Blog

  • *ಡೋಲು ಮತ್ತು ನಾದಸ್ವರ ಸಂಗೀತ ತರಬೇತಿಗಾಗಿ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 05 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಮೂಲಕ ದೇವನಹಳ್ಳಿ ಟೌನ್/ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸವಿತಾ ಸಮಾಜದ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ತರಬೇತಿ ಕೇಂದ್ರಕ್ಕೆ 2024-25ನೇ ಸಾಲಿಗೆ ಡೋಲು-10 ಮತ್ತು ನಾದಸ್ವರ-03 ಒಟ್ಟು 13 ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಪ್ರವೇಶ ಪಡೆಯಲು ಹಿಂದುಳಿದ ವರ್ಗಗಳ ಪ್ರವರ್ಗ-2(ಎ)ರಲ್ಲಿ ಬರುವ ಸವಿತಾ ಸಮಾಜ ಹಾಗೂ ಅದರ ಉಪಜಾತಿಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 13 ಸಂಜೆ 5.00 ಗಂಟೆಯವರೆಗೆ ಕಾಲಾವಕಾಶ ನಿಗಧಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಅರ್ಹತೆಗಳು

    ಹಿಂದುಳಿದ ವರ್ಗಗಳ ಪ್ರವರ್ಗ-2(ಎ)ರಲ್ಲಿ ಬರುವ ಸವಿತಾ ಸಮಾಜ ಅಥವಾ ಅದರ ಉಪಜಾತಿಗಳಿಗೆ ಸೇರಿರಬೇಕು. ಕನಿಷ್ಠ ವಯೋಮಿತಿ 10 ವರ್ಷ ಹಾಗೂ ಗರಿಷ್ಠ ವಯೋಮಿತಿ 15 ವರ್ಷ (ಒಂದು ವೇಳೆ ಅಧ್ಯಯನ ಮಾಡುತ್ತಿರುವ 15 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳು ದೊರೆಯದ ಪಕ್ಷದಲ್ಲಿ ಮಾತ್ರ 18 ವರ್ಷದವರೆಗಿನ ಮಕ್ಕಳನ್ನು ಸ್ವಲ್ಪಮಟ್ಟಿಗೆ ಸೇರಿಸಲು ಅವಕಾಶ ನೀಡುವುದು). ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 2.00 ಲಕ್ಷಗಳು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080 27682059 (ಸಮಯ ಬೆಳಿಗ್ಗೆ 10.00 ರಿಂದ ಸಂಜೆ 5.30ರವರೆಗೆ, ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ) ಸಂಪರ್ಕಿಸಬಹುದಾಗಿದೆ.

    ಅರ್ಜಿ ಪಡೆಯಲು ಹಾಗೂ ಹೆಚ್ಚಿನ ವಿವರಗಳಿಗಾಗಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಮಿನಿ ವಿಧಾನಸೌಧದ ಹಿಂಭಾಗ, ಡಿವಿಎಂ ಕಾಲೋನಿ, ದೇವನಹಳ್ಳಿ ಟೌನ್ / ತಾಲ್ಲೂಕು ಇಲ್ಲಿ ಸಂಪರ್ಕಿಸಬಹುದು‌ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿ.ಜೆ.ಪಿ. ಅಭ್ಯರ್ಥಿ ಡಾ. ಕೆ.ಸುಧಾಕರ್ ಗೆಲುವು : ಉಳಿದ ಅಭ್ಯರ್ಥಿಗಳು ಪಡೆದ ಮತಗಳೆಷ್ಟು ಗೊತ್ತಾ….??*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 04 : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾದ ಡಾ. ಕೆ.ಸುಧಾಕರ್ ಅವರು 8,22,619 ಮತಗಳನ್ನು ಪಡೆಯುವುದರ ಮೂಲಕ ಗೆಲುವು ಸಾಧಿಸಿದ್ದಾರೆ

     

    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಂ.ಎಸ್.ರಕ್ಷರಾಮಯ್ಯ ಅವರ ವಿರುದ್ಧ 1,63,460 ಮತಗಳ ಅಂತರದಿಂದ ಡಾ. ಕೆ. ಸುಧಾಕರ್ ಅವರು ಗೆಲುವು ಸಾಧಿಸಿದ್ದಾರೆ.

     

    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಂ.ಎಸ್. ರಕ್ಷರಾಮಯ್ಯ 6,59,159 ಮತಗಳನ್ನು ಪಡೆದಿದ್ದಾರೆ. ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿ ಮಹದೇವ್ ಪಿ. 4,440, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಅಭ್ಯರ್ಥಿ ಮುನಿವೆಂಕಟಪ್ಪ ಎಂ.ಪಿ 4,557, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿ ಕಲಾವತಿ .ಎನ್ 2,744, ದಿಗ್ವಿಜಯ ಭಾರತ ಪಾರ್ಟಿಯ ಅಭ್ಯರ್ಥಿ ನಾಗೇಶ್ .ಎಸ್ 850, ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ್ ಫುಲೆ) ಅಭ್ಯರ್ಥಿ ಟಿ.ಆರ್. ನಾರಾಯಣರಾವ್ 762, ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ವೆಂಕಟೇಶ್ ಮೂರ್ತಿ.ವಿ 2020, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ಜಿ.ಸುಬ್ರಮಣಿಶೆಟ್ಟಿ 872 ಮತಗಳನ್ನು ಪಡೆದಿದ್ದಾರೆ.

     

    ಪಕ್ಷೇತರ ಅಭ್ಯರ್ಥಿಗಳಾದ ಜಿ.ಎನ್. ಕೋದಂಡರೆಡ್ಡಿ 401, ಡಿ.ಚಿನ್ನಪ್ಪ 619, ಚಂದ್ರಶೇಖರ್ .ಹೆಚ್.ಸಿ 1,282, ದೇವರಾಜ್ ಕೊರೊನ ವಾರಿಯರ್ 1,177, ವಿ.ಎನ್. ನರಸಿಂಹಮೂರ್ತಿ ವಡಿಗೆರೆ 1,218, ನಸ್ರುಲ್ಲಾ 583, ಭಾಸ್ಕರ್ ಅಂಕಲಮಡಗು ಶಿವಾರೆಡ್ಡಿ 1,367, ಮೋಹಿತ್ ನರಸಿಂಹಮೂರ್ತಿ 1,229, ಜಿ.ಎನ್. ರವಿ 1,465, ರಾಜಣ್ಣ 3,764, ರಾಜಾರೆಡ್ಡಿ 3,381, ಡಾ. ಎಂ.ಆರ್ ರಂಗನಾಥ 857, ಸಿ.ವಿ. ಲೋಕೇಶ್ ಗೌಡ, ಬಿ.ಇ. 701, ವಲಸಪಲ್ಲಿ ಉತ್ತಪ್ಪ 2,162, ಟಿ.ವೆಂಕಟಶಿವುಡು 440, ಕೆ.ವೆಂಕಟೇಶ್ 474, ಜಿ.ಎನ್. ವೆಂಕಟೇಶ್ ಬಿ.ಎ., ಎಲ್.ಎಲ್.ಬಿ 1,207, ಸುಧಾಕರ್.ಎನ್ 1,591, ಡಿ. ಸುಧಾಕರ 1,689, ಸಂದೇಶ್ .ಜಿ ಅವರು 594 ಮತಗಳನ್ನು ಪಡೆದಿದ್ದಾರೆ. ನೋಟಾಗೆ 6,596 ಮತಗಳು ಚಲಾವಣೆಯಾಗಿವೆ.

  • *1,63,460 ಮತಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ ಏನ್ ಡಿ ಎ ಅಭ್ಯರ್ಥಿ ಡಾ. ಕೆ ಸುಧಾಕರ್*

    *ಸಾರ್ವತ್ರಿಕ ಲೋಕಸಭಾ ಚುನಾವಣೆ -2024*

     

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದೆ. ಜೆಡಿಎಸ್ ಬಿಜೆಪಿ ಪಕ್ಷಗಳ ಮೈತ್ರಿ ಅಭ್ಯರ್ಥಿ ಡಾ. ಕೆ ಸುಧಾಕರ್ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ ಜಯಭೇರಿ ಭಾರಿಸಿದ್ದಾರೆ

     

    ಏನ್ ಡಿ ಎ ಅಭ್ಯರ್ಥಿ ಡಾ.ಕೆ ಸುಧಾಕರ್ (ಬಿ.ಜೆ.ಪಿ)-8,22,619 ಮತಗಳನ್ನು ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್ ರಕ್ಷಾ ರಾಮಯ್ಯ(ಐ.ಎನ್.ಸಿ)-6,59,159 ಮತಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

     

    ಲೋಕಸಭಾ ಚುನಾವಣೆಯಲ್ಲಿ ಡಾ ಕೆ ಸುಧಾಕರ್ ಬರೋಬ್ಬರಿ 1,63,460 ಮತಗಳ ಅಂತರದಿಂದ ಜಯಗಳಿಸಿದ್ದು . ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ .

     

    ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಎರಡು ಪಕ್ಷದ ಕಾರ್ಯಕರ್ತರು ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.

  • *ಡಾ. ಕೆ ಸುಧಾಕರ್ ಗೆಲುವಿಗೆ ಸಂಭ್ರಮ, ಕಾರ‍್ಯಕರ್ತರ ವಿಜಯೋತ್ಸವ*

    ದೊಡ್ಡಬಳ್ಳಾಪುರ (ತೂಬಗೆರೆ) : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ. ಕೆ ಸುಧಾಕರ್ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಅಂಚಿ ವಿಜಯೋತ್ಸವ ಆಚರಿಸಿದರು.

    ಈವೇಳೆ ಮಾತನಾಡಿದ ಜಿಲ್ಲ ಬಿಜೆಪಿ ಕಾರ್ಯದರ್ಶಿ ಪ್ರತಾಪ್ ನೂತನ ಸಂಸದರಾಗಿ ಆಯ್ಕೆಯಾಗಿರುವ ಸುಧಾಕರ್ ಅವರಿಗೆ ಶುಭಾಶಯಗಳು ಫಲಿತಾಂಶಕ್ಕಾಗಿ ಹಗಲಿರುಳು ದುಡಿದ ಪಕ್ಷದ ಕಾರ್ಯಕರ್ತರು ಮುಖಂಡರು ಮತ್ತು ಪಕ್ಷದ ಪರವಾಗಿ ಮತ ಚಲಾಯಿಸಿದ ಎಲ್ಲಾ ಮತದಾರರಿಗೂ ಕೃತಜ್ಞತೆ ತಿಳಿಸಿದರು.
    ಜೆಡಿಎಸ್ ಯುವ ಮುಖಂಡ ಉದಯ ಆರಾಧ್ಯ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಮೇಲೆ ವಿಶ್ವಾಸವಿತ್ತು ಮತ ಚಲಾಯಿಸಿರುವ ಎಲ್ಲಾ ಮತದಾರರ ಅಪೇಕ್ಷೆಯಂತೆ ಮುಂದಿನ ದಿನಗಳಲ್ಲಿ ಹೋಬಳಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಶ್ರಮಿಸುತ್ತೇವೆ. ದೇಶದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ. ಇದು ಜನರು ನೀಡಿದ ಗೆಲುವು ಎಂದು ಬಣ್ಣಿಸಿದರು.

    ಹೋಬಳಿ ಬಿಜೆಪಿ ಅಧ್ಯಕ್ಷ ವಾಸುದೇವ್, ಬಿಜೆಪಿ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಪ್ರತಾಪ್, ಜೆಡಿಎಸ್ ಮುಖಂಡರಾದ ಉದಯ್ ಆರಾಧ್ಯ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಮುನಿಕೃಷ್ಣಪ್ಪ, ಮುಖಂಡರಾದ ಹರೀಶ್, ಕೃಷ್ಣಚಾರಿ, ದೇವರಾಜ್, ಗಂಗರಾಜು, ಇತರರು ಭಾಗವಹಿಸಿದ್ದರು.

  • *ಮೈಸೂರು ರಾಜ್ಯ “ಮಾದರಿ ಮೈಸೂರು” ಆಗಲು ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿಯೇ ಕಾರಣ – ಜಿ. ಸುರೇಶ್*

    ದೊಡ್ಡಬಳ್ಳಾಪುರ ಜೂನ್ 04 ( ವಿಜಯಮಿತ್ರ ) : ಮೈಸೂರು ರಾಜ್ಯವನ್ನು   ಸಮಗ್ರವಾಗಿ ಅಭಿವೃದ್ಧಿಗೊಳಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್  ಕನ್ನಡ ನಾಡಿನ ಅಭಿವೃದ್ಧಿಯ ಹರಿಕಾರರಾಗಿದ್ದಾರೆ  ಎಂದು ನವೋದಯ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವಿ.ಎಸ್.ಹೆಗಡೆ  ತಿಳಿಸಿದರು.

     

     

    ಅವರು ನಗರದ ಎಂ.ಎ.ಬಿ.ಎಲ್ ಪ್ರೌಢಶಾಲೆಯಲ್ಲಿ  ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ  ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಸಮಯದಲ್ಲಿ ನಿರ್ಮಾಣವಾದ ವಿವಿಧ ಜಲಾಶಯಗಳು, ಬೃಹತ್ ಕೈಗಾರಿಕೆಗಳು, ನೂರಾರು ಶಾಲೆಗಳು ಕನ್ನಡಿಗರ ಬದುಕನ್ನು     ಉಜ್ವಲಗೊಳಿಸಿವೆ.  ಏಷ್ಯಾದಲ್ಲೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಬೀದಿದೀಪವನ್ನು ಬೆಳಗಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜರ ಒಡೆಯರಿಗೆ ಸಲ್ಲುತ್ತದೆ ಎಂದರು.

    ಮಹಾತ್ಮಗಾಂಧೀಜಿಯವರಿಂದ ರಾಜರ್ಷಿ ಬಿರುದು ಪಡೆದ ಹೆಗ್ಗಳಿಕೆಗೆ  ನಾಲ್ವಡಿ ಕೃಷ್ಣರಾಜ ಒಡೆಯರ್  ಪಾತ್ರರಾಗಿದ್ದಾರೆ. ಹಿಂದುಳಿದ ವರ್ಗಗಳಿಗೆ ಮೊದಲ ಬಾರಿಗೆ ಮೀಸಲಾತಿ ಕಲ್ಪಿಸಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ಶ್ರಮಿಸಿದ ಮಹನೀಯರನ್ನು ಕನ್ನಡಿಗರು ಎಂದಿಗೂ ಮರೆಯಲಾರರು.

    ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದವರು.   ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಗ್ರಾಮ ನಿರ್ಮಲೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ ದೊರೆತವು ಎಂದರು.

     

     

    ಪ್ರಾಸ್ತಾವಿಕವಾಗಿ ಮಾತನಾಡಿದ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿಯ ಫಲವಾಗಿ ಮೈಸೂರು ರಾಜ್ಯ “ಮಾದರಿ ಮೈಸೂರು” ಎಂಬ ಕೀರ್ತಿಗೆ ಪ್ರಾಪ್ತವಾಯಿತು ಎಂದರು. ನೀರಾವರಿ, ಕೈಗಾರಿಕೆ, ಶಿಕ್ಷಣ ಕ್ಷೇತ್ರಗಳಲ್ಲಿ ಕೃಷ್ಣರಾಜರ ಕೊಡುಗೆ ಅನನ್ಯವಾದುದು. ಅವರು ಜಾರಿಗೆ ತಂದ ಸಾಮಾಜಿಕ ಕಾನೂನುಗಳಿಂದ ಸಮಾಜದಲ್ಲಿನ ಅನಿಷ್ಠ ಪದ್ಧತಿಗಳ ನಿರ್ಮೂಲನೆ ಸಾಧ್ಯವಾಯಿತು. ಅವರು ಕನ್ನಡನಾಡಿನ ಸಮಗ್ರ ಅಭಿವೃದ್ಧಿಗೆ ಅಡಿಪಾಯ ಹಾಕಿದರು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಕೃಷ್ಣರಾಜರು ಪ್ರಾತಃಸ್ಮರಣೀಯರಾಗಿದ್ದಾರೆ.ಕೃಷ್ಣರಾಜರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಇಂದಿನ ಯುವಪೀಳಿಗೆ ಶ್ರಮಿಸಬೇಕಿದೆ ಎಂದರು.

     

     

    ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳು ಕೃಷ್ಣರಾಜ ಒಡೆಯರ ಕುರಿತ ಗೀತೆಗಳನ್ನು ಹಾಡಿದರು. ಎಂ.ಎ.ಬಿ.ಎಲ್. ಸಂಸ್ಥೆಯ ಸಿ.ಇ.ಓ.ಶ್ರೀಮತಿ ಬಿ.ಪಿ. ಪ್ರಿಯಾಂಕ, ಸಮಾಜಸೇವಕ ದರ್ಗಾಜೋಗಿಹಳ್ಳಿ ಮಲ್ಲೇಶ್, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

  • *ಪತ್ರಕರ್ತರ ಭವನ ಮತ್ತು ಪತ್ರಕರ್ತರಿಗೆ ನಿವೇಶನ ಕೊಡಿಸುವುದು ನನ್ನ ಮಖ್ಯ ಗುರಿ: ಚಂದ್ರಶೇಖರ್.*

    ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕಿನ ಪತ್ರಕರ್ತರ ಭವನ ನಿರ್ಮಾಣ ಮಾಡುವುದು ಮತ್ತು ಕಾರ್ಯನಿರತ ಪತ್ರಕರ್ತ ರಿಗೆ ನಿವೇಶನ ಕೊಡಿಸುವುದು ನನ್ನ ಮುಖ್ಯ ಗುರಿ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್.ಡಿ. ಉಪ್ಪಾರ್ ತಿಳಿಸಿದರು.

    ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ ಎಸ್ ಎಸ್ ಘಾಟಿ ಯಲ್ಲಿನ ಹ್ಯಾಪಿ ವ್ಯಾಲಿ ರೆಸಾರ್ಟ್‌ ನಲ್ಲಿ ನಡೆದ ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಸಾಲಿನ ಪದಾದಿಕಾರಿಗಳ ಪದಗ್ರಹಣ ಕಾರ್ಯ ಕ್ರಮದಲ್ಲಿ ಮಾತನಾಡುತ್ತ,ತಾಲ್ಲೂಕು ಪತ್ರಕರ್ತ ರಲ್ಲಿ ಸಮನ್ವಯತೆ ಕೊರತೆ ಇದ್ದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಣಿಕವಾಗಿ ಸಂಘದ ಏಳ್ಗೆಗಾಗಿ ದುಡಿಯುತ್ತೇನೆ ಎಂದರು.

     

    ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿ.ಶ್ರೀನಿವಾಸ ಮಾತನಾಡಿ ಪತ್ರಕರ್ತರು ನೈಜ ಸುದ್ದಿಯನ್ನು ಪ್ರಕಟಿಸಬೇಕು ಸತ್ಯಾ ಸತ್ಯತೆ ಯನ್ನು ಅರಿತು ಸುದ್ದಿಗಳನ್ನು ಮಾಡಬೇಕು.93 ವರ್ಷ ಗಳ ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಎಲ್ಲಾ ಪದಾದಿಕಾರಿಗಳು ಒಗ್ಗಟ್ಟಾಗಿ ಸಂಘದ ನಿವೇಶನ ಮತ್ತು ಪತ್ರಕರ್ತರ ಭವನ ನಿರ್ಮಾಣಕ್ಕೆ ಶ್ರಮಿಸಲು ಮನವಿ ಮಾಡಿ ನೂತನ ಸಾಲಿಗೆ ಆಯ್ಕೆಯಾದ ಪದಾದಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಆರ್ ರಮೇಶ್ ಜಿಲ್ಲಾ ಖಜಾಂಚಿ ಶಾಂತಮೂರ್ತಿ ಉಪಾಧ್ಯಕ್ಷ ಮುರಳಿ ಮೋಹನ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಆರ್ ಸತೀಶ್ ನಾಮಿನಿ ಸದಸ್ಯ ಬಿ.ರಮೇಶ್ ಹೊಸಕೋಟೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಮಂಜುನಾಥ್ ಮತ್ತು ತಾಲೂಕಿನ ಎಲ್ಲಾ ಪತ್ರಕರ್ತರು ಭಾಗವಹಿಸಿದ್ದರು.

     

    ನೂತನ ಸಾಲಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಅನೇಕ ಕನ್ನಡ ಪರ ಹಾಗೂ ಇನ್ನಿತರ ಎಲ್ಲಾಸಂಘಟನೆಯ ಮುಖಂಡರು ಗಳು ರಾಜಕಾರಣಿಗಳು ಶುಭ ಹಾರೈಸಿದರು.

  • *ಬೆಂಗಳೂರು ಪದವೀಧರರ ಕ್ಷೇತ್ರ ಚುನಾವಣೆ : ಜಿಲ್ಲೆಯಲ್ಲಿ ಶೇ.77.03 ರಷ್ಟು ಮತದಾನ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್03 (ವಿಜಯಮಿತ್ರ ): ಬೆಂಗಳೂರು ಪದವೀಧರರ ಕ್ಷೇತ್ರ ಚುನಾವಣೆಗೆ ಇಂದು ನಡೆದ ಮತದಾನದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದ 14729 ಪದವೀಧರ ಮತದಾರರು ಮತಚಲಾಯಿಸಿದ್ದು, ಶೇಕಡ 77.03 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ್ ಅವರು ತಿಳಿಸಿದರು.

    ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮತದಾನ ಕೇಂದ್ರಗಳಲ್ಲಿ 5515 ಪದವೀಧರ ಮತದಾರರ ಪೈಕಿ 4261 ಮತದಾರರು ಮತ ಚಲಾಯಿಸಿದ್ದು ಶೇ.77.26 ರಷ್ಟು ಮತದಾನವಾಗಿದೆ.

    ದೇವನಹಳ್ಳಿ ತಾಲ್ಲೂಕಿನ ಮತದಾನ ಕೇಂದ್ರಗಳಲ್ಲಿ 4739 ಪದವೀಧರ ಮತದಾರರ ಪೈಕಿ 3459 ಮತದಾರರು ಮತ ಚಲಾಯಿಸಿದ್ದು ಶೇ. 72.80 ರಷ್ಟು ಮತದಾನವಾಗಿದೆ,

    ಹೊಸಕೋಟೆ ತಾಲ್ಲೂಕಿನ ಮತದಾನ ಕೇಂದ್ರಗಳಲ್ಲಿ 5611 ಪದವೀಧರ ಮತದಾರರ ಪೈಕಿ 4318 ಮತದಾರರು ಮತ ಚಲಾಯಿಸಿದ್ದು ಶೇ. 76.95 ರಷ್ಟು ಮತದಾನವಾಗಿದೆ.

    ನೆಲಮಂಗಲ ತಾಲ್ಲೂಕಿನ ಮತದಾನ ಕೇಂದ್ರಗಳಲ್ಲಿ 3257 ಪದವೀಧರ ಮತದಾರರ ಪೈಕಿ 2700 ಮತದಾರರು ಮತ ಚಲಾಯಿಸಿದ್ದು ಶೇ. 82.89 ರಷ್ಟು ಮತದಾನವಾಗಿದೆ,

    ಒಟ್ಟಾರೆ 10240 ಪುರುಷ ಮತದಾರರು, 8882 ಮಹಿಳಾ ಮತದಾರರು ಸೇರಿ ಒಟ್ಟು 19122 ಪದವೀಧರ ಮತದಾರರು ಅಂತಿಮ ಪಟ್ಟಿಯಲ್ಲಿ ಇದ್ದು, ಅದರಲ್ಲಿ 8229 ಪುರುಷ ಮತದಾರರು, 6500 ಮಹಿಳಾ ಮತದಾರರು ಸೇರಿ ಒಟ್ಟಾರೆ 14729 ಪದವೀಧರ ಮತದಾರರು ಮತ ಚಲಾಯಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ ಎನ್ ಶಿವಶಂಕರ್ ಅವರು ತಿಳಿಸಿದರು.

  • *1528ನೇ ದಿನದ ಅನ್ನದಾಸೋಹ ಕಾರ್ಯಕ್ರಮ : ಹಸಿದವರಿಗೆ ಆಹಾರ ವಿತರಿಸಿ ಪುನೀತ್ ರಾಜಕುಮಾರ್ ಮಾದರಿ ಎಂದ ಅಪ್ಪು ಫ್ಯಾನ್ಸ್*

    ದೊಡ್ಡಬಳ್ಳಾಪುರ, ವಿಜಯಮಿತ್ರ ವರದಿ,ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಡೆಯುತ್ತಿರುವ ನಿರಂತರ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಗುರುರಾಜ್ ಪಾಟೀಲ್ ಹಾಗೂ ಗೆಳೆಯರು ತಮ್ಮ ವಿಶೇಷ ದಿನವನ್ನು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಿದರು.

    ಈ ಸಂದರ್ಭದಲ್ಲಿ ದಾನಿಗಳಾದ ಗುರುರಾಜ್ ಪಾಟೀಲ್ ಮಾತನಾಡಿ ಈ ಹಿಂದೆ ಹಲವು ಬಾರಿ ನನ್ನ ಹುಟ್ಟುಹಬ್ಬವನ್ನು ಹೊರಗಡೆ ಗೆಳೆಯರೊಂದಿಗೆ ಆಚರಣೆ ಮಾಡಿಕೊಂಡಿದ್ದೇನೆ. ಆದರೆ ಈ ಬಾರಿ ಗೆಳೆಯರ ಸಲಹೆ ಮೇರೆಗೆ ಅನ್ನದಾಸೋಹ ಸಮಿತಿ ಸಹಯೋಗದೊಂದಿಗೆ ಹಸಿದವರಿಗೆ ಊಟ ನೀಡುವ ಮೂಲಕ ಆಚರಿಸಿದ್ದು ಬಹಳ ಸಂತೋಷ ತಂದಿದೆ ಎಂದರು.

     

    ಕಾರ್ಯಕ್ರಮದಲ್ಲಿ ದಾನಿಗಳಾದ ಪುನೀತ್ ಅಪ್ಪು ಮಾತನಾಡಿ ಮಲ್ಲೇಶ್ ಮತ್ತು ತಂಡದ ಉತ್ತಮ ಕಾರ್ಯಕ್ಕೆ ಇದು ನಮ್ಮೆಲ್ಲರ ಒಂದು ಸಣ್ಣ ಸಹಾಯವಾಗಿದೆ. ನನ್ನ ಮಗನ ಹುಟ್ಟುಹಬ್ಬವನ್ನು ಅನ್ನದಾಸೋಹ ಸಮಿತಿ ಒಟ್ಟಿಗೆ ಬಡವರಿಗೆ ಆಹಾರ ವಿತರಿಸುವ ಮೂಲಕ ಆಚರಿಸಿದ್ದೆವು ಈಗ ನಮ್ಮ ಗೆಳೆಯರಾದಂತಹ ಗುರುರಾಜ್ ರವರ ಹುಟ್ಟುಹಬ್ಬವನ್ನು ಸಹ ಇಲ್ಲೇ ಆಚರಿಸಲು ತೀರ್ಮಾನಿಸಿದ್ದು ನಮ್ಮೆಲ್ಲರಿಗೂ ಖುಷಿ ತಂದಿದೆ ಎಂದರು.

    ವಿಶೇಷ ದಿನಗಳನ್ನು ಸಾವಿರಾರು ರೂಪಾಯಿ ಖರ್ಚು ಮಾಡುವ ಮೂಲಕ ವ್ಯರ್ಥ ಆಚರಣೆ ಮಾಡುವುದನ್ನು ನಿಲ್ಲಿಸಿ ಅಂತಹ ವಿಶೇಷ ದಿನಗಳನ್ನು ಹಸಿದವರಿಗೆ ಆಹಾರ ನೀಡುವ ಮೂಲಕ ಅನ್ನದಾಸೋಹ ಸಮಿತಿಯೋಟ್ಟಿಗೆ ಆಚರಿಸಿ, ಹಸಿವು ಮುಕ್ತ ಸಮಾಜಕ್ಕೆ ಸಹಕರಿಸಿ ಎಂದು ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮನವಿ ಮಾಡಿದರು.

     

     

    ಕಾರ್ಯಕ್ರಮದಲ್ಲಿ ಶಂಕರ್, ಗೌರಿಶಂಕರ್, ವಿಶ್ವನಾಥ್, ಉಮಾಪತಿ, ಹರೀಶ್ ಮಾರಸಂದ್ರ ಹಾಗೂ ವಿಜಯ್ ಪಾಲಂಜೋಗಳ್ಳಿ ಸೇರಿದಂತೆ ಹಲವು ಮುಖಂಡರು, ಅನ್ನದಾಸೋಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

  • *ರಂಗ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ,(ವಿಜಯಮಿತ್ರ ): ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯು 2024-25ನೇಸಾಲಿನ ರಂಗ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು, ಪದವೀಧರರಿಗೆ ಆದ್ಯತೆ ಇರುತ್ತದೆ. ರಂಗಭೂಮಿಯಲ್ಲಿ ಆಸಕ್ತಿ ಇದ್ದು, ಸ್ವಲ್ಪಮಟ್ಟಿನ ಅನುಭವ ಇರಬೇಕಾದ್ದು ಅಗತ್ಯ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಊಟ-ವಸತಿ ವ್ಯವಸ್ಥೆ ದೊರೆಯುತ್ತದೆ. ಕರ್ನಾಟಕ ಹಾಗೂ ಭಾರತದ ರಂಗತಜ್ಞರಿಂದ ಮತ್ತು ಅಥಿತಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತವೆ. ಗ್ರಂಥಭಂಡಾರ ಹಾಗೂ ದೃಶ್ಯ ಶ್ರವ್ಯ ಪರಿಕರಗಳ ಅನುಕೂಲತೆ ಇದೆ ರಂಗಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ರಂಗಭೂಮಿ, ಕನ್ನಡ ಮತ್ತು ನಾಟಕ ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಅಭಿನಯ, ಆಹಾರ್ಯ, ಶಿಕ್ಷಣದಲ್ಲಿ ರಂಗಭೂಮಿ, ಕುರಿತಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ನಡೆಯುತ್ತವೆ.

     

    ಅರ್ಜಿ ಸಲ್ಲಿಸಲು ಪ್ರಾಚಾರ್ಯರು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಸಾಣೇಹಳ್ಳಿ – 577 515 ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ಈ ವಿಳಾಸಕ್ಕೆ ಬರೆದು ಪ್ರವೇಶ ಅರ್ಜಿಗಳನ್ನು ತರಿಸಿಕೊಳ್ಳಬಹುದು ಅಥವಾ ರಂಗಶಾಲೆಯ ವೆಬ್ಸೈಟ್ www.theatreschoolsanehalli.org ನಲ್ಲಿ ಡೌನ ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಜೂನ್ 25 ರ ಒಳಗಾಗಿ ರಂಗಶಾಲೆಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ 9448398144,8861043553,9482942394,9972007015 ಈ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ತರಬೇತಿಗೆ ಅರ್ಜಿ ಅಹ್ವಾನ *

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 01 (ವಿಜಯಮಿತ್ರ): ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್ಸ್‌ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ ಸೆಟ್‌ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ 30 ದಿನಗಳ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಉಚಿತ ತರಬೇತಿಯು 25 ಜುಲೈ 2024 ರಿಂದ ಆಯೋಜಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ ಯುವತಿಯರು ರ್ಜಿನ ಸಲ್ಲಿಸಬಹುದಾಗಿದೆ.

     

     

    ಆಸಕ್ತ 18 ರಿಂದ 45 ರ್ಷಗ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಪ್ರದೇಶದ ಆಧಾರ್‌ ಕಾರ್ಡ್ ಹಾಗೂ ಬಿಪಿಎಲ್‌ ಕಾರ್ಡ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ತರಬೇತಿ ಪಡೆಯಲು DSLR Camara ಕಡ್ಡಾಯವಾಗಿ ಹೊಂದಿರತಕ್ಕದ್ದು.

     

     

    ತರಬೇತಿಯು ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನವಾಗಿದೆ.

     

    ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್‌ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್‌ ಸಂಖ್ಯೆ: 9241482541, 8884554510, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ ಸೆಟ್‌ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.