Blog

  • *ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 15(ವಿಜಯಮಿತ್ರ ): ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ 6 ನೇ ತರಗತಿಗೆ (ಆಂಗ್ಲ ಮಾಧ್ಯಮ) ಸೇರ ಬಯಸುವ ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಪರಿಶಿಷ್ಟ ವರ್ಗದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಕೊಡಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಪ್ರತಿಷ್ಠಿತ ಶಾಲೆಗಳನ್ನು ಗುರುತಿಸಿ, ಅಂತಹ ವಸತಿ ಶಾಲೆಗಳಿಗೆ ಅರ್ಹತಾ ಪರೀಕ್ಷೆಯ ಮೂಲಕ ಅರ್ಹ ವಿದ್ಯಾರ್ಥಿಗಳನ್ನು ದಾಖಲು ಮಾಡಿಸಿ, ಆ ವಿದ್ಯಾಸಂಸ್ಥೆಗಳು/ಶಾಲೆಗಳಿಗೆ ಭರಿಸಬೇಕಾದ ಎಲ್ಲಾ ರೀತಿ ಶುಲ್ಕ, ಸಮವಸ್ತ್ರ, ಪಠ್ಯಪುಸ್ತಕ, ಪ್ರವಾಸ ಭತ್ಯೆ ಮತ್ತು ಇತರೆ ವೆಚ್ಚಗಳನ್ನು ಹಾಗೂ ವಸತಿ ಮತ್ತು ಭೋಜನಾ ವೆಚ್ಚವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಭರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

    ಷರತ್ತುಗಳು :
    1. ವಿದ್ಯಾರ್ಥಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು.
    2. 2023-24ನೇ ಸಾಲಿನಲ್ಲಿ 5ನೇ ತರಗತಿಯಲ್ಲಿ ಶೇಕಡ 60 ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾಗಿರಬೇಕು.
    3. ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ವರಮಾನ ರೂ.2,50,000/-ಗಳ ಒಳಗಿರಬೇಕು. ತಹಶಿಲ್ದಾರ್ ರವರಿಂದ ಪಡೆದ ಜಾತಿ ಮತ್ತು ಆದಾಯ ಪತ್ರ ಕಡ್ಡಾಯವಾಗಿ ಲಗತ್ತಿಸಬೇಕು.
    4. ಪ್ರತಿಷ್ಠಿತ ಶಾಲೆಗಳಿಗೆ ಒಮ್ಮೆ ದಾಖಲಾದ ವಿದ್ಯಾರ್ಥಿಗಳು 10 ಅಥವಾ 12ನೇ ತರಗತಿಯವರೆಗೆ ದಾಖಲಾದ ವಿದ್ಯಾಸಂಸ್ಥೆಯಲ್ಲಿಯೇ ವ್ಯಾಸಂಗ ಮುಂದುವರೆಸುವುದು.
    5. 10ನೇ ತರಗತಿ ವ್ಯಾಸಂಗ ಪೂರ್ಣಗೊಳಿಸಿದ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಪ್ರತಿಷ್ಠಿತ ಶಾಲೆಯಲ್ಲಿ ಪಿ.ಯು.ಸಿ. ತರಗತಿಗಳನ್ನು ನಡೆಸದೇ ಇದ್ದಲ್ಲಿ, ಅದೇ ಜಿಲ್ಲೆಯಲ್ಲಿನ ಪಿ.ಯು.ಸಿ. ಇರುವ ಪ್ರತಿಷ್ಠಿತ ಶಾಲೆ/ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು.
    6. ಅರ್ಜಿ ನಮೂನೆ ಮತ್ತು ವಿವರಗಳನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ನೆಲಮಂಗಲ ತಾಲ್ಲೂಕುಗಳಲ್ಲಿ ಪಡೆದುಕೊಳ್ಳಬಹುದಾಗಿದೆ.
    7. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:21.05.2024 ರವರೆಗೆ ನಂತರ ಬಂದ ಅರ್ಜಿಗಳನ್ನು ಪರಿಗಣಸಲಾಗುವುದಿಲ್ಲ.
    8. ಪ್ರವೇಶ ಪರೀಕ್ಷೆಯನ್ನು ಡಯಟ್ ಮೂಲಕ ನಡೆಸಿ ಅರ್ಹ ವಿದ್ಯಾರ್ಥಿಗಳನ್ನು ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಲಾಗುವುದು.
    9. ಬಡತನ ರೇಖೆಗಿಂತ ಕೆಳಗಿನ ಮಟ್ಟದ ಹಾಗೂ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ವಿಫಲರಾಗಿರುವ ಈ ಕೆಳಕಂಡ ಅತಿ ಹಿಂದುಳಿದ ವರ್ಗದವರಿಗೆ ಸೌಲಭ್ಯವನ್ನು ನೀಡಲು ಉದ್ದೇಶಿಸಲಾಗಿರುತ್ತದೆ.
    ಪೌರ ಕಾರ್ಮಿಕರ ಮಕ್ಕಳು. ಸಫಾಯಿ ಕರ್ಮಚಾರಿಗಳವರ ಮಕ್ಕಳು. ಸ್ಮಶಾನಗಳಲ್ಲಿ ಕಾರ್ಯನಿರ್ವಹಿರ್ವಹಿಸುತ್ತಿರುವವರ ಮಕ್ಕಳು. ದೇವದಾಸಿರವರ ಮಕ್ಕಳು. ಅಂಗವಿಕಲತೆಯನ್ನು ಹೊಂದಿರುವವರ ಮಕ್ಕಳು. ಕೋವಿಡ್-19 ಮುಂತಾದ ಪ್ರಕೃತಿ ವಿಕೋಪದಿಂದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು. ಸಿಂಗಲ್ ಪ್ಯಾಮಿಲಿ ಮಕ್ಕಳು. ಯೋಜನಾ ನಿರಾಶ್ರಿತರ ಮಕ್ಕಳು. ಮಾಜಿ ಸೈನಿಕರ ಮಕ್ಕಳು. ಕೊಳಗೇರಿಯಲ್ಲಿ ವಾಸಿಸುತ್ತಿರುವವರ ಮಕ್ಕಳು. ಕೃಷಿ ಕಾರ್ಮಿಕರ ಮಕ್ಕಳು. ಸಾಲ ಬಾದೆಯಿಂದ ಆತ್ಮಹತ್ಯೆಗೆ ಗುರಿಯಾದವರ ಮಕ್ಕಳು. ದೌರ್ಜನ್ಯದಲ್ಲಿ ನೊಂದವರ ಮಕ್ಕಳು. ಜೀತ ವಿಮುಕ್ತ ಮಕ್ಕಳು ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.
    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೂ.ಸಂ.: 080-29787448, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ದೇವನಹಳ್ಳಿ ದೂ.ಸಂ.: 080-27681784, ದೊಡ್ಡಬಳ್ಳಾಪುರ ದೂ.ಸಂ.: 080- 27623681, ನೆಲಮಂಗಲ ದೂ.ಸಂ.: 080- 27723172 ಹಾಗೂ ಹೊಸಕೋಟೆ ದೂ.ಸಂ.: 080- 27931528 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ವಸತಿ ಶಾಲೆಗಳಲ್ಲಿ ಪ್ರಥಮ ಪಿ.ಯು.ಸಿ ತರಗತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 15 (ವಿಜಯಮಿತ್ರ ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಶೈಕ್ಷಣಿಕ ಸಾಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು, ಗಿಡ್ಡಪ್ಪನಹಳ್ಳಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ (ಸಿ.ಬಿ.ಎಸ್.ಇ)ಯಲ್ಲಿ ಪ್ರಥಮ ಪಿ.ಯು.ಸಿ ಸಹ ಶಿಕ್ಷಣ 60 ಸಂಖ್ಯಾಬಲ (ಪಿ.ಸಿ.ಎಂ.ಬಿ) ತರಗತಿಗೆ ಪ್ರವೇಶ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ವಸತಿ ಶಾಲೆಯಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಮತ್ತು ಸಿಖ್) ವಿದ್ಯಾರ್ಥಿಗಳಿಗೆ ಶೇ.75%ರಷ್ಟು ಹಾಗೂ ಇತರೆ ವರ್ಗಗಳ ಪ.ಜಾತಿ, ಪ.ಪಂಗಡ ಮತ್ತು ಇತರೆ ಹಿಂದುಳಿದ ವಿದ್ಯಾರ್ಥಿಗಳಿಗೆ ಶೇ.25%ರಷ್ಟು ಸ್ಥಾನ, ವಿಕಲಚೇತನರಿಗೆ ಶೇ.3ರಷ್ಟು ಪ್ರವೇಶ ಮೀಸಲಿರಿಸಿದೆ.

    ಅಲ್ಪಸಂಖ್ಯಾತರ ಯಾವುದೇ ವಸತಿ ಶಾಲೆ/ಸರ್ಕಾರಿ/ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ಅಧ್ಯಯನ ಮಾಡಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಹರಿರುತ್ತಾರೆ. ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಶಿಕ್ಷಣ, ಪಠ್ಯ ಪುಸ್ತಕ, ಆಹಾರ, ಸಮವಸ್ತ್ರ, ಶುಚಿ ಸಂಭ್ರಮ ಕಿಟ್, ಲೇಖನ ಸಾಮಗ್ರಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುವುದು. ತಾಂತ್ರಿಕ ಮತ್ತು ವೈದ್ಯಕೀಯ ಮತ್ತು ಇತ್ಯಾದಿ ವೃತ್ತಿಪರ ಶಿಕ್ಷಣಕ್ಕೆ ಅನುಕೂಲವಾಗಲು ವಿಜ್ಞಾನ ವಿಷಯಗಳಿಗೆ PCMB ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದು. ವೃತ್ತಿಪರ ಕೋರ್ಸುಗಳ (NETT/JEE(Mains & Advanced)KCET) ಪ್ರವೇಶ ಪರೀಕ್ಷೆಗೆ ವಿಶೇಷ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು.

    ಪ್ರಥಮ ಪಿ.ಯು.ಸಿ ಸಹ ಶಿಕ್ಷಣ (PCMB) ತರಗತಿಗೆ ದಾಖಲಾತಿ ಪ್ರವೇಶಕ್ಕೆ ಅರ್ಜಿಯನ್ನು ಪ್ರಾಂಶುಪಾಲರಿಂದ ಪಡೆದು, ಸಂಬಂಧಪಟ್ಟ ಪ್ರಾಂಶುಪಾಲರು, ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ, ಗಿಡ್ಡಪ್ಪನಹಳ್ಳಿ, ಹೊಸಕೋಟೆ ತಾಲ್ಲೂಕು ರವರಿಗೆ ದಿನಾಂಕ: 27/05/2023 ರೊಳಗೆ ಅರ್ಜಿ ಸಲ್ಲಿಸುವುದು.

    ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ, ಗಿಡ್ಡಪ್ಪನಹಳ್ಳಿ, ಹೊಸಕೋಟೆ ತಾಲ್ಲೂಕು, ದೂರವಾಣಿ ಸಂಖ್ಯೆ-9632933397, 8660971267, 9972238296, 9980903199. ಅಥವಾ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಛೇರಿ ಮತ್ತು ತಾಲ್ಲೂಕು ಮಾಹಿತಿ ಕೇಂದ್ರ, ಹೊಸಕೋಟೆ. ದೂರವಾಣಿ ಸಂಖ್ಯೆ- ದೂ:080-27931899, ಮೊ.8310397004 ಅಥವಾ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು (ಗ್ರಾ) ಜಿಲ್ಲೆ. ನಂ.216, 2ನೇ ಮಹಡಿ, ಜಿಲ್ಲಾಧಿಕಾರಿಗಳ ಹೊಸ ಸಂಕೀರ್ಣ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ-562110. ದೂರವಾಣಿ ಸಂಖ್ಯೆ- 080-29787455. ಅವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು*

    ದೊಡ್ಡಬಳಾಪುರ ಮೇ14( ವಿಜಯಮಿತ್ರ ) : ತೊಂಡೇಬಾವಿ ಮತ್ತು ಗೌರಿಬಿದನೂರು ರೈಲು ನಿಲ್ದಾಣಗಳ ಮಧ್ಯೆ ಹನುಮೇನಹಳ್ಳಿ ಹತ್ತಿರ ಅಪರಿಚಿತ ಗಂಡಸು ಸುಮಾರು 35 ವರ್ಷದವನು ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.

     

    ಯಶವಂತಪುರ ರೈಲ್ವೆ ಪೋಲಿಸ್ ಠಾಣೆ ಯು.ಡಿ ಆರ್.ನಂ. 90/2024 ಕಲಂ 174 Cr.P.C ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡಿದ್ದು ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.

     

     

    *ಚಹರೆ* – 5.5ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ತಲೆಯಲ್ಲಿ ಸುಮಾರು 1 ಇಂಚು ಉದ್ದದ ಕಪ್ಪು ಕೂದಲು,ದುಂಡು ಮುಖ ಇದ್ದು ಸಾಧಾರಣವಾದ ಮೈಕಟ್ಟು,ಹೊಂದಿರುತ್ತಾರೆ ಕಪ್ಪು ಗಡ್ಡ ಮೀಸೆ ಹೊಂದಿರುತ್ತಾನೆ.ಬಲಕೈ ಮೇಲೆ ಪ್ರಕಾಶ ಎದೆಯ ಮೇಲೆ S ಎಂದು,ಎಡಕೈ ಮೇಲೆ ಪರಮೇಶ್,ಅಮ್ಮ ಎಂಬ ಹಚ್ಚೆ ಗುರುತು ಇರುತ್ತದೆ.

     

    *ಬಟ್ಟೆಗಳು* – ಬಿಳಿ ಬಣ್ಣದ ಟೀ ಶರ್ಟ್ ನೀಲಿ ಬಣ್ಣ ಹರಿದ ಜೀನ್ಸ್ ಪ್ಯಾಂಟ್ ಕಾಪಿ ಕಲರ್ ಅಂಡರ್ವೆರ್ ಇದ್ದು ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9480802143, ಸಂಪರ್ಕಿಸಲು ಕೋರಿದೆ.

  • *ಕೋಳೂರು ಸರ್ಕಾರಿ ಜಾಗದ ಸರ್ವೆ ಕಾರ್ಯ : ಆಶ್ರಯ ಯೋಜನೆ ಅಡಿ ನಿವೇಶನ ಹಂಚಲು ವರದಿ ಸಲ್ಲಿಕೆ*

    ದೊಡ್ಡಬಳ್ಳಾಪುರ ಮೇ 14 ( ವಿಜಯ ಮಿತ್ರ ) : ತಾಲೂಕಿನ ಕೋಳೂರು ಗ್ರಾಮದ ಬಡ ಕುಟುಂಬಗಳಿಗೆ ವಾಸಿಸಲು ಸ್ಥಳದ ಅವಶ್ಯಕತೆ ಇದ್ದು. ಗ್ರಾಮಸ್ಥರ ಕೋರಿಕೆಯ ಮೇರೆಗೆ ಇಂದು ಕೋಳೂರು ಗ್ರಾಮದ ಸರ್ವೇ ನಂಬರ್ 182 ರಲ್ಲಿ ಲಭ್ಯವಿರುವ 9.17ಗುಂಟೆ ಸರ್ಕಾರಿ ಜಾಗದ ಸರ್ವೆ ಕಾರ್ಯ ನಡೆಯಿತು.

    ಈ ಕುರಿತು ಸ್ಥಳೀಯ ಮುಖಂಡರಾದ ಪೂಜಪ್ಪ ಮಾತನಾಡಿ ಹಲವು ವರ್ಷಗಳ ಪ್ರತಿಫಲವಾಗಿ ಇಂದು ನಮ್ಮ ಗ್ರಾಮಕ್ಕೆ ಸೇರಿರುವ 9.17 ಗುಂಟೆ ಸರ್ಕಾರಿ ಜಾಗದ ಸರ್ವೆ ಕಾರ್ಯ ನಡೆದಿದೆ . ಗ್ರಾಮದಲ್ಲಿ ನೂರಾರು ಬಡ ಕುಟುಂಬಗಳಿಗೆ ನಿವೇಶನಗಳಿಲ್ಲದಂತಾಗಿ ಹಲವು ವರ್ಷಗಳಿಂದ ಬಡ ಕುಟುಂಬಗಳು ಒದ್ದಾಡುತ್ತಿವೆ . ಅಂತಹ ಕುಟುಂಬಗಳಿಗೆ ಈ ಸರ್ಕಾರಿ ಜಾಗವು ಆಶ್ರಯ ಯೋಜನೆ ಅಡಿ ಸೂರು ನೀಡಲಿದೆ ಎಂದರು.

    ಸುಮಾರು 25 ವರ್ಷಗಳಿಂದ ಹೊರಟ ನಡೆಸುತ್ತಿದ್ದು ಅಧಿಕಾರಿಗಳಿಗೆ ಇಂದು ನಮ್ಮ ಮೇಲೆ ಕರುಣೆ ಬಂದಿದೆ. ನಮ್ಮ ಗ್ರಾಮದ ಬಡ ಕುಟುಂಬಗಳಿಗೆ ಈ ಆಶ್ರಯ ಯೋಜನೆಯ ಮೂಲಕ ಬೆಳಕು ಕಾಣಲಿದೆ . ಈ ಯೋಜನೆ ಅಡಿ ಬಡ ಕುಟುಂಬಗಳಿಗೆ ನಿವೇಶನಗಳು ನೀಡಿದ್ದೆ ಆದಲ್ಲಿ ನೂರಾರು ಬಡ ಕುಟುಂಬಗಳು ಸ್ವತಂತ್ರರಾಗಿ ಯಾರ ಹಂಗು ಇಲ್ಲದೆ ಜೀವನ ಸಾಗಿಸಲು ಅನುಕೂಲವಾಗುತ್ತದೆ ಎಂದು ರೈತ ಹೋರಾಟಗಾರ ಸಿದ್ದಲಿಂಗಪ್ಪ ಅಭಿಪ್ರಾಯವ್ಯಕ್ತಪಡಿಸಿದರು.

    ಈ ಕುರಿತು ತಳಗವಾರ ಗ್ರಾಮ ಆಡಳಿತಾಧಿಕಾರಿ ಹಾಗೂ ಕಸಬಾ ರಾಜಸ್ವ ನಿರೀಕ್ಷಕರು ಸ್ಥಳದ ಅಳತೆ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ತಾಲೂಕು ಮೇಲ್ದರ್ಜೆ ಅಧಿಕಾರಿಗಳಿಗೆ ಪತ್ರರವಾನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಸಂದರ್ಭದಲ್ಲಿ ಕೋಳೂರು ಗ್ರಾಮಸ್ಥರು ಹಾಜರಿದ್ದರು.

  • *ಹೆಚ್ಚುತ್ತಿರುವ ತಾಪಮಾನದಿಂದ ತೋಟಗಾರಿಕಾ ಬೆಳೆಗಳನ್ನು ಸಂರಕ್ಷಿಸುವ ಕ್ರಮಗಳು*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ‌ 14 ( ವಿಜಯಮಿತ್ರ ); ಬೆಂಗಳೂರು ಗ್ರಾಮಾಂತರ ಜಿಲ್ಲೆಯು ನಾಲ್ಕು ತಾಲ್ಲೂಕುಗಳನ್ನು ಒಳಗೊಂಡು ಪೂರ್ವ ಒಣವಲಯಕ್ಕೆ ಸೇರಿರುತ್ತದೆ. ಪ್ರಮುಖವಾಗಿ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಹಣ್ಣಿನ ಬೆಳೆಗಳಾದ ಮಾವು, ದ್ರಾಕ್ಷಿ, ಸೀಬೆ, ಬಾಳೆ ಮತ್ತು ದಾಳಿಂಬೆ ಹಾಗೂ ತರಕಾರಿ ಬೆಳೆಗಳಾದ ಟೊಮ್ಯಾಟೋ, ಬದನೆ, ಕಡ್ಡಿ ಬೀನ್ಸ್, ಎಲೆ ಮತ್ತು ಹೂ ಕೋಸು, ಕುಂಬಳ ಜಾತಿ ತರಕಾರಿಗಳು, ಅಲ್ಲದೇ ಹೂವಿನ ಬೆಳೆಗಳಾದ ಗುಲಾಬಿ, ಸೇವಂತಿಗೆ ಮತ್ತು ಸುಗಂಧರಾಜ ಮತ್ತು ತೋಟದ ಬೆಳೆಗಳಾದ ತೆಂಗು, ಅಡಿಕೆ ಬೆಳೆಗಳನ್ನು ಸಹ ಬೆಳೆಯಲಾಗುತ್ತಿದೆ.

    ಬಹುವಾರ್ಷಿಕ ಬೆಳೆಗಳಿಗೆ ತೇವಾಂಶ ಸಂರಕ್ಷಣೆಯ ಕ್ರಮಗಳಾಗಿ ಬುಡದ ಸುತ್ತ ಪಾತಿಯಲ್ಲಿ ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ತೆಂಗಿನ ಮಟ್ಟೆ, ತೆಂಗಿನ ನಾರು ಹಾಗೂ ಇತರೆ ಬೆಳೆ ತ್ಯಾಜ್ಯಗಳನ್ನು ಹೊದಿಕೆಯಾಗಿ ಹಾಸುವುದು. ನೀರಿನ ಉಳಿತಾಯ ಮತ್ತು ಸಮರ್ಪಕ ಬಳಕೆಗಾಗಿ ಕಡ್ಡಾಯವಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆಗೆ ಅನುಗುಣವಾಗಿ ನೀರು ನೀಡುವುದು.

    ಗಿಡಗಳ ಎಲೆಗಳ ಮೂಲಕ ಭಾಷ್ಪೀಕರಣ (evaporation) ಕಡಿಮೆಗೊಳಿಸಲು ಎಲೆಗಳ ಮೇಲೆ Kaolin ಸಿಂಪರಣೆ (ಶೇ.5) ಮತ್ತು ಸೂರ್ಯನ ಕಿರಣಗಳಿಂದ ಸಂರಕ್ಷಿಸಲು ಸುಣ್ಣದ ಧೂಳೀಕರಣ ಅಥವಾ ಸಿಂಪರಣೆ ಮಾಡುವುದು.

    ಬರ ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಲು ಎಲೆಗಳ ಮೇಲೆ ಪೊಟ್ಯಾಶಿಯಂ ಸಲ್ಫೇಟ್ (0.2%) ಸಿಂಪಡಿಸುವುದು. ಎಲೆಗಳ ಮೂಲಕ ಭಾಷ್ಪೀಕರಣ ಕಡಿಮೆಗೊಳಿಸಲು ಶೇ. 30- 40 ರಷ್ಟು ರೆಂಬೆಗಳನ್ನು ಸವರುವುದರಿಂದರ (Pruning) ಎಲೆಗಳ ಭಾಷ್ಪೀಕರಣದ ವಿಸ್ತೀರ್ಣ ಕಡಿಮೆಗೊಳಿಸಲಾಗುವುದು.

    ತರಕಾರಿ ಬೆಳೆಗಳನ್ನು ನಾಟಿ ಮಾಡುವಾಗ ಕಡ್ಡಾಯವಾಗಿ ಹನಿ ನೀರಾವರಿ ಮತ್ತು

    ಪ್ಲಾಸ್ಟಿಕ್ ಹೊದಿಕೆ ಅಳವಡಿಸಿಕೊಳ್ಳುವುದರ ಜೊತೆಗೆ ಹೆಚ್ಚು ಸಾವಯವ ಅಂಶ ಭೂಮಿಗೆ ಸೇರಿಸುವುದರಿಂದ ತೇವಾಂಶದ ಸಂರಕ್ಷಣೆ ಮಾಡುವುದು.

    ತರಕಾರಿ ನಾಟಿ ಮಾಡುವ ಸಮಯದಲ್ಲಿ ಪ್ಲಾಸ್ಟಿಕ್ ಹೊದಿಕೆ(mulching) ಅಳವಡಿಸಿಕೊಂಡು ಸಸಿಗಳನ್ನು ನಾಟಿ ಮಾಡುವ ಸಮಯದಲ್ಲಿ ಸಸಿಗಳ ಬುಡಗಳು ಪಾಲಿಥಿನ್ ಹೊದಿಕೆಗಳ ಸಂಪರ್ಕಕ್ಕೆ ಬಾರದಂತೆ ಮಾಡಲು ನಾಟಿ ಮಾಡುವ ರಂಧ್ರಗಳಲ್ಲಿ ಪೇಪರ್ ಕಪ್ಸ್ ಅಳವಡಿಸಿ ತರಕಾರಿ ಸಸಿಗಳನ್ನು ನಾಟಿ ಮಾಡುವುದು.

    ತರಕಾರಿ ಬೆಳೆಗಳನ್ನು ಬೆಳೆಯುವಾಗ ಕಡಿಮೆ ಖರ್ಚಿನಲ್ಲಿ ನಿರುಪಯುಕ್ತ ಬಟ್ಟೆ ಮತ್ತು ಇತರೆ ನೆರಳು ಪರದೆಗಳನ್ನು ಕಟ್ಟುವುದರ ಮೂಲಕ ಬೆಳೆಗಳನ್ನು ಬಿಸಿಲಿನ ತಾಪಮಾನದಿಂದ ರಕ್ಷಿಸಿಕೊಳ್ಳಬಹುದು.

    ತರಕಾರಿ ಬೆಳೆಗಳಲ್ಲಿ ಹೂ ಉದುರುವಿಕೆಯನ್ನು ಕಡಿಮೆಗೊಳಿಸಲು 40ppm NAA (Planofix) ಸಿಂಪರಣೆ ಮಾಡುವುದು. ಬೆಳೆಗಳ ತಾಕುಗಳ ಸುತ್ತ ಬಿಸಿಗಾಳಿಯನ್ನು ನಿಯಂತ್ರಿಸಲು ಮೇವಿನ ಜೋಳವನ್ನು ಬೆಳೆಯುವುದು ಹೊಸದಾಗಿ ನಾಟಿ ಮಾಡಿರುವ ಅಡಿಕೆ ಸಸಿಗಳ ಸಂರಕ್ಷಣೆಗೆ ನೈರುತ್ಯ ದಿಕ್ಕಿನ ಬಿಸಿಲಿನ ಸಂರಕ್ಷಿಸಲು ನಿರುಪಯುಕ್ತ ಬಟ್ಟೆ ಮತ್ತು ಇತರೆ ನೆರಳು ಪರದೆಗಳನ್ನು ‘ವಿ’ ಆಕಾರದಲ್ಲಿ ಕಟ್ಟುವುದು ಹಾಗು ಫಸಲು ನೀಡುವ ಅಡಿಕೆ ಮರದ ಬುಡಗಳಿಗೆ ಸುಣ್ಣದ ಲೇಪನ ಮಾಡುವುದು ಹಾಗೂ ನೈರುತ್ಯ ಭಾಗದಿಂದ ಬುಡಗಳನ್ನು ಅಡಿಕೆ ಪಟ್ಟೆಗಳನ್ನು ಕಟ್ಟಿ ಸಂರಕ್ಷಿಸುವುದು.

    ಪಾಲಿ ಮನೆಗಳಲ್ಲಿ ತಾಪಮಾನ ಮತ್ತು ಬಿಸಿಲಿನಿಂದ ಸಂರಕ್ಷಿಸಲು ಶೇ. 75 ರಷ್ಟು ನೆರಳು ಪರದೆಯನ್ನು ಅಳವಡಿಸಿಕೊಳ್ಳುವುದು ಮತ್ತು ಪಾಲಿಮನೆಯ ಮೇಲ್ಛಾವಣಿಮೇಲೆ ಗೋಣಿ ಚೀಲಗಳನ್ನು ಹೊದಿಸಿ ಆಗಿಂದಾಗ್ಗೆ ನೀರು ಸಿಂಪರಣೆ ಮಾಡಿ ವಾತಾವರಣ ತಂಪು ಮಾಡುವುದು. ಪಾಲಿ ಮನೆಯಲ್ಲಿ ಉಷ್ಣತೆಯನ್ನು ಕಡಿಮೆ ಮಾಡಲು ಎಕ್ಸಾಸ್ಟ್ ಫ್ಯಾನ್‌ಗಳನ್ನು ಅಳವಡಿಸಿಕೊಂಡು ಬಿಸಿಗಾಳಿಯನ್ನು ಹೊರಹಾಕುವುದು.

    ಪಾಲಿಮನೆಯ ಸುತ್ತ ಒಣಗಿದ ಹುಲ್ಲು ಮತ್ತು ಇತರೆ ದಹಿಸುವ ವಸ್ತುಗಳಿಂದ ಬೆಂಕಿಗೆ ತುತ್ತಾಗದಂತೆ ನೋಡಿ ಕೊಳ್ಳುವುದು. ತರಕಾರಿ ಮತ್ತು ಹೂವುಗಳನ್ನು ಕಡ್ಡಾಯವಾಗಿ ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಕಟಾವು ಮಾಡಿ ನೀರಿನಲ್ಲಿ ಅದ್ದುವುದು/ ಸಿಂಪಡಿಸುವುದು ಮತ್ತು ತಂಪಾದ ಜಾಗದಲ್ಲಿ ಶೇಖರಣೆ ಮಾಡುವುದು. ಅಂತರ್ಜಲ ಮಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾವಿನ ತಾಕಿನಲ್ಲಿ ಮಳೆ ನೀರನ್ನು ಸಂಗ್ರಹಿಸಲು Trench and bunds ನಿರ್ಮಾಣ ಮಾಡುವುದು. ಕೃಷಿ ಹೊಂಡದಿಂದ ನೀರಿನ ಸಂರಕ್ಷಣೆ/ಮರುಪೂರಣ ಮಾಡುವುದರಿಂದ ಅಂತರ್ಜಲ ನಿರ್ವಹಣೆಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಬಹುದು ಎಂದು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದ ಡಾ. ಹನುಮಂತರಾಯ ಬಿ.ಜಿ. ಹಾಗೂ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಗುಣವಂತ.ಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಸಿಎಸ್ಆರ್ ಅನುದಾನದಲ್ಲಿ ಆಸ್ಪತ್ರೆಗೆ ಶವ ಸಂಗ್ರಹಾಕ ಕೋಲ್ಡ್ ಬಾಕ್ಸ್ ಹಸ್ತಾಂತರ*

    ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಗೋಕುಲ್‌ದಾಸ್ ಎಕ್ಸ್‌ಪೋರ್ಟ್ ಚಾರಿಟಬಲ್ ಫೌಂಡೇಶನ್ ಸಿಎಸ್‌ಆರ್ ಅನುದಾನ ದಲ್ಲಿ ಶವ ಸಂಗ್ರಹಕ ಕೋಲ್ಡ್ ಬಾಕ್ಸ್ (ಡೀಪ್ ಫ್ರೀಜರ್ ಬಾಕ್ಸ್) ಹಸ್ತಾಂತರಿಸಿತು.

    ಈ ವೇಳೆ ಡಾ.ಮಂಜುನಾಥ್ ಮಾತ ನಾಡಿ, ಗೋಕುಲ್ ದಾಸ್ ಸಂಸ್ಥೆ ನೀಡಿದ ಡೀಪ್ ಕೋಲ್ಡ್ ಬಾಕ್ಸ್ ಸಾಕಷ್ಟು ಅನುಕೂಲಕರವಾಗಿದ್ದು ಅಪಘಾತ, ರೈಲ್ವೆ ಅಪಘಾತಗಳಲ್ಲಿ ಮೃತಪಟ್ಟಿರುವ ಶವಗಳನ್ನು ವಾರಸುದಾರರು ಸಿಕ್ಕಿ ಶವದ ಗುರುತು ಪತ್ತೆಯಾಗುವವರೆಗೂ ಅದನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ, ಆದ್ದರಿಂದ ಶವವನ್ನು ಅಲ್ಲಿಯವರೆಗೂ ಸಂಗ್ರಹಿಸುವುದು ಅಗತ್ಯವಾಗಿದೆ. ಈ ಕೋಲ್ಡ್ ಬಾಕ್ಸ್‌ನಲ್ಲಿ ಸಂಗ್ರಹಿಸುವ ಮೂಲಕ ಶವ ಗುರುತು ಪತ್ತೆಯಾದ ನಂತರ ಮರಣೋತ್ತರ ಪರೀಕ್ಷೆಯಲ್ಲಿ ಫಲಿತಾಂಶ ನಿಖರವಾಗಿ ಪಡೆಯಲು ಸಹಾಯಕ ವಾಗುತ್ತದೆ ಎಂದರು.

    ಈ ಸಂದರ್ಭದಲ್ಲಿ ಗೋಕುಲ್‌ದಾಸ್ ಎಕ್ಸ್‌ಪೋರ್ಟ್ ಚಾರಿಟಬಲ್ ಫೌಂಡೇಶನ್‌ನ ಶ್ರೀನಿ ವಾಸ್, ಸಿದ್ದೇಶ್ವರ್ ಗೌಡ, ಮಹಂತೇಶ್, ನಾಗರಾಜ್, ವಿಶ್ವನಾಥ್, ಕೆಂಪೇಗೌಡ, ವೀರಭದ್ರಾಚಾರಿ, ದೊಡ್ಡ ಬೆಳವಂಗಲ ಠಾಣೆ ಇನ್ಸ್ ಪೆಕ್ಟರ್ ನವೀನ್, ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಮೇಶ್, ವೈದ್ಯರಾದ ಡಾ. ರಾಜು ಹಾಗೂ ಸಿಬ್ಬಂದಿ ಹಾಜರಿದ್ದರು.

  • *ಅಂಕಿತ ಬಸಪ್ಪನವರಿಗೆ ಅಭಿನಂದನೆ ಸಲ್ಲಿಸಿದ ನವ ಕರ್ನಾಟಕ ಯುವಶಕ್ತಿ ವೇದಿಕೆ*

    SSLC ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಬಾಗಲಕೋಟೆಯ ಮುಧೋಳ ಮೂಲದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಅವರನ್ನು ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

     

    ಈ ಸಂದರ್ಭದಲ್ಲಿ ಹಳ್ಳಿ ರೈತ ಅಂಬರೀಶ್ ಮಾತನಾಡಿ ರಾಜ್ಯದ ವಿದ್ಯಾರ್ಥಿಗಳಿಗೆ ಅಂಕಿತ ಬಸಪ್ಪನವರು ಮಾದರಿಯಾಗಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ರಾಜ್ಯಕ್ಕೆ ಗೌರವ ತಂದುಕೊಟ್ಟಿರುವ ಅಂಕಿತ ಬಸಪ್ಪನವರು ಮುಂದಿನ ದಿನಗಳಲ್ಲಿ ಉತ್ತಮ ವಿದ್ಯಾಭ್ಯಾಸದೊಂದಿಗೆ ರಾಷ್ಟ್ರಕ್ಕೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು

     

    ಈ ಸಂದರ್ಭದಲ್ಲಿ ಸಾಧಕಿ ಅಂಕಿತ ಬಸಪ್ಪ ನವರಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಧನ ಸಹಾಯ ಮಾಡುವ ಮೂಲಕ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಕೋರಲಾಯಿತು.

     

    ಈ ಸಂದರ್ಭದಲ್ಲಿ ನವ ಕರ್ನಾಟಕ ಯುವಶಕ್ತಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • *ಇನ್ಸ್ಟಾಗ್ರಾಂ ಪ್ರೀತಿ : ಬ್ರೇಕ್ ಅಪ್ ಕಾರಣ ಸಾವಿಗೆ ಶರಣಾದ ಯುವಕ*

    ದೊಡ್ಡಬಳ್ಳಾಪುರ ಮೇ 14 ( ವಿಜಯಮಿತ್ರ ) : ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಯುವಕ , ಯುವತಿ ಕೈ ಕೊಟ್ಟ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕೊಡಿಗೇಹಳ್ಳಿಯಲ್ಲಿ ನಡೆದಿದೆ.

     

    ಆತ್ಮಹತ್ಯೆಗೆ ಶರಣಾದ ಯುವಕನನ್ನು ಬಾಲಾಜಿ(22) ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಾಜಿಗೆ ಕೆಲ ತಿಂಗಳುಗಳ ಹಿಂದೆ ಇನ್ಸ್ಟಾ ಗ್ರಾಂನಲ್ಲಿ ಕನಕಪುರ ಮೂಲದ ಯುವತಿಯ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿತ್ತು.

     

    ಮೃತ ಬಾಲಾಜಿ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಮಂಡ್ಯ ಮೂಲದ ಹುಡುಗಿಯನ್ನ ಕಳೆದ 2 ವರ್ಷದಿಂದ ಪ್ರೀತಿ ಮಾಡುತ್ತಿದ್ದ, ಕಳೆದ ಒಂದು ತಿಂಗಳಿಂದ ಇಬ್ಬರ ನಡುವೆ ಮಾತುಕಥೆ ನಿಂತು ಹೋಗಿತ್ತು, ನಿನ್ನೆ ಪ್ರೀತಿಸಿದ ಪ್ರೀತಿಸಿದ ಹುಡುಗಿಗೆ ಪೋನ್ ಮಾಡಿ ಮಾತನಾಡಿದ್ದಾನೆ, ಈ ವೇಳೆ ಆಕೆ ತಾನು ಪ್ರೀತಿಸುತ್ತಿರುವ ಮತ್ತೊಬ್ಬ ಹುಡುಗನ ಜೊತೆ ಕಾನ್ಪರೇನ್ಸ್ ಕರೆ ಮಾಡಿ ಮಾತನಾಡಿಸಿದ್ದಾಳೆ, ಇದರಿಂದ ಮನನೊಂದ ಆತ ಆತ್ಮಹತ್ಯೆ ಮಾಡಿರುವುದ್ದಾಗಿ ಸ್ಥಳೀಯರಿಂದ ಮಾಹಿತಿ ತಿಳಿದು ಬಂದಿದೆ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

  • *ದೊಡ್ಡಬಳ್ಳಾಪುರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಗೀರಥ ಜಯಂತೋತ್ಸವ ಆಚರಣೆ*

    ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಭಗೀರಥ ಜಯಂತೋತ್ಸವವನ್ನು ಕಚೇರಿಯ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು.

     

     

     

    ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ .ಡಿ.ಉಪ್ಪಾರ್ ಮಾತನಾಡಿ ಭಗೀರಥ ಮಹರ್ಷಿ ತನ್ನ ಕಠಿಣ ತಪಸ್ಸಿನಿಂದ ಗಂಗೆಯನ್ನು ಭುವಿಗೆ ತಂದ ಮಹಾತ್ಮರ ಸಮುದಾಯದಲ್ಲಿ ಜನಿಸಿದ ನಾವೇ ಧನ್ಯರು. ಭೂಮಿಯ ಮೇಲಿನ ಕೋಟ್ಯಾಂತರ ಜೀವರಾಶಿಗಳಿಗೆ ಅತ್ಯಗತ್ಯತೆಯ ಜೀವಜಲ ತಂದುಕೊಟ್ಟಂತಹ ಮಹರ್ಷಿ ಶ್ರೀ ಭಗೀರಥರ ಜಯಂತೋತ್ಸವನ್ನು ರಾಜ್ಯಾದ್ಯಂತ ಆಚರಿಸುವ ಭಾಗ್ಯ.. ಸರ್ಕಾರ ರೂಪಿಸಿರುವ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ರಾಜ್ಯಾದ್ಯಂತ ಜಯಂತೋತ್ಸವವನ್ನು ಆಚರಿಸುವ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.

     

    ತಾಲ್ಲೂಕು ದಂಡಾಧಿಕಾರಿ ವಿಧ್ಯಾವಿಭಾ ರಾಥೋಡ್ ಮಾತನಾಡಿ ಭಗೀರಥ ಉಪ್ಪಾರ ಸಮುದಾಯ ದವರಿಗೆ ಶುಭಾಶಯಕೋರುತ್ತಾ,ರಾಜ್ಯಾದ್ಯಂತ ನೆಲೆಸಿರುವ ಉಪ್ಪಾರ ಸಮುದಾಯ ಶಿಕ್ಷಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಂದುವರೆಯ ಬೇಕಿದೆ ಪೋಷಕರು ಮಕ್ಕಳಿಗೆ ಉನ್ನದ ಶಿಕ್ಷಣ ಕೊಡಿಸುವುದರೊಂದಿಗೆ ಸರ್ಕಾರಿ ಅಧಿಕಾರಿಗಳನ್ನಾಗಿ ರೂಪಿಸುವ ಮೂಲಕ ಸಮಾಜದಲ್ಲಿ ಗೌರವವನ್ನು ಪಡೆದು ಸಮುದಾಯದ ಏಳ್ಗೆಗೆ ಮುಂದಾಗ ಬೇಕಿದೆ ಎಂದರು.

     

    ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿ ವಿಧ್ಯಾವಿಭಾ ರಾಥೋಡ್, ಬೆಂ‌ ಗ್ರಾ ಜಿಲ್ಲಾ ಭಗೀರಥ ಸಂಘದ ಅಧ್ಯಕ್ಷರು ಚಂದ್ರಶೇಖರ್. ಡಿ.ಉಪ್ಪಾರ್,ಜಿಲ್ಲಾ ಯುವ ಘಟಕ ಅಧ್ಯಕ್ಷ ಕೆ.ಪ್ರಕಾಶ್ ,ತಾಲ್ಲೂಕು ಅಧ್ಯಕ್ಷ ಪಿ.ಎಂ.ಪ್ರಕಾಶ್ ಕುಮಾರ್, ಉಪಾಧ್ಯಕ್ಷರಾದ ಲಕ್ಷಿನಾರಾಯಣ್, ಶ್ರೀನಿವಾಸ ಬಾಬು,ಚಂದ್ರಶೇಖರ್,ಕೃಷ್ಣ ಮೂರ್ತಿ,ರಾಮರಾಜ್,ಪಂಚಾಯ್ತಿ ಸದಸ್ಯರಾದ ಉಮೇಶ್,ಸುರೇಶ್ ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.

  • *ಸ್ಮಶಾನ ಜಾಗಕ್ಕಾಗಿ ದಲಿತರ ಹೋರಾಟ : ಪೂರ್ವಜರ ನೆನಪು ಉಳಿಸಿಕೊಡಿ ಎಂದ ಗ್ರಾಮಸ್ಥರು*

    ದೊಡ್ಡಬಳ್ಳಾಪುರ : ನ್ಯಾಯಾಲಯದಲ್ಲಿ ದಾವೆ ಹೂಡಿದರು ನಮಗೆ ಜಾಗದ ಕಿರಿಕಿರಿ ಮಾತ್ರ ತಪ್ಪಿಲ್ಲ. ನಮ್ಮ ಪೂರ್ವಜರ ನೆನಪುಗಳು ಈ ಸ್ಮಶಾನದಲ್ಲಿದ್ದು ವರ್ಷಕ್ಕೊಮ್ಮೆ ಪೂಜಿಸುವ ಅವಕಾಶವು ಈಗ ಇಲ್ಲದಂತಾಗಿದೆ ದಯಮಾಡಿ ನಮಗೆ ಸ್ಮಶಾನ ಜಾಗವನ್ನು ದೊರಕಿಸಿಕೊಡಿ ಎಂದು ದಲಿತ ಮುಖಂಡರು ಮನವಿ ಮಾಡಿದರು

     

    ತಾಲ್ಲೂಕಿನ ಕಂಟನ ಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 40 ರಲ್ಲಿ 0.09 ಗುಂಟೆ ವಿಸ್ತೀರ್ಣದ ಜಾಗದಲ್ಲಿ 50ಕ್ಕೂ ಅಧಿಕ ಪರಿಶಿಷ್ಟ ಜನಾಂಗಕ್ಕೆ ಸೇರಿದ ಸಮಾಧಿಗಳಿದ್ದು . ಸ್ಥಳೀಯ ಪರಿಶಿಷ್ಟ ಕುಟುಂಬಗಳು ತಮ್ಮ ಹಿರಿಯರ ಸಮಾಧಿಗಳಿರುವ ಕಾರಣ ಈ ಸ್ಥಳವನ್ನು ಪೂಜಿನೀಯ ಭಾವದಿಂದ ನೋಡುತ್ತಾರೆ . ಆದರೆ ಕಳೆದ ಕೆಲವು ವರ್ಷಗಳ ಹಿಂದೆ ಈ ಸ್ಥಳವನ್ನು ಬೇರೊಬ್ಬರು ಖರೀದಿ ಮಾಡಿದ್ದು ಸ್ಥಳಕ್ಕೆ ಪರಿಶಿಷ್ಟ ವರ್ಗದ ಜನರು ಬರದಂತೆ ತಡೆ ಹಾಕಿದ್ದಾರೆ ಎನ್ನಲಾಗಿದೆ. ಭಾವನಾತ್ಮಕವಾಗಿ ಸಂಬಂಧ ಹೊಂದಿರುವ ಪರಿಶಿಷ್ಟ ವರ್ಗಗಳು ಈ ಸ್ಥಳಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹುಡಿದ್ದು. ಸದರಿ ಸರ್ವೆ ನಂಬರ್ 40ರ ಒಂಬತ್ತು ಗುಂಟೆ ಜಾಗಕ್ಕೆ ಯಾರು ಪ್ರವೇಶಿಸಬಾರದು ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ ಆದರೆ ಯಾರ ಆದೇಶವು ಇಲ್ಲದೆ ಏಕೆಏಕಿ ಸ್ಥಳಕ್ಕೆ ಬಂದು ಮರ ಕಡಿಯುತ್ತಿದ್ದಾರೆ ಎಂದು ಸ್ಥಳೀಯ ಪರಿಶಿಷ್ಟ ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

     

    ಈ ಕುರಿತು ಸ್ಥಳೀಯರಾದ ಶ್ರೀನಿವಾಸ್ ಮಾತನಾಡಿ ಸುಮಾರು 40 ವರ್ಷಗಳಿಂದಲೂ ನಮ್ಮ ಪೂರ್ವಜರು ಈ ಜಾಗದಲ್ಲಿ ಸತ್ತವರ ಮಣ್ಣು ಮಾಡುವ ಮೂಲಕ ಭಾವನಾತ್ಮಕವಾಗಿ ಸಂಬಂಧ ಇಟ್ಟುಕೊಂಡಿದ್ದಾರೆ, ಸ್ಮಶಾನ ಜಾಗ ತಮಗೆ ಸೇರಿದೆಂದ್ದು ಸಮಾಧಿಗಳನ್ನ ದ್ವಂಸ ಮಾಡುವ ಸಂಚು ನಡೆಸಿದ್ದಾರೆ, ಈ ಕುರಿತು ಗ್ರಾಮಸ್ಥರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯವು ಯಾರೊಬ್ಬರೂ ಈ ಜಾಗವನ್ನು ಪ್ರವೇಶದಂತೆ ಆದೇಶ ನೀಡಿದೆ, ಆದರೆ ಇಂದು ಏಕಾಏಕಿ ಈ ಸ್ಥಳಕ್ಕೆ ಆಗಮಿಸಿ ಇಲ್ಲಿ ಬೆಳೆದಿರುವ ಮರಗಳನ್ನು ಕಡಿಯುತ್ತಿರುವುದು ಖಂಡನೀಯ, ನ್ಯಾಯಾಲಯದ ಆದೇಶಕ್ಕೂ ಬೆಲೆ ಕೊಡದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

     

    ದಲಿತ ಮಹಿಳೆ ಮಂಜಮ್ಮ ಮಾತನಾಡಿ ಈ ಸ್ಥಳವು ನಮಗೆ ದೇವಾಲಯ ಇದ್ದಂತೆ, ನಮ್ಮೆಲ್ಲರ ಪೂರ್ವಜರನ್ನು ಈ ಸ್ಥಳದಲ್ಲಿ ಸಮಾಧಿಗಳ ರೂಪದಲ್ಲಿ ನೋಡುತ್ತೇವೆ, ಪ್ರತಿ ವರ್ಷಕ್ಕೊಮ್ಮೆ ಬಂದು ಸಮಾಧಿಗಳಿಗೆ ಪೂಜೆ ಸಲ್ಲಿಸಿ ಹೋಗುತ್ತೇವೆ. ಆದರೆ, ಇಂದು ನಮಗೆ ಸಮಾಧಿಗಳಿಗೆ ಪೂಜೆ ಮಾಡುವ ಅವಕಾಶವೇ ಇಲ್ಲದಂತಾಗಿದೆ, ಬಲಾಢ್ಯರು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನಮ್ಮ ಜಾಗವನ್ನು ಕಬಳಿಸಲು ಮುಂದಾಗಿದ್ದಾರೆ, ನಮ್ಮ ಪೂರ್ವಜರ ಹಾಗೂ ನಮ್ಮ ನಂಬಿಕೆಯ ಉಳಿವಿಗಾಗಿ ನಮಗೆ ಈ ಜಾಗದ ಅವಶ್ಯಕತೆ ಇದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮಂಜಮ್ಮ ಮಾತನಾಡಿ ಈ ಸ್ಥಳವು ನಮಗೆ ದೇವಾಲಯ ಇದ್ದಂತೆ ಕಾರಣ ನಮ್ಮೆಲ್ಲರ ಪೂರ್ವಜರನ್ನು ಈ ಸ್ಥಳದಲ್ಲಿ ಸಮಾಧಿಗಳ ರೂಪದಲ್ಲಿ ನೋಡುತ್ತೇವೆ ಪ್ರತಿ ವರ್ಷಕ್ಕೊಮ್ಮೆ ಬಂದು ಭಾವನಾತ್ಮಕವಾಗಿ ಅವರೊಂದಿಗೆ ಬೆರೆತು ಪೂಜೆ ಸಲ್ಲಿಸಿ ಹೋಗುತ್ತೇವೆ ಆದರೆ ಇಂದು ನಮಗೆ ಅದೃಷ್ಟ ಇಲ್ಲದಂತಾಗಿದೆ ಕಾರಣ ಬಲಾಢ್ಯರು ಈ ಜಾಗವನ್ನು ಖರೀದಿ ಮಾಡಿದ್ದು ಅಧಿಕಾರ ಹಾಗೂ ಹಣ ಬಲದಿಂದ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನಮ್ಮ ಜಾಗವನ್ನು ಕಬಳಿಸಲು ಮುಂದಾಗಿದ್ದಾರೆ ನಮಗೆ ನ್ಯಾಯ ಬೇಕಿದೆ ನಮ್ಮ ಪೂರ್ವಜರ ಹಾಗೂ ನಮ್ಮ ನಂಬಿಕೆಯ ಉಳಿವಿಗಾಗಿ ನಮಗೆ ಈ ಜಾಗದ ಅವಶ್ಯಕತೆ ಇದೆ ಎಂದು ತಿಳಿಸಿದರು.

     

    ಇದೇ ವೇಳೆ ಗ್ರಾಮಸ್ಥರಾದ ನರಸಿಂಹಯ್ಯ, ಗಂಗರಾಜ್, ಶ್ರೀನಿವಾಸ್ ಎಂ, ನಟರಾಜ್, ಅಭಿಷೇಕ್ ಹಾಜರಿದ್ದರು.