Blog

  • *ಉಚಿತ ಕಂಪ್ಯೂಟರ್ ಡಿಟಿಪಿ/ ಗ್ರಾಫಿಕ್ ಡಿಸೈನಿಂಗ್ ತರಬೇತಿಗೆ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೇ 24 (ವಿಜಯಮಿತ್ರ ): ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಕಂಪ್ಯೂಟರ್ ಡಿಟಿಪಿ/ ಗ್ರಾಫಿಕ್ ಡಿಸೈನಿಂಗ್ ಕುರಿತ 45 ದಿನಗಳ ಉಚಿತ ತರಬೇತಿಯು ಜುಲೈ 10 ರಿಂದ ಆಯೋಜಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

    ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆಯೊಂದಿಗೆ ಆಂಗ್ಲ ಭಾಷೆಯನ್ನು ಸಹ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್ನ್ನು ಹೊಂದಿರಬೇಕು ಹಾಗೂ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

    ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿದೆ.

    ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585, ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಸ್ಟಾಪ್ ಟ್ಯೊಬ್ಯಾಕೋ ಮೊಬೈಲ್ ಆಪ್ ಬಳಸಿ: ತಂಬಾಕು ನಿಯಂತ್ರಣಕ್ಕೆ ಸಹಕರಿಸಿ*

    ತಂಬಾಕು ನಿಯಂತ್ರಿಸಲು ರೂಪುಗೊಂಡಿರುವ ಸ್ಟಾಪ್ ಟ್ಯೊಬ್ಯಾಕೋ ಆಪ್ ಅನ್ನು ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಸಹ ಬಳಸಬಹುದಾಗಿದೆ.

     

    ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿರುವ ಪ್ರದೇಶದ ಕುರಿತು ಈ ಆಪ್ ಮೂಲಕ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ.

     

    ಮಾಹಿತಿ ನೀಡಿದ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.

     

    ತಂಬಾಕು ಬಳಕೆಯನ್ನು ನಿಯಂತ್ರಿಸಲು ಸಾರ್ವಜನಿಕರು ಸಹ ಸಹಕಾರ ನೀಡಬೇಕಿದೆ.

  • *ಎಲ್ಲಾ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಛೇರಿಗಳನ್ನು ಮೇ 31 ರ ಒಳಗಾಗಿ ತಂಬಾಕು ಮುಕ್ತ ಸರ್ಕಾರಿ ಕಛೇರಿಗಳಾಗಿ ಮಾಡಲು ಸೂಚನೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 24 (ವಿಜಯಮಿತ್ರ ):- ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಭಿತ್ತಿ ಪತ್ರಗಳು, ನಾಮಫಲಕಗಳನ್ನು ಶಾಲಾ-ಕಾಲೇಜು, ಆಸ್ಪತ್ರೆ ಅಂಗಡಿ-ಮುಂಗಟ್ಟು, ಕೈಗಾರಿಕೆ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ತಂಬಾಕು ಸೇವನೆ ನಿಯಂತ್ರಿಸಲು ಹೆಚ್ಚು ಕಾರ್ಯ ಪ್ರವೃತ್ತರಾಗಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ಡಾ.ಎನ್. ಶಿವಶಂಕರ್ ‌ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

     

     

    ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಂಬಾಕು ಮುಕ್ತ ದಿನ ಇರುವ ಕಾರಣದಿಂದಾಗಿ ಎಲ್ಲಾ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಛೇರಿಗಳನ್ನು ಮೇ 31 ರ ಒಳಗಾಗಿ ತಂಬಾಕು ಮುಕ್ತ ಸರ್ಕಾರಿ ಕಛೇರಿಗಳಾಗಿ ಮಾಡಲು ಸೂಚನೆ ನೀಡಿದರು.

    ಜಿಲ್ಲಾ ಹಾಗೂ ತಾಲ್ಲೂಕು ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯ ಪ್ರವೃತ್ತರಾಗಿ ತಂಬಾಕು ನಿಯಂತ್ರಣಕ್ಕೆ ಕ್ರಮವಹಿಸಲು ತಿಳಿಸಿದರು.

     

    *ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಹಾಗೂ ತಂಬಾಕು ನಿಯಂತ್ರಣ ಕಾನೂನು ಕೊಟ್ಪಾ 2003ರ ಕಾಯ್ದೆ* ಬಗ್ಗೆ ಶಾಲಾ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಿ. ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಅಂಗಡಿಗಳಲ್ಲಿ ಕೈಗಾರಿಕೆಗಳಲ್ಲಿ ತಂಬಾಕು ಸೇವನೆ ನಿಷೇಧ ಬಗೆಗಿನ ನಾಮಫಲಕಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ಯಾರು ಪ್ರದರ್ಶಿಸುತ್ತಿಲ್ಲ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು , ತಂಬಾಕು ವ್ಯಸನೆಯಿಂದ ಆರೋಗ್ಯ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಕಾಲ ಕಾಲಕ್ಕೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

     

    ತಂಬಾಕು ನಿಯಂತ್ರಣ ಕಾನೂನು- ಕೊಟ್ಪಾ 2003ರ ಕಾಯ್ದೆಯಂತೆ ಸೆಕ್ಷನ್ 04 ರ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಇದರನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಮಾಲೀಕರು ನಾಮಫಲಕಗಳನ್ನು ಪ್ರದರ್ಶಿಸಬೇಕು. ಸೆಕ್ಷನ್ 05 ರ ಅಡಿಯಲ್ಲಿ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ಉತ್ತೇಜನ, ಪ್ರಾಯೋಜಕತೆ ನಿಷೇಧ ಮಾಡಲಾಗಿದೆ. ಇದರ ಅನ್ವಯ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿಗಳಲ್ಲಿ ತಂಬಾಕು ಜಾಹೀರಾತುಗಳನ್ನು ಬೋರ್ಡ್, ಭಿತ್ತಿ ಪತ್ರ, ಎಲ್ ಸಿ ಡಿ ಟಿವಿಗಳ ಮೂಲಕ ಪ್ರಚಾರ ಮಾಡುವಂತಿಲ್ಲ, ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಮೂಲಕ ತಂಬಾಕು ಉತ್ಪನ್ನಗಳ ಜಾಹೀರಾತು ಮಾಡುವಂತಿಲ್ಲ. ಸೆಕ್ಷನ್ 6 ರ ಅಡಿಯಲ್ಲಿ ತಂಬಾಕು ಉತ್ಪನ್ನಗಳನ್ನು 18 ವರ್ಷದೊಳಗಿನ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮಾರಾಟ ಮಾಡುವಂತಿಲ್ಲ. ಈ ಕಾನೂನುಗಳನ್ನು ಉಲ್ಲಂಘಿಸಿದಲ್ಲಿ ದಂಡ ಹಾಗೂ ಸೂಕ್ತ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. ಸೆಕ್ಷನ್ 06 ಬಿ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳ ನೂರು ಅಡಿಯ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಸೆಕ್ಷನ್ 07 ರಲ್ಲಿ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲೆ ಶೇ. 85 ರಷ್ಟು ನಿರ್ದಿಷ್ಟ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವಂತಿಲ್ಲ ಎಂದು ಹೇಳಿದರು.

     

     

    ತಂಬಾಕು ವ್ಯಸನಿಗಳನ್ನು ಹೆಚ್ಚು ಪತ್ತೆ ಮಾಡಿ ಸಮಾಲೋಚನೆ ನಡೆಸಿ, ತಂಬಾಕು ವ್ಯಸನ ಮುಕ್ತರನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದರಲ್ಲದೆ, ಕಾನೂನು ಪಾಲಿಸದೆ ತಂಬಾಕು ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಅಂತವರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಿ ಎಂದು ಹೇಳಿದರು.

     

     

    ಶಿಕ್ಷಣ ಇಲಾಖೆ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಬೇಕು ಎಂದರು.

     

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್ ಕುಮಾರ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರರಾದ ಡಾ‌.ವಿದ್ಯಾರಾಣಿ.ಪಿ.ಎಸ್, ಜಿಲ್ಲಾ ಅರೋಗ್ಯ ಕಾರ್ಯಕ್ರಮ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • *”ಆಧುನಿಕ ಬುದ್ಧ ಡಾ: ಬಾಬಾ ಸಾಹೇಬ್ ಅಂಬೇಡ್ಕರ್”*

    ದೊಡ್ಡಬಳ್ಳಾಪುರ ಮೇ 24 ( ವಿಜಯಮಿತ್ರ ) : ಸಾವಿರಾರು ವರ್ಷಗಳಿಂದ ಮನುಷ್ಯನ ಮನಸ್ಸಿನ ಮೇಲೆ ನಿರಂತರ ಅತ್ಯಾಚಾರವಾಗಿದೆ! ಆ ಮೂಲಕ ಮನುಷ್ಯನ ಮನಸ್ಸಿಗೆ ಸ್ವಾತಂತ್ರ್ಯವಿರಲಿಲ್ಲ.ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮತ್ತು ಸಮಸ್ಯೆಗಳನ್ನು ನಿವಾರಣೆ ಮಾಡುವ ಸ್ವಾತಂತ್ರ್ಯವನ್ನು ಕಂಡುಕೊಂಡವರೇ ಭಗವಾನ್ ಬುದ್ಧ. ಬುದ್ಧನ ಮಾರ್ಗವನ್ನೇ ಮುಂದುವರೆಸಿಕೊಂಡು ಬಂದವರೇ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರವರು ಆಧುನಿಕ ಬುದ್ಧ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ: ಡಾ: ಪ್ರಕಾಶ್ ಮಂಟೇದ ಅವರು ಅಭಿಪ್ರಾಯ ಪಟ್ಟರು.

    ಅವರು ತಾಲ್ಲೂಕಿನ ಹಣಬೆ ಗ್ರಾಮದಲ್ಲಿ ನಡೆದ ಭಗವಾನ್ ಬುದ್ಧರ 2568ನೇ ಜಯಂತಿ ಹಾಗೂ 2ನೇ ವರ್ಷದ ಪೌರ್ಣಮಿ ಆಚರಣಾ ಕಾರ್ಯಕ್ರಮದಲ್ಲಿ ಬಾಗವಹಿಸಿ ಅವರು ಮಾತನಾಡಿದರು.

     

    ಈ ಜಗತ್ತಿನಲ್ಲಿ ಸ್ಪೃಶ್ಯ, ಅಸ್ಪೃಶ್ಯ ಎಂಬುದು ಇಲ್ಲ ಎಂಬ ಸತ್ಯವನ್ನು ಭಗವಾನ್ ಬುದ್ಧ ಈ ಜಗತ್ತಿಗೆ ತೋರಿಸಿಕೊಟ್ಟು, ಭ್ರಮೆಗಳನ್ನು ಓಡಿಸಿದ ಬುದ್ಧ, ನಿನಗೆ ನೀನೇ ಚೈತನ್ಯ ಎಂಬ ಸತ್ಯವನ್ನು ತಿಳಿಸಿದರು ಎಂದ ಅವರು ಪ್ರಸ್ತುತ ಸಂದರ್ಭದಲ್ಲಿ ಸಾಕ್ಷರರು ಸಂಬಳ ಬಂದಾಗ ಸಾಯಿಬಾಬಾ, ಸಂಬಳವಿಲ್ಲದಾಗ ಬಾಬಾ ಸಾಹೇಬ ಎಂಬ ಪ್ರವೃತ್ತಿಯನ್ನು ನಿಲ್ಲಿಸಿ, ಬುದ್ಧನೆಡೆಗೆ ಎಲ್ಲರೂ ಸಾಗಬೇಕಿದೆ ಎಂದು ಕಿವಿ ಮಾತು ಹೇಳಿದರು.

     

    ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾದ ಸಿ. ಗುರುರಾಜಪ್ಪ ಅವರು ಮಾತನಾಡಿ ಆಧುನಿಕ ಕಾಲಘಟ್ಟದಲ್ಲಿ ವೈಜ್ಞಾನಿಕ ಆಶಯಗಳಿಗೆ ಅನುರೂಪವಾದ ಧರ್ಮ ಯಾವುದಾದರೂ ಇದ್ದರೆ ಅದುವೇ ಬುದ್ಧ ಧರ್ಮ ಎಂದು ಹೇಳಿದ ಅವರು ರಾಜಕೀಯ ಅಧಿಕಾರ ಸಂತೋಷವನ್ನು ತರುವುದಿಲ್ಲ! ಆದರೆ ಮನುಷ್ಯ ಅನ್ನ, ನೀರು, ನೆರಳು, ಗೌರವ ಇವುಗಳಿಂದ ದೂರವಿರಲು ಸಾಧ್ಯವಿಲ್ಲ. ಇವುಗಳೆಲ್ಲವೂ ಎಲ್ಲರಿಗೂ ಸಿಗಬೇಕಾದರೆ ರಾಜಕೀಯ ವ್ಯವಸ್ಥೆ ಮತ್ತು ಹೊಣೆಗಾರಿಕೆ ಅತ್ಯಂತ ಅಗತ್ಯ ಎಂಬ ಭಗವಾನ್ ಬುದ್ಧರು ಹೇಳಿದ ಈ ಸತ್ಯಗಳ ಆಧಾರದ ಮೇಲೆಯೇ ಡಾ : ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮ್ಮ ರಾಷ್ಟ್ರದ ಸಂವಿಧಾನ ರಚನೆ ಮಾಡಿದ್ದಾರೆ. ಪ್ರಸ್ತುತ ಕಾನೂನು ವ್ಯವಸ್ಥೆಯನ್ನು ದಮನ ಮಾಡುವ ಕುತಂತ್ರದಿಂದ ಧರ್ಮ ಮತ್ತು ರಾಜಕೀಯ ವ್ಯವಸ್ಥೆಯನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮುಲಭೂತವಾದಿ ರಾಜಕೀಯ ನಾಯಕರು ಮಾಡುತ್ತಿದಾರೆ. ಇದು ಮುಂದುವರೆದರೆ ಜನಸಾಮಾನ್ಯರ ಬದುಕು ಅಪಾಯಕ್ಕೆ ಒಳಗಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

    ಸರ್ಕಾರಿ ಆಸ್ಪತ್ರೆಯ ತಾಂತ್ರಿಕ ಅಧಿಕಾರಿ ರಾಜೇಂದ್ರ ರವರು ಮಾತನಾಡಿ ಬುದ್ಧಧರ್ಮದಲ್ಲಿ ಮಾತ್ರ ವೈಜ್ಞಾನಿಕ ಮನೋ ಧರ್ಮ ಅಡಗಿದೆ ಎಂದು ವಿಶ್ವ ಸಂಸ್ಥೆ ಘೋಷಣೆ ಮಾಡಿದೆ ಈ ನಿಟ್ಟಿನಲ್ಲಿ ಇಡೀ ವಿಶ್ವವೇ ಬುದ್ಧಮಯವಾಗುವ ಎಲ್ಲಾ ಲಕ್ಷಣಗಳಿವೆ ಎಂದರು.

     

    ಕುಂದಾಣ ಬುದ್ಧವಿಹಾರದ ಅನಿರುದ್ಧ ಬಂತೇಜಿರವರು ಮತ್ತು ಉಪಾಸಕರಾದ ಸಿಧಾರ್ಥರವರು ಭಗವಾನ್ ಬುದ್ಧರ ತ್ರಿಸರಣ ಬೋದಿಸಿದರು.

     

    ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರೊ, ಚಂದ್ರಪ್ಪರವರು ಉತ್ಪಾದಕರು ಮತ್ತು ಅನುತ್ಪಾದಕರ ನಡುವೆ ನಡೆಯುತ್ತಿರುವ ಶೀತಲಸಮರದ ತಂತ್ರಗಾರಿಕೆಯನ್ನು ಅರ್ಥೈಸಿಕೊಂಡು ಬುದ್ಧನೆಡೆಗೆ ನಮ್ಮೆಲ್ಲರ ನಡಿಗೆ ಹಾಕಬೇಕಾಗಿದೆ ಎಂದರು.

    ಕಾರ್ಯಕ್ರಮದ ವ್ಯವಸ್ಥಾಪಕರಾದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದೊಡ್ಡರಂಗಪ್ಪ, ರಾಜಗೋಪಾಲ, ನಾರಾಯಣಸ್ವಾಮಿ, ರಮೇಶ್, ಗಂಗಪ್ಪ, ಜಗಧೀಶ್, ರಾಮಕೃಷ್ಣಪ್ಪ, ಮುನಿಯಪ್ಪ, ಮುನೇಗೌಡ, ಸುರೇಶ್, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.

  • *ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ : ರೈತ ಉತ್ಪಾದಕ ಸಂಸ್ಥೆಗಳಿಗೆ ಬಾಕಿ ಹಣ ಬಿಡುಗಡೆ ಮಾಡುವಂತೆ ಒತ್ತಾಯ*

    ದೇವನಹಳ್ಳಿ ಮೇ 23 ( ವಿಜಯಮಿತ್ರ ) : ಈಗಿನ ಕಾಂಗ್ರೆಸ್ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡದಿರುವುದರಿಂದ ರೈತ ಉತ್ಪಾದಕ ಸಂಸ್ಥೆಗಳ ಅಭಿವೃದ್ದಿಗೆ ಕುಂಠಿತವಾಗಿದೆ. ಇದರಿಂದ 10 ಲಕ್ಷ ರೈತರಿಗೆ ಮತ್ತು 12 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರಿಗೆ ತೊಂದರೆಯಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕೆ ಪಿ ಬೃಂಗೇಶ್ ತಿಳಿಸಿದರು.

     

    ಬಿಜೆಪಿ ರೈತ ಮೋರ್ಚಾ ವತಿಯಿಂದ ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನೆಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 5 ರೂ ಗಳ ಸಹಾಯದನವನ್ನು 9 ತಿಂಗಳುಗಳಿಂದ ಸ್ಥಗಿತ ಗೊಳಿಸಿ ಶೀಘ್ರದಲ್ಲೇ ಬಾಕಿಯಿರುವ ಅನುದಾನವನ್ನು ರೈತ ಉತ್ಪಾದಕ ಸಂಸ್ಥೆಗಳಿಗೆ ಬಿಡುಗಡೆಮಾಡಿ ಅವುಗಳ ಅಭಿವೃದ್ಧಿಗೆ ಸಹಾಯ ಮಾಡಬೇಕಿದೆ. ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡದಿದ್ದರೆ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ನೀತಿಯ ಬಗ್ಗೆ ರಾಜ್ಯಾದ್ಯಾಂತ ಹೋರಾಟವನ್ನು ರೂಪಿಸಲಾಗುವುದು ಎಂದರು.

     

    ಜೂನ್ ತಿಂಗಳ ಮುಂಗಾರು ಮಳೆ ಪ್ರಾರಂಭವಾಗಿರುವ ಕಾರಣ ರೈತರಿಗೆ ಸಮಾರ್ಪಕವಾಗಿ ಉತ್ತಮ ಬಿತ್ತನೆ ಬೀಜಗಳು ಹಾಗೂ ರಾಸಾಯನಿಕ ಗೋಬ್ಬರಗಳು ಮತ್ತು ಎಲ್ಲಾ ತರಹದ ಸಸಿಗಳು ಅತೀ ಶೀಘ್ರದಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.

    ರಾಜ್ಯದ ರೈತರ ಕುಂದು ಕೊರತೆಗಳನ್ನು ಕೂಡಲೇ ಪರಿಹರಿಸಿ ಕೊಡುವಂತೆ ರೈತರ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

     

    ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೆಚ್. ಎಂ. ರವಿಕುಮಾರ್ ಮಾತನಾಡಿ ರಾಜ್ಯ ಸರ್ಕಾರ ಪ್ರಾಯೋಜಿತ ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ ಸ್ವಾತಂತ್ರ ಸುವರ್ಣ ಮಹೋತ್ಸವದ ನೆನಪಿಗಾಗಿ ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಘೋಷಣೆಮಾಡಿದ್ದು , ಇಲ್ಲಿಯ ವರೆಗೂ ರಾಜ್ಯದಲ್ಲಿ 490 ರೈತ ಉತ್ಪಾದಕ ಸಂಸ್ಥೆಗಳು ರಚನೆಯಾಗಿವೆ,ಈ ಸಂಸ್ಥೆಗಳಿಗೆ ಅಂದಾಜು 150ಕೋಟಿ ರೂಪಾಯಿಗಳ ಅನುದಾನ ಕೋಟಿ ನೀಡಿದ್ದು. ರಾಜ್ಯದ ಕಾಂಗ್ರೆಸ್ ಸರ್ಕಾರ ಕೇವಲ 12 % ರಷ್ಟು ಮಾತ್ರ ಅನುದಾನ ಬಿಡುಗಡೆ ಮಾಡಿದ್ದು ಉಳಿದ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸುವ ಮೂಲಕ ರೈತರಿಗೆ ನೇರವಾಗಬೇಕಿದೆ. ರಾಜ್ಯ ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಘಟಕದ ವತಿಯಿಂದ ಉಗ್ರ ಹೋರಾಟಕ್ಕೆಗೊಳ್ಳಲಾಗುವುದು ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ಮಾದ್ಯಮ ಪ್ರಮುಖ್ ನೆಲಮಂಗಲ ರಾಜು, ಮಂಡಲ ಅಧ್ಯಕ್ಷ ಚೌಧರಿ, ಶಿವರಾಜು, ಕೆ.ಸಿ.ಮುನಿರಾಜು, ಆರ್.ಕೆ.ನಂಜೇಗೌಡ, ಸಿದ್ದಲಿಂಗಮೂರ್ತಿ, ಹೋಬಳಿ ಅಧ್ಯಕ್ಷ ಎ.ಆರ್.ವೆಂಕಟೇಗೌಡ, ಬೊಮ್ಮವಾರ ರಮೇಶ್, ಅಶ್ವತ್ಥ್‌ಗೌಡ, ನಾಲ್ಕು ತಾಲ್ಲೂಕಿನ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • *ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಸಾರಥಿಯಾಗಿ ಚಂದ್ರಶೇಖರ ಡಿ ಉಪ್ಪಾರ್ ಆಯ್ಕೆ*

    ದೊಡ್ಡಬಳ್ಳಾಪುರ  ಮೇ 23 (ವಿಜಯಮಿತ್ರ): ಪತ್ರಕರ್ತರ  ಕಷ್ಟಗಳಿಗೆ ಸದಾ ಸ್ಪಂದಿಸುವ, ನೊಂದ ಪತ್ರಕರ್ತರ ಬೆಂಬಲವಾಗಿ ನಿಂತು ಶಕ್ತಿ ತುಂಬುವ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು. ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ನೂತನ ಅಧ್ಯಕ್ಷರನ್ನಾಗಿ ಅನುಭವಿ ಪತ್ರಕರ್ತ ಚಂದ್ರಶೇಖರ್ ಡಿ ಉಪ್ಪಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀನಿವಾಸ್ ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಘೋಷಣೆ ಮಾಡಿ ಮಾತನಾಡಿದ ಅವರು ಪತ್ರಿಕೋದ್ಯಮ ಎಂಬುದು ವಾಣಿಜ್ಯ ಉದ್ಯಮವಲ್ಲ. ಇದೊಂದು ಸೇವೆ ಸಮಾಜದ ಅಂಕು – ಡೊಂಕುಗಳನ್ನು ಸರಿಪಡಿಸುವ ಮಹತ್ಕಾರ್ಯ ನಮ್ಮ ಪತ್ರಕರ್ತರಿಗೆ ಲಭಿಸಿದೆ. ಉತ್ತಮ ಬರವಣಿಗೆ ನಮ್ಮೆಲ್ಲರ ಶಕ್ತಿಯಾಗಬೇಕಿದೆ. ನಿಮ್ಮ ಬೆಂಬಲಕ್ಕೆ ನಮ್ಮ ಸಂಘ ಸದಾ ಸಿದ್ಧವಿದ್ದು. ತಾಲ್ಲೂಕಿಗೆ ಉತ್ತಮ ನಾಯಕತ್ವ ದೊರೆತಿದೆ ಎಂಬ ಭಾವನೆ ಇದೆ. ತಾಲ್ಲೂಕು ಘಟಕದಲ್ಲಿ ಉತ್ತಮ ಅನುಭವಿ ಪತ್ರಕರ್ತರ ತಂಡವಿದ್ದು . ಸಂಘದ ಕಾರ್ಯವು ಸ್ಥಳೀಯ ಪತ್ರಕರ್ತರ ಅಭಿವೃದ್ಧಿಗೆ ಕಾರಣವಾಗಲಿ ಎಂದು ಹಾರೈಸಿದರು.

     

    ಸಂಘದ ನೂತನ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಡಿ ಉಪ್ಪಾರ ಮಾತನಾಡಿ ಪತ್ರಿಕೋದ್ಯಮದಲ್ಲಿ ನನ್ನ ಸೇವೆಯನ್ನು ಗಮನಿಸಿ ಹಿರಿಯರು ಕಲ್ಪಿಸಿ ಕೊಟ್ಟಿರುವ ಉತ್ತಮ ಅವಕಾಶವನ್ನು ಸಂಘದ ಉನ್ನತಿಕರಣಕ್ಕೆ ಹಾಗೂ ಪತ್ರಕರ್ತರ ಅಭಿವೃದ್ಧಿಗೆ ಸದ್ಬಳಕೆ ಮಾಡಲಾಗುವುದು. ತಾಲ್ಲೂಕಿನಲ್ಲಿ ಪತ್ರಕರ್ತರ ಸಮಸ್ಯೆಗಳು ಸಾಕಷ್ಟಿದ್ದು, ತ್ವರಿತ ಗತಿಯಲ್ಲಿ ಸ್ಪಂದಿಸಲಾಗುವುದು. ಹಿರಿಯರ ಹಾಗೂ ಹಿತೈಷಿಗಳ ಮಾರ್ಗದರ್ಶನದೊಂದಿಗೆ ಸಂಘದ ನೂತನ ಪದಾಧಿಕಾರಿಗಳ ಸಹಕಾರದೊಂದಿಗೆ ಸಂಘದ ಕಾರ್ಯ ಚಟುವಟಿಕೆ ನಡೆಯಲಿದೆ ಎಂದರು.

     

     ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ರಮೇಶ್ ಮಾತನಾಡಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡುವ ಮುಖಾಂತರ ಸಂಘದ ಕಾರ್ಯ ಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡಿದ್ದೇವೆ. ನೂತನ ಪದಾಧಿಕಾರಿಗಳು ತಾಲ್ಲೂಕಿನ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲಿ. ಸಂಘದಿಂದ ಪತ್ರಕರ್ತರ ಅಭಿವೃದ್ಧಿ ಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ತಿಳಿಸಿದರು.

    ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ :ಗೌರವಾಧ್ಯಕ್ಷ ಕೆ ಸಿ ರುದ್ರೇಶ್,ತಾಲ್ಲೂಕು ಅಧ್ಯಕ್ಷರಾಗಿ ಚಂದ್ರಶೇಖರ್ ಡಿ ಉಪ್ಪಾರ್,ಉಪಾಧ್ಯಕ್ಷರಾಗಿ – ಕೊತ್ತೂರಪ್ಪ,ಜೆ ಮುನಿರಾಜು, ಎಂ ಮುನಿಸ್ವಾಮಿ, ಪ್ರಧಾನ ಕಾರ್ಯದರ್ಶಿರಾಗಿ – ಚಂದ್ರಪ್ಪ ( ನೆಲ್ಲುಗುದ್ದಿಗೆ )ಕಾರ್ಯದರ್ಶಿಗಳಾಗಿ – ಪುರುಷೋತ್ತಮ ಗೌಡ, ಪುರುಷೋತ್ತಮ ಟಿವಿ,ಸೈಯದ್ ಅಬ್ದುಲ್ ರೆಹಮಾನ್ ,ಖಜಾಂಚಿಗಳಾಗಿ ಕೃಷ್ಣಮೂರ್ತಿ ಆಯ್ಕೆಯಾಗಿದ್ದು.

     

    ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ

    ಮುಕ್ತಾರ್ ಅಹಮದ್ ಸಿದ್ದಿಕ್ಕಿ ,ಎಂ ಮುನಿಯಪ್ಪ, ಪ್ರದೀಪ್,ಭೀಮೇಶ್, ಶ್ರೀನಿವಾಸ್ ತೆರಿದಾಳ್, ಗಂಗರಾಜು, ಲಿಂಗರಾಜ್,ಕೆ.ಮ್.ಸಂತೋಷ್,ಎನ್.ಎಂ.ನಟರಾಜ್,ಮನುಕುಮಾರ್,ವೀರೇಂದ್ರನಾಥ ಆಯ್ಕೆಯಾಗಿದ್ದಾರೆ.

     

    ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಮುಖಂಡರಾದ ರಫಿ ಉಲ್ಲಾ, ಮುರಳಿ ಮೋಹನ್, ಸಂಘದ ನಿರ್ದೇಶಕರಾದ ಸುಗ್ಗರಾಜು, ಆನಂದ್, ರಾಘವೇಂದ್ರ ಆಚಾರ್ ,ದಿನ್ನೂರು ಮಂಜುನಾಥ್,ದೇವರಾಜು, ಬೀದಿ ಮನೆ ರಮೇಶ್, ಸತೀಶಣ್ಣ, ಸೇರಿದಂತೆ ಹಲವು ಪತ್ರಕರ್ತ ಮುಖಂಡರು ಉಪಸ್ಥಿತರಿದ್ದರು.

  • *ಕ್ಷೇತ್ರದ ಪದವೀಧರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ, ಈ ಬಾರಿ ಗೆಲ್ಲುವ ಭರವಸೆ ಇದೆ – ಉದಯ್ ಸಿಂಗ್*

    ದೊಡ್ಡಬಳ್ಳಾಪುರ ಮೇ 20 ( ವಿಜಯಮಿತ್ರ) : ಹಲವಾರು ವರ್ಷಗಳು ನಾವು ಪದವೀಧರರ ಪ್ರತಿನಿಧಿಗಳು ಎಂದು ಸುಳ್ಳು ಹೇಳುವ ಮೂಲಕ ಪದವೀಧರರ ಕಷ್ಟ ಸಮಯದಲ್ಲಿ ಸಹಾಯಕ್ಕೆ ಬಾರದ ಜನಪ್ರತಿನಿಧಿಗಳ ವಿರುದ್ಧದ ಹೋರಾಟ ನನ್ನದಾಗಿದ್ದು. ಪದವೀಧರರ ಧ್ವನಿಯಾಗಿ ಶ್ರಮಿಸಲು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಉದಯ್ ಸಿಂಗ್ ತಿಳಿಸಿದರು.

    ವಿಧಾನಪರಿಷತ್ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹತ್ತಾರು ವರ್ಷಗಳಿಂದ ಅಧಿಕಾರದಲ್ಲಿದ್ದು ಸಹ ಪದವೀಧರರ ಕಷ್ಟಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳನ್ನು ನೋಡಿರುವ ಪದವೀಧರರು ಈ ಬಾರಿ ಉತ್ತಮ ವ್ಯಕ್ತಿಯ ಆಯ್ಕೆಗೆ ಮುಂದಾಗಿದ್ದಾರೆ. ಎಲ್ಲೆಡೆ ಅಭೂತಪೂರ್ವ ಸ್ಪಂದನೆ ದೊರೆಯುತ್ತಿದ್ದು. ಪದವೀಧರರ ಧ್ವನಿಯಾಗಿ ಸರ್ಕಾರಕ್ಕೆ ಪದವೀಧರರ ಕಷ್ಟಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಶ್ರದ್ಧೆಯಿಂದ ಮಾಡಲು ಈ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.

    ಚುನಾವಣೆಯಲ್ಲಿ ಗೆಲುವು ಸಾಧಿಸಲು ಪದವೀಧರ ಮತದಾರರಿಗೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಹಲವು ಬಗೆಯ ಆಮಿಷಗಳನ್ನು ಒಡ್ಡುತ್ತಿದ್ದು. ಕ್ಷೇತ್ರದ ಪದವೀಧರರು ಪ್ರಜ್ಞಾವಂತರಾಗಿದ್ದಾರೆ ಅವರ ಅಮಿಷಗಳಿಗೆ ಒಳಪಟ್ಟು ಅವರಿಗೆ ಯಾವುದೇ ವ್ಯಕ್ತಿ ಮತ ನೀಡುವುದಿಲ್ಲ ಎಂಬ ಭರವಸೆ ಇದೆ.

    ನಿರಂತರ ಸಮಾಜಮುಖಿ ಕಾರ್ಯಗಳ ಜೊತೆ ಜೊತೆಗೆ ಪದವೀಧರ ಕಷ್ಟಗಳಿಗೆ ಸ್ಪಂದಿಸಿದ್ದೇನೆ ಕ್ಷೇತ್ರದಾದ್ಯಂತ ಈಗಾಗಲೇ ಪ್ರಚಾರ ನಡೆಸಿದ್ದು ಉತ್ತಮ ಸ್ಪಂದನೆ ದೊರೆತಿದೆ . ಈ ಬಾರಿಯ ಚುನಾವಣೆಯಲ್ಲಿ ಪದವೀಧರರು ತಮ್ಮ ಹಕ್ಕನ್ನು ಪಡೆಯಲು ಹಾಗೂ ತಮ್ಮ ಸರ್ವತೋಮುಖ ಅಭಿವೃದ್ಧಿಗಾಗಿ ಮತ ಚಲಾಯಿಸಬೇಕಿದೆ ಎಂದರು.

    ಈ ಸಂದರ್ಭದಲ್ಲಿ ತಾಲೂಕಿನ ಹಲವು ಶಿಕ್ಷಕರು, ಮುಖಂಡರು ಉಪಸ್ಥಿತರಿದ್ದರು.

  • *ಘಾಟಿ ಸುಬ್ರಹ್ಮಣ್ಯ ಹುಂಡಿ ಎಣಿಕೆ ಕಾರ್ಯ ಮುಕ್ತಾಯ : 51 ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹ*

    ದೊಡ್ಡಬಳ್ಳಾಪುರ ಮೇ 20 ( ವಿಜಯಮಿತ್ರ) : ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದೇವರ ಹುಂಡಿಯಲ್ಲಿ ಹಾಕಲಾಗಿದ್ದ ಕಾಣಿಕೆಯನ್ನು ಸೋಮವಾರ ಎಣಿಕೆ ಮಾಡಲಾಯಿತು.

    ಹುಂಡಿ ಎಣಿಕೆಯಲ್ಲಿ ಒಟ್ಟು 51, 29,635ರೂ. ಮೊತ್ತ ಸಂಗ್ರಹವಾಗಿದೆ.

     

    ಇದರೊಂದಿಗೆ 67,760 ರೂ ಮೌಲ್ಯದ 01 ಕೆಜಿ 540 ಗ್ರಾಂ ಬೆಳ್ಳಿ, 3,500 ರೂ ಮೌಲ್ಯದ 07 ಮಿ.ಲಿ ತೂಕದ ಚಿನ್ನವನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.

     

     

    ಹುಂಡಿಯ ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.

     

    ಈ ವೇಳೆ ಮುಜರಾಯಿ ಇಲಾಖೆ ತಹಶೀಲ್ದಾರ್ ಜಿ.ಜೆ.ಹೇಮಾ… ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜು, ಪ್ರಧಾನ ಅರ್ಚಕ ಆರ್‌.ಸುಬ್ರಹ್ಮಣ್ಯ, ಸಿಬ್ಬಂದಿ ನಂಜಪ್ಪ ಸೇರಿದಂತೆ ಕೆನರಾ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ, ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಯಿತು.

  • *ಬಡ ರೋಗಿಗಳಿಗೆ ಹಣ್ಣು ವಿತರಣೆ, ಅನಾಥಮಕ್ಕಳೊಂದಿಗೆ ಹುಟ್ಟುಹಬ್ಬದ ಆಚರಣೆ ಸಂತಸತಂದಿದೆ – ಎ. ಶಿವಕುಮಾರ್*

    ರಾಜಘಟ್ಟ ಗ್ರಾಮ ಪಂಚಾಯತಿ ಸದಸ್ಯ ಎ. ಶಿವಕುಮಾರ್ ತಮ್ಮ ಹುಟ್ಟುಹಬ್ಬವನ್ನು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.

    ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು, ಬ್ರೆಡ್, ಬಿಸ್ಕೆಟ್ ಸೇರಿದಂತೆ ಹಲವು ಪೌಷ್ಟಿಕ ಪದಾರ್ಥಗಳನ್ನು ಒಳಗೊಂಡ ಕಿಟ್ ಗಳನ್ನು ತಮ್ಮ ಸ್ನೇಹಿತರೊಂದಿಗೆ ವಿತರಿಸುವ ಮೂಲಕ ಸಂಭ್ರಮಿಸಿದರು.

     

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಬಾರಿ ನನ್ನ ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆಗೂಡಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಹಾಗೂ ಅನಾಥಾಶ್ರಮದ ಮಕ್ಕಳಿಗೆ ಸಿಹಿತಿನಿಸು ಹಂಚುವ ಮೂಲಕ ಆಚರಿಸಿಕೊಳ್ಳುತ್ತಿದ್ದೇನೆ ದುಂದು ವೆಚ್ಚದ ಆಚರಣೆ ಮಾಡುವ ಬದಲು ಬಡರೋಗಿಗಳಿಗೆ ಕೈಲಾದ ಸಹಾಯ ಮಾಡುವುದು ಉತ್ತಮ ಎಂಬುದು ನನ್ನ ಭಾವನೆ ಹಾಗಾಗಿ ನನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ ಎಂದರು.

    ರಾಜಘಟ್ಟ ಗ್ರಾಮದ ಮುಖಂಡ ಹರೀಶ್ ಮಾತನಾಡಿ ಗ್ರಾಮದ ಒಳಿತಿಗಾಗಿ ಸದಾ ಶ್ರಮಿಸುವ ಸಹೃದಯಿ, ಗೆಳೆಯ ಶಿವಕುಮಾರ್ ರವರಿಗೆ ಶುಭವಾಗಲಿ. ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಅವರು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮತ್ತಷ್ಟು ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರು.

    ಈ ಸಂದರ್ಭದಲ್ಲಿಪಂಚಾಯಿತಿ ಸದಸ್ಯ ಬಿ ಎಸ್ ಹರೀಶ್ , ಮಾಜಿ ಅಧ್ಯಕ್ಷ ಆರ್ ಸಿ ಶಿವಕುಮಾರ್, ಆರ್ ಜಿ ಚಂದ್ರಶೇಖರ್, ಡಿ ಎಲ್ ಬಿ ಮಂಜುನಾಥ್, ಮುತ್ತುರಾಜ್, ಯಶವಂತ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • *ಜೂ. NTR 41ನೇ ಹುಟ್ಟುಹಬ್ಬದ ಆಚರಣೆ : ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿದ ಎನ್ಟಿಆರ್ ಫ್ಯಾನ್ಸ್*

    ನಮ್ಮ ನೆಚ್ಚಿನ ನಾಯಕ ನಟ ಜೂನಿಯರ್. ( NTR) ನಂದಮುರಿ ತಾರಕ ರಾಮರಾವ್ ಮಾತಿನಂತೆ ಹಸಿದವರಿಗೆ ಊಟ ನೀಡುವ ಮೂಲಕ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ಅವರ 41ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದೇವೆ ಎಂದು ದೊಡ್ಡಬಳ್ಳಾಪುರ ಎನ್‌ಟಿಆರ್ ಫ್ಯಾನ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಚಂದು ಎನ್ ಟಿ ಆರ್ ತಿಳಿಸಿದರು.

    ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನೆಡೆಯುತ್ತಿರುವ ನಿರಂತರ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ ಸುಮಾರು 10 ವರ್ಷಗಳಿಂದಲೂ ತೆಲುಗು ಚಲನಚಿತ್ರ ನಟ ಜೂನಿಯರ್.ಏನ್ ಟಿ ಆರ್ ರವರ ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಲಾಗುತ್ತಿದ್ದು. ಕೊರೋನ ಸಂದರ್ಭದಲ್ಲಿ ನಿರಾಶ್ರಿತ ಕಡುಬಡವರಿಗೆ ಆಹಾರಕಿಟ್ ವಿತರಣೆ, ಹಸಿದವರಿಗೆ ಆಹಾರ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದು. ಈ ಬಾರಿ 41ನೇ ಹುಟ್ಟುಹಬ್ಬದ ಆಚರಣೆಯನ್ನು ಅನ್ನದಾಸೋಹ ಸಮಿತಿಯೊಂದಿಗೆ ನೂರಾರು ಬಡ ಕುಟುಂಬಗಳಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಲಾಗುತ್ತಿದೆ ಎಂದರು.

    ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನ ಭಾವಚಿತ್ರದ ಮುಂಭಾಗ ಕೇಕ್ ಕತ್ತರಿಸುವ ಮೂಲಕ ಹಾಗೂ ನೆರೆದಿದ್ದ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

     

    ಈ ಸಂದರ್ಭದಲ್ಲಿ ಅಭಿಮಾನಿ ರಾಜೇಶ್ ಮಾತನಾಡಿ ಸಂಘದ ಮುಖಂಡರು ಆತ್ಮೀಯ ಗೆಳೆಯರಾದ ಚಂದುರವರ ನೇತೃತ್ವದಲ್ಲಿ ಸತತ 8-10 ವರ್ಷಗಳಿಂದ ನಮ್ಮೆಲ್ಲರ ನೆಚ್ಚಿನ ನಟ ಜೂನಿಯರ್ ಎನ್ಟಿಆರ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಆಚರಣೆ ಮಾಡುತ್ತಿದ್ದು ಮುಂದೆ ಈ ಸಂಭ್ರಮಾಚರಣೆ ಮತ್ತಷ್ಟು ಬೆಳೆಯಲಿ ಮತ್ತಷ್ಟು ಕುಟುಂಬಗಳಿಗೆ ಸಹಾಯವಾಗಲಿ ಎಂದು ಹಾರೈಸಿದರು.

    ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ತಮ್ಮ ಸ್ಟಾರ್ ನಟನ ಹುಟ್ಟು ಹಬ್ಬದ ಆಚರಣೆಯನ್ನು ಹೀಗೂ ಮಾಡಬಹುದೆಂದು ದೊಡ್ಡಬಳ್ಳಾಪುರ ಜೂನಿಯರ್. ಎನ್ಟಿಆರ್ ಅಭಿಮಾನಿಗಳು ತೋರಿಸಿಕೊಟ್ಟಿದ್ದಾರೆ.1515ನೇ ದಿನದ ಅನ್ನದಾಸೋಹಕ್ಕೆ ದಾನಿಗಳಾಗಿ ತಮ್ಮ ಸಹಾಯಹಸ್ತ ನೀಡಿರುವ ಚಂದು ಎನ್ಟಿಆರ್ ಅವರಿಗೆ ಶುಭವಾಗಲಿ. ಪಟಾಕಿ ಸಿಡಿಸಿ ಹಾಲಿನ ಅಭಿಷೇಕ ಮಾಡಿಸುವ ಮೂಲಕ ಸಾಕಷ್ಟು ಹಣ ದುಂದು ವೆಚ್ಚ ಮಾಡುವ ಅಭಿಮಾನಿಗಳಿಗೆ ಇದೊಂದು ಮಾದರಿಯಾಗಿದೆ. ತಮ್ಮ ನೆಚ್ಚಿನ ಸ್ಟಾರ್ ನಟನ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ತಮ್ಮ ಯಾವುದೇ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸುವಂತೆ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಎನ್‌ಟಿಆರ್ ಫ್ಯಾನ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಎ.ಸಿ.ವೆಂಕಟೇಶ್,ಶೇಖರ್,ವಿಷ್ಣು,ಯಶು,ಪ್ರವೀಣ್,ವೆಂಕಟೇಶ್,ಕೃಷ್ಣ,ವೆಂಕಿಎನ್.ಟಿ.ಆರ್.,ಗೋಪಿ,ಅರುಣ,ಪಾರ್ಥ,ಮೋಹನ,ಭಾಸ್ಕರ್, ಗಂಗಣ್ಣ. ಹಾಗೂ ಎನ್ ಟಿ ಆರ್ ಅಭಿಮಾನಿಗಳು ಉಪಸ್ಥಿತರಿದ್ದರು.