Blog

  • *ಕುರುಬ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಿ,ನಮ್ಮ ಸಂಸ್ಕೃತಿ ಪರಂಪರೆಗಳನ್ನು ಉಳಿಸಿ – ಶ್ರೀ ಈಶ್ವರಾನಂದಪುರಿ ಸ್ವಾಮೀಜಿ*

    ದೊಡ್ಡಬಳ್ಳಾಪುರ ಮೇ12 ( ವಿಜಯಮಿತ್ರ ) : ತಾಲೂಕಿನ ತೂಬಗೆರೆ ಗ್ರಾಮದಲ್ಲಿನ ಕುರುಬ ಸಮುದಾಯದ ಆರಾಧ್ಯದೈವ ಶ್ರೀ ಸಿದ್ಧರಾಮೇಶ್ವರ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

    ಜಾತ್ರೆಯಲ್ಲಿ ಹೊಸದುರ್ಗ ಕನಕ ಗುರುಪೀಠ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ,ಹಾಲುಮತ ಸಂಸ್ಕೃತಿ ವೈಭವ ಮತ್ತು ಪರಂಪರೆಗಳನುಸಾರ ಕುಲದೈವ ಸಿದ್ದರಾಮೇಶ್ವರ ಸ್ವಾಮಿ ಮತ್ತು ಸಿದ್ದೇಶ್ವರ ಸದ್ಬಕ್ತರಾದ ನಾವುಗಳು ನಮ್ಮ ಇತಿಹಾಸ ಹಿರಿಮೆಗಳಿಗೆ, ದೈವತ್ವದ ಸದಾಚಾರಗಳನ್ನು ಪಸರಿಸುವುದು ಮತ್ತು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಕುಲದೇವರ ಸದ್ಭಕ್ತರೂ ಹಾಗೂ ಪೂಜಾರಿಗಳು, ಕಾಲಾಟಗಾರರು, ಗೊರವರ ಕುಣಿತದವರು, ಶಿವ ತಾಂಡವ ನೃತ್ಯದವರು, ಕೋಲಕಾರರು, ಈರಮಕ್ಕಳು ಒಂದೆಡೆ ಸೇರಿ ಆಚರಿಸುತ್ತಿರವ ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವುದು ನನ್ನ ಪುಣ್ಯ. ಈ ಸಂದರ್ಭದಲ್ಲಿ ನಾನು ನಿಮ್ಮ ಸಮುದಾಯದ ಗುರುವಾಗಿ ಮನವಿ ಮಾಡಿಕೊಳ್ಳುವುದೇನಂದರೇ ದಯವಿಟ್ಟು, ಕುರುಬ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ, ಸಮುದಾಯ ಜಾಗೃತಿ, ನಮ್ಮ ಸಂಸ್ಕೃತಿ ಪರಂಪರೆಗಳನ್ನು ಅಖಂಡತೆ ಹಾಗೂ ಸಾರ್ವಭೌಮತ್ವವನ್ನು ಉಳಿಸಿಎಂದರು.

     

    ಜಾತ್ರಾ ಮಹೋತ್ಸವ ಪ್ರಯುಕ್ತ ತಮಿಳುನಾಡಿನ ಕಾಣದಹಟ್ಟಿ ನಂಜುಂಡಪ್ಪನವರ ಕಲಾತಂಡದ ವೀರಗಾರರ ತಲೆ ಮೇಲೆ ತೆಂಗಿನಕಾಯಿ ಹೊಡೆದು ದೇವರಿಗೆ ಅರ್ಪಿಸುವ ಪವಾಡ ಕಾರ್ಯ ನಡೆಸಿಕೊಟ್ಟರು, ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ದೇವನಹಳ್ಳಿ, ಚಿಕ್ಕಬಳ್ಳಾಪುರ, ದುರ್ಗೇನಹಳ್ಳಿ,ಬೀರಸಂದ್ರ, ಹಾಗೂ ಬೆಂಗಳೂರಿಗೆ ಸೇರಿದ ವಿವಿಧ ಪ್ರದೇಶಗಳಿಂದ ಕುಲಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಉತ್ಸವದಲ್ಲಿ ವೀರಗಾಸೆ, ಗೊರವನ ಕುಣಿತ, ಕಾಲಾಟಕಾರರು, ಡೊಳ್ಳು ಕುಣಿತ, ಪೂಜಾ ಕುಣಿತ, ಗೊಂಬೆ ಕುಣಿತ ಸೇರಿದಂತೆ ಜನಪದ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಜಾತ್ರಾ ಮಹೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಪೂಜಾ ಕೈಂಕರ್ಯಗಳು ಜರುಗಿದವು, ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

     

    ಇದೇ ವೇಳೆ ಮಾತನಾಡಿದ ದೇವಾಲಯದ ಪ್ರಧಾನ ಅರ್ಚಕ ಕಾಚಹಳ್ಳಿ ನಾರಾಯಣಪ್ಪ, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ, ಮಳೆಯಿಲ್ಲದೆ ರೈತರು ಸಂಕಷ್ಟ ಸಿಲುಕಿದ್ದಾರೆ, ಕುಡಿಯುವ ನೀರಿಗೂ ಅಭಾವವಿದ್ದು, ರಾಜ್ಯದಲ್ಲಿ ಉತ್ತಮ ಮಳೆಯಾಗುವಂತೆ ದೇವರಲ್ಲಿ ಪ್ರಾರ್ಥಿಸಿ ಶ್ರದ್ಧಾಭಕ್ತಿಯಿಂದ ಒಂದು ತಿಂಗಳಿಂದ ಪೂಜಾ ಪುನಾಸ್ಕಾರ ಹಾಗೂ ಧಾರ್ಮಿಕ ಕಾರ್ಯಗಳು ನಡೆಸಿಕೊಂಡು ಬಂದಿದ್ದು, ಭಾನುವಾರ ಶ್ರೀ ಸಿದ್ಧರಾಮೇಶ್ವರ ಮತ್ತು ಶ್ರೀ ಸಿದ್ದೇಶ್ವರ ದೇವರ ಉತ್ಸವ ನಡೆಯಿತು ಎಂದರು.

    ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಶ್ರೀ ಸಿದ್ಧರಾಮೇಶ್ವರ ಮತ್ತು ಶ್ರೀ ಸಿದ್ದೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳಾದ ಕೃಷ್ಣಪ್ಪ ಬೆಂಗಳೂರು, ರಾಮಚಂದ್ರಪ್ಪ ಚಿಕ್ಕಬಳ್ಳಾಪುರ, ಮುನಿನಂಜಪ್ಪ ದೇವನಹಳ್ಳಿ, ಕೇಬಲ್ ಮಂಜುನಾಥ, ಕೃಷ್ಣಮೂರ್ತಿ, ಮುನಿರಾಜು, ಹಾಗೂ ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ, ಮುನಿಕೃಷ್ಣಪ್ಪ ಮುಖಂಡರಾದ ಪ್ರತಾಪ್, ಉದಯ ಆರಾಧ್ಯ ಮತ್ತಿತರರು ಇದ್ದರು.

  • *ಭೂ ಕಬಳಿಕೆ ಆರೋಪ : ಅನಧಿಕೃತ ಕಾಂಪೌಂಡ್ ತೆರವುಗೊಳಿಸುವಂತೆ ಅಗ್ರಹ*

    ದೊಡ್ಡಬಳ್ಳಾಪುರ ಮೇ 11 ( ವಿಜಯಮಿತ್ರ ) : ನಮ್ಮ ಬದುಕಿಗೆ ಆಧಾರವಾಗಿದ್ದ ಭೂಮಿಯನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿದ್ದೇವೆ ಎಂಬ ಕಾರಣಕ್ಕೆ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ.ಎಲ್ಲವೂ ತಿಳಿದಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ವಿಪರ್ಯಾಸ ಎಂದು ರೈತ ಮುನಿರಾಜು ತಮ್ಮ ನೋವನ್ನು ವ್ಯಕ್ತಪಡಿಸಿದರು

    ಖಾಸಗಿ ಸರ್ವೆ ಅಧಿಕಾರಿಗಳ ಸಹಾಯದಿಂದ ನಮ್ಮ ಸ್ಥಳ ಸರ್ವೇ ನಂಬರ್ 191 ರಲ್ಲಿ   ಅನಧಿಕೃತ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ನಮ್ಮ ಸ್ಥಳಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದು. ನ್ಯಾಯ ಕೇಳಲು ಹೋದ ನಮ್ಮ ಮೇಲೆ ಗೂಂಡಗಳಂತೆ ವರ್ತಿಸುತ್ತಿದ್ದಾರೆ. ರಕ್ಷಣೆ ನೀಡಬೇಕಿದ್ದ ಪೊಲೀಸ್ ಅಧಿಕಾರಿಗಳು ಮೌನ ವಹಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದೆ. ಸಾಜಿದ್ ಅಲಿ ಹಾಗೂ ಸಹಚರರು ರಾಥೋರಾತ್ರಿ ಕಾಂಪೌಂಡ್ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದು ನಮಗೆ ಸೇರಿರುವ ಸರ್ವೇ ನಂಬರ್ ಜಾಗವನ್ನು ದಿನೇ ದಿನೇ ಆಕ್ರಮಿಸಿಕೊಳ್ಳುತ್ತಿದ್ದಾರೆ ಈ ಕುರಿತು ನಮಗೆ ನ್ಯಾಯ ಬೇಕಿದೆ ವ್ಯವಸಾಯ ಒಂದೇ ನಮ್ಮ ಜೀವನೋಪಾಯಕ್ಕೆ ಮಾರ್ಗವಾಗಿದ್ದು. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ಮಾಡಿದರು.

     

    ರೈತ ಮಹಿಳೆ ಪುನೀತ ಮಾತನಾಡಿ ಕಳೆದ ಎಂಟು ತಿಂಗಳಿನಿಂದ ಈ ಸಮಸ್ಯೆ ಉದ್ಭವವಾಗಿದ್ದು ಬೆಂಗಳೂರಿನ ಮೂಲದವರಾದ ಸಾಜಿದ್ ಅಲಿ ಎಂಬುವರು ಸರ್ವೆ ನಂಬರ್ ಜಾಗವನ್ನು ಖರೀದಿ ಮಾಡಿದ್ದು ಈಗ ತಮ್ಮ ಅಧಿಕಾರದ ಬಲ ಹಾಗೂ ಧನ ಬಲದಿಂದ ನಮ್ಮ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡುತ್ತಿದ್ದಾರೆ. ದಿನೇ ದಿನೇ ನಮಗೆ ಭಯ ಹೆಚ್ಚಾಗುತ್ತಿದ್ದು ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಪ್ರತಿದಿನದ ಈ ಬೆಳವಣಿಗೆ ಕಾಣುತ್ತಿದ್ದರೆ ನಮ್ಮ ಜೀವಕ್ಕೆ ಕುತ್ತು ಬರಬಹುದು ಎಂಬ ಭಯ ಹೆಚ್ಚಾಗುತ್ತಿದೆ. ಈಗಾಗಲೇ ಒಂದು ಎಕರೆಯಷ್ಟು ಭೂಮಿಯನ್ನು ಅತಿಕ್ರಮ ಪ್ರವೇಶ ಮಾಡಿದ್ದು ಮುಂದೆ ಏನಾಗುವುದು ಎಂಬ ಭಯ ಕಾಡುತ್ತಿದೆ. ಇದೇ ಭೂಮಿಯಲ್ಲಿ ನಾವು ರಾಗಿ, ಜೋಳ ಸೇರಿದಂತೆ ಹಲವು ಬೆಳೆ ಬೆಳೆಯುವ ಮೂಲಕ ನಮ್ಮ ಜೀವನ ಸಾಗಿಸಿದ್ದೇವೆ ಇಂದು ನಮ್ಮ ಭೂಮಿ ಕೈತಪ್ಪಿ ಹೋಗುತ್ತಿದೆ ನಮ್ಮ ಜೀವನಕ್ಕೆ ಆಧಾರವಾಗಿರುವ ಭೂಮಿಯನ್ನು ಉಳಿಸಿಕೊಡಿ ಎಂದು ಮನವಿ ಮಾಡಿದರು

     

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ನಂದಗುಂದ ವೆಂಕಟೇಶ ಸೇರಿದಂತೆ ಹಲವರು ಉಪಸಿತರಿದ್ದರು.

  • ದೊಡ್ಡಬಳ್ಳಾಪುರ *ಟರ್ಬೋ ಹೋಂಡಾ ವಿರುದ್ಧ ಗ್ರಾಹಕರ ಆಕ್ರೋಶ : ಸಿಬ್ಬಂದಿ ಯಡವಟ್ಟು ಬ್ಯಾಟರಿ ಇಲ್ಲದೆ 16 ದಿನ ವಾಹನ ಚಲಾಯಿಸಿದ ಗ್ರಾಹಕ*

    ದೊಡ್ಡಬಳ್ಳಾಪುರ ಮೇ 11 ( ವಿಜಯ ಮಿತ್ರ ) : ನಿಮ್ಮ ಟರ್ಬೋ ದ್ವಿಚಕ್ರ ವಾಹನಗಳ ಸೇವಾ ಕೇಂದ್ರದ ಸಹವಾಸವೇ ಬೇಡ ಇನ್ನು ನನ್ನ ಜಾಯಮಾನದಲ್ಲಿ ನಿಮ್ಮ ಸರ್ವಿಸ್ ಕೇಂದ್ರಕ್ಕೆ ನನ್ನ ವಾಹನವನ್ನು ಬಿಡುವುದಿಲ್ಲ ಎಂದು ಗ್ರಾಹಕರು ಒಬ್ಬರು ಗಲಾಟೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಡಿ ಕ್ರಾಸ್ ಸಮೀಪದ ಟರ್ಬೋ ಹೊಂಡ ಸರ್ವಿಸ್ ಕೇಂದ್ರದಲ್ಲಿ ಸಂಭವಿಸಿದೆ.

     

    ಕಳೆದ ಏಪ್ರಿಲ್ 25ರಂದು ಗ್ರಾಹಕರಾದ ನಾಗರಾಜು ತಮ್ಮ ಹೀರೋ ಲಿವೋ ದ್ವಿಚಕ್ರ ವಾಹನವನ್ನು ಎಂದಿನಂತೆ ಸರ್ವೀಸ್ ಗೆ ಬಿಟ್ಟಿದ್ದು. ವಾಹನದ ಬ್ಯಾಟರಿ ವೀಕ್ ಆಗಿದೆ ಎಂದು ಸಿಬ್ಬಂದಿ ತಿಳಿಸಿರುತ್ತಾರೆ. ಮತ್ತೊಮ್ಮೆ ಬ್ಯಾಟರಿ ಅಳವಡಿಸುವುದಾಗಿ ಗ್ರಾಹಕ ನಾಗರಾಜು ತಿಳಿಸಿದ್ದು. ಬೇಕಂತಲೇ ಟರ್ಬೋ ಹೋಂಡಾ ಸಿಬ್ಬಂದಿ ವಾಹನದ ಬ್ಯಾಟರಿಯನ್ನು ತೆಗೆದಿಟ್ಟಿದ್ದಾರೆ. ನಮಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ ಸತತ 16 ದಿನಗಳಿಂದ ವಾಹನವನ್ನು ಬ್ಯಾಟರಿ ಇಲ್ಲದೆಯೇ ಚಲಾಯಿಸುತ್ತಿದ್ದು ಇಂದು ಕಾರಣಾಂತರಗಳಿಂದ ಬ್ಯಾಟರಿ ಇಲ್ಲ ಎಂಬ ವಿಷಯ ತಿಳಿದು ಬಂದಿದೆ. ಈ ಕುರಿತು ಟರ್ಬೊ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದು. ನಮಗೆ ಸಂಬಂಧವೇ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಗ್ರಾಹಕ ನಾಗರಾಜ ಆರೋಪಿಸಿದ್ದಾರೆ.

    ಹಾಗೂ ತನ್ನ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸದ ಟರ್ಬೋ ಹೋಂಡಾ ಸೇವಾ ಕೇಂದ್ರಕ್ಕೆ ನನ್ನ ವಾಹನವನ್ನು ಮತ್ತೆಂದು ಬಿಡುವುದಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

     

     

    ದ್ವಿಚಕ್ರ ವಾಹನ ಸರ್ವಿಸ್ ಗೆ ಬಿಟ್ಟ ಸಂದರ್ಭದಲ್ಲಿ ಬ್ಯಾಟರಿ ಹಾಕುವುದನ್ನು ಸಿಬ್ಬಂದಿ ಮರೆತಿದ್ದು, ಬ್ಯಾಟರಿ ಇಲ್ಲದೆ ಸತತ 16 ದಿನಗಳ ಕಾಲ ದ್ವಿಚಕ್ರ ಚಲನೆ ಮಾಡಿರುವ ಘಟನೆ ಕುರಿತಂತೆ ಟರ್ಬೋ ಹೋಂಡಾ ಸಿಬ್ಬಂದಿ ಸೂಕ್ತ ಪ್ರತಿಕ್ರಿಯೆ ನೀಡುವಲ್ಲಿ ವಿಫಲರಾಗಿದ್ದು. ಗ್ರಾಹಕ ನಾಗರಾಜರವರಿಗೆ ನೂತನ ಬ್ಯಾಟರಿ ನೀಡುವುದಾಗಿ ಭರವಸೆ ನೀಡಿದ್ದಾರೆ.

    ತಮಗಾದ ವಂಚನೆ ಮತ್ತೆ ಯಾರಿಗೂ ಆಗುವುದು ಬೇಡ, ಗ್ರಾಹಕರ ಉತ್ತಮ ವಿಶ್ವಾಸ ಗಳಿಸುವಲ್ಲಿ ಟರ್ಬೋ ಹೋಂಡಾ ಇನ್ನಾದರೂ ಮುಂದಾಗಲಿ ಎಂದು ಗ್ರಾಹಕ ನಾಗರಾಜ್ ಟರ್ಬೋ ಸಿಬ್ಬಂದಿಯಲ್ಲಿ ವಿನಂತಿಸಿದ್ದಾರೆ ಹಾಗೂ ನೂತನ ಬ್ಯಾಟರಿಯನ್ನು ತಿರಸ್ಕರಿಸಿದ್ದಾರೆ.

  • ಪೆನ್ ಡ್ರೈವ್ ಪ್ರಕರಣ *: ಮೇ 13ರಕ್ಕೆ ಕೆ ಆರ್ ಎಸ್ ಪಕ್ಷದ ವತಿಯಿಂದ ಹಾಸನ ಚಲೋ ಕಾರ್ಯಕ್ರಮ*

    ದೊಡ್ಡಬಳ್ಳಾಪುರ ಮೇ 11 ( ವಿಜಯಮಿತ್ರ ) :ಹಾಸನದ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬುವ ಸಲುವಾಗಿ ಮೇ 13 ರಂದು ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ‘ ಹಾಸನ ಚಲೋ ‘ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶಿವಶಂಕರ್ ತಿಳಿಸಿದರು.

     

     

    ತಪ್ಪು ಗೊತ್ತಿದ್ದರೂ ಟಿಕೆಟ್ ಕೊಟ್ಟ ಕೇಂದ್ರ ಬಿಜೆಪಿ ಸರ್ಕಾರ

    ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕುರಿತು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಇದ್ದರೂ 2024ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿಯಾಗಿ ಟಿಕೆಟ್ ನೀಡಿದೆ. ಆದರೆ ಪ್ರಕರಣ ಹೊರ ಬರುತ್ತಿದ್ದಂತೆ ತಮಗೂ ಪ್ರಜ್ವಲ್ ರೇವಣ್ಣರಿಗೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ಬಿಜೆಪಿ ವರ್ತಿಸುತ್ತಿದೆ ಎಂದು ಆರೋಪಿಸಿದರು.

     

    ನಗರದ ಕರ್ನಾಟಕ ರಾಷ್ಟ್ರ ಸಮಿತಿ ಕಚೇರಿಯಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹಲವಾರು ದಿನಗಳಿಂದ ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಕುರಿತಾದ ಪೆನ್ ಡ್ರೈವ್ ಪ್ರಕರಣ ಬಾರಿ ಚರ್ಚೆಗೆ ಗುರಿಯಾಗಿದ್ದು. ಈ ಕುರಿತು ರಾಜಕೀಯ ಪಕ್ಷಗಳು ಒಬ್ಬರ ಮೇಲೆ ಮತ್ತೊಬ್ಬರು ಆರೋಪಿಸಿಕೊಳ್ಳುತ್ತಿದ್ದಾರೆ ಏನೇ ಆದರೂ ಈ ಪ್ರಕರಣ ಸಾವಿರಾರು ಹೆಣ್ಣು ಮಕ್ಕಳ ಜೀವ ಹಾಗೂ ಜೀವನದ ವಿಷಯವಾಗಿದ್ದು. ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ, ರಾಜ್ಯ ಸರ್ಕಾರ ನೇಮಿಸಿರುವ ಎಸ್ ಐ ಟಿ ತನಿಖಾತಂಡ ಈಗಾಗಲೇ ವಿಚಾರಣೆ ಕೈಗೆತ್ತಿಕೊಂಡಿದ್ದು . ಸತ್ಯ ಸತ್ಯತೆ ಹೊರ ಬಿಡಬೇಕಿದೆ, ತಪ್ಪು ಮಾಡಿ ತಲೆ ಮರೆಸಿಕೊಂಡಿರುವ aರಾಜಕಾರಣಿಯನ್ನು ಕೂಡಲೇ ಕಾನೂನು ಕ್ರಮಕ್ಕೆ ಒಳಪಡಿಸಬೇಕಿದೆ ಈ ಮೂಲಕ ದೇಶದ ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಉತ್ತಮ ಭಾವನೆ ಹಾಗೂ ಅಚಲನಂಬಿಕೆ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದರು.ಹಾಸನದ ಹೆಣ್ಣು ಮಕ್ಕಳ ರಕ್ಷಣೆಗಾಗಿ ಅವರ ಬೆಂಬಲವಾಗಿ ನಿಲ್ಲಲು ಕೆ ಆರ್ ಎಸ್ ಪಕ್ಷವು ಮೇ 13 ರಂದು ರಾಜ್ಯಮಟ್ಟದಲ್ಲಿ ಹಾಸನ ಚಲೋ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಿತೈಷಿಗಳು ಸ್ನೇಹಿತರು ಭಾಗವಹಿಸಲಿದ್ದಾರೆ ಎಂದರು

     

    ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ

     

    ಪ್ರಜ್ವಲ್ ರೇವಣ್ಣ ಕುರಿತಾದ ಪೆನ್ ಡ್ರೈವ್ ಪ್ರಕರಣವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಎಸ್ಐಟಿ ತನಿಖಾತಂಡದಿಂದ ಬಿಡುಗಡೆಗೊಳಿಸಿ ಕೇಂದ್ರದ ಸಿಬಿಐ ವಿಶೇಷ ತಂಡಕ್ಕೆ ಒಪ್ಪಿಸಬೇಕೆಂದು ಆಗ್ರಹಿಸಿದರು.ತನಿಖಾ ಸಂಸ್ಥೆಗಳು ನಿಷ್ಠೆಯಿಂದ ಶ್ರಮಿಸುತ್ತವೆ ಆದರೆ ಅಧಿಕಾರದಲ್ಲಿರುವ ಪಕ್ಷಗಳು ಹಾಗೂ ರಾಜಕಾರಣಿಗಳು ತನಿಖಾ ಸಂಸ್ಥೆಗಳು ನೀಡಿರುವ ಮಾಹಿತಿ ಮರೆಮಾಚುತ್ತವೆ ಎಂದು ಆರೋಪಿಸಿದರು

    ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಎಲ್.ಎನ್‌.ಆನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಸಂಘಟನಾ ಕಾರ್ಯದರ್ಶಿ ಮಾರುತಿ, ತಾಲ್ಲೂಕು ರೈತ ಘಟಕದ ಅಧ್ಯಕ್ಷ ವಿಜಯಕುಮಾರ್ ತಾ. ಚಾಲಕರ ಘಟಕದ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • *ಸ್ನೇಹಿತರ ಮನಸ್ತಾಪ ಕೊಲೆಯಲ್ಲಿ ಅಂತ್ಯ : ಕತ್ತು ಸೀಳಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ*

    ದೊಡ್ಡಬಳ್ಳಾಪುರ : ನಗರದ ಹೊರವಲಯ ಹಿಂದೂಪುರ – ಯಲಹಂಕ ಮಾರ್ಗದಲ್ಲಿ ನವೋದಯ ಶಾಲೆಯ ಸಮೀಪ ಯುವಕನ ಶವ ಪತ್ತೆಯಾಗಿದ್ದು. ತಡರಾತ್ರಿ ಜೆಪಿ ಬಾರ್ ಸಮೀಪ ಹೂಸ್ಕೂರ್ ಗ್ರಾಮದ 27 ವರ್ಷದ ಹೇಮಂತ್ ಗೌಡ ಮೇಲೆ ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.

     

     

    ನಗರದ ಹೊರವಲಯ ಬಾಶೆಟ್ಟಿಹಳ್ಳಿ ಬಳಿಯ ಜೆಪಿ ಬಾರ್ ನಲ್ಲಿ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಗ್ಯಾಂಗ್ ಒಂದು ಯುವಕನ ಮೇಲೆ ಲಾಂಗ್ ಮಚ್ಚುಗಳಿಂದ ಹಲ್ಲೆ ನಡೆಸಿದೆ, ಹಲ್ಲೆಗೊಳದ ಯುವಕ ಅಧಿಕ ರಕ್ತಸ್ರಾವದಿಂದ ಸಾವನಪ್ಪಿದ್ದಾನೆ ಎಂದು ತಿಳಿದುಬಂದಿದೆ.

     

    ಹಲ್ಲೆಯ ಮಾಹಿತಿ ದೊರೆತ ಕುಟುಂಬಸ್ಥರು ಇಡೀ ರಾತ್ರಿ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ, ಮುಂಜಾನೆ 4 ಗಂಟೆ ಸಮಯದಲ್ಲಿ ಹಲ್ಲೆಗೊಳದ ಯುವಕನ ದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ,

     

     

    ಕೊಲೆಯಾದ ಯುವಕ ಹೇಮಂತ್ ಗೌಡ. ರಿಯಲ್ ಎಸ್ಟೇಟ್, ಸೆಕ್ಯೂರಿಟಿ ಎಜೆನ್ಸಿ ನಡೆಸುತ್ತಿದ್ದು ಆತನ ಮೇಲೆ ಸ್ನೇಹಿತ ನರಸಿಂಹಮೂರ್ತಿ ಅಲಿಯಾಸ್ ಸಂತು ಅಲಿಯಾಸ್ ಮಿಟ್ಟೆ ಎಂಬ ಸ್ನೇಹಿತನೇಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ .

     

    *ಘಟನೆ ಕುರಿತು ಮಾಹಿತಿ*

     

    ಶುಕ್ರವಾರ ರಾತ್ರಿ ಆರೋಪಿ ನರಸಿಂಹಮೂರ್ತಿ ಹೇಮಂತ್ ಗೌಡನಿಗೆ ಪೋನ್ ಮಾಡಿ ಮಾತನಾಡಬೇಕೆಂದು ಜೆಪಿ ಬಾರ್ ಬಳಿ ಕರೆಸಿಕೊಂಡಿದ್ದ, ಬಾರ್ ಹೊರಭಾಗದಲ್ಲಿ ನರಸಿಂಹಮೂರ್ತಿ ಜೊತೆ ಇದ್ದ 15 ಜನರ ಗ್ಯಾಂಗ್ ಹೇಮಂತ್ ಗೌಡನ ಮೇಲೆ ಲಾಂಗ್ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ, ಲಾಂಗ್ ಮಚ್ಚು ನೋಡಿದ ಹೇಮಂತ್ ಗೌಡನ ಸ್ನೇಹಿತರು ಅಲ್ಲಿಂದ ಪರಾರಿಯಾಗಿದ್ದಾರೆ. ತಕ್ಷಣ ಹಲ್ಲೆ ಮಾಡಿರುವ ವಿಷಯ ಹೇಮಂತ್ ಗೌಡನ ಮನೆಯವರಿಗೆ ತಿಳಿಸಿದ್ದಾರೆ, ತಕ್ಷಣವೇ ಹೇಮಂತ್ ಗೌಡನ ತಂದೆ ಶಶಿಕುಮಾರ್ ಮತ್ತು ಸಂಬಂಧಿಕರು ಬಾರ್ ಬಳಿ ಬಂದಿದ್ದಾರೆ, ಸ್ಥಳದಲ್ಲಿ ಹೇಮಂತ್ ಗೌಡನ ಪತ್ತೆ ಇಲ್ಲ, ಸ್ಥಳದಲ್ಲಿ ಚೆಲ್ಲಿದ ರಕ್ತ ಮತ್ತು ಲಾಂಗ್ ನೋಡಿ ಗಾಬರಿಗೊಂಡ ಕುಟುಂಬಸ್ಥರು ಆತನ ಪತ್ತೆಗಾಗಿ ಆಸ್ಪತ್ರೆ ಸೇರಿದಂತೆ ಹಲವು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ, ನರಸಿಂಹಮೂರ್ತಿಯ ಮನೆಯ ಬಳಿ ಹೋಗಿ ನೋಡಿದ್ದಾರೆ, ಆದರೆ ಯಾರ ಸುಳಿವು ಸಿಕ್ಕಿಲ್ಲ, 4 ಗಂಟೆ ಸಮಯದಲ್ಲಿ ನವೋದಯ ಶಾಲೆ ಬಳಿ ಶವ ಸಿಕ್ಕಿರುವ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಹೋಗಿ ನೋಡಿದ್ದಾಗ ಹೇಮಂತ್ ಗೌಡನ ಶವವಾಗಿರುತ್ತದೆ.

     

    ಅಂದಹಾಗೇ ಆರೋಪಿ ನರಸಿಂಹಮೂರ್ತಿಯ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಇದೆ, ಇಸ್ಪೇಟ್ ದಂಧೆ ನಡೆಸುವ ದೊಡ್ಡ ಜೂಜುಕೊರನಾಗಿದ್ದ, ಅತನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕಾರಣಕ್ಕೆ ಪೊಲೀಸರು ರೌಡಿಶೀಟರ್ ಹಾಕಿದ್ರು, ಪೊಲೀಸ್ ಮಾಹಿತಿ ಪ್ರಕಾರ ಇಬ್ಬರು ಸ್ನೇಹಿತರಾಗಿದ್ದು, ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪವಾಗಿದೆ, ಇದೇ ವಿಚಾರಕ್ಕೆ ನಿನ್ನೆ ರಾತ್ರಿ ಕೊಲೆ ನಡೆದಿರಬಹುದು, ಹಲ್ಲೆ ನಡೆದ ನಂತರ ಹೇಮಂತ್ ಗೌಡನನ್ನ ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ, ಆತ ಬದುಕುಳಿಯುತ್ತಿದ್ದ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವನನ್ನು ಟೆಂಪೋದಲ್ಲಿ ಹಾಕೊಂಡ್ ಸುತ್ತಾಡಿದ್ದಾರೆ, ಈ ವೇಳೆ ಅಧಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ, ಅನಂತರ ಶವವನ್ನ ಎಸೆದು ಪರಾರಿಯಾಗಿದ್ದಾರೆ, ಆರೋಪಿಗಳು ಸಿಕ್ಕ ನಂತರ ಕೊಲೆಯ ಅಸಲಿ ಕಾರಣ ಗೊತ್ತಾಗಲಿದೆ ಎಂದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಮೃತನ ತಂದೆ ದೂರು ನೀಡಿದ್ದಾರೆ.

  • *SSLC ಫಲಿತಂಶ : ಶೇಕಡಾ 100ರಷ್ಟು ಫಲಿತಂಶ ಪಡೆದ ದೊಡ್ಡಬಳ್ಳಾಪುರ ನಿವೇದಿತಾ ಇಂಗ್ಲಿಷ್ ಶಾಲೆ*

    ದೊಡ್ಡಬಳ್ಳಾಪುರ : ನಗರದ ಹಳೇಯ ಶಾಲೆಗಳಲ್ಲಿ ಒಂದಾದ ನಿವೇದಿತಾ ಇಂಗ್ಲಿಷ್ ಶಾಲೆಯ SSLC ವಿದ್ಯಾರ್ಥಿಗಳು ಶೇಕಡಾ 100 ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಶಾಲೆಗೆ ಗೌರವ ತಂದುಕೊಟ್ಟಿದ್ದಾರೆ.SSLC ಪರೀಕ್ಷೆ ಬರೆದಿದ್ದ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಶಾಲಾ ಆಡಳಿತ ಮಂಡಳಿಯ ಖುಷಿಗೆ ಕಾರಣವಾಗಿದೆ ಎಂದು ಶಾಲೆಯ ಕಾರ್ಯದರ್ಶಿ ಜಿ ರಾಜಣ್ಣ ತಿಳಿಸಿದರು.

     

    ಇದೇ ವೇಳೆ ವಿದ್ಯಾರ್ಥಿಗಳನ್ನು ಶಿಕ್ಷಕರು ಮತ್ತು ಆಡಳಿತ ವರ್ಗ ಅಭಿನಂದಿಸಿದರು.

    2023-24ನೇ ಸಾಲಿನಲ್ಲಿ ನಿವೇದಿತಾ ಇಂಗ್ಲಿಷ್ ಶಾಲೆಯ 35 ವಿದ್ಯಾರ್ಥಿಗಳು SSLC ಪರೀಕ್ಷೆಯನ್ನ ಬರೆದಿದ್ದು, ಎಲ್ಲಾ 35 ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಉರ್ತಿರ್ಣರಾಗಿದ್ದಾರೆ, 5 ವಿದ್ಯಾರ್ಥಿಗಳು ಉನ್ನತ ಶ್ರೇಣಿಗಳಿಸಿದ್ದು , 23 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 7 ದ್ವಿತೀಯ ದರ್ಜೆಯಲ್ಲಿ ಉರ್ತಿರ್ಣರಾಗಿದ್ದಾರೆ,

     

    *ಅಂಜಲಿ ಸಿರ್ವಿ* ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ, ಸಿಮ್ರಾನ್ ಕುಮಾರಿ ಧಾಪ ದ್ವಿತೀಯ ಸ್ಥಾನ, ನಿಖಿಲ್ ರಾಜ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ ಎಂದು ಶಾಲಾ ಮೂಲಗಳು ತಿಳಿಸಿವೆ.

     

    ಪರೀಕ್ಷೆಯಲ್ಲಿ ಉನ್ನತ್ತ ದರ್ಜೆಯಲ್ಲಿ ಪಾಸಾದ ನಿಖಿಲ್ ರಾಜ್ ಮಾತನಾಡಿ SSLC ಗೆ ಬರುವ ಮುನ್ನ ನನಗೆ ಓದಿನಲ್ಲಿ ಹಿಡಿತ ಇರಲಿಲ್ಲ, ಅಧ್ಯಯನ ಸರಿಯಾಗಿ ಮಾಡುತ್ತಿರಲಿಲ್ಲ, 10 ನೇ ತರಗತಿಗೆ ಬಂದ ನಂತರ ಶಿಕ್ಷಕರ ಪ್ರೋತ್ಸಾಹದಿಂದ ಓದಿನಲ್ಲಿ ಆಸಕ್ತಿ ಹೆಚ್ಚಾಗಿದು, ಪ್ರತಿದಿನ ಅಧ್ಯಯನ ಮಾಡುತ್ತಿದೆ, ಶಿಕ್ಷಕರ ಮಾರ್ಗದರ್ಶನ ಮತ್ತು ಸಲಹೆಯಿಂದ ಗರಿಷ್ಠ ಅಂಕಗಳಿಸಲು ಸಹಕಾರಿಯಾಗಿದೆ, ನಾನು ನಿರೀಕ್ಷೆ ಮಾಡದಷ್ಟೇ ಅಂಕಗಳು ಬಂದಿರೋದು ನನಗೆ ಖುಷಿ ತಂದಿದೆ ಎಂದರು.

     

    ಉನ್ನತ ದರ್ಜೆಯಲ್ಲಿ ಪಾಸಾದ ತೇಜಸ್ವಿನಿ ಎಸ್ ಗೌಡ ಮಾತನಾಡಿ, ಶಿಕ್ಷಕರು ಮತ್ತು ಪೋಷಕರು ನಮಗೆ ತುಂಬಾ ಪ್ರೋತ್ಸಹ ನೀಡಿದ್ದು ಶಾಲೆಯ ಪ್ರಾಂಶುಪಾಲರ ಮಾರ್ಗದರ್ಶನವೂ ಕೂಡ ನಾವು ಉತ್ತಮ ಅಂಕಗಳಿಸಲು ಸಹಕಾರಿಯಾಗಿತು, 10 ನೇ ತರಗತಿಗೆ ಬರುವ ಮುನ್ನ ನಾವು ಪರೀಕ್ಷೆ ಬರೆಯಲು ಕಂಠ ಪಾಠ ಮಾಡುತ್ತಿದ್ದೆವು, ಆದರೆ 10ನೇ ತರಗತಿಯಲ್ಲಿ ಪಾಠಗಳನ್ನ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ ಪರಿಣಾಮ ಇದು ಉತ್ತಮ ಅಂಕಗಳಿಸಲು ಸಹಕಾರಿಯಾಗಿದೆ, ಶಿಕ್ಷಕರು ನಮ್ಮ ಜೊತೆ ಸ್ನೇಹಿತರಂತೆ ಇದ್ದು ಕಲಿಕೆ ಮತ್ತು ಅಧ್ಯಯನಕ್ಕೆ ಸಹಾಯ ಮಾಡಿದ ಕಾರಣ ನಮ್ಮ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂದರು.

     

    ನಿವೇದಿತಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಜಿ.ರಾಜಣ್ಣ ಮಾತನಾಡಿ ನಮ್ಮ ಶಾಲೆ ಶೇಕಡಾ 100 ರಷ್ಟು ಫಲಿತಾಂಶ ಪಡೆಯಲು ಶಿಕ್ಷಕರ ಶ್ರಮ ಇದೆ, ಇದರಿಂದ ಶಾಲೆಗೆ ಉತ್ತಮ ಹೆಸರು ಬಂದಿದೆ, ನಮ್ಮ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡವರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು , ಬಡ ಮಕ್ಕಳಿಗೆ ನಾವು ಕಡಿಮೆ ಶಾಲಾ ಶುಲ್ಕವನ್ನ ತೆಗೆದು ಕೊಳ್ಳುವ ಮೂಲಕ ಪೋಷಕರ ಆರ್ಥಿಕ ಹೊರೆಯನ್ನ ಕಡಿಮೆ ಮಾಡಿದ್ದೇವೆ, ಇದರಿಂದ ಪೋಷಕರು ಸಹ ನಮ್ಮ ಶಾಲೆಗೆ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ ಎಂದರು.

     

    ನಿವೇದಿತಾ ಏಜುಕೇಷನ್ ಸೊಸೈಟಿಯ ನಿರ್ದೇಶಕರಾದ ಸಂತೋಷ ಮಾತನಾಡಿ ಶೇಕಡಾ 100 ರಷ್ಟು ಫಲಿತಾಂಶ ಬರಲು ಶಿಕ್ಷಕರು, ಶಾಲಾ ಆಡಳಿತ ಮತ್ತು ಮಕ್ಕಳ ಶ್ರಮ ಇದೆ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಾನು ಅಭಿನಂದನೆ ಸಲ್ಲಿಸುವೆ, ಅವರು ಮುಂದಿನ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸುವೆ, ಮಕ್ಕಳು ಯಾವುದೇ ಒತ್ತಡ ಇಲ್ಲದೆ ಖುಷಿಯಿಂದ ಕಲಿಯುತ್ತಿದ್ದರು, ಇದರಿಂದ ಕಲಿತ ಪಾಠಗಳು ಮಕ್ಕಳನ ನೆನಪಿನಲ್ಲಿ ಉಳಿದಿದೆ, ಇದರಿಂದಾಗಿ ಉತ್ತಮ ಫಲಿತಾಂಶ ಬಂದಿದೆ ಎಂದರು

     

    ಶಾಲೆಯ ಪ್ರಾಂಶುಪಾಲರಾದ ಪುರುಷೋತ್ತಮ್ ಮಾತನಾಡಿ 2023-24 ಸಾಲಿನ ಮಕ್ಕಳು ಶೇಕಡಾ 100 ರಷ್ಟು ಫಲಿತಾಂಶವನ್ನ ತಂದಿರುವುದು ನನಗೆ ಖುಷಿ ಕೊಟ್ಟಿದೆ, ಇತರೆ ಶಾಲೆಗಳಲ್ಲಿ ರಿಜೆಕ್ಟ್ ಮಾಡಲಾದ ಮಕ್ಕಳನ್ನು ನಮ್ಮ ಶಾಲೆಗೆ ದಾಖಲು ಮಾಡಿಕೊಳ್ಳುತ್ತೇವೆ , ಅಂತಹ ಮಕ್ಕಳನ್ನು ಪರೀಕ್ಷೆಗೆ ಸಿದ್ದಪಡಿಸುವ ಸವಾಲು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರಿಗೆ ಇದ್ದು , ಅಂತಹ ಸವಾಲನ್ನು ಮೆಟ್ಟಿ ನಿಂತು ಇವತ್ತು ಇಂತಹ ಸಾಧನೆಯನ್ನ ಮಾಡಿದ್ದೇವೆ ಎಂದರು.

     

    ಈ ವೇಳೆ ಮುಖ್ಯ ಶಿಕ್ಷಕರಾದ ಧನಲಕ್ಷ್ಮೀ, ಆಶಾ ಸಂತೋಷ್, ಸಹ ಶಿಕ್ಷಕರಾದ ವಿಜಯ್ ಕುಮಾರ .ಹೆಚ್.ಪಿ, ಲತಾ.ಸಿ.ಎಸ್, ನೇತ್ರಾವತಿ, ಮಂಜುನಾಥ್, ಹರೀಶ್ ಕುಮಾರ್, ಲಕ್ಷ್ಮೀ, ಮಾನಸ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

  • *ಮೇ 19ಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ‌ಯ 6ನೇ ತರಗತಿ ಪ್ರವೇಶ ಪರೀಕ್ಷೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವನಾಯಕನಹಳ್ಳಿ ದೇವನಹಳ್ಳಿ ತಾಲ್ಲೂಕು ಹಾಗೂ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ‌ ಗಿಡ್ಡಪ್ಪನಹಳ್ಳಿ, ಹೊಸಕೋಟೆ ತಾಲ್ಲೂಕು ಈ ಶಾಲೆಗಳಿಗೆ ಆನ್ ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಿರುವ ವಿದ್ಯಾರ್ಥಿಗಳಿಗೆ 2024-25ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿಯ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯು ಮೇ 19 ರಂದು ನಡೆಯಲಿದೆ.

    ಪರೀಕ್ಷೆಯು ದೇವನಹಳ್ಳಿ ತಾಲ್ಲೂಕಿನ ಮೌಲನಾ ಆಜಾದ್ ಮಾದರಿ ಶಾಲೆ, ವಿಜಯಪುರ ಇಲ್ಲಿ ನಡೆಯಲಿದ್ದು, ಪರೀಕ್ಷಾರ್ಥಿಗಳು ಪ್ರವೇಶ ಪತ್ರಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹೊಸಕೋಟೆ,

    ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲ್ಲೂಕು ಮಾಹಿತಿ ಕೇಂದ್ರಗಳಲ್ಲಿ ಪಡೆಯಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಜಿಲ್ಲಾ ಕಛೇರಿ, ಜಿಲ್ಲಾ ಮಾಹಿತಿ/ತಾಲ್ಲೂಕು ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸುವುದು.

    ಜಿಲ್ಲಾ ಕಛೇರಿ, ದೇವನಹಳ್ಳಿ ದೂ.ಸಂಖ್ಯೆ: 080-29787455. ದೊಡ್ಡಬಳ್ಳಾಪುರ ತಾಲ್ಲೂಕು ಮಾಹಿತಿ ಕೇಂದ್ರ

    ದೂ.ಸಂಖ್ಯೆ:9986874875. ನೆಲಮಂಗಲ ತಾಲ್ಲೂಕು ಮಾಹಿತಿ ಕೇಂದ್ರ

    ದೂ.ಸಂಖ್ಯೆ:8660197516

    ದೇವನಹಳ್ಳಿ ತಾಲ್ಲೂಕು ಮಾಹಿತಿ ಕೇಂದ್ರ ದೂ.ಸಂಖ್ಯೆ:8861926851

    ಹೊಸಕೋಟೆ ತಾಲ್ಲೂಕು ಮಾಹಿತಿ ಕೇಂದ್ರ ದೂ.ಸಂಖ್ಯೆ:7676905779.

    ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ 8277799990 ಸಂಖ್ಯೆಗೆ ಸಂಪರ್ಕಿಸಬಹುದು ಎಂದು

    ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಹೆಚ್ಚುತ್ತಿರುವ ತಾಪಮಾನದಿಂದ ತೋಟಗಾರಿಕಾ ಬೆಳೆಗಳನ್ನು ರಕ್ಷಿಸುವ ಕ್ರಮಗಳು*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ; ಬೆಂಗಳೂರು ಗ್ರಾಮಾಂತರ ಜಿಲ್ಲೆಯು ನಾಲ್ಕು ತಾಲ್ಲೂಕುಗಳನ್ನು ಒಳಗೊಂಡು ಪೂರ್ವ ಒಣವಲಯಕ್ಕೆ ಸೇರಿರುತ್ತದೆ. ಪ್ರಮುಖವಾಗಿ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಹಣ್ಣಿನ ಬೆಳೆಗಳಾದ ಮಾವು, ದ್ರಾಕ್ಷಿ, ಸೀಬೆ, ಬಾಳೆ ಮತ್ತು ದಾಳಿಂಬೆ ಹಾಗೂ ತರಕಾರಿ ಬೆಳೆಗಳಾದ ಟೊಮ್ಯಾಟೋ, ಬದನೆ, ಕಡ್ಡಿ ಬೀನ್ಸ್, ಎಲೆ ಮತ್ತು ಹೂ ಕೋಸು, ಕುಂಬಳ ಜಾತಿ ತರಕಾರಿಗಳು, ಅಲ್ಲದೇ ಹೂವಿನ ಬೆಳೆಗಳಾದ ಗುಲಾಬಿ, ಸೇವಂತಿಗೆ ಮತ್ತು ಸುಗಂಧರಾಜ ಮತ್ತು ತೋಟದ ಬೆಳೆಗಳಾದ ತೆಂಗು, ಅಡಿಕೆ ಬೆಳೆಗಳನ್ನು ಸಹ ಬೆಳೆಯಲಾಗುತ್ತಿದೆ.

    ಬಹುವಾರ್ಷಿಕ ಬೆಳೆಗಳಿಗೆ ತೇವಾಂಶ ಸಂರಕ್ಷಣೆಯ ಕ್ರಮಗಳಾಗಿ ಬುಡದ ಸುತ್ತ ಪಾತಿಯಲ್ಲಿ ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ತೆಂಗಿನ ಮಟ್ಟೆ, ತೆಂಗಿನ ನಾರು ಹಾಗೂ ಇತರೆ ಬೆಳೆ ತ್ಯಾಜ್ಯಗಳನ್ನು ಹೊದಿಕೆಯಾಗಿ ಹಾಸುವುದು. ನೀರಿನ ಉಳಿತಾಯ ಮತ್ತು ಸಮರ್ಪಕ ಬಳಕೆಗಾಗಿ ಕಡ್ಡಾಯವಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆಗೆ ಅನುಗುಣವಾಗಿ ನೀರು ನೀಡುವುದು.

    ಗಿಡಗಳ ಎಲೆಗಳ ಮೂಲಕ ಭಾಷ್ಪೀಕರಣ (evaporation) ಕಡಿಮೆಗೊಳಿಸಲು ಎಲೆಗಳ ಮೇಲೆ Kaolin ಸಿಂಪರಣೆ (ಶೇ.5) ಮತ್ತು ಸೂರ್ಯನ ಕಿರಣಗಳಿಂದ ಸಂರಕ್ಷಿಸಲು ಸುಣ್ಣದ ಧೂಳೀಕರಣ ಅಥವಾ ಸಿಂಪರಣೆ ಮಾಡುವುದು.

    ಬರ ನಿರೋಧಕತೆಯನ್ನು ಹೆಚ್ಚಿಸಿಕೊಳ್ಳಲು ಎಲೆಗಳ ಮೇಲೆ ಪೊಟ್ಯಾಶಿಯಂ ಸಲ್ಫೇಟ್ (0.2%) ಸಿಂಪಡಿಸುವುದು. ಎಲೆಗಳ ಮೂಲಕ ಭಾಷ್ಪೀಕರಣ ಕಡಿಮೆಗೊಳಿಸಲು ಶೇ. 30- 40 ರಷ್ಟು ರೆಂಬೆಗಳನ್ನು ಸವರುವುದರಿಂದರ (Pruning) ಎಲೆಗಳ ಭಾಷ್ಪೀಕರಣದ ವಿಸ್ತೀರ್ಣ ಕಡಿಮೆಗೊಳಿಸಲಾಗುವುದು.

    ತರಕಾರಿ ಬೆಳೆಗಳನ್ನು ನಾಟಿ ಮಾಡುವಾಗ ಕಡ್ಡಾಯವಾಗಿ ಹನಿ ನೀರಾವರಿ ಮತ್ತು

    ಪ್ಲಾಸ್ಟಿಕ್ ಹೊದಿಕೆ ಅಳವಡಿಸಿಕೊಳ್ಳುವುದರ ಜೊತೆಗೆ ಹೆಚ್ಚು ಸಾವಯವ ಅಂಶ ಭೂಮಿಗೆ ಸೇರಿಸುವುದರಿಂದ ತೇವಾಂಶದ ಸಂರಕ್ಷಣೆ ಮಾಡುವುದು.

    ತರಕಾರಿ ನಾಟಿ ಮಾಡುವ ಸಮಯದಲ್ಲಿ ಪ್ಲಾಸ್ಟಿಕ್ ಹೊದಿಕೆ(mulching) ಅಳವಡಿಸಿಕೊಂಡು ಸಸಿಗಳನ್ನು ನಾಟಿ ಮಾಡುವ ಸಮಯದಲ್ಲಿ ಸಸಿಗಳ ಬುಡಗಳು ಪಾಲಿಥಿನ್ ಹೊದಿಕೆಗಳ ಸಂಪರ್ಕಕ್ಕೆ ಬಾರದಂತೆ ಮಾಡಲು ನಾಟಿ ಮಾಡುವ ರಂಧ್ರಗಳಲ್ಲಿ ಪೇಪರ್ ಕಪ್ಸ್ ಅಳವಡಿಸಿ ತರಕಾರಿ ಸಸಿಗಳನ್ನು ನಾಟಿ ಮಾಡುವುದು.

    ತರಕಾರಿ ಬೆಳೆಗಳನ್ನು ಬೆಳೆಯುವಾಗ ಕಡಿಮೆ ಖರ್ಚಿನಲ್ಲಿ ನಿರುಪಯುಕ್ತ ಬಟ್ಟೆ ಮತ್ತು ಇತರೆ ನೆರಳು ಪರದೆಗಳನ್ನು ಕಟ್ಟುವುದರ ಮೂಲಕ ಬೆಳೆಗಳನ್ನು ಬಿಸಿಲಿನ ತಾಪಮಾನದಿಂದ ರಕ್ಷಿಸಿಕೊಳ್ಳಬಹುದು.

    ತರಕಾರಿ ಬೆಳೆಗಳಲ್ಲಿ ಹೂ ಉದುರುವಿಕೆಯನ್ನು ಕಡಿಮೆಗೊಳಿಸಲು 40ppm NAA (Planofix) ಸಿಂಪರಣೆ ಮಾಡುವುದು. ಬೆಳೆಗಳ ತಾಕುಗಳ ಸುತ್ತ ಬಿಸಿಗಾಳಿಯನ್ನು ನಿಯಂತ್ರಿಸಲು ಮೇವಿನ ಜೋಳವನ್ನು ಬೆಳೆಯುವುದು ಹೊಸದಾಗಿ ನಾಟಿ ಮಾಡಿರುವ ಅಡಿಕೆ ಸಸಿಗಳ ಸಂರಕ್ಷಣೆಗೆ ನೈರುತ್ಯ ದಿಕ್ಕಿನ ಬಿಸಿಲಿನ ಸಂರಕ್ಷಿಸಲು ನಿರುಪಯುಕ್ತ ಬಟ್ಟೆ ಮತ್ತು ಇತರೆ ನೆರಳು ಪರದೆಗಳನ್ನು ‘ವಿ’ ಆಕಾರದಲ್ಲಿ ಕಟ್ಟುವುದು ಹಾಗು ಫಸಲು ನೀಡುವ ಅಡಿಕೆ ಮರದ ಬುಡಗಳಿಗೆ ಸುಣ್ಣದ ಲೇಪನ ಮಾಡುವುದು ಹಾಗೂ ನೈರುತ್ಯ ಭಾಗದಿಂದ ಬುಡಗಳನ್ನು ಅಡಿಕೆ ಪಟ್ಟೆಗಳನ್ನು ಕಟ್ಟಿ ಸಂರಕ್ಷಿಸುವುದು.

    ಪಾಲಿ ಮನೆಗಳಲ್ಲಿ ತಾಪಮಾನ ಮತ್ತು ಬಿಸಿಲಿನಿಂದ ಸಂರಕ್ಷಿಸಲು ಶೇ. 75 ರಷ್ಟು ನೆರಳು ಪರದೆಯನ್ನು ಅಳವಡಿಸಿಕೊಳ್ಳುವುದು ಮತ್ತು ಪಾಲಿಮನೆಯ ಮೇಲ್ಛಾವಣಿಮೇಲೆ ಗೋಣಿ ಚೀಲಗಳನ್ನು ಹೊದಿಸಿ ಆಗಿಂದಾಗ್ಗೆ ನೀರು ಸಿಂಪರಣೆ ಮಾಡಿ ವಾತಾವರಣ ತಂಪು ಮಾಡುವುದು. ಪಾಲಿ ಮನೆಯಲ್ಲಿ ಉಷ್ಣತೆಯನ್ನು ಕಡಿಮೆ ಮಾಡಲು ಎಕ್ಸಾಸ್ಟ್ ಫ್ಯಾನ್‌ಗಳನ್ನು ಅಳವಡಿಸಿಕೊಂಡು ಬಿಸಿಗಾಳಿಯನ್ನು ಹೊರಹಾಕುವುದು.

    ಪಾಲಿಮನೆಯ ಸುತ್ತ ಒಣಗಿದ ಹುಲ್ಲು ಮತ್ತು ಇತರೆ ದಹಿಸುವ ವಸ್ತುಗಳಿಂದ ಬೆಂಕಿಗೆ ತುತ್ತಾಗದಂತೆ ನೋಡಿ ಕೊಳ್ಳುವುದು. ತರಕಾರಿ ಮತ್ತು ಹೂವುಗಳನ್ನು ಕಡ್ಡಾಯವಾಗಿ ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಕಟಾವು ಮಾಡಿ ನೀರಿನಲ್ಲಿ ಅದ್ದುವುದು/ ಸಿಂಪಡಿಸುವುದು ಮತ್ತು ತಂಪಾದ ಜಾಗದಲ್ಲಿ ಶೇಖರಣೆ ಮಾಡುವುದು. ಅಂತರ್ಜಲ ಮಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾವಿನ ತಾಕಿನಲ್ಲಿ ಮಳೆ ನೀರನ್ನು ಸಂಗ್ರಹಿಸಲು Trench and bunds ನಿರ್ಮಾಣ ಮಾಡುವುದು. ಕೃಷಿ ಹೊಂಡದಿಂದ ನೀರಿನ ಸಂರಕ್ಷಣೆ/ಮರುಪೂರಣ ಮಾಡುವುದರಿಂದ ಅಂತರ್ಜಲ ನಿರ್ವಹಣೆಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, : ತೋಟಗಾರಿಕೆ ಇಲಾಖೆ ವತಿಯಿಂದ 2024-25 ನೇ ಸಾಲಿನ ಸಮಗ್ರ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು,ಈ ಯೋಜನೆಯಡಿ ಪ್ರದೇಶ ವಿಸ್ತರಣೆ ಕಾರ್ಯಕ್ರಮ ( ದ್ರಾಕ್ಷಿ, ಬಾಳೆ, ದಾಳಿಂಬೆ, ಸೀಬೆ, ಹೈಬ್ರಿಡ್ ತರಕಾರಿ, ಡ್ರ್ಯಾಗನ್ ಫ್ರೂಟ್ ಮತ್ತು ಹೂ ಬೆಳೆ) ರೋಗ ಮತ್ತು ಕೀಟ ನಿಯಂತ್ರಣ, ಪ್ಲಾಸ್ಟಿಕ್ ಹೊದಿಕೆ, ಹಣ್ಣು ಮಾಗಿಸುವ ಘಟಕ (Ripening Chamber), ಹಸಿರುಮನೆ ನಿರ್ಮಾಣ, ವೈಯಕ್ತಿಕ ಕೃಷಿಹೊಂಡ, ಪ್ಯಾಕ್ ಹೌಸ್, ಹಾಗೂ ಅಣಬೆ ಉತ್ಪಾದನಾ ಘಟಕಗಳಿಗೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ ಫಲಾನುಭವಿಗಳು ಸಹಾಯಧನವನ್ನು ಪಡೆಯಬಹುದಾಗಿರುತ್ತದೆ.
    ಈ ಕಾರ್ಯಕ್ರಮದಡಿ ಘಟಕಗಳನ್ನು ಮಾರ್ಗಸೂಚಿಯನ್ವಯ ನಿರ್ಮಿಸಿಕೊಂಡು ಸಹಾಯಧನ ಪಡೆಯಲು ಇಚ್ಛಿಸುವ/ ಆಸಕ್ತಿಯುಳ್ಳ ರೈತರು ಅರ್ಜಿ ಸಮೇತ ಅಗತ್ಯವಾದ ದಾಖಲೆಗಳನ್ನು ಸಂಬಂಧಪಟ್ಟ ತಾಲ್ಲೂಕುಗಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯಲ್ಲಿ ಸಲ್ಲಿಸಬೇಕು.
    ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ಹಾಗೂ ಲಭ್ಯವಿರುವ ಅನುದಾನದ ಮೇರೆಗೆ ಜೇಷ್ಠತಾವಾರು ಅರ್ಹ
    ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಆದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದೆ.
    ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಕೆಳಕಂಡ ತಾಲ್ಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸುವುದು. ಮಲ್ಲಿಕಾರ್ಜುನ ಬಾಬು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ದೇವನಹಳ್ಳಿ- ಮೊ. 9480461234. ಎಂ.ಎಸ್.ದೀಪಾ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ದೊಡ್ಡಬಳ್ಳಾಪುರ. ಮೊ. 9880210892. ರೇಖಾ ಬಿ.ಪಿ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಹೊಸಕೋಟೆ- ಮೊ. 8217210320. ಹರೀಶ್. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ನೆಲಮಂಗಲ-ಮೊ. 9880461607 ಗೆ ಸಂಪರ್ಕಿಸಬಹುದು ಎಂದು
    ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಜೆ.ಗುಣವಂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಪೆನ್ ಡ್ರೈವ್ ಪ್ರಕರಣ : ಪ್ರಜ್ವಲ್ ರೇವಣ್ಣ ಬಂಧನಕ್ಕೆ ಅಗ್ರಹಿಸಿ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ*

    ದೊಡ್ಡಬಳ್ಳಾಪುರ: ಸ್ವಾಭಿಮಾನ, ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಬಯಸುವ ಹೆಣ್ಣು ಮಕ್ಕಳನ್ನು ತಮ್ಮ ಕುಟುಂಬದವರೇ ಲೈಂಗಿಕವಾಗಿ ಬಳಸಿಕೊಂಡು, ಅವರ ಘನತೆಯನ್ನು‌ ಮಣ್ಣುಪಾಲು ಮಾಡಿದ್ದಾರೆ. ತೆನೆ ಹೊತ್ತ‌ ಮಹಿಳೆಯ ಚಿಹ್ನೆ ಇಟ್ಟುಕೊಂಡಿರುವ ಜೆಡಿಎಸ್ ನಾಯಕರು, ಅಧಿಕಾರಕ್ಕಾಗಿ ಹೇಗೆ ಬೇಕಾದರೂ ಬದಲಾಗುತ್ತಾರೆ‌ ಎಂಬುದನ್ನು ಇದು ತೋರಿಸುತ್ತದೆ ಎಂದು ದಲಿತ ಮುಖಂಡ‌ ದೊಡ್ಡಬೆಳವಂಗಲ‌ ಮಹೇಶ್ ವಾಗ್ದಾಳಿ ನಡೆಸಿದರು.

    ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ‌ ಸಂವಿಧಾನ ರಕ್ಷಣೆಗಾಗಿ‌ ನಾಗರಿಕರ ವೇದಿಕೆ ಹಮ್ಮಿಕೊಂಡಿದ್ದ‌ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     

    ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ‌ ಮುಖ್ಯಮಂತ್ರಿಗಳು ಸಂತ್ರಸ್ಥರ ಪರವಿರದೇ ಕುಟುಂಬ ರಾಜಕಾರಣ ಮಾಡುತ್ತಿರುವುದು ಅವರ ಘನತೆಗೆ ತಕ್ಕುದ್ದಲ್ಲ. ಪೆನ್ ಡ್ರೈವ್ ಬಿಡುಗಡೆಯಲ್ಲಿ ಅವರಿವರ ಕೈವಾಡದ ಬಗ್ಗೆ ಆರೋಪಿಯ ಚಿಕ್ಕಪ್ಪ ನೀಡುತ್ತಿರುವ ಹೇಳಿಕೆಗಳು ನಾಚಿಕೆಗೇಡಿನ‌ ಸಂಗತಿಯಾಗಿದೆ. ಸ್ವಾರ್ಥ ರಾಜಕಾರಣಕ್ಕಾಗಿ ಹೆಣ್ಣು‌ಮಕ್ಕಳನ್ನು ಬಲಿಪಶು ಮಾಡಲಾಗುತ್ತಿದೆ. ಪೆನ್ ಡ್ರೈವ್ ಲೀಕ್ ಮಾಡಿದವರ ವಿರುದ್ಧವೂ ಕಠಿಣ ಕಾನೂನು ಕ್ರಮ‌ ಜರುಗಿಸಬೇಕು ಎಂದು ಒತ್ತಾಯಿಸಿದರು.

     

    ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಕೊಡಿಸುವ ಸಲುವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಮಂತ್ರಿ‌ ಪದವಿಯನ್ನೇ ತ್ಯಾಗ ಮಾಡಿದರು. ಅವರ ಅನುಯಾಯಿಗಳಾದ ನಾವು ಹೆಣ್ಣು‌ಮಕ್ಕಳ ಗೌರವಕ್ಕೆ ಚ್ಯುತಿ‌ ತಂದವರಿಗೆ ಕಠಿಣ ಶಿಕ್ಷೆ ಕೊಡಿಸಲು ರಾಜ್ಯವ್ಯಾಪಿ ಹೋರಾಟ ರೂಪಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ ಅವರು, ತನಿಖಾಧಿಕಾರಿಗಳು ತ್ವರಿತವಾಗಿ ಪ್ರಕರಣ ಬೇಧಿಸಬೇಕು.‌ ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ಮೊಮ್ಮಗನಾದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

     

     

     

    ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ‌ಯ ಸಂಚಾಲಕ ರಾಜು ಸಣ್ಣಕ್ಕಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ಇಬ್ಬರು ಜನ ಪ್ರತಿನಿಧಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು ರಾಜಾಳ್ವಿಕೆ ರೀತಿಯಲ್ಲಿ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದೆ. ಆರೋಪಿಯೇ ತನ್ನ ಹೀನಕೃತ್ಯವನ್ನು ವಿಡಿಯೋ ಮಾಡಿಕೊಂಡಿರುವುದು ಆತನ ವಿಕೃತಿ ತೋರಿಸುತ್ತಿದೆ. ಅಶ್ಲೀಲ‌ ದೃಶ್ಯಗಳು ಸೋರಿಕೆಯಾಗಿದ್ದು, ಹೆಣ್ಣು ಮಕ್ಕಳ ಆತ್ಮ ಗೌರವಕ್ಕೆ ದಕ್ಕೆಯುಂಟಾಗಿದೆ. ಆ ಹೆಣ್ಣು ಮಕ್ಕಳಿಗೆ ಸರ್ಕಾರ ರಕ್ಷಣೆ ಒದಗಿಸಬೇಕು. ಇಬ್ಬರು ಆರೋಪಿಗಳಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

     

    ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ ಮಾತನಾಡಿ ಪ್ರಜ್ವಲ್ ಹಾಗೂ ರೇವಣ್ಣ ಅವರ ಹೀನಕೃತ್ಯ ಖಂಡನೀಯ. ರೇವಣ್ಣ ಅವರು ಅವರ‌ ತಂದೆಯ‌ ಮನೆಯಲ್ಲೇ ಅವಿತಿದ್ದರು. ಸಂತ್ರಸ್ಥೆಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ. ಲೈಂಗಿಕ‌ ದೌರ್ಜನ್ಯದ ವಿಷಯ ಕುಟುಂಬಕ್ಕೆ‌ ಮೊದಲೇ ಗೊತ್ತಿದ್ದರೂ ಸುಮ್ಮನಿದ್ದು, ರಾಜ್ಯದ ಜನರಿಗೆ ದ್ರೋಹ ಬಗೆದಿದ್ದಾರೆ. ಪ್ರಜ್ವಲ್ ರೇವಣ್ಣ ಯಾವುದೇ ಅಪರಾಧ ಮಾಡದಿದ್ದರೆ ವಿದೇಶಕ್ಕೆ ಏಕೆ ಓಡಿ ಹೋಗಬೇಕಿತ್ತು ಎಂದು ಪ್ರಶ್ನಿಸಿದರು.

     

    ಲೈಂಗಿಕ ದೌರ್ಜನ್ಯ ನಡೆಸುವಾಗ ಪ್ರಜ್ವಲ್ ಗೆ ಮನೆಯಲ್ಲಿನ ಹೆಣ್ಣು ಮಕ್ಕಳು ಕಾಣಲಿಲ್ಲವೇ? ಎಂದು ಪ್ರಶ್ನಿಸಿದ ಅವರು, ಕೂಡಲೇ ಆತನನ್ನು ಬಂಧಿಸಿ ಕರೆ ತರಬೇಕು.‌ ರಾಜ್ಯ ಸರ್ಕಾರ ನಡೆಸುತ್ತಿರುವ ತನಿಖೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ. ಇಲ್ಲಿ ಎಲ್ಲರಿಗೂ ಒಂದೇ ರೀತಿಯ ಕಾನೂನು ಇದೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲಾಗದು. ಪ್ರಜ್ವಲ್ ರೇವಣ್ಣನನ್ನು ತಕ್ಷಣವೇ ಬಂಧಿಸದಿದ್ದರೆ ಎಲ್ಲ ಸಂಘಟನೆಗಳು ಒಗ್ಗೂಡಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

     

    ಸಿಪಿಐಎಂ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರುದ್ರಾರಾದ್ಯ ಮಾತನಾಡಿ, ಪ್ರಜ್ವಲ್ ಹಾಗೂ ಎಷ್.ಡಿ.ರೇವಣ್ಣ ಅವರಿಗೆ ಶಿಕ್ಷೆಯಾಗಲು ಎಸ್ಐಟಿ ತ್ವರಿತವಾಗಿ‌ ತನಿಖೆ ನಡೆಸಬೇಕು. ವಾಮಮಾರ್ಗದಲ್ಲಿ ಸಾಕ್ಷ್ಯ ನಾಶ ಮಾಡುವ ಕೆಲಸ‌ ನಡೆಯುತ್ತಿದೆ. ಸರ್ಕಾರ ಹಾಗೂ ಎಸ್ಐಟಿ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಬಿಜೆಪಿ‌ ಪಕ್ಷದ ಮುಖಂಡನೇ ಪೆನ್ ಡ್ರೈವ್ ಬಗ್ಗೆ ಪ್ರಧಾನಿ, ಗೃಹ ಸಚಿವರಿಗೆ ಪತ್ರ ಬರೆದು ಟಿಕೆಟ್ ನೀಡದಂತೆ ಕೋರಿದ್ದರೂ ಟಿಕೆಟ್ ಕೊಡಲಾಗಿದೆ. ತಪ್ಪಿತಸ್ಥರಿಗೆ ಸಂವಿಧಾನ ಬದ್ದವಾಗಿ ಶಿಕ್ಷೆ‌ ಕೊಡದಿದ್ದರೆ‌ ಸಂವಿಧಾನಕ್ಕೆ ಅಪಮಾನ‌ ಮಾಡಿದಂತಾಗುತ್ತದೆ. ವಿಡಿಯೋದಲ್ಲಿರುವ ಮಹಿಳೆಯರ ಗೌಪ್ಯತೆ ಕಾಪಾಡಬೇಕು. ಅವರ ಜೀವನ ಸುಧಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣಗಳಿಂದ ಪಾಳೆಗಾರಿಕೆ‌ ಸಂಸ್ಕೃತಿ ಇನ್ನೂ ಇದೆ ಎಂಬುದು ತಿಳಿಯುತ್ತಿದೆ.‌ ರಾಜ್ಯ ಸರ್ಕಾರ ಎಸ್ಐಟಿ ಮೇಲೆ‌ ನಿಗಾ ಇರಿಸಬೇಕು ಎಂದು ಒತ್ತಾಯಿಸಿದರು.

     

     

     

    ವೇದಿಕೆಯ ಮತ್ತೊಬ್ಬ ಸಂಚಾಲಕ ಚಂದ್ರ ತೇಜಸ್ವಿ ಮಾತನಾಡಿ, ಪ್ರಕರಣವನ್ನು ಮುಖ್ಯ ವಾಹಿನಿಗಳು ತಮ್ಮ ಟಿಆರ್‌ಪಿಗಾಗಿ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿವೆ. ಅತ್ಯಾಚಾರ ಪ್ರಕರಣವನ್ನು ವೈಭವೀಕರಿಸಲಾಗುತ್ತಿವೆ. ಹಾಸನದ ಸಾಮಾಜಿಕ‌ ಜಾಲತಾಣಗಳು ಪ್ರಕರಣವನ್ನು ಟಿಕ್ ಟಾಕ್ ಮಾಡುತ್ತಿವೆ. ಇದರಿಂದ ಇಡೀ ಹಾಸನದ ಹೆಣ್ಣುಮಕ್ಕಳ‌ ಘನತೆ ಹಾಳಾಗಿದೆ. ಅಲ್ಲಿನ ಹೆಣ್ಣು‌ಮಕ್ಕಳನ್ನು ವ್ಯಬಿಚಾರಿಗಳಂತೆ ಬಿಂಬಿಸಲಾಗುತ್ತಿದೆ. ಅವರನ್ನು ರಕ್ಷಣೆ ಮಾಡುವ‌ ಬದಲು ಬಾಯಿ‌ಚಪಲ ತೀರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ರಾಜಕಾರಣಿಗಳು ತಮ್ಮ ಸಾಮ್ರಾಜ್ಯ ಉಳಿಸಿಕೊಳಲು ನಾನಾ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗಳಿಂದ ಹೆಣ್ಣು‌ ಮಕ್ಕಳಿಗೆ ಸಮಸ್ಯೆಯಾಗಲಿದೆ ಎಂಬ ಕನಿಷ್ಠ ಕಾಳಜಿ ಜನಪ್ರತಿನಿಧಿಗಳು ಹಾಗೂ ಮಾದ್ಯಮಗಳಿಗೆ ಇಲ್ಲ. ಆದ್ದರಿಂದ ನಾವೆಲ್ಲರೂ ಸಮಾಜದ ಸ್ವಾಸ್ತ್ಯ ಕಾಪಾಡಬೇಕಿದೆ ಎಂದರು.

     

    ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ತಪ್ಪತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು, ಸಂತ್ರಸ್ತೆಯರ ಗೌಪ್ಯತೆ ಕಾಪಾಡಿ ಅವರಿಗೆ ಸೂಕ್ತ ರಕ್ಷಣೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ ಮುಖಾಂತರ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

    ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಪಿ.ಎ.ವೆಂಕಟೇಶ್, ಮಡಿವಾಳ ಮಾಚಿದೇವ ಸಂಘದ ಮುಖಂಡ ಜಿ.ರಂಗಸ್ವಾಮಿ, ಎಸ್‌ಎಫ್‌ಐ ಸಂಘಟನೆಯ ನಟರಾಜು, ಸಿಪಿಐಎಂ ಮುಖಂಡರಾದ ರಘುಕುಮಾರ್, ಚೌಡಪ್ಪ, ದಲಿತ ಮುಖಂಡರಾದ ತಿಮ್ಮರಾಜು, ರಾಜಶೇಖರ್, ರತ್ನಮ್ಮ, ಸುಧಾ, ಶಿವ ಶಂಕರ್, ಮದ್ದೂರಪ್ಪ ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.