Blog

  • ಹೇಮಾವತಿ ಪೇಟೆ ಉಪ ಚುನಾವಣೆ :ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ. ಜಿ. ದಿನೇಶ್ ನಾಮಪತ್ರ ಸಲ್ಲಿಕೆ

    ದೊಡ್ಡಬಳ್ಳಾಪುರ: ಇದೆ ತಿಂಗಳ ಡಿ. 21ರಂದು ನಡೆಯಲಿರುವ ನಗರಸಭೆಯ ಹೇಮಾವತಿ ಪೇಟೆ 21ನೇ ವಾರ್ಡಿನ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ. ಜಿ. ದಿನೇಶ್ ಸೋಮವಾರ ನಾಮಪತ್ರ ಸಲ್ಲಿಸಿದರು.

     

    ಹೇಮಾವತಿ ಪೇಟೆಯ ನಾಗರಕಲ್ಲು ದೇವಾಲಯದಲ್ಲಿ ಪೂಜೆ ಸಲ್ಲಿಸಿದ ದಿನೇಶ್ ಅಲ್ಲಿಂದ ಕಾಂಗ್ರೆಸ್ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ನಗರಸಭೆಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಿದರು.

     

    ಈ ವೇಳೆ ಸುದ್ಧಿಗಾರ ರೊಂದಿಗೆ ಮಾತನಾಡಿ ಹೇಮಾವತಿ ಪೇಟೆ ವಾರ್ಡಿನಲ್ಲಿ ನಾನು ಚಿರಪರಿಚಿತನಾಗಿದ್ದು, ಈ ಹಿಂದೆ ನಮ್ಮ ತಂದೆ ಕೆ. ಸಿ. ಗೋಪಾಲಕೃಷ್ಣರವರು ಹಾಗೂ ನನ್ನ ಸೋದರ ರಘುರಾಮ್ ಸದಸ್ಯರಾಗಿ ಜನಪರ ಕೆಲಸ ಮಾಡಿದ್ದಾರೆ. ಜೊತೆಗೆ ಕಳೆದ ಚುನಾವಣೆಯಲ್ಲಿ ನಾನು ಸ್ಪರ್ದಿಸಿ ಕೆಲವೇ ಮತಗಳ ಅಂತರದಿಂದ ಪರಾಭವ ಗೊಂಡಿದ್ದೆ. ಅಂದಿನಿಂದ ಇಂದಿನವರೆಗೂ ವಾರ್ಡಿನ ಮತದಾರರ ಜೊತೆ ನಿಕಟ ಸಂಪರ್ಕ ಹೊಂದಿದ್ದೇನೆ. ಈ ಕಾರಣಗಳಿಂದಾಗಿ ವಾರ್ಡಿನ ನಾಗರಿಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಆದ್ದರಿಂದ ಈ ಬಾರಿ ನಾನು ಗೆಲ್ಲುವ ವಿಶ್ವಾಸವಿದೆ ಎಂದು ದಿನೇಶ್ ಹೇಳಿದರು.

     

    ನಾಮಪತ್ರ ಸಲ್ಲಿಕೆ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷ ಕೆ. ಪಿ. ಜಗನ್ನಾಥ್, ನೇಕಾರ ಮುಖಂಡ, ಕೆ. ಪಿ. ಸಿ. ಸಿ. ಸದಸ್ಯ ಬಿ. ಜಿ. ಹೇಮಂತರಾಜ್, ಡಿ. ಪಿ. ಎ. ಸದಸ್ಯ ಅಂಜನ್ ಮೂರ್ತಿ, ನಗರಸಭಾ ಸದಸ್ಯರಾದ ಶಿವಶಂಕರ್ (ಶಂಕ್ರಿ ), ಕಾಂತರಾಜ್ ಮುಖಂಡರಾದ ಮುನಿರಾಜು ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

  • ದೊಡ್ಡಬೆಳವಂಗಲ ಪಂಚಾಯತಿ ಅಧಿಕಾರಿಗಳ ವಿರುದ್ಧ ರಾಂಪುರ ಗ್ರಾಮಸ್ಥರ ಪ್ರತಿಭಟನೆ : ಸರ್ಕಾರಿ ಜಮೀನು ಉಳಿಸುವಂತೆ ಗ್ರಾಮಸ್ಥರ ಅಗ್ರಹ

    ದೊಡ್ಡಬಳ್ಳಾಪುರ : ನಿರ್ಗತಿಕ ಕಡು ಬಡವರಿಗಾಗಿ ಆಶ್ರಯ ಯೋಜನೆ ಅಡಿಯಲ್ಲಿ ಮೀಸಲಿಟ್ಟಿರುವ ಸ್ಥಳದಲ್ಲಿ ಪ್ರಭಾವಿಗಳು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಈ ಕುರಿತು ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಅನಧಿಕೃತವಾಗಿ ನಿರ್ಮಾಣ ಮಾಡಲಾಗುತ್ತಿರುವ ಕಟ್ಟಡವನ್ನು ಈ ಕೂಡಲೇ ಅಧಿಕಾರಿಗಳು ನಿಲ್ಲಿಸಬೇಕು ಎಂದು ಆಗ್ರಹಿಸಿ ರಾಂಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

    ತಾಲೂಕಿನ ದೊಡ್ಡ ಬೆಳವಂಗಲ ಹೋಬಳಿಯ ರಾಂಪುರ ಗ್ರಾಮದಲ್ಲಿ ಸರ್ವೇ ನಂಬರ್ 129ರಲ್ಲಿ ಒಟ್ಟು ಮೂರು ಎಕರೆ ಒಂಬತ್ತು (3.9)ಗುಂಟೆ ಜಾಗವಿದೆ ಸದರಿ ಜಾಗದಲ್ಲಿ ಎರಡು ಎಕರೆ ಪ್ರದೇಶವನ್ನು ಆಶ್ರಯ ಯೋಜನೆಗೆ ಮೀಸಲಿಡಲಾಗಿದ್ದು ಈ ಸಂಬಂಧ ಜಿಲ್ಲಾಧಿಕಾರಿಗಳು ಆದೇಶವನ್ನು ಕೂಡ ಮಾಡಿದ್ದಾರೆ. ಆದರೆ ಉಳಿದ ಒಂದು ಎಕರೆ ಒಂಬತ್ತು (1.9)ಗುಂಟೆ ಜಾಗವನ್ನು ತುರೆಮಂದಿ ಎಂದು ನಿಗದಿ ಮಾಡಲಾಗಿದ್ದು ಸದರಿ ಜಾಗದಲ್ಲಿ ಬಲಾಢ್ಯ ಪ್ರಭಾವಿಗಳು ಮನೆಗೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಕೋರಿ ಸ್ಥಳೀಯ ಪಂಚಾಯಿತಿ ಕಚೇರಿಗೆ ಹಲವಾರು ಬಾರಿ ಅರ್ಜಿ ಸಲ್ಲಿಸಿದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ ವಹಿಸಿದ್ದಾರೆ. ನಮ್ಮ ಗ್ರಾಮಕ್ಕೆ ಸರ್ಕಾರಿ ಜಾಗವನ್ನು ಉಳಿಸಿಕೊಡಬೇಕು ಎಂದು ರಾಂಪುರ ಗ್ರಾಮಸ್ಥರು ಅಗ್ರಹಿಸಿದರು.

     

    ಸ್ಥಳೀಯ ಗ್ರಾಮಸ್ಥ ಆರ್ ಜಿ ರುದ್ರೇಗೌಡ ಮಾತನಾಡಿ ನಮ್ಮ ಗ್ರಾಮದ ಸೌಲಭ್ಯಕ್ಕಾಗಿ ಇರುವ ತುರೆಮಂದಿ ಜಮೀನಿನಲ್ಲಿ ಪ್ರಭಾವಿಗಳು ಮನೆ ಕಟ್ಟಲು ಮುಂದಾಗಿದ್ದಾರೆ . ಸರ್ಕಾರಿ ಜಾಗವನ್ನು ಉಳಿಸಬೇಕಿರುವ ಪಂಚಾಯಿತಿ ಅಧಿಕಾರಿಗಳಿಗೆ ನಾವು ಎಷ್ಟೇ ಮನವಿ ಸಲ್ಲಿಸಿ ಅರ್ಜಿ ಕೊಟ್ಟರು ಈವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿಲ್ಲ ಅಧಿಕಾರದಲ್ಲಿರುವ ಬಲಾಡ್ಯರಿಗೆ ಅಧಿಕಾರಿಗಳು ಬೆಂಬಲಿಸುತ್ತಿದ್ದಾರೆ ಎಂದು ಮೇಲ್ನೋಟಗೆ ಕಾಣಿಸುತ್ತಿದೆ ಈ ನಡವಳಿಕೆಯನ್ನು ಖಂಡಿಸಿ ಇಂದು ರಾಂಪುರ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದೇವೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

     

    ದೊಡ್ಡಬೆಳವಂಗಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದರ್ಶ್ ಕುಮಾರ್ ಗ್ರಾಮಸ್ಥರ ಮಾತಿಗೆ ಕಿಮ್ಮತ್ತು ಬೆಲೆ ಕೊಡುವುದಿಲ್ಲ ಗ್ರಾಮಸ್ಥರು ಯಾವುದೇ ಅರ್ಜಿ ಕೊಟ್ಟರು ಮನವಿ ಮಾಡಿದರು ಕ್ಯಾರೆ ಎನ್ನುತ್ತಿಲ್ಲ. ಗ್ರಾಮ ನೈರ್ಮಲ್ಯ ಸ್ವಚ್ಛತೆಗೆ ಆದ್ಯತೆ ನೀಡಬೇಕು ಆದರೆ ನಮ್ಮ ಗ್ರಾಮಕ್ಕೆ ಕಸದ ಗಾಡಿ ಬಂದು ಒಂದು ತಿಂಗಳಾಗಿದೆ ಕುಡಿಯುವ ನೀರು ಸ್ಥಗಿತಗೊಂಡು ಒಂದು ವಾರ ಆಗಿದೆ ಅಲ್ಲದೆ ಗ್ರಾಮದಲ್ಲಿ ಇಷ್ಟೆಲ್ಲ ಸಮಸ್ಯೆಯಾಗುತ್ತಿದ್ದರು ಯಾರೊಬ್ಬ ಅಧಿಕಾರಿಯು ಗ್ರಾಮಕ್ಕೆ ಭೇಟಿ ನೀಡಿಲ್ಲ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸರಗೊಂಡು ನಮ್ಮ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್ ರಾಜೀನಾಮೆ ನೀಡಿದ್ದಾರೆ. ಇನ್ನಾದರೂ ಪಂಚಾಯಿತಿ ಅಧಿಕಾರಿಗಳು ಕಾರ್ಯಯೋನ್ಮುಖರಾಗಿ ನಮ್ಮ ಗ್ರಾಮಗಳ ಕಡೆ ಗಮನ ಹರಿಸಬೇಕು ಎಂದು ಗ್ರಾಮಸ್ಥರಾದ ಜಯರಾಮ್ ತಿಳಿಸಿದರು.

    ಈ ರಾಂಪುರ ವ್ಯಾಪ್ತಿಯಲ್ಲಿ ವಡ್ಡರ ಪಾಳ್ಯ, ವಲೇರಹಳ್ಳಿ, ರಾಂಪುರ, ರಾಂಪುರ ಕಾಲೋನಿ, ಭಕ್ತರಹಳ್ಳಿ ಗ್ರಾಮಗಳು ಒಳಗೊಂಡಿದ್ದು, ಗ್ರಾಮಗಳಲ್ಲಿ ಸಮಸ್ಯೆಗಳು ಸಾಕಷ್ಟಿವೆ ಅಧಿಕಾರದ ಶಕ್ತಿ ಇರುವ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷತೆಯಿಂದ ಯಾವುದೇ ಸಮಸ್ಯೆ ಬಗ್ಗೆಹರಿಯುತ್ತಿಲ್ಲ ಗ್ರಾಮ ಪಂಚಾಯತಿ ಸದಸ್ಯರಾಗಿ ಸಾರ್ವಜನಿಕರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಮನನೊಂದು ನನ್ನ ಹುದ್ದೆಗೆ ರಾಜಿನಾಮೆ ನೀಡಿದ್ದೇನೆ ಆದರೆ ಈವರೆಗೂ ನನ್ನ ರಾಜೀನಾಮೆಗೆ ಕಾರಣವೇನು ಎಂಬ ವಿಚಾರವಾಗಿ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ, ಸ್ಥಳೀಯವಾಗಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಕೇಳಿದ್ದು ಈವರೆಗೂ ನೀಡಿಲ್ಲ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ಇನ್ನಾದರೂ ಚಿಂತಿಸಲಿ ಎಂದು ಅಗ್ರಹಿಸಿದರು.

     

    ಈ ಸಂದರ್ಭದಲ್ಲಿ ಪ್ರಾಂತ್ಯ ರೈತ ಸಂಘದ ಮುಖಂಡರಾದ ಪ್ರಭಾ ಬೆಳವಂಗಲ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಶಿಧರ್ , ವಾಲ್ಮಿಕಿ ಸಂಘದ ಅಧ್ಯಕ್ಷ ಶಿವಕುಮಾರ್ ಮುಖಂಡರಾದ ಆಂಜಿನಪ್ಪ ಧನಂಜಯ್, ರಾಮಣ್ಣ,ರಾಂಪುರ ಹಾಗೂ ಕಾಲೋನಿಯ ಗ್ರಾಮಸ್ಥರು ಹಾಜರಿದ್ದರು.

  • ಅಂಬೇಡ್ಕರ್ ನಗರ ( 16 ನೇ ವಾರ್ಡ್) ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಂಜುಳಾ ನಾಮಪತ್ರ ಸಲ್ಲಿಕೆ

    ದೊಡ್ಡಬಳ್ಳಾಪುರ ::ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಗೆ ಅಂಬೇಡ್ಕರ್ ನಗರ ( 16 ನೇ ವಾರ್ಡ್)ನ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಂಜುಳಾ ಶನಿವಾರ (ಡಿ. 06) ನಾಮಪತ್ರ ಸಲ್ಲಿಸಿದರು.

    ಈ ವೇಳೆ ಮಾತನಾಡಿದ ಅವರು ನಮ್ಮ ಅಂಬೇಡ್ಕರ್ ನಗರದ ವಿಚಾರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕಂಡಿದ್ದೇನೆ . ನನ್ನ ಯೋಜನೆಗಳನ್ನು ಸಾಕಾರಗೊಳಿಸಲು ಇದೊಂದು ಉತ್ತಮ ಅವಕಾಶ ಎಂದು ಭಾವಿಸುತ್ತೇನೆ. ಸ್ಥಳೀಯ ಮತದಾರರ ವಿಶ್ವಾಸದಿಂದ ತಾಲೂಕಿನ ಯುವ ಶಾಸಕರಾದ ಧೀರಜ್ ಮುನಿರಾಜುರವರ ಆಶೀರ್ವಾದ ಪಡೆದು ತಾಲೂಕು ಹಾಗೂ ನಗರ ಮಟ್ಟದ ಎಲ್ಲಾ ಮುಖಂಡರ ಸಲಹೆ ಮೇರೆಗೆ ಇಂದು ಬಾಶೆಟ್ಟಿಹಳ್ಳಿ ಪಂಚಾಯತಿ ವ್ಯಾಪ್ತಿಯ 16ನೇ ವಾರ್ಡ್ ನ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಉತ್ತಮ ಸೇವೆ ಸಲ್ಲಿಸಲು ಮಾನ್ಯ ಮತದಾರರು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.

    ಈ ವೇಳೆ ಮುಖಂಡರಾದ ಮುನಿರಾಜಪ್ಪ,ಸೇರಿದಂತೆ ಇತರರು ಹಾಜರಿದ್ದರು.

  • ಡಿಸೆಂಬರ್ 07 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ

    2025 ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ರಾಜ್ಯಾದ್ಯಂತ ಡಿಸೆಂಬರ್ 07 ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುವುದು. ಜಿಲ್ಲೆಯಲ್ಲಿ 06 ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷೆಯನ್ನು ಪಾರದರ್ಶಕವಾಗಿ ಬೆಳಿಗ್ಗೆ 7 ರಿಂದ 9 ಗಂಟೆವರೆಗೆ ತಪಾಸಣೆ ಮತ್ತು ಮುಖ ಚಹರೆ ತಪಾಸಣೆಯನ್ನು ಮಾಡಲಾಗುವುದು.

    ಈ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಹೊಂದಿದ್ದು, ಮೊದಲ ಪತ್ರಿಕೆಯು ಬೆಳಿಗ್ಗೆ 9:30 ರಿಂದ 12 ಗಂಟೆಯವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಡಶಾಲ ವಿಭಾಗ) ದೊಡ್ಡಬಳ್ಳಾಪುರ ಹಾಗೂ ಶ್ರೀ ದೇವರಾಜು ಅರಸು ಪದವಿ ಪೂರ್ವ ಕಾಲೇಜು (ಪ್ರೌಡಶಾಲ ವಿಭಾಗ) ಕೊಡಿಗೇಹಳ್ಳಿ ಯಲ್ಲಿ ನಡೆಸಲಾಗುತ್ತದೆ.

    ಎರಡನೇ ಪತ್ರಿಕೆಯು ಮಧ್ಯಾಹ್ನ 2 ರಿಂದ ಸಂಜೆ 4:30 ವರೆಗೆ
    ಕೊಂಗಡಿಯಪ್ಪ ಪ್ರೌಡಶಾಲೆ, ಸರ್ಕಾರಿ ಪ್ರೌಡಶಾಲೆ ಅರಳು ಮಲ್ಲಿಗೆ ಬಾಗಿಲು ದೊಡ್ಡಬಳ್ಳಾಪುರ, ಕಾರ್ಮೆಲ್ ಜ್ಯೋತಿ ಹೈಸ್ಕೂಲ್ ದೊಡ್ಡಬಳ್ಳಾಪುರ, ಎಂ.ಎ.ಬಿ.ಎಲ್ ಹೈಸ್ಕೂಲ್ ಇಲ್ಲಿ ನಡೆಸಲಾಗುವುದು. ಈ ಬಾರಿ ಪತ್ರಿಕೆ-1 ಕ್ಕೆ 544 ಹಾಗೂ ಪತ್ರಿಕೆ-2 ಕ್ಕೆ 1719 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಂಜಿನಪ್ಪ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

  • ಸೂರತ್‌ ಸೀರೆ ನಿಷೇಧಕ್ಕೆ ತಜ್ಞರ ಅಭಿಪ್ರಾಯ ಸಂಗ್ರಹ : ಸಚಿವರ ಭರವಸೆ :: ನೇಕಾರರ ಉಳಿವಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ ನೇಕಾರರು

    ದೊಡ್ಡಬಳ್ಳಾಪುರ ಸೀರೆಗೆ ಜಿಐ ಟ್ಯಾಗ್‌ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದು, ಸೂರತ್‌ ಸೀರೆಗಳ ನಿಷೇದಕ್ಕೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

    ವಿಕಾಸಸೌಧದಲ್ಲಿ ಶುಕ್ರವಾರ ಶಾಸಕ ಧೀರಜ್‌ ಮುನಿರಾಜು ನೇತೃತ್ವದಲ್ಲಿ ಆಗಮಿಸಿದ್ದ ದೊಡ್ಡಬಳ್ಳಾಪುರ ನೇಕಾರರ ಸಭೆ ನಡೆಸಿದ ಸಚಿವರು, ಪವರ್‌ಲೂಮ್‌ ರಿಸರ್‌ವೇಷನ್‌ ಆಕ್ಟ್‌ ತಿದ್ದುದಪಡಿಗೆ ಕೇಂದ್ರ ಸರ್ಕಾರದ ಬಳಿ ನಿಯೋಗ ತೆರಳಲಾಗುವುದು ಎಂದು ಭರವಸೆ ನೀಡಿದರು.

    ರಾಜ್ಯ ಸರ್ಕಾರದ ಇತಿಮಿತಿಯಲ್ಲಿ ಸಾಧ್ಯವಿರುವ ನೆರವು ನೀಡಲಾಗುವುದು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ನಿಯೋಗ ತೆರಳಿ ಒತ್ತಡ ತರಲಾಗುವುದು ಎಂದು ಹೇಳಿದರು.

    ದೊಡ್ಡಬಳ್ಳಾಪುರಕ್ಕೆ ಬರುವ ಸೂರತ್‌ ಸೀರೆಗಳನ್ನು ನಿಷೇಧ ಮಾಡಬೇಕು ಎಂಬ ಬೇಡಿಕೆ ಸ್ಥಳೀಯ ನೇಕಾರರ ಹಿತರಕ್ಷಣೆ ದೃಷ್ಟಿಯಿಂದ ನಿಷೇದ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ? ನಿಷೇಧ ಮಾಡಬಹುದೇ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹ ಮಾಡಲಿದ್ದು, ಅವಕಾಶವಿದ್ದರೆ ಖಂಡಿತ ನಿಷೇಧ ಮಾಡಲಾಗುವುದು ಎಂದು ಭರವಸೆ ನೀಡಿದರು.

    ದೊಡ್ಡಬಳ್ಳಾಪುರದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮಳಿಗೆಗಳ ನಿರ್ಮಾಣ ಹಾಗೂ ನೇಕಾರರ ಭವನ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದು, ಈ ಯೋಜನೆಗೆ ಜಾಗ ಗುರುತಿಸಲಾಗುವುದು ಎಂದು ಹೇಳಿದರು.

    ಇಂದಿನ ದಿನಗಳಲ್ಲಿ ಅಧುನೀಕರಣ ಅನಿವಾರ್ಯವಾಗಿದ್ದು, ಕೈಮಗ್ಗ ಹೊಂದಿರುವವರು ರೇಪಿಯರ್‌ ಮಗ್ಗಕ್ಕೆ ಪರಿವರ್ತನೆ ಹೊಂದಲು ಬಯಸಿದರೆ ಸಬ್ಸಿಡಿ ಕೊಡುವ ಪ್ರಯತ್ನ ಮಾಡುತ್ತೇವೆ. ಆದರೆ ದೊಡ್ಡಬಳ್ಳಾಪುರದಲ್ಲಿರುವ ೨೫೦೦ ನೇಕಾರರಿಗೆ ಏಕಕಾಲಕ್ಕೆ ಸಬ್ಸಿಡಿ ಕೊಡುವುದು ಕಷ್ಟವಾಗಬಹುದು. ಹಂತ ಹಂತವಾಗಿ ರೇಪಿಯರ್‌ ಮಗ್ಗಕ್ಕೆ ಬದಲಾವಣೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.ಮಗ್ಗಗಳಿಗೆ ವಿದ್ಯುತ್‌ ಸಬ್ಸಿಡಿ ಕೊಡಬೇಕು ಎಂಬ ಬೇಡಿಕೆ ಬಂದ ಕಾರಣದಿಂದಲೇ ರಾಜ್ಯ ಸರ್ಕಾರ ೧೦ ಎಚ್‌ಪಿವರೆಗಿನ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್‌ ಪೂರೈಕೆ ಮಾಡುತ್ತಿದೆ.

    ಶಾಸಕ ಧೀರಜ್‌ ಮುನಿರಾಜು ಮಾತನಾಡಿ, ಸೂರತ್‌ ಸೀರೆಗಳಿಂದಲೇ ದೊಡ್ಡಬಳ್ಳಾಪುರ ನೇಕಾರರಿಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಸೂರತ್‌ ಸೀರೆಗಳನ್ನು ನಿಷೇಧಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರೇಪಿಯರ್‌ ಮಗ್ಗಗಳಲ್ಲಿ ಸೀರೆಗಳನ್ನು ನೇಯಲು ಅವಕಾಶ ಇಲ್ಲ. ಆರ್‌. ಎಲ್‌. ಜಾಲಪ್ಪ ಅವರು ಜವಳಿ ಸಚಿವರಾಗಿದ್ದ ಸಂದರ್ಭದಲ್ಲಿ ಕಾನೂನು ರೂಪಿಸಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.

    ದೊಡ್ಡಬಳ್ಳಾಪುರ ಟೆಕ್ಸ್‌ಟೈಲ್‌ ವೀವರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ನರಸಿಂಹರಾವ್‌ ಅವರು, ದೊಡ್ಡಬಳ್ಳಾಪುರದ ಸೀರೆಗಳ ಉತ್ಪಾದನಾ ವೆಚ್ಚ ೧೫೦೦ ರೂ. ಇದ್ದರೆ ಸೂರತ್‌ ಸೀರೆಗಳ ಉತ್ಪಾದನಾ ವೆಚ್ಚ ೬೦೦ ರೂ.ಗಳಿಂದ ೭೦೦ ರೂ.ಗಳ ವರೆಗೆ ಇದೆ. ಸೂರತ್‌ ಸೀರೆಗಳು ಗರಿಷ್ಠ ಪ್ರಮಾಣದಲ್ಲಿ ಬರುತ್ತಿರುವುದರಿಂದ ದೊಡ್ಡಬಳ್ಳಾಪುರ ನೇಕಾರರ ಸ್ಥಿತಿ ಶೋಚನೀಯವಾಗಿದೆ. ಈ ನೇಕಾರರ ಉಳಿವಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

    ಸೂರತ್‌ ಸೀರೆಗಳನ್ನು ನಿಷೇಧ ಮಾಡಲು ಅವಕಾಶ ಇದೆ. ಸೂರತ್‌ ಸೀರೆಗಳ ಲಾರಿಗಳನ್ನು ತಡೆದು ಪ್ರತಿಭಟನೆ ಮಾಡುತ್ತೇವೆ. ಜವಳಿ ಇಲಾಖೆಗೆ ಮಾಹಿತಿ ನೀಡಲಿದ್ದು, ಅಧಿಕಾರಿಗಳು ಆಗಮಿಸಿ ಈ ಸೀರೆಗಳನ್ನು ವಶಕ್ಕೆ ಪಡೆಯಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ನೇಕಾರರು ಆಗ್ರಹಪಡಿಸಿದರು.

    ಸಚಿವ ಶಿವಾನಂದ ಪಾಟೀಲ ಅವರು ನೆರವಿಗೆ ಬರುವುದಾಗಿ ಭರವಸೆ ನೀಡಿದ್ದಾರೆ. ಕಾಯ್ದೆ ತಿದ್ದುಪಡಿಗೆ ಅವರ ಸಲಹೆಯಂತೆ ಕೇಂದ್ರದ ಬಳಿ ನಿಯೋಗ ತೆರಳುವುದು ಸೂಕ್ತ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು. ಜವಳಿ ಇಲಾಖೆ ಆಯುಕ್ತ ಕ್ಯಾಪ್ಷನ್‌ ರಾಜೇಂದ್ರ, ಜವಳಿ ಇಲಾಖೆ ಅಧಿಕಾರಿಗಳಾದ ಪ್ರಕಾಶ್‌, ಯೋಗೇಶ್‌ ಮತ್ತಿತರು ಉಪಸ್ಥಿತರಿದ್ದರು.

  • ದಾನಿಗಳ ನೆರವಿನಿಂದ ನಿರ್ಗತಿಕ ಕಡುಬಡವರಿಗೆ ವಯೋವೃದ್ದರಿಗೆ ಹೊದಿಕೆ ಹಾಗೂ ಬಟ್ಟೆಗಳ ವಿತರಣೆ

     

    ದೊಡ್ಡಬಳ್ಳಾಪುರ : 2082 ದಿನದ ದಾನಿಗಳಾಗಿ ಸಮಾಜಸೇವಕರಾದ ತಾವರೆ ಕೆರೆ ಸೋಮಶೇಖರ್ ರವರು ಜಯಲಕ್ಷ್ಮೀ ಇವರ ಹುಟ್ಟು ಹಬ್ಬದ ಅಂಗವಾಗಿ ನಿರ್ಗತಿಕ ಕಡುಬಡವರಿಗೆ , ವೃದ್ಧರಿಗೆ, ಅನ್ನ ದಾಸೋಹ, ಹೊದಿಕೆ ವಿತರಣೆ, ಬಟ್ಟೆ ವಿತರಣೆ ಮಾಡುವ ಮೂಲಕ ತಮ್ಮ ವಿಶೇಷ ದಿನವನ್ನು ನಿರಂತರ ಅನ್ನದಾಸರ ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸಿದರು.

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಕಾರಣಾಂತರಗಳಿಂದ ಸಮಾಜ ಸೇವಕರಾದ ಸೋಮಶೇಖರ್ ರವರು ಬರಲು ಸಾಧ್ಯವಾಗಲಿಲ್ಲ , ಆದರೆ ತಾವು ನಿಗದಿಪಡಿಸಿದ ಕಾರ್ಯಕ್ರಮವು ನಿಲ್ಲಬಾರದು ಎಂದು ದೂರವಾಣಿ ಮೂಲಕ ನಮ್ಮನ್ನು ಸಂಪರ್ಕಿಸಿ ಕಾರ್ಯಕ್ರಮವನ್ನು ಅವರ ಪರವಾಗಿ ಅನ್ನದಾಸೋಹ ಸಮಿತಿ ನಡೆಸುವಂತೆ ತಿಳಿಸಿದ ಹಿನ್ನಲೆ ಅವರ ವಿಶೇಷ ದಿನವನ್ನು ನಿರಂತರ ಅನ್ನದಾಸೋಹ ಸಮಿತಿ ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಿದೆ .

    ಸಾವಿರಾರು ರೂಪಾಯಿಗಳನ್ನು ದುಂಡು ವೆಚ್ಚ ಮಾಡುವ ಮೂಲಕ ಹುಟ್ಟುಹಬ್ಬಗಳನ್ನು ವಿಶೇಷ ದಿನಗಳನ್ನು ಆಚರಿಸಿಕೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ತಮ್ಮ ವಿಶೇಷ ದಿನವನ್ನು ನಿರ್ಗತಿಕ ಕಡುಬಡವರಿಗೆ, ವೃದ್ಧರಿಗೆ, ಶಾಲಾ ಮಕ್ಕಳಿಗೆ ಮೀಸಲಿಟ್ಟು ವಿಶೇಷ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಶ್ರೀಮತಿ ಜಯಲಕ್ಷ್ಮಿ ಅವರ ಹುಟ್ಟುಹಬ್ಬವನ್ನು ಆಚರಿಸುವುದು ಶ್ಲಾಘನೀಯ ಸಂಗತಿ . ಅವರ ಸೇವಾಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ . ಅವರ ಉತ್ತಮ ಸೇವೆ ಸಮಾಜಕ್ಕೆ ಮತ್ತಷ್ಟು ಲಭಿಸಲಿ ಎಂದು ಶುಭ ಹಾರೈಸುತ್ತೇವೆ ಎಂದರು.

    ಈ ವೇಳೆ ನಿರಂತರ ಅನ್ನದಾಸೋಹ ಸಮಿತಿಯ ಎಲ್ಲ ಪದಾಧಿಕಾರಿಗಳು ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.

  • ನಿಮ್ಮ ವಿಶೇಷ ದಿನಗಳನ್ನು ನಿರಂತರ ಅನ್ನದಾಸೋಹ ಸಮಿತಿಯೋಟ್ಟಿಗೆ ಆಚರಿಸಿ – ಹೆಚ್. ರಾಜು

    ದೊಡ್ಡಬಳ್ಳಾಪುರ : ತಮ್ಮ 30 ವರ್ಷದ ಹುಟ್ಟುಹಬ್ಬದವನ್ನು ನೂರಾರು ನಿರ್ಗತಿಕ ಕಡುಬಡವರಿಗೆ ವಯೋವೃದ್ದರಿಗೆ ಆಹಾರ ವಿತರಣೆ ಮಾಡುವ ಮೂಲಕ ದರ್ಗಾ ಜೋಗಿ ಹಳ್ಳಿಯ ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ಎಚ್. ರಾಜು ಆಚರಿಸಿಕೊಂಡರು.

    ಈ ವೇಳೆ ಮಾತನಾಡಿದ ಅವರು ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಈ ರೀತಿ ಆಚರಿಸಿಕೊಂಡಿರುವುದು ಅತ್ಯಂತ ಸಂತೋಷ ತಂದಿದೆ . ಮುಂದೆ ನನ್ನ ಹಿತೈಷಿಗಳ ಸಂಬಂಧಿಕರ ಹಾಗೂ ಸ್ನೇಹಿತರ ಹುಟ್ಟುಹಬ್ಬವನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸಲು ಬಯಸುತ್ತೇನೆ.

    ಇಲ್ಲಿ ನಮ್ಮ ಹಣ ಪೋಲಾಗುವುದಿಲ್ಲ ಜೊತೆಗೆ ನಮ್ಮ ವಿಶೇಷ ದಿನವನ್ನು ನೂರಾರು ಹಸಿದ ಹೊಟ್ಟೆಗಳನ್ನು ತುಂಬಿಸುವ ಮೂಲಕ ಆಚರಿಸಿಕೊಳ್ಳುವುದು ವಿಶೇಷವೆನಿಸುತ್ತದೆ. ಅಲ್ಲದೇ ನಮ್ಮ ಸಂಭ್ರಮ ಕೇವಲ ಸಂಬ್ರಮವಾಗಿ ಉಳಿಯದೆ ಸಮಾಜಕ್ಕೆ ನಮ್ಮ ಕೈಲಾದ ಸೇವೆಯನ್ನು ಅನ್ನದಾಸೋಹ ಮಾಡುವ ಮೂಲಕ ನೀಡುವಂತಾಗುತ್ತದೆ ಎಂದರು.

    ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ರಾಜ್ಯಧ್ಯಕ್ಷ ಎಚ್ ರಾಘವೇಂದ್ರ ಮಾತನಾಡಿ ನಾವು ನಮ್ಮ ಕುಟುಂಬದ ಹಾಗೂ ಆಪ್ತ ಬಳಗದ ಎಲ್ಲ ವಿಶೇಷ ದಿನಗಳನ್ನು ಮಲ್ಲೇಶ್ ಮತ್ತು ತಂಡ ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಆಚರಿಸಿಕೊಳ್ಳುವುದು ವಿಶೇಷ ಅಂತೆಯೇ ಇಂದು ನಮ್ಮ ತಮ್ಮ ಎಚ್ ರಾಜುರವರ ಹುಟ್ಟುಹಬ್ಬವನ್ನು ಅನ್ನದಾಸೋಹ ನಡೆಸುವ ಮೂಲಕ ಆಚರಿಸಿಕೊಂಡಿರುವುದು ಸಂತಸ ತಂದಿದೆ ಎಂದರು.

     

    ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ಜಿಲ್ಲಾಧ್ಯಕ್ಷ ಎಚ್ ಶಿವಕುಮಾರ್ ಮಾತನಾಡಿ ಪ್ರತಿ ಬಾರಿ ನಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಮನಸ್ಸಿಗೆ ಉಲ್ಲಾಸ ಮತ್ತು ಸಂತೋಷ ಸಿಗುತ್ತದೆ ನಮ್ಮ ಸೇವೆಯಿಂದ ನೂರಾರು ಕುಟುಂಬಗಳು ಹಸಿವನ್ನು ನೀಗಿಸಿಕೊಳ್ಳುತ್ತವೆ ಇಂತಹ ಉತ್ತಮ ಅವಕಾಶವನ್ನು ಕಲ್ಪಿಸಿದ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ. ಮುಂದಿನ ದಿನಗಳಲ್ಲಿ ನಮ್ಮ ಪ್ರಚಾರ ಸಂಸ್ಥೆಯ ವತಿಯಿಂದ ನಿರಂತರ ಅನ್ನದಾಸೋಹ ಸಮಿತಿಗೆ ವಿಶೇಷ ನೆರವು ಕಲ್ಪಿಸಲಾಗುವುದು ಎಂದರು.

    ಸ್ಥಳೀಯ ಮುಖಂಡರಾದ ಎಚ್. ಮಂಜುನಾಥ್ ಮಾತನಾಡಿ ಕೋವಿಡ್ ಸಮಯದಲ್ಲಿ ಜನರ ಹಸಿವನ್ನು ನೀಗಿಸಲು ಪ್ರಾರಂಭಗೊಂಡ ಈ ನಿರಂತರ ಅನ್ನದಾಸೋಹ ಸಮಿತಿಯು ಇಂದಿಗೆ 2081ನೇ ದಿನಕ್ಕೆ ಕಾಲಿಟ್ಟಿದ್ದು, ಮಲ್ಲೇಶ್ ಮತ್ತು ತಂಡ ನಿರಂತರ ದಾನಿಗಳ ಸಂಪರ್ಕದಿಂದಾಗಿ ಯಾವುದೇ ಅಡೆತಡೆಗಳಿಲ್ಲದೆ ಈ ಅನ್ನದಾಸೋಹ ಕಾರ್ಯಕ್ರಮವನ್ನು ಸದಾ ನೆಡೆಸಿಕೊಂಡು ಬರುತ್ತಿದೆ ಮಲ್ಲೇಶ್ ರವರ ಈ ಕಾರ್ಯಕ್ಕೆ ನಾವು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ದಿನೇ ದಿನೇ ನಮ್ಮಲ್ಲಿ ಆಹಾರ ಬಯಸಿ ಬರುವ ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಿದ್ದು ನಮಗೆ ದಾನಿಗಳ ನೆರವಿನ ಅವಶ್ಯಕತೆ ಇದೆ. ನೀಡಲು ಇಚ್ಛೆ ಇರುವಂತಹ ವ್ಯಕ್ತಿಗಳು ತಮ್ಮ ವಿಶೇಷ ದಿನಗಳನ್ನು ನಮ್ಮ ಸಮಿತಿಯೊಟ್ಟಿಗೆ ಆಚರಿಸುವ ಮೂಲಕ ನೂರಾರು ಜನರ ಹಸಿವು ನೀಗಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

  • ನಗರದ ಡಿ ಕ್ರಾಸ್ ಬಳಿ ಯುವಕನ ಕೊಲೆ

    ದೊಡ್ಡಬಳ್ಳಾಪುರ : ಯುವಕನನ್ನು ಮಾರಾಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿರುವ ಘಟನೆ ನಗರದ ಡಿ ಕ್ರಾಸ್ ಬಳಿ ಸಂಭವಿಸಿದೆ.

     

    ಇಂದು ರಾತ್ರಿ ಸುಮಾರು 10 :20ರ ಸಮಯದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಯುವಕನ ಕೊಲೆಯಾಗಿದೆ, ಮೃತ ಯುವಕ ಜಾಲಪ್ಪ ಕಾಲೇಜ್ ಬಳಿಯ ನಿವಾಸಿ ಎಂದು ತಿಳಿದು ಬಂದಿದೆ.

     

     

    ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಅಂಬರೀಷ್ ಗೌಡ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಹತ್ಯೆಗೈದು ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡ ಮುಂದಾಗಿದ್ದು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…

  • ಡಿಸೆಂಬರ್ 21 ರಿಂದ 24 ವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ

     

    ಡಿಸೆಂಬರ್ 21 ರಿಂದ 24 ವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ನಡೆಯಲಿದ್ದು ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ತಿಳಿಸಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅನುಷ್ಠಾನದ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ ಐದು ವರ್ಷದೊಳಗಿನ 96,727 ಮಕ್ಕಳು ಇದ್ದಾರೆ. ಡಿಸೆಂಬರ್ 21 ರಿಂದ ಲಸಿಕಾ ಅಭಿಯಾನ ಪ್ರಾರಂಭವಾಗಲಿದೆ. ದಿನಾಂಕ 22 ರಿಂದ 24 ರವೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆದಿಲ್ಲದ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ.

    ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು. ಮಕ್ಕಳ ಅಂಗವೈಕಲ್ಯ ತಡೆಯಲು ಪೋಷಕರು ಯಾವುದೇ ಭಯವಿಲ್ಲದೆಯೇ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು. ಲಸಿಕೆಯನ್ನು ಪಡೆಯದ ಮಕ್ಕಳಿಗೆ ಮನೆಮನೆಗೆ ತೆರಳಿ ಲಸಿಕೆ ನೀಡುವಂತೆ, ವಲಸೆ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಅವರಿಗೆ ಕೂಡ ಲಸಿಕೆ ಹಾಕಿಸಬೇಕು. ಜಿಲ್ಲೆಯಲ್ಲಿ ಶೇಕಡ 100% ರಷ್ಟು ಪ್ರಗತಿ ಸಾಧಿಸಿ ಎಂದು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.

    ಸಾರ್ವಜನಿಕರು ಹೆಚ್ಚು ಸೇರುವ ಬಸ್‌ ನಿಲ್ದಾಣ, ಮಾರುಕಟ್ಟೆ, ರೈಲು ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೋಲಿಯೋ ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು ಹಾಗೂ ಟೋಲ್‌ ಗೇಟ್‌ಗಳಲ್ಲಿ ಮತ್ತು ರಾಷ್ಟೀಯ ಹೆದ್ದಾರಿಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲು ಸೂಚಿಸಿದರು.

    ಮುಂಚಿತವಾಗಿ ಬೂತ್‌ಗಳ ನಿಯೋಜನೆ ಸಿಬ್ಬಂದಿ ನಿಯೋಜನೆ ಸೇರಿದಂತೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಪೋಲಿಯೋ ಲಸಿಕೆ ಹಾಕಿಸುವಂತೆ ವ್ಯಾಪಕ ಪ್ರಚಾರ ಮಾಡಿ ಎಲ್ಲಾ ಗ್ರಾಮಗಳಿಗೂ ತಲುಪುವಂತೆ ಸ್ವಚ್ಚತಾ ವಾಹಿನಿ ಮತ್ತು ಆಟೋಗಳ ಮೂಲಕ ಪ್ರಚಾರ ಮಾಡಿ ಲಸಿಕೆ ಅಭಿಯಾದ ಕುರಿತು ಮಾಹಿತಿ ನೀಡಿ ಜಿಲ್ಲೆಯ ಯಾವೊಂದು ಮಗುವೂ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಲಕ್ಕ ಕೃಷ್ಣರೆಡ್ಡಿ, ಜಿಲ್ಲಾ ಸರ್ವೇಕ್ಷಣಾ ವೈದ್ಯಾಧಿಕಾರಿಗಳಾದ ಡಾ.ನಾಗರಾಜ್ ಎನ್. ಟಿ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳಾದ ಡಾ.ಸೀಮಾ ರುದ್ರಪ್ಪ ಮಾಬಳೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ಡಿ.25 ರಂದು ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ : ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

     

    ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವವು ಡಿಸೆಂಬರ್ 10 ರಿಂದ ಪ್ರಾರಂಭವಾಗಲಿದ್ದು ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸೂಚಿಸಿದರು.

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಘಾಟಿ ಸುಬ್ರಹ್ಮಣ್ಯ ದೇವಾಲಯದ ಜಾತ್ರೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಡಿಸೆಂಬರ್ 10 ರಿಂದ 18 ರವರೆಗೆ ರಾಸುಗಳ ಜಾತ್ರೆ ನಡೆಯಲಿದೆ. 25 ರಂದು ಬ್ರಹ್ಮರಥೋತ್ಸವ ಜರುಗಲಿದೆ. ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಅಧಿಕಾರಿಗಳು ಶ್ರಮ ವಹಿಸಬೇಕು ಎಂದರು.

    ರಾಸುಗಳ ಜಾತ್ರೆಯು 10 ರಂದು ಆರಂಭವಾಗಲಿದ್ದು ವಿವಿಧ ಭಾಗಗಳಿಂದ ಸಾಕಷ್ಟು ರೈತರು, ಜಾನುವಾರುಗಳು ಆಗಮಿಸಲಿವೆ. ರಾಸುಗಳಿಗೆ ಕುಡಿಯುವ ನೀರು, ಮೇವು, ಲಸಿಕೆ, ಶೆಡ್ ಗಳಿಗೆ ಸಮರ್ಪಕ ವಿದ್ಯುತ್ ಸಂಪರ್ಕ, ರೈತರಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಿ ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

    ಬ್ರಹ್ಮ ರಥೋತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಸೂಚನಾ ಫಲಕ ಅಳವಡಿಸುವ ಮೂಲಕ ವಾಹನ ದಟ್ಟಣೆ ಆಗದಂತೆ ಕ್ರಮ ವಹಿಸಬೇಕು. ಬ್ರಹ್ಮ ರಥೋತ್ಸವ ದಿನ ಹೆಚ್ಚುವರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಿ. ಸಾರ್ವಜನಿಕರು ಪಾರ್ಕಿಂಗ್ ಸ್ಥಳದಿಂದ ದೇವಾಲಯಕ್ಕೆ ತೆರಳಲು ಹಾಗೂ ಮರಳಲು ಉಚಿತ ವಾಹನ ವ್ಯವಸ್ಥೆ ಮಾಡಿ ಎಂದರು.

    ಸಾರ್ವಜನಿಕರಿಗೆ ಉಚಿತ ಊಟದ ವ್ಯವಸ್ಥೆ, ಕುಡಿಯುವ ನೀರನ್ನು ವ್ಯವಸ್ಥಿತವಾಗಿ ಪೂರೈಸಿ ಹಾಗೂ ಹೆಚ್ಚುವರಿಯಾಗಿ ತಾತ್ಕಾಲಿಕ ಶೌಚಾಲಯಗಳನ್ನು ಒದಗಿಸಿ ಎಂದು
    ಘಾಟಿ ದೇವಾಲಯದ ಅಧಿಕಾರಿಗಳಿಗೆ ಸೂಚಿಸಿದರು.

    ದೇವಾಲಯದ ಸುತ್ತಮುತ್ತಲೂ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ನಗರಸಭೆಯಿಂದ ಪೌರಕಾರ್ಮಿಕರನ್ನು ಹೆಚ್ಚುವರಿಯಾಗಿ ನೇಮಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು. ತುರ್ತು ಆರೋಗ್ಯ ಚಿಕಿತ್ಸಾ ಕೇಂದ್ರಗಳು ಹಾಗೂ ಬೈಕ್ ಅಂಬುಲೆನ್ಸ್ ಸೇವೆ ಒದಗಿಸುವಂತೆ ಆರೊಗ್ಯಾಧಿಕಾರಿಗಳಿಗೆ ಸೂಚಿಸಿದರು. ಜಾತ್ರಾ ಮಹೋತ್ಸವದಲ್ಲಿ ಸೂಕ್ತ ಬಂದೋಬಸ್ತ್, ಭಧ್ರತೆ ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

    *ಅನಧಿಕೃತ ಜಾಹಿರಾತು ಫಲಕ, ಫುಟ್ ಪಾತ್ ಅಂಗಡಿಗಳು ತೆರವಿಗೆ ಸೂಚನೆ*
    ಮಾಕಳಿ ಇಂದ ಘಾಟಿ ರಸ್ತೆಯ ವರೆಗೆ, ಕಂಟನಕುಂಟೆ ಮಾರ್ಗವಾಗಿ ಅನಧಿಕೃತವಾಗಿ ಜಾಹೀರಾತು ಫಲಕಗಳು ಅಳವಡಿಸಿರುವುದರಿಂದ ವಾಹನ ಓಡಾಟಕ್ಕೆ ತೊಂದರೆ ಆಗಲಿದ್ದು ತೆರವುಗೊಳಿಸಲು ಸೂಚಿಸಿದರು. ಜೊತೆಗೆ ದೇವಾಲಯದ ಸುತ್ತಲೂ ಫೂಟ್ ಪಾತ್ ಮೇಲಿನ ಅಂಗಡಿಗಳನ್ನು ತೆರವು ಗೊಳಿಸಿ ಅವರಿಗೆ ಪರ್ಯಾಯ ಜಾಗ ಗುರುತಿಸಿ ಅಲ್ಲಿ ಅಂಗಡಿ ಮಳಿಗೆಗಳ ಸ್ಥಾಪಿಸಲು ಅನುಮತಿ ನೀಡಿ ಎಂದರು.

    *ಸ್ಥಳೀಯ ಕಲಾವಿದರಿಗೆ ಆದ್ಯತೆ*
    ಬ್ರಹ್ಮರಥೋತ್ಸವದ ಡಿಸೆಂಬರ್ 24, 25 ರಂದು ಹಾಗೂ ರಾಸುಗಳ ಜಾತ್ರಾ ಸಮಯದಲ್ಲಿ ಒಂದು ದಿನ ಒಟ್ಟು ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲು ತೀರ್ಮಾನಿಸಲಾಗಿದ್ದು. ಜಿಲ್ಲೆಯ ನಾಲ್ಕು ತಾಲ್ಲೂಕಿನ ಸ್ಥಳೀಯ ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದೆ. ಸ್ಥಳೀಯ ಕಲಾವಿದರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಘಾಟಿ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದರು.

    ಸಭೆಯಲ್ಲಿ ಸಿಇಒ ಡಾ.ಕೆ.ಎನ್ ಅನುರಾಧ, ಎಸಿ ದುರ್ಗ ಶ್ರಿ, ಎಎಸ್ಪಿ ನಾಗರಾಜ್, ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್, ದೊಡ್ಡಬಳ್ಳಾಪುರ ತಹಶೀಲ್ದಾರ್ ಮಲ್ಲಪ್ಪ, ಇಒ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.