Blog

  • *1033′ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತುರ್ತು ಆಂಬುಲೆನ್ಸ್ ಸೇವೆ ಪಡೆಯಿರಿ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 25(ವಿಜಯಮಿತ್ರ):- ಜಿಲ್ಲೆಯಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ಸ್ಪಾಟ್ ಗಳನ್ನು ಗುರುತಿಸಿ ಅಪಘಾತಗಳನ್ನು ತಪ್ಪಿಸಲು ವೈಜ್ಞಾನಿಕವಾಗಿ ರೂಪುರೇಷೆ ಸಿದ್ಧಪಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಮತ್ತು ಇತರೆ ಎಲ್ಲೆಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂಬ ಅಂಕಿ ಅಂಶಗಳನ್ನು ಸಂಗ್ರಹಿಸಿ ಪದೇ ಪದೇ ಅಪಘಾತವಾಗಿದ್ದಲ್ಲಿ ಆ ಸ್ಥಳವನ್ನು ಜಂಟಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಿ ಅಪಘಾತ ವಲಯದಿಂದ ಮುಕ್ತವಾಗುವಂತೆ ಕ್ರಮ ಕೈಗೊಳ್ಳಬೇಕು.

     

    *ವೇಗದ ಚಾಲನೆಗೆ ಕಡಿವಾಣ ಹಾಕಿ*

    ಜಿಲ್ಲೆಯಲ್ಲಿ ಹೊಸದಾಗಿ ನೆಲಮಂಗಲದ ಡಾಬಸ್ ಪೇಟೆಯಿಂದ ಹೊಸಕೋಟೆ ವರೆಗೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಚೆನೈ ಎಕ್ಸ್ಪ್ರೆಸ್ ಹೈವೇ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಗಳಲ್ಲಿ ವಾಹನಗಳು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸುವುದಕ್ಕೆ ಕಡಿವಾಣ ಹಾಕಬೇಕು. ವೇಗವಾಗಿ ಚಲಿಸುವಾಗ ನಿಯಂತ್ರಣ ತಪ್ಪಿ ಅಪಘಾತಗಳು ಉಂಟಾಗುವ ಸಂಭವ ಹೆಚ್ಚಾಗಿದ್ದು, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಅಪಘಾತ ತಡೆಗೆ ಕ್ರಮ ವಹಿಸಬೇಕು ಎಂದರು.

    ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆ ದಾಟುವ ಪ್ರದೇಶಗಳಲ್ಲಿ ಸೂಚನಾ ಫಲಕ ಅಳವಡಿಸುವ ಜೊತೆಗೆ ಜಾಗೃತಿ ಮೂಡಿಸಬೇಕು.

    ರಾಷ್ಟ್ರೀಯ ಹೆದ್ದಾರಿ 648 ರಲ್ಲಿ ಕೆಲವು ಕಡೆ ಸರ್ವಿಸ್ ರೋಡ್ ಹಾಗೂ ಕೆಳ ಸೇತುವೆ(ಅಂಡರ್ ಪಾಸ್) ಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಕಡ್ಡಾಯವಾಗಿ ಅವಶ್ಯಕತೆ ಇರುವ ರಸ್ತೆ ಭಾಗಗಳಲ್ಲಿ ಸೂಚನಾ ಫಲಕಗಳು(ಸೈನ್ ಬೋರ್ಡ್), ಹಂಸ್ ಗಳು, ರಸ್ತೆ ದುರಸ್ತಿ ಕಾಮಗಾರಿಗಳ ಸ್ಥಳಗಳಲ್ಲಿ ಸೈನ್ ಬೋರ್ಡ್ ಅಳವಡಿಕೆ, ಇತರೆ ಇಲಾಖೆಗಳು ನಡೆಸುವ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುವಾಗ, ಗುಂಡಿಗಳನ್ನು ತೆಗೆದಾಗ ಅಲ್ಲಿ ಕಡ್ಡಾಯವಾಗಿ ಸುತ್ತಲೂ ಸೂಚನಾ ಫಲಕಗಳನ್ನು ಅಳವಡಿಸಿ ಬ್ಯಾರಿಕೇಡ್ ಅಳವಡಿಸಬೇಕು.

     

    ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೋಲ್ ಫ್ರೀ “1033” ಸಹಾಯವಾಣಿ ಸಂಖ್ಯೆಯನ್ನು

    ತುರ್ತು/ತುರ್ತು ಅಲ್ಲದ ಸಮಸ್ಯೆಗಳ ಸಂಭವವಿದ್ದಲ್ಲಿ 24×7 ಸೇವೆಯನ್ನು ನೀಡಲು ಪ್ರಾರಂಭಿಸಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಸಂಭವಿಸಿದರೆ ಕೂಡಲೇ ‘1033’ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ತುರ್ತು ಅಂಬುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತದೆ. *-ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್*

     

    ರಸ್ತೆಗಳಲ್ಲಿ ಅಪಘಾತ ಸಂಭವಿಸಿ ಪ್ರಾಣಾಪಾಯದಿಂದ ಪಾರಾಗುವ ಸಂಭವ ಹೆಚ್ಚಿದ್ದಾಗ ಅಮೂಲ್ಯ ಸಮಯ(ಗೋಲ್ಡನ್ ಅವರ್ಸ್) ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ಮಾಹಿತಿ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಸಮಯ ವ್ಯರ್ಥಮಾಡದೆ ಕಾರ್ಯಪ್ರವೃತ್ತರಾಗಿ ಅಪಘಾತವಾದ ವ್ಯಕ್ತಿಯನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿರುತ್ತದೆ- *ಸಿ.ಕೆ ಬಾಬಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ*

     

    ಸಭೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

  • *ಐ.ಎ.ಎಸ್/ಕೆ.ಎ.ಎಸ್ ಸ್ಫರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 25(ವಿಜಯಮಿತ್ರ):- 2024-25ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಐ.ಎ.ಎಸ್/ಕೆ.ಎ.ಎಸ್ ಸ್ಫರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗೆ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಬೌದ್ದ, ಸಿಖ್ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲು ಜುಲೈ 24 ರಿಂದ ಆಗಸ್ಟ್ 31 ರವರೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

     

    *ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷಾ ಪೂರ್ವ ತರಬೇತಿ* ತರಬೇತಿಯ ಅವಧಿ 10 ತಿಂಗಳು, ವಯಸ್ಸು 21 ರಿಂದ 35 ವರ್ಷ, ವಿದ್ಯಾರ್ಹತೆ- ಅಭ್ಯರ್ಥಿಯು ತರಬೇತಿಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕದೊಳಗೆ ಅಂತಿಮ ವರ್ಷದ ಪದವಿಯ ಫಲಿತಾಂಶ ಪ್ರಕಟಗೊಂಡಿರಬೇಕು ಹಾಗೂ ಪದವಿ ಹೊಂದಿರಬೇಕು.

    *ಅಭ್ಯರ್ಥಿಯ ಸಾಮಾನ್ಯ ಅರ್ಹತೆ-* ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ರಾಜ್ಯ ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಬೌದ್ದ, ಸಿಖ್ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದವರಾಗಿರಬೇಕು, ಅಭ್ಯರ್ಥಿಯು ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.

    *ಆಯ್ಕೆ ವಿಧಾನ-* ಅಭ್ಯರ್ಥಿಗಳಿಗೆ ಕೆ.ಇ.ಎ/ಇಲಾಖಾ ವತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು ಹಾಗೂ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಿ ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ.

     

    ಅರ್ಜಿ ಸಲ್ಲಿಸಲು 1.https://sevasindhu.karnataka.gov.in/Sevasindhu/ DepartmentServices

    2 .https://dom.karnataka.gov.in ವೆಬ್ಸೈಟ್ ಗಳಿಗೆ ಭೇಟಿ ನೀಡಬಹುದು.

    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ, ದೇವನಹಳ್ಳಿ 080-29787455, ದೊಡ್ಡಬಳ್ಳಾಪುರ ತಾಲ್ಲೂಕು ಮಾಹಿತಿ ಕೇಂದ್ರ-9986874875, ನೆಲಮಂಗಲ ತಾಲ್ಲೂಕು ಮಾಹಿತಿ ಕೇಂದ್ರ- 8660197516, ದೇವನಹಳ್ಳಿ ತಾಲ್ಲೂಕು ಮಾಹಿತಿ ಕೇಂದ್ರ- 8861926851, ಹೊಸಕೋಟೆ ತಾಲ್ಲೂಕು ಮಾಹಿತಿ ಕೇಂದ್ರ- 7676905779, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ- 8277799990 ಇವರನ್ನು ಸಂಪರ್ಕಿಸಬಹುದೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಅನ್ನದಾಸೋಹ ಸಮಿತಿಯೊಂದಿಗೆ ಹುಟ್ಟು ಹಬ್ಬದ ಆಚರಣೆ : ವಸ್ತ್ರ ವಿತರಣೆ, ವಿದ್ಯಾರ್ಥಿಗಳಿಗೆ ಪೆನ್ನು ವಿತರಣೆಯೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದ ನಿರ್ಮಾಪಕ ಲಕ್ಷ್ಮಿಪತಿ*

    ದೊಡ್ಡಬಳ್ಳಾಪುರ : ತಮ್ಮ ಹುಟ್ಟುಹಬ್ಬದ ಅಂಗವಾಗಿ ವೃದ್ಧರಿಗೆ ವಸ್ತ್ರ ವಿತರಣೆ, ಶಾಲಾ ಮಕ್ಕಳಿಗೆ ಸಿಹಿ ಮತ್ತು ಪೆನ್ ವಿತರಣೆ ಜೊತೆಗೆ ನಿರಾಶ್ರಿತರಿಗೆ ಆಹಾರ ವಿತರಣೆ ಮಾಡುವ ಮೂಲಕ ನಿರಂತರ ಅನ್ನದಾಸೋಹ ಸಮಿತಿಯ ಸಹಕಾರದೊಂದಿಗೆ ನಟ ನಿರ್ಮಾಪಕ ಲಕ್ಷ್ಮಿಪತಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

    ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರಂತರ ಅನ್ನದಾಸೋಹ ಕಾರ್ಯಕ್ರಮವು ಸತತ 1580ದಿನಗಳಿಂದ ನೆಡೆಯುತ್ತಿದ್ದು ಕಾರ್ಯಕ್ರಮದ ದಾನಿಗಳಾಗಿ ನಟ, ನಿರ್ಮಾಪಕ ಲಕ್ಷ್ಮೀಪತಿ ಭಾಗವಹಿಸಿ ಹಸಿದವರಿಗೆ ಆಹಾರ ವಿತರಣೆ ನೆಡೆಸಿದರು.

     

    ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಹಾಗೂ ಸ್ಥಳೀಯ ಪತ್ರಕರ್ತರಾದ ನೆಲ್ಲುಗುದ್ದಿಗೆ ಚಂದ್ರಣ್ಣ ಮಾತನಾಡಿ ಕೊರೋನ ಸಂದರ್ಭದಲ್ಲಿ ಪ್ರಾರಂಭವಾದ ಈ ಅನ್ನದಾಸೋಹ ಇಂದಿಗೆ 1580ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿನಿತ್ಯ ನೂರಾರು ಜನರ ಹಸಿವನ್ನು ನಿಗಿಸುವ ಕಾಯಕವನ್ನು ಮಲ್ಲೇಶ್ ಮತ್ತು ತಂಡ ಮಾಡುತ್ತಿದ್ದು ಇಂದು ವಿಶೇಷವಾಗಿ ಗೆಳೆಯರು ಆತ್ಮೀಯರು ಆದ ನಿರ್ಮಾಪಕ ಲಕ್ಷ್ಮೀಪತೀಯವರು ತಮ್ಮ ಹುಟ್ಟುಹಬ್ಬದವನ್ನು ಅನ್ನದಾಸೋಹ ಸಮಿತಿಯೋಟ್ಟಿಗೆ ಆಚರಿಸಿಕೊಳ್ಳುತ್ತಿರುವುದು ಶ್ಲಾಘನಿಯ ಸಂಗತಿಯಾಗಿದೆ ಎಂದರು.

    ನಗರಸಭಾ ಸದಸ್ಯ ಶಿವಶಂಕರ್ (ಶಂಕ್ರಿ) ಮಾತನಾಡಿ ನಿರಂತರ ಅನ್ನದಾಸೋಹ ಸಾಮಾನ್ಯದ ವಿಷಯವಲ್ಲ. ಇಂತಹ ಕಷ್ಟಕರ ಕೆಲಸವನ್ನು ಮಲ್ಲೇಶ್ ಮತ್ತು ತಂಡ ಇಷ್ಟಪಟ್ಟು ಮಾಡುತ್ತಿದೆ ಅವರಿಗೆ ಶುಭವಾಗಲಿ.ನಿರಾಶ್ರಿತರಿಗೆ ಆಹಾರ ವಿತರಣೆ ಶಾಲಾ ಮಕ್ಕಳಿಗೆ ಪೆನ್ ವಿತರಣೆ ಹಾಗೂ ಸಿಹಿ ವಿತರಣೆ ಮಾಡುವ ಮೂಲಕ ತಮ್ಮ ವಿಶೇಷ ದಿನವನ್ನು ಆಚರಿಸಿಕೊಂಡ ಲಕ್ಷ್ಮೀಪತಿಅವರಿಗೆ ಶುಭವಾಗಲಿ ಎಂದು ಹಾರೈಸಿದರು.

     

    ನಟ, ನಿರ್ಮಾಪಕ, ಲಕ್ಷ್ಮೀಪತಿ ಮಾತನಾಡಿ ಮಲ್ಲೇಶ್ ರವರ ನೇತೃತ್ವದಲ್ಲಿ ಇಂದು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೇನೆ. ವೃದ್ಧರಿಗೆ ವಸ್ತ್ರ ವಿತರಣೆ ಮಾಡಬೇಕೆಂಬ ಹಂಬಲದಿಂದಾಗಿ ಇದು ಶಕ್ತಿಯನುಸಾರ ವಸ್ತ್ರ ವಿತರಣೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಸಿಹಿ ನೀಡಿ ಪೆನ್ ವಿತರಣೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲಾಗಿದೆ. ಹೊರಗಡೆ ದುಂದುವೆಚ್ಚದ ಆಚರಣೆ ಮಾಡುವ ಬದಲು ಈ ರೀತಿಯ ಆಚರಣೆ ಸಂತಸ ತಂದಿದೆ ಎಂದರು.

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಇಂದಿನ ಕಾರ್ಯಕ್ರಮ ವಿಶೇಷವಾಗಿದ್ದು ವೃದ್ಧರಿಗೆ ವಸ್ತ್ರ ವಿತರಣೆ ಮಕ್ಕಳಿಗೆ ಪೆನ್ ಸಿಹಿ ವಿತರಣೆ ಮಾಡುವ ಮೂಲಕ ನಟ ನಿರ್ಮಾಪಕ ಲಕ್ಷ್ಮಿಪತಿಯವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಹುಟ್ಟು ಹಬ್ಬವನ್ನು ದುಂದುವೆಚ್ಚ ಮಾಡುವ ಮೂಲಕ ಆಚರಿಸುವ ಹಲವು ಜನರಿಗೆ ಲಕ್ಷ್ಮಿಪತಿಯವರು ಮಾದರಿಯಾಗಿದ್ದಾರೆ. ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡುವುದು ವಿಶೇಷವಾಗಿದೆ. ದಾನಿಗಳು ತಮ್ಮ ವಿಶೇಷ ದಿನವನ್ನು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿಕೊಳ್ಳಬೇಕೆಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಮುನಿರಾಜು, ಚಂದ್ರಣ್ಣ, ಸೇರಿದಂತೆ ಹಲವು ಮುಖಂಡರು , ನಿರಂತರ ಅನ್ನದಾಸೋಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

  • *ಕರ್ನಾಟಕ ರಾಜ್ಯ ಸರ್ಕಾರ ಸಹಕಾರಿಗಳ ಹಾಗೂ ಸಹಕಾರ ಸಂಘಗಳ ಹಿತಾಸಕ್ತಿ ವಿರುದ್ಧವಾಗಿ ಕಾನೂನು ತರಲು ಹೊರಟಿದೆ – ಒಬದೇನಹಳ್ಳಿ ಕೆ ಮುನಿಯಪ್ಪ*

    ದೊಡ್ಡಬಳ್ಳಾಪುರ : ಸಹಕಾರ ಕ್ಷೇತ್ರವು ದೇಶದ ಆರ್ಥಿಕತೆಗೆ ಬಲ ತುಂಬುವ ಸ್ಥಂಭವಾಗಿದ್ದು. ಈ ಕ್ಷೇತ್ರಕ್ಕೆ ಇನ್ನಷ್ಟು ಶಕ್ತಿತುಂಬಿವ ಮೂಲಕ ನಮ್ಮ ಭಾರತ ದೇಶವನ್ನು ಅಭಿವೃದ್ಧಿಯ ಕಡೆಗೆ ನೆಡೆಸುವ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ .ಆದರೆ ವ್ಯತಿರಿಕ್ತವಾಗಿ ಕರ್ನಾಟಕ ರಾಜ್ಯ ಸರ್ಕಾರ ಸಹಕಾರಿಗಳ ಹಾಗೂ ಸಹಕಾರ ಸಂಘಗಳ ಹಿತಾಸಕ್ತಿ ವಿರುದ್ಧವಾಗಿ ಕಾನೂನು ತರಲು ಹೊರಟಿದೆ ಎಂದು ರಾಜ್ಯ ಬಿಜೆಪಿ ಸಹಕಾರ ಪ್ರಕೋಷ್ಠದ ಸದಸ್ಯ ಓಬದೇನಹಳ್ಳಿ ಕೆ.ಮುನಿಯಪ್ಪ ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಎಲ್ಲ ಸಹಕಾರಿಗಳ ಒಂದು ಬಹುದಿನಗಳ ಕನಸು ಕೇಂದ್ರ ಸಹಕಾರ ಸಚಿವಾಲಯದ ಸ್ಥಾಪನೆ. ಈ ಕನಸನ್ನು ನಮ್ಮ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜುಲೈ 6ರಂದು ಸಾಕಾರಗೊಳಿಸಿದೆ. ಕೃಷಿ ಸಚಿವಾಲಯದಿಂದ ಬೇರ್ಪಡಿಸಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಿದೆ.ಸಹಕಾರ ಸಚಿವಾಲಯ ಸ್ಥಾಪನೆಯ ನಂತರ ದೇಶದ ಒಟ್ಟು ಸಹಕಾರ ಸಂಸ್ಥೆಗಳು, ಒಟ್ಟು ಸಹಕಾರ ಸದಸ್ಯರು ಅವುಗಳ ಸ್ವರೂಪ ಇತ್ಯಾದಿ ಮಾಹತಿಯನ್ನು ಸಂಗ್ರಹಿಸಲಾಗಿದೆ. ಡಿಸೆಂಬರ್ 2023ರವರೆಗೆ ಒಟ್ಟು ಮೂರು ಹಂತದ ಬೇರೆ ಬೇರೆ ಸ್ವರೂಪಗಳನ್ನೊಳಗೊಂಡ ಸಹಕಾರಿ ಸಂಸ್ಥೆಗಳ ಮಾಹಿತಿ ಪಡೆಯಲಾಗಿದೆ. ಕೇರಳ ಹಾಗೂ ಮಣಿಪುರ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳ ಪೂರ್ಣ ಮಾಹಿತಿ ಸಂಗ್ರಹವಾಗಿದೆ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಈ ಅಂಕಿ ಅಂಶಗಳು ಲಭ್ಯವಾಗಿವೆ ಎಂದರು.

     

    ಕೇಂದ್ರ ಸರಕಾರವು ಸಹಕಾರ ಸೇ ಸಮೃದ್ಧಿ ಎಂಬ ಧೈಯದಡಿಯಲ್ಲಿ ಕಾರ್ಯ ಪ್ರಾರಂಭ ಮಾಡಿದೆ.

     

    ಈ ಕಾರ್ಯಕ್ರಮದ ಮುಖ್ಯಉದ್ದೇಶಗಳು :

    *ದೇಶದಲ್ಲಿ ಸಹಕಾರ ಚಳುವಳಿ ಬಲಪಡಿಸುವಿಕೆ.

    *ತಳಮಟ್ಟದ ಮೇರೆಗೆ ಅದರ ವ್ಯಾಪ್ತಿ ಹೆಚ್ಚಿಸುವುದು.ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ

    *ಸೂಕ್ತ ನೀತಿ, ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟು ರಚನೆ

    *ಸದಸ್ಯರ ಆರ್ಥಿಕ ಪಾಲ್ಗೊಳ್ಳುವಿಕೆ, ಸ್ವಾಯತ ಮತ್ತು ಸ್ವಾತಂತ್ರ್ಯ, ಶಿಕ್ಷಣ ಮತ್ತು ತರಬೇತಿ, ಮಾಹಿತಿ,

    *ಸಹಕಾರ ಸಂಘಗಳ ಮಧ್ಯ ಉನ್ನತ ಸಹಕಾರ,

    *ಇಡೀ ಸಹಕಾರ ಸಮುದಾಯಗಳ ಕಾಳಜಿ ವಹಿಸುವುದಾಗಿದೆ ಎಂದರು.

     

    ವೈದ್ಯನಾಥನ್ ಸಮಿತಿ ಸಿಫಾರಸ್ಸಿನ ಅನ್ವಯ ಕೇಂದ್ರ ಸರಕಾರ, ನಬಾರ್ಡ್ ಹಾಗೂ ರಾಜ್ಯ ಸರಕಾರದ ಒಪ್ಪಂದೊಂದಿಗೆ ಸಹಕಾರ ಇಲಾಖೆಯಲ್ಲಿ ಹತ್ತು ಹಲವಾರು ಬದಲಾವಣೆಯಾಗಿದ್ದು ತದನಂತರ 2011ನೇ ಇಸವಿಯಲ್ಲಿ Article 97th Amendment ಮುಖೇನ ಸಹಕಾರ ಕ್ಷೇತ್ರಕ್ಕೆ ಸಾಕಷ್ಟು ಬದಲಾವಣೆಯನ್ನು ಯುಪಿಎ ಸರ್ಕಾರದ ಅವಧಿಯಲ್ಲಿ ತರಲಾಗಿತ್ತು. ಆದರೆ ರಾಜ್ಯ ಕಾಂಗ್ರೇಸ್ ಸರಕಾರ ಇದನ್ನು ಒಡೆದು ಹಾಕಿ ಆಘಾತಕಾರಿ ಬದಲಾವಣೆ ಬಿಲ್ಲನ್ನು ತರುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.

     

    ಈ ಬಿಲ್ಲಿನಲ್ಲಿ ಏನಿದೆ…..????

     

    1. ಎಲ್ಲ ಸದಸ್ಯರಿಗೆ ಮತದಾನದ ಹಕ್ಕು (ಅಂದರೆ ಸಂಘದಲ್ಲಿ ಯಾವುದೇ ವ್ಯವಹಾರ ಮಾಡದೇ ಇದ್ದರೂ, ಯಾವುದೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಭಾಗಿಯಾಗದಿದ್ದರು.)

     

    2. ಚುನಾವಣಾ ಪ್ರಾಧಿಕಾರ ರದ್ದುಪಡಿಸಿ ಸರಕಾರದ ಹಿಡಿತದಲ್ಲಿರುವ ರೆಜಿಸ್ಟ್ರಾರ್ ನಿಯಂತ್ರಣದಲ್ಲಿ ಸಹಕಾರ ಚುನಾವಣಾ ವಿಭಾಗ

     

    3. ಪ್ರಾಥಮಿಕ ಹಂತದಿಂದ ಫೆಡರಲ್ ಹಂತದವರೆಗೆ ಕಾಂಗ್ರೇಸ್ ನೇತೃತ್ವದ ಸರಕಾರದಿಂದ ನಾಮ ನಿರ್ದೇಶನ ಮಾಡಿ ಅವರಿಗೆ ಮತದಾನದ ಹಕ್ಕನ್ನು ನೀಡುವುದು. (ಚುನಾಯಿತ ಆಡಳಿತ ಮಂಡಳಿ ಸದಸ್ಯರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ)

     

    4. ಆಡಳಿತ ಮಂಡಳಿ ಸದಸ್ಯರ ಸಂಖ್ಯೆಯನ್ನು ಪ್ರಾಥಮಿಕ, ಫೆಡರಲ್ ಹಾಗೂ ಅಪಲ್ಸ್ ಸಂಸ್ಥೆಗಳಲ್ಲಿ ಹೆಚ್ಚಿಸುವುದು (ಆರ್ಟಿಕಲ್ 97 ಅಮೆಂಡ್‌ಮೆಂಟ್ ವಿರುದ್ಧವಾಗಿರುತ್ತದೆ)

     

     

    ರಾಜ್ಯದ ಎಲ್ಲ ಹಂತದ ಸಹಕಾರಿಗಳಲ್ಲಿ ಆತಂಕವೇನೆಂದರೆ ಸಹಕಾರಿ ಕ್ಷೇತ್ರ ಕಾಂಗ್ರೇಸ್ ಕಾಯಕರ್ತರ ನಿರಾಶ್ರಿತರ ಗಂಜಿ ಕೇಂದ್ರವಾಗಬಾರದೆಂಬು ಭಾರತೀಯ ಜನತಾ ಪಾರ್ಟಿ ಸಹಕಾರ ಪ್ರಕೋಷ್ಠದ ವತಿಯಿಂದ ಈ ನಿಯಂತ್ರಣ ಹೇರುವ ಬಿಲ್ಲನ್ನು ತೀವ್ರವಾಗಿ ಖಂಡಿಸುತ್ತೇವೆ. ಎಲ್ಲ ಸಹಕಾರಿಗಳ ಪರವಾಗಿ ಈ ಬಿಲ್ಲನ್ನು ತರಕೊಡದೆಂದು ಸರಕಾರಕ್ಕೆ ಆಗ್ರಹಪಡಿಸುತ್ತೇವೆ ಎಂದರು.

     

    ಸರ್ಕಾರದ ಹಸ್ತಕ್ಷೇಪ ಹಾಗೂ ಸಹಕಾರ ಕ್ಷೇತ್ರದ ಅಭಿವೃದ್ಧಿ ವಿರೋಧಿ ಬಿಲ್ಲಿನ ವಿರುದ್ದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

  • *ಜೀವ ಜಲದ ಉಳಿವಿಗಾಗಿ ಆಮರಣಾಂತಿಕ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ರೈತರು*

    ದೊಡ್ಡಬಳ್ಳಾಪುರ : ಜೀವಜಲ ಉಳಿವಿಗಾಗಿ ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ನಮಗೆ 3ನೇ ಹಂತದ ಶುದ್ದೀಕರಣ ಘಟಕ ಬೇಕೆಬೇಕಾಗಿದೆ ಈ ಕಾರಣಕ್ಕಾಗಿ ಜುಲೈ 24 ರಿಂದ ತಾಲ್ಲೂಕು ಕಛೇರಿ ಮುಂದೆ ಅಮರಣಾಂತಿಕ ಉಪವಾಸ ಸತ್ಯಾಗ್ರಹವನ್ನು ಮಾಡುಲು ನಿರ್ಧರಿಸಿದ್ದೇವೆ ಎಂದು ಆರ್ಕವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ತಿಳಿಸಿದೆ.

    ದೊಡ್ಡಬಳ್ಳಾಪುರ ನಗರಸಭೆ ತಮ್ಮ ಒಳಚರಂಡಿ ನೀರನ್ನು ನೇರವಾಗಿ ಶುದ್ದಿಕರಿಸದೇ ಚಿಕ್ಕತುಮಕೂರು ಕೆರೆಗೆ ಬಿಡುತ್ತಿರುವುದು,ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ತಮ್ಮಲ್ಲಿ ಉತ್ಪತ್ತಿಯಾಗುವ ಒಳಚರಂಡಿ ನೀರನ್ನು ಚಿಕ್ಕತುಮಕೂರು ಕೆರೆಗೆ ಬಿಡುತ್ತಿರುವುದು ಮತ್ತು ಕಾರ್ಖಾನೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ನೀರನ್ನು ಮಳೆ ನೀರು ಹರಿಯುವ ಕಾಲುವೆಗೆ ಬಿಡುತ್ತಿರುವುದರಿಂದ ದೊಡ್ಡತುಮಕೂರು ಗ್ರಾಮಪಂಚಾಯತಿ ಮತ್ತು ಮಜರಾಹೊಸಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಅಂತರ್ ಜಲವು ಸಂಪೂರ್ಣ ಹಾಳಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ

     

    ಗ್ರಾಮಗಳಲ್ಲಿ ಲಭ್ಯವಿರುವ RO ಘಟಕದ ನೀರು ಸಹ ಬಳಸಲು ಯೋಗ್ಯವಾಗಿಲ್ಲ ಎಂಬ ವರದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿರುತ್ತದೆ ಇದಕ್ಕೆ ಸಂಬಂದಿಸಿದಂತೆ ಸಾರ್ವಜನಿಕರು ಅನೇಕ ಹೋರಾಟಗಳು ನಡೆಸಿದ್ದೇವೆ ಹಾಗೂ ಹಸಿರು ನ್ಯಾಯ ಪೀಠವು ಕೆರೆಯಲ್ಲಿರುವ ಎಸ್‌ಟಿಪಿಯನ್ನು ಬದಲಾಯಿಸಿ ಎಂಬ ಆದೇಶವನ್ನು ನೀಡಿದೆ ಇದರ ಪ್ರತಿಫಲವಾಗಿ 2023ನೇ ಇಸವಿಯಲ್ಲಿ ಎರಡನೇಯ ವೈಜ್ಞಾನಿಕ ಶುದ್ದೀಕರಣ ಘಟಕಕ್ಕೆ ಅಧಿಕಾರಿಗಳು ಅನುಮೋದನೆ ನೀಡುತ್ತಾರೆ ಆದರೆ ವಿಧಾನಸಭೆಯಲ್ಲಿ ನಮ್ಮ ತಾಲ್ಲೂಕಿನ ಶಾಸಕರು ಈ ವಿಚಾರವಾಗಿ ವಿಷಯ ಪ್ರಸ್ತಾಪ ಮಾಡಿದ್ದಾರೆ ಅದಕ್ಕೆ ಸಂಬಂದಪಟ್ಟಂತಹ ಮಂತ್ರಿಯವರು ಯಾವುದೇ ರೀತಿಯ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ತಿಳಿಸಿದ್ದಾರೆ

    ಕಳೆದ ಲೋಕಸಭಾ ಚುನಾವಣೆಯನ್ನು ಎರಡು ಪಂಚಾಯ್ತಿ ಜನರು ಬಹಿಷ್ಕರಿಸಿದಾಗ ಜಿಲ್ಲಾಧಿಕಾರಿಗಳು ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಮುಂಭಾಗ ಎರಡು ಪಂಚಾಯತಿ ಮುಖಂಡರ ಸಭೆ ನಡೆಸಿ 2ನೇ ಹಂತದ ಶುದ್ದೀಕರಣ ಘಟಕಕ್ಕೆ ಒಪ್ಪಿಗೆ ಸಿಕ್ಕಿದೆ, ಜಮೀನು ಸಹ ನೋಡಿದ್ದೇವೆ ಎಂದು ಮೌಖಿಕವಾಗಿ ಸಭೆಯಲ್ಲಿ ತಿಳಿಸಿರುತ್ತಾರೆ. ಹಾಗೂ ಚುನಾವಣೆ ನಡೆಸಲು ತಿಳಿಸಿರುತ್ತಾರೆ ಅದಕ್ಕೆ ಒಪ್ಪಿದ ಗ್ರಾಮಸ್ಥರು ಚುನಾವಣೆಯನ್ನು ಸಹ ನಡೆಸಿದರು. ಆದರೆ ವಿಧಾನಸಭೆಯಲ್ಲಿ ಶಾಸಕರು ಈ ವಿಷಯ ಪ್ರಸ್ತಾವನೆ ಮಾಡಿದಾಗ ಸಂಬಂದಪಟ್ಟ ಮಂತ್ರಿಯವರು ನಮ್ಮ ಮುಂದೆ ಯಾವುದೇ ಕ್ರಿಯಾಯೋಜನೆ ಇಲ್ಲ ಎಂದು ಹೇಳಿರುತ್ತಾರೆ. ಇದರಿಂದ ನಮ್ಮ ಭಾಗದ ಜನರಿಗೆ ಸರ್ಕಾರದಿಂದ ದ್ರೋಹವಾಗಿರುತ್ತದೆ ಆದ್ದರಿಂದ ಗ್ರಾಮಸ್ಥರು ಆಮರಣಾಂತಿಕ ಉಪವಾಸ ಸತ್ಯಾಗ್ರಹವನ್ನು ಮಾಡುವ ಮೂಲಕ ನ್ಯಾಯ ಪಡೆಯಲು ಮುಂದಾಗಿದ್ದೇವೆ ಎಂದು ಆರ್ಕವತಿ ಹೋರಾಟ ಸಮಿತಿ ತಿಳಿಸಿದೆ.

     

    ಈ ಸಂದರ್ಭದಲ್ಲಿ ಅರ್ಕಾವತಿ ಹೊರಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

  • *ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆಗಿಳಿದ ಕನ್ನಡ ಪಕ್ಷ*

    ದೊಡ್ಡಬಳ್ಳಾಪುರ : ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ವಿಚಾರ ನೆನ್ನೆ ಮೊನ್ನೆಯದಲ್ಲ 60ರ ದಶಕದಿಂದಲೂ ಕನ್ನಡಿಗರಿಗೆ ರಾಜ್ಯ ಸರ್ಕಾರದ ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿ ಮತ್ತು ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಆರೋಪಿಸಿದರು.

    ನಗರದ ತಾಲೂಕು ಕಚೇರಿ ಮುಂಭಾಗ ಕನ್ನಡ ಪಕ್ಷದ ವತಿಯಿಂದ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸುಮಾರು 50 ವರ್ಷಗಳಿಂದಲೂ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿಚಾರದಲ್ಲಿ ಬಂದಂತಹ ಎಲ್ಲಾ ಸರ್ಕಾರಗಳು ಕನ್ನಡಿಗರ ಪರ ಧ್ವನಿ ಯಾಗದೆ ಹೊರ ರಾಜ್ಯದಿಂದ ವ್ಯಾಪಾರಕ್ಕಾಗಿ ಬಂದವರ ಆಮಿಷಗಳಿಗೆ ಒಳಗಾಗಿವುದನ್ನು ಕಾಣಬಹುದಾಗಿದೆ.ಡಾಕ್ಟರ್ ಸರೋಜಿನಿ ಮಹಿಸಿ ವರದಿ ಅನ್ವಯ ಯತಾವತ್ತಾಗಿ ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲೂ ಸಹ ಮೀಸಲಾತಿ ನೀಡಬೇಕೆಂದು ಕನ್ನಡ ಪಕ್ಷ ಒತ್ತಾಯಿಸುತ್ತದೆ ಎಂದರು.

    ರಾಜ್ಯ ಕಾರ್ಯದರ್ಶಿಗಳಾದ ಡಿ ಪಿ ಆಂಜನೇಯ ಮಾತನಾಡಿ ಇತ್ತೀಚೆಗೆ ಮಂತ್ರಿ ಪರಿಷತ್ ಸಭೆಯಲ್ಲಿ ಪ್ರಸ್ತಾಪವಾದ ಉದ್ಯೋಗ ಮೀಸಲಾತಿ ವಿಚಾರದಲ್ಲಿ ಕರ್ನಾಟಕದಲ್ಲಿನ ಖಾಸಗಿ ಕಂಪನಿಗಳು ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ ಎಂದು ಹೇಳಲಾಗುತ್ತಿದೆ ಇವರು ಐಟಿ ಬಿಟಿ ಕಂಪನಿಗಳನ್ನು ಪ್ರಾರಂಭಿಸಲು ಕನ್ನಡದ ನೆಲಬೇಕು ಕುಡಿಯಲು ಕಾವೇರಿ ನೀರು ಬೇಕು ಇಲ್ಲಿನ ವಿದ್ಯುತ್ ಬೇಕು ಆದರೆ ಕನ್ನಡಿಗರಿಗೆ ಉದ್ಯೋಗ ನೀಡಲು ಮಾತ್ರ ಮೀನ ಮೇಷ ಎಣಿಸುತ್ತವೆ ಕನ್ನಡಿಗರಿಗೆ ಉದ್ಯೋಗ ನೀಡದಿದ್ದರೆ ಈ ಐಟಿ-ಬೀಟಿ ಕಂಪನಿಗಳು ಕರ್ನಾಟಕದಿಂದ ತೊಲಗಬೇಕೆಂದು ಕನ್ನಡಪಕ್ಷ ಒತ್ತಾಯಿಸುತ್ತದೆ ಎಂದರು.

     

    ಆದರೆ ನುಡಿದಂತೆ ನಡೆಯುತ್ತೇವೆಂದು ಹೇಳುವ ಮಾನ್ಯ ಮುಖ್ಯಮಂತ್ರಿಗಳು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ವಿಚಾರದಲ್ಲಿ ಸ್ಪಷ್ಟವಾದ ನಿಲುವನ್ನ ಪ್ರಕಟಿಸಬೇಕು ಮತ್ತು ಅದು ಶಾಸನವಾಗ ಬೇಕು ಇದೀಗ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಈ ವಿಚಾರವನ್ನು ತಾವು ಮಂಡಿಸಿ ಕನ್ನಡಿಗರಿಗೆ ಇದುವರೆಗೂ ಆಗಿರುವ ಅನ್ಯಾಯವನ್ನು ಸರಿಪಡಿಸಿ ಕನ್ನಡಿಗರ ಬಹುದಿನದ ಬೇಡಿಕೆ ಈಡೇರಿಕೆಗೆ ಕನ್ನಡ ಪಕ್ಷ ಒತ್ತಾಯಿಸುತ್ತದೆ ಎಂದರು.

    ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಯಾವುದೇ ಒತ್ತಡಕ್ಕೆ ಮಣಿಯದೆ ಕನ್ನಡಿಗರಿಗೆ ಮೀಸಲಾತಿ ನೀಡಲೇಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು .

    ಈ ಸಂದರ್ಭದಲ್ಲಿ ಕನ್ನಡ ಪಕ್ಷದ ಮೋಹನ್ ಕುಮಾರ್ , ತಾಲೂಕು ಘಟಕದ ಅಧ್ಯಕ್ಷ ಡಿ ವೆಂಕಟೇಶ್, ಉಮಾಶಂಕರ್, ಸಿದ್ದರಾಜು, ಮಂಜುನಾಥ,ನರಸಿಂಹಮೂರ್ತಿ, ಗೋವಿಂದರಾಜು, ಗಂಗಾಧರ ಆರ್, ರಂಗನಾಥ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • *ಡೆಂಗ್ಯೂ ಕುರಿತು ಅರಿವು : ಸೊಳ್ಳೆ ಪರದೆ ಹಂಚಿಕೆ ಮಾಡುವ ಮೂಲಕ ಜನರಲ್ಲಿ ಜಾಗೃತಿ*

    ದೊಡ್ಡಬಳ್ಳಾಪುರ : ಎಲ್ಲೆಡೆ ಡೆಂಗ್ಯೂ ( ಜ್ವರ ) ಕಾಯಿಲೆ ಹರಡುತ್ತಿದೆ ಈ ಕುರಿತು ಸಾರ್ವಜನಿಕರು ಜಾಗೃತರಾಗಬೇಕಿದೆ. ಸೊಳ್ಳೆ ಪರದೆ ಹಾಗೂ ಕಾಯಿಲ್ ಗಳನ್ನು ವಿತರಣೆ ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಭಾಸ್ಕರ್ ತಿಳಿಸಿದರು.

    ಬೆಂಗಳೂರು ಗ್ರಾಮಾಂತರ ಭಾರತೀಯ ರೆಡ್ ಕ್ರಾಸ್ ಹಾಗೂ ಸನ್ನದ್ಧ ಸಂಸ್ಥೆ ವತಿಯಿಂದ ನಾಗರಿಕರಿಗೆ ಡೆಂಗ್ಯೂ ಕಾಯಿಲೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು. ತಾಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಳ್ಳೆ ಪರದೆ ಮತ್ತು ಸೊಳ್ಳೆ ಕಾಯಿಲ್ ಗಳನ್ನು ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಜ್ಯದ ಎಲ್ಲೆಡೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು. ಸೊಳ್ಳೆಗಳ ಕಡಿತದಿಂದ ರಕ್ಷಣೆ ಅತ್ಯಗತ್ಯವಾಗಿದೆ, ನಿರಂತರವಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಚರಣೆ ಮಾಡಲಾಗುತ್ತಿದ್ದು ಜೊತೆಗೆ ಸಾರ್ವಜನಿಕರಿಗೆ ಸಹಕಾರಿಯಾಗುವಂತೆ ಸೊಳ್ಳೆ ಪರದೆ ಮತ್ತು ಕಾಯಿಲ್ ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

    ಅನ್ನದಾಸೋಹ ಸಮಿತಿಯ ಮುಖ್ಯಸ್ಥ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ಭಾರತೀಯ ರೆಡ್ ಕ್ರಾಸ್ ಹಾಗೂ ಸನ್ನದ್ಧ ಸಂಸ್ಥೆಯ ವತಿಯಿಂದ ಶ್ರೀ ಚಂದ್ರಕಾಂತ್ ಹಾಗೂ ಭಾಸ್ಕರ್ ರವರ ನೇತೃತ್ವದಲ್ಲಿ ನಿರಾಶ್ರಿತರಿಗೆ, ಕಡುಬಡವರಿಗೆ ಡೆಂಗ್ಯೂ ವಿನಂತಹ ಮಹಾಮಾರಿಯಿಂದ ಪಾರಾಗಲು ಸಹಕಾರಿಯಾಗುವ ಸೊಳ್ಳೆ ಪರದೆಗಳು ಮತ್ತು ಸೊಳ್ಳೆಬತ್ತಿ ಕಾಯಲ್ ಗಳನ್ನು ವಿತರಣೆ ಮಾಡಲಾಗಿದ್ದು. ಡೆಂಗ್ಯೂ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ. ಎರಡು ಸಂಸ್ಥೆಯ ಪದಾಧಿಕಾರಿಗಳಿಗೆ ಶುಭವಾಗಲಿ ಅವರ ಸೇವಕಾರಿಯ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದರು

     

    ಈ ಸಂದರ್ಭದಲ್ಲಿ ನಿರಂತರ ಅನ್ನದಾಸೋಹ ಸಮಿತಿಯ ಸದಸ್ಯರುಉಪಸ್ಥಿತರಿದ್ದರು.

  • *MNC ಕಂಪನಿಗಳ ವಿರುದ್ಧ ಪ್ರತಿಭಟನೆಗೆ ಮುಂದಾದ ಕರವೇ : ಕನ್ನಡಿಗರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವಂತೆ ಅಗ್ರಹ*

    ಹೊರದೇಶಗಳಿಂದ ಕರ್ನಾಟಕಕ್ಕೆ ಬಂದು ವ್ಯಾಪಾರ ನಡೆಸುತ್ತಿರುವ ಹಲವಾರು ಎಂಎನ್‌ಸಿ ಕಂಪನಿಗಳಲ್ಲಿ ಅರ್ಹತೆ ಇದ್ದರೂ ಕನ್ನಡಿಗರನ್ನು ಕೇವಲ ಸಹಾಯಕರ ಹುದ್ದೆಗಳಿಗೆ ನೇಮಿಸಿಕೊಂಡು ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ ಎಂಎನ್‌ಸಿ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡಿಗರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಆಗ್ರಹಿಸಿದ್ದಾರೆ.

     

    ಹಲವಾರು ಎಂಎನ್‌ಸಿ ಕಂಪನಿಗಳಲ್ಲಿ ಕನ್ನಡಿಗರು ನಿರಂತರವಾಗಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ ಆದರೆ ಈವರೆಗೂ ಅವರಿಗೆ ಕಂಪನಿಗಳು ಉತ್ತಮ ಸ್ಥಾನಮಾನ ನೀಡಿಲ್ಲ ಎಂಬುದು ವಿಪರ್ಯಾಸ..

    ಅರ್ಹತೆ ಇಲ್ಲದೆ ಇದ್ದರೂ ಹೊರ ರಾಜ್ಯಗಳಿಂದ ಬಂದ ಎಷ್ಟೋ ಮಂದಿಗೆ ಉತ್ತಮ ಹುದ್ದೆ ನೀಡಿ ಕೈ ತುಂಬಾ ಸಂಬಳ ಕೊಡುವ ಕಾರ್ಖಾನೆಗಳು ಕನ್ನಡಿಗರಿಗೆ ಮಾತ್ರ ಕೈಗೆ ಚಿಪ್ಪು ನೀಡುತ್ತಿದೆ. ಈ ಧೋರಣೆ ಬದಲಾಗಬೇಕಿದೆ.

    ಕರವೇ ಕನ್ನಡಿಗರು ಈಗಾಗಲೇ ಈ ಕುರಿತು ಮಾಹಿತಿ ಕಲೆ ಹಾಕಿದ್ದು. ಎಂಎನ್‌ಸಿ ಕಂಪನಿಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ ಈ ಕೂಡಲೇ ಕಂಪನಿಗಳು ಹೆಚ್ಚೆದ್ದು ತಮ್ಮಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ( ಕನ್ನಡಿಗರಿಗೆ ) ಅರ್ಹತೆಗೆ ಅನುಗುಣವಾಗಿ ಉತ್ತಮ ಸ್ಥಾನಮಾನ ಕಲ್ಪಿಸಲು ಮುಂದಾಗ ಬೇಕಿದೆ ಎಂದರು.

    ಈ ಕುರಿತು ಕಂಪನಿಗಳು ತಲೆಕೆಡಿಸಿಕೊಳ್ಳಲಿ ಇದ್ದ ಪಕ್ಷದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಕನ್ನಡಿಗರ ಸಹನೆ ಎಷ್ಟು ಹಿತವೋ…. ಕನ್ನಡಿಗರ ಕೋಪವು ಅಷ್ಟೇ ಕಷ್ಟ….. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಕಂಪನಿಗಳು ತಮ್ಮ ಜವಾಬ್ದಾರಿ ನಿರ್ವಹಿಸಲಿ ಎಂದು ಎಚ್ಚರಿಸಿದರು.

  • *ಕಾಡನೂರು ಮಹೇಶ್ವರಮ್ಮ ಜಾತ್ರೆಯಲ್ಲಿ ಪವಾಡ : ಕಣ್ಣು ತೆರೆದ ಮಹೇಶ್ವರಮ್ಮ ಏನಿದು ಪವಾಡ ….????*

    ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿ ಗ್ರಾಮದಲ್ಲೂ ಒಂದಲ್ಲ ಒಂದು ಜಾತ್ರಾ ಮಹೋತ್ಸವ ನೆರವೇರುತ್ತಿದೆ. ಅಂತೆಯೇ ಇಲ್ಲೊಂದು ಜಾತ್ರಾ ಮಹೋತ್ಸವದಲ್ಲಿ ದೇವರು ಕಣ್ಬಿಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದೆ.

     

    ತಾಲೂಕಿನ ಮದುರೆ ಹೋಬಳಿಯ ಕಾಡನೂರು ಎಂಬ ಹಳ್ಳಿಯಲ್ಲಿ ಮಹೇಶ್ವರಮ್ಮ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು. ಈ ಸಂದರ್ಭದಲ್ಲಿ ತಾಯಿ ಕಣ್ಣು ಬಿಟ್ಟಿದ್ದಾರೆ…. ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

     

    ಸದ್ಯಕ್ಕೆ ಕಣ್ಣು ಬಿಟ್ಟಂತೆ ಕಾಣುವ ದೇವಿಯ ಚಿತ್ರ ಎಲ್ಲೆಡೆ ಹರಿದಾಡುತ್ತಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಕಾಡನೂರು ಗ್ರಾಮದ ಮಹೇಶ್ವರಮ್ಮ ದೇವಸ್ಥಾನದಲ್ಲಿನ ಮಹೇಶ್ವರಮ್ಮ ವಿಗ್ರಹ ಕಣ್ಣು ತೆರೆದಂತೆ ಭಾಸವಾಗುತ್ತಿದ್ದು ಇದು ದೇವರ ಪವಾಡವೆಂದು ಜನರು ದೇವರ ದರ್ಶನ ಪಡೆಯಲು ಮುಂದಾಗಿದ್ದಾರೆ.

     

    ಜುಲೈ 21ರಂದು ಸಂಜೆ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಪೂಜಾ ಕಾರ್ಯಕ್ರಮಕ್ಕೆ ಸ್ಥಳೀಯ ನೂರಾರು ಭಕ್ತರು ಭಾಗವಹಿಸಿದ್ದರು, ಪೂಜೆಯ ನಂತರ ದೇವರ ವಿಗ್ರಹ ಕಣ್ಣು ತೆರೆದಿರುವ ರೀತಿಯಲ್ಲಿ ಭಕ್ತರಿಗೆ ಭಾಸವಾಗಿ , ಇದು ಮಹೇಶ್ವರಮ್ಮ ದೇವಿಯ ಪವಾಡ ಎಂದು ಭಕ್ತರು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಈಗ ಸುತ್ತಮುತ್ತಲಿನ ಗ್ರಾಮಸ್ಥರು ನಾ ಮುಂದು ತಾ ಮುಂದು ಎಂಬಂತೆ ದೇವಿಯ ಪವಾಡ ನೋಡಲು ಆಗಮಿಸುತ್ತಿದ್ದಾರೆ.

  • ತಿರುಮಗೊಂಡನಹಳ್ಳಿ ಮೊಹರಂ ಪೂಜಾ ಕಾರ್ಯಕ್ರಮಕ್ಕೆ ಬಂದ ಯುವಕನ ಬ್ಯಾಗ್ ನಲ್ಲಿತ್ತು ಮಾರಕಾಸ್ತ್ರ….!!! ಗ್ರಾಮಸ್ಥರ ಸಮಯ ಪ್ರಜ್ಞೆ ತಪ್ಪಿದ ಅನಾಹುತ

    ದೊಡ್ಡಬಳ್ಳಾಪುರ : ತಾಲೂಕಿನ ಎಲ್ಲೆಡೆ ಮೊಹರಂ ಆಚರಣೆ ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಇದೊಂದು ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಸಂಕೇತವಾದ ಹಬ್ಬ ಎಂದರೆ ತಪ್ಪಾಗಲಾರದು.

     

    ಅಂತಯೇ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ ಭಕ್ತಿ ಭಾವದಿಂದ ಅದ್ದೂರಿಯಾಗಿ ನಡೆದಿತ್ತು. ಆದರೆ ಕಾರ್ಯಕ್ರಮಕ್ಕೆ ಬಂದ ಅಪರಿಚಿತ ಯುವಕ ಎಲ್ಲರ ಸಂತೋಷವನ್ನು ಭಯವನ್ನಾಗಿ ಮಾರ್ಪಡಿಸಿದ್ದ… ಕಾರಣ ಅವನ ಬ್ಯಾಗ್ ನಲ್ಲಿದ್ದ ಮಾರಕಾಸ್ತ್ರ.

    ಅಪರಿಚಿತ ಯುವಕನ ಬ್ಯಾಗ್ ನಲ್ಲಿ ಮಾರಕಾಸ್ತ್ರ ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದ ಯುವಕನನ್ನು ಕೊ* ಮಾಡಲು ಹುನ್ನಾರ ನಡೆದಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದು.

     

    ಯುವಕನನ್ನು (ಆರೋಪಿಯನ್ನು) ಗ್ರಾಮಸ್ಥರು ಹಿಡಿದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ , ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

     

    ಈ ಘಟನೆ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಂತರ ಸತ್ಯ ಸತ್ಯತೆ ಹೊರಬೀಳಲಿದೆ .