Blog

  • *ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿ.ಚುಂಚೆಗೌಡ.*

     

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಹಲವು ಯೋಜನೆಗಳ ಮೂಲಕ ನಮ್ಮ ದೊಡ್ಡಬಳ್ಳಾಪುರ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು.ಮಾಜಿ ಶಾಸಕರಾದ ವೆಂಕಟರಮಣಯ್ಯ ಸೇರಿದಂತೆ ಹಲವು ಹಿರಿಯರ ಮಾರ್ಗದರ್ಶನದೊಂದಿಗೆ ಸರ್ವ ಸದಸ್ಯರ ಸಲಹೆಯೊಂದಿಗೆ ಉತ್ತಮ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ನೂತನ ಯೋಜನಾ ಪ್ರಾಧಿಕಾರದ ಅದ್ಯಕ್ಷ ವಿ.ಚುಂಚೆಗೌಡ ತಿಳಿಸಿದರು.

     

    ದೊಡ್ಡಬಳ್ಳಾಪುರ ನಗರದ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೊಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ರಾಜ್ಯದ ನಾಯಕರು ಹಾಗೂ ತಾಲ್ಲೂಕಿನ ಮಾಜಿ ಶಾಸಕರ ಸತತ ಪ್ರಯತ್ನದಿಂದಾಗಿ ಹಾಗೂ ನಮ್ಮ ನಗರಕ್ಕೆ ಯೋಜನಾ ಪ್ರಾಧಿಕಾರದ ಅವಶ್ಯಕತೆ ಇದ್ದ ಕಾರಣ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ರಚನೆಯಾಯಿತು.ಈ ಯೋಜನಾ ಪ್ರಾಧಿಕಾರವು ಮುಂದೆ ಮತ್ತಷ್ಟು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಸಿದ್ದವಿದೆ ಎಂದರು

     

    ದೊಡ್ಡಬಳ್ಳಾಪುರ ಯೋಜನಾ  ಪ್ರಾಧಿಕಾರದ ಅಸ್ತಿತ್ವದಿಂದ ಬಹಳ ಮುಖ್ಯವಾಗಿ ಕೆರೆಗಳ ಅಭಿವೃದ್ಧಿ ಮಾಡಲಾಗುವುದು ತಾಲ್ಲೂಕಿನ ಸರ್ವಂಗಿಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಹಿಂದಿನಸಾಲಿನಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ, ಪ್ರಸ್ತುತ ಇರುವ ಶಾಸಕರು ಅನುದಾನ ಪಡೆದು ಅಭಿವೃದ್ಧಿ ಮಾಡಬೇಕಿದೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಹಲವರಿಗೆ ನಮ್ಮ ಯೋಜನೆಗಳಿಂದ ಬಡಜನರು, ಕೂಲಿಕಾರ್ಮಿಕರು ಹಾಗೂ ರೈತರಿಗೆ ಬಹಳ ಉಪಯುಕ್ತವಾಗಿದೆ ಎಂಬುದರ ಅರಿವಾಗಬೇಕಿದೆ.ಈ ಹಿಂದೆ ಅಧಿಕಾರದಲ್ಲಿದ ಬಿಜೆಪಿ ಸರ್ಕಾರ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ರಿಯಾಶೀಲತೆಗೆ ಉತ್ತಮ ಉದಾಹರಣೆ ಎಂದರು.

     

    ಈ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ನೂತನ ಸದಸ್ಯರುಗಳಾದ ರಾಮಕೃಷ್ಣಯ್ಯ.ಟಿ, ಅಂಜನಮೂರ್ತಿ, ಅಪ್ಪಿ ವೆಂಕಟೇಶ್ ಸೇರಿದಂತೆ ತಾಲೂಕಿನ ಮುಖಂಡರು ನಗರಸಭಾ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

  • *ರಾಷ್ಟ್ರೀಯ ಥ್ರೋ ಬಾಲ್ ಪಂದ್ಯಾವಳಿಗೆ ದೊಡ್ಡಬಳ್ಳಾಪುರದ ವಿದ್ಯಾರ್ಥಿ ಆಯ್ಕೆ : ಹಳೇ ವಿದ್ಯಾರ್ಥಿ ಸಂಘದವತಿಯಿಂದ ಕ್ರೀಡಾಪಟುವಿಗೆ ಪ್ರೋತ್ಸಹಧನದ ಚೆಕ್ ವಿತರಣೆ*

    ನಮ್ಮ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜೆಡಿಎಸ್ ಮುಖಂಡ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೇಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಶಾಂತಿನಗರ ತಿಳಿಸಿದರು

     

    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ ಎಸ್ಸಿ ವಿಭಾಗದಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ದೀಕ್ಷಿತ. ಆರ್. ಇವರು ಬಿಹಾರದಲ್ಲಿ ನಡೆಯುತ್ತಿರುವ ಥ್ರೋ ಬಾಲ್ ಆಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

     

    ಈ ವಿಚಾರ ತಿಳಿದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಹೆಚ್. ವಿ.ರವರು ಸಂಘದ ಪರವಾಗಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರೋತ್ಸಾಹ ಧನದ ಚೆಕ್ಕನ್ನು ನೀಡಿ ಅಭಿನಂದಿಸಿದರು

     

    ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ತಾಲ್ಲೂಕಿನ ಪ್ರಥಮ ದರ್ಜೆ ಕಾಲೇಜಿನ ಅತಿ ಹೆಚ್ಚು ವಿಧ್ಯಾರ್ಥಿಗಳು ಈ ವರ್ಷದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಗಳಿಗೆ ಆಯ್ಕೆ ಆಗಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ನಮ್ಮ ತಾಲ್ಲೂಕು ಹಾಗೂ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದು. ಕ್ರೀಡಾಪಟುಗಳಿಗೆ ಶುಭವಾಗಲಿ ಎಂದು ಹಾರೈಸಿದರು.

     

    ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೊಫೆಸರ್ ರಾಮಚಂದ್ರ ಗೌಡ, ಅಧ್ಯಪಕರಾದ ಶ್ರೀನಿವಾಸ್, ಸಂಘದ ಖಜಾಂಜಿ ಮಹೇಶ್,ನಿರ್ದೇಶಕರಾದ ರಾಜೇಂದ್ರ ಉಪಸ್ಥಿತರಿದ್ದರು….

  • ಕಣಿವೆ ಬಸವಣ್ಣ ದೇವಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಆಚರಣೆ : ದೇವಾಲಯಗೆ ಬರುವ ಭಕ್ತಾದಿಗಳಿಗೆ ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿ ವತಿಯಿಂದ ಅರವಂಟಿಕೆ ಹಾಗೂ ಪ್ರಸಾದ ವಿನಿಯೋಗ ಆಯೋಜನೆ

    ಚಿಕ್ಕಬಳ್ಳಾಪುರ : ಸರ್ವರಿಗೂ ಅನುಕೂಲವಾಗುವ ಸಮಾಜಮುಖಿ ಕಾರ್ಯಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನು ನಮ್ಮ ಸೇವಾ ಸಮಿತಿಯ ವತಿಯಿಂದ ನೆಡೆಸುತ್ತಿದ್ದೇವೆ. ಶಿವರಾತ್ರಿ ಪ್ರಯುಕ್ತ ಸರ್ವ ಸದಸ್ಯರ ಸಹಕಾರದಿಂದ ಕಣಿವೆ ಬಸವಣ್ಣ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಚಂದ್ರಶೆಟ್ಟಿ ತಿಳಿಸಿದರು

     

    ಮಹಾಶಿವರಾತ್ರಿ ಹಬ್ಬದ ಹಿನ್ನಲೆ ಶ್ರೀ ಕ್ಷೇತ್ರ ನಂದಿಕಣಿವೆ ಬಸವಣ್ಣ ದೇವಾಲಯದಲ್ಲಿ ಸರ್ವ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ಮಹಾಶಿವರಾತ್ರಿ ಹಬ್ಬದಂದು ಜಾಗರಣೆ ಹಾಗೂ ಉಪವಾಸದ ಆಚರಣೆ ಮಾಡುವ ಮೂಲಕ ದೇವಾಲಯಕ್ಕೆ ಭೇಟಿ ಕೊಡುವ ಭಕ್ತದಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಪವಿತ್ರವಾದ ಮಹಾಶಿವರಾತ್ರಿಯಂದು ದೇವಾಲಯಕ್ಕೆ ಆಗಮಿಸುವ ಭಕ್ತದಿಗಳಿಗೆ ನಮ್ಮ ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿಯ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪ್ರಸಾದವಿನಿಯೋಗ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ ನಮ್ಮ ಸೇವಾ ಸಮಿತಿಯ ಸರ್ವ ಸದಸ್ಯರು ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವುದು ಸಂತಸ ತಂದಿದೆ ಎಂದರು.

     

    ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಪ್ರಸನ್ನ ಕುಮಾರ್,ವೆಂಕಟೇಶ್,ನಾರಾಯಣಸ್ವಾಮಿ, ಮಲ್ಲಿಕಾರ್ಜುನ್,ಪಾಲನ್ ಜೋಗಳ್ಳಿ ರಾಜು,ರಕ್ಷಿತ್ , ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಲೋಕಸಭಾ ಚುನಾವಣೆಯ ಪೂರ್ವ ತಯಾರಿ ಕುರಿತು ಸಭೆ : ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಸೂಚನೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 7 : ಮುಂಬರುವ ಲೋಕಸಭಾ ಚುನಾವಣೆಯನ್ನು ಅಧಿಕಾರಿಗಳ ಸಮನ್ವಯತೆ, ಸಹಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡೊಣ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಹೇಳಿದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಇಂದು ನಡೆದ ಮುಂಬರುವ ಲೋಕಸಭಾ ಚುನಾವಣೆಯ ಪೂರ್ವ ತಯಾರಿ ಕುರಿತ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

     

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 08 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಚಿಕ್ಕಬಳ್ಳಾಪುರ ಜಿಲ್ಲೆಯ 3 ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕು ಹಾಗೂ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಕ್ಷೇತ್ರ ಬರುತ್ತದೆ. ಈ 8 ಕ್ಷೇತ್ರಗಳಿಗೆ ಚಿಕ್ಕಬಳ್ಳಾಪುರ ಕೇಂದ್ರ ಸ್ಥಾನವಾಗಿದೆ. ಹೀಗಾಗಿ ಇಂದಿನ ಸಭೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕು ಹಾಗೂ ಯಲಹಂಕ ಕ್ಷೇತ್ರದ ಚುನಾವಣೆ ಅಧಿಕಾರಿಗಳ ಸಹಕಾರ ಸಭೆ ಇದಾಗಿದ್ದು. ಚುನಾವಣೆ ಯಶಸ್ವಿಯಾಗಿ ನಡೆಯಲು ನಿಮ್ಮೆಲ್ಲರ ಸಹಕಾರ ಅಗತ್ಯ, ಎಲ್ಲರು ಜೊತೆಯಾಗಿ ಕೆಲಸ ಮಾಡೋಣ ಎಂದರು.

     

    ಚುನಾವಣೆಗೆ ಈಗಾಗಲೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಅಧಿಕಾರಿಗಳು ಪ್ರತಿಯೊಂದು ಮತಗಟ್ಟೆಯ ಸ್ಥಿತಿಗತಿ ಪರಿಶೀಲಿಸಿ, ಎಲ್ಲಾ ಮತಗಟ್ಟೆಗಳ ಮಾಹಿತಿ ಪಡೆದಿರಬೇಕು. ಮತದಾರರ ಪಟ್ಟಿ, ಮತಗಟ್ಟೆಗಳ ವಿವರ ಕರ್ತವ್ಯ ನಿರತ ಅಧಿಕಾರಿಗಳಿಗೆ ತಿಳಿದಿರಬೇಕು. ಎಂ.ಸಿ.ಸಿ, ಎಫ್.ಎಸ್.ಟಿ, ವಿ.ವಿ.ಟಿ ಟೀಮ್, ರಿಟರ್ನಿಂಗ್ ಆಫೀಸರ್ ಗಳಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಇ.ವಿ.ಎಂ ಮಿಷನ್ಗಳ ಭದ್ರತೆ, ಚೆಕ್ ಪೋಸ್ಟ್ ಗಳ ಪರಿಶೀಲನೆ, ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ. ಸಮರ್ಪಕವಾಗಿ, ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಪಿ.ಎನ್ ರವೀಂದ್ರ ಅವರು ಹೇಳಿದರು.

     

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ ಅವರು ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಹೆಚ್ಚಿನ ಜವಾಬ್ದಾರಿ ನಮ್ಮ ಮೇಲಿದೆ. ಜಿಲ್ಲೆಯಲ್ಲಿ ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಅಧಿಕಾರಿಗಳಿಗೆ ವಿವಿಧ ಹಂತದಲ್ಲಿ ತರಬೇತಿ ನೀಡಲಾಗಿದೆ. ಜಿಲ್ಲೆಯ ಪ್ರತಿಯೊಂದು ಮತಗಟ್ಟೆಯ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ ಎಂದು ಮತ್ತೊಮ್ಮೆ ಅಧಿಕಾರಿಗಳಿಗೆ ಸೂಚಿಸಿದರು. ಯಾವ ಸಂದರ್ಭದಲ್ಲಿ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು. ನಾವೆಲ್ಲರೂ ಸನ್ನದ್ಧರಾಗಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.

     

    ಸಭೆಯಲ್ಲಿ ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್ ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಡಾ.ಎನ್ ತಿಪ್ಪೇಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲಯ ಚುನಾವಣಾಧಿಕಾರಿಗಳು, ತಹಶೀಲ್ದಾರ್ ಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಡಿವೈಎಸ್ಪಿ ಗಳು ಸೇರಿದಂತೆ ಇತರೆ ಚುನಾವಣೆ ಸಿಬ್ಬಂದಿ ಉಪಸ್ಥಿತರಿದ್ದರು.

  • ಕೆಐಎಡಿಬಿ ಸೂಕ್ತ ಬೆಲೆ ನಿಗದಿ ಪಡಿಸುವಂತೆ ಅಗ್ರಹಿಸಿ ಮಾರ್ಚ್ 11ಕ್ಕೆ ರೈತರ ಜಾಥಾ : ರೈತರ ಸಮಸ್ಯೆ ಬಗೆಹರಿಸದ ಪಕ್ಷದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರದ ಎಚ್ಚರಿಕೆ

    ದೊಡ್ಡಬಳ್ಳಾಪುರ (ಮಾರ್ಚ್ 07 ):ಕೊನಘಟ್ಟ, ನಾಗದೇನಹಳ್ಳಿ, ಆದಿನಾರಾಯಣಹೊಸಹಳ್ಳಿ, ಗ್ರಾಮದ ರೈತರುಗಳು ಕೆಐಎಡಿಬಿ ಗೆ 971 ಎಕರೆ ಭೂಸ್ವಾದಿನವಾಗಿದ್ದು 2013 ರ ಕಾಯ್ದೆಯ ಮಾನದಂಡದಂತೆ 1:4 ರಂತೆ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ರೈತರು ಕಳೆದ 53 ದಿನಗಳಿಂದ ಸತತವಾಗಿ ಅನಿರ್ಧಿಷ್ಟಾವಧಿ ಧರಣಿ ನೆಡೆಸುತ್ತಿದ್ದು. ರೈತರಿಗೆ ಈವರೆಗೂ ಯಾವುದೇ ಪ್ರತಿಫಲ ಸಿಗದ ಕಾರಣ ಮಾರ್ಚ್ 11ರಂದು ರೈತರು ಜಾಥಾ ಹೊರಡುವ ಮೂಲಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಮಾಜಿ ಟಿಎಪಿಎಂಸಿಎಸ್ ಅಧ್ಯಕ್ಷರಾದ ಎಂ.ಆನಂದ್ ತಿಳಿಸಿದರು.

    ನಗರದ ಪ್ರವಾಸಿಮಂದಿರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಸತತ ಹೋರಾಟ ನೆಡೆಸಿದರು ಇಂದಿಗೂ ನಮಗೆ ಯುವುದೇ ರೀತಿಯ ನ್ಯಾಯ ಸಿಕ್ಕಿರುವುದಿಲ್ಲ. ಆದ್ದರಿಂದ ಸಾಮೂಹಿಕವಾಗಿ ರೈತರು ಶಾಂತ ರೀತಿಯಲ್ಲಿ ತಮ್ಮ ಸಮಸ್ಯೆಯನ್ನು ಲಿಖಿತರೂಪದಲ್ಲಿ ಅಧಿಕಾರಿಗಳಿಗೆ ತಲುಪಿಸುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಕೆಐಎಡಿಬಿ ಭೂಸ್ವಾಧೀನಕ್ಕೆ ಒಳಪಟ್ಟಿರುವ ನಾಲ್ಕು ಗ್ರಾಮದ ರೈತರುಗಳು ದಿನಾಂಕ:11-03-2024 ರಂದು ಹೋರಾಟ ಸಮಿತಿ ಸ್ಥಳದಿಂದ ಜಾಥಾ ಹೊರಟು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳಿಗೆ ಹಾಗೂ ತಾಲ್ಲೂಕುದಂಡಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದು.ರೈತರ ಸಮಸ್ಯೆ ಬಗೆಹರಿಸದ ಪಕ್ಷದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

     

    ನಾಗದೇನಹಳ್ಳಿ ಆನಂದ್ ಮೂರ್ತಿ ಮಾತನಾಡಿ ರೈತರ ಹೋರಾಟ ಸಭೆಗಳ ವಿಚಾರವಾಗಿ ಹಾಗೂ ಕೆಐಎಡಿಬಿಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದ ಡಾ|| ಮಹೇಶ್‌ರವರಿಗೆ ಹಾಗೂ ಸರ್ಕಾರದ ಪ್ರದಾನ ಕಾರ್ಯದರ್ಶಿ ಸೆಲ್ವಕುಮಾರ್ ರವರುಗಳಿಗೆ ಮನವಿ ಸಲ್ಲಿಸಿದ್ದು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.ಆದ್ದರಿಂದ ರೈತರ ಹೋರಾಟ ಸಮಿತಿಯು ಸಾಮೂಹಿಕವಾಗಿ ಜಾಥಾ ಮಾಡುವ ಮೂಲಕ ಮನವಿ ಸಲ್ಲಿಸಲು ಮುಂದಾಗಿದೆ.ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪ ರವರು ಈ ಹಿಂದೆ ರೈತರಿಗೆ ಭರವಸೆ ನೀಡಿದ್ದರು ಆದರೆ ಅದು ಕೇವಲ ಭರವಸೆಯಾಗಿಯೇ ಉಳಿದುಹೋಗಿದೆ. ಅಂದು ಕೆಐಎಡಿಬಿಗೆ ಭೂಮಿ ಕೊಡವುದಿಲ್ಲ ಎಂದಿದ್ದ ರೈತರ ಮನಹೋಲಿಸೋದ್ದ ಅಧಿಕಾರಿಗಳು ಇದ್ದು ರೈತರ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಸುಮ್ಮನಿರುವುದು ಸರಿಯಲ್ಲ , 53 ದಿನಗಳಲ್ಲಿ ನಮ್ಮ ಹೋರಾಟದ ಸ್ಥಳಕ್ಕೆ ಯಾವ ಅಧಿಕಾರಿಗಳು ಭೇಟಿ ನೀಡದೇ ಇರುವುದು ವಿಪರ್ಯಾಸವೇ ಸರಿ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

    ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ನಾರಾಯಣ ಗೌಡ ಮಾತನಾಡಿ ಮನವಿ ಸಲ್ಲಿಸುವ ದಿನದಂದು ತಾಲ್ಲೂಕು ಮತ್ತು ಜಿಲ್ಲೆಯ ಎಲ್ಲಾ ರೈತಪರ, ಕನ್ನಡಪರ, ದಲಿತಪರ, ಹಾಗೂ ಇತರೆ ಎಲ್ಲಾ ಸಂಘಟನೆಗಳು ಬೆಂಬಲನ್ನು ನೀಡಲು ಕೊರಿದ್ದು. ಈ ಜಾಥಾ ಕಾರ್ಯಕ್ರಮದಲ್ಲಿ ಎಲ್ಲಾ ಸಂಘಟನೆಗಳು ರೈತರ ಉಳಿವಿಗಾಗಿ ರೈತರ ಹೋರಾಟಕ್ಕೆ ಬೆಂಬಲ ನೀಡಲಿವೆ.ಸೂಕ್ತ ಬೆಲೆ 1:4 ಅನುಪಾತದಲ್ಲಿ ನೀಡದ ಪಕ್ಷದಲ್ಲಿ ರೈತರು ತಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ . ರೈತರ ಜಾಥಾ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯ ಸಹಕಾರ ಅವಶ್ಯಕವಾಗಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ರಕ್ಷಣೆ ನೀಡುವಂತೆ ಮನವಿ ಮಾಡಿದರು.

     

    ಈ ಸಂದರ್ಭದಲ್ಲಿ ಕೊಡಿಹಳ್ಳಿ ಕೃಷ್ಣಪ್ಪ, ಎಂಪಿಸಿಎಸ್ ಮಾಜಿ ಅಧ್ಯಕ್ಷ ಮಂಜುನಾಥ್,ಎಂಪಿಸಿಎಸ್ ಸದಸ್ಯ ರಾಮಾಂಜಿನಪ್ಪ, ಕೋನಘಟ್ಟ ರಾಮಣ್ಣ, ಕೋನಘಟ್ಟ ನರಸಿಂಹಮೂರ್ತಿ, ಕೋಡಿಹಳ್ಳಿ ನಂಜೇಗೌಡ, ಆದಿನಾರಾಯಣ ಹೊಸಹಳ್ಳಿ ನಾಗರಾಜು, ಕೋನಘಟ್ಟ ರಮೇಶ್, ಲಿಂಗನಹಳ್ಳಿ ನಾಗೇಶ್, ನಂಜೇಮರಿಯಪ್ಪ, ಅಭಿ, ಜಯಂತ್, ಯಶವಂತ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.

  • *ದೊಡ್ಡಬಳ್ಳಾಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣ ಕಾರ್ಯಕ್ರಮ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 07 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ

    ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮವನ್ನು “ಮನಃಸ್ಥಿತಿಗಳನ್ನು ಬದಲಾಯಿಸುವುದು ಎಲ್ಲರಿಗೂ ಶ್ರವಣ ಮತ್ತು ಶ್ರವಣ ಆರೈಕೆ ಸೇವೆಗಳನ್ನು ಸಾಫಲ್ಯಗೊಳಿಸೋಣ” ಎಂಬ ಘೋಷವಾಕ್ಯದೊಂದಿಗೆ ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

     

    ಕಾರ್ಯಕ್ರಮದಲ್ಲಿ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

     

    ಕಾರ್ಯಕ್ರಮದಲ್ಲಿ ತಾಲ್ಲೂಕು ಅರೋಗ್ಯಾಧಿಕಾರಿ ಡಾ.ಶಾರದ, ಕಾರ್ಯಕ್ರಮಾಧಿಕಾರಿ ಡಾ.ಮಂಜುನಾಥ್, ಇ.ಎನ್.ಟಿ ಸರ್ಜನ್ ರವಿ ಶಂಕರ್, ಡಾ.ಸಂತೋಷ್ ಕುಮಾರ್, ಆರ್.ಸಿ.ಹೆಚ್ ಅಧಿಕಾರಿ ಡಾ.ಸೀಮಾ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ ನಗರಸಭೆ ಬಜೆಟ್ : ನಗರಸಭಾ ಅಧ್ಯಕ್ಷರಿಂದ 155ಲಕ್ಷ ರೂಪಾಯಿಗಳ ಉಳಿತಾಯ ಆಯ – ವ್ಯಯ ಮುಂಗಡ ಪತ್ರ ಮಂಡನೆ

    ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಸಮಗ್ರ ಅಭಿವೃದ್ಧಿಗೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ, ನಗರದ ಜ್ವಲಂತ ಸಮಸ್ಯೆಗಳಿಗೆ ಸ್ಪಂಧಿಸಿ ನಗರದ ನಾಗರೀಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗುವಂತೆ ನಗರದ ಸೀಮಿತ ಹಣಕಾಸು ಸಂಪನ್ಮೂಲವಾದ ಈ ನಗರಸಭೆಗೆ ಅತೀ ಮುಖ್ಯ ಆದಾಯವಾದ ಮನೆ ಕಂದಾಯ, ನೀರಿನ ತೆರಿಗೆ, ಮಳಿಗೆ ಬಾಡಿಗೆ, ಪರವಾನಿಗೆ ಶುಲ್ಕ, ಇತರೆ ತೆರಿಗೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ 15ನೇ ಹಣಕಾಸು ಯೋಜನೆ, ಎಸ್.ಎಫ್.ಸಿ, ಅಮೃತ್-2.0 ಮತ್ತು ಸ್ವಚ್ಚ ಭಾರತ 2.0 ಮೂಲಗಳಿಂದ ಹೆಚ್ಚಿನ ಅನುದಾನಗಳನ್ನು ಸರ್ಕಾರದಿಂದ ನಿರೀಕ್ಷಿಸಿ, ನಗರಸಭೆಯು ಅಗತ್ಯವಾಗಿ ನಿರ್ವಹಿಸಬೇಕಾಗಿರುವ ನಿರ್ವಹಣೆ ಮತ್ತು ನಾಗರೀಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ಎಸ್‌. ಸುಧಾರಾಣಿ ಲಕ್ಷ್ಮೀನಾರಾಯಣ ತಿಳಿಸಿದರು.

     

    ತಾಲ್ಲೂಕಿನ ನಗರಸಭಾ ಕಾರ್ಯಾಲಯದ ಸಭಾಂಗಣದಲ್ಲಿ ಆಯ -ವ್ಯಯ ಮುಂಗಡ ಪತ್ರವನ್ನು ಮಂಡಿಸಿ ಮಾತನಾಡಿದ ಅವರು ದೊಡ್ಡಬಳ್ಳಾಪುರ ನಗರಸಭೆಯ 2024-25ನೇ ಸಾಲಿನ ಆಯ-ವ್ಯಯ ತಯಾರಿಕೆಗಾಗಿ ಎರಡು ಸುತ್ತಿನ ಸಮಾಲೋಚನಾ ಸಭೆಗಳಲ್ಲಿ ಸಾರ್ವಜನಿಕರು ನೀಡಿರುವ ಸಲಹೆಗಳನ್ನು ಆಧಾರಿಸಿ ನಗರಸಭೆಯ ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಹಾಗೂ ಹಂತಹಂತವಾಗಿ ಆಯ- ವ್ಯಯದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವ ಮೂಲಕ ನಗರದ ಸ್ವಚ್ಚತೆ ಮತ್ತು ಅಭಿವೃದ್ಧಿಗೆ ಪೂರಕವಾದ, ಜನಪರ ಆಯ-ವ್ಯಯ ಮಂಡಿಸುತ್ತಿದ್ದೇನೆ. 2024-25ನೇ ಸಾಲಿಗೆ ರೂ.155.00ಲಕ್ಷಗಳ ಉಳಿತಾಯ ಆಯ- ವ್ಯಯ ಮುಂಗಡ ಪತ್ರವನ್ನು ತಯಾರಿಸಿ ಮಾಡಿಸಿದ್ದೇವೆ.

    ಈ ಮುಂಗಡ ಪತ್ರದಲ್ಲಿ ನಗರ ಭಾಗದ ಅಭಿವೃದ್ದಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು

    ಪ್ರಮುಖವಾಗಿ

    •ಪ್ಲಾಸ್ಟಿಕ್ ಮುಕ್ತ ಹಾಗೂ ನಿರ್ಮಲ ದೊಡ್ಡಬಳ್ಳಾಪುರ ನಗರ ನಿರ್ಮಾಣಕ್ಕಾಗಿ 1381.09 ಲಕ್ಷಗಳನ್ನು ಅಂದಾಜಿಸಲಾಗಿದೆ

    •ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕಗಳ ವ್ಯವಸ್ಥೆಗೆ 150.24 ಲಕ್ಷ ರೂಪಾಯಿಗಳು

    •ಅಭಿವೃದ್ಧಿ ಕಾಮಗಾರಿಗಳಿಗಾಗಿ 808.49ಲಕ್ಷರೂಪಾಯಿಗಳು

    •ಕ್ರೀಡಾ ಸೌಲಭ್ಯಗಳಿಗಾಗಿ 10 ಲಕ್ಷ

    •ವಿದ್ಯುತ್ ದೀಪಗಳ ನಿರ್ವಹಣೆಗಾಗಿ 39.80 ಲಕ್ಷ

    •ನಾಡ ಹಾಗೂ ಸ್ಥಳೀಯ ಹಬ್ಬಗಳ ಆಚರಣೆಗಾಗಿ 10ಲಕ್ಷ

    •ದೊಡ್ಡಬಳ್ಳಾಪುರ ಉತ್ಸವ ಆಚರಣೆವಂತಿಕೆಗಾಗಿ 15ಲಕ್ಷ ರೂಪಾಯಿ

    •ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಗಳ ಬಡಜನರ ಕಲ್ಯಾಣಕ್ಕಾಗಿ 210.05 ಲಕ್ಷ ರೂಪಾಯಿಗಳನ್ನು

    •ಸ್ಮಶಾನ ಅಭಿವೃದ್ಧಿಗಾಗಿ 20 ಲಕ್ಷ ರೂಪಾಯಿಗಳನ್ನು ಅಂದಾಜು ಮಾಡಲಾಗಿದೆ.

  • ಕನ್ನಡ ನಾಮಫಲಕ ಬಳಸಿ ಇಲ್ಲವೇ ಕರವೇ ಸೈನಿಕರನ್ನು ಎದುರಿಸಿ – ಪುರುಷೋತ್ತಮ್ ಗೌಡ

    ದೊಡ್ಡಬಳ್ಳಾಪುರ ( ಮಾ.05): ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ. ನಾರಾಯಣಗೌಡರ ಆದೇಶದ ಮೇರೆಗೆ ಇಂದು ನಮ್ಮ ತಾಲ್ಲೂಕಿನ ಅಂಗಡಿ, ಹೋಟಲ್ ಸೇರಿದಂತೆ ಹಲವು ಭಾಗಗಳಿಗೆ ಜಿಲ್ಲಾ ಸಮಿತಿಯ ಸಹಯೋಗದೊಂದಿಗೆ ಭೇಟಿ ನೀಡಿ ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕರವೇ (ನಾರಾಯಣಗೌಡರ ಬಣ)  ಜಿಲ್ಲಾಧ್ಯಕ್ಷರಾದ    ಪುರುಷೋತ್ತಮ್ ಗೌಡ ತಿಳಿಸಿದರು

    ಕನ್ನಡ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಮ್ಮ ನಾಡಿನಲ್ಲಿ ಜೀವನ ಕಟ್ಟಿಕೊಳ್ಳುವ ಹಲವರಿಗೆ ಕನ್ನಡ ಭಾಷೆ ಕುರಿತು ಅಸಡ್ಡೆ, ವಾಣಿಜ್ಯ ಕಾರಣಗಳಿಗಾಗಿ ನಮ್ಮ ಕನ್ನಡ ಭಾಷೆಯನ್ನು ಕಡೆಗಣಿಸಿ ಅನ್ಯಭಾಷೆಗಳನ್ನು ಬಳಸುವ ವ್ಯಾಪಾರಸ್ಥರ ವಿರುದ್ಧ ನಮ್ಮ ಹೋರಾಟ ನಮ್ಮ ಒತ್ತಾಯ ಸ್ಪಷ್ಟವಾಗಿದೆ. ಸರಕಾರದ ಆದೇಶದಂತೆ ಶೇಕಡಾ 60ರಷ್ಟು ಕನ್ನಡ ಬಳಸುವ ಮೂಲಕ ನಮ್ಮ ಭಾಷೆ ಕುರಿತು ಅಭಿಮಾನ ಮೂಡಬೇಕಿದೆ. ಈಗಾಗಲೇ ಕರ್ನಾಟಕ ಸರ್ಕಾರ ನಾಮಫಲಕಗಳನ್ನು ಬದಲಿಸುವಂತೆ ಆದೇಶ ನೀಡಿದ್ದರು. ಹಲವು ವ್ಯಾಪಾರಸ್ಥರು ಆ ಕುರಿತು ಗಮನಹರಿಸಿರುವುದಿಲ್ಲ. ಇಂದಿನ ನಮ್ಮ ಹೋರಾಟ ಸಂಕೇತಿಕವಾಗಿದ್ದು ವ್ಯಪಾರಸ್ಥರಿಗೆ ಕೊನೆಯ ಎಚ್ಚರಿಕೆ ನೀಡುತ್ತಿದ್ದೇವೆ. ಈಗಲೂ ಎಚ್ಚೆದ್ದುಕೊಳ್ಳದ ಪಕ್ಷದಲ್ಲಿ ಮುಂದೆ ನಮ್ಮ ಕರವೇ ಸೈನಿಕರು ಹೋರಾಟದ ಮೂಲಕ ಪಾಠ ಕಲಿಸಲಿದ್ದೇವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

     

    ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • ನಾರಿಶಕ್ತಿ ವಂದನ್ ಮ್ಯಾರಥಾನ್ ಕಾರ್ಯಕ್ರಮ : ಪ್ರಧಾನಿ ನರೇಂದ್ರ ಮೋದಿ ಬೆಂಬಲಿಸಿ ಹೆಜ್ಜೆ ಹಾಕಿದ ನೂರಾರು ಮಹಿಳೆಯರು

    ದೊಡ್ಡಬಳ್ಳಾಪುರ ಮಾರ್ಚ್ 04 :   ದೇಶದ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿರುವ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನ ಸೇವಕರನ್ನಾಗಿ ಆಯ್ಕೆ ಮಾಡುವ ಸಲುವಾಗಿ ಇಂದು ಸ್ವಾಭಿಮಾನಿ ಮಹಿಳೆಯರು ಮ್ಯಾರಥಾನ್ ಮಾಡುವ ಮೂಲಕ ತಮ್ಮ ಬೆಂಬಲವನ್ನು ತೋರ್ಪಡಿಸಿದರು.

    ನಗರ ಭಾಗದ ತಾಲ್ಲೂಕು ಕಚೇರಿ ವೃತ್ತದಿಂದ ನೂರಾರು ಮಹಿಳೆಯರಿಂದ ರನ್ ಫಾರ್ ನೇಷನ್ ರನ್ ಫಾರ್ ಮೋದಿ ಎಂಬ ದ್ಯೇಯ ವಾಕ್ಯದೊಂದಿಗೆ ನಾರಿಶಕ್ತಿ ವಂದನ್ ಮ್ಯಾರಥಾನ್ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳೆಯರು ಮಾತನಾಡಿ ದೇಶದಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಬೇಕಿರುವ ಅನುಕೂಲಗಳನ್ನು ತಮ್ಮ ಯೋಜನೆಗಳ ಮೂಲಕ ದೇಶದ ಪ್ರತಿ ಮನೆಮನೆಗೆ ತಲುಪಿಸಿರುವ ನರೇಂದ್ರ ಮೋದಿ ಜೀ ಅವರನ್ನು ಬೆಂಬಲಿಸಿ ಈ ಮ್ಯಾರಥಾನ್ ಮಾಡುತ್ತಿದ್ದು. ತಾಲ್ಲೂಕಿನ ಹಲವು ಭಾಗಗಳಿಂದ ನೂರಾರು ಮಹಿಳೆಯರು ತಮ್ಮ ಸ್ವಇಚ್ಛೆಯಿಂದ ಮ್ಯಾರಥೋನ್ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಇದು ಪಕ್ಷದ ಕಾರ್ಯಕ್ರಮವಲ್ಲ ತಾಲೂಕಿನಾದ್ಯಂತ ಮಹಿಳೆಯರು ಪಕ್ಷಾತೀತವಾಗಿ ನಮ್ಮೊಂದಿಗೆ ಸೇರಿದ್ದು. ಮೋದಿಜಿಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅರಿವು ಮೂಡಿಸುವಲ್ಲಿ ನಮ್ಮೊಂದಿಗೆ ಸಹಕರಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಜಿಯವರಿಗೆ ಮತ ನೀಡುವ ಮೂಲಕ ದೇಶದ ಎಲ್ಲ ಮಹಿಳೆಯರು ಧನ್ಯವಾದಗಳು ಅರ್ಪಿಸಲಿದ್ದೇವೆ ಎಂದು ತಿಳಿಸಿದರು ಮ್ಯಾರಥಾನ್ ಕಾರ್ಯಕ್ರಮವು ಯಾವುದೇ ಆಡಂಬರವಿಲ್ಲದೆ ಸರಳ ರೀತಿಯಲ್ಲಿ ಆಯೋಜನೆಯಾಗಿದೆ. ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಕ್ಷಾತೀತವಾಗಿ ಪಾಲ್ಗೊಂಡಿದ್ದು. ನಮ್ಮಲ್ಲಿ ಅಚ್ಚರಿ ಮೂಡಿಸಿದೆ ಇವತ್ತಿನ ಈ ಮ್ಯಾರಥಾನ್ ಕಾರ್ಯಕ್ರಮವೇ ಮೋದಿ ಜೀಯವರು ದೇಶದ ಮಹಿಳೆಯರಿಗೆ ನೀಡಿರುವ ಅಭಿವೃದ್ಧಿ ಕಾರ್ಯಗಳ ಹಾಗೂ ಉತ್ತಮ ಯೋಜನೆಗಳ ಕನ್ನಡಿಯಾಗಿದೆ. ಮಹಿಳೆಯರು ದೇಶದಲ್ಲಿ ಹೆಮ್ಮೆಯಿಂದ ಜೀವಿಸುವ ಯೋಜನೆಗಳನ್ನು ಮೋದಿಜೀ ನೇತೃತ್ವದ ಸರ್ಕಾರ ನೀಡಿದೆ. ಇಂದಿನ ಮ್ಯಾರಥಾನ್ ಮಹಿಳೆಯರ ಸ್ವಾಭಿಮಾನದ ಸಂಕೇತವಾಗಿದೆ. ಇಂದು ನಮ್ಮೊಂದಿಗೆ ಸರ್ವ ಸಮುದಾಯಗಳ ಮಹಿಳೆಯರು ಪಾಲ್ಗೊಂಡಿದ್ದು ಈ ಬಾರಿ ನಮ್ಮ ನೆಚ್ಚಿನ ನಾಯಕ ಮೋದಿಜೀ ಅವರಿಗೆ ನಮ್ಮ ಮತಗಳನ್ನು ಉಡುಗೊರೆಯಾಗಿ ನೀಡಲಿದ್ದೇವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ನಿರೀಕ್ಷೆಗೂ ಮೀರಿದ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಯಾವುದೇ ಪ್ರಚಾರವಿಲ್ಲದೆ ತಾಲೂಕಿನಾದ್ಯಂತ ಮಹಿಳೆಯರು ಇಂದಿನ ಮ್ಯಾರಥಾನ್ ಯಶಸ್ವಿಗೊಳಿಸಲು ನಮ್ಮೊಂದಿಗೆ ಕೈಜೋಡಿಸಿರುವುದು ಶ್ಲಾಘನೀಯ ಸಂಗತಿ. ಲೋಕಸಭಾ ಚುನಾವಣೆಯನ್ನು ಎದುರಿಸಲು ನಾರಿ ಶಕ್ತಿ ಒಂದಾಗಿದ್ದು ಈ ಬಾರಿ ಜಯ ನಮ್ಮದು ಎಂಬ ವಿಷಯದಲ್ಲಿ ಸಂಶಯವಿಲ್ಲ. ಮೋದಿ ಜೀ ಭರವಸೆ ಅಲ್ಲ, ನಮ್ಮ ನಂಬಿಕೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

    ಈ ಸಂದರ್ಭದಲ್ಲಿ ತಾಲ್ಲೂಕಿನ ಮಹಿಳಾ ಮುಖಂಡರಾದ ಪುಷ್ಷಶಿವಶಂಕರ್, ವತ್ಸಲಾ ಜಗನ್ನಾಥ್ , ಉಮಾಮಹೇಶ್ವರಿ  , ಸೌಮ್ಯ ,ವತ್ಸಲ , ವಾಣಿ, ಪ್ರಿಯಾಂಕಾ,ಹಂಸಪ್ರಿಯಾ, ಸುಮಿತ್ರಾ ಮತ್ತಿತ್ತರು ಉಪಸ್ಥಿತರಿದ್ದರು

  • ನೂತನವಾಗಿ ಸಂಚಾರ ಆರಂಭಿಸಿದ KSRTC : ತೂಬಗೆರೆ ಗ್ರಾಮದಲ್ಲಿ ಸ್ಥಳೀಯ ಮುಖಂಡರಿಂದ ಹಲವು ಕಾಮಗಾರಿಗಳ ಲೋಕಾರ್ಪಣೆ

    ದೊಡ್ಡಬಳ್ಳಾಪುರ :ತಾಲ್ಲೂಕಿನ ತೂಬಗೆರೆ ಹೋಬಳಿಯಿಂದ ಬೆಂಗಳೂರಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ನಿಗಮದಿಂದ ನೂತನ ಸಂಚಾರವನ್ನು ಆರಂಭಿಸಿದೆ ಎಂದು ಕೆಪಿಸಿಸಿ ಸದಸ್ಯ ಎಸ್. ಆರ್.ಮುನಿರಾಜು ತಿಳಿಸಿದರು.

    *ಹೈಮಾಸ್ಟ್ ದೀಪಗಳಿಗೆ ಚಾಲನೆ*

    ತೂಬಗೆರೆ ಬಸ್ ನಿಲ್ದಾಣದಲ್ಲಿ 10 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಐ ಮಾಕ್ಸ್ ದೀಪಗಳಿಗೆ ಚಾಲನೆ ನೀಡಲಾಯಿತು.

     

    *ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ :*

    ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಈಗಾಗಲೇ 3 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿದ್ದು. ಜನಸಾಂದ್ರತೆ ಹೆಚ್ಚಿರುವ ಕಾರಣ ನೂತನ ಕುಡಿಯುವ ನೀರಿನ ಘಟಕವನ್ನು ತೂಬಗೆರೆ ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಸಮೀಪ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಸ್ಥಳಿಯ ಮುಖಂಡರು ತಿಳಿಸಿದರು.

     

    ತೂಬಗೆರೆಯಲ್ಲಿ ಹಮ್ಮಿಕೊಂಡಿದ್ದ ನೂತನ ಕೆ ಎಸ್ ಆರ್ ಟಿ ಸಿ ಬಸ್ ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು ನಾವು ಚಿಕ್ಕವರಿದ್ದಾಗಿನಿಂದಲೂ ತೂಬಗೆರೆಯಿಂದ ಬೆಂಗಳೂರಿಗೆ ಕೇವಲ ಒಂದು ಬಸ್ ವ್ಯವಸ್ಥೆ ಇತ್ತು. ಕೊರೋನ ಸಂದರ್ಭದಲ್ಲಿ ಕಾರಣಾಂತರಗಳಿಂದ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ನಿಲ್ಲಿಸಲಾಗಿತ್ತು. ತೂಬಗೆರೆ ಹೋಬಳಿಯ ಜನತೆಗೆ ಬಸ್ ನ ಅವಶ್ಯಕತೆ ಇದ್ದು ಗ್ರಾಮಸ್ಥರ ಮನವಿ ಮೇರೆಗೆ ಈ ಮಾರ್ಗವಾಗಿ ಬಸ್ ಸಂಚಾರಕ್ಕೆ ಮರುಜೀವ ನೀಡಲಾಗಿದೆ. ತೂಬಗೆರೆಯಲ್ಲಿ ಕಾರ್ಯರೂಪಕ್ಕೆ ಬಾರದ ಹಲವು ಅಭಿವೃದ್ಧಿ ಕಾರ್ಯಗಳು

    ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪ ಹಾಗೂ ಮಾಜಿ ಸಂಸದ ವೀರಪ್ಪ ಮೊಯಿಲಿಯವರ ಸಹಕಾರದಿಂದ

    ಪೂರ್ಣಗೊಂಡಿವೆ. ಇದರ ಅನುಕೂಲತೆಗಳನ್ನು ಜನತೆ ಪಡೆಯುವಂಥಾಗಿದೆ ಎಂದರು.

     

    ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ ಮಾತನಾಡಿ ಈ ಹಿಂದೆ ಕೇವಲ ಭರವಸೆಗಳಿಗೆ ಸೀಮಿತವಾಗಿದ್ದ ನಮ್ಮ ತೂಬಗೆರೆ ಈಗ ಅಭಿವೃದ್ಧಿಯ ಪಥದಲ್ಲಿ ಸಾಗಿದೆ. ನಿಂತು ಹೋಗಿದ್ದ ಬಸ್ ಮರಳಿ ನಮ್ಮ ಹೋಬಳಿಗೆ ಲಭಿಸಿರುವುದು ಸಂತಸದ ಸಂಗತಿ. ನೂತನ ಬಸ್ ವ್ಯವಸ್ಥೆಯಿಂದಾಗಿ ಹಲವು ಗ್ರಾಮಗಳ ಗ್ರಾಮಸ್ಥರಿಗೆ ಅನುಕೂಲವಾಗಿದೆ ಎಂದರು.

     

    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರವಿಂದ್ ಮಾತನಾಡಿ

    ತೂಬಗೆರೆ ಬಸ್ ನಿಲ್ದಾಣದಲ್ಲಿ ಸ್ವಯಂ ಚಾಲಿತ ಹೈಮಾಸ್ಟ್ ದೀಪಗಳಿಗೆ ಚಾಲನೆ ನೀಡಲಾಗಿದೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಲಾಗಿದೆ. ಸ್ಥಳೀಯ ಮುಖಂಡರ ಶ್ರಮ ಹಾಗೂ ಹಿರಿಯ ನಾಯಕರ ಸಹಕಾರ ತೂಬಗೆರೆ ಹೋಬಳಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕಾರಣವಾಗಿದೆ. ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯ ಎನ್, ಅರವಿಂದ, ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜಮ್ಮ ನರಸಿಂಹಮೂರ್ತಿ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ಸಿದ್ದಪ್ಪ, ಡಿಪೋ ಮ್ಯಾನೇಜರ್ ನಟರಾಜ್,ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ವಿ ವೆಂಕಟೇಶ್,ಮುನಿಕೃಷ್ಣಪ್ಪ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಅಂಜಿನಪ್ಪ ಕಾಂಗ್ರೆಸ್ ಮುಖಂಡರಾದ ದೇವೇಂದ್ರಪ್ಪ ಊರಿನ ಮಹಿಳೆಯರು ಹಾಜರಿದ್ದರು,