Blog

  • *ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಪೂರೈಕೆಯಲ್ಲಿ ಸಮಸ್ಯೆ ಆಗದಂತೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 01(ವಿಜಯಮಿತ್ರ):- ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಿ ರೈತರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಅಧಿಕಾರಿಗಳಿಗೆ ಸೂಚಿಸಿದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಇಂದು ನಡೆದ ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಲು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     

    ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳು ಸಮರ್ಪಕವಾಗಿ ಲಭ್ಯವಾಗುವಂತೆ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಮಾರಾಟ ಮಳಿಗೆಗಳಲ್ಲಿ ಶೇಖರಿಸಿಡಬೇಕು. ಕೃಷಿ ಪರಿಕರಗಳನ್ನು ಮಾರಾಟ ಮಾಡುವ ಅಂಗಡಿಗಳು ಕಡ್ಡಾಯವಾಗಿ ಪರಿಕರಗಳ ಬೆಲೆ ವಿವರಗಳನ್ನು ಅಂಗಡಿ ಮುಂದೆ ಪ್ರದರ್ಶಿಸಿರಬೇಕು. ರೈತರು ಖರೀದಿಸಲು ಬಂದಾಗ ವಿಳಂಬ ಮಾಡದೆ ನಿಗದಿತ ಸಮಯದಲ್ಲಿ ಅವಶ್ಯಕತೆ ಇರುವ ಕೃಷಿ ಪರಿಕರಗಳನ್ನು ಒದಗಿಸಬೇಕು.

     

     

    ಕಳಪೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅನಧಿಕೃತವಾಗಿ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

     

     

    2024-25 ನೇ ಸಾಲಿಗೆ 69,559 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದ್ದು, 1,42,292 ಮೆಟ್ರಿಕ್ ಟನ್ ಮುಂಗಾರು ಉತ್ಪಾದನೆ ಗುರಿ ಹೊಂದಲಾಗಿದೆ. ಪ್ರಸಕ್ತ ವರ್ಷದಲ್ಲಿ 3,837 ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆ ಇದ್ದು ಇಲ್ಲಿಯವರೆಗೆ 737.6 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ 31,842 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು ಜುಲೈ ಅಂತ್ಯಕ್ಕೆ 10,353 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. 2023-24 ನೇ ಸಾಲಿನಲ್ಲಿ ರಸಗೊಬ್ಬರ ಮತ್ತು ಕೀಟನಾಶಕಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 8 ಅನಧಿಕೃತ ಮಳಿಗೆಗಳ ಮೇಲೆ ದಾಳಿ ನಡೆಸಿ ಮಳಿಗೆಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಲಲಿತ ರೆಡ್ಡಿ ಅವರು ಮಾಹಿತಿ ನೀಡಿದರು.

     

     

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಲಲಿತ ರೆಡ್ಡಿ, ಉಪನಿರ್ದೇಶಕಿ ಗಾಯಿತ್ರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಹೇಮಾವತಿ ಜೆ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ರಸಗೊಬ್ಬರ ತಯಾರಿಕ ಕಂಪನಿಗಳ ಮುಖ್ಯಸ್ಥರು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

  • *ಕೈ ಕೊಟ್ಟ ಟೊಮಾಟೊ ಬೆಳೆ : ಪರಿಹಾರಕ್ಕಾಗಿ ಕಾದು ಕುಳಿತ ರೈತ ಮಂಜುನಾಥ್*

    ತೂಬಗೆರೆ : ಆಸೆಪಟ್ಟು ಟೊಮೆಟೊ ಬೇಸಾಯ ಮಾಡಲು ಮುಂದಾಗಿದ್ದ ರೈತನ ಪಾಡು, ಪರಿಹಾರಕ್ಕಾಗಿ ಅಲೆದಾಡುವಂತಾಗಿದೆ ಕೈಗೆ ಬಂದ ಟೊಮೆಟೊ ಬೆಳೆ ಮೊಳಕೆ ಹೊಡೆಯುತ್ತಿದ್ದು ರೈತ ಮಂಜುನಾಥ್ ಕಂಗಲಾಗಿದ್ದಾನೆ.

    ಹೌದು ತಾಲೂಕಿನ ತೂಬಗೆರೆ ಹೋಬಳಿಯ ಕೊಂಡಸಂದ್ರ ಗ್ರಾಮದ ರೈತ ಮಂಜುನಾಥ್ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆದಿದ್ದು ಟೊಮೆಟೊ ಬೆಳೆ ಕಟಾವಿಗೆ ಬರುವ ಸಮಯ ಹಣ್ಣಿನಲ್ಲಿ ಮೊಳಕೆ ಬರುತ್ತಿದ್ದು ಮಾರುಕಟ್ಟೆಯಲ್ಲಿ ಮೊಳಕೆ ಬಂದಿರುವ ಟೊಮ್ಯಾಟೋ ಹಣ್ಣನ್ನು ವ್ಯಾಪಾರಸ್ಥರು ಕೊಳ್ಳದ ಕಾರಣ ರೈತರು ಕಂಗಾಲಾಗಿದ್ದಾರೆ.

    ಸ್ಥಳೀಯ ಕಂಟನಕುಂಟೆ ಸಮೀಪದ ರಂಗನಾಥ ಸೀಡ್ಸ್ ನರ್ಸರಿಯಿಂದ 2071 ಬಯೋ ಸೀಡ್ಸ್ ಎಂಬ ಟೊಮೆಟೊ ಸಸಿ ತಳಿಯನ್ನು ಪಡೆದಿರುವುದಾಗಿ ರೈತರು ತಿಳಿಸಿದ್ದು . ಸಸಿ ನೀಡಿದ್ದ ನರ್ಸರಿ ಹಾಗೂ ಸಂಬಂಧಪಟ್ಟ ಕಂಪನಿಯವರು ಈ ಸಮಸ್ಯೆ ಕುರಿತು ಯಾವುದೇ ರೀತಿಯಾಗಿ ಸ್ಪಂದಿಸುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

     

    ಈ ಕುರಿತು ರೈತ ಮಂಜುನಾಥ್ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಟೊಮೆಟೊ ಬೆಳೆ ಬೆಳೆಯುತ್ತಿದ್ದು. ಈ ಬಾರಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ 2071 ಸೀಡ್ಸ್ ಟೊಮೊಟೊ ತಳಿಯ ಸಸಿಗಳನ್ನು ನಮ್ಮ ಹೊಲದಲ್ಲಿ ಹಾಕಿದ್ದೇನೆ.ಟೊಮೆಟೊ ಕಾಯಿ ಹಣ್ಣಾಗುವ ಸಂದರ್ಭದಲ್ಲಿ ಮೊಳಕೆ ಬರುತ್ತಿದೆ. ಸಮಯಕ್ಕೆ ಸರಿಯಾಗಿ ಸೂಕ್ತ ರೀತಿಯ ಪೋಷಕಾಂಶ , ಗೊಬ್ಬರ ಒದಗಿಸುತಿದ್ದೇವೆ ಆದರೂ ಈ ರೀತಿಯ ನೂತನ ಸಮಸ್ಯೆ ಕಾಣಿಸಿಕೊಂಡಿದ್ದು ಈ ಕುರಿತು ನರ್ಸರಿ ಹಾಗೂ ಕಂಪನಿಯವರಿಗೆ ಕರೆ ಮಾಡಿದಾಗ ಅವರಿಗೆ ಸಂಬಂಧವಿಲ್ಲ ಎಂಬಂತೆ ಮಾತನಾಡುತ್ತಿದ್ದಾರೆ. ಜೀವನೋಪಾಯಕ್ಕಾಗಿ ವ್ಯವಸಾಯ ಮಾಡುತ್ತಿದ್ದು ನಮಗೆ ದಾರಿ ಕಾಣದಂತಾಗಿದೆ . ಮಾರುಕಟ್ಟೆಯಲ್ಲಿ ಮೊಳಕೆ ಬಂದ ಟೊಮಾಟೊ ಹಣ್ಣುಗಳನ್ನು ವ್ಯಾಪಾರಸ್ಥರು ಖರೀದಿ ಮಾಡಲು ನಿರಾಕರಿಸುತ್ತಿದ್ದು. ಸಂಪೂರ್ಣ ಬೆಳೆ ವ್ಯರ್ಥವಾಗಿದೆ . ಸಾಲ ಮಾಡಿ ಈ ವ್ಯವಸಾಯಕ್ಕೆ ಬಂಡವಾಳ ಹೂಡಿದ್ದೇವೆ ನಮಗೆ ಕಂಪನಿ ಹಾಗೂ ನರ್ಸರಿ ವತಿಯಿಂದ ನಷ್ಟ ಪರಿಹಾರ ಬೇಕಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

    ಮನೆಯಲ್ಲಿ ಇದ್ದ ಬೆಲೆಬಾಳುವ ಒಡವೆಗಳನ್ನು ಒತ್ತೆ ಇಟ್ಟು ಸಾಲ ಮಾಡಿ ಟೊಮೆಟೋ ಬೆಳೆ ಬೆಳೆಯಲು ಮುಂದಾಗಿದ್ದೇವೆ ಆದರೆ ಟಮೊಟೊ ಹಣ್ಣುಗಳು ಮೊಳಕೆ ಹೊಡೆಯುತ್ತಿದ್ದು ಮಾರುಕಟ್ಟೆಯಲ್ಲಿ ಮಾರಲು ಸಾಧ್ಯವಾಗುತ್ತಿಲ್ಲ ಈ ಕುರಿತು ಕಂಪನಿಯವರಾಗಲಿ ನರ್ಸರಿಯವರಾಗಲಿ ಸಕಾರಾತ್ಮಕವಾಗಿ ಸ್ಪಂದಿಸದಿರುವುದು ಮತ್ತಷ್ಟು ನೋವು ತಂದಿದೆ. ನಮಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದು ರೈತ ಮಂಜುನಾಥ್ ಕುಟುಂಬಸ್ಥರು ಒತ್ತಾಯಿಸಿದರು.

     

    ತಾನು ಬೆಳೆದ ಟೊಮೆಟೊ ಬೆಳೆ ಸೂಕ್ತ ಬೆಲೆ ದೊರೆಯುವ ಸಮಯದಲ್ಲಿ ಹೀಗಾಗಿರುವುದು ರೈತ ಮಂಜುನಾಥ್ ಮತ್ತು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಮತ್ತು ನರ್ಸರಿ ಹಾಗೂ ಕಂಪನಿಯವರು ಈ ಕೂಡಲೇ ಸ್ಥಳಕ್ಕೆ ಧಾವಿಸಿ ನೊಂದ ರೈತ ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆಗೆ ನಷ್ಟ ಪರಿಹಾರ ಘೋಷಣೆ ಮಾಡಬೇಕೆಂದು ಸ್ಥಳೀಯ ರೈತರು ತಿಳಿಸಿದ್ದಾರೆ.

  • *ಮಾದಕ ವಸ್ತುಗಳ ಸೇವನೆ ಹಾಗೂ ತಂಬಾಕಿನಿಂದ ಯುವ ಪೀಳಿಗೆ ದೂರ ಉಳಿಯಬೇಕು – ಡಾ. ವೀಣಾ*

    ದೊಡ್ಡಬಳ್ಳಾಪುರ ಮೇ 31 ( ವಿಜಯಮಿತ್ರ ) : ತಾಲ್ಲೂಕಿನ ರೋಜಿಪುರ ದಲ್ಲಿ ತಂಬಾಕು ವಿರೋಧಿ ದಿನಾಚರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ಆಚರಿಸಲಾಯಿತು.

     

     

    ಯೋಜನೆಯ ತಾಲ್ಲೂಕು ಯೋಜನಾಧಿಕಾರಿಗಳಾದ ಸುಧಾ ಭಾಸ್ಕರ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಯುವ ಜನತೆ ತಂಬಾಕು ಮಾದಕ ವಸ್ತುಗಳ ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು ,ಮನೆಗೆ ಆಸರೆಯಾಗ ಬೇಕಿದ್ದ ಮಕ್ಕಳು ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ತುತ್ತಾಗಿ ಮರಣ ಹೊಂದುತ್ತಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ// ವೀಣಾ ಮಾತನಾಡಿ ತಂಬಾಕಿನಿಂದ ಸಮಾಜಕ್ಕೆ ಆಗುವ ದುಷ್ಟಪರಿಣಾಮಗಳ ಬಗ್ಗೆ ತಿಳಿಸಿದರು ಯುವ ಜನತೆ ತಂಬಾಕು ಸೇವನೆಯಿಂದ ಕ್ಯಾನ್ಸರ್ ಖಾಯಿಲೆಗೆ ತುತ್ತಾಗುತ್ತಿದ್ದಾರೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು. ತಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಾದಕ ವಸ್ತುಗಳ ಸೇವನೆ ಹಾಗೂ ತಂಬಾಕಿನಿಂದ ದೂರ ಉಳಿಯಬೇಕು ಎಂದು ತಿಳಿಸಿದರು.

     

    ಕಾರ್ಯಕ್ರಮದಲ್ಲಿ ಜನಜಾಗೃತಿ ಸದಸ್ಯರಾದ ನಾಗೇಶ್ , ನಿವೃತ್ತ ಪ್ರಾಂಶುಪಾಲರಾದ ಮಹಾಲಿಂಗಯ್ಯ , ವಲಯದ ಮೇಲ್ವಿಚಾರಕರಾದ ಗಿರೀಶ್ , ತಾಲೂಕಿನ ಸಮನ್ವಯ ಅಧಿಕಾರಿ ಛಾಯ, ಸೇರಿದಂತೆ ಹಲವು ಸೇವಾಪ್ರತಿನಿಧಿಗಳು ಸಂಘದ ಸದಸ್ಯರು ಉಪಸ್ಥಿತರಿದ್ದರು.

  • *ಘಾಟಿ ಸುಬ್ರಹ್ಮಣ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪ್ರಭಾರ ಎಂ ನಾರಾಯಣಸ್ವಾಮಿ ಅಧಿಕಾರ ಸ್ವೀಕಾರ*

    ದೊಡ್ಡಬಳ್ಳಾಪುರ ಮೇ 31 ( ವಿಜಯಮಿತ್ರ ) :ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಎಂ. ನಾರಾಯಣಸ್ವಾಮಿ ರವರು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪ್ರಭಾರ ವಹಿಸಿಕೊಂಡಿರುತ್ತಾರೆ.

     

    ಘಾಟಿ ಶ್ರೀ ಸುಬ್ರಹ್ಮಣ್ಯ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿ, ನಾಗರಾಜ್, ರವರು ಮೇ 31ರಂದು ವಯೋನಿವೃತ್ತಿ ಹೊಂದಲಿರುವುದರಿಂದ, ಘಾಟಿ ಶ್ರೀ ಸುಬ್ರಹ್ಮಣ್ಯ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಶ್ರೀ ಎಂ.ನಾರಾಯಣಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀ ಕುಮಾರಸ್ವಾಮಿ ಮತ್ತು ಸಮೂಹ ದೇವಾಲಯಗಳು, ಹನುಮಂತನಗರ, ಬೆಂಗಳೂರು, ಇವರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು, 1958ರ ನಿಯಮ 68ರಡಿ ವಹಿಸಿಕೊಳ್ಳುವಂತೆ ಆಯುಕ್ತರ ಪರವಾಗಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅದೇಶಿಸಿದೆ.

     

    ಈ ಕಾರ್ಯಕ್ರಮದಲ್ಲಿ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರಾದ ಶ್ರೀ ಪಿ.ದಿನೇಶ್, ತಹಸಿಲ್ದಾರ್ ಜೆಜೆ ಹೇಮಾವತಿ ರವರು ಪ್ರಧಾನ ಅರ್ಚಕರು ಆರ್ ಸುಬ್ರಹ್ಮಣ್ಯ ದೇವಾಲಯದ ನಂಜಪ್ಪ ಮತ್ತು ದೇವಾಲಯದ ಸಿಬ್ಬಂದಿರವರು ಭಾಗವಹಿಸಿದ್ದರು.

  • *ತಂಬಾಕು ನಿಯಂತ್ರಣಕ್ಕೆ ಹಲವು ಕ್ರಮ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 30 (ವಿಜಯಮಿತ್ರ ): ಜಿಲ್ಲೆಯಾದ್ಯಂತ ತಂಬಾಕು ಬಳಕೆ ನಿಯಂತ್ರಿಸಲು ಹಲವು ಕ್ರಮಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕ್ರಮವಹಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಅವರು ತಿಳಿಸಿದರು.

     

    ಪ್ರತಿ ವರ್ಷ ಮೇ 31ರಂದು “ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. “ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು”. ಈ ವರ್ಷದ”ವಿಶ್ವ ತಂಬಾಕು ರಹಿತ ದಿನಾಚರಣೆಯ ಧೈಯ ವಾಕ್ಯ.

    ಈ ಹಿನ್ನೆಲೆಯಲ್ಲಿ ಮೇ 31 ರಿಂದ ಜೂನ್ 30ರವರೆಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ಜಂಟಿ ಸಹಭಾಗಿತ್ವದೊಂದಿಗೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು.

     

     

    ಈ ಕಾರ್ಯಕ್ರಮದ ಸದುದ್ದೇಶ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸುವುದು ಹಾಗೂ ಮಕ್ಕಳ ಆರೋಗ್ಯ ಮತ್ತು ಉಜ್ವಲ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಕ್ಕಳು ತಂಬಾಕು ವ್ಯಸನಿಗಳಾಗದಂತೆ ತಡೆಯುವುದು ಅತೀ ಮುಖ್ಯವಾಗಿರುತ್ತದೆ.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ/ ಕಾಲೇಜು/ ವಿಶ್ವವಿದ್ಯಾಲಯಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಹಾಗೂ COTPA Sec 6bಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಸುತ್ತ 100 ಗಜ ಅಂತರದಲ್ಲಿ ತಂಬಾಕು ವ್ಯಾಪಾರ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ “ತಂಬಾಕು ವ್ಯಸನಮುಕ್ತ ಕೇಂದ್ರ”ವು ಸ್ಥಾಪಿತವಾಗಿದ್ದು ಈ ಕೇಂದ್ರದಲ್ಲಿ ತಂಬಾಕು ವ್ಯಸನಿಗಳಿಗೆ ಈ ದುಶ್ಚಟದಿಂದ ಮುಕ್ತಿ ಹೊಂದಲು ಆಪ್ತ ಸಮಾಲೋಚನೆ ಹಾಗೂ ಉಚಿತ ಚಿಕಿತ್ಸೆಯ ಸೌಲಭ್ಯವಿದ್ದು ಇದರ ಉಪಯೋಗವನ್ನು ಸಾರ್ವಜನಿಕರು ಪಡೆಯಬಹುದಾಗಿದೆ.

     

    ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು COTPA ಕಾಯ್ದೆಯ ಉಲ್ಲಂಘನೆ ಮಾಡುವವರ ವಿರುದ್ಧ ದೂರು ದಾಖಲಿಸಲು Stop Tobacco Mobile App ಅನ್ನು ಸಾರ್ವಜನಿಕರು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ COTPA ಕಾಯ್ದೆ 2003 ರ ಉಲ್ಲಂಘಿತ ಪ್ರಕರಣಗಳ ಬಗ್ಗೆ ದೂರುಗಳನ್ನು ದಾಖಲಿಸಬಹುದಾಗಿದೆ.

    “ವಿಶ್ವ ತಂಬಾಕು ರಹಿತ ದಿನ”ವನ್ನು ಆಚರಿಸುವ ಅಂಗವಾಗಿ ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳನ್ನು “ತಂಬಾಕು ಮುಕ್ತ ಕಛೇರಿ ಎಂದು ಘೋಷಿಸಲು ಕ್ರಮ ವಹಿಸುವಂತೆ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಅಂಗಡಿ ಮಾಲೀಕರುಗಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರತ್ಯೇಕವಾದ ಪರವಾನಗಿಯನ್ನು ಪಡೆಯುವಂತೆ ಮತ್ತು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಲ್ಲಿ ಈ ಆದೇಶವನ್ನು ಅನುಷ್ಠಾನಗೊಳಿಸುವಂತೆ ಪುರಸಭೆ ಮತ್ತು ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿದೆ.

     

    ತಂಬಾಕಿನಿಂದ ಆಗುವ ದುಷ್ಪರಿಣಾಮಗಳು, COTPA ಕಾಯ್ದೆ – 2003 ಮತ್ತು Stop Tobacco Mobile App (ಸ್ಟಾಪ್ ಟ್ಯೊಬ್ಯಾಕೊ ಮೊಬೈಲ್ ಆಪ್) ಈ ಬಗ್ಗೆ ಸಮೂಹ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ ಮತ್ತು ತಂಬಾಕು ವ್ಯಸನ ಮುಕ್ತ ಕೇಂದ್ರದ ಬಗ್ಗೆ ಸಾರ್ವಜನಿಕರಿಗೆ ಕಾಲ ಕಾಲಕ್ಕೆ ಮಾಹಿತಿ ನೀಡಲಾಗುತ್ತಿದೆ.

     

    ಈ ಎಲ್ಲಾ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರುವ ಉದ್ದೇಶ ನಮ್ಮದಾಗಿರುತ್ತದೆ ಎಂದು

    ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಂಬಾಕು ತನಿಖಾದಳ ಅಧ್ಯಕ್ಷರಾದ ಡಾ.ಎನ್ ಶಿವಶಂಕರ ಅವರು ತಿಳಿಸಿದ್ದಾರೆ.

  • *ಸಾಗರೋತ್ತರ ವಿದ್ಯಾರ್ಥಿ ವೇತನ ಯೋಜನೆಗೆ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ. 30(ವಿಜಯಮಿತ್ರ ):- 2024-25 ನೇ ಸಾಲಿನ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನ ಯೋಜನೆಗೆ (NOS) ಆನೆಲೈನ್ನಲ್ಲಿ https://overseas.tribal.gov.in ವೆಬ್ಸೈಟ್ ಮೂಲಕ ಅರ್ಜಿಸಲ್ಲಿಸಬಹುದಾಗಿದ್ದು, ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ ಮೇ 31 ಆಗಿರುತ್ತದೆ. ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸಲು 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ನಿರ್ದೇಶಕರವರ ಕಛೇರಿ, ನಂ.34ಲೋಟಸ್ ಟವರ್ಸ ಮೊದಲನೇ ಮಹಡಿ. ರೇಸ್ ಕೋರ್ಸ್ ರಸ್ತೆ, ಬೆಂಗಳೂರು ದೂರವಾಣಿ 080-22261789/080-22261787 ಈ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಈ ವರ್ಷ ಸುಮಾರು 45 ಮಕ್ಕಳು ದಾಖಲಾಗುವ ನಿರೀಕ್ಷೆಯಿದೆ – ಚಂದ್ರಶೇಖರ್*

    ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿ ಈ ವರ್ಷದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಆರಂಭವಾಗಿದೆ ದಿನಾಂಕ 29 ರಿಂದ 2024- 25 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ ಈ ಕಾರಣದಿಂದಾಗಿ ತಾಲೂಕಿನ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಪ್ರಾರಂಭ ಮಾಡಲಾಗಿದೆ ಎಂದು ಪ್ರಭಾರ ವಿದ್ಯಾರ್ಥಿ ನಿಲಯ ಮೇಲ್ವಿಚಾರಕ ಚಂದ್ರಶೇಖರ್ ತಿಳಿಸಿದರು.

     

    ವಿದ್ಯಾರ್ಥಿನಿಲಯಕ್ಕೆ ಆಗಮಿಸಿದ ಮಕ್ಕಳಿಗೆ ಪುಷ್ಪವನ್ನು ನೀಡುವುದರ ಮೂಲಕ ಬರಮಾಡಿಕೊಳ್ಳಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ದಿನ ಶೈಕ್ಷಣಿಕ ವರ್ಷದ ಮೊದಲ ದಿನವಾಗಿದ್ದು. ವಿದ್ಯಾರ್ಥಿ ನಿಲಯಕ್ಕೆ ದಾಖಲಾತಿ ಪ್ರಾರಂಭವಾಗಿವೆ.ಮೊದಲ ದಿನದಂದು ನಾಲ್ಕು ಮಕ್ಕಳು ಪ್ರವೇಶವನ್ನು ಪಡೆದುಕೊಂಡಿದ್ದಾರೆ.ಈ ವರ್ಷ ಸುಮಾರು 45 ಮಕ್ಕಳು ದಾಖಲಾಗುವ ನಿರೀಕ್ಷೆ ಇದೆ ಎಂದರು.

    ಮೂರನೇ ತಾರೀಕಿನಂದು ಉಳಿದ ಮಕ್ಕಳು ವಿದ್ಯಾರ್ಥಿನಿಲಯಕ್ಕೆ ಬರುವವರಿದ್ದು.ಇನ್ನು ಕೆಲವೇ ದಿನಗಳಲ್ಲಿ ವಿದ್ಯಾರ್ಥಿ ನಿಲಯದ ಹೊಸ ಕಟ್ಟಡ ಉದ್ಘಾಟನೆಗೊಳ್ಳಲಿದೆ ಎಂದರು.ಈ ವಿದ್ಯಾರ್ಥಿ ನಿಲಯದಲ್ಲಿ ಇಬ್ಬರು ಅಡುಗೆಯವರು ಕಾರ್ಯ ನಿರ್ವಹಿಸುತ್ತಿದ್ದು. ನಮ್ಮಲ್ಲಿ ಬರುವ ಮಕ್ಕಳಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

  • *ವಿವಿಧ ವಸತಿ ಶಾಲೆಗಳ ಉಳಿಕೆ ಸೀಟು ಭರ್ತಿಗಾಗಿ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ. 29(ವಿಜಯಮಿತ್ರ ):- ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ/ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ/ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ಅಟಲ್ ಬಿಹಾರಿ ವಾಜಪೇಯಿ/ ಡಾ।।ಬಿ.ಆರ್.ಅಂಬೇಡ್ಕರ್/ ಇಂದಿರಾಗಾಂಧಿ ವಸತಿ ಶಾಲೆಗಳಿಗೆ 2024-25ನೇ ಸಾಲಿನ 7, 8 ಮತ್ತು 9ನೇ ತರಗತಿಗಳ ಉಳಿಕೆ ಸೀಟುಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, 29 ಮೇ 2024 ರಿಂದ 05 ಜೂನ್ 2024 ರವರೆಗೆ ಸಮೀಪದ ವಸತಿ ಶಾಲೆಗಳಲ್ಲಿ ಅರ್ಜಿ ಪಡೆದು ಭರ್ತಿಮಾಡಿ ಸಲ್ಲಿಸಬಹುದಾಗಿದೆ.

     

     

    *ವಿಶೇಷ ಸೂಚನೆ:*

    ಪರೀಕ್ಷೆಯನ್ನು 07 ಜೂನ್ 2024 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 01.00 ಗಂಟೆಯವರೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಚ್ಚಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕು ಇಲ್ಲಿ ನಿಗದಿಪಡಿಸಲಾಗಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಲೋಕಸಭಾ ಚುನಾವಣೆ : ಮತ ಎಣಿಕೆ ದಿನದಂದು ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಆದೇಶ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ. 29(ವಿಜಯಮಿತ್ರ ):- ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಮತ ಏಣಿಕೆ ಕಾರ್ಯ ಜೂನ್ 4 ರಂದು ನಡೆಯಲಿರುವ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿರುವ ನಾಗಾರ್ಜುನ ಕಾಲೇಜಿನಲ್ಲಿ ನಡೆಯಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ಜೂನ್. 03 ರ ಸಂಜೆ 6:00 ಗಂಟೆಯಿಂದ ಜೂನ್ 05 ರ ಮಧ್ಯರಾತ್ರಿ 12:00 ಗಂಟೆಯವರೆಗೆ ನಿಷೇಧಾಜ್ಞೆ ವಿಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಆದೇಶ ಹೊರಡಿಸಿದ್ದಾರೆ.

    ಜಿಲ್ಲೆಯ ಪ್ರಸಕ್ತ ವಿದ್ಯಾಮಾನಗಳನ್ನು ಗಣನೆಗೆ ತೆಗೆದುಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಮುಕ್ತ ಮತ್ತು ನ್ಯಾಯೋಚಿತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆಯ ಮತ ಎಣಿಕೆಯನ್ನು ನಡೆಸುವ ನಿಟ್ಟಿನಲ್ಲಿ ನಿಷೇಧಾಜ್ಞೆಯನ್ನು ವಿಧಿಸುವುದು ಅವಶ್ಯವಾಗಿದೆ.

     

    ಷರತ್ತುಗಳು:-

    1. ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮೇಲೆ ತಿಳಿಸಿದ ಅವಧಿಯಲ್ಲಿ ಸಾರ್ವಜನಿಕರು ಸಕಾರಣವಿಲ್ಲದೇ ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮುಂತಾದವುಗಳಲ್ಲಿ ಗುಂಪು ಸೇರುವುದನ್ನು ನಿಷೇಧಿಸಿದೆ.

    2. ಯಾವುದೇ ಆಯುಧ, ಕುಡುಗೋಲು, ಖಡ್ಗ, ಭರ್ಚಿ, ಚೂರಿ, ದೊಣ್ಣೆ, ಲಾಠಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಮಾರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಯ್ಯುವುದನ್ನು ಮತ್ತು ಸಾಗಾಟ ಮಾಡುವುದನ್ನು ನಿಷೇಧಿಸಿದೆ.

    3. ಗೆದ್ದ ಅಭ್ಯರ್ಥಿಗಳ ಮೆರವಣಿಗೆ ಹಾಗೂ ಪಟಾಕಿ/ಬಾಣ/ಬಿರುಸುಗಳನ್ನು ಹಚ್ಚುವುದು ಸಾರ್ವಜನಿಕ ಸಭೆ ಸಮಾರಂಭಗಳು, ಗೆಲುವಿನ ಸಂಭ್ರಮಗಳನ್ನು ನಡೆಸಬಾರದು.

    4. ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವುದು ಅಥವಾ ಪದ ಹಾಡುವುದು, ಚೇಷ್ಮೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ ಪ್ರದರ್ಶನ ಅಥವಾ ಪ್ರಸಾರ ಮಾಡುವುದು. ಪ್ರಕಟಣಾ ಪತ್ರಿಕೆಗಳ ಅಥವಾ ಇತರ ಯಾವುದೇ ವಸ್ತುಗಳ ಪ್ರದರ್ಶನ, ಬಿತ್ತಿ ಪತ್ರಗಳನ್ನು ಅಂಟಿಸುವುದರಿಂದ, ಸಭ್ಯತನ ಸದಾಚಾರ, ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವಂತೆ ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಿದೆ.

    5. ಯಾವುದೇ ರೀತಿಯ ಬಂದ್, ಪ್ರತಿಭಟನೆ, ಮುಷ್ಕರ, ಪ್ರತಿಕೃತಿ ದಹನ, ಪ್ರದರ್ಶನ, ಪೂರಕ ಚಟುವಟಿಕೆಗಳು, ಯಾವುದೇ ಖಾಸಗಿ/ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾನಿಗೊಳಿಸುವ ಹಾಗೂ ವಿರೂಪಗೊಳಿಸುವ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿಷೇಧಿಸಿದೆ.

    6. ಯಾವುದೇ ವ್ಯಕ್ತಿಯ ಜಾತಿ-ಧರ್ಮ, ಕೋಮು ಪಂಥಗಳಿಗೆ ಅಥವಾ ಸಾರ್ವಜನಿಕ ನೈತಿಕತೆಗೆ ಬಾಧಕ ಉಂಟುಮಾಡಬಹುದಾಂತಹ ಚಟುವಟಿಕೆಗಳನ್ನು ನಿಷೇಧಿಸಿದೆ.

    7. ಈ ಅವಧಿಯಲ್ಲಿ ಯಾವುದೇ ಸಂತೆ, ಜಾತ್ರೆ ಮತ್ತು ಇತರೆ ಜನಸಮೂಹಗಳನ್ನು ನಿಷೇಧಿಸಿದೆ.

    8. ಸರ್ಕಾರಿ ಸಂಸ್ಥೆಗಳು, ಸಂಘಟನೆಗಳು ಹಾಗೂ ಕಾರ್ಯನಿರತ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ನಿಂದಿಸುವಂತಹ/ ಅವಹೇಳನಾಕಾರಿಯಾದಂತಹ ಯಾವುದೇ ಘೋಷಣೆಗಳು, ಭಾಷಣಾ ಪ್ರಕಟಣೆಗಳು ಅವಾಚ್ಯ ಶಬ್ದಗಳ ಬಳಕೆ, ಆವೇಶಕಾರಿ/ ಪ್ರಚೋದನಾಕಾರಿ ಭಾಷಣಾ ಗಾಯನ ಇತ್ಯಾದಿ ಚಟುವಟಿಗಳನ್ನು ನಿಷೇಧಿಸಿದೆ.

    9. ಚುನಾವಣಾ ಆಯೋಗದ ನಿರ್ದೇಶನದಂತೆ ಎಣಿಕೆ ಕೇಂದ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇದಿಸಿರುವ ಪ್ರದೇಶದಲ್ಲಿ ಪ್ರವೇಶಿಸುವುದು ನಿಷೇಧಿಸಿದೆ.

    10. ಈ ನಿಷೇದಾಜ್ಞೆಯು ಮದುವೆ, ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶವ ಸಂಸ್ಕಾರಕ್ಕೆ ಹಾಗೂ ಚುನಾವಣಾ ಸಂಬಂಧ ಏರ್ಪಡಿಸಲಾಗಿರುವ ಮತ ಕೇಂದ್ರಕ್ಕೆ ಅನ್ವಯಿಸುವುದಿಲ್ಲ.

    ಈ ಆದೇಶದ ಅನುಪಾಲನೆಗೆ ಪೊಲೀಸ್ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಉಪ ಪೊಲೀಸ್ ಆಯುಕ್ತರು, ಈಶಾನ್ಯ ವಲಯ, ಬೆಂಗಳೂರು ರವರು ಕಟ್ಟುನಿಟ್ಟಿನ ಕ್ರಮ ವಹಿಸುವುದು. ತಪ್ಪಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ದೊಡ್ಡಬಳ್ಳಾಪುರದ ಎಂ. ಚರಣ್ ಕುಮಾರ್ ಆಯ್ಕೆ : ಕ್ರೀಡಾಪಟುವಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ನೆರವಾದ ಹೆಚ್. ವಿ. ಪ್ರವೀಣ್*

    ದೊಡ್ಡಬಳ್ಳಾಪುರ ಮೇ 29 ( ವಿಜಯಮಿತ್ರ ) : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ‌ ಎಂ ಎ ವಿದ್ಯಾರ್ಥಿ ಎಂ.ಚರಣ್ ಕುಮಾರ್ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

     

    ಕ್ರೀಡಾಕೂಟದಲ್ಲಿ ಭಾಗವಹಿಸಲು ಕ್ರೀಡಾಪಟು ಚೆನೈ ಗೆ ತೆರಳುತ್ತಿದ್ದು. ವಿಚಾರ ತಿಳಿದ ಹಳೆ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷ ಹೆಚ್. ವಿ. ಪ್ರವೀಣ್ ಕುಮಾರ್ ಸಂಘದ ಪರವಾಗಿ ಅವರಿಗೆ ಹುರಿದುಂಬಿಸಿ ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಘದ ಪರವಾಗಿ ಆರ್ಥಿಕವಾಗಿ ಸಹಾಯವಾಗಲೆಂದು ಪ್ರೋತ್ಸಹ ಧನದ ಚೆಕ್ ನೀಡಿ ಶುಭ ಹಾರೈಸಿದರು.

     

     

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ಕಾಲೇಜಿನಲ್ಲಿ ಖೋಖೊ ಹಾಗೂ ಕಬಡ್ಡಿ ಕ್ರೀಡೆಗಳನ್ನು ಆಯೋಜಿಸುವುದಾಗಿ ತಿಳಿಸಿದರು.ಇನ್ನೂ ಹೆಚ್ಚಿನ ರೀತಿಯಲ್ಲಿ ವಿಧ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡುವುದಾಗಿ ಭರವಸೆ ನೀಡಿದರು.

     

    ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ! ಸದಾಶಿವ, ರಾಮ ಚಂದ್ರ ಗೌಡ, ಪ್ರಾದ್ಯಪಕರಾದ ಶ್ರೀನಿವಾಸ್, ಸಂಘದ ಖಜಾಂಜಿ ಮಹೇಶ್, ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು….