Blog

  • ಜಿಲ್ಲಾಡಳಿತ ಭವನದಲ್ಲಿ ಶ್ರೀ ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಹಾಗೂ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ

    ಬೆಂ.ಗ್ರಾ.ಜಿಲ್ಲೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಶ್ರೀ ಸಂತ ಸೇವಾಲಾಲ್ ಛತ್ರಪತಿ ಶಿವಾಜಿ ಹಾಗೂ ಸಂತ ಕವಿ ಸರ್ವಜ್ಞ ‘ ಜಯಂತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಆಚರಿಸಲಾಯಿತು.

    ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಶ್ರೀ ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಹಾಗೂ ಸಂತ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ಅರ್ಕಾವತಿ ಹೋರಾಟಗಾರರ ಆರೋಪಕ್ಕೆ ಅಧಿಕಾರಿಗಳ ಸಮ್ಮುಖದಲ್ಲೇ ಉತ್ತರ ಕೊಟ್ಟ ಇಂಡಿಗೋ ಬ್ಲೂ ಕಂಪನಿ

    ದೊಡ್ಡಬಳ್ಳಾಪುರ : ಇಂಡಿಗೋ ಬ್ಲೂ ಕಂಪನಿಯಿಂದ ಕಲುಷಿತ ನೀರು, ಚರಂಡಿಗೆ ಬಿಡುತ್ತಿದ್ದಾರೆಂದು ಆರೋಪಿಸಿ ಅರ್ಕಾವತಿ ಹೋರಾಟ ಸಮಿತಿಯ ಹೋರಾಟಗಾರರು ಬಹಳ ದಿನಗಳಿಂದಲೂ ಕಂಪನಿಯ ವಿರುದ್ಧ ಆರೋಪಿಸುತ್ತಿದ್ದೂ ಈ ವಿಚಾರದ ಸತ್ಯಾಸತ್ಯತೆ ತಿಳಿಯಲೆಂದು ಸ್ವತಃ ದೊಡ್ಡಬಳಾಪುರ ಕ್ಷೇತ್ರದ ತಹಶೀಲ್ದಾರ್, ಮಾಲಿನ್ಯ ನಿಯಂತ್ರ ಮಂಡಳಿ ಅಧಿಕಾರಿಗಳು, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯ ಅಧಿಕಾರಿಗಳು, ಸ್ಥಳೀಯ ಕೆಲವು ಜನಪ್ರತಿನಿಧಿಗಳು, ಪೋಲಿಸ್ ಅಧಿಕಾರಿಗಳು ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಸಹ ಇಂಡಿಗೋ ಬ್ಲೂ ಕಂಪನಿಯ ಬಳಿ ಜಮಾಯಿಸಿದ್ದರು.

     

    ಇತ್ತೀಚಿನ ದಿನಗಳಲ್ಲಿ ದೊಡ್ಡ ತುಮಕೂರು ಕೆರೆ ಕಲುಷಿತ ನೀರಿನ ವಿಚಾರ ಪದೇ ಪದೇ ಹೆಚ್ಚುತ್ತಿದ್ದು ಕೆರೆ ಹೋರಾಟಕ್ಕೆ ಸಂಬಂದಿಸಿದಂತೇ ಹೋರಾಟಗಳು ನಡೆಯುತ್ತಲೇ ಇವೆ. ಕೆರೆಗೆ ಬಹಳಷ್ಟು ರೀತಿಯಲ್ಲಿ ಕಲುಷಿತ ನೀರು ಹರಿದು ಬರುತ್ತಿದ್ದು ನೀರು ಕುಡಿಯಲು ಹಾಗೂ ಯಾವುದೇ ರೀತಿಯಲ್ಲೂ ಬಳಕೆ ಮಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿರುವುದು ಎದ್ದು ಕಾಣುತ್ತಿದೆ.

     

    ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿಯ ಬ್ಯಾಂಕ್ ಸರ್ಕಲ್ ನ ಇಂಡಿಗೋ ಬ್ಲೂ ಕಂಪನಿಯಿಂದ ಕಲುಷಿತ ನೀರು, ಚರಂಡಿಗೆ ಬಿಡುತ್ತಿದ್ದಾರೆಂದು ಆರೋಪಿಸಿ ಅರ್ಕಾವತಿ ಹೋರಾಟ ಸಮಿತಿಯ ಹೋರಾಟಗಾರರು ಬಹಳ ದಿನಗಳಿಂದಲೂ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿತ್ತು,

     

    ಈ ಸಂಬಂಧ ಕಾರ್ಖಾನೆಗೆ ಭೇಟಿ ಕೊಟ್ಟ ಅಧಿಕಾರಿಗಳ ತಂಡವು ಅರ್ಕಾವತಿ ಹೋರಾಟ ಸಮಿತಿಯ ಸದಸ್ಯರು ಕಲುಷಿತ ನೀರು ಬಿಡುತ್ತಿದ್ದಾರೆಂದು ಆರೋಪಿಸಿ ತೋರಿಸಿದ ಜಾಗದಲ್ಲಿದ್ದ ಕಬ್ಬಿಣದ ಪೈಪ್ ಕಟ್ ಮಾಡಿಸಿದರು, ಆದರೆ ಅಲ್ಲಿ ದೊರೆತಿದ್ದು ಕುಡಿಯುವ ನೀರಾಗಿತ್ತೇ ಹೊರತು ಯಾವುದೇ ರೀತಿಯ ಕಲುಷಿತ ನೀರು ಕಂಡುಬಂದಿಲ್ಲ. ಆ ಕುಡಿಯುವ ನೀರನ್ನು ತಹಶಿಲ್ದಾರ್ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಹೋರಾಟಗಾರರ ಮುಂದೆ ಕುಡಿದು ಪರೀಕ್ಷಿಸಲಾಯಿತು.

     

    ಅರ್ಕಾವತಿ ಹೋರಾಟ ಸಮಿತಿಯ ಸದಸ್ಯರ ಆರೋಪ ನಿರಾಧಾರ ಎಂದು ತಿಳಿದ ತಕ್ಷಣ ಅಲ್ಲಿವರೆಗೂ ಇಂಡಿಗೋ ಬ್ಲೂ ಕಂಪನಿಯ ವಿರುದ್ಧ ಆಪಾದನೆಗಳನ್ನು ಹೊರಿಸಿದ್ದ ಅರ್ಕಾವತಿ ಹೋರಾಟ ಸಮಿತಿಯ ಪ್ರಮುಖರು ಅಧಿಕಾರಿಗಳು ಸರಿಯಾದ ಬೆಂಬಲ ಕೊಡದ ಕಾರಣ ಇಂದಿನ ದಿನ ನಾವು ಸತ್ಯಾಸತ್ಯತೆ ತಿಳಿಯಲು ಸಾಧ್ಯವಾಗಲಿಲ್ಲವೆಂದು ಅಧಿಕಾರಿಗಳ ಮೇಲೆ ದೂರಿದರು.

     

    ಇಂಡಿಗೋ ಬ್ಲೂ ಕಂಪನಿಯ ಆಡಳಿತ ವರ್ಗದವರು ಮಾತನಾಡಿ ಪದೇಪದೇ ನಮ್ಮ ಕಂಪನಿಯ ಮೇಲೆ ದೂರುವುದು ಸರಿಯಲ್ಲ. ಪ್ರತಿಯೊಬ್ಬರ ಜೀವ ಮತ್ತು ಜೀವನ ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಕಂಪನಿ ಯಾವುದೇ ರೀತಿಯ ಕಲುಷಿತ ನೀರನ್ನು ಹೊರಗೆ ಬಿಡುವ ಕಾರ್ಯವನ್ನು ಮಾಡಿಲ್ಲ ಹಾಗೂ ಮಾಡುವುದೂ ಇಲ್ಲ. ಸುಮಾರು 15 ಕೋಟಿ ಬಂಡವಾಳ ಹೂಡಿಕೆ ಮಾಡಿ ಕಂಪನಿಯ ಒಳಗಡೆ ನೀರನ್ನು ಶುದ್ಧೀಕರಣಮಾಡುವ ವಿಧಾನವನ್ನು ಮಾಡಿದ್ದೇವೆ, ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಇಲ್ಲಿ ಸುಮಾರು 3000ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು ಅವರನ್ನೇ ನಂಬಿರುವ ಹನ್ನೆರಡು ಸಾವಿರಕ್ಕೂ ಹೆಚ್ಚು ಜೀವಗಳು ಕಂಪನಿಯನ್ನು ನಂಬಿಕೊಂಡಿವೆ ನಿಮಗೇನು ಬೇಕೋ ಇವತ್ತೇ ಪರೀಕ್ಷಿಸಿಕೊಳ್ಳಿ ಆದರೆ ಆಗಾಗ ಬಂದು ಸುಖಾಸುಮ್ಮನೆ ತೊಂದರೆ ಕೊಡಬೇಡಿ ಎಂದು ಹೇಳಿದರು.

     

    ಎಲ್ಲಾ ಪರೀಕ್ಷೆಗಳು ಮುಗಿದು ಕಲುಷಿತ ನೀರು, ಹೊರಗೆ ಬರುತ್ತಿಲ್ಲವೆಂದು ಅರಿವಾದ ನಂತರ ಇಂಡಿಗೋ ಬ್ಲೂ ಕಂಪನಿಯವರು ಇಂದಿನ ಬೆಳವಣಿಗೆಗಳ ಕುರಿತು ನೀರು ಬರುತ್ತಿಲ್ಲವೆಂದು ಸಹಿ ಸಂಗ್ರಹಣಕ್ಕೆ ಮುಂದಾಗ ಅರ್ಕಾವತಿ ಹೋರಾಟ ಸಮಿತಿಯ ಯಾರೊಬ್ಬರೂ ಸಹಿ ಹಾಕದೇ ಇಂದು ಸೋತಿದ್ದೇವೆ ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೇವೆ ಎಂದು ಸೋಲು ಗೆಲುವಿನ ಮಾತನಾಡಿದ್ದು ಕಂಡುಬಂದಿತು.

     

  • ಬೆಂಗಳೂರಿನ ಚಿಗುರು ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಲಾವಿದೆ ಎಂ ಕೆ ನವ್ಯಶ್ರೀ ಅವರಿಗೆ ಅಪ್ರತಿಮ ಗುರು ಪುರಸ್ಕಾರ

    ದೊಡ್ಡಬಳ್ಳಾಪುರ : ನಗರದ ಭರತನಾಟ್ಯ ಕಲಾವಿದೆ ಎಂ ಕೆ ನವ್ಯಶ್ರೀ ಇವರಿಗೆ ಚಿಗುರು ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಪ್ರತಿಮ ಗುರು ಪುರಸ್ಕಾರ (ರಾಷ್ಟ್ರ ಪ್ರಶಸ್ತಿ) ನೀಡಿ ಗೌರವಿಸಲಾಯಿತು.

    ಇದೆ ಫೆಬ್ರವರಿ 15 ರಿಂದ 17 ವರೆಗೆ ರಾಜಸ್ಥಾನದ ಜೈಪುರ್ ನಲ್ಲಿ ಬೆಂಗಳೂರಿನ ಚಿಗುರು ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಾಟ್ಯ ಮಿಲನ 2025 ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು, ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರದ ಭರತನಾಟ್ಯ ಕಲಾವಿದೆ ಎಂ ಕೆ ನವ್ಯಶ್ರೀ ಭಾಗವಹಿಸಿ ಭರತನಾಟ್ಯ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು.

     

    ಈ ಸಂದರ್ಭದಲ್ಲಿ ಕಲಾವಿದೆ ಎಂ ಕೆ ನವ್ಯಶ್ರೀ ಇವರಿಗೆ ಸಂಸ್ಥೆವತಿಯಿಂದ ಅಪ್ರತಿಮ ಗುರು ಪುರಸ್ಕಾರ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದರು.

     

    ಈ ಕುರಿತು ಪ್ರಶಸ್ತಿ ಪಡೆದ ಕಲಾವಿದೆ ಎಂ ಕೆ ನವ್ಯಶ್ರೀ ಮಾತನಾಡಿ ಪುರಸ್ಕಾರ ಹಾಗೂ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ , ಇಂದು ನನಗೆ ಲಭಿಸಿರುವ ಅಪ್ರತಿಮ ಗುರು ಪುರಸ್ಕಾರವು ನನ್ನೆಲ್ಲ ಪೂಜ್ಯ ಗುರುಗಳಿಗೆ ಅರ್ಪಿಸುತ್ತೇನೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುವ ಆಶಯವಿದೆ ಎಂದರು.

    ಈ ಸಂದರ್ಭದಲ್ಲಿ ಚಿಗುರು ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ನ ಮುಖ್ಯಸ್ಥರು ಪದಾಧಿಕಾರಿಗಳು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

     

  • ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ : ಶುಭ ಹಾರೈಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘ

    ಬೆಂಗಳೂರು ಗ್ರಾಮಾಂತರ : ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

     

    ದೇವನಹಳ್ಳಿಯ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ:

    ಅಧ್ಯಕ್ಷರಾಗಿ ಹರೀಶ್ ಬೆಟ್ಟಹಳ್ಳಿ, ಉಪಾಧ್ಯಕ್ಷರಾಗಿ ನಾಗರಾಜ್, ರಾಜಣ್ಣ, ಕಾರ್ಯದರ್ಶಿಯಾಗಿ ಬೈರೇಗೌಡ, ಖಜಾಂಚಿಯಾಗಿ ಬಾಬು ,ಸಹ ಕಾರ್ಯದರ್ಶಿಯಾಗಿ ಮದನ್, ಸಂಘಟನಾ ಕಾರ್ಯದರ್ಶಿಯಾಗಿ ರವೀಶ್ ಆಯ್ಕೆ ಯಾಗಿದ್ದಾರೆ.

    ಜಿಲ್ಲಾ ಸಮಿತಿಗೆ ನೂತನವಾಗಿ ಆಯ್ಕೆಯಾದ ಪ್ರವಾಸ ಸಮಿತಿಯ ನೂತನ ಅಧ್ಯಕ್ಷರಾಗಿ ಶಿವಕುಮಾರ್ ಆಯ್ಕೆಯಾಗಿದ್ದಾರೆ.

     

    ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ:

    ಸಂಘದ ಗೌರವ ಅಧ್ಯಕ್ಷರಾಗಿ ಜಿ.ವಿ. ಲಕ್ಷ್ಮಯ್ಯ, ದೊಡ್ಡಬಳ್ಳಾಪುರ ತಾಲ್ಲೂಕ ಅಧ್ಯಕ್ಷರಾಗಿ ಟಿ. ಕೆ. ಆನಂದ್, ಉಪಾಧ್ಯಕ್ಷರಾಗಿ ಮುನಿರಾಜ್ಅರಸ್, ಖಜಾಂಚಿಯಾಗಿ ಸಿ ನಾಗರಾಜ್ ಆಯ್ಕೆಯಾಗಿದ್ದಾರೆ.

    ನೂತನ ಪದಾಧಿಕಾರಿಗಳಿಗೆ ಜಿಲ್ಲಾ ಸಮಿತಿ ಅಧ್ಯಕ್ಷರಾದ ಶ್ರೀ ಮಂಜುನಾಥ್ (ಹುರಳಹಳ್ಳಿ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್. ಎ ಶುಭ ಹಾರೈಸಿ ಮಾತನಾಡಿದ ಅವರು ಉತ್ತಮ ಸೇವೆ ಸಲ್ಲಿಸುವ ಉದ್ದೇಶದಿಂದ ನಮ್ಮ ವಿದ್ಯುತ್ ಗುತ್ತಿಗೆದಾರರ ಸಂಘಕಾರ್ಯ ನಿರ್ವಹಿಸುತ್ತಿದ್ದೂ ನೂತನ ಪದಾಧಿಕಾರಿಗಳು ತಮ್ಮ ತಾಲ್ಲೂಕು ಮಟ್ಟದಲ್ಲಿ ಸಂಘಟನೆ ಜೊತೆಗೆ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವ ಮೂಲಕ ಸಂಘದ ಗೌರವ ಹೆಚ್ಚಿಸುವ ಕಾರ್ಯವಾಗಲಿ, ಉತ್ತಮ ಕಾರ್ಯಕ್ಕೆ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘ ಸದಾ ನಿಮ್ಮ ಬೆಂಬಲವಾಗಿರುತ್ತದೆ ಎಂದರು.

    ಈ ಸಂದರ್ಭದಲ್ಲಿ ಮುರುಳಿ,ನಾರಾಯಣಸ್ವಾಮಿ.ಶಶಿಕುಮಾರ್.ಗಿರೀಶ್.ನಟರಾಜ್, ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹಾಗೂ ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.

     

     

  • ನಾಳೆ (ಫೆಬ್ರವರಿ 17) ರಾಜಗೋಪುರ ಉದ್ಘಾಟನೆ

    ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ನೂತನ ರಾಜಗೋಪುರ ಉದ್ಘಾಟನೆ ಫೆ. 17 ರಂದು ನೆಡೆಯಲಿದೆ. ಹಾಗೂ ಇದೇ ದಿನ ಕಲ್ಯಾಣ ಮಂಟಪದ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಹ ನೆರವೇರಲಿದೆ.

     

    ವಿವಿಧ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ,108 ಕಳಸ ಸ್ಥಾಪನೆ, ಗಣಪತಿ ಹೋಮ, ಪಣ್ಯಾಹ, ಪೂರ್ಣಾಹುತಿ ಮತ್ತು ಮಹಾ ಕುಂಭಾಭಿಷೇಕದೊಂದಿಗೆ ರಾಜಗೋಪುರ ಲೋಕಾರ್ಪಣೆಗೊಳ್ಳಲಿದೆ. ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿನಿಯೋಗ ಕಾರ್ಯಕ್ರಮ ಹಾಗೂ ವಿಶೇಷ ದರ್ಶನ ವ್ಯವಸ್ಥೆ  ಮಾಡಲಾಗುತ್ತದೆ.

     

    ಕಾರ್ಯಕ್ರಮದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ, ಸಂಸದ ಸುಧಾಕರ್, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಪಿಳ್ಳಮುನಿಶಾಮಪ್ಪ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ

    ಬೆಂ.ಗ್ರಾ.ಜಿಲ್ಲೆ, : ಪರೀಕ್ಷೆ ಹಾಗೂ ನೇಮಕಾತಿ ಉದ್ದೇಶಗಳಿಗಾಗಿ ತ್ವರಿತವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅವಶ್ಯಕತೆ ಇರುವ ಜಿಲ್ಲೆಯ ವಿದ್ಯಾರ್ಥಿಗಳು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 6361968031 ಅನ್ನು ಸಂಪರ್ಕಿಸಿ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜ ಅವರು ತಿಳಿಸಿದ್ದಾರೆ.

     

    ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ವಿಳಂಬವಾಗುತ್ತಿದ್ದು ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾಡಳಿತ ಭವನದಲ್ಲಿ ಸಹಾಯವಾಣಿ ಸಂಖ್ಯೆ 6361968031 ಅನ್ನು ಸ್ಥಾಪಿಸಲಾಗಿದೆ.

     

    ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಸ್ವೀಕೃತ ಕರೆಗಳಿಗೆ ಕೂಡಲೇ ಸ್ಪಂದಿಸಿ ಕ್ರಮ ವಹಿಸಲಾಗುವುದು‌. ಯಾವುದೇ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

  • ಡಾ.ಸುನೀಲ್ ಕುಮಾರ್ ಸ್ಥಾನಕ್ಕೆ ನೂತನ ಪ್ರಭಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಲಕ್ಕಾ ಕೃಷ್ಣಾರೆಡ್ಡಿ ನೇಮಕ

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುನೀಲ್ ಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ಅಸಮತೋಲನ ಆಸ್ತಿ ಪ್ರಕರಣ ದಾಖಲಾಗಿದ್ದು, ಅವರು ಅದೇ ಹುದ್ದೆಯಲ್ಲಿ ಮುಂದುವರೆದಲ್ಲಿ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಅಡ್ಡಿ ಉಂಟುಮಾಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಹಾಗೂ ಸಾಕ್ಷಿ ಪುರಾವೆಗಳನ್ನು ನಾಶಗೊಳಿಸುವ ಸಾಧ್ಯತೆಗಳಿರುವುದರಿಂದ ಇವರ ಸ್ಥಳ(ಲೀನ್) ಬದಲಾಯಿಸಲು ಇವರನ್ನು ಕೂಡಲೇ ಜಾರಿಗೆ ಬರುವಂತೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.

     

    ಈ ಅಧಿಕಾರಿಯು ತಮ್ಮ ಮುಂದಿನ ಸ್ಥಳ ನಿಯುಕ್ತಿಗಾಗಿ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿದೆ.

     

    ಡಾ. ಲಕ್ಕಾ ಕೃಷ್ಣಾರೆಡ್ಡಿ ಅವರನ್ನು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹುದ್ದೆಯಲ್ಲಿ ಹೆಚ್ಚುವರಿ ಪ್ರಭಾರದಲ್ಲಿಸಿ ನೇಮಿಸಲಾಗಿದೆ.

  • ಮೈಕ್ರೋಫೈನಾನ್ಸ್ ಸಂಸ್ಥೆಗಳಿಂದ ಬಲವಂತದ ವಸೂಲಾತಿ ಸಲ್ಲದು : ತಾವು ವ್ಯವಹರಿಸುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಲ್ಲಿ ನೊಂದಣಿಯಾಗುವುದು ಕಡ್ಡಾಯ… ಹೊಸ ರೂಲ್ಸ್..!!

    ಬೆಂಗಳೂರು: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025ನ್ನು ಫೆಬ್ರವರಿ 12 ರಿಂದ ಜಾರಿಗೊಳಿಸಿದೆ.

     

    ಆದೇಶದ ಮುಖ್ಯಾಂಶಗಳು ಹೀಗಿವೆ:

     

    ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲಗಾರರಿಂದ ಯಾವುದೇ ಭದ್ರತೆ ಪಡೆಯಬಾರದು.ಗ್ರಾಹಕರಿಗೆ ವಿಧಿಸುವ ಬಡ್ಡಿದರಗಳ ಬಗ್ಗೆ ಪಾರದರ್ಶಕವಾಗಿ ಲಿಖಿತ ರೂಪದಲ್ಲಿ ತಿಳಿಸಬೇಕು. ಈ ಆದೇಶವು ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನೊಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ. ನೊಂದಾಯಿತ ಸಂಸ್ಥೆಗಳಿಂದ ಅಂದಾಜು 60 ಸಾವಿರ ಕೋಟಿ ರೂ ಸಾಲವನ್ನು ಸುಮಾರು 1.09 ಕೋಟಿ ಸಾಲಗಾರರು ಪಡೆದಿದ್ದಾರೆ. ನೊಂದಣಿಯಾಗದ ಸಂಸ್ಥೆಗಳಿಂದ ಸಾಲ ಪಡೆದವರ ಮಾಹಿತಿ ನಿಖರವಾಗಿ ಲಭ್ಯವಿಲ್ಲವಾದರೂ, ಅಂದಾಜು 40 ಸಾವಿರ ಕೋಟಿ ರೂ ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಇದೆ.

     

    ಮೈಕ್ರೋಫೈನಾನ್ಸ್ ಸಂಸ್ಥೆಗಳು ತಾವು ವ್ಯವಹರಿಸುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಲ್ಲಿ ನೊಂದಣಿಯಾಗುವುದು ಕಡ್ಡಾಯವಾಗಿದೆ. ಈ ಸಂಸ್ಥೆಗಳು ವಿಧಿಸುವ ಬಡ್ಡಿದರ, ಸಾಲಗಾರರ ಮಾಹಿತಿ ಹಾಗೂ ಸುಸ್ತಿ ಸಾಲಗಳ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು. ತ್ರೈ ಮಾಸಿಕ ಮತ್ತು ವಾರ್ಷಿಕ ವ್ಯವಹಾರದ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ಸಲ್ಲಿಸದಿದ್ದರೆ 6 ತಿಂಗಳ ಕಾರಗೃಹವಾಸ ಅಥವಾ 10 ಸಾವರಿರೂ ವರೆಗೆ ದಂಡ ಅಥವಾ ಎರಡೂ ಶಿಕ್ಷೆಗೆ ಗುರಿಯಾಗುತ್ತಾರೆ.ವಿವಾದಗಳನ್ನು ಇತ್ಯರ್ಥಗಳನ್ನು ಒಂಬುಡ್ಸ್‍ಮನ್‍ಗಳನ್ನು ಸರ್ಕಾರ ಅಧಿಸೂಚನೆ ಮೂಲಕ ನೇಮಕ ಮಾಡುವ ಅಧಿಕಾರ ಹೊಂದಿರುತ್ತದೆ.

     

    *ಬಾಕ್ಸ್ ಐಟಂ (ಕೋಟ್)* :

     

    ಬಲವಂತದ ವಸೂಲಾತಿಗಳನ್ನು ಕೈಗೊಳ್ಳುವ ವ್ಯಕ್ತಿಯು ವಿಚಾರಣೆಗೆ ಒಳಪಡುತ್ತಾನೆ, ಹತ್ತು ವರ್ಷಗಳ ವರೆಗೆ ವಿಸ್ತರಿಸಬಹುದಾದ ಕಾರಗೃಹವಾಸ ಶಿಕ್ಷೆ ಹಾಗೂ 5 ಲಕ್ಷ ರೂ ವರೆಗೆ ವಿಧಿಸಬಹುದಾದ ಜುಲ್ಮಾನೆಗೆ ಒಳಪಡುತ್ತಾನೆ. ಈ ಅಪರಾಧಗಳು ಸಂಜ್ಞೆಯ (ಕಾಗ್ನಿಜಿಬಲ್) ಹಾಗೂ ಜಾಮೀನು ರಹಿತ (ನಾನ್ ಬೇಲೆಬಲ್) ಪ್ರಕರಣಗಳಾಗಿರುತ್ತವೆ. ಯಾವುದೇ ಪೊಲೀಸ್ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ನೊಂದಣಿ ಮಾಡಿಕೊಳ್ಳಲು ನಿರಾಕರಿಸಬಾರದು. ಪೊಲೀಸ್ ಉಪ ಅಧೀಕ್ಷಕ (ಡಿವೈಎಸ್‍ಪಿ) ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಯು ಸ್ವತಃ (ಸುಮೊಟೊ) ಪ್ರಕರಣ ದಾಖಲಿಸಬಹುದು. ಸರ್ಕಾರವು ಈ ಅಧ್ಯಾದೇಶದ ಅನುಷ್ಠಾನಕ್ಕೆ ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡುವ ಅಧಿಕಾರ ಹೊಂದಿರುತ್ತದೆ. ಈ ಆದೇಶದಿಂದ ಆರ್.ಬಿ.ಐ ಮತ್ತು ಕೇಂದ್ರ / ರಾಜ್ಯ ಸರ್ಕಾರಗಳಿಂದ ನೊಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು ಹೆಚ್ಚಿಸಲು ಹಾಗೂ ಸಾಲಗಾರರಿಗೆ ಕಿರುಕುಳ, ಬಲವಂತದ ವಸೂಲಿ ಕ್ರಮಗಳಿಂದ ಮುಕ್ತಿ ನೀಡುತ್ತದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾಹಿತಿ ನೀಡಿದ್ದಾರೆ.

     

  • ಅಧಿಕಾರಿಗಳಿಗೆ ರಕ್ಷಣೆ ಇಲ್ಲ, ಪೊಲೀಸರ ಆತ್ಮಸ್ಥೈರ್ಯ ಕುಸಿದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ

    ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ. ಪೊಲೀಸರ ಆತ್ಮಸ್ಥೈರ್ಯ ಕುಸಿದಿದೆ. ಒಂದೆಡೆ ಮರಳು ಮಾಫಿಯಾ ಕೈಯಲ್ಲಿ ಸರ್ಕಾರ ಸಿಲುಕಿದ್ದರೆ, ಮತ್ತೊಂದೆಡೆ ಮೈಸೂರಿನಲ್ಲಿ ಗಲಭೆಕೋರರ ಪರವಾಗಿ ಸಚಿವರು ಮಾತಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

     

    ವಿಧಾನಸೌಧದ ಕೆಂಗಲ್‌ ಹನುಮಂತಯ್ಯ ಪ್ರತಿಮೆ ಮುಂಭಾಗ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರಿನಲ್ಲಿ ಉದಯಗಿರಿ ಪೊಲೀಸ್‌ ಠಾಣೆ ಮೇಲೆ ಮುಸ್ಲಿಂ ಮತಾಂಧರು ದಾಳಿ ಮಾಡಿದರೂ ಪೊಲೀಸರಿಗೆ ರಕ್ಷಣೆ ನೀಡಿಲ್ಲ. ಇಂತಹ ಘಟನೆಗಳಿಂದ ಅಧಿಕಾರಿಗಳ ಆತ್ಮಸ್ಥೈರ್ಯ ಕುಸಿದಿದೆ. ನಿಷ್ಠಾವಂತ ಅಧಿಕಾರಿಗಳು ಹಾಗೂ ಪೊಲೀಸರಿಗೆ ರಕ್ಷಣೆ ನೀಡಿ ಎಂದು ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

     

    ನಿಷ್ಠಾವಂತ ಅಧಿಕಾರಿಗಳನ್ನು ಕಾಪಾಡಬೇಕಾದ ವಿಧಾನಸೌಧ *ಮೌನ ಸೌಧವಾಗಿದೆ.* ಸರ್ಕಾರಿ ಕೆಲಸ ದೇವರ ಕೆಲಸ ಎಂದು ಮಾಜಿ ಸಿಎಂ ಕೆಂಗಲ್‌ ಹನುಮಂತಯ್ಯ ಬರೆಸಿದ್ದಾರೆ. ಕಾಂಗ್ರೆಸ್‌ನಿಂದಾಗಿ ಇದು ದೆವ್ವಗಳ ಕೆಲಸ ಎಂಬಂತಾಗಿದೆ. ಭದ್ರಾವತಿಯಲ್ಲಿ ಮರಳು ಮಾಫಿಯಾ ತಡೆಯಲು ಹೋದ ಮಹಿಳಾ ಅಧಿಕಾರಿಯ ಮೇಲೆ *ಲಾರಿ ಹತ್ತಿಸಿ ಕೊಲ್ಲುವುದಾಗಿ* ಶಾಸಕರ ಮಗ ಜೀವ ಬೆದರಿಕೆ ಹಾಕಿದ್ದಾನೆ. ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಮಾಫಿಯಾ ಕೈಯಲ್ಲಿ ಸರ್ಕಾರ ಸಿಲುಕಿರುವುದರಿಂದ ಅಧಿಕಾರಿಗಳಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಎಫ್‌ಐಆರ್‌ನಲ್ಲಿ ಶಾಸಕ *ಸಂಗಮೇಶ್‌ ಪುತ್ರನ ಹೆಸರಿಲ್ಲ.* ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗಿದೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹೇಳಿಕೆ ನೀಡುವ ಬದಲು ಬೀದಿಗಿಳಿದು ಹೋರಾಟ ಮಾಡಬೇಕು ಎಂದರು.

     

    ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಮೈಸೂರಿನಲ್ಲಿ ಯಾರನ್ನೂ ಬಂಧಿಸಿಲ್ಲ. ಇಡೀ ಸರ್ಕಾರ ಗಲಭೆಕೋರರ ಪರವಾಗಿ ನಿಂತಿದೆ. ಅದರ ಬದಲು ಪೊಲೀಸ್‌ ಅಧಿಕಾರಿಗಳನ್ನೇ ಟೀಕಿಸಲಾಗುತ್ತಿದೆ. ಮುಸ್ಲಿಮರಿಂದ ಗೆದ್ದ ಸಚಿವರು ಅವರ ಪರವಾಗಿ ಮಾತಾಡುತ್ತಿದ್ದಾರೆ ಎಂದರು.

     

    ಭದ್ರಾವತಿಯ ಮಹಿಳಾ ಅಧಿಕಾರಿಯ ಮೇಲೆ ಒತ್ತಡ ಹೇರಲಾಗಿದೆ. ಆ ಭಯದಿಂದಲೇ ಅವರು ಯಾರ ಮೇಲೂ ದೂರು ನೀಡಿಲ್ಲ. ದೂರು ಕೊಟ್ಟರೂ ಸರ್ಕಾರ ಅಧಿಕಾರಿಯ ಪರವಾಗಿ ನಿಲ್ಲುವುದಿಲ್ಲ. ಪೊಲೀಸ್‌ ಅಧಿಕಾರಿಗೆ ಸ್ಟಾರ್‌ ಕೊಟ್ಟವರು ಯಾರು ಎಂದು ಸಚಿವ ರಾಜಣ್ಣ ಪ್ರಶ್ನೆ ಮಾಡಿದ್ದಾರೆ. ಪೊಲೀಸರಿಗೆ ಜನರು ಸ್ಟಾರ್‌ ನೀಡಿದ್ದಾರೆ. ಅವರಿಗೆ ಜನರ ತೆರಿಗೆ ಹಣದಿಂದ ಸಂಬಳ ನೀಡಲಾಗುತ್ತಿದೆಯೇ ಹೊರತು, ಸಚಿವರ ಹಣದಿಂದ ನೀಡುತ್ತಿಲ್ಲ. ಪೊಲೀಸರನ್ನು ಪ್ರಶ್ನಿಸುವುದಿದ್ದರೆ ಕಚೇರಿಯಲ್ಲಿ ಕರೆದು ಮಾತಾಡಬೇಕು. ಅದನ್ನು ಬಿಟ್ಟು ಸಾರ್ವಜನಿಕ ಸ್ಥಳದಲ್ಲಿ ಅವರನ್ನು ನಿಂದಿಸಬಾರದು. ಹೀಗೆ ಮಾಡಿದರೆ ಪೊಲೀಸರು *ಆತ್ಮವಿಶ್ವಾಸದಿಂದ ಕೆಲಸ* ಮಾಡುವುದು ಹೇಗೆ? ಎಂದು ಪ್ರಶ್ನೆ ಮಾಡಿದರು.

  • ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ

    ದೊಡ್ಡಬಳ್ಳಾಪುರ : ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ಕಚೇರಿ ಮುಂಭಾಗ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ

    ಈ ವೇಳೆ ಜಿಲ್ಲಾ ಕಂದಾಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖ‌ರ್ ಮಾತನಾಡಿ, ಈ ಹಿಂದೆ ಧರಣಿ ನಡೆಸಿದಾಗ ಗ್ರಾಮ ಆಡಳಿತ. ಅಧಿಕಾರಿಗಳ ಎಲ್ಲ ಬೇಡಿಕೆಗಳನ್ನು ಈಡೇರಿಸು ವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ ಈವರೆಗೆ ಯಾವುದೇ ಬೇಡಿಕೆ ಈಡೇರಿಸಿಲ್ಲ. ಬದಲಿಗೆ ಕೆಲಸದ ಒತ್ತಡ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು.ದಿನದಿಂದ ದಿನಕ್ಕೆ ಕೆಲಸದ ಒತ್ತಡಕ್ಕೆ ಸಿಲುಕುವಂತಾಗಿದೆ. ಮೂಲಸೌಕರ್ಯ ಇಲ್ಲದೆ ಸಮಸ್ಯೆಗಳ ಸುಳಿಯಲ್ಲಿ ಕೆಲಸ ಮಾಡಬೇಕಿದೆ ಎಂದರು

     

     

    ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿ, ಸಂಘದ ಅಧ್ಯಕ್ಷ ಶ್ರೀಮಂತ ಅಸಂಗ್ಯಾಳ ಮಾತನಾಡಿ, ಇ ಫವತಿ ಖಾತಾ ಕೈಬಿಡಬೇಕು. ಸುಸಜ್ಜಿತ ಕಚೇರಿ, ಲ್ಯಾಪ್ ಟಾಪ್, ಇಂಟರ್‌ವೆಟ್, ಪ್ರಿಂಟ‌ರ್, ಸ್ಕ್ಯಾನ‌ರ್ ಸೇರಿದಂತೆ ಮೂಲಸೌಕರ್ಯ ಎಂದು ನೀಡಬೇಕು. ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ನೀಡಬೇಕು. ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ವರ್ಷಪೂರ್ತಿ ಕೆಲಸ ಮಾಡುವ ಆಡಳಿತ ಅಧಿಕಾರಿಗಳಿಗೆ ಒಂದು ತಿಂಗಳ ವೇತನ ಹೆಚ್ಚುವರಿಯಾಗಿ ನೀಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.

     

    ದೊಡ್ಡಬಳ್ಳಾಪುರ ನಗರದ ತಾಲೂಕು ಕಚೇರಿ ಮುಂಭಾಗ ಗ್ರಾಮ ಆಡಳಿತ ಅಧಿ ಕಾರಿಗಳು ತಹಸೀಲ್ದಾರ್ ವಿಭಾ ವಿದ್ಯಾ ರಾಠೋಡ್ ಅವರಿಗೆ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿದ ತಹಸೀಲ್ದಾ‌ರ್ ವಿಭಾವಿದ್ಯಾ ರಾಠೋಡ್, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಮನವಿಯನ್ನ ಜಿಲ್ಲಾಧಿಕಾರಿಗಳಿಗೆ ರವಾನೆ ಮಾಡಿ ಖುದ್ದು ಸಮಸ್ಯೆ ತಿಳಿಸಲಾಗುವುದು ಎಂದರು.

    ಈ ವೇಳೆ ಗ್ರಾಮ ಆಡಳಿತ ಅಧಿ ಕಾರಿಗಳ ಸಂಘದ ಉಪಾಧ್ಯಕ್ಷ ಕಿರಣ್, ಜಿಲ್ಲಾ ಕಂದಾಯ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಲಮಾಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧರಣಿ ಕುಮಾರ್, ಗೌರವ ಅಧ್ಯಕ್ಷೆ ಸಿ.ಎನ್.ಅಶ್ವತಮ್ಮ, ಪ್ರಧಾನ ಕಾರ್ಯದರ್ಶಿ ಗಂಗರಾಜು, ಗ್ರಾಮ ಆಡಳಿತಾಧಿಕಾರಿಗಳಾದ ಗುರುಪ್ರಸಾದ್, ಎಂ.ಎಸ್.ಆನಂದ್, ತಮ್ಮಣ್ಣಪ್ಪ ಕಸರೆಡ್ಡಿ. ಪಲ್ಲವಿ, ಚೈತ್ರಾ ಮತ್ತಿತ್ತರರು ಇದ್ದರು.