Blog

  • ಹೈ ಕೋರ್ಟ್ ಆದೇಶ ಪಾಲಿಸಿ 150 ಕುಟುಂಬಗಳಿಗೆ ನಿವೇಶನ ಕಲ್ಪಿಸಿ – ಬಿ. ಶಿವಶಂಕರ್

    ದೇವನಹಳ್ಳಿ : ಸರ್ಕಾರಿ ಜಾಗವನ್ನ ಉಳಿಸಿ ಮತ್ತು ಒತ್ತುವರಿಯನ್ನ ತೆರವು ಮಾಡುವಂತೆ ಒತ್ತಾಯಿಸಿ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

    ದೇವನಹಳ್ಳಿಯ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಬೆಂಗಳೂರು ಗ್ರಾಮಾಂತರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ತಮಟೆ ಹೊಡೆಯುವ ಮೂಲಕ ವಿಶೇಷ ರೀತಿಯ ಪ್ರತಿಭಟನೆಯನ್ನು ನಡೆಸಿದರು,

     

    ಈ ವೇಳೆ ಜಿಲ್ಲಾಧ್ಯಕ್ಷ ಬಿ.ಶಿವಶಂಕರ್ ಮಾತನಾಡಿ ದೇವನಹಳ್ಳಿಯ ಅಕ್ಕುಪೇಟೆಯಲ್ಲಿ 35 ವರ್ಷಗಳ ಹಿಂದೆ 150 ಜನರಿಗೆ ಅಶ್ರಯ ಯೋಜನೆಯಲ್ಲಿ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ವಿತರಣೆ ಮಾಡಲಾಗಿತ್ತು, ಆದರೆ ಈ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ಆಸ್ಪತ್ರೆಯನ್ನ ನಿರ್ಮಿಸಿ ಹಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಈ ಕುರಿತು ಹೈಕೋರ್ಟ್ ಸದರಿ ಜಾಗವನ್ನು ಸರ್ಕಾರಕ್ಕೆ ವಶಕ್ಕೆ ಪಡೆದು ಮೂಲ ಮಂಜೂರುದಾರರಿಗೆ ನಿವೇಶನ ನೀಡುವಂತೆ ಆದೇಶ ನೀಡಿದೆ, ಈ ಸಂಬಂಧ ಅಧಿಕಾರಿಗಳು ಸದರಿ ಸ್ಥಳಕ್ಕೆ ಭೇಟಿ ನೀಡಿ 150 ಕುಟುಂಬಗಳಿಗೆ ನಿವೇಶನಗಳನ್ನು ನೀಡುವಂತೆ ಆಗ್ರಹಿಸಿದರು.

     

    ರಾಜ್ಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ನಿಖಿಲ್ ಮಾತನಾಡಿ, ಬೀರಸಂದ್ರ ಗ್ರಾಮದ ಚಪ್ಪರಕಲ್ಲು ಬಳಿಯ ಸರ್ವೆ ನಂಬರ್ 11ರ ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬ ವಾಣಿಜ್ಯ ಮಳಿಗೆ ನಿರ್ಮಿಸಿ ಅಕ್ರಮವಾಗಿ ಬಾಡಿಗೆಯನ್ನು ವಸೂಲಿ ಮಾಡುತ್ತಿದ್ದಾರೆ . ವರ್ಷಕ್ಕೆ 80 ಲಕ್ಷ ಬಾಡಿಗೆಯನ್ನ ವಸೂಲಿ ಮಾಡುತ್ತಿರುವ ಆತ ಕಳೆದ 21 ವರ್ಷದಿಂದ ಸುಲಿಗೆ ಮಾಡುತ್ತಿದ್ದಾರೆ , ಇಷ್ಟೇ ಅಲ್ಲದೆ ಪ್ರತಿ ತಿಂಗಳು ಬಾಡಿಗೆಯನ್ನ ಹೆಚ್ಚಿಸುವ ಮೂಲಕ ಬಾಡಿಗೆದಾರರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

     

    ಇದೇ ಸ್ಥಳದಲ್ಲಿ ಆಟೋ ಚಾಲಕರು ಸುಸಚ್ಛಿತವಾದ ಬಸ್ ನಿಲ್ದಾಣ ಮತ್ತು ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದಾರೆ ಆದರೆ ಇಲ್ಲಿಯವರೆಗೂ ಅವರ ಸಮಸ್ಯೆಗಳನ್ನ ಬಗೆಹರಿಸಿಲ್ಲ ಎಂದರು

    ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆಆರ್ ಎಸ್ ಪಕ್ಷದ ಸರ್ವ ಪದಾಧಿಕಾರಿಗಳು,ಕಾರ್ಯಕರ್ತರು ಉಪಸ್ಥಿತರಿದ್ದರು.

  • ರಾಮೇಶ್ವರ ಕೆರೆ ಹೂಳೆತ್ತುವ ಕಾಮಗಾರಿ ಮುಕ್ತಾಯ : ನಾಮಫಲಕ ಅನಾವರಣಗೊಳಿಸಿ ಬಾಗಿನ ಅರ್ಪಣೆಮಾಡುವ ಮೂಲಕ ಗ್ರಾಮಸ್ಥರಿಗೆ ಕೆರೆ ಹಸ್ತಾಂತರ ಮಾಡಿದ ಶಾಸಕ ಧೀರಜ್ ಮುನಿರಾಜು

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ಹಾದ್ರಿಪುರ ಗ್ರಾಮಪಂಚಾಯತಿ ವ್ಯಾಪ್ತಿಯ ರಾಮೇಶ್ವರ ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ರಾಮೇಶ್ವರ ಗ್ರಾಮದ ರಾಮೇಶ್ವರ ಕೆರೆ ಹೂಳೆತ್ತುವ ಕಾಮಗಾರಿ ಮುಕ್ತಾಯ ಆಗಿದ್ದು ಇಂದು ನಾಮಫಲಕ ಅನಾವರಣ, ಬಾಗಿನ ಅರ್ಪಣೆ, ಕೆರೆ ಹಸ್ತಾಂತರ ಕಾರ್ಯಕ್ರಮ ನಡೆಯಿತು

     

    ದೊಡ್ಡಬಳ್ಳಾಪುರ ತಾಲ್ಲೂಕು ಶಾಸಕರಾದ ಧೀರಜ್ ಮುನಿರಾಜು ನಾಮಫಲಕ ಅನಾವರಣ ಮಾಡುವ ಮೂಲಕ ಶುಭ ಹಾರೈಸಿದರು

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೆರೆ ಹೂಳೆತ್ತುವ ಕಾರ್ಯಕ್ರಮ ವಿಶೇಷ ಕಾರ್ಯಕ್ರಮ ಆಗಿದ್ದು ರಾಮೇಶ್ವರ ಕೆರೆಯ ಕಾಮಗಾರಿಯು ಉತ್ತಮ ರೀತಿಯಲ್ಲಿ ನೆಡೆದಿದೆ ಎಂದರು.

     

    ನಮ್ಮ ತಾಲ್ಲೂಕು ಮಳೆಯಾಶ್ರಿತ ಪ್ರದೇಶ‌ವಾಗಿದ್ದು ನಮ್ಮಲ್ಲಿ ನದಿ ಮೂಲಗಳು ಇಲ್ಲದ ಕಾರಣ ಸಿಹಿ ನೀರಿಗೆ ಅಭಾವವಿದ್ದು ,ಕೇವಲ ಬೊರ್ವೆಲ್ ಗಳ ಮೇಲೆ ಅವಲಂಬಿತಾರಾಗಿ ನೀರನ್ನು ಬಳಸಿ ಕೃಷಿ ಮಾಡುತ್ತಿರುವ ನಮ್ಮ ತಾಲ್ಲೂಕಿನಲ್ಲಿ ಬೇಸಿಗೆ ಸಂದರ್ಭಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗುತ್ತದೆ , ನೀರಿಗೆ ಅಭಾವವಾಗುತ್ತಿದೆ ಈ ರೀತಿಯ ಸಮಸ್ಯೆಗೆ ಕೆರೆ ಹೂಳೆತ್ತುವ ಕಾಮಗಾರಿ ಅತ್ಯಂತ ಸಹಕರಿಯಾಗಿದೆ ಎಂದರು.

     

    ತಾಲೂಕಿನಲ್ಲಿ ರಾಗಿ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದು ನೀರಿಗೆ ಸಮಸ್ಯೆ ಆಗುವ ಮೊದಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೂಲಕ ಹೆಚ್ಚಿನ ಕೆರೆ ಹೂಳೆತ್ತುವ ಕಾರ್ಯಕ್ರಮ ಹಮ್ಮಿಕೊಂಡು ಮತ್ತಷ್ಟು ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ತಿಳಿಸಿದರು.

     

     

    ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಮಾತನಾಡಿ ತಾಲೂಕಿನಲ್ಲಿ 10 ಕೆರೆಗಳನ್ನು ಹೂಳೆತ್ತಲಾಗಿದ್ದು ವಾರ್ಷಿಕ 1ರಿಂದ 2 ಕೆರೆ ಹೂಳೆತ್ತುವ ಕಾರ್ಯಕ್ರಮ ಮಾಡಲಾಗುವುದು.ರಾಮೇಶ್ವರ ಕೆರೆಗೆ ಯಾವುದೇ ಗಲೀಜು ನೀರು ಬರದಂತೆ ತಡೆಯಬೇಕು,ಕಸ ಇತ್ಯಾದಿ ಗಳನ್ನು ಕೆರೆಗೆ ಹಾಕುವುದನ್ನು ನಿಷೇಧಿಸಬೇಕೆಂದು ಗ್ರಾಮಪಂಚಾಯತಿ ಸಿಬ್ಬಂದಿಗೆ ಮನವಿ ಮಾಡಿದರು.

     

    ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್,ಕೆರೆ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವನಂದ್,ಪಂಚಾಯತ್ ಸಧಸ್ಯರಾದ ಮುನಿಲಕ್ಷಮ್ಮ,ಡೈರಿ ಅಧ್ಯಕ್ಷರಾದ ಅಶ್ವತ್ ನಾರಾಯಣ, ತಾಲೂಕಿನ ಕೃಷಿ ಮೇಲ್ವಿಚಾರಕರಾದ ಲೋಹಿತ್,ವಲಯ ಮೇಲ್ವಿಚಾರಕರಾದ ಅನ್ನಪೂರ್ಣ, ನೋಡೆಲ್ ರೇಣುಕಾ ಪ್ರಸಾದ್,ಗ್ರಾಮದ ಹಿರಿಯರಾದ ಕೃಷ್ಣಪ್ಪ, ಶಿವಣ್ಣ , ಮುನಿ ಲಕ್ಷ್ಮಮ್ಮ, ಗಂಗರಾಜು, ಪ್ರಕಾಶ್ ಸೇವಾಪ್ರತಿನಿಧಿಗಳಾದ ಸಾಕಮ್ಮ,ಅನುಸೂಯ, ನಾಗರತ್ನ ಹಾಗೂ ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

  • ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹ: ಇಲ್ಲವಾದಲ್ಲಿ ಧರಣಿ ಸತ್ಯಾಗ್ರಹ ಮುಂದಾಗುವ ಎಚ್ಚರಿಕೆ ನೀಡಿದ ಜನಧ್ವನಿ ವೇದಿಕೆ

    ದೊಡ್ಡಬಳ್ಳಾಪುರ : ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಪ್ರಗತಿ ಪರ ಒಕ್ಕೂಟಗಳ ಸಮಿತಿಗಳೊಂದಿಗೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಜನಧ್ವನಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಗೀರಿಶ್ ತಿಳಿಸಿದ್ದಾರೆ.

     

     

    ಈ ಕುರಿತು ಮಾತನಾಡಿದ ಅವರು ಇತ್ತೀಚಿಗೆ ಪಟ್ಟಣ ಪಂಚಾಯತಿಯ ಅಧಿಕಾರಿಗಳ ಆಡಳಿತವು ಬಹುತೇಕ ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡದೇ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಪ್ರಶ್ನೆಸಿದ ಸಾಮಾನ್ಯ ಸಾರ್ವಜನಿಕರನ್ನು ಅವಾಚ್ಯಶಬ್ದಗಳಿಂದ ನಿಂದಿಸಿರುವ ಆರೋಪಗಳು ಕೇಳಿಬರುತ್ತಿವೆ,ಅಲ್ಲದೇ ಕ್ರಿಮಿನಲ್ ಹಿನ್ನಲೆ ಇರುವ ವ್ಯಕ್ತಿಗಳು ತಮ್ಮ ಸಿಬ್ಬಂದಿ ವರ್ಗದಲ್ಲಿದ್ದಾರೆ ಎಂಬ ಆರೋಪವೂ ಇದ್ದು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಧರಣಿ ನೆಡೆಸಲು ಮುಂದಾಗಿದ್ದೇವೆ

     

    ನಮ್ಮ ಬೇಡಿಕೆಗಳನ್ನು 7 ದಿನಗಳೊಳಗೆ ಈಡೇರಿಸಲು ಕೋರಿದೆ. ನಿಗದಿತ ದಿನಗಳೊಳಗೆ ಈಡೇರದೇ ಹೋದರೇ ಮೇಲಾಧಿಕಾರಿಗಳು ಭೇಟಿ ನೀಡಿ ಶಿಸ್ತು ಕ್ರಮ ಕೈಗೊಳ್ಳುವ ತನಕ ಧರಣಿ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

     

    ಪ್ರಮುಖ ಹಕ್ಕೊತ್ತಾಯಗಳು:-

    1′ ಗ್ರಾಮ ಪಂಚಾಯತಿ ಅವಧಿಯಲ್ಲಿ ಭೂಮಿ – ವಸತಿ ಹಂಚಿಕೆಗಾಗಿ 1700 ಅರ್ಜಿಗಳನ್ನು ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ 7 ದಿನಗಳಲ್ಲಿ ಪೂರೈಸಬೇಕು ಸರ್ಕಾರಿ ಜಾಗ ಗುರುತಿಸಿ.ವಸತಿ ಹಂಚುವುದು.

    2, ಗ್ರಾಮ ಪಂಚಾಯತಿಯಲ್ಲಾಗಲೀ ಮತ್ತು ಪಟ್ಟಣ ಪಂಚಾಯತಿಯಲ್ಲಾಗಲಿ ಯಾವುದೇ ಕ್ರಿಮಿನಲ್ ಹಿನ್ನಲೆ ಕಾರ್ಯ ನಿರ್ವಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದಲ್ಲಿ ಅಂತಹ ವ್ಯಕ್ತಿಗಳನ್ನು ಕೂಡಲೇ ವಜಾಗೊಳಿಸಬೇಕು.

    3, ಸರಿಯಾದ ಸಮಯಕ್ಕೆ ಕಛೇರಿಗೆ ಹಾಜರಾಗದ ಕೆಲವು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು.

    4, ಸರ್ಕಾರದ ಆದೇಶದಂತೆ ಅನಧಿಕೃತ ಬಡಾವಣೆ ಬಿ ಖಾತಾ ಆಂದೋಲನವೂ ಮನೆಯ ಬಳಿ ಬಂದು ಮಾಡಿಕೊಡುವಂತೆ ನೋಡಿಕೊಳ್ಳುವುದು.

    5, ಕಾರ್ಖಾನೆಗಳು ಕೆಮಿಕಲ್ ಮಿಶ್ರಿತ ಕಲುಷಿತ ನೀರನ್ನು ಯಾರಿಗೂ ತಿಳಿಯದಂತೆ ಡ್ರೈನೇಜ್ ಮೂಲಕ ವೀರಾಪುರ . ದೊಡ್ಡ ತುಮಕೂರು ಕೆರೆಗೆ ಹರಿದು ಬಿಡುತ್ತಿವುದರ ವಿರುದ್ದ ಕ್ರಮ ಕೈಗೊಳ್ಳುವುದು ಅಂತಹ ಕಾರ್ಖಾನೆಗಳ ಪರವಾನಗಿ ರದ್ದು ಪಡಿಸುವುದು.

    6, ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ ಮತ್ತು ಅಂತ್ಯ ಸಂಸ್ಕಾರದ ಮೊತ್ತ ಹೆಚ್ಚಿಸುವುದು.

    7 , ಅರಹಳ್ಳಿ- ಗುಡದ್ದಹಳ್ಳಿಯಲ್ಲಿ ಸುಮಾರು ವರ್ಷಗಳಿಂದ ವಾಸವಿರುವ ನಿರಾಶ್ರಿತರ ದಲಿತ ಕುಟುಂಬದವರಿಗೆ ಮೂಲ ಭೂತ ಸೌಕರ್ಯ ನೀಡುವುದು.

    8. ಕೂಡಲೇ ಚುನಾವಣಾ ಪ್ರಕ್ರಿಯೆ ನಿಲ್ಲಿಸಿ ಅವೈಜ್ಞಾನಿಕ ವಾರ್ಡುಗಳ ವಿಂಗಡಣೆ ಮತ್ತು ಅವೈಜ್ಞಾನಿಕ ಮೀಸಲಾತಿಯನ್ನು ರದ್ದುಪಡಿಸಿ ನ್ಯಾಯಾಲಯದ ಆದೇಶ ಬರುವತನಕ ಚುನಾವಣೆ ಮುಂದೂಡುವುದು.

    9, ಬಡತನಕ್ಕೆ ಸೇರಿದ ಕುಟುಂಬಗಳ ತೆರಿಗೆಯನ್ನು ಮನ್ನ ಮಾಡಿ ಕೆ ಎಮ್ ಎಪ್ ಖಾತೆ ಮಾಡಿ ಕೊಡುವುದು.

    10, ಈಗಾಗಲೇ ಪಟ್ಟಣ ಪಂಚಾಯಿತಿಯವರು ಶುದ್ದನೀರಿನ ಘಟಕಗಳನ್ನು ಖಾಸಗಿ ಒಡತನಕ್ಕೆ ನೀಡಿರುವುದನ್ನು ಈ ಕೂಡಲೇ ತಮ್ಮ ಅಧೀನಕ್ಕೆ ತೆಗೆದುಕೊಳ್ಳುವುದು.

    11. ಸಾರ್ವಜನಿಕರಿಂದ ದೂರು ಬಂದರೇ ಅದನ್ನು ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳದೇ ಕಾಲಹರಣ ಮಾಡದೇ ಶೀಘ್ರ ಅರ್ಜಿಗಳ ವಿಲೇವಾರಿ ಮಾಡುವುದು

    ಈ ವೇಳೆ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯತಿಯ ಜನಧ್ವನಿ ವೇದಿಕೆಯ ಮುಖಂಡರಾದ ಕೃಷ್ಣಮೂರ್ತಿ, ಸದಾನಂದ, ಸುದರ್ಶನ , ಮಹಾದೇವ್, ಅಕ್ಷಯ್ , ಮಂಜುನಾಥ, ಬಿಸವನಹಳ್ಳಿ ನಾರಾಯಣಸ್ವಾಮಿ, ಕಸುವನಹಳ್ಳಿ ರವಿಕುಮಾರ್ ಮತ್ತು ರವಿಚಂದ್ರ, ಹನುಮಂತರಾಜು, ವರದನಹಳ್ಳಿ ಉದಯ್ ವೆಂಕಟೇಶ್,ಎಳ್ಳುಪುರ ಮಹೇಶ್ಅರಹಳ್ಳಿ ಗುಡದಹಳ್ಳಿ ವೆಂಕಟೇಶ್ ಮತ್ತು ವೆಂಕಟೇಶ್ ರೆಡ್ಡಿ, ನಾಗದೇನಹಳ್ಳಿ ಚಂದ್ರಪ್ಪ ಮತ್ತು ಮಹೇಶ್.ಓಬದೇನಹಳ್ಳಿ ರಾಜೇಂದ್ರ ಮತ್ತು ಅರ್ನಾಲ್ಡ್ ಮುನಿರಾಜ್.ರಘುನಾಥಪುರ ವಿನೋದ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ಸಕ್ಸಸ್ : ಶುಶೂಷಾಧಿಕಾರಿಗಳ ಅನಿರ್ಧಿಷ್ಟಾವಧಿ ಆಹೋರಾತ್ರಿ ಧರಣಿ ವಾಪಾಸ್

    ಬೆಂಗಳೂರು :NHM ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯಲ್ಲಿ ನಡೆಯುತ್ತಿದ್ದು, ವೇತನ ಹೆಚ್ಚಳ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಮುಮೋದನೆ ಪಡೆಯಬೇಕಾಗುತ್ತದೆ.. ಈ ನಿಟ್ಟಿನಲ್ಲಿ ಮಾರ್ಚ್ 10 ರಂದು ಸಭೆ ನಡೆಸಿ, ಸರ್ಕಾರ ತನ್ನ ನಿಲುವು ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ನೌಕರರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು,ಈ ಪ್ರತಿಭಟನಾ ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಭರವಸೆ ನೀಡಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದ ಹಿನ್ನಲೆ ಹೋರಾಟಗಾರರು ತಮ್ಮ ಪ್ರತಿಭಟನೆಯನ್ನು ವಾಪಾಸ್‌ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

     

    ಸಮಾನ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ NHM ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಶುಶೂಷಕೀಯರು ಪ್ರತಿಭಟನೆ ಹಿಂಪಡೆದಿದ್ದಾರೆ.

     

    NHM ಅಡಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೃಪಾಂಕ ನೀಡುವ ಮೂಲಕ ನೇಮಕಾತಿ ವೇಳೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ .ಜೊತೆಗೆ ಅಂತರ್ಜಿಲ್ಲಾ ವರ್ಗಾವಣೆಗೆ ಒಂದು ಬಾರಿ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ ಸಚಿವರು, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಸಚಿವರ ಭರವಸೆ ಹಿನ್ನೆಲೆಯಲ್ಲಿ NHM ಶುಶೂಷಕೀಯರು ತಮ್ಮ ಪ್ರತಿಭಟನೆ ಹಿಂಪಡೆದಿದ್ದಾರೆ.

     

     

     

     

     

  • ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಾರಸಂದ್ರ ಗ್ರಾಮಸ್ಥರಿಂದ 15ನೇ ವರ್ಷದ ಲಕ್ಷದೀಪೋತ್ಸವ : ಗ್ರಾಮದ ಶ್ರೀ ಕೊಂಡದಮ್ಮ (ಈರಮಾಸ್ತಮ್ಮ) ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ ಪೂಜಾ ಕಾರ್ಯಕ್ರಮ

    ದೊಡ್ಡಬಳ್ಳಾಪುರ : ಶ್ರೀ ಕೊಂಡದಮ್ಮ ಈರಮಾಸಮ್ಮ ತಾಯಿಗೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

    ತಾಲ್ಲೂಕಿನ ಮಧುರೆ ಹೋಬಳಿಯ ಮಾರಸಂದ್ರ ಗ್ರಾಮದ ಶ್ರೀ ಕೊಂಡದಮ್ಮ (ಈರಮಾಸ್ತಮ್ಮ) ಸೇವಾ ಸಮಿತಿ (ರಿ.)ವತಿಯಿಂದ 15ನೇ ವರ್ಷದ ಲಕ್ಷದೀಪೋತ್ಸವ ಹಾಗೂ ಕೊಂಡದಮ್ಮ (ಈರಮಾಸ್ತಮ್ಮ) ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

     

    ದೇವಾಲಯಕ್ಕೆ ಆಗಮಿಸಿದ ಭಕ್ತವೃಂದದವರಿಗೆ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.

    ಕಾರ್ಯಕ್ರಮದಲ್ಲಿ ಟಿ ಮಂಜುನಾಥ್,ಎಸ್ ಮಲ್ಲಯ್ಯ, ಎಂ ಆರ್ ರಮೇಶ್ ಚಂದ್ರಶೇಖರ್, ಪದ್ಮಭಾಯಿ,ನಾಗೇಂದ್ರ ರಾವ್, ಸ್ವಾಮಿ, ಬಾನವರಾಜ್,ರೇಣುಕಾ ಪ್ರಸಾದ್, ನರಸಿಂಹರಾವ್,ವೀರುಪಾಕ್ಷಪ್ಪ ಹಾಗೂ ಸೇವಾ ಸಮಿತಿ ಸದಸ್ಯರು ಮಾರಸಂದ್ರ ಗ್ರಾಮಸ್ಥರು ಹಾಗೂ ಕನಸವಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.

  • ಐಐಎಚ್‌ಆರ್ ಆವರಣದಲ್ಲಿ ಫೆ.27ರಿಂದ ಮಾರ್ಚ್ 1ರವರೆಗೆ ರಾಷ್ಟ್ರೀಯ ತೋಟಗಾರಿಕಾಮೇಳ

    ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ(ಐಐಎಚ್‌ಆರ್) ಆವರಣದಲ್ಲಿ ಫೆ.27ರಿಂದ ಮಾರ್ಚ್ 1ರವರೆಗೆ ‘ರಾಷ್ಟ್ರೀಯ ತೋಟಗಾರಿಕಾ ಮೇಳ 2025’ ಆಯೋಜಿಸಲಾಗಿದೆ‌ ಎಂದು‌ ಐಐಎಚ್‌ಆರ್ ನಿರ್ದೇಶಕ ತುಷಾರ್ ಕಾಂತಿ ಬೆಹೆರಾ ಮಾಹಿತಿ ನೀಡಿದರು.

     

    ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ (ICAR-IIHR) ಸಭಾಂಗಣದಲ್ಲಿ ನಡೆದ‌ ಮಾಧ್ಯಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಕಸಿತ ತೋಟಗಾರಿಕೆ ಭಾರತಕ್ಕಾಗಿ ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ’ ಶೀರ್ಷಿಕೆ ಅಡಿಯಲ್ಲಿ ಉತ್ತಮ ಪೌಷ್ಟಿಕಾಂಶಯುತ್ತ ಬೆಳೆ ಬೆಳೆಯುವ ತಂತ್ರಜ್ಞಾನ, ಹೊಸ ತಳಿಗಳು, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಸೇರಿದಂತೆ ತೋಟಗಾರಿಕೆ ಕ್ಷೇತ್ರದ ಹಲವು ಸಂಶೋಧನೆಗಳು ಮೇಳದಲ್ಲಿ ಅನಾವರಣಗೊಳ್ಳಲಿವೆ ಎಂದರು.

    ಮೇಳದಲ್ಲಿ 250ಕ್ಕೂ ಹೆಚ್ಚು ಸಂಸ್ಥೆಗಳು ಪಾಲ್ಗೊಳ್ಳಲಿವೆ. 190ಕ್ಕೂ ಹೆಚ್ಚು ವೈವಿಧ್ಯಮಯ ಮಳಿಗೆಗಳಿರುತ್ತವೆ. 75,000ಕ್ಕೂ ಹೆಚ್ಚಿನ ರೈತರು ಮತ್ತು ತೋಟಗಾರಿಕಾ ಕ್ಷೇತ್ರದ ಇತರೆ ಭಾಗಿದಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೇಳದ ಪ್ರಚಾರ ಸಮಿತಿ ಅಧ್ಯಕ್ಷ ನಂದೀಶ್.ಪಿ ತಿಳಿಸಿದರು.

     

    20 ರಾಜ್ಯಗಳಿಂದ ರೈತರು ಪಾಲ್ಗೊಳ್ಳಲಿದ್ದಾರೆ. ನಮ್ಮ ರಾಜ್ಯದ 30 ಜಿಲ್ಲೆಗಳಿಂದಲೂ ರೈತರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಹೊರ ರಾಜ್ಯದ ರೈತರಿಗೆ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಮಳಿಗೆಗಳಲ್ಲಿ ಸಸಿಗಳು ಮತ್ತು ಬೀಜಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ’ ಎಂದರು.

    ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅನುಕೂಲಕರ ತಂತ್ರಜ್ಞಾನಗಳನ್ನು ಪರಿಚಯಿಸುವ, ಮತ್ತು ಸಾಮಾಜಿಕವಾಗಿ ಹೊಂದಿಕೊಳ್ಳುವ, ಆರ್ಥಿಕವಾಗಿ ಲಾಭದಾಯಕ ಹಾಗೂ ಪರಿಸರಕ್ಕೆ ಅನುಕೂಲಕರ ತೋಟಗಾರಿಕಾ ಬೆಳೆಗಳ ಮೂಲಕ ಉತ್ಪಾದನೆ, ಆದಾಯ ಮತ್ತು ಜೀವನೋಪಾಯವನ್ನು ಸುಧಾರಿಸುವ ಗುರಿಯನ್ನು ಈ ಮೇಳ ಹೊಂದಿದೆ ಎಂದು ವಿವರಿಸಿದರು.

    ಟಿ. ಬಿ. ಕ್ರಾಸ್ ನಿಂದ, ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಭೇಟಿ ನೀಡುವವರ ಅನುಕೂಲಕ್ಕಾಗಿ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಮೇಳದ ಒಳಾಂಗಣದಲ್ಲಿ ಹಿರಿಯ ನಾಗರಿಕರ ಸಹಾಯಕ್ಕಾಗಿ ಎಲೆಕ್ಟ್ರಿಕ್ ವಾಹನಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಹೊರ ಜಿಲ್ಲೆಗಳಿಂದ ಬರುವ ರೈತರಿಗೆ, ಮುಂಚಿತ ಮಾಹಿತಿ ನೀಡಿದರೆ ವಸತಿ ವ್ಯವಸ್ಥೆ ಮಾಡಲಾಗುವುದು. ಮೇಳದ ವೇಳೆ IIHR ತಂತ್ರಜ್ಞಾನಗಳ ರಾಯಭಾರಿಗಳಾಗಿರುವ ಪ್ರಗತಿಪರ ರೈತರನ್ನು ಗೌರವಿಸಲಾಗುವುದು ರಾಷ್ಟ್ರೀಯ ತೋಟಗಾರಿಕಾ ಮೇಳ 2025ರ ಆಯೋಜನಾ ಕಾರ್ಯದರ್ಶಿ ಡಾ. ಶಂಕರ ಹೆಬ್ಬಾರ ತಿಳಿಸಿದರು.

     

    ಬಿಡುಗಡೆಯಾಗುವ ಹೊಸ ತಳಿಗಳು

    • ಸಮೃದ್ಧಿ ಕಲ್ಲಂಗಡಿ ಸೆಲೆಕ್ಷನ್-4

    •  ಅಂಟುಕಾಂಡ ಕೊಳೆರೋಗ ನಿರೋಧಕ ಸೋರೆಕಾಯಿ

    • ಎಲೆ ಸುರುಳಿ ನಂಜಾಣು ರೋಗ ನಿರೋಧಕ ಮೆಣಸಿನಕಾಯಿ

    • ಅವಕಾಡೊ (ಬೆಣ್ಣೆ ಹಣ್ಣು)

    • ಜಾವಾ ರೋಸ್ ಆಪಲ್

    • ಅರ್ಕ ಹಲಸಿನಕಾಯಿ..

  • ಭೂಕಬಳಿಕೆ ಆರೋಪ : ವ್ಯವಸಾಯ ಭೂಮಿ ಉಳಿಸುವಂತೆ ರೈತನ ಅಳಲು

    ದೊಡ್ಡಬಳ್ಳಾಪುರ : ಹುಸ್ಕೂರು ಗ್ರಾಮದ ಸರ್ವೆ ನಂ.37 ರಲ್ಲಿ 0-13 ಗುಂಟೆ ಜಮೀನಿನ ಮೂಲ ದಾಖಲೆಗಳಿಲ್ಲದೆ ದಾಖಲೆಗಳನ್ನು ತಿರುಚಿ ಅಕ್ರಮವಾಗಿ ಕ್ರಯ ನೋಂದಣಿ ಮಾಡಿಕೊಂಡು ನಮ್ಮ ಜಮೀನು ಕಬಳಿಸಲು ಸಂಚು ರೂಪಿಸಿಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ.

     

    ಈ ಕುರಿತು ಮಾತನಾಡಿರುವ ಅವರು ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಹುಸ್ಕೂರು ಗ್ರಾಮದ ಸರ್ವೆ ನಂ.37 ರಲ್ಲಿ 0-13 ಗುಂಟೆ ಜಮೀನನ್ನು ಅಕ್ರಮವಾಗಿ ಕ್ರಯನೋಂದಣಿ ಮಾಡಿಕೊಂಡಿದ್ದಾರೆ, ನನ್ನ ತಂದೆಯವರಾದ ಹನುಮಂತರಾಯಪ್ಪ ಅವರು ದಿನಾಂಕ:-18/04/1964 ರ ಕ್ರಯಪತ್ರ 180/64-65 ರ ಮೂಲಕ ಖದೀದಿಸಿ ಕ್ರಯ ನೋಂದಣಿ ಮಾಡಿಕೊಂಡಿರುವ ಸ್ಥಳ ಇದಾಗಿದೆ.

    ಗ್ರಾಮದ ಸರ್ವೆ ನಂ.37 ರಲ್ಲಿ 0-13.8 ಗುಂಟೆ ಜಮೀನು ದೊಡ್ಡಬಳ್ಳಾಪುರ ಸಿವಿಲ್ ನ್ಯಾಯಲಯದ ದಾವೆ ಸಂಖ್ಯೆ O.S No.327/2016 ರ ಮೂಲಕ ನನ್ನ ಭಾಗಾಂಶಕ್ಕೆ ಬಂದಿರುತ್ತದೆ,ಆದರೆ ಈ ಸ್ಥಳವನ್ನು ಕೆಲವರು ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಖಾತೆಯನ್ನು ವರ್ಗಾವಣೆ ಮಾಡಿಕೊಂಡಿರುತ್ತಾರೆ ಎಂದು ಆರೋಪಿಸಿದ್ದಾರೆ.

    ನಾವು ಸುಮಾರು 60 ವರ್ಷಗಳಿಂದ ಸ್ವಾಧೀನ ಹಾಗೂ ಅನುಭವದಲ್ಲಿ ಇದ್ದು, ನಾವು ಈ ಜಮೀನಿನಲ್ಲಿ ನಿರಂತರವಾಗಿ ರಾಗಿ ಜೋಳ ದನಗಳಿಗೆ ಮೇವು ಬೆಳೆಯುವ ಮೂಲಕ ಜೀವನ ಸಾಗಿಸಿದ್ದೇವೆ , ನಿರಂತರ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ, ನಮ್ಮ ಜಮೀನ್ನು ಕಬಳಿಸುವ ಉದ್ದೇಶದಿಂದ ದಾಖಲೆಗಳನ್ನು ಸೃಷ್ಟಿಸಿಕೊಂಡು ಅಕ್ರಮವಾಗಿ ಕ್ರಯ ಮಾಡಿಕೊಂಡಿರುವ ಕೆಲವರು ಜಮೀನು ಬಿಟ್ಟು ಕೊಡುವಂತೆ ಒತ್ತಡ ಹೇರುತ್ತಿದ್ದಾರೆ ಅವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ರೀತಿ ಕ್ರಮಕೈಗೊಂಡು ನಮಗೆ ನ್ಯಾಯ ಒದಗಿಸಬೇಕೆಂದು ರಮೇಶ್ ಮನವಿ ಮಾಡಿದ್ದಾರೆ.

  • 672ನೇ ಜಾಂಭವ ಯುವ ಸೇನೆಯ ನೂತನ ಘಟಕ ಉದ್ಘಾಟನೆ : ಹಾಲೇನಹಳ್ಳಿ ಶಾಖೆ ಅಧ್ಯಕ್ಷರಾಗಿ ಮಂಜುನಾಥ್ ನೇಮಕ

    ದೊಡ್ಡಬಳ್ಳಾಪುರ : ಮೂಲಭೂತ ಸೌಕರ್ಯ ಕಲ್ಪಿಸುವ ವಿಚಾರವಾಗಿ ನಮ್ಮ ಯುವ ಸೇನೆ ಕಾನೂನಾತ್ಮಕವಾಗಿ ನಿರಂತರ ಹೋರಾಟ ನೆಡೆಸುವ ಮೂಲಕ ರಾಜ್ಯದ ದಲಿತಮೇಲೆ ನೆಡೆಯುತ್ತಿರುವ ದೌರ್ಜನ್ಯ,ದಬ್ಬಾಳಿಕೆ ಅಂತ್ಯ ಮಾಡುವ ಸಲುವಾಗಿ ಸಮುದಾಯದ ಶಕ್ತಿಯಾಗಿ ಶ್ರಮಿಸಲಿದೆ ಎಂದು ಜಾಂಭವ ಯುವ ಸೇನೆಯ ರಾಜ್ಯಾಧ್ಯಕ್ಷ ಡಾ. ಎಸ್.ಎಂ. ರಮೇಶ್ ಚಕ್ರವರ್ತಿ ತಿಳಿಸಿದರು.

    ತಾಲ್ಲೂಕಿನ ಮಧುರೆ ಹೋಬಳಿಯ ಹಾಲೇನಹಳ್ಳಿ ಗ್ರಾಮದಲ್ಲಿ ಜಾಂಭವ ಯುವ ಸೇನೆಯ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುಖಂಡರೊಂದಿಗೆ ಜೊತೆಗೂಡಿ ಇಂದು ನಮ್ಮ ಸಂಘಟನೆಯ 672ನೇ ಶಾಖೆಯ ಉದ್ಘಾಟನೆ ಮಾಡಲಾಗಿದೆ. ಹಾಲೇನಹಳ್ಳಿ ಗ್ರಾಮದ ಮುಖಂಡರ ಸಹಕಾರದೊಂದಿಗೆ ಅದ್ದೂರಿಯಾಗಿ ನೂತನ ಶಾಖೆಯನ್ನು ಉದ್ಘಾಟನೆ ಮಾಡಲಾಗಿದೆ, ಗ್ರಾಮದ ಸಮಸ್ಯೆಗಳಾದ ಹಕ್ಕು ಪತ್ರಗಳು , ಸ್ಮಶಾನ, ಮೂಲಭೂತ ಸೌಕರ್ಯ ಸೇರಿದಂತೆ ಶಾಲಾ ಕಟ್ಟಡ ಗಳ ವಿಚಾರ ಕುರಿತಂತೆ ಸಂಬಂಧ ಪಟ್ಟ ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳನ್ನು ಒಳಗೊಂಡಂತೆ ತಾಲ್ಲೂಕಿನ ಶಾಸಕರ ಗಮನಕ್ಕೆ ತರುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕಾರ್ಯವನ್ನು ನಮ್ಮ ಸಂಘಟನೆ ಮಾಡಲಿದೆ ಎಂದರು.

    ಗ್ರಾಮದಲ್ಲಿ ನಮಗೆ ಉತ್ತಮ ತಂಡ ದೊರೆತ್ತಿದ್ದೂ, ಮುಂದೆ ಉತ್ತಮ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗಲಿದೆ, ನಮ್ಮ ಹೋರಾಟ ದಲಿತ ಪರ, ನ್ಯಾಯ ಪರವಾಗಿದ್ದು, ಅಕ್ರಮ ಭೂ ಕಬಳಿಕೆ, ಮಹಿಳೆಯರ ಮೇಲೆ ದೌರ್ಜನ್ಯ, ಭ್ರಷ್ಟಾಚಾರದ ವಿರುದ್ಧ ನೊಂದವರ ಧ್ವನಿಯಾಗಿ ನಮ್ಮ ಸಂಘಟನೆ ಶ್ರಮಿಸಲಿದೆ ಎಂದರು.

     

    ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ :

    ಗೌರವಾಧ್ಯಕ್ಷರಾಗಿ ಸಿ, ಬೈಲಪ್ಪ,ಅಧ್ಯಕ್ಷರಾಗಿ ಮಂಜುನಾಥ್, ವಿ,ಉಪಾಧ್ಯಕ್ಷರಾಗಿ ಜಿ. ಗಿರಿರಾಜು, ವಿ ದಾಳರಾಜು, ಪ್ರಧಾನ ಕಾರ್ಯದರ್ಶಿ.ಬಿ ಲಕ್ಷಣ. ಬಿ, ಖಜಾಂಚಿ ಜಿ.ರಮೇಶ್ ಕಾರ್ಯದರ್ಶಿ ಪೂಜಹನುಮಯ್ಯ,ಜಿ.ನಟೇಶ್ ,ಏನ್. ಬಸವರಾಜು, ಸಂಘಟನಾ ಕಾರ್ಯದರ್ಶಿಗಳಾಗಿ ಬಿ.ಮುನಿರಾಜು,ಎನ್.ರಾಮಕೃಷ್ಣಯ್ಯ,ಗಂಗರಾಜು, ಅಂಜಿನ ಮೂರ್ತಿ, ಕೆ.ಮಂಜುನಾಥ ರವರನ್ನು ನೇಮಕ ಮಾಡಲಾಗಿದೆ.

    ಸದಾಶಿವಆಯೋಗ ಯಥಾವತ್ ಜಾರಿಗೊಳಿಸುವಂತೆ ಮನವಿ 

    ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ರಾಜಕೀಯವಾಗಿ ದಲಿತ ಸಮುದಾಯವನ್ನು ಬಳಸಿಕೊಳ್ಳುವ ಮೂಲಕ ಕೇವಲ ವೋಟ್ ಪಡೆಯುವುದು ಬೇಡ ರಾಜ್ಯದ 1ಕೋಟಿ 30ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ನನ್ನ ಸಮುದಾಯದ ಧ್ವನಿಯಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ, ಜೊತೆಗೆ ರಾಜ್ಯದ ಜನತೆಯ ಪರವಾಗಿ ಒಲಮೀಸಲಾತಿ ಕುರಿತಂತೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಗಳು ಬರುವ ಒಳಗಾಗಿ ಮೀಸಲಾತಿ ಜಾರಿಗೊಳಿಸುವಂತೆ ಸದಾ ಶಿವ ಆಯೋಗ ಯಥಾವತ್ ಜಾರಿಗೊಳಿಸುವಂತೆ ಮನವಿ ಮಾಡುತ್ತೇನೆ, ಈ ಬಾರಿ ಯಾವುದೇ ನೆಪ ಅಥವಾ ಭರವಸೆಗೆ ಒಪ್ಪುವುದಿಲ್ಲ ಮೀಸಲಾತಿ ಜಾರಿಗೊಳಿಸದೆ ಇದ್ದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಮನೆಯ ಮುಂದೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

     

    ರಾಮಕೃಷ್ಣಪ್ಪ ಮಾತನಾಡಿ ಹಾಲೇನಹಳ್ಳಿ ಗ್ರಾಮದಲ್ಲಿ ನಮ್ಮ ಗ್ರಾಮದಲ್ಲಿ ಜಾಂಭವ ಯುವ ಸೇನೆಯ ಘಟಕ ಉದ್ಘಾಟನೆ ಮಾಡಿದ್ದಾರೆ ಇದು ಅತ್ಯಂತ ಸಂತೋಷದ ವಿಷಯವಾಗಿದ್ದು , ಈ ರೀತಿಯ ಸಂಘಟನೆಗಳು ಗ್ರಾಮದ ಅಭಿವೃದ್ಧಿ, ಶಿಕ್ಷಣ, ಅಭಿವೃದ್ಧಿ ಕುರಿತು ಚರ್ಚಿಸಲು ಸಹಕಾರಿಯಾಗಿದೆ, ಇಂದಿನಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರಿಯಲು, ಸಮಾಜ ಕಲ್ಯಾಣ ಇಲಾಖೆಯಲ್ಲಿ ದಲಿತ ಸಮುದಾಯಕ್ಕೆ ಲಭ್ಯವಿರುವ ಯೋಜನೆಗಳ ಬಗ್ಗೆ ಅರಿವು ಪಡೆಯಲು ಈ ರೀತಿಯ ಕಾರ್ಯಕ್ರಮಗಳು ಅನುಕೂಲ ಕಲ್ಪಿಸುತ್ತವೆ ಸಂಘಟನೆ ಕೇವಲ ನಮ್ ಕಾ ವಾಸ್ತೆ ಆಗದೆ ಸ್ಥಳೀಯ ಜನರ, ಶೋಷಿತರ ಧ್ವನಿಯಾಗಿ ಶ್ರಮಿಸುವ ಅವಶ್ಯಕತೆ ಇದೆ ಎಂದರು.

     

    ಮುಖಂಡರಾದ ನಾರಾಯಣ ಸ್ವಾಮಿ ಮಾತನಾಡಿ ನೂತನ ಗ್ರಾಮ ಶಾಖೆ ಉದ್ಘಾಟನೆಯನ್ನು ಅದ್ದೂರಿಯಾಗಿ ಮಾಡುವ ಮೂಲಕ ನಮ್ಮನ್ನು ಬರಮಾಡಿಕೊಂಡಿದ್ದಾರೆ, ಮುಂದೆ ಈ ಸಂಘಟನೆ ವತಿಯಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವಂತಗಲಿ, ಸರ್ಕಾರದ ಅಭಿವೃದ್ಧಿ ಕಾರ್ಯಗಳು ಸರ್ವರಿಗೂ ತಲುಪಿಸುವ ಕಾರ್ಯವನ್ನು ಸಂಘದ ಪದಾಧಿಕಾರಿಗಳು ಮಾಡಲಿ ಎಂದರು.

     

     

    ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ರಾದ ಡಾ.ರಮೇಶ್ ಚಕ್ರವರ್ತಿ, ಸಿ. ನಾರಾಯಣ ಸ್ವಾಮಿ, ಮಂಜುನಾಥ್, ಹೊನ್ನಾವರ ಪಂಚಾಯತಿ ಅಧ್ಯಕ್ಷರು ತಿರುಮಲ್ಲಮ್ಮ, ಕೆ ಪಿ ಸಿ ಸಿ ಸದಸ್ಯ ರಾಮಕೃಷ್ಣ, ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರು ಚೆನ್ನಮ್ಮ ರಾಮಲಿಂಗಯ್ಯ, ಉಪಾಧ್ಯಕ್ಷೆ ಸಂದ್ಯಾ, ಕವಿತಾ, ನೆಲಮಂಗಲ ತಾಲ್ಲೂಕು ಅಧ್ಯಕ್ಷರು ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಮಧು, ನೆಲಮಂಗಲ ಮಾರುತಿ, ಗೋಪಾಲಪುರ ಮುನಿರಾಜು, ಹಾಲೇನಹಳ್ಳಿ ವೆಂಕಟೇಶ್ ಹೆಚ್ ಟಿ, ಹಾಲೇನಹಳ್ಳಿ ರಮೇಶ ಎನ್ ಭೀಮ, ಹಾಲೇನಹಳ್ಳಿ ನಾರಾಯಣಕುಮಾರ್ ಹೆಚ್,ಸೇರಿದಂತೆ ಹಲವರು ಉಪಸ್ಥಿತರಿದ್ದರು

  • ಶುಶೂಷಾಧಿಕಾರಿಗಳ ಅನಿರ್ಧಿಷ್ಟಾವಧಿ ಆಹೋರಾತ್ರಿ ಧರಣಿಗೆ ಒಟ್ಟಾಗಿ : ನಮ್ಮ ಹಕ್ಕು ಪಡೆಯಲು ಮುಂದಾಗಿ : ರಾಧಾ ಸುರೇಶ್

    ಹಲವಾರು ಬಾರಿ ನಮ್ಮ ಕುಂದುಕೊರತೆಗಳು ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಈ ಬಾರಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ವರೆಗೂ ನಮ್ಮೆಲ್ಲರ ( ಶುಶೂಷಾಧಿಕಾರಿಗಳ) ಅನಿರ್ಧಿಷ್ಟಾವಧಿ ಆಹೋರಾತ್ರಿ ಧರಣಿ ನೆಡೆಯಲಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಶುಕ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪಿ. ಎನ್. ರಾಧಾ ಸುರೇಶ್ ತಿಳಿಸಿದ್ದಾರೆ.

     

     

    ರಾಷ್ಟ್ರೀಯ ಆರೋಗ್ಯ ಅಭಿಯಾನ ಗುತ್ತಿಗೆ ಆಧಾರದ ಶುಶೂಷಾಧಿಕಾರಿಗಳು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಮಟ್ಟದಲ್ಲಿ ಇದೆ ಫೆಬ್ರವರಿ 24 ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಬೆಂಬಲಕ್ಕೆ ಮುಂದಾಗಿದ್ದು ಈ ಕುರಿತು vijayamitra.Com web news ಜೊತೆ ಮಾತನಾಡಿದ ಅವರು ನಮ್ಮ ಕಷ್ಟ, ಸಮಸ್ಯೆಗಳನ್ನು ಕೇಳುವವರಿಲ್ಲ, ಹಲವಾರು ಬಾರಿ ಮನವಿ ಅಹವಾಲುಗಳನ್ನು ಸಲ್ಲಿಸಿದರು ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ಈ ಬಾರಿ ರಾಜ್ಯಾದ್ಯಂತ ನಮ್ಮ NHM ಒಳಗುತ್ತಿಗೆ ಶುಶೂಷಾಧಿಕಾರಿಗಳು ಒಟ್ಟಾಗಿ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ನಿರ್ಧರಿಸಿದ್ದೇವೆ ಎಂದರು.

    15-20 ವರ್ಷಗಳಿಂದ ನಿರಂತರವಾಗಿ ಒಳಗುತ್ತಿಗೆ ಆಧಾರದಲ್ಲಿ ಅತೀ ಕಡಿಮೆ ವೇತನದಲ್ಲಿ ಯಾವುದೇ ಸೌಲಭ್ಯಗಳಿಲ್ಲದೇ ಖಾಯಂ ನೌಕರರಿಗಿಂತ ಹೆಚ್ಚಾಗಿ ಇಲಾಖೆಯು ವಹಿಸಿದ ಎಲ್ಲಾ ಕೆಲಸಗಳನ್ನು ಚಾಚೂ ತಪ್ಪದೇ ನಿರ್ವಹಿಸಿದ್ದೇವೆ,ಕೋವಿಡ್-19 ಸಂದರ್ಭದಲ್ಲೂ ನಾವು ನಮ್ಮ ಕುಟುಂಬವನ್ನು ಬಿಟ್ಟು ಜೀವದ ಹಂಗು ತೊರೆದು ಹಗಲಿರುಳೆನ್ನದೇ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ನೀಡಿದ್ದೇವೆ, ಆದರೆ ನಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಕೇವಲ ಭರವಸೆಗಳಿಗೆ ಸೀಮಿತ ಮಾಡಲಾಗಿದೆ ಎಂದರು.

     

    ಹೋರಾಟ ಕೇವಲ ಭರವಸೆಗೆ ಸೀಮಿತವಾಗದಿರಲಿ 

    ಪ್ರತಿ ಬಾರಿಯೂ ರಾಜ್ಯದ ಮೂಲೆ ಮೂಲೆಗಳಿಗೆ ಬರುವ ಶುಶೂಷಾಧಿಕಾರಿಗಳು ಹೋರಾಟ ನಡೆಸುವುದು ಸರ್ಕಾರದ ಕೆಲವು ಭರವಸೆ ಹಾಗೂ ಒತ್ತಡಗಳಿಗೆ ಮಣಿದು ಮತ್ತೆ ಕರ್ತವ್ಯಕ್ಕೆ ಹಿಂದಿರುಗುವುದು ಸಾಮಾನ್ಯವಾಗಿದೆ ಎಂಬುದು ಕೆಲವರ ಆರೋಪ ಈ ಬಾರಿಯ ಹೋರಾಟವು ಹಾಗೆ ಆಗುವುದೇ….????

    ಹೋರಾಟ ಕೇವಲ ಭರವಸೆಗೆ ಸೀಮಿತವಾಗಿದೆ ಎಂಬಂತೆ ಕಾಣುತ್ತದೆ , ಪ್ರತಿ ಬಾರಿ ಹೋರಾಟ ದಿಕ್ಕು ತಪ್ಪಲು ಹಲವಾರು ಕಾರಣಗಳು ಎದುರಾಗುತ್ತಿವೆ ಪ್ರಮುಖವಾಗಿ ನಾಯಕತ್ವದ ಕೊರತೆ, ಶುಶೂಷಾಧಿಕಾರಿಗಳ ಸಹಕಾರ, ಇತರೆ ಎಂಬುದು ಹಲವರ ವಾದ . ಆದರೆ ಈ ಬಾರಿಯ ಹೋರಾಟವು ಎಂದಿನಂತೆ ಭರವಸೆಗಳಿಗೆ ಸೀಮಿತವಾಗದೆ ಸೂಕ್ತ ಪರಿಹಾರ ಪಡೆಯುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ರಾಜ್ಯದ ಶುಶೂಷಾಧಿಕಾರಿಗಳ ಬೇಡಿಕೆಗಳು ಸಂಪೂರ್ಣವಾಗಿ ಈಡೇರಲಿ ಎಂಬುದೇ ವಿಜಯಮಿತ್ರ ಆಶಿಸುತ್ತದೆ.

     

    ಹಲವಾರು ಬಾರಿ ನಮ್ಮ ಕುಂದುಕೊರತೆಗಳು ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇವೆ, ಈ ಬಾರಿ ನಮ್ಮೆಲ್ಲರ ಶಕ್ತಿ ಪ್ರದರ್ಶನ ತೋರುವಮೂಲಕ ನಮ್ಮ ಹಕ್ಕು ಪಡೆಯುವ ಕಾರ್ಯಕ್ಕೆ ಮುಂದಾಗೋಣ ರಾಜ್ಯ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕಿನಿಂದ ಶುಶೂಷಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು , ಸರ್ವರೂ ಸ್ವಯಂ ಪ್ರೇರಿತರಾಗಿ ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

     

  • ಯಶಸ್ವಿಯಾಗಿ ನಡೆದ ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ

    ಬೆಂ.ಗ್ರಾ.ಜಿಲ್ಲೆ: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಎನ್.ಡಿ.ಆರ್.ಎಫ್ ವತಿಯಿಂದ ಹೊಸಕೋಟೆ ತಾಲೂಕಿನ ದೇವನಗುಂದಿ ಕೈಗಾರಿಕಾ ಪ್ರದೇಶದ ಐಒಸಿಎಲ್ ಎಲ್.ಪಿ.ಜಿ ಬಾಟ್ಲಿಂಗ್ ಪ್ಲಾಂಟ್ ನಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಅಫ್ ಸೈಟ್ ತುರ್ತು ರಾಸಾಯಿನಿಕ ಸೋರಿಕೆ ಅಣುಕು ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಲಾಯಿತು.

    ಆಫ್-ಸೈಟ್ ತುರ್ತು ಅಣಕು ಪ್ರದರ್ಶನದಲ್ಲಿ ಸುಮಾರು 50 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಎನ್.ಡಿ.ಆರ್.ಎಫ್ ಸಿಬ್ಬಂದಿ, ಅಗ್ನಿಶಾಮಕ ದಳ, 12 ಆಂಬ್ಯುಲೆನ್ಸ್ ವಾಹನಗಳು, ವೈದ್ಯರು ಸೇರಿದಂತೆ ವಿವಿಧ ಇಲಾಖೆಗಳಿಂದ ಸುಮಾರು 100 ಪ್ರತಿನಿಧಿಗಳು ಭಾಗವಹಿಸಿದ್ದರು.

     

    ಈ ಅಣುಕು ಪ್ರದರ್ಶನವನ್ನು ನೈಜ ಘಟನೆಯಂತೆ ಬಿಂಬಿಸಲಾಗಿತ್ತು. ಎಮ್/ಎಸ್ ಎಲ್.ಪಿ.ಜಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್. ಬಿ.ಪಿ.ಸಿ.ಎಲ್ ಎಲ್.ಟಿ.ಡಿ, ಎಂ.ಪಿ.ಸಿ.ಎಲ್ ಎಲ್.ಟಿ.ಡಿ ಕಾರ್ಖಾನೆಯ 20 ಕಾರ್ಮಿಕರು ರಾಸಾಯನಿಕ ಸೋರಿಕೆಯಿಂದ ಗಾಯಗೊಂಡರು, ಎನ್.ಡಿ.ಆರ್.ಎಫ್ ತಂಡ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲಾಯಿತು. ಈ ರಾಸಾಯನಿಕ ದುರಂತ ಅಣುಕು ಪ್ರದರ್ಶನದಿಂದ 3 ಕಾರ್ಖಾನೆಗಳಿಂದ ಸುಮಾರು 400 ಕಾರ್ಮಿಕರನ್ನು ರಕ್ಷಿಸಿ ವಾಗಟ ಗ್ರಾಮದ ಪುನರ್ವಸತಿ ಕೇಂದ್ರ ಕ್ಕೆ ಸ್ಥಳಾಂತರಿಸಲಾಯಿತು.

    ಇದು ಕೇವಲ ಅಣುಕು ಪ್ರದರ್ಶನವಾಗಿದ್ದು ಎಲ್ಲಾ ಇಲಾಖೆಗಳು ವಿಪತ್ತುಗಳು ಸಂಭವಿಸಿದಾಗ ಸರ್ವಸನ್ನದ್ಧರಾಗಿರಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಅಣುಕು ಪ್ರದರ್ಶನ ನೈಜ ಘಟನೆಯಂತೆ ನಡೆಸಲಾಗಿದ್ದು ವಿಪತ್ತು ಸಂಭವಿಸಿದಾಗ ಇಲಾಖೆಗಳ ಜವಾಬ್ದಾರಿ ಯನ್ನು ಪ್ರತ್ಯಕ್ಷವಾಗಿ ತಿಳಿಸಲು ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಅಣುಕು ಪ್ರದರ್ಶನದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ.

     

    ಅಣುಕು ಪ್ರದರ್ಶನದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳಾದ ದುರ್ಗಾಶ್ರೀ, ಕಾರ್ಖಾನೆಗಳ ಜಂಟಿ ನಿರ್ದೇಶಕರಾದ ನವನೀತ ಮೋಹನ್ ಎನ್, ಹೊಸಕೋಟೆ ತಹಶೀಲ್ದಾರ್, ಸೋಮಶೇಖರ್, ಇ.ಒ ನಾರಾಯಣಸ್ವಾಮಿ, ಕಾರ್ಖಾನೆಗಳ ಉಪನಿರ್ದೇಶಕರಾದ ನರಸಿಂಹಮೂರ್ತಿ ಎಸ್ಎ, ಎಂ ಎ ಸೋಮಶೇಖರ್, ವಿ ತಿಮ್ಮರಾಜು, IOCL LPG ಯ ವ್ಯವಸ್ಥಾಪಕರಾದ ಜೆ ಭರತ್ ಕುಮಾರ್, ಉಪ ಪ್ರಧಾನ ವ್ಯವಸ್ಥಾಪಕರಾದ, ಡ್ಯಾನಿ ಜಾನ್ ಬೆಜೋಯ್, BPCL ಮುಖ್ಯ ವ್ಯವಸ್ಥಾಪಕರಾದ ಅಲೋಕ್ ಚಕ್ರವರ್ತಿ,HPCL ಟರ್ಮಿನಲ್ ನ ಉಪ ವ್ಯವಸ್ಥಾಪಕರಾದ ಪ್ರಶಾಂತ್ ಬೇಕಲ್, MRPL ಮುಖ್ಯ ವ್ಯವಸ್ಥಾಪಕರಾದ ಅರ್ನಾಬ್,MD, PETRONET MHBL ಮತ್ತು ಭಾಗೀದಾರ ಇಲಾಖೆಗಳ ಪ್ರತಿನಿಧಿಗಳು, ವೀಕ್ಷಕರು ಮತ್ತು ವಿಪತ್ತು ನಿರ್ವಹಣಾ ತಜ್ಞೆ ಸ್ಮಿತಾ ಟಿ.ಎಲ್ ಭಾಗವಹಿಸಿದ್ದರು.