Blog

  • *ದಲಿತರ ಧ್ವನಿಯಾಗಿ ಶ್ರಮಿಸಿದ ಡಾ.ಬಾಬು ಜಗಜೀವನ್ ರಾಂ ರವರ ಜೀವನ ಶೈಲಿಯೇ ನಮಗೆ ಆದರ್ಶ – ರಾಮು ನೇರಳೆಘಟ್ಟ*

    ದೊಡ್ಡಬಳ್ಳಾಪುರ : ದೇಶ ಕಂಡ ಅಪ್ರತಿಮ ನಾಯಕ, ಹಸಿರು ಕ್ರಾಂತಿ ಹರಿಕಾರ ಮಾಜಿ ಉಪಪ್ರಧಾನಿಗಳಾದ ಡಾ.ಬಾಬು ಜಗಜೀವನ್ ರಾಂ ದಲಿತ ಸಮುದಾಯಕಷ್ಟೇ ಅಲ್ಲದೆ ದುಡಿಯುವ ಪ್ರತಿ ವರ್ಗಕ್ಕೂ ಬೆಂಬಲವಾಗಿ ನಿಂತಿದ್ದ ವ್ಯಕ್ತಿತ್ವ ಅವರದು. ಅವರ ಹೋರಾಟದ ಜೀವನ ಶೈಲಿಯೇ ನಮ್ಮೆಲ್ಲರಿಗೂ ಸ್ಪೂರ್ತಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದೊಡ್ಡಬಳ್ಳಾಪುರ ತಾಲ್ಲೂಕು ಸಂಚಾಲಕರಾದ ರಾಮಮೂರ್ತಿ ( ರಾಮು ನೇರಳೆಘಟ್ಟ) ತಿಳಿಸಿದರು.

    ಡಾ. ಬಾಬು ಜಗಜೀವನ್ ರಾಮ್ ಅವರ 38ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ಹಳೇ ಬಸ್ ನಿಲ್ದಾಣದ ಸಮೀಪವಿರುವ ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಸಾಮಾಜಿಕ ಬದುಕಿನಲ್ಲಿ ನ್ಯಾಯ ಪಡೆಯಲು ಹೋರಾಟದಿಂದ ಮಾತ್ರ ಸಾಧ್ಯ, ಹೋರಾಟವನ್ನೇ ಬದುಕಾಗಿ ಆಯ್ಕೆ ಮಾಡಿಕೊಂಡ ರಾಷ್ಟ್ರ ನಾಯಕರು ಡಾ. ಬಾಬು ಜಗಜೀವನ್ ರಾಮ್ ದೇಶಕ್ಕೆ ಅವರ ಸೇವೆ ಮರೆಯಲು ಅಸಾಧ್ಯ ದಲಿತರ ಧ್ವನಿಯಾಗಿ ದಲಿತರ ಅಭಿವೃದ್ಧಿಗೆ ಶ್ರಮಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಇಂದು ಅವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

    ದೇಶದ ಉಪ ಪ್ರಧಾನಿಗಳಾಗಿ ಸೇವೆ ಸಲ್ಲಿಸಿರುವ ಅವರು ನಿಷ್ಪಕ್ಷಪಾತವಾಗಿ ಸೇವೆ ಮಾಡುವ ಮುಖಾಂತರ ದೇಶದ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.

    ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ನವೀನ್, ತಾಲೂಕು ಸಂಘಟನಾ ಸಂಚಾಲಕ ಎಂ.ಕೆ.ನರೇಂದ್ರಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ಎಂ.ಪಿ.ಗಂಗಾಧರ್, ತಾಲೂಕು ಸಂಘಟನಾ ಕಾರ್ಯದರ್ಶಿಗಳಾದ ಬಿ.ಹನುಮಯ್ಯ, ಸೆಂದಿಲ್, ಮಹಾದೇವ, ನಗರ ಅಧ್ಯಕ್ಷರಾದ ಶಿವಶಂಕರ್ , ತಾಲೂಕು ಕಾರ್ಯಕಾರಿ ಸಮಿತಿಯ ರವಿಕುಮಾರ್, ಹನುಮೇಗೌಡ ಸೇರಿದಂತೆ ಕರ್ನಾಟಕ ದಲಿತ ಸಂಘರ್ಘ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

  • *ದೊಡ್ಡಬಳ್ಳಾಪುರ l ನಗರಪೊಲೀಸ್ ಠಾಣಾ ನೀರಿಕ್ಷಕರಾಗಿ ಎ.ಅಮರೇಶ್ ಗೌಡ ಅಧಿಕಾರ ಸ್ವೀಕಾರ : ಅಧಿಕಾರ ಹಸ್ತಾಂತರಿಸಿದ ಇನ್ಸ್ಪೆಕ್ಟರ್ ದಯಾನಂದ್*

    ದೊಡ್ಡಬಳ್ಳಾಪುರ : ಲೋಕಸಭಾ ಚುನಾವಣೆ ನಿಮಿತ್ತ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದ ದಕ್ಷ ಪೊಲೀಸ್ ಅಧಿಕಾರಿಗಳಾದ ಎ.ಅಮರೇಶ್ ಗೌಡ ರವರು ಮತ್ತೆ ದೊಡ್ಡಬಳ್ಳಾಪುರ ನಗರ ಠಾಣಾ ನಿರೀಕ್ಷಕರಾಗಿ ಇಂದು (ಜುಲೈ04) ಮತ್ತೆ ಅಧಿಕಾರ ಸ್ವೀಕರಿಸಿದರು.

     

    ನಗರ ಠಾಣಾ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ ಇನ್ಸ್ಪೆಕ್ಟರ್ ದಯಾನಂದ ಅವರು ನೂತನ ನೀರಿಕ್ಷಕರಾದ ಎ.ಅಮರೇಶ್ ಗೌಡ ರವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

    ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ಸಿಬ್ಬಂದಿ ಉಪಸ್ಥಿತರಿದ್ದರು.

  • *ಹಾಡೋನಹಳ್ಳಿ ಪಂಚಾಯಿತಿ ಅಧ್ಯಕ್ಷರ ಚುನಾವಣೆ l ನೂತನ ಅಧ್ಯಕ್ಷರಾಗಿ ಮಂಜುಳಾಪುರುಷೋತ್ತಮ್ ಅವಿರೋಧ ಆಯ್ಕೆ*

    ದೊಡ್ಡಬಳ್ಳಾಪುರ : ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರ ಚುನಾವಣೆ ನೆಡೆದಿದ್ದು. ನೂತನ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಮಂಜುಳಾ ಪುರುಷೋತ್ತಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಜೂನ್ 04 ರಂದು ನೆಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ವ ಸದಸ್ಯರು ಅವಿರೋಧವಾಗಿ ಶ್ರೀಮತಿ ಮಂಜುಳಾಪುರುಷೋತ್ತಮ್ ರವರನ್ನು ಆಯ್ಕೆ ಮಾಡಿದ್ದಾರೆ.

    ನೂತನ ಅಧ್ಯಕ್ಷರಿಗೆ ಸ್ಥಳೀಯ ಜೆಡಿಎಸ್ ಮುಖಂಡರಾದ ಅಪ್ಪಯಣ್ಣ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದರು.

     

    ಈ ಸಂದರ್ಭದಲ್ಲಿ ಮೇಳೆಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀನಿವಾಸ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಪ್ಪಯ್ಯಣ್ಣ, ಹೋಬಳಿ ಜೆಡಿಎಸ್ ಅಧ್ಯಕ್ಷ ಜಗನ್ನಾಥ್ಹಾಡೋನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣಪ್ಪ. ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುದ್ದುಕೃಷ್ಣ ಉಪಸ್ಥಿತರಿದ್ದರು.

  • *KRS ಪಕ್ಷದ ನೂತನ ಜಿಲ್ಲಾ ಪದಾಧಿಕಾರಿಗಳ ನೇಮಕ : ಬೆಂಗಳೂರು ಗ್ರಾಮಾಂತರ ಪಕ್ಷದ ನೂತನ ಸಾರಥಿಯಾಗಿ ಬಿ.ಶಿವಶಂಕರ್ ಅವಿರೋಧ ಆಯ್ಕೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ,ವಿಜಯ ಮಿತ್ರ ವರದಿ : ಸಮಾಜದ ಎಲ್ಲೆಡೆ ಭ್ರಷ್ಟಾಚಾರ ತಂಡದವಾಡುತ್ತಿದ್ದು ಭ್ರಷ್ಟಾಚಾರ ರಹಿತ ರಾಜಕಾರಣ , ಪ್ರಾಮಾಣಿಕ ಜನಸೇವೆ ನನ್ನ ಜೀವನದ ಮುಖ್ಯ ಗುರಿಯಾಗಿದೆ.ಪ್ರತಿಯೊಂದು ಹಳ್ಳಿಗಳಲ್ಲೂ ವಿಶೇಷ ಅಭಿಯಾನಗಳನ್ನು ಆಯೋಜನೆ ಮಾಡುವ ಮೂಲಕ ಜನರಿಗೆ ಚೈತನ್ಯ ತುಂಬಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವುದೇ ನನ್ನ ಗುರಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆಆರ್‌ಎಸ್ ಪಕ್ಷದ ನೂತನ ಅಧ್ಯಕ್ಷ ಶಿವಶಂಕರ್ ತಿಳಿಸಿದರು .

     

    ಬುಧವಾರ ( ಜು. 3 )ದಂದು ನೆಲಮಂಗಲ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕೆಆರ್‌ಎಸ್ ಪಕ್ಷದ ವತಿಯಿಂದ ಜಿಲ್ಲಾ ಸಮಿತಿಯ ಪುನರ್ ರಚನೆ ಉಸ್ತುವಾರಿ ಗಳಾದ ಗಜೇಂದ್ರ ಗೌಡ ರವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಪುನರ್ ರಚನೆ ಕುರಿತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಬಿ ಶಿವಶಂಕರ್ ಅವಿರೋಧವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

     

    ಈ ಸಂದರ್ಭದಲ್ಲಿ ಮಾತನಾಡಿದ ಅವರುನಮ್ಮ ಪ್ರಸ್ತುತ ಸಮಾಜವು ನಿರುದ್ಯೋಗ, ಭ್ರಷ್ಟಾಚಾರ ಸೇರಿದಂತೆ ಹಲವು ಸಾಮಾಜಿಕ ಪಿಡುಗುಗಳಿಂದ ತುಂಬಿ ಹೋಗಿದೆ. ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ ನೀಡುವುದೇ ಕೆಆರ್‌ಎಸ್ ಪಕ್ಷದ ಮುಖ್ಯ ಉದ್ದೇಶವಾಗಿದೆ. ನಮ್ಮ ಪಕ್ಷದ ಮುಖ್ಯ ಆಶಯವನ್ನು ಸದಾ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆ. ಜಿಲ್ಲೆಯಲ್ಲಿ ಬಡ ರೈತರ ಭೂಕಬಳಿಕೆ, ಸರ್ಕಾರಿ ಸೇವೆ ಸಲ್ಲಿಸಲು ಲಂಚ ಸ್ವೀಕಾರ, ಯುವಕರ ನಿರುದ್ಯೋಗ ಸಮಸ್ಯೆ, ಸಾರ್ವಜನಿಕ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಸಮಸ್ಯೆ ಎದ್ದು ಕಾಣುತ್ತಿದ್ದು, ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕೆಆರ್‌ಎಸ್ ಪಕ್ಷವು ಸಾಮಾನ್ಯ ಪ್ರಜೆಯ ಧ್ವನಿಯಾಗಿ ಶ್ರಮಿಸಲಿದೆ ಎಂದರು.

     

    ಕೆಆರ್‌ಎಸ್ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಇಂತಿದೆ :

    ಗೌರವಧ್ಯಕ್ಷರಾಗಿ ವೆಂಕಟೇಶ್ ಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಶಿವಶಂಕರ್, ಉಪಾಧ್ಯಕ್ಷ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್ ನಾರನಹಳ್ಳಿ,ಕಾರ್ಯದರ್ಶಿಗಳಾಗಿ ರಮೇಶ್, ಶಶಿಕುಮಾರ್,ವೇಣು, ಸುಬ್ರಮಣಿ, ರಾಮಕೃಷ್ಣ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರು, ನಾಲ್ಕು ತಾಲ್ಲೂಕಿನ ಕೆಆರ್‌ಎಸ್‌ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • *ಹಿಂದುಳಿದ ವರ್ಗಗಳಿಗೆ ಉನ್ನತ ಸಾಧನೆಯ ಮಹತ್ವಾಕಾಂಕ್ಷೆ ಅಗತ್ಯ: ದಯಾನಂದಪುರಿ ಸ್ವಾಮೀಜಿ*

    *ದೊಡ್ಡಬಳ್ಳಾಪುರ:* ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಸಾಧನೆ ಮಾಡುವ ಉನ್ನತ ಹಂತದ ಹುದ್ದೆಗಳನ್ನು ಹೊಂದುವ ಮಹತ್ವಾಕಾಂಕ್ಷೆಯನ್ನು ಹೊಂದಬೇಕು ಎಂದು ಹಂಪಿ ಹೇಮಕೂಟ ಗಾಯತ್ರಿ ಪೀಠಾಧ್ಯಕ್ಷ ದಯಾನಂದಪುರಿ ಸ್ವಾಮೀಜಿ ಹೇಳಿದರು.

    ಇಲ್ಲಿನ ಪಿಸಿವಿ ಚಾರಿಟಬಲ್ ಟ್ರಸ್ಟ್‌ನ ನೇತೃತ್ವದಲ್ಲಿ ನಡೆದ 2024ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

    ಸಮಕಾಲೀನ ಕಾಲಘಟ್ಟದಲ್ಲಿ ತಾಂತ್ರಿಕ ಜ್ಞಾನ ಮತ್ತು ಕೌಶಲವನ್ನು ಉತ್ತೇಜಿಸುವ ಕೆಲಸ ಆಗಬೇಕು. ಸಾಧನೆ ನಿಂತ ನೀರಾಗಬಾರದು. ಅದು ಹರಿಯುವ ನದಿಯಂತೆ ನಿರಂತರತೆಯನ್ನು ಕಾಯ್ದುಕೊಳ್ಳಬೇಕು. ದೇವಾಂಗ ಸಮುದಾಯದ ಶೈಕ್ಷಣಿಕ ಸಬಲೀಕರಣಕ್ಕೆ ಪೂರಕವಾಗಿ ಉನ್ನತ ಸ್ತರಗಳಲ್ಲಿ ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸುವುದು ಅಗತ್ಯ ಎಂದರು.

    *ಸಾಧನೆಗೆ ಬೇಕು ಉತ್ತೇಜನ:*

    ಪುಷ್ಪಾಂಡಜಮುನಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ ಮಾತನಾಡಿ, ಸಾಧನೆ ಎಂದಿಗೂ ಸಾಧಕನ ಸ್ವತ್ತೇ ವಿನಃ ಸೋಮಾರಿಯ ಸ್ವತ್ತಾಗುವುದಿಲ್ಲ. ಪರಿಶ್ರಮ, ಆಸಕ್ತಿ ಮತ್ತು ಅದಕ್ಕೆ ಪೂರಕವಾದ ಉತ್ತೇಜನ ದೊರೆತಾಗ ಸಾಧನೆ ಪರಿಪೂರ್ಣತೆಯನ್ನು ಪಡೆಯುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಸಾಧನೆಯನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಸತತ 11 ವರ್ಷಗಳಿಂದ ಪಿಸಿವಿ ಚಾರಿಟಬಲ್ ಟ್ರಸ್ಟ್‌ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

    *ಕೌಶಲ್ಯಾಧಾರಿತ ಸಾಧನೆಗೆ ಮನ್ನಣೆ:*

    ಮುಖ್ಯಅತಿಥಿಯಾಗಿ ಪಾಲ್ಗೊಂಡ ಬೆಂ.ಗ್ರಾ ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್ ಮಾತನಾಡಿ, ದೊಡ್ಡಬಳ್ಳಾಪುರದಂತಹ ಸಂಕೀರ್ಣ ಪ್ರದೇಶದಲ್ಲಿ ಇಂದು ಶೈಕ್ಷಣಿಕವಾದ ನಿಶ್ಯಬ್ದ ಕ್ರಾಂತಿ ನಡೆಯುತ್ತಿದೆ. ಇಲ್ಲಿನ ಬಹುತೇಕ ಮನೆಗಳಲ್ಲಿ ಪದವೀಧರರಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳು ಉತ್ತಮ ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಗಿರುವುದು ವಿಶೇಷ. ಜ್ಞಾನಾಧಾರಿತ ಅಧ್ಯಯನ ಮತ್ತು ಸಾಧನೆಯ ಜೊತೆಗೆ ಕೌಶಲ್ಯಾಧಾರಿತ ಅಧ್ಯಯನ ಮತ್ತು ಸಾಧನೆಯನ್ನು ಉತ್ತೇಜಿಸುವ ಅಗತ್ಯವಿದೆ. ಸಿಇಟಿ, ನೀಟ್‌ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ವಿದ್ಯಾರ್ಥಿಗಳನ್ನು ಗುಣಾತ್ಮಕವಾಗಿ ಸಜ್ಜುಗೊಳಿಸುವುದು ಅಗತ್ಯವಾಗಿದೆ ಎಂದರು.

    *ಸಾಮಾಜಿಕ ಕಾಳಜಿ ಅಗತ್ಯ:*

    ಪ್ರಾಸ್ತಾವಿಕವಾಗಿ ಮಾತನಾಡಿದ ಪಿಸಿವಿ ಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷ ಪಿ.ಸಿ.ವೆಂಕಟೇಶ್, ಕಳೆದ 11 ವರ್ಷಗಳಿಂದ ತಮ್ಮ ಟ್ರಸ್ಟ್‌ನ ಮೂಲಕ ಶೈಕ್ಷಣಿಕ ಸಾಧಕರನ್ನು ಗುರ್ತಿಸಿ ಉತ್ತೇಜನ ನೀಡಲಾಗುತ್ತಿದೆ. ಶಿಕ್ಷಣದ ಅರಿವಿನ ಜೊತೆಗೆ ಸಾಮಾಜಿಕ ಕಾಳಜಿಯನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆಯ ಅರಿವು, ಪರಂಪರೆಯ ಸಂರಕ್ಷಣೆ ಸಂಕಲ್ಪವನ್ನು ಮಾಡಬೇಕು ಎಂದರು.

    ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಎಂಎಬಿಎಲ್‌ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂ.ಬಿ.ಗುರುದೇವ್ ಮಾತನಾಡಿದರು.

    ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ 180ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದೊಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕ್ರೀಡಾ ಪ್ರತಿಭೆಗಳು, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.

    ಪಿಸಿವಿ ಚಾರಿಟಬಲ್ ಟ್ರಸ್ಟಿನ ಕಾರ್ಯದರ್ಶಿ ಪಿ.ವಿ.ಪ್ರಶಾಂತ್, ಖಜಾಂಚಿ ಪುಷ್ಪಲತಾ, ಟ್ರಸ್ಟಿ ಅನುಶ್ರೀ, ಡಾ.ಚಂದನ ಮತ್ತಿತರರು ಉಪಸ್ಥಿತರಿದ್ದರು.

  • *ಜಿಲ್ಲಾಡಳಿತ ಭವನದಲ್ಲಿ ವಚನ ಪಿತಾಮಹ ಡಾ. ಫ.ಗು ಹಳಕಟ್ಟಿ ಜಯಂತಿ ಆಚರಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ. 02:- ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿಂದು ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ವಚನ ಪಿತಾಮಹ ಡಾ. ಫ.ಗು ಹಳಕಟ್ಟಿ ರವರ 144 ನೇ ಜಯಂತ್ಯೋತ್ಸವ ಅಂಗವಾಗಿ ಅಪರ ಜಿಲ್ಲಾಧಿಕಾರಿಗಳಾದ ಅಮರೇಶ ಹೆಚ್. ಅವರು ಡಾ. ಫ.ಗು ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.

     

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರ ಕಚೇರಿ ಸಹಾಯಕರಾದ ರಾಜೀವ್ ಸುಲೋಚನ, ಆರ್.ಹೆಚ್. ಎಂ ಗಂಗಾಧರ್, ಜೆ.ಹೆಚ್ ಎಂ ಇಂದ್ರಮ್ಮ, ಜಿಲ್ಲಾಧಿಕಾರಿಯವರ ಆಪ್ತ ಸಹಾಯಕ ಅಭಿಷೇಕ್ ಸೇರಿದಂತೆ ಜಿಲ್ಲಾಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

  • *ರೈತರು ಬೆಳೆ ವಿಮೆಗೆ ನೋಂದಾಯಿಸಲು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಸಲಹೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ. 02 (ವಿಜಯಮಿತ್ರ ):- ರೈತರಿಗೆ ಬೆಳೆ ವಿಮೆ ನೋಂದಣಿ ಮಾಡಿಸುವದರಿಂದ ಆಗುವ ಲಾಭ ಹಾಗೂ ಅನುಕೂಲಗಳ ಕುರಿತು ಸರಿಯಾದ ಮಾಹಿತಿ ಇರುವುದಿಲ್ಲ. ಕೃಷಿ, ತೋಟಗಾರಿಕೆ ಅಧಿಕಾರಿಗಳು ಮತ್ತು ಬೆಳೆ ವಿಮಾ ಸಂಸ್ಥೆಗಳು ಜಂಟಿಯಾಗಿ ಸ್ಥಳೀಯ ಮಟ್ಟದಲ್ಲಿ ರೈತರಿಗೆ ಬೆಳೆ ವಿಮೆ ಬಗ್ಗೆ ಅರಿವು ಮೂಡಿಸುವ ಮೂಲಕ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

    ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

    ಹೋಬಳಿ ಮಟ್ಟದಲ್ಲಿ ವಾರಕ್ಕೊಮ್ಮೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ರೈತರ ಕೃಷಿ ಕಾರ್ಯಾಗಾರವನ್ನು ಆಯೋಜನೆ ಮಾಡಿ, ರೋಗ ಬಾಧೆಯಿಂದ ಬೆಳೆಯ ರಕ್ಷಣೆ, ಗೊಬ್ಬರ ಪೂರೈಕೆ, ಇಳುವರಿ ಹೆಚ್ಚಿಸುವ ಬೆಳೆಗಳ ಕುರಿತು ಜಾಗೃತಿ ಮೂಡಿಸಿ ಜೊತೆಗೆ ಬೆಳೆ ವಿಮೆ ನೋಂದಣಿಗೆ ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು.

    ಪ್ರಸಕ್ತ ವರ್ಷದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮಟ್ಟದಲ್ಲಿ ನೋಂದಣಿಯಾಗಿ ಗುರಿಯನ್ನು ಸಾಧಿಸಬೇಕು ಈ ಹಿನ್ನೆಲೆಯಲ್ಲಿ

    ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಡಿಯಲ್ಲಿ ಬರುವ ಬೆಳೆಗಳಿಗೆ ರೈತರು ವಿಮೆ ಮಾಡಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

     

    *ಕೃಷಿ ಬೆಳೆ ವಿಮೆಗೆ ನೋಂದಾಯಿಸಿ*

    2024 ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.

    ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ/ನಾಟಿ ವಿಫಲಗೊಂಡಲ್ಲಿ ವಿಮಾ ರಕ್ಷಣೆ ಒದಗಿಸುವುದು. ಹಾಲಿ ಇರುವ ಬೆಳೆಗಳಿಗೆ (ಬಿತ್ತನೆಯಿಂದ ಕಟಾವಿನ ಹಂತದವರೆಗೆ) ಬರ/ಶುಷ್ಕ ಪರಿಸ್ಥಿತಿ, ನೆರೆ/ಪ್ರವಾಹಗಳಿಂದ ಬೆಳೆ ಮುಳಗಡೆ, ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಮಳೆ, ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸುವುದು ಹಾಗೂ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (14 ದಿನಗಳವರೆಗೆ) ಆಲಿಕಲ್ಲು ಮಳೆ, ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ನಷ್ಟ ಪರಿಹಾರವನ್ನು ಒದಗಿಸುವುದು ಯೋಜನೆಯ ಪ್ರಮುಖ ಅಂಶಗಳಾಗಿರುತ್ತವೆ.

    ಆಯಾ ತಾಲ್ಲೂಕಿನಲ್ಲಿ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತ್/ ನಗರ ಸ್ಥಳೀಯ ಸಂಸ್ಥೆಗಳನ್ನು ವಿಮಾ ಘಟಕವಾಗಿ ಹಾಗೂ ಇತರೆ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವಾಗಿ ಪರಿಗಣಿಸಲಾಗಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮುಖ್ಯ ಬೆಳೆಯಾಗಿ ರಾಗಿ (ಮಳೆಯಾಶ್ರಿತ ಮತ್ತು ನೀರಾವರಿ) ಹಾಗೂ ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ ಮತ್ತು ನೀರಾವರಿ), ತೊಗರಿ (ಮಳೆಯಾಶ್ರಿತ ಹಾಗೂ ನೀರಾವರಿ), ನೆಲಗಡಲೆ (ಮಳೆಯಾಶ್ರಿತ) ಹುರುಳಿ (ಮಳೆಯಾಶ್ರಿತ) ಮತ್ತು ಟೊಮ್ಯಾಟೋ ಬೆಳೆಗಳನ್ನು ಇತೆರೆ ಬೆಳೆಗಳಾಗಿ ಅಧಿಸೂಚಿಸಲಾಗಿದೆ.

    ಟೊಮ್ಯಾಟೋ ಮತ್ತು ತೊಗರಿ ಬೆಳೆಗೆ ಜುಲೈ 15, ನೆಲಗಡಲೆ ಬೆಳೆಗೆ ಜುಲೈ 31 ಮತ್ತು ಉಳಿದಂತೆ ರಾಗಿ, ಭತ್ತ, ಮುಸುಕಿನ ಜೋಳ ಮತ್ತು ಹುರುಳಿ ಬೆಳೆಗಳಿಗೆ ಆಗಸ್ಟ್ 16 ರವರೆಗೆ ವಿಮೆಗೆ ನೋಂದಾಯಿಸಲು ಕೊನೆಯ ದಿನಾಂಕವಾಗಿದೆ.

    ಅಂತಿಮ ದಿನದವರೆಗೆ ಕಾಯದೆ ರೈತರು ಹತ್ತಿರದ ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಬ್ಯಾಂಕ್ಗಳಲ್ಲಿ ವಿಮಾ ಪ್ರಸ್ತಾವನೆ, ಪಹಣಿ, ಚಾಲ್ತಿ ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ ಪ್ರೀಮಿಯಂ ಪಾವತಿಸಿ ವಿಮೆಗೆ ನೋಂದಾಯಿಸುವುದು.

    ಆಸಕ್ತ ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಬ್ಯಾಂಕುಗಳನ್ನು ಸಂಪರ್ಕಿಸಿ, ಕೊನೆಯ ದಿನಾಂಕದವರೆಗೆ ವಿಳಂಬಿಸದೆ ವಿಮೆಗೆ ನೋಂದಾಯಿಸಿಕೊಳ್ಳಬಹುದು.

     

    *ಹವಾಮಾನ ಆಧಾರಿತ ತೋಟಗಾರಿಕೆ ಬೆಳೆ ವಿಮೆಗೆ ನೊಂದಾಯಿಸಿ*

     

    2024-25ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (RWBCIS)ಯಡಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸ ಬಹುದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧೀನ ತಾಲ್ಲೂಕುಗಳಾದ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳನ್ನು ವಿಮೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.

    ಹವಾಮಾನ ಅಂಶಗಳಾದ ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಆರ್ದ್ರತೆ ಇತ್ಯಾದಿ ಮಾಹಿತಿಗಳನ್ನು ಸರ್ಕಾರದಿಂದ ಅಧಿಸೂಚಿತ ಟೆಲಿ ಮೆಟ್ರಿಕ್ ಮಳೆ ಮಾಪನ ಕೇಂದ್ರ ಮತ್ತು ಸ್ವಯಂಚಾಲಿತ ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕಿನ ಮಾವು ಬೆಳೆಯಲ್ಲಿ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ-80,000ರೂ, ರೈತರು ಪಾವತಿಸಬೇಕಾದ ದರ (ಶೇ.5%)-4,000, ದ್ರಾಕ್ಷಿ ಬೆಳೆಯಲ್ಲಿ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ-2,80,000ರೂ, ರೈತರು ಪಾವತಿಸಬೇಕಾದ ದರ (ಶೇ.5%ಗಳಲ್ಲಿ)-14,000 ಮಾವು ಮತ್ತು ದ್ರಾಕ್ಷಿ ಬೆಳೆಯುವ ರೈತ ಬಾಂಧವರು ಈ ಯೋಜನೆಯಡಿ ನೊಂದಾಯಿಸಿ ಉಪಯೋಗ ಪಡೆದುಕೊಳ್ಳುವುದು.

    ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಲು ನಿಗಧಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ / ಕಂದಾಯ ರಶೀದಿ / ಖಾತೆ ಪುಸ್ತಕ / ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿ ಮತ್ತು ಸ್ವಯಂಘೋಷಿತ ಬೆಳೆ ವಿವರಗಳನ್ನು ಹತ್ತಿರದ ರಾಷ್ಟ್ರೀಯ ಅಧಿಕೃತ ಬ್ಯಾಂಕು / ಸಾಮಾನ್ಯ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರಗಳಲ್ಲಿ ನೊಂದಾಯಿಸುವುದು. ವಿಮೆ ಮಾಡಿಸುವ ರೈತರು ಫ್ರೂಟ್ಸ್ ತಂತ್ರಾಂಶದ ನೋಂದಣಿ ಸಂಖ್ಯೆಯನ್ನು ಹೊಂದಿರಬೇಕಿದ್ದು, ನೋಂದಣಿ ಸಂಖ್ಯೆಗೆ ಪಹಣಿ ವಿವರಗಳನ್ನು ಜೋಡಿಸಬೇಕಿರುತ್ತದೆ. ನೋಂದಣಿ ಸಂಖ್ಯೆ ಇಲ್ಲದ ರೈತರು ನೋಂದಣಿ ಸಂಖ್ಯೆಯನ್ನು ಮಾಡಿಕೊಂಡು ವಿಮೆಯಲ್ಲಿ ಪಾಲ್ಗೊಳ್ಳಬೇಕಿರುತ್ತದೆ.

    ಬೆಳೆ ಸಾಲ ಪಡೆದ ರೈತರನ್ನು ಸಂಬಂಧಿಸಿದ ಬ್ಯಾಂಕಿನವರು ವಿಮೆ ವ್ಯಾಪ್ತಿಗೆ ನೊಂದಾಯಿಸಲಿದ್ದು, ಯೋಜನೆಯಲ್ಲಿ ನೊಂದಾಯಿಸಿಕೊಳ್ಳಲು ಇಚ್ಚಿಸದ ರೈತರು ಸಂಬಂಧಿಸಿದ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲು ಅವಕಾಶವಿರುತ್ತದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ KSHEMA(ಕ್ಷೇಮ) ಅಧಿಸೂಚಿತ ವಿಮಾ ಸಂಸ್ಥೆಯಾಗಿದೆ.

    ಹೆಚ್ಚಿನ ಮಾಹಿತಿಗೆ ದೇವನಹಳ್ಳಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 9480461234, ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 9880210892, ಹೊಸಕೋಟೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 8217210320, ನೆಲಮಂಗಲ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ)- 9880461607, ರೈತ ಸಂಪರ್ಕ ಕೇಂದ್ರದ ಅಧಿಕಾರಿ, ಹತ್ತಿರದ ಬ್ಯಾಂಕ್ ಶಾಖೆ ಹಾಗೂ ವಿಮಾ ಕಂಪನಿಯ ಸಹಾಯವಾಣಿ ಸಂಖ್ಯೆ- 08026564537 ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಲಲಿತ ರೆಡ್ಡಿ, ಉಪನಿರ್ದೇಶಕಿ ಗಾಯಿತ್ರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ಜೆ, ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಪ್ರಭಾಕರ್, ತಾಲ್ಲೂಕು ಸಹಾಯಕ ಕೃಷಿ, ತೋಟಗಾರಿಕೆ ನಿರ್ದೇಶಕರು, ವಿಮಾ ಪಾಲಿಸಿ ಕಂಪನಿಗಳ ಮುಖ್ಯಸ್ಥರು ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

  • *ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ*

    ದೊಡ್ಡಬಳ್ಳಾಪುರ : ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶ್ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ರಾಜುಸಣ್ಣಕ್ಕಿ ಆಯ್ಕೆಯಾದರು.

    ಇಂದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲಾ ಹಾಗೂ ತಾಲ್ಲೂಕು ಘಟಕದನೂತನ ಪದಾಧಿಕಾರಿಗಳ ಆಯ್ಕೆ ಜೊತೆಗೆ ಪತ್ರಿಕಾದಿನ ಆಚರಣೆ ಮಾಡಲಾಯಿತು.

     

    ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ದೇವರಾಜು ಅವರು ಮಾತನಾಡಿ 1843 ರ ಜುಲೈ ಒಂದರಂದು ರಾಜ್ಯದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪತ್ರಿಕೆ ಆರಂಭವಾಯಿತು. ಪತ್ರಿಕೋದ್ಯಮ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ, ಜೊತೆಗೆ ರಾಜಕೀಯ ರಂಗ ಹಾದಿ ತಪ್ಪಿದಾಗೆಲ್ಲ ಅದನ್ನು ತಿದ್ದಿ ತೀಡಿದ್ದು ಪತ್ರಿಕಾ ಮಾದ್ಯಮ ಎಂದರು.

     

    ನೂತನ ಜಿಲ್ಲಾ ಪದಾಧಿಕಾರಿಗಳು:

     

    ಅಧ್ಯಕ್ಷ ಎಚ್‌.ಎಸ್.ಅಗ್ನಿ ವೆಂಕಟೇಶ್, ಉಪಾಧ್ಯಕ್ಷರಾಗಿ ಎಲ್.ಆನಂದ್ ಕುಮಾರ್, ಕಿರಣ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಚನ್ನಿಗರಾಯಪ್ಪ, ಸಹ ಕಾರ್ಯದರ್ಶಿ ಶಶಿಕುಮಾರ್. ಟಿ.ಡಿ, ನಿರ್ದೇಶಕರಾಗಿ ಎಂ.ಗೋಪಾಲಪ್ಪ, ಎನ್.ಸಿ.ಶಿವಾನಂದ್, ಡಿಕೆ.ಉಮೇಶ್ ಭರತ್ ಕುಮಾರ್.ಎ ಇವರುಗಳು ಸರ್ವಾನುಮತದಿಂದ ಆಯ್ಕೆಯಾದರು.

     

    ನೂತನ ತಾಲ್ಲೂಕು ಪದಾಧಿಕಾರಿಗಳು:

     

    ಅಧ್ಯಕ್ಷರು ರಾಜುಸಣ್ಣಕ್ಕಿ.ಎನ್, ಉಪಾಧ್ಯಕ್ಷರಾಗಿ ಡಿ.ಸಿ.ಚೌಡರಾಜ್ ಮತ್ತು ನರಸಿಂಹರಾಜು, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಮಂಜುನಾಥ್, ಸಹ ಕಾರ್ಯದರ್ಶಿ ಎಚ್.ಬಿ.ಮಹೇಶ್, ಶಿವಕುಮಾರ್.ಆರ್, ಖಜಾಂಚಿಯಾಗಿ ಬಿ.ಪಿಹರಿಕುಮಾರ್, ಗೌರವ ಅಧ್ಯಕ್ಷರಾಗಿ ಎ.ಆರ್.ಶ್ರೀನಿವಾಸಮೂರ್ತಿ ನಿರ್ದೇಶಕರಾಗಿ ಎಸ್.ಆರ್.ಅರುಣ್ ಕುಮಾರ್, ಜಯರಾಮಯ್ಯ, ವಿ.ಸುಬ್ರಮಣಿ, ಲಕ್ಷ್ಮೀನಾರಾಯಣ, ಎಸ್.ಸುರೇಶ್ ಕುಮಾರ್, ರಾಘವೇಂದ್ರ, ಟಿ.ಸುಬ್ರಹ್ಮಣಿ, ವಿ.ಕೃಷ್ಣಮೂರ್ತಿ, ಕೆ.ಶ್ರೀನಿವಾಸರಾವ್, ದೇವರಾಜ್, ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

    ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ಆರ್‌.ಅಶ್ವತ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಲ್‌.ಶ್ರೀನಿವಾಸ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

  • *ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಜಾಗೃತಿ ಅಭಿಯಾನ : ಅಧಿಕಾರಿಗಳಿಂದ ಅಂಗಡಿಗಳ ಮಾಲೀಕರಿಗೆ ಕರಪತ್ರ ವಿತರಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ. 01 (ವಿಜಯಮಿತ್ರ ):- ಜಿಲ್ಲಾ ಬಾಲಕಾರ್ಮಿಕ ಯೋಜನೆ ಮತ್ತು ಮಕ್ಕಳ ಸಹಾಯವಾಣಿ-1098 ಇವರು ಜಂಟಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ಸೋಮವಾರದಂದು ಬಾಲ ಕಾರ್ಮಿಕರ ಹಾಗೂ ಕಿಶೋರ ಕಾರ್ಮಿಕರ ಅನಿರೀಕ್ಷಿತ ತಪಾಸಣೆ ಹಾಗೂ ದಾಳಿಯನ್ನು ನಡೆಸಿದರು.

     

    ಈ ತಪಾಸಣೆ ವೇಳೆ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಕಿಶೋರ ಕಾರ್ಮಿಕನನ್ನು ರಕ್ಷಣೆ ಮಾಡಿ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದರು.

     

    ಅಲ್ಲದೇ ವಿವಿಧ ಸ್ಥಳಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ದುಡಿಮೆಗೆ ನೇಮಿಸಿಕೊಳ್ಳದಂತೆ ಅಂಗಡಿಗಳು, ಗ್ಯಾರೇಜುಗಳು, ಬೇಕರಿಗಳು, ಚಿಕನ್ ಮತ್ತು ಮಟನ್ ಅಂಗಡಿಗಳು, ಇಟ್ಟಿಗೆ ಕಾರ್ಖಾನೆ ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ, ಮಾಲೀಕರಿಗೆ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, 14 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ ಅಂತಹವರಿಗೆ ಕನಿಷ್ಠ 06 ತಿಂಗಳಿಗಿಂತ ಕಡಿಮೆ ಇಲ್ಲದಂತೆ ಮತ್ತು ಗರಿಷ್ಠ 02 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ರೂ. 20,000/- ಗಳಿಗಿಂತ ಕಡಿಮೆ ಇಲ್ಲದಂತೆ ಮತ್ತು ರೂ. 50,000/- ಸಾವಿರದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಾಗೃತಿ ಮೂಡಿಸಿದರು.

    ಇದೇ ವೇಳೆ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು ಕರಪತ್ರವನ್ನು ಮತ್ತು ಭಿತ್ತಿಪತ್ರಗಳನ್ನು ಅಂಗಡಿಗಳ ಮಾಲೀಕರಿಗೆ ವಿತರಿಸುವ ಮೂಲಕ ಇನ್ನು ಮುಂದೆ ತಮ್ಮ ಸುತ್ತಮುತ್ತಲಿನಲ್ಲಿ ಯಾವುದೇ ಮಕ್ಕಳನ್ನು ನೇಮಿಸಿಕೊಂಡಿರುವುದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಮತ್ತು ಪೋಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 112 ಕರೆ ಮಾಡುವುದರ ಮೂಲಕ ಮಕ್ಕಳನ್ನು ರಕ್ಷಣೆ ಮಾಡಲು ಸಾರ್ವಜನಿಕರು ಹಾಗೂ ಅಂಗಡಿಗಳ ಮಾಲೀಕರು ಸಹಕಾರ ನೀಡುವಂತೆ ಅಧಿಕಾರಿಗಳು ಸೂಚಿಸಿದರು.

     

    ಈ ಅನಿರೀಕ್ಷಿತ ತಪಾಸಣೆ ಹಾಗೂ ದಾಳಿಯಲ್ಲಿ ಜಿಲ್ಲಾ ಬಾಲಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ಸುಬ್ಬಾರಾವ್ ಎಸ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಶ್ರೀನಿವಾಸ್ ‌ಹಾಗೂ ಸೌಮ್ಯ ಹಾಜರಿದ್ದರು.

  • *ದೊಡ್ಡಬಳ್ಳಾಪುರ l ಜೂಲೈ 7 ಕ್ಕೆ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ l ಕಾರ್ಯಕ್ರಮದ ಆಯೋಜನೆ ಕುರಿತು ಮುಖಂಡರ ಸುದ್ದಿಗೋಷ್ಠಿ*

    ದೊಡ್ಡಬಳ್ಳಾಪುರ : ಜುಲೈ 7 ಭಾನುವಾರ ಬೆಳ್ಳಿ ರಥದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ನಗರಾದ್ಯಂತ ಮೆರವಣಿಗೆ ಮಾಡುವ ಮೂಲಕ ಅದ್ಧೂರಿಯಾಗಿ 515ನೇ ಕೆಂಪೇಗೌಡ ಜಯಂತೋತ್ಸವ ಆಚರಣೆ ಮಾಡಲಾಗುವುದು ಎಂದು ಕೆಂಪೇಗೌಡ ಜಯಂತೋತ್ಸವ ಸಮಿತಿ ಅಧ್ಯಕ್ಷ ಟಿ. ವಿ ಲಕ್ಷ್ಮೀನಾರಾಯಣ್ ತಿಳಿಸಿದರು.


    ನಗರದ ಪಿಎಲ್ಡಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮುದಾಯದ ಎಲ್ಲಾ ಮುಖಂಡರು ಪಕ್ಷಾತೀತವಾಗಿ ಜು. 7ರಂದು ಜಯಂತೋತ್ಸವವನ್ನು ಅದ್ದೂರಿ ಆಚರಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮಕ್ಕೆ ಕೆಂಗೇರಿ ಶಾಖಾ ಮಠದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜೊತೆಗೆ ಸಮುದಾಯದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಹಧನ ನೀಡಲಾಗುವುದು ಎಂದು ತಿಳಿಸಿದರು.

    ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಮುನೇಗೌಡ ಮಾತನಾಡಿ
    ತಾಲ್ಲೂಕಿನ ಎಲ್ಲಾ ಪಂಚಾಯಿತಿಗಳಿಂದ ಸಮುದಾಯದ ಜನತೆ ಆಗಮಿಸಲಿದ್ದು, .ವಿಶೇಷ ರೀತಿಯಲ್ಲಿ ಕಾರ್ಯಕ್ರಮವನ್ನು ಆಚರಿಸುವ ಯೋಜನೆ ಇದೆ ಹಾಗೂ ಸಮುದಾಯದ ಎಲ್ಲಾ ಮುಖಂಡರು ನಗರ ಭಾಗದಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಾಣಕ್ಕೆ ತೀರ್ಮಾನಿಸಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಕೆರೆ ಕಟ್ಟೆ, ದೇವಸ್ಥಾನ, ನಗರ ಅಭಿವೃದ್ಧಿ, ಸೇರಿದಂತೆ ಅನೇಕ ವಿಷಯಗಳಿಗೆ ಪ್ರಾಮುಖ್ಯತೆ ನೀಡಿದ ಹೆಗ್ಗಳಿಕೆ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ. ಇದು ಕೇವಲ ಒಂದು ಸಮುದಾಯದ ಹಬ್ಬವಲ್ಲ ಸರ್ವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

    ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ:

    ರಾಜ್ಯದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿಚಾರಕ್ಕೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಮುನೇಗೌಡ ನಮ್ಮ ಸಮುದಾಯದ ಯಾರಾದರೂ ಮುಖ್ಯಮಂತ್ರಿ ಆದರೆ ಸಂತೋಷವೇ. ದುಡಿಯುವ ಎತ್ತಿಗೆ ಅಧಿಕಾರ ನೀಡಬೇಕೇ ಹೊರತು ಮೇಯುವ ಎತ್ತಿಗಲ್ಲ ಎಂದು ಡಿಸಿಎಂ ಡಿಕೆಶಿ ಪರ ಬ್ಯಾಟ್ ಬಿಸಿದರು. ಕೆಂಪೇಗೌಡ ಜಯಂತೋತ್ಸವ ಸಮಿತಿ ಅಧ್ಯಕ್ಷ ಟಿ ವಿ ಲಕ್ಷ್ಮೀನಾರಾಯಣ್ ಪ್ರತಿಕ್ರಿಯೆ ನೀಡಿ ಡಿಕೆಶಿ ಅವರಿಗೂ ಒಂದು ಅವಕಾಶ ಸಿಗಲಿ. ನಮ್ಮ ಸಮುದಾಯದ ಮುಖಂಡರಾದ ಡಿಕೆ ಶಿವಕುಮಾರ್ ಈಗಾಗಲೇ ರಾಜ್ಯದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ದೊರೆತರೆ ಸಂತೋಷವೇ ಎಂದರು.

    ಸುದ್ದಿಗೋಷ್ಟಿಯಲ್ಲಿ ಕೆಂಪೇಗೌಡ ಆಚರಣಾ ಸಮಿತಿ ಅಧ್ಯಕ್ಷ ಟಿ.ವಿ ಲಕ್ಷ್ಮೀನಾರಾಯಣ ಮಾತನಾಡಿದರು.ಡಿಪಿಎ ಅಧ್ಯಕ್ಷ ಚುಂಚೇಗೌಡ, ಮುಖಂಡರಾದ ಎ. ನರಸಿಂಹಯ್ಯ, ಸತ್ಯನಾರಾಯಣ ಗೌಡ , ಲಕ್ಷ್ಮೀಪತಯ್ಯ, ಮನು, ಶಶಿಧರ್, ಹೆಚ್.ವಿಶ್ವಾಸ್ ಗೌಡ ಹಲವರು ಉಪಸ್ಥಿತರಿದ್ದರು.