Blog

  • *8ನೇ ಫೆಡರೇಷನ್ ಯೋಗ ಸ್ಪೋರ್ಟ್ಸ್ ಕಪ್ – 2024 : ಸ್ಪರ್ಧೆಯಲ್ಲಿ ಗೆದ್ದ ಯೋಗಪಟುಗಳಿಗೆ ಅಭಿನಂದನೆ ಸಲ್ಲಿಸಿದ ನಿಸರ್ಗ ಯೋಗ ಕೇಂದ್ರ*

    ದೊಡ್ಡಬಳ್ಳಾಪುರ: ಯೋಗ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ದಿನಾಂಕ 08,09,15,16 ಜೂನ್ 2024 ಆನ್‌ಲೈನ್ ನಲ್ಲಿ ನಡೆದ 8ನೇ ಫೆಡರೇಷನ್ ಯೋಗ ಸ್ಪೋರ್ಟ್ಸ್ ಕಪ್ -2024 ಯೋಗ ಚಾಂಪಿಯನ್‌ಷಿಪ್ ನಲ್ಲಿ ದೊಡ್ಡ ಬಳ್ಳಾಪುರದ ಯೋಗಪಟುಗಳು ಪ್ರತಿಭೆಗಳು ಭಾಗವಹಿಸಿ ಜಯಗಳಿಸಿದ್ದಾರೆ.

    ತಾಲೂಕಿನ ನಿಸರ್ಗ ಯೋಗ ಕೇಂದ್ರ (ರಿ) ದ ಯೋಗಪಟುಗಳಾದ ಎನ್ ಖುಷಿಪ್ರಿಯ ಆದಿತ್ಯ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಮತ್ತು ನಳಂದ ಪ್ರೌಢಶಾಲೆಯ ಹಿತಶ್ರೀ ಕೆ.ಎಂ ಬಾಲಕಿಯರ ರಿದಮಿಕ್ ಪೇರ್ ಯೋಗದಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ.ಬಾಲಕರ ವಿಭಾಗದಲ್ಲಿ ಲಿಟ್ಸ್ ಏಂಜಲ್ ಶಾಲೆಯ ಜೆ.ಸಿ.ಪ್ರಥಮಶೆಟ್ಟಿ ಮತ್ತು ಸರಸ್ವತಿ ಶಾಲೆಯ ಎ.ಹಿತೇಶ್ ರಿದಮಿಕ್ ಪೇರ್‌ಯೋಗ ಸ್ಪರ್ಧೆಯಲ್ಲಿ ನಾಲ್ಕನೆ ಸ್ಥಾನಗಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

     

    ಸಂಪ್ರದಾಯಿಕ ಯೋಗದಲ್ಲಿ ನಾಗಾರ್ಜುನ ಪಿ.ಯು. ಕಾಲೇಜಿನ ಎಮ್.ಆರ್.ಜಾನ್ಹವಿ 6 ನೇ ಸ್ಥಾನವನ್ನು ಹಾಗೂ ನಳಂದ ಪ್ರೌಢಶಾಲೆಯ ಎಲ್.ನೀರಜ್ 6 ನೇ ಸ್ಥಾನವನ್ನು ಪಡೆದಿದ್ದಾರೆ.

     

    ಯೋಗಾಸನ ಸ್ಪರ್ಧೆಯಲ್ಲಿ ವಿಶ್ವವಿದ್ಯಾ ಪೀಠದ ಎಸ್.ಆವಿಷ ಗುರುಕುಲ ಇಂಟರ್ ನ್ಯಾಷನಲ್ ಸ್ಕೂಲಿನ ಮಧುಶಾಲಿನಿ.ಡಿ.ಎಸ್ ಭಾಗವಹಿಸಿದ್ದು. ಜಯಗಳಿಸಿ ತಾಲೂಕಿಗೆ ಗೌರವತಂದ ಕ್ರೀಡಾಪಟುಗಳಿಗೆ ನಿಸರ್ಗ ಯೋಗ ಕೇಂದ್ರದ ತರಬೇತಿದಾರರು,ಪದಾಧಿಕಾರಿಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶುಭ ಹಾರೈಸಿದ್ದಾರೆ.

  • *ದೇವನಹಳ್ಳಿ:ಜೂನ್ 21ರಂದು ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೂನ್ 18 : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಕಛೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದಲ್ಲಿ 10 ನೇ ಜಿಲ್ಲಾಮಟ್ಟದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಜೂನ್ 21(ಶುಕ್ರವಾರ) ರಂದು ಬೆಳಗ್ಗೆ 06 ಗಂಟೆಗೆ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

     

    “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಈ ವರ್ಷದ ಘೋಷವಾಕ್ಯ ವಾಗಿದೆ.

     

    ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ವಹಿಸಲಿದ್ದಾರೆ.

     

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡುರಾವ್, ಕರ್ನಾಟಕ ಸರ್ಕಾರದ 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣಸ್ವಾಮಿ ಯವರ ಘನ ಉಪಸ್ಥಿತಿ, ಮುಖ್ಯ ಅತಿಥಿಗಳಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ.ಕೆ.ಸುಧಾಕರ್, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಹೊಸಕೋಟೆ ಶಾಸಕರಾದ ಶರತ್ ಕುಮಾರ ಬಚ್ಚೇಗೌಡ, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ನೆಲಮಂಗಲ ಶಾಸಕ ಎನ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ರವಿ, ಪುಟ್ಟಣ್ಣ, ಎನ್.ನಾಗರಾಜು(ಎಂ.ಟಿ.ಬಿ), ರಾಮೋಜಿಗೌಡ, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ

    ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾಕೆ.ಫಾಹಿಂ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ(ಬಯಪ) ಅಧ್ಯಕ್ಷರಾದ ಶಾಂತಕುಮಾರ್, ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ನಾಮ ನಿರ್ದೇಶಿತ ಸದಸ್ಯರು, ಮಾಧ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

     

    ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ಡಾ.ಎನ್ ಶಿವಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ಅನುರಾಧ, ಜಿಲ್ಲಾ ಪೊಲೀಸ್ ಅಧೀಕ್ಷಕರು ಮಲ್ಲಿಕಾರ್ಜುನ ಬಾಲದಂಡಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ|| ಶುಹಬುದ್ದಿನ್ ಹಾಗೂ ಜಿಲ್ಲೆಯ ವೈದ್ಯಾಧಿಕಾರಿಗಳು,ಸಿಬ್ಬಂದಿ ವರ್ಗದವರು ಭಾಗವಹಿಸಲಿದ್ದಾರೆ.

  • *ಕಲಾವಿದರ ಗುರುತಿನ ಚೀಟಿಗೆ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೂನ್ 18 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರ್ಹ ಕಲಾವಿದರುಗಳ ಪಟ್ಟಿಯನ್ನು ತಯಾರಿಸಿ ಗುರುತಿನ ಚೀಟಿಯನ್ನು ನೀಡಲು ಸರ್ಕಾರವು ಅವಕಾಶ ಕಲ್ಪಿಸಿದೆ.

     

    ಅದುದ್ದರಿಂದ ಜಿಲ್ಲೆಯ ಎಲ್ಲಾ ಅರ್ಹ ಕಲಾವಿದರುಗಳು ತಮ್ಮ ಹಾಗೂ ತಮ್ಮ ತಂಡದ ಎಲ್ಲಾ ಸಹ ಕಲಾವಿದರ ದಾಖಲೆಗಳ ಸಮೇತ ಮಾಹಿತಿಯನ್ನು ನಿಗದಿತ ಅರ್ಜಿ ನಮೂನೆಯೊಂದಿಗೆ ಜೂನ್ 26 ರ ಸಂಜೆ 5:00 ಗಂಟೆಯ ಒಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಗೆ ಸಲ್ಲಿಸಿ ನೊಂದಣಿ ಮಾಡಿಕೊಳ್ಳಬಹುದಾಗಿದೆ.

     

    ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 080-29560059 ಅನ್ನು ಸಂಪರ್ಕಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ತಾಲ್ಲೂಕಿನ ಕನಸವಾಡಿಯಲ್ಲಿ ಶಾಸಕರಿಂದ ತಾಲ್ಲೂಕು ಜನಸ್ಪಂದನಾ ಕಾರ್ಯಕ್ರಮ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೂನ್ 18 : ಜೂನ್ 19(ಬುಧವಾರ) ರಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಂಟಿಯಾಗಿ ಜಿಲ್ಲಾ & ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ, ಮಧುರೆ ಹೋಬಳಿಯ ಕನಸವಾಡಿ ಗ್ರಾಮದ “ಡಾ. ಬಿ ಆರ್ ಅಂಬೇಡ್ಕರ್ ಭವನ” ದಲ್ಲಿ ಬೆಳಗ್ಗೆ 10-00 ಗಂಟೆಗೆ ” ಜನಸ್ಪಂದನಾ ” ಕಾರ್ಯಕ್ರಮ ನಿಗಧಿಪಡಿಸಲಾಗಿರುತ್ತದೆ.

     

    ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.

     

    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಕುಂದು ಕೊರತೆ/ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಪಡೆಯುವುದರ ಮುಖಾಂತರ ” ಜನಸ್ಪಂದನಾ ” ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಮೊಬೈಲ್ ಕ್ಲಿನಿಕ್ ಗೆ ಸಚಿವ ಕೆ.ಹೆಚ್ ಮುನಿಯಪ್ಪ ಚಾಲನೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್. 18 (ವಿಜಯಮಿತ್ರ ):- ವೋಲ್ವೋ ಗ್ರೂಪ್ ಹಾಗೂ ನಾರಾಯಣ ಹೆಲ್ತ್ ಸಹಯೋಗದಲ್ಲಿ ಸಿಎಸ್ ಆರ್ ಯೋಜನೆಯಡಿ ಒದಗಿಸಿರುವ ಸoಚಾರಿ ಆರೋಗ್ಯ ವಾಹನಕ್ಕೆ ದೇವನಹಳ್ಳಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.


    ‘ವೆಲ್ ನೆಸ್ ಆನ್ ವ್ಹೀಲ್ಸ್’ ಎಂಬ ಪರಿಕಲ್ಪನೆಯಲ್ಲಿ ಪ್ರಾರಂಭಗೊಂಡ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರವು ಕಾನ್ಸರ್, ಹೃದಯ ಸಂಬಂಧಿ ಸಮಸ್ಯೆಗಳು, ರೋಗನಿರ್ಣಯ ಸಮಸ್ಯೆಗಳಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ನೂತನ ಮೈಲಿಗಲ್ಲು ಸೃಷ್ಟಿಸಲಿದೆ. ಗ್ರಾಮೀಣ ಪ್ರದೇಶದ ಜನರಿಗೂ ಗುಣಮಟ್ಟದ ವೈದ್ಯಕೀಯ ಸೌಲಭ್ಯ, ಚಿಕಿತ್ಸೆ ದೊರಕಿಸುವುದು ಇದರ ಉದ್ದೇಶ.

    ಈ ಸಂದರ್ಭದಲ್ಲಿ ಸಚಿವರು ಸಂಚಾರಿ ಸಮುದಾಯ ಆರೋಗ್ಯ ಕೇಂದ್ರ ವಾಹನದೊಳಗೆ ತೆರಳಿ ಕಾರ್ಯ ವಿಧಾನದ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

    ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುನೀಲ್ ಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಜಣ್ಣ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಸ್ಥಳೀಯ ಸಂಸ್ಥೆಗಳ ಮುಖಂಡರು, ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • *ಯೋಗೋತ್ಸವ 2024 : ಶಾಲಾಮಕ್ಕಳಿಗೆ ಯೋಗ ತರಬೇತಿ ಜೊತೆಗೆ ಆಯುಷ್ ಪದ್ಧತಿಗಳ ಬಗ್ಗೆ ಅರಿವು*

    ದೊಡ್ಡಬಳ್ಳಾಪುರ : ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ದಿನಾಚರಣೆಯ ಅಂಗವಾಗಿ ಜೂನ್ 21ರಂದು ಆಯೋಜಿಸಿರುವ  ಯೋಗೋತ್ಸವ 2024 ಕಾರ್ಯಕ್ರಮದ ಪೂರ್ವಭಾವಿಯಾಗಿ ಇಂದು ಸರ್ಕಾರಿ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯ ಹಣಬೆ ಇಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಣಬೆ,ವತಿಯಿಂದ ಯೋಗಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಆಯುಷ್ ಪದ್ಧತಿಗಳ ಬಗ್ಗೆ ಅರಿವು ಆರೋಗ್ಯಕರ ಜೀವನ ಶೈಲಿ ಹಾಗೂ ಯೋಗದ ಮಹತ್ವದ ಬಗ್ಗೆ ತಿಳಿಸಲಾಯಿತು.

     

    ಈ ಕಾರ್ಯಕ್ರಮದಲ್ಲಿ ಹಣಬೆ ಗ್ರಾಮದ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿಗಳಾದ ಡಾ// ಎ ಎಸ್ ಪುಷ್ಪಲತಾ ಮಾತನಾಡಿ ಯೋಗ ಮಾಡುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯಕರವಾಗಿರಲು ಸಹಾಯಕವಾಗುತ್ತದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸುವಲ್ಲಿ ಯೋಗಸನ ಸಹಕಾರಿಯಾಗಿದೆ ಎಂದರು.

    ಯೋಗಾಸನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ಶಿಕ್ಷಕರು ಮಕ್ಕಳ ಸರ್ವೋತೋಮುಖ ಅಭಿವೃದ್ದಿಗೆ ಶ್ರಮಿಸಬೇಕಿದೆ ಎಂದರು.

     

    ಯೋಗ ತರಬೇತುದರರಾದ ಗೌತಮ್ ಮಕ್ಕಳಿಗೆ ಯೋಗಾಸನ ಅಭ್ಯಾಸ ಹಾಗೂ ಪ್ರಾಣಾಯಾಮ ತರಬೇತಿ ನೀಡಿದರು.

    ಈ ಸಂದರ್ಭದಲ್ಲಿ ವಿದ್ಯಾರ್ಥಿನಿಲಯ ಮೇಲ್ವಿಚಾರಕರಾದ ಅಣ್ಣಯ್ಯ ಹಾಗೂ ಹಾಸ್ಟೇಲ್ ಸಿಬ್ಬಂದಿಗಳು ಹಾಜರಿದ್ದು

  • *ಸಿಡಿಲು ಬಡಿದು ಮನೆ ಗೋಡೆ ಕುಸಿತ : ನೆರವಿನ ನಿರೀಕ್ಷೆಯಲ್ಲಿ ಕುಟುಂಬಸ್ಥರು*

    ದೊಡ್ಡಬಳ್ಳಾಪುರ : ರಾತ್ರಿ ಸುರಿದ ಗುಡುಗು ಸಿಡಿಲು ಸಹಿತ ಜಡಿ ಮಳೆಗೆ ಮನೆಯೊಂದರ ಗೋಡೆ ಕುಸಿದಿರುವ ಘಟನೆ ತಾಲ್ಲೂಕಿನ ಮುಕ್ಕಡಿಘಟ್ಟ ಗ್ರಾಮದಲ್ಲಿ ನೆಡೆದಿದೆ.

    ಗ್ರಾಮದ ಗಂಗರಾಜ್ ಎಂಬುವವರಿಗೆ ಸೇರಿದ ಮನೆಗೆ ಸಿಡಿಲು ಬಡಿದ ಕಾರಣ ಮನೆಯ ಗೋಡೆ ಕುಸಿತವಾಗಿದೆ.

    ಘಟನಾ ವೇಳೆ ಮನೆಯ ಕುಟುಂಬಸ್ಥರು
    ಬೇರೆ ಕೋಣೆಯಲ್ಲಿದ್ದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ
    ಮನೆಯಲ್ಲಿದ್ದ ವಸ್ತುಗಳು ಗೋಡೆ ಕುಸಿದ ಕಾರಣ ಸಂಪೂರ್ಣ ಹನಿಗೋಳಗಾಗಿದೆ ಎಂದು ತಿಳಿದು ಬಂದಿದೆ.

    ದೊಡ್ಡಬಳ್ಳಾಪುರ ಗ್ರಾಮಾಂತರ ‌ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

  • *ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ l ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ ಆಸ್ಪತ್ರೆ ಸಿಬ್ಬಂದಿ*

    ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಆರೋಗ್ಯ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ, ಸೌಭಾಗ್ಯ ಸೇವಾ ಟ್ರಸ್ಟ್, ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾವಹಿಸಿದ್ದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ರಮೇಶ್ ರವರು ಮಾತನಾಡಿ ನಮ್ಮ ಆಸ್ಪತ್ರೆಯಲ್ಲಿ ಪ್ರತಿ ಮಾಹೆ 250 ಕ್ಕಿಂತಲೂ ಹೆಚ್ಚಿನ ಹೆರಿಗೆಗಳು ಸಂಭವಿಸುತ್ತವೆ, ವಿವಿಧ ರೀತಿಯ 200 ಕ್ಕೂ ಹೆಚ್ಚಿನ ಶಸ್ತ್ರಚಿಕಿತ್ಸೆ ಗಳು ನಡೆಯುತ್ತವೆ. ಈ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ರಕ್ತ ದಾನಿಗಳು ರಕ್ತವನ್ನು ದಾನ ಮಾಡುವುದರಿಂದ ಸೂಕ್ತ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಲಬ್ಯತೆ ಆಗುತ್ತದೆ. ಈಗ ಬೆಂಗಳೂರಿನಿಂದ ರಕ್ತವನ್ನು ತರಿಸುತ್ತಿದ್ದೇವೆ. ಪ್ರಸ್ತುತ ಅಜಾಕ್ಸ್ ಕಂಪನಿಯ ವತಿಯಿಂದ ಕಟ್ಟಡ ನಿರ್ಮಾಣವು ಪ್ರಗತಿಯಲ್ಲಿದ್ದು ಇದೇ ವರ್ಷದಲ್ಲಿ ದೊಡ್ಡಬಳ್ಳಾಪುರ ದಲ್ಲಿ ರಕ್ತನಿಧಿ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು. ಈಗ ತಾಲ್ಲೂಕಿನಾದ್ಯಂತ ನಡೆಯುವ ರಕ್ತದಾನ ಶಿಭಿರಗಳಿಂದ ಸಂಗ್ರಹವಾಗುವ ಪ್ರತೀ ನೂರು ಪ್ಯಾಕೆಟ್ ರಕ್ತದಲ್ಲಿ 25 ಪ್ಯಾಕೇಟ್ ಗಳು ಮಾತ್ರ ನಮಗೆ ವಾಪಸ್ ಸಿಗುತ್ತದೆ. ನಮ್ಮಲ್ಲೇ ರಕ್ತನಿಧಿ ಪ್ರಾರಂಭವಾದರೆ ಸಂಗ್ರಹವಾಗುವ ಅಷ್ಟು ರಕ್ತದ ಪ್ಯಾಕೆಟ್ ಗಳು ನಮ್ಮ ರೋಗಿಗಳಿಗೇ ಲಬ್ಯವಾಗುತ್ತವೆ ಎಂದು ತಿಳಿಸಿದರು.

    ಸೌಭಾಗ್ಯ ಸೇವಾ ಟ್ರಸ್ಟ್ ನ ಅದ್ಯಕ್ಷರಾದ ರಾಜಗೋಪಾಲ್ ರವರು ಮಾತನಾಡಿ ಸಕಾಲದಲ್ಲಿ ಅಗತ್ಯ ರೋಗಿಗಳಿಗೆ ರಕ್ತದ ಲಬ್ಯತೆ ಆಗುವುದು ಅತ್ಯಂತ ಮಹತ್ವದ ವಿಷಯವಾಗಿರುತ್ತದೆ. ಈ ದಿನವನ್ನು ರಕ್ತದಾನಿಗಳನ್ನು ಅಭಿನಂದಿಸುವ ಸಲುವಾಗಿ 2004 ರಿಂದ ಆಚರಿಸಲಾಗುತ್ತಿದೆ. ಪ್ರತೀ ಆರೋಗ್ಯಕರ ವ್ಯಕ್ತಿಯು ಆರು ತಿಂಗಳಲ್ಲಿ ಒಮ್ಮೆ ರಕ್ತದಾನ ಮಾಡಬಹುದಾಗಿದೆ ಎಂದು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಹಲವು ಜನರು ರಕ್ತಹೀನತೆ, ಅಪೌಷ್ಟಿಕತೆಯಿಂದ ಬಳಲುತ್ತಾರೆ. ಅತಿಯಾದ ಆಲ್ಕೋಹಾಲ್ ಸೇವನೆ, ಗುಟ್ಕಾ, ಪಾನ್ ತಿನ್ನುತ್ತಾ ಸರಿಯಾಗಿ ಆಹಾರ ಸೇವನೆ ಮಾಡುವುದಿಲ್ಲ. ಇದರಿಂದ ಅವರಲ್ಲಿ ರಕ್ತದ ಅಂಶ ಕಡಿಮೆ ಆಗುತ್ತದೆ. ಅವರ ಕುಟುಂಬ ಸದಸ್ಯರಿಗೇ ರಕ್ತದ ಅವಶ್ಯಕತೆ ಇದ್ದಾಗ ರಕ್ತ ಕೊಡಲು ಆಗದಂತಹ ಪರಿಸ್ಥಿತಿ ಇರುತ್ತದೆ. ಆದ್ದರಿಂದ ಸಾದ್ಯವಾದಷ್ಟು ಉತ್ತಮ ಆಹಾರ ಸೇವನೆ, ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯ ಪೂರ್ಣವಾಗಿ ಜೀವನ ಮಾಡುವ ಬಗ್ಗೆ ತಿಳಿಸಿದರು.

    ಗ್ರಾಮೀಣ ಅಭ್ಯುದಯ ಸಂಸ್ಥೆಯ ಗೋಪಾಲ್ ನಾಯ್ಕ್ ಅವರು ಮಾತನಾಡಿ ಸ್ವಯಂ ಪ್ರೇರಿತ ರಕ್ತದಾನವು ಅತ್ಯಂತ ಉತ್ತಮ ಕಾರ್ಯ ವಾಗಿದ್ದು ಪ್ರತಿ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ. ತಮ್ಮ ರಕ್ತವನ್ನು ಉತ್ತಮವಾಗಿ, ಶುದ್ದವಾಗಿ ಇಟ್ಟುಕೊಂಡರೆ ಅದರಿಂದ ಅಗತ್ಯ ಸಂದರ್ಭಗಳಲ್ಲಿ ಬೇರೆಯವರಿಗೆ ರಕ್ತದಾನ ಮಾಡಲು ಅವಕಾಶವಾಗುತ್ತದೆ. ಆಲ್ಕೋಹಾಲ್ ಸೇವನೆ ಮಾಡಿದವರಲ್ಲಿ, ಕೆಲವು ಖಾಯಿಲೆಗಳಿಂದ ಬಳಲುತ್ತಿರುವವರಿಂದ ರಕ್ತವನ್ನು ಪಡೆಯುವುದಿಲ್ಲ. ಆಗ ತಮ್ಮದೇ ಕುಟುಂಬದ ಸದಸ್ಯರಿಗೆ ರಕ್ತದ ಅಗತ್ಯ ಇದ್ದಾಗಲೂ ಸಹ ಉಪಯೋಗ ಆಗಲ್ಲ. ಆದ್ದರಿಂದ ಉತ್ತಮ ರೀತಿಯಲ್ಲಿ ಜೀವನವನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ರಕ್ತದಾನಿಗಳಿಗೆ ಶುಭಾಶಯ ವನ್ನು ತಿಳಿಸುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಡಾ.ಪರಮೇಶ್, ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ನ ಸುರೇಶ್ ರವರು, ನಿಮ್ಹಾನ್ಸ್ ಆಸ್ಪತ್ರೆಯ ಆಶಾ ರವರು, ಅನ್ನಪೂರ್ಣೇಶ್ವರಿ ರವರು ಆಶಾ ಕಾರ್ಯಕರ್ತೆ ಯರು ಭಾಗವಹಿಸಿದ್ದರು.

  • *10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಸಭೆ : ಯೋಗ ದಿನಾಚರಣೆಯ ಪೋಸ್ಟರ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಡಾ. ಏನ್. ಶಿವಶಂಕರ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೂನ್ 14 : 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮವು ದೇವನಹಳ್ಳಿ ಟೌನ್ ನ ಕ್ರೀಡಾಂಗಣದಲ್ಲಿ ಜೂನ್ 21 ರಂದು ನಡೆಯಲಿದ್ದು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ “10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವ ಸಂಬಂಧ ಪೂರ್ವಭಾವಿ ಸಭೆ” ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಿಲ್ಲಾಮಟ್ಟದ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಜೂನ್ 21 ರಂದು ದೇವನಹಳ್ಳಿ ಟೌನ್ ನಲ್ಲಿರುವ ಕ್ರೀಡಾಂಗಣದಲ್ಲಿ ಬೆಳಿಗ್ಗೆ 6:00 ಗಂಟೆಯಿಂದ 8:30 ಗಂಟೆಯವರೆಗೆ ನಡೆಯಲಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿ, ಸಂಘಸಂಸ್ಥೆಗಳ ಪ್ರತಿನಿಧಿಗಳಿಂದ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ
    ದೇವನಹಳ್ಳಿ ಕ್ರೀಡಾಂಗಣದ ಸ್ವಚ್ಛತೆ, ಕುಡಿಯುವ ನೀರು, ಲಘು ಉಪಹಾರದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ತುರ್ತು ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ತುರ್ತು ಚಿಕಿತ್ಸಾ ಅಂಬುಲೆನ್ಸ್ ವ್ಯವಸ್ಥೆ, ಸೇರಿದಂತೆ ಇನ್ನಿತರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಶಾಲಾ-ಕಾಲೇಜುಗಳು, ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯಾ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

    ಶಿಷ್ಟಾಚಾರದಂತೆ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಕಾರ್ಯಕ್ರಮ ಯಶಸ್ವಿಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    “ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬುದು 2024ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಘೋಷವಾಕ್ಯವಾಗಿದ್ದು, ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸಂಘಸಂಸ್ಥೆಗಳ ಪ್ರತಿನಿಧಿಗಳು, ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

    ಸಭೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

    ಈ ಸಂಧರ್ಬದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಶುಹಬುದ್ದೀನ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುನೀಲ್ ಕುಮಾರ್, ಅಯುಷ್ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ಖುದ್ಸಿಯ ತಸ್‌ನೀಮ್.ಎಸ್.ಎ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

  • *ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡರ ಹುಟ್ಟು ಹಬ್ಬದ ಸಂಭ್ರಮ : ಅಭಿಮಾನಿಗಳಿಂದ ಭರ್ಜರಿ ಕಾರ್ಯಕ್ರಮ ಯೋಜನೆ*

    ದೊಡ್ಡಬಳ್ಳಾಪುರ : ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ಎಂ ಹರೀಶ್ ಗೌಡರವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ನಗರದ ನೆಲದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳು ಅದ್ದೂರಿಯಾಗಿ ಆಚರಣೆ ಮಾಡಿದ್ದರು.

    ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಶುಭ ಕೋರಿದರು.

    ತಾಲೂಕಿನಾದ್ಯಂತ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಪುಷ್ಪಹಾರ ಸಮರ್ಪಿಸುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಹುಟ್ಟುಹಬ್ಬದ ಶುಭ ಕೋರಿದರು.

    ಕಾರ್ಯಕ್ರಮದಲ್ಲಿ ಹರೀಶ್ ಗೌಡರು ಪಾಲ್ಗೊಂಡು ಮಾತನಾಡಿ ಅಭಿಮಾನಿಗಳಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು . ನಿಸ್ವಾರ್ಥ ಜನಸೇವೆ ಮಾಡಿದ ಫಲ ನನಗೆ ಈ ಅಭಿಮಾನದ ರೂಪದಲ್ಲಿ ದೊರೆತಿದೆ ಎಂದು ಭಾವಿಸುತ್ತೇನೆ. ಅಭಿಮಾನಿಗಳ ಪ್ರೀತಿ ವಿಶ್ವಾಸ ನನ್ನ ಹುಮ್ಮಸ್ಸನ್ನು ದುಪ್ಪಟ್ಟು ಮಾಡಿವೆ. ತಾಲೂಕಿನಲ್ಲಿ ಮತ್ತಷ್ಟು ಸೇವೆ ಸಲ್ಲಿಸಲು ಧೈರ್ಯ ತುಂಬಿವೆ. ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ತಮ್ಮ ಹುಟ್ಟು ಹಬ್ಬದಂತೆ ವಿಜೃಂಭಣೆ ಹಾಗೂ ಸಂತೋಷದಿಂದ ಆಚರಿಸುತ್ತಿರುವುದು ನನ್ನ ಸಂತೋಷಕ್ಕೆ ಪಾರವಿಲ್ಲದಂತಾಗಿದೆ. ನನ್ನ ಹಿತೈಷಿಗಳು ಮತ್ತು ಸ್ನೇಹಿತರ ಅಭಿಮಾನಕ್ಕೆ ನಾನು ಸದಾ ಚಿರಋಣಿ ಎಂದು ಅಭಿಪ್ರಾಯ ಪಟ್ಟರು.

    ಈ ಸಂದರ್ಭದಲ್ಲಿ ತಾಲ್ಲೂಕಿನ ಜೆಡಿಎಸ್ ಮುಖಂಡರಾದ ದಾಸಗೊಂಡನಹಳ್ಳಿ ಚಂದ್ರಣ್ಣ,ಅಶ್ವಥ್ ನಾರಾಯಣ ಮಂಡಿಬ್ಯಾಡರಹಳ್ಳಿ,ರಾ. ಬೈರೇಗೌಡರು, ಪ್ರವೀಣ್ ಶಾಂತಿನಗರ, ಸಂಜೀವ, ತರಿದಾಳು ಶ್ರೀನಿವಾಸ್, ಪ್ರಭಾಕರ್ ದೊಡ್ಡ ತುಮಕೂರು, ನರಸಿಂಹ ಗೌಡ, ,ತಳವಾರ್ ನಾಗರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.