Blog

  • *ಡೆಂಗಿ ನಿಯಂತ್ರಣ ಕ್ರಮ: ಈಡಿಸ್ ಲಾರ್ವಾ ಉತ್ಪತ್ತಿ ತಾಣ ನಾಶ ಚಟುವಟಿಕೆಗೆ ಚಾಲನೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೂನ್ 28(ವಿಜಯಮಿತ್ರ):- ಪ್ರಸ್ತುತ ಮಳೆಗಾಲವಾಗಿದ್ದು ರಾಜ್ಯದಲ್ಲಿ ಡೆಂಗಿ ಜ್ವರ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆಯಿಂದಾಗಿ ರಾಜ್ಯಾದ್ಯಂತ ಜೂನ್ 28ರಂದು ಈಡಿಸ್ ಲಾರ್ವಾ ಉತ್ಪತ್ತಿ ತಾಣ ನಾಶ ಚಟುವಟಿಕೆಗೆ ಚಾಲನೆ ನೀಡಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದಲ್ಲಿ ಹೊಸಕೋಟೆ ಶಾಸಕರು ಹಾಗೂ ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಕುಮಾರ್ ಬಚ್ಚೆಗೌಡರಿಂದ ಚಾಲನೆ ನೀಡಲಾಯಿತು.

    ಈ ಚಾಲನೆಯು ಪ್ರತಿ ಗುರುವಾರ ಲಸಿಕಾ ದಿನವಾಗಿರುವಂತೆ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುವುದು. ಪ್ರತಿ ಶುಕ್ರವಾರ ಸಾರ್ವಜನಿಕರು ಸ್ವತಹ ತಮ್ಮ ಮನೆಗಳಲ್ಲಿ, ಸಿಬ್ಬಂದಿ ವರ್ಗದವರು ಕಚೇರಿಗಳಲ್ಲಿ, ಶಾಲಾ ಕಾಲೇಜುಗಳು ಇತ್ಯಾದಿಗಳಲ್ಲಿ ನೀರು ತುಂಬುವ ಹೆಚ್ಚು ದಿನಗಳವರೆಗೆ ಶೇಖರಣೆಯಾಗುವ ಪರಿಕರಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಮಳೆ ನೀರು ಸಂಗ್ರಹವಾಗುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡುವುದರ ಮೂಲಕ ಡೆಂಗಿ ಜ್ವರ ನಿಯಂತ್ರಣ ಕ್ರಮದಲ್ಲಿ ಅತಿ ಮುಖ್ಯವಾದ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶ ಮಾಡುವುದರಿಂದ ಡೆಂಗಿ ನಿಯಂತ್ರಣ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

    ಜುಲೈ ತಿಂಗಳಿನಲ್ಲಿ ಆಚರಿಸಲ್ಪಡುವ ಡೆಂಗಿ ವಿರೋಧ ಮಾಸಾಚರಣೆಯ ಧ್ಯೇಯವಾಕ್ಯವು ‘ಸಮುದಾಯದೊಂದಿಗೆ ಸೇರಿ ಡೆಂಗಿ ಜ್ವರವನ್ನು ನಿಯಂತ್ರಿಸೋಣ’ ಎಂದಾಗಿದೆ. ಈ ಡೆಂಗಿ ಜ್ವರ ನಿಯಂತ್ರಣ ಕ್ರಮಗಳ ಅನುಷ್ಠಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಡೆಂಗಿ ನಿಯಂತ್ರಣಕ್ಕೆ ಕೈಜೋಡಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನಿಲ್ ಕುಮಾರ್ ಅವರು ಹೇಳಿದರು.

  • *ಜನರಲ್ಲಿ ಬದ್ದತೆ ಮತ್ತು ಶಿಸ್ತುಬದ್ಧ  ಜೀವನ ಶೈಲಿ ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿ ಆಗಲಿದೆ – ಮಲ್ಲೇಶ್*

    ದೊಡ್ಡಬಳ್ಳಾಪುರ, ವಿಜಯಮಿತ್ರ ಜೂನ್ 28 : ಮನುಷ್ಯನ ನೆಮ್ಮದಿ ಬದುಕಿಗೆ ಸಾಹಿತ್ಯ, ಸಂಗೀತ  ಮತ್ತು  ಪರಿಸರ  ಜೀವನ ಶೈಲಿ ಸಹಕಾರಿ ಆಗುತ್ತವೆ.  ನಮ್ಮ ಜನಪದರು  ರೂಪಿಸಿಗೊಂಡಿದ್ದ  ಸಂಸ್ಕ್ರತಿಯೇ ಅವರ  ಜೀವನ ಮೌಲ್ಯಗಳಾಗಿದ್ದವು ಎಂದು  ಕಲಾವಿದ ದರ್ಗಾಜೋಗಿಹಳ್ಳಿ ಮಲ್ಲೇಶ್ ತಿಳಿಸಿದರು.

    ಅವರು ನಗರದ ಗ್ರಾಮೀಣ ಅಭ್ಯುದಯ ಸೇವಾ ಕೇಂದ್ರದಲ್ಲಿ  ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ  ಹಿರಿಯ ನಾಗರೀಕರಿಗಾಗಿ ಸಾಹಿತ್ಯ ಮತ್ತು ಸಂಗೀತ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.     ಕನ್ನಡ ಭಾಷೆ,  ಸಾಹಿತ್ಯ ಮತ್ತು ಸಂಸ್ಕೃತಿ  ಶ್ರೀಮಂತವಾಗಿ ಉಳಿದು ಬೆಳೆಯಲು ನಮ್ಮ ಹಿರಿಯರ ಕೊಡುಗೆ ಅಪಾರವಾಗಿದೆ.  ಬಹು ಸಂಸ್ಕೃತಿಯ ಜನರು ಸಾಮರಸ್ಯದಿಂದ   ಬದುಕಲು ಸಹ ಹಿರಿಯರು  ನಮಗೆ ದಾರಿದೀಪವಾಗಿದ್ದಾರೆ.‌ ಸರಳತೆ ಮತ್ತು ಸಜ್ಜನಿಕೆ‌ ಬದುಕಿನ ಮಹತ್ವವನ್ನು  ನಮ್ಮ ದಾರ್ಶನಿಕರು ಜನಸಾಮಾನ್ಯರಿಗೂ ಮನಮುಟ್ಟುವಂತೆ ತಿಳಿಸಿದ್ದಾರೆ ಎಂದರು.

     

    ಓದು ಬರಹ ಬಾರದಿದ್ದರೂ ನಮ್ಮ ಜನಪದರು  ಉತ್ತಮವಾದ ಜನಪದ ಸಾಹಿತ್ಯವನ್ನು ಸೃಷ್ಟಿ ಮಾಡಿದರು.  ಜನಪದರಿಂದ  ನಮ್ಮ  ಕನ್ನಡ ಭಾಷೆ ಮತ್ತು ಸಂಸ್ಕೃತಿ ಉನ್ನತ ಸ್ಥಾನವನ್ನು ಪಡೆಯಿತು.  ಕನ್ನಡ ನಾಡು, ನುಡಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬ ಕನ್ನಡಿಗರು ಇಂದು  ಪ್ರಾಮಾಣಿಕವಾಗಿ   ಶ್ರಮಿಸಬೇಕಾಗಿದೆ.  ಪರಿಸರ ಸಂರಕ್ಷಣೆ ನಮ್ಮ ಹೊಣೆ ಆಗಬೇಕಾಗಿದೆ. ಜನರಲ್ಲಿ ಬದ್ದತೆ ಮತ್ತು ಶಿಸ್ತುಬದ್ಧ  ಜೀವನ ಶೈಲಿ ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿ ಆಗಲಿದೆ ಎಂದರು.

     

    ಹಿರಿಯ ನಾಗರೀಕರ  ಹಗಲು ಯೋಗಕ್ಷಮ ಕೇಂದ್ರದ ಮೇಲ್ವಿಚಾರಕಿ  ಸೌಭಾಗ್ಯ ಮಾತನಾಡಿ,  ನಮ್ಮ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಮತ್ತು ಗ್ರಾಮಾಂತರ  ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗಾಗಿ   ಹಗಲು ಯೋಗ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.  ಹಿರಿಯ ನಾಗರೀಕರಿಗೆ ಧ್ಯಾನ ಮತ್ತು ಯೋಗ,  ಸಮಾಲೋಚನೆ, ಸಾಂಸ್ಕೃತಿಕ ಚಟುವಟಿಕೆ,  ಉತ್ತಮ ಹವ್ಯಾಸಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.  ಹಿರಿಯ ನಾಗರೀಕರು ಹಗಲು ಯೋಗಕ್ಷೇಮ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕೆಂದರು.

    ಕಾರ್ಯಕ್ರಮದಲ್ಲಿ  ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ  ಸಮಾಜ ವಿಷಯ  ಪರೀಕ್ಷಕರುಗಳಾದ ಎಲ್.ಎನ್. ಮೋಹನ್,  ಗೀತಾಲಕ್ಷ್ಮಿ, ಹೇಮಲತಾ, ಅಭಿಷೇಕ್ ಮತ್ತು ಹಿರಿಯ ನಾಗರೀಕರು ಭಾಗವಹಿಸಿದ್ದರು. ‌

  • *ದೊಡ್ಡಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ*

    *ದೊಡ್ಡಬಳ್ಳಾಪುರ* :

    ನಾಡಪ್ರಭು ಕೆಂಪೇಗೌಡ ಕರ್ನಾಟಕದ ಅಗ್ರಗಣ್ಯ ಆಡಳಿತಗಾರರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಬೆಂಗಳೂರು ನಗರದ ನಿರ್ಮಾತೃವಾಗಿರುವ ಕೆಂಪೇಗೌಡರು ದೂರಗಾಮಿ ಚಿಂತನೆಗಳನ್ನು ಹೊಂದಿದ್ದ ನಾಯಕ ಎಂದು ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹೇಳಿದರು.

     

    ಇಲ್ಲಿನ ಅಭಿನೇತ್ರಿ ಸಾಂಸ್ಕೃತಿಕ ಸಂಘದ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅಭಿನೇತ್ರಿ ಸಾಂಸ್ಕೃತಿಕ ಸಂಘ ಹಾಗೂ ಭಜನೆಹಟ್ಟಿ ಲಕ್ಷ್ಮಯ್ಯ ಚಾರಿಟಬಲ್ ಟ್ರಸ್ಟ್‌ಗಳ ಸಹಯೋಗದಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

     

    ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಇದ್ದ ಪಾಳ್ಯಗಾರರಲ್ಲಿ ಕೆಂಪೇಗೌಡರು ಪ್ರಮುಖರು. ಬೆಂಗಳೂರು ನಗರಕ್ಕೆ ಕಾಯಕಲ್ಪ ಹಾಕಿದವರು. ಬಹಳ ದೂರಗಾಮಿ ಚಿಂತನೆ ಮತ್ತು ಕಾರ್ಯಾಚರಣೆ ಅವರ ಆಡಳಿತದಿಂದಾಗಿ ಇಂದು ಬೆಂಗಳೂರು ಅಗಾಧವಾಗಿ ಬೆಳೆಯಲು ಸಾಧ್ಯವಾಗಿದೆ.

     

    1510ರಲ್ಲಿ ಜನಿಸಿದ ಕೆಂಪೇಗೌಡ ಸುಕ್ಷಿತರೂ ಹಾಗು ದಕ್ಷ ಆಡಳಿತಕ್ಕೆ ಹೆಸರಾದವರು. ಬೆಂಗಳೂರಿನಲ್ಲಿ ವಿವಿಧ ದಿಕ್ಕಿನಲ್ಲಿ ಮಹಾದ್ವಾರಗಳನ್ನು ನಿರ್ಮಿಸಿದರು. ನಗರದ ಹಲವೆಡೆ ಕೆರೆ ಕಟ್ಟೆಗಳನ್ನು ಕಟ್ಟಿಸಿದರು. ಹಲವು ಪ್ರದೇಶಗಳಲ್ಲಿ ದೇವಸ್ಥಾನಗಳನ್ನು ಕಟ್ಟಿದರು ಎಂದು ವಿಶ್ಲೇಷಿಸಿದರು.

     

    *ಕೆರೆ, ದೇಗುಲಗಳ ನಿರ್ಮಾತೃ*:

    ಬೆಂ.ಗ್ರಾ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ವಿವಿಧ ಸಮುದಾಯಗಳ ಕಸುಬುಗಳ ಬೆಳವಣಿಗೆಗೆ ಪೂರಕವಾದ ವ್ಯವಹಾರದ ವಾತಾವರಣವನ್ನು ನಿರ್ಮಿಸಿದ ಕೆಂಪೇಗೌಡರು, ಅದಕ್ಕಾಗಿ ವಿವಿಧ ಪೇಟೆಗಳು ಮತ್ತು ಬೀದಿಗಳನ್ನು ಹುಟ್ಟುಹಾಕಿದರು. ವಿಶಾಲ ರಸ್ತೆಗಳು ತಯಾರಾದವು. 1569ರವರೆಗೂ ಬದುಕಿದ್ದ ಕೆಂಪೇಗೌಡರು ಬೆಂಗಳೂರಿನಲ್ಲಿ ಸ್ಥಾಪಿಸಿದ ಕೆರೆ ಕಟ್ಟೆಗಳು, ದೇವಸ್ಥಾನಗಳು, ದ್ವಾರಗಳು ಈಗಲೂ ಕಾಣಸಿಗುತ್ತವೆ. 1537ರಲ್ಲಿ ಕೆಂಪೇಗೌಡರು ಬಸವನಗುಡಿ ನಂದಿ ಮಂದಿರವನ್ನು ಕಟ್ಟಿದರು. ಅದೇ ರೀತಿ ಗವಿಗಂಗಾಧರೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಅಲಸೂರು ಸೋಮೇಶ್ವರ ದೇವಸ್ಥಾನದ ಪುನಶ್ಚೇತನ, ಧರ್ಮಾಂಬುಧಿ, ಕೆಂಪಾಂಬುಧಿ, ಸಂಪಂಗಿ ಕೆರೆ, ಸಿದ್ದಿಕಟ್ಟೆ, ಕಾರಂಜಿ ಕಟ್ಟೆ ಇತ್ಯಾದಿ ಕೆರೆ ಕಟ್ಟೆಗಳನ್ನು ಕೆಂಪೇಗೌಡರು ನಗರದ ಹಲವೆಡೆ ಕಟ್ಟಿಸಿದರು ಎಂದು ಇತಿಹಾಸ ಹೇಳುತ್ತದೆ ಎಂದು ಉಲ್ಲೇಖಿಸಿದರು.

     

     

    *ಕುಶಲ ಕಲೆಗಳ ಪೋಷಕ:*

    ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ಕೆಂಪೇಗೌಡ ನಾಲ್ಕು ಮಹಾದ್ವಾರ ಬೆಂಗಳೂರು ನಗರದ ಗಡಿಭಾಗವನ್ನು ಗುರುತಿಸಲು ವಿವಿಧ ದಿಕ್ಕುಗಳ ಅಂಚಿನಲ್ಲಿ ಕೆಂಪೇಗೌಡರು ನಾಲ್ಕು ಮಹಾದ್ವಾರಗಳನ್ನು ಕಟ್ಟಿದ್ದಾರೆ. ಇವಲ್ಲದೇ ಕೆಂಪೇಗೌಡರು ಇನ್ನೂ ಐದು ಸಣ್ಣ ದ್ವಾರಗಳನ್ನೂ ಕಟ್ಟಿದ್ದರು. ರೈತರ ಅಕ್ಕಿ, ರಾಗಿ, ಹತ್ತಿ, ವಿವಿಧ ದವಸ ಧಾನ್ಯಗಳ ಮಾರಾಟಕ್ಕೆ ಪ್ರತ್ಯೇಕ ಮಾರುಕಟ್ಟೆ ರಚಿಸಿದರು. ವಿವಿಧ ಸಮುದಾಯಗಳ ಕಸುಬುಗಳಾದ ಮಡಿಕೆ ತಯಾರಿಕೆ, ಕೈಮಗ್ಗ, ಕೈಕುಸುರಿ ಇತ್ಯಾದಿಗಳಿಗೂ ಪ್ರತ್ಯೇಕ ಪೇಟೆಗಳನ್ನು ಕಟ್ಟಿದರು. ದೇಶದ ವಿವಿಧೆಡೆಯಿಂದ ಕರಕುಶಲರನ್ನು ಮತ್ತು ಕಸುಬುದಾರರನ್ನು ಬೆಂಗಳೂರಿಗೆ ಕರೆತಂದು ಇಲ್ಲಿನ ಮಾರುಕಟ್ಟೆ ವಿಸ್ತರಿಸಿದರು ಎಂದು ವಿವರಿಸಿದರು.

     

    ಅಭಿನೇತ್ರಿ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಎಚ್.ಎಸ್.ರೇವತಿ ಅನಂತರಾಮ್ ಅಧ್ಯಕ್ಷತೆ ವಹಿಸಿದ್ದರು. ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಗೋವಿಂದರಾಜು, ಭಜನೆಹಟ್ಟಿ ಲಕ್ಷ್ಮಯ್ಯ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಬಿ.ಅನಂತರಾಮ್, ಕಸಾಪ ತಾಲೂಕು ಘಟಕದ ಕಾರ್ಯದರ್ಶಿ ಎ.ಜಯರಾಮ್, ಕಸಬಾ ಘಟಕದ ಅಧ್ಯಕ್ಷ ದಾದಾಫೀರ್, ಕಾರ್ಯದರ್ಶಿ ಸುರೇಶ್, ಸಫೀರ್, ನಾಡಪ್ರಭು ಕೆಂಪೇಗೌಡ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಂತಮ್ಮ, ಕಾರ್ಯದರ್ಶಿ ಲಕ್ಷ್ಮಿ, ಪದಾಧಿಕಾರಿಗಳಾದ ಭಾಗ್ಯ,‌ ಮಂಗಳ, ರಶ್ಮಿ, ಸವಿತಾ, ಅಪೂರ್ವ, ಕಲಾವಿದ ಹಾಡೋನಹಳ್ಳಿ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

  • *ವಿಶೇಷ ವಿಕಲಚೇತನರಿಗೆ ನಿವೇಶನ ಕಲ್ಪಿಸದ ತೂಬಗೆರೆ ಪಂಚಾಯಿತಿ ವಿರುದ್ಧ ಸಾರ್ವಜನಿಕರ ಪ್ರತಿಭಟನೆ*

    ತೂಬಗೆರೆ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ಗ್ರಾಮದ ನಿವಾಸಿ ವಿಕಲಚೇತನರಾದ ರಮೇಶ್ ಗೆ ನಿವೇಶನ ಕೊಡುವಂತೆ ಅಗ್ರಹಿಸಿ ಪ್ರತಿಭಟನೆ ಕುಳಿತಿರುವ ಗ್ರಾಮಸ್ಥರು.

    ನಿರಂತರ ಅರ್ಜಿ ಸಲ್ಲಿಸುತ್ತಾ ಖಾಲಿ ನಿವೇಶನ ನೀಡುವಂತೆ ಮನವಿ ಮಾಡುತ್ತಾ ತೂಬಗೆರೆ ಪಂಚಾಯತಿ ಅಧಿಕಾರಿಗಳ ಸುತ್ತ ಕಳೆದ ಹತ್ತು ವರ್ಷಗಳಿಂದ ತೂಬಗೆರೆ ಗ್ರಾಮದ ನಿವಾಸಿ ವಿಕಲಚೇತನರಾದ ರಮೇಶ್ ಸುತ್ತುತ್ತಿದ್ದಾರೆ ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಈ ಕುರಿತು ಸ್ಥಳೀಯ ಸಾರ್ವಜನಿಕರು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

    ಸ್ಥಳೀಯ ಮುಖಂಡರು ಪಂಚಾಯಿತಿ ಸದಸ್ಯರು ಆದ ಕಿಟ್ಟಿ ಮಾತನಾಡಿ ಈ ಹಿಂದೆ ಸಭೆಯಲ್ಲಿ ರಮೇಶ್ ರವರಿಗೆ ನಿವೇಶನಕ್ಕೆ ಅನುಕೂಲ ಕಲ್ಪಿಸುವಂತೆ ಆದೇಶಿಸಿ ಖಾಲಿ ನಿವೇಶನ ಮಂಜೂರು ಮಾಡಲಾಗಿತ್ತು ಆದರೆ ಯಾವುದೇ ರೀತಿಯ ನಿವೇಶನ ರಮೇಶ್ ಕೈ ಸೇರಿಲ್ಲ ಈ ಕುರಿತು ನಮ್ಮ ಪ್ರಶ್ನೆಗಳಿಗೆ ಪಂಚಾಯಿತಿ ಉತ್ತರ ನೀಡುತ್ತಿಲ್ಲ ಹಾಗಾಗಿ ಈ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದೇವೆ. ಕಿಂಚಿತ್ತು ಕನಿಕರ ಇಲ್ಲದ ಪಂಚಾಯತಿ ಅಧಿಕಾರಿಗಳ ವಿರುದ್ಧ ನಮ್ಮ ಈ ಪ್ರತಿಭಟನೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಇನ್ನಾದರೂ ಅಧಿಕಾರಿಗಳು ಎಚ್ಚೆದ್ದು ವಿಶೇಷ ವಿಕಲಚೇತನರಾದ ರಮೇಶ್ ರವರಿಗೆ ನಿವೇಶನ ಮಂಜೂರು ಮಾಡಬೇಕಾಗಿ ಮನವಿ ಮಾಡುತ್ತೇವೆ ಎಂದರು.

    ರಮೇಶ್ ಮಾತನಾಡಿ ನನ್ನದು ತೀರ ಬಡ ಕುಟುಂಬ ,ಕುಟುಂಬದ ನಿವಾಹಣೆಯ ಕಷ್ಟಕರವಾಗಿದ್ದು ಆಟೋ ಚಲನೆ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದೇನೆ, ಕಳೆದ ಹತ್ತು ವರ್ಷಗಳಿಂದ ಸತತವಾಗಿ ಪಂಚಾಯಿತಿಯ ಸುತ್ತ ನಿವೇಶನಕ್ಕಾಗಿ ಸುತ್ತುತ್ತಿದ್ದೇನೆ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ ಹೆಚ್ ಮುನಿಯಪ್ಪ ಸೇರಿದಂತೆ ಹಲವು ಗಣ್ಯರ ಬಳಿ ಮನವಿ ಸಲ್ಲಿಸಿದ್ದು ನಿವೇಶನ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ ಆದರೆ ಇದುವರೆಗೂ ನನಗೆ ಯಾವುದೇ ರೀತಿಯ ನಿವೇಶನದ ಕುರಿತು ಮಾಹಿತಿ ಲಭ್ಯವಾಗಿಲ್ಲ. ನನ್ನ ಮನವಿಗೆ ಸ್ಪಂದಿಸದ ಅಧಿಕಾರಿಗಳು ನಿರ್ಲಕ್ಷತೆಯಿಂದ ಮಾತನಾಡುತ್ತಿದ್ದು. ನನಗೆ ನಿವೇಶನ ಕಲ್ಪಿಸುವಂತೆ ಮತ್ತೊಮ್ಮೆ ಈ ಮೂಲಕ ಮನವಿ ಮಾಡುತ್ತೇನೆ ಎಂದರು.

    ತೂಬಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ ಪಂಚಾಯಿತಿ ಸದಸ್ಯರ ಒಮ್ಮತ ಇಲ್ಲದ ಕಾರಣ ವಿಕಲಚೇತನರಾದ ರಮೇಶ್ ರವರಿಗೆ ನಿವೇಶನ ಕೊಡಲು ಸಾಧ್ಯವಾಗುತ್ತಿಲ್ಲ. ಸದಸ್ಯರ ಒಪ್ಪಿಗೆ ಇಲ್ಲದ ಕಾರಣ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನಿವೇಶನ ರಹಿತ ಗ್ರಾಮಸ್ಥರಿಗೆ ನಿವೇಶನ ಕಲ್ಪಿಸಲು ಈಗಾಗಲೇ ಸ್ಥಳ ಗುರುತಿಸಿದ್ದು ಸದಸ್ಯರ ಅನುಮೋದನೆ ದೊರೆತ ತಕ್ಷಣವೇ ನಿವೇಶನ ವಿಚಾರಣೆ ಮಾಡಲಾಗುವುದು ಎಂದರು.

    ಸ್ಥಳೀಯ ರಾಜಕೀಯ ಚಟಗಳಿಗೆ ಒಬ್ಬ ಸ್ವಾಭಿಮಾನಿ ವಿಕಲಚೇತನರ ಜೀವನ ಹಾಳಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು. ಸ್ಥಳೀಯ ಪಂಚಾಯಿತಿ ಸದಸ್ಯರು ಇನ್ನಾದರೂ ಎಚ್ಚೆದ್ದು ಫಲಾನುಭವಿಗೆ ಖಾಲಿ ನಿವೇಶನ ಹಸ್ತಾಂತರಿಸಲಿ ಎಂದು ವಿಜಯ ಮಿತ್ರ ಆಶಿಸುತ್ತದೆ.

  • *ನಾಡೋಜ ಕಮಲಾ ಹಂಪನಾ ನುಡಿನಮನ ಕಾರ್ಯಕ್ರಮ*

    ಕನ್ನಡ ಸಾಹಿತ್ಯ ಮತ್ತು ಸಂಶೋಧನೆಗೆ  ನಾಡೋಜ ಕಮಲಾ ಹಂಪನಾ ಕೊಡುಗೆ ಅನನ್ಯವಾಗಿದೆ.  ಸ್ತ್ರೀ ಸಂವೇದನೆಗೆ ಸಂಬಂಧಿಸಿದ ಸಂಶೋಧನೆ, ಜೈನ ಸಾಹಿತ್ಯ ಅವರ ವಿಶೇಷ ಅಧ್ಯಯನ ಕ್ಷೇತ್ರವಾಗಿತ್ತು ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ತಿಳಿಸಿದರು.

     

    ದೊಡ್ಡಬಳ್ಳಾಪುರ ಕನ್ನಡ ಜಾಗೃತ ಭವನದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ಸಹಯೋಗದಲ್ಲಿ ನಡೆದ ನಾಡೋಜ ಕಮಲಾ ಹಂಪನಾ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಳೆಗನ್ನಡ ಸಾಹಿತ್ಯದ ಸಮಗ್ರ ಅಧ್ಯಯನದಿಂದಾಗಿ  ಮಹತ್ವದ  ಕನ್ನಡ ಕಾವ್ಯಗಳನ್ನು ಸಂಗ್ರಹಿಸಿ ಕೊಟ್ಟರು. ಸ್ತ್ರೀವಾದಿ ನೆಲೆಯಲ್ಲಿ ವಿಮರ್ಶೆಯೊಂದಿಗೆ,  ಮಹಿಳೆಯರನ್ನು ಕುರಿತ ವೈಚಾರಿಕ ಬರಹಗಳೊಂದಿಗೆ ಕನ್ನಡ ಮಹಿಳಾ ಸಾಹಿತ್ಯವನ್ನು ವಿಸ್ತರಿಸಿದರು.   ಕಮಲಾಹಂಪನಾ ಅವರ  ಕನ್ನಡ ಸಾಹಿತ್ಯ ಸಂಶೋಧನೆ ಮತ್ತು ಚಿಂತನೆಗಳಿಗೆ ಅವರಿಗೆ ಕಲಿಸಿದ  ದೊಡ್ಡ ಗುರುಪರಂಪರೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿತ್ತು ಎಂದರು.

     

     

    ವಿಶ್ವವಿದ್ಯಾಲಯ ಅಧ್ಯಯನ ಪೀಠಗಳ ಅಧ್ಯಕ್ಷರು ಮತ್ತು ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.   ಕಮಲಾಪ್ರಿಯ ಕಾವ್ಯನಾಮದ ಮೂಲಕ ಹಲವು ಸೃಜನಶೀಲ ಕೃತಿಗಳನ್ನು ಬರೆದ ಕಮಲಾಹಂಪನಾ,  ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ  ಕೃತಿಗಳನ್ನು‌ ರಚನೆ ಮಾಡಿದರು.  ಕಥಾಸಂಕಲನಗಳು, ವಚನ ಸಂಕಲನಗಳು,  ವಿಮರ್ಶಾ ಕೃತಿಗಳು, ಸಂಶೋಧನಾ  ಗ್ರಂಥಗಳು,   ಅನುವಾದಗಳು, ನಾಟಕ ರೂಪಕಗಳು, ಕಾದಂಬರಿ ರಚಿಸಿದರು. ‌ಕಮಲಾ ಹಂಪನಾ ಅವರ ಸಾಧನೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳು ಮತ್ತು ಗೌರವಗಳು ಸಂದಿವೆ. ಮೂಡುಬಿದಿರೆಯಲ್ಲಿ ನಡೆದ 71ನೇ ಅಖಿಲ‌ ಭಾರತ ‌ಕನ್ನಡ ಸಾಹಿತ್ಯ ಸಮ್ಮೇಳನದ ‌ಅಧ್ಯಕ್ಷರಾಗಿದ್ದರು ಎಂದರು.

     

    ಕನ್ನಡ ಜಾಗೃತ ಪರಿಷತ್ತಿನ ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ,    ಜೈನಧರ್ಮವು ಪ್ರತಿಪಾದಿಸಿದ ಜೀವನ ಮೌಲ್ಯಗಳು  ಇಂದಿಗೂ ಪ್ರಸ್ತುತವಾಗಿವೆ.  ಜೈನ ಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಪ್ರಧಾನ್ಯತೆ ಇದೆ.   ಕಮಲಾಹಂಪನಾ ಅವರು  ಜೈನ ಧರ್ಮ ಮತ್ತು  ಸಾಹಿತ್ಯವನ್ನು ಗಂಭೀರವಾಗಿ  ಅಧ್ಯಯನ ಮಾಡಿದವರು.‌  ಕಮಲಾ ಹಂಪನಾ ಅವರ ಕನ್ನಡ ಸಾಹಿತ್ಯದ   ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು  ಕನ್ನಡಿಗರು ಗೌರವಿಸಬೇಕಾಗಿದೆ ಎಂದರು.

     

    ಕಾರ್ಯಕ್ರಮದಲ್ಲಿ ಕನ್ನಡಪರ ಹಿರಿಯ ಹೋರಾಟಗಾರರುಗಳಾದ  ಸಂಜೀವನಾಯಕ್, ಗುರುರಾಜಪ್ಪ,  ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ, ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ನಾಗರತ್ನಮ್ಮ,  ಕನ್ನಡ ಜಾಗೃತ ಪರಿಷತ್ತು ಗೌರವ ಅಧ್ಯಕ್ಷೆ ಸುಲೋಚನಮ್ಮ ವೆಂಕಟರೆಡ್ಡಿ, ಕಾರ್ಯದರ್ಶಿ ಡಿ.ಪಿ.ಆಂಜನೇಯ,  ಕನ್ನಡ ಪಕ್ಷದ ಅಧ್ಯಕ್ಷ ಡಿ.ವೆಂಕಟೇಶ್, ಕಾರ್ಯದರ್ಶಿ ಎಚ್.ಮುನಿಪಾಪಣ್ಣ,  ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಕವಿ ಶ್ರೀನಿವಾಸ ವಾಣಿಗಾರಹಳ್ಳಿ, ಕನ್ನಡ ಜಾಗೃತ ಪರಿಷತ್ತು ಮತ್ತು  ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

  • *ಚಿಲ್ಲರೆ ಕೊಡದ ಕಂಡಕ್ಟರ್ ವಿರುದ್ಧ BMTC ಸಂಸ್ಥೆಗೆ ಪ್ರಯಾಣಿಕನ ದೂರು : ಚಿಲ್ಲರೆ ಹಣ ಹಿಂದಿರುಗಿಸಿದ BMTC*

    ದೊಡ್ಡಬಳ್ಳಾಪುರ, ವಿಜಯಮಿತ್ರ : ಬಿಎಂಟಿಸಿ ಅಧಿಕೃತ ವೆಬ್ ಸೈಟ್ ನಲ್ಲಿ ದೂರು ನೀಡಿ 25 ರೂಪಾಯಿ ಚಿಲ್ಲರೆಯನ್ನು ಹಿಂಪಡೆದ ಪ್ರಯಾಣಿಕ ಗಿರೀಶ್.

    ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ ಕಂಡಕ್ಟರ್ 25 ರೂಪಾಯಿಯನ್ನು ಹಿಂತಿರುಗಿಸದ ಕಾರಣ ಅಧಿಕೃತ ವೆಬ್ ಸೈಟ್ ನಲ್ಲಿ ನೆಡೆದ ಘಟನೆ ಕುರಿತು ಕೆಲವೇ ನಿಮಿಷಗಳಲ್ಲಿ ದೂರು ನೀಡಿದ್ದರು ಈಗ ಬಿಎಂಟಿಸಿ ಸಂಸ್ಥೆಯು 25 ರೂಗಳ ಚಿಲ್ಲರೆ ಹಣವನ್ನು ಪ್ರಯಾಣಿಕ ಗಿರೀಶ್ ಗೆ ಹಿಂದಿರುಗಿಸಿದೆ.

    ಘಟನೆಯ ವಿವರ : 

     

    ಗ್ರಾಹಕ ಗಿರೀಶ್ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಬಿಎಂಟಿಸಿಯ ಒಂದು ದಿನದ ಪಾಸ್ ಹಾಗೂ ಟೋಲ್ ದರ ಸೇರಿ ₹ 75 ಆಗಿದ್ದರೆ, ಕಂಡಕ್ಟರ್ಗೆ ₹ 100 ಪಾವತಿಸಿ 25 ರೂಪಾಯಿ ಚೇಂಜ್ ಕೇಳಿದ್ದರು. ಆದಾಗ್ಯೂ, ಅವರು ತಮ್ಮ ಬಾಕಿ ಮೊತ್ತವನ್ನು ಹಿಂದಿರುಗಿಸದ ಕಂಡಕ್ಟರ್ ವಿರುದ್ಧ ಪ್ರಯಾಣಿಕ ಗಿರೀಶ್ ಬಿಎಂಟಿಸಿ ಸಂಸ್ಥೆಗೆ ದೂರು ಸಲ್ಲಿಸಿ ತಮಗೆ ಬರಬೇಕ್ಕಿದ್ದ ರೂ 25 ಹಣವನ್ನು ಹಿಂಪಡೆದಿದ್ದಾರೆ.

  • *ಸೂಕ್ತ ದರ ನಿಗದಿ ಮಾಡುವಂತೆ ಒತ್ತಾಯಿಸಿ ಕೆಐಎಡಿಬಿ ವಿರುದ್ಧ ರೈತರ ಹೋರಾಟ : ರೈತರ ಹೋರಾಟಕ್ಕೆ ಕೇಂದ್ರ ಸಚಿವ HDK ಸಾಥ್*

    ದೊಡ್ಡಬಳ್ಳಾಪುರ, ವಿಜಯಮಿತ್ರ : ರೈತರ ಹೋರಾಟ 165 ದಿನಕ್ಕೆ ಕಾಲಿಟ್ಟಿದೆ. ಆದರೂ ಕೆಐಎಡಿಬಿ ಅಧಿಕಾರಿಗಳು ರೈತರಿಗೆ ಯಾವುದೇ ಪರಿಹಾರದ ಘೋಷಣೆ ಮಾಡಿಲ್ಲ. ಸರ್ಕಾರದ ಎಸ್ ಆರ್ ಬೆಲೆ ಆಧಾರದ ಮೇಲೆ ಭೂ ದರ 1:4 ನಿಗದಿ ಮಾಡಿ ರೈತರನ್ನು ಉಳಿಸಿ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಅಧಿಕಾರಿಗಳಿಗೆ ಮನವಿ ಮಾಡಿದರು.

    ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಪ್ರತಿ ದಿನ ಕೂಡ ಪ್ರಮುಖವಾದದ್ದು ಆದರೆ ರೈತರು ತಮ್ಮ ಜೀವನಕ್ಕಾಗಿ ಕಳೆದ 165 ದಿನಗಳಿಂದ ಸತತವಾಗಿ ಹೋರಾಟ ನೆಡೆಸುತ್ತಿದ್ದರು ಯಾವುದೇ ರೀತಿಯ ಪರಿಹಾರ ನೀಡದ ಅಧಿಕಾರಿಗಳು ನಮ್ಮಲ್ಲಿ ಇರುವುದು ವಿಪರ್ಯಾಸ . ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುತ್ತಿಲ್ಲ ಅದು ಒಂದು ರೀತಿಯ ದಾನ ಮಾಡಿದಂತೆ ಅದನ್ನು ಅಧಿಕಾರಿಗಳು ಅರಿತು ರೈತರ ಪರ ನಿಲ್ಲಬೇಕಿದೆ. ರೈತರ ಸಹಾಯಕ್ಕೆ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರು ಸದಾ ಬೆಂಬಲವಾಗಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ಕೆಐಎಡಿಬಿ ಭೂ ಪರಿಹಾರ ಧನ ವಿತರಣೆಯಲ್ಲಿ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ . ನಮ್ಮ ರೈತರ ನಿಯೋಗ ಅವರನ್ನು ಸಂಪರ್ಕಿಸಿದ ದಿನವೇ ಕೆಐಎಡಿಬಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿ ಹೇಳಿ ರೈತರಿಗೆ ಉತ್ತಮ ಬೆಲೆ ನೀಡುವಂತೆ ತಿಳಿಸಿದ್ದಾರೆ ಎಂದರು.

     

    ಈ ಕುರಿತು ನೂತನ ಕೇಂದ್ರ ಸಚಿವರಾದ ಕೆ ಸುಧಾಕರ್ ಗಮನಕ್ಕೂ ತರಲಾಗಿದೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ರೈತರ ಹೋರಾಟವನ್ನು ಬೆಂಬಲಿಸಿ, ಕೆ ಐ ಎ ಡಿ ಬಿ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದರು.

     

    ನಮ್ಮ ಹೋರಾಟದಿಂದ ರೈತರ ಪ್ರತಿ ಎಕ್ಕರೆ ಭೂಮಿಗೆ ಕೆಐಎಡಿಬಿ ಅಧಿಕಾರಿಗಳು 20 ಲಕ್ಷ ಅಧಿಕ ಮೊತ್ತ ಘೋಷಣೆ ಮಾಡಿರುವುದು ನಮ್ಮ ಯಶಸ್ಸಿಗೆ ಪೂರಕವಾಗಿದೆ ರೈತರು ಧೃತಿಗಡದೆ, ತಾಳ್ಮೆಯಿಂದ ಹೋರಾಟ ಮುಂದುವರೆಸಿದಲ್ಲಿ ಸರ್ಕಾರದ ಮಾನದಂಡಗಳ ಪ್ರಕಾರ 1:4 ದರ ನಿಗದಿ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.

     

    ಅಫೇರಲ್ ಪಾರ್ಕ್ ಕುರಿತು ಹರೀಶ್ ಗೌಡರ ಆಕ್ರೋಶ..

     

    ಈ ಹಿಂದೆ ತಾಲೂಕಿನ ಬಾಷೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೆಐಎಡಿಬಿ ವಶಕ್ಕೆ ಪಡೆದಿರುವ ಭೂಮಿಯಿಂದ ಏನಾಗಿದೆ ಎಂಬುದು ಎಲ್ಲರೂ ತಿಳಿದಿದೆ. ಕಾರ್ಖಾನೆಗಳಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಸದಾ ಕಿರಿಕಿರಿ ತೊಂದರೆ ಉಂಟಾಗುವುದು ಬಿಟ್ಟರೆ.. ಮತ್ತೇನು ಪ್ರಯೋಜನವಾಗುತ್ತಿಲ್ಲ. ಕಾರ್ಖಾನೆಗಳು ಹೊರಸೂಸುವ ತ್ಯಾಜ್ಯ ಅಂತರ್ಜಲ ಸೇರಿ ಜಲ ಸಂಪನ್ಮೂಲ ಸಂಪೂರ್ಣ ಹಾಳಾಗಿದ್ದು ನಾವು ಕಾಣಬಹುದಾಗಿದೆ. ಒಮ್ಮೆ ಕಾರ್ಖಾನೆಗಳಿಗಾಗಿ ಭೂಮಿ ಪಡೆದುಕೊಂಡರೆ ಮತ್ತೆ ಆ ಭೂಮಿಯಲ್ಲಿ ವ್ಯವಸಾಯ ಎಂಬುದು ಕನಸಿನ ಮಾತಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

     

    ರೈತ ಮುಖಂಡರಾದ ಆನಂದ್ ಮಾತನಾಡಿ ಸರ್ಕಾರದ ಮನದಂಡಗಳನ್ನು ಉಲ್ಲಂಘಸಿ ಭೂ ದರ ನಿಗದಿ ಮಾಡಿರುವ ಹಿನ್ನಲೆ ರೈತರು ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಸತತ 165 ದಿನಗಳಿಗೆ ನಮ್ಮ ಹೋರಾಟ ಕಾಲಿಟ್ಟಿದ್ದು ಈ ಕುರಿತು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ನೇತೃತ್ವದಲ್ಲಿ ರೈತ ಮುಖಂಡರ ನಿಯೋಗ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಪರಿಹಾರಿಸುವಂತೆ ಮನವಿ ಮಾಡಿದ್ದೇವೆ ಎಂದರು.

     

    ಜೂನ್ 11 ರಂದು ಅಧಿಕಾರಿಗಳಾದ ಸೇಲ್ವಾ ಕುಮಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು ಸಭೆಯಲ್ಲಿ ಪ್ರತಿ ಎಕ್ಕರೆ ಗೆ 20 ಲಕ್ಷ ಹೆಚ್ಚುವರಿ ನೀಡುತ್ತೇವೆ ಎಂದು ಅಧಿಕೃತವಾಗಿ ರೈತರಿಗೆ ಘೋಷಣೆ ಮಾಡಿದ್ದಾರೆ. ಅಧಿಕಾರಿಗಳ ಘೋಷಣೆ ಸ್ವಾಗತ ಆದರೆ ರೈತರಿಗೆ 1:4 ಅನುಪಾತದಲ್ಲಿ ಭೂ ಪರಿಹಾರ ಧನ ನೀಡಬೇಕು ರೈತರಿಗೆ ಆ ಹಣ ಪಡೆಯುವ ಹಕ್ಕಿದೆ ಎಂದು ಸಭೆ ನೆರೆದಿದ್ದ ರೈತರು ಸಭೆಯನ್ನು ಬಹಿಷ್ಕರಿಸಿ ಹೊರ ಬಂದಿದ್ದೇವೆ.

    ಭೂ ಪರಿಹಾರ ಧನದ ವಿಚಾರವಾಗಿ ಸ್ಥಳೀಯ ಕೆಲ ರೈತರಿಂದ ದಿಕ್ಕು ತಪ್ಪಿಸುವ ಪ್ರಯತ್ನ ನೆಡೆಯುತ್ತಿದ್ದು ರೈತರು ಒಮ್ಮತದಿಂದ ಹೋರಾಟ ಮುಂದುವರೆಸುವಂತೆ ಮನವಿ ಮಾಡಿದರು.

     

    ಒಂದುದೇಶದ ಪ್ರಗತಿಗೆ ಕೈಗಾರಿಕೆ ಎಷ್ಟು ಮುಖ್ಯವೋ ಕೃಷಿಯು ಅಷ್ಟೇಮುಖ್ಯವಾದದ್ದು.ಕೈಗಾರಿಕೆಯಿಂದ ಮಾಲಿನ್ಯ ಮಾತ್ರ ಸಾಧ್ಯ ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಒಮ್ಮೆ ಭೂಮಿ ಕೊಟ್ಟರೆ ರೈತನ ಬದುಕು ಅಂತ್ಯವಾಗುತ್ತದೆ. ಸೂಕ್ತ ಪರಿಹಾರ ನೀಡದೆ ಹೊರತು ರೈತರು ಭೂಮಿ ನೀಡುವುದು ಸೂಕ್ತವಲ್ಲ ಹಾಗಾಗಿ ಹೋರಾಟದಲ್ಲಿ ನಂಬಿಕೆ ಇರಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸ್ಥಳೀಯ ಮುಖಂಡ ತಾ.ನಾ. ಪ್ರಭುದೇವ್ ತಿಳಿಸಿದರು.

     

    ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಪ್ಪಯ್ಯಣ್ಣ, ಎ.ನರಸಿಂಹಯ್ಯ, ರಾ.ಬೈರೇಗೌಡ, ಚಂದ್ರಣ್ಣ, ಅಶ್ವತ್ಥನಾರಾಯಣ, ಪ್ರವೀಣ್ ಶಾಂತಿನಗರ, ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.

  • *ನಗರಸಭೆ ಯಡವಟ್ಟು : ಪಾರ್ಕ್ ಮಾಡಲು ಪ್ಲಾನ್ ಮಾಡಿ ಶೌಚಾಲಯ ಕಟ್ಟಲು ಮುಂದಾದ ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ*

    ದೊಡ್ಡಬಳ್ಳಾಪುರ : ಬರೀ ಕಸದ ರಾಶಿ ತುಂಬಿದ್ದ ಸ್ಥಳವನ್ನು ಸ್ಥಳೀಯ ಸಾರ್ವಜನಿಕರು ತಮ್ಮ ಸ್ವಂತ ಖರ್ಚಿನಿಂದ ಶುಚಿಗೊಳಿಸಿ ಎಲ್ಲರಿಗೂ ಅನುಕೂಲವಾಗುವಂತೆ ಪಾರ್ಕ್ ನಿರ್ಮಾಣದ ಯೋಜನೆ ರೂಪಿಸಿದ್ದರು ಆದರೆ ದೊಡ್ಡಬಳ್ಳಾಪುರ ನಗರ ಸಭೆ ಆ ಜಾಗದಲ್ಲಿ ಶೌಚಾಲಯವನ್ನು ಕಟ್ಟಲು ಯೋಜನೆ ರೂಪಿಸಿರುವ ಹಿನ್ನಲೆ ವಿನಾಯಕ ನಗರ ಹಾಗೂ ರೋಜಿಪುರ ವಾರ್ಡ್ ನ ಸಾರ್ವಜನಿಕರು ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.

    ನಗರದ ಕೋರ್ಟ್ ಮುಂಭಾಗ ಸಂಪೂರ್ಣ ಮುಚ್ಚಿ ಹೋಗಿದ್ದ ಕಲ್ಯಾಣಿ ಪ್ರದೇಶವನ್ನು ಸ್ಥಳೀಯ ಸಾರ್ವಜನಿಕರು ಹಾಗೂ ಮುಖಂಡರು ದೇಣಿಗೆ ಸಂಗ್ರಹಿಸುವ ಮೂಲಕ ಶುಚಿಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾದ ರೀತಿಯಲ್ಲಿ ಪಾರ್ಕ್ ಯೋಜನೆ ರೂಪಿಸಿದ್ದರು.

     

    ಆದರೆ ಹಠಾತ್ತಾಗಿ ನಗರಸಭೆ ಸಾರ್ವಜನಿಕ ಸುಲಭ ಶೌಚಾಲಯ ನಿರ್ಮಿಸಲು ಮುಂದಾಗಿದ್ದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಈ ಕುರಿತು ಪ್ರತಿಭಟನೆಗೆ ಮುಂದಾಗಿರುವ ಸ್ಥಳೀಯರು ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ನಗರಸಭಾ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದಾರೆ.

    ಸ್ಥಳೀಯ ಮುಖಂಡರಾದ ದಯಾನಂದ್ ಮಾತನಾಡಿ ಸ್ಥಳೀಯ ನಗರ ಸಭೆ ರೂಪಿಸಿರುವ ಯೋಜನೆ ಸರಿಯಿಲ್ಲ ಕಾರಣ ನಗರದ ಕೋರ್ಟ್ ಅವರಣಕ್ಕೆ ಕೇವಲ 300 ಮೀಟರ್ ದೂರದಲ್ಲಿ ಎರಡು ಸುಲಭ್ ಶೌಚಾಲಯಗಳನ್ನು ಈಗಾಗಲೇ ನಿರ್ಮಿಸಿದ್ದು ಸದರಿ ಶೌಚಾಲಯಗಳ ನಿರ್ವಹಣೆ ಮಾಡುವಲ್ಲಿ ದೊಡ್ಡಬಳ್ಳಾಪುರ ನಗರ ಸಭೆ ಸೋತಿದೆ. ಈಗ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಿದ್ದ ಜಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವುದರ ಹಿಂದಿನ ಉದ್ದೇಶ ಅರಿಯಬೇಕಿದೆ. ಈ ಸ್ಥಳದಲ್ಲಿ ಪುರತನ ಕಲ್ಯಾಣಿ ಇದ್ದು. ಕಲ್ಯಾಣಿ ಸಂರಕ್ಷಿಸುವಲ್ಲಿ ಸ್ಥಳೀಯ ಸಾರ್ವಜನಿಕರ ಪಾತ್ರ ಬಹಳಷ್ಟಿದೆ. ಆದರೆ ಇಂದು ದೊಡ್ಡಬಳ್ಳಾಪುರ ನಗರಸಭೆ ಸಾರ್ವಜನಿಕರ ಇಚ್ಛೆಗೆ ವಿರುದ್ಧವಾಗಿ ಕರ್ತವ್ಯ ನಿರ್ವಹಿಸಲು ಮುಂದಾಗಿದೆ ಎಂದರು.

     

     

    ಸ್ಥಳೀಯ ರೈತ ಮುಖಂಡರಾದ ಸುಲೋಚನಾ ಮಾತನಾಡಿ ಪ್ರಸ್ತುತ ನಾವು ಕಾಣುತ್ತಿರುವ ಕಲ್ಯಾಣಿಯನ್ನು ಕಸ ಹಾಗೂ ತಾಜ್ಯ ವಸ್ತುಗಳಿಂದ ತುಂಬಲಾಗಿತ್ತು. ಸ್ಥಳೀಯರ ಸಹಾಯದಿಂದ ಎಲ್ಲರೂ ಒಗ್ಗೂಡಿ ಈ ಸ್ಥಳವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅನುವು ಮಾಡಿದೆವು. ಆದರೆ ಈಗ ಸಾರ್ವಜನಿಕರ ಭಾವನೆಗಳಿಗೆ ಬೆಲೆ ನೀಡದೆ ದೊಡ್ಡಬಳ್ಳಾಪುರ ನಗರ ಸಭೆ ಕಲ್ಯಾಣಿ ಸಮೀಪದ ಸ್ಥಳದಲ್ಲಿ ಶೌಚಾಲಯ ನಿರ್ಮಿಸಲು ಮುಂದಾಗಿದ್ದು. ಸ್ಥಳೀಯ ಸಾರ್ವಜನಿಕರ, ಮಕ್ಕಳ ಅರೋಗ್ಯಕ್ಕಾಗಿ ಪಾರ್ಕ್ ನಿರ್ಮಿಸುವ ಉದ್ದೇಶಕ್ಕೆ ಎಳ್ಳು ನೀರು ಬಿಟ್ಟಿದೆ. ನಗರಸಭೆ ಅಧಿಕಾರಿಗಳ ಈ ನಿರ್ಧಾರ ಬದಲಾಗಬೇಕಿದೆ ಕಲ್ಯಾಣಿ ಸುತ್ತ ಮುತ್ತಲು ಪಾರ್ಕ್ ನಿರ್ಮಿಸುವ ಮೂಲಕ ಸ್ಥಳೀಯ ಸಾರ್ವಜನಿಕರ ಭಾವನೆಗಳಿಗೆ ಸ್ಪಂದಿಸಬೇಕಿದೆ ಎಂದರು.

    ಈ ಸಂದರ್ಭದಲ್ಲಿಹಸನಘಟ್ಟ ರವಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರು, ಶಿವ ಶೇಖರಪ್ಪ, ರಮೇಶ್ ಆಚಾರ್, ಆರ್ ಎಂ ಮಹೇಶ್, ವಿಲಾಸ್, ದಾದಾಪೀರ್, ರುದ್ರೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • *ಸರ್ಕಾರಿ ಜಾಗಕ್ಕೆ ಅತಿಕ್ರಮ ಪ್ರವೇಶ ಆರೋಪ l ಪಂಚಾಯಿತಿ ಅಧಿಕಾರಿಗಳು ಹಾಗೂ ಮನೆ ಮಾಲೀಕನ ನಡುವೆ ವಾಗ್ವಾದ l ಆರೋಪಿಯನ್ನು ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸ್*

    ದೊಡ್ಡಬಳ್ಳಾಪುರ : ಪಂಚಾಯತಿ ಜಾಗವನ್ನು ಒತ್ತುವರಿ ಮಾಡಿರುವ ಹಿನ್ನಲೆ ಪಂಚಾಯತಿ ಅಧಿಕಾರಿಗಳು ಮಂಜುನಾಥ್ ಎಂಬುವರ ಸ್ವತ್ತಿನ ಮೇಲೆ ದಾಳಿ ನೆಡೆಸಿದ್ದಾರೆ.

    ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಏಳ್ಳುಪುರ ಗ್ರಾಮದ ನಿವಾಸಿ ಮಂಜುನಾಥ್ ಎಂಬುವರು ಸರ್ಕಾರಿ ಜಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದರೆಂದು ಆರೋಪಿಸಿ ಅಧಿಕಾರಿಗಳು ಇಂದು ಬೆಳಂಬೆಳಗ್ಗೆ ದಾಳಿ ನೆಡೆಸಿದ್ದಾರೆ.

     

    ಏಳ್ಳುಪುರ ಗ್ರಾಮದ ನಿವಾಸಿ ಮಂಜುನಾಥ್ ತಮ್ಮ ಮನೆಯ ಮುಂಭಾಗದ ಗ್ರಾಮ ಠಾಣಾ ಸ್ಥಳವನ್ನು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ಕುರಿತು ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ನೋಟಿಸ್ ನೀಡಿದರು ಸ್ಪಂದಿಸುತ್ತಿಲ್ಲ ಈ ಕುರಿತು ಕೇಳಲು ಬಂದ ಅಧಿಕಾರಿಗಳು ಹಾಗೂ ಪೌರಾಕಾರ್ಮಿಕರ ಮೇಲೆ ಅಸಭ್ಯವಾಗಿ ಮಾತನಾಡುವುದಲ್ಲದೇ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಪಂಚಾಯಿತಿ ಅಧಿಕಾರಿಗಳು ಆರೋಪಿಸಿದ್ದಾರೆ.

     

    ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಗಿಳಿದ ಮನೆ ಮಾಲೀಕ ಮಂಜುನಾಥ್ ಗ್ರಾಮಠಾಣದ ತೆರವು ಜಾಗದಲ್ಲಿ ಕಾರ್ ನಿಲ್ಲಿಸಿ ಹೈಡ್ರಾಮ ಮಾಡಿದ್ದಾರೆ.ಸ್ಥಳಕ್ಕೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ರೇವಣ್ಣ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

    ನಂತರ ಹೆಚ್ಚಿನ ವಿಚಾರಣೆ ಮನೆಯ ಮಾಲೀಕ ಮಂಜುನಾಥರನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸತ್ಯ ಸತ್ಯತೆ ಏನು ಎಂಬುದು ತಿಳಿಯಬೇಕಿದೆ.

  • *ನಗರದ ಐತಿಹಾಸಿಕ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ*

    ದೊಡ್ಡಬಳ್ಳಾಪುರ : ತಾಲ್ಲೂಕಿನ ನಗರ ಭಾಗದ ಸೌಂದರ್ಯ ಮಹಲ್ ಮುಖ್ಯರಸ್ತೆಯಲ್ಲಿ ಶಿಥಿಲವಸ್ಥೆ ತಲುಪಿರುವ ಐತಿಹಾಸಿಕ ಪ್ರಸಿದ್ಧ ಭದ್ರಕಾಳಮ್ಮ ಸಮೇತ ರುದ್ರದೇವರ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

    ಕಾರ್ಯಕ್ರಮವು ಒಬದೇನಹಳ್ಳಿ ಮುನಿಯಪ್ಪ ನೇತೃತ್ವದಲ್ಲಿ ವೀರ ಶೈವ ಸಂಘದ ಪದಾಧಿಕಾರಿಗಳು ಹಾಗೂ ಭೋವಿ ಸಮುದಾಯದ ಮುಖಂಡರು ಪೂಜೆ ಸಲ್ಲಿಸಿ ಸಿಹಿ ಹಂಚುವ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮುಖಂಡರಾದ ಒಬದೇನಹಳ್ಳಿ ಮುನಿಯಪ್ಪ ಮಾತನಾಡಿ ಐತಿಹಾಸಿಕ ಪ್ರಸಿದ್ಧ ಭದ್ರಾಕಾಳಮ್ಮ ಸಮೇತ ವೀರಭದ್ರಸ್ವಾಮಿ ದೇವಾಲಯ ಶಿಥಿಲವಸ್ಥೆ ತಲುಪಿದ್ದು. ಸದರಿ ದೇವಾಲಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಭೋವಿ ಹಾಗೂ ವೀರ ಶೈವ ಸಮುದಾಯದ ಮುಖಂಡರು ಒಮ್ಮತದಿಂದ ನಿರ್ಧಾರಿಸಿ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದ್ದು. ಐತಿಹಾಸಿಕ ದೇವಾಲಯದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿರುವುದು ಸಂತಸ ತಂದಿದೆ ಎಂದರು.

     

    ವೀರ ಶೈವ ಸಮುದಾಯದ ಮುಖಂಡರಾದ ಸೋಮಣ್ಣ ಮಾತನಾಡಿ ಪಾಳು ಬಿದಿದ್ದ ದೇವಾಲಯವನ್ನು ಅಭಿವೃದ್ಧಿಪಡಿಸುವ ಮೂಲಕ 200 ವರ್ಷಗಳಷ್ಟು ಹಳೆಯ ಭದ್ರಾಕಾಳಮ್ಮ ಸಮೇತ ವೀರಭದ್ರಸ್ವಾಮಿ ದೇವಾಲಯದ ಉಳಿವಿಗೆ ಎರಡು ಸಮುದಾಯದ ಮುಖಂಡರು ಮುಂದಾಗಿರುವುದು ಸಂತಸ ತಂದಿದೆ. ನಗರ ಭಾಗದಲ್ಲಿ ಕೇವಲ ಒಂದು ವೀರಭದ್ರಸ್ವಾಮಿ ದೇವಾಲಯವಿದ್ದು ಈ ಜೀರ್ಣೋದ್ಧಾರ ಕಾರ್ಯವು ಆದಷ್ಟು ತೀವ್ರ ಗತಿಯಲ್ಲಿ ನೆಡೆಯಲಿದೆ ಎಂದರು

    ಕಾರ್ಯಕ್ರಮದಲ್ಲಿ ವೀರ ಶೈವ ಸಂಘದ ಅಧ್ಯಕ್ಷರಾದ ಸೋಮ ರುದ್ರಶರ್ಮ, ಕಾರ್ಯದರ್ಶಿ ಮಂಜುನಾಥ್, ಖಜಾಂಜಿ ಗಗನ್ ,ಗಿರೀಶ್, ಮುಖಂಡರಾದ ಪಣೀಶ್, ಪರಮೇಶ್, ಗಿರೀಶ್ , ಶಿವನಂದಪ್ಪ , ಮಂಜುನಾಥ್ , ಉಮಾಪತಿ , ಸಿದ್ದಣ್ಣ , ನಗರ ಸಭಾ ಸದಸ್ಯ ಪದ್ಮರಾಜು, ಸದಸ್ಯರಾದ ಭಾಸ್ಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.