Blog

  • *ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಲವು ಸಾಧಕರಿಗೆ ಸನ್ಮಾನ*

    ದೊಡ್ಡಬಳ್ಳಾಪುರ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

     

    ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ಉಪ ವಿಬಾಗಾಧಿಕಾರಿ ದುರ್ಗ ಶ್ರೀ, ತಾಲೂಕು ದಂಡಾಧಿಕಾರಿಗಳಾದ ವಿದ್ಯಾ ವಿಭಾ ರಾಥೋಡ್ ಸೇರಿದಂತೆ ಹಲವು ಗಣ್ಯರು ಪ್ರಶಂಸನಾ ಪತ್ರ ನೀಡುವ ಮೂಲಕ ಸನ್ಮಾನಿಸಿ ಗೌರವಿಸಿದರು

     

     

    ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಸಿದ್ದಯ್ಯ, ಕೃಷಿ ಕ್ಷೇತ್ರದಿಂದ ಹಳ್ಳಿರೈತ ಅಂಬರೀಶ್,ನಾಟಕ ಕ್ಷೇತ್ರದಿಂದ ಕಲಾವಿದರಾದ ಆಶ್ವತ ನಾರಾಯಣ, ಸಾಹಿತ್ಯ ಕ್ಷೇತ್ರದಿಂದ ಅಂಜನ್ ಗೌಡ (ಅಂಜನ್), ಆರೋಗ್ಯ ಇಲಾಖೆಯಿಂದ ಡಾ. ಜಿ ರಾಜು, ಏನ್ ಸಿ ಸಿ ಕ್ಷೇತ್ರದಿಂದ ಜಿ. ಹಿತೇಶ್, ಶುಶ್ರುಷಕ ಜಯಕುಮಾರ್, ಪತ್ರಿಕೋದ್ಯಮ ಕ್ಷೇತ್ರದಿಂದ ಹಿರಿಯ ಪತ್ರಕರ್ತರಾದ ಕೊತ್ತೂರಪ್ಪ ರವರಿಗೆ ಪ್ರಶಂಸನಾ ಪತ್ರ ನೀಡುವ ಮೂಲಕ ಗಣ್ಯರು ಗೌರವಿಸಿದರು.

     

    ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಾಟಕ ರಂಗದ ಕಲಾವಿದರಾದ ಡಾ. ಕೃಷ್ಣಮೂರ್ತಿ ಕೆ.ಎಂ., ಕರ್ನಾಟಕ ಸಂಗೀತ ಅಕಾಡೆಮಿ ಸದಸ್ಯರಾದ ನಿರ್ಮಲ ಡಿ ಆರ್, ಲವಕುಮಾರ್ ಟಿ ಎಚ್, ಜನಪದ ಅಕಾಡೆಮಿ ಸದಸ್ಯರಾದ ಹುಲಿಕುಂಟೆ ಮೂರ್ತಿ ರವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

     

     

    ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರರು, ಪ್ರಗತಿಪರ ಚಿಂತಕರು, ತಾಲೂಕಿನ ಮುಖಂಡರು, ವಿವಿಧ ಶಾಲೆಗಳ ಶಾಲಾ ಮಕ್ಕಳು, ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು

  • *ಆಗಸ್ಟ್ 15 ನಮ್ಮ ಪೂರ್ವಜರ ಹೋರಾಟದ ಸಂಕೇತವಾಗಿದೆ – ಚಿಕ್ಕ ಗಂಗಯ್ಯ*

    ದೊಡ್ಡಬಳ್ಳಾಪುರ ಆಗಸ್ಟ್ 15( ವಿಜಯಮಿತ್ರ) : ಸ್ವಾತಂತ್ರ್ಯ ದಿನಾಚರಣೆಯ ಕುರಿತು ಮಕ್ಕಳಿಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಭೀಮಾನ, ದೇಶಪ್ರೇಮ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕಿದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಶಶಿಕುಮಾರ್  ತಿಳಿಸಿದರು.

    ತಾಲೂಕಿನ ರಾಜೀವ್ ಗಾಂಧಿ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿ, ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಪಟ್ಟ ಕಷ್ಟ,ತ್ಯಾಗ, ಬಲಿದಾನಗಳ ಬಗ್ಗೆ ತಿಳಿಸುವ ಅಗತ್ಯ ಇದೆ. ದೇಶ ಮೊದಲು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಹಾಗಾಗಿ ಬಾಲ್ಯದಲ್ಲಿಯೇ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟ ಕುರಿತ ಚರಿತ್ರೆ ತಿಳಿಸಬೇಕಿದೆ ಎಂದರು.

     

    ಶಾಲೆಗೆ ಮುಖ್ಯ ಶಿಕ್ಷಕರಾದ ಎಸ್.ಚಿಕ್ಕಗಂಗಯ್ಯ ಮಾತನಾಡಿ ನಮ್ಮ ಭಾರತ ನಮಗೆ ಸುಮ್ಮನೆ ಸಿಕ್ಕಿಲ್ಲ, ಈ ಸ್ವಾತಂತ್ರ್ಯ ಭಾರತ ದೇಶಕ್ಕಾಗಿ ಲೆಕ್ಕವಿಲ್ಲದಷ್ಟು ಮಹಾನುಭಾವರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ . ಆಗಸ್ಟ್ 15 ನಮ್ಮ ಪೂರ್ವಜರ ಹೋರಾಟದ ಸಂಕೇತವಾಗಿದೆ. ಇಂದಿನ ಮಕ್ಕಳು, ಯುವಕರು ನಮಗೆ ಲಭಿಸಿರುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳದೆ, ದೇಶ ಕಟ್ಟಿ ಉಳಿಸುವ ಮಾರ್ಗದಲ್ಲಿ ಚಿಂತಿಸಬೇಕಿದೆ ಎಂದರು.

    ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವಿವಿಧ ರೀತಿಯ ಸಂಸ್ಕೃತಿಕ ಚಟುವಟಿಕೆಗಳು ಮಾಡುವ ಮೂಲಕ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.

     

    ಕಾರ್ಯಕ್ರಮದಲ್ಲಿ ಶಿವಣ್ಣ, ಸದಾಶಿವಣ್ಣ, ದಿವ್ಯಾ, ಭವ್ಯ ಶಿವಕುಮಾರ್ , ಆಶಾ, ಶಶಿಕುಮಾರ್, ಸರಸ್ವತಮ್ಮ ಸೇರಿದಂತೆ ಬಡಾವಣೆಯ ಹಲವು ಮುಖಂಡರು ಉಪಸ್ಥಿರಿದ್ದರು.

  • *78ನೇ ಸ್ವತಂತ್ರ ದಿನಾಚರಣೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ : ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಗುರುತಿಸಿ ಹಳ್ಳಿ ರೈತ ಅಂಬರೀಶ್ ಗೆ ಪ್ರಶಂಸನಾಪತ್ರ ವಿತರಣೆ*

    ದೊಡ್ಡಬಳ್ಳಾಪುರ ಆಗಸ್ಟ್ 15b(ವಿಜಯಮಿತ್ರ) : 78 ನೇ ಭಾರತ ಸ್ವಾತಂತ್ರೋತ್ಸವದ ಅಂಗವಾಗಿ ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹಳ್ಳಿರೈತ ಅಂಬರೀಶ್ ರವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದನಾಪೂರ್ವಕವಾಗಿ ಗೌರವಿಸಲಾಯಿತು.

     

    ತಾಲ್ಲೂಕಿನ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ 78 ನೇ ಭಾರತ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿರುವ ಗಣ್ಯರಿಗೆ ಪ್ರಶಸ್ತಿ ಪಡೆದ ಪ್ರಧಾನ ಮಾಡಲಾಯಿತು ಅಂತೆಯೇ ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹಳ್ಳಿರೈತ ಅಂಬರೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

     

     

    ಈ ಕುರಿತು ಹಳ್ಳಿ ರೈತ ಅಂಬರೀಶ್ ಮಾತನಾಡಿ ಕೃಷಿ ಕ್ಷೇತ್ರದಲ್ಲಿ ನಾನು ಸಲ್ಲಿಸಿರುವ ನಿಸ್ವಾರ್ಥ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಇದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ . ರೈತರ ಪರ ಧ್ವನಿಯಾಗಿ ಸದಾ ಶ್ರಮಿಸುತ್ತೇನೆ. ಹಳ್ಳಿ ರೈತನ ಉಳಿವು ನನ್ನ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

     

    ಈ ಪ್ರಶಸ್ತಿ, ಗೌರವ ನನ್ನದಲ್ಲ ಪ್ರತಿನಿತ್ಯ ಬಿಸಿಲು ಮಳೆಯನ್ನು ಲೆಕ್ಕಿಸದೆ ಶ್ರಮಿಸುವ ಪ್ರತಿ ಹಳ್ಳಿ ರೈತನಿಗೆ ಸಲ್ಲುತ್ತದೆ . ಅವರ ಪ್ರತಿನಿಧಿಯಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ ಅಷ್ಟೇ ಎಂದರು.

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ಉಪ ವಿಭಾಗಾಧಿಕಾರಿ ದುರ್ಗಾ ಶ್ರೀ , ತಾಲ್ಲೂಕು ದಂಡಧಿಕಾರಿಗಳಾದ ವಿದ್ಯ ವಿಭಾ ರಾಥೋಡ್ ಸೇರಿದಂತೆ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

  • *ಅಕ್ರಮ ದಾಖಲೆ ಸೃಷ್ಟಿಸಿ, ಭೂಕಬಳಿಕೆ ಆರೋಪ : ಭೂಮಿ ಉಳಿಸಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ ರೈತ ಕುಟುಂಬ*

    ದೊಡ್ಡಬಳ್ಳಾಪುರ : ಕಳೆದ 50 ವರ್ಷಗಳಿಂದ ಅನುಭವದಲ್ಲಿದ್ದು, ಸುಮಾರು 30 ವರ್ಷಗಳ ಹಿಂದೆ ಹಕ್ಕು ಪತ್ರ ಪಡೆದು ಕಿಮ್ಮತ್ತು ಕಟ್ಟಿ ಪಡೆದ ಭೂಮಿಯೊಂದಿಗೆ ಬದುಕು ಕಟ್ಟಿಕೊಂಡಿರುವ ಕುಟುಂಬ ನಮ್ಮದಾಗಿದ್ದು . ಈಗ ಕೆಲ ಪ್ರಭಾವಿಗಳು ನಮ್ಮ ಜಮೀನಿಗೆ ಸಂಬಂಧಿಸಿದಂತೆ ಅಕ್ರಮ ದಾಖಲೆಗಳು ಸೃಷ್ಟಿಸಿ ನಮ್ಮ ಭೂಮಿಯನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗಾಯತ್ರಿಮ್ಮ ತಿಳಿಸಿದರು.

     

    ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಕೆಲ ಪ್ರಭಾವಿಗಳು, ದಲ್ಲಾಳಿಗಳು ನಮ್ಮನ್ನು ಒಕ್ಕಲೆಬ್ಬಿಸಲು ಹಾಗೂ ಅಕ್ರಮವಾಗಿ ನಮ್ಮ ಭೂಮಿಯನ್ನು ಸ್ವಾದೀನ ಪಡೆಸಿಕೊಳ್ಳಲು ವಾಮಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅಧಿಕಾರಿಗಳು ಅವರಿಂದ ನಮಗೆ ರಕ್ಷಣೆ ಕಲ್ಪಿಸಬೇಕೆಂದು ಜಮೀನಿನ ಮಾಲೀಕರಾದ ಗಾಯತ್ರಮ್ಮ ಮಾದ್ಯಮಗಳ ಮುಂದೆ ಮನವಿ ಮಾಡಿದರು.

     

    ಜಮೀನಿನ ಮುಂಜೂರಾತಿ ಕುರಿತು ಮಾತನಾಡಿದ ಅವರು

    ತಾಲೂಕಿನ ತೂಬಗೆರೆ ಹೋಬಳಿಯ ಕಣಿವೆಪುರ ಗ್ರಾಮದ ಸರ್ವೆ ನಂಬರ್ 102/1 ರಲ್ಲಿ ಇರುವ 2.10ಗುಂಟೆ ಜಮೀನಿಗೆ ಸಂಬಂಧಿಸಿದಂತೆ ನರಸಪ್ಪನವರ ಮಗನಾದ ಕೃಷ್ಣಪ್ಪನವರಿಗೆ ಆರ್ ಎಸ್ ಜಾಲಪ್ಪನವರು ಭೂ ಮಂಜೂರಾತಿ ಸಲಹೆ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಟಿ ಕೆಂಪಹನುಮಯ್ಯ, ಲಕ್ಷ್ಮಿದೇವಮ್ಮ, ಕೆ. ಸಿ.ಗುರುರಾಜಪ್ಪ. ರವರ ಸಮಿತಿಯ ಆದೇಶದಂತೆ 1994- 95ರಲ್ಲಿ ಕಿಮ್ಮತ್ತಿನ ಮೂಲಕ ಷರತ್ತುಗಳನ್ನು ಒಳಗೊಂಡ ಹಕ್ಕು ಪತ್ರವನ್ನು ಸರ್ವೇ ನಂಬರ್ 102 ರಲ್ಲಿ 2.10ಗುಂಟೆ ಜಮೀನಿನಲ್ಲಿ ಕೃಷ್ಣಪ್ಪ ಬಿನ್ ನರಸಪ್ಪ ರವರ ಹೆಸರಿಗೆ ನೀಡಿದ್ದು. ಸದರಿ ಸರ್ವೆ ನಂಬರ್ ನ 2. 10ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಪ್ರತಿ ವರ್ಷವೂ ಕಂದಾಯ ಕಟ್ಟುವ ಮೂಲಕ ವ್ಯವಸಾಯ ಮಾಡಿ ಜೀವನೋಪಾಕ್ಕೆ ಮಾರ್ಗ ಮಾಡಿಕೊಂಡು ನಮ್ಮ ಜೀವನ ಸಾಗಿಸುತ್ತಿದ್ದೇವೆ ಎಂದು ತಿಳಿಸಿದರು.

     

    ಈ ಮಧ್ಯೆ ನಮ್ಮ ಭೂಮಿಯನ್ನು ಚಿಕ್ಕಬಳ್ಳಾಪುರದ ನಿವಾಸಿ ಆಂಧ್ರ ಮೂಲದ ಕೆಲ ಪ್ರಭಾವಿಗಳ ಬೆಂಬಲದಿಂದ ನಕಲಿ ದಾಖಲೆ ಸೃಷ್ಟಿಸಿ ಅವರ ಹೆಸರಿಗೆ ಎಸಿ ಕಛೇರಿಯಲ್ಲಿ ಅಕ್ರಮವಾಗಿ ಆದೇಶ ಮಾಡಿಸಿಕೊಂಡಿದ್ದಾರೆ ಹಾಗೆಯೇ ಡಿಸಿ ಕಚೇರಿಯಲ್ಲಿ ಆರ್. ಪಿ.ಸಂಖ್ಯೆ 102/2015-16 (ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ) ಅಕ್ರಮವಾಗಿ ಆದೇಶ ಮಾಡಿಸಿಕೊಂಡಿದ್ದಾರೆ.ನಮ್ಮ ಜಮೀನಿಗೆ ಅಕ್ರಮವಾಗಿ ಆರ್ ಟಿ ಸಿ ಬದಲಾವಣೆಗೆ ಆದೇಶ ಮಾಡಿಸುವ ಮೂಲಕ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಗಾಯಿತ್ರಮ್ಮ ಆರೋಪಿಸಿದ್ದಾರೆ.

     

    ನನ್ನ ಗಂಡನಾದ ಕೆ ರಾಜುರವರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ನ್ಯಾಯಾಲಯ ಪೊಲೀಸ್ ಠಾಣೆಗೆ ನಾನೇ ಓಡಾಡುವ ಪರಿಸ್ಥಿತಿ ಎದುರಾಗಿದ್ದು, ನಮ್ಮದು ಸಾಮಾನ್ಯ ಬಡ ಕುಟುಂಬ ಈಗಾಗಲೇ ಸಾಕಷ್ಟು ನೊಂದು ಬೆಂದಿದ್ದೇವೆ. ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದರೂ ಸಹ ನಮ್ಮ ಭೂಮಿಗೆ ಅತಿಕ್ರಮ ಪ್ರವೇಶ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳು ಪ್ರಬಲ ವ್ಯಕ್ತಿಗಳ ಬೆಂಬಲಕ್ಕೆ ನಿಂತಿದ್ದು ನಮ್ಮ ಕಷ್ಟ ಯಾರಿಗೂ ಕಾಣದಂತಾಗಿದೆ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಕಣ್ಣೀರು ಹಾಕಿದರು.

     

    ನರಸಿಂಹಮೂರ್ತಿ ಮಾತನಾಡಿ ಯಾವುದೇ ರೀತಿಯ ಮೂಲ ದಾಖಲಾತಿಗಳಿಲ್ಲದಿದ್ದರೂ ಅಕ್ರಮವಾಗಿ ನಮ್ಮ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ನಮ್ಮ ಬದುಕಿಗೆ ಆಸರೆಯಾಗಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ಇದು ನಮ್ಮ ಭೂಮಿ ಸ್ಥಳೀಯ ಅಧಿಕಾರಿಗಳು ಇನ್ನಾದರೂ ಎಚ್ಚೆದ್ದು ಬಡವರ ಪರ ನ್ಯಾಯ ನೀಡಬೇಕು ಎಂದು ಮನವಿ ಮಾಡಿದರು.

     

    ಈ ಕುರಿತಂತೆ ದೊಡ್ಡಬಳ್ಳಾಪುರ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು ಓ ಎಸ್ ಸಂಖ್ಯೆ 97/2024 ರ ಅನ್ವಯ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದು ಪ್ರಸ್ತುತ ವಿಚಾರಣೆ ಹಂತದಲ್ಲಿದೆ. ಆದರೆ, ನ್ಯಾಯಾಲಯದ ಆದೇಶವನ್ನು ಲೆಕ್ಕಿಸದೆ ಭೂಗಳ್ಳರು, ದಲ್ಲಾಳಿಗಳು ನಮ್ಮನ್ನು ಸದರಿ ಸ್ಥಳದಿಂದ ಒಕ್ಕಲೆಬ್ಬಿಸಲು ಭೂಮಿಯನ್ನು ಸ್ವಾಧೀನ ಪಡೆದುಕೊಳ್ಳಲು ಅಕ್ರಮ ಮಾರ್ಗಗಳನ್ನು ಅನುಸರಿಸುತ್ತಿದ್ದು. ನಮಗೆ ರಕ್ಷಣೆ ನೀಡಬೇಕು ಎಂದು ಪೊಲೀಸ್ ಹಾಗೂ ನ್ಯಾಯಾಲಯಕ್ಕೆ ಮನವಿ ಮಾಡಿದರು.

  • *1600ನೇ ದಿನಕ್ಕೆ ಕಾಲಿಟ್ಟ ನಿರಂತರ ಅನ್ನದಾಸೋಹ ಕಾರ್ಯಕ್ರಮ : ಕಾರ್ಯಕ್ರಮದ ದಾನಿಗಳಾಗಿ ಶಾಲಾ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಕಿರಣ್*

    ದೊಡ್ಡಬಳ್ಳಾಪುರ (ವಿಜಯಮಿತ್ರ) :ತಾಲೂಕಿನ ಬಾಶೆಟ್ಟಿಹಳ್ಳಿ ಅಂಬೇಡ್ಕರ್ ನಗರದ ನಿವಾಸಿ ಕಿರಣ್ ಕುಮಾರ್ ಅವರು ತಮ್ಮ 24ನೇ ಹುಟ್ಟು ಹಬ್ಬವನ್ನು ನಿರಂತರ ಹಣದ ಸಹ ಸಮಿತಿಯೊಂದಿಗೆ ಆಚರಿಸಿಕೊಂಡರು.

    ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಮಾಡುವ ಮೂಲಕ ಹಾಗೂ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ತಮ್ಮ ಈ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

    ಕಾರ್ಯಕ್ರಮದಲ್ಲಿ ದಾನಿಗಳಾದ ಸುನಿಲ್ ಮಾತನಾಡಿ ಹಲವಾರು ದಿನಗಳಿಂದ ಮಲ್ಲೇಶ್ ಅವರು ಮಾಡುತ್ತಿರುವ ಅನ್ನದಾಸೋಹದ ಬಗ್ಗೆ ತಿಳಿದಿದ್ದು. ಇಂದು ನನ್ನ ಆತ್ಮೀಯ ಗೆಳೆಯ ಕಿರಣ್ ರವರ ಹುಟ್ಟು ಹಬ್ಬವನ್ನು ನಿರಂತರ ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಲು ಇಚ್ಛಿಸಿದ್ದು. ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ ವಿತರಣೆ ಹಾಗೂ ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಿಕೊಂಡಿರುವುದು ಸಂತಸತಂದಿದೆ ಎಂದರು.

     

    ದಾನಿಗಳಾದ ಕಿರಣ್ ಮಾತನಾಡಿ ಪ್ರತಿ ವರ್ಷವು ಅನಗತ್ಯ ದುಂದು ವೆಚ್ಚ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ಬಾರಿ ವಿಶೇಷವಾಗಿ ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಹಾಗೂ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವುದು ವಿಶೇಷವೆನಿಸುತ್ತದೆ ಮುಂದೆ ಇದೇ ರೀತಿ ನಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಲು ನಿರ್ಧರಿಸಿದ್ದೇನೆ ಎಂದರು.

     

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ 1600ನೇ ದಿನದ ದಾನಿಗಳಾಗಿ ತಮ್ಮ ಹುಟ್ಟು ಹಬ್ಬದ ಆಚರಣೆಯನ್ನು ವಿಶೇಷವಾಗಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಪೆನ್ ವಿತರಣೆ ಮಾಡುವ ಮೂಲಕ ಹಾಗೂ ನಿರಾಶ್ರಿತ ಕಡುಬಡವರಿಗೆ, ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಕಿರಣ್ ರವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ತಮ್ಮ ಹುಟ್ಟು ಹಬ್ಬಕ್ಕೆ ದುಂದು ವೆಚ್ಚ ಮಾಡುವ ಮೂಲಕ ಹಣ ವ್ಯರ್ಥ ಮಾಡದೆ ಅವಶ್ಯಕತೆ ಇರುವ ಜನರಿಗೆ ದಾನ ಮಾಡಿರುವುದು ಶ್ಲಾಘನಿಯ ಸಂಗತಿಯಾಗಿದೆ ಎಂದರು.

    ಸಮಾಜದಲ್ಲಿ ದಾನ ಮಾಡಲು ಇಚ್ಚಿಸುವ ಯಾರಾದರೂ ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸುವಂತೆ ಮನವಿ ಮಾಡಿದರು.

     

    ಈ ಸಂದರ್ಭದಲ್ಲಿ ಕಿರಣ್ ಕುಟುಂಬಸ್ಥರು, ಅನ್ನದಾಸೋಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

  • *78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿ*

    ದೊಡ್ಡಬಳ್ಳಾಪುರ: 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಗಳನ್ನು ತಾಲೂಕಿನ ಮುತ್ತೂರು ಗ್ರಾಮದಲ್ಲಿ ಆಯೋಜನೆ ಮಾಡಲಾಗಿದೆ.

     

    ಬಿಎಸ್ಎಲ್ ಕಬ್ಬಡಿ ಕ್ಲಬ್ ಮುತ್ತೂರು ಗ್ರಾಮಸ್ಥರ ವತಿಯಿಂದ ಆಗಸ್ಟ್ 14 ಮತ್ತು 15ರಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಎಸ್ ಹರೀಶ್ ಗೌಡ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಬಿಎಸ್ಎಲ್ ಕಬಡ್ಡಿ ಕ್ಲಬ್ ತಿಳಿಸಿದೆ.

     

    ಸ್ವಾತಂತ್ರ್ಯ ದಿನಾಚರಣೆಯು ಸಂಭ್ರಮಾಚರಣೆಯ ದಿನವಾಗಿದ್ದು. ಯುವಕರಲ್ಲಿ ಕ್ರೀಡೋತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಇಂದಿನ ಯುವಪೀಳಿಗೆ ಕೇವಲ ಮೊಬೈಲ್ ಪ್ರಪಂಚಕ್ಕೆ ಅಂಟಿಕೊಂಡಿದ್ದು ಸಮಾಜದಲ್ಲಿ ಬೆರೆಯುವುದೇ ಕಷ್ಟಕರ ವಿಷಯವಾಗಿದೆ. ಇಂತಹ ಕ್ರೀಡೆಗಳು ಸಮಾಜದಲ್ಲಿ ಯುವಕರು ಎಲ್ಲರೂ ಒಟ್ಟಿಗೆ ಸಹ ಬಾಳ್ವೆಯಿಂದ ಜೀವಿಸಲು ಸಹಕಾರಿಯಾಗಿವೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

     

    ಕಾರ್ಯಕ್ರಮವು ಇಂದು ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು ಕಾರ್ಯಕ್ರಮಕ್ಕೆ ತಾಲೂಕಿನ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಗೆ ಸಾಕಷ್ಟು ತಂಡಗಳು ಈಗಾಗಲೇ ಹೆಸರನ್ನು ನೋಂದಾಯಿಸಿಕೊಂಡಿದ್ದು. ಸ್ಥಳೀಯರ ಉತ್ತಮ ಪ್ರೋತ್ಸಾಹದಿಂದ ಈ ಕಾರ್ಯಕ್ರಮ ನಡೆಯಲಿದೆ ಎಂದು ಜೆಡಿಎಸ್ ಮುಖಂಡ ಪ್ರವೀಣ್ ಶಾಂತಿನಗರ ತಿಳಿಸಿದ್ದಾರೆ.

  • *ಭಾರತ ಸೇವಾದಳದ ನೂತನ ತಾಲೂಕು ಅಧ್ಯಕ್ಷರಾಗಿ ಆರ್ ವಿ ಮಹೇಶ್ ಆಯ್ಕೆ : ಅಭಿನಂದನೆ ಸಲ್ಲಿಸಿದ ಶಿಕ್ಷಕರ ತಂಡ*

    ದೊಡ್ಡಬಳ್ಳಾಪುರ : ಭಾರತ ಸೇವಾದಳದ ನೂತನ ತಾಲೂಕು ಘಟಕ ಅಧ್ಯಕ್ಷರಾದ ಆರ್.ವಿ.ಮಹೇಶ್ ಕುಮಾರ್ ರವರನ್ನು ತಾಲೂಕು ಶಿಕ್ಷಕರ ತಂಡ ಸನ್ಮಾನಿಸಿ ಗೌರವಿಸಿದ್ದರು.

     

    ಭಾರತ ಸೇವಾದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸಾಮಾಜಿಕ ಹೋರಾಟಗಾರ ಆರ್ ವಿ ಮಹೇಶ್ ರನ್ನು ಭಾರತ ಸೇವಾದಳದ ತಾಲೂಕು ಸಮಿತಿಯ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಶಿಕ್ಷಕರ ತಂಡ ಅವರಿಗೆ ಪುಷ್ಪ ಮಾಲೆ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದರು.

     

    ಈ ಸಂದರ್ಭದಲ್ಲಿ ಭಾರತ ಸೇವಾದಳದ ನೂತನ ತಾಲ್ಲೂಕು ಅಧ್ಯಕ್ಷ ಆರ್ ವಿ ಮಹೇಶ್ ಮಾತನಾಡಿ ಜಿಲ್ಲಾ ಸಮಿತಿಯು ನನಗೆ ಉತ್ತಮ ಜವಾಬ್ದಾರಿಯನ್ನು ಕೊಟ್ಟಿದ್ದು ಶಿಕ್ಷಕರ ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಉತ್ತಮ ಹಾದಿಯಲ್ಲಿ ಭಾರತ ಸೇವಾದಳವನ್ನು ನಡೆಸುವ ಭರವಸೆ ನೀಡುತ್ತೇನೆ. ತಾಲೂಕಿನ ಪ್ರತಿ ಶಾಲೆಯಲ್ಲಿ ಸೇವಾದಳದ ಘಟಕಕ್ಕೆ ಚಾಲನೆ ನೀಡುವ ಮೂಲಕ ಮಕ್ಕಳಲ್ಲಿ ಉತ್ತಮ ಸೇವಾ ಭಾವನೆ ಮೂಡಿಸಲಾಗುವುದು ಎಂದು ತಿಳಿಸಿದರು.

     

    ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸ್ನೇಹಜೀವಿ ಸಮಾಜ ಸೇವಕರಾದ ಆರ್ ವಿ ಮಹೇಶ್ ರವರು ಭಾರತ ಸೇವಾದಳವನ್ನು ಉತ್ತಮ ರೀತಿಯಲ್ಲಿ ನಡೆಸುತ್ತಾರೆ ಎಂಬ ನಂಬಿಕೆ, ವಿಶ್ವಾಸ ನಮಗಿದೆ. ಅವರಿಗೆ ನಮ್ಮ ಶಿಕ್ಷಕರ ಬೆಂಬಲ ಸದಾ ಇರುತ್ತದೆ ಎಂದು ತಾಲೂಕಿನ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ತೂಬಗೆರೆ ಹೋಬಳಿಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಸಿದ್ದಪ್ಪ, ವಸಂತ ಗೌಡ, ನರಸಿಂಹ ಮೂರ್ತಿ,ಯುವ ನಾಯಕ ನರಸಿಂಹ ಮೂರ್ತಿ ಮುದ್ದೇನಹಳ್ಳಿ , ಸುನೀಲ್, ನಾರಾಯಣ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • *ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಬಳಕೆ ನಿಷೇಧ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್‌. 12, 2024 (ವಿಜಯಮಿತ್ರ):- ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದ್ದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ.

     

    ರಾಜ್ಯಾದ್ಯಂತ ಪ್ಲಾಸ್ಟಿಕ್ ಬಾವುಟ ಸೇರಿದಂತೆ ಕೆಲವು ಪ್ಲಾಸ್ಟಿಕ್ ಪದಾರ್ಥಗಳ ಬಳಕೆಯನ್ನು ನಿಷೇಧಿಸಲಾಗಿದ್ದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಭಾರತ ಸರ್ಕಾರವು ಸಹ ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಿಸಿದ ಪ್ಲಾಸ್ಟಿಕ್ ಧ್ವಜಗಳ (SUP) ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು 2022 ರ ಜುಲೈ 01 ರಿಂದ ನಿಷೇಧಿಸಿದೆ.

    Ad

    ರಾಷ್ಟ್ರೀಯ ಗೌರವ ಕಾಯ್ದೆ, 1971 ಮತ್ತು ಭಾರತದ ಧ್ವಜ ಸಂಹಿತೆ 2002 ರಡಿ ಎಲ್ಲಾ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಪ್ರಮುಖ ರಾಷ್ಟ್ರೀಯ, ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳ ಸಂದರ್ಭಗಳಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನು ಬಳಸುವಂತಿಲ್ಲ.

     

    ಪ್ಲಾಸ್ಟಿಕ್ ಬಾವುಟಗಳನ್ನು ಬಳಸುವ ಬದಲಿಗೆ ಕಾಗದ ಮತ್ತು ಬಟ್ಟೆಗಳಿಂದ ತಯಾರಿಸಿದ ಬಾವುಟಗಳನ್ನು ಬಳಸಬಹುದಾಗಿದೆ. ಕಾರ್ಯಕ್ರಮಗಳ ಬಳಿಕ ಉಪಯೋಗಿಸಿದ ಧ್ವಜಗಳನ್ನು ಧ್ವಜದ ಘನತೆಗೆ ಅನುಗುಣವಾಗಿ ವಿಲೇವಾರಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

  • *ಹೊಸಕೋಟೆಯಲ್ಲಿ ಅನಿರೀಕ್ಷಿತ ದಾಳಿ: ಒಬ್ಬ ಕಿಶೋರ ಕಾರ್ಮಿಕರ ರಕ್ಷಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್. 12, (ವಿಜಯಮಿತ್ರ):- ಜಿಲ್ಲಾ ಬಾಲಕಾರ್ಮಿಕ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ-1098 ಹಾಗೂ ಶಿಕ್ಷಣ ಇಲಾಖೆ ಇವರ ಜಂಟಿಯಾಗಿ ಹೊಸಕೋಟೆ ಟೌನ್ ಹಾಗೂ ದೊಡ್ಡದುನ್ನಸಂದ್ರದಲ್ಲಿ ವಿವಿಧ ಸ್ಥಳಗಳಲ್ಲಿ ಸೋಮವಾರದಂದು ಬಾಲ ಕಾರ್ಮಿಕರ ಹಾಗೂ ಕಿಶೋರ ಕಾರ್ಮಿಕರ ಅನಿರೀಕ್ಷಿತ ತಪಾಸಣೆ ಹಾಗೂ ದಾಳಿಯನ್ನು ನಡೆಸಿದರು.

     

    ಈ ತಪಾಸಣೆ ವೇಳೆಯಲ್ಲಿ ಒಬ್ಬ ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದರು.

     

    ಅಲ್ಲದೇ ವಿವಿಧ ಸ್ಥಳಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ದುಡಿಮೆಗೆ ನೇಮಿಸಿಕೊಳ್ಳದಂತೆ ಅಂಗಡಿಗಳು, ಗ್ಯಾರೇಜುಗಳು, ಬೇಕರಿಗಳು, ಚಿಕನ್ ಮತ್ತು ಮಟನ್ ಅಂಗಡಿಗಳು, ಇಟ್ಟಿಗೆ ಕಾರ್ಖಾನೆ ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ, ಮಾಲೀಕರಿಗೆ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, 14 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ ಅಂತಹವರಿಗೆ ಕನಿಷ್ಠ 06 ತಿಂಗಳಿಗಿಂತ ಕಡಿಮೆ ಇಲ್ಲದಂತೆ ಮತ್ತು ಗರಿಷ್ಠ 02 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ರೂ. 20,000/- ಗಳಿಗಿಂತ ಕಡಿಮೆ ಇಲ್ಲದಂತೆ ಮತ್ತು ರೂ. 50,000/- ಸಾವಿರದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಾಗೃತಿ ಮೂಡಿಸಿದರು.

    Ad

    ಇದೇ ವೇಳೆ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಕರಪತ್ರವನ್ನು ಮತ್ತು ಭಿತ್ತಿಪತ್ರಗಳನ್ನು ಅಂಗಡಿಗಳ ಮಾಲೀಕರಿಗೆ ವಿತರಿಸುವ ಮೂಲಕ ಇನ್ನು ಮುಂದೆ ತಮ್ಮ ಸುತ್ತಮುತ್ತಲಿನಲ್ಲಿ ಯಾವುದೇ ಮಕ್ಕಳನ್ನು ನೇಮಿಸಿಕೊಂಡಿರುವುದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಮತ್ತು ಪೋಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 112 ಕರೆ ಮಾಡುವುದರ ಮೂಲಕ ಮಕ್ಕಳನ್ನು ರಕ್ಷಣೆ ಮಾಡಲು ಸಾರ್ವಜನಿಕರು ಹಾಗೂ ಅಂಗಡಿಗಳ ಮಾಲೀಕರು ಸಹಕಾರ ನೀಡುವಂತೆ ಅಧಿಕಾರಿಗಳು ಸೂಚಿಸಿದರು.

    ಅಲ್ಲದೇ ಹೊಸಕೋಟೆ ಪಟ್ಟಣದ ವಿವಿಧ ಸ್ಥಳಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕರನ್ನು ದುಡಿಮೆಗೆ ನೇಮಿಸಿಕೊಂಳ್ಳದಂತೆ ಅಂಗಡಿಗಳು, ಗ್ಯಾರೇಜುಗಳು, ಬೇಕರಿಗಳು, ಚಿಕನ್ ಮತ್ತು ಮಟನ್ ಅಂಗಡಿಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಮಾಲೀಕರಿಗೆ ಕರಪತ್ರಗಳನ್ನು ಹಂಚಿ ಮಾಲೀಕರಿಗೆ ಹಾಗೂ ಸ್ಥಳಗಳಲ್ಲಿ ಇದ್ದ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಲಾಯಿತು.

     

    ಅನಿರೀಕ್ಷಿತ ತಪಾಸಣೆ ಹಾಗೂ ದಾಳಿಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್ ಎಸ್ ಎಲ್, ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಸುಬ್ಬಾರಾವ್. ಎಸ್, ಕಾರ್ಮಿಕ ನಿರೀಕ್ಷಕರಾದ ಯತೀಶ್ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮ್ಮ, ಶಿಕ್ಷಣ ಇಲಾಖೆಯ ಬಿ ಆರ್ ಪಿ ನಟರಾಜು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ನರಸಿಂಹ ರಾಜು, ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಸೌಮ್ಯ ಹಾಗೂ ಮಲ್ಲಿಕಾರ್ಜುನ ಹಾಜರಿದ್ದರು.

  • *ದೊಡ್ಡಬಳ್ಳಾಪುರ ಹಿಂದೂ ಹಿತರಕ್ಷಣಾ ವೇದಿಕೆ ಸುದ್ದಿಗೋಷ್ಠಿ : ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸಂರಕ್ಷಣೆಗೆ ಭಾರತ ಸರ್ಕಾರ ಮಧ್ಯ ಪ್ರವೇಶಿಸುವಂತೆ ಆಗ್ರಹ*

    ದೊಡ್ಡಬಳ್ಳಾಪುರ :ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಅಕ್ರಮಣವನ್ನು ನಿಲ್ಲಿಸಿ, ಹಿಂದೂಗಳಿಗೆ ರಕ್ಷಣೆ ನೀಡಿ ಹಾಗೂ ಸಂತ್ರಸ್ಥರ ನೆರವಿಗೆ ವಿಶ್ವಸಂಸ್ಥೆ ಧಾವಿಸಲಿ ಎಂದು ಹಿಂದೂ ಹಿತ ರಕ್ಷಣಾ ಸಮಿತಿಯ ಮುಖಂಡ ಕೆ ಎಂ ಹನುಮಂತರಾಯಪ್ಪ ಒತ್ತಾಯಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮುಂದಾಗ ಬೇಕಿದೆ. ಹಾಗೂ ಭಾರತ ದೇಶದ ರಾಷ್ಟ್ರಪತಿಗಳು ಹಾಗೂ ಪ್ರಧಾನ ಮಂತ್ರಿಗಳು ಬಾಂಗ್ಲಾದೇಶದ ಹಿಂದುಗಳ ನೆರವಿಗೆ ನಿಲ್ಲಬೇಕಿದೆ ಎಂದರು.

    Ad

    ಕೇವಲ 3-4 ದೇಶಗಳಲ್ಲಿ ಮಾತ್ರ ಉಳಿದಿರುವ ಹಿಂದುಗಳನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಬಾಂಗ್ಲಾದೇಶದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ ಅವರ ಮೇಲೆ ಹಿಂಸಾತ್ಮಕ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು ಈ ಕುರಿತು ಜವಾಬ್ದಾರಿಯುತ ಇಲಾಖೆಗಳು ಮಾತನಾಡಬೇಕಿದೆ. ವಿಶ್ವಸಂಸ್ಥೆ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವಂತೆ ಹಿಂದೂ ಹಿತರಕ್ಷಣ ಸಮಿತಿ ಒತ್ತಾಯಿಸುತ್ತದೆ ಎಂದರು.

    ಸಮಿತಿಯ ಮುಖಂಡ ನರೇಶ್ ರೆಡ್ಡಿ ಮಾತನಾಡಿ ಗೌರವಾನ್ವಿತ ರಾಷ್ಟ್ರಪತಿಯವರಿಗೆ ಹಿಂದೂ ಹಿತರಕ್ಷಣಾ ಸಮಿತಿಯ ಮೂಲಕ ಆಗ್ರಹ ಪಡಿಸುವುದೇನೆಂದರೆ ನಮ್ಮ ಪಕ್ಕದ ನೆರೆಯ ಬಾಂಗ್ಲಾದೇಶವು ತೀವ್ರ ಹಿಂಸಾಚಾರದಿಂದ ಬಳಲುತ್ತಿದೆ. ಬಾಂಗ್ಲಾದೇಶದ ಚುನಾಯಿತ ಪ್ರಧಾನಿ ದೇಶವನ್ನು ತೊರೆದ ನಂತರ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಈ ಗೊಂದಲಮಯ ಪರಿಸ್ಥಿತಿಯಲ್ಲಿ ಅಲ್ಲಿನ ಹಿಂದೂ ಧಾರ್ಮಿಕ ಕೇಂದ್ರಗಳು, ಹಿಂದೂ ವ್ಯಾಪಾರ ಸಂಸ್ಥೆಗಳು, ಮತ್ತು ಹಿಂದೂ ಮನೆಗಳನ್ನು ಗುರಿಯಾಗಿಸಿಕೊಂಡು ತೀವ್ರ ರೀತಿಯ ಧಾಳಿ ನಡೆಯುತ್ತಿದೆ. ಬಾಂಗ್ಲಾದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲೂ ಹಿಂದೂ ರುದ್ರ ಭೂಮಿಗಳು, ನೂರಾರು ಮಠ ಮಂದಿರಗಳು ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಕಾಲಕಾಲಕ್ಕೆ ಸಂಭವಿಸುವ ಇಂತಹ ಗಲಭೆಗಳ ಪರಿಣಾಮ ವಿಭಜನೆಯ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಶೇಕಡಾ 28ರಷ್ಟಿದ್ದ ಹಿಂದೂಗಳು ಈಗ ಶೇಕಡಾ 8ಕ್ಕೆ ಬಂದು ಇಳಿದಿದ್ದಾರೆ.ಹೀಗಾಗಿ ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸಂರಕ್ಷಣೆಗೆ ಭಾರತ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಸಮಿತಿಯು ಕೋರುತ್ತದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಹಿಂದೂ ಮುಖಂಡರಾದ ಭಾಸ್ಕರ್ ಭಗತ್, ರವಿಕುಮಾರ್, ಮುದ್ದಪ್ಪ, ನಾಗೇಶ್, ವೆಂಕಟರಾಜು,ನರಸಿಂಹಮೂರ್ತಿ, ಡಾ. ನಾರಾಯಣ್, ಶ್ರೀನಿವಾಸ್ ಗುರು ಸೇರಿದಂತೆ ಹಲವರು ಉಪಸ್ಥಿತರಿದ್ದರು.