Blog

  • ಜಿಲ್ಲಾಡಳಿತ ಭವನದಲ್ಲಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನಾಚರಣೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 68ನೇ ಮಹಾ ಪರಿನಿರ್ವಾಣ ದಿನವನ್ನು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿಂದು ಆಚರಿಸಲಾಯಿತು.

     

    ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ಶಿವಶಂಕರ. ಎನ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

     

    ನಂತರ ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಬಡವರ ದೀನ ದಲಿತರ, ಶೋಷಿತ ವರ್ಗಗಳ ಅಭಿವೃದ್ಧಿಗೆ ದುಡಿದರು. ಸಾಮಾಜದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ ಸಿಗಬೇಕು ಎನ್ನುವುದು ಅವರ ಆಶಯವಾಗಿತ್ತು. ಪ್ರತಿಯೊಬ್ಬರೂ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಾರ್ಗದರ್ಶನ ಹಾಗೂ ಸಂವಿಧಾನದ ಆಶಯಗಳನ್ನು ಪಾಲಿಸೋಣ ಎಂದು ಜಿಲ್ಲಾಧಿಕಾರಿ ತಿಳಿಸಿದರು.

     

    ‌‌ ಅಪರ ಜಿಲ್ಲಾಧಿಕಾರಿ ಎಚ್. ಅಮರೇಶ್, ಜಿ ಪಂ ಉಪ ಕಾರ್ಯದರ್ಶಿ ಟಿ ಕೆ ರಮೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಟಿ ಎಲ್ ಪ್ರೇಮಾ ಸೇರಿದಂತೆ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯತಿ ಗ್ರಾಮಸ್ಥರ ಹೋರಾಟಕ್ಕೆ ಮಹಿಳಾ ಶಕ್ತಿ ಸಾಥ್ : ನಮ್ಮ ಹೋರಾಟ ಮತ್ತಷ್ಟು ಹೆಚ್ಚಾಗಲಿದೆ ಎಂದ ಮಹಿಳಾ ಹೋರಾಟಗಾರರು

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ಅರ್ಕಾವತಿ ನದಿ ಹೋರಾಟ ಸಮಿತಿಯು ಶುದ್ಧ ನೀರಿಗಾಗಿ ನಿರಂತರ ಹೋರಾಟ ನೆಡೆಸುತ್ತಿದ್ದೂ ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ಗ್ರಾಮದ ಮಹಿಳಾ ಶಕ್ತಿ ಹೋರಾಟದಲ್ಲಿ ಕೈಜೋಡಿಸುವ ಮೂಲಕ ಪ್ರತಿಭಟನೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಗ್ರಾಮ ಪಂಚಾಯತಿ ಸದಸ್ಯೆ ಚೈತ್ರ ಭಾಸ್ಕರ್ ತಿಳಿಸಿದರು.

     

    ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹಾಗೂ ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯತಿ ಗ್ರಾಮಸ್ಥರು ನಿರಂತರ ಹೋರಾಟ ಮಾಡುತ್ತಿದ್ದರು ಕ್ಯಾರೇ ಎನ್ನದ ಅಧಿಕಾರಿಗಳ ವಿರುದ್ಧ ಮಹಿಳಾ ಶಕ್ತಿ ಹೋರಾಟ ನೆಡೆಸಲು ಮುಂದಾಗಲಿದೆ.ತಾಲ್ಲೂಕಿನ ಭಾಷೆಟ್ಟಿ ಹಳ್ಳಿಯಲ್ಲಿ ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ತ್ಯಾಜ್ಯನೀರು ಜಲ ಮೂಲ ಸೇರುವ ಮೂಲಕ ಜಲಸಂಪನ್ಮೂಲಗಳು ಸಂಪೂರ್ಣಹಾಳಾಗಿವೆ ಈ ಕೂಡಲೇ ಎಸ್ ಟಿ ಪಿ ಘಟಕ ಸ್ಥಾಪಿಸಲೇ ಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಹೋರಾಟ ನೆಡೆಸಲಾಗುವುದು ಎಂದರು.

     

    ಸ್ಥಳೀಯರಾದ ಸುಮಿತ್ರಾ ಮಾತನಾಡಿ ಮನೆಯಲ್ಲಿ ಬಳಸುವ ನೀರು ಸಂಪೂರ್ಣ ರಾಸಾಯನಿಕ ಅಂಶಗಳಿಂದ ಕೂಡಿದ್ದು, ಗ್ರಾಮಸ್ಥರು ಹಲವು ಬಗೆಯ ಕಾಯಿಲೆಗಳಿಂದ ಬಳಲುತ್ತಿದ್ದು,ಈ ಸಮಸ್ಯೆ ಕುರಿತು ಅಧಿಕಾರಿಗಳ ಮೌನ ಸಲ್ಲದು, ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಸ್ಥಳೀಯವಾಗಿ ಕಲ್ಪಿಸಬೇಕು ಹಾಗೂ ಎಸ್ ಟಿ ಪಿ ಘಟಕ ಸ್ಥಾಪಿಸಬೇಕು, ಇಲ್ಲವಾದಲ್ಲಿ ನಮ್ಮ ಹೋರಾಟ ಮತ್ತಷ್ಟು ಹೆಚ್ಚಾಗಲಿದೆ ನಮ್ಮ ದನ ಕರುಗಳೊಂದಿಗೆ ಮಕ್ಕಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನೆಡೆಸಲಾಗುವುದು ಎಂದರು.

    ಈ ಸಂದರ್ಭದಲ್ಲಿ ರೈತ ಮುಖಂಡರಾದ ಸತೀಶ್, ವಸಂತ್ ಕುಮಾರ್, ಸುಮಿತ್ರಾ ರೂಪ ಸುಜಾತಾ ಅನಿತಾ, ಸುನಿತಾ, ಅನಿತಾ, ಚೈತ್ರ ಭಾಸ್ಕರ್, ಅಶ್ವತಮ್ಮ ನಗರತ್ನಮ್ಮ, ಸುಶೀಲಮ್ಮ, ವಿಜಯ್ ಕುಮಾರ್, ನಾರಾಯಣ ಮೂರ್ತಿ, ದೇವರಾಜ್, ಹರೀಶ್, ರಮೇಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

     

     

     

  • ಬಡವರಿಗೆ ನಿವೇಶನ ನೀಡುವ ಗುರಿ: ಸಚಿವ ಕೆ.ಹೆಚ್ ಮುನಿಯಪ್ಪ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ಜಿಲ್ಲೆಯಾದ್ಯಂತ ನಿವೇಶನ ರಹಿತ ಮತ್ತು ವಸತಿ ರಹಿತ ಫಲಾನುಭವಿಗಳ ಪಟ್ಟಿ ಸಿದ್ಧ ಪಡಿಸಲಾಗದ್ದು ಹಂತ ಹಂತವಾಗಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     

    ಜಿಲ್ಲೆಯಲ್ಲಿ 533.38 ಎಕರೆ ಆಶ್ರಯ ಯೋಜನೆಯಡಿ ಜಮೀನು ಗುರ್ತಿಸಲಾಗಿದ್ದು 480 ಎಕರೆ ನಿವೇಶನ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಸತಿ ನಿಗಮದಿಂದ 64.18 ಎಕರೆಯಲ್ಲಿ 1694 ನಿವೇಶನಗಳ ಅಭಿವೃದ್ಧಿಗೆ ಆನುದಾನ ಬಿಡುಗಡೆ ಆಗಿದ್ದು 292 ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ನಿವೇಶನಕ್ಕೆ ಸಂಬಂಧಿಸಿದಂತೆ ಚರ್ಚಿಸಿ ನಿವೇಶನ ಅಭಿವೃದ್ಧಿಗೆ ಸಂಬಂಧಿಸಿ ಆನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದರು.

     

    ಜೆ.ಜೆ.ಎಂ.ಯೋಜನೆಯಡಿ ಮನೆ ಮನೆಗೂ ನಳ ಸಂಪರ್ಕ ಕಲ್ಪಿಸಲು ರಸ್ತೆ ಅಗೆದಿದ್ದು ಮುಚ್ಚದೇ ಹಾಗೆ ಬಿಟ್ಟಿರುವುದು, ನೀರು ಸರಬರಾಜು ಪೈಪ್ ಗಳ ಗುಣಮಟ್ಟ ಕಳಪೆ ಆಗಿದೆ ಎಂಬ ದೂರಿನ ಅನ್ವಯ, ಯಾವ ಯಾವ ಹಳ್ಳಿಗಳಲ್ಲಿ ಈ ರೀತಿಯ ಅವ್ಯವಸ್ಥೆ ಆಗಿದೆ ಎಂಬುದರ ಮಾಹಿತಿ ಪಡೆದೆ ಖದ್ದಾಗಿ ಅಧಿಕಾರಿಗಳು ಸ್ಥಳ ಪರಶೀಲನೆ ನಡೆಸಿ ಅವ್ಯವಸ್ಥೆಯನ್ನು ಸರಿಪಡಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

     

    ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ರಾಜ್ಯಾದ್ಯಂತ ಕೆ.ಪಿ.ಎಸ್ ಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆ.ಪಿ.ಎಸ್ ಶಾಲೆಗಳಿಗೆ ಅವಶ್ಯವಿರುವ ಸೌಕರ್ಯಗಳ ಬಗ್ಗೆ ತಾಲ್ಲೂಕು ಬಿ.ಇ.ಒ ಗಳು ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಯೋಜನೆ ಸಿದ್ಧಪಡಿಸಿ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರು ಹೆಚ್ಚು ಶ್ರಮ ವಹಿಸಬೇಕಿದೆ. ಖಾಸಗಿ ಶಾಲೆಗಳಲ್ಲಿ ಸಿಗುವ ಎಲ್ಲ ಸೌಲಭ್ಯ ಸರ್ಕಾರಿ ಶಾಲೆಗಳಲ್ಲಿ ಸಿಗುವಂತೆ ಮಾಡಬೇಕು. ಸಿ.ಆರ್.ಪಿ./ ಬಿ.ಆರ್.ಪಿ. ಗಳು ಶಾಲೆಗಳಿಗೆ ಹೆಚ್ಚಿನ ಭೇಟಿ ನೀಡಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದರು.

     

    *ನೆಲಮಂಗಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ನೆಲಮಂಗಲ ಶಾಸಕರ ಒತ್ತಾಯ*

     

    ನೆಲಮಂಗಲ ವ್ಯಾಪ್ತಿಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಲಿದ್ದು ನೆಲಮಂಗಲ ತುಮಕೂರು ಹೈವೇ ಯಲ್ಲಿ ಪ್ರತಿ ದಿನ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಸರಿಯಾದ ಕೆಳ ಸೇತುವೆ(ಅಂಡರ್ ಪಾಸ್) ಇಲ್ಲದಿರುವುದು. ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಕಸದ ಸಮಸ್ಯೆ ಕೂಡ ಹೆಚ್ಚಾಗಿದ್ದು ಕಸ ತೆರವುಗೊಳಿಸಬೇಕು. ಅಪಘಾತಗಳನ್ನು ತಪ್ಪಿಸಲು ಅಂಡರ್ ಪಾಸ್ ನಿರ್ಮಿಸುವಂತೆ ಶಾಸಕರು ಸಚಿವರಲ್ಲಿ ಮನವಿ ಮಾಡಿದರು. ಸಚಿವರು ಮನವಿಗೆ ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

     

    ಶಾಸಕ ಧೀರಜ್ ಮುನಿರಾಜು ಮಾತನಾಡಿ, ಯಲಹಂಕ ಹಾಗೂ ಗೌರಿಬಿದನೂರು ಸಂಪರ್ಕಿಸುವ ರಾಜ್ಯ ಹೆದ್ದಾರಿಯೂ ದೊಡ್ಡಬಳ್ಳಾಪುರದಲ್ಲಿ ಹಾದು ಹೋಗುತ್ತದೆ. ಈ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಟೋಲ್ ವಸೂಲಿ‌ ಮಾಡಲಾಗುತ್ತಿದೆ. ಆದರೆ ಈ ರಸ್ತೆ ಅವೈಜ್ಞಾನಿಕವಾಗಿ ಕೂಡಿದ್ದು, ಈಗಾಗಲೇ ಈ ರಸ್ತೆಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಿದರು ಯಾವುದೇ ಕ್ರಮವಹಿಸಿಲ್ಲ. ರಸ್ತೆಯಲ್ಲಿ ಟೋಲ್ ವಸೂಲಿ ಆರಂಭವಾಗಿ ಅನೇಕ ವರ್ಷಗಳೇ ಕಳೆದರೂ ಭೂಸ್ವಾಧೀನ ಇನ್ನೂ ಬಾಕಿ ಉಳಿದಿದೆ. ಈ ರಸ್ತೆಯಲ್ಲಿ ಹಲವೆಡೆ ಬೀದಿ ದೀಪಗಳಿಲ್ಲದೆ ಸಮಸ್ಯೆಯಾಗುತ್ತಿದೆ. ಸಾಕಷ್ಟು ಅಪಘಾತಗಳು ಕೂಡ ಈ ರಸ್ತೆಯಲ್ಲಿ ಸಂಭವಿಸುತ್ತಿದೆ.ಆದಷ್ಟು ಬೇಗ ಈ ರಸ್ತೆ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಮನವಿ ಮಾಡಿದರು.

     

    ಅರಣ್ಯ ಇಲಾಖೆಯ ಅಧಿಕಾರಿ ಮಾತನಾಡಿ, ಜಿಲ್ಲೆಯ 18 ಕಿಮೀ ರಾಷ್ಟ್ರೀಯ ಹೆದ್ದಾರಿಯ ಲ್ಲಿ ಗಿಡ ನೆಡಲಾಗುವುದೆಂದರು ಹಾಗೂ ಬೆಸ್ಕಾಂ ನವರು ವಿದ್ಯುತ್ ಕಂಬಗಳನ್ನು ಅರಣ್ಯ ಪ್ರದೇಶದ ಅಂಚಿನಲ್ಲಿ ನೆಡುತ್ತಾರೆ ಮತ್ತೆ ಅವುಗಳನ್ನು ತೆರವುಗೊಳಿಸಲು ನಾವೇ ಹಣ ಕಟ್ಟಬೇಕೆಂದರು.

     

    ಪಿ.ಎಂ. ಪೋಷಣ್ ಯೋಜನೆಯಡಿ ಮಕ್ಕಳಿಗೆ 6 ದಿನ ಮೊಟ್ಟೆ ನೀಡಲಾಗುತಿದ್ದು, ಶೇ,81 ರಷ್ಟು ಮಕ್ಕಳಿಗೆ ಮೊಟ್ಟೆ, 21 ಶೇ ಮಕ್ಕಳಿಗೆ ಚಿಕ್ಕಿ ಬಾಳೆಹಣ್ಣು ವಿತರಿಸಲಾಗುತ್ತಿದೆ ಎಂದರು.

     

    ನೆಲಮಂಗಲ ಶಾಸಕರು ನಾನು ಚಿಕ್ಕಿ ತಿಂದಿದ್ದೇನೆ ಮರಳಿನಂತಹ ಕಲ್ಲುಗಳಿರುತ್ತವೆ ಎಂದಾಗ ಅಧಿಕಾರಿ ಪ್ರತಿಕ್ರಿಯಿಸಿ ಒಮ್ಮೊಮ್ಮೆ ಬೆಲ್ಲದಲ್ಲಿ ಕಲ್ಲುಗಳಿದ್ದಾಗ ಹಾಗೆ ಆಗಿದೆ ಎಂದರು.

     

    ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ರವಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿಸಿ ಜಾಫರ್, ಜಿಲ್ಲಾಧಿಕಾರಿ ಡಾ. ಶಿವಶಂಕರ್ ಎನ್ , ಜಿಪಂ ಸಿಇಒ ಡಾ.ಕೆ.ಎನ್ ಅನುರಾಧ, ಡಿಎಫ್ಒ ಸರೀನಾ , ಎಎಸ್ಪಿ ನಾಗರಾಜು, ಡಿವೈಎಸ್ಪಿ ರವಿ, ಎಸಿ ದುರ್ಗಾಶ್ರಿ , ಜಿಪಂ ಉಪ ಕಾರ್ಯದರ್ಶಿ ಟಿ.ಕೆ ರಮೇಶ್ ಸೇರಿದಂತೆ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ‌ ಸದಸ್ಯರು, ಕೆಡಿಪಿ ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

  • 21ನೇ ರಾಷ್ಟ್ರೀಯ ಜಾನುವಾರು ಗಣತಿ ಸಮೀಕ್ಷೆ : ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಕೆಎಚ್ ಮುನಿಯಪ್ಪ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : 21ನೇ ರಾಷ್ಟ್ರೀಯ ಜಾನುವಾರು ಗಣತಿ ಸಮೀಕ್ಷೆಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಾಲನೆ ನೀಡಿದರು.

     

    ನಂತರ ಮಾತನಾಡಿ ಜಾನುವಾರು ಗಣತಿ ಸಮೀಕ್ಷೆಯಲ್ಲಿ ಎಲ್ಲಾ ಜಾನುವಾರುಗಳ ಸವಿವರ ಗಣತಿ ಸಂಗ್ರಹಿಸಲಾಗುವುದು. ಹೈನುಗಾರಿಕೆ ಹಾಗೂ ಕೃಷಿ ಕ್ಷೇತ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆಧುನಿಕ ತಂತ್ರಜ್ಞಾನದ ಮೂಲಕ ನಿಖರವಾಗಿ ಜಾನುವಾರು ಗಣತಿ ಮಾಡಲಾಗುವುದು. ಈ ಸಮೀಕ್ಷಾ ವರದಿ ಪಶುಸಂಗೋಪನೆ ಅಭಿವೃದ್ಧಿ, ಮೇವಿನ ಲಭ್ಯತೆ, ಆರೋಗ್ಯ, ಔಷಧೋಪಚಾರ, ಉತ್ಪಾದಕತೆ ಹೆಚ್ಚಿಸಲು, ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.

  • ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ : ರೈತರು ತಾಲ್ಲೂಕು ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ – ಸಚಿವ ಕೆಎಚ್ ಮುನಿಯಪ್ಪ

    ಬೆಂ. ಗ್ರಾ. ಜಿಲ್ಲೆ ಡಿ.04 : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿ ಖರೀದಿ ಮಾಡಲು ಪ್ರತಿ ಕ್ವಿಂಟಾಲ್ ರಾಗಿಗೆ 4290 ರೂಗಳನ್ನು ನಿಗದಿ ಪಡಿಸಲಾಗಿದ್ದು, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ರಾಗಿ ಖರೀದಿಸಲಾಗುತ್ತದೆ. ರೈತರು ತಾಲ್ಲೂಕು ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

     

    ದೇವನಹಳ್ಳಿ ಟೌನ್ ನ ವಿಜಯಪುರ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಗೊದಾಮು ಇಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

     

    ಪ್ರತಿ ಕ್ವಿಂಟಾಲ್ ರಾಗಿಗೆ ರೂ. 4290 ರೂಪಾಯಿ, ಪ್ರತಿ ಕ್ವಿಂಟಾಲ್ ಬಿಳಿ ಜೋಳ ಹೈಬ್ರಿಡ್ ಧಾನ್ಯ ಕ್ಕೆ 3371 ರೂಪಾಯಿ, ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ 2300 ರೂಪಾಯಿ ನಿಗದಿಪಡಿಸಲಾಗಿದೆ. ಪ್ರತಿ ರೈತರಿಂದ ರಾಗಿ ಗರಿಷ್ಠ 20.00 ಕ್ವಿಂಟಾಲ್‌, ಬಿಳಿ ಜೋಳ ಹೈಬ್ರಿಡ್ 150 ಕ್ವಿಂಟಾಲ್, ಭತ್ತ ಸಾಮಾನ್ಯ 50 ಕ್ವಿಂಟಾಲ್ ಖರೀದಿಸಲು ನಿಗದಿಪಡಿಸಲಾಗಿದೆ.

     

    ಪ್ರಸಕ್ತ ಸಾಲಿನ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಎರಡು ಬಾರಿ ಬಯೋಮೆಟ್ರಿಕ್ ಬಳಕೆಯಾಗುತ್ತದೆ ಒಂದು ಬಾರಿ ನೊಂದಣಿ ವೇಳೆಯಲ್ಲಿ ಇನ್ನೊಂದು ಬಾರಿ ಖರೀದಿ ವೇಳೆಯಲ್ಲಿ ಹಾಗಾಗಿ ನೊಂದಾಯಿತ ರೈತರೇ ರಾಗಿ ಖರೀದಿ ಕೇಂದ್ರಗಳಿಗೆ ರಾಗಿ ತರುವುದು ಕಡ್ಡಾಯವಾಗಿರುತ್ತದೆ. ನೊಂದಣಿಯಾದ ರೈತರಿಂದ ಮಾತ್ರ ರಾಗಿ ಖರೀದಿ ಮಾಡಲಾಗುವುದು. ಜನವರಿ ಮಾಹೆಯಿಂದ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಿ ಮಾರ್ಚ್ 31 ಕ್ಕೆ ಅಂತ್ಯಗೊಳಿಸಲಾಗುವುದು ಎಂದರು.

     

    ರೈತರು ಎಫ್.ಎಕ್ಯೂ ಗುಣಮಟ್ಟದ ರಾಗಿ, ಭತ್ತ, ಬಿಳಿ ಜೋಳವನ್ನು ಖರೀದಿ ಕೇಂದ್ರಗಳಿಗೆ ತರುವ ಮುನ್ನ ಸಮೀಪವಿರುವ ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಬಯೋ ಮೆಟ್ರಿಕ್ ಮೂಲಕ ನೋಂದಣಿ ಮಾಡಿಸಬೇಕು.

     

    ಕೃಷಿ ಇಲಾಖೆಯಿಂದ ರೈತರಿಗೆ ನೀಡಲಾಗಿರುವ “ಫೂಟ್ಸ್” ಐ.ಡಿ.(FRUITS) ಸಂಖ್ಯೆಯನ್ನು ಪಡೆದು ರಾಗಿ ಖರೀದಿ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳುವುದು. ಫೂಟ್ಸ್ ಐ.ಡಿ. ಇಲ್ಲದ ರೈತರ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಇರುವುದಿಲ್ಲ ಹಾಗೂ ನೊಂದಾಣಿ ಸಮಯದಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿರುತ್ತದೆ. ರೈತರು ಖರೀದಿ ಕೇಂದ್ರಕ್ಕೆ ಆಹಾರ ಧಾನ್ಯ ನೀಡಿ ಗ್ರೈನ್ ವೋಚರ್ ಪಡೆದ ನಂತರವೇ ಆಧಾರ್ ಕಾರ್ಡ್ ಜೋಡಣೆಯಾದ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಹಣವನ್ನು ಪಾವತಿಸಲಾಗುವುದು ಎಂದರು.

     

    ಸಭೆಯಲ್ಲಿ ಬಯಪ ಅಧ್ಯಕ್ಷ ಶಾಂತಕುಮಾರ್, ಸ್ಥಳೀಯ ಜನಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಆಹಾರ ಇಲಾಖೆ ಉಪನಿರ್ದೇಶಕ ಶಂಕರ್ ಮೂರ್ತಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

     

    *ರಾಗಿ ನೋಂದಣಿ ಹಾಗೂ ಖರೀದಿ ಕೇಂದ್ರಗಳ ತೆರೆಯುವ ಸ್ಥಳಗಳು*

     

    *ದೇವನಹಳ್ಳಿ*

    ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಗೋದಾಮು ವಿಜಯಪುರ ರಸ್ತೆ, ದೇವನಹಳ್ಳಿ ಟೌನ್.

     

    *ಹೊಸಕೋಟೆ*

    ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ವೀರಭದ್ರೇಶ್ವರ ರೈಸ್ ಮಿಲ್ ಕಾಂಪೌಂಡ್, ಮಾಲೂರು ರಸ್ತೆ, ಹೊಸಕೋಟೆ.

     

    *ದೊಡ್ಡಬಳ್ಳಾಪುರ*

    ರೈತ ಭವನ ಕೇಂದ್ರ, ಎಂಪಿಎಂಸಿ ಯಾರ್ಡ್, ದೊಡ್ಡಬಳ್ಳಾಪುರ.

     

    *ನೆಲಮಂಗಲ*

    ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕೆಂಪಲಿಂಗನಹಳ್ಳಿ ಕ್ರಾಸ್, ಕುಣಿಗಲ್ ರಸ್ತೆ, ನೆಲಮಂಗಲ ತಾಲ್ಲೂಕು.

  • ವಿಶ್ವ ವಿಶೇಷಚೇತನರ ದಿನಾಚರಣೆ : ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಮೂರ್ತಿ ಭೋಲಾ ಪಂಡಿತ್ ಭಾಗಿ

    ಬೆಂ.ಗ್ರಾ. ಜಿಲ್ಲೆ, :- ಸಮಾಜದಲ್ಲಿ ಯಾರೂ ಪರಿಪೂರ್ಣರಲ್ಲ ಎಲ್ಲರಲ್ಲೂ ಒಂದಲ್ಲ ಒಂದು ನ್ಯೂನತೆ ಇರುತ್ತದೆ. ವಿಶೇಷಚೇತನರಲ್ಲಿ ವಿಶೇಷ ಪ್ರತಿಭೆ ಹಾಗೂ ಜ್ಞಾನ ಇರುತ್ತದೆ, ಅದನ್ನು ಗುರುತಿಸಿ ಬೆಳೆಸುವ ಜತೆಗೆ ಪ್ರತಿಯೊಬ್ಬ ವಿಶೇಷಚೇತನರನ್ನು ಗೌರವ-ಪ್ರೀತಿಯಿಂದ ಕಾಣಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಭೋಲಾ ಪಂಡಿತ್ ಅವರು ಹೇಳಿದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ‌ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ‌ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     

    ಸರ್ಕಾರವೂ ವಿಶೇಷಚೇತನರಿಗಾಗಿ ಹಲವಾರು ಯೋಜನೆ-ಕಾನೂನುಗಳನ್ನು ಜಾರಿಗೆ ತಂದಿದೆ. 2016ರ ಕಾಯ್ದೆಯಡಿ ಉಚಿತವಾಗಿ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ಶೇ. 5 ರಷ್ಟು ಮೀಸಲಾತಿ ಜತೆಗೆ ಸರ್ಕಾರಿ ನೌಕರಿಯಲ್ಲೂ ಮೀಸಲಾತಿ ಕಲ್ಪಿಸಿದೆ ಎಂದರು.

     

    ಪ್ರತಿ ಜಿಲ್ಲೆಯಲ್ಲೂ ಕಾನೂನು ಸೇವಾ ಪ್ರಾಧಿಕಾರ ಸ್ಥಾಪಿಸಿದ್ದು, ವಿಶೇಷಚೇತನರಿಗೆ ಉಚಿತವಾಗಿ ಕಾನೂನು ಸಲಹೆ ಹಾಗೂ ನೆರವು ಒದಗಿಸುತ್ತಿದೆ. ಸರ್ಕಾರಿ ಸೌಲಭ್ಯಗಳ ಬಗ್ಗೆ ವಿಕಲಚೇತನರಿಗೆ ಮಾಹಿತಿ ಕೊರತೆ ಇದೆ, ಅವರಿಗೆ ಸಂಪೂರ್ಣ ಮಾಹಿತಿ ತಿಳಿಸುವ ನಿಟ್ಟಿನಲ್ಲಿ ಸರ್ಕಾರಿ ನೌಕಕರು ಶ್ರಮಿಸಬೇಕು. ವಿಶೇಷಚೇತನರು ಅಂಗವೈಕಲ್ಯವನ್ನು ಮೆಟ್ಟಿ ನಿಂತು ತಮ್ಮಲ್ಲಿರುವ ವಿಶೇಷ ಸಾಮರ್ಥ್ಯವನ್ನು ಮತ್ತು ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಸಾಧಕರಾಗಬೇಕು ಎಂದು ಕರೆ ನೀಡಿದರು.

     

    ಅಪರ ಜಿಲ್ಲಾಧಿಕಾರಿ ಅಮರೇಶ ಹೆಚ್ ಅವರು ಮಾತನಾಡಿ, ವಿಕಲಚೇತನರನ್ನು ಸಮಾಜದ ಮುನ್ನೆಲೆಗೆ ತರುವ ಉದ್ದೇಶದಿಂದ ವಿಕಲಚೇತನರ ದಿನಾಚರಣೆ ಆರಂಭಿಸಲಾಯಿತು. ಸಮಾಜದಲ್ಲಿ ಜನಸಂಖ್ಯೆಯ ಶೇ. 16 ರಷ್ಟು ವಿಶೇಷಚೇತನರು ಇದ್ದು, ಅವರ ಸಂರಕ್ಷಣೆಗೆ ಸರ್ಕಾರದ ಅನೇಕ ಯೋಜನೆಗಳು ಹಾಗೂ ಕಾನೂನುಗಳು ಜಾರಿಯಲ್ಲಿವೆ. ವಿಶೇಷಚೇತನರು ಯಾವುದಕ್ಕೂ ಕಡಿಮೆ ಇಲ್ಲ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.

     

    ಕಾರ್ಯಕ್ರಮದಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರನ್ನು ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆ/ವ್ಯಕ್ತಿಗಳನ್ನು ಸನ್ಮಾನಿಸುವ ಮೂಲಕ ಅಭಿನಂದಿಸಲಾಯಿತು.

     

    ಇದೇ ಸಂದರ್ಭದಲ್ಲಿ ಜಿಲ್ಲೆಯ ವಿಶೇಷಚೇತನರಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಯಿತು.

     

    ಕಾರ್ಯಕ್ರಮದಲ್ಲಿ ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಲಕ್ಷ್ಮಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮುದ್ದಣ್ಣ ಎಂ, ಯುವಜನ ಸಹಾಯಕರಾದ ಸತೀಶ್, ದೇವನಹಳ್ಳಿ ಸಿಡಿಪಿಒ ಸುನೀತಾ ಸೇರಿದಂತೆ ಜಿಲ್ಲೆಯ ಎಲ್ಲಾ ವಿಕಲಚೇತನರು ಪ್ರಗತಿಪರ ಸಂಘಟನೆಗಳು, ಎಲ್ಲಾ ವಿವಿಧೋದ್ದೇಶ/ನಗರ/ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ತಾಲ್ಲೂಕು ಮಟ್ಟದ ವಿಕಲಚೇತನರ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

  • ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆಯಲು ಬೇಕಾಗುವ ಒಂದಷ್ಟು ಮಾಹಿತಿ… ಸುದ್ದಿ ನೋಡಿ…

    . ಗ್ರಾ.ಜಿಲ್ಲೆ, :-ಸಹಕಾರ ಇಲಾಖೆಯು 2025–26ನೇ ಸಾಲಿನ ಯಶಸ್ವಿನಿ ಯೋಜನೆಗೆ ಅರ್ಹ ಸಹಕಾರಿಗಳನ್ನು ನೋಂದಣಿ ಮಾಡಿಕೊಳ್ಳಲು ಡಿಸೆಂಬರ್ 31ರವರೆಗೆ ಅವಕಾಶ ಕಲ್ಪಿಸಲಾಗಿದೆ.

     

    ಸಮಾಪನಗೊಂಡಿರುವ, ನಿಷ್ಕ್ರಿಯವಾಗಿರುವ ಸಹಕಾರ ಸಂಘಗಳ ಸದಸ್ಯರು, ನೌಕರರ ಸಹಕಾರ ಸಂಘಗಳ ಸದಸ್ಯರು ಯೋಜನೆಗೆ ಅರ್ಹರಾಗಿರುವುದಿಲ್ಲ.

     

    ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರರಾಗಿದ್ದರೂ ಸೌಲಭ್ಯ ಸಿಗುವುದಿಲ್ಲ. ಈಗಾಗಲೇ ಒಂದು ಯೋಜನೆ ಅಡಿ ಆರೋಗ್ಯ ಸೌಲಭ್ಯ ಪಡೆಯುತ್ತಿರುವವರು ಯಶಸ್ವಿನಿ ಅಡಿ ನೋಂದಾಯಿಸಿಕೊಳ್ಳುವಂತಿಲ್ಲ ಎಂದು ವಿವರಿಸಲಾಗಿದೆ.

     

    ಗ್ರಾಮೀಣ ಪ್ರದೇಶದ ಒಂದು ಕುಟುಂಬದಲ್ಲಿ ನಾಲ್ಕು ಜನರಿದ್ದರೆ ಆ ಕುಟುಂಬ 500 ರೂಗಳ ವಂತಿಗೆ ಭರಿಸಬೇಕು. ನಾಲ್ಕಕ್ಕಿಂತ ಹೆಚ್ಚು ಸದಸ್ಯರಿದ್ದರೆ ತಲಾ 100 ರೂಗಳ ಹೆಚ್ಚುವರಿ ವಂತಿಗೆ ನೀಡಬೇಕು. ನಗರ ಪ್ರದೇಶದ ಒಂದು ಕುಟುಂಬದಲ್ಲಿ ನಾಲ್ಕು ಜನರಿದ್ದರೆ 1,000 ರೂಗಳು ಹಾಗೂ ಅದಕ್ಕಿಂತ ಹೆಚ್ಚು ಜನರಿದ್ದರೆ ತಲಾ 200 ರೂಗಳು ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರು ಉಚಿತವಾಗಿ ಸದಸ್ಯತ್ವ ಪಡೆಯಬಹುದು.

     

    ಈ ಯೋಜನೆ ಅಡಿ 1650 ವಿವಿಧ ಚಿಕಿತ್ಸೆಗಳು, 478 ಐಸಿಯು ಚಿಕಿತ್ಸೆಗಳು ಸೇರಿ ಒಟ್ಟು 2,128 ಚಿಕಿತ್ಸೆಗಳಿಗೆ ನಗದುರಹಿತ ಸೌಲಭ್ಯ ದೊರಕಲಿದೆ ಎಂದು ಸಹಕಾರ ಇಲಾಖೆ ಹೇಳಿದೆ.

  • ಗಿರಿಜನ ಉಪಯೋಜನೆಯಡಿ ಕುರಿ / ಮೇಕೆ ಘಟಕ ಸ್ಥಾಪನೆಗಾಗಿ ಅರ್ಜಿ ಆಹ್ವಾನ*

    ಬೆಂ.ಗ್ರಾ. ಜಿಲ್ಲೆ, : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ವತಿಯಿಂದ ಗಿರಿಜನ ಉಪಯೋಜನೆಯಡಿ ಕುರಿ/ಮೇಕೆ ಘಟಕ ಸ್ಥಾಪನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

     

    ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಲ್ಲಿ ನೊಂದಾಯಿತ, ಜಿಲ್ಲೆಯ ಚಾಲ್ತಿಯಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯತ್ವ ಹೊಂದಿರುವ 18 ರಿಂದ 60 ವರ್ಷ ವಯೋಮಿತಿಯೊಳಗಿನ ಪರಿಶಿಷ್ಟ ಪಂಗಡದ (ಮಹಿಳಾ ಸದಸ್ಯರಿಗೆ ಮೊದಲ ಆದ್ಯತೆ ಕೊಡಲಾಗುವುದು) ಅರ್ಹ ಅರ್ಜಿದಾರರು ಡಿಸೆಂಬರ್ 17 ರೊಳಗಾಗಿ ಅರ್ಜಿಗಳನ್ನು ಭರ್ತಿ ಮಾಡಿ ಉಪನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ, ಹೆಬ್ಬಾಳ, ಬೆಂಗಳೂರು ಕಛೇರಿಗೆ ಸಲ್ಲಿಸಬಹುದಾಗಿದೆ.

     

    ಅರ್ಜಿ ನಮೂನೆ ಹಾಗೂ ಇತರೆ ವಿವರಗಳಿಗಾಗಿ ಆಯಾ ತಾಲ್ಲೂಕಿನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು/ಕಾರ್ಯದರ್ಶಿ, ಮುಖ್ಯ ಪಶು ವೈದ್ಯಾಧಿಕಾರಿಗಳು ಅಥವಾ ಉಪ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ, ಕುರಿ ಭವನ, ಹೆಬ್ಬಾಳ, ಬೆಂಗಳೂರು ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ರಾಜ್ಯ ಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್. ಧೀರಜ್ ಮುನಿರಾಜು ಯುವ ಬ್ರೀಗೆಡ್ ವತಿಯಿಂದ ರಾಜ್ಯ ಮಟ್ಟದ ಕಬಡ್ಡಿ ಚಾಂಪಿಯನ್ ಶಿಪ್ ಆಯೋಜನೆ

    ದೊಡ್ಡಬಳ್ಳಾಪುರದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಕಬ್ಬಡಿ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನ ಶ್ರೀ ಧೀರಜ್ ಮುನಿರಾಜು ಯುವ ಬ್ರಿಗೇಡ್ ವತಿಯಿಂದ ಜನವರಿ 6, 7 ಮತ್ತು 8ರಂದು ಆಯೋಜಿಸಲಾಗಿದೆ ಎಂದು ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ಮುನಿರಾಜು ತಿಳಿಸಿದರು.

     

    ನಗರದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ನಡೆದ ಪಂದ್ಯಾವಳಿ ಕುರಿತ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ಏಳು ಸಾವಿರಕ್ಕೂ ಅಧಿಕ ಕ್ರೀಡಾಭಿಮಾನಿಗಳು ಮತ್ತು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ 500ಕ್ಕೂ ಅಧಿಕ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ನಗರದ ದರ್ಗಾಪುರ ಖಾಸ್ ಬಾಗ್ ಸಮೀಪದ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದೆ ಎಂದರು

     

    ಬಿಜೆಪಿ ಮುಖಂಡ, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಆನಂದಮೂರ್ತಿ ಮಾತನಾಡಿ ಶಾಸಕ ಧೀರಜ್ ಮುನಿರಾಜುರವರ ಹುಟ್ಟು ಹಬ್ಬದ ಅಂಗವಾಗಿ ಜನವರಿ 6, 7 ಮತ್ತು 8ರಂದು ಮೂರು ದಿನಗಳ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಗಳನ್ನ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳನ್ನು ರಾಜ್ಯಮಟ್ಟದ ತಂಡಕ್ಕೆ ಆಯ್ಕೆ ಮಾಡಲಾಗುತ್ತಿದೆ , ಪಂದ್ಯಾವಳಿಗಳಿಗೆ ಭಾಗವಹಿಸಿ ಜಯಗಳಿಸಿದ ತಂಡಗಳು / ಕ್ರೀಡಾಪಟುಗಳು ಮುಂದೆ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದರು.

     

    ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

     

    ಸಭೆಯಲ್ಲಿ ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ಮುನಿರಾಜು, ತಾಲ್ಲೂಕು ರೈತ ಮೂರ್ಚಾ ಅಧ್ಯಕ್ಷ ಆನಂದ್ ಮೂರ್ತಿ, ಡಿಪಿಎ ಮಾಜಿ ನಿರ್ದೇಶಕ ಎನ್.ಕೆ ರಮೇಶ್, ಹಿರಿಯ ಕಬಡ್ಡಿ ಆಟಗಾರ ಮನ್ಸೂರ್ ಪಾಷ, ಅಂತಾರಾಷ್ಟ್ರೀಯ ರೆಫರಿ ಶಮನಗೌಡ, ಖಜಾಂಚಿ ಆರ್. ಶೇಖರ್, ಕಬಡ್ಡಿ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಶ್ರೀನಾಥ, ಕಾರ್ಯದರ್ಶಿ ಹರೀಶ್, ಉಪಾಧ್ಯಕ್ಷ ನಾಗರಾಜು, ನಗರಸಭಾ ಸದಸ್ಯ ವೆಂಕಟೇಶ್, ಮುಖಂಡರಾದ ಹಾಡೋನಹಳ್ಳಿ ನಾಗರಾಜು, ವಾಸು ಮತ್ತಿತ್ತರಿದ್ದರು.

  • ಕೆರೆಯ ಸುತ್ತ ಕಾಂಪೌಂಡ್ ನಿರ್ಮಿಸುವ ಮೂಲಕ ಕೆರೆ ಅಂಗಳದ ಒತ್ತುವರಿಯನ್ನು ತಪ್ಪಿಸಿ – ಯು. ಮುನಿರಾಜು

    ದೊಡ್ಡಬಳ್ಳಾಪುರ : ಕೆರೆಯಂಗಳದಲ್ಲಿ ಕಸ ವಿಲೇವಾರಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕಿದೆ ಹಾಗೂ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರದೇ ಕೆರೆ ಅಂಗಳದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಯನ್ನು ಅಧಿಕಾರಿಗಳು ಈ ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟು ರಸ್ತೆ ತೆರವುಗೊಳಿಸಬೇಕಿದೆ ಎಂದು ಪ್ರಬುದ್ಧ ಕರ್ನಾಟಕ ಭೀಮಸೇನೆ ರಾಜ್ಯಾಧ್ಯಕ್ಷ ಯು.ಮುನಿರಾಜು ಅಗ್ರಹಿಸಿದರು.

    ಕಂಟನಕುಂಟೆ ಪಂಚಾಯಿತಿ ವ್ಯಾಪ್ತಿಯ ಪಾಲನ ಜೋಗಹಳ್ಳಿ ಕೆರೆ ಅಂಗಳದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಯನ್ನು ತೆರವುಗೊಳಿಸುವಂತೆ ಅಗ್ರಹಿಸಿ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಹಿಂದೆ ಕೆರೆಯ ಅಂಗಳದಲ್ಲಿ ಕಸ ವಿಲೇವಾರಿ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು, ಸದ್ಯ ನಮ್ಮ ಕೆರೆ ಕಸಮುಕ್ತವಾಗಬೇಕಿದೆ ಹಾಗಾಗಿ ಅಧಿಕಾರಿಗಳು ಕೆರೆಯ ಅಂಗಳದಲ್ಲಿ ಕಸ ವಿಲೇವಾರಿಯನ್ನು ಸಂಪೂರ್ಣ ನಿಷೇಧಿಸುವ ಸಲುವಾಗಿ ಕೆರೆಯ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗ ಬೇಕಿದೆ ಎಂದರು.

    ಇದ್ದಕ್ಕಿದ್ದಂತೆ ಕೆರೆಯ ಅಂಗಳದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು ಸರ್ಕಾರಿ ಜಾಗದ ಒತ್ತುವರಿಯಾಗುತ್ತಿದೆ ಎಂದು ಆರೋಪಿಸಿದ್ದರು ಹಾಗೂ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ರಸ್ತೆಯ ಕಾಮಗಾರಿಯನ್ನು ತಡೆದು ರಸ್ತೆಯನ್ನು ತೆರವುಗೊಳಿಸುವ ಮೂಲಕ ಕೆರೆಯನ್ನು ಉಳಿಸಬೇಕೆಂದು ಮನವಿ ಮಾಡಿದರು.

     

    ಭೂ ಪರಿವರ್ತನೆ ಕುರಿತು ಜಿಲ್ಲಾಧಿಕಾರಿಗಳು  ಗಮನಹರಿಸಬೇಕಿದೆ 

    ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೂ ಪರಿವರ್ತನೆ ಪ್ರಕ್ರಿಯೆಯು ಸೂಕ್ತ ದಾಖಲಾತಿಗಳ ಆಧಾರದ ಮೇಲೆ ನೆಡೆಯಬೇಕಿದೆ ಆದರೆ ಕೆಲ ಸ್ಥಳೀಯ ಅಧಿಕಾರಿಗಳು ಸೂಕ್ತ ದಾಖಲಾತಿಗಳನ್ನು ಒದಗಿಸದೇ ಭೂ ಪರಿವರ್ತನೆ ಮಾಡಿಕೊಡುತ್ತಿದ್ದಾರೆ, ಜಿಲ್ಲಾಧಿಕಾರಿಗಳು ಈ ಕುರಿತು ಗಮನಹರಿಸಬೇಕಿದೆ , ಕೆಲ ಪ್ರಭಾವಿಗಳು ಸರ್ಕಾರಿ ಜಾಗಗಳನ್ನು ಕಬಳಿಸಲು ಮುಂದಾಗಿದ್ದು , ಬಡಾವಣೆಗಳ ನಿರ್ಮಾಣದಲ್ಲಿ ಯಾವುದೇ ಕಾನೂನು ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಕಂಡುಬರುತ್ತಿದೆ, ಹಾಗಾಗಿ ಭೂ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಸೂಕ್ತ ದಾಖಲಾತಿಗಳನ್ನು ಪಡೆದು ಸ್ಥಳಕ್ಕೆ ಭೇಟಿ ನೀಡುವ ಮೂಲಕ ಪರಿಶೀಲಿಸಿ ನಂತರ ಭೂ ಪರಿವರ್ತನೆ ಪ್ರಕ್ರಿಯೆಗೆ ಮುಂದಾಗಬೇಕೆಂದು ಮನವಿ ಮಾಡಿದರು.

    ಪ್ರತಿಭಟನೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ವಿ ನಾಗರಾಜು, ರಾಜ್ಯ ಉಪಾಧ್ಯಕ್ಷ ಚೆಲುವ ಹನುಮಯ್ಯ, ರಾಜ್ಯ ಕಾರ್ಯದರ್ಶಿ ಎನ್ ಮುನಿರಾಜು, ರಾಜ್ಯ ಸಂಘಟನಾ ಸಂಚಾಲಕರಾದ ಅಪ್ಪಯಣ್ಣ, ರಾಮಚಂದ್ರ, ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಕಾರ್ಯಧ್ಯಕ್ಷ ರಘು, ವಿಭಾಗೀಯ ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ ರಾಮ್, ದೇವನಹಳ್ಳಿ ತಾಲೂಕು ಉಪಾಧ್ಯಕ್ಷ ಶಿವಾನಂದ್ ಸೇರಿದಂತೆ ಹಲವರು ಹಾಜರಿದ್ದರು.