Blog

  • *ಕನ್ನಡಿಗರ ಉದ್ಯೋಗ ವಿಚಾರದಲ್ಲಿ ರಾಜಿಯಿಲ್ಲ ಶೇಕಡ 80ರಷ್ಟು ಉದ್ಯೋಗ ಮೀಸಲಾತಿ ಕಡ್ಡಾಯ : ಪ್ರಸ್ತುತ ಫಾಕ್ಸ್ಕಾನ್ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆ ಊಹಾಪೋಹಗಳನ್ನು ಕುರಿತು ಕರವೇ ಪುರುಷೋತ್ತಮ್ ಗೌಡ ಪ್ರತಿಕ್ರಿಯೆ*

    ದೊಡ್ಡಬಳ್ಳಾಪುರ ಆಗಸ್ಟ್ 01 ( ವಿಜಯಮಿತ್ರ) : ನಿರಂತರ ಹೋರಾಟಗಳನ್ನು ಮಾಡುವ ಮೂಲಕ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇಕಡ 80ರಷ್ಟು ಮೀಸಲಾತಿ ನೀಡಲೇಬೇಕು ಹಾಗೂ ಸರೋಜಿನಿ ಮಹಿಷಿ ವರದಿ ಜಾರಿಯಾಗಲೇಬೇಕು ಎಂದು ಟಿ ಎ ನಾರಾಯಣಗೌಡರ ನೇತೃತ್ವದಲ್ಲಿ ಒತ್ತಾಯಿಸಿದ್ದು . ಉದ್ಯೋಗದ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾದಲ್ಲಿ ಕರವೇ ನಾರಾಯಣ ಗೌಡರ ಬಣ ಸುಮ್ಮನಿರುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ತಿಳಿಸಿದ್ದಾರೆ.

     

    ಈ ಕುರಿತು ಮಾತನಾಡಿದ ಅವರು ಇತ್ತೀಚಿಗೆ ಗ್ರಾಮಾಂತರ ಜಿಲ್ಲೆಯಲ್ಲಿ ಹಲವಾರು ಕಾರ್ಖಾನೆಗಳು ಸ್ಥಾಪನೆಯಾಗುತ್ತಿದ್ದು ಅಭಿವೃದ್ಧಿಯ ವಿಚಾರವಾಗಿ ಸ್ವಾಗತರ್ಹ ಆದರೆ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಶೇಕಡ 80ರಷ್ಟು ಉದ್ಯೋಗ ನೀಡಲೇಬೇಕು. ಸ್ಥಾಪನೆಯಾದ ಕೆಲ ದಿನಗಳವರೆಗೆ ನಾಮಕಾವಾಸ್ತೆ ಕನ್ನಡಿಗರಿಗೆ ಉದ್ಯೋಗ ನೀಡಿ ನಂತರ ಹೊರ ರಾಜ್ಯಗಳಿಂದ ಬಂದವರನ್ನೇ ಉದ್ಯೋಗಗಳಿಗೆ ನೇಮಿಸಿಕೊಳ್ಳುವ ಕಾರ್ಖಾನೆಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ಕನ್ನಡಿಗರಿಗೆ ಅಪಮಾನ ಕರವೇ ಎಂದಿಗೂ ಸಹಿಸುವುದಿಲ್ಲ.

     

    ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಾರ್ಖಾನೆಗಳಲ್ಲಿ ಕನ್ನಡಿಗರಮೇಲಾಗುತ್ತಿರುವ ದೌರ್ಜನ್ಯಗಳು,ಅವಮಾನಗಳು ಕುರಿತಂತೆ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದು .ಇಂದು ಫಾಕ್ಸ್ಕನ್ ಕಂಪನಿ ಕುರಿತಂತೆ ಹರಡಿದ ಊಹಾಪೋಹಗಳು ಕನ್ನಡ ಪರ ಸಂಘಟನೆಗಳು ಕಂಪನಿಯ ವಿರುದ್ಧ ಕೆರಳುವಂತೆ ಮಾಡಿವೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ( ಟಿ. ಎ.ನಾರಾಯಣ ಗೌಡರ ಬಣ ) ಸೂಕ್ಷ್ಮರೀತಿಯಲ್ಲಿ ಎಲ್ಲವನ್ನು ಮೌನವಾಗಿ ಗಮನಿಸುತ್ತಿದೆ. ಬಹು ರಾಷ್ಟ್ರೀಯ ಕಂಪನಿ( MNC )ಗಳಿಗೆ ಮತ್ತೊಮ್ಮೆ ಎಚ್ಚರಿಸುತ್ತಿದ್ದೇವೆ ಎಂದರು ಕನ್ನಡಿಗರ ಉದ್ಯೋಗದ ವಿಚಾರವಾಗಿ ರಾಜಿಸಲ್ಲದು, ನೆಲ ಜಲ ಸಂಪನ್ಮೂಲ ನಮ್ಮದು ಉದ್ಯೋಗದಲ್ಲಿ ಶೇಕಡ 80 ರಷ್ಟು ನಮ್ಮದೇ. ಕನ್ನಡಿಗರಿಗೆ ಅನ್ಯಾಯವಾದಲ್ಲಿ ಕಾರ್ಖಾನೆಗಳ ವಿರುದ್ಧ ಉಗ್ರ ಹೋರಾಟ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.

  • *ಡಾ.ಮಹಾಂತ ಶಿವಯೋಗಿ ಜನ್ಮದಿನ” ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್. 01 (ವಿಜಯಮಿತ್ರ):- ಇಂದಿನ ಯುವ ಸಮೂಹ ವ್ಯಸನಗಳಿಗೆ ದಾಸರಾಗಿ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿ ಯುವಜನತೆ ದುಷ್ಚಟಗಳಿಂದ ದೂರವಿದ್ದು, ಒಳ್ಳೆಯ ಶಿಕ್ಷಣಾಭ್ಯಾಸ ಪಡೆದು ಜೀವನ ರೂಢಿಸಿಕೊಳ್ಳಿ ಎಂದು ರಾಜ್ಯ 5 ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ತಿಳಿಸಿದರು.

    ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ‘ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ’ ಅಂಗವಾಗಿ ‘ವ್ಯಸನ ಮುಕ್ತ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಜೋಳಿಗೆ ಹರಿಕಾರ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

    ದೇಶಾದ್ಯಂತ ‘ಮಹಾಂತ ಜೋಳಿಗೆ ಅಭಿಯಾನ’ದ ಮೂಲಕ ಸಂಚರಿಸಿ, ಜನರಲ್ಲಿನ ವ್ಯಸನ ವಸ್ತುಗಳನ್ನು ತಮ್ಮ ಜೋಳಿಗೆಯಲ್ಲಿ ಭಿಕ್ಷೆ ರೂಪದಲ್ಲಿ ತೆಗೆದುಕೊಂಡು ಜಾಗೃತಿ ಮೂಡಿಸಿ, ವ್ಯಸನ ನಿರ್ಮೂಲನೆಗೆ ಶ್ರಮಿಸಿದ ಡಾ. ಮಹಾಂತ ಸ್ವಾಮಿಜೀಗಳು. ವಿದ್ಯಾರ್ಥಿಗಳು ಜೀವನದಲ್ಲಿ ವ್ಯಸನವನ್ನು ಮೈಗೂಡಿಸಿಕೊಳ್ಳದೆ ಎಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬರೂ ಪುಸ್ತಕ ಓದು-ಬರಹದ ಹವ್ಯಾಸ, ಒಳ್ಳೆಯ ವ್ಯಕ್ತಿಯ ಗೆಳತನ, ಉನ್ನತ ಗುರಿ ಸಾಧಿಸುವ, ಒಳ್ಳೆಯ ಪ್ರಜ್ಞೆಯನ್ನಾಗುವ ರೂಡಿಯನ್ನು ಬೆಳೆಸಿಕೊಳ್ಳಬೇಕು. ಅಂದಾಗ ವ್ಯಸನ ಮುಕ್ತ ಸಶಕ್ತ ಸಮಾಜವಾಗಿ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

    ವ್ಯಸನ ವೆಂದರೆ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಮದ್ಯಪಾನ, ಧೂಮಪಾನ, ತಂಬಾಕು ಸೇವನೆ, ಡ್ರಗ್ಸ್ ಸೇವನೆ ಮುಂತಾದ ದುಶ್ಚಟಗಳ ಸೇವನೆ ಮಾಡುವುದು. ಇಂತಹ ದುಶ್ಚಟಗಳನ್ನು ಸಮಾಜದಿಂದ ಮುಕ್ತ ಮಾಡಬೇಕು ಎನ್ನುವ ಉದ್ದೇಶದಿಂದ ಡಾ. ಮಹಾಂತ ಶಿವಯೋಗಿಗಳು ರಾಷ್ಟ್ರಾದ್ಯಂತ ‘ಮಹಾಂತ ಜೋಳಿಗೆ ಅಭಿಯಾನ’ ನಡೆಸಿ ಸಾಕಷ್ಟು ವ್ಯಸನ ವ್ಯಕ್ತಿಗಳ ಮನ ಪರಿವರ್ತಿಸಿ ವ್ಯಸನ ವಸ್ತುಗಳನ್ನು ಜೋಳಿಗೆಯಲ್ಲಿ ಸಂಗ್ರಹಿಸುತ್ತಿದ್ದರು. ಈ ಸಾಮಾಜಿಕ ಕಳಕಳಿಯನ್ನು ಮನಗಂಡು ಸರ್ಕಾರದ ವತಿಯಿಂದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ನಿಮ್ಮ ನೆರೆಹೊರೆಯವರಿಗೆ ದುಶ್ಚಟಗಳಿಂದ ದೂರವಿರುವಂತೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ತಿಳಿಸಿದರು.

     

    *ಡೆಂಗ್ಯೂ ರೋಗದ ಬಗ್ಗೆ ಎಚ್ಚರ ವಹಿಸಿ*

     

    ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿದ್ದು , ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಕ್ರಮ ಕೈಗೊಂಡು ಜಾಗೃತಿ ಮೂಡಿಸುತ್ತಿದೆ. ಡೆಂಗ್ಯೂ ರೋಗ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದ್ದು ಮನೆ ಮೇಲ್ಛಾವಣಿ ಹಾಗೂ ಇನ್ನಿತರ ಪ್ರದೇಶ ಅಥವಾ ವಸ್ತುಗಳಲ್ಲಿ(ಟೈರ್, ತೆಂಗಿನ ಚಿಪ್, ಡ್ರಮ್ ಇತ್ಯಾದಿ) ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆಗಳ ಉತ್ಪತ್ತಿಯನ್ನು ನಾಶ ಮಾಡಬೇಕು. ಸೊಳ್ಳೆಗಳಿಂದ ಡೆಂಗ್ಯೂ, ಚಿಕನ್ ಗುನ್ಯ ಅಂತಹ ಸಾಂಕ್ರಾಮಿಕ ರೋಗಗಳು ಹರಡುವುದರಿಂದ ಸಾರ್ವಜನಿಕರು ಸೊಳ್ಳೆ ಕಡಿತದಿಂದ ಜಾಗೃತರಾಗಿರಿ ಎoದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ಅನುರಾಧ ಅವರು ಮಾತನಾಡಿ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಚಟಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವುದರಿಂದ ಸಾರ್ವಜನಿಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಪ್ರಸ್ತುತ ಗ್ರಾಮೀಣ, ನಗರ ಪ್ರದೇಶಗಳಲ್ಲಿ ವ್ಯಸನ ಎಂಬುದು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವ ಸಮೂಹಕ್ಕೆ ಕೂಡ ಅಂಟಿಕೊಳ್ಳುತ್ತಿದೆ. ಇತ್ತಿಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಮೊಬೈಲ್ ನೋಡುವುದು ಹೆಚ್ಚಾಗುತ್ತಿದ್ದು, ಇದು ಕೂಡ ಒಂದು ಚಟ, ಇದರಿಂದ ಮಕ್ಕಳ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು. ವಿದ್ಯಾರ್ಥಿಗಳು, ಯುವಕರು ಆಪ್ತ ವಲಯದಲ್ಲಿನ ಸಹವಾಸಗಳಿಂದ ಮುಂದಿನ ಭವಿಷ್ಯ ರೂಪಿಸಿಕೊಳ್ಳಬಹುದು. ದುಶ್ಚಟಗಳಿಂದ ದೂರ ಇರಲು ಒಳ್ಳೆಯವರ ಸಹವಾಸ ಮಾಡುವ ಜತೆಗೆ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸುವದನ್ನು ಮೈಗೂಡಿಸಿಕೊಳ್ಳಿ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ಹುಲಿಕಲ್ ನಟರಾಜ್ ಅವರು ವ್ಯಸನ ಮುಕ್ತ ಸಮಾಜ ನಿರ್ಮಾಣದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.

    ಈ ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ವಿಶ್ವನಾಥಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ದೊಡ್ಡಬಳ್ಳಾಪುರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯಸನ ಮುಕ್ತ ಜಾಗೃತಿ ಶಿಬಿರ ಏರ್ಪಡಿಸಿ ಸಾರ್ವಜನಿಕರಿಗೆ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.

    ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ವತಿಯಿಂದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

    ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಶಫಿ ಸಾದುದ್ದೀನ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಶಾಲಾ- ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

  • *ದೊಡ್ಡಬಳ್ಳಾಪುರ : ಶಾಸಕರ ನೇತೃತ್ವದಲ್ಲಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಮತ್ತು ಅಂಗನವಾಡಿಗಳಿಗೆ ಅಗತ್ಯ ಪರಿಕರಗಳ ವಿತರಣೆ*

    ದೊಡ್ಡಬಳ್ಳಾಪುರ ಆಗಸ್ಟ್ 01( ವಿಜಯಮಿತ್ರ) : ಕೇಂದ್ರ ಪುರಸ್ಕೃತ ಪೋಷಣ್ ಅಭಿಯಾನ್ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ಫೋನ್ ಮತ್ತು ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ಬೆಳವಣಿಗೆಗೆ ಅವಶ್ಯಕವಿರುವ ಅಗತ್ಯ ಪರಿಕರಗಳ ವಿತರಣೆ ಮಾಡಲಾಯಿತು.

    ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಹಕಾರದೊಂದಿಗೆ ದೊಡ್ಡಬಳ್ಳಾಪುರ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವನ್ನು ಸ್ಥಳೀಯ ಶಾಸಕರಾದ ಧೀರಜ್ ಮುನಿರಾಜು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

     

    ನಂತರ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಅಂಗನವಾಡಿಗಳಲ್ಲಿ ಮಾಂಟೆಸ್ಸರಿ ರೀತಿಯ ಶಿಕ್ಷಣ ಪದ್ಧತಿ ಅಳವಡಿಕೆ ಆಗಬೇಕಿದೆ. ಅಂಗನವಾಡಿಗಳು ಮಗುವಿನ ಕಲಿಕೆಗೆ ಪ್ರಥಮ ಮೆಟ್ಟಿಲಾಗಿ ಶ್ರಮಿಸಬೇಕಿದೆ. ಖಾಸಗಿ ಶಾಲೆಗಳಲ್ಲಿ ನೀಡುವ ಮಾಂಟೆಸ್ಸರಿ ಶಿಕ್ಷಣ ನಮ್ಮ ಅಂಗನವಾಡಿಗಳಲ್ಲಿ ಉಚಿತವಾಗಿ ಬಡ ಮಕ್ಕಳಿಗೆ ನೀಡಬೇಕು ಎಂಬುದು ನನ್ನ ಆಶಯ.. ಈ ಕುರಿತಂತೆ ತಾಲ್ಲೂಕಿನ ಶಾಸಕನಾಗಿ ನನ್ನ ಸಹಕಾರ ಸದಾ ಇರುತ್ತದೆ. ಕ್ಲಸ್ಟರ್ ಮಟ್ಟದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಕೇಂದ್ರಗಳ ಕುಂದುಕೊರತೆಗಳನ್ನು ಸರಿಪಡಿಸಲಾಗುವುದು ಎಂದರು.

    ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಉತ್ತಮ ಹಾಗೂ ಆರೋಗ್ಯಕರ ವಾತಾವರಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ಬಳಸಬೇಕಿದೆ. ಮಕ್ಕಳಿಗೆ ಪೋಷಣೆಯುಕ್ತ ಆಹಾರ ಹಾಗೂ ಉತ್ತಮ ಕಲಿಕಾ ವಾತಾವರಣ ನೀಡುವ ಮೂಲಕ ಮಕ್ಕಳ ಅಭಿವೃದ್ಧಿಗೆ ಕಾರಣಕರ್ತರಾಗಬೇಕೆಂದು ಅಂಗನವಾಡಿ ಕಾರ್ಯಕರ್ತರಿಗೆ ತಿಳಿಸಿದರು.

    ಸಂಕೇತಿಕವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಮತ್ತು ಅಂಗನವಾಡಿಗಳಿಗೆ ಅಗತ್ಯ ಪರಿಕರಗಳನ್ನು ವಿತರಿಸಿದರು.

    ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ವೆಂಕಟೇಶ್ ( ಬಂತಿ ),ಪದ್ಮನಾಭ್, ಕೃಷ್ಣಪ್ಪ, ಸಿ ಡಿ ಪಿ ಓ ರವಿಕುಮಾರ್,ಎಸಿಡಿಪಿಓ ಅರುಣ್ ಕುಮಾರ್ ಮತ್ತು ರೂಪಶ್ರೀ ಮೇಲ್ವಿಚಾರಕರು ತಾಲೂಕು ಸಂಯೋಜಕರು ಸೇರಿದಂತೆ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

     

  • *ವಿಕಲಚೇತನರ ಆರೈಕೆಗಾಗಿ 1000 ರೂಗಳ ಪ್ರೋತ್ಸಾಹ ಧನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 01(ವಿಜಯಮಿತ್ರ):-ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕುಲರ್ ಡಿಸ್ಕೋಪಿ, ಪಾರ್ಕಿನ್ಸ್‌ನ್ಸ್ ಮತ್ತು ಮಲ್ಟಿಪಲ್ ಸ್ಕ್ಲೆರೊಸಿಸ್ ವಿಕಲಚೇತನ ವ್ಯಕ್ತಿಗಳ ಆರೈಕೆದಾರರು ಪ್ರತಿ ಮಾಹೆ(ತಿಂಗಳು) 1000 ರೂಪಾಯಿಗಳ ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿನ ಸೆರೆಬ್ರಲ್ ಪಾಲ್ಸಿ, ಮಸ್ಕುಲರ್ ಡಿಸ್ಕೋಪಿ, ಪಾರ್ಕಿನ್ಸ್‌ನ್ಸ್ ಮತ್ತು ಮಲ್ಟಿಪಲ್ ಸ್ಕ್ಲೆರೊಸಿಸ್ ವಿಕಲಚೇತನರು ಅವರ ಆರೈಕೆದಾರರು ಅಗತ್ಯ ದಾಖಲಾತಿಗಳೊಂದಿಗೆ, ವಿಆರ್‌ಡಬ್ಲ್ಯೂ/ಯುಆರ್‌ಡಬ್ಲ್ಯೂ/ಎಂಆರ್ಡಬ್ಲ್ಯೂ/ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಗೆ ಆಗಸ್ಟ್ 31 ರೊಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

     

    ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ವಿಕಲಚೇತನರ ವಿಶಿಷ್ಟ ಗುರುತಿನ (ಯುಡಿಐಡಿ), ವಿಕಲಚೇತನರ ಆಧಾರ್ ಕಾರ್ಡ್, ಭಾವಚಿತ್ರ (ವಿಕಲಚೇತನರ ಮತ್ತು ಆರೈಕೆದಾರರ), ಆರೈಕೆದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ, ಆರೈಕೆದಾರರ ಆಧಾರ್ ಕಾರ್ಡ್.

     

    ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರ ಕಛೇರಿ. ನಂ.3 ನೆಲಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110 ಹಾಗೂ ವಿಕಲಚೇತನರ ಸಹಾಯವಾಣಿ ಸಂಖ್ಯೆ- 080-29787441 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಸರೋಜಿನಿ ಮಹಿಷಿ ವರದಿ ಆಧರಿಸಿ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಶೇಕಡ 80% ರಷ್ಟು ಉದ್ಯೋಗ ನೀಡಿ – ಎ. ನಂಜಪ್ಪ*

    ದೊಡ್ಡಬಳ್ಳಾಪುರ ( ವಿಜಯಮಿತ್ರ) : ಕನ್ನಡಿಗರಿಗೆ ಉದ್ಯೋಗದ ವಿಷಯಗಳನ್ನು ಆಧರಿಸಿ ಫಾಕ್ಸ್ಕಾನ್ ಕೈಗಾರಿಕೆ ಸಂಸ್ಥೆಯಲ್ಲಿ ಶೇಕಡ 80 %ರಷ್ಟು ಉದ್ಯೋಗಗಳನ್ನು ಸ್ಥಳಿಯ ಕನ್ನಡಿಗರಿಗೆ ಮೀಸಲಿಟ್ಟು, ಈ ನೆಲ ಜಲ ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸುವಂತೆ ತಿಳಿಸಲಾಗಿದೆ ಹಾಗೂ ಈ ಕುರಿತು ಕಾರ್ಖಾನೆಗೆ ಮನವಿ ಸಲ್ಲಿಸಲಾಯಿತು ಎಂದು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎ. ನಂಜಪ್ಪ ತಿಳಿಸಿದರು.


    ಈ ಕುರಿತು ಮಾತನಾಡಿದ ಅವರು ಕರ್ನಾಟಕದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪಡೆದು ಸ್ಥಾಪಿಸುವ ಕೈಗಾರಿಕೆ. ಮತ್ತು ಕಛೇರಿಗಳಲ್ಲಿ ಎರಡನೇ ದರ್ಜೆ ನೌಕರಿಯನ್ನು ಪಡೆಯದ ದುಸ್ಥಿತಿಯಲ್ಲಿರುವುದು ಶೋಚನೀಯ ಹಾಗೂ ಖಂಡನೀಯ , ಈ ತಾರತಮ್ಯವನ್ನು ಸರಿಪಡಿಸುವ ಸಲುವಾಗಿ ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ನಮ್ಮ ರಾಜ್ಯ ಸರ್ಕಾರದ ಇತ್ತೀಚಿನ ಅಧಿವೇಶನದಲ್ಲಿ ಕರ್ನಾಟಕದಲ್ಲಿ ಸ್ಥಾಪಿತವಾಗುವ ಖಾಸಗಿ ಕಾರ್ಖಾನೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಶೇಕಡ 80%ರಷ್ಟು ಉದ್ಯೋಗ ಮೀಸಲು ಪ್ರಸ್ತಾವನೆಯನ್ನು ಮುನ್ನೆಲೆಗೆ ತಂದಿದ್ದು ಸ್ವಾಗತಾರ್ಹವೇ ಸರಿ.. ನಮ್ಮ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈಗಾಗಲೇ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗಿದ್ದು ಇದರ ಜೊತೆ ಜೊತೆಯಲ್ಲೇ ಮತ್ತಷ್ಟು ಖಾಸಗಿ ಕೈಗಾರಿಕೆಗಳು ಸ್ಥಾಪಿತವಾಗುತ್ತಿರುವುದು ಸಂತೋಷ, ಅಂತೆಯೇ ತಾಲ್ಲೂಕಿನ ಕೊನಘಟ್ಟ ಸಮೀಪ ಕಾರ್ಯ ಆರಂಭಿಸಿರುವ ಫಾಕ್ಸ್ಕಾನ್ ಕಂಪನಿಯಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ ಎಂದರು.

     

    ಉದ್ಯೋಗ ಮೀಸಲಾತಿ ವಿಚಾರದಲ್ಲಿ ಕನ್ನಡಿಗರಿಗೆ ಸೂಕ್ತ ನ್ಯಾಯ ಸಿಗದ ಪಕ್ಷದಲ್ಲಿ ರಾಜ್ಯಾದ್ಯಂತ  ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ರಾಜ್ಯ ವಿಜಯ ಕರ್ನಾಟಕರಕ್ಷಣಾ ವೇದಿಕೆಯ ಮುಖಂಡರಾದ ಬಿ. ನಯಾಜ್ ಖಾನ್, ಅಜಯ್, ನವೀನ್, ದರ್ಶನ್ ಚರಣ್ ಕುಮಾರ್,ಸೋಮರಾಜು, ಪಾಣೀಶ್ , ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • *ಕೆರೆ ಸೇರುತ್ತಿದೆ ಕಲುಷಿತ ನೀರು : ಕಾರ್ಖಾನೆ ವಿರುದ್ಧ ಓಬದೇನಹಳ್ಳಿ ಜನಧ್ವನಿ ವೇದಿಕೆ ಆಕ್ರೋಶ*

    ದೊಡ್ಡಬಳ್ಳಾಪುರ ( ವಿಜಯಮಿತ್ರ) : ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕೈಗಾರಿಕ ಪ್ರದೇಶದ ವಿಗ್ನೇಷ್ ಟೆಕ್ ಪ್ಯಾಕ್ ಪ್ರವೈಟ್ ಲಿಮಿಟೆಡ್ ಕಾರ್ಖಾನೆಯು ಇಂದು ಸುಮಾರು 4 ಗಂಟೆಯಿಂದ ಸುರಿಯುತ್ತಿರುವ ಮಳೆ ನೀರಿಗೆ ಕಿಮಿಕಲ್ ನೀರು ಮತ್ತು ಕಲುಷಿತ ನೀರನ್ನು ಹರಿದು ಬಿಟ್ಟಿದ್ದಾರೆ ಇಂದು ಸ್ಥಳೀಯರು ಆರೋಪಿಸಿದ್ದಾರೆ.


    ಜನಧ್ವನಿ ವೇದಿಕೆಯ ಮುಖಂಡರಾದ ರಾಜೇಂದ್ರ ಮಾತನಾಡಿ ಮಳೆ ಬೀಳುವ ಸಮಯ ಗಮನಿಸಿರುವ  ಕಾರ್ಖಾನೆಯ HR. ಮೇನೇಜರ್ ಲೋಕೇಶ್ ರವರು ತಾವೂ ಶೇಖರಿಸಿದ್ದ ಕಲುಷಿತ ನೀರನ್ನು ಓಬದೇನಹಳ್ಳಿ ಕೆರೆಗೆ ಮಳೆಯ ನೀರಿನ ಜೊತೆಗೆ ಬಿಟ್ಟಿದ್ದಾರೆ ಇದನ್ನು ಗಮನಿಸಿದ ನಮ್ಮ ಓಬದೇನಹಳ್ಳಿ ಜನಧ್ವನಿ ವೇದಿಕೆಯ ನವೀನಅಜಯ್ ಕುಮಾರ್.ಕುಮಾರ್,ಕಾಂತರಾಜು,
    ಅರ್ನಾಲ್ಡ್‌ ಮುನಿರಾಜು ರವರು ಕಾರ್ಖಾನೆಯ ಮ್ಯಾನೇಜರ್ ರವರಿಗೆ ಈ ಕುರಿತು ಏಕೆ ಈ ರೀತಿ ಮಳೆಯ ನೀರಿನ ಜೊತೆಗೆ ಕಲುಷಿತ ನೀರನ್ನು ಬಿಟ್ಟು ಚೆನ್ನಾಗಿರುವ ನೀರನ್ನು ಕಲುಷಿತಗೊಳಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡಲಾಗಿ ಲೋಕೇಶ್ ರವರು ಕೂಡಲೇ ಕಾರ್ಖಾನೆಯ ಗೇಟ್ ನ್ನು ಮುಚ್ಚಿ ನೀವೂ ನಮಗೆ ಕೇಳುವ ಅವಶ್ಯಕತೆ ಇಲ್ಲ ಕೆಐಎಡಿಬಿಯನ್ನು ಪ್ರಶ್ನಿಸಿ ಅಥವಾ ಪರಿಸರ ಮಾಲಿನ್ಯ ಕೇಂದ್ರ ಕ್ಕೆ ದೂರು ನೀಡಿ ಎಂಬ ಉತ್ತರವನ್ನು ದೌರ್ಜನ್ಯದಿಂದ ಬೇಜವಾಬ್ದಾರಿಯುತವಾಗಿ ನೀಡಿದ್ದಾರೆ ಎಂದು ತಿಳಿಸಿದರು.


    ಮಳೆ ನೀರಿಗೆ ಕಲುಷಿತ ನೀರನ್ನು ಬಿಡುತ್ತಿರುವ ಕಾರ್ಖಾನೆಯ ವಿರುದ್ದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಪರಿಸರ ವನ್ನು ಕಾಪಾಡಬೇಕು ಎಂದು ಜನಧ್ವನಿ ವೇದಿಕೆಯ ಮುಖಂಡರು ಆಗ್ರಹಿಸುತ್ತೇವೆ . ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಕೇಂದ್ರದ ಮುಂದೆ ದರಣಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

  • *ದೊಡ್ಡಬಳ್ಳಾಪುರ ಫೋಟೋ ಮತ್ತು ವಿಡಿಯೋ ಛಾಯಾಗ್ರಹಕರ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ : ಸಂಘದ ನೂತನ ಸಾರಥಿಯಾಗಿ ಅಂಚರಹಳ್ಳಿ ಮೋಹನ್ ಅವಿರೋಧ ಆಯ್ಕೆ*

    ದೊಡ್ಡಬಳ್ಳಾಪುರ ಫೋಟೋ ಮತ್ತು ವಿಡಿಯೋ ಛಾಯಾಗ್ರಹಕರ ಸಂಘದ ನೂತನ ಅಧ್ಯಕ್ಷರಾಗಿ ಅಂಚರಹಳ್ಳಿ ಮೋಹನ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ತಾಲ್ಲೂಕಿನ ಫೋಟೋ ಮತ್ತು ವಿಡಿಯೋ ಛಾಯಾಗ್ರಹಕರ ಸಂಘಕ್ಕೆ 2024 -25 ಹಾಗೂ 2025 -26 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು.

     

     

    ಸಂಘದ ಗೌರವ ಅಧ್ಯಕ್ಷರಾಗಿ ಸಂಪತ್ ಕುಮಾರ್, ಉಪಾಧ್ಯಕ್ಷರುಗಳಾಗಿ ಹನುಮಗೌಡ,ಗೋಪಾಲಚಾರಿ, ಮುನಿರಾಜು,ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್,ಸಹ ಕಾರ್ಯದರ್ಶಿಯಾಗಿ ಬೃಂದಾ, ಕಾರ್ಯಾಧ್ಯಕ್ಷರಾಗಿ ಅರುಣ್ ರಾಜಘಟ್ಟ ,ಖಜಾಂಚಿಯಾಗಿ ರಾಜಪ್ಪಿ, ಸಹ ಖಜಾಂಚಿಯಾಗಿ ಬಾಬು, ಸಂಘಟನಾ ಕಾರ್ಯದರ್ಶಿಯಾಗಿ ರಘು ಕಾರ್ಲಾಪುರ, ರಾಜೇಶ್ ಶ್ರವಣೂರು,ಸಂಚಾಲಕರಾಗಿ ಹರೀಶ್ ಮತ್ತು ಮಂಜುನಾಥ್ ನಿರ್ದೇಶಕರುಗಳಾಗಿ ಸುನಿಲ್, ಪ್ರವೀಣ್,ಮಲ್ಲೇಶ್, ಸುರೇಶ್ .ರಾಮಚಂದ್ರ .ನಂದ. ಬಾಬು .ಕವಿತಾ .ನೇತ್ರ .ಮಂಜುನಾಥ್. ಮನು ವಿಲಾಸ್. ಅವಿನಾಶ್ .ನವೀನ್. ಅಶೋಕ್. ಮಹಾಂತೇಶ್ ಮತ್ತು ಮಾರುತಿ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • *ಒತ್ತುವರಿ ಜೊತೆಗೆ ರಾಜಕಾಲುವೆ ಮುಚ್ಚಿ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪ: ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ರಾಜೀವ್ ಗಾಂಧಿ ಬಡಾವಣೆ ನಿವಾಸಿಗಳ ಪ್ರತಿಭಟನೆ*

    ದೊಡ್ಡಬಳ್ಳಾಪುರ( ವಿಜಯಮಿತ್ರ) : ತಾಲ್ಲೂಕಿನ ರಾಜೀವ್ ಗಾಂಧಿ ಬಡಾವಣೆಯ ರಾಜಕಾಲುವೆ ಹಾಗೂ 66 ಅಡಿಗಳ ಸಂಪರ್ಕ ರಸ್ತೆ ಒತ್ತುವರಿಯಾಗಿದೆ, ಮಳೆನೀರು ಹರಿದು ಹೋಗಲು ಇರುವ ರಾಜಕಾಲುವೆ ಮುಚ್ಚಿ ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ, ಸರ್ಕಾರಿ ಸ್ಥಳವು ಒತ್ತುವರಿಯಾಗಿದ್ದು ಸದರಿ ಸ್ಥಳದ ಒತ್ತುವರಿಯನ್ನು ತೆರವು ಮಾಡುವ ಮೂಲಕ ಸಾರ್ವಜನಿಕರಿಗೆ ರಾಜಕಾಲುವೆ ಹಾಗೂ ರಸ್ತೆ ಉಳಿಸಿಕೊಡುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

    ಜೆಡಿಎಸ್ ಮುಖಂಡರಾದ ಪ್ರವೀಣ್ ಕುಮಾರ್ ಮತನಾಡಿ ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡ್ ( ರಾಜೀವ್ ಗಾಂಧಿ ಬಡಾವಣೆ) ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಹಳಷ್ಟಿದೆ. ಇದೀಗ ಹೊಸ ಸಮಸ್ಯೆಯೊಂದು ಸೇರಿಕೊಂಡಿದ್ದು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲಾಗಿದೆ. ನಗರದಿಂದ ರಾಜೀವ್ ಗಾಂಧಿ ಬಡವಾಣೆಗೆ ಸಂಪರ್ಕಿಸುವ ಹಳೇ ಮಧುಗಿರಿ ರಸ್ತೆಗೆ ಸಂಬಂಧಿಸಿದಂತೆ ನಾಕಾಶೆ ಹಾಗೂ ಸರ್ಕಾರಿ ದಾಖಲೆಗಳಲ್ಲಿ 66 ಆಡಿಗಳ ಅಗಲದ ರಸ್ತೆ ಇದ್ದು ಪ್ರಸ್ತುತ 20 ಆಡಿಗಳ ರಸ್ತೆ ಇದೆ ಇದಕ್ಕೆ ಮುಖ್ಯ ಕಾರಣ ರಸ್ತೆಯ ಎರಡು ಬದಿಗಳು ಒತ್ತುವರಿಯಾಗಿರುವುದು.
    ಕಿರಿದಾದ ರಸ್ತೆಯಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಸಾವಿರಾರು ಜನರು ಸಂಚರಿಸುವ ರಸ್ತೆ ಇದಾಗಿದ್ದು, ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ನೆಡೆಯಬೇಕಿದೆ. ಹಾಗೂ ಇದೀಗ ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ರಾಜಕಾಲುವೆಯನ್ನು ಮುಚ್ಚಿ ಲೇಔಟ್ ನಿರ್ಮಾಣಕ್ಕೆ ಕೆಲ ಪ್ರಭಾವಿಗಳು ಮುಂದಾಗಿದ್ದಾರೆ.ರಾಜಕಾಲುವೆಗೆ ಅಡ್ಡಲಾಗಿ ಗೋಡೆ ನಿರ್ಮಾಣ ಮಾಡುವ ಮೂಲಕ ರಾಜಕಾಲುವೆ ಮುಚ್ಚುವ ಪ್ರಯತ್ನ ನೆಡೆಯುತ್ತಿದೆ ಇದರಿಂದ ಮಳೆನೀರು ಹರಿದು ಹೋಗದೆ ರಸ್ತೆಯಲ್ಲಿ ನಿಲ್ಲುತ್ತದೆ, ರಸ್ತೆಯಲ್ಲಿ ನೀರು ನಿಲ್ಲುವ ಕಾರಣ ರಾಜೀವ್ ಗಾಂಧಿ ಬಡಾವಣೆ ಸಂಪರ್ಕವೇ ಕಡಿತವಾಗಲಿದೆ ಎಂದರು.


    ಈ ಕುರಿತು ಸ್ಥಳೀಯರಾದ ಶಿವಣ್ಣ ಮಾತನಾಡಿ ರಸ್ತೆ ವಿಚಾರವಾಗಿ ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನೆಡೆಸುತ್ತಿದ್ದೇವೆ ಆದರೆ ಈವರೆಗೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದು ವಿಪರ್ಯಾಸ.ನಮಗೆ ಯಾರಿಗೂ ತೊಂದರೆ ಕೊಡುವ ಉದ್ದೇಶವಿಲ್ಲ ಆದರೆ ಈಗ ಒತ್ತುವರಿ ಸಮಸ್ಯೆ ಜೊತೆಗೆ ರಾಜಕಾಲುವೆಗೆ ಅಡ್ಡಲಾಗಿ ಗೋಡೆ ನಿರ್ಮಾಣ ಮಾಡುವ ಮೂಲಕ ರಾಜಕಾಲುವೆ ಮುಚ್ಚುವ ಹುನ್ನಾರ ನೆಡೆಯುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಕ್ರಮ ಕೈಗೊಳ್ಳಬೇಕಿದೆ . ನಮ್ಮ ಬಡಾವಣೆಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ ಈಗ ರಸ್ತೆ ಹಾಗೂ ರಾಜಕಾಲುವೆ ಕಸಿದುಕೊಳ್ಳುವ ಪ್ರಯತ್ನ ನೆಡೆಯುತ್ತಿದೆ ತಾಲ್ಲೂಕು ಆಡಳಿತ ಈ ಕುರಿತು ಗಮನಹರಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದರು.

    ಇಷ್ಟು ವರ್ಷಗಳು ಈ ರಾಜಕಾಲುವೆ ಮೂಲಕವೇ ಮಳೆನೀರು ಸರಾಗವಾಗಿ ಹರಿದು ಹೋಗುತ್ತಿತ್ತು, ಆದರೆ ಈಗ ಏಕಾಏಕಿ ರಾಜಕಾಲುವೆ ಗೆ ಅಡ್ಡಲಾಗಿ ಗೋಡೆ ನಿರ್ಮಾಣ ಮಾಡುವ ಮೂಲಕ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ, ಈಗಾಗಲೇ ಹಲವು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿರುವ ಜನರು , ರಾಜಕಾಲುವೆ ಮುಚ್ಚಿದಲ್ಲಿ ಮಳೆನೀರು ರಸ್ತೆ ಮೇಲೆ ನಿಲ್ಲುವುದರಿಂದ ಮತ್ತಷ್ಟು ಸಮಸ್ಯೆ ಎದುರಿಸಲಿದ್ದಾರೆ. ಒತ್ತುವರಿ ಹಾಗೂ ರಾಜಕಾಲುವೆ ಸಮಸ್ಯೆಯನ್ನು ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಕೂಡಲೇ ಬಗೆಹರಿಸಬೇಕಿದೆ ಮೂಲಭೂತ ಸೌಕರ್ಯಗಳನ್ನು ಪ್ರತಿಭಟಿಸಿ ಪಡೆಯುವ ಸಮಾಜದಲ್ಲಿ ನಾವಿದ್ದೇವೆ ಎಂಬುದು ನೋವಿನ ಸಂಗತಿ. ಈ ಸಮಸ್ಯೆಗಳನ್ನು ತಾಲ್ಲೂಕು ಹಾಗೂ ನಗರ ಸಭೆ ಆಡಳಿತ ತ್ವರಿತವಾಗಿ ಪರಿಹರಿಸಲಿ ಎಂದು ಅಕ್ರೋಶ ವ್ಯಕ್ತಪಡಿಸಿದರು.


    ಸ್ಥಳೀಯ ಮುಖಂಡರಾದ ಶಶಿಕುಮಾರ್ ಮಾತನಾಡಿ, ರಾಜೀವ್ ಗಾಂಧಿ ಬಡವಾಣೆ ನಿರ್ಮಾಣವಾಗಿ 20 ವರ್ಷ ಕಳೆದರು ಮೂಲಭೂತ ಸೌಕರ್ಯಗಳಿಂದ ನಾವು ವಂಚಿತರು, ನಮ್ಮ ಬಡಾವಣೆಗೆ ಮೂಲಭೂತ ಸೌಕರ್ಯ ಕೊಡಲು ಸ್ಥಳೀಯ ಆಡಳಿತ ವ್ಯವಸ್ಥೆ ಅಸಡ್ಡೆ ತೋರುತ್ತಿದೆ , ಈ ಕುರಿತು ಧ್ವನಿಯಾಗಬೇಕಿರುವ ಸ್ಥಳೀಯ ವಾರ್ಡ್ ಸದಸ್ಯರು ಸುಮ್ಮನಿರುವುದು ಬೇಸರತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.

  • *ರಾಜ್ಯ ಮಟ್ಟದ ಕ್ರೀಡಾ ಯೋಗಾಸನ ಚಾಂಪಿಯನ್ ಶಿಪ್ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಭಾಗಿ : 5 ಚಿನ್ನ, 5 ಬೆಳ್ಳಿ,4 ಕಂಚು ಸೇರಿದಂತೆ 25 ಬಹುಮಾನಗಳಿಸಿದ ಯೋಗಪಟುಗಳು*

    ದೊಡ್ಡಬಳ್ಳಾಪುರ ( ವಿಜಯಮಿತ್ರ) : ತಾಲ್ಲೂಕಿನ  ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ ಷಿಪ್,2024 ರಲ್ಲಿ ಭಾಗವಹಿಸಿ ಒಟ್ಟು 25 ಬಹುಮಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಯೋಗಕೇಂದ್ರದ ಗೌರವ ಕಾರ್ಯದರ್ಶಿ ನಟರಾಜು ತಿಳಿಸಿದ್ದಾರೆ.

    ಚಿಕ್ಕಮಂಗಳೂರು ಜಿಲ್ಲೆಯ ಕಡೂರಿನ ಪುಟ್ಟಮ್ಮ ಬೆಂಕಿಲಕ್ಷ್ಮಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಂಪಿಯನ್ ಷಿಪ್,2024 ರಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಭಾಗವಹಿಸಿ 5 ಚಿನ್ನ, 5 ಬೆಳ್ಳಿ, 4 ಕಂಚು ಸೇರಿದಂತೆ ಒಟ್ಟು 25 ಬಹುಮಾನಗಳನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

    ಬಹುಮಾನ ಪಡೆದ ಯೋಗಪಟುಗಳ ಪಟ್ಟಿ ಇಂತಿದೆ :-

    8 ರಿಂದ 10 ವರ್ಷದ ಬಾಲಕರ ವಿಭಾಗದಲ್ಲಿ ಜೆ.ಸಿ.ಪ್ರಥಮಶೆಟ್ಟಿ ದ್ವಿತೀಯ ಸ್ಥಾನ, ಯಶ್ವಿನ್.ಎಸ್ 5 ಸ್ಥಾನ,8 ರಿಂದ 10 ವರ್ಷದ ಬಾಲಕೀಯರ ವಿಭಾಗದಲ್ಲಿ ಎಸ್.ಅಪೂರ್ವ ದ್ವಿತೀಯ ಸ್ಥಾನ,ಎನ್ ಖುಷಿಪ್ರಿಯ ತೃತೀಯ ಸ್ಥಾನ,ಸಾನ್ವಿ.ಎಂ.ರಾಜು 6ನೇ ಸ್ಥಾನ,10ರಿಂದ 12 ವರ್ಷದ ಬಾಲಕರ ವಿಭಾಗದಲ್ಲಿಎಸ್.ಕುಶಲ್ ಪ್ರಥಮ ಸ್ಥಾನ, ನೀರಜ್.ಎಲ್ ತೃತೀಯ ಸ್ಥಾನ, ವೇದಿಕ್ ಶೆಟ್ಟಿ 5ನೇ ಸ್ಥಾನ, ಹಿತೇಶ್.ಎ 6ನೇ ಸ್ಥಾನ, 10ರಿಂದ12 ವರ್ಷದ ಬಾಲಕೀರ ವಿಭಾಗದಲ್ಲಿ ಗೌತಮಿ.ಹೆಚ್.ಆರ್. ಪ್ರಥಮ ಸ್ಥಾನ,ಯಶಸ್ವಿನಿ.ಟಿ. ದ್ವಿತೀಯ ಸ್ಥಾನ, ಹಿತಶ್ರೀ ಕೆ.ಎಂ ತೃತೀಯ ಸ್ಥಾನ,12ರಿಂದ 14 ವರ್ಷದ ಬಾಲಕರ ವಿಭಾಗದಲ್ಲಿ ಶಶಾಂಕ್.ಪಿ.ಎಸ್ ಪ್ರಥಮ ಸ್ಥಾನ, ಕೆ.ಎನ್.ವಿಶ್ವನಾಥ್ ತೃತೀಯ ಸ್ಥಾನ, ಎ.ಸಂಜಯ್ ಕುಮಾರ್ 5ನೇ ಸ್ಥಾನ,12ರಿಂದ15 ಬಾಲಕಿಯರ ವಿಭಾಗದಲ್ಲಿ ರನಿತಾ.ಆರ್ 5ನೇ ಸ್ಥಾನ,14ರಿಂಧ16 ವರ್ಷದ ಬಾಲಕೀಯರ ವಿಭಾಗದಲ್ಲಿ ಮಧುಶಾಲಿನಿ.ಡಿ.ಎಸ್ 5ನೇಸ್ಥಾನ, 16ರಿಂದ18 ವರ್ಷದ ಯುವತಿಯರ ವಿಭಾಗದಲ್ಲಿ ಎಂ.ಆರ್.ಜಾಹ್ನವಿ,ದ್ವಿತೀಯ ಸ್ಥಾನ 18ರಿಂದ 21 ವರ್ಶದ ಯುವಕರು ಕೆ.ವಿನಯ್ ಕುಮಾರ್, ಪ್ರಥಮ ಸ್ಥಾನ, ವರಪ್ರಸಾದ್.ವಿ ದ್ವಿತೀಯ ಸ್ಥಾನ, ಚೇತನ್ ರಾಮ್.ಕೆ.ಎಮ್ 6ನೇ ಸ್ಥಾನ, 21ರಿಂದ25 ವರ್ಷದ ಯುವತಿಯರು ಗಾನಶ್ರೀ.ಎ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

     

    ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿರುವ ಯೋಗಪಟುಗಳಿಗೆ ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶುಭಹಾರೈಸಿದ್ದಾರೆ.

  • *ದೊಡ್ಡಬಳ್ಳಾಪುರ : ಕುರಿ ಕಳ್ಳತನ ಪ್ರಕರಣ ಬೇಧಿಸಿ ಲಕ್ಷಾಂತರ ಮೌಲ್ಯದ ಕುರಿಗಳನ್ನು ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸ್*

    ದೊಡ್ಡಬಳ್ಳಾಪುರ: ಕುರಿ ಕಳ್ಳತನ ಮಾಡಿದ ಇಬ್ಬರು ಖದೀಮರನ್ನು ಬಂಧಿಸಿ, ಅವರಿಂದ 2.30 ಲಕ್ಷ ಮೌಲ್ಯದ 18 ಕುರಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ತಾಲೂಕಿನ ವಿವಿಧೆಡೆ ನಡೆದಿದ್ದ ಕುರಿ ಕಳ್ಳತನ ಪ್ರಕರಣಗಳನ್ನು ಬೇಧಿಸಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ , ಬಂಧಿತರನ್ನು ದರ್ಗಾ ಪೇಟೆಯ ನಿವಾಸಿ ನೂರುಲ್ಲಾ, ರೋಜಿಪುರದ ನಿವಾಸಿ ಮಹಮ್ಮದ್ ಅಬೀಬ್ ಎಂದು ಗುರುತಿಸಲಾಗಿದೆ. ಜುಲೈ 21 ರಂದು ಸಂತೋಷ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

     

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜು, ಡಿವೈಎಸ್ಪಿ ಪಿ. ರವಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಕುರಿ ಕಳ್ಳರನ್ನು ಬಂಧಿಸಿದ ಗ್ರಾಮಾಂತರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಶ್ಲಾಘಿಸಿದ್ದಾರೆ.