Blog

  • ಬಿ.ಎಡ್ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

    2025-26ನೇ ಸಾಲಿನಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

    ಅರ್ಹ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಡಿಸೆಂಬರ್ 31 ರೊಳಗೆ ಅರ್ಜಿ ಸಲ್ಲಿಸಬಹುದು.

    ಗ್ರಾಮೀಣ ಮತ್ತು ನಗರ ವಿಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಿ ಕಲಿಕಾ ಮತ್ತು ಭೋಧನಾ ಸಾಮಾಗ್ರಿಗಳನ್ನು ಖರೀದಿಸಲು ಆರ್ಥಿಕ ಸಹಾಯ ಮಾಡುವ ಹಿತ ದೃಷ್ಟಿಯಿಂದ National Council for Teacher Education ನಿಂದ ಮಾನ್ಯತೆ ಪಡೆದಿರುವ ಕೋರ್ಸ್‌ಗಳ ಸರ್ಕಾರಿ/ಅರೆ ಸರ್ಕಾರಿ/ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಲ್ಲಿ ದಾಖಲಾತಿ ಹೊಂದಿ ಬಿ.ಎಡ್ ಕೋರ್ಸ್‌ ನಲ್ಲಿ ವ್ಯಾಸಂಗ ಮಾಡುತ್ತಿರಬೇಕು. ವಿದ್ಯಾರ್ಥಿಯು ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್.ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದವರಾಗಿರಬೇಕು. ವಿದ್ಯಾರ್ಥಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿರಬೇಕು. ಕೋರ್ಸ್‌ಗಳ ಅವಧಿಗೆ ತಕ್ಕಂತೆ ಪ್ರತಿ ವರ್ಷ ರೂ.25,000/- ಸಾವಿರದಂತೆ (ಗರಿಷ್ಠ 2 ವರ್ಷ) ಅನುದಾನವನ್ನು ನೀಡಲಾಗುವುದು. ಅಲ್ಪಸಂಖ್ಯಾತರ ಅಭ್ಯರ್ಥಿಗಳ ಪೋಷಕರ ವಾರ್ಷಿಕ ಗರಿಷ್ಠ ವರಮಾನ ರೂ.6.00 ಲಕ್ಷಕ್ಕೆ ಮೀರಿರಬಾರದು. ವಿದ್ಯಾರ್ಥಿಗಳನ್ನು ಅರ್ಹತಾ ಪರೀಕ್ಷೆ/ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡತಕ್ಕದ್ದು.

    ಹೆಚ್ಚಿನ ಮಾಹಿತಿಗಾಗಿ ಇಲಾಖಾ ಸಹಾಯವಾಣಿಗೆ ಸಂಖ್ಯೆ:8277799990 ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಡಿ.5 ರಂದು ಮಾವು ಬೆಳೆಗಾರರಿಗೆ ವಿಚಾರ ಸಂಕಿರಣ

     

    ಮಾವು ಬೆಳೆಯಲ್ಲಿ ಹೂವು ಬಿಡುವ ಮತ್ತು ಕಾಯಿ ಕಚ್ಚುವ ಹಂಗಾಮಿನಲ್ಲಿ ಬೆಳೆಗಾರರು ಕೈಗೊಳ್ಳಬೇಕಾಗಿರುವ ಸಸ್ಯ ಸಂರಕ್ಷಣಾ ಮತ್ತು ಪೂರಕ ಕ್ರಮಗಳ ಬಗ್ಗೆ ರೈತರಿಗೆ, ಮಾವು ಬೆಳೆಗಾರರಿಗೆ ಡಿಸೆಂಬರ್ 05 ರಂದು ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ತೋಟಗಾರಿಕೆ ಇಲಾಖೆ ವತಿಯಿಂದ ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಿದ್ದು ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಬೆಂಡಿಗಾನಹಳ್ಳಿ ಗ್ರಾಮದ ಮಾವು ಬೆಳೆಗಾರರಾದ ಅಶ್ವಥ್ ನಾರಾಯಣಗೌಡ ರವರ ತೋಟ ಈ ಸ್ಥಳದಲ್ಲಿ ಡಿಸೆಂಬರ್ 05 ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಿಗದಿಪಡಿಸಲಾಗಿದೆ.

    ವಿಷಯ ತಜ್ಞರಾದ ನಿವೃತ್ತ ಅಪರ ನಿರ್ದೇಶಕರು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ. ಹಿತ್ತಲಮನಿ ರವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮಾವು ಬೆಳೆಗೆ ಸಂಬಂಧಿಸಿದಂತೆ ಹಲವು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಮಾವು ಬೆಳೆಗಾರರು, ರೈತರು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ಇಲಾಖೆಯ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನದ ಮಹತ್ವ, ಲಕ್ಷಣಗಳು ಮತ್ತು ಮೂಲಭೂತ ಹಕ್ಕುಗಳು ವಿಷಯಕ್ಕೆ ಸಂಬಂಧಿಸಿದಂತೆ ಡಿ. 06 ರಂದು ಪ್ರಬಂಧ ಸ್ಪರ್ಧೆ

    ದೊಡ್ಡಬಳ್ಳಾಪುರ : ಭಾರತ ಸಂವಿಧಾನ ಸಮರ್ಪಣಾ ದಿನ ಮತ್ತು ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನದ ಮಹತ್ವ, ಲಕ್ಷಣಗಳು ಮತ್ತು ಮೂಲಭೂತ ಹಕ್ಕುಗಳು ಎಂಬ ವಿಷಯಾಧಾರಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯು ಡಿಸೆಂಬರ್ 06 2025 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ದೊಡ್ಡಬಳ್ಳಾಪುರ ನಗರದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ತೂಬಗೆರೆ ಷರೀಫ್ ತಿಳಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಪ್ರತಿ ಪದವಿ ಪೂರ್ವ ಕಾಲೇಜಿನಿಂದ ಇಬ್ಬರು(2) ವಿಧ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದ್ದು, ಈ ಕುರಿತಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದು ಅನುಮತಿ ಪಡೆಯಲಾಗಿದೆ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ವಿವರಗಳನ್ನು ಸ್ಪರ್ಧೆಯ ದಿನ (ಡಿ.6) ಒಂದು ಗಂಟೆ ಮುಂಚಿತವಾಗಿ ತಮ್ಮ ಕಾಲೇಜಿನ ಮುಖ್ಯಸ್ಥರು/ಪ್ರಾಂಶುಪಾಲರಿಂದ ದೃಢೀಕರಣ ಪತ್ರದೊಂದಿಗೆ ಕಾಲೇಜು ನೀಡಿರುವ ಗುರುತಿನ ಚೀಟಿಯೊಂದಿಗೆ ಪ್ರಬಂಧ ಸ್ಪರ್ಧೆ ನಡೆಯುವ ಸ್ಥಳಕ್ಕೆ ಆಗಮಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಆಯೋಜಕ ರಾಜು ಸಣ್ಣಕ್ಕಿ ತಿಳಿಸಿದ್ದಾರೆ

    ಸ್ಪರ್ಧೆಯಲ್ಲಿ ವಿಜೇತರಾದವರಿಗೆ :-

    ಪ್ರಥಮ ಬಹುಮಾನವಾಗಿ
    ರೂ 5000 ಸಾವಿರ ,ದ್ವಿತೀಯ ಬಹುಮಾನ – ರೂ. 3000 ಸಾವಿರ ,ತೃತೀಯ ರೂ. 2000 ಸಾವಿರ ಹಾಗೂ ಐದು ಸಮಾಧಾನಕರ ತಲಾ 1000 ರೂಗಳಬಹುಮಾನಗಳೊಂದಿಗೆ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ವಿಜೇತರಿಗೆ ದಿನಾಂಕ 10/12/2025 ರ ಬುಧವಾರ ಬೆಳಿಗ್ಗೆ 11 ಗಂಟೆಗೆ ದೊಡ್ಡಬಳ್ಳಾಪುರ ನಗರದಲ್ಲಿರುವ ಕನ್ನಡ ಜಾಗೃತ ಭವನದಲ್ಲಿ ನಡೆಯಲಿರುವ ಸಂವಿಧಾನ ಸಮರ್ಪಣಾ ದಿನ ಹಾಗೂ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಬಹುಮಾನವನ್ನು ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ .

    ನಿಬಂಧನೆಗಳೇನು …???

    1. ಕಾಲೇಜು ಮುಖ್ಯಸ್ಥರ/ಪ್ರಾಂಶುಪಾಲರ ದೃಢೀಕರಣ ಪತ್ರ ಹಾಗೂ ವಿಧ್ಯಾರ್ಥಿಗಳ ಗುರುತಿನ ಚೀಟಿ ಕಡ್ಡಾಯವಾಗಿ ತರತಕ್ಕದ್ದು.

    2. ಪ್ರಬಂಧವು 10 ಪುಟಗಳು ಮೀರದಂತಿರಬೇಕು.

    3. ಪರೀಕ್ಷಾ ಕೊಠಡಿಯೊಳಗೆ 15 ನಿಮಿಷ ಮುಂಚಿತವಾಗಿ ಹಾಜರಿರತಕ್ಕದ್ದು.

    4. ಪರೀಕ್ಷಾ ಕೊಠಡಿಯೊಳಗೆ ಪೇಪರ್ ಮತ್ತು ಪೆನ್ನು ತರುವಂತಿಲ್ಲ.

    5. ನಿಮ್ಮ ಬ್ಯಾಗು, ಲಗೇಜು, ಹಾಗೂ ಮೊಬೈಲ್ ಕೊಠಡಿಯೊಳಗೆ ತರುವಂತಿಲ್ಲ.

    6. ಪ್ರಬಂಧ ಸ್ಪರ್ಧೆಯ ಸಮಯದ ಮಧ್ಯೆ ಯಾರೂ ಎದ್ದು ಹೋಗುವಂತಿಲ್ಲ.

    7. ಭಾಗವಹಿಸುವ ವಿಧ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಹೋಗತಕ್ಕದ್ದು.

    ಪ್ರಬಂಧ ಸ್ಪರ್ಧೆ ಮುಗಿದ ನಂತರ ವಿದ್ಯಾರ್ಥಿಗಳಿಗೆ ಲಘು ಉಪಹಾರದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದ್ದಾರೆ.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :ತೂಬಗೆರೆಷರೀಫ್ 9343717770 ,ರಾಜುಸಣ್ಣಕ್ಕಿ 9986573503

  • ಭೂಗಳ್ಳರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಅಗ್ರಹ : ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಹೋರಾಟಗಾರರು 

    ವಿಜಯ ಮಿತ್ರ ದೊಡ್ಡಬಳ್ಳಾಪುರ :ಹೊಸ ತಂತ್ರಜ್ಞಾನಗಳ ಪ್ರಯೋಜನವನ್ನು ಬಳಸಿಕೊಂಡು ನಕಲಿ ದಾಖಲೆಗಳನ್ನು ಕಂಡುಹಿಡಿದು, ಸರ್ಕಾರಿ ಸ್ವತ್ತಿನ ನಕಲು ದಾಖಲೆಗಳನ್ನು ಸೃಷ್ಟಿಸಿ, ಖಾತೆಯನ್ನು ಮಾಡಿಸಿಕೊಂಡು, ಸರ್ಕಾರಿ ಜಾಗವನ್ನು ಕಬಳಿಸಿಕೊಳ್ಳಲು. ಹುನ್ನಾರ ರಚಿಸುವ ಭೂಗಳ್ಳರ ವಿರುದ್ಧ, ನಕಲು ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿರುವ ಎಲ್ಲಾ ಸರ್ಕಾರಿ ಅಧಿಕಾರಿಗಳ ವಿರುದ್ಧ ಹಾಗೂ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಲು ವಿಫಲರಾಗಿ ಖಾತೆಯನ್ನು ಮೊದಲಿಗೆ ಭೂಗಳ್ಳರ ಪರವಾಗಿ ಮಾಡಿಕೊಡಲು ಆದೇಶಿಸಿದ, ಹಾಗೂ ಖಾತೆ ಮಾಡಿಕೊಟ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ ಎಸ್ ಚಂದ್ರಶೇಖರ್ ಅಗ್ರಹಿಸಿದ್ದಾರೆ.

     

    ತಾಲ್ಲೂಕಿನ ಅರೆಹಳ್ಳಿಗುಡ್ಡದಹಳ್ಳಿ ಗ್ರಾಮದ ಸರ್ವೇ ನಂಬರ್ 57ರಲ್ಲಿ 10-25 ಎ/ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಸದರಿ ಜಾಗಕ್ಕೆ ಸಂಬಂಧಿಸಿದ 6-00 ಎ/ಗುಂಟೆ ಜಮೀನನ್ನು, ಭೂಗಳ್ಳರು ಕಬಳಿಸುವ ಸಲುವಾಗಿ, ಅಧಿಕಾರಿಗಳ ಸಹಾಯದಿಂದ ಮ್ಯುಟೇಷನ್ ಪತ್ರದಲ್ಲಿ ಇಲ್ಲದ ಪುಟಗಳನ್ನು ಸೇರಿಸಿ, ನಕಲು ಸಹಿಯನ್ನು ಹಾಕುವುದರ ಮೂಲಕ ದಾಖಲೆಯನ್ನು ತಿರುಚಿ ನಕಲಿ ದಾಖಲೆಯನ್ನು ಸೃಷ್ಟಿಸಿರುತ್ತಾರೆ. ದಾಖಲೆಗಳನ್ನು ತಿರುಚಿ ನಕಲಿ ದಾಖಲೆಗಳನ್ನು ಆಧಾರವನ್ನಾಗಿಸಿಕೊಂಡು ಭೂಗಳ್ಳರು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸದರಿ ಜಾಗಕ್ಕೆ ಖಾತೆ ಮಾಡಿಕೊಡಬೇಕೆಂದು ದಾವೆಯನ್ನು ಹೂಡಿರುತ್ತಾರೆ. ಉಪವಿಭಾಗಾಧಿಕಾರಿಗಳು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಅರ್ಜಿದಾರರಾದ ಭೂಗಳ್ಳರ ಪರವಾಗಿ ಖಾತೆ ಮಾಡಿಕೊಡಲು ಆದೇಶಿಸಿದ್ದು ತದನಂತರ ಸದರಿ ಆದೇಶದ ಮೇರೆಗೆ ತಹಶೀಲ್ದಾರ್ ರವರು ಸಹ ಮೂಲ ದಾಖಲೆಗಳನ್ನು ಪರಿಶೀಲಿಸದೆ ಖಾತೆಯನ್ನು ಮಾಡಿಕೊಟ್ಟಿರುತ್ತಾರೆ. ಇತ್ತೀಚಿನ ಬೆಳವಣಿಗೆಗಳ ನಂತರ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಆದೇಶವನ್ನು ರದ್ದುಗೊಳಿಸಿ, ತಹಶೀಲ್ದಾರ್ ರವರು ಮಾಡಿರುವ ಖಾತೆಯನ್ನು ವಜಾಗೊಳಿಸಿ, ಸದರಿ ಜಮೀನನ್ನು ಸರ್ಕಾರ ಗೋಮಾಳವೆಂದು ನಮೂದು ಮಾಡಬೇಕೆಂದು ಆದೇಶಿಸಿರುತ್ತಾರೆ. ಜಿಲ್ಲಾಧಿಕಾರಿಗಳ ಆದೇಶದ ನಂತರ ಭೂಗಳ್ಳರ ಖಾತೆಯನ್ನು ವಜಾ ಮಾಡಿ, ಸರ್ಕಾರಿ ಗೋಮಾಳ ಎಂದು ನಮೂದು ಮಾಡಿರುವುದು ಸ್ವಾಗತರ್ಹ ವಿಷಯವಾಗಿದೆ.

     

     

    ಆದ್ದರಿಂದ, ಹೊಸ ತಂತ್ರಜ್ಞಾನಗಳ ಪ್ರಯೋಜನವನ್ನು ಬಳಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಾಗ ಕಬಳಿಸಿದ ವ್ಯಕ್ತಿಗಳ ಹಾಗೂ ಖಾತೆ ಮಾಡಿಕೊಟ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಸ್ಕ್ಯಾನಿಂಗ್ ಕೇಂದ್ರ ಹಾಗೂ ರೆಕಾರ್ಡ್ ರೂಮ್ ಗಳಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಬೇಕು.ಈ ಕೂಡಲೇ ಪೊಲೀಸ್ ಇಲಾಖೆಗೆ ದೂರನ್ನು ನೀಡಿ ಈ ಪ್ರಕರಣಕ್ಕೆ ಸಂಬಂಧಿಸಿದ ರೆಜಿಸ್ಟರ್ಸ್, ಕಡತಗಳನ್ನು ಸೀಜ್ ಮಾಡಿಸಬೇಕು ಹಾಗೂಈಗಾಗಲೇ ಸ್ಕ್ಯಾನ್ ಮಾಡಿರುವ ದಾಖಲೆಗಳನ್ನು ನಕಲಿ ದಾಖಲೆ ಎಂದು ಗುರುತು ಮಾಡಿ ಸಾರ್ವಜನಿಕರಿಗೆ ವಿತರಿಸದಂತೆ ತಡೆಹಿಡಿಯಬೇಕು ಎಂದು ನಮ್ಮ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡುತ್ತದೆ ಎಂದು ತಿಳಿಸಿದರು.

     

    ಈ ವೇಳೆ ಸಂಸ್ಥಾಪಕ ಅಧ್ಯಕ್ಷ ಬಿಎಸ್ ಚಂದ್ರಶೇಖರ್. ರಾಜ್ಯಪ್ರದಾನ ಕಾರ್ಯದರ್ಶಿ ಆರ್ ರಮೇಶ್. ರಾಜ್ಯ ಮುಖಂಡ ಪಿ ವಾಸು. ಜಿಲ್ಲಾ ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ. ತಾಲೂಕು ಅಧ್ಯಕ್ಷ ವಿನಯ ಆರಾಧ್ಯ. ತಾಲೂಕು ಕಾರ್ಯದರ್ಶಿ ಪ್ರದೀಪ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

     

  • ಹನುಮತ್ವ್ರತದ ಪ್ರಯುಕ್ತ ದಿನ್ನೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಾಥೋತ್ಸವ

    ದೊಡ್ಡಬಳ್ಳಾಪುರ  : ತಾಲೂಕಿನ ಪೆರುಮಗೊಂಡನಹಳ್ಳಿ ಗ್ರಾಮದ ಶ್ರೀ ದಿನ್ನೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ರಾಥೋತ್ಸವ ಕಾರ್ಯಕ್ರಮ ನಡೆಯಿತು.

    ಹನುಮತ್ವ್ರತದ ಪ್ರಯುಕ್ತ ಇಂದು ದೇವಾಲಯದಲ್ಲಿ ವಿಶೇಷ ಫಲ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಅಲಂಕಾರ ಹಾಗೂ ಗ್ರಾಮಸ್ಥರಿಂದ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.

     

    ಈ ಕುರಿತು ದೇವಾಲಯದ ಪ್ರಧಾನ ಅರ್ಚಕರಾದ ವಾಸುದೇವಾಚಾರ್ ಮಾತನಾಡಿ ಹನುಮತ್ವ್ರತದ ಸುಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಭಕ್ತಾಧಿಗಳ ಸಂಕಷ್ಟ ಪರಿಹಾರಕ್ಕಾಗಿ ಪ್ರತ್ಯಂಗಿರ ಮಹಾಕಾಳಿ ಯಾಗ ಸೇರಿದಂತೆ ಹನುಮ ದೇವರಿಗೆ ವಿಶೇಷ ಪೂಜೆ, ಹೋಮ ಹವನ ನೆರವೇರಿಸಿದ್ದೇವೆ. ಉದ್ಭವ ದಿನ್ನೆ ಆಂಜನೇಯ ಸ್ವಾಮಿಗೆ ಸುಮಾರು 800 ವರ್ಷಗಳ ಇತಿಹಾಸವಿದ್ದು. ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಇಂದಿನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಹನುಮತ್ವ್ರತದ ದಿವಸ ಕೈಗೊಳ್ಳುವ ಯಾವುದೇ ಸಂಕಲ್ಪ ನಿಸ್ಸಂದೇಹವಾಗಿ ನೆರವೇರುತ್ತದೆ ಎಂಬುದು ನಂಬಿಕೆ. ಹನುಮ ದೇವರು ರಾಮ ದೇವರನ್ನು ಭೇಟಿ ಮಾಡಿದ ದಿನವನ್ನು ಹನುಮತ್ವ್ರತ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

    ದೇವಾಲಯಕ್ಕೆ ಬಂದ ಭಕ್ತಾದಿಗಳು ಮಾತನಾಡಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಸರಿಹೊಂದುವಂತೆ ಕಾಡಿನ ಭಾಗದಲ್ಲಿ ಇರುವ ದಿನ್ನೆ ಆಂಜನೇಯ ಸ್ವಾಮಿಯು ಭಕ್ತರ ಸಕಲ ಇಷ್ಟಾರ್ಥಗಳು ಈಡೇರಿಸುವ ಮೂಲಕ ಬಹಳ ಪ್ರಸಿದ್ಧಿ ಪಡೆದಿದೆ. ಕೇವಲ ನಮ್ಮ ಜಿಲ್ಲೆ, ರಾಜ್ಯ ವಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಕೂಡ ಭಕ್ತಾದಿಗಳು ಇಲ್ಲಿಗೆ ಬಂದು ದೇವರಿಗೆ ಹರಕೆ ತೀರಿಸಿ ಹೋಗುವುದು ವಿಶೇಷ ಇಂದಿನ ಕಾರ್ಯಕ್ರಮ ವಿಶೇಷವಾಗಿದ್ದು ಸುಮಾರು 20ರಿಂದ 30 ದೇವರುಗಳ ವಿಗ್ರಹಗಳನ್ನು ಮೆರವಣಿಗೆ ಮಾಡಲಾಗಿದೆ ಜೊತೆಗೆ ಹನುಮ ದೇವರ ರಥೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ ಎಂದರು.

     

     

  • 15ದಿನಗಳ ಯೋಗಾಭ್ಯಾಸ ತರಬೇತಿ ಶಿಬಿರ ಸಮಾರೋಪ ಸಮಾರಂಭ : ಮಕ್ಕಳಿಗೆ ಯೋಗ ಪ್ರಮಾಣಪತ್ರ ವಿತರಣೆ 

    ವಿಜಯಮಿತ್ರ ದೊಡ್ಡಬಳ್ಳಾಪುರ : 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ಹಾಗೂ ಶ್ರೀ ಕೃಷ್ಣ ಹಿರಿಯ ಮತ್ತು ಕಿರಿಯರ ಯೋಗ ಕೇಂದ್ರದ ವತಿಯಿಂದ ಕಳೆದ 15ದಿನಗಳಿಂದ ನಿರಂತರ ಯೋಗಾಭ್ಯಾಸ ಮತ್ತು ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇಂದು (ನ. 30) ನಡೆಯಿತು.

    ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ವಹಿಸಿ  ಯೋಗ ಗುರೂಜೀ ಕೃಷ್ಣ ಸ್ವಾಮಿ , ಅನ್ನದಾಸೋಹಿ ಮಲ್ಲೇಶ್ ಜೊತೆಗೂಡಿ ಶಿಬಿರದಲ್ಲಿ ಯೋಗ ತರಬೇತಿ ಪಡೆದ ಮಕ್ಕಳಿಗೆ  ಪ್ರಮಾಣಪತ್ರ ವಿತರಣೆ ಮಾಡಿದರು.

     

    ನಂತರ ಮಾತನಾಡಿದ ಅವರು ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂತಹ ಆರೋಗ್ಯಕರ ಶಿಬಿರದ ಆಯೋಜನೆ ಮಾಡಿರುವ ಶ್ರೀ ಕೃಷ್ಣ ಹಿರಿಯ ಮತ್ತು ಕಿರಿಯ ಯೋಗ ಕೇಂದ್ರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಯೋಗಾಭ್ಯಾಸದಿಂದ ಕೇವಲ ದೈಹಿಕ ಆರೋಗ್ಯ  ಅಷ್ಟೇ ಅಲ್ಲದೇ ಮಾನಸಿಕ ಆರೋಗ್ಯ ಲಭಿಸುತ್ತದೆ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಯೋಗಾಭ್ಯಾಸಕ್ಕೆ ಮುಂದಾಗಿ ಇಂತಹ ಶಿಬಿರಗಳಲ್ಲಿ ಭಾಗವಹಿಸುವುದು ಉತ್ತಮ ಸಂಗತಿಯಾಗಿದೆ. ಸಮಾಜಮುಖಿ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.

    ಯೋಗ ಗುರೂಜೀ ಕೃಷ್ಣ ಸ್ವಾಮಿ ಮಾತನಾಡಿ ಹಲವಾರು ವರ್ಷಗಳಿಂದ ನಾನು ಯೋಗಾಭ್ಯಾಸ ಮಾಡುವುದಷ್ಟೇ ಅಲ್ಲದೇ ಹಿರಿಯರಿಗೆ ಕಿರಿಯರಿಗೆ ಯೋಗ ತರಬೇತಿ ಶಿಬಿರಗಳನ್ನು ನಿರಂತರವಾಗಿ ಆಯೋಜನೆ ಮಾಡುತ್ತಿದ್ದು. ಯೋಗಾಸನಕ್ಕೆ ನನ್ನ ಸೇವೆ ಎಂದು ನಿಂತಿಲ್ಲ ಅಂತೆಯೇ ಈ ಬಾರಿ ದರ್ಗಾಜೋಗಿಹಳ್ಳಿಯ ಸುಮಾರು 30ಕ್ಕೂ ಅಧಿಕ ಪುಟಾಣಿ ಮಕ್ಕಳಿಗೆ ಯೋಗ ತರಬೇತಿ ಶಿಬಿರ ಆಯೋಜನೆ ಮಾಡಿದ್ದು ಶಿಬಿರ ಅತ್ಯುತ್ತಮವಾಗಿ ಮೂಡಿ ಬಂದಿದೆ ಶಿಬಿರ ಆಯೋಜನೆ ಮಾಡಲು ನಮ್ಮಗೆ ಸಹಕಾರ ನೀಡಿದ ಶಶಿಕಲಾ ನಾಗರಾಜ್ ರವರಿಗೆ ಅಭಾರಿಯಾಗಿದ್ದೇವೆ ಎಂದರು.

    ಸ್ಥಳೀಯ ಮುಖಂಡ ಹಾಗೂ ನಿರಂತರ ಅನ್ನದಾಸೋಹ ಕಾರ್ಯಕ್ರಮದ ಮುಖ್ಯಸ್ಥರಾದ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ಇದೊಂದು ಉತ್ತಮ ಬೆಳವಣಿಗೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಯೋಗಸನಾ ಹಾಗೂ ನಿರಂತರ ಯೋಗಾಭ್ಯಾಸದ ಬಗ್ಗೆ ಅರಿವು ಮೂಡಿಸಿದರೆ ಮುಂದೆ ಮಕ್ಕಳು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಕಳೆದ 15 ದಿನಗಳಿಂದ ಪ್ರಾಣಾಯಾಮ, ಸೂರ್ಯನಮಸ್ಕಾರ, ಕುಳಿತು ಸರಳವಾಗಿ ಮಾಡುವ ಹಲವು ಆಸನಗಳು ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಧ್ಯಾನಭ್ಯಾಸ ಮಾಡಿಸುವ ಮೂಲಕ ಶಿಬಿರ ಯಶಸ್ವೀಯಾಗಿದೆ ಎಂದರು.

     

     

     

     

  • ಶಾಸಕ ಧೀರಜ್ ಮುನಿರಾಜು ಕಾರ್ಯ ವೈಖರಿ ಮೆಚ್ಚಿ ಟಿ.ಹನುಮಂತಯ್ಯ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡ ಹಳೆಕೋಟೆ ಗ್ರಾಮಸ್ಥರು

     

    ವಿಜಯ ಮಿತ್ರ ದೊಡ್ಡಬಳ್ಳಾಪುರ : ಶಾಸಕ ಧೀರಜ್ ಮುನಿರಾಜುರವರ ಕಾರ್ಯ ವೈಖರಿ ಹಾಗೂ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಳೆಕೋಟೆ ಗ್ರಾಮದ ಮುಖಂಡರು ಮತ್ತು ಕಾರ್ಯಕರ್ತರು ಹನುಮಂತಯ್ಯ.ಟಿ ನೇತೃತ್ವದಲ್ಲಿ ಇಂದು ಬಿಜೆಪಿ ಸೇರ್ಪಡೆಗೊಂಡರು.

    ದೊಡ್ಡಬಳ್ಳಾಪುರ ನಗರದ ಶಾಸಕ ನಿವಾಸದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಹಳೆಕೋಟೆ ಗ್ರಾಮದ ಮುಖಂಡರು ಮತ್ತು ಕಾರ್ಯಕರ್ತರು ಶಾಸಕರಿಗೆ ಹೂಮಾಲೆ ನೀಡಿ ಅಭಿನಂದಿಸಿದರು. ನಂತರ ಶಾಸಕ ಧೀರಜ್ ಮುನಿರಾಜು ಪಕ್ಷದ ಶಾಲು ಹಾಕುವ ಮೂಲಕ ಹಳೇಕೋಟೆ ಪ್ರಮುಖರನ್ನು ಪಕ್ಷಕ್ಕೆ ಸ್ವಾಗತಿಸಿದರು.

     

    ನೂತನವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡವರು

     

    ರಾಜಣ್ಣ ಸಮಾಜ ಸೇವಕರು, ರಾಮಚಂದ್ರಯ್ಯ (ಚಂದ್ರು) ಸಮಾಜ ಸೇವಕರು, ಮುನಿಶಾಮಯ್ಯ ಮಡಿವಾಳ ಸಂಘದ ಅಧ್ಯಕ್ಷರು, ನರಸಿಂಹಯ್ಯ ಗ್ರಾಮದ ಹಿರಿಯರು, ಕೆಂಪಯ್ಯ.ಕೆ ಸಾಮಾಜಿಕ ಕಾರ್ಯಕರ್ತ, ಅಂಜನಮೂರ್ತಿ, ಮುನಿರಾಜು ಯುವ ಮುಖಂಡರು, ರಾಮಮೂರ್ತಿ, ಕದರಪ್ಪ, ಲಕ್ಷ್ಮೀಪತಿ, ಶ್ರೀನಿವಾಸ್, ಸಿ.ನರಸಿಂಹಮೂರ್ತಿ ಮುನಿರಾಜು. ಎನ್ ಸಮುದಾಯ ಮುಖಂಡರು, ಚನ್ನಪ್ಪ, ಸಿ.ನರಸಿಂಹಮೂರ್ತಿ , ಅಂಜನಮೂರ್ತಿ.ಕೆ, ಮುನಿರಾಜು.ಆರ್, ಹರೀಶ್, ಶ್ರೀನಿವಾಸ, ರಮೇಶ್, ರಾಯನಾಳ್ಳಪ್ಪ ಬಿಜೆಪಿ ಸೇರ್ಪಡೆಗೊಂಡವರು.

     

    ಇದೇ ವೇಳೆ ಶಾಸಕ ಧೀರಜ್ ಮುನಿರಾಜು ಮಾತನಾಡಿ ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟು ಗ್ರಾಮದ ಒಳತಿಗಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ, ಅವರಿಗೆ ಪಕ್ಷದ ಪರವಾಗಿ ಸ್ವಾಗತ ಕೋರುವೆ. ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆ ಆದರ್ಶ ಗ್ರಾಮ ಯೋಜನೆಗೆ ಹಳೇಕೋಟೆ ಗ್ರಾಮ ಆಯ್ಕೆಯಾಗಿದೆ, ಇದರಿಂದ ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಅವರ ಸಹಕಾರ ನಮ್ಮ ಪಕ್ಷಕ್ಕೆ ಇರುವುದು ಎಂದು ಹೇಳಿದರು.

    ನಂತರ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಯ್ಯ.ಟಿ ಮಾತನಾಡಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಮ್ಮ ಹಳೇಕೋಟೆ ಗ್ರಾಮಸ್ಥರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ, ಇದೇ ವೇಳೆ ನಮ್ಮ ಗ್ರಾಮದಲ್ಲಿ 70ಕ್ಕೂ ಹೆಚ್ಚು ದಲಿತರ ಕುಟುಂಬಗಳಿದ್ದು , ಪ್ರತಿ ಮನೆಯಲ್ಲೂ 2 ರಿಂದ 3 ಕುಟುಂಬಗಳು ವಾಸವಾಗಿವೆ, ನಿವೇಶನಗಳ ಕೊರತೆಯಿಂದಾಗಿ ಊರಿನ ಜನರು ನಗರಗಳಿಗೆ ಗುಳೆ ಹೋಗುತ್ತಿದ್ದಾರೆ, ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ಹಂಚಿಕೆಗಾಗಿ ಶಾಸಕರನ್ನು ಮನವಿ ಮಾಡಲಾಗಿದೆ, ಈ ಯೋಜನೆಗಾಗಿ ನಮ್ಮ ಗ್ರಾಮದ 2.36 ಗುಂಟೆ ಜಾಗವನ್ನು ಗುರುತಿಸಿದ್ದು, ಅಶ್ರಯ ಯೋಜನೆಗೆ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ. ಸ್ಮಶಾನಕ್ಕೆ 2 ಎಕರೆ ಜಾಗ ಮಂಜೂರು ಆಗಿದ್ದು, ಸ್ಮಶಾನದಲ್ಲಿ ಮೂಲಭೂತ ಸೌಕರ್ಯಗಳನ್ನ ಕಲ್ಪಿಸ ಬೇಕು ಎಂದು ಮನವಿ ಮಾಡಿದ್ದೇವೆ ಹಾಗೂ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಕನಿಷ್ಠ 1 ಸಾವಿರ ಮೀಟರ್ ಚರಂಡಿ , ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಂಬ್ಯೂಲೆನ್ಸ್ ನೀಡುವಂತೆ ಗ್ರಾಮದ ಅಭಿವೃದ್ಧಿಗಾಗಿ ಕೆಲವು ಬೇಡಿಕೆಗಳನ್ನು ಶಾಸಕರ ಮುಂದಿಡಲಾಗಿದೆ, ಅವುಗಳನ್ನ ಕಾರ್ಯಗತಗೊಳಿಸಲು ಶಾಸಕರು ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು..

     

    ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷರಾದ ನಾಗೇಶ್, ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಯ್ಯ.ಟಿ, ಬಿಜೆಪಿ ಮುಖಂಡರಾದ ತಿಮ್ಮೆಗೌಡ, ಗಂಗಾಧರ್, ಸಂಕರಸನಹಳ್ಳಿ ಕೆಂಪರಾಜು ಎಸ್ ಎಲ್ ಆರ್ ಕಿಂಗ್ಸ್ ಮಾಲೀಕರು, ಮುಖಂಡರಾದ ರಂಗನಾಥ್, ಹಳೆಕೋಟೆ ಎಂ ಪಿ ಸಿ ಎಸ್ ಅಧ್ಯಕ್ಷ ಸತೀಶ್ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.

     

     

     

  • ಹನುಮ ಜಯಂತಿ ಪ್ರಯುಕ್ತ ದಿನ್ನೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವ

    ದೊಡ್ಡಬಳ್ಳಾಪುರ: ಹನುಮ ಜಯಂತಿ ಅಂಗವಾಗಿ ಸೋಮವಾರ (ಡಿ.1) ಹಾಗೂ ಮಂಗಳವಾರ (ಡಿ.2)ಹನುಮ ಜಯಂತಿ ಹಾಗೂ ಮಹಾಕಾಳಿ ಪ್ರತ್ಯಂಗಿರ ಅಮ್ಮನವರ ಜಾತ್ರಮಹೋತ್ಸವ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರ ಮಹೋತ್ಸವ ಹಾಗೂ ಹನುಮ ಜಯಂತಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಬೇಕೆಂದು ದೇವಾಲಯದ ಪ್ರಧಾನ ಅರ್ಚಕರಾದ ವಾಸುದೇವಾಚಾರ್ ಬಡಬಾನನ ತಿಳಿಸಿದ್ದಾರೆ.


    ತಾಲ್ಲೂಕಿನ ಎಸ್.ಎಸ್. ಘಾಟಿ ರಸ್ತೆಯ ಪೆರಮಗೊಂಡನಹಳ್ಳಿ ಗ್ರಾಮದ ಶ್ರೀ ಉದ್ಭವ ದಿನ್ನೆ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಶ್ರೀ ಪ್ರತ್ಯಂಗಿರ ಮಹಾಕಾಳಿ ಬಸವ ಸಂಗಮ ಕ್ಷೇತ್ರದಲ್ಲಿ
    ಹನುಮ ಜಯಂತಿ ಹಾಗೂ ಮಹಾಕಾಳಿ ಪ್ರತ್ಯಂಗಿರ ಅಮ್ಮನವರ ಜಾತ್ರ ಮಹೋತ್ಸವ ನೆಡೆಯಲಿದ್ದು.ಸೋಮವಾರ ಮತ್ತು ಮಂಗಳವಾರ ಹನುಮ ಜಯಂತಿ ಮತ್ತು ಮಹಾಕಾಳಿ ಪ್ರತ್ಯಂಗಿರ ಅಮ್ಮನವರ ಜಾತ್ರಾ ಮಹೋತ್ಸವವನ್ನು ನೆರವೇರಿಸಲು ಭಗವಂತನ ಪ್ರೇರಣೆಯಾಗಿರುತ್ತದೆ. ಆದ್ದರಿಂದ ಭಕ್ತರು ತನು, ಮನ, ದನ,ದಾನ್ಯಾಧಿಗಳನ್ನು ಅರ್ಪಿಸಿ, ಸಕಾಲಕ್ಕೆ ಆಗಮಿಸಿ ಪೂಜಾ ಕಾರ್ಯದಲ್ಲಿ ಭಾಗವಹಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ಕೋರುತೇನೆ ಎಂದು ತಿಳಿಸಿದರು

    ವಿಶೇಷ ಕಾರ್ಯಕ್ರಮಗಳ ವಿವರ

    01-12-2025 ಸೋಮವಾರ:-ಏಕಾದಶಿ ಸಂಜೆ ಗೋದುಳಿ ಲಗ್ನದಲ್ಲಿ ಸ್ವಸ್ತಿವಾಚನ, ಸಭಾನುಜ್ಞೆ, ವಿಶ್ವಕ್ಕೇನ ಪೂಜೆ, ವಾಸುದೇವ ಪುಣ್ಯವಾಚನ, ರಕ್ಷ ಬಂಧನ, ಮಂಗಳಾರತಿ ಮತ್ತು ತೀರ್ಥ ಪ್ರಸಾದ

    02-12-2025 ಮಂಗಳವಾರ :- ಬೆಳಿಗ್ಗೆ ಸುಪ್ರಭಾತ ಸೇವೆ, ವೇದಪಾರಾಯಣ, ಸ್ವಾಮಿಯ ಮೂಲ ವಿಗ್ರಹಕ್ಕೆ ಫಲಪಂಚಾಮೃತ ಅಭಿಷೇಕ ಮತ್ತು ಅಲಂಕಾರ, ಶ್ರೀ ರಾಮ ತಾರಕ ಹೋಮ, ಪವಮಾನ ಹೋಮ, ಲಘು ಪುರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೆಡೆಯಲಿದೆ.

    ಮಧ್ಯಾಹ್ನ 12-00 ಗಂಟೆಗೆ ಅನ್ನಸಂತರ್ಪಣೆ

    ಮಧ್ಯಾಹ್ನ 1-00 ಗಂಟೆಗೆ ಶ್ರೀ ರಾಮಾಂಜನೇಯಸ್ವಾಮಿಯರ ರಥೋತ್ಸವ ತಿರುಮಗೊಂಡನಹಳ್ಳಿ ಮತ್ತು ಪೆರಮಗೊಂಡನಹಳ್ಳಿ ಪ್ರಮುಖ ರಸ್ತೆಗಳಲ್ಲಿ ನೆರವೇರಲಿದೆ.

    ದೇವಾಲಯದ ವಿಶೇಷ ಮಾಹಿತಿ

    ಸ್ವಾಮಿಯವರ ಮತ್ತು ಅಮ್ಮನವರ ಉತ್ಸವ ಮೂರ್ತಿ ಹಾಗೂ ಬಸಪ್ಪನವರನ್ನು ಎಲ್ಲಾ ಶುಭ ಕಾರ್ಯಕ್ರಮಗಳಿಗೆ ಕಳಿಸಕೊಡುವ ವ್ಯವಸ್ಥೆ ಇರುತ್ತದೆ ಹಾಗೂ ಮಠದಲ್ಲಿ ಸಹಸ್ರ ಸಾಲಿಗ್ರಾಮ ತೀರ್ಥಸ್ಥಾನ ಮತ್ತು ಬಸಪ್ಪನವರ ಅಪ್ಪಣೆ ಇರುತ್ತದೆ(ಪ್ರತಿ ಭಾನುವಾರ ಮತ್ತು ಅಮಾವಾಸ್ಯೆ, ಹುಣ್ಣಿಮೆಗೆ)

    ಹೆಚ್ಚಿನ ಮಾಹಿತಿಗೆ ಅರ್ಚಕರು : ವಾಸುದೇವಾಚಾರ್ ( 9686580143) ರವರನ್ನು ಸಂಪರ್ಕಿಸಲು ಕೋರಿದೆ.

  • ಜವಾಹರ ನವೋದಯ ವಿದ್ಯಾಲಯದಲ್ಲಿ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ ಸಮಾರೋಪ ಸಮಾರಂಭ

    ವಿಜಯ ಮಿತ್ರ ದೊಡ್ಡಬಳ್ಳಾಪುರ : ಭಾಷೆಯು ಸಾಂಸ್ಕೃತಿಕ ಪರಂಪರೆಯನ್ನು , ನಾಗರಿಕತೆಯ ಇತಿಹಾಸ, ಜ್ಞಾನ ಮತ್ತು ನಂಬಿಕೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಜಿ.ಎಸ್.ಸ್ಮಿತಾ ತಿಳಿಸಿದರು.

     

    ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ   ಜವಾಹರ ನವೋದಯ ವಿದ್ಯಾಲಯದಲ್ಲಿ  ಕನ್ನಡ ಸಪ್ತಾಹ ಸಮಾರೋಪ, ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು,   ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ  ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ 2025 ಸಮಾರೋಪ ಕಾರ್ಯಕ್ರಮದಲ್ಲಿ  ಕನ್ನಡ ಬಳಕೆ ಮತ್ತು ಬೆಳವಣಿಗೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಭವ್ಯ ಪರಂಪರೆ ಇದೆ. ಭವ್ಯ ಪರಂಪರೆಯುಳ್ಳ   ಕನ್ನಡ ಭಾಷೆಯ ಮೇಲೆ ಪ್ರತಿಯೊಬ್ಬ ಕನ್ನಡಿಗರು ಪ್ರೀತಿ ಬೆಳೆಸಿಕೊಳ್ಳಬೇಕಾಗಿರುವುದು ಅತ್ಯಗತ್ಯ. ಕನ್ನಡ ಭಾಷೆಯೂ ಕನ್ನಡಿಗರ ಸಂಸ್ಕೃತಿ ಮತ್ತು ಸ್ವಾಭಿಮಾನದ ಪ್ರತೀಕವಾಗಿದೆ ಎಂದರು.

     

    ಕನ್ನಡ ಸಪ್ತಾಹ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ದೊಡ್ಡಬಳ್ಳಾಪುರ ಜವಾಹರ ವಿದ್ಯಾಲಯ ವಿದ್ಯಾರ್ಥಿಗಳೊಂದಿಗೆ ಮಧ್ಯಪ್ರದೇಶ ಅಲೀರಾಜ್ ಜವಾಹರ ನವೋದಯದ ವಿದ್ಯಾರ್ಥಿಗಳು ನಡೆಸಿಕೊಟ್ಟ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು. ‌

    ಕನ್ನಡ ಸಾಹಿತ್ಯ, ವಿಜ್ಞಾನ ಮತ್ತು ಸಂಸ್ಕೃತಿ ಸಮಾಗಮ 2025 ಕಾರ್ಯಕ್ರಮ ಕುರಿತು ಮಾತನಾಡಿದ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ದೊಡ್ಡಬಳ್ಳಾಪುರ ವಿವಿಧ ಶಾಲಾ ಕಾಲೇಜುಗಳಲ್ಲಿ ಮೂವತ್ತು ವರ್ಷಗಳಿಂದ ಸಾಹಿತ್ಯ, ವಿಜ್ಞಾನ ಮತ್ತು ಸಂಸ್ಕೃತಿ ಸಮಾಗಮ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿದೆ. ಈ ವರ್ಷ ಕುವೆಂಪು ರಚಿಸಿರುವ ನಾಡಗೀತೆಗೆ ನೂರು ವರ್ಷ ಆಗಿರುವುದರಿಂದ ಶತಮಾನದ ಸಂಭ್ರಮವನ್ನು ದೊಡ್ಡಬಳ್ಳಾಪುರದಲ್ಲಿ ಆಚರಿಸಲಾಯಿತು. ಇದರ ಜೊತೆಗೆ ಕನ್ನಡ ಪುಸ್ತಕ ಓದಿ ಬಹುಮಾನ ಗೆಲ್ಲಿ ‌ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಹ ನಡೆಸಲಾಯಿತು. ಈ ಸ್ಪರ್ಧಾ ಪರೀಕ್ಷೆಯಲ್ಲಿ 523 ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದರು.

     

    ಜವಾಹರ ನವೋದಯ ವಿದ್ಯಾಲಯ ಪ್ರಾಂಶುಪಾಲ ಟಿ.ಪಳನಿ ವೇಲು ಮಾತನಾಡಿ, ದೊಡ್ಡಬಳ್ಳಾಪುರ ಜವಾಹರ ನವೋದಯ ವಿದ್ಯಾಲಯದಲ್ಲಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ ಸಪ್ತಾಹ ಕಾರ್ಯಕ್ರಮ ನಡೆಯುತ್ತಾ ಬರುತ್ತಿದೆ. ದೊಡ್ಡಬಳ್ಳಾಪುರ ನವೋದಯ ವಿದ್ಯಾಲಯದ‌ ಆವರಣದಲ್ಲಿ ಕನ್ನಡ ಜ್ಞಾನಪೀಠ ಪುರಸ್ಕೃತರ ಪುತ್ಥಳಿಗಳನ್ನು ಅನಾವರಣ ಮಾಡುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಪ್ರೀತಿ ಮತ್ತು ಗೌರವ ಹೊಂದಿದೆ. ‌ ಕಳೆದ ವರ್ಷ 50 ಮಂದಿ ಕನ್ನಡ ನಾಡಿನ ಸಾಧಕರ ಮಾಹಿತಿಯನ್ನು ವಿದ್ಯಾರ್ಥಿಗಳು ಸಿದ್ದಪಡಿಸಿ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆ ಪಡೆದಿದ್ದರೂ ಎಂದರು.

     

    ಸಮಾರಂಭದಲ್ಲಿ ಜವಾಹರ ನವೋದಯ ವಿದ್ಯಾಲಯ ಉಪಪ್ರಾಂಶುಪಾಲ ಜಯಕೃಷ್ಣನ್ ಮಂಗಟ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ, ಅಧ್ಯಾಪಕರುಗಳಾದ ಜೆ.ಪಿ.ಉಪಾಧ್ಯೆ, ಆರ್.ವೀರಣ್ಣಗೌಡ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಹೋಬಳಿ ಘಟಕಗಳ ಪದಾಧಿಕಾರಿಗಳಾದ ಜಿ.ಸುರೇಶ್, ಅಂಜನಮೂರ್ತಿ, ಗಿರೀಶ್ ಬರಗೂರು, ಪ್ರತಿನಿಧಿಗಳಾದ ಅಣ್ಣಯ್ಯ, ವೆಂಕಟೇಶ್, ಶಿವಪ್ರಸಾದ್, ರಂಗಸ್ವಾಮಯ್ಯ, ಸಫೀರ್, ಜವಾಹರ ನವೋದಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

     

  • ಪ್ರತಿಭಾ ಕಾರಂಜಿಯು ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆ: ಸಚಿವ ಕೆ.ಹೆಚ್ ಮುನಿಯಪ್ಪ

     

    ಮಕ್ಕಳಿಗೆ ವಿದ್ಯಾಭ್ಯಾಸ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಮಾಡುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುವ ಜೊತೆಗೆ ಮಕ್ಕಳ ಪ್ರತಿಭೆ ಗುರುತಿಸಲು ಉತ್ತಮ ಅವಕಾಶ ಸಿಕ್ಕಂತಾಗುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ  ಹೇಳಿದರು.

     

    ದೇವನಹಳ್ಳಿ ಟೌನ್ ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ/ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರವು ಶಾಲೆಗಳಲ್ಲಿ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ತಮ ಕೆಲಸ ಮಾಡುತ್ತಿದೆ. ವಿದ್ಯಾಬ್ಯಾಸ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಭಾಷಣ ಸ್ಪರ್ಧೆ, ರಸಪ್ರಶ್ನೆ, ಜಾನಪದ ಗೀತೆ, ಭಾವಗೀತೆ, ಭರತನಾಟ್ಯ, ಏಕಪಾತ್ರಾಭಿನಯ, ನಾಟಕ ಮುಂತಾದ ಕಲೆ, ಪ್ರತಿಭೆಯನ್ನು ಮಕ್ಕಳು ತೋರಿಸಲು ಉತ್ತಮ ವೇದಿಕೆಯಾಗಿದೆ ಎಂದರು.

     

    ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಆಗಬೇಕು. ಜಿಲ್ಲೆಗೆ, ರಾಜ್ಯಕ್ಕೆ ಒಳ್ಳೆಯ ಹೆಸರು ತಂದು ಕೊಡಬೇಕು. ಮಕ್ಕಳನ್ನು ಪೋಷಿಸಿ ಬೆಳೆಸುವುದರಲ್ಲಿ ಪೋಷಕರ ಪಾತ್ರ ಎಷ್ಟು ಮುಖ್ಯವೋ ಹಾಗೆಯೇ ಶಿಕ್ಷಕರ ಪಾತ್ರ ಅಷ್ಟೇ ಮುಖ್ಯ. ವಿದ್ಯಾಬ್ಯಾಸ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಉತ್ತಮ ವ್ಯಕ್ತಿತ್ವ‌ ರೂಪಿಸಿಕೊಳ್ಳುವುದು, ಭವ್ಯ ಭಾರತ ನಿರ್ಮಾಣಕ್ಕೆ ಮಕ್ಕಳನ್ನು ಬೆಳೆಸುವುದು ಪೋಷಕರ, ಶಿಕ್ಷಕರ ಮೇಲಿದೆ ಎಂದರು.

     

    *ಮಾದರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮ*

    ಈಗಿನ ಸರ್ಕಾರಿ ಪ್ರೌಢಶಾಲೆಯು ಸುಮಾರು 75 ವರ್ಷದ ಹಳೆಯ ಕಟ್ಟಡವಾಗಿದೆ. ಇನ್ಫೋಸಿಸ್ ಸಂಸ್ಥೆಯು ಸಿಎಸ್ಆರ್ ಅನುದಾನದಡಿ 25 ಕೊಠಡಿ ನಿರ್ಮಿಸಲು ಉದ್ದೇಶಿಸಿದ್ದಾರೆ. ಸರ್ಕಾರಿ ಹಾಗೂ ಸಿಎಸ್ಆರ್ ಅನುದಾನದಡಿ ಸುಸಜ್ಜಿತ ಮಾದರಿ ಸರ್ಕಾರಿ ಶಾಲೆ ನಿರ್ಮಿಸಲಾಗುವುದು. ಅಧಿಕಾರಿಗಳು ಮಾದರಿ ಕಟ್ಟಡದ ರೂಪುರೇಷೆ ಸಿದ್ದಪಡಿಸಿ ವರದಿ ನೀಡಿ ಆದಷ್ಟು ಬೇಗ ಕೆಲಸ ಶುರು ಮಾಡೋಣ ಎಂದರು.

     

    ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರಾಜಣ್ಣ, ತಾಲ್ಲೂಕು ಅಧ್ಯಕ್ಷರಾದ ಜಗನ್ನಾಥ, ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜಿನಪ್ಪ, ತಹಶೀಲ್ದಾರ್ ಅನಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.