾಕ್ಷಮ್ಮ, ಮೀನಾಕ್ಷಮ್ಮ, ಮಹಾಬಲೇಶ್ವರ್ ಎ.ಎಸ್., ಬಸವರಾಜ್ ಸಿ., ಸೂರ್ಯನಾರಾಯಣ್ ಆರ್. ಮುಂತಾದವರು ಉಪಸ್ಥಿತರಿದ್ದರು.

     

     

  • ಕಾಂಗ್ರೆಸ್ ಗೆ ಮತ ನೀಡಿದ ಜನರು ಪಾಪ ತೊಳೆದುಕೊಳ್ಳುವುದು ಹೇಗೆಂದು ಚಿಂತೆ ಮಾಡುತ್ತಿದ್ದಾರೆ: ಪ್ರತಿಪಕ್ಷ ನಾಯಕ ಆರ್.ಅಶೋಕ

    ಬೆಂಗಳೂರು:ಕಾಂಗ್ರೆಸ್ ಗೆ ಮತ ನೀಡಿದ ಜನರು ಪಾಪ ತೊಳೆದುಕೊಳ್ಳುವುದು ಹೇಗೆಂದು ಚಿಂತೆ ಮಾಡುತ್ತಿದ್ದಾರೆ. ಸರ್ಕಾರದ ಬೆಲೆ ಏರಿಕೆಯ ನೀತಿ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದ್ದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

    ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಿಗೆ ಮೂಲಕ ಕಳ್ಳತನ ಮಾಡಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಕಮಿಶನ್ ಮೂಲಕ ಕಳ್ಳತನ ಮಾಡುತ್ತಿದ್ದಾರೆ. ಸತ್ತಾಗ ಹೆಣದ ಮೇಲೆ ಹಣ ಹಾಕುವ ಪದ್ಧತಿ ಇದೆ. ಕಾಂಗ್ರೆಸ್ ಸರ್ಕಾರ ಮರಣ ಪ್ರಮಾಣ ಪತ್ರಕ್ಕೂ ಶುಲ್ಕ ಏರಿಸಿ ಹಣ ಸಂಗ್ರಹ ಮಾಡುತ್ತಿದೆ. ಮದ್ಯದ ದರವನ್ನೂ ಏರಿಸಿ ಮದ್ಯಪ್ರಿಯರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಶೌಚಾಲಯ ನಿರ್ವಹಣೆ ಮಾಡಲು ಕೂಡ ಸರ್ಕಾರದ ಬಳಿ ದುಡ್ಡಿಲ್ಲ. ಬೆಂಗಳೂರಿನ ಜನರಿಗೆ ಮುಂದೆ ನೀರಿನ ಶುಲ್ಕ ಏರಿಕೆಯ ಶಾಕ್ ಕೂಡ ಕಾದಿದೆ ಎಂದರು.

     

    ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಸರ್ಕಾರ, ಪತ್ನಿಗೆ ಸಹಾಯಧನ ನೀಡಿ, ಪತಿಯಿಂದ ಹಣ ವಸೂಲಿ ಮಾಡಲಾಗುತ್ತಿದೆ. ಕಾಂಗ್ರೆಸ್ ಗೆ ಮತ ನೀಡಿದ ಜನರು ಪಾಪ ತೊಳೆದುಕೊಳ್ಳುವುದು ಹೇಗೆಂದು ಚಿಂತೆ ಮಾಡುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದ್ದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದರು.

    ಆಯವ್ಯಯದಲ್ಲಿ ಜನರ ಮೇಲೆ ಹಾಕುವ ತೆರಿಗೆಗಳ ಬಗ್ಗೆ ಸರಿಯಾಗಿ ತಿಳಿಸಬೇಕಿತ್ತು. ಆದರೆ ಬಜೆಟ್ ಮುಗಿದ ನಂತರ ತೆರಿಗೆಗಳನ್ನು ಏರಿಸಲಾಗಿದೆ. ವಕ್ಪ್ ಮಂಡಳಿ ರೈತರ ಜಮೀನುಗಳನ್ನು ಕಬಳಿಸುತ್ತಿತ್ತು. ಅದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ಕಾಯ್ದೆ ತಿದ್ದುಪಡಿ ತಂದಿದ್ದಾರೆ. ಆದರೆ ಇದನ್ನು ಕೂಡ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದರು.

    ಬಿಜೆಪಿ ನಾಯಕರು ಪ್ರತಿಭಟಿಸಿದಾಗ ಬಸ್ ಗಳನ್ನು ತಂದು ಅದರಲ್ಲಿ ಬಂಧಿಸಿ ಇರಿಸಲಾಗುತ್ತದೆ. ಆದರೆ ಈಗ ಬಸ್ ಗಳಿಗೆ ಕೊರತೆ ಇದೆ. ಬಸ್ ತರುವ ಯೋಗ್ಯತೆಯೂ ಸರ್ಕಾರಕ್ಕೆ ಇಲ್ಲ ಎಂದರು.

  • ಕಿಡ್ನಿ ಕಸಿ ಮಾಡಿಸಿಕೊಳ್ಳಲು ಹಣವಿಲ್ಲದೆ ಪರದಾಡುತ್ತಿರುವ ಕುಟುಂಬ : ಆರ್ಥಿಕ ಸಹಾಯ ನೀಡಲು ದಾನಿಗಳಲ್ಲಿ ಮನವಿ

    ಯಲಹಂಕ : ತಾಲೂಕಿನ ಹನಿಯೂರು ಗ್ರಾಮದ 34ರ ಪ್ರಾಯದ ಲೋಕೇಶ್ ಎರಡು ಕಿಡ್ನಿ ವೈಫಲ್ಯದಿಂದ ಕಳೆದ ಮೂರು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ, ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸುತ್ತಿದ್ದು,

     

    ಪ್ರತಿ ಬಾರಿ ಡಯಾಲಿಸ್ ಮಾಡಲು ಎರಡರಿಂದ ಮೂರು ಸಾವಿರ ಹಣ ಬೇಕು, ಸಾಲ ಮಾಡಿ ಕಳೆದ ಮೂರು ವರ್ಷಗಳಿಂದ ಡಯಾಲಿಸಿಸ್ ಮಾಡಿಸಿ ಜೀವ ಉಳಿಸಿಕೊಂಡಿದ್ದಾರೆ. ಕಿಡ್ನಿ ಕಸಿ ಮಾಡಿಸಿಕೊಳ್ಳಲು ಆರ್ಥಿಕ ಸಹಾಯಬೇಕಾಗಿದ್ದು ಕುಟುಂಬಸ್ಥರು ದಾನಿಗಳ ನಿರೀಕ್ಷೆಯಲ್ಲಿದ್ದಾರೆ.

     

    ಹೌದು ಸದೃಢ ಹಾಗೂ ಆರೋಗ್ಯವಾಗಿದ್ದ ಲೋಕೇಶ್ ಕಳೆದ ಮೂರು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ , ಕಿಡ್ನಿ ವೈಫಲ್ಯದಿಂದ ಪ್ರತಿ ವಾರಕ್ಕೆ 3-4 ಬಾರಿ ಡಯಾಲಿಸಿಸ್ ಮಾಡಿಸಿ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ, ಆದರೆ ಈಗ ಲೋಕೇಶ್ ರವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಕಿಡ್ನಿ ಕಸಿ ಮಾಡುವುದು ಅನಿವಾರ್ಯವಾಗಿದೆ.

    ದಿನದಿಂದ ದಿನಕ್ಕೆ ಲೋಕೇಶ್ ಕುಟುಂಬಕ್ಕೆ ಡಯಾಲಿಸಿಸ್ ಮಾಡಿಸೋದು ಕಷ್ಟ ಸಾಧ್ಯವೇ ಸರಿ, ಯಲಹಂಕದ ಸ್ಪರ್ಶ ಆಸ್ಪತ್ರೆಯ ವೈದ್ಯರು ಕಿಡ್ನಿ ಕಸಿ ಮಾಡುವುದ್ದಾಗಿ ತಿಳಿಸಿದ್ದು , ಲೋಕೇಶ್ ಅವರ ತಾಯಿ ಅಂಜಿನಮ್ಮ ಮಗನಿಗಾಗಿ ಕಿಡ್ನಿ ದಾನ ಮಾಡಲು ಮುಂದಾಗಿದ್ದಾರೆ, ಶಸ್ತ್ರಚಿಕಿತ್ಸೆ ಮಾಡಿಸಲು ಸುಮಾರು 12 ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆ ಇದ್ದು. ಈ ಹಣವನ್ನು ಹೊಂದಿಸಲಾಗದೆ ಇಡೀ ಕುಟುಂಬ ಕಣ್ಣೀರಿಡುತ್ತಿದೆ.

    ಲೋಕೇಶ್ ಕುಟುಂಬದಲ್ಲಿ ದುಡಿಯುವ ಜನರಿಲ್ಲ, ಲೋಕೇಶ್ ನೋಡಿಕೊಳ್ಳುವ ಸಲುವಾಗಿ ಹೆಂಡತಿಯು ಮನೆಯಲ್ಲಿರಬೇಕು, ತಾಯಿಗೆ ವಯಸ್ಸಾಗಿರುವ ಕಾರಣ ಕೆಲಸ ದೊರೆಯುವುದು ಕಷ್ಟವಾಗಿದೆ, ಲೋಕೇಶ್ ದಂಪತಿಯ ಇಬ್ಬರು ಪುಟ್ಟ ಮಕ್ಕಳ ಇನ್ನೂ ಓದುತ್ತಿದ್ದಾರೆ, ಖಾಸಗಿಯಲ್ಲಿ ಓದುತ್ತಿದ್ದ ಇಬ್ಬರು ಮಕ್ಕಳನ್ನು ಫೀಸ್ ಕಟ್ಟಲಾಗದೆ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ 12 ಲಕ್ಷ ಹಣ ಹೊಂದಿಸುವುದು ಲೋಕೇಶ್ ಕುಟುಂಬಕ್ಕೆ ಅಸಾಧ್ಯವಾಗಿದೆ, ಹೃದಯವಂತ ದಾನಿಗಳು ಅವರ ಕಷ್ಟಕ್ಕೆ ಹಣದ ಸಹಾಯ ನೀಡಿದರೆ ಕುಟುಂಬವನ್ನು ಕಾಪಾಡಿದಂತಾಗುತ್ತದೆ, ಇಡೀ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.

    ಹೆಚ್ಚಿನ ಮಾಹಿತಿಗಾಗಿ ಅಥವಾ ಸಹಾಯ ಹಸ್ತ ನೀಡಲು ಸಂಪರ್ಕಿಸಿ ಲೋಕೇಶ್.ಹೆಚ್ – 7406916918

     

     

  • ಸತ್ತಿದ್ದ ಪತ್ನಿ 5 ವರ್ಷ ಬಳಿಕ ಲವರ್ ಜತೆ ಪತ್ತೆ : ಪತ್ನಿಯ ಕೊಲೆ ಆರೋಪದಡಿ ಜೈಲುಪಾಲಾಗಿದ್ದ ಪತಿಗೆ ಶಾಕ್

    ಆಕೆಯನ್ನು ಗಂಡನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಭಾವಿಸಲಾಗಿತ್ತು. ಆ ತಪ್ಪಿಗಾಗಿ ಗಂಡ ಎರಡು ವರ್ಷ ಜೈಲುಪಾಲಾಗಿದ್ದ. ಮಾತ್ರವಲ್ಲ ಗಂಡನೇ ಹೆಂಡತಿಯ ಅಸ್ಥಿಪಂಜರದ ಅಂತ್ಯಸಂಸ್ಕಾರ ಕೂಡ ಮಾಡಿದ್ದ. ಶಿಕ್ಷೆ ಅನುಭವಿಸಿದ ಬಳಿಕ ಜೈಲಿನಿಂದ ಹೊರಬಂದಿದ್ದ. ಆದರೆ, ಸೋಮವಾರ ಸಂಜೆ ಆತನಿಗೆ, ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಅದೇ ಹೆಂಡತಿ ಹೋಟೆಲ್​​ನಲ್ಲಿ ಕುಳಿತುಕೊಂಡು ತಿಂಡಿ ತಿನ್ನುತ್ತಿರುವುದು ಕಾಣಿಸಿದೆ! ಅದೂ ಕೂಡ ಲವರ್​ ಜೊತೆ!

     

    ಇದೇನು ಸಿನಿಮಾ ಕಥೆ ಅಂದುಕೊಂಡಿರಾ? ಖಂಡಿತಾ ಅಲ್ಲ. ಕೊಡಗಿನ ಕುಶಾಲನಗರದ ಮಲ್ಲಿಗೆ ಎಂಬುವವಳ ಸಿನಿಮೀಯ ಕಥೆ ಇಲ್ಲಿದೆ.

     

    ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಐದು ವರ್ಷಗಳ ಹಿಂದೆ ನಡೆದಿದೆ ಎನ್ನಲಾಗಿದ್ದ ಕೊಲೆ ಪ್ರಕರಣವೊಂದಕ್ಕೆ ಇದೀಗ ಭಾರಿ ಟ್ವಿಸ್ಟ್ ದೊರೆತಿದೆ. ಅಷ್ಟೇ ಅಲ್ಲ, ಯಾವ ಸಸ್ಪೆನ್ಸ್​, ಹಾರರ್, ಥ್ರಿಲ್ಲರ್, ರೊಮ್ಯಾಂಟಿಕ್ ಸಿನಿಮಾಗೂ ಕಡಿಮೆ ಇಲ್ಲದ ರೀತಿಯಲ್ಲಿ ಇದೀಗ ಅನಾವರಣಗೊಂಡಿದೆ.

     

    ಪೊಲೀಸರ ದಾಖಲೆಗಳ ಪ್ರಕಾರ ಮಲ್ಲಿಗೆ ಎಂಬಾಕೆ ಆಕೆಯ ಗಂಡನ ಕೈಯಿಂದಲೇ ಹತ್ಯೆ ಆಗಿ ಅದಾಗಲೇ ಐದು ವರ್ಷ ಆಗಿ ಹೋಗಿದೆ. ಆಕೆಯನ್ನು ಕೊಲೆ ಮಾಡಿದ್ದಕ್ಕಾಗಿ ಗಂಡ ಸುರೇಶ್​ ಎರಡು ವರ್ಷ ಜೈಲೂಟ ಕೂಡ ಮಾಡಿ ಬಂದಿದ್ದಾರೆ. ಆದರೆ, ವಿಚಿತ್ರ ಎಂದರೆ, ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಮಲ್ಲಿಗೆ ಮಂಗಳವಾರ ಸಂಜೆ ಮಡಿಕೇರಿ ನಗರದ ಹೋಟೆಲ್​ ಒಂದರಲ್ಲಿ ತಿಂಡಿ ತಿನ್ನುತ್ತಾ ಇರುವುದು ಸುರೇಶ್​ಗೆ ಕಾಣಿಸಿದೆ. ಅದೂ ಕೂಡ ಆಕೆಯ ಲವರ್ ಜತೆ! ಇದನ್ನು ಗಂಡ ಸುರೇಶ್​ನ ಸ್ನೇಹಿತರು ನೋಡಿ, ತಕ್ಷಣವೇ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಡಿಕೇರಿ ನಗರ ಪೊಲಿಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

     

    ಐದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಲ್ಲಿಗೆ ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದ ಆದಿವಾಸಿ ಜನಾಂಗದ ಯುವಕ ಸುಮಾರು 18 ವರ್ಷಗಳ ಹಿಂದೆ ಮಲ್ಲಿಗೆ ಎಂಬಾಕೆಯನ್ನು ವಿವಾಹವಾಗಿರುತ್ತಾರೆ. ದಂಪತಿಗೆ ಇಬ್ಬರು ಮಕ್ಕಳೂ ಜನಿಸಿದ್ದರು. ಆದರೆ, 2020 ರ ನವೆಂಬರ್​ನಲ್ಲಿ ಇದ್ದಕ್ಕಿದ್ದಂತೆ ಒಂದಿನ ಪತ್ನಿ ಮಲ್ಲಿಗೆ ನಾಪತ್ತೆಯಾಗಿದ್ದಾಳೆ. ಹಾಗಾಗಿ ಸುರೇಶ್ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪೊಲಿಸರು ಒಂದಷ್ಟು ದಿನ ಹುಡುಕಿದರೂ ಮಲ್ಲಿಗೆ ಸಿಕ್ಕಿಲ್ಲ. ಹಾಗಾಗಿ ಎಲ್ಲರೂ ಸುಮ್ಮನಾಗಿದ್ದರು. ಪತ್ನಿ ಗಣೇಶ್​ ಎಂಬಾತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಓಡಿ ಹೋಗಿರುವುದು ಗೊತ್ತಿದ್ದರೂ ಸುರೇಶ್​ ಮನನೊಂದು ಸುಮ್ಮನಾಗಿದ್ದರು.

     

    ಆದರೆ ಸುರೇಶ್​ ದುರಾದೃಷ್ಟ 2021ರ ಜೂನ್​ ಮೂರನೇ ವಾರದಲ್ಲಿ ಕುಶಾಲನಗರಕ್ಕೆ ಖಾಸಗಿ ಕಾರಿನಲ್ಲಿ ಒಂದಷ್ಟು ಮಂದಿ ಪೊಲೀಸರು ಬಂದಿದ್ದಾರೆ. ಬಂದವರು, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಪೊಲಿಸ್ ಠಾಣೆಯ ಸಿಬ್ಬಂದಿಯಾಗಿರುತ್ತಾರೆ. ಅವರು ಸುರೇಶನನ್ನು ಬರ ಹೇಳಿ, ಮಹಿಳೆಯೊಬ್ಬಳ ಮೃತದೇಹ ಸಿಕ್ಕಿದೆ, ಬಂದು ಗುರುತು ಪತ್ತೆ ಮಾಡು ಎಂದು ಬಲವಂತದಿಂದ ಬೆಟ್ಟದಪುರಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಅಲ್ಲಿ ಯಾವುದೋ ಮಹಿಳೆಯ ಸೀರೆ ಲಂಗ, ಒಳ ಉಡುಪು ಚಪ್ಪಲಿ ಎಲ್ಲಾ ತೋರಿಸಿ, ‘ಇದು ನಿನ್ನದೇ ಹೆಂಡತಿಯದ್ದು. ನೀನೇ ಕೊಲೆ ಮಾಡಿದ್ದೀ, ಒಪ್ಪಿಕೋ’ ಎಂದು ಚಿತ್ರ ಹಿಂಸೆ ಕೊಟ್ಟಿದ್ದರಂತೆ.

     

    ಇದೇ ಪ್ರಕರಣದಲ್ಲಿ 18-07-2021ರಲ್ಲಿ ಬೆಟ್ಟದಪುರ ಠಾಣೆಯಲ್ಲಿ ಸುರೇಶ್ ವಿರುದ್ಧ ಪ್ರಕರಣ ಕೂಡ ದಾಖಲಾಗಿ ನಂತರ ಅವರು ಜೈಲು ಸೇರಿದ್ದಾರೆ.

     

    *ಡಿಎನ್​ಎ ಪರೀಕ್ಷೆ ಮಾಡಿದಾಗ ಹೊರಬಂತು ರಹಸ್ಯ!*

     

    ಜೈಲುಪಾಲಾದ ಸುರೇಶ್​ ಗೆ ಮೈಸೂರಿನ ಪಾಂಡು ಪೂಜಾರಿ ಎಂಬ ವಕೀಲರ ರೂಪದಲ್ಲಿ ಸಹಾಯ ಬರುತ್ತದೆ. 2022ರ ಜನವರಿಯಲ್ಲಿ ವಕೀಲರ ಕೊರಿಕೆ ಮೇರೆಗೆ ಪೊಲೀಸರು ಸತ್ತಿದ್ದಾಳೆ ಎಂದು ತಿಳಿಸಿದ್ದ ಮಹಿಳೆಯ ಅಸ್ತಿ ಪಂಜರ ಹಾಗೂ ಮಲ್ಲಿಗೆಯ ತಾಯಿಯ ರಕ್ತದ ಮಾದರಿ ಸಂಗ್ರಹಿಸಿ ಡಿಎನ್​ಎ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ಅಲ್ಲಿ ಬೆಟ್ಟದಪುರ ಪೊಲಿಸರು ಮಲ್ಲಿಗೆಯದ್ದು ಎಂದು ಪ್ರತಿಪಾದಿಸಿದ ದೇಹ ಆಕೆಯದ್ದಲ್ಲ ಎಂಬ ವರದಿ ಬರುತ್ತದೆ. ಆದರೂ ಬೆಟ್ಟದಪುರ ಪೊಲೀಸರು ಸುರೇಶನನ್ನು ಎರಡು ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡಿರುತ್ತಾರೆ. ಇದಾದ ಬಳಿಕ ವಕೀಲ ಪಾಂಡು, ಹರಸಾಸಹಪಟ್ಟು ಹೈಕೋರ್ಟ್​ ಮೊರೆ ಹೋಗಿ 2024ರಲ್ಲಿ ಸುರೇಶ್​​ ಅವರನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬಂದಿದ್ದರು.

     

    *ಪತ್ನಿಯ ಹುಡುಕಿಕೊಡುವಂತೆ ಮತ್ತೆ ಪೊಲೀಸ್ ಮೊರೆ ಹೋಗಿದ್ದ ಸುರೇಶ್*

     

    ಇಷ್ಟೆಲ್ಲ ಆದ ಬಳಿಕ, ಕೊಲೆಯಾಗಿರುವ ಮಹಿಳೆ ತನ್ನ ಹೆಂಡತಿಯಲ್ಲ. ತಾನು ಕೊಲೆ ಮಾಡಿಲ್ಲ, ಹೆಂಡತಿಯನ್ನು ಹುಡುಕಿಕೊಡಿ ಎಂದು ಸುರೇಶ್ ಮತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ವಕೀಲರು ಆರೋಪಿಸಿದ್ದಾರೆ.

     

    *ಮಡಿಕೇರಿಯಲ್ಲಿ ಲವರ್ ಜತೆ ಮಲ್ಲಿಗೆ ಪ್ರತ್ಯಕ್ಷ: ಸುರೇಶ್ ಸ್ನೇಹಿತರು ಶಾಕ್!*

     

    ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿರುವಾಗ ಇದ್ದಕ್ಕಿದ್ದ ಹಾಗೆ ಕೊಲೆಯಾಗಿದ್ದಾಳೆ ಎಂಬುದಾಗಿ ಭಾವಿಸಲಾಗಿದ್ದ ಮಲ್ಲಿಗೆ ಜೀವಂತವಾಗಿ ಮಡಿಕೇರಿ ಹೋಟೆಲ್​​ನಲ್ಲಿ ತಿಂಡಿ ತಿನ್ನುತ್ತಾ ಇರುವುದು ಸುರೇಶ್ ಹಾಗೂ ಅವರ ಸ್ನೇಹಿತರ ಕಣ್ಣಿಗೆ ಬಿದ್ದಿದೆ. ಈ ಅವಕಾಶ ಬಿಟ್ಟರೆ ಮತ್ತೆ ಸಿಗಲ್ಲ ಎಂದು ಯೋಚಿಸಿದ ಸುರೇಶ್​ ಮತ್ತು ಆತನ ಸ್ನೇಹಿತರು ಮಡಿಕೇರಿ ಪೊಲಿಸರ ಸಹಾಯ ಪಡೆದು ಮಲ್ಲಿಗೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆಕೆ ತನ್ನ ಪ್ರಿಯಕರ ಗಣೇಶನ ಜೊತೆ ವಿರಾಜಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ವಾಸವಿರುವುದಾಗಿ ಹೇಳಿದ್ದಾಳೆ.

     

    ಸದ್ಯ ಮಲ್ಲಿಗೆಯನ್ನು ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಬೆಟ್ಟದಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ವಕೀಲ ಪಾಂಡು ಅವರ ಶ್ರಮದಿಂದಾಗಿ ಮಲ್ಲಿಗೆಯನ್ನು ಇದೀಗ ಮೈಸೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಇದೀಗ ಸುಳ್ಳು ಆರೋಪ ಪಟ್ಟಿ ದಾಖಲಿಸಿದ ಬೆಟ್ಟದಪುರ ಠಾಣೆಯ ತನಿಖಾಧಿಕಾರಿ, ಮೈಸೂರು ಎಸ್​ಪಿ ಸೇರಿದಂತೆ ಹಲವು ಅಧಿಕಾರಿಗಳನ್ನು ವಿಚಾರಣೆಗೆ ಕರೆದಿದೆ.

  • ಕರ್ನಾಟಕ ರಾಷ್ಟ್ರ ಸಮತಿ ಪಕ್ಷದಿಂದ ಯುವಜನರ ಏಳಿಗೆಗಾಗಿ, ರಾಜ್ಯದ ಯುವ ಸಮೂಹಕ್ಕೆ ಯುವ ” ಯುವ ಮುಂದಾಳತ್ವ ಶಿಬಿರ ಆಯೋಜನೆ – ಬಿ. ಶಿವಶಂಕರ್

    ದೊಡ್ಡಬಳ್ಳಾಪುರ : ಯುವ ಕಾರ್ಯಕರ್ತರಿಗೆ ಯುವ ನಾಯಕತ್ವ ತರಬೇತಿ ಶಿಬಿರವನ್ನು ಏಪ್ರಿಲ್ 05 ಮತ್ತು 06ರಂದು ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ಹಮ್ಮಿಕೊಂಡಿದ್ದು, ಶಿಬಿರಾರ್ಥಿಗಳಿಗೆ ಉಚಿತ ಊಟ ವಸತಿ ಕಲ್ಪಿಸಲಾಗಿದೆ, ಶಿಬಿರದಲ್ಲಿ ಭಾಷಣಕಲೆ ಹಾಗೂ ಸಾಮಾಜಿಕ ಜಾಲತಾಣಗಳ ಕೌಶಲ್ಯ ತರಬೇತಿಗಳನ್ನು ಒಳಗೊಂಡಂತೆ ಹಲವು ವಿಚಾರಗಳನ್ನು ತಿಳಿಸಲಾಗುವುದು ಎಂದು ಕೆ ಆರ್ ಎಸ್ ಪಕ್ಷ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ತಿಳಿಸಿದರು

    ನಗರದ KRS ಪಕ್ಷದ ಕಾರ್ಯಾಲಯದಲ್ಲಿ ನೆಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರುಈ ಶಿಬಿರದಲ್ಲಿ ಸ್ವ ಅರಿವು ಮತ್ತು ಸ್ವ ವಿಮರ್ಶೆ ಜೊತೆಗೆ ನಾನೇಕೆ ರಾಜಕೀಯ ಮುಂದಾಳತ್ವ ವಹಿಸಬೇಕು ?ತನ್ನ ಸುತ್ತಮುತ್ತಲಿನ ಸಮಕಾಲೀನ ಸಮಸ್ಯೆಗಳನ್ನು ಮುಖಾಮುಖಿಯಾಗಿ ಎದುರಿಸುವುದು ಹೇಗೆ ? ಪ್ರಸ್ತುತ ರಾಜಕೀಯ ಸಮಕಾಲೀನ ಚಿಂತನೆಗಳು, ಪ್ರಜ್ಞಾಪೂರ್ವಕವಾಗಿ ಪ್ರಾಮಾಣಿಕ ರಾಜಕೀಯ ಮಾಡುವುದು ಅಲ್ಲದೆ ನಾಯಕತ್ವ ಅರ್ಥ, ವಿಧಗಳು ಇತ್ಯಾದಿ ವಿಷಯಗಳನ್ನೊಳಗೊಂಡಿದ್ದು, ಶಿಬಿರಾರ್ಥಿಗಳನ್ನು ವಿಮರ್ಶೆಗೊಳಪಡಿಸಿ ಸಮಾಜದ ಉತ್ತಮ ನಾಯಕಿ/ನಾಯಕರಾಗಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಿದೆ ಎಂದರು .

    ಏಪ್ರಿಲ್ 14ಕ್ಕೆ ಅದ್ದೂರಿ ಭೀಮೋತ್ಸವ ಕಾರ್ಯಕ್ರಮ

    ಭಾರತ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಸವಿನೆನಪಿನಲ್ಲಿ ಇದೇ ತಿಂಗಳ ಏಪ್ರಿಲ್ 14ರಂದು ಬಳ್ಳಾರಿ ಜಿಲ್ಲೆಯಲ್ಲಿ ಅದ್ದೂರಿ ಭೀಮೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದ್ದು, ರಾಜ್ಯದ ಎಲ್ಲಾ ಅಂಬೇಡ್ಕರ್ ಅಭಿಮಾನಿಗಳು, ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

     

    ನಿರಂತರ ಬೆಲೆ ಏರಿಕೆ ವಿರುದ್ಧ ಉಗ್ರ ಹೋರಾಟ

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿದಿನವೂ ಒಂದಲ್ಲ ಒಂದು ರೀತಿ ಬೆಲೆ ಏರಿಕೆಯಾಗುತ್ತಲೇ ಇದೆ, ರಾಜ್ಯ ಜನರನ್ನು ಲೂಟಿ ಮಾಡಲಾಗುತ್ತಿದೆ. ನಿರಂತರ ಪ್ರತಿನಿತ್ಯ ಬಳಕೆಯಾಗುವ ದವಸ ಧಾನ್ಯಗಳು, ಹಾಲು, ಮೊಸರು, ತುಪ್ಪ,ಪೆಟ್ರೋಲ್, ಡೀಸೆಲ್, ಸೇರಿದಂತೆ ಎಲ್ಲಾ ವಸ್ತುಗಳ ದರ ಗಗನಕೇರುತ್ತಿದ್ದು, ಜನಸಾಮಾನ್ಯರು ಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ ಈ ಕುರಿತು ರಾಜ್ಯ ಸರ್ಕಾರ ಈ ಕೂಡಲೇ ಗಮನಹರಿಸಿ ಅಗತ್ಯ ವಸ್ತುಗಳ ಬೆಲೆಯನ್ನು ಸಾಮಾನ್ಯ ಜನರ ಕೈಗೆಟಕುವಂತೆ ಮಾಡಬೇಕಿದೆ ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಕೆಆರ್‌ಎಸ್‌ ಪಕ್ಷದ ವತಿಯಿಂದ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟಕ್ಕೆಗೊಳ್ಳಲಾಗುವುದು ಎಂದು ತಿಳಿಸಿದರು.

    Ad

    ಈ ತರಬೇತಿ ಶಿಬಿರವು 2 ದಿನ ನಡೆಯಲಿದ್ದು 2 ದಿನವೂ ಸಂಪೂರ್ಣವಾಗಿ ಸಕ್ರಿಯವಾಗಿ ಭಾಗವಹಿಸಬೇಕು. ಹಾಗೇ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಶಿಬಿರದಲ್ಲಿ ಪಾಲ್ಗೊಳ್ಳಲು ಬಯಸುವ ಯುವಕ/ ಯುವತಿಯರು ತಮ್ಮ ಹೆಸರನ್ನು 7619353525/8749065597 ಈ ಸಂಖ್ಯೆಗಳನ್ನು ಸಂಪರ್ಕಿಸುವ ಮೂಲಕ ನೋಂದಾಯಿಸಲು ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ , ಜಿಲ್ಲಾ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಾರುತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮುರಾರಿ ದೊಡ್ಡಬಳ್ಳಾಪುರ , ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಲೀಲಾ ರಾಮ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ, ಸೇರಿದಂತೆ ಹಲವು ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

     

  • ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್‌ಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ

    ಬೆಂಗಳೂರು : ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು “ಶೂನ್ಯ”ಗೊಳಿಸಲು ವಿಶೇಷ ಮುತುವರ್ಜಿಯಿಂದ ಪೊಲೀಸ್ ಕಾರ್ಯಾಚರಣೆಗೆ ಮುಂದಾಳತ್ವ ವಹಿಸಿ,ಮಾರ್ಗದರ್ಶನ ನೀಡುವ ಮೂಲಕ ಎಲ್ಲ ನಕ್ಸಲರನ್ನು ಶರಣಾಗುವಂತೆ ಮಾಡಿದ ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವರ್ಣಪದಕ ಪ್ರದಾನ ಮಾಡಿದರು.

     

    ಬೆಂಗಳೂರಿನ ಕೋರಮಂಗಲದ ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ಪಡೆಯ ಪರೇಡ್ ಮೈದಾನದಲ್ಲಿ ಇಂದು ಬೆಳಿಗ್ಗೆ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಯಿತು.

    Ad

    1998ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಹೇಮಂತ್ ಎಂ.ನಿಂಬಾಳ್ಕರ್ ಅವರು ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

  • ಧನ ಸಹಾಯ ಮಾಡುವ ಮೂಲಕ ಮೃತರ ಕುಟುಂಬಕ್ಕೆ ನೆರವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘ

    ದೊಡ್ಡಬಳ್ಳಾಪುರ : ಇತ್ತೀಚೆಗೆ ನುಮೋನಿಯ ತೊಂದರೆಯಿಂದ ಅಕಾಲಿಕ ಮರಣ ಹೊಂದಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರಘು ಅವರ ಕುಟುಂಬಕ್ಕೆ ಧನ ಸಹಾಯ ಮಾಡುವ ಮೂಲಕ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಹೆಚ್.ವಿ. ಸಾಂತ್ವನ ಹೇಳಿದರು.

     

    ತಾಲ್ಲೂಕಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದು ಕುಟುಂಬದ ಜವಾಬ್ಧಾರಿ ಹೊತ್ತು ಕುಟುಂಬಕ್ಕೆ ಆಸರೆಯಾಗಿದ್ದ ರಘು ನುಮೋನಿಯ ತೊಂದರೆಯಿಂದ ಅಕಾಲಿಕ ಮರಣ ಹೊಂದಿದ್ದು,ಇಂದು ಅವರ ತಾಯಿಯವರಾದ ರತ್ನಮ್ಮ ರವರಿಗೆ ಧನ ಸಹಾಯ ಮಾಡಿ ಕುಟುಂಬಕ್ಕೆ ಸಾಂತ್ವಾನ ಹೇಳುವ ಮೂಲಕ ಅವರ ನೋವಿನಲ್ಲಿ ಭಾಗಿಯಾದರು.

     

    ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸದಾಶಿವ ರಾಮಚಂದ್ರ ಗೌಡ,ಕಾಲೇಜಿನ ಪ್ರಾದ್ಯಾಪಕರಾದ ಶ್ರೀನಿವಾಸ್,ಸಂಘದ ಖಜಾಂಜಿ ಮಹೇಶ್,ಸಂಘದ ನಿರ್ದೇಶಕರಾದ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಶಿವಮೊಗ್ಗ: ಶ್ರೀ ಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಏಪ್ರಿಲ್ 14ರಿಂದ ವಸಂತ ವಿಹಾರ ಬೇಸಿಗೆ ಶಿಬಿರ

    ಶಿವಮೊಗ್ಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಮಾರ್ಗದರ್ಶನದಲ್ಲಿ ವಿನೋಬ ನಗರದ ಮೂರನೇ ಹಂತದ 8ನೇ ತಿರುವಿನಲ್ಲಿರುವ ಶ್ರೀ ಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಏಪ್ರಿಲ್ 14ರಿಂದ 20ರವರೆಗೆ 5 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ವಾರದ ವಿಶೇಷ ಬೇಸಿಗೆ ಶಿಬಿರ “ ವಸಂತ ವಿಹಾರ 2025 “ ಹಮ್ಮಿಕೊಳ್ಳಲಾಗಿದೆ.

     

    ಏಪ್ರಿಲ್ 14ರ ಸೋಮವಾರದಿಂದ ಏಪ್ರಿಲ್ 20ರ ಭಾನುವಾರದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಶಿಬಿರ ನಡೆಯಲಿದೆ. ಧ್ಯಾನ, ದಿವ್ಯತ್ರಯರ ದಿವ್ಯ ಜೀವನ, ಸಂಸ್ಕೃತ ಶ್ಲೋಕಗಳು, ರಾಮಾಯಣ, ಮಹಾಭಾರತದ ಕಥೆಗಳು, ಚಿತ್ರಕಲೆ, ಆರ್ಟ್ ಅಂಡ್ ಕ್ರಾಫ್ಟ್, ಸಂಗೀತ ಮತ್ತು ಭಜನೆ, ಸ್ವಾತಂತ್ರ‍್ಯ ಹೋರಾಟ, ಮಹಾಪುರುಷರ ಜೀವನ, ಆಟಗಳು, ಕ್ವಿಜ್, ಸೈನಿಕರು ಇವೆಲ್ಲವುಗಳ ಸಂಕ್ಷಿಪ್ತ ಪರಿಚಯವನ್ನು ನುರಿತ ಸಂಪನ್ಮೂಲ ವ್ಯಕ್ತಿಗಳು ಮಾಡಿಕೊಡುವರು. ಉಚಿತ ಶಿಬಿರ ಇದಾಗಿರುತ್ತದೆ.

    ಮೊದಲು ನೋಂದಾಯಿಸಿದ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ. 8317443637 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.