Blog

  • ದೊಡ್ಡಬಳ್ಳಾಪುರಕ್ಕೆ ಕಸ ವಿಲೇವಾರಿ ಬೇಡ :ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವ ನಿರ್ಧಾರ ಕೈಬಿಡಿ : ನವ ಬೆಂಗಳೂರು ಹೋರಾಟ ಸಮಿತಿ

    ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಮತ್ತು ದೊಡ್ಡಬೆಳವಂಗಲ ಹೋಬಳಿಯಲ್ಲಿ ಟೆರ್ರಾಫಾರಂ ಮತ್ತು ಎಂಎಸ್‌ಜಿಪಿ ಎಂಬ ಘನತ್ಯಾಜ್ಯದ ಹೆಮ್ಮಾರಿಯನ್ನು ಟೆಕ್ನಾಲಜಿ ಹೆಸರಿನಲ್ಲಿ ಮತ್ತೆ ವಿಸ್ತರಿಸಿ ಪುನರಾರಂಭಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಇದರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ನವ ಬೆಂಗಳೂರು ಹೋರಾಟ ಸಮಿತಿಯ ಸಂಸ್ಥಾಪಕ ಅದ್ಯಕ್ಷ ಜಿ ಎನ್ ಪ್ರದೀಪ್ ಕುಮಾರ್ ಎಚ್ಚರಿಕೆ ನೀಡಿದರು.

     

    ನವ ಬೆಂಗಳೂರು ಹೋರಾಟ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಸಾಸಲು ಮತ್ತು ದೊಡ್ಡಬೆಳವಂಗಲ ಹೋಬಳಿಗಳ ಜನತೆಯ ಬದುಕಿನ ನೆಮ್ಮದಿ ಕಿತ್ತು ಹಲವು ದಶಕಗಳಿಗಾಗುವಷ್ಟು ವಿಷವನ್ನು ಪ್ರಕೃತಿಯ ಒಡಲಿಗೆ ಪ್ರಾಶನ ಮಾಡಿ ಸಹಸ್ರಾರು ಜನತೆಯ ಜೀವಗಳನ್ನು  ನರಕಕೂಪಕ್ಕೆ ತಳ್ಳಿದ ಟೆರ್ರಾಫಾರಂ ಎಂಬ ಕಸದ ಹೆಮ್ಮಾರಿಯನ್ನು ಮತ್ತೆ ನಮ್ಮ ತಾಲ್ಲೂಕಿಗೆ ಉಡುಗೊರೆಯಾಗಿ ನೀಡಲು ರಾಜ್ಯ ಸರ್ಕಾರ ಸಜ್ಜುಗೊಂಡಿದೆ. ಈ ಕುರಿತು ಎರಡು ದಿನಗಳ ಹಿಂದೆ ಸುವರ್ಣಸೌಧದ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರವೇ ಅಧಿಕೃತವಾಗಿ ಒಪ್ಪಿಕೊಂಡಿದೆ.

    ಕಳೆದ ಒಂದೂವರೆ ದಶಕದಿಂದ ನಮ್ಮ ತಾಲ್ಲೂಕಿನ ಹಲವು ಸಂಘಟನೆಗಳು ರೈತರು, ಸ್ಥಳೀಯ ಹೋಬಳಿಗಳ ಜನಪ್ರತಿನಿಧಿಗಳು, ಮಾಧ್ಯಮ ಮಿತ್ರರ ಅವಿರತ ಶ್ರಮ ಮತ್ತು ಹೋರಾಟಗಳ ಫಲವಾಗಿ ಟೆರ್ರಾಫಾರಂ ಎಂಬ ಪೆಡಂಭೂತವನ್ನು ಮುಚ್ಚುವ ನಿರ್ಧಾರವನ್ನು ಅಂದಿನ ಸರ್ಕಾರ ತೆಗೆದುಕೊಂಡಿತ್ತು. ಈಗ ಮತ್ತದೇ ಸರ್ಕಾರ ಅದೇ ಟೆರ್ರಾಫಾರಂ ಎಂಬ ಘನತ್ಯಾಜ್ಯದ ಹೆಮ್ಮಾರಿಯನ್ನು ಟೆಕ್ನಾಲಜಿ ಹೆಸರಿನಲ್ಲಿ ಮತ್ತೆ ವಿಸ್ತರಿಸಿ ಪುನರಾರಂಭಿಸಲು ಸಜ್ಜಾಗಿದೆ. ಈ ಮೂಲಕ ತಾಲ್ಲೂಕಿನ ಸಾಸಲು ಮತ್ತು ದೊಡ್ಡಬೆಳವಂಗಲ ಈ ಎರಡೂ ಹೋಬಳಿಗಳ ಜನತೆಯ ಶಾಶ್ವತ ಅವಸಾನಕ್ಕಾಗಿ ರಾಜ್ಯ ಸರ್ಕಾರ ಪಣ ತೊಟ್ಟು ನಿಂತಿದೆ ಎಂದರು.

    ತಾಲ್ಲೂಕಿನಲ್ಲಿ  ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವ ನಿರ್ಧಾರವನ್ನು ಇಲ್ಲಿಗೇ ಕೈಬಿಡಿ – 

    ಮಾನ್ಯ ಉಪಮುಖ್ಯಮಂತ್ರಿಗಳೇ, ದಶಕದ ಹಿಂದೆ ಎಂಎಸ್‌ಜಿಪಿ ತ್ಯಾಜ್ಯ ನಿರ್ವಹಣಾ ಘಟಕ ಎಂಬ ಹೆಮ್ಮಾರಿ ನಮ್ಮ ತಾಲ್ಲೂಕಿಗೆ ಹೆಜ್ಜೆ ಇಡುವಾಗಲೂ ನಿಮ್ಮಂತೆಯೇ ಟೆಕ್ನಾಲಜಿ, ಅತ್ಯಾಧುನಿಕ ಸಂಸ್ಕರಣೆ, ಫರ್ಟಿಲೈಜೇಷನ್ ಎಂಬಿತ್ಯಾದಿ ಹೂಗಳನ್ನು ಜನತೆಯ ಕಿವಿಗೆ ಇಟ್ಟು ಬಂದಿದ್ದು, ನಂತರ ಅದರಿಂದ ಪ್ರಕೃತಿಯ ಮೇಲಾದ ಅತ್ಯಾಚಾರ ಮತ್ತು ಜನಜೀವನದ ಮೇಲೆ ಬೀರಿದ ದುಷ್ಪರಿಣಾಮಗಳು ಇಂದಿಗೂ ಜೀವಂತ. ಈಗಾಗಲೇ ಇದರಿಂದಾಗಿರುವ ಮಾಲಿನ್ಯ ತಿಳಿಗೊಳ್ಳಲು ಕನಿಷ್ಠ ತಲೆಮಾರು ಕಳೆಯಬಹುದು. ಈ ಬಗ್ಗೆ ನಮ್ಮ ಮಾಧ್ಯಮ ಮಿತ್ರರು ನಿರಂತರವಾಗಿ ಸರಣಿ ಸುದ್ದಿಗಳು, ಅಂಕಣಗಳನ್ನು ಪ್ರಕಟಿಸಿ ನಿಮ್ಮ ಕಿವಿ ಹಿಂಡುತ್ತಲೇ ಬಂದಿದ್ದಾರೆ. ನಿಮ್ಮದೇ ಮಾತುಗಳನ್ವಯ ಅಂತಹ ಅತ್ಯಾಧುನಿಕ ಟೆಕ್ನಾಲಜಿ ಇದ್ದರೆ, ಅದರಿಂದ ಜನರಿಗೆ ಮತ್ತು ಪ್ರಕೃತಿಗೆ ಯಾವುದೇ ರೀತಿಯ ಅಪಾಯ ಇಲ್ಲ ಎಂಬುದಾದರೆ, ದಯವಿಟ್ಟು ಅಂತಹ ಒಂದು ಸಂಸ್ಕರಣಾ ಘಟಕವನ್ನು ಬೆಂಗಳೂರು ನಗರದ ಪ್ರತಿಷ್ಟಿತ ಶ್ರೀಮಂತರು ವಾಸಿಸುವ ಏರಿಯಾಗಳಲ್ಲೇ ಮೊದಲು ಪ್ರಾರಂಭಿಸಿ. ಅಲ್ಲಿ ನಿಮ್ಮ ಯೋಜನೆ ಯಶಸ್ವಿಯಾದರೆ ಆನಂತರ ನಮ್ಮ ತಾಲ್ಲೂಕಿನಲ್ಲಿ ಮಾಡುವ ಬಗ್ಗೆ ಯೋಚಿಸಿರಿ. ದಯಮಾಡಿ ಈ ನಿರ್ಧಾರವನ್ನು ಇಲ್ಲಿಗೇ ಕೈಬಿಡಿ.

     

    ಇದೇ ಸಂದರ್ಭದಲ್ಲಿ ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿ ತಾಲ್ಲೂಕಿನ ಜನತೆಯ ಬಗ್ಗೆ ಪ್ರಾಮಾಣಿಕವಾಗಿ ಕಳಕಳಿ ತೋರಿದ ನಮ್ಮ ಶಾಸಕ ಮಿತ್ರರಾದ ಶ್ರೀಯುತ ಧೀರಜ್ ಮುನಿರಾಜು ರವರಿಗೆ ಇಡೀ ತಾಲ್ಲೂಕಿನ ಪರವಾಗಿ ನವ ಬೆಂಗಳೂರು ಹೋರಾಟ ಸಮಿತಿ ಧನ್ಯವಾದಗಳನ್ನು ತಿಳಿಸುತ್ತದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಭಕ್ತರಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಸಿದ್ದಲಿಂಗಯ್ಯ, ಮಧು. ಪಿ, ರಾಜು ನಾಯಕ್ ಉಪಸ್ಥಿತರಿದ್ದರು.

  • ಕಬ್ಬಡಿ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದ ದೊಡ್ಡಬಳ್ಳಾಪುರದ ಪ್ರತಿಭೆ : ಯುವ ಕ್ರೀಡಾಪಟು ಹರೀಶ್ ಗೆ ಅಭಿನಂದನೆ ಸಲ್ಲಿಸಿದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ

    ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಮಹಾರಾಷ್ಟ್ರದ ನಡೆದ ಜಾಲ್ಗೊಂನ್ ನಲ್ಲಿ ನಡೆದ 5ನೇ ಫೆಡರೇಶನ್ ಕಪ್ ನ್ಯಾಷನಲ್ ಕಬ್ಬಡಿ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಕಂಚಿನ ಪದಕ ವಿಜೇತರಾದ ಹರೀಶ್ ರವರಿಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ರಾಜ್ಯಾಧ್ಯಕ್ಷ ಎಚ್. ರಾಘವೇಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಚ್. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

     

    ವಿಜಯಮಿತ್ರದೊಂದಿಗೆ ಮಾಹಿತಿ ಹಂಚಿಕೊಂಡಿರುವ ಅವರು ತಾಲ್ಲೂಕಿನ ಅವಿಘ್ನ ಕಬ್ಬಡಿ ಕ್ಲಬ್ ನ ಹರೀಶ್ ರವರು ಮಹಾರಾಷ್ಟ್ರದಲ್ಲಿ ನಡೆದ 5ನೇ ಫೆಡರೇಶನ್ ಕಪ್ ನ್ಯಾಷನಲ್ ಕಬ್ಬಡಿ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಕಂಚಿನ ಪದಕ ಸಾದಿಸಿದ್ದು, ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಅಲ್ಲದೇ ಕಬ್ಬಡ್ಡಿ ಕ್ರೀಡೆಯಲ್ಲಿ ತೊಡಗಿರುವ ಎಷ್ಟು ಯುವ ಪ್ರತಿಭೆಗಳಿಗೆ ಈ ಸಾಧನೆ ಸ್ಪೂರ್ತಿದಾಯಕವಾಗಲಿದೆ ಎಂದು ತಿಳಿಸಿದ್ದಾರೆ.

    ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ ವತಿಯಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆಮಾಡಿದ ಕ್ರೀಡಾಪಟುಗಳಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು ಅಲ್ಲದೇ ಕ್ರೀಡಾಸಕ್ತ ಯುವ ಪ್ರತಿಭೆಗಳಿಗೆ ವಿಶೇಷ ಕ್ರೀಡಾ ಕೂಟಗಳನ್ನು ಆಯೋಜಿಸುವ ಮೂಲಕ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.

  • ಯೋಗಪಟು ಕುಮಾರಿ ಎಂ. ಆರ್. ಜಾಹ್ನವಿಗೆ “ಅಕಾಡೆಮಿ ಬಾಲ ಗೌರವ ಪ್ರಶಸ್ತಿ ” 

     

    ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೀಡುವ “ಅಕಾಡೆಮಿ ಬಾಲ ಗೌರವ ಪ್ರಶಸ್ತಿ “ಗೆ ತಾಲ್ಲೂಕಿನ ಯೋಗ ಪ್ರತಿಭೆ ಕುಮಾರಿ ಎಂ. ಆರ್. ಜಾಹ್ನವಿ ಆಯ್ಕೆಯಾಗಿದ್ದಾರೆ.

     

    ತಾಲ್ಲೂಕಿನ ನಿಸರ್ಗ ಯೋಗ ಕೇಂದ್ರ(ರಿ)ದ ವಿದ್ಯಾರ್ಥಿನಿ ಅಂತರರಾಷ್ಟ್ರೀಯ ಯೋಗ ಪಟು ಯಲಹಂಕ ನಾಗಾರ್ಜುನ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಎಂ. ಆರ್. ಜಾಹ್ನವಿ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ದಾರವಾಡ ಪ್ರತಿಷ್ಠಿತ ಪ್ರಶಸ್ತಿಯಾದ ಅಕಾಡೆಮಿ ಬಾಲ ಗೌರವ ಪ್ರಶಸ್ತಿ. ಗೆ ಆಯ್ಕೆಯಾಗಿದ್ದಾರೆ.

     

    ಇವರಿಗೆ ಕರ್ನಾಟಕ ಸ್ಟೇಟ್ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಎ.ನಟರಾಜ್ (ಯೋಗ) ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ಅಧ್ಯಕ್ಷ ಪ್ರೊ ಎಂ .ಜಿ. ಅಮರ್ನಾಥ್ ಖಜಾಂಚಿ ಕೆ. ಆರ್. ಶ್ಯಾಮ ಸುಂದರ್ ಹಾಗೂ ನಿಸರ್ಗ ಯೋಗ ಕೇಂದ್ರ(ರಿ)ದ ಪದಾಧಿಕಾರಿಗಳು ಮತ್ತು ಯೋಗ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಶುಭ ಕೋರಿದ್ದಾರೆ

  • ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ಜಾನುವಾರುಗಳಿಗೆ ಉಚಿತ ಮೇವು ವಿತರಣಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಚಾಲನೆ 

    ದೊಡ್ಡಬಳ್ಳಾಪುರ : ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯ ಅಂಗವಾಗಿ ನವ ಕರ್ನಾಟಕ ಯುವ ಶಕ್ತಿ ವೇದಿಕೆ ಆಯೋಜಿಸಿದ ಉಚಿತ ಜಾನುವಾರು ಮೇವು ವಿತರಣಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಉದ್ಘಾಟಿಸಿದರು.

    ಉದ್ಘಾಟನೆ ಬಳಿಕ ಮಾತನಾಡಿದ ಅವರು, “ಜಾತ್ರೆಗೆ ಸರ್ಕಾರದ ವತಿಯಿಂದ ಮೂಲಭೂತ ಸೌಲಭ್ಯಗಳ ಜೊತೆಗೆ ಉಚಿತ ನೀರು ಮತ್ತು ಆಹಾರ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯವರು ಉಚಿತ ಮೇವು ವಿತರಿಸುತ್ತಿರುವುದು ರೈತರಿಗೆ ಸಹಾಯಕವಾಗಿದೆ. ಜಾತ್ರೆಗೆ ಆಗಮಿಸಿರುವ ರೈತರು ಈ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು,” ಎಂದು ಹೇಳಿದರು. ಜಾತ್ರೆ ಪ್ರದೇಶದಲ್ಲಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಗೂ ಕಟೌಟ್‌ಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

    ವೇದಿಕೆ ಅಧ್ಯಕ್ಷ ಅಂಬರೀಶ್ ಮಾತನಾಡಿ, “ಜಾತ್ರೆಗೆ ಬರುವ ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರು ಒದಗಿಸುವ ಮೂಲಕ ರೈತ ಸಮುದಾಯವನ್ನು ಬೆಂಬಲಿಸುವುದು ವೇದಿಕೆಯ ಉದ್ದೇಶ. ಈ ಸೇವೆಯನ್ನು ಮೂರು ವರ್ಷಗಳಿಂದ ನಿರಂತರವಾಗಿ ನೀಡುತ್ತಿದ್ದೇವೆ,” ಎಂದು ಹೇಳಿದರು.

    ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ “ಇಂದು ಆರಂಭವಾದ ಮೇವು ವಿತರಣೆ ಇನ್ನೂ ಮೂರು–ನಾಲ್ಕು ದಿನ ನಡೆಯಲಿದೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ರೈತರಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ,” ಎಂದು ಮಾಹಿತಿ ನೀಡಿದರು.

    ಕಾರ್ಯಕ್ರಮದಲ್ಲಿ ಘಾಟಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಂಗಪ್ಪ, ಪ್ರಗತಿಪರ ರೈತ ಭಾಸ್ಕರ್, ಕನ್ನಡ ಪರ ಹೋರಾಟಗಾರ ಪರಮೇಶ್, ಮುಖಂಡ ಕನಕದಾಸ, ವೇದಿಕೆಯ ಪದಾಧಿಕಾರಿಗಳಾದ ಶ್ರೀಧರ್, ಮಹೇಶ್, ಹಾಗೂ ಸ್ಥಳೀಯ ರೈತರು ಭಾಗಿಯಾಗಿದ್ದರು.

  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಾಡೋನಹಳ್ಳಿ ಗ್ರಾಮದಲ್ಲಿ ನೂತನ ವಲಯ ಕೃಷಿ ಕಛೇರಿ ಪ್ರಾರಂಭ 

    ದೊಡ್ಡಬಳ್ಳಾಪುರ : ಕೃಷಿಗೆ ಸೂಕ್ತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೃಷಿ ಸಂಬಂದಿಸಿದ ಕೆಲಸ ನಿರ್ವಹಣೆ ಮಾಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೃಷಿ ಮೇಲ್ವಿಚಾರಕರಿಗೆ ಅನುಕೂಲ ಕಲ್ಪಿಸಲು ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನೂತನ ವಲಯ ಕಛೇರಿ ಪ್ರಾರಂಭ ಮಾಡಲಾಯಿತು

     

     

    ಹಾಡೋನಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನೂತನ ಕಛೇರಿಯಲ್ಲಿ ಲಕ್ಷ್ಮೀ ಪೂಜೆಯೊಂದಿಗೆ ಸಂಘದ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ನೂತನವಾಗಿ ಹಾಡೋನಹಳ್ಳಿ ಒಕ್ಕೂಟ ರಚನೆ ಮಾಡಿ ದಾಖಲಾತಿ ಹಸ್ತಾಂತರ ಮಾಡುವ ಮೂಲಕ ನೂತನ ಕಚೇರಿಗೆ ಚಾಲನೆ ನೀಡಲಾಯಿತು.

     

     

    ತಾಲೂಕಿನ ಯೋಜನಾಧಿಕಾರಿಗಳಾದ ದಿನೇಶ್ ಎನ್.ಆರ್ ಒಕ್ಕೂಟದ ಪದಾಧಿಕಾರಿಗಳಾದ ಧನಂಜಯ್,ಸವಿತಾಆನಂದ್, ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ ಮೇಲ್ವಿಚಾರಕರಾದ ಈರಣ್ಣ ಗಿರೀಶ್ ರೇಣುಕಾ ಪ್ರಸಾದ್,ಸೇವಾಪ್ರತಿನಿದಿಗಳು,ವಿ ಎಲ್ ಈ ಸೇವಾದಾರರು ಉಪಸ್ಥಿತರಿದ್ದರು

  • ಸಂವಿಧಾನದಲ್ಲಿನ ಸಮಾನತೆ, ಬ್ರಾತೃತ್ವಗಳಿಂದಾಗಿ ಇಂದು ಎಲ್ಲರಿಗೂ ಮತದಾನದ ಹಕ್ಕು ಸಿಕ್ಕಿದೆ- ಡಾ.ಮಂಜುನಾಥ.ಎಂ.ಅದ್ದೆ

    ದೊಡ್ಡಬಳ್ಳಾಪುರ :ಮಾನವ ಹಕ್ಕುಗಳು ನಮಗೆ ಇಂದು ದೊರೆತಿರಬೇಕಾದರೆ ಅದು ನಮಗೆ ಸಂವಿಧಾನ ನೀಡಿರುವ ಬಳುವಳಿಯಾಗಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ದೂರದೃಷ್ಟಿತ್ವ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳಿಗೆ ಅವರು ನೀಡುತ್ತಿದ್ದ ಪ್ರಾಶಸ್ತ್ಯವೇ ಮೂಲವಾಗಿದೆ ಎಂದು ಲೇಖಕ ಹಾಗೂ ಪ್ರಗತಿಪರ ಚಿಂತಕ ಡಾ.ಮಂಜುನಾಥ್‌.ಎಂ.ಅದ್ದೆ ತಿಳಿಸಿದರು.

     

    ನಗರದ ಕನ್ನಡ ಜಾಗೃತ ಭವನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ನಡೆದ ಸಂವಿಧಾನ ಸಮರ್ಪಣಾ ದಿನ ಹಾಗೂ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಅಂಬೇಡ್ಕರ್‌ ದೃಷ್ಟಿಯಲ್ಲಿ ಮಾನವ ಹಕ್ಕುಗಳು ವಿಷಯ ಕುರಿತು ಮಾತನಾಡಿದರು.ಯಾವುದೇ ದೇಶವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಅದರ ರಾಜಕೀಯ ಸಾಂಸ್ಕೃತಿಕ, ಆರ್ಥಿಕ ಚರಿತ್ರೆಯ ಜೊತೆಗೆ ಸಾಮಾಜಿಕ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಬೇಕು.

    ಸಂವಿಧಾನ ಬರೀ ದಲಿತರಿಗೆ ಸೀಮಿತವಾಗಿದ್ದು, ಅವರೇ ಸಂವಿಧಾನದಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎನ್ನುವುದೇ ಅಸಮಂಜಸ. ಈ ತಪ್ಪು ಕಲ್ಪನೆ ಮೊದಲು ದೂರಾಗಬೇಕು. ಸಂವಿಧಾನ ಜಾರಿಗೂ ಮುನ್ನ ದೇಶದಲ್ಲಿ ದಲಿತರು, ಶೋಷಿತರು ಅನುಭವಿಸುತ್ತಿದ್ದ ಬವಣೆಗಳನ್ನು ನೋಡಿದರೆ ನಮಗೆ ಸಂವಿಧಾನದ ಮಹತ್ವ ಅರ್ಥವಾಗುತ್ತದೆ. ಮತದಾನದ ಹಕ್ಕು ಸಹ ಮೊದಲು ಜಮೀನ್ದಾರರಿಗೆ ಹಾಗೂ ಗಣ್ಯರಿಗೆ ಮಾತ್ರವೇ ಸೀಮಿತವಾಗಿತ್ತು. ಮಹಿಳೆಯರಿಗೆ ಅಧಿಕಾರವಿರಲಿ ಮತದಾನದ ಹಕ್ಕೇ ಇರದಂತೆ ಮಾಡುವ ಹುನ್ನಾರಗಳು ನಡೆಯುತ್ತಿತ್ತು. ಸಂವಿಧಾನದಲ್ಲಿನ ಸಮಾನತೆ, ಬ್ರಾತೃತ್ವಗಳಿಂದಾಗಿ ಇಂದು ಎಲ್ಲರಿಗೂ ಮತದಾನದ ಹಕ್ಕು ಸಿಕ್ಕಿದೆ. ಎಲ್ಲಾ ವರ್ಗದವರಿಗೆ ಶಿಕ್ಷಣ, ರಾಜಕೀಯ,ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಿಕ್ಕಿದೆ. ಪುರೋಹಿತಶಾಹಿ ವ್ಯವಸ್ಥೆಯಲ್ಲಿ ನಲುಗಿದ ಶೋಷಿತರು ಇಂದು ನಿರಾಳವಾಗಿದ್ದಾರೆ ಎಂದರೆ ಅದು ಸಂವಿಧಾನದ ಶಕ್ತಿ. ವಿಶೇಷವಾಗಿ ಮಹಿಳೆಯರು, ಕೃಷಿ ಮೊದಲಾದ ಕುಲಕಸುಬುಗಳಲ್ಲಿ ಶೇ.75ರಷ್ಟು ಶ್ರಮದಾನ ಮಾಡುತ್ತಿದ್ದರು. ಅವರಿಗೆ ಯಾವುದೇ ಕಷ್ಟ, ನೋವುಗಳನ್ನು ಹೇಳಿಕೊಳ್ಳುವ ಸ್ವತಂತ್ರವೂ ಇರಲಿಲ್ಲ. ಬ್ರಾಹ್ಮಣರ ಕುಟುಂಬಗಳಲ್ಲಿಯೂ ಸಹ ಮಹಿಳೆಯರು, ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯರಾದರೂ ಅವರು ಜೀವನವಿಡೀ ಸಂಪ್ರದಾಯದ ಹೆಸರಿನಲ್ಲಿ ಮಾನಸಿಕವಾಗಿ ನೊಂದುಕೊಂಡೇ ಬಾಳಬೇಕಿತ್ತು. ಇಂತಹ ಅನಿಷ್ಟ ಪದ್ದತಿಗಳು ದೂರಾಗುವಂತೆ ಮಾಡಿದ್ದು, ನಮ್ಮ ಸಂವಿಧಾನ. ಅಂಬೇಡ್ಕರ್ ಮಹಾ ಮಾನವತಾವಾದಿಯಾಗಿದ್ದು, ಅವರ ದೃಷ್ಟಿಯಲ್ಲಿ ಮಾನವ ಹಕ್ಕುಗಳು ಹಾಗೂ ಸಮಾನತೆ ಎಲ್ಲರಿಗೂ ಸಿಗಬೇಕೆಂದು ಪ್ರತಿಪಾದಿಸಿದ್ದರಿಂದ ನಮ್ಮ ಸಂವಿಧಾನ ಅಚಲವಾಗಿದೆ. ಆದರೆ ಇಂತಹ ಸಂವಿಧಾನವನ್ನು ಬದಲಾವಣೆ ಮಾಡುವುದು, ಸಂಪ್ರದಾಯದ ಹೆಸರಿನಲ್ಲಿ ಶೋಷಣೆ ಮಾಡುತ್ತಿರುವ ಹುನ್ನಾರಗಳು ನಡೆಯುತ್ತಿರುವುದು ದುರಂತದ ಸಂಗತಿ ಎಂದರು.

     

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು, ಡಾ.ಅಂಬೇಡ್ಕರ್ ಅವರು ಇಡಿ ಪ್ರಪಂಚದಾದ್ಯಂತ ಸಂಚರಿಸಿ ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಸರ್ವ ಶ್ರೇಷ್ಠ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗಗಳಲ್ಲಿ ಪ್ರತಿದಿನ‌ ನಡೆಯುವ ಕಲಾಪಗಳು ಬೆಳವಣಿಗೆಗಳು ಸಂವಿಧಾನವನ್ನು ಅವಲಂಬಿಸಿ ನಡೆಯುತ್ತಿವೆ. ನಾನಿಂದು ನಿಮ್ಮ ಮುಂದೆ ಜಿಲ್ಲಾಧಿಕಾರಿಯಾಗಿ ನಿಂತು ಮಾತನಾಡುತ್ತಿದ್ದೇನೆ ಎಂದರೆ ಅದು ಬಾಬಾ ಸಾಹೇಬರು ಬರೆದುಕೊಟ್ಟ ಸಂವಿಧಾನವೆ ಮೂಲ ಕಾರಣ ಎಂದರು.

     

    ಸಂವಿಧಾನದ ಮಹತ್ವ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವಿಷಯದ ಕುರಿತು ಮಾತನಾಡಿದ ಸಹಾಯಕ ಪ್ರಾಧ್ಯಪಕರಾದ ನಸ್ರೀನ್ ತಾಜ್ ಅವರು ಮಾತನಾಡಿ, ಅಂಬೇಡ್ಕರ್ ಅವರು 64 ವಿಷಯಗಳಲ್ಲಿ ಅಪಾರವಾದ ಪಾಂಡಿತ್ಯವನ್ನು ಪಡೆದಿದ್ದರು. ಅವರು ಕೇವಲ ಶೋಷಿತ ಸಮುದಾಯಗಳ ವಿಮೋಚನೆಗಾಗಿ ಮಾತ್ರ ಶ್ರಮಿಸಲಿಲ್ಲ. ಭಾರತದ ಪ್ರತಿ ನಾಗರೀಕನಿಗೂ ಸಾಮಾಜಿಕ ನ್ಯಾಯಾ ಸಿಗಬೇಕು‌ ಎಂದು ಹೋರಾಟ ಮಾಡಿದರು. ಪ್ರಪಂಚದ 194 ರಾಷ್ಟ್ರಗಳು ಸಂವಿಧಾನವನ್ನ ಅಳವಡಿಸಿಕೊಂಡಿವೆ, ಅದರಲ್ಲಿ ಭಾರತದ ಸಂವಿಧಾನವೇ ಮಹತ್ವವಾದುದು. ನಮ್ಮ ಸಂವಿಧಾನ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರುವ ಹಾಗೂ ಪ್ರಪಂಚದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಭಾರತ ಪಾಕಿಸ್ತಾನ ಒಂದು ದಿನದ ಅಂತರದಲ್ಲಿ ಸ್ವಾತಂತ್ರ್ಯ ಪಡೆದರೂ ಪಾಕಿಸ್ತಾನ ಈಗಾಗಲೇ ಮೂರು ಸಂವಿಧಾನವನ್ನು ಬದಲಾಯಿಸಿದರೆ ನೇಪಾಳ ಏಳು ಸಂವಿಧಾನಗಳನ್ನು ಬದಲಾಯಿಸಿದೆ. ಆದರೆ ಬಾಬಾ ಸಾಹೇಬರು ಬರೆದುಕೊಟ್ಟ ಸಂವಿಧಾನ ಬದಲಾಗುವುದಿಲ್ಲ. ಏಕೆಂದರೆ ದೇಶದ ಸಂವಿಧಾನವನ್ನು ಆಯಾ ಕಾಲಘಟ್ಟಕ್ಕೆ ದೇಶದ ಪ್ರಜೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮತ್ತು ಸಂವಿಧಾನದ ಮೂಲ ಆಶಯಗಳಿಗೆ ದಕ್ಕೆಯಾಗದಂತೆ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂದರು.

     

    ಕಾರ್ಯಕ್ರಮದಲ್ಲಿ ಡಿ.ವೀರಣ್ಣ, ಪಿ.ಎಂ.ಚಿನ್ನಸ್ವಾಮಿ, ಕಾರಹಳ್ಳಿ ಶ್ರೀನಿವಾಸ್ ಹಾಗೂ ಸಿ.ಎಚ್.ಸಿದ್ದಯ್ಯ ಅವರನ್ನು ಸಂವಿಧಾನ ಪರಿಚಾಲಕರು ಎಂದು ಸನ್ಮಾನಿಸಲಾಯಿತು.

     

    ಸಂವಿಧಾನದ ಮಹತ್ವ, ಲಕ್ಷಣ ಹಾಗೂ ಮಾನವ ಹಕ್ಕುಗಳ ಕುರಿತು ಪ್ರಬಂಧ ಬರೆದು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು

    ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯದರ್ಶಿ ಈ.ಬಸವರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಷಾದ್ರಿ, ಕಾರ್ಮಿಕ ಮುಖಂಡ ಪಿ.ಎ. ವೆಂಕಟೇಶ್, ರೈತ ಮುಖಂಡ ಆರ್. ಚಂದ್ರತೇಜಸ್ವಿ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್, ಕರ್ನಾಟಕ ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎಸ್.ಯು ರಮೇಶ್, ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ತೂಬಗೆರೆ ಷರೀಫ್, ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ಸಂಚಾಲಕ ರಾಜುಸಣ್ಣಕ್ಕಿ, ಕನ್ನಡ ಜಾಗೃತ ವೇದಿಕೆಯ ಶಶಿಧರ್, ದಲಿತ ಮುಖಂಡರಾದ ಗೂಳ್ಯ ಹನುಮಣ್ಣ, ನೇರಳೆಘಟ್ಟ ರಾಮು, ರಾಮಕೃಷ್ಣ, ಮಾಳವ ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.

  • ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ

     

    ಭೂಕಂಪ, ಪ್ರವಾಹ, ಸುನಾಮಿ, ಅಪಘಾತ, ಕಟ್ಟಡ ಕುಸಿತ, ನೆರೆ, ಅತೀವೃಷ್ಟಿ, ಅಗ್ನಿ ಅವಘಡ, ಅನಿಲ ಸೋರಿಕೆ ಸೇರಿದಂತೆ ಇತರೆ ವಿಪತ್ತುಗಳು ಸಂಭವಿಸಿದಾಗ ಅವುಗಳನ್ನು ಎದುರಿಸುವುದು ಹೇಗೆ, ಮುಂಜಾಗ್ರತ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು, ಹೇಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂಬುದ ಬಗ್ಗೆ ಕೇಂದ್ರ ವಿಪತ್ತು ನಿರ್ವಹಣಾದಳ(ಎನ್.ಡಿ.ಆರ್.ಎಫ್)10ನೇ ಬೆಟಾಲಿಯನ್ ಟೀಮ್ ರವರು ಹೊಸಕೋಟೆಯಲ್ಲಿ ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ ಆಯೋಜಿಸಿತ್ತು.

     

    ಹೊಸಕೋಟೆ ತಾಲ್ಲೂಕಿನ ದೇವಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಸ್ವಾಮಿ ವಿವೇಕಾನಂದ ವಿದ್ಯಾ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

     

    ವಿಪತ್ತು ನಿರ್ವಹಣಾ ದಳದ ಇನ್ಸ್ಪೆಕ್ಟರ್ ರಾಮಬಾಜ್ ಮಾತನಾಡಿ ವಿಪತ್ತುಗಳು ಯಾವ ಸಂದರ್ಭ, ಸಮಯದಲ್ಲಿ ಬೇಕಾದರೂ ಸಂಭವಿಸಬಹುದು. ಹಲವಾರು ವಿಪತ್ತುಗಳನ್ನು ಎದುರಿಸಲು ನಮ್ಮಲ್ಲಿ ತಾಳ್ಮೆ ಸಹನೆ ಅಗತ್ಯ. ಇದು ಸಾಹಸದ ಕೆಲಸವಾಗಿದೆ ಅತ್ಯಂತ ಚಾಣಾಕ್ಷತೆಯಿಂದ ವಿಪತ್ತು ನಿರ್ವಹಣೆ ಮಾಡಬೇಕು. ವಿಪತ್ತಿನಲ್ಲಿ ಸಿಲುಕಿ ಅದೆಷ್ಟೋ ಜನರ ಜೀವ ಹೋಗುವ ಸನ್ನಿವೇಶ ನಿರ್ಮಾಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತರು ವಿಪತ್ತು ನಿರ್ವಹಣೆಗೆ ಧುಮುಕುವ ಮೂಲಕ ಸಾರ್ವಜನಿಕರ ಪ್ರಾಣ ಕಾಪಾಡುವುದು ಮಾನವೀಯ ಕರ್ತವ್ಯವಾಗಿದೆ. ವಿಪತ್ತು ಸಂದರ್ಭದಲ್ಲಿ ಅಗತ್ಯ ಮಾಹಿತಿ ಕಲೆ ಹಾಕುವ ಮೂಲಕ, ವಿಪತ್ತು ನಿರ್ವಹಣೆ ಕುರಿತು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

     

    ಹೆಡ್ ಕಾನ್‌ಸ್ಟೇಬಲ್ ವಜ್ರ ಚೇತನ್ ವಿಪತ್ತು ನಿರ್ವಹಣೆಯ ಹಲವು ಮಜಲುಗಳ ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿಪತ್ತು ನಿರ್ವಹಣೆಯಲ್ಲಿ ನಾವು ವಹಿಸಬೇಕಾದ ಮುಂಜಾಗ್ರತಾ ಕ್ರಮದ ಕುರಿತು ವಿವರಿಸಿದರು.

     

    ಕಾರ್ಯಕರ್ಮದಲ್ಲಿ ಉಪತಹಶೀಲ್ದಾರ್ ಹೊಸಕೋಟೆ, ಗ್ರಾಪಂ ಪಿಡಿಒಗಳು, ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ, ಎಸ್.ಟಿ.ಎಂ.ಸಿ ಸದಸ್ಯರು ಇತರೆ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

  • ವಿಶ್ವದ ಎರಡನೇ ಅತಿದೊಡ್ಡ ಖಾದಿ ತ್ರಿವರ್ಣ ಧ್ವಜ ಅನಾವರಣ

    ಭಾರತದ ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಾಗಿರದೇ, ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಅವರು ಇಂದು ಬೆಳಗಾವಿಯ ಸುವರ್ಣ ಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣ ಮಾಡಿ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು ಇಂದು ಬೆಳಗಾವಿಯ ಸುವರ್ಣಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೇ ಅತಿ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಾಗಿದ್ದು, ಇದಕ್ಕೆ ಕಾರಣರಾದ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಗೆ ಮತ್ತು ಕಲ್ಬುರ್ಗಿ ಜಿಲ್ಲೆಯ ಕಮಲಾಪುರದ ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣ ಅವರ ಕುಟುಂಬಸ್ಥರಿಗೂ ಸರ್ಕಾರದಿಂದ ಮುಖ್ಯಮಂತ್ರಿಗಳು ಅಭಿನಂದಿಸಿದರು.

    ರಾಷ್ಟ್ರಭಕ್ತಿ ಸಾರುವ ಸಂದೇಶ

    ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಜಾರಿಗೆ ತಂದರು. ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಲ್ಲ, ಇದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ. ಈ ಧ್ವಜದಲ್ಲಿ ಮೂರು ವರ್ಣ ಮತ್ತು ಅಶೋಕ ಚಕ್ರವನ್ನು ಒಳಗೊಂಡಿದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿದ್ದು, ದೇಶದ ಸ್ವಾಭಿಮಾನ, ಆರ್ಥಿಕತೆ ಮತ್ತು ತ್ಯಾಗಬಲಿದಾನ ಹಾಗೂ ಶಾಂತಿಯ ಸಂದೇಶವನ್ನು ಸಾರುವ ಹಾಗೂ ಭಾರತೀಯರಿಗೆ ರಾಷ್ಟ್ರಭಕ್ತಿಯನ್ನು ಸಾರುವ ಸಂದೇಶವನ್ನು ನೀಡುತ್ತದೆ ಎಂದರು.ಬಿಳಿಬಣ್ಣ ಶಾಂತಿ ಮತ್ತು ಸತ್ಯವನ್ನು ಪ್ರತಿನಿಧಿಸಿದರೆ, ಹಸಿರು ಸಮೃದ್ಧಿಯನ್ನು ಬಿಂಬಿಸುತ್ತದೆ. ಅಶೋಕ ಚಕ್ರ ನಿರಂತರವಾಗಿ ದೇಶದ ಆರ್ಥಿಕತೆಯನ್ನು, ಹಾಗೂ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದರ ಸಂಕೇತವಾಗಿದೆ ಎಂದು ವಿವರಿಸಿದರು.

     

    ತ್ರಿವರ್ಣ ಧ್ವಜವನ್ನು ಗೌರವಿಸಿ ಹೆಮ್ಮೆಯಿಂದ ಕಾಣಬೇಕು.

    ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜವನ್ನು ಗೌರವಿಸಿ ಹೆಮ್ಮೆಯಿಂದ ಕಾಣಬೇಕು. ಪ್ರತಿಯೊಬ್ಬರೂ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು. ಈ ಸಂದರ್ಭದಲ್ಲಿ ರಾಷ್ಟ್ರಕ್ಕಾಗಿ ತ್ಯಾಗಬಲಿದಾನ, ಹೋರಾಟ ಮಾಡಿದವರನ್ನು ಸ್ಮರಿಸುವುದು ಅಗತ್ಯ. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ ಹೋರಾಟ ನಡೆಯಿತು. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿದ್ದರು. ಇದು ನಡೆದು ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಕೆಳದ ವರ್ಷ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಸುವರ್ಣ ಸೌಧದ ಪಕ್ಕದಲ್ಲಿ ಸ್ಥಾಪಿಸಲಾಗಿದೆ ಎಂದರು.

     

    ನಾವೆಲ್ಲರೂ ಜಾತ್ಯತೀತರಾಗಬೇಕು

    ನಾವೆಲ್ಲರೂ ದೇಶಪ್ರೇಮಿಗಳಾಗಬೇಕು. ದೇಶದಲ್ಲಿ ಅನೇಕ ಜಾತಿ, ಧರ್ಮಗಳಿದ್ದು, ನಾವೆಲ್ಲರೂ ಜಾತ್ಯತೀತರಾಗಬೇಕಾಗಿರುವುದು ಅವಶ್ಯಕ. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು. ಆಗ ಮಾತ್ರ ಸಮಸಮಜಾ ನಿರ್ಮಾಣ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಜಾತ್ಯತೀತ ರಾಷ್ಟ್ರ ನಿರ್ಮಾಣ ಕಷ್ಟವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

     

    ಸ್ವಾತಂತ್ರ್ಯ ಬಂದು 79 ವರ್ಷಗಳಾಗಿವೆ. ನಾವೆಷ್ಟರಮಟ್ಟಿಗೆ ಭ್ರಾತೃತ್ವ, ದೇಶಪ್ರೇಮ, ಮನುಷ್ಯ ಸಮಾಜವನ್ನು ಈ ದೇಶದಲ್ಲಿ ಸಾಧಿಸಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದಿಲ್ಲದೇ ಹೋದರೆ ಮನುಷ್ಯರಾಗಿ ಬಾಳುವುದು ಸಾಧ್ಯವಿಲ್ಲ. ಎಲ್ಲ ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಈ ಮನೋಭಾವ ಬೆಳೆಯಬೇಕು ಎಂದರು.

     

    ಸಂವಿಧಾನದ ಪೀಠಿಕೆ ಓದು ಕಾರ್ಯಕ್ರಮ

    ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಓದಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಅದಕ್ಕಾಗಿಯೇ ಇಂಥ ಐತಿಹಾಸಿಕ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣ ಅವರು ಕೊಟ್ಟಿರುವ ರಾಷ್ಟ್ರಧ್ವಜಕ್ಕಾಗಿ ಮುಖ್ಯಮಂತ್ರಿಗಳು ಧನ್ಯವಾದಗಳನ್ನು ಸಲ್ಲಿಸಿದರು.

  • ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ರಮವಹಿಸಿ: ಜಿಲ್ಲಾಧಿಕಾರಿ ಎ.ಬಿ.ಬಸವರಾಜು

    Vijayamitra. Com : ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ ಅಪೌಷ್ಟಿಕತೆ ನಿವಾರಣೆಗೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ತಿಳಿಸಿದರು.

     

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     

    ಜಿಲ್ಲೆಯಲ್ಲಿ 269 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಆ ಮಕ್ಕಳಿಗೆ ಸೂಕ್ತ ಆಹಾರ, ಆರೋಗ್ಯ ಸೇವೆ ನೀಡಬೇಕು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರಗಳನ್ನು ಸಮಯಕ್ಕೆ ಸರಿಯಾಗಿ ವಿತರಿಸಬೇಕು. ಯಾವುದೇ ಕಾರಣಕ್ಕೂ ವ್ಯರ್ಥ ಮಾಡದಂತೆ ನೋಡಿಕೊಳ್ಳಬೇಕು ಎಂದು ಸಿಡಿಪಿಒಗಳಿಗೆ ಸೂಚಿಸಿದರು.

     

    ಮಕ್ಕಳ ಹಾಗೂ ಗರ್ಭಿಣಿ ಬಾಣಂತಿಯರ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಗರ್ಭಿಣಿ, ಬಾಣಂತಿಯರ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಬಗ್ಗೆ ಅರಿವು ಮೂಡಿಸಿ, ಜೊತೆಗೆ ಅಂಗನವಾಡಿ ಇಂದ ಸಿಗುವ ಆಹಾರ ಸಾಮಗ್ರಿ ತಪ್ಪದೇ ತಲುಪಿಸಿ. ಶಿಶು ಹಾರೈಕೆ ಮತ್ತು ಗರ್ಭಿಣಿ, ಬಾಣಂತಿಯರ ಹಾರೈಕೆಯಲ್ಲಿ ನಿರತರಾಗಿ ಎಂದರು.

     

    ಜಿಲ್ಲೆಯಲ್ಲಿ ಒಟ್ಟು 1277 ಅಂಗನವಾಡಿ ಕೇಂದ್ರಗಳಿದ್ದು, 999 ಸ್ವಂತ ಅಂಗನವಾಡಿ ಕಟ್ಟಡಗಳು, 3 ಪಂಚಾಯಿತಿ ಕಟ್ಟಡಗಳು, ಸಮುದಾಯ ಭವನದಲ್ಲಿನ 53 ಅಂಗನವಾಡಿಗಳು, 83 ಅಂಗನವಾಡಿಗಳು ಶಾಲೆಗಳಲ್ಲಿ ಹಾಗೂ 139 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಾಕಿ ಉಳಿದಿರುವ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕೂಡಲೇ ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

     

    ಕೌಟುಂಬಿಕ ಹಿಂಸೆಗೊಳಗಾದ ಮಹಿಳೆಯರಿಗೆ ಸಕಾಲದಲ್ಲಿ ಆಪ್ತ ಸಮಾಲೋಚನೆ ನಡೆಸಿ ಆತ್ಮಸ್ಥೈರ್ಯ ತುಂಬಬೇಕು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ದೌರ್ಜನ್ಯಗೊಳಗಾದ ಮಹಿಳೆಯರಿಗೆ, ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ನ್ಯಾಯ ಒದಗಿಸಬೇಕು.

     

    ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ 2025-26 ಸಾಲಿನ ಜುಲೈ 2025ರ ಮಾಹೆಯಿಂದ ನವೆಂಬರ್ 2025 ರವೆಗೆ ದಾಖಲಾದ 32 ಪ್ರಕರಣಗಳಲ್ಲಿ 8 ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

     

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಶೈಲ್ ಭೀಮಸೇನ ಭಾಗಡಿ ಅವರು ಮಾತನಾಡಿ, ಸಾಂತ್ವನ ಕೇಂದ್ರಗಳಲ್ಲಿ ಬಗೆಹರಿಸಲಾಗದ ಪ್ರಕರಣಗಳನ್ನು ಸಿಡಿಪಿಒಗಳು ಆದಷ್ಟು ಬೇಗ ಬಗೆಹರಿಸಲು ಪ್ರಯತ್ನ ಮಾಡಬೇಕು, ಇಲ್ಲವಾದಲ್ಲಿ, ಅಂತಹ ಪ್ರಕರಣಗಳನ್ನು ಬಗೆಹರಿಸಲು 15100 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಎಂದರು.

     

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಕ್ಕ ಕೃಷ್ಣ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮುದ್ದಣ್ಣ ಎಂ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ಮಕ್ಕಳ ರಕ್ಷಣಾ ನೀತಿಯನ್ನು ಅನುಷ್ಟಾನ ಮಾಡಿ : ಶಶಿಧರ್ ಕೋಸಂಬೆ

    Vijayamitra.Com  : ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಮಕ್ಕಳ ರಕ್ಷಣಾ ನೀತಿಯನ್ನು ಅನುಷ್ಟಾನ ಮಾಡುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ತಿಳಿಸಿದರು.

    ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಹಾಸ್ಟೆಲ್, ಚನ್ನದೇವಿ ಅಗ್ರಹಾರ ಗ್ರಾಪಂ ಸೇರಿದಂತೆ ವಿವಿಧ ಕಡೆಗಳಿಗೆ ಭೇಟಿ ಪರಿಶೀಲಿಸಿ ಮಾತನಾಡಿದರು ಇಲ್ಲಿನ ಕೊಡಿಗೇಹಳ್ಳಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಈ ವೇಳೆ ವಸತಿ ನಿಲಯಗಳಲ್ಲಿ ಉತ್ತಮ ಸೌಲಭ್ಯವಿದ್ದರೂ ಕೂಡ ಮಕ್ಕಳ ರಕ್ಷಣಾ ನೀತಿ ಅನುಷ್ಟಾನವಾಗದಿರುವುದು ಗಮನಕ್ಕೆ ಬಂದಿದ್ದು, ಆದಷ್ಟು ಬೇಗ ಮಕ್ಕಳ ರಕ್ಷಣಾ ನೀತಿಯನ್ನು ಅನುಷ್ಟಾನ ಮಾಡಲು ಸೂಚನೆ ನೀಡಿದರು. ಇನ್ನೂ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಾಲ್ ಫ್ಯಾನ್ ಅಳವಡಿಸಲು ಸೂಚನೆ ನೀಡಿದ್ದು, ಮಕ್ಕಳ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲು ಸೂಚನೆ ನೀಡಿದರು.

    ಗ್ರಾಮ ಸಭೆ ನಡೆಸಿ

    ದೊಡ್ಡಬಳ್ಳಾಪುರ ತಾಲೂಕಿನ ಚನ್ನದೇವಿ ಅಗ್ರಹಾರ ಗ್ರಾಪಂ ವ್ಯಾಪ್ತಿಯ ಕೋಡಿಪಾಳ್ಯದಲ್ಲಿ ೫೦ ವರ್ಷಕ್ಕೂ ಹೆಚ್ಚಿನ ಸಮಯದಿಂದ ಗುಡಿಸಲಲ್ಲಿ ಮೂಲಸೌಕರ್ಯ ಇಲ್ಲದೇ ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ಹಾಗೂ ಮಕ್ಕಳ ಗ್ರಾಮ ಸಭೆ ಸಮಯದಲ್ಲಿ ಇಲ್ಲಿನ ಮಕ್ಕಳು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬೆಡ್‌ಶೀಟ್ ಸೇರಿದಂತೆ ವಿವಿಧ ಸಮಸ್ಯೆಗಳು ಇರುವ ಬಗ್ಗೆ ಗ್ರಾಪಂಗೆ ಮನವಿ ಮಾಡಿರುವ ಬಗ್ಗೆ ಯುವಸಂಚಲನ ಟ್ರಸ್ಟ್ ಮಕ್ಕಳ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಗಮನಿಸಿದ ಆಯೋಗದ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜನರ ಸಮಸ್ಯೆಗಳನ್ನು ಕೂಡ ಅಲಿಸಿದ ಅವರು ಗ್ರಾಪಂನಲ್ಲಿ ಸಭೆ ನಡೆಸಿ ಶೀಘ್ರವಾಗಿ ಗ್ರಾಮಸಭೆ ನಡೆಸಿ ಅಲ್ಲಿನ ಜನರ ಸಮಸ್ಯೆ, ಮಕ್ಕಳ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆಯನ್ನು ನೀಡಿದರು. ಅಲ್ಲಿನ ಆಧಾರ್ ಕಾರ್ಡ್, ಯುಡಿಐಡಿ ಕಾರ್ಡ್ ಇಲ್ಲದ ಮಕ್ಕಳ ಮಾಹಿತಿ ಪಡೆದು ಅವರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಅಂಗನವಾಡಿ ಸ್ಥಳಾಂತರಿಸಿ

    ದೊಡ್ಡಬಳ್ಳಾಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ಎನ್‌ಜಿಒ ವತಿಯಿಂದ ತೆರೆಯಲಾಗಿರುವ ಅಂಗನವಾಡಿ ಕೇಂದ್ರವನ್ನು ಶೀಘ್ರವಾಗಿ ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿದರು. ಜೊತೆಗೆ ಜಿಲ್ಲೆಯಲ್ಲಿನ ಅಪೌಷ್ಟಿಕ, ತೀವ್ರ ಅಪೌಷ್ಟಿಕ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಅವರಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಬೇಕು ಎಂದು ಸೂಚನೆ ನೀಡಿದರು. 

     

    ಮಕ್ಕಳೊಂದಿಗೆ ಅಧ್ಯಕ್ಷ ಮಾತುಕತೆ

     

    ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ ರಾಜ್ಯಮಕ್ಕಳ ಆಯೋಗದ ಅಧ್ಯಕ್ಷರಾದ ಶಶಿಧರ್ ಕೋಸಂಬೆ ಅವರು ತಾಲೂಕಿನ ಚನ್ನದೇವಿಅಗ್ರಹಾರ ಅಂಗನವಾಡಿ, ಆಸ್ಪತ್ರೆ ಆವರಣದಲ್ಲಿರುವ ಅಂಗನವಾಡಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ವಾರ್ಡ್ನಲ್ಲಿರುವ ಮಕ್ಕಳನ್ನು ಭೇಟಿ ಮಾಡಿ ಆರೋಗ್ಯ, ನೀಡಲಾಗುತ್ತಿರುವ ಊಟ, ಆರೈಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆದರು. ಪೋಷಕರೊಂದಿಗೂ ಕೂಡ ಚರ್ಚೆ ನಡೆಸಿದರು.

    ಈ ವೇಳೆಯಲ್ಲಿ ದೊಡ್ಡಬಳ್ಳಾಪುರ ತಹಶೀಲ್ದಾರ್ ಮಲ್ಲಪ್ಪ, ಇಒ ಮುನಿರಾಜು, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅನಿತಾಲಕ್ಷ್ಮಿ, ತಾಲೂಕು ಆರೋಗ್ಯಾಧಿಕಾರಿ ಡಾ. ಶಾರದಾ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಮೇಶ್, ಯುವಸಂಚಲನಾ ಟ್ರಸ್ಟ್ನ ಅಧ್ಯಕ್ಷ ಚಿದಾನಂದ ಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು, ವಿವಿಧ ಇಲಾಖೆಯ ಸಿಬ್ಬಂದಿ ಹಾಜರಿದ್ದರು.