Blog

  • ಜನವರಿ 05 ರಂದು ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ ಕಾರ್ಯಕ್ರಮ : ಬ್ರಹ್ಮರಥೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ದೊಡ್ಡಬಳ್ಳಾಪುರದ ಪ್ರಸಿದ್ಧ ಶ್ರೀ ಘಾಟಿ ಸುಬ್ರಮಣ್ಯಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಕಾರ್ಯಕ್ರಮವು ಜನವರಿ 05 ರಂದು ಜರುಗಲಿದ್ದು, ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯಲಿರುವ ಬ್ರಹ್ಮರಥೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     

    ಜನವರಿ 05 ರಂದು ಶ್ರೀ ಘಾಟಿ ಸುಬ್ರಮಣ್ಯ ದೇವಾಲಯದ ಬ್ರಹ್ಮರಥೋತ್ಸವ ನಡೆಯಲಿದೆ. ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

     

    ಡಿ.20 ರಿಂದ 30 ವರೆಗೆ ದನಗಳ ಜಾತ್ರೆ

    ಘಾಟಿ ದನಗಳ ಜಾತ್ರೆಗೆ ವಿವಿಧ ಭಾಗಗಳಿಂದ ಸಾಕಷ್ಟು ಜಾನುವಾರುಗಳು ಆಗಮಿಸಲಿದ್ದು ರಾಸುಗಳಿಗೆ ಕುಡಿಯುವ ನೀರು, ಮೇವು, ಲಸಿಕೆ, ದನಗಳ ಕಟ್ಟಿಹಾಕುವ ಶೆಡ್ ಗಳಿಗೆ ಸಮರ್ಪಕ ವಿದ್ಯುತ್ ಸಂಪರ್ಕ, ರೈತರಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಿ ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

     

    ಬ್ರಹ್ಮ ರಥೋತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಸೂಚನಾ ಫಲಕ ಅಳವಡಿಸುವ ಮೂಲಕ ವಾಹನ ದಟ್ಟಣೆ ಆಗದಂತೆ ಕ್ರಮ ವಹಿಸಿ ಎಂದರಲ್ಲದೆ, ಬ್ರಹ್ಮ ರಥೋತ್ಸವ ದಿನ ಹೆಚ್ಚುವರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಿ. ಸಾರ್ವಜನಿಕರು ಪಾರ್ಕಿಂಗ್ ಸ್ಥಳದಿಂದ ದೇವಾಲಯಕ್ಕೆ ತೆರಳಲು ಹಾಗೂ ಮರಳಲು ಉಚಿತ ವಾಹನ ವ್ಯವಸ್ಥೆ ಮಾಡಿ ಎಂದರು.

    ಸಾರ್ವಜನಿಕರಿಗೆ ಉಚಿತ ಊಟದ ವ್ಯವಸ್ಥೆ, ಕುಡಿಯುವ ನೀರನ್ನು ವ್ಯವಸ್ಥಿತವಾಗಿ ಪೂರೈಸಿ ಹಾಗೂ ಹೆಚ್ಚುವರಿಯಾಗಿ ತಾತ್ಕಾಲಿಕ ಶೌಚಾಲಯಗಳನ್ನು ಒದಗಿಸಿ ಎಂದು ಘಾಟಿ ದೇವಾಲಯದ ಅಧಿಕಾರಿಗಳಿಗೆ ಸೂಚಿಸಿದರು.

     

    ಪ್ಲಾಸ್ಟಿಕ್ ಬಳಕೆ ನಿಷೇಧ

     

    ಜಾತ್ರಾ ಮಹೋತ್ಸವದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ದೇವಾಲಯ ಆವರಣದಲ್ಲಿರುವ ಅಂಗಡಿ ಮಳಿಗೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ ಸಾರ್ವಜನಿಕರು ಕೂಡ ಪ್ಲಾಸ್ಟಿಕ್ ಬಳಸದಂತೆ ಜಿಲ್ಲಾಧಿಕಾರಿಯವರು ಮನವಿ ಮಾಡಿದರು.

     

    ದೇವಾಲಯದ ಸುತ್ತಮುತ್ತಲೂ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ನಗರಸಭೆಯಿಂದ ಪೌರಕಾರ್ಮಿಕರನ್ನು ನೇಮಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು. ತುರ್ತು ಆರೋಗ್ಯ ಚಿಕಿತ್ಸಾ ಕೇಂದ್ರ ಹಾಗೂ ಅಂಬುಲೆನ್ಸ್ ಸೇವೆ ಒದಗಿಸುವಂತೆ ಆರೊಗ್ಯಾಧಿಕಾರಿಗಳಿಗೆ ಸೂಚಿಸಿದರು. ಜಾತ್ರಾ ಮಹೋತ್ಸವದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು.

     

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಘಾಟಿ ಸುಬ್ರಮಣ್ಯ ದೇವಾಲಯದ ಆಡಳಿತಾಧಿಕಾರಿ ಅಮರೇಶ ಹೆಚ್, ಜಿ. ಪಂ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಡಿವೈಎಸ್ಪಿ ರವಿ, ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ದಿನೇಶ್, ದೊಡ್ಡಬಳ್ಳಾಪುರ ತಹಶೀಲ್ದಾರ್ ವಿಭಾವಿದ್ಯಾ ರಾಥೋಡ್, ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ. ನಾರಾಯಣಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ  ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಜಿ ಶಾಸಕ‌ ಜೆ.ನರಸಿಂಹಸ್ವಾಮಿ ನುಡಿನಮನ

    ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅವರಿಗೆ ನುಡಿನಮನ ಕಾರ್ಯಕ್ರಮ ಡಾ.ರಾಜ್ ಕಲಾಮಂದಿರದಲ್ಲಿ ನಡೆಯಿತು.

     

    ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ದೊಡ್ಡಬಳ್ಳಾಪುರ ತಾಲ್ಲೂಕಿನ ಅಭಿವೃದ್ದಿ ಕಾರ್ಯಗಳೊಂದಿಗೆ ಕನ್ನಡಪರವಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡುತ್ತಿದ್ದ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅವರು ಕನ್ನಡ ಸಾಹಿತಿಗಳು ಮತ್ತು ಕಲಾವಿದರೊಂದಿಗೆ ನಿಕಟಸಂಪರ್ಕ ಹೊಂದಿದ್ದರು. ಜ್ಞಾನಪೀಠ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರದೊಂದಿಗೆ ಆತ್ಮೀಯ ‌ಒಡನಾಟವಿತ್ತು.

     

    ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಡಪರ ಸಂಘಟನೆಗಳು ನಾಡು, ನುಡಿ, ಜಲ ಮುಂತಾದ ವಿಚಾರಗಳ ನಡೆಸುತ್ತಿದ್ದ ಸಭೆ, ಸಮಾರಂಭ ಮತ್ತು  ಪ್ರತಿಭಟನಾ ಕಾರ್ಯಕ್ರಮಗಳಲ್ಲೂ   ಜೆ.ನರಸಿಂಹಸ್ವಾಮಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಎಂದರು.

     

    ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಜೆ.ನರಸಿಂಹಸ್ವಾಮಿ ಅವರಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸಮಗ್ರ ಪರಿಚಯವಿತ್ತು. ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಸಂಪೂರ್ಣ. ಸಹಕಾರ ನೀಡುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲು ಜೆ.ನರಸಿಂಹಸ್ವಾಮಿ  ತಮ್ಮ ಪತ್ನಿ ಗಂಗಮ್ಮ ಅವರ ಹೆಸರಿನಲ್ಲಿ   ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿ ನಿಧಿ‌ ನೀಡಿದರು. ಶ್ರೀಮತಿ ಗಂಗಮ್ಮ ಜೆ.ನರಸಿಂಹಸ್ವಾಮಿ  ದತ್ತಿ    ಎಂಬ ಹೆಸರಿನಲ್ಲಿ  ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ‌ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

     

     

    ನುಡಿನಮನ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವ ಕಾರ್ಯದರ್ಶಿ ಜ್ಯೋತಿಕುಮಾರ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಪಿ.ಡಿ.ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ದೊಡ್ಡಬೆವಂಗಲ ಹೋಬಳಿ ಘಟಕದ ಅಧ್ಯಕ್ಷ ಸಿ.ಮುನಿವೀರಪ್ಪ, ಪ್ರತಿನಿಧಿ ಸಫೀರ್, ಹಣಬೆ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಾದ ಸಿ.ಅಣ್ಣಯ್ಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಕಲಾವಿದರಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ಕುಮಾರ್ ಮುಂತಾದವರು ಭಾಗವಹಿಸಿದ್ದರು.

  • ಸಕ್ಕರೆ ಗೊಲ್ಲಹಳ್ಳಿ ವಿ ಎಸ್ ಎಸ್ ಏನ್ ಬಿಜೆಪಿ ತೆಕ್ಕೆಗೆ : ಕಾಂಗ್ರೆಸ್- ಜೆಡಿಎಸ್ ಅಪವಿತ್ರ ಮೈತ್ರಿ ಎದುರು ಗೆದ್ದು ಬಿಗಿದ ಬಿಜೆಪಿ

    ದೊಡ್ಡಬಳ್ಳಾಪುರ : ಸಕ್ಕರೆ ಗೊಲ್ಲಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (ನಿ ) ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬಿಗಿದೆ. 11 ನಿರ್ದೇಶಕರ ಸ್ಥಾನಗಳಲ್ಲಿ ಬಿಜೆಪಿಯ 10ಸದಸ್ಯರು ನಿರ್ದೇಶಕರಾಗಿ ಚುನಾಯಿತರಾಗುವ ಮುಖಾಂತರ ಸಂಘದ ಅಧಿಕಾರಕ್ಕೆರಿದೆ.

     

    ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ವಿ ಎಸ್ ಎಸ್ ಏನ್ ಸಂಘದ ನಿರ್ದೇಶಕರ ಚುನಾವಣೆ ಡಿಸೆಂಬರ್ 14ರ ಶನಿವಾರದಂದು ನೆಡೆದಿದ್ದು, ಚುನಾವಣೆಯಲ್ಲಿ ಬಿಜೆಪಿಯ ಪಕ್ಷದಿಂದ ಅಪಣಪ್ಪ(

    246), ರವಿಶಂಕರ್ (222), ಲಕ್ಕಮ್ಮ (214), ಪುಟ್ಟರಂಗಮ್ಮ ( 236), ಹನುಮಂತಯ್ಯ (237),ರಮೇಶ್ ( 210), ಪುಟ್ಟೇಗೌಡ ( 208), ಸೋಮಶೇಖರ್ ( 221) ರಾಮಕೃಷ್ಣಯ್ಯ ( 268),ಮುನೇಗೌಡ (197), ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

     

    ಕಾಂಗ್ರೆಸ್ – ಜೆಡಿಎಸ್ ಕೇವಲ ಒಂದು ಸ್ಥಾನ ಪಡೆಯುವ ಮೂಲಕ ತೃಪ್ತಿಪಟ್ಟುಕೊಂಡಿದೆ.

  • ನಕಲಿ ದಾಖಲೆ ಸೃಷ್ಠಿಸಿ ಜಮೀನು ಕಬಳಿಕೆ ಆರೋಪ, ಪ್ರಶ್ನೆ ಮಾಡಿದಕ್ಕೆ ಪ್ರಾಣ ಬೆದರಿಕೆ

    ಯಲಹಂಕ : ನಕಲಿ ಜಮೀನು ಪತ್ರ ಸೃಷ್ಟಿಸಿ ನಮ್ಮ ಭೂಮಿಯನ್ನು ಕಬಳಿಸಿದ್ದಾರೆ ಈ ಕುರಿತು ಪ್ರಶ್ನೆ ಮಾಡಿದ ನಮ್ಮ ಮೇಲೆ ಹಲ್ಲೆ ನೆಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಸ್ಪಂದನೆ ಪೊಲೀಸ್ ಇಲಾಖೆಯಿಂದ ಸಿಕ್ಕಿಲ್ಲ, ನಮ್ಮ ಕುಟುಂಬಕ್ಕೆ ರಕ್ಷಣೆ ಹಾಗೂ ನ್ಯಾಯ ಕೊಡಿಸುವಂತೆ ದೂರುದಾರ ಹನಿಯೂರು ಶಾಂತಕುಮಾರ್ ತಿಳಿಸಿದ್ದಾರೆ.

     

     

    ಮಾಧ್ಯಮದೊಂದಿಗೆ ಮಾತನಾಡಿದ ಅವರು ನಮ್ಮ ಹನಿಯೂರು ಗ್ರಾಮದ ಸರ್ವೇ ನಂಬರ್ 84/16ರಲ್ಲಿ 0-08 ಗುಂಟೆ ಜಮೀನಿದ್ದು, ವಿಜಿಕುಮಾರ್ ಬಿನ್ ಸೀತಾರಾಮಯ್ಯ ಮತ್ತು ಆತನ ಹೆಂಡತಿ ವೆಂಕಮ್ಮ ಮತ್ತು ಈತನ(ವಿಜಿಕುಮಾರ್ )ಅತ್ತೆ ಗೊಪಮ್ಮ ರವರ ಹೆಸರಿಗೆ ಶುದ್ಧ ಕ್ರಯ ಮಾಡಿಸಿಕೊಂಡಿದ್ದಾರೆ ಎಂದು ಶಾಂತ ಕುಮಾರ್ ಆರೋಪಿಸಿದ್ದಾರೆ,

     

    ಈ ಕುರಿತು ದಿನಾಂಕ 08.10.2024 ರಂದು ಉಪನೊಂದಾಣಿಧಾರಿಗಳಿಗೆ ದೂರನ್ನು ನೀಡಿದ್ದು, ಸದರಿ ದೂರಿನ ಸೇಡನ್ನು ಇಟ್ಟುಕೊಂಡು ಅಂದಿನಿಂದ ನಮಗೆ ವಿಜಿಕುಮಾರ್ ಮತ್ತು ಕುಟುಂಬದವರು ತೊಂದರೆ ಕೊಡುತ್ತಿದ್ದಾರೆ ಎಂದರು, ನಮ್ಮ ವಿರುದ್ಧವೇ ಸುಳ್ಳು ದೂರನ್ನು ಸಹ ನೀಡಿದ್ದಾರೆ, ಇಷ್ಟೇ ಅಲ್ಲದೆ ವಿಜಿಕುಮಾರ್ ಕುಟುಂಬದ ಮಹಿಳೆಯರು ನಮ್ಮ ತೋಟದ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ, ಈ ಮೂಲಕ ನಮ್ಮ ವಿರುದ್ಧವೇ ಪ್ರಕರಣ ದಾಖಲಿಸುವ ಷಡ್ಯಂತ್ರವನ್ನ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.

     

     

    ಶಾಂತಕುಮಾರ್ ತಾಯಿ ವೀರಮ್ಮ ಮಾತನಾಡಿ, ಜಮೀನಿನ ವಿಚಾರದ ಸೇಡಿನಿಂದ ವಿಜಿಕುಮಾರ್ ಮತ್ತು ಕುಟುಂಬದ ಸದಸ್ಯರು ರಾತ್ರಿ ಸಮಯದಲ್ಲಿ ಮನೆಗೆ ಬಂದು ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನ್ನನ್ನು ಮತ್ತು ನಿನ್ನ ಮಗನನ್ನು ಸಾಯಿಸುತ್ತೇವೆಂದು ಬೆದರಿಕೆ ಹಾಕಿದ್ದಾರೆ ಮನೆಯಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಲು ಬಿಡುತ್ತಿಲ್ಲ ಆದ್ದರಿಂದ ವಿಜಿಕುಮಾರ್ ಹಾಗೂ ಸಂಬಂಧಪಟ್ಟವರನ್ನು ಠಾಣೆಗೆ ಕರೆಸಿ ಬುದ್ದಿ ಹೇಳುವ ಮೂಲಕ ಸೂಕ್ತ ಬಂದೋಬಸ್ತ್ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

     

     

  • ಪೆರ್ಲ್ ಗ್ಲೋಬಲ್ l ಶೇಕಡಾ 100ರಷ್ಟು ಹಾಜರಾತಿ ಹೊಂದಿದ ಕಾರ್ಮಿಕರಿಗೆ ವಿಶೇಷ ಬಹುಮಾನ : ಲಕ್ಕಿ ಡ್ರಾ ವಿಜೇತ ಕಾರ್ಮಿಕರಿಗೆ ಬೈಕ್, ಬಂಗಾರ, ಬೆಳ್ಳಿ ವಿತರಣೆ

    ದೊಡ್ಡಬಳ್ಳಾಪುರ : ತಾಲೂಕಿನ ಪೆರ್ಲ್ ಗ್ಲೋಬಲ್ ಕಾರ್ಖಾನೆ ವತಿಯಿಂದ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸುವ ಮೂಲಕ ಶೇಕಡಾ 100ರಷ್ಟು ಹಾಜರಾತಿ ಪಡೆಯುವಲ್ಲಿ ಯಶಸ್ವೀಯಾಗಿದೆ.

    ಹೌದು ಹಾಜರಾತಿ ಮತ್ತು ಹೊರಗುಳಿಯುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಕ್ಟೋಬರ್ 05 ರಿಂದ ಡಿಸೆಂಬರ್ 07ರವೆರೆಗೆ ಪೂರ್ಣ ಹಾಜರಾತಿ ಪಡೆದ ಕಾರ್ಮಿಕರಿಗೆ ರೇಷನ್ ಕಿಟ್ ನೀಡುವ ಮೂಲಕ ಪ್ರೋತ್ಸಹಿಸಿದ್ದಾರೆ,

    ಹಾಗೂ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಿನವರೆಗೆ ಯಾವುದೇ ರಜೆ ಪಡೆಯದೆ ಸಂಪೂರ್ಣ ಹಾಜರಾತಿ ಹೊಂದಿರುವ ಕಾರ್ಮಿಕರಿಗೆ ಲಕ್ಕಿ ಡ್ರಾ ಮೂಲಕ ಪ್ರಥಮ ಬಹುಮಾನವಾಗಿ 1,25,000 ಮೂಲ್ಯದ ಮೋಟಾರ್ ಬೈಕ್, ದ್ವಿತೀಯ ಬಹುಮಾನವಾಗಿ 25000 ರೂಪಾಯಿ ಮೌಲ್ಯದ 3 ಗ್ರಾಂ ಚಿನ್ನ, ತೃತೀಯ ಬಹುಮಾನವಾಗಿ 10, 000 ರೂಪಾಯಿ ಮೌಲ್ಯದ 100ಗ್ರಾಂ ಬೆಳ್ಳಿ ನೀಡಲಾಯಿತು.

    ಲಕ್ಕಿ ಡ್ರಾ ಮೂಲಕ ಪ್ರಥಮ ಬಹುಮಾನವನ್ನು ಕಾರ್ಖಾನೆಯ ಸಿಬ್ಬಂದಿ ಪ್ರಿಯಾಂಕ ಪಡೆದರೆ, ದ್ವಿತೀಯ ಬಹುಮಾನವನ್ನು ವಿನೋದ್, ತೃತೀಯ ಬಹುಮಾನವನ್ನು ಭಾರತಿ ಪಡೆದಿದ್ದಾರೆ.

     

    ಈ ಕುರಿತು ಸಂಸ್ಥೆಯ ಉಪಾಧ್ಯಕ್ಷ ಉದಯ್ ಶೆಟ್ಟಿ ಮಾತನಾಡಿ ಕಾರ್ಮಿಕರು ನಮ್ಮ ಕುಟುಂಬಸ್ಥರಿದ್ದಂತೆ, ನಾವೆಲ್ಲರೂ ಒಂದೇ ಕುಟುಂಬ ಈ ರೀತಿಯ ಪ್ರೋತ್ಸಾಹ ನೀಡುವ ಮೂಲಕ ಕಾರ್ಮಿಕರಲ್ಲಿ ಹೆಚ್ಚಿನ ಹಾಜರಾತಿ ಪಡೆಯುವುದರ ಜೊತೆಗೆ ನಮ್ಮಲ್ಲಿ ಕರ್ತವ್ಯ ಸಲ್ಲಿಸಲು ಮತ್ತಷ್ಟು ಹುಮ್ಮಸ್ಸು ದೊರೆತಂತಾಗುತ್ತದೆ, ನಮ್ಮಲ್ಲಿ ಸುಮಾರು 2500ಕ್ಕೂ ಅಧಿಕ ಉದ್ಯೋಗಿಗಳು ಕರ್ತವ್ಯ ನಿರ್ವಹಿಸುತ್ತಿದ್ದೂ, ಇಂದು 400ಕ್ಕೂ ಅಧಿಕ ಉದ್ಯೋಗಿಗಳು ಶೇಕಡಾ 100 ರಷ್ಟು ಹಾಜರಾತಿ ಪಡೆಡಿದ್ದಾರೆ, ಮುಂದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿ, ಪ್ರತಿ ಮೂರು ತಿಂಗಳಿಗೊಮ್ಮೆ ಸಂಸ್ಥೆಯ ವತಿಯಿಂದ ಈ ರೀತಿಯ ಹಾಜರಾತಿ ಹೆಚ್ಚಿಸುವ ಪ್ರೋತ್ಸಾಹ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು

    ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ಖಾನ್ ಮಾತನಾಡಿ ಇದೊಂದು ವಿಶೇಷ ಕಾರ್ಯಕ್ರಮ, ನಮ್ಮ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಅನುಕೂಲದ ಜೊತೆ ಜೊತೆಗೆ ಹಾಜರಾತಿ ಹೆಚ್ಚಿಸಲು ಉತ್ತಮ ಸಹಕಾರಿಯಾಗಿದೆ, ಕಾರ್ಖಾನೆಯಲ್ಲಿ ನಿಷ್ಠೆಯಿಂದ ರಜಾ ಪಡೆಯದೆ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಇಂದು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 1.25000ರೂ ಮೌಲ್ಯದ ಹೋಂಡಾ ಬೈಕ್, 25,000 ಮೌಲ್ಯದ ಬಂಗಾರ, 10,000 ಮೌಲ್ಯದ ಬೆಳ್ಳಿ ಬಹುಮಾನಗಳನ್ನು ಲಕ್ಕಿ ಡ್ರಾ ಮೂಲಕ ವಿತರಣೆ ಮಾಡಲಾಗುತ್ತಿದ್ದು, ಶೇಕಡ 100ರಷ್ಟು ಹಾಜರಾತಿ ಪಡೆದ ಪ್ರತಿ ಉದ್ಯೋಗಿಗಳಿಗೂ ರೇಷನ್ ಕಿಟ್ ನೀಡುವ ಮೂಲಕ ಪ್ರೋತ್ಸಾಹ ನೀಡಿದ್ದೇವೆ, ಮುಂದೆ ಮತ್ತಷ್ಟು ಉತ್ತಮ ಕಾರ್ಯಕ್ರಮವನ್ನು ಮಾಡುವ ಮೂಲಕ ಉದ್ಯೋಗಿಗಳನ್ನು ಶೇಕಡ 100 ರಷ್ಟು ಹಾಜರಾತಿ ಪಡೆಯುವಲ್ಲಿ ಪ್ರೋತ್ಸಾಹಿಸಲಾಗುವುದು ಎಂದರು.

    ಲಕ್ಕಿ ಡ್ರಾ ಮೂಲಕ ಪ್ರಥಮ ಬಹುಮಾನ ಪಡೆದ ಪ್ರಿಯಾಂಕಾ ಮಾತನಾಡಿ ಉತ್ತಮ ವಾತಾವರಣ ಹೊಂದಿರುವ ಪೆರ್ಲ್ ಗ್ಲೋಬಲ್ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುವುದೇ ಒಂದು ಸಂತಸದ ವಿಷಯವಾಗಿದೆ, ಈ ಹಿಂದೆ ಅಕ್ಟೋಬರ್ ನಲ್ಲಿ ಸಂಸ್ಥೆ ವತಿಯಿಂದ ಶೇಕಡ 100ರಷ್ಟು ಹಾಜರಾತಿ ಪಡೆದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು, ಆದರೆ ಇಂದು ಲಕ್ಕಿ ಡ್ರಾ ಮೂಲಕ ನನಗೆ ಬೈಕ್ ಸಿಕ್ಕಿರುವುದು ಸಂತಸ ತಂದಿದೆ, ಇದು ಮುಂದೆ ಮತ್ತಷ್ಟು ಉತ್ತಮ ಕರ್ತವ್ಯ ಸಲ್ಲಿಸಲು ಸಹಾಯಕವಾಗಿದೆ, ನಮ್ಮ ಹಾಜರಾತಿಯನ್ನು ಬಹುಮಾನ ವಿತರಣೆ ಮಾಡುವ ಮೂಲಕ ಸಂಭ್ರಮಿಸಿದ ಕಾರ್ಖಾನೆ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

     

    ದ್ವಿತೀಯ ಹಾಗು ತೃತೀಯ ಬಹುಮಾನ ಪಡೆದ ವಿನೋದ್ ಮತ್ತು ಭಾರತಿ ಮಾತನಾಡಿ ಇದು ನಿರೀಕ್ಷೆ ಇರಲಿಲ್ಲ, ಪರ್ಲ್ ಗ್ಲೋಬಲ್ ಸಂಸ್ಥೆಯು ಕಾರ್ಮಿಕರನ್ನು ಸ್ವಂತ ಮನೆಯ ಸದಸ್ಯರಂತೆ ನೋಡಿಕೊಳ್ಳುವುದು ವಿಶೇಷ ಶೇಕಡ 100 ರಷ್ಟು ಹಾಜರಾತಿ ಪಡೆದ ಪ್ರತಿಯೊಬ್ಬರಿಗೂ ರೇಷನ್ ಕಿಟ್ ವಿತರಣೆ ಮಾಡಲಾಗಿದೆ, ಜೊತೆಗೆ ಲಕ್ಕಿ ಡ್ರಾ ಮೂಲಕ ಇಂದು ನಮಗೆ ಬಂಗಾರ ಮತ್ತು ಬೆಳ್ಳಿ ದೊರೆತಿದ್ದು , ಈ ಕಾರ್ಯಕ್ರಮವು ಪ್ರತಿ ಉದ್ಯೋಗಿಯು ಶೇಕಡ 100ರಷ್ಟು ಹಾಜರಾತಿ ಪಡೆಯುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದರು.

     

     

    ಕಾರ್ಯಕ್ರಮದಲ್ಲಿ ಕಾರ್ಖಾನೆ ಸಿಬ್ಬಂದಿಗಳಾದ ವ್ಯವಸ್ಥಾಪಕ ವಿಜಯ್, ಮಾನವ ಸಂಪನ್ಮೂಲ ಅಧಿಕಾರಿ ಖಾನ್, ಅಮರ್,ಅಶೋಕ್, ಸತೀಶ್, ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

     

     

  • ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸುದ್ದಿಗೋಷ್ಠಿ : ರಾಜ್ಯದ ರೈತರಿಂದ ಡಿ. 13 ರಂದು ಸುವರ್ಣಸೌಧ ಮುತ್ತಿಗೆ ಕಾರ್ಯಕ್ರಮ

    ದೊಡ್ಡಬಳ್ಳಾಪುರ : ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸುವರ್ಣ ಸೌದ ಮುತ್ತಿಗೆ ಹಾಕಲಿದ್ದೇವೆ ಎಂದು ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪ್ರಸನ್ನ ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಚಳಿಗಾಲದ ಅಧಿವೇಶನದಲ್ಲಿ ರೈತರ ಸಮಸ್ಯೆಗಳನ್ನು ಕುರಿತು ಚರ್ಚಿಸದ ರಾಜ್ಯ ಸರ್ಕಾರದ ವಿರುದ್ಧ ಡಿಸೆಂಬರ್ 13 ರಂದು ರಾಜ್ಯದ ಹಲವು ಭಾಗದ ರೈತರು ಸುವರ್ಣಸೌಧ ಕ್ಕೆ ಮುತ್ತಿಗೆ ಹಾಕುವ ಮೂಲಕ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು

     

     

    ವಾಕ್ಫ್ ಬೋರ್ಡ್, ಬಗರ್ ಹುಕುಂ, ಸರ್ಕಾರಿ ದಾಖಲಾತಿಗಳನ್ನು ಪಡೆಯುವಲ್ಲಿ ರೈತರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ರಾಜ್ಯ ಸರ್ಕಾರಕ್ಕೆ ತಿಳಿಸುವ ನಿಟ್ಟಿನಲ್ಲಿ ಈ ಪ್ರತಿಭಟನೆಗೆ ಮುಂದಾಗಿದ್ದು ಈ ಪ್ರತಿಭಟನೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ರೈತರು ಪಾಲ್ಗೊಳ್ಳುತ್ತಿದ್ದಾರೆ ಎಂದರು.

     

    ತಾಲ್ಲೂಕು ಅಧ್ಯಕ್ಷ ಹನುಮೇಗೌಡ ಈ ಹಿಂದೆ 15 ತಿಂಗಳ ರೈತರ ನಿರಂತರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದು ಕಾಯಿದೆಗಳನ್ನು ಹಿಂಪಡೆದಿದೆ ಅದರೆ ರಾಜ್ಯ ಸರ್ಕಾರ ಇವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಕಾಯಿದೆ ಹಿಂಪಡೆದಿಲ್ಲ,ಬೆಳಗಾವಿ ಅಧಿವೇಶನದಲ್ಲಿ ಭೂ ಸುಧಾರಣೆ ಕಾಯಿದೆ ಯನ್ನು ಹಿಂಪಡೆಯುತ್ತೇವೆ ಎಂದು ಭರವಸೆ ನೀಡಿದ ರಾಜ್ಯ ಸರ್ಕಾರ ಮರೆತಿದೆ ಈ ಕುರಿತು ನಮ್ಮ ಹೋರಾಟ ಬೆಳಗಾವಿಯಲ್ಲಿ ನೆಡೆಯಲಿದೆ ಎಂದರು. ಅಭಿವೃದ್ದಿ ಹೆಸರಿನಲ್ಲಿ ಫಲವತ್ತಾದ ನೂರಾರು ಎಕ್ಕರೆ ಭೂ ಸ್ವಧೀನ ಪಡಿಸಿಕೊಳ್ಳಲಾಗುತ್ತಿದೆ, ರೈತರ ಬೆಂಬಲವಾಗಿ ನಿಲ್ಲಬೇಕಿದ್ದ ಸರಕಾರ ರೈತರ ಜೀವನಕ್ಕೆ ಮುಳುವಾಗುತ್ತಿರುವುದು ಸರಿಯಲ್ಲ ಎಂದರು.

     

    ಸುದ್ದಿಗೊಷ್ಟಿಯಲ್ಲಿ ನಾಗರಾಜು, ಟಿ ಜಿ ವಾಸುದೇವ್, ಸತೀಶ್, ಕೆ ಟಿ ಮಹದೇವ್ , ಆರ್. ಸತೀಶ್, ಮುನಿನಾರಾಯಣಪ್ಪ, ಕೇಶವ್ ಮೂರ್ತಿ, ಧನಂಜಯ, ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು

  • ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಾದ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ಮತ್ತು ವೃತ್ತಿಪರ ಸ್ನಾತಕೋತ್ತರ ಪದವಿಗಳಿಗೆ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ “ಶುಲ್ಕ ಮರುಪಾವತಿ” ಹಾಗೂ ‘’ಪ್ರವರ್ಗ-1ರ ಅಲೆಮಾರಿ/ ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ’’ಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 20ರ ವರೆಗೆ ಅವಧಿ ವಿಸ್ತರಿಸಲಾಗಿದೆ.

     

    ರಾಜ್ಯ ವಿದ್ಯಾರ್ಥಿವೇತನ ವೆಬ್ ಸೈಟ್ https://ssp.postmatric.karnataka.gov.in ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

     

    ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆ: 8050770005 ಅಥವಾ ಇ-ಮೇಲ್ ವಿಳಾಸ: bcwdhelpline@gmail.com ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ-100 ದಿನಗಳ ಆಂದೋಲನ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ಕ್ಷಯರೋಗ ಮಾರಣಾಂತಿಕ ಖಾಯಿಲೆ ಅಲ್ಲ, ಚಿಕಿತ್ಸೆ ಮೂಲಕ ಗುಣಪಡಿಸಬಹುದದಾದ ಒಂದು ರೋಗವಾಗಿದ್ದು ಕ್ಷಯರೋಗದ ಲಕ್ಷಣಗಳು ಕಂಡುಬಂದಲ್ಲಿ ಭಯಭೀತರಾಗದೇ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಿ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು ಹೇಳಿದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ-100 ದಿನಗಳ ವಿಷೇಶ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     

    ಜಿಲ್ಲೆಯನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ಷಯರೋಗಿಗಳ ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡುವಲ್ಲಿ ಕಾರ್ಯಪ್ರವ್ರತ್ತರಾಗಿದ್ದು, ಡಿಸೆಂಬರ್ 07 ರಿಂದ 2025 ರ ಮಾರ್ಚ್ 17 ವರೆಗೆ ಜಿಲ್ಲೆಯಾದ್ಯಂತ 100 ದಿನಗಳ ಆಂದೋಲನ ಹಮ್ಮಿಕೊಳ್ಳಲಾಗಿದೆ.

     

    ಈ ಆಂದೋಲನಕ್ಕೆ ಚುನಾಯಿತ ಜನ ಪ್ರತಿನಿಧಿಗಳ, ಟಿ.ಬಿ.ಚಾಂಪಿಯನ್ಸ್,(ಕ್ಷಯರೋಗದಿಂದ ಗುಣಹೊಂದಿರುವವರು) ನಿಕ್ಷಯ್ ಮಿತ್ರ(ಸ್ಥಳೀಯವಾಗಿ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಒದಗಿಸುವ ದಾನಿಗಳು), ಖಾಸಗಿ ಆರೋಗ್ಯ ಸಂಸ್ಥೆಗಳು, ಪಂಚಾಯತ್ ರಾಜ್ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಕಾರದ ಜೊತೆಗೆ ಆರೋಗ್ಯ ಸಿಬ್ಬಂದಿ ತಪಾಸಣೆಗಾಗಿ ಮನೆಗೆ ಬಂದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಸಿ.ಇ.ಒ ಮನವಿ ಮಾಡಿದರು.

     

    ಪ್ರಸ್ತುತ ದಿನಮಾನಗಳ ಕ್ಷಯರೋಗಕ್ಕೂ ಸೂಕ್ತ ಚಿಕಿತ್ಸೆ ಇದ್ದು, ಸಕಾಲದಲ್ಲಿ ಔಷದೋಪಚಾರ ಪಡೆದುಕೊಂಡು ಆರೋಗ್ಯವಂತರಾಗಬೇಕು. 2023-24 ರಲ್ಲಿ 8 ಗ್ರಾಮ ಪಂಚಾಯತಿಗಳನ್ನು ‘’ಕ್ಷಯಮುಕ್ತ ಗ್ರಾಮ ಪಂಚಾಯತಿ’’ ಎಂದು ಘೋಷಿಸಲಾಗಿದೆ. ಪ್ರಸಕ್ತ 2024-25 ನೇ ಸಾಲಿನಲ್ಲಿ 40 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡು ಮಾನದಂಡಗಳ ಅನ್ವಯ ಕಾರ್ಯರಂಭ ಮಾಡಲಾಗಿದೆ ಎಂದರು.

     

    ಜಿಲ್ಲಾ ಕ್ಷಯರೋಗ ನಿರ್ಮೂಲನೆ ಅಧಿಕಾರಿ ಡಾ. ನಾಗೇಶ್.ಎಸ್ ಅವರು ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರತಿವರ್ಷ ಸುಮಾರು 35000 ಸಂಭಾವ್ಯ ಕ್ಷಯರೋಗಿಗಳ ತಪಾಸಣೆಗೊಳಪಡಿಸಲಾಗುತ್ತಿದೆ. ಇದರಲ್ಲಿ 800 ರಿಂದ 900 ಹೊಸ ಕ್ಷಯರೋಗ ಪ್ರಕರಣಗಳು ದಾಖಲಾಗುತ್ತಿವೆ. 1400-1500 ಕ್ಷಯರೋಗ ಸಂಪರ್ಕಿತರಿಗೆ ಸೋಂಕಿನ ತಪಾಸಣೆ ಮಾಡಲಾಗುತ್ತಿದೆ. ಈ ರೋಗ ಬಾದಿತರಲ್ಲಿ ಶೇ. 86% ರೋಗಿಗಳನ್ನು ಪರಿಣಾಮಕಾರಿ ಚಿಕಿತ್ಸಾ ಆರೈಕೆಗಳೊಂದಿಗೆ ಗುಣಪಡಿಸಲಾಗುತ್ತಿದೆ. 2015 ನೇ ಇಸವಿಯಿಂದ ಕ್ಷಯರೋಗ ಪ್ರಕರಣಗಳು ಕ್ರಮೇಣವಾಗಿ ಪ್ರತಿ ಲಕ್ಷ ಜನರಲ್ಲಿ 237 ರಿಂದ 80 ಕ್ಷಯರೋಗ ಪ್ರಕರಣಗಳು ಇಳಿಮುಖವಾಗುತ್ತಿದೆ ಎಂದು ಹೇಳಿದರು.

     

    ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ ಹೆಚ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ ಸುನೀಲಕುಮಾರ, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.

  • ಸಿರಿಧಾನ್ಯ ಬಳಕೆ ಹಾಗೂ ಮಣ್ಣು ಪರೀಕ್ಷೆ ಬಗ್ಗೆ ಕೃಷಿ ತರಬೇತಿ

    ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ತೂಬಗೆರೆ ವಲಯದ ಚನ್ನಾಪುರ ಗ್ರಾಮದಲ್ಲಿ ಸಿರಿಧಾನ್ಯ ಬಳಕೆ ಹಾಗೂ ಮಣ್ಣು ಪರೀಕ್ಷೆ ಬಗ್ಗೆ ಕೃಷಿ ತರಬೇತಿ ನೀಡಲಾಯಿತು.

     

    ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ನವೀನ್ ಮಾತನಾಡಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ಬಗ್ಗೆ ಹಾಗೂ ಹವಾಮಾನ ವೈಪರಿತ್ಯದಿಂದ ಕೃಷಿ ಬೆಳೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು, ಮತ್ತು ಸಿರಿಧಾನ್ಯಗಳು ನಮ್ಮ ಆರೋಗ್ಯಕ್ಕೆ ಸಹಕಾರಿಯಾಗುವುದಷ್ಟೇ ಅಲ್ಲದೆ ರೈತರಿಗೆ ವಾಣಿಜ್ಯ ಬೆಳೆಯಾಗಿ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಲು ಸಹಕಾರಿಯಾಗಿದೆ. ಪ್ರಸ್ತುತ ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿದ್ದು ರೈತರು ಸಿರಿಧಾನ್ಯ ಬೆಳೆಯುವಲ್ಲಿ ಹೆಚ್ಚು ಒತ್ತು ನೀಡಬೇಕಿದೆ ಎಂದು ತಿಳಿಸಿದರು.

     

     

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸುಧಾ ಬಾಸ್ಕರ್ ಮಾತನಾಡಿ ಪಾಲಿಷ್ ಅಕ್ಕಿಯಿಂದ ಅನಾರೋಗ್ಯ ಜಾಸ್ತಿ ಆಗುತ್ತಿದ್ದು ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯ ಹೆಚ್ಚಳ ಆಗುವುದು, ಸಿರಿಧಾನ್ಯ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಮ್ಮಿಂದಾಗಬೇಕಿದೆ, ರೈತರು ಅಧಿಕ ಆದಾಯ ಗಳಿಸುವುದರ ಜೊತೆಜೊತೆಗೆ ಉತ್ತಮ ಆರೋಗ್ಯವಂತ ಸಮಾಜ ನಿರ್ಮಿಸಲು ಸಿರಿಧಾನ್ಯಗಳು ಸಹಕಾರಿಯಾಗಿವೆ ಸ್ಥಳೀಯ ರೈತರು ಸಿರಿ ಧಾನ್ಯಗಳ ಬಗ್ಗೆ ಅರಿವು ಪಡೆಯುವ ಮೂಲಕ ಸಿರಿಧಾನ್ಯ ಬೆಳೆಯಲು ಮುಂದಾಗುವಂತೆ ತಿಳಿಸಿದರು.

     

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ ಮಾತನಾಡಿ ಯೋಜನೆಯಿಂದ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ರೈತರಿಗೆ ತರಬೇತಿ ನೀಡುವುದು,ಅದ್ಯಾಯನ ಪ್ರವಾಸದ ಮೂಲಕ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ, ರೈತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವ್ಯವಸಾಯ ಪದ್ಧತಿ ಅಳವಡಿಸಿಕೊಳ್ಳಬೇಕಿದೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಿರಂತರವಾಗಿ ಮಾಡುತ್ತಿದ್ದು ಸದಸ್ಯರು ಈ ಕಾರ್ಯಕ್ರಮಗಳ ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು

     

    ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಮುನಿರಾಜು,ಸೇವಾಪ್ರತಿನಿಧಿ ಸಿದ್ದಗಂಗಮ್ಮ,ಪ್ರಗತಿಬಂಧು ಸಂಘದ ಸದಸ್ಯರು ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರು ಹಾಜರಿದ್ದರು

  • ನಾಡಿನ  ಪ್ರತಿಯೊಬ್ಬರು  ಕನ್ನಡ‌‌ದ   ಅಸ್ಮಿತೆ ಮತ್ತು ಅನನ್ಯತೆ  ಬಗ್ಗೆ ಹೆಮ್ಮೆ ಪಡಬೇಕು – ಪ್ರೊ.ಕೆ.ಆರ್.ರವಿಕಿರಣ್

    ಕರ್ನಾಟಕ ಏಕೀಕರಣ ಚಳುವಳಿ ಕನ್ನಡಿಗರನ್ನು ಒಗ್ಗೂಡಿಸಿತು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಲು ಬೆಳೆಸಲು ಸಹಕಾರಿಯಾಯಿತು ಎಂದು  ಪ್ರಾಧ್ಯಾಪಕ ಮತ್ತು  ಕವಿ‌ ಕೆ.ಎಂ. ಮಹಾದೇವಪ್ಪ  ತಿಳಿಸಿದರು.

     

    ‌‌‌‌      ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ಹಣಬೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ  ವಿದ್ಯಾರ್ಥಿನಿಲಯದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕರ್ನಾಟಕ ಏಕೀಕರಣ ಚಳುವಳಿ ಎಂಬ ವಿಷಯ ಕುರಿತು ಉಪನ್ಯಾಸ ಮತ್ತು ಕಲಾವಿದರಿಗೆ ಸನ್ಮಾನ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು  .ಕನ್ನಡ ಭಾಷಿಗರ ನಾಡನ್ನು ಒಗ್ಗೂಡಿಸಲು  ಭಾರತ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೇ  ಕರ್ನಾಟಕ ಏಕೀಕರಣ  ಹೋರಾಟ ಪ್ರಾರಂಭವಾಯಿತು.    ಹಲವು  ಹೋರಾಟಗಳು, ಹೋರಾಟಗಾರರ ಶ್ರಮದಿಂದ  ಕನ್ನಡ ನಾಡು ಒಂದು ರಾಜ್ಯವಾಗಿ  ಉದಯವಾಯಿತು ಎಂದರು.

     

    ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಪಿ.ಮಲ್ಲಾರಾಜು ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ‌ ವ್ಯಾಸಂಗ ಮಾಡಿದವರು ಸಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.  ಕನ್ನಡ ಶಾಲೆಗಳಲ್ಲಿ ಓದಿದವರು ಖ್ಯಾತ ವಿಜ್ಞಾನಿಗಳು ಆಗಿದ್ದಾರೆ.

    ಸಾವಿರಾರು ವರ್ಷಗಳ‌ ಇತಿಹಾಸವಿರುವ  ಕನ್ನಡ ಭಾಷೆ  ಮತ್ತು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ  ದೊರೆಯಬೇಕೆಂದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ,  ಕನ್ನಡ ನಾಡಿನ  ಪ್ರತಿಯೊಬ್ಬರು  ಕನ್ನಡ‌‌ದ   ಅಸ್ಮಿತೆ ಮತ್ತು ಅನನ್ಯತೆ  ಬಗ್ಗೆ ಹೆಮ್ಮೆ ಪಡಬೇಕು.  ಕರ್ನಾಟಕ ರಾಜ್ಯದಲ್ಲಿ  ಕನ್ನಡವೇ ನಮ್ಮೆಲ್ಲರ ಆದ್ಯತೆಯ ವಿಚಾರವಾಗಬೇಕು. ಕನ್ನಡ ಕಾರ್ಯಕ್ರಮಗಳು  ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು. ಪ್ರತಿದಿನವು  ಕನ್ನಡತನ ನಮ್ಮ ಬದುಕಿನ ಭಾಗಬೇಕು.  ಕನ್ನಡಿಗರಿಗೆ  ಕನ್ನಡ  ಭಾಷೆಯಲ್ಲಿ ಜ್ಞಾನವನ್ನು ನೀಡಿದರೆ ಹೆಚ್ಚು ಪರಿಣಾಮಕಾರಿಯಾಗಿ ಅರ್ಥವಾಗುತ್ತದೆ, ಮಾತೃಭಾಷೆಯಿಂದ ಜ್ಞಾನ ಹೆಚ್ಚಾಗುತ್ತದೆ ಎಂದು ಅನೇಕ ಸಂಶೋಧನೆಗಳು  ತಿಳಿಸಿವೆ  ಎಂದರು.

    ಕಲಾವಿದರಿಗೆ ಸನ್ಮಾನ :    ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ   ಕಲಾವಿದರುಗಳಾದ  ದರ್ಗಾಜೋಗಿಹಳ್ಳಿ ಮಲ್ಲೇಶ್, ರಾಮಕೃಷ್ಣ,  ಕುಮಾರ್, ಶೋಭಾಕುಮಾರ್, ಅಣ್ಣಪ್ಪ,  ಸತ್ಯಜಿತ್ ಅವರನ್ನು  ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ    ದೊಡ್ಡಬಳ್ಳಾಪುರ ಕನ್ನಡ ಸಾಹಿತ್ಯ ‌ಪರಿಷತ್ತು   ಅಧ್ಯಕ್ಷ  ಪಿ.ಗೋವಿಂದರಾಜು,  ಕಸಬಾ ಹೋಬಳಿ ಅಧ್ಯಕ್ಷ ಪಿ.ಡಿ.ದಾದಾಪೀರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು,  ಹಣಬೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹರೀಶ್, ವೆಂಕಟೇಶ್,  ಪಂಚಾಯಿತಿ ಅಧಿಕಾರಿ ಗಂಗರಾಜು,  ಮುಖ್ಯಶಿಕ್ಷಕಿ ಶಾಂತಮ್ಮ,  ಶಿಕ್ಷಕ ಮತ್ತು ಕಲಾವಿದ ಹಣಬೆ ನಾಗರಾಜು, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ   ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದ  ಮೇಲ್ವಿಚಾರಕ  ಸಿ.ಅಣ್ಣಯ್ಯ, ಸಿಬ್ಬಂದಿಯವರಾದ  ಮಹಾದೇವಸ್ವಾಮಿ, ಶಶಿಕಾಂತ್, ಶಾರದಮ್ಮ, ಯಮುನಾವ್ವ ಖನ್ನಾಳ  ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.