Blog

  • *ಮೇ 15 ರಿಂದ ಉಚಿತ ಎಂಬ್ರಾಯ್ಡರಿ & ಆರಿ ವರ್ಕ್ ತರಬೇತಿ ಆರಂಭ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಏಪ್ರಿಲ್ 30 ( ವಿಜಯ ಮಿತ್ರ ) : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಎಂಬ್ರಾಯ್ಡರಿ, ಆರಿ ವರ್ಕ್ & ಫ್ಯಾಬ್ರಿಕ್‌ ಪೇಟಿಂಗ್ ಕುರಿತ 30 ದಿನಗಳ ಉಚಿತ ತರಬೇತಿಯು ಮೇ 15 ರಿಂದ ಆರಂಭವಾಗಲಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

     

    ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಗಳು ಆಧಾರ್‌ ಕಾರ್ಡ್‌ನ್ನು ಹೊಂದಿರಬೇಕು ಹಾಗೂ ಬಿಪಿಎಲ್‌ ಕಾರ್ಡ್‌ ಅನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

     

    ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಲು ಮೇ 08 ಕೊನೆಯ ದಿನವಾಗಿದೆ.

     

    ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್‌ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮೊಬೈಲ್‌ ಸಂಖ್ಯೆ: 9380162042, 9740982585 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್‌ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಉಚಿತ ಮೊಬೈಲ್‌ ರಿಪೇರಿ & ಸೇವೆ ತರಬೇತಿಗೆ ಮೇ 8 ರಂದು ನೇರ ಸಂದರ್ಶನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಏಪ್ರಿಲ್ 30 ( ವಿಜಯ ಮಿತ್ರ ) : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಮೊಬೈಲ್‌ ರಿಪೇರಿ & ಸೇವೆ ಕುರಿತ 30 ದಿನಗಳ ಉಚಿತ ತರಬೇತಿಗೆ ಮೇ 8 ರಂದು ನೇರ ಸಂದರ್ಶನವನ್ನು ಆಯೋಜಿಸಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

     

    ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್‌ ಕಾರ್ಡ್‌ ಅಥವಾ ಜಾಬ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ನ್ನು ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

     

    ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

     

    ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್‌ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್‌ ಸಂಖ್ಯೆ: 9740982585 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್‌ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಧಗ ಧಗನೆ ಹತ್ತಿ ಹುರಿದ ಡಿ ಟಿ ಸಿ ಬಾಕ್ಸ್ ಮತ್ತು ವೈಯರ್ ಗಳು : ಬೆಸ್ಕಾಂ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ*

    ದೊಡ್ಡಬಳ್ಳಾಪುರ ಏಪ್ರಿಲ್ 29 ( ವಿಜಯ ಮಿತ್ರ ) : ನಗರ ಭಾಗದ ತುಮಕೂರು ರಸ್ತೆ ಟ್ರಾನ್ಸ್ ಫಾರ್ಮ್ ಲಾವಣ್ಯ ವಿದ್ಯಾ ಸಂಸ್ಥೆ ಸಮೀಪದ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು.

    ವೈಯರ್ ಗಳ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹಾರಿದ ಕಿಡಿಯೇ ಈ ಅನಾಹುತಕ್ಕೆ ಕಾರಣ ಎಂದು ತಿಳಿದು ಬಂದಿದೆ.
    ಬೆಂಕಿಯಿಂದ ಡಿ ಟಿ ಸಿ ಬಾಕ್ಸ್ ಮತ್ತು ವೈಯರ್ ಗಳು ಸಂಪೂರ್ಣ ಹಾಳಾಗಿದ್ದು.

    ಬೆಸ್ಕಾಂ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

    ದರ್ಗಾಜೋಗಹಳ್ಳಿಗೆ ಸಂಪರ್ಕಿಸುವ ವಿದ್ಯುತ್ ಮಾರ್ಗವಾಗಿದ್ದು, ಈ ಮಾರ್ಗದಲ್ಲಿನ ವಿದ್ಯುತ್ ಸಂಪರ್ಕ ಕಡಿತವಾಗಿದೆ.

    ಈ ಸಂದರ್ಭದಲ್ಲಿ ಬೆಸ್ಕಾಂ ಸಿಬ್ಬಂದಿ ಮೋಹನ್, ಶಂಕರ್ ನಾಯಕ್, ಮಹಾಂತೇಶ್ ಪಾಟೀಲ್ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಬೆಂಕಿ ನಂದಿಸಿದರು.

  • *ಮಾಜಿ ಸಚಿವ ಡಾ. ಕೆ ಸುಧಾಕರ್ ವಿರುದ್ಧ ಎಫ್ಐಆರ್ : ವಾಟ್ಸ್ ಆಪ್ ಸಂದೇಶಗಳ ಆಧಾರದ ಹಿನ್ನಲೆ ಕೇಸ್ ದಾಖಲು*

    ಚಿಕ್ಕಬಳ್ಳಾಪುರ ( ವಿಜಯಮಿತ್ರ) : ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಡಾ.ಕೆ ಸುಧಾಕರ್‌ ಮೇಲೆ ಪ್ರಕರಣ ದಾಖಲಾಗಿದೆ.

     

    ಚಿಕ್ಕಬಳ್ಳಾಪುರ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಕೆ ಸುಧಾಕರ್ ಅವರು ನೋಡಲ್ ಅಧಿಕಾರಿ ಮೌನೀಶ್ ಮೌದ್ಗಿಲ್​ಗೆ ಕರೆ ಮಾಡಿ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಾಕ್ಷಿ ಸಮೇತ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರು ದೂರು ದಾಖಲಿಸಿದ್ದಾರೆ.

     

    ಲೋಕಸಭಾ ಚುನಾವಣೆಯ ಮತದಾನಕ್ಕೂ ಮುನ್ನ ಮಾದವಾರದ ಬಿಜೆಪಿ ಮುಖಂಡನ ಮನೆಯಲ್ಲಿ ಕೋಟಿ, ಕೋಟಿ ಹಣ ಪತ್ತೆಯಾದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

     

    ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಅವರು ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಕರೆ ಮಾಡಿದ್ದಾರೆ. ಕರೆ ಜೊತೆಗೆ ಮೂರು ವಾಟ್ಸ್‌ಆ್ಯಪ್‌ ಸಂದೇಶ ಕೂಡ ನೀಡಿದ್ದಾರೆ ಎನ್ನಲಾಗಿದೆ.ವಾಟ್ಸ್‌ಆ್ಯಪ್‌ ಸಂದೇಶಗಳ ಸ್ಕ್ರೀನ್ ಶಾಟ್ ಮಾಹಿತಿಯನ್ನು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

     

     

     

    *ಎಫ್​ಐಆರ್​ನಲ್ಲಿ ಏನಿದೆ?*

     

     

    ಕಳೆದ ಏಪ್ರಿಲ್ 25ರಂದು ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಅವರ ಆಪ್ತ ಹಾಗೂ ಬಿಜೆಪಿಯ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಆಗಿರುವ ‌ಗೋವಿಂದಪ್ಪ ಮನೆ ಮೇಲೆ ಐಟಿ ಅಧಿಕಾರಿಗಳು ರೇಡ್ ಮಾಡಿದ್ದರು.

     

    ಬಿಜೆಪಿ ಮುಖಂಡನ ಮನೆಯಲ್ಲಿ ಹಣ ಪತ್ತೆಯಾದ ಸಂದರ್ಭದಲ್ಲಿ ಡಾ.ಕೆ. ಸುಧಾಕರ್ ಅವರು ವಾಟ್ಸ್ ಆಪ್ ಕರೆ ಮಾಡಿದ್ದರು. ಇದೇ ವೇಳೆ ವಾಟ್ಸ್‌ಆ್ಯಪ್‌ನಲ್ಲಿ ಮೂರು ಸಂದೇಶ ಕಳಿಸಿದ್ದಾರೆ ಎನ್ನಲಾಗಿದೆ.

     

    ಮೊದಲ ಸಂದೇಶದಲ್ಲಿ ‘ಮಾದವಾರ ಗೋವಿಂದಪ್ಪ ಐಟಿ ಟೀಂ’ ಎನ್ನಲಾಗಿದೆ.

     

    2ನೇ ಸಂದೇಶದಲ್ಲಿ ನಾನು ನಿಮಗೆ ತುಂಬಾ ಆಭಾರಿಯಾಗಿರುತ್ತೇನೆ I will be great full to you regards (folded hands logo)

     

    ಹಾಗೂ 3ನೇ ಸಂದೇಶ: ಆನಂದ್ ರತ್ಕಲ್ (ಹೆಸರು ಜೊತೆ ಫೋನ್ ನಂಬರ್) ಕಳುಹಿಸಿದ್ದಾರೆ ಎನ್ನಲಾಗಿದೆ.

     

    ನೋಡಲ್ ಅಧಿಕಾರಿ ಮೌನೀಶ್ ಮೌದ್ಗಿಲ್​ ಅವರು ನೀಡಿದ ದೂರಿನ ಆಧಾರದಲ್ಲಿ ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದು ಎಫ್​ಐಆರ್ ದಾಖಲಿಸಿದ್ದಾರೆ.

  • *ಕೇಂದ್ರ ಸರ್ಕಾರದಿಂದ 3,454 ಕೋಟಿ ಬರಪರಿಹಾರ ಬಿಡುಗಡೆ : ಬರಪರಿಹಾರ ಪಡೆಯಲು ರಾಜ್ಯಸರ್ಕಾರದ ಪ್ರಯತ್ನಗಳ ಮಾಹಿತಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ*

    ಕರ್ನಾಟಕ ಏಪ್ರಿಲ್ 27 ( ವಿಜಯಮಿತ್ರ ) : ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಬರ ಪರಿಹಾರ ನೀಡಿದ್ದು ಈ ಹಿನ್ನಲೆ ರಾಜ್ಯ ಸರ್ಕಾರ ಬರ ಪರಿಹಾರ ಪಡೆಯಲು ನೆಡೆಸಿದ ಪ್ರಯತ್ನಗಳ ವಿವರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.

     

    ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ಸುಮಾರು 7 ತಿಂಗಳ ಕಾಲ ಬರ ಪರಿಹಾರಕ್ಕಾಗಿ ಕಾದು ಕಾದು ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶವನ್ನು ಸೃಷ್ಟಿಸಿದ್ದು ಕೇಂದ್ರ ಬಿಜೆಪಿ ಸರ್ಕಾರವೇ. ಕರ್ನಾಟಕದ ರೈತರ ಸಂಕಷ್ಟವನ್ನು, ಕೇಂದ್ರದ ರಾಜಕೀಯ ದುರುದ್ದೇಶವನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟ ನಂತರ ಮೋದಿ ಸರ್ಕಾರಕ್ಕೆ ಕೋರ್ಟ್ ಚಾಟಿಬೀಸಿತ್ತು. ಇದರಿಂದ ಬೇರೆ ದಾರಿಯಿಲ್ಲದೆ ಒಂದು ವಾರದ ಗಡುವು ಪಡೆದು ಕೇಂದ್ರ ಈಗ 3,454 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಎನ್.ಡಿ.ಆರ್.ಎಫ್ ನಿಯಮದಂತೆ ನಾವು ಕೇಳಿದ್ದು ರೂ. 18,171 ಕೋಟಿ. ಈಗ ಬಿಡುಗಡೆ ಆಗಿರುವ ಹಣ ನಾವು ಕೇಳಿದ ಪರಿಹಾರದಲ್ಲಿ ನಾಲ್ಕನೇ ಒಂದು ಭಾಗಕ್ಕೂ ಕಡಿಮೆ.

     

    ನಾಡಿನ ರೈತರ ಆಕ್ರೋಶ, ನಮ್ಮ ಹೋರಾಟ ಮತ್ತು ನಾಡಿನ ರೈತರ ಮೇಲೆ ಸುಪ್ರೀಂ ಕೋರ್ಟ್‌ಗೆ ಇರುವ ಕಾಳಜಿಯ ಫಲವಾಗಿ ಬಿಡುಗಡೆಯಾದ ಈ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಎಂದು ಬಿಂಬಿಸುತ್ತಿರುವ ಕರ್ನಾಟಕ ಬಿಜೆಪಿ ಪಕ್ಷಕ್ಕೆ ನಾಚಿಕೆಯಾಗಬೇಕು.

    ನರೇಂದ್ರಮೋದಿ ಅವರಿಗೆ ನಿಜವಾಗಿ ಕರ್ನಾಟಕದ ಬಗೆಗೆ ಕಾಳಜಿಯಿದ್ದರೆ ತೆರಿಗೆ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲಿ, 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿರುವ ವಿಶೇಷ ಅನುದಾನ, ಕೆರೆಗಳ ಸಂರಕ್ಷಣೆ ಮತ್ತು ಪೆರಿಫರಲ್ ರಿಂಗ್ ರೋಡ್ ಗೆ ಶಿಫಾರಸ್ಸಾದ ಅನುದಾನ, ಭದ್ರಾ ಮೇಲ್ದಂಡೆಗೆ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ನೀಡಲಿ ಎಂದಿದ್ದಾರೆ.

     

    *ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಏನು ಮಾಡಿದೆ, ಕೇಂದ್ರ ಸರ್ಕಾರ ಹೇಗೆ ಸ್ಪಂದಿಸಿದೆ ಎಂಬ ಪೂರ್ಣ ವಿವರ ಇಲ್ಲಿದೆ..*

     

    ಸೆಪ್ಟೆಂಬರ್ 13, 2023:

    ರಾಜ್ಯದ 195 ತಾಲೂಕುಗಳಲ್ಲಿ ಬರ; 30,432 ಕೋಟಿ ರೂ. ನಷ್ಟ, ರಾಜ್ಯ ಸರ್ಕಾರದ ಘೋಷಣೆ

     

    ಸೆಪ್ಟೆಂಬರ್ 22, 2023:

    ಬರ ಪರಿಸ್ಥಿತಿಯ ಸಮಗ್ರ ವರದಿ ಸಹಿತ ನೆರವು ಕೋರಿಕೆಯ ಮನವಿ ಪತ್ರ ಹಾಗೂ ಜತೆಗೆ ಹಸಿರು ಬರದ ಚಿತ್ರಣವನ್ನೂ ಸಲ್ಲಿಸಲು ರಾಜ್ಯ ಸರಕಾರ ಸಿದ್ಧತೆ

     

    ಸೆಪ್ಟೆಂಬರ್ 23, 2023:

    ಬರ ಪರಿಸ್ಥಿತಿ ಇರುವುದರಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿ ಕುಡಿಯುವ ನೀರು ಪೂರೈಕೆಗೆ 4,860 ಕೋಟಿ ರೂ ನೆರವಿಗೆ ಮೊದಲ ಮನವಿ.

     

    ಅಕ್ಟೋಬರ್ 5, 2023:

    ಕೇಂದ್ರ ತಂಡದಿಂದ ನಾಲ್ಕು ದಿನಗಳ ಬರ ಅಧ್ಯಯನ. ಬಾಗಕಲೋಟೆ, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ.

     

    ಅಕ್ಟೋಬರ್ 25, 2023:

    ರೈತರಿಗೆ ಪರಿಹಾರ ನೀಡಲು 17,901.73 ಕೋಟಿ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ.

     

    ನವೆಂಬರ್ 15, 2023:

    ಬರಪರಿಹಾರ ಬಿಡುಗಡೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ನನ್ನಿಂದ ಮನವಿ ಪತ್ರ.

     

    ನವೆಂಬರ್ 20, 2023:

    ರಾಜ್ಯ ಕೃಷಿ ಸಚಿವರಿಂದ, ಗೃಹ ಸಚಿವರ ನೇತೃತ್ವದ ಉನ್ನತ ಸಮಿತಿಯ ಮುಂದಿಡಲು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪ ಸಮಿತಿಯ ಶಿಫಾರಸುಗಳನ್ನು ಒಳಗೊಂಡ ಪ್ರಸ್ತಾವನೆ ರವಾನೆ.

     

    ಡಿಸೆಂಬರ್ 19, 2023:

    ನಾನು ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದೆವು.

     

    ಡಿಸೆಂಬರ್ 20, 2023:

    ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ನಾನು.

     

    ಮಾರ್ಚ್ 24, 2024:

    ವಿಳಂಬ ವಿರೋಧಿಸಿ ಬರಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ

     

    ಏಪ್ರಿಲ್ 2, 2024:

    ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಬರ ಪರಿಹಾರ ಕೇಳುವಲ್ಲಿ ಕರ್ನಾಟಕದಿಂದ ವಿಳಂಬ ಎಂಬ ಸುಳ್ಳುಹೇಳಿಕೆ.

     

    ಏಪ್ರಿಲ್‌ 6, 2024:

    ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ವಿಳಂಬವಾಗಲು ಕಾರಣ ಕೇಂದ್ರ ಸರ್ಕಾರವಲ್ಲ. ಉನ್ನತಾಧಿಕಾರಿ ಸಭೆ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡದಿರುವುದು ಎಂದು ಹೇಳಿ ಜಾರಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

     

    ಏಪ್ರಿಲ್ 8, 2024:

    ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ. ನೋಟೀಸ್‌ ನೀಡದಿರುವಂತೆ ಮನವಿ ಮಾಡಿದ್ದ ಸರ್ಕಾರ ಪರ ವಕೀಲ ತುಷಾರ್ ಮೆಹ್ತಾ.

     

    ಏಪ್ರಿಲ್ 22, 2024:

    ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ಚುನಾವಣಾ ಆಯೋಗದ ಒಪ್ಪಿಗೆ. ಅಗತ್ಯ ಕ್ರಮಗಳನ್ನು ಶೀಘ್ರವೇ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ.

     

    ಏಪ್ರಿಲ್ 27, 2024:

    ಕೇಂದ್ರ ಸರ್ಕಾರದಿಂದ ರೂ. 3498.98 ಕೋಟಿ ಬರಪರಿಹಾರಕ್ಕೆ ಅನುಮೋದನೆ, ರೂ. 3,454 ಕೋಟಿ ಬಿಡುಗಡೆ

  • *ಡಾ. ರಾಜಕುಮಾರ್ ನೇತ್ರ ಸಂಗ್ರಹಣಾ ಕೇಂದ್ರದಿಂದ 2254 ನೇತ್ರ ಸಂಗ್ರಹ : ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ*

     

    ದೊಡ್ಡಬಳ್ಳಾಪುರ ಏಪ್ರಿಲ್ 26 ( ವಿಜಯಮಿತ್ರ) : ಮರಣನಂತರ ಮೃತ ವ್ಯಕ್ತಿಯ ಕಣ್ಣುಗಳು ಮಣ್ಣಿನಲ್ಲಿ ಮಣ್ಣಾಗುವ ಬದಲು ಮತ್ತೊಬ್ಬರ ಜೀವನಕ್ಕೆ ಬೆಳಕಾಗಲಿ ನೇತ್ರಾದಾನ ಮಾಡಿ ಅಂಧರಿಗೆ ದೃಷ್ಟಿ ನೀಡಿ ಎಂದು ಟಿ. ವಿ. ರವಿ ತಿಳಿಸಿದರು

    ನಗರದ ರಾಜೀವ್ ಗಾಂಧಿ ನಗರದ ನಿವಾಸಿ, ಶ್ರೀಮೋಹನ್ ಕುಮಾರ್ ( ಸುಮಾರು 45 ವರ್ಷ)ರವರು ಹೃದಯಘಾತದಿಂದ ವಿಧಿವಶರಾಗಿದ್ದು. ಮೃತರ ನೇತ್ರಗಳನ್ನು ಸಂಗ್ರಹಿಸಿ ನಂತರ ಮಾತನಾಡಿದ ಅವರು ಮೋಹನ್ ಕುಮಾರ್ ಅವರ ಕಣ್ಣುಗಳನ್ನು ಕುಟುಂಬಸ್ಥರು ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಿ ಸಾವಿನಲ್ಲೂ ಮಾನವೀಯತೆಯನ್ನು ಮೆರೆದಿದ್ದಾರೆ ಎಂದರು.
    ಈ ನೇತ್ರದಾನದಕ್ಕೆ ಪ್ರೇರಣೆ ನೀಡಿದ ದೊಡ್ಡಬಳ್ಳಾಪುರದ ಶಿವಕುಮಾರ್ ಜಗನ್ನಾಥ ದೇವಾಂಗರವರಿಗೂ ಹಾಗೂ ಮೃತರ ಕುಟುಂಬದ ಎಲ್ಲಾ ಸದಸ್ಯರಿಗೂ ಭಗವಂತನು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.

    ಈ ನೇತ್ರದಾನದಲ್ಲಿ ಕಾರ್ಯದಲ್ಲಿ ಭಾಗವಹಿಸಿದ ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರದ ವೈದ್ಯರು ,ದೇವರಾಜ್ ಮತ್ತು ಸ್ವಾಮಿ ವಿವೇಕಾನಂದ ಶಾಲೆಯ ಆರ್.ಲಕ್ಷ್ಮೀನಾರಾಯಣ್ ರವರಿಗೂ, ಡಿ.ಸಿ.ಜಗನ್ನಾಥ್ (ಕಂಪ್ಯೂಟರ್) ಉಪಸ್ಥಿತರಿದ್ದರು.

     

    ನೇತ್ರಸಂಗ್ರಹಣಾ ಕೇಂದ್ರದ ಮಾಹಿತಿ-
    ಅಭಿಷೇಕ್ ನೇತ್ರಧಾಮ, ಲಯನ್ಸ್ ಕ್ಲಬ್, ಎಂ.ಎ.ಬಿ.ಎಲ್. ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಶಾಲೆ, ದೊಡ್ಡಬಳ್ಳಾಪುರ.
    ದೂರವಾಣಿ ಸಂಖ್ಯೆ :
    9742202650, 9036797177, 9902884008, 9844179963
    8970821216

  • *ಏಪ್ರಿಲ್ 26 ರಂದು ನಡೆಯುವ ಮತದಾನಕ್ಕೆ ಸಕಲ ಸಿದ್ಧತೆ :ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 24(ವಿಜಯಮಿತ್ರ ):-ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26 ರಂದು ನಡೆಯುವ ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್.ಶಿವಶಂಕರ್ ಅವರು ಹೇಳಿದರು.

    ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಚುನಾವಣಾ ವೇಳಾಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ನಾಲ್ಕು ವಿಧಾನಸಭಾ ಮತಕ್ಷೇತ್ರ ಇದ್ದು ಚುನಾವಣಾ ಮತದಾರ ಪಟ್ಟಿಯಲ್ಲಿ ಪ್ರಕಟಿಸಲಾಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ 8,98,448 ಮತದಾರರು ಇದ್ದಾರೆ. ಇದರಲ್ಲಿ 4,44,084 ಪುರುಷರು, 4,54,221 ಮಹಿಳೆಯರು ಹಾಗೂ 143 ಇತರೆ ಮತದಾರರು ಇದ್ದಾರೆ. ಒಟ್ಟು ಮತದಾರರ ಸಂಖ್ಯೆಯಲ್ಲಿ 18 ರಿಂದ 19 ವರ್ಷದೊಳಗಿನ 23,819 ಯುವ ಮತದಾರರು, 85 ವರ್ಷ ಮೇಲ್ಪಟ್ಟ 10,009 ಹಿರಿಯ ಮತದಾರರು , 13,224 ಅಂಗವಿಕಲ ಮತದಾರರು ಹಾಗೂ 120 ಸೇವಾ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

     

     

    ಜಿಲ್ಲೆಯ 4 ತಾಲೂಕುಗಳಲ್ಲಿನ ಮತದಾರರ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರೇ ಇದ್ದಾರೆ. ದೊಡ್ಡಬಳ್ಳಾಪುರದಲ್ಲಿ ಒಟ್ಟು 2,20,268 ಮತದಾರರಿದ್ದು, ಅದರಲ್ಲಿ 1,11,346 ಮಹಿಳಾ ಮತದಾರರು ಹಾಗೂ 1,08,921 ಪುರುಷ ಮತದಾರರಿದ್ದಾರೆ. ಹೊಸಕೋಟೆಯಲ್ಲಿ ಒಟ್ಟು 2,39,157 ಮತದಾರರಿದ್ದು, ಅದರಲ್ಲಿ 1,20,474 ಮಹಿಳೆ ಹಾಗೂ 1,18,662 ಪುರುಷ ಮತದಾರರು ಇದ್ದಾರೆ. ದೇವನಹಳ್ಳಿಯಲ್ಲಿ ಒಟ್ಟು 2,16,704 ಮತದಾರರಿದ್ದು, 1,09,443 ಮಹಿಳಾ ಹಾಗೂ 1,07,245 ಪುರುಷ ಮತದಾರರಿದ್ದಾರೆ. ನೆಲಮಂಗಲದಲ್ಲಿ 2,22,319 ಮತದಾರರ ಪೈಕಿ 1,12,958 ಮಹಿಳೆ ಹಾಗೂ 1,09,256 ಪುರುಷ ಮತದಾರರಿದ್ದಾರೆ.

     

    ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತದಲ್ಲಿ 1 ಸಾವಿರ ಪುರುಷರಿಗೆ 1023 ಮಹಿಳೆಯರಿದ್ದಾರೆ. ಅದರಲ್ಲಿ ದೊಡ್ಡಬಳ್ಳಾಪುರದಲ್ಲಿ 1022, ಹೊಸಕೋಟೆಯಲ್ಲಿ 1015, ದೇವನಹಳ್ಳಿ 1020 ಹಾಗೂ ನೆಲಮಂಗಲದಲ್ಲಿ ಅತಿ ಹೆಚ್ಚು 1034 ಲಿಂಗಾನುಪಾತ ಕಂಡುಬಂದಿದೆ.

     

    ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಒಟ್ಟಾಗಿ 1137 ಮತಗಟ್ಟೆಗಳಿವೆ. ಅದರಲ್ಲಿ ದೊಡ್ಡಬಳ್ಳಾಪುರ 276, ಹೊಸಕೋಟೆ 293, ದೇವನಹಳ್ಳಿ 292 ಹಾಗೂ ನೆಲಮಂಗಲ್ಲಿ 276 ಮತಗಟ್ಟೆಗಳಿದೆ.

     

    ಜಿಲ್ಲೆಯಲ್ಲಿ 1137 ಮತಗಟ್ಟೆಗಳ ಪೈಕಿ 960 ಸಾಮಾನ್ಯ ಮತಗಟ್ಟೆಗಳು,177 ಸೂಕ್ಷ್ಮ ಮತಗಟ್ಟೆಗಳು ಹಾಗೂ 13 ಅತೀ ಸೂಕ್ಷ್ಮ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

     

    *ಪ್ರತಿಯೊಬ್ಬ ಮತದಾರರು ಮತ ಚಲಾಯಿಸಲು ಜಿಲ್ಲಾಧಿಕಾರಿ ಮನವಿ*

     

    ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಇತರೆ ವಿಷಯಗಳ ಬಗ್ಗೆ ಸಾರ್ವಜನಿಕರಿಂದ ಸ್ವೀಕರಿಸುವ ದೂರು / ಅಹವಾಲುಗಳನ್ನು ನಿವಾರಿಸುವ ಸಲುವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ಕಛೇರಿ ಹಾಗೂ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿರವರ ಕಛೇರಿಗಳಲ್ಲಿ ದೂರು ನಿವಾರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ.

    ಒಟ್ಟಾರೆ ಈ ಚುನಾವಣೆಯು ಅತ್ಯಂತ ಶಾಂತ ರೀತಿಯಿಂದ ಮುಕ್ತವಾಗಿ, ನ್ಯಾಯ ಸಮ್ಮತವಾಗಿ ಹಾಗೂ ನಿಸ್ಪಕ್ಷಪಾತವಾಗಿ ಜರುಗುವಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಲು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂಧಿ ವರ್ಗದವರಿಗೆ ಕಟ್ಟುನಿಟ್ಟಾಗಿ ನಿರ್ದೇಶಿಸಲಾಗಿದೆ. ಮತಗಟ್ಟೆ ಕೇಂದ್ರಗಳಿಗೆ ಮತದಾರರು ಮೊಬೈಲ್/ಪೋನ್ ಗಳನ್ನು ತೆಗೆದುಕೊಂಡು ಹೋಗುವದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಸಹ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬರು ಮತ ಚಲಾಯಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮತದಾರರಲ್ಲಿ ಮನವಿ ಮಾಡಿದರು.

     

    ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್ ಅನುರಾಧ ಅವರು ಮಾತನಾಡಿ ಸಾರ್ವತ್ರಿಕ ಲೋಕಸಭಾ ಚುನಾವಣಾ ಸಂಬಂಧ ಮತದಾನ ಹೆಚ್ಚಿಸಲು ಜಿಲ್ಲೆಯಲ್ಲಿ ಸುಮಾರು 1600 ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಂಜಿನ ಮೆರವಣಿಗೆ, ಯುವ ಮತದಾರರನ್ನು ಆಕರ್ಷಿಸಲು ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾವಳಿ, ಸ್ವಚ್ಛತಾ ವಾಹಿನಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ, ನಗರ ಪ್ರದೇಶಗಳಲ್ಲಿನ ಮತದಾರರನ್ನು ಸೆಳೆಯಲು ಬೈಕ್ ಮತ್ತು ಸೈಕಲ್ ಜಾಥ, ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಎಲ್ಲಾ ವರ್ಗದ ಮತದಾರರನ್ನು ಸೆಳೆಯಲು ವಿಕಲಚೇತನರಿಂದ ಬೈಕ್ ಜಾಥ, ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ಕಿರುಚಿತ್ರ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಳವಡಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಮತಗಟ್ಟೆವಾರು ಕಾರಣಗಳನ್ನು ವಿಮರ್ಶಿಸಿ ಮೈಕ್ರೋ ಪ್ಲಾನ್ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಿಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

     

    ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ನೆರಳು, ಕ್ಯೂ ಮ್ಯಾನೇಜ್ಮೆಂಟ್ (QUE MANAGEMENT) ಮಾಡಲು ಕ್ರಮವಹಿಸಲಾಗಿದೆ. 03 ಮತ್ತು ಹೆಚ್ಚು ಮತಗಟ್ಟೆಗಳಿರುವ ಕೇಂದ್ರಗಳಲ್ಲಿ ಓಟರ್ ಅಸಿಸ್ಟೆಂಟ್ ಬೂತ್ (VOTER ASSISTANCE BOOTH) ಗಳನ್ನು ತೆರೆಯಲು ನಿರ್ದೇಶನ ನೀಡಲಾಗಿದೆ. ವಿಕಲಚೇತನರಿಗೆ ಹಾಗೂ ಅಶಕ್ತರಿಗೆ ವೀಲ್ ಚೇರ್ ಹಾಗೂ ರ್ಯಾಂಪ್ (RAMP) ಗಳ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆ ಅಗತ್ಯವಿದ್ದಲ್ಲಿ ಎನ್ಕೊರ್ (ENCORE) ಹಾಗೂ ಸಕ್ಷಮ್ (SAKSHAM) ಅಪ್ಲಿಕೇಶನ್ ನಲ್ಲಿ ನೋಂದಣಿ ಮಾಡಬಹುದಾಗಿದೆ. ಒಟ್ಟು 1137 ಬೂತ್ ಗಳ ಪೈಕಿ 36 ವಿಶೇಷ ಬೂತ್ ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

    *20,97,500 ಲಕ್ಷ ರೂಪಾಯಿ ಗಳ ನಗದು ವಶ*

    ಮಾದರಿಯ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೂ ಅಬಕಾರಿ ನೀತಿ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 676 ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು 1,73,995 ಲೀಟರ್ ಗಳಷ್ಟು ಮಧ್ಯ ವಶಪಡಿಸಿಕೊಳ್ಳಲಾಗಿದೆ ಇದರ ಮೌಲ್ಯ ಸುಮಾರು 7,85,39,418 ಕೋಟಿ ರೂಪಾಯಿ ಗಳಾಗಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 20,97,500 ಲಕ್ಷ ರೂಪಾಯಿ ಗಳ ನಗದನ್ನು ವಶಪಡಿಸಿಕೊಳ್ಳಾಗಿದೆ. ಒಟ್ಟು 95,14,600 ಲಕ್ಷ ರೂಪಾಯಿ ಮೌಲ್ಯದ 16.90 ಕೆ.ಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದುವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 3900 ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿ ಪಂ ಸಿಇಓ ತಿಳಿಸಿದರು.

    ಪತ್ರಿಕಾಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ ಉಪಸ್ಥಿತರಿದ್ದರು.

  • *ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 23(ವಿಜಯಮಿತ್ರ) : ಸಾರ್ವತ್ರಿಕ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಏಪ್ರೀಲ್ 26 ರಂದು ಮತದಾನ ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದೆ.

     

     

    ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶಾಂತಿ ಪಾಲನೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಶಾಂತಿಯುತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ ಮತ್ತು ಮತದಾನ ಮುಕ್ತಾಯವಾಗುವ 48 ಗಂಟೆಗಳ ಅವಧಿಯೊಳಗಿನ ದಿನದಂದು ಚುನಾವಣಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಏಪ್ರಿಲ್ 24 ರಂದು ಸಂಜೆ 5:00 ಗಂಟೆಯಿಂದ ಏಪ್ರೀಲ್ 26 ರ ಮಧ್ಯರಾತ್ರಿ 12.00 ಗಂಟೆಯವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮದ್ಯ ಉತ್ಪಾದನೆ, ಮಾರಾಟ, ಹಂಚಿಕೆ, ಸಾಗಾಣಿಕೆ, ಶೇಖರಣೆ, ಇತ್ಯಾದಿಗಳನ್ನು ನಿಷೇಧಿಸಿ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ/ಬಿಯರ್/ವೈನ್ ತಯಾರಿಕಾ ಡಿಸ್ಟಿಲರಿ/ಬ್ರಿವರಿ/ವೈನರಿಗಳನ್ನು, ಸ್ಟಾರ್ ಹೋಟೆಲ್ಗಳನ್ನು ಮುಚ್ಚಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ಆದೇಶಿಸಿದ್ದಾರೆ.

  • *ವಾರ್ತಾ ಇಲಾಖೆ ವತಿಯಿಂದ ವರನಟ ಡಾ. ರಾಜಕುಮಾರ ರವರ ಜನ್ಮದಿನಾಚರಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 24(ವಿಜಯಮಿತ್ರ): ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಹಾಗೂ ವರನಟ ಡಾ. ರಾಜಕುಮಾರ ರವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಛೇರಿಯಲ್ಲಿ ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.

     

    ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಎಸ್. ಶಂಕರಪ್ಪ ಅವರು ಡಾ. ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

     

    ಕಾರ್ಯಕ್ರಮದಲ್ಲಿ ವಾರ್ತಾ ಸಹಾಯಕರಾದ ಹೇಮಾವತಿ ಜೆ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • *’ಕನ್ನಡ ಅಭಿಮಾನದ ದಿನ’ವಾಗಿ ಡಾ.ರಾಜ್ ಕುಮಾರ್ ಜನ್ಮದಿನದ ಆಚರಣೆ*

    ದೊಡ್ಡಬಳ್ಳಾಪುರ ಏಪ್ರಿಲ್ 25 (ವಿಜಯ ಮಿತ್ರ ) : ಕನ್ನಡ ರಂಗಭೂಮಿಯಿಂದ ಚಲನಚಿತ್ರ ರಂಗಕ್ಕೆ ಬಂದ ಬಹುಮುಖಿ ಪ್ರತಿಭೆಯ ಮೇರು ಕಲಾವಿದ ಡಾ.ರಾಜ್ ಕುಮಾರ್ ಕನ್ನಡ ಚಲನಚಿತ್ರ ನಟರಾಗಿ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ಡಾ.ರಾಜ್ ಕುಮಾರ್ ಗಾಯಕರಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕ ಕೋಶಾಧ್ಯಕ್ಷ ಜಿ.ಸುರೇಶ್ ತಿಳಿಸಿದರು.

     

     

    ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ  ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾ ಮಂದಿರದಲ್ಲಿ ನಡೆದ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಡಾ.ರಾಜ್ ಕುಮಾರ್ ಕನ್ನಡಿಗರ ಮೇಲೆ ಬೀರಿದ ಪ್ರಭಾವ ಅಪಾರವಾಗಿದೆ. ಚಲನಚಿತ್ರಗಳಲ್ಲಿ ಡಾ.ರಾಜ್ ಕುಮಾರ್ ನಿರ್ವಹಿಸಿದ ಪಾತ್ರಗಳು ವೈವಿಧ್ಯಮಯವಾಗಿವೆ. ಜನಸಾಮಾನ್ಯರ ಬದುಕಿಗೆ ಸ್ಪಂದಿಸುವ ಅವರ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಬಹುಕಾಲ ಉಳಿಯುವಂತಾಯಿತು. ಕನ್ನಡ ನಾಡು ನುಡಿಯ ವಿಚಾರದಲ್ಲೂ ಡಾ.ರಾಜ್ ಕುಮಾರ್ ಮುಂಚೂಣಿಯಲ್ಲಿದ್ದರು ಎಂಬುದಕ್ಕೆ ಗೋಕಾಕ್ ಚಳುವಳಿ ಸಾಕ್ಷಿಯಾಗಿ ಎಂದರು.

     

     

     

    ಕನ್ನಡ ನಾಡಿನ ಸಾಂಸ್ಕೃತಿಕ ನಾಯಕರಾಗಿರುವ ಡಾ.ರಾಜ್ ಕುಮಾರ್ ರಾಜಕುಮಾರ ಅವರ ವ್ಯಕ್ತಿತ್ವ ಮತ್ತು ಕಲಾ ಪ್ರತಿಭೆ ಒಂದು ವಿಶ್ವವಿದ್ಯಾಲಯವಿದ್ದಂತೆ. ಅಭಿಮಾನಿಗಳನ್ನು ದೇವರೆಂದು, ನಿರ್ಮಾಪಕರನ್ನು ಅನ್ನದಾತರೆಂದು ಕರೆಯುವ ಮೂಲಕ‌ ಸರಳ ಮತ್ತು ಸಜ್ಜನಿಕೆಗೆ ಹೆಸರಾಗಿದ್ದರು.‌ ಇಂತಹ ಮೇರು ವ್ಯಕ್ತಿಗೆ ಭಾರತರತ್ನ ಪುರಸ್ಕಾರ ದೊರೆಯದಿರುವು ವಿಷಾದನೀಯ ಸಂಗತಿಯಾಗಿದೆ ಎಂದರು.

     

     

    ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ಡಾ.ರಾಜ್ ಕುಮಾರ್ ತಾವು ಅಭಿನಯ ಮಾಡುವ ಪಾತ್ರಗಳಿಗೆ ಸಾಕಷ್ಟು ಪೂರ್ವ ಸಿದ್ದತೆ ಮಾಡುತ್ತಿದ್ದರು ಎಂಬ ವಿಚಾರ ಗಮನಾರ್ಹವಾಗಿದೆ. ಮೊದಲು ಕಲಿಕೆ ನಂತರ ಅಭಿನಯ ಮಾಡುತ್ತಿದ್ದರು. ಅವರು ಕನ್ನಡ ಚಿತ್ರರಂಗಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ನಟನೆ ಮತ್ತು ಗಾಯನದ ಮೂಲಕ ಕನ್ನಡ ಚಿತ್ರರಂಗವನ್ನು ಉನ್ನತಮಟ್ಟಕ್ಕೆ ಏರಿಸಿದರು. ಇದು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುವ ವ್ಯಕ್ತಿಗಳಿಗೆ ದಾರಿದೀಪವಾಗಿದೆ ಎಂದರು.

     

     

    ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಮಾತನಾಡಿ, ಡಾ.ರಾಜ್ ಕುಮಾರ್ ಅವರು ಅಭಿನಯಿಸಿದ ಪಾತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿವೆ. ಸಾಮಾಜಿಕ ಕಳಕಳಿ, ಆದರ್ಶ ವ್ಯಕ್ತಿತ್ವ, ನೀತಿ, ಪರೋಪಕಾರ, ಸರಳತೆ, ಸಜ್ಜನಿಕೆಯ ಪಾತ್ರಗಳು ಪ್ರೇಕ್ಷಕರ ಮನಸ್ಸು ಪರಿವರ್ತನೆಯಲ್ಲೂ ಪ್ರಮುಖ ಪಾತ್ರ ವಹಿಸಿವೆ. ಅಮೇರಿಕಾದ ಪ್ರತಿಷ್ಠಿತ ಕೆಂಟಕಿ ಕರ್ನಲ್ ಪ್ರಶಸ್ತಿ‌ ಪುರಸ್ಕಾರ ಪಾತ್ರವಾಗಿರುವ ಏಕೈಕ ಭಾರತೀಯ ಕಲಾವಿದರಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

     

     

    ಕವಯತ್ರಿ ಆಶಾಗುಡ್ಡದಹಳ್ಳಿ ಮಾತನಾಡಿ, ಡಾ.ರಾಜ್ ಕುಮಾರ್ ಅವರು ಕನ್ನಡ ಅಸ್ಮಿತೆಯಾಗಿದ್ದಾರೆ. ಕನ್ನಡ ಸಾಹಿತ್ಯದ ಹಲವಾರು ದಾಸರು, ಶರಣರು, ಪೌರಾಣಿಕ, ಸಾಮಾಜಿಕ ಕಥನಗಳು ಡಾ.ರಾಜ್ ಕುಮಾರ್ ಅಭಿನಯದ ಮೂಲಕ ಕನ್ನಡ ಸಾಹಿತ್ಯವು ಜನರಿಗೆ ತಲುಪಿತು. ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಡಾ.ರಾಜ್ ಕುಮಾರ್ ಅವರು ಕನ್ನಡ ಅಭಿಮಾನಕ್ಕೆ ಸದಾ ಸ್ಪೂರ್ತಿ ಆಗಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಕನ್ನಡ ಹಿರಿಯ ಹೋರಾಟಗಾರ ಡಿ.ಎಲ್.ಚೌಡಪ್ಪ, ಮುಖ್ಯಶಿಕ್ಷಕ ಕೆ.ವಿ.ವೆಂಕಟರೆಡ್ಡಿ, ಕನ್ನಡಪರ ಹೋರಾಟಗಾರ ಗುರುರಾಜಪ್ಪ,   ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ  ಪಿ.ಗೋವಿಂದರಾಜು, ಕೋಶಾಧ್ಯಕ್ಷ. ಸಾ.ಲ.ಕಮಲನಾಥ್,  ಗೌರವ ಕಾರ್ಯದರ್ಶಿ ಎ.ಜಯರಾಮ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಪ್ರತಿನಿಧಿ ಚಿಕ್ಕತುಮಕೂರು ಮುನಿರಾಜು, ನವೋದಯ ವಿದ್ಯಾಲಯ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜು, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ್, ಬಾಶೆಟ್ಟಿ ಪ್ರೇರಣಾ ಸಂಸ್ಥೆಯ ನೇತ್ರಾವತಿ, ಮುನಿರತ್ನಮ್ಮ, ದರ್ಗಾಜೋಗಿಹಳ್ಳಿಮಲ್ಲೇಶ್, ಷಫೀರ್, ಕಲಾವಿದ ಹಿತೇಶ್ ಮೊದಲಾದವರು ಭಾಗವಹಿಸಿದ್ದರು.