Blog

  • *ರಘುನಾಥಪುರಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಭೇಟಿ l ನೀರಿನ ಗುಣಮಟ್ಟ ತಿಳಿಯಲು ನೀರನ ಸ್ಯಾಂಪಲ್ ಸಂಗ್ರಹಿಸಿದ ಅಧಿಕಾರಿಗಳು*

    ದೊಡ್ಡಬಳ್ಳಾಪುರ: ತಾಲ್ಲೂಕಿನ ರಘುನಾಥಪುರ ಗ್ರಾಮದ ನೀರು ಸ್ಥಳೀಯ ಖಾಸಗಿ ಕಾರ್ಖಾನೆಯ ತ್ಯಾಜ್ಯ ವಸ್ತುಗಳೊಂದಿಗೆ ಸೇರಿ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ನೀಡಿದ ದೂರಿನ ಹಿನ್ನೆಲೆ ಬುಧವಾರ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನೆಡೆಸಿದರು.

    ನೀರಿನ ಗುಣಮಟ್ಟ ತಿಳಿಯಲು ಊರಿನ ಕೆರೆ, ಕೊಳವೆ ಬಾವಿ ಸೇರಿದಂತೆ ಹಲವು ಜಲಮೂಲಗಳಿಂದ ನೀರಿನ ಸ್ಯಾಂಪಲ್ ಸಂಗ್ರಹಿಸಿದರು.

     

    ಅಧಿಕಾರಿಗಳ ಭೇಟಿಗೆ ಕಾರಣವೇನು…??

     

    ರಘುನಾಥಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡೇನಾ ಕಾರ್ಖಾನೆಯಿಂದ ತ್ಯಾಜ್ಯ ನೀರು ಭೂಮಿ ಸೇರುತ್ತಿದೆ. ಆದಕಾರಣ ಜಲಸಂಪನ್ಮೂಲಗಳು ಸಂಪೂರ್ಣ ಕಲುಷಿತವಾಗುತ್ತಿದೆ ಎಂದು ಆರೋಪಿಸಿ ಈ ಹಿಂದೆ ಊರಿನ ಯುವಕರು ಕಾರ್ಖಾನೆ ವಿರುದ್ಧ ಪ್ರತಿಭಟನೆ ನಡೆಸಿದರು. ಆದರೆ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಗ್ರಾಮಸ್ಥರು ದೂರು ನೀಡಿರುವ ಕಾರಣ ರಘುನಾಥಪುರಕ್ಕೆ ಅಧಿಕಾರಿಗಳು (ಜುಲೈ 10 )ಇಂದು ಭೇಟಿ ನೀಡಿ ಪರಿಶೀಲನೆ ನೆಡೆಸಿದರು.

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಗ್ರಾಮಸ್ಥರು, ಉಪಸ್ಥಿತರಿದ್ದರು.

  • *ಶೆಡ್ ಗೆ ನುಗ್ಗಿದ ಅಧಿಕಾರಿಗಳು : ಅಕ್ರಮ ಪ್ಲಾಸ್ಟರ್ ಆಫ್ ಪ್ಯಾರೀಸ್ (POP), ಬಣ್ಣ ಲೇಪಿತ ಗಣೇಶಮೂರ್ತಿ ತಯಾರಕರ ಮೇಲೆ ರೈಡ್*

    ಯಲಹಂಕ ಮಾರ್ಗದ ಕೆಲ ಗಣಪತಿ ಮೂರ್ತಿ ತಯಾರಕರು ಪ್ಲಾಸ್ಟರ್ ಆಫ್ ಪ್ಯಾರೀಸ್, ಬಣ್ಣ ಲೇಪಿತ ಮತ್ತು 5 ಆಡಿಗಿಂತ ಎತ್ತರದ ಗಣೇಶ ಮೂರ್ತಿಗಳ ತಯಾರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಯುವ ಸಂಚಲನ ಸಂಘಟನೆ ನೀಡಿದ ದೂರಿನ ಆಧಾರದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶ್ರೀನಿವಾಸ್ ಮತ್ತು ತಂಡ ಗಣೇಶ ಮೂರ್ತಿಗಳ ತಯಾರಿಕ ಘಟಕ( ಶೆಡ್ )ಗಳ ಮೇಲೆ ದಾಳಿ ನಡೆಸಿತು.

    ಬಹುತೇಕ ಗಣೇಶ ಮೂರ್ತಿ ತಯಾರಿಕ ಘಟಕಗಳು ಕಾನೂನು ಬಾಹಿರವಾಗಿ ಗಣೇಶ ಮೂರ್ತಿಗಳ ತಯಾರಿಕೆಗೆ ಮುಂದಾಗಿದ್ದಾರೆ, ಪ್ಲಾಸ್ಟರ್ ಆಫ್ ಪ್ಯಾರೀಸ್, ಬಣ್ಣ ಲೇಪಿತ ಮತ್ತು 5 ಆಡಿಗಿಂತ ಎತ್ತರದ ಗಣೇಶ ಮೂರ್ತಿಗಳ ತಯಾರಿಕೆಯನ್ನು ಸರ್ಕಾರ ಈಗಾಗಲೇ ನಿಷೇಧಿಸಿದೆ.ಆದರೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಕೆಲ ಘಟಕಗಳು ಕಾನೂನು ಬಾಹಿರವಾಗಿ ಗಣೇಶ ಮೂರ್ತಿಗಳ ತಯಾರಿಕೆಗೆ ಮುಂದಾಗಿವೆ.

     

    ಈ ಸಾಲಿನಲ್ಲಿ ಯಲಹಂಕ ತಾಲೂಕಿನ ಮಾರಸಂದ್ರದಲ್ಲಿ ಗಣೇಶ ಮೂರ್ತಿ ತಯಾರಿಕೆಯ 9 ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಬಹುತೇಕ ಎಲ್ಲಾ ಘಟಕಗಳಲ್ಲಿ ಕಾನೂನು ಬಾಹಿರವಾಗಿಯೇ ಗಣೇಶ ಮೂರ್ತಿಗಳ ತಯಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ನಾಗದಳ ಮತ್ತು ಯುವ ಸಂಚಲನ ತಂಡಗಳು ಪರಿಸರ ಮಾಲಿನ್ಯ ನಿಯಂತ್ರಣ ಘಟಕಕ್ಕೆ ದೂರು ಸಲ್ಲಿಸಿದ್ದು.ಕಾನೂನು ಬಾಹಿರವಾಗಿ ಗಣೇಶ ಮೂರ್ತಿಗಳ ತಯಾರಿಕೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದರು , ಪರಿಸರ ಪ್ರೇಮಿಗಳ ಒತ್ತಡಕ್ಕೆ ಮಣಿದ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಗಣೇಶ ಮೂರ್ತಿ ತಯಾರಿಕ ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ, ಈ ವೇಳೆ ಪ್ಲಾಸ್ಟರ್ ಆಫ್ ಫ್ಯಾರೀಸ್, ಬಣ್ಣ ಲೇಪಿತ ಗಣೇಶ ಮೂರ್ತಿಗಳು ಪತ್ತೆಯಾಗಿದ್ದು ಅಧಿಕಾರಿಗಳ ದಾಳಿಗೆ ಹೆದರಿದ ಇನ್ನೂಳಿದ 8 ಘಟಕಗಳು ಬಾಗಿಲು ಹಾಕಿ ಪರಾರಿಯಾಗಿದ್ದಾರೆ.

    ಸರ್ಕಾರವು ಯಾವುದೇ ರೀತಿಯಲ್ಲಿ ಪರಿಸರಕ್ಕೆ ಹಾನಿ ಮಾಡುವ ಗಣೇಶಮೂರ್ತಿಗಳನ್ನು ಬಳಸದಂತೆ, ನಿರ್ಮಿಸಿ ಮಾರಾಟ ಮಾಡದಂತೆ ಆದೇಶಿಸಿದ್ದರು. ಸಹ ಕೆಲ ಗಣಪತಿ ಮೂರ್ತಿ ತಯಾರಕರು ಹಣದ ಆಸೆಗೆ ಇಂದಿಗೂ ಅಕ್ರಮವಾಗಿ ಪ್ಲಾಸ್ಟರ್ ಆಫ್ ಪ್ಯಾರೀಸ್, ಬಣ್ಣ ಲೇಪಿತ ಗಣಪತಿಗಳನ್ನು ತಯಾರಿಸುತ್ತಿದ್ದಾರೆ.

     

     

    ಈ ಹಿನ್ನಲೆ ದೊಡ್ಡಬಳ್ಳಾಪುರ ತಾಲೂಕಿನ ಯುವ ಸಂಚಲನ ಸಂಘಟನೆಯ ಮುಖಂಡ ಗಿರೀಶ್ ನೀಡಿದ ದೂರಿನ ಹಿನ್ನೆಲೆ ಅಧಿಕಾರಿಗಳ ತಂಡ ಗಣೇಶ ತಯಾರಿಕಾ ಅಡ್ಡಗಳಿಗೆ ಭೇಟಿಕೊಟ್ಟು ಪ್ಲಾಸ್ಟರ್ ಆಫ್ ಪ್ಯಾರೀಸ್, ಬಣ್ಣ ಲೇಪಿತ ಗಣಪತಿಗಳನ್ನು ತಯಾರಿಸಿದಂತೆ ಎಚ್ಚರಿಕೆ ನೀಡಿದರು.

     

    ಪ್ರತಿ ವರ್ಷವೂ ಪ್ಲಾಸ್ಟರ್ ಆಫ್ ಪ್ಯಾರೀಸ್ (POP), ಬಣ್ಣ ಲೇಪಿತ ಗಣಪತಿಗಳ ತಯಾರಾಗುತ್ತಿದ್ದು. ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸದ ಕಾರಣ ಇದು ಇಂದಿಗೂ ಸಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಯುವ ಸಂಚಲನ ಮುಖಂಡ ಚಿದಾನಂದ್ ಆರೋಪಿಸಿದರು.

    ಪಿಓಪಿ ಅಥವಾ ರಾಸಾಯನಿಕ ಬಣ್ಣವುಳ್ಳ ಗಣಪತಿ ಮಾರಾಟ ಮಾಡುವುದು, ತಯಾರಿಸುವುದು ಅಪರಾಧವೆಂದು ಸರ್ಕಾರವು ಈಗಾಗಲೇ ಆದೇಶ ನೀಡಿದ್ದು, ತಯಾರಕರು ಯಾವುದೇ ರೀತಿಯ ಅಡ್ಡಿ ಆತಂಕಗಳಿಲ್ಲದೆ ಇಂದಿಗೂ ಕೆಲ ಪ್ರಭಾವಿಗಳ ಬೆಂಬಲದಿಂದ ತಯಾರಿಕೆ ನಡೆಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ದೂರು ಸಲ್ಲಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ , ಇನ್ನಾದರೂ ಅಧಿಕಾರಿಗಳು ಏಚ್ಚೆದ್ದು ಈ ಪಿ ಓ ಪಿ ಗಣೇಶಗಳಿಗೆ ಬ್ರೇಕ್ ಹಾಕಬೇಕಿದೆ ಎಂದರು.

    ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974ರ ಪ್ರಕಾರ ಕಲಂ 33(ಅ) ಕಾಯ್ದೆ ಪ್ರಕಾರ ರಾಜ್ಯದ ಕೆರೆಗಳಲ್ಲಿ ಹಾಗೂ ಇತರೆ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ , ಬಣ್ಣ ಲೇಪಿತ ವಿಗ್ರಹಗಳನ್ನು, ರಾಜ್ಯದ ಯಾವುದೇ ಜಲಗಳಲ್ಲಿ, ನದಿ, ಕಾಲುವೆ, ಬಾವಿಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 1974ರ ಕಲಂ 45-1 ಅನ್ವಯ 10 ಸಾವಿರ ದಂಡವನ್ನು ಮತ್ತು ಜೈಲುವಾಸವನ್ನು ವಿಧಿಸುವ ಅವಕಾಶವಿರುತ್ತದೆ. ಅಲ್ಲದೆ ಕಡ್ಡಾಯವಾಗಿ ಗಣೇಶ ಮೂರ್ತಿಗಳು 5 ಅಡಿ ಎತ್ತರವನ್ನು ಮೀರಬಾರದೆಂದು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಬಂಧ ವಿಧಿಸಿದೆ. ಈ ರೀತಿಯ ಗಣೇಶಗಳನ್ನು ಜನತೆ ಖರೀದಿ ಮಾಡಿ ಕೆರೆ ಕುಂಟೆ ಗಳಲ್ಲಿ ವಿಸರ್ಜನೆ ಮಾಡುವುದರಿಂದ ಜಲಸಂಪನ್ಮೂಲ ಸಂಪೂರ್ಣ ಹಾಳಾಗುತ್ತದೆ. ಸಾರ್ವಜನಿಕರು ಇನ್ನಾದರೂ ಎಚ್ಚೆದ್ದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸಲು ಮುಂದಾಗ ಬೇಕಿದೆ ಎಂದರು.

    ಈ ಸಂದರ್ಭದಲ್ಲಿ ಯುವ ಸಂಚಲನ ಸಂಘಟನೆಯ ಯುವಪಡೆ, ಅರಕೆರೆ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹಾಗೂ ಸ್ಥಳೀಯ ಮುಖಂಡರು ಉಪಸ್ಥಿರಿದ್ದರು

  • *ದೇವನಹಳ್ಳಿ:ತೋಟಗಾರಿಕೆಯ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 10 – ತೋಟಗಾರಿಕೆ ಇಲಾಖೆ, ದೇವನಹಳ್ಳಿ ತಾಲ್ಲೂಕು ವತಿಯಿಂದ 2024-25ನೇ ಸಾಲಿನಲ್ಲಿ ರೈತರಿಗೆ ಹೊಸದಾಗಿ ಬಿಡಿ ಹೂವು, ಕತ್ತರಿಸಿದ ಹೂವು, ಗಡ್ಡೆ ಜಾತಿಯ ಹೂವು, ದ್ರಾಕ್ಷಿ/ನುಗ್ಗೆ/ದಾಳಿಂಬೆ ಬೆಳೆಯನ್ನು ನಾಟಿ ಮಾಡಲು, ಮಲ್ಚಿಂಗ್ ಪೇಪರ್ ಅಳವಡಿಕೆ ಹಾಗೂ ಹಸಿರುಮನೆ(ಪಾಲಿಹೌಸ್) ನಲ್ಲಿ ಹೈಬ್ರಿಡ್ ತರಕಾರಿಗಳು, ಹೂವುಗಳು, ಹಣ್ಣುಗಳನ್ನು ಬೆಳೆಯಲು ಮತ್ತು ಪ್ಯಾಕ್ ಹೌಸ್ ನಿರ್ಮಾಣ, ಕೃಷಿಹೊಂಡ ನಿರ್ಮಾಣ, ಸೂಕ್ಷ್ಮ ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಕೇಂದ್ರ/ರಾಜ್ಯ ವಲಯ ಯೋಜನೆಗಳಾದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಅಟಲ್ ಭೂಜಲ್ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಗಳಡಿ ತಾಲ್ಲೂಕಿನ ರೈತರು ಸಹಾಯಧನ ಪಡೆಯಲು ಅರ್ಜಿ ಅಹ್ವಾನಿಸಲಾಗಿದೆ.

     

    ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 31 ಆಗಿದ್ದು, ರೈತರುಗಳು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ದೇವನಹಳ್ಳಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, (ಜಿ.ಪಂ) ಪ್ರಸನ್ನಹಳ್ಳಿ ಮುಖ್ಯ ರಸ್ತೆ, ದೇವನಹಳ್ಳಿ ಟೌನ್ ಈ ಕಚೇರಿಗೆ ಸಲ್ಲಿಸಬಹುದಾಗಿದೆ.

     

    *ಬೆಳೆವಿಮೆಗೆ ನೋಂದಣಿ*

     

    ದೇವನಹಳ್ಳಿ ತಾಲ್ಲೂಕಿನ ದ್ರಾಕ್ಷಿ ಮತ್ತು ಮಾವು ಬೆಳೆಗಾರರಿಗೆ ಹವಮಾನ ಅಂಶಗಳಾದ ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ ಹಾಗೂ ಆರ್ದ್ರತೆ ಇವುಗಳಿಂದ ಬೆಳೆಗೆ ಆಗುವ ಹಾನಿಯಿಂದ ರಕ್ಷಿಸಿಕೊಳ್ಳಲು ವಿಮಾ ಕಂಪನಿಗೆ ನೊಂದಾಯಿಸಿಕೊಂಡು ಹಾನಿಗೊಳಗಾದರೆ ಪರಿಹಾರಧನ ದೊರೆಯಲಿದೆ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ನಿಗಧಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಮತ್ತು ಸ್ವಯಂ ಘೋಷಿತ ಬೆಳೆಯ ವಿವರಗಳನ್ನು ಹತ್ತಿರದ ರಾಷ್ಟ್ರೀಯ ಅಧಿಕೃತ ಬ್ಯಾಂಕ್/ಸಾಮಾನ್ಯ ಸೇವಾ ಕೇಂದ್ರ/ಗ್ರಾಮ ಒನ್ ಕೇಂದ್ರಗಳಲ್ಲಿ ನೊಂದಾಯಿಸಿಕೊಳ್ಳುವುದು. ವಿಮೆ ಮಾಡಿಸುವ ರೈತರು ಪ್ರೂಟ್ಸ್ (FRUITS) ತಂತ್ರಾಂಶದ ನೊಂದಣಿ ಸಂಖ್ಯೆಯನ್ನು ಹೊಂದಿರಬೇಕು. ಇಲ್ಲದ ರೈತರು ನೋಂದಣಿ ಸಂಖ್ಯೆಯನ್ನು ಮಾಡಿಸಿಕೊಂಡು ಪಾಲ್ಗೊಳ್ಳಬಹುದು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ KSHEMA ಆಧಿಸೂಚಿತ ವಿಮಾ ಸಂಸ್ಥೆಯಾಗಿದೆ.

     

    ದೇವನಹಳ್ಳಿ ತಾಲ್ಲೂಕಿನ ಮಾವು ಬೆಳೆಯಲ್ಲಿ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ-80,000ರೂ, ರೈತರು ಪಾವತಿಸಬೇಕಾದ ದರ (ಶೇ.5%)-4,000, ದ್ರಾಕ್ಷಿ ಬೆಳೆಯಲ್ಲಿ ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ-2,80,000ರೂ, ರೈತರು ಪಾವತಿಸಬೇಕಾದ ದರ (ಶೇ.5%ಗಳಲ್ಲಿ)-14,000 ಮಾವು ಮತ್ತು ದ್ರಾಕ್ಷಿ ಬೆಳೆಯುವ ರೈತ ಬಾಂಧವರು ಈ ಯೋಜನೆಯಡಿ ನೋಂದಾಯಿಸಿ ಉಪಯೋಗ ಪಡೆದುಕೊಳ್ಳುವುದು.

     

    ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 31 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸುವುದು. ದೇವನಹಳ್ಳಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಬಿ.ಎಂ.ಮಲ್ಲಿಕಾರ್ಜುನ ಬಾಬು ದೂ.ಸಂ-9480461234, ಕುಂದಾಣ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಪೂರ್ಣಿಮಬಾಬು ದೂ.ಸಂ-8867413260, ವಿಜಯಪುರ ಸಹಾಯಕ ತೋಟಗಾರಿಕೆ ಅಧಿಕಾರಿ ಆದರ್ಶ ಆರ್.ಕೆ ದೂ.ಸಂ- 8722487173, ಕಸಬಾ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಹರೀಶ್ ಕುಮಾರ್.ಟಿ.ಜಿ ದೂ.ಸಂ – 8971844173, ಚನ್ನರಾಯಪಟ್ಟಣ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಕವಿತಾ ಎಸ್ ಪೂಜಾರಿ ದೂ.ಸಂ– 7259612750 ಹಾಗೂ ವಿಮಾ ಕಂಪನಿಯ ದೂರವಾಣಿ ಸಂಖ್ಯೆ: 080 26564537/8884141262 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ದೇವನಹಳ್ಳಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಯುವನಿಧಿ ಯೋಜನೆ: ಅರ್ಜಿಗಳ ದಾಖಲಾತಿ ಪರಿಶೀಲಿಸಿಕೊಳ್ಳಿ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 10: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ ಯೋಜನೆ ಅಡಿಯಲ್ಲಿ ನಿರುದ್ಯೋಗ ಭತ್ಯೆ ಪಡೆಯಲು

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

    ನಂತರ ದಾಖಲಾತಿಗಳ ಪರಿಶೀಲನೆಗಾಗಿ ಬಾಕಿ ಇರುವ ಅಭ್ಯರ್ಥಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿ ಅಥವಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಿಗೆ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಲು ಈ ಮೂಲಕ ತಿಳಿಸಲಾಗಿದೆ.

    ಅರ್ಜಿದಾರರ ಅರ್ಜಿಗಳು ಪರಿಶೀಲನೆಗೆ ಬಾಕಿ ಇರುವ ಸ್ಥಿತಿಯನ್ನು ಸೇವಾ ಸಿಂದೂ ಅಂತರ್ಜಾಲತಾಣದಿಂದ ಪಡೆಯಬಹುದಾಗಿರುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಜಿಲ್ಲಾ ಸಂಕೀರ್ಣ, ಕೊಠಡಿ ಸಂ. 132 ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲೂಕು ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ದಲಿತ ಹೋರಾಟಗಳು ಸ್ವಾಭಿಮಾನದ ಸಂಕೇತವಾಗಲಿ: ಮಾ.ಮುನಿರಾಜು*

    ದೊಡ್ಡಬಳ್ಳಾಪುರ:ದಲಿತ ಸಂಘಟನೆಗಳ ಹೋರಾಟಗಳು ನೆಲದ ಸಂವೇದನೆಯನ್ನು ಪ್ರಧಾನವಾಗಿ ಪರಿಗಣಿಸಿ, ಸ್ವಾಭಿಮಾನದ ಸಂಕೇತಗಳಾಗಿ ರೂಪಗೊಳ್ಳಬೇಕು ಎಂದು ದಲಿತ ವಿಮೋಚನಾ ಸೇನೆ(ರಿ.)ಯ ಸಂಸ್ಥಾಪಕ ಅಧ್ಯಕ್ಷ ಮಾ.ಮುನಿರಾಜು ಹೇಳಿದರು.

    ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

    ಬಡಜನರ ಜೀವಸೆಲೆಯ ದನಿಯಾಗಿ ದೊಡ್ಡಬಳ್ಳಾಪುರ ಕೇಂದ್ರಿತವಾಗಿ ರೂಪಗೊಂಡ ಅನೇಕ ಹೋರಾಟಗಳು ರಾಜ್ಯ ಮಟ್ಟದಲ್ಲೂ ಸದ್ದು ಮಾಡಿದ್ದು ಇತಿಹಾಸ. 70-80ರ ದಶಕದಲ್ಲಿ ಉಂಟಾದ ಸಾಮಾಜಿಕ ಚಳವಳಿಯ ಹೊಸ ಅಧ್ಯಾಯಕ್ಕೆ ದೊಡ್ಡಬಳ್ಳಾಪುರದ ಕೊಡುಗೆಯೂ ಅಪಾರ. ಆದರೆ ನಂತರದ ಕಾಲಘಟ್ಟದಲ್ಲಿ ಅದೇ ಉತ್ಸಾಹ ಕಾಣಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕನ್ನಡ, ದಲಿತ, ರೈತ ಚಳವಳಿಗಳು ಸಮನ್ವಯದ ಹೋರಾಟಗಳನ್ನು ರೂಪಿಸಲು ವೇದಿಕೆ ನಿರ್ಮಾಣವಾಗಬೇಕು ಎಂದರು.

    *ಗಟ್ಟಿತನದ ಚಳವಳಿಗಳ ಕೊರತೆ*:

    ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ, ಕಡುಕಷ್ಟದ ದಿನಗಳಲ್ಲೂ ಸಾಮಾಜಿಕ ಕಾಳಜಿಯ ಕಾರಣದಿಂದಾಗಿ ಚಳವಳಿಗಳಲ್ಲಿ ತೊಡಗಿಸಿಕೊಂಡ ಒಂದು ಪೀಳಿಗೆ ಸ್ವಾರ್ಥರಹಿತ, ರಾಜಿರಹಿತ ಹೋರಾಟಗಳ ಮಾದರಿಯನ್ನು ದೊಡ್ಡಬಳ್ಳಾಪುರದಲ್ಲಿ ಸೃಷ್ಟಿಸಿದ್ದರು. ಅಂತಹ ಗಟ್ಟಿತನದ ಚಳವಳಿಗಳ ಕೊರತೆ ಈಗ ಎದ್ದು ಕಾಣುತ್ತಿದೆ. ಆಳುವ ವರ್ಗ ಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ ಎಂದರು.

    *ಶೋಷಿತರ ಅಭ್ಯುದಯ ಆದ್ಯತೆ:*

    ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್‌ ಮಾತನಾಡಿ, ಕನ್ನಡ, ದಲಿತ ಹಾಗೂ ರೈತ ಹೋರಾಟಗಳು ಒಂದೇ ಬಗೆಯ ಚಿಂತನೆಗಳನ್ನು ಪ್ರಧಾನವಾಗಿಟ್ಟುಕೊಂಡು, ಶೋಷಿತ ಹಾಗೂ ತಳಸಮುದಾಯಗಳ ಅಭ್ಯುದಯವನ್ನು ಬಯಸಿದ್ದವು. ಅವುಗಳ ವಿಘಟನೆ ಬಹುದೊಡ್ಡ ಹಿನ್ನಡೆ ಎಂದೇ ಭಾವಿಸಬೇಕು ಎಂದು ಅಭಿಪ್ರಾಯಪಟ್ಟರು.

    *ವಿಷಯಾಧಾರಿತ ಗುಣಾತ್ಮಕ ಚಳವಳಿಗಳು ಅಗತ್ಯ:*

    ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಒಂದು ಪೀಳಿಗೆಯನ್ನು ಪ್ರಭಾವಿಸುವ ಮಟ್ಟಿಗೆ ದೊಡ್ಡಬಳ್ಳಾಪುರದಲ್ಲಿ ಶಕ್ತವಾಗಿದ್ದ ಚಳವಳಿಗಳು, ಹೊಸ ಪೀಳಿಗೆಯ ಗುಣಾತ್ಮಕ ಚಳವಳಿಗಾರರನ್ನು ಸೃಷ್ಟಿಸುವಲ್ಲಿ ವಿಫಲವಾದಂತಿದೆ. ಸಂಘಟನೆಗಳು ಶಕ್ತಿಯುತವಾಗುವ ಜತೆಗೆ ರಾಜಕೀಯ ಶಕ್ತಿಯಾಗಿ ಮಾರ್ಪಾಟಾಗದೇ ಹೊಂದದೇ ಹೋದಲ್ಲಿ ಉದ್ದೇಶಗಳ ಸಾಫಲ್ಯ ಕಡಿಮೆ. ಚಳವಳಿಗಳು ವ್ಯಕ್ತಿ ಅಥವಾ ವರ್ಗ ಕೇಂದ್ರಿತವಾಗದೆ ವಿಷಯಾಧಾರಿತ ಮತ್ತು ಗುಣಾತ್ಮಕವಾಗಬೇಕು. ಸಾಂವಿಧಾನಿಕ ಆಶಯಗಳ ಉಳಿವಿಗಾಗಿ ದೊಡ್ಡ ಮಟ್ಟದ ಆಂದೋಲನ ಅಗತ್ಯವಾಗಿದೆ ಎಂದು ಹೇಳಿದರು.

    *ಸಾಮೂಹಿಕ ಸಂಕಲ್ಪ ಅಗತ್ಯ:*

    ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಸಿ.ಗುರುರಾಜಪ್ಪ ಮಾತನಾಡಿ, ಅಂಬೇಡ್ಕರ್‌ ಅವರ ಚಿಂತನೆಗಳ ಸಾಕಾರಕ್ಕೆ ಸಾಮೂಹಿಕ ಸಂಕಲ್ಪ ಅಗತ್ಯ. ಹಲವು ಸಂದಿಗ್ಧ ಸಂದರ್ಭಗಳಲ್ಲಿ ಸಶಕ್ತ ಸಂಘಟನೆ ದೊಡ್ಡಬಳ್ಳಾಪುರದ ಮೂಲಕ ಉದಯಿಸಿತ್ತು. ರಾಜಘಟ್ಟದ ಇತಿಹಾಸದ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕು ಎಂದರು.

    ದಲಿತ ಮುಖಂಡ ಮುನಿಸುಬ್ಬಯ್ಯ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಸದಸ್ಯ ಅಂಜನಮೂರ್ತಿ, ಕರವೇ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಗೌರವಾಧ್ಯಕ್ಷ ಪು.ಮಹೇಶ್, ಪ್ರಧಾನ ಕಾರ್ಯದರ್ಶಿ ಎಸ್‌.ಎಲ್.ಎನ್.ವೇಣು, ಕಾರ್ಮಿಕ ಘಟಕದ ಅಧ್ಯಕ್ಷ ರಾಜಘಟ್ಟ ಮಹೇಶ್, ಮುಖಂಡರಾದ ಮುನಿಯಪ್ಪ, ಗೋಪಾಲ್, ಅನ್ನಪೂರ್ಣ, ಓಬಳೇಶ್, ಮಧು, ಕನ್ನಡಪಕ್ಷದ ವೆಂಕಟೇಶ್, ಮುನಿಪಾಪಯ್ಯ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

  • *ಶ್ರೀ ಉಜ್ಜನಿ ಬೀರಲಿಂಗೇಶ್ವರ ದೇವಾಲಯ : ಲೋಕಾರ್ಪಣೆ ನಂತರ ಪೂರ್ಣಗೊಂಡ 40 ದಿನಗಳ ಮಂಡಲ ಪೂಜಾ ಕಾರ್ಯ*

    ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಹೋಬಳಿ ಉಜ್ಜಿನಿ ಗ್ರಾಮದಲ್ಲಿ ಶ್ರೀ ಉಜ್ಜಿನಿ ಬೀರಲಿಂಗೇಶ್ವರ ಸ್ವಾಮಿಯ ದೇವಾಲಯ ಲೋಕಾರ್ಪಣೆ ನಂತರ ನಲವತ್ತು ದಿನ ಮಂಡಲ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

    ಶ್ರೀ ಉಜ್ಜಿನಿ ಬೀರಲಿಂಗೇಶ್ವರ ದೇವಾಲಯಕ್ಕೆ ಸುಮಾರು ಆರುನೂರು ರಿಂದ ಏಳುನೂರು ವರ್ಷಗಳ ಇತಿಹಾಸವಿದ್ದು ಇಲ್ಲಿನ ಕಾಡಿನಲ್ಲಿ ವ್ಯಾಪಾರಸ್ಥರು ಬಂದು ಮರದ ಕೆಳಗೆ ವಿಶ್ರಾಂತಿ ಪಡೆದು ಇಲ್ಲಿ ಕಲ್ಲುಗಳು ಇಟ್ಟು ಅಡುಗೆ ಮಾಡುವ ಸಮಯದಲ್ಲಿ ಅವರಿಗೆ ವಿಚಿತ್ರವಾದ ಅನುಭವವಾದ ನಂತರ ಅದರಲ್ಲಿ ಒಂದು ಶಿವಲಿಂಗ ಇರುವು ಗೊತ್ತಾಗಿ ಅಂದಿನಿಂದ ಅಲ್ಲಿ ಶಿವಲಿಂಗ ವೆಂದು ನಂಬಿಕೆಯಿಂದ ಪೂಜಾ ಕೈಂಕಾರ್ಯಗಳು ಮಾಡುತ್ತಾ ಬಂದಿದ್ದು. ಚೋಳರ ಕಾಲದ ಮಾಂಡಲಿಕರಿಗೆ ದೇವಾಲಯ ನಿರ್ಮಾಣ ಮಾಡಿ ಅಂದಿನಿಂದ ಇಂದಿನವರೆವಿಗೂ ದೇವಾಲಯದ ಎಲ್ಲಾ ಜವಬ್ದಾರಿಯನ್ನು ಕುರುಬ ಜನಾಂಗದವರು ಕುಲದೇವರು ಎಂದು ದೇವತಾಕಾರ್ಯಗಳನ್ನು ನೆಡೆಸಿಕೂಂಡು ಬರುತ್ತಿದ್ದಾರೆ. ಈಗ ನೂತನವಾಗಿ ದೇವಾಲಯ ನಿರ್ಮಾಣ ಮಾಡಿ ಮೇ 20ರಂದು ಲೋಕಾರ್ಪಣೆ ಮಾಡಲಾಗಿದ್ದು ಮತ್ತೆ 48ನೇ ದಿನದ ಮಂಡಲ ಪೂಜಾ ಕೈಂ ಕಾರ್ಯಗಳು ಮಾಡಲಾಗಿದೆ ಎಂದು ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟಿನ ಕಾರ್ಯದರ್ಶಿ ತಿಳಿಸಿದರು.

     

    ಚೋಳರ ರಾಜರ ಆಸ್ಥಾನದಲ್ಲಿ ಮಾಂಡಲಿಕನಾಗಿ ಕೆಲಸ ಮಾಡುತ್ತಿರುವವರು ಈ ಕಾಡಿನಲ್ಲಿ ವಾಸ ಮಾಡುತ್ತಿದ್ದಂತ ಸಂದರ್ಭದಲ್ಲಿ ಶಿವಲಿಂಗದ ಮಹಿಮೆ ಅರಿತು ದೊಡ್ಡ ದೊಡ್ಡ ಬಂಡೆಗಳಿಂದ ದೇವಾಲಯ ನಿರ್ಮಾಣ ಮಾಡಲಾಗಿತ್ತು. ಚೋಳ ಆಳ್ವಿಕೆಯಲ್ಲಿ ದಾರ್ಮಿಕ ಸಂಸ್ಕೃತಿಯಂತೆ ದೇವಾಲಯ ನಿರ್ಮಿಸಲಾಗಿದ್ದು ಶಿಥಿಲಾವಸ್ಥೆಯಲ್ಲಿ ಇದ್ದಂತಹ ದೇವಾಲಯವನ್ನು ನೂತನವಾಗಿ ನಿರ್ಮಾಣ ಮಾಡಿ ಮೇ ತಿಂಗಳಲ್ಲಿ ಲೋಕಾರ್ಪಣೆಮಾಡಲಾಗಿದ್ದು.ಅದರಂತೆ 48ದಿನಗಳ ಪೂಜೆಯ ನಂತರ ಸಮಾಪ್ತಿ ಗೊಳಿಸಿ ಸಾರ್ವಜನಿಕರಿಗೂ ಪೂಜಾ ವ್ಯವಸ್ಥೆ ಅವಕಾಶ ಕಲ್ಪಿಸಲಾಗುವುದು ಎಂದರು. ದೇವಾಲಯ ಟ್ರಸ್ಟ್ ನ ಗೌರವಾಧ್ಯಕ್ಷ ಜಿ. ಸಿದ್ದಲಿಂಗಯ್ಯ ತಿಳಿಸಿದರು.

    ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಅರ್ ಚಂದ್ರು , ಉಪಾಧ್ಯಕ್ಷ ರೇವಣಸಿದ್ದಪ್ಪ , ಕಾರ್ಯದರ್ಶಿ ಲಕ್ಷ್ಮಯ್ಯ ,ಖಜಾಂಚಿ ಕೆ ಎಸ್ ಅಶ್ವಥ್ ,ಧರ್ಮದರ್ಶಿ ಟಿ ಎಂ ಮುನಿಕೃಷ್ಣಪ್ಪ. ಎಸ್ ಮುನಿರಾಜಯ್ಯ, ಮುನಿಕೃಷ್ಣ, ಅರ್ ಉಮೇಶ, ಸಿದ್ದಗಂಗಯ್ಯ,ವಿ ವಿ. ಕೆಂಪರಾಜ್ , ಎಂ. ಲಕ್ಷ್ಮಯ್ಯ, ಜವರಯ್ಯ ,ಸಿ. ರಾಜಣ್ಮ,ಸೇರಿದಂತೆ ಕುಲಬಾಂದವರು ಸಾರ್ವಜನಿಕರು ಹಾಜರಿದ್ದರು.

  • *ಉತ್ತಮ ಆರೋಗ್ಯಕ್ಕಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿ – ಲೋಹಿತ್ ಗೌಡ*

    ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಮದುರೆ ವಲಯದ ರಾಮದೇವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು.

     

    ಶಾಲಾ ಆವರಣದಲ್ಲಿ ಸಸಿ ನಾಟಿ ಮಾಡಲಾಯಿತು ಹಾಗೂ ವಿತರಣೆ ಮಾಡಲಾಯಿತು

    ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ ಮಾತನಾಡಿ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
    ಹವಾಮಾನ ವೈಪರಿತ್ಯದಿಂದಾಗಿ ಜನರು ಅನಾರೋಗ್ಯಕ್ಕಿಡಾಗುತ್ತಿದ್ದು ಸಸಿ ನೆಟ್ಟು ಪೋಷಣೆ ಮಾಡಿ ಸಂರಕ್ಷಣೆ ಮಾಡಿದ್ದಲ್ಲಿ ನಮಗೆ
    ಸ್ವಚ್ಛ ಶುದ್ಧ ಗಾಳಿ ಸಿಗುವಂತಾಗುತ್ತದೆ ಎಂದರು.

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ತಾಲೂಕಿನಾದ್ಯಂತ ಅರಣ್ಯಸಸಿ ನಾಟಿಗಳನ್ನು ಮಾಡುತ್ತಾ ಪರಿಸರ ಸಂರಕ್ಷಣೆ ಮಾಡುತ್ತಾ ಬರುತ್ತಿದ್ದೆವೆ, ಸಾರ್ವಜನಿಕರು ನಮ್ಮ ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಕೈ ಜೋಡಿಸಬೇಕೆಂದು ತಿಳಿಸಿದರು,

    ಶಾಲಾ ಶಿಕ್ಷಕರಾದ ಗಂಗಲಕ್ಷಮ್ಮ ಮಾತನಾಡಿ ಧರ್ಮಸ್ಥಳ ಸಂಘದ ವತಿಯಿಂದ ಗಿಡ ನಾಟಿ ಮಾಡುತ್ತಿರುವುದು ಶ್ಲಾಘನೀಯ ಎಲ್ಲರು ಒಂದೊಂದು ಗಿಡ ನೆಟ್ಟರೆ ಪರಿಸರದಲ್ಲಿ ಉತ್ತಮ ಗಾಳಿ ಸಿಗುವಂತಾಗುತ್ತದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಗಿರಿಜಾ, ಶಿಕ್ಷಕರಾದ ಶಿವಲಕ್ಷ್ಮ್ಮಮ್ಮ ಸುಶೀಲಮ್ಮ, ಅಂಗನವಾಡಿ ಕಾರ್ಯಕರ್ತೆ ಗಂಗಾ ಲಕ್ಷ್ಮಮ್ಮ ಶೌರ್ಯ, ಪಂಕಜ, ಘಟಕದ ಸದಸ್ಯರು, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು ಹಾಜರಿದ್ದರು.

  • *ಕೋಲಾರ l ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹಾಸಮ್ಮಿಲನ ಕಾರ್ಯಕ್ರಮ*

    ಕೋಲಾರ : ಸರ್ಕಾರಿ ಶಾಲೆಗಳು ಸ್ವತಂತ್ರವಾಗಿ ಬದುಕುವ ದಾರಿಯನ್ನ ರೂಪಿಸುವುದಲ್ಲದೇ, ಹೆಣ್ಣು ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸುತ್ತವೆ ಎಂದು ಶಿಕ್ಷಕ ಇಂದ್ರ ಕುಮಾರ್ ಮಾತನಾಡಿದರು.

    ನಗರದ ಸರ್ಕಾರಿ ಪ್ರೌಢಶಾಲೆ ಅಣ್ಣಿಹಳ್ಳಿಯಲ್ಲಿ 2006-07ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಂಡಿದ್ದರು.

     

    ಸರ್ಕಾರಿ ಶಾಲೆಗಳು ಉಚಿತವಾಗಿ ಶಿಕ್ಷಣ ನೀಡುವುದರಿಂದ ಸುಮಾರು ಬಡ ವಿದ್ಯಾರ್ಥಿಗಳಿಗೆ ತಮ್ಮ ಜೀವನವನ್ನು ರೂಪಿಸಲು ಸಹಕಾರಿಯಾಗಲಿದೆ. ನನಗೆ ಕೆಲಸ ಸಿಕ್ಕಾಗಲು ಇಷ್ಟೊಂದು ಖುಷಿಯಾಗಲಿಲ್ಲ, ಈ ದಿನ ಅದಕ್ಕೆಲ್ಲ ಮೀರಿದ ಖುಷಿ ಸಿಕ್ಕಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದ್ದರು.

     

    ಅಂದಿನ ಮುಖ್ಯ ಶಿಕ್ಷಕರಾದ ನರಸಿಂಹಯ್ಯ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಜಯವನ್ನು ಸಾಧಿಸಲು ಶಿಸ್ತು ಮುಖ್ಯ. ಓದಿರುವೆ ಎಂಬುದು ಮುಖ್ಯ ಅಲ್ಲ, ಸತ್ಪ್ರಜೆಗಳಾಗಿ ಬದುಕಿ. ಸುಮಾರು 17 ವರ್ಷಗಳ ಹಿಂದೆ ಓದಿದ ನೀವುಗಳು ಎಲ್ಲಾ ಗುರುಗಳನ್ನು ಸ್ಮರಿಸಿ, ಈಗಲೂ ಒಗ್ಗಟ್ಟಿನಿಂದ, ಸುಮಾರು ವಿದ್ಯಾರ್ಥಿಗಳು ವಿವಾಹ ವಾಗಿದ್ದರೂ ಸಹ ಸ್ನೇಹಿತರೊಂದಿಗೆ ಸೇರಿರುವುದು, ಒಂದೇ ಸರದಿಂದ ಕಳಚಿ ಹೋದ ಮಣಿಗಳನ್ನು ಮತ್ತೆ ಹುಡುಕಾಡಿ ಪೋಣಿಸುವ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

     

    ಅಂದು ಧರಿಸಿದ ಶಾಲಾ ಸಮವಸ್ತ್ರವನ್ನ ಇಂದಿಗೂ ಇಟ್ಟಿದ್ದು ಕಾರ್ಯಕ್ರಮದಲ್ಲಿ ಪ್ರದರ್ಶಿಸಿ, 2006-07 ಸಾಲಿನ ವಿದ್ಯಾರ್ಥಿ ಶಾನುಭೋಗನಹಳ್ಳಿಯ ರವೀಂದ್ರ ಮಾತನಾಡಿ, ಗಿಡವಾಗಿದ್ದ ನಮ್ಮನ್ನ ಪೋಷಣೆ ನೀಡಿ ಉತ್ತಮ ಮಟ್ಟದಲ್ಲಿ ಮರವಾಗಿ ನಿಲ್ಲಲು ಕಾರಣ ನಮ್ಮ ಗುರುಗಳು. ಅದಕ್ಕಾಗಿ ಪ್ರತಿಯೊಬ್ಬರೂ ಅಂದಿಗೂ ಎಂದಿಗೂ ಗುರುಗಳನ್ನು ನೆನಯಲೇ ಬೇಕು. ಒಂದು ಅಕ್ಷರ ಕಲಿಸಿದವರು ಸಹ ಗುರುಗಳೇ, ನಾವು ಎಷ್ಟು ಎತ್ತರಕ್ಕೆ ಬೆಳೆದರೂ, ಬೆಳೆದು ಬಂದ ದಾರಿಯನ್ನ ಮರೆಯಬಾರದು ಆದ್ದರಿಂದ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿ, ಶಾಲೆಗೆ ದ್ವನಿವರ್ಧಕವನ್ನು ನೀಡುವುದಾಗಿ ಭರವಸೆ ನೀಡಿದರು.

    ಎಲ್ಲಾ ಗುರುವೃಂದದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ವಿದ್ಯಾರ್ಥಿಗಳ ನೀಡಿದ ಕಿರುಕಾಣಿಕೆ ಸ್ವೀಕರಿಸಿ, ಗುರು ಶಿಷ್ಯರ ಬಾಂಧವ್ಯ ಶಾಶ್ವತ ಎಂಬುದು ಸಾಬೀತಾಪಡಿಸಲಾಯಿತು.

     

    ಕಾರ್ಯಕ್ರಮದಲ್ಲಿ 2006-07ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿದ ವಿಜ್ಞಾನ ಶಿಕ್ಷಕರಾದ ಅಪ್ರೋಚ್ ಸುಲ್ತಾನ್ ಮೇಡಂ(AS), ಗಣಿತ ಶಿಕ್ಷಕರಾದ ಸುಜಾತ, ಸಮಾಜ ವಿಜ್ಞಾನ ಶಿಕ್ಷಕರಾದ ಅನ್ನಪೂರ್ಣ, ಕನ್ನಡ ಶಿಕ್ಷಕರಾದ ಬಿ.ಎಂ.ಪುಷ್ಪಲತಾ, ಹಿಂದಿ ಭಾಷಾ ಶಿಕ್ಷಕರಾದ, ಕೆ.ವೆಂಕಟೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಅನಿತಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

  • *ಹಿರಿಯ ನಾಗರಿಕರಿಗೆ ಉಚಿತ ಅರೋಗ್ಯ ತಪಾಸಣಾ ಶಿಬಿರ l ಆಯುಷ್ಮಾನ್ ಆರೋಗ್ಯ ಮಂದಿರದ ವತಿಯಿಂದ ಐಇಸಿ ಕಿಟ್ ವಿತರಣೆ*

    ದೊಡ್ಡಬಳ್ಳಾಪುರ : ಆಯುಷ್ ಇಲಾಖೆ ಬೆಂಗಳೂರು, ಸರ್ಕಾರಿ ಆಯುರ್ವೇದ ಚಿಕಿತ್ಸ್ಯಾಲಯ/ ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) ಹಣಬೆ ವತಿಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಆಯುಷ್ ಅಧಿಕಾರಿ ಡಾ// ಶುಹಾಬುದ್ದಿನ್ ಇವರ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರದಲ್ಲಿ ಹಿರಿಯ ನಾಗರಿಕರಾಗಿ ಆಯುಷ್ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು.

    ಈ ಕಾರ್ಯಕ್ರಮದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಾದ ಡಾ. ಪುಷ್ಪಾಲತಾ ರವರು ಹಿರಿಯ ನಾಗರಿಕರಿಗೆ ಆಯುಷ್ ಪದ್ಧತಿಗಳ ಬಗ್ಗೆ ಮಾಹಿತಿ, ಲಭ್ಯವಿರುವ ಸೌಲಭ್ಯಗಳು ಹಾಗೂ NCD ಖಾಯಿಲೆಗಳ ಬಗ್ಗೆ ಮಾಹಿತಿ ಹಾಗೂ ಉತ್ತಮ ಜೀವನಶೈಲಿಯಿಂದ ಅವುಗಳನ್ನು ನಿಯಂತ್ರಣ ದಲ್ಲಿ ಇಡುವುದರ ಬಗ್ಗೆ ಮಾಹಿತಿಯನ್ನು ನೀಡಿದರು.

    ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲಾ ಹಿರಿಯ ನಾಗರಿಕರ ಆರೋಗ್ಯ ತಪಾಸಣೆಯನ್ನು ಮಾಡಿ ಚಿಕಿತ್ಸೆಯನ್ನು ನೀಡಲಾಯಿತು.

     

    ಎಲ್ಲರಿಗೂ ಐ ಇ ಸಿ ಮೆಟೀರಿಯಲ್ ಗಳು ಹಾಗೂ ಆಯುಷ್ ಕಷಾಯವನ್ನು ಉಚಿತವಾಗಿ ವಿತರಣೆ ಮಾಡಲಾಯಿತು .

     

    ಈ ಕಾರ್ಯಕ್ರಮದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಸಿಬ್ಬಂದಿಗಳು ಹಾಗೂ ಕಲಿಕಾ ವೈದ್ಯರು, ಹಾಗೂ ಹಿರಿಯ ನಾಗರಿಕರ ಯೋಗ ಕ್ಷೇಮ ಕೇಂದ್ರದ ಮೋಹನ್ ಹಾಗೂ ಸೌಭಾಗ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • *ದೊಡ್ಡಬಳ್ಳಾಪುರ l ನಗರದ ಸ್ವಚ್ಛತೆ ಕಾಪಾಡುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ನಗರ ಬಿಜೆಪಿ ವತಿಯಿಂದ ಮನವಿ*

    ದೊಡ್ಡಬಳ್ಳಾಪುರ ನಗರಸಭೆ ವತಿಯಿಂದ ಕ್ರಮಬದ್ಧವಾಗಿ ಕೆಲಸ ಮಾಡದ ಕಾರಣ ದೊಡ್ಡಬಳ್ಳಾಪುರ ನಗರದಲ್ಲಿ ಸೊಳ್ಳೆ ಉತ್ಪತ್ತಿ ಜಾಸ್ತಿಯಾಗಿ ಬಹಳಷ್ಟು ಕಡೆ ಜನರು ಡೆಂಗ್ಯೂ ಜ್ವರದಿಂದ ನರಳುತ್ತಿದ್ದಾರೆ ಈ ಕುರಿತು ನಗರ ಸಭೆ ಶೀಘ್ರ ಕ್ರಮ ಕೈಗೊಳ್ಳಬೇಕಿದೆ ಎಂದು ನಗರ ಸಭಾ ಅಧಿಕಾರಿಗಳಿಗೆ ನಗರ ಬಿಜೆಪಿ ಅಧ್ಯಕ್ಷ ಮುದ್ದಪ್ಪ ಮನವಿ ಸಲ್ಲಿಸಿದರು.

     

    ಈ ಕುರಿತು ಮಾತನಾಡಿದ ಅವರು ದೊಡ್ಡಬಳ್ಳಾಪುರ ನಗರದಲ್ಲಿ ಸರಿಯಾಗಿ ಕಸವಿಲೇವಾರಿ ಮಾಡದಿರುವುದರಿಂದ ಇತ್ತೀಚೆಗೆ ಮಳೆಯಿಂದ ರಸ್ತೆ ಬದಿಯಲ್ಲಿ ಮಳೆ ನೀರು ನಿಂತು ಹಾಗೂ ರಸ್ತೆ ಪಕ್ಕದಲ್ಲಿ ಇರುವ ಡಬ್ರೀಜ್ ಗಳನ್ನು ತೆಗೆಯುವ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು ಕಸ ಗುಡಿಸದೆ ಇರುವುದು, ಕೆರೆಯನ್ನು ಸ್ವಚ್ಛತೆಗೊಳಿಸದೆ ಇರುವುದು ಹಾಗೂ ಯು.ಜಿ.ಡಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಇಲ್ಲದ ಕಾರಣದಿಂದ ದೊಡ್ಡಬಳ್ಳಾಪುರ ನಗರದಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿ ಡೆಂಗ್ಯೂ ಜ್ವರದಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ.

     

    ನಗರಸಭೆ ವತಿಯಿಂದ ಡಿ.ಡಿ.ಟಿ ಹಾಗೂ ಔಷಧಿ ಸಿಂಪಡನೆ ಕ್ರಮ ಬದ್ಧವಾಗಿ ನಡೆದಿದೆ ಇರುವುದು ಕೂಡ ಸೊಳ್ಳೆಗಳ ಉತ್ಪತ್ತಿ ಜಾಸ್ತಿಯಾಗಲು ಕಾರಣವಾಗಿರುತ್ತದೆ.

     

    ಆದ್ದರಿಂದ ತಾವುಗಳು ಈ ಕೂಡಲೇ ನಗರ ಜನತೆಯ ಸುರಕ್ಷತೆಗೆ ಒತ್ತು ಕೊಟ್ಟು ಡೆಂಗ್ಯೂ ಹಾಗೂ ಸೊಳ್ಳೆಗಳು ಹರಡದಂತೆ ಕ್ರಮ ವಹಿಸಿ ನಗರದ ಜನತೆಗೆ ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣ ಇರುವಂತೆ ನೋಡಿಕೊಳ್ಳಬೇಕಾಗಿ ವಿನಂತಿ ಮಾಡಿದ್ದೇವೆ ಎಂದರು.

     

    ಈ ಸಂದರ್ಭದಲ್ಲಿ ಬಿ.ಜೆ.ಪಿ.ಮುಖಂಡರಾದ ಡಾ//ನಾರಾಯಣ್ ರವರು,ಆರ್.ಗೋಪಿರವರು,ಕೆ.ಹೆಚ್.ವೆಂಕಟರಾಜು,ಜೆ.ಮಂಜುನಾಥ್ ರವರು, ಹನುಮಂತರಾಯಪ್ಪ ರವರು, ಮಹೇಶ್ ರವರು, ಮಂಜುನಾಥ {ತಿರುಮಲ} ರವರು,ಕುಮಾರ್ ರವರು ಉಪಸ್ಥಿತರಿದ್ದರು