Blog

  • ವಯೋವೃದ್ದರಿಗೆ ಹೊದಿಕೆ ವಿತರಣೆ ಮಾಡುವ ಮೂಲಕ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸ್ವಾಗತಿಸಿದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್

    ದೊಡ್ಡಬಳ್ಳಾಪುರ : ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದಲ್ಲಿ ನಿರ್ಗತಿಕ ಕಡುಬಡವರಿಗೆ ಆಹಾರ ವಿತರಣೆ ಜೊತೆಗೆ ವಯೋವೃದ್ಧರಿಗೆ ಹೊದಿಕೆ ವಿತರಣೆ ಮಾಡಲಾಗಿದೆ, ಸ್ವಾಮಿ ವಿವೇಕಾನಂದರ ಜಯಂತಿಯ ದಿನದಂದು ಸದಾ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಸಂಭ್ರಮಿಸುವುದು ನಮ್ಮ ತಂಡದ ಹೆಮ್ಮೆ ಎಂದು ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು

    1755ನೇ ದಿನಗಳಿಂದ ನಿರಂತರವಾಗಿ ತಾಲೂಕಿನ ದರ್ಗಾ ಜೋಗಿಹಳ್ಳಿಯಲ್ಲಿ ನೆಡೆಯುತ್ತಿರುವ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಯೋವೃದ್ಧರಿಗೆ ಹೊದಿಕೆ ವಿತರಣೆ ಮಾಡಿ ಮಾತನಾಡಿದ ಅವರು ಮಲ್ಲೇಶ್ ಮತ್ತು ತಂಡ ನಿರಂತರವಾಗಿ ಅನ್ನದಾಸೋಹ ಕಾರ್ಯಕ್ರಮ ನಡೆಸುತ್ತಿದ್ದು ನಿತ್ಯ ನೂರಾರು ಹಸಿದ ಹೊಟ್ಟೆಗಳಿಗೆ ಆಹಾರ ವಿತರಣೆ ಹಾಗೂ ಶಾಲಾ ಮಕ್ಕಳಿಗೆ ಅಗತ್ಯವಿರುವ ಪರಿಕರಗಳ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ, ಅವರ ಸಹಕಾರದೊಂದಿಗೆ ಇಂದು ವಯೋವೃದ್ದರಿಗೆ ಹೊದಿಕೆ ವಿತರಣೆ ಮಾಡಿದ್ದೇವೆ ಹಸಿದವರಿಗೆ ಆಹಾರ ವಿತರಣೆ ಮಾಡಿದ್ದೇವೆ ಈ ಕಾರ್ಯ ನಿರಂತರ ಸಾಗಲಿ ಎಂಬುದೇ ನಮ್ಮೆಲ್ಲರ ಆಶಯ ಎಂದರು.

    ನಮ್ಮ ಟ್ರಸ್ಟ್ ನ ತಂಡದ ಸಹಕಾರದೊಂದಿಗೆ ನಿರಂತರವಾಗಿ ಸೇವಾ ಕಾರ್ಯಗಳು ನಡೆಯುತ್ತಿದ್ದು, ಮುಂದೆ ಮತ್ತಷ್ಟು ಸೇವಾಕಾರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಶ್ರಮಿಸಲಾಗುವುದು ಎಂದರು.

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ಸಾಕಷ್ಟು ಸೇವಾ ಕಾರ್ಯಗಳು ನಡೆಯುತ್ತಿದ್ದು, ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ವಯೋವೃದ್ದರಿಗೆ ಹೊದಿಕೆ ವಿತರಣೆ ಮಾಡುವ ಮೂಲಕ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸ್ವಾಗತಿಸಿದ್ದಾರೆ , ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳಿಗೂ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ, ಟ್ರಸ್ಟ್ ನ ಸೇವಾಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ ಸಮಾಜಕ್ಕೆ ಟ್ರಸ್ಟ್ ನಿಂದ ಮತ್ತಷ್ಟು ಒಳಿತಾಗಲಿ ಎಂದು ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಮುಖಂಡರಾದ ಭೀಮ್ ರಾವ್ ಚವಾಣ್, ಶ್ರೀನಿವಾಸ್, ಮಂಜುನಾಥ್, ವೀರೇಶ್, ನಂಜಪ್ಪ ಸೇರಿದಂತೆ ನಿರಂತರ ಅನ್ನದಾಸೋಹ ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಚ್ಚುವರಿ ಕಟ್ಟಡ ನಿರ್ಮಾಣ ಶಿಲಾನ್ಯಾಸ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

    ಬೆಂಗಳೂರು, ಜನವರಿ 13 : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆವರಣದಲ್ಲಿ ಹಮ್ಮಿಕೊಳ್ಳಲಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಚ್ಚುವರಿ ಕಟ್ಟಡ ನಿರ್ಮಾಣ ಶಿಲಾನ್ಯಾಸ ಹಾಗೂ ಕೆಸೆಟ್-2024 ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

     

    ಇದೇ ಸಂದರ್ಭದಲ್ಲಿ ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಸಾಂಕೇತಿಕವಾಗಿ ಕೆಸೆಟ್ -2024ರ ಪ್ರಮಾಣಪತ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.

     

    ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಮಾತನಾಡಿ ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ ಒಳಿತಿನ ಜೊತೆಗೆ ದುರ್ಬಳಕೆಯಿಂದ ಕೆಡಕೂ ಸಂಭವಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು ಸೂಕ್ಷ್ಮವಾದ ವಿಚಾರ. ಈ ದಿಸೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಾರದರ್ಶಕವಾಗಿ ಕೆಲಸ ನಿರ್ವಹಿಸಿದೆ. ಕಳೆದ ವರ್ಷ ಸುಮಾರು 17 ರಿಂದ 18 ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸುಮಾರು 6052 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ನಿರ್ವಹಿಸಿರುವ ಹೆಗ್ಗಳಿಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.

     

    ಮುಖ್ಯಮಂತ್ರಿಗಳು ಸಹಾಯಕ ಪ್ರಾಧ್ಯಾಪಕ ಹುದ್ದೆ, ತಾಂತ್ರಿಕ ಶಿಕ್ಷಕ ಇಲಾಖೆಯ ಹುದ್ದೆಗಳನ್ನು ತುಂಬಲು ಅನುಮತಿ ಕೊಡುವ ಭರವಸೆಯನ್ನು ನೀಡಿದ್ದಾರೆ. ಕೆಸೆಟ್ ಪರೀಕ್ಷೆಯನ್ನು ಸತತವಾಗಿ ಎರಡನೇ ಬಾರಿಯೂ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ಉಂಟಾದ ಗೊಂದಲ ಪರೀಕ್ಷಾ ವ್ಯವಸ್ಥೆಗೆ ಸವಾಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‍ಕಾಸ್ಟಿಂಗ್ ಮೂಲಕ ಪರೀಕ್ಷೆಯನ್ನು ನಿಯಂತ್ರಿಸುವುದು ಯಶಸ್ವಿ ಪ್ರಯತ್ನವಾಗಿದೆ. ತಂತ್ರಜ್ಞಾನ ದುರ್ಬಳಕೆ ಮಾಡುವವರಿಗೆ ಕಡಿವಾಣ ಹಾಕಲಾಗಿದೆ. ಕರ್ನಾಟಕ ಲೋಕ ಸೇವಾ ಆಯೋಗ, ರಾಜೀವಾ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಒಳಗೊಂಡಂತೆ ಕಂಪ್ಯೂಟರ್ ಆಧಾರಿತ ಟೆಸ್ಟಿಂಗ್‍ನ್ನು ರಾಜ್ಯದಲ್ಲಿ ಪ್ರಾಯೋಗಿಕವಾಗಿ ತರಬೇಕು. ಮುಂದಿನ ದಿನಗಳಲ್ಲಿ ತಂತ್ರಜ್ಞಾನವನ್ನು ಬಳಸಿ ಪರೀಕ್ಷೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಬೇಕು ಎಂದು ತಿಳಿಸಿದರು.

     

    ನೇಮಕಾತಿ ಪರೀಕ್ಷೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚಿಂತನೆ ಇದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸುವ ಪರೀಕ್ಷಾ ಅರ್ಜಿಯನ್ನು ತುಂಬಲು ವಿದ್ಯಾರ್ಥಿಗಳಿಗೆ ಅದÀರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅಡಚಣೆ ತೊಂದರೆಗಳು ಉಂಟಾಗುತ್ತಿವೆ. ಅರ್ಜಿಯನ್ನು ತುಂಬಲು, ಸರಳೀಕರಣಗೊಳಿಸಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ಸಿಇಟಿ ಅರ್ಜಿ ಭರ್ತಿ ಮಾಡುವುದನ್ನು ಸರಳಗೊಳಿಸುವ ಹಾಲಿ ಇರುವ ವ್ಯವಸ್ಥೆಗೆ ಮತ್ತಷ್ಟು ಭದ್ರತಾ ಉಪಕ್ರಮಗಳನ್ನು ಅಳವಡಿಸುವ ಮೂಲಕ ಹೊಸ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

     

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪ್ರವೇಶ ಮತ್ತು ನೇಮಕಾತಿ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುವ ಕಾರಣ ಸರ್ವರ್ ಮೇಲೆ ಒತ್ತಡ ಹೆಚ್ಚಿದೆ. ಹೀಗಾಗಿ ಪ್ರತ್ಯೇಕವಾದಂತಹ ಸರ್ವರ್ ಹೊಂದುವ ಬಗ್ಗೆಯೂ ಚಿಂತನೆ ನಡೆದಿದೆ. ನೇಮಕಾತಿ ಪ್ರಕ್ರಿಯೆಗೆ ಸ್ಥಳಾವಕಾಶದ ಕೊರತೆ ಇದೆ ಹಾಗೆಯೆ ಮುಂದಿನ ದಿನಗಳಲ್ಲಿ ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳ ಪ್ರತ್ಯೇಕ ವಿಭಾಗಗಳನ್ನು ತೆರೆಯುವ ಉದ್ದೇಶವೂ ಇದೆ ಎಂದು ತಿಳಿಸಿದರು.

     

    ಇದೇ ಸಂದರ್ಭದಲ್ಲಿ ನೇಮಕಾತಿ ಪರೀಕ್ಷೆಗಳಿಗೆ ಒಮ್ಮೆ ಮಾತ್ರ ನೋಂದಣಿ ಮಾಡುವ ವ್ಯವಸ್ಥೆಯ ಪೋರ್ಟಲ್ ಹಾಗೂ ಸಿಇಟಿ ದಿಕ್ಸೂಚಿ ಸಾಮಾನ್ಯ ಪ್ರವೇಶ ಪರೀಕ್ಷೆ -2025ಕ್ಕೆ ಚಾಲನೆ ನೀಡಿದ ಸಚಿವರು, ಒಮ್ಮೆ ನೋಂದಣಿ ಮಾಡಿದವರು ವಿವಿಧ ರೀತಿಯ ನೇಮಕಾತಿ ಪರೀಕ್ಷೆಗಳಿಗೆ ಪದೇ ಪದೇ ಅರ್ಜಿ ಭರ್ತಿ ಮಾಡುವ ಅಗತ್ಯ ಇರುವುದಿಲ್ಲ. ನಿರ್ದಿಷ್ಟ ಸಂಖ್ಯೆಯನ್ನು ನಮೂದಿಸುವುದರ ಮೂಲಕ ಪರೀಕ್ಷಾ ಶುಲ್ಕ ಪಾವತಿಸಿ ಅರ್ಹತೆಯನ್ನು ಪಡೆಯಬಹುದು ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಡಿರುವ ವಿನೂತನ ಕ್ರಮ ಎಂದು ತಿಳಿಸಿದರು.

     

    ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಹೆಚ್, ಆಡಳಿತಾಧಿಕಾರಿ ಇಸ್ಲಾವುದ್ಧಿನ್ ಜೆ. ಗದ್ಯಾಳ, ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ. ಶ್ರೀನಿವಾಸಗೌಡ, ವಿಶ್ರಾಂತ ಕುಲಪತಿ ಪ್ರೊ. ತಿಮ್ಮೇಗೌಡ, ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸೇರಿದಂತೆ ಹಿರಿಯ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ತೂಬಗೆರೆ ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ ಸೂಟ್‌ ವಿತರಣೆ; ದಿ ಡಿವೈನ್ ಸ್ಟಾರ್ ಸಂಸ್ಥೆ ನೆರವು.

    ದೊಡ್ಡಬಳ್ಳಾಪುರ(ಜ.13): ತಾಲೂಕಿನ ತೂಬಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ, ದಿ ಡಿವೈನ್ ಸ್ಟಾರ್ ಸಂಸ್ಥೆ ಪರವಾಗಿ ಖ್ಯಾತ ಜ್ಯೋತಿಷಿ ಮಹರ್ಷಿ ಆನಂದ ಗೂರೂಜಿ ಸೋಮವಾರ ಟ್ರ್ಯಾಕ್‌ ಸೂಟ್‌ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿದರು.

     

    ನಂತರ ಮಾತನಾಡಿ, ನಾವೆಲ್ಲ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿತವರು. ಆಟದ ಮೈದಾನದಲ್ಲಿ ಕುಣಿದು, ಕುಪ್ಪಳಿಸುತ್ತಾ ಬಾನೆತ್ತರಕ್ಕೆ ಹಾರುವ ಕನಸು ಕಂಡವರು. ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ, ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

     

    ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕಳೆದ ಹಲವು ವರ್ಷಗಳಿಂದ ಸಮವಸ್ತ್ರ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ನೀಡುತ್ತಿರುವ ದಿ ಡಿವೈನ್ ಸ್ಟಾರ್ ಸಂಸ್ಥೆಯವರ ಸೇವೆಯ ಬಗ್ಗೆ ಗೂರೂಜಿ ಶ್ಲಾಘನೆ ವ್ಯಕ್ತಪಡಿಸಿದರು.

     

    ದಿ ಡಿವೈನ್ ಸ್ಟಾರ್ ಸಂಸ್ಥೆ ಸಂಸ್ಥಾಪಕ ಡಾ. ರಾಜೀವ್ ಗೋಲ್ಚಾ ಮಾತನಾಡಿ, ಗೂರೂಜಿ ಆಶಯದಂತೆ ಪ್ರತಿಯೊಬ್ಬರೂ ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶ, ಕುಗ್ರಾಮಗಳ ಬಗ್ಗೆ ಕಾಳಜಿ ಹೊಂದಬೇಕು.

    ಈ ನಿಟ್ಟಿನಲ್ಲಿ ನಾವು ಸರ್ಕಾರಿ ವಿದ್ಯಾರ್ಥಿಗಳಿಗಾಗಿ ಟ್ರ್ಯಾಕ್‌ ಸೂಟ್‌ ಮತ್ತು ಲೇಖನ ಸಾಮಗ್ರಿಗಳು ಹಾಗೂ ಅಗತ್ಯ ಸಾಮಗ್ರಿ ವಿತರಣೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು. ಮುಂದಿನ ದಿನಗಳಲ್ಲಿ ತೂಬಗೆರೆ ಶಾಲೆಗೆ ಮತ್ತಷ್ಟು ಅಗತ್ಯ ಇರುವ ಸೌಲಭ್ಯ ಒದಗಿಸಿಕೊಡಲಾಗುವುದು ಎಂದರು.

     

    ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ನಾಗರಾಜು, ಎಸ್ಡಿಎಂಸಿ ಅಧ್ಯಕ್ಷ ಹನುಮಂತರಾಜು, ಯುವ ಮುಖಂಡ ಉದಯ ಆರಾಧ್ಯ, ಹಳ್ಳಿ ರೈತ ಅಂಬರೀಶ್, ಮುನಿರಾಜಪ್ಪ, ದಿನ ಡಿವೈನ್ ಸ್ಟಾರ್ ಸಂಸ್ಥೆಯ ನೌಕರರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

  • 6ನೇ ತರಗತಿ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

    ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದಲ್ಲಿರುವ “2025-26ನೇ ಸಾಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳಾದ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಅಟಲ್ ಬಿಹಾರಿ ವಾಜಪೇಯಿ/ಡಾ॥ ಬಿ.ಆರ್.ಅಂಬೇಡ್ಕರ್/ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಆನ್ ಲೈನ್ (Online) ಮುಲಕ ಅರ್ಜಿ ಆಹ್ವಾನಿಸಲಾಗಿದೆ.

     

     

    ಅರ್ಜಿ ಸಲ್ಲಿಸುವವರು ಜನವರಿ 25 ರೊಳಗೆ http://kreis.kar.nic.in ವೆಬ್ಸೈಟ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.

     

    ಅರ್ಜಿ ಸಲ್ಲಿಸುವ ಅಭ್ಯರ್ಥಿಯು 2024-25ನೇ ಸಾಲಿನಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರಬೇಕು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳಾಗಿರಬೇಕು.

     

    ಫೆಬ್ರವರಿ 15 ರಂದು ಪ್ರವೇಶ ಪರೀಕ್ಷೆ

    ಅರ್ಹ ಅಭ್ಯರ್ಥಿಗಳಿಗೆ ಫೆಬ್ರವರಿ 15 ರಂದು ಪ್ರವೇಶ ಪರೀಕ್ಷೆ ಏರ್ಪಡಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ 6 ರಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಉಚಿತ ವಸತಿ, ಉಚಿತ ಊಟ ಕೊಟ್ಟು ಶಿಕ್ಷಣ ನೀಡಲಾಗುವುದು.

     

    ಹೆಚ್ಚಿನ ವಿವರಗಳಿಗಾಗಿ ಆಯಾ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸುವುದು. ಪ್ರಾಂಶುಪಾಲರು, ಬಚ್ಚಹಳ್ಳಿ-8105526933. ಪ್ರಾಂಶುಪಾಲರು, ಬೊಮ್ಮವಾರ-7349391473.ಪ್ರಾಂಶುಪಾಲರು ಕುಂದಾಣ -9902534050.ಪ್ರಾಂಶುಪಾಲರು,ನೆಲಮಂಗಲ -8495812105. ಪ್ರಾಂಶುಪಾಲರು, ಕೊಂಡ್ರಹಳ್ಳಿ-9902989639.ಪ್ರಾಂಶುಪಾಲರು,ಬೈರಾಪುರ-9916582001. ಪ್ರಾಂಶುಪಾಲರು, ಬೈರನಾಯಕನಹಳ್ಳಿ-7259882671.ಪ್ರಾಂಶುಪಾಲರು, ಮಾರ್ಡೇಶ್ವರ- 9845308319.

    Ad

    ಹೆಚ್ಚಿನ ಮಾಹಿತಿಗಾಗಿ ದೇವನಹಳ್ಳಿ ಸಹಾಯಕ ನಿರ್ದೇಶಕರ ಕಛೇರಿ ದೂರವಾಣಿ ಸಂಖ್ಯೆ 27681784. ದೊಡ್ಡಬಳ್ಳಾಪುರ ತಾಲೂಕು ದೂರವಾಣಿ ಸಂಖ್ಯೆ 27623681. ಹೊಸಕೋಟೆ ತಾಲ್ಲೂಕು ದೂ.ಸಂ127931528. ನೆಲಮಂಗಲ ತಾಲ್ಲೂಕು ದೂ.ಸಂ 27723172. ಅಥವಾ ಉಪನಿರ್ದೇಶಕರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಕೊಠಡಿ ಸಂ: 217, 2ನೇ ಮಹಡಿ, ಜಿಲ್ಲಾಡಳಿತ ಭವನ, ದೇವನಹಳ್ಳಿ ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಟಿ.ಎಲ್.ಎಸ್ ಪ್ರೇಮ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ನಗರಸಭೆ ಕಛೇರಿಯಲ್ಲಿ ಸಂಕ್ರಾಂತಿ ಆಚರಣೆ : ಸಂಪ್ರದಾಯಿಕ ಉಡುಗೆ ತೊಟ್ಟು ಪೂಜೆ ಸಲ್ಲಿಸಿದ ಸಿಬ್ಬಂದಿ ವರ್ಗ

    ದೊಡ್ಡಬಳ್ಳಾಪುರ : ನಗರಸಭೆಯಲ್ಲಿ ಸಂಕ್ರಾಂತಿ ಸಂಭ್ರಮ ಮನೆ ಮಾಡಿತು, ಸಾಂಪ್ರದಾಯಿಕ ಉಡುಗೆ ತೊಟ್ಟ ನಗರಸಭಾ ಸದಸ್ಯರು ಪಕ್ಷಾತೀತವಾಗಿ ಆಚರಣೆ ಪಾಲ್ಗೊಂಡು ಸಂಭ್ರಮಿಸಿದರು.

    ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಒಂದು ದಿನ ಮುನ್ನವೇ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದು, ಪುರುಷ ಸದಸ್ಯರು ಪಂಚೆ ಶಲ್ಯ ಧರಿಸಿ ಕೈಯಲ್ಲಿ ಕಬ್ಬಿನ ಜಲ್ಲೆ ಹಿಡಿದು ಆಗಮಿಸಿದರೆ, ಮಹಿಳಾ ಸದಸ್ಯರು ಕೈಯಲ್ಲಿ ಎಳ್ಳು-ಬೆಲ್ಲ ಹಿಡಿದು ಎಲ್ಲರಿಗೂ ನೀಡುವ ಮೂಲಕ ಸಂಭ್ರಮಿಸಿದರು , ಅದ್ಭುತವಾಗಿ ಮೂಡಿಬಂದ ರಂಗೋಲಿಯ ಮೇಲೆ ಕಡಲೆಕಾಯಿ, ಅವರೆಕಾಯಿ, ಗೆಣಸು ಇಟ್ಟು ಗೋ ಪೂಜೆಯ ಮೂಲಕ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು

     

    ಪರಸ್ಪರ ಎಳ್ಳು-ಬೆಲ್ಲ ಹಂಚುವ ಮೂಲಕ ದೊಡ್ಡಬಳ್ಳಾಪುರ ಜನತೆಗೆ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದರು 

    ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಸುಮಿತ್ರಾ ಆನಂದ್ ಮಾತನಾಡಿ ಇದೇ ಮೊದಲ ಬಾರಿಗೆ ನಗರಸಭೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ, ಪೌರಕಾರ್ಮಿಕರು, ಸಿಬ್ಬಂದಿಗಳು ಮತ್ತು ನಗರಸಭಾ ಸದಸ್ಯರ ಜೊತೆಯಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ, ಮುಂದಿನ ಬಜೆಟ್ ನಲ್ಲಿ ದೊಡ್ಡಬಳ್ಳಾಪುರ ಜನತೆಗೆ ಮತ್ತಷ್ಟು ಖುಷಿ ವಿಚಾರಗಳನ್ನ ಕೊಡುವುದ್ದಾಗಿ ಹೇಳಿದರು

    ಸ್ಥಾಯಿ ಸಮಿತಿ ಅಧ್ಯಕ್ಷರಾದ ವಡ್ಡರಹಳ್ಳಿ ರವಿ ಮಾತನಾಡಿ, ರಾಜಕೀಯವೇ ಜೀವನ ಅಲ್ಲ, ಗೆಲ್ಲುವ ತನಕ ಪಕ್ಷ ಗೆದ್ದ ನಂತರ ನಾವೇಲ್ಲ ನಗರದ ಅಭಿವೃದ್ಧಿಗಾಗಿ ದುಡಿಯ ಬೇಕು, ಸಂಕ್ರಾಂತಿ ಹಬ್ಬವನ್ನು ಆಚರಣೆಯ ಮೂಲಕ ದೊಡ್ಡಬಳ್ಳಾಪುರ ನಗರಸಭೆಗೆ ಸರ್ಕಾರದಿಂದ ಅನುದಾನ ಹರಿದು ಬರಲಿ ಮತ್ತಷ್ಟು ಪ್ರಗತಿ ಆಗಲಿ ಎಂಬುದೇ ನಮ್ಮ ಅಶಯವಾಗಿದೆ ಎಂದರು

    ಈ ವೇಳೆ ಉಪಾಧ್ಯಕ್ಷರಾದ ಮಲ್ಲೇಶ್, ನಗರಸಭಾ ಸದಸ್ಯರುಗಳಾದ ಶಿವಶಂಕರ್, ಆನಂದ್, ಸುಧಾ ಲಕ್ಷ್ಮೀನಾರಾಯಣ್, ಬಂತಿ ವೆಂಕಟೇಶ್, ಶಿವು, ಶಿವಣ್ಣ, ರೂಪಿಣಿ ಮಂಜುನಾಥ್, ಪ್ರಭಾ ನಾಗರಾಜ್, ಪದ್ಮನಾಭ್, ನಾಗರಾಜು, ಪ್ರಭುದೇವ್ , ವತ್ಸಲಾ, ಸುರೇಶ್, ಮಂಜುಳಾ, ಆದಿಲಕ್ಷ್ಮೀ, ಹಸೀನಾ ತಾಜ್, ರಜನಿ ಸುಬ್ರಮಣಿ, ಭಾಸ್ಕರ್, ಚಂದ್ರಮೋಹನ್,ಲಕ್ಮೀಪತಿ,ಇಂದ್ರಾಣಿ, ನಾಗರತ್ಮಮ್ಮ, ಹಂಸಪ್ರಿಯ, ವಾಣಿ, ಕಾಂತರಾಜು, ಅಖಿಲೇಶ್ ಮತ್ತಿತರರು ಉಪಸ್ಥಿತರಿದ್ದರು .

  • ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಖಜಾಂಚಿ ಯಾಗಿ ಟಿ ಎಂ ಅಶೋಕ ಅವಿರೋಧ ಅಯ್ಕೆಯಾಗಿದ್ದಾರೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿಕ ಸಮಾಜಕ್ಕೆ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಒಬ್ಬರಂತೆ ಪ್ರತಿನಿಧಿಗಳನ್ನು ಹುದ್ದೆಗೆ ನೇಮಿಸಲಾಗಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿನಿಧಿಯಾಗಿ ಟಿ.ಎಂ ಅಶೋಕ್ ರವರನ್ನು ಆಯ್ಕೆ ಮಾಡಿದ್ದು, ನೂತನ ಖಜಾಂಚಿಯಾಗಿ ನೇಮಕ ಮಾಡಿ ಆದೇಶಿಸಲಾಗಿದೆ.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿಕ ಸಮಾಜದ ನೂತನ ಖಜಾಂಚಿಯಾಗಿ ಆಯ್ಕೆಯಾಗಿರುವ ಟಿ. ಎಂ. ಅಶೋಕ್ ರವರನ್ನು ತೂಬಗೆರೆ ಹೋಬಳಿಯ ಮುಖಂಡರು ಸನ್ಮಾನಿಸಿ ಗೌರವಿಸಿದರು.

    ಈ ಸಂದರ್ಭದಲ್ಲಿ ಟಿಎಂ ಅಶೋಕ್ ಮಾತನಾಡಿ ಜಿಲ್ಲೆಯಲ್ಲಿ ಕೃಷಿಕ ಸಮಾಜದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಪ್ರಸ್ತುತ ಕೃಷಿಕ ಸಮಾಜದ ಹಲವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನೂತನ ಯೋಜನೆಗಳನ್ನು ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮಾರ್ಗದರ್ಶನದೊಂದಿಗೆ ರೂಪಿಸಲಾಗುವುದು ಎಂದರು.

    Ad

    ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರವಿಕುಮಾರ್, ತೂಬಗೆರೆ ಹೋಬಳಿ ಜೆ ಡಿ ಎಸ್ ಅದ್ಯಕ್ಷರು ಹಾಗೂ ಘಾಟಿ ವಿ ಎಸ್ ಎಸ್ ಎನ್ ಅಧ್ಯಕ್ಷ ಜಗನ್ನಾಥ ಚಾರ್ಯ,ಹಾಡೋನಹಳ್ಳಿ ವಿ ಎಸ್ ಎಸ್ ಎನ್ ಅಧ್ಯಕ್ಷ ಎಂ.ಮುನೇಗೌಡ ,ತಾಲ್ಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ತಿಪ್ಪಾ ಪುರ ರಾಜಶೇಖರ್,ಟಿ ಎ ಪಿ ಎಂ ಸಿ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ,ತಿರುಮಗೊಂಡಹಳ್ಳಿ ಎಂ ಪಿ ಸಿ ಎಸ್ ಅಧ್ಯಕ್ಷ ಸಿ.ಪ್ರಕಾಶ್,ಕಾರ್ಯದರ್ಶಿ ಟಿ.ಎಂ ಪ್ರತಾಪ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

  • ಕುಡಿಯುವ ಶುದ್ಧ ನೀರಿಗಾಗಿ ಹೋರಾಟ : ಜನವರಿ 26ರ ಗಣರಾಜ್ಯೋತ್ಸವ ದಿನ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಲು ನಿರ್ಧರಿಸಿದ ದೊಡ್ಡ ತುಮಕೂರು ಹಾಗೂ ಮಜರಾ ಹೊಸಹಳ್ಳಿ ಗ್ರಾಮಸ್ಥರು

    ದೊಡ್ಡಬಳ್ಳಾಪುರ : ಕೆರೆ ಸಂಪನ್ಮೂಲ ಉಳಿಸುವಂತೆ ಹಾಗೂ ಶುದ್ಧ ಕುಡಿಯುವ ನೀರಿಗಾಗಿ ಮನವಿ ಕೊಟ್ಟು ಕೊಟ್ಟು ಮನನೊಂದಿರುವ ಹೋರಾಟಗಾರರು ಜನವರಿ 26ರ ಗಣರಾಜ್ಯೋತ್ಸವದ ದಿನ ತಮ್ಮ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಲು ನಿರ್ಧರಿಸಿದ್ದಾರೆ

    ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿಯ ಗ್ರಾಮ ಪಂಚಾಯಿತಿಗಳ ಜಲ ಸಂಪನ್ಮೂಲ ಸಂಪೂರ್ಣ ಹಾಳಾಗಿದ್ದು , ದೊಡ್ಡಬಳ್ಳಾಪುರ ನಗರದ ಒಳಚರಂಡಿ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ತ್ಯಾಜ್ಯ ನೀರು ನೇರವಾಗಿ ಕೆರೆಗೆ ಸೇರುತ್ತಿದೆ, ಇದರ ಪರಿಣಾಮ 17 ಗ್ರಾಮಗಳಲ್ಲಿ ಅಂತರ್ಜಲ ನೀರು ವಿಷವಾಗಿದೆ, ಶುದ್ಧ ನೀರು ಕೊಡುವಂತೆ ಕಳೆದೊಂದು ದಶಕದಿಂದಲೂ ಅರ್ಕಾವತಿ ನದಿ ಹೋರಾಟ ಸಮಿತಿ ಹೋರಾಟ ಮಾಡುತ್ತಲೇ ಬಂದಿದೆ.

    ಶುದ್ದ ನೀರಿಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಉರುಳು ಸೇವೆ, ತಹಶೀಲ್ದಾರ್ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ, ತೆಪ್ಪದಲ್ಲಿ ಸತ್ಯಾಗ್ರಹ, ಹೆದ್ದಾರಿ ಬಂದ್ ಮಾಡಲಾಗಿದೆ, ಸ್ಥಳಕ್ಕೆ ಬರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಅಶ್ವಾಸನೆ ಮಾತುಗಳನ್ನ ಕೊಡುತ್ತಾ ಬಂದಿದ್ದಾರೆ, ಇದರಿಂದ ಬೆಸತ್ತಿರುವ ಹೋರಾಟಗಾರರು ಜನವರಿ 26 ರಂದು 17 ಗ್ರಾಮಗಳ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವ ಎಚ್ಚರಿಕೆಯನ್ನ ನೀಡಿದ್ದಾರೆ.

    ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸುವ ಹಿನ್ನಲೆ, ಇಂದು ಮನೆಗಳಿಗೆ ಭೇಟಿ ನೀಡುತ್ತಿರುವ ಅರ್ಕಾವತಿ ನದಿ ಹೋರಾಟ ಸಮಿತಿಯ ಹೋರಾಟಗಾರರು ಜಾಗೃತಿಯನ್ನ ಮೂಡಿಸುತ್ತಿದ್ದಾರೆ, ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಹೋರಾಟಗಾರರಾದ ಮಂಜುನಾಥ್,ಈ ಹಿಂದೆ ಈ ಕುರಿತಂತೆ ಎಚ್ಚರಿಸಿ ನಗರದ ಪ್ರವಾಸಿ ಬಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದೆವು , ಆದರೆ ತಾಲೂಕಿನ ಯಾವುದೇ ಜನಪ್ರತಿನಿಧಿಗಳು, ಹಾಗೂ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಗ್ರಾಮಗಳ ಪ್ರತಿ ಮನೆ ಮೇಲೆ ಜನವರಿ 26ರಂದು ಕಪ್ಪು ಬಾವುಟ ಹಾರಿಸಲು ಗ್ರಾಮಸ್ಥರು ನಿರ್ಧರಿಸಿದ್ದೇವೆ ಈ ಕುರಿತು ಸಹಿಸಂಗ್ರಹ ಅಭಿಯಾನವನ್ನು ಇಂದು ನೆಡೆಸಲಾಗುತ್ತಿದೆ ಎಂದರು.

    ನಮ್ಮ ಬೇಡಿಕೆಗಳು

    1. ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡಬಳ್ಳಾಪುರಕೆ ವರ್ಗಾಯಿಸಬೇಕು.
    2. ದೊಡ್ಡಬಳ್ಳಾಪುರದ ಕೊಳೆಚೆನೀರಿಗೆ ವೈಜ್ಞಾನಿಕ ಶುದ್ದೀಕರಣ ಘಟಕ ಸ್ಥಾಪಿಸಬೇಕು.
    3. ಕಾಡನೂರು ಪಂಚಾಯಿತಿಯಿಂದ ಅತಿ ಜರೂರಾಗಿ ಕೊಳವೆಬಾವಿ ಕೊರೆಸಿ ಎರಡು ಪಂಚಾಯಿತಿಗೆ ನೀರು ಕೊಡಬೇಕು.
    4.ರಾಸಾಯನಿಕ ನೀರು ಬಿಡುವ ಕಾರ್ಖಾನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

    ಮುಖಂಡರಾದ ಕಾಳೇಗೌಡ ಮಾತನಾಡಿ, ನಮ್ಮ ಮೂಲಭೂತ ಹಕ್ಕುಗಳಿಗಾಗಿ ಎಷ್ಟೇ ಹೋರಾಟ ಮಾಡಿದರೂ ಯಾವುದೇ ಸೌಕರ್ಯ ಸಿಗದೇ ಇರುವ ಕಾರಣ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಾಗೂ ಮುಂದಿನ ಪೀಳಿಗೆಯ ಆರೋಗ್ಯಕ್ಕಾಗಿ ಇಂದು ಹೋರಾಟ ಮಾಡಲೇ ಬೇಕಾದ ಅನಿವಾರ್ಯತೆಗೆ ಮುಂದಾಗಿದ್ದೇವೆ, ದೊಡ್ಡ ತುಮಕೂರು ಹಾಗೂ ಮಜರಾ ಹೊಸಹಳ್ಳಿ ಎರಡು ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಪ್ರತಿ ಮನೆಮನೆಗೂ ಭೇಟಿಕೊಟ್ಟು ಸಹಿ ಸಂಗ್ರಹ ಮಾಡುತ್ತಿದ್ದೇವೆ , ಈ ಸಹಿಸಂಗ್ರಹದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದೇವೆ ಎಂದರು

    ಈ ವೇಳೆ ಗ್ರಾಮಸ್ಥರಾದ ಚನ್ನೇಗೌಡ, ವಿಜಿಕುಮಾರ್, ಶಿವಕುಮಾರ್, ಅಶ್ವತ್ಥಮ್ಮ, ದೇವಾಣಪ್ಪ ಇದ್ದರು

     

  • ನಂದಿ ಹಿಲ್ ವ್ಯೂ ಅಂತಾರಾಷ್ಟ್ರೀಯ ಶಾಲೆಯಲ್ಲಿ ಸಂಭ್ರಮದ “ನಂದಿ ಕಲೋತ್ಸವ-2024-25”

    ದೊಡ್ಡಬಳ್ಳಾಪುರ(ವಿಜಯ ಮಿತ್ರ ): ತಾಲ್ಲೂಕಿನ ತೂಬಗೆರೆ ಗ್ರಾಮದ ಹೊರವಲಯದಲ್ಲಿರುವ ನಂದಿ ಹಿಲ್ ವ್ಯೂ ಅಂತಾರಾಷ್ಟ್ರೀಯ ಶಾಲೆಯಲ್ಲಿ ಇತ್ತೀಚೆಗೆ “ನಂದಿ ಕಲೋತ್ಸವ” ಸಂಭ್ರಮದಿಂದ ಆಚರಿಸಲಾಯಿತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ಪೋಷಕರು ತಮ್ಮ ಮಕ್ಕಳನ್ನು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಮತ್ತು ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳ ಆಸಕ್ತಿಗೆ ಪ್ರಾಮುಖ್ಯತೆ ನೀಡಿ ಅವರಿಗೆ ಇಷ್ಟವಾದ ಶಿಕ್ಷಣ ಕೊಡಿಸಿದರೆ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ.‌ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡಿ, ಮಕ್ಕಳಲ್ಲಿ ಸರ್ವತೋಮುಖ ಬೆಳವಣಿಗೆ ತರುವಲ್ಲಿ ಶ್ರಮಿಸುತ್ತಿರುವ ನಂದಿ ಹಿಲ್ ವ್ಯೂ ಅಂತಾರಾಷ್ಟ್ರೀಯ ಶಾಲೆಯ ಕಾರ್ಯದರ್ಶಿ ಧನುಂಜಯ ಹಾಗೂ ಸಿಬ್ಬಂದಿ ವರ್ಗದವರನ್ನು ಶ್ಲಾಘಿಸಿದರು.

     

    ಶಾಲೆಯ ಕಾರ್ಯದರ್ಶಿ ಧನುಂಜಯ ಮಾತನಾಡಿ, ವಿದ್ಯಾರ್ಥಿ ಜೀವನ ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ಕಾಲಘಟ್ಟ. ಗುಣಮಟ್ಟದ ಶಿಕ್ಷಣದಿಂದ ಮಾತ್ರ ಉತ್ತಮ ಪ್ರಜೆಗಳು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಆದ್ದರಿಂದ ಗ್ರಾಮಾಂತರ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸಂಸ್ಥೆಯಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಪಠ್ಯಕ್ರಮ ಬೋಧಿಸಲಾಗುತ್ತಿದೆ ಎಂದರು.

     

    ಕಾರ್ಯಕ್ರಮ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು. ಪುಟಾಣಿ ಮಕ್ಕಳು ನೃತ್ಯ ಪ್ರದರ್ಶನ ವಿಶೇಷವಾಗಿತ್ತು.

    ಕಾರ್ಯಕ್ರಮದಲ್ಲಿ ಎಸ್ ಪಿ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷೆ ವರಲಕ್ಷ್ಮಿ ಧನುಂಜಯ, ಶಾಲೆಯ ಕಾರ್ಯದರ್ಶಿ ಧನುಂಜಯ, ರೈತ ಮುಖಂಡ ತುರುವನಹಳ್ಳಿ ವಾಸು, ವಕೀಲ ಪ್ರತಾಪ್. ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಕಾರ್ಯದರ್ಶಿ ಉದಯ ಆರಾಧ್ಯ, ಲಕ್ಷ್ಮೀದೇವಿ ಪುರ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ವಂಸತಗೌಡ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಗೌಡ, ಮುಖಂಡ ಕನಕದಾಸ, ಹಳ್ಳಿ ರೈತ ಅಂಬರೀಶ್, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

     

  • ಘಾಟಿ ಸುಬ್ರಮಣ್ಯವನ್ನು 2ನೇ ಕುಕ್ಕೆ ಸುಬ್ರಮಣ್ಯ ಮಾಡುವುದು ನಮ್ಮ ಉದ್ದೇಶ – ಏನ್. ರಂಗಪ್ಪ

    ದೊಡ್ಡಬಳ್ಳಾಪುರ : ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರೇತರ ನಾಮನಿರ್ದೇಶಿತರಾಗಿ ಆಯ್ಕೆಯಾಗಿರುವ ಏನ್. ರಂಗಪ್ಪ, ವಕೀಲರಾದ ಆರ್ ವಿ ಮಹೇಶ್ ರವರನ್ನು ಸ್ಥಳೀಯ ಮುಖಂಡರು ಸನ್ಮಾನಿಸಿ ಗೌರವಿಸಿದರು.

     

    ಗಣ್ಯರಿಗೆ ಪುಷ್ಪಮಾಲೆ ಹಾಕಿ ಸಿಹಿ ತಿನಿಸುವ ಮೂಲಕ ಶುಭಕೋರಿ ಹಾರೈಸಿದರು  

    ನೂತನ ನಾಮನಿರ್ದೇಶಕರಾಗಿ ಆಯ್ಕೆಯಾಗಿರುವ ಏನ್ ರಂಗಪ್ಪ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪನವರ ಆಶೀರ್ವಾದದೊಂದಿಗೆ ರವಿ ಕೆ.ಎಸ್ ,ಲಕ್ಷ ನಾಯಕ, ಆರ್ ವಿ ಮಹೇಶ್ ಕುಮಾರ್, ಎಂ ಹೇಮಲತರವರನ್ನು ಒಳಗೊಂಡಂತೆ ನಾವು ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರೇತರ ನಾಮನಿರ್ದೇಶಿತರಾಗಿ ಆಯ್ಕೆಯಾಗಿದ್ದೇವೆ . ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಘಾಟಿ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

     

    ಕಳೆದ ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವದ ಸಮಯದಲ್ಲಿ ಉಂಟಾದ ಸಮಸ್ಯೆಗಳನ್ನು ಮುಂದೆ ಸರಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತದೆ, ಜಾತ್ರೆ ಸಮಯದಲ್ಲಿ ಸಾರ್ವಜನಿಕರು ಕಿಲೋಮೀಟರ್ ದೂರ ನಡೆಯುವ ಸನ್ನಿವೇಶಗಳನ್ನು ಕಂಡಿದ್ದೇವೆ , ಮುಂದೆ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ , ಅಲ್ಲದೆ ರಸ್ತೆ ಅಗಲೀಕರಣ , ಉತ್ತಮ ಸುಸಜ್ಜಿತ ಶೌಚಾಲಯ ನಿರ್ಮಾಣ, ಭೋಜನಕೂಟ ಕಟ್ಟಡ ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರದ ಸಹಕಾರದೊಂದಿಗೆ ಹಿರಿಯರ ಮತ್ತು ಹಿತೈಷಿಗಳ ಮಾರ್ಗದರ್ಶನದೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದರು.

     

    ಆರ್ ವಿ ಮಹೇಶ್ ಮಾತನಾಡಿ ಮುಂದಿನ ದಿನಗಳಲ್ಲಿ ಘಾಟಿ ಸುಬ್ರಹ್ಮಣ್ಯಕ್ಕೆ ಬರುವ ಭಕ್ತಾದಿಗಳಿಗೆ ಬೇಕಾಗುವ ಸಕಲ ಅನುಕೂಲಗಳನ್ನು ವ್ಯವಸ್ಥಾಪಕ ಸಿಬ್ಬಂದಿ ಹಾಗೂ ದೇವಾಲಯದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಶೀಘ್ರಗತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು

    ಘಾಟಿ ಮಾರ್ಗದಲ್ಲಿರುವ ತಿರುಮಗೊಂಡನಹಳ್ಳಿ ರೈಲ್ವೆ ಗೇಟ್ ವಿಚಾರವಾಗಿ ಈಗಾಗಲೇ ಸಾಕಷ್ಟು ಸಾರ್ವಜನಿಕರು ಕರೆ ಮಾಡಿ ದೂರು ನೀಡಿದ್ದಾರೆ. ಈ ಕುರಿತು ಮಾನ್ಯ ಸಚಿವರಿಗೂ ಮೌಖಿಕವಾಗಿ ಮಾಹಿತಿ ನೀಡಿದ್ದೇವೆ , ಪ್ರಾಧಿಕಾರವು ಸಂಪೂರ್ಣವಾಗಿ ಅಧಿಕಾರ ಸ್ವೀಕರಿಸಿ ಅಸ್ತಿತ್ವಕ್ಕೆ ಬಂದ ನಂತರ ಈ ಕುರಿತು ರಾಜ್ಯ ಸಚಿವರ ಮುಖೇನ ನಿಯೋಗ ಹೊರಟು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ತ್ವರಿತ ಗತಿಯಲ್ಲಿ ಪರಿಹಾರ ಕಲ್ಪಿಸಲಾಗುವುದು ಎಂದರು.

     

     

    ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಆರ್ ಮುರಳಿಧರ್ ,ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ,ವಕೀಲರಾದ ಅಶೋಕ್, ಕಾಂಗ್ರೆಸ್ ಮುಖಂಡರಾದ ರಾಜ ಗೋಪಾಲ್, ವಕೀಲರಾದ ಶಿವಕುಮಾರ್,ಮುಖಂಡರಾದ ಹರಿ ಕುಮಾರ್,ರವೀಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು .

  • ಲೋಕಾಯುಕ್ತ ಆದೇಶ ಪಾಲಿಸುವಂತೆ KRS ಅಗ್ರಹ : ತಮ್ಮ ಆಸ್ತಿ ವಿವರಗಳನ್ನು ನೀಡದ ಸರ್ಕಾರಿ ನೌಕರರ ವಿರುದ್ಧ ತಮಟೆ ಚಳುವಳಿ ನಡೆಸಲು ಸಿದ್ಧತೆ

    ದೊಡ್ಡಬಳ್ಳಾಪುರ : ಸರ್ಕಾರಿ ಅಧಿಕಾರಿಗಳು/ನೌಕರರು ಈಗಾಗಲೇ ಜಾರಿಯಲ್ಲಿರುವ ನಿಯಮ ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಕೆಲಸವನ್ನು ಸರ್ಕಾರ ಮುಂದಿನ ಎರಡು ವಾರಗಳಲ್ಲಿ ಮಾಡದಿದ್ದರೆ ಸರ್ಕಾರಿ ಅಧಿಕಾರಿ/ನೌಕರರ ಕಚೇರಿ ಅಥವಾ ಮನೆಗಳ ಎದುರು KRS ಪಕ್ಷದ ಸೈನಿಕರು ತಮಟೆ ಚಳುವಳಿ ನಡೆಸಿ ಮುಖತಃ ಕಾನೂನು ಪಾಲನೆಯ ಪಾಠ ಮಾಡುವ ಮೂಲಕ ಸರ್ಕಾರಕ್ಕೆ ಮುಜುಗರ ತರುವ ಕೆಲಸಕ್ಕೆ ಮುಂದಾಗಬೇಕಾಗುತ್ತದೆ ಎಂದು ಕೆ ಆರ್ ಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ ತಿಳಿಸಿದ್ದಾರೆ.

    ಈ ಕುರಿತು ನಗರದ ಕೆ ಆರ್ ಎಸ್ಪಕ್ಷದ ಕೇಂದ್ರ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ನೌಕರರು ತಮ್ಮ ಆಸ್ತಿ ವಿವರವನ್ನು ಕಾಲಕಾಲಕ್ಕೆ ಸಾರ್ವಜನಿಕರಿಗೆ ತಿಳಿಯುವಂತೆ ಬಹಿರಂಗಗೊಳಿಸುವ ಕ್ರಮವನ್ನು ಕಟ್ಟುನಿಟ್ಟಾಗಿ ಸರ್ಕಾರಕ್ಕೆ ಜಾರಿ ಮಾಡಬೇಕಿದೆ. ಕೆಪಿಎಸ್ಸಿ ಸೇರಿದಂತೆ ಯಾವುದೇ ಸರ್ಕಾರಿ ನೇಮಕಾತಿಗಳನ್ನು ಪಾರದರ್ಶಕವಾಗಿ ನಡೆಸಲು ಎಲ್ಲಾ ಸರ್ಕಾರಗಳು ವಿಫಲವಾಗುತ್ತಿದ್ದು ಸರ್ಕಾರಿ ನೌಕರಿಗಳು ಹಣಕ್ಕೆ ಮಾರಾಟವಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ, ಭ್ರಷ್ಟಾಚಾರ ಮಾಡಲೆಂದೇ ಕೆಲವು ಶ್ರೀಮಂತರು ಲಂಚಕೊಟ್ಟು ಸರ್ಕಾರಿ ಕೆಲಸ ಪಡೆದುಕೊಳ್ಳುತ್ತಿರುವ ಇವತ್ತಿನ ಸಂದರ್ಭದಲ್ಲಿ ಸರ್ಕಾರಿ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಹಲವು ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಬೇಕಿವೆ ಎಂದರು.

     

     

    ಅಕ್ರಮ ಆಸ್ತಿ ಗಳಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಸದಸ್ಯರೂ ಸೇರಿದಂತೆ ರಾಜ್ಯದ ಎಲ್ಲಾ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂಬ ನಿಯಮ ಜಾರಿಯಲ್ಲಿದೆ. ಮುಂದುವರೆದು ರಾಜ್ಯ ಲೋಕಾಯುಕ್ತರು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ/ನೌಕರ ತನ್ನ ಆಸ್ತಿ ವಿವರವನ್ನು ಸಾರ್ವಜನಿಕ ಪೋರ್ಟಲ್ ಅಲ್ಲಿ ಅಪ್ಲೋಡ್ ಮಾಡುವ ಮೂಲಕ ಬಹಿರಂಗ ಪಡಿಸಬೇಕೆಂದು ಆದೇಶ ಹೊರಡಿಸಿರುವುದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಒಳ್ಳೆಯ ಕ್ರಮ ಆದರೆ ಸರ್ಕಾರಿ ಅಧಿಕಾರಿಗಳು ಯಾವುದೇ ರೀತಿಯ ಆದೇಶಗಳನ್ನು ಪಾಲಿಸುತ್ತಿಲ್ಲ ಎಂಬುದೇ ವಿಪರ್ಯಾಸ ಎಂದರು.

     

     

    ಸರ್ಕಾರಿ ನೌಕರರ/ ಅಧಿಕಾರಿಗಳ ಆಸ್ತಿ ಮೇಲೆ ಕಣ್ಣಿಟ್ಟು ಅವರು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವ ಹಕ್ಕು ಸರ್ಕಾರಕ್ಕೆ ತೆರಿಗೆ ಕಟ್ಟುವ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇರುತ್ತದೆ. ಈ ದೃಷ್ಟಿಯಲ್ಲಿ ನೋಡುವುದಾದರೆ ಈಗ ಲೋಕಾಯುಕ್ತ ಹೊರಡಿಸಿರುವ ಆದೇಶ ಸರಿ ಇದ್ದು ಅದನ್ನು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪಾಲನೆ ಮಾಡುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಎಂದರು.

     

    ಈಗಾಗಲೇ ಇರುವ ನಿಯಮ ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಕೆಲಸವನ್ನು ಸರ್ಕಾರ ಮುಂದಿನ ಎರಡು ವಾರಗಳಲ್ಲಿ ಸೂಕ್ತ ಕ್ರಮಗಳೊಂದಿಗೆ ಕೈಗೊಳ್ಳಲಿ ಎಂಬುದೇ ನಮ್ಮ ಆಶಯ ಇಲ್ಲವಾದಲ್ಲಿ ಪ್ರತಿಭಟನೆ ಮೂಲಕ ಉತ್ತರ ನೀಡಲಾಗುವುದು ಎಂದರು

     

    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ವೇಣು, ಜಿಲ್ಲಾ ಪದಾಧಿಕಾರಿಗಳಾದ ಶ್ರೀ ಲೀಲಾ ರಾಮ್, ತಾಲೂಕು ಅಧ್ಯಕ್ಷರಾದ ನಾಗರಾಜ್, ಉಪಾಧ್ಯಕ್ಷರಾದ ಶ್ರೀನಿವಾಸ್, ಕಾರ್ಯದರ್ಶಿ ಮುರಾರಿ, ಮಹಿಳಾ ಘಟಕದ ಅಧ್ಯಕ್ಷರಾದ ರಂಜಿತಾ, ಲಲಿತಾ, ಮಂಜುಳಾ, ದೊಡ್ಡಬಳ್ಳಾಪುರ ಕಾರ್ಮಿಕ ಘಟಕದ ಅಧ್ಯಕ್ಷರಾದ ಫರುಕ್, ಮೌಲ, ವಿಜಯ್, ಹೇಮಂತ್ ಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಕೆ ಎಸ್ ಪಕ್ಷದ ಸೇನಾನಿಗಳು ಉಪಸ್ಥಿತರಿದ್ದರು.