Blog

  • *ಹಾಸನ : ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ ಸ್ಥಾಪನೆ*

    ಹಾಸನ ಮೇ.05:ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರ ನೆರವಿಗಾಗಿ ವಿಶೇಷ ತನಿಖಾ ತಂಡವು ಸಹಾಯವಾಣಿ ಸ್ಥಾಪಿಸಿದೆ.

    ತನಿಖೆಯ ಸಂದರ್ಭದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಸಂತ್ರಸ್ತರು ಇರುವುದು ತಿಳಿದು ಬಂದಿದ್ದು, ಸಂತ್ರಸ್ತರು ಹಾಗೂ ಬಾತ್ಮೀದಾರರಿಗೆ (ಮಾಹಿತಿದಾರರಿಗೆ) ಕಾನೂನು ನೆರವು ಹಾಗೂ ರಕ್ಷಣೆ ನೀಡಲು ಸಹಾಯವಾಣಿ ತೆರೆಯಲಾಗಿದ್ದು.6360938947 ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದು.ಸಂತ್ರಸ್ತರು ಅಥವಾ ಬಾತ್ಮೀದಾರರ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ನಿರಂತರ ಅನ್ನದಾಸೋಹ ಕಾರ್ಯಕ್ರಮಕ್ಕೆ 1,500 ದಿನದ ಸಂಭ್ರಮ : ಶುಭಕೋರಿದ ಗಣ್ಯರು

    *ದೊಡ್ಡಬಳ್ಳಾಪುರ ಮೇ 05* : 1,500 ದಿನಗಳ ನಿರಂತರ ಅನ್ನದಾಸೋಹ ಕಾರ್ಯಕ್ರಮವು ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಲ್ಲೇಶ್ ರವರ ನೇತೃತ್ವದಲ್ಲಿ ಸಾಗುತ್ತಿದೆ. ಉಳ್ಳವರು ದಾನಿಗಳಾಗಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದು ಖ್ಯಾತ ವಕೀಲರಾದ ರವಿ ಮಾವಿನಕುಂಟೆ ಅಭಿಪ್ರಾಯಪಟ್ಟರು.

    ತಾಲೂಕಿನ ದರ್ಗಾಜೋಗಹಳ್ಳಿ ಗ್ರಾಮದಲ್ಲಿ ನಿರಂತರವಾಗಿ ಸಾಗುತ್ತಿರುವ ಅನ್ನದಾಸೋಹ ಕಾರ್ಯಕ್ರಮಕ್ಕೆ 1500ರ ಸಂಭ್ರಮ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಒಂದು ದಿನದ ಅನ್ನದಾಸೋಹ ಕಾರ್ಯಕ್ರಮದ ಆಯೋಜನೆ ಮಾಡುವುದು ಕಷ್ಟಕರವಾಗಿರುವ ಪರಿಸ್ಥಿತಿಯಲ್ಲಿ ಮಲ್ಲೇಶ್ ಮತ್ತು ತಂಡ ನಿರಂತರ1500 ಸತತ ಅನ್ನದಾಸೋಹ ಕಾರ್ಯಕ್ರಮವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ಬಡತನ ರೇಖೆಗಿಂತ ಕೆಳಗಿರುವ ವರ್ಗದ ಜನರನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ಮೇಲೆತ್ತುವುದು ಸರ್ಕಾರದ ಜವಾಬ್ದಾರಿಯಾಗಿದೆ. ಬಡವರ್ಗದ ಸಮುದಾಯಗಳನ್ನು ಮರೆತಿರುವ ಸ್ಥಳೀಯ ಹಾಗೂ ರಾಜ್ಯ ಸರ್ಕಾರಗಳು ಈ ಕುರಿತು ಯೋಚಿಸಬೇಕಿದೆ ಎಂದರು.

     

     

    ಕನ್ನಡ ಜಾಗೃತಿ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ನಾಗರಾಜು ಮಾತನಾಡಿ ಸತತವಾಗಿ ಕಡು ಬಡವರ ನಿರ್ಗತಿಕರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿರುವ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ ಈ ಉತ್ತಮ ಕಾರ್ಯವು ಮತ್ತಷ್ಟು ಅಭಿವೃದ್ಧಿ ಹೊಂದಲಿ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಭಾಗವಹಿಸಿ ಕಾರ್ಯಕ್ರಮ ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದರು

     

    ದರ್ಗಾ ಜೋಗಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಶಶಿಕಲಾ ನಾಗರಾಜ್ ಮಾತನಾಡಿ ಈ ಸ್ಥಳದಲ್ಲಿ ಪ್ರತಿದಿನ ನೂರಾರು ಹಸಿದವರು ಊಟಕ್ಕಾಗಿ ಕಾಯುತ್ತಾರೆ. ಅವರ ಹಸಿವನ್ನು ನೀಗಿಸುವ ಸಲುವಾಗಿ ಜಿಲ್ಲೆಯಾದ್ಯಂತ ದಾನಿಗಳನ್ನು ಹುಡುಕುವ ಮಲ್ಲೇಶ್ ಮತ್ತು ತಂಡ ನಿರಂತರ 1500 ದಿನಗಳ ಅನ್ನದಾಸೋಹವನ್ನು ಯಶಸ್ವಿಯಾಗಿ ಪೂರೈಸಿರುವುದು ಶ್ಲಾಘನೀಯ ನಮ್ಮೆಲ್ಲರ ಸಹಕಾರ ಸದಾ ಈ ತಂಡದ ಜೊತೆಗೆ ಇದ್ದೇ ಇರುತ್ತದೆ ಮುಂದೆ ಮತ್ತಷ್ಟು ಬಡ ಕುಟುಂಬಗಳ ಹಸಿವು ನೀಗಿಸುವ ಕೆಲಸ ಮಲ್ಲೇಶ್ ರವರಿಂದ ಆಗಲಿ ಎಂದು ಹಾರೈಸಿದರು.

     

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ದಾನಿಗಳ ನೆರವಿನಿಂದ ಸತತವಾಗಿ 1500 ದಿನಗಳ ಅನ್ನದಾಸೋಹ ಕಾರ್ಯಕ್ರಮ ನೆರವೇರುತ್ತಿದೆ. ಇಂದು ವಯೋವೃದ್ದರಿಗೆ ವಸ್ತ್ರ ವಿತರಣೆಯ ದಾನಿಗಳಾಗಿ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ರಾಜ್ಯಧ್ಯಕ್ಷ ಹನುಮಂತರಾಯಪ್ಪ ಸಹಾಯಹಸ್ತ ನೀಡಿದ್ದು. ಕೊರೋನಾ ಸಂದರ್ಭದಲ್ಲಿ ಆರಂಭವಾದ ಈ ಕಾರ್ಯಕ್ರಮವು ಹಲವು ಬಡ ಕುಟುಂಬಗಳ ಹಸಿವನ್ನು ನೀಗಿಸಿದೆ ಎಂಬ ಹೆಮ್ಮೆ ಇದೆ. ಉಳ್ಳವರು ದಾನಿಗಳು ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸುವ ಮೂಲಕ ಸಂಭ್ರಮಿಸಬೇಕಾಗಿ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರಾದ ಸಂಜೀವ್ ನಾಯಕ್, ನಿವೃತ್ತ ಶಿಕ್ಷಕರಾದ ಯೋಗ ಅಮರ್ನಾಥ್, ಸಮಾಜಸೇವಕರಾದ ನರಸಿಂಹ ಮೂರ್ತಿ, ಸ್ಥಳೀಯ ಮುಖಂಡರಾದ ಜಿ ರಂಗಸ್ವಾಮಿ,ದರ್ಗಾಜೋಗಿಹಳ್ಳಿ ಪಂಚಾಯಿತಿ ಸದಸ್ಯೆ ಶಶಿಕಲಾ ನಾಗರಾಜು, ಸಮಾಜಸೇವಕರಾದ ಸೇಲ್ವಮ್ , ನವೀನ್, ಶ್ರೀನಿವಾಸ್, ಮುರಳಿ, ದೀಪು, ಸೇರಿದಂತೆ ಅನ್ನದಾಸೋಹ ಸಮಿತಿಯ ಹಿತೈಷಿಗಳು ಮಿತ್ರರು ಉಪಸ್ಥಿತರಿದ್ದರು.

  • *ಕರ್ನಾಟಕ ವಿಧಾನ ಪರಿಷತ್ ಚುನಾವಣೆ : ತಾಲ್ಲೂಕಿನ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ*

    ದೊಡ್ಡಬಳ್ಳಾಪುರ ಮೇ 05 : ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದೇವೆ. ಮುಖಂಡರು ಹಾಗೂ ಪದವೀಧರರ ಉತ್ತಮ ಸ್ಪಂದನೆ ದೊರೆತಿದ್ದು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇದೆ ಎಂದು ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡ ತಿಳಿಸಿದರು .

     

     

    ನಗರದ ಖಾಸಗಿ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗಾಗಲೇ 2012 ಮತ್ತು 2018 ರಲ್ಲಿ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕೆಪಿಸಿಸಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋತಿದ್ದು,ಸೋಲು – ಗೆಲುವನ್ನು ಸಮನಾಗಿ ಸ್ವೀಕರಿಸುವ ನಾನು, ಸೋಲನ್ನು ಗೆಲುವಿನ ಮೆಟ್ಟಿಲೆಂದು ಭಾವಿಸಿ ನನ್ನ ಕೆಲಸವನ್ನು ಮುಂದುವರಿಸಿಕೊಂಡು ಬಂದವನು.  ಕಳೆದ 14 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದಾದ್ಯಂತ ಪದವಿದರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದೇನೆ.ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ನೀಗಿಸಲು ಪದವೀಧರರಿಗೆ ಸುಮಾರು 9000 ಕ್ಕೂ ಅಧಿಕ ಉದ್ಯೋಗ ಕಲ್ಪಿಸುವ ಮೂಲಕ ಕ್ಷೇತ್ರದ ಪದವೀಧರೊಂದಿಗೆ ಮತ್ತಷ್ಟು ಉತ್ತಮ ಬಾಂಧವ್ಯ ಹೊಂದಿದ್ದೇನೆ. ಈ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ಮುಖಂಡರು ಪದಾಧಿಕಾರಿಗಳು ಹಾಗೂ ಕ್ಷೇತ್ರದ ಶಿಕ್ಷಕ ವರ್ಗ ಭಾಗವಹಿಸಿ ಬೆಂಬಲಿಸಲು ಮುಂದಾಗಿರುವುದು ಸಂತಸ ತಂದಿದೆ.

     

    ನಾನೊಬ್ಬ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದು ಪದವೀಧರರ ಸಮಸ್ಯೆಗಳ ಬಗ್ಗೆ ಅರಿವಿದೆ. ಮುಂದೆ ಪದವೀಧರ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ರಾಜ್ಯಮಟ್ಟದ ಧ್ವನಿಯಾಗಿ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪ್ರತಿ ಮತದಾರರಿಗೂ ತಲುಪಿಸುವ ಕಾರ್ಯ ನಡೆಯಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

    ಪದವೀಧರರ, ಶಿಕ್ಷಕರ ಮತ್ತು ನಿರುದ್ಯೋಗಿ ಪದವೀಧರರ ಹಿತ ಕಾಯುವ ಜೊತೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಲಾಡ್ಯರಾದ ಮತ್ತು ಎಲ್ಲಾ ವರ್ಗದ ಜನರನ್ನು ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಯ ಕರ್ನಾಟಕವನ್ನು ಕಟ್ಟಿಕೊಳ್ಳಲು ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು, ಪದಾಧಿಕಾರಿಗಳು, ತಾಲ್ಲೂಕಿನ ಶಿಕ್ಷಕ ವರ್ಗ ಉಪಸ್ಥಿತರಿದ್ದರು

     

    ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ 

    ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಚುನಾವಣಾ ಆಯೋಗವು ದಿನಾಂಕವನ್ನು ವಿಸ್ತರಿಸಿ ಮತ್ತೆ ಸಮಯಾವಕಾಶ ಮಾಡಿಕೊಟ್ಟಿರುತ್ತದೆ. ಈ ಸದಾವಕಾಶವನ್ನು ಸದುಪಯೋಗ ಪಡಿಸಿಕೊಂಡು ಉಳಿದಿರಬಹುದಾದ ತಮ್ಮ ಪದವೀಧರ ಸ್ನೇಹಿತರ ಮತ್ತು ಕುಟುಂಬ ಸದಸ್ಯರ ಹೆಸರುಗಳನ್ನು ಕೂಡಲೇ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಮನವಿ ಮಾಡಿದರು.

  • *ದೊಡ್ಡಬಳ್ಳಾಪುರ : ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ*

    ದೊಡ್ಡಬಳ್ಳಾಪುರ ಮೇ 05 ( ವಿಜಯಮಿತ್ರ ) : ಕನ್ನಡ ಭಾಷೆ ಮತ್ತು  ಸಾಹಿತ್ಯದ  ಅನನ್ಯತೆಯನ್ನು  ಉಳಿಸುವ, ಬೆಳೆಸುವ  ಮಹಾದಾಸೆಯಿಂದ ಸ್ವಾತಂತ್ರ್ಯ ಪೂರ್ವದಲ್ಲೆ  ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ತಿಳಿಸಿದರು.

     

    ‌‌ಅವರು  ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ  ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ  ನಡೆದ *ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ* ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  ಕನ್ನಡ ಭಾಷಿಕರು  ಆಡಳಿತಾತ್ಮಕವಾಗಿ ಬೇರೆ ಭಾಷೆ ಆಡಳಿತ ಅಧೀನದಲ್ಲಿದ್ದರೂ  ಅವರನ್ನು  ಭಾಷೆ ಮತ್ತು ಸಾಹಿತ್ಯ  ಬಾಂಧವ್ಯದಿಂದ  ಒಗ್ಗೂಡಿಸಿ ಕನ್ನಡ ಕಟ್ಟುವ  ಕೆಲಸಕ್ಕೆ ಸಹಕಾರಿಯಾಯಿತು ಕನ್ನಡ ಸಾಹಿತ್ಯ ಪರಿಷತ್ತು. ಇಂತಹ  ಕನ್ನಡ ಕಟ್ಟು ಕಾರ್ಯಕ್ಕೆ ನೆರವಾಗಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್.  ಕನ್ನಡಿಗರ  ಪ್ರಾತಿನಿಧಿಕ ಸಂಸ್ಥೆಯಾಗಿ 1915ರಂದು ಕನಾಟಕ ಸಾಹಿತ್ಯ ಪರಿಷತ್ತು  ಸ್ಥಾಪನೆಯಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣರಾಗಿದ್ದಾರೆ ಎಂದರು.

     

     

    ಕನ್ನಡ ಸಾಹಿತ್ಯ ಪರಿಷತ್ತು   ಕನ್ನಡದ ಮಹತ್ವದ ಕವಿಗಳ  ಕೃತಿಗಳ  ಹಕ್ಕು ಸ್ವಾಮ್ಯ ಹೊಂದಿದೆ. ಕನ್ನಡ ನಿಘಂಟು ರಚನೆ ಮತ್ತು ಪರಿಷ್ಕರಣೆಯಲ್ಲಿ  ಮಹತ್ವದ ಸಾಧನೆ  ಮಾಡಿದೆ.  ಉತ್ತಮ ಗ್ರಂಥಾಲಯ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು  ಕನ್ನಡ  ಭಾಷೆಯ ಬೆಳವಣಿಗೆಗೆ, ಅಧ್ಯಯನ ಮತ್ತು‌ ಸಂಶೋಧನೆಗೆ ಸಹಕಾರಿಯಾಗಿದೆ.  ಪುಸ್ತಕ ಪ್ರಕಟಣೆ,   ವಿಚಾರಸಂಕಿರಣಗಳು, ಸಾಹಿತ್ಯ ಸಮ್ಮೇಳನ,  ಹಲವು ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಸಾಧಕರಿಗೆ ನೀಡುವ ಮೂಲಕ  ಕನ್ನಡ ಸಾಹಿತ್ಯ ಪರಿಷತ್ತು  ಕನ್ನಡಿಗರ  ಮನಗೆದ್ದಿದೆ.  ದತ್ತಿಗಳ ದಾನಿಗಳು, ಆಜೀವ ಸದಸ್ಯರುಗಳನ್ನು ರಾಜ್ಯದ ಎಲ್ಲೆಡೆ ಹೊಂದಿರುವ ಮೂಲಕ  ಇಂದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗೆ ಎಂದರು.

     

     

    ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸನ್ನು ನನಸು ಮಾಡುವ ಕೆಲಸವನ್ನು ಪರಿಷತ್ತು ಮುಂದೂವರಿಸಿಕೊಂಡು ಹೋಗಬೇಕಾಗಿದೆ. ಕನ್ನಡದ ವಿಚಾರಗಳ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹತ್ವದ ಪಾತ್ರವನ್ನು ವಹಿಸಬೇಕಾಗಿದೆ ಎಂದರು.

     

     

    ದೊಡ್ಡಬಳ್ಳಾಪುರ ಮೇ 05 : ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಮಾತನಾಡಿ, ಕನ್ನಡಿಗರ ಪ್ರತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಎಲ್ಲರಿಗೂ ತಲುಪಬೇಕಾಗಿದೆ. ಶತಮಾನ ಪೂರೈಸಿ ಮುನ್ನಡೆಯುತ್ತಿರುವ ಈ ಸಂಸ್ಥೆ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸೀಮಿತಗೊಳ್ಳದೆ, ಕನ್ನಡಿಗರ ಬದುಕು ಬವಣೆಗಳ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಕನ್ನಡಿಗರ ಮನೆ ಮನೆಗಳಲ್ಲಿ ಕನ್ನಡ ಪ್ರಜ್ಞೆ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕಾಗಿದೆ ಎಂದರು.

     

     

    ಕವಯಿತ್ರಿ ಆಶಾಗುಡ್ಡದಹಳ್ಳಿ ಮಾತನಾಡಿ, ಕನ್ನಡ ಸಾಹಿತ್ಯ ‌ಪರಿಷತ್ತು ನಮ್ಮ ನಾಡು,ನುಡಿ,ನೆಲ ಮತ್ತು ಜಲ ವಿಚಾರಗಳನ್ನು ಒಳಗೊಂಡಂತೆ ಕನ್ನಡಪರ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಬೇಕಾಗಿದೆ. ಕನ್ನಡ ನಾಡು ಮತ್ತು ನುಡಿಗೆ ಸಾಹಿತಿಗಳಷ್ಟೆ ಕೊಡುಗೆಯನ್ನು ಕನ್ನಡಪರ ಹೋರಾಟಗಾರರು ನೀಡಿದ್ದಾರೆ ಎಂಬುದನ್ನು ಮರೆಯಬಾರದು. ಕನ್ನಡ ಸಾಹಿತ್ಯ ಪರಿಷತ್ತು ಸದಾ ಜನಸಾಮಾನ್ಯರ ಪರಿಷತ್ತು ಆಗಿ ಕಾರ್ಯ‌ ನಿರ್ವಹಿಸಬೇಕೆಂದರು.‌

     

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಷಫೀರ್, ನವೋದಯ ವಿದ್ಯಾಲಯ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ, ನಾಗದಳ ಸಂಘಟನೆಯ ನಟರಾಜ್, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜ್, ಬಾಶೆಟ್ಟಿಹಳ್ಳಿ ಪ್ರೇರಣಾ ಸಂಸ್ಥೆಯ ಅಧ್ಯಕ್ಷೆ ನೇತ್ರಾವತಿ, ಪ್ರತಿನಿಧಿ ಮುನಿರತ್ನಮ್ಮ , ಡಾ.ರಾಜ್ ಕುಮಾರ್ ಅಭಿಮಾನಿ‌‌ ಸಂಘದ ಪರಮೇಶ್ ಮುಂತಾದವರು ಭಾಗವಹಿಸಿದ್ದರು.

  • *ರೈತರ ಹೋರಾಟಕ್ಕೆ ಮಣಿದ ಕೆಐಎಡಿಬಿ : ನ್ಯಾಯಾಲಯದಲ್ಲಿ ಭೂ ಪರಿಹಾರವನ್ನು ಠೇವಣಿ ಮಾಡಲು ಒಪ್ಪಿದ ಕೆಐಎಡಿಬಿ*

    ಬೆಂಗಳೂರು,ಮೇ 04 (ವಿಜಯಮಿತ್ರ ): ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿಗೆ ಸೇರಿದ ದೊಡ್ಡಗೊಲ್ಲಹಳ್ಳಿ ಮತ್ತು ಚಪ್ಪರದಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಫಾಕ್ಸ್ ಕಾನ್ ಕಂಪನಿಗೆ ಭೂಮಿ ಮಂಜೂರಾಗಿದ್ದು, ಸಂಬಂಧಿಸಿದ ಭೂ ಪರಿಹಾರವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗುವುದು ಎಂದು ಕೆಐಎಡಿಬಿ ಸಿಇಓ ಡಾ. ಮಹೇಶ ಅವರು ಶುಕ್ರವಾರ ತಿಳಿಸಿದ್ದಾರೆ.

    ಈ ಗ್ರಾಮಗಳಲ್ಲಿ ಕಂಪನಿಗೆ ಮಂಜೂರಾಗಿರುವ ಭೂಮಿಗೆ ಭೂಸ್ವಾಧೀನ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಸಹಕಾರ ಪಡೆದು ಫೆನ್ಸಿಂಗ್ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

    ದೇವನಹಳ್ಳಿ 3ನೇ ಅಡಿಷನಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ನೇರವಾಗಿ ಖಾತೆದಾರರಿಗೆ ಪರಿಹಾರ ಕೊಡಬಾರದೆಂದು ತಡೆಯಾಜ್ಞೆ ನೀಡಿದೆ. ಹೀಗಾಗಿ, ಪರಿಹಾರ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲಾಗುತ್ತದೆ ಎಂದು ವಿವರಿಸಿದ್ದಾರೆ.

    ಕುಂದಾಣ ಹೋಬಳಿಯ ಅರವನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ ಮತ್ತು ಬೈರದೇನಹಳ್ಳಿ ಗ್ರಾಮಗಳಲ್ಲಿ ಒಟ್ಟು 867.37 ಎಕರೆ ವಿಸ್ತೀರ್ಣದ ಜಮೀನನ್ನು ಕೈಗಾರಿಕಾ ಪ್ರದೇಶದ ಸ್ಥಾಪನೆಗಾಗಿ ಭೂಸ್ವಾಧೀನ‌ ಮಾಡಿಕೊಳ್ಳಲಾಗಿದ್ದು. ಈ ಪೈಕಿ ಫಾಕ್ಸ್‌ಕಾನ್‌ ಕಂಪನಿಗೆ 300 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿರುತ್ತದೆ ಎಂದಿದ್ದಾರೆ.

    ದೊಡ್ಡಗೊಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 91/1, 80/3, 92, 98/1, 98/2, 98/4, 93, 8/3, 76, 81/1,
    87/4ಪಿ, 90/1 ಮತ್ತು ಚಪ್ಪರದಹಳ್ಳಿ ಗ್ರಾಮದ ಸ.ನಂ.4ಗಳಲ್ಲಿ ಕಂಪನಿಯ ವತಿಯಿಂದ ಫೆನ್ಸಿಂಗ್
    ಹಾಕಲು ಹೋದಾಗ ಖಾತೆದಾರರು ಪ್ರತಿಭಟನೆ ನಡೆಸಿ ಫೆನ್ಸಿಂಗ್ ಹಾಕಲು ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

  • *ಕೆಐಎಡಿಬಿ ವಿರುದ್ಧ ರೈತರ ಹೋರಾಟ : ಪರಿಹಾರ ಧನ ಬಿಡುಗಡೆಗೊಳಿಸುವಂತೆ ಅಗ್ರಹ*

    ಮೇ 03 ( ವಿಜಯಮಿತ್ರ ) : ದೇವನಹಳ್ಳಿ ತಾಲ್ಲೂಕಿನ ದೊಡ್ಡಗೊಲ್ಲಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಬೃಹತ್ ಐಟಿ ಪಾರ್ಕ್ ಗೆ ಕೆಐಎಡಿಬಿ ನೂರಾರು ಎಕರೆ ಜಮೀನನ್ನು ವಶಕ್ಕೆ ಪಡೆದಿದೆ. ಆದರೆ 30 ಎಕರೆಗಳ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ಕೆಐಎಡಿಬಿ ಪರಿಹಾರದ ಹಣ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿ ರೈತರು ಜಮೀನಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

     

    ದೇವನಹಳ್ಳಿ ಗಡಿಭಾಗದ ದೊಡ್ಡ ಗೊಲ್ಲಹಳ್ಳಿ ಗ್ರಾಮದ ರೈತರಾದ ಶ್ರೀನಿವಾಸ್ ಮತ್ತು ಕುಟುಂಬಸ್ಥರು ಕೆಐಎಡಿಬಿ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಎಂದು ದೊಡ್ಡ ಗೊಲ್ಲಹಳ್ಳಿ ರೈತ ಶ್ರೀನಿವಾಸ್, ನಮ್ಮ ಸ್ವಯಾರ್ಜಿತ ಜಮೀನು ಸರ್ವೆ ನಂಬರ್ 98/1, 98/2, 98/4 ಹಾಗೂ ಪಿತ್ರಾರ್ಜಿತ ಜಾಗದ ಸರ್ವೇ ನಂಬರ್ 8/2, 8/3, 8/5, 90/1, 92, 93, 81/11, 76, 80/1, 87/4, 91/1.ಗಳಾಗಿದ್ದು ಈ ಸರ್ವೆ ನಂಬರ್ ಗಳ ಜಾಗವನ್ನು ಕೆಐಎಡಿಬಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸ್ವಾಧೀನ ಪಡಿಸಿಕೊಂಡಿದ್ದು ಈವರೆಗೂ ಯಾವುದೇ ರೀತಿಯ ಪರಿಹಾರ ಧನ ನೀಡಿರುವುದಿಲ್ಲ, ಹಣ ಕೇಳಲು ಹೋದಲ್ಲಿ ಪ್ರತಿ ಬಾರಿ ಕೇವಲ ಭರವಸೆ ನೀಡುವ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ 30 ಜನರ ಕುಟುಂಬ ಬೀದಿ ಪಾಲಾಗಿದ್ದು. ನಮಗೆ ನ್ಯಾಯ ಒದಗಿಸುವಲ್ಲಿ ಕೆಐಎಡಿಬಿ ಮೀನಾಮೇಷ ಎಣಿಸುತ್ತಿದ್ದಾರೆ. ರೈತರ ತಾಳ್ಮೆ ನೋಡಿರುವ ಕೆಐಎಡಿಬಿ ರೈತರ ಆಕ್ರೋಶ ನೋಡಲಿ ನಮ್ಮ ಭೂಮಿಯನ್ನು ಕಸಿಯುವ ಹುನ್ನಾರ ನೆಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

     

    ಸ್ಥಳೀಯ ರೈತ ಮುಖಂಡ ಆನಂದ್ ಮಾತನಾಡಿ ಸುಮಾರು 150 ವರ್ಷಗಳಿಂದ ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರ ಭೂಮಿಯನ್ನು ಕಬಳಿಸಲು ಎಜೆಂಟ್ ಗಳ ಮುಖಾಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂ ಸ್ವಾಧೀನಕ್ಕೆ ಕೆಐಎಡಿಬಿ ಹುನ್ನಾರ ನಡೆಸುತ್ತಿದೆ. ರೈತ ಶ್ರೀನಿವಾಸ್ ರವರ ಕುಟುಂಬಕ್ಕೆ ತೊಂದರೆ ನೀಡುತ್ತಿರುವ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಬಾಳಪ್ಪ ಮತ್ತು ಸಹಚರರ ವಿರುದ್ಧ ನಮ್ಮ ಕಾನೂನು ರೀತಿಯ ಹೋರಾಟ ಮುಂದುವರೆಯುತ್ತದೆ ಹಾಗೂ ತಾಲ್ಲೂಕಿನ ರೈತರಿಗೆ ಅನ್ಯಾಯವಾದಲ್ಲಿ ನಮ್ಮ ಹೋರಾಟ ಸಮಿತಿಯ ವತಿಯಿಂದ ರೈತರಿಗೆ ಬೆಂಬಲವಾಗಿ ನಿಂತು ನ್ಯಾಯ ದೊರಕಿಸಲು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

     

    ಕೆಐಎಡಿಬಿ ಅಧಿಕಾರಿ ಬಾಳಪ್ಪ ಮಾತನಾಡಿ ಸರಿಸುಮಾರು 300 ಎಕ್ಕರೆ ಪ್ರದೇಶವನ್ನು ಫಾಕ್ಸ್ಕನ್ ಕಂಪನಿ ವ್ಯಾಪ್ತಿಗೆ ನೀಡಿದ್ದು ಸದರಿ ವ್ಯಾಪ್ತಿಯ 30 ಎಕರೆ ಪ್ರದೇಶವು ಕೌಟುಂಬಿಕ ಕಲಹಗಳ ಕಾರಣ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ರೈತರಿಗೆ ಪರಿಹಾರ ನೀಡಲು ತಡೆಯಾಜ್ಞೆ ನೀಡಿರುವ ಕಾರಣ ಪರಿಹಾರದ ಹಣ ಬಿಡುಗಡೆ ತಡವಾಗಿದೆ. ಈ ಕುರಿತು ರೈತ ಕುಟುಂಬ ಪ್ರತಿಭಟನೆ ನೆಡೆಸುತ್ತಿದೆ. ರೈತರೊಂದಿಗೆ ಮಾತುಕತೆ ನೆಡೆಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

     

    *ಕಾಮಗಾರಿ ನಿಲ್ಲಿಸಲು ರೈತರ ಒತ್ತಾಯ* 

     

    ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ರೈತರು ತಮಗೆ ನ್ಯಾಯ ಕೊಡುಸುವಂತೆ ಆಗ್ರಹಿಸಿದರು. ಕಾಂಪೌಂಡ್ ನಿರ್ಮಾಣಕ್ಕೆ ಮುಂದಾದ ಕೆಐಎಡಿಬಿ ವಿರುದ್ಧ ಆಕ್ರೋಶಗೊಂಡ ರೈತರು ಕಾಮಗಾರಿ ನಿಲ್ಲಿಸಲು ಮುಂದಾದರು ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

  • **ಇಂಡೇನ ಕಾರ್ಖಾನೆ ವಿರುದ್ಧ ಯುವಕರ ಪ್ರತಿಭಟನೆ : ಗ್ರಾಮಸ್ಥರ ಅರೋಗ್ಯ ಕಾಪಾಡುವಂತೆ ಅಧಿಕಾರಿಗಳಲ್ಲಿ ಮನವಿ**

    *ದೊಡ್ಡಬಳ್ಳಾಪುರ ಮೇ 03 ವಿಜಯಮಿತ್ರ* : ಕಾರ್ಖಾನೆಯಿಂದ ಬರುವ ವಿಷ ಅನಿಲವು ದುರ್ವಸನೆಯಿಂದ ಕೂಡಿದ್ದು ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬಿರುತ್ತಿದೆ. ಇಂಡೇನ ಕಾರ್ಖಾನೆ ನಮ್ಮ ಗ್ರಾಮದ ಸಂಪತ್ತನ್ನು ಹಾಳುಮಾಡುತ್ತಿದೆ ಎಂದು ಸಾಮಾಜಿಕ ಹೋರಾಟ ಕೃಷ್ಣಪ್ರಸಾದ್ ತಿಳಿಸಿದರು.

     

     

    ತಾಲ್ಲೂಕಿನ ರಘುನಾಥಪುರ ಸಮೀಪದ ಇಂಡೇನ ಕಾರ್ಖಾನೆ ಮುಂಭಾಗ ಸ್ಥಳೀಯ ಯುವ ಹೋರಾಟಗಾರರು ಪ್ರತಿಭಟನೆ ನೆಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮದ ಉಳಿವಿಗಾಗಿ ಯುವಕರು ಹೋರಾಟ ನೆಡೆಸುತ್ತಿದ್ದು. ಇಂಡೇನಾ ಕಾರ್ಖಾನೆಯಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.ದ್ರವರೂಪದ ತಾಜ್ಯವನ್ನು ಹಿಂಗು ಗುಂಡಿಗಳ ಮೂಲಕ ಭೂಗರ್ಭಕ್ಕೆ ಸೇರಿಸುತ್ತಿದ್ದು ಅಂತರ್ಜಲ ಹಾಳಾಗುತ್ತಿದೆ. ಹಾಗೂ ಸದರಿ ಕಾರ್ಖಾನೆಯು ತನ್ನ ಅಧಿಕಾರದ ಬಲದಿಂದಾಗಿ ನೂರಾರು ವರ್ಷಗಳ ಇತಿಹಾಸವಿರುವ ದೇವಾಲಗಳನ್ನು ಒತ್ತುವರಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಗ್ರಾಮದ ಹಾಗೂ ಗ್ರಾಮಸ್ಥರಿಗೆ ಸೇರಿದ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಯುವಕರ ತಂಡ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.

     

    ಗ್ರಾಮಸ್ಥ ಜಗದೀಶ್ ಮಾತನಾಡಿ ಹಲವು ವರ್ಷಗಳಿಂದ ಈ ಸಮಸ್ಯೆಯನ್ನು ಸ್ಥಳೀಯ ಗ್ರಾಮಸ್ಥರು ಎದುರಿಸುತ್ತಿದ್ದು. ಕಾರ್ಖಾನೆ ಸಿಬ್ಬಂದಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಮಕ್ಕಳು ಹೊಟ್ಟೆನೋವು, ವಾಂತಿ, ತಲೆನೋವು ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು . ಗ್ರಾಮದಲ್ಲಿ ಅಭಿವೃದ್ಧಿ ಬದಲಾಗಿ ಅನಾರೋಗ್ಯ ಹೆಚ್ಚಾಗಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.

     

    ಸ್ಥಳೀಯ ಯುವಮುಖಂಡ ಕೃಷ್ಣಮೂರ್ತಿ ಮಾತನಾಡಿಕಾರ್ಖಾನೆ ಸಿಬ್ಬಂದಿ ಕೊಳವೆ ಬಾವಿಗಳ ಮೂಲಕ ವಿಷ ಪೂರಿತ ದ್ರವತಾಜ್ಯವನ್ನು ಭೂಮಿ ಸೇರುವಂತೆ ಮಾಡುತ್ತಿದ್ದು ಈ ಕಾರಣದಿಂದಾಗಿ ಸ್ಥಳೀಯವಾಗಿ ನೀರಿನ ಗುಣಮಟ್ಟ ಹಾಳಾಗಿದೆ. ಕಾರ್ಖಾನೆ ಸುಸುವ ದುರ್ವಸನೆಯಿಂದ ಗ್ರಾಮಸ್ಥರ ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸಲಾಗಿದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.

     

    ಈ ಸಂದರ್ಭದಲ್ಲಿ ಆರ್. ಟಿ. ಕೃಷ್ಣಮೂರ್ತಿ,ರಮೇಶ್,ಕಿರಣ್,ರವಿಕುಮಾರ್ ಸೇರಿದಂತೆ ಹಲವು ಯುವ ಮುಖಂಡರು ಉಪಸ್ಥಿತರಿದ್ದರು.

  • *ಹಣಬೆ ಗ್ರಾಮದಲ್ಲಿ ಭೀಮೋತ್ಸವ : ಡಾ. ಬಿ ಆರ್ ಅಂಬೇಡ್ಕರ್ ರವರ 133ನೇ ಜನ್ಮದಿನಾಚರಣೆ*

    *ದೊಡ್ಡಬಳ್ಳಾಪುರ ಮೇ 03 ( ವಿಜಯಮಿತ್ರ )* : ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಮಹಾನಾಯಕ ಡಾಕ್ಟರ್ ಅಂಬೇಡ್ಕರ್ ರವರು ಹಗಲಿರುಳು ಶ್ರಮವಹಿಸಿ ರಚಿಸಿರುವ ಈ ದೇಶದ ಸಂವಿಧಾನಕ್ಕೆ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ 104 ತಿದ್ದುಪಡಿಗಳಾಗಿರುವ ನಮ್ಮ ಬೃಹತ್ ಸಂವಿಧಾನ ಮುಂದಿನ ದಿನಗಳಲ್ಲಿ ತೆರೆಮರೆಗೆ ಸರಿಸುವ ಹುನ್ನಾರವನ್ನು ನಮ್ಮನ್ನ ಆಳುವ ಸರ್ಕಾರಗಳು ನಿರಂತರವಾಗಿ ಮಾಡುತ್ತಾ ಬಂದಿವೆ. ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷರಾದ ಗುರುರಾಜಪ್ಪ ನವರು ಅಭಿಪ್ರಾಯಪಟ್ಟರು.

    ಅವರು ಮೇ ದಿನಾಂಕ 1ರಂದು ಕಾರ್ಮಿಕ ದಿನಾಚರಣೆ ಮತ್ತು ಡಾಕ್ಟರ್ ಬಾಬಾ ಸಾಹೇಬರ 133ನೇ ಜಯಂತಿ ಹಾಗೂ ಭೀಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

     

    ಈ ದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬಹುಸಂಖ್ಯಾತ ಸಮುದಾಯದವರು ಸಂವಿಧಾನದ ಮಹತ್ವವನ್ನು ಅರ್ಥಮಾಡಿಕೊಂಡು, ಸಂವಿಧಾನದಲ್ಲಿ ಅಡಕವಾಗಿರುವ ಮಹತ್ವವಾದ ಅಂಶಗಳನ್ನು ಯಥಾವತ್ತಾಗಿ ಜಾರಿ ಮಾಡಲು ಪ್ರತಿಭಟನೆಯ ಮೂಲಕ ನಮ್ಮನ್ನಆಳುವ ಸರ್ಕಾರಗಳಿಗೆ ಹೋರಾಟದ ಮೂಲಕ ಒತ್ತಾಯವನ್ನು ಹಾಕದೇ ಕಾಲಹರಣ ಮಾಡಿದಲ್ಲಿ ಮುಂದಿನ ನಮ್ಮೆಲ್ಲರ ಬದುಕು ಸುಗಮವಾಗುವುದಿಲ್ಲ ಎಂದು ಕಿವಿ ಮಾತು ಹೇಳಿದರು.

     

    ಇನ್ಸ್ಪೆಕ್ಟರ್ ಮಂಜುನಾಥ್ ರವರು ಮಾತನಾಡಿ ಈ ಶ್ರೀಣಿಕೃತ ಸಮಾಜ ನಮ್ಮಂತಹ ಶುದ್ರ ಸಮುದಾಯಗಳನ್ನು ಭ್ರಹ್ಮಣಿಕೆ ನಿಯಂತ್ರಿಸುತ್ತಿದೆ. ಈ ನಿಯಂತ್ರಣದಿಂದ ಹೊರಗೆ ಬಂದು ಸಮ ಸಮಾಜದ ಕಡೆಗೆ ಸಾಗುವಂತೆ ಮಾಡುವ ಅನಿವಾರ್ಯತೆ ಇದೆ ಎಂದರು. ಕಾರ್ಯಕ್ರಮ ದಲ್ಲಿ ಇವರ ಶ್ರೀಮತಿಯವರಾದ ಲೋಕಯುಕ್ತ ಡಿ ವೈ ಎಸ್ ಪಿ ಯಾವರೂ ಸಹಾ ಇದ್ದರು.

     

    ಭಾರತೀಯ ಮುಲನಿವಾಸಿ ಒಕ್ಕೂಟದ ಮುಖ್ಯಸ್ಥರು, ಭಗವಾನ್ ಬುದ್ಧರ ಉಪಾಸಕರಾದ ಕುಂದಾಣದ ಸಿದ್ಧಾರ್ಥ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವಾನ್ ಬುದ್ಧರ ಚಿಂತನೆಗಳನ್ನು ನಮ್ಮಗಳ ಜೀವನದಲ್ಲಿ ಅಳವಡಿಸಿಕೊಳ್ಳದೇ ಇದ್ದರೆ ಬದುಕು ಸಾರ್ಥಕವಾಗುವುದಿಲ್ಲ ಮತ್ತು ಧಮ್ಮ ಸಿಗುವುದಿಲ್ಲ. ಧಮ್ಮ ಅಂದರೆ ಸತ್ಯ, ಪ್ರೀತಿ, ಜ್ಞಾನ, ಬದುಕು ಪ್ರಾಮಾಣಿಕವಾದ ಜೀವನ ಎಂದರ್ಥ. ಭಗವಾನ್ ಬುದ್ಧರ ಅಷ್ಟಂಗ ಮಾರ್ಗಗಳು ನಮ್ಮ ಬದುಕಿನ ಗುರಿಯಗಬೇಕು ಎಂದು ಪ್ರತಿಪಾದಿಸಿದರು.

     

    ಸಂಜೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯ್ತು.

     

    ಈ ಕಾರ್ಯಕ್ರಮದಲ್ಲಿ ನಾರಾಯಣಸ್ವಾಮಿರವರು ಮಾತನಾಡಿದರು. ಛಲವಾದಿ ಮಹಾಸಭಾದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯಾದ ಡಿ ಎನ್ ಎಲ್ ಎನ್ ಮೂರ್ತಿ,ಮಾಳವ ನಾರಾಯಣ್ ಹಣಬೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್, ಮುನೇಗೌಡ, ವೆಂಕಟೇಶ್ ಮೂರ್ತಿ, ಹಾಗೂ ಜಗಧೀಶ್, ಗಂಗಪ್ಪ, ಮುನಿಯಪ್ಪ, ರಮೇಶ್ ಊರಿನ ಪ್ರಮುಖರು ಉಪಸ್ಥಿತರಿದ್ದರು.

  • *ಸುಟ್ಟು ಕರಕಲಾದ ಸ್ಥಿತಿಯಲ್ಲಿ ವೀಣಾ ಮೃತ ದೇಹ ಪತ್ತೆ : ಪತಿ ರವಿಯಿಂದಲೇ ಪತ್ನಿಯ ಕೊಲೆ*

    *ದೊಡ್ಡಬಳ್ಳಾಪುರ ಏಪ್ರಿಲ್ 04 ( ವಿಜಯ ಮಿತ್ರ )* : ಗಾರ್ಮೆಂಟ್ಸ್ ಕೆಲಸಕ್ಕೆ ಎಂದು ಹೋದ ವೀಣಾ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪತಿ ರವಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

     

     

     

     

    ದೊಡ್ಡಬಳ್ಳಾಪುರದ ಕರನೇಹಳ್ಳಿಯ ನಿವಾಸಿ 19 ವರ್ಷದ ವೀಣಾ ಏಪ್ರಿಲ್ 22ರ ಸೋಮವಾರ ನಾಪತ್ತೆಯಾಗಿದ್ದು ಆಕೆಯ ಗಂಡ ರವಿ ಹೆಂಡತಿಯ ಮಿಸ್ಸಿಂಗ್ ಕೇಸ್ ಅನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಬಂದಿದ್ದ, ಅದಾದ ಒಂದು ವಾರಕ್ಕೆ ತೂಬಗೆರೆಯ ನಾರಸಿಂಹಹಳ್ಳಿಯ ಅರಣ್ಯ ಪ್ರದೇಶದಲ್ಲಿ ಫಾರೆಸ್ಟ್ ಗಾರ್ಡ್ ಗೆ ಸುಟ್ಟು ಕರಕಲಾಗಿರುವ ಅಪರಿಚಿತ ಶವ ಕಣ್ಣಿಗೆ ಬಿದ್ದಿತ್ತು, ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೇಕ್ಟರ್ ಸಾಧಿಕ್ ಪಾಷ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

     

    ಕಾಡಿನಲ್ಲಿ ಪತ್ತೆಯಾದ ಅಪರಿಚಿತ ಶವದ ಪತ್ತೆಗಾಗಿ ತನಿಖೆ ಆರಂಭಿಸಿದ ಪೊಲೀಸರು, ಇತ್ತಿಚೇಗೆ ನಾಪತ್ತೆಯಾದ ಪ್ರಕರಣಗಳನ್ನ ಕೈಗೆತ್ತಿಕೊಂಡರು, ಏಪ್ರಿಲ್ 22ರಂದು ನಾಪತ್ತೆಯಾಗಿದ್ದ ವೀಣಾ ಕೇಸ್ ಸಾಧಿಕ್ ಪಾಷರವರ ಗಮನಕ್ಕೆ ಬರುತ್ತೆ, ತಕ್ಷಣವೇ ಆಕೆಯ ಸಂಬಂಧಿಕರಿಗೆ ಕರೆ ಮಾಡಿದ ಅವರು ಶವದ ಪತ್ತೆ ಮಾಡುವಂತೆ ಕರೆಯುತ್ತಾರೆ, ಶವದ ಕಾಲಿನಲ್ಲಿದ ಕಾಲ್ಗೆಜ್ಜೆ, ಅರೆಬೆಂದ ಚಪ್ಪಲಿ ನೋಡಿದ ಸಂಬಂಧಿಕರು ಇದು ವೀಣಾ ಶವ ಎಂದು ಗುರುತು ಹಿಡಿದಿದ್ರು.

     

    *ಪಕ್ಕದ್ಮನೆ ಆಂಟಿ ಜೊತೆ ಅನೈತಿಕ ಸಂಬಂಧ..?*

     

    ಅಪರಿಚಿತ ಶವ ನಾಪತ್ತೆಯಾಗಿದ್ದ ವೀಣಾಳ ಶವ, ಅಂದಹಾಗೇ ವೀಣಾಳನ್ನು ಕೊಂದವರು ಯಾರು, ಯಾವ ಕಾರಣಕ್ಕೆ ಕೊಂದರು, ಈ ಪ್ರಶ್ನೆಗಳು ಅದಾಗಲೇ ಇನ್ಸ್ ಪೇಕ್ಟರ್ ಸಾಧಿಕ್ ಪಾಷರವರ ಗಮನಕ್ಕೆ ಬಂದಿತ್ತು, ಅಷ್ಟರಾಗಲೇ ವೀಣಾಳ ಗಂಡ ರವಿ ಪೊಲೀಸ್ ಠಾಣೆಗೆ ಹೋಗಿ ಹೆಂಡತಿಯನ್ನ ತಾನೇ ಕೊಂದಿರುವುದ್ದಾಗಿ ತಪ್ಪೋಪ್ಪಿಕೊಂಡಿದ್ದ.

     

    ಆರೋಪಿ ರವಿಯನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾಗ ತಿಳಿದು ಬಂದ ವಿಷಯ, ಆತನ ಅನೈತಿಕ ಸಂಬಂಧ. ಆರೋಪಿ ರವಿ ಪಕ್ಕದ್ಮನೆ ಆಂಟಿ ಜೊತೆ ಅನೈತಿಕ ಸಂಬಂಧವನ್ನ ಬೆಳೆಸಿದ್ದ, ಆಂಟಿ ಸಹವಾಸ ಬೀಡುವಂತೆ ವೀಣಾ ತನ್ನ ಗಂಡನಿಗೆ ಹೇಳುತ್ತಿದ್ದಳು. ಆದರೆ, ಆಂಟಿಯನ್ನ ಬಿಡಲು ಒಲ್ಲದ ರವಿ ಹೆಂಡತಿಯೊಂದಿಗೆ ನಿತ್ಯ ಜಗಳ ಮಾಡುತ್ತಿದ್ದನು, ಮಧ್ಯರಾತ್ರಿ ಹೆಂಡತಿಯ ರೂಮಿಗೆ ಬೀಗ ಹಾಕಿ ಆಂಟಿ ಮನೆ ಸೇರಿ ಕೊಳ್ಳುತ್ತಿದ್ದ, ಮಗನಿಗೆ ಬುದ್ದಿವಾದ ಹೇಳ ಬೇಕಿದ್ದ ಅತ್ತೆ,ಮಾವ ಮತ್ತು ನಾದಿನಿಯರು ವೀಣಾಳಿಗೆ ಕಿರುಕುಳ ಕೊಡುತ್ತಿದ್ದರಂತೆ, ಮನೆಯಲ್ಲಿ ಕೊಡುತ್ತಿದ್ದ ಕಿರುಕುಳದ ಬಗ್ಗೆ ಬೇಸರಗೊಂಡಿದ್ದ ವೀಣಾ, ನೆರೆಹೊರೆಯ ಮಹಿಳೆಯರೊಂದಿಗೆ ತನ್ನ ನೋವು ಹಂಚಿಕೊಳ್ಳುತ್ತಿದ್ದಳೆಂದ್ದು ಸ್ಥಳೀಯ ಮಹಿಳೆಯರು ವೀಣಾ ಸಾವಿನ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ.

     

    ಆಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಹೆಂಡತಿಯನ್ನ ಮುಗಿಸಲು ಸಂಚು ಹಾಕಿದ ರವಿ, ಏಪ್ರಿಲ್ 22 ರಂದು ಆಕೆ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ಪ್ಯಾಕ್ಟರಿ ಹೋಗಿದ್ದ ಅವನು, ಕೆಲಸ ಬಿಟ್ಟ ನಂತರ ಹೆಂಡತಿಯನ್ನ ಜೊತೆಯಾಗಿ ಕರೆದುಕೊಂಡು ಹೋಗಿದ್ದ, ಅಲ್ಲಿಂದ ತೂಬಗೆರೆ ನಾರಸಿಂಹನಹಳ್ಳಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ, ಶವದ ಗುರುತು ಸಿಗಬಾರದೆಂಬ ಕಾರಣಕ್ಕೆ ಶವದ ಮೇಲೆ ಪೆಟ್ರೋಲ್ ಸುರಿದು ಸುಟ್ಟಹಾಕಿದ್ದಾನೆ.

     

    ಅಂದು ರಾತ್ರಿ ಮನೆಗೆ ಬಂದವನು ತಾನಗೇನು ಗೊತ್ತೆ ಇಲ್ಲವೆಂಬಂತೆ, ಅಕ್ಕಪಕ್ಕದ ಮನೆಯ ಬಳಿ ಹೋಗಿ ವೀಣಾ ಇದ್ದಾಳಾ ಎಂದು ಕೇಳಿದ್ದಾನೆ, ರಾತ್ರಿ 10 ಗಂಟೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ಹೆಂಡತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿ ಬಂದಿದ್ದ, ಮರುದಿನ ಕಟಿಂಗ್ ಮಾಡಿಸಿಕೊಂಡ ಅವನು ಮನೆಯಲ್ಲಿ ನಾನ್ ವೆಜ್ ಆಡುಗೆ ಮಾಡಿಸಿ ಮಜಾ ಮಾಡಿದ್ದನಂತೆ.

     

    ವೀಣಾ ಒಬ್ಬ ಅನಾಥೆ, ಆಕೆಯನ್ನ ಕೊಂದರೆ ಕೇಳವರು ಯಾರು ಇಲ್ಲವೆಂಬ ಧೈರ್ಯದಲ್ಲಿ ಕೊಂದು ಮುಗಿಸಿದ್ದಾನೆ, ಆತನಿಗೆ ಕಾನೂನು ಕಠಿಣ ಶಿಕ್ಷೆ ನೀಡಿ ಬುದ್ದಿಕಲಿಸಲಿ ಎಂದು ಸ್ಥಳೀಯ ಮಹಿಳೆಯರು ಪೊಲೀಸರಿಗೆ ಮನವಿ ಮಾಡಿದ್ದಾರೆ.

  • *ಅಂತರರಾಷ್ಟ್ರೀಯ ವಿಶ್ವ ಕಾರ್ಮಿಕ ದಿನದ ಆಚರಣೆ : ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಟ್ಟಡ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ*

    *ದೊಡ್ಡಬಳ್ಳಾಪುರ ಮೇ 01 (ವಿಜಯಮಿತ್ರ)* : ಪ್ರಸ್ತುತ ಸಮಾಜದಲ್ಲಿ ಕಾರ್ಮಿಕರ ಹಕ್ಕುಗಳನ್ನು ಕಸಿಯುವ ಹುನ್ನಾರ ನೆಡೆಯುತ್ತಿದೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಅವರ ಜೊತೆಗೆ ನಿಲ್ಲಬೇಕಾದ ಸರ್ಕಾರಗಳು ಬಂಡವಾಳಶಾಹಿಗಳ ಜೊತೆ ನಿಂತಿರುವುದು ವಿಪರ್ಯಾಸವೇ ಸರಿ ಎಂದು ಹಿರಿಯ ನ್ಯಾಯವಾದಿಗಳಾದ ಎಂ ಕೃಷ್ಣಮೂರ್ತಿ ತಿಳಿಸಿದರು

    ನಗರದ ಕನ್ನಡ ಜಾಗೃತ ಭವನದಲ್ಲಿ ಶ್ರೀ ನೆಲದ ಆಂಜನೇಯ ಸ್ವಾಮಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಾಗೂ ಮೇಸ್ತ್ರಿಗಳ ಸಂಘ, ಕನ್ನಡ ಜಾಗೃತ ಪರಿಷತ್ ದೊಡ್ಡಬಳ್ಳಾಪುರ ಹಾಗೂ ಭಾಗ್ಯವಿಧಾತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಹಯೋಗದೊಂದಿಗೆ ಆಯೋಜನೆ ಮಾಡಲಾಗಿದ್ದ ಅಂತಾರಾಷ್ಟ್ರೀಯ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

     

    ದೇಶದಲ್ಲಿ ಕಾರ್ಮಿಕರು ಇಂದಿಗೂ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದು ಕಾರ್ಮಿಕರ ಜೀವನ ಸುಧಾರಿಸಲು ಕನಿಷ್ಠ ವೇತನ ಪದ್ಧತಿ ಜಾರಿಯಾಗಬೇಕಿದೆ ವೇತನ ನಿರ್ಧರಿಸುವ ಮಾನದಂಡಗಳನ್ನು ಕುರಿತು ಮಾಲೀಕರಿಗೆ ಅರಿವಿನ ಅವಶ್ಯಕತೆ ಇದೆ.

    ಪ್ರಸ್ತುತ ಕಾರ್ಮಿಕರಿಗೆ ದೊರೆಯುತ್ತಿರುವ ಸೌಲಭ್ಯಗಳು ಸಾವಿರಾರು ಕಾರ್ಯಕರ್ತರ ನಿರಂತರ ಹೋರಾಟಗಳ ಫಲವಾಗಿದೆ. ನಮ್ಮಲ್ಲಿ ಸಂಘಟಿತ ಹಾಗೂ ಅಸಂಘಟಿತ ಎಂಬ ಎರಡು ವಲಯಗಳ ಕಾರ್ಮಿಕರಿದ್ದಾರೆ. ಆದರೆ ಎರಡು ವಲಯದ ಕಾರ್ಮಿಕರಿಗೆ ಸೂಕ್ತ ಭದ್ರತೆಯ ಕೊರತೆ ಇದೆ ಎಂಬುದನ್ನು ಸರ್ಕಾರಗಳು ಅರಿಯಬೇಕಿದೆ ಎಂದರು.

     

    ನಿವೃತ್ತ ಪ್ರಧ್ಯಾಪಕರು ಹಾಗೂ ಸಂಘದ ಸಂಸ್ಥಾಪಕ ಸಲಹೆಗಾರ ಪ್ರೊಫೆಸರ್ ಚಂದ್ರಪ್ಪ ಮಾತನಾಡಿ ರಾಷ್ಟ್ರೀಯ ಅಂಕಿ ಅಂಶಗಳ ಕಛೇರಿ ನಡೆಸಿರುವ ಸಮೀಕ್ಷೆ ಪ್ರಕಾರ ದೇಶದಲ್ಲಿ 38 ಕೋಟಿಗಿಂತ ಅಧಿಕ ಅಸಂಘಟಿತ ಕಾರ್ಮಿಕ ವರ್ಗದವರಿದ್ದಾರೆ. ಅವರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯಲು ವಿಶೇಷ ಕಾರ್ಮಿಕ ನೀತಿಗಳಿವೆ. ಅವರೆಲ್ಲರೂ (ಇ) ಪೋರ್ಟಲ್‌ನಲ್ಲಿ ದಾಖಲಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಸರ್ಕಾರಗಳು ಕಾರ್ಮಿಕರ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಬೇಕಿದೆ ಎಂದರು.

     

    ಸಂಘದ ಅಧ್ಯಕ್ಷ ಅರವಿಂದ್ ಶಂಕರೇಗೌಡ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಲ್ಲಿ ಹನ್ನೊಂದು ವರ್ಗಗಳ ಕಾರ್ಮಿಕರನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ಮತ್ತು (ಇ ಶ್ರಮ್) ಕಾರ್ಡ್ ನೀಡಲಾಗುತ್ತಿದೆ. ಆದರೆ ಈ ಅಸಂಘಟಿತರಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ. ನಮ್ಮ ಸಂಘವು ಇವರ ಹಿತಕ್ಕಾಗಿ ಕಳೆದ 12 ವರ್ಷಗಳಿಂದ ಸತತವಾಗಿ ಶ್ರಮಿಸುತ್ತಿದೆ. ಅವರಿಗೆ ಗುರುತಿನ ಚೀಟಿ ಮಾಡಿಸಿಕೊಡುವುದು. ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಿಗುವ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುವುದು. ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಮತ್ತು ಪ್ರತಿಭಾ ಪುರಸ್ಕಾರ, ಹಿರಿಯ ಕಾರ್ಮಿಕರಿಗೆ ಗೌರವ ಸಮರ್ಪಣೆ, ರಕ್ತದಾನ ಶಿಬಿರ, ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಕಾರ್ಮಿಕರ ಸಮಸ್ಯೆಗಳಿಗೆ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

     

     

    ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಎಂ.ಜಗದೀಶ್ ಮಾತನಾಡಿ ಈ ವರ್ಷವೂ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ಆಚರಿಸುವುದರ ಜೊತೆ ಜೊತೆಗೆ 8,9,10ನೇ ತರಗತಿ ಮಕ್ಕಳಿಗೆ ಬೇಸಿಗೆ ಶಿಬಿರ ಏರ್ಪಡಿಸುವುರ ಮೂಲಕ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು

     

    *ಕಟ್ಟಡ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ*

    ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯಂತ ಹೆಚ್ಚಿನ ಅಂಕ ಪಡೆದ ಕಟ್ಟಡ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

    *ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದ ವಿದ್ಯಾರ್ಥಿಗಳು*

    ಲಾವಣ್ಯ 83%,ಇಂದ್ರಜಾ 91%, ಮನುಷ್ಯ ಎಂ 82%,ಶ್ವೇತಾ ಬಿ ಎನ್ 78%, ಭರತ್ ಕುಮಾರ್ ಸಿಎನ್ 79%.

     

     

    *ಹಿರಿಯ ಕಾರ್ಮಿಕರಿಗೆ ಗೌರವ ಸಮರ್ಪಣೆ*

     

    ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಲವಾರು ವರ್ಷಗಳಿಂದ ಕಾರ್ಮಿಕರಾಗಿ ಶ್ರಮಿಸುತ್ತಿರುವ ಮುನಿಶಾಮಣ್ಣ, ರಾಮಣ್ಣ, ಪಾಪಣ್ಣ, ರಂಗಮ್ಮ,ಚಿನ್ನಪ್ಪ, ಬಿ ಎಲ್ ರಾಮಕೃಷ್ಣ,ಕೆ ಪಿ ಶ್ರೀನಿವಾಸ್, ಸಿ ಮುನಿರಾಜು, ಸೇರಿದಂತೆ ಹಲವು ಹಿರಿಯ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

     

     

    ಕಾರ್ಯಕ್ರಮದಲ್ಲಿ ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ. ವೆಂಕಟೇಶ್, ಎಚ್. ಕೆ ಆನಂದ್ ಕುಮಾರ್, ವಕೀಲರಾದ ಸುರೇಶ್ ಕುಮಾರ್, ಸಂಘದ ಉಪಾಧ್ಯಕ್ಷ ಎಂ ಮಲ್ಲೇಶ್, ಖಜಾಂಚಿ ಸಿ. ಸತೀಶ್, ಸಂಘಟನಾ ಕಾರ್ಯದರ್ಶಿ ಆರ್. ರುದ್ರಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಮುನ್ನಾವರ್,ರಾಜಾ ರಾಮ್,ಮಂಜುನಾಥ್,ಗೋಪಾಲ್,ನಂಜೇಗೌಡ,ಆಂತೋನಿ,ಅಂಬರೀಶ್, ಪ್ರವೀಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು