Blog

  • ವಿಧಾನಸೌಧದ ಆವರಣದಲ್ಲಿ ಜನವರಿ 27ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಭುವನೇಶ್ವರಿ ಕಂಚಿನ‌ ಪ್ರತಿಮೆ ಅನಾವರಣ

    ಬೆಂಗಳೂರು, ಜನವರಿ24:-ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ನಿರ್ಮಿಸಲಾಗಿರುವ 25 ಅಡಿ ಎತ್ತರದ ಭುವನೇಶ್ವರಿ ಕಂಚಿನ ಪ್ರತಿಮೆ ಜನವರಿ 27 ರಂದಿ ನಿತ್ಯ ಆರ್ಚನೆ ನೆರವೇರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ವಿಕಾಸಸೌಧದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ ಹಾಗೂ ಉಸಿರಾಗಲಿ’ ಕನ್ನಡ ಎಂಬ ಶೀರ್ಷಿಕೆಯಡಿ ವರ್ಷವಿಡೀ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಅದರಂತೆ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿತ್ತು. ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಜನವರಿ 27ರಂದು ಸಂಜೆ 4.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.ಈ ಹಬ್ಬದ ವಾತಾವರಣದಲ್ಲಿ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಪಾಲ್ಗೊಳ್ಳಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಮನವಿ ಮಾಡಿದರು.

     

    ಸ್ಥಳೀಯ ಬಿಬಿಎಂಪಿಯನ್ನು ಮೆರವಣಿಗೆಗೆ ಬಳಸಿಕೊಳ್ಳಲಾಗಿದ್ದು, ಅಂದು ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳನ್ನು ಕನ್ನಡದ ಧ್ವಜ ಹಾರಾಡಲಿದೆ. ಉಚಿತವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡದ ಧ್ವಜವನ್ನು ವಿತರಿಸಲಾಗುವುದು ಎಂದರು.‌

    *ಹೊಯ್ಸಳ ಶೈಲೀಯ ಪೀಠ ನಿರ್ಮಾಣ*

     

    ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ‌. ಮುಂಭಾಗದಲ್ಲಿ‌ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ. ಕರ್ನಾಟಕದ ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಹೊಯ್ಸಳ, ಚಾಲುಕ್ಯ ಕದಂಬ ಹಾಗೂ ಆಧುನೀಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ರಾಜಲಾಂಛನಗಳಾದ ಹೊಯ್ಸಳ ಲಾಂಛನ, ವೈಜಯಜಯಂತಿ ಮಾಲೆ, ಕಂಠಿಹಾರ, ಗಂಡ ಭೇರುಂಡ ಇರಲಿದೆ. ನಾವು ಅದುಕೊಂಡಕ್ಕಿಂತ ಚೆನ್ನಾಗಿ ಪ್ರತಿಮೆ ಮೂಡಿ ಬಂದಿದೆ ಎಂದು ಸಚಿವರು ಹೇಳಿದರು.

     

    ಪ್ರತಿಮೆಯ ಸುತ್ತಲೂ ಉದ್ಯಾನವನ, ಆವರಣದ ಸುತ್ತಲೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮದ ದ್ವಾರಕ್ಕೆ ಇರುವ ನಾಡದೇವಿ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕೆಂದೇ ಪಶ್ಚಿಮಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ಇರಲಿದೆ ಎಂದರು.

     

    ಪ್ರತಿಮೆ ಅನಾವರಣದ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ 4 ದಿಕ್ಕುಗಳಿಂದ ಮೆರವಣಿಗೆ ಆಗಮಿಸಲಿದ್ದು, ಜ್ಞಾನಪೀಠ ಪುರಸ್ಕೃತರು ಹಾಗೂ ನಾಡಿನ ಹೆಸರಾಂತ ಮಹನೀಯರ ಫೋಟೋಗಳನ್ನು ಇಡಲಾದ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಲಿದೆ.

     

    *ಪೂರ್ವ ದಿಕ್ಕಿನಿಂದ (ಇಂದಿರಾ ನಗರ ):* ಪಂಪ, ರನ್ನ, ಪೊನ್ನ, ಜನ್ನ, ಸರ್‌.ಎಂ. ವಿಶ್ವೇಶ್ವರಯ್ಯ, ಸರ್‌ ಸಿ.ವಿ. ರಾಮನ್, ಸಿ.ಎನ್‌.ಆರ್‌. ರಾವ್, ಭೀಮ್‌ಸೇನ್‌ ಜೋಷಿ, ಡಾ. ರಾಜ್‌ಕುಮಾರ್‌, ಎಸ್.‌ ನಿಜಲಿಂಗಪ್ಪ, ಶ್ರೀ ಶಿವಕುಮಾರ ಸ್ವಾಮೀಜಿ‌, ದೇ. ಜವರೇಗೌಡ, ಡಾ. ವಿರೇಂದ್ರ ಹೆಗಡೆ, ಡಾ. ಪುನೀತ್‌ ರಾಜ್‌ಕುಮಾರ್ ಅವರ ಫೋಟೋವಿರುವ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಲಿದೆ.

     

    *ಪಶ್ಚಿಮ ದಿಕ್ಕು: (ಕೆಂಗೇರಿ ಉಪನಗರ ):* ಜ್ಞಾನಪೀಠ ಪ್ರಶಸ್ತಿ ಪುರಸ್ಕತರು ಹಾಗೂ ರಾಷ್ಟ್ರಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮಕಾರಂತ, ಮಾಸ್ತಿ ವೆಂಕಟೇಶ ಅಯ್ಯಾಂಗಾರ್‌, ವಿ‌.ಕೃ. ಗೋಕಾಕ್‌, ಡಾ. ಯು. ಆರ್.‌ ಅನಂತ ಮೂರ್ತಿ, ಡಾ. ಗಿರೀಶ್‌ ಕಾರ್ನಾಡ್‌, ಡಾ. ಚಂದ್ರಶೇಖರ ಕಂಬಾರ, ಮಂಜೇಶ್ವರ ಗೋವಿಂದ ಪೈ, ಡಾ. ಜಿ.ಎಸ್.‌ ಶಿವರುದ್ರಪ್ಪ ಅವರ ಫೋಟೋ ಮೆರವಣಿಗೆಯಲ್ಲಿ ಬರಲಿದೆ.

     

    *ಉತ್ತರ ದಿಕ್ಕು : (ಹೆಬ್ಬಾಳ)* ಈ ದಿಕ್ಕಿನಿಂದ

    ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಅರಸರು, ಗಂಗರು, ಮೈಸೂರು ರಾಜ್ಯರ ಲಾಂಛನ ಹಾಗೂ ಹಲ್ಮಿಡಿ ಶಾಸನದ ಪ್ರತಿರೂಪ ಇರಲಿದೆ.

     

    *ದಕ್ಷಿಣ ದಿಕ್ಕು : (ಬಸವನಗುಡಿ ಬುಲ್ ಟೆಂಪಲ್ )* ಇನ್ನು ದಕ್ಷಿಣ ದಿಕ್ಕಿನಿಂದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ, ಕನಕದಾಸರು, ಪುರಂದರದಾಸರು, ಸಂಚಿ ಹೊನ್ನಮ್ಮ, ದಾನ ಚಿಂತಾಮಣಿ ಅತ್ತಿಮಬ್ಬೆ, ಅಕ್ಕಮಹಾದೇವಿ, ಕುಮಾರವ್ಯಾಸ, ಸಂತ ಶಿಶುನಾಳ ಷರೀಫ, ರೆವರೆಂಡ್ ಎಫ್ ಕಿಟ್ಟೆಲ್, ಬಿ.ಎಲ್.‌ ರೈಸ್ ಅವರ ಪಲ್ಲಕ್ಕಿ ಬರಲಿದ್ದು, ನಾಲ್ಕು ದಿಕ್ಕುಗಳಿನಿಂದ ಮೆರವಣಿಗೆ ಸಾಗಿ ಅಂತಿಮವಾಗಿ ನಾಡದೇವಿ ಭುವನೇಶ್ವರಿ ಪ್ರತಿಮೆ ಇರುವ ವಿಧಾನಸೌಧದ ಬಳಿ ತಲುಪಲಿವೆ. ಅಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರತಿಯೊಂದು ದಿಕ್ಕಿನಲ್ಲಿ ಶಾಸಕರು ಮೆರವಣಿಗೆ ಚಾಲನೆ ನೀಡಲಾಗಿದ್ದು, ಹತ್ತಾರು ಕಲಾ ತಂಡಗಳು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

    ನಾಡದೇವಿ ಭುವನೇಶ್ವರಿ ಪ್ರತಿಮೆ ಅನಾವರಣದ ಬಳಿಕ ಕನ್ನಡ ಗೀತೆಗಳ ಕಾರ್ಯಕ್ರಮ ಮತ್ತು ಹೊನ್ನ ಬಿತ್ತೇವು – ನೃತ್ಯ ರೂಪಕ ಕಾರ್ಯಕ್ರಮ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ ಎಂದು ಸಚಿವರು ವಿವರಿಸಿದರು.

  • “ಕಿತ್ತೂರು ರಾಣಿ ಚೆನ್ನಮ್ಮ” ಹಾಗೂ “ವೀರ ಮಹಿಳೆ” ಪ್ರಶಸ್ತಿಗೆ ಅರ್ಜಿ ಆಹ್ವಾನ

    ಬೆಂ.ಗ್ರಾ.ಜಿಲ್ಲೆ :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅರ್ಹ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ, ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು “ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ” ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೈರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ “ವೀರ ಮಹಿಳೆ ಪ್ರಶಸ್ತಿ” ಎಂದು ಗುರುತಿಸಿ ಪ್ರಶಸ್ತಿ ನೀಡಲು ಮಹಿಳೆ ಹಾಗೂ ಸಂಸ್ಥೆಗಳ ಪ್ರಶಸ್ತಿಗಾಗಿ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

     

    ಆಸಕ್ತಿಯುಳ್ಳ ಸಂಸ್ಥೆ ಹಾಗೂ ವ್ಯಕ್ತಿಗಳುಅರ್ಜಿ ಪಡೆಯಲು ಅದನ್ನು ಸೂಕ್ತ ದಾಖಲಾತಿಯೊಂದಿಗೆ ಭರ್ತಿ ಮಾಡಿ ಫೆಬ್ರವರಿ 5 ರ ಒಳಗೆ ಕಛೇರಿಗೆ ಸಲ್ಲಿಸತಕ್ಕದ್ದು.

     

    ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ : 206, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕಛೇರಿ ದೂ: 080-29787445 ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಪೋಡಿ ಅಭಿಯಾನದಲ್ಲಿ ರಾಜ್ಯಕ್ಕೆ ಬೆಂ.ಗ್ರಾ ಜಿಲ್ಲೆ ಪ್ರಥಮ:ಸಚಿವ ಕೃಷ್ಣ ಭೈರೇಗೌಡ

    ಬೆಂ.ಗ್ರಾ.ಜಿಲ್ಲೆ, ಜ.24: ಕಳೆದ ಡಿಸೆಂಬರ್ ನಲ್ಲಿ ದರಖಾಸ್ತು ಪೋಡಿ ಅಭಿಯಾನ ಆರಂಭವಾಗಿ ರಾಜ್ಯದ್ಯಾಂತ ಇದುವರೆಗೂ ಅಂದಾಜು 5000 ಪೋಡಿ ದುರಸ್ತಿ ಆಗಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೂ 1236 ಪೋಡಿ ದುರಸ್ತಿ ಆಗಿದ್ದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಹೇಳಿದರು.

     

    ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಸಮೀಪ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆಯಡಿ ಸರಳೀಕರಣವಾದ ದರಖಾಸ್ತು ಪೋಡಿ ಅಭಿಯಾನದ ವಿದ್ಯುಕ್ತ ಚಾಲನೆ ಮತ್ತು ಪೋಡಿ ದುರಸ್ತಿ/ ಹೊಸ ದಾಖಲೆ ವಿತರಣಾ ಸಮಾರಂಭವನ್ನು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಉದ್ಘಾಟಿಸಿ ಮಾತನಾಡಿದರು.

     

    ಪೋಡಿ ದುರಸ್ತಿ ರೈತರ ಬಹುದೊಡ್ಡ ಸಮಸ್ಯೆ ಆಗಿತ್ತು. ಸರಳೀಕರಣ ಪೋಡಿ ಅಭಿಯಾನ ಕೈಗೊಳ್ಳಲು ಒಂದು ವರ್ಷಗಳ ಪೂರ್ವ ಸಿದ್ಧತೆ ನಡೆಸಿ ಕಳೆದ ಡಿಸೆಂಬರ್ ನಲ್ಲಿ ಚಾಲನೆ ನೀಡಲಾಯಿತು. ಕಳೆದ 50-60 ವರ್ಷಗಳ ಹಿಂದೆ ಮಂಜೂರಾದ ಜಮೀನುಗಳಿಗೆ ಈಗ ಪೋಡಿ ಮಾಡಲಾಗುತ್ತಿದೆ.

     

    ಜಿಲ್ಲೆಯಲ್ಲಿ ಅಂದಾಜು 50000 ರೈತರಿಗೆ ಜಮೀನು ಮಂಜೂರು ಆಗಿದ್ದು, 18000 ರೈತರ ಬಳಿ ಪೋಡಿ ದುರಸ್ತಿಗೆ ಪೂರಕ ದಾಖಲೆಗಳಿವೆ. ಜಿಲ್ಲೆಯಲ್ಲಿ ಈಗ ನಡೆಯುತ್ತಿರುವ ಪೋಡಿ ಅಭಿಯಾನದ ವೇಗ ನೋಡಿದರೆ ಕನಿಷ್ಟ 6 ತಿಂಗಳಲ್ಲಿ 18000 ರೈತರಿಗೆ ಪ್ರತ್ಯೇಕ ಪೋಡಿ ದುರಸ್ತಿ ಮಾಡಿಸಬಹುದು. ಪೂರಕ ದಾಖಲೆಗಳು ಇಲ್ಲದಿರುವ ಜಮೀನುಗಳಿಗೆ ಮಿಸ್ಸಿಂಗ್ ಕಮಿಟಿ ಮುಂದೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

     

    *ಭೂ ದಾಖಲೆಗಳ ಡಿಜಟಲೀಕರಣ*

     

    ಭೂ ದಾಖಲೆಗಳ ನಾಪತ್ತೆ, ಅಕ್ರಮ ವರ್ಗಾವಣೆ, ಅಕ್ರಮ ತಿದ್ದುಪಡಿ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. ಭೂ ಸುರಕ್ಷಾ ಯೋಜನೆಯಡಿ ರಾಜ್ಯದಲ್ಲಿರುವ ಎಲ್ಲಾ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ಲೈನ್ ಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮನೆಯಲ್ಲಿ ಕೂತು ನಿಮ್ಮ ಜಮೀನುಗಳ ದಾಖಲೆಗಳನ್ನು ನೋಡಬಹುದಾಗಿದೆ. ಇದರಿಂದ ಪೋಡಿ ದುರಸ್ತಿಗೂ ಸಹಾಯವಾಗುತ್ತದೆ ಎಂದರು.

     

    ಜಿಲ್ಲೆಯಲ್ಲಿ ಪೋಡಿ ದುರಸ್ತಿ ಆಂದೋಲನಕ್ಕೆ ಹೆಚ್ಚು ಒತ್ತು ನೀಡಿ ರಾಜ್ಯದಲ್ಲಿ ಪ್ರಥಮ ಸ್ಥಾನ ಬರಲು ಕಾಣಿಭೂತರಾದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳ, ಸರ್ವೆ ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಇದೇ ವೇಗ ಕಾಪಾಡಿಕೊಂಡು ಆದಷ್ಟು ಬೇಗ 18000 ಪೋಡಿ ಗಳನ್ನು ಶೀಘ್ರ ದುರಸ್ತಿಗೊಳಿಸಿ ಎಂದರು.

     

    ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಿ ಸಾಕಷ್ಟು ವರ್ಷಗಳು ಕಳೆದರೂ ಇದುವರೆಗೂ ಪೋಡಿ ಆಗಿರಲಿಲ್ಲ. ಈಗ ನಮ್ಮ ಸರ್ಕಾರ ಕೈಗೆತ್ತಿಕೊಂಡು ವಿಶೇಷ ಅಭಿಯಾನದ ಮೂಲಕ ದರಖಾಸ್ತು ಪೋಡಿ ದುರಸ್ತಿ ಮಾಡಲಾಗುತ್ತಿದೆ ಇದಕ್ಕಾಗಿ ಕಂದಾಯ ಸಚಿವರಿಗೆ ಧನ್ಯವಾದಗಳು.

     

    ಬಯಲು ಸೀಮೆ ಪ್ರದೇಶಗಳಲ್ಲಿ ಸಾಕಷ್ಟು ಜೀವಂತ ಕೆರೆಗಳಿದಾವೆ ಕೆರೆಗಳಲ್ಲಿ ಮಣ್ಣು ಹೂಳೆತ್ತುವ ಕೆಲಸ ಆಗಬೇಕು. ಕೆರೆಗಳಲ್ಲಿ ಹೂಳೆತ್ತುವುದರಿಂದ ಬಾವಿ, ಕೊಳವೆ ಬಾವಿಗಳಲ್ಲಿ ನೀರು ಬಂದು ರೈತರ ಬದುಕು ಹಸನಾಗುತ್ತದೆ ಎಂದರು.

     

    *ರೈತರ ಜಮೀನುಗಳಿಗೆ, ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಿ*

     

    ರೈತರು ಕಚೇರಿಗೆ ಬರುವುದನ್ನು ತಪ್ಪಿಸಿ, ಸರ್ಕರ ರೈತರ ಮನೆ ಬಾಗಿಲಿಗೆ ತಲುಪಬೇಕು ಎಂಬುದು ನನ್ನ ಅಭಿಪ್ರಾಯ. ಜಿಲ್ಲಾಡಳಿತ ಬಹಳ ಉತ್ತಮ ಕೆಲಸ ಮಾಡುತ್ತಿದೆ. ಬಡವರಿಗೆ ಮನೆ, ನಿವೇಶನ ಕೊಡುವಂತಹ ಕೆಲಸ ಆಗಬೇಕು. ಸಾಕಷ್ಟು ರೈತರು ಜಮೀನುಗಳಿಗೆ ತೆರಳಲು ರಸ್ತೆ ಇಲ್ಲ, ಕನಿಷ್ಟ 10 ಗುಂಟೆ ಜಮೀನು ಇದ್ದರು ರಸ್ತೆ ಕಲ್ಪಿಸಬೇಕು. ಸ್ಮಶಾನ ಇಲ್ಲದ ಗ್ರಾಮಗಳಿಗೆ ಸ್ಮಶಾನ ಒದಗಿಸಬೇಕು. ಇವೆಲ್ಲವನ್ನೂ ಈಡೇರಿಸಿದಾಗ ಮಾತ್ರ ಪೋಡಿ ಮುಕ್ತ ಗ್ರಾಮಗಳು ಸಾಧ್ಯ. ಈ ಸಮಸ್ಯೆಗಳನ್ನು ಸಹ ಆದ್ಯತೆ ಆಗಿ ತೆಗೆದುಕೊಂಡು ಪೋಡಿ ಅಭಿಯಾನದಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

     

    *1236 ಪೋಡಿ ದುರಸ್ತಿ ಪೂರ್ಣ: ಜಿಲ್ಲಾಧಿಕಾರಿ*

     

    ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ ಅವರು ಮಾತನಾಡಿ ಪೋಡಿ ಮಾಡಿಸಿಕೊಳ್ಳದೇ ಹಲವು ರೈತರು ವ್ಯಾಪಾರ, ವ್ಯವಹಾರ, ಸೌಲಭ್ಯ ವಂಚಿತರಾಗುತ್ತಿದ್ದರು. ಸರ್ಕಾರವು ದರಖಾಸ್ತು ಪೋಡಿ ವಿಶೇಷ ಆಂದೋಲನ ಕೈಗೆತ್ತಿಕೊಂಡು ಹಲವು ವರ್ಷಗಳ ರೈತರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ. ಹಿಂದೆ ಪೋಡಿ ಮಾಡಲಿಕ್ಕೆ ಹಲವಾರು ಸಮಸ್ಯೆ ಬರುತ್ತಿತ್ತು ಈಗ ಅದನ್ನು ಸುಲಭ ರೀತಿಯಲ್ಲಿ ಪೋಡಿ ಮಾಡಿಸಿಕೊಳ್ಳಬಹುದಾಗಿದೆ. ಕಳೆದ ಒಂದುವರೆ ತಿಂಗಳಲ್ಲಿ ನಮ್ಮ ಜಿಲ್ಲೆಯಲ್ಲಿ 1236 ಪೋಡಿಗಳನ್ನು ಮಾಡಲಾಗಿದೆ, ಜಿಲ್ಲೆಯ 70 ಗ್ರಾಮಗಳ 90 ಸರ್ವೆ ನಂಬರ್ ಗಳಲ್ಲಿ ಸರ್ವೆ ನಡೆಸಿ ದೊಡ್ಡಬಳ್ಳಾಪುರ 304,ಹೊಸಕೋಟೆ 301, ನೆಲಮಂಗಲ 302, ದೇವನಹಳ್ಳಿ 329 ಪೋಡಿ ದುರಸ್ತಿ ಮಾಡಲಾಗಿದೆ. ಸಮರೋಪಾದಿಯಲ್ಲಿ ಕೆಲಸ ಕಾರ್ಯ ನಿರ್ವಹಿಸಿದ್ದ ಎಲ್ಲಾ ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸಿದರು.

     

    ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷರು ಹಾಗೂ ಹೊಸಕೋಟೆ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ, ವಿಧಾನ ಪರಿಷತ್ತಿನ ಶಾಸಕರಾದ ರವಿ, ನೆಲಮಂಗಲ ಶಾಸಕರಾದ ಶ್ರೀನಿವಾಸ, ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಭೂ ಮಾಪನ ಇಲಾಖೆಯ ಆಯುಕ್ತರಾದ ಮಂಜುನಾಥ್, ಕಂದಾಯ ಇಲಾಖೆ ಆಯುಕ್ತರಾದ ಪೆಮ್ಮಲ ಸುನೀಲ್ ಕುಮಾರ್, ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ, ಬಯಪ ಅಧ್ಯಕ್ಷರಾದ ಶಾಂತಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ಜಿಲ್ಲೆಯ ಜನಪ್ರತಿನಿಧಿಗಳು, ಸ್ಥಳಿಯ ಮುಖಂಡರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

  • ಜಿಲ್ಲಾಡಳಿತ ಭವನದಲ್ಲಿ ಸಂಸದರ ಕಛೇರಿ ಆರಂಭ

    ಬೆಂ.ಗ್ರಾ. ಜಿಲ್ಲೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಸಂಸದರ ಕಛೇರಿಗೆ ಸಂಸದ ಡಾ.ಕೆ ಸುಧಾಕರ್ ಪೂಜೆ ಸಲ್ಲಿಸುವ ಮೂಲಕ ಕಾರ್ಯಾಲಯಕ್ಕೆ ಚಾಲನೆ ನೀಡಿದರು.

     

    ನಂತರ ಮಾತನಾಡಿದ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರ ಕೆಲಸಗಳು ಸುಗಮವಾಗಿ ಸಾಗಲು ಕಛೇರಿ ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದರು.

     

    ಕಲಾಪಕ್ಕೆ ಭಾಗವಹಿಸುವ ದಿನಗಳನ್ನು ಹೊರತುಪಡಿಸಿ, ಪ್ರತಿ ಸೋಮವಾರ ಅರ್ಧ ದಿನ ಈ ಕಛೇರಿಯಲ್ಲಿ ಲಭ್ಯವಿರುತ್ತೇನೆ. ಉಳಿದಂತೆ ನನ್ನ ಆಪ್ತ ಸಹಾಯಕರು ಪ್ರತಿದಿನ ಕಛೇರಿಯಲ್ಲಿ ಲಭ್ಯವಿದ್ದು ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದರು.

  • ಖ್ಯಾತ ಜ್ಯೋತಿಷಿ ಎನ್ ಕೃಷ್ಣರವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ ವರ್ಲ್ಡ್ ಬುಕ್ ರೆಕಾರ್ಡ್ಸ್

    ದೊಡ್ಡಬಳ್ಳಾಪುರ : ಶ್ರೀಲಂಕಾ ಮೂಲದ ವರ್ಲ್ಡ್ ಬುಕ್    ರೆಕಾರ್ಡ್ ಸಂಸ್ಥೆಯು ತಾಲೂಕಿನ ಕೊನಘಟ್ಟ ಗ್ರಾಮದ ಜ್ಯೋತಿಷಿ ಎನ್,ಕೃಷ್ಣ ರವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

    ಸತತ ಐದು ವರ್ಷಗಳ ಕಾಲ ನಿರಂತರ ಜ್ಯೋತಿಷ್ಯಶಾಸ್ತ್ರ ಅಭ್ಯಾಸ ಮಾಡಿರುವ ಕೊನಘಟ್ಟ ಎನ್ ಕೃಷ್ಣರವರಿಗೆ ಈ ಗೌರವ ಡಾಕ್ಟರ್ ಲಭಿಸಿದ್ದು, ಸ್ನೇಹಿತರು, ಹಿತೈಷಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

     

    ಈ ಕುರಿತು ಜ್ಯೋತಿಷಿ ಎನ್. ಕೃಷ್ಣ ಮಾತನಾಡಿ ಜ್ಯೋತಿಷ್ಯ ಶಾಸ್ತ್ರ ಎಂಬುದು ವೈಜ್ಞಾನಿಕವಾಗಿ ಗ್ರಹಗಳ ಚಲನೆಯನ್ನು ಆಧರಿಸಿ ಹೇಳುವುದಾಗಿದೆ , ಕೆಲ ಅಲ್ಪಜ್ಞಾನಿಗಳು ನೈಜ ಜ್ಯೋತಿಷ್ಯದ ಉದ್ದೇಶವನ್ನೇ ಬದಲಿಸಿದ್ದಾರೆ ಎಂದರೇ ತಪ್ಪಾಗಲಾರದು, ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯ ಎಂಬುದು ವಾಮಾಚಾರ, ಮೌಡ್ಯತೆಗಳಿಂದ ಕಲುಷಿತಗೊಂಡಿದೆ, ಸಂಪೂರ್ಣ ಜ್ಯೋತಿಷ್ಯ ಜ್ಞಾನ ಹೊಂದಿರುವವರು ಮಾತ್ರ ಸೂಕ್ತ ಹಾಗೂ ನಿಖರ ಜ್ಯೋತಿಷ್ಯ ಹೇಳಲು ಸಾಧ್ಯ , ಜ್ಯೋತಿಷ್ಯ ಎಂಬುದು ಭಯಪಡಿಸುವ ವಿಷಯವಲ್ಲ ಅದೊಂದು ಜ್ಞಾನ ಎಂದರು.

    ತಮ್ಮ ಬಾಲ್ಯದಿಂದಲೇ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅತಿಯಾದ ಕುತೂಹಲ ವಿದ್ದ ಕಾರಣ ನಿರಂತರ ಅಭ್ಯಾಸದಿಂದ ಇಂದು ಜ್ಯೋತಿಷ್ಯ ಪಾಂಡಿತ್ಯವನ್ನು ಪಡೆದು ಗೌರವ ಡಾಕ್ಟರೇಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ , ಈ ಸಾಧನೆ ಹಾದಿಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನಗೆ ಸಹಕರಿಸಿದ ಎಲ್ಲ ಹಿರಿಯರಿಗೆ ಸಹಪಾಠಿಗಳಿಗೆ ಸ್ನೇಹಿತರಿಗೆ ಹಾಗೂ ಹಿತೈಷಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

  • ಜಿಲ್ಲಾಧಿಕಾರಿಗಳ ಭೇಟಿ ಯಶಸ್ವಿ : ಜ. 26 ರ ಗಣರಾಜ್ಯೋತ್ಸವ ದಿನದಂದು ಕಪ್ಪು ಭಾವುಟ ಹಾರಿಸುವ ನಿರ್ಧಾರವನ್ನು ಹಿಂಪಡೆದ ಹೋರಾಟಗಾರರು.

    ಕೆರೆಗಳಿಗೆ ಹರಿಸುತ್ತಿರುವ ಕೊಳಚೆ ನೀರು ರಾಸಾಯನಿಕ ನೀರನ್ನು ನಿಲ್ಲಿಸಬೇಕು, ಎಂದು ಆಗ್ರಹಿಸಿ ಜನವರಿ 26ರಂದು ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳ ವಿರುದ್ಧ ಎರಡು ಪಂಚಾಯತಿಯ ಮನೆ ಮನೆಯ ಕಪ್ಪು ಬಾವುಟವನ್ನು ಹಾರಿಸಲು ನಿರ್ಧರಿಸಿದ್ದ ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿ ತನ್ನ ನಿರ್ಧಾರವನ್ನು ಹಿಂಪಡೆದಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

     

     

    ಮಜರಾ ಹೊಸಹಳ್ಳಿ ಮತ್ತು ದೊಡ್ಡ ತುಮಕೂರು ಗ್ರಾಮಸ್ಥರ ಹಾಗೂ ಹೋರಾಟಗಾರರ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಅತಿ ಶೀಘ್ರಗತಿಯಲ್ಲಿ ಕುಡಿಯುವ ನೀರು ವ್ಯವಸ್ಥೆ ಮಾಡಲಾಗುವುದು ಹಾಗೂ ಸರ್ವ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವ ಹಿನ್ನಲೆ ಜನವರಿ 26ರಂದು ಗ್ರಾಮಗಳ ಪ್ರತಿ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಲು ನಿರ್ಧರಿಸಿದ್ದ ಹೋರಾಟಗಾರರು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ.

     

     

    ಈ ಹಿಂದೆ ತಾಲೂಕು ದಂಡಾಧಿಕಾರಿಗಳಾದ ವಿದ್ಯ ವಿಭಾ ರಾಥೋಡ್ ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ನಡೆದಿದ್ದ ಸಭೆ ವಿಫಲಗೊಂಡ ಕಾರಣ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು ಹಾಗೂ ಹೋರಾಟಗಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

     

     

  • ಅಸಲಿ ಗಾಂಧಿಯವರ ಹಾಡಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವ ಕಾಂಗ್ರೆಸ್; ಹೆಚ್.ಡಿ.ಕುಮಾರಸ್ವಾಮಿ ಕಿಡಿ

    ನವದೆಹಲಿ: ನಕಲಿ ಗಾಂಧಿಗಳ ಪಕ್ಷ ಈಗ ಬೆಳಗಾವಿಯಲ್ಲಿ ಅಸಲಿ ಗಾಂಧಿಯವರ ಹಾಡಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.

     

    ನವದೆಹಲಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು; ರಾಜ್ಯದಲ್ಲಿ ಅತ್ಯಾಚಾರ, ದರೋಡೆಗಳು ನಡೆಯುತ್ತಿವೆ. ಅಪರಾಧಿ ಚಟುವಟಿಕೆಗಳು ಮಿತಿ ಮೀರಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಜನರಿಗೆ ಭದ್ರತೆ ಇಲ್ಲದಾಗಿದೆ ಎಂದು ಆರೋಪಿಸಿದರು.

     

    ಸರಕಾರದಲ್ಲಿ ಒಬ್ಬ ತಹಶಿಲ್ದಾರ್, ಉಪ ವಿಭಾಗಾಧಿಕಾರಿಯನ್ನು ನಿಯಂತ್ರಣ ಮಾಡುವುದು ಇವರಿಗೆ ಆಗುತ್ತಿಲ್ಲ. ಕಾನೂನು ಸುವ್ಯವಸ್ಥೆ ಮೇಲೆ ನಿಯಂತ್ರಣ ಇಲ್ಲ. ಕಾಂಗ್ರೆಸ್ಸಿನವರು ಕರ್ನಾಟಕವನ್ನು ಸಂಪೂರ್ಣ ಮುಗಿಸಲಿಕ್ಕೇ ಬಂದಿದ್ದಾರೆ. ಇದೇನಾ ಗಾಂಧಿ ತತ್ವದ ಆಡಳಿತ ಸಿದ್ದರಾಮಯ್ಯನವರೇ..? ಎಂದು ಕೇಂದ್ರ ಸಚಿವರು ಗುಡುಗಿದರು.

     

    ರಾಜ್ಯದಲ್ಲಿ ಗರ್ಭಿಣಿಯರ ಸಾರಾಣಿ ಸಾವಿನ ಪ್ರಕರಣಗಳ ವಾಸ್ತವಾಂಶವನ್ನು ಜನರ ಮುಂದೆ ಇಟ್ಟಿಲ್ಲ, ಯಾಕೆ? ಯಾಕೆ ಅಷ್ಟು ಜನ ತಾಯಂದಿರು, ನವಜಾತ ಶಿಶುಗಳು ಬಲಿಯಾದದ್ದು? ಇಲ್ಲಿಯೂ 40% ಕಮೀಶನ್ ಎನ್ನುವ ಮಾತು ಕೇಳಿ ಬರುತ್ತಿದೆ. ರಾಜ್ಯದ ಜನರ ತೆರಿಗೆ ಹಣವನ್ನು ಯಾವ ರೀತಿ ಬಳಕೆ ಮಾಡುತ್ತಿದ್ದೀರಿ? ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

     

    ಇ- ಖಾತಾ ಹೆಸರಲ್ಲೂ ಸರಕಾರ ಲೂಟಿ ಹೊಡೆಯುತ್ತಿದೆ. ರೇರಾ ಬಗ್ಗೆಯೂ ಜನ ಅನುಮಾನದಿಂದ ಮಾತಾಡುತ್ತಿದ್ದಾರೆ. ಈಗಿನ ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮ ಗಾಂಧೀಜಿ ಅವರ ಹೆಸರು ಹೆಜುವ ಯೋಗ್ಯತೆ ಇಲ್ಲ. ಈಗಿನ ಕಾಂಗ್ರೆಸ್ಸಿಗೂ ಸ್ವಾತಂತ್ರ್ಯಪೂರ್ವ ಕಾಂಗ್ರೆಸ್ಸಿಗರು ಪೂರ್ವ ಕಾಂಗ್ರೆಸ್ ಬೇರೆ ಇದೆ. ಇವರು ಮೊನ್ನೆ ಬೆಳಗಾವಿಯಲ್ಲಿ ನಡೆದು ಅರ್ಧಕ್ಕೆ ಅಂತ್ಯವಾಗಿದ್ದ ಅಧಿವೇಶನದ ಜಾಹೀರಾತಿನಲ್ಲಿ ಭಾರತದ ಕಳಸವಾದ ಜಮ್ಮು- ಕಾಶ್ಮೀರದ ಭೂಪಟವೇ ಇರಲಿಲ್ಲ. ಇಂಥ ಇವರು ದೇಶ ಜೋಡಿಸುವವರಾ? ಕಾಂಗ್ರೆಸ್ ಪಕ್ಷಕ್ಕೆ ಅಂತಿಮವಾದ ಚರಮಗೀತೆ ಕರ್ನಾಟಕದಲ್ಲಿ ಆಗುತ್ತದೆ, ನೋಡುತ್ತೀರಿ ಎಂದು ಸಚಿವರು ಕಿಡಿಕಾರಿದರು.

     

    ಹಿಂದಿನ ಸರಕಾರದ ಅವಧಿಯಲ್ಲಿ ಅತ್ಯಾಚಾರ ಪ್ರಕರಣಗಳು ಆಗಿಯೇ ಇರಲಿಲ್ಲವಾ? ಎಂದು ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಹೊಣೆಗೆಡಿತನದಿಂದ ಕೂಡಿದೆ. ಹಿಂದೆ ಅತ್ಯಾಚಾರ ಪ್ರಕರಣಗಳು ನಡೆದಿವೆ, ಈಗಲೂ ನಡೆಯಲಿ ಎನ್ನುವುದೇ ಅವರ ಭಾವನೆಯೇ? ಹಿಂದೆ ಆಗಿರುವ ಕೆಟ್ಟದ್ದನ್ನು ಸರಿಪಡಿಸುವುದು ಮುಖ್ಯವೇ ಹೊರತು ತಮ್ಮ ವೈಫಲ್ಯ ಮುಚ್ಚಿಕೊಳ್ಳುವುದಲ್ಲ. ಸಿಎಂ ಅಪರಾಧ ನಿಯಂತ್ರಣ ಮಾಡುವುದು ಬಿಟ್ಟು ಸಬೂಬು ಹೇಳುತ್ತಿದ್ದಾರೆ. ಇವರು ಎರಡನೇ ಬಾರಿ ಸಿಎಂ ಆಗಿದ್ದಾರೆ. ಗ್ಯಾಂಗ್ ರೇಪ್ ಪ್ರಕರಣಗಳ ಜತೆಗೆ ಕಾನೂನು ಸುವ್ಯವಸ್ಥೆ ಏನಾಗಿದೆ? ಆಡಳಿತ ಎಷ್ಟರ ಮಟ್ಟಿಗೆ ಕುಸಿದಿದೆ ಎಂದು ಹೇಳಲು ಸಾಧ್ಯವೇ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

     

    *ಗಾಂಧಿ ಹೆಸರು ಹೈಜಾಕ್ ಮಾಡಿದ್ದಾರೆ*

     

    ಬೆಳಗಾವಿ ಕಾಂಗ್ರೆಸ್ ಸಮಾವೇಶ ವಿಚಾರಕ್ಕೆ ಮಾತನಾಡಿದ ಕೇಂದ್ರ ಸಚಿವರು; ಬಾಪು, ಸಂವಿಧಾನ, ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್ ಈಗ ನೆನಪು ಮಾಡಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ಇವರು ಏನು ಸಾಧನೆ ಮಾಡಿದ್ದಾರೆ? ಗಾಂಧಿ ಅವರ ಹೆಸರು ಹೈಜಾಕ್ ಮಾಡಿದ್ದಾರೆ. ಗಾಂಧಿ ಕುಟುಂಬ ಎಂದರೆ ಮಹಾತ್ಮಾ ಗಾಂಧಿ ಕುಟುಂಬ ಅಲ್ಲ, ಇಂದಿರಾ ಗಾಂಧಿ ಅವರು ಬಂದ ಮೇಲೆ ಗಾಂಧಿ ಹೆಸರನ್ನು ಹೈಜಾಕ್ ಮಾಡಿದ್ದಾರೆ. ಈಗ ಇರುವವರು ಯಾರೂ ಗಾಂಧಿಗಳು ಅಲ್ಲ ಎಂದು ಸಚಿವರು ಕಿಡಿಕಾರಿದರು.

     

    *ದೇಶಕ್ಕೆ ಪ್ರಧಾನಿ ಮೋದಿ ಅವರ ಕೊಡುಗೆ ದೊಡ್ಡದು*

     

    ನಮ್ಮ ಸಂವಿಧಾನಕ್ಕೆ ಯಾರಿಂದ ಅಪಚಾರ ಆಗಿದೆ? ಎನ್ನುವುದು ದೇಶಕ್ಕೆ ಗೊತ್ತಿದೆ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಎಷ್ಟು ಹಿಂದೆ ಕೊಟ್ಟಿದೆ ಎನ್ನುವುದಕ್ಕೆ ಸುದೀರ್ಘ ಇತಿಹಾಸವಿದೆ. ಇವತ್ತು ನರೇಂದ್ರ ಮೋದಿ ಅವರ ಸರಕಾರ ಅಂಬೇಡ್ಕರ್ ಅವರ ಹೆಸರು ಚಿರಸ್ಥಾಯಿ ಆಗುವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

     

    *ಗಾಂಧೀಜಿಗೆ ಜಾಹೀರಾತು ಮೂಲಕ ಅಪಚಾರ:*

     

    ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧೀಜಿ ಮತ್ತು ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹಕ್ಕೆ ಅಪಚಾರ ಎಸಗಿದೆ. ಸತ್ಯಾಗ್ರಹದಲ್ಲಿ ಮಹಾತ್ಮರನ್ನು ಹಿಂಬಾಲಿಸಿದ್ದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಚಿತ್ರಗಳನ್ನು ತೆಗೆದು, ಆ ಚಿತ್ರವನ್ನು ತಿರುಚಿದೆ. ಮಹಾತ್ಮರ ಹಿಂದೆ ಸಿಎಂ, ಡಿಸಿಎಂ ಅವರು ಸತ್ಯಾಗ್ರಹದಲ್ಲಿ ಭಾಗಿ ಆಗಿದ್ದರು ಎನ್ನುವಂತೆ ತಿರುಚಿ ಪತ್ರಿಕೆಗಳಿಗೆ ಜಾಹೀರಾತು ನೀಡಲಾಗಿದೆ. ಇತಿಹಾಸವನ್ನು ಕಾಂಗ್ರೆಸ್ ಹೇಗೆ ತಿರುಚಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

     

    ಇವರು ಕೊಟ್ಟಿರುವ ಜಾಹೀರಾತಿನಂತೆ ಕಾಂಗ್ರೆಸ್ ನವರು ಯಾವ ಗಾಂಧಿ ತತ್ವ ಅನುಸರಿಸುತ್ತಿದ್ದಾರೆ? ಯಾವ, ಯಾರ ಆದರ್ಶ ಪಾಲನೆ ಮಾಡಲಾಗುತ್ತಿದ್ದಾರೆ? ಯಾವ ಗಾಂಧಿ ತತ್ವದ ಮೇಲೆ ಕರ್ನಾಟಕದಲ್ಲಿ ಆಡಳಿತ ನಡೆಯುತ್ತಿದೆ? ರಾಜ್ಯದಲ್ಲಿ ಆಡಳಿತವೇ ಕುಸಿದಿದೆ. ವಾಲ್ಮೀಕಿ ನಿಗಮ ಹಗರಣ, ಮೂಡಾ ಹಗರಣ.. ಎಷ್ಟು ಹಗರಣಗಳ ಪಟ್ಟಿ ಬೇಕು? ಇದಾ ಆಡಳಿತ? ಎಂದು ಅವರು ಆರೋಪಿಸಿದರು.

     

  • *ಜಿಲ್ಲಾಡಳಿತ ಭವನದಲ್ಲಿ ವೇಮನ ಜಯಂತಿ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಆಚರಣೆ*

    ಬೆಂಗಳೂರು ಗ್ರಾಮಾಂತರ ,‌ ಜನವರಿ 21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಮಹಾಯೋಗಿ ವೇಮನ ಜಯಂತಿ ಹಾಗೂ ವಚನಕಾರ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಇಂದು ಸರಳವಾಗಿ ಆಚರಿಸಲಾಯಿತು.

    ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ರಾಜೀವ್ ಸುಲೋಚನ, ಸಿಬ್ಬಂದಿ ಉಪಸ್ಥಿತರಿದ್ದರು.

  • ಹೊಳೆ ಮುತ್ತುರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ : ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ 50 ಸಾವಿರ ಮೊತ್ತದ ಡಿಡಿ ವಿತರಣೆ

    ದೊಡ್ಡಬಳ್ಳಾಪುರ: ತಾಲ್ಲೂಕಿನ ಹಾಲಪ್ಪನಹಳ್ಳಿ ಗ್ರಾಮದ ಹೊಳೆ ಮುತ್ತುರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ 50 ಸಾವಿರ ಮೊತ್ತದ ಡಿಡಿ ವಿತರಣೆ ಮಾಡಲಾಯಿತು.

     

    ತಾಲೂಕಿನ ಆರೂಢಿ ವಲಯದ ಕಾಡತಿಪ್ಪುರು ಕಾರ್ಯಕ್ಷೇತ್ರದ ಹಾಲಪ್ಪನಹಳ್ಳಿ ಗ್ರಾಮದ ಹೊಳೆ ಮುತ್ತುರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ್ದ ಐವತ್ತು ಸಾವಿರ ರೂಪಾಯಿಗಳ ಡಿಡಿ ಯನ್ನು ಕ್ಷೇತ್ರದ ಪರವಾಗಿ ತಾಲೂಕಿನ ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್ ದೇವಸ್ಥಾನ ಸಮಿತಿಗೆ ಹಸ್ತಾಂತರ ಮಾಡಿದರು.

     

    ಈ ಸಂದರ್ಭದಲ್ಲಿ ದೇವಸ್ಥಾನದ ಕಮಿಟಿ ಸದಸ್ಯರು,ವಲಯದ ಮೇಲ್ವಿಚಾರಕರಾದ ಸುಪ್ರೀತ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್ ಹಾಗೂ ಸೇವಾ ಪ್ರತಿನಿಧಿ ರಾಧಮ್ಮ, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

  • ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ : ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಹನುಮಂತಯ್ಯ.ಟಿ, ಉಪಾಧ್ಯಕ್ಷರಾಗಿ ಪದ್ಮಶ್ರೀ ಬೈರಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಅವಿರೋಧವಾಗಿ ಆಯ್ಕೆಯಾದ ನಂತರ ಪಂಚಾಯಿತಿ ಕಚೇರಿಯಿಂದ ಗ್ರಾಮದ ಪ್ರಮುಖ ವೃತ್ತದವರೆಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ಹೊರಟರು.ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಗಣ್ಯರು ಹೂಮಾಲೆ ಹಾಕಿ, ಸಿಹಿ ಹಂಚಿಕೊಂಡು, ಪಟಾಕಿ ಸಿಡಿಸಿ ಅಭಿನಂದಿಸಿದರು.

     

    ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 18 ಸದಸ್ಯರು ಇದ್ದು, ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರದ ಅವಧಿ ಒಂದು ವರ್ಷ ಇರಲಿದೆ,

     

    ನೂತನ ಅಧ್ಯಕ್ಷ ಹನುಮಂತಯ್ಯ.ಟಿ ಮಾತನಾಡಿ, ಸ್ಥಳೀಯ ಮುಖಂಡರ ಹಾಗೂ ಪಂಚಾಯಿತಿಯ ಸರ್ವ ಸದಸ್ಯರ ಸಹಕಾರದಿಂದ ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದೇನೆ, ಪಕ್ಷಾತೀತವಾಗಿ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಗ್ರಾಮಗಳಿಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.

     

    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆದ್ಯತೆಯ ಮೇರೆಗೆ ಅಭಿವೃದ್ಧಿ ಕೆಲಸ ಮಾಡಲಾಗುವುದು ಅಲ್ಲದೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲಾಗುವುದು ಎಂದರು.

     

    ನಂತರ ಉಪಾಧ್ಯಕ್ಷೆ ಪದ್ಮಶ್ರೀ ಬೈರಣ್ಣ ಮಾತನಾಡಿ, ನನ್ನನ್ನು ಉಪಾಧ್ಯಕ್ಷೆಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಚಿರ ಋಣಿಯಾಗಿರುತ್ತೇನೆ. ಒಗ್ಗಟ್ಟಿನಿಂದ ನಮ್ಮ ಇತಿಮಿತಿಯಲ್ಲಿ ಕೆಲಸ ಮಾಡಲು ಅವಿರತ ದುಡಿಯುತ್ತೇನೆ ಎಂದರು.

     

    ಬಿಜೆಪಿ ಹೋಬಳಿ ಮಂಡಲ ಅಧ್ಯಕ್ಷ ಗಂಗಾಧರ್ ಮಾತನಾಡಿ ಇಂದು ನೆಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಹನುಮಂತಯ್ಯಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪದ್ಮಶ್ರೀ ಬೈರೇಗೌಡ ಅವರನ್ನು ಸೂಚಿಸಿದ್ದೇವು ಸದರಿ ಸ್ಥಾನಗಳಿಗೆ ಬೇರೆಯವರು ಸ್ಪರ್ಧಿಸದ ಕಾರಣ ನಮ್ಮ ಪಕ್ಷದ ಅಭ್ಯರ್ಥಿಗಳನ್ನೇ ಅಂತಿಮವಾಗಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದರು.

    ಗ್ರಾಮ ಪಂಚಾಯಿತಿಗೆ ಬರುವ ಗ್ರಾಮಸ್ಥರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸುವಂತಾಗಲಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಉತ್ತಮ ಆಡಳಿತ ನೀಡುವ ಮೂಲಕ ಗ್ರಾಮ ಪಂಚಾಯಿತಿಗೆ ಮತ್ತಷ್ಟು ಉತ್ತಮ ಸೇವೆ ಸಲ್ಲಿಸಲಿ , ಸಕ್ರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯು ಅಭಿವೃದ್ಧಿಯ ಕಡೆ ದಾಪುಗಾಲು ಇಡುತ್ತಿದೆ ಈ ನೂತನ ಅವಧಿಯಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಸಾಗಲಿ ಎಂದು ಹಾರೈಸಿದರು.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.