Blog

  • *ಅತ್ಯುತ್ತಮ ನಿಲಯಪಾಲಕ ಪ್ರಶಸ್ತಿ ಪಡೆದ ಲಕ್ಷ್ಮಣ ಡಿ ಚವಾಣ್ : ಸನ್ಮಾನಿತರಿಗೆ ಬಂಜಾರ ಸೇವಾ ಸಂಘದ ವತಿಯಿಂದ ಗೌರವ ಸಮರ್ಪಣೆ*

    ಲಿಂಗಸುಗೂರು ಆಗಸ್ಟ್ 03 ( ವಿಜಯಮಿತ್ರ) : ತಾಲೂಕಿನ ಅಲ್ಪಸಂಖ್ಯಾತರ. ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿಲಯ ಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಲಕ್ಷ್ಮಣ್ ಡಿ ಚವಾಣ್ ರವರಿಗೆ ರಾಜ್ಯಮಟ್ಟದ
    ಅತ್ಯುತ್ತಮ ನಿಲಯ ಪಾಲಕರಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    ರಾಜ್ಯಮಟ್ಟದ ಪ್ರಶಸ್ತಿ ಪಡೆದು ತಾಲ್ಲೂಕಿನ ಗೌರವ ಹೆಚ್ಚಿಸಿದ ಶ್ರೀ ಲಕ್ಷ್ಮಣ್ ಡಿ ಚವಾಣ್ ಅವರಿಗೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

    .ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ತಾಲ್ಲೂಕು ಅಧ್ಯಕ್ಷ ಲಾಲಪ್ಪ ರಾಠೋಡ್,
    ಅಮರೇಶೆ ಡಿ ಪವರ್ ಕರಡಕಲ್ ತಾಂಡಾ, ತಾಲೂಕು ಪ್ರಧಾನ ಕಾರ್ಯದರ್ಶಿ.
    ನೀಲೇಶ ಪವರ್ ಯುವ ಘಟಕದ ಅಧ್ಯಕ್ಷರು.
    ಶಂಕರ್ ಪವಾರ್,ಉಪಾಧ್ಯಕ್ಷರಾದ ಚಂದ್ರು ಚವ್ಹಾಣ,,ವೆಂಕಟೇಶ ರಾಠೋಡ್, ಶಿವಕುಮಾರ್ ರಾಠೋಡ್, ಕಸ್ತೂರ ಚವ್ಹಾಣ,ಶರಣು ರಾಠೋಡ್ ಹಾಗೂ ಇನ್ನಿತರರು ಇದ್ದರು.

  • *ಬೈಕ್ ರಿಪೇರಿ ಮತ್ತು ಸೇವೆ ಉಚಿತ ತರಬೇತಿ‌*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್. 03, 2024 (ವಿಜಯಮಿತ್ರ):- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಬೈಕ್ ರಿಪೇರಿ ಮತ್ತು ಸೇವೆ ಕುರಿತು 30 ದಿನಗಳ ಉಚಿತ ತರಬೇತಿಯನ್ನು ಆಗಸ್ಟ್‌ 21 ರಿಂದ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.

    ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್‌ ಕಾರ್ಡ್‌ ಅಥವಾ ಜಾಬ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಜಿ ಸಲ್ಲಿಸಲು ಆಗಸ್ಟ್‌ 15 ಕೊನೆಯ ದಿನವಾಗಿದೆ.

    ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು. ಜತೆಗೆ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

    ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್‌ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮೊಬೈಲ್‌ ಸಂಖ್ಯೆ: 9380162042, 9740982585

    ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್‌ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ವಿದೇಶ ವ್ಯಾಸಂಗಕ್ಕಾಗಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 03,2024 (ವಿಜಯಮಿತ್ರ): ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ 2024-25 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಫಾರ್ಸಿ ಜನಾಂಗದವರಿಗೆ ಅರಿವು ವಿದೇಶ ವ್ಯಾಸಂಗಕ್ಕಾಗಿ ಸಾಲ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅರ್ಹ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

     

    ಅರ್ಹತೆಗಳು:-ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, ವಿದ್ಯಾರ್ಥಿಯು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು. (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಲ್, ಹಾಗೂ ಫಾರ್ಸಿ, ಜನಾಂಗಕ್ಕೆ ಸೇರಿದವರಾಗಿರಬೇಕು.), ವಿದ್ಯಾರ್ಥಿಯು ಹಿಂದಿನ ವರ್ಷದಲ್ಲಿ ಕನಿಷ್ಠ 60% ಅಂಕವನ್ನು ಪಡೆದಿರಬೇಕು, ವಿದೇಶ ವಿಶ್ವವಿದ್ಯಾಲಯದಿಂದ ಆಫರ್ ಲೆಟರ್ ಪಡೆದಿರಬೇಕು, ನಿಗಮಕ್ಕೆ ಆಸ್ತಿಯ (ಕಟ್ಟಡ/ಜಮೀನು) ಅಡಮಾನದ ಮೇಲೆ ಮಾತ್ರ ಸಾಲ ಒದಗಿಸಲಾಗುವುದು. ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು.

     

    ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ), ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣ ಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣ ಪತ್ರ, 10ನೇ ತರಗತಿಯ ಅಂಕಪಟ್ಟಿ ಮತ್ತು 12ನೇ ತರಗತಿಯ ಅಂಕಪಟ್ಟಿ, ಎಸ್.ಎಸ್.ಎಲ್.ಸಿ. ವರ್ಗಾವಣೆ ಪ್ರಮಾಣ ಪತ್ರ, ಪ್ರಸ್ತುತ ಅಧ್ಯಯನ ಪ್ರಮಾಣ ಪತ್ರ, ಕಾಲೇಜು ಶುಲ್ಕ ರಚನೆ, ಪಾಸ್ಪೋರ್ಟ್ ನಕಲು, ವೀಸಾ ನಕಲು, ಮಾರಾಟದ ಪತ್ರಗಳು ಮತ್ತು ತಾಯಿಯ ಪತ್ರ, ಖಾತಾ ಸಾರ ಮತ್ತು ಖಾತಾ ಪ್ರಮಾಣ ಪತ್ರ ಅಥವಾ ರೂಪಾಂತರ, ನಮೂನೆ ನಂ.15 ರಲ್ಲಿ ನಿಲ್ ಎನ್ಕಂಬರೆನ್ಸ್ ಪ್ರಮಾಣ ಪತ್ರ, ನವೀಕೃತ ತೆರಿಗೆ ಪಾವತಿಸಿದ ರಶೀದಿ, ಸೂಕ್ತ ಪ್ರಾಧಿಕಾರದಿಂದ ಮಾರ್ಗದರ್ಶನ ದರ, ಜಿಲ್ಲಾ ವ್ಯವಸ್ಥಾಪಕರಿಂದ ಆಸ್ತಿಯ ಸ್ಥಳ ಪರಶೀಲನೆ ವರದಿ, ನೋಂದಾಯಿತ ಮೌಲ್ಯಮಾಪಕರಿಂದ ಮೌಲ್ಯಮಾಪನ ವರದಿ, ಫಲಾನುಭವಿಯ ಪ್ರಮಾಣ ಪತ್ರ, ಫಲಾನುಭವಿ ಮತ್ತು ಜಾಮೀನುದಾರರ ಜಂಟಿ ಪ್ರಮಾಣ ಪತ್ರ, ಪ್ರಾಮಿಸರಿ ನೋಟ್ ಜೊತೆಗೆ ಡಿ ಪಿ ನೋಟ್ ಡೆಲಿವರಿ ಲೆಟರ್ ಈ ದಾಖಲೆಗಳು ಅರ್ಜಿ ಸಲ್ಲಿಸಲು ಬೇಕಾಗುತ್ತದೆ.

     

    ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. ಅರ್ಜಿಯ ಪ್ರತಿ ಹಾಗೂ ಆಗತ್ಯ ದಾಖಲಾತಿಗಳೊಂದಿಗೆ ನಿಗಮದ ಕಛೇರಿಗೆ ಸಲ್ಲಿಸಬೇಕಾಗಿರುತ್ತದೆ.

     

    ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಬೇಕಾದ ಕಛೇರಿ ವಿಳಾಸ:- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂ.1599, ವೈ.ಎನ್.ಬಿಲ್ಡಿಂಗ್, ಹೊಸ ಬಸ್ ಸ್ಟಾಂಡ್ ಹಿಂಭಾಗ, ಯಲಹಂಕ ಬೀದಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂ.ಸಂ: 080-27681786/Gmail:kmdcbrural@gmail.com ಇಲ್ಲಿ (ರಜಾ ದಿನವನ್ನು ಹೊರತುಪಡಿಸಿ) ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಜಿಲ್ಲೆಯಲ್ಲಿ ಆಗಸ್ಟ್ 5 ರಿಂದ 8 ರವರೆಗೆ ಕನ್ನಡಜ್ಯೋತಿ ರಥಯಾತ್ರೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ,ಆಗಸ್ಟ್ 03,2024 (ವಿಜಯಮಿತ್ರ):- ರಾಜ್ಯ ಸರ್ಕಾರವು ಕರ್ನಾಟಕ ಸಂಭ್ರಮ 50 ರಡಿ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಅಭಿಯಾನದ ಅಂಗವಾಗಿ ಕನ್ನಡಜ್ಯೋತಿ ರಥಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಲು ಅನುಕೂಲವಾಗುವಂತೆ ಮುಖ್ಯಮಂತ್ರಿಯವರು 2023 ರ ನವೆಂಬರ್ 02 ರಂದು ವಿಜಯನಗರ ಜಿಲ್ಲೆಯ ಹಂಪಿಯಿಂದ ಚಾಲನೆ ನೀಡಿದ್ದಾರೆ. ಈ ರಥಯಾತ್ರೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುತ್ತಾ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಗಸ್ಟ್ 05(ಸೋಮವಾರ) ರಂದು ಬೆಳಿಗ್ಗೆ 09:00 ಗಂಟೆಗೆ ಕೋಲಾರದ ಮಾಲೂರಿನಿಂದ ಹೊಸಕೋಟೆಗೆ ರಥಯಾತ್ರೆ ಆಗಮಿಸಲಿದೆ, ಆಗಸ್ಟ್ 06(ಮಂಗಳವಾರ) ರಂದು ಬೆಳಿಗ್ಗೆ 09:00 ಗಂಟೆಗೆ ಹೊಸಕೋಟೆಯಿಂದ ದೇವನಹಳ್ಳಿಗೆ, ಆಗಸ್ಟ್ 07(ಬುಧವಾರ) ರಂದು ಬೆಳಿಗ್ಗೆ 09:00 ಗಂಟೆಗೆ ದೇವನಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ, ಆಗಸ್ಟ್ 08(ಗುರುವಾರ) ರಂದು ಬೆಳಿಗ್ಗೆ 09:00 ಗಂಟೆಗೆ ದೊಡ್ಡಬಳ್ಳಾಪುರದಿಂದ ನೆಲಮಂಗಲಕ್ಕೆ ಸಂಚರಿಸಲಿದೆ.

    ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಕನ್ನಡ ರಥಯಾತ್ರೆ ಸಂಚರಿಸಲಿದ್ದು ರಥಯಾತ್ರೆಯು ಜಿಲ್ಲೆಗೆ ಆಗಮಿಸುವ ದಿನದಿಂದ, ಜಿಲ್ಲೆಯಿಂದ ಬೀಳ್ಕೊಡುವ ದಿನಾಂಕದ ಸಮಯಗಳಲ್ಲಿ ಆಯಾ ಗ್ರಾಮ / ಗ್ರಾಮ ಪಂಚಾಯತಿ / ತಾಲ್ಲೂಕು ಕೇಂದ್ರಗಳಲ್ಲಿ ರಥಯಾತ್ರೆಯನ್ನು ಗೌರವಯುತವಾಗಿ ಸ್ವಾಗತಿಸಲಾಗುತ್ತದೆ. ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಆಯೋಜಿಸಲಾಗುವ ಮೆರವಣಿಗೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಕನ್ನಡಪರ ಸಂಘಟನೆಗಳ ಎಲ್ಲಾ ಅಧ್ಯಕ್ಷರುಗಳು ಎಲ್ಲಾ ಪದಾಧಿಕಾರಿಗಳು, ಸಾಹಿತಿಗಳು, ಕಲಾವಿದರು, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಪರಿಸರ ಸಮತೋಲನಕ್ಕಾಗಿ ಗಿಡ-ಮರ ಬೆಳೆಸಿ: ಸಚಿವ ಕೆ.ಎಚ್. ಮುನಿಯಪ್ಪ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 03,2024 (ವಿಜಯಮಿತ್ರ):- ಪ್ರಕೃತಿ ವಿಕೋಪಗಳನ್ನು ತಪ್ಪಿಸಲು ಪ್ರಕೃತಿಯ ಸಮತೋಲನ ಕಾಪಾಡಲು ಗಿಡ-ಮರಗಳನ್ನು ಬೆಳೆಸಲು ನಾವೆಲ್ಲರು ಅಣಿಯಾದಾಗ ಮಾತ್ರ ಸರಿಯಾದ ಸಮಯಕ್ಕೆ ಮಳೆ, ಬೆಳೆ, ಪರಿಸರ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾದ ‘ವನ ಮಹೋತ್ಸವ-2024’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ರೈತರು ತಮ್ಮ ಜಮೀನುಗಳಲ್ಲಿ ಮೂರನೇ ಒಂದು ಭಾಗ ಮಾವು, ತೆಂಗು, ಹಲಸು, ನೇರಳೆ ಮುಂತಾದ ಆದಾಯದ ಗಿಡ-ಮರಗಳನ್ನು ಬೆಳೆಸಿದರೆ ಆದಾಯದ ಜೊತೆಗೆ ಪರಿಸರ ಸಮತೋಲನ ನಿರ್ಮಾಣವಾಗುತ್ತದೆ. ಬೆಟ್ಟ-ಗುಡ್ಡ ಪ್ರದೇಶಗಳಲ್ಲಿ ಗಿಡ ಮರಗಳನ್ನು ಬೆಳೆಸುವುದರಿಂದ ಭೂ ಕುಸಿತದಂತಹ ಪ್ರಕೃತಿ ವಿಕೋಪಗಳು ಸಂಭವಿಸುವುದನ್ನು ತಪ್ಪಿಸಬಹುದು. ಜಿಲ್ಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ರಸ್ತೆಗಳ ಎರಡು ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ಮರಗಳನ್ನು ನೆಡಲಾಗುತ್ತಿದೆ. ಪ್ರತಿಯೊಬ್ಬರೂ ಮನೆಗಳ ಸುತ್ತಮುತ್ತ ಗಿಡ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಇದರಿಂದ ವಾತಾವರಣದ ಮಾಲಿನ್ಯವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.

    ಬೆಂಗಳೂರು ಗ್ರಾಮಾಂತರ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗಾರ್ ಅವರು ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು 2,298 ಕಿ.ಮೀ ವ್ಯಾಪ್ತಿ ಹೊಂದಿದ್ದು 22,800 ಹೆಕ್ಟೇರ್ ಭೂ ವಿಸ್ತೀರ್ಣ ಹೊಂದಿದೆ. 203.89 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವಿದೆ. ಒಟ್ಟು ಭೂ ಪ್ರದೇಶದಲ್ಲಿ ಶೇಕಡ 8.8 ರಷ್ಟು ಅರಣ್ಯ ಭೂಮಿ ಆವೃತ್ತಿಯಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಮತೋಲನ ಕಾಪಾಡುವ ದೃಷ್ಟಿಯಿಂದ ಅರಣ್ಯೀಕರಣ, ವನ್ಯಜೀವಿ ಸಂರಕ್ಷಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿದೆ.

    ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಕಳೆದ ಐದು ವರ್ಷಗಳಲ್ಲಿ 2400 ಹೆಕ್ಟೇರ್ ನೆಡುತೋಪು ಮಾಡಲಾಗಿದೆ. 383 ರೈತ ಫಲಾನುಭವಿಗಳಿಗೆ 16 ಲಕ್ಷ ಸಸಿಗಳನ್ನು ವಿತರಿಸಲಾಗಿದ್ದು ಗಿಡಗಳನ್ನು ಬೆಳೆಸಿ ಪೋಷಿಸಲು ಇದುವರೆಗೆ 74 ಲಕ್ಷ ರೂ.ಗಳ ಹಣ ರೈತ ಫಲಾನುಭವಿಗಳಿಗೆ ನೀಡಲಾಗಿದೆ.

    ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿ 3065 ಫಲಾನುಭವಿಗಳಿಗೆ ಸಸಿ ವಿತರಿಸಿ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. 2024 ನೇ ಸಾಲಿನಲ್ಲಿ 251 ಲಕ್ಷ ರೂ.ಗಳ ಯೋಜನಾ ವೆಚ್ಚ ರೂಪಿಸಲಾಗಿದ್ದು 165 ಕಿಲೋ ಮೀಟರ್ ನೆಡುತೋಪು ನಿರ್ಮಿಸಲಾಗಿದೆ ಎಂದು ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.

    ಈ ಸಂದರ್ಭದಲ್ಲಿ ಪ್ರಾದೇಶಿಕ ಅರಣ್ಯ ಮತ್ತು ಸಾಮಾಜಿಕ ಅರಣ್ಯ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ ಸಿಬ್ಬಂದಿಗೆ ಸಚಿವರು ಪ್ರಶಂಸೆ ಪತ್ರ ವಿತರಿಸಿ ಅಭಿನಂದಿಸಿದರು.

    ಕಾರ್ಯಕ್ರಮದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಶಾಂತಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ರಾಜಣ್ಣ, ಕುಂದಾಣ ಗ್ರಾ.ಪಂ ಅಧ್ಯಕ್ಷರಾದ ನೇತ್ರಾವತಿ ಎ.ಆರ್, ಉಪಾಧ್ಯಕ್ಷರಾದ ನೀಲಮ್ಮ, ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್ ಅನುರಾಧಾ, ಉಪವಿಭಾಗಾಧಿಕಾರಿ ದುರ್ಗಶ್ರೀ ಎನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ್. ಪಿ.ಎನ್, ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಬಾಲಕೃಷ್ಣ, ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು, ಕುಂದಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • *ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ವಸ್ತು ದಾಸ್ತಾನು ಮಳಿಗೆಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್*

    ಬೆಂಗಳೂರುಗ್ರಾಮಾಂತರಜಿಲ್ಲೆಆಗಸ್ಟ್02,2024(ವಿಜಯಮಿತ್ರ):- ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಾಲಿನ್ಯವಾಗುವದನ್ನು ತಡೆಯುವಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಸಂಗ್ರಹ ಮಾಡುವ ಅಂಗಡಿ, ದಾಸ್ತಾನು ಮಳಿಗೆಗಳು ಹಾಗೂ ಗೋದಾಮುಗಳ ಮೇಲೆ ಅಧಿಕಾರಿಗಳ ತಂಡ ಆಗಾಗ್ಗೆ ದಾಳಿ ನಡೆಸಿ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮದಡಿಯಲ್ಲಿ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಕುರಿತು ತೆಗೆದುಕೊಂಡಿರುವ ಕ್ರಮದ ಬಗೆಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಪೋಲಿಸ್ ಇಲಾಖೆ, ತಹಶೀಲ್ದಾರ್ ಗಳ ಜಂಟಿ ಸಮಿತಿ ರಚಿಸಿ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಸಂಗ್ರಹ ಗೋದಾಮುಗಳು, ದಾಸ್ತಾನು ಮಳಿಗೆಗಳ ಮೇಲೆ ಕಾಲ ಕಾಲಕ್ಕೆ ದಾಳಿ ನಡೆಸಿ ದಂಡ ವಿಧಿಸುವ ಜೊತೆಗೆ ಪುನರಾವರ್ತನೆಯಾಗದಂತೆ ಎಚ್ಚರಿಕೆ ನೀಡಬೇಕು.

    ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿಯುಂಟಾಗುತ್ತಿದೆ. ಪ್ರತಿನಿತ್ಯ ಜನರು ಪ್ಲಾಸ್ಟಿಕ್ ಬಳಕೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿದೆ. ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಅನುರಾಧ ಕೆ.ಎನ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ ಎನ್, ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಅನಿಲ್ ಕುಮಾರ್, ಹೊಸಕೋಟೆ ಹಾಗೂ ದೇವನಹಳ್ಳಿ ವಿಭಾಗದ ಪರಿಸರ ಅಧಿಕಾರಿ ಪದ್ಮನಾಭನ್, ನೆಲಮಂಗಲ ಪರಿಸರ ಅಧಿಕಾರಿ ಭೀಮ್ ಸಿಂಗ್ ಗೋಗಿ, ದೊಡ್ಡಬಳ್ಳಾಪುರ ಪರಿಸರ ಅಧಿಕಾರಿ ಭಾಸ್ಕರ್, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

  • *ಪ್ರಾಚ್ಯವಸ್ತು ಸಂಗ್ರಹಾಲಯದ ಉದ್ಘಾಟನಾ ಕಾರ್ಯಕ್ರಮ : ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತರಾದ ಶಿಂಧೆ ಅವಿನಾಶ್ ಭಾಗಿ*

    ಲಿಂಗಸಗೂರು: ಪ್ರಾಚ್ಯವಸ್ತುಗಳು ನಮ್ಮ ನಾಡಿನ ಸಾಂಸ್ಕೃತಿಕ ಇತಿಹಾಸವನ್ನು ಸಾರುತ್ತಿದ್ದು ಅಂತಹ ಪಳಿಯುಳಿಕೆಗಳು ವಿನಾಶದ ಅಂಚಿನಲ್ಲಿದ್ದು ಅವುಗಳನ್ನು ರಕ್ಷಣೆ ಮಾಡುವುದರಿಂದ ಮುಂದಿನ ಪೀಳಿಗೆ ಇತಿಹಾಸ ಅರಿಯಲು ಸಹಾಯಕವಾಗುತ್ತದೆ ಎಂದು ಸಹಾಯಕ ಆಯುಕ್ತರಾಗಿದ್ದ ಶಿಂಧೆ ಅವಿನಾಶ್ ಅಭಿಪ್ರಾಯಪಟ್ಟರು .

     

    ಪಟ್ಟಣದ ಸಹಾಯಕ ಆಯುಕ್ತರ ಕಛೇರಿ ಸಮೀಪದ ಕೊಠಡಿಯೊಂದರಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಾಚ್ಯವಸ್ತುಗಳ ಸಂಗ್ರಹ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ನಾಡಿನ ಇತಿಹಾಸವನ್ನು ಗುರುತಿಸಲು ಹಿಂದಿನ ಪಳಿಯುಳಿಕೆ ನಮಗೆ ಮುಖ್ಯವಾದ ಆಧಾರವಾಗಿದ್ದು ಅಂತಹ ಪಳಿಯುಳಿಕೆಗಳು ವಿನಾಶದ ಅಂಚಿನಲ್ಲಿವೆ ಅಂತಹ ನಶಿಸುತ್ತಿರುವ ಪಳಿಯುಳಿಕೆ ಇತಿಹಾಸದ ಆಕರಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೋಡಲು ಸಿಗುವಂತೆ ಮಾಡುವುದು ಉತ್ತಮ ಕೆಲಸವಾಗಿದೆ ಅಂತಹ ಕೆಲಸವನ್ನು ಚಾರಣ ಬಳಗ ಮಾಡುತ್ತಿದ್ದು ಉತ್ತಮವಾಗಿ ನಡೆಯಲಿ ಎಂದು ಹಾರೈಸಿದರು.

     

    ಸ್ಥಳೀಯ ಚಾರಣ ಬಳಗವು ತಾಲೂಕಿನಲ್ಲಿ ವಿನಾಶದ ಅಂಚಿನಲ್ಲಿರುವ ಇತಿಹಾಸದ ಕುರುಹುಗಳನ್ನು ಹುಡುಕಿ ತಂದು ಒಂದೆಡೆ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದು ಈ ಕಾರ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಹಾಯಕ ಆಯುಕ್ತ ಶಿಂಧೆ ಅವಿನಾಶರವರು ತಾಲ್ಲೂಕಿನ ಎಸಿ ಕಛೇರಿಯ ಪಕ್ಕದಲ್ಲಿರುವ ಕೊಠಡಿಯೊಂದನ್ನು ನೀಡಿ ಅದರಲ್ಲಿ ಸಂಗ್ರಹ ಮಾಡಲು ಅವಕಾಶ ನೀಡಿದ್ದಾರೆ, ಆದರೆ ಈ ಕಾರ್ಯವು ಪ್ರಾರಂಭವಾಗುವ ಮುನ್ನವೇ ಅವರಿಗೆ ಬೇರೆಡೆಗೆ ವರ್ಗಾವಣೆಯಾಗಿದ್ದು ಚಾರಣ ಬಳಗವು ಪುನಃ ಅವರನ್ನು ಕರೆಯಿಸಿ ಅವರಿಂದಲೆ ಪ್ರಾಚ್ಯವಸ್ತು ಸಂಗ್ರಹಾಲಯವನ್ನು ಉದ್ಘಾಟನೆ ಮಾಡಿಸಿದ್ದೇವೆ ಎಂದು ಚಾರಣ ಬಳಗದ ರಾಜೇಶ್ ನಾಯಕ ತಿಳಿಸಿದರು.

     

    ಈ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಆದಿ ಮಾನವನ ಶಿಲಾಕೊಡಲಿಗಳು, ಮಣಿಗಳು, ಗಡಿಗೆಯ ತುಣುಕುಗಳು, ನಂತರದ ಕಾಲದ ಮೂರ್ತಿಗಳು ಶಾಸನಗಳು ಸೇರಿದಂತೆ ವಿವಿಧ ಪರಿಕರಗಳನ್ನು ಸಂಗ್ರಹ ಮಾಡಲಾಗಿದೆ.ನಮ್ಮ ತಂಡ ಪ್ರತಿ ರವಿವಾರ ಸಂಗ್ರಹ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

     

    ಚಾರಣ ಬಳಗದ ವತಿಯಿಂದ ಸಹಾಯಕ ಆಯುಕ್ತರಿಗೆ ಸನ್ಮಾನ ಮಾಡಲಾಯಿತು .

    ಈ ಸಂದರ್ಭದಲ್ಲಿ ರಾಜೇಶನಾಯಕ,ಅಶೋಕನಾಯಕ, ಬಸವರಾಜ ಆನ್ವರಿ, ಸಿದ್ದಾರೂಢ,ಅಮಜಯನಾಐಕ ಶಿವಂಗಿ, ಬಸವರಾಜ ಬೈಲಗುಡ್ಡ,ವೆಂಕೋಬ, ಸಿದ್ದುಸರ್ಜಾಪುರ, ಚಂದ್ರು ಕರಡಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • *ಅರಳು ಮಲ್ಲಿಗೆ ಪಂಚಾಯಿತಿ ಚುನಾವಣೆ : ನೂತನ ಅಧ್ಯಕ್ಷರಾಗಿ ನಿರ್ಮಲ ಸಿದ್ದೇಗೌಡ ಉಪಾಧ್ಯಕ್ಷರಾಗಿ ದ್ರುವ ಕುಮಾರ್ ಆಯ್ಕೆ*

    ದೊಡ್ಡಬಳ್ಳಾಪುರ ಆಗಸ್ಟ್ 02 ( ವಿಜಯಮಿತ್ರ) : ತಾಲೂಕಿನ ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

     

    ನೂತನ ಅಧ್ಯಕ್ಷರಾಗಿ ನಿರ್ಮಲಮ್ಮ ಹಾಗೂ ಉಪಾಧ್ಯಕ್ಷರಾಗಿ ಡಿ.ಆರ್.ಧೃವಕುಮಾರ್ ಆಯ್ಕೆಯಾಗಿದ್ದಾರೆ.

     

    ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮಿಸಲಾತಿ ಬದಲಾದ ಹಿನ್ನಲೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅರಳು ಮಲ್ಲಿಗೆ ಗ್ರಾಮಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಧಿಕಾರಿ ದ್ರಾಕ್ಷಾಯಿಣಿ, ಸಹಾಯಕ ಚುನಾವಣೆ ಅಧಿಕಾರಿ ಶಶಿಧ‌ರ್ ನೇತೃತ್ವದಲ್ಲಿ ಚುನಾವಣೆ ನಡೆಯಿತು, ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷರ ಎರಡು ಸ್ಥಾನಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಲಭಿಸಿದೆ.

     

    18 ಸದಸ್ಯತ್ವ ಬಲದ ಅರಳು ಮಲ್ಲಿಗೆ ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರ್ಮಲಾ ಸಿದ್ದೇಗೌಡ ಮತ್ತು ಮಂಜುಳಾ ಸ್ಪರ್ದಿಸಿದ್ದು, ಮಂಜುಳಾ 07 ಮತ ಪಡೆದರೆ, ನಿರ್ಮಲಾ ಸಿದ್ದೇಗೌಡ 11 ಮತಗಳನ್ನು ಪಡೆಯುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

     

    ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದೃವಕುಮಾ‌ರ್ ಹಾಗೂ ವೆಂಕಟೇಶ್‌ ಸ್ಪರ್ಧಿಸಿದ್ದು, ವೆಂಕಟೇಶ್ ಅವರು 08 ಮತಗಳನ್ನು ಪಡೆದರೆ, ದೃವ ಕುಮಾರ್ ಅವರು 10 ಮತಗಳನ್ನು ಪಡೆಯುವ ಮೂಲಕ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದರು.

    ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಮಾಜಿ ಶಾಸಕರಾದ ಟಿ.ವೆಂಕಟರಮಣಯ್ಯ,ಬಿ. ಡಿ. ಸಿ. ಸಿ. ಬ್ಯಾಂಕ್ ನಿರ್ದೇಶಕರಾದ ಚುಂಚಗೌಡರ,ನಗರಸಭಾ ಸದಸ್ಯರಾದ ಶಿವಶಂಕರ್,ಚಂದ್ರ ಮೋಹನ್, ನಾಗರಾಜು, ಕಾಂಗ್ರೆಸ್ ಮುಖಂಡರಾದ ಭೀಮಣ್ಣ, ಮಂಜುನಾಥ್ ಮುಂತಾದವರು ಅಭಿನಂದಿಸಿದ್ದಾರೆ.

  • *ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2023-24ರ ವಾರ್ಷಿಕ ಸಭೆ*

    ದೊಡ್ಡಬಳ್ಳಾಪುರ ಆಗಸ್ಟ್ 02 ( ವಿಜಯಮಿತ್ರ) : ತಾಲ್ಲೂಕಿನ ತೂಬಗೆರೆ ಸಮುದಾಯದ ಭವನದಲ್ಲಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2023-24 ರ ವಾರ್ಷಿಕ ಸಭೆ ಅಧ್ಯಕ್ಷ ಕೆ.ಬಿ.ನಾಗರಾಜು ಸಮ್ಮುಖದಲ್ಲಿ ನಡೆಯಿತು,

     

    ಕಾರ್ಯಕ್ರಮದ ಪ್ರಾರಂಭವಾಗುತ್ತಿದ್ದಂತೆ ಮೊದಲು ಮಕ್ಕಳು ದೇವರ ಪ್ರಾರ್ಥನೆ ಮಾಡಿ ನಂತರ ಮುಖ್ಯಕಾರ್ಯನಿರ್ವಹಣಾಧಿಕಾರಿ ಎ. ಜಗದೀಶ್ ವಾರ್ಷಿಕ ಸಭೆ ಮಂಡಿಸಿ ಸಂಘಕ್ಕೆ 3 ಲಕ್ಷ 23 ಸಾವಿರ ಲಾಭ ಗಳಿಸಿದೆ ಎಂದು ಹೇಳಿದರು,

     

    ವಾರ್ಷಿಕ ಸಭೆಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎನ್ ಅರವಿಂದ್ ಉದ್ಘಾಟಿಸಿ ಮಾತನಾಡಿ,

    ಕರ್ನಾಟಕದಲ್ಲಿ ಸಹಕಾರಿ ಸಂಘಗಳಿಗೆ ಹೆಚ್ಚು ಪ್ರಾಮುಖ್ಯತೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಅದನ್ನು ಉಳಿಸಿಕೊಡು ಹೋಗುವ ಜವಾಬ್ದಾರಿ ಸಹಕಾರಿ ಸಂಘದ ಸದಸ್ಯರ ಮೇಲಿದೆ, ಸಾಲಗಳ ಮರುಪಾವತಿಯನ್ನು ಸಕಾಲದಲ್ಲಿ ಮಾಡಿದರೆ ಇನ್ನೂ ಹೆಚ್ಚಿನ ಜನ ಅನುಕೂಲ ಪಡೆಯಬಹುದಾಗಿದೆ, ಹಾಗೂ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಪ್ರತಿ ಮನೆಗೆ ಭೇಟಿ ನೀಡಿ ನಮ್ಮ ಸಂಘದಿಂದ ಸಾಲ ನೀಡುತ್ತಿದ್ದೇವೆ ತೆಗೆದುಕೊಳ್ಳಿ ಎಂದು ಹೇಳಿ ಬಂದರೆ ರೈತರು ಸಾಲವನ್ನು ಪಡೆಯುತ್ತಾರೆ, ಹೆಚ್ಚು ರೈತರು ಸಾಲ ಪಡೆದರೆ ಸಂಘ ಬೆಳೆಯುತ್ತದೆ ಒಳ್ಳೆಯ ಲಾಭ ಬರುತ್ತದೆ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಿದರು,

     

    ದೊಡ್ಡಬಳ್ಳಾಪುರ ಬಿ.ಡಿ.ಸಿ.ಸಿ ಹಾಗು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಚುಂಚೇಗೌಡ ಮಾತನಾಡಿ ಸಹಕಾರಿ ಸಂಸ್ಥೆಗಳು ನಮ್ಮ ರೈತರ ಬೆನ್ನಲುಬು, ಅವುಗಳಿಂದ ರೈತರಿಗೆ ಹಲವು ಅನುಕೂಳಾಗುತ್ತಿವೆ, ಇನ್ನು ಬಿ.ಡಿ.ಸಿ.ಸಿ ಬ್ಯಾಂಕಿನಿಂದ ಮನೆ ಸಾಲ ಕುರಿ ಸಾಲ ಇನ್ನು ಮುಂತಾದವುಗಳ ಮೇಲೆ ರೈತರಿಗೆ ಸಾಲ ನೀಡುತ್ತಿದ್ದೇವೆ, ಹೆಚ್ಚು ಹೆಚ್ಚು ಬ್ಯಾಂಕಿಗೆ ಭೇಟಿ ನೀಡಿ ಸಾಲಗಳನ್ನು ಪಡೆದುಕೊಳ್ಳಿ, ಬ್ಯಾಂಕಿನಿಂದ ಸಾಲ ಪಡೆದ ರೈತರು ಸಕಾಲಕ್ಕೆ ಮರುಪಾವತಿ ಮಾಡಿ ಎಂದು ಹೇಳಿದರು,

     

    ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಟಿ.ವಿ.ಕೃಷ್ಣಪ್ಪ, ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಂಗಪ್ಪ ಆರ್ ನಾಯ್ಕ್, ಸಂಘದ ಮಾಜಿ ಅಧ್ಯಕ್ಷ ಮುನಿರಾಜಪ್ಪ, ಮಾಜಿ ಉಪತಹಶೀಲ್ದಾರ್ ವೆಂಕಟರಮಣಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೆಂಕಟಪ್ಪ, ತೂಬಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ವಿ.ವೆಂಕಟೇಶ್, ಸದಸ್ಯ ಮುನಿಕೃಷ್ಣಪ್ಪ, ಸಂಘದ ನಿರ್ದೇಶಕಿ ನಾಗರತ್ನ, ಅನ್ನಪೂರ್ಣಮ್ಮ, ಮುತ್ತಮ್ಮ ಹಾಗೂ ರೈತರು ಹಾಜರಿದ್ದರು.

  • *ದಲಿತರ ಭೂಕಬಳಿಕೆ ಆರೋಪ : ಹೋರಾಟಕ್ಕೆ ಮುಂದಾದ ದಲಿತ ಸಂಘಟನೆಗಳ ಒಕ್ಕೂಟ*

    ದೊಡ್ಡಬಳ್ಳಾಪುರ ಆಗಸ್ಟ್ 02 ( ವಿಜಯಮಿತ್ರ) : ತಾಲೂಕು ಹೆಗ್ಗಡಿಹಳ್ಳಿಯ ಸರ್ವೆ ನಂಬರ್ 102ರ 5 ಎಕರೆ 3 ಗುಂಟೆ ಜಾಗದ ಕುರಿತಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಬಾಕಿ ಇದ್ದರೂ ಮುನಿನಾರಾಯಣಮ್ಮ ಅವರಿಗೆ ಸೇರಿದ ಜಾಗವನ್ನು ಬಲಾಡ್ಯರು ಕಬಳಿಸುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿ ತಮಟೆ ಬಾರಿಸುವ ಮೂಲಕ ವಿಶೇಷ ರೀತಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸದರಿ ಜಾಗದಲ್ಲಿ ಪ್ರತಿಭಟನೆ ನಡೆಸಲಾಯಿತು .

    ಕಣಿವೇಪುರದ ದಿವಗಂತ ಮುನಿಯಪ್ಪನವರ ಮೊದಲ ಹೆಂಡತಿ ಚಿಕ್ಕತಿಮ್ಮಕ್ಕನವರ ಒಬ್ಬಳೇ ಮಗಳಾದ ಮುನಿನಾರಾಯಣಮ್ಮ, ಅವರ ತಂದೆ ಮುನಿಯಪ್ಪನವರಿಗೆ ಒಟ್ಟು 9 ಎಕರೆ 17 ಗುಂಟೆ ಜಮೀನಿದ್ದು, 2011ರಲ್ಲಿ ದೊಡ್ಡಬಳ್ಳಾಪುರದ ನ್ಯಾಯಾಲಾಯದಲ್ಲಿ ಭಾಗಾಂಶದ ಕೇಸ್ ಹಾಕಲಾಗಿದ್ದು, ಕೋರ್ಟ್ ಆದೇಶದಂತೆ ಮುನಿನಾರಾಯಣಮ್ಮನವರಿಗೆ 5 ಎಕರೆ 3 ಗುಂಟೆ ಜಮೀನು ನೀಡಿದ್ದು,ಸರ್ವೆ ನಡೆಸಿ ಜಾಗವನ್ನ ಗುರುತಿಸುವ ಕಾರಣಕ್ಕೆ ಕೋರ್ಟ್ ನಲ್ಲಿ ಎಫ್ ಡಿ ಪಿ ಕೇಸ್ ನಡೆಯುತ್ತಿದೆ, ಈ ನಡುವೆ ಭೂಮಾಫಿಯಾ ಗ್ಯಾಂಗ್ ಮುನಿನಾರಾಯಣಮ್ಮರವರಿಗೆ ಸೇರಿದ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಮುನಿನಾರಾಯಣಮ್ಮ ಕುಟುಂಬಸ್ಥರು ಆರೋಪಿಸಿದ್ದಾರೆ.

     

    ಹೆಗ್ಗಡಿಹಳ್ಳಿಯ ಸರ್ವೇ ನಂಬರ್ 102ರ ಜಾಗದಲ್ಲಿ ದಾಖಲಾತಿ ಹಿಡಿದು ಮುನಿ ನಾರಾಯಣಮ್ಮ ಹಾಗೂ ಸಹೋದರ ಪ್ರತಿಭಟಿಸಿದರು.

     

    ಮುನಿನಾರಾಯಣಮ್ಮರವರಿಗೆ ನ್ಯಾಯ ಕೊಡಿಸುವ ಕಾರಣಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸುವ ಮೂಲಕ ಕಾಂಪೌಂಡ್ ಕೆಲಸವನ್ನು ನಿಲ್ಲಿಸುವಂತೆ ಅಗ್ರಹಿಸಿದೆ ಈ ಕುರಿತು ಭಾರತೀಯ ಶೂದ್ರ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿದ್ದರಾಜು ಮಣೆಗಾರ ಮಾತನಾಡಿ, ದಲಿತ ಮಹಿಳೆಯ ಜಮೀನು ಹೊಡೆಯಲು ಸಂಚು ನಡೆಸಿರುವ ಭೂಮಾಫಿಯಾ ಗ್ಯಾಂಗ್ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದು , ಜಾಗದ ಕುರಿತಾಗಿ ನ್ಯಾಯಾಲಯದಲ್ಲಿ ಎಫ್ ಡಿ ಪಿ ಕೇಸ್ ನಡೆಯುತ್ತಿದ್ದರು, ಮುನಿನಾರಾಯಣಮ್ಮ ನವರ ಜಮೀನಿನಲ್ಲಿ ಅನಧಿಕೃತವಾಗಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ, ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿರುವ ವಿಕ್ರಮ್ ಮತ್ತು ಸಹಚರರ ವಿರುದ್ಧ ತಮಟೆ ಬಾರಿಸುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

     

    ದಲಿತರ ಭೂಮಿಯನ್ನು ಕಬಳಿಸಲು ಈ ರೀತಿಯ ಹುನ್ನಾರ ನಡೆಸಿ ದಲಿತರ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡುವ ಭೂಮಾಫಿಯಾ ಗ್ಯಾಂಗ್ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಕಾನೂನು ಕ್ರಮ ತೆಗೆದುಕೊಂಡು ಅವರನ್ನು ತಾಲೂಕಿನಿಂದಲೇ ಗಡಿಪಾರು ಮಾಡಬೇಕು ಎಂದು ಅಗ್ರಹಿಸಿದರು.

    ಭೂಕಬಳಿಕೆ ಆರೋಪದ ಹಿನ್ನೆಲೆ ದಲಿತ ಮುಖಂಡರು, ಪ್ರತಿಭಟನಾಕಾರರು ಮುನಿನಾರಾಯಣಮ್ಮನವರ ಬೆಂಬಲವಾಗಿ ಪ್ರತಿಭಟಿಸಿದರು.

     

    ಈ ಸಮಸ್ಯೆ ಬಗೆಹರಿಸದ ಪಕ್ಷದಲ್ಲಿ ಬೆಂಗಳೂರು ಚಲೋ ಪಾದಯಾತ್ರೆ ಮಾಡುವ ಮೂಲಕ ವಿಧಾನಸೌಧದ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

     

    ಸ್ಥಳದ ಮಾಲೀಕರಾದ ಮುನಿನಾರಾಯಣಮ್ಮ ಮಾತನಾಡಿ, ನಾನು ನಮ್ಮ ತಂದೆ ಮುನಿಯಪ್ಪನವರ ದೊಡ್ಡ ಹೆಂಡತಿ ಮಗಳು, ತಂದೆಯ ಜಮೀನಿನಲ್ಲಿ ನನಗೆ ಭಾಗ ಕೊಟ್ಟಿರಲಿಲ್ಲ, ಭಾಗಾಂಶಕ್ಕಾಗಿ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದು ಸದರಿ ಕೇಸ್ ಅನ್ವಯ ನ್ಯಾಯಾಲಯವು ನನ್ನ ಪಾಲಿಗೆ 5 ಎಕರೆ 3 ಗುಂಟೆ ಜಮೀನು ನೀಡಿ ಆದೇಸಿದೆ, ನಮ್ಮ ತಂದೆಯ ಚಿಕ್ಕ ಹೆಂಡತಿ ಮತ್ತು ಮಕ್ಕಳು ಅಕ್ರಮವಾಗಿ ನನ್ನ ಹೆಸರಿನಲ್ಲಿರುವ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ, ಅವರ ಪಾಲಿಗೆ ಬಂದ ಜಮೀನು ಮಾರಾಟ ಮಾಡಿ ಈಗ ನನ್ನ ಪಾಲಿನ ಜಮೀನನ್ನು ಮಾರಾಟಕ್ಕೆ ಮುಂದಾಗಿದ್ದಾರೆ ನಾನು ಯಾವುದೇ ಕಾರಣಕ್ಕೂ ನನ್ನ ಜಮೀನು ಬಿಟ್ಟು ಕೊಡುವುದಿಲ್ಲ, ನ್ಯಾಯಕ್ಕಾಗಿ ಸತ್ತರೂ ಸರಿಯೇ ಜಾಗ ಮಾತ್ರ ಬಿಡುವುದಿಲ್ಲ ಎಂದು ತಮ್ಮ ನೋವನ್ನು ಹೇಳಿಕೊಂಡರು.

    ಪ್ರತಿಭಟನೆಯಲ್ಲಿ ಕೆ.ವಿ.ಗೋವಿಂದರಾಜು, ರಾಜ್ಯ ಸಂಚಾಲಕರು. ಭಾರತೀಯ ಶೂದ್ರ ಸೇನೆ, ದಲಿತ ಮುಖಂಡರಾದ ಎಂ.ಚನ್ನಿಗರಾಯಪ್ಪ, ಶ್ರೀನಿವಾಸ್ ಮುತ್ತೂರು.ಲಕ್ಷ್ಮೀಶ್ರೀನಿವಾಸ್ ,ಸೋಮಶೇಖರ್ ಸೇರಿದಂತೆ ದಲಿತ ಸಂಘಟನೆಗಳ ಒಕ್ಕೂಟದ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು .