Blog

  • *ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ : ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿ*

    ದೊಡ್ಡಬಳ್ಳಾಪುರ ಮಾರ್ಚ್ 03:

    ಕಳೆದ ಮೂರು ವರ್ಷಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸರ್ಕಾರಿ ಶುಲ್ಕ ಕಟ್ಟಲು ಸಾಧ್ಯವಾಗದಷ್ಟು ಹಣವನ್ನು ಪ್ರತಿಭಾ ಪುರಸ್ಕಾರ ರೂಪದಲ್ಲಿ ನೀಡುತ್ತಿದ್ದೇವೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

    ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಜೆಪಿ ಮತ್ತು ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಏಪ್ರಿಲ್ 1ರಿಂದ ಹಲವು ಸರ್ಕಾರಿ ಸೇವಾಪೂರ್ಟಲ್ ಗಳಾದ ಬಾಪೂಜಿ ಕೇಂದ್ರ, ಕರ್ನಾಟಕ ಒನ್, ಅಟಲ್ ಜೀ ಜನಸ್ನೇಹಿ ಕೇಂದ್ರದ ಅರ್ಜಿಗಳನ್ನು ಶಾಸಕರ ಕಚೇರಿಯಿಂದಲೇ ಉಚಿತವಾಗಿ ನಿರ್ಹಹಣೆ ಮಾಡಲಾಗುವುದು.ಸಾರ್ವಜನಿಕರಮನವಿ ಮೇರೆಗೆ ನಮ್ಮ ಸಿಬ್ಬಂದಿಯೇ ಮನೆಗಳಿಗೆ ತೆರಳಿ ಸರ್ಕಾರಿ ಸೇವೆಗಳಿಗೆ ಸಲ್ಲಿಸುವ ಅರ್ಜಿಗಳನ್ನು ಭರ್ತಿ ಮಾಡಲು ಹಾಗೂ ಸಲ್ಲಿಸಲು ಸಹಾಯ ಮಾಡಲಿದ್ದಾರೆ . ಈ ಮೂಲಕ ನಗರ ಮತ್ತು ತಾಲ್ಲೂಕಿನಾದ್ಯಂತ ಮೂಲಭೂತ ಸೌಕರ್ಯಗಳ ಸಮಸ್ಯೆ ನಿವಾರಣೆಗೆ 24*7 ಕೆಲಸ ಮಾಡಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಲಂಚ ಯಾಕೆ ಕೊಡಬೇಕು ಎಂದು ನಾವು ಪ್ರಶ್ನಿಸುವಂತಾಗಬೇಕು. ಪ್ರಶ್ನೆ ಮಾಡುವುದನ್ನ ಕಲಿತಾಗಲೇ ನಾವು ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಮುಂದಿನ ವರ್ಷದಿಂದ ತಂದೆ ಅಥವಾ ತಾಯಿ ಕಳೆದುಕೊಂಡಿರುವ 10 ವಿದ್ಯಾರ್ಥಿಗಳಿಗೆ ಸಿಇಟಿ ಶುಲ್ಕ ಮತ್ತು ಪಿಯುಸಿ ಶುಲ್ಕವನ್ನು ನಮ್ಮ ಟ್ರಸ್ಟ್ ವತಿಯಿಂದ ಕಟ್ಟಲಾಗುವುದು. ಪ್ರತಿವರ್ಷವೂ ನಮ್ಮ ಟ್ರಸ್ಟ್ ಮೂಲಕ ಜನಸೇವೆ ಮುಂದುವರಿಸಲಾಗುವುದು ಎಂದರು.

    ಕಳೆದ ವರ್ಷ ಕ್ರೀಡಾಕೂಟದ ವೇಳೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದ ವಿದ್ಯಾರ್ಥಿಗಳಾದ ಭರತ್ ಮತ್ತು ಪ್ರತೀಶ್ ನೆನಪಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಬರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ 10,000 ರೂಗಳ ಪ್ರೋತ್ಸಾಹ ಧನ ನೀಡಲಾಗುವುದು. ಬಳಿಕ ಮುಂದಿನ ವಿದ್ಯಾಭ್ಯಾಸಕ್ಕೂ ನಮ್ಮ ಟ್ರಸ್ಟ್ ವತಿಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

     

    ಮೇ.13ರಕ್ಕೆ ವರ್ಷದ ಸಾಧನೆ ಪ್ರಕಟ: 

     

    ಮೇ.13 ರಂದು ನಾನು ಒಂದು ವರ್ಷದಲ್ಲಿ ತಾಲ್ಲೂಕಿಗೆ ಶಾಸಕನಾಗಿ ಆಯ್ಕೆಯಾದ ಬಳಿಕ ಕೊಟ್ಟಿರುವಂತ ಯೋಜನೆಗಳು, ಸೌಲಭ್ಯಗಳ ಕುರಿತು, ಸರ್ಕಾರದೊಂದಿಗೆ ನಾನು ಅಭಿವೃದ್ಧಿ ಕುರಿತು ನೆಡೆಸಿರುವ ಪತ್ರವ್ಯವಹಾರಗಳ ಮಾಹಿತಿ ಅದಕ್ಕೆ ಸರ್ಕಾರ ಸ್ಪಂದಿಸಿರುವ ರೀತಿಯನ್ನು ಜನರ ಮುಂದೆ ಪ್ರಕಟಿಸುತ್ತೇನೆ. ಶಾಸಕನಾಗಿ ನನ್ನ ಶಕ್ತಿ ಮೀರಿ ಕರ್ತವ್ಯ ನಿರ್ಹಹಿಸುತ್ತಿದ್ದೇನೆ. ಜನತೆಗಾಗಿ ನನ್ನ ಕೆಲಸವನ್ನು 24*7 ಕಾರ್ಯನಿರ್ಹಹಣೆ ಮಾಡುತ್ತಿದ್ದೇನೆ ಎಂದರು.

     

    ಸಿಎಂ ಸಿದ್ಧರಾಮಯ್ಯ ಕಾರ್ಯಕ್ರಮಕ್ಕೆ ಗೈರು:

     

    ಸೋಮವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಉಪಮುಖ್ಯಮಂತ್ರಿ ಸೇರಿದಂತೆ ಸಚಿವರ ಸಮ್ಮುಖದಲ್ಲಿ ನೆಲಮಂಗಲದಲ್ಲಿ ಹಮ್ಮಿಕೊಂಡಿರುವ ಸರ್ಕಾರಿ ಕಾರ್ಯಕ್ರಮವನ್ನು ನಾನು ಬಹಿಷ್ಕಾರ ಹಾಕಿದ್ದೇನೆ. ನನ್ನ ತಾಲ್ಲೂಕಿಗೆ ಬಜೆಟ್ ನಲ್ಲಿ ಮತ್ತು ವಿವಿಧ ಯೋಜನೆಗಳು, ಅನುದಾನಗಳನ್ನೂ ನೀಡುವಲ್ಲಿ ತೀವ್ರ ಕಡೆಗಣನೆ ಮಾಡಲಾಗಿದೆ. ಇದನ್ನು ಸದನದಲ್ಲಿ ಪ್ರಶ್ನಿಸಿ ನ್ಯಾಯ ಪಡೆಯುತ್ತೇನೆ. ಮುಂದಿನ ಕಲಾಪದ ವೇಳೆ ಏಕಾಂಗಿಯಾಗಿಯಾದರೂ ಸರಿಯೇ ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿ ತಾಲ್ಲೂಕಿಗೆ ಆಗಿರುವ ಅನ್ಯಾಯವನ್ನ ಪ್ರಶ್ನಿಸುತ್ತೇನೆ. ಸೋಮವಾರದಂದು ನೆಡೆಯುವ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ನನ್ನ ಆಕ್ರೋಶ ವ್ಯಕ್ತಪಡಿಸುತ್ತಿದ್ದೇನೆ ಎಂದರು.

     

    ತೀವ್ರ ನಿಗಾ ಘಟಕ(ಐಸಿಯು) ಸಾಧನೆ ನನ್ನ ಖಾತೆಗೆ:

     

    ತಾಲ್ಲೂಕಿನ ತಾಯಿ-ಮಗು ಸಾರ್ವಜನಿಕ ಆಸ್ಪತ್ರೆಗೆ ಸರ್ಕಾರ ಮಂಜೂರು ಮಾಡಿರುವ 50 ಬೆಡ್ ಗಳ ತೀವ್ರ ನಿಗಾ ಘಟಕ ವಿಚಾರ ಮಾಜಿ ಶಾಸಕ ವೆಂಕಟರಮಣಯ್ಯ ಮತ್ತು ಹಾಲಿ ಶಾಸಕ ಧೀರಜ್ ಮುನಿರಾಜು ಅಭಿಮಾನಿಗಳ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕ್ರೆಡಿಟ್ ವಾರ್ ಶುರುವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಧೀರಜ್ ಮುನಿರಾಜು ಸಂವಿಧಾನಿಕವಾಗಿ ಸರ್ಕಾರದಿಂದ ತಾಲ್ಲೂಕಿಗೆ ಲಭಿಸುವ ಯಾವುದೇ ಅನುದಾನ ಅಥವಾ ಯೋಜನಗಳು ತಾಲ್ಲೂಕಿನ ಪ್ರತಿನಿಧಿಗಳಾದ ಶಾಸಕರ ಮೂಲಕವೇ ಜನತೆಗೆ ತಲುಪುವುದು ಎಂದು ಹೇಳುವ ಮೂಲಕ ಇದು ನನ್ನ ಸಾಧನೆ ಎಂದು ಒತ್ತಿ ಹೇಳಿದರು.

     

    ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು ಮಾತನಾಡಿ ವಿದ್ಯಾರ್ಥಿಗಳು, ಯುವ ಜನತೆಗಾಗಿ ಅಂಜನಾದ್ರಿ ಟ್ರಸ್ಟ್ ನಿರಂತರ ಶ್ರಮಿಸುತ್ತಿರುವುಸು ಶ್ಲಾಘನೀಯ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಆಶೀಸಿದರು.

    ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿರಾಜು, ಸುಜಾತ, ಮುಖಂಡರಾದ ತಿ.ರಂಗರಾಜು, ಟಿವಿ ಲಕ್ಷ್ಮೀನಾರಾಯಣ, ಬಿಸಿ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ನಾಗೇಶ್, ನಗರಾಧ್ಯಕ್ಷ ಮುದ್ದಪ್ಪ, ಪುಷ್ಷಶಿವಶಂಕರ್, ವತ್ಸಲಾ, ಎನ್ ಕೆ ರಮೇಶ್, ಭಾಸ್ಕರ್, ಬಂತಿ ವೆಂಕಟೇಶ್, ಉಮಾಮಹೇಶ್ವರಿ, ಶಿವಾನಂದರೆಡ್ಡಿ, ರಾಜಗೋಪಾಲ ಮತ್ತಿತ್ತರು ಇದ್ದರು.

  • ನಮ್ಮೊಂದಿಗೆ ನಿಮ್ಮ ವಿಶೇಷ ದಿನಗಳನ್ನು ಆಚರಿಸಿ – ಅನ್ನದಾಸೋಹಿ ಮಲ್ಲೇಶ್

    ದೊಡ್ಡಬಳ್ಳಾಪುರ (ಮಾರ್ಚ್ 03) : ಹಸಿದವರಿಗೆ ಆಹಾರ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪೆನ್ನು ಪುಸ್ತಕ, ವಯೋವೃದ್ಧರಿಗೆ ಹೋದಿಗೆ ಮತ್ತು ಬಟ್ಟೆಗಳನ್ನು ತಮ್ಮ ಶಕ್ತಿಯನುಸಾರ ನೀಡುವ ಮೂಲಕ ತಮ್ಮ ಕುಟುಂಬದ ಅಥವಾ ಆಪ್ತರ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿ ಎಂದು ಅನ್ನ ದಾಸೋಹಿ ಮಲ್ಲೇಶ್ ತಿಳಿಸಿದ್ದರು

    ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅನ್ನದಾಸೋಹ ಸಮಿತಿ ವತಿಯಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ನೆಡೆಸುತ್ತಿದ್ದು. ಇಂದು ನೆಡೆದ 1436 ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಾನಿಗಳ ನೆರವಿನಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ನೆಡೆಯುತ್ತಿದ್ದು. ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸುವ ಮೂಲಕ ಕಡು ಬಡವರಿಗೆ,ವಯೋವೃದ್ಧರಿಗೆ ಊಟ ನೀಡುವ ಮೂಲಕ ಆಚರಿಸಿಬೇಕೆಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಜೀತು ಮಾತನಾಡಿ ಇಂದು ಮನು ರವರ ಹುಟ್ಟು ಹಬ್ಬದ ಅಂಗವಾಗಿ ಅನ್ನದಾಸೋಹ ಸಮಿತಿಯ ಆಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ, ಬಡವರಿಗೆ, ವೃದ್ಧರಿಗೆ ಆಹಾರ ವಿತರಣೆ ಮಾಡಿದ್ದೇವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪೆನ್ನು ಮತ್ತು ಪುಸ್ತಕ ವಿತರಣೆ ಮಾಡಲಾಗಿದೆ. ನಮ್ಮಂತಯೇ ಎಲ್ಲರು ತಮ್ಮ ವಿಶೇಷ ದಿನಗಳನ್ನು ಹಸಿದವರಿಗೆ ಆಹಾರ ನೀಡುವ ಮೂಲಕ ಆಚರಿಸಬೇಕೆಂದು ಮನವಿ ಮಾಡಿದರು

    ಈ ಸಂದರ್ಭದಲ್ಲಿ ಮುನಿಯಪ್ಪ, ಪ್ರೇಮ್, ಕಾಂತರಾಜ್, ಪವನ್, ಸುದರ್ಶನ್, ವೆಂಕಿ ಸೇರಿದಂತೆ ಅನ್ನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

  • *ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಕುರಿತು ತರಬೇತಿ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾರ್ಚ್01 (ವಿಜಯ ಮಿತ್ರ ): ಬೆಂಗಳೂರು ಗ್ರಾಮಾಂತರ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ವತಿಯಿಂದ ದೇವನಹಳ್ಳಿ ತಾಲ್ಲೂಕಿನ ದುದ್ದನಹಳ್ಳಿ ಗ್ರಾಮಪಂಚಾಯತಿಯಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಕುರಿತು ಅರಿವು ಕಾರ್ಯಕ್ರಮ ನಡೆಯಿತು.

    ಅರಿವು ಕಾರ್ಯಕ್ರಮದಲ್ಲಿ COTPA-2003 ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುವ ನಿಟ್ಟಿನಲ್ಲಿ ಗ್ರಾಮಪಂಚಾಯತಿಯ ಅಧ್ಯಕ್ಷರು, ಪಿಡಿಒ ಹಾಗೂ ಗ್ರಾಮಪಂಚಾಯತಿಯ ಸದಸ್ಯರುಗಳಿಗೆ ಅರಿವು ಮೂಡಿಸಲಾಯಿತು.

    ಈ ಸಂಧರ್ಭದಲ್ಲಿ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹಗಾರರಾದ ಡಾ//ವಿದ್ಯಾ ರಾಣಿ ಪಿ.ಎಸ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹೇಶ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ನಂದಿನಿ,ಸಮುದಾಯ ಆರೋಗ್ಯಾಧಿಕಾರಿ ಶಿಲ್ಪ ಇದ್ದರು.

  • *ಎಂ.ಆರ್.ಪಿ ದರಕ್ಕಿಂತ ಅಧಿಕ ಶುಲ್ಕ ಪಡೆದ ಚಿಂತ್ರಮಂದಿರಗಳಿಗೆ ದಂಡ : ನಗರದ ವೈಭವ್, ಸೌಂದರ್ಯ ಮಹಲ್ ಚಿತ್ರಮಂದಿರಗಳಿಗೆ ನೋಟಿಸ್ ಜಾರಿ *

    ದೊಡ್ಡಬಳ್ಳಾಪುರ (ವಿಜಯಮಿತ್ರ ಮಾ.1): ಬೆಂ.ಗ್ರಾಮಾಂತರ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದೊಡ್ಡಬಳ್ಳಾಪುರ ನಗರದ ವೈಭವ್ ಚಿತ್ರಮಂದಿರ ಹಾಗೂ ಸೌಂದರ್ಯ ಮಹಲ್ ಚಿತ್ರಮಂದಿರಗಳಿಗೆ 10,000 ರೂಪಾಯಿ ದಂಡವನ್ನು ವಿಧಿಸಿದೆ. ಚಿತ್ರಮಂದಿರದಲ್ಲಿ ನೀರಿನ ಬಾಟಲಿ ಮತ್ತು ಚಿಪ್ಸ್ ಖರೀದಿಸಿದ ಗ್ರಾಹಕನಿಗೆ ಎಂ.ಆರ್.ಪಿ ದರಕ್ಕಿಂತ 40 ರೂ ಅಧಿಕ ಶುಲ್ಕವನ್ನು ಪಡೆದಿದಕ್ಕೆ ಈ ದಂಡವನ್ನು ವಿಧಿಸಲಾಗಿದೆ.

    ಆಯೋಗವು ಹೆಚ್ಚುವರಿಯಾಗಿ ಪಡೆದಿದ್ದ 40 ರೂಪಾಯಿಗಳನ್ನು ಮರುಪಾವತಿ ಮಾಡುವಂತೆ, ಪರಿಹಾರವಾಗಿ 5000 ರೂಪಾಯಿಗಳನ್ನು ಹಾಗೂ ಪ್ರಕರಣದ ಖರ್ಚನ್ನು 5000 ರೂಪಾಯಿಗಳೊಂದಿಗೆ ಫಿರ್ಯಾದುದಾರರಿಗೆ ನೀಡಲು ಅದೇಶಿಸಿದೆ. ಈ ಮೊತ್ತವನ್ನು ಎರಡು ತಿಂಗಳೊಳಗೆ ಇತ್ಯರ್ಥಪಡಿಸಬೇಕು, ವಿಫಲವಾದರೆ ವಾರ್ಷಿಕ ಶೇ. 9 ಬಡ್ಡಿದರ ವಿಧಿಸಲಾಗುವುದು ಎಂದು ಆದೇಶಿಸಿದೆ. ನ್ಯಾ.ಬಿ. ನಾರಾಯಣಪ್ಪ ನೇತೃತ್ವದಲ್ಲಿ ನ್ಯಾ.ಜ್ಯೋತಿ ಹಾಗೂ ನ್ಯಾ. ಶರಾವತಿ. ಎಸ್. ಎಂ. ಅವರನ್ನೊಳಗೊಂಡ ತ್ರಿಪೀಠ ಆಯೋಗವು ಈ ಆದೇಶ ಹೊರಡಿಸಿದೆ.

     

    ಘಟನೆ ವಿವರ:

    ಗಿರೀಶ್. ಏನ್. ಪಿ ಮತ್ತು ಅವರ ಸ್ನೇಹಿತರು ಅಕ್ಟೋಬರ್ 2022 ರಲ್ಲಿ ವೈಭವ್ ಚಿತ್ರಮಂದಿರ ಹಾಗೂ ಸೌಂದರ್ಯ ಮಹಲ್ ಚಿತ್ರಮಂದಿರದಲ್ಲಿ ನೀರಿನ ಬಾಟಲಿ ಮತ್ತು ಚಿಪ್ಸ್ ಖರೀದಿಸಿದ್ದರು. ಪ್ರತಿ ಪದಾರ್ಥಕ್ಕೆ ಎಂ.ಆರ್.ಪಿ ಗಿಂತ 10 ರೂಪಾಯಿ ಅಧಿಕ ಶುಲ್ಕದ ಪಡೆದಯುತ್ತಿರುವ ಬಗ್ಗೆ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಗೆ ದೂರು ನೀಡಿದ್ದರು. ಯಾವುದೇ ಸಕಾರತ್ಮಕ ಉತ್ತರ ಬಾರದೆ ಇದ್ದುದರಿಂದ, ನವೆಂಬರ್ 2022 ರಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆ ದೂರು ನೀಡಿದ್ದರು. ಅದರಂತೆ, ಜನವರಿ 2023ರಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಚಿತ್ರಮಂದಿರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಒಟ್ಟಾರೆ 20,000 ರೂಪಾಯಿಗಳ ದಂಡವನ್ನು ವಿಧಿಸಿರುತ್ತಾರೆ.

    ಇಷ್ಟಾದರೂ, ಚಿತ್ರಮಂದಿರಗಳಲ್ಲಿ ಪ್ರತಿ ಪದಾರ್ಥಕ್ಕೆ ಎಂ.ಆರ್.ಪಿ ಗಿಂತ 10 ರೂಪಾಯಿ ಅಧಿಕ ಶುಲ್ಕವನ್ನು ಗ್ರಾಹಕರಿಂದ ಪಡೆಯುವುದನ್ನು ಮುಂದುವರಿಸುತ್ತಾರೆ. ಇದನ್ನು ಪ್ರಶ್ನಿಸಿ ಆಗಸ್ಟ್ 2023 ರಂದು ಆಯೋಗದಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಕೇವಲ 6 ತಿಂಗಳಲ್ಲಿ ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ.

  • *ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಬಿ.ಎನ್.ಬಚ್ಚೇಗೌಡ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ( ವಿಜಯಮಿತ್ರ ಸುದ್ದಿ ): ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದೆ. ಜಿಲ್ಲೆಯಲ್ಲಿ ಬರಗಾಲ ಉಂಟಾಗಿದ್ದು ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಅಗತ್ಯ ಕ್ರಮ ಕೈಗೊಂಡು ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಿ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ಎನ್.ಬಚ್ಚೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿನ ಜಲ ಜೀವನ್ ಮಿಷನ್ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಅವರು. ಜಲ ಜೀವನ್ ಮಿಷನ್ ಕಾಮಗಾರಿ ಶೀಘ್ರ ಮುಕ್ತಾಯಗೊಂಡರೆ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲ. ಜಿಲ್ಲೆಯಲ್ಲಿ ಈಗಾಗಲೇ 714 ಕೊಳವೆಬಾವಿ ಕೊರೆದಿದ್ದು ಅದರಲ್ಲಿ 626 ಕೊಳವೆಬಾವಿಗಳು ಯಶಸ್ವಿಯಾಗಿದೆ. ಒವರ್ ಹೆಡ್ ಟ್ಯಾಂಕ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಹಾಗಾಗಿ ಶೀಘ್ರ ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣ ಗೊಳಿಸಿ ಎಂದು ಹೇಳಿದರು.

    ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ನಿರ್ಮಾಣವಾಗಬೇಕಿರುವ ಮನೆಗಳು, ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಶೀಘ್ರವೇ ಪೂರ್ಣಗೊಳಿಸಲು ಫಲಾನುಭವಿಗಳಿಗೆ ಸೂಚನೆ ನೀಡಿ, ನಿವೇಶನ ಇರುವಂತಹ ಫಲಾನುಭವಿಗಳನ್ನು ಗುರ್ತಿಸಿ ಮನೆ ಮಂಜೂರು ಮಾಡಿ ಎಂದು ಹೇಳಿದರು.

    ಮಾರ್ಚ್ 3 ರಿಂದ ಪಲ್ಸ್ ಪೋಲಿಯೊ ಕಾರ್ಯಕ್ರಮವಿದ್ದು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿ 0-5 ವರ್ಷದೊಳಗಿನ ಪ್ರತಿ ಮಗುವಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಜನನಿ ಸುರಕ್ಷಾ ಯೋಜನೆಯ ಸೌಲಭ್ಯ ಪ್ರತಿ ಅರ್ಹ ಫಲಾನುಭವಿಗಳಿಗೆ ಸಿಗಬೇಕು ಎಂದರು.

    ಕಳೆದ ವರ್ಷಕ್ಕಿಂತ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ಜಿಲ್ಲೆ ಉತ್ತಮ ಫಲಿತಾಂಶ ಪಡೆಯಬೇಕು. ಹೀಗಾಗಿ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ಪೋಷಕರಿಗೆ ವಿಶೇಷ ತರಬೇತಿ ನೀಡಿ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಾಲಾ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

    ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಕೆಲವು ಭಾಗಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಯು ವಿಳಂಬವಾಗುತ್ತಿದ್ದು, ಇದರಿಂದಾಗಿ ಕಾಮಗಾರಿ ವೆಚ್ಚವು ಹೆಚ್ಚಾಗಲಿದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ಕಾಮಗಾರಿ ಮುಗಿಸುವಂತೆ ಸೂಚಿಸಿದರು.

    ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳಲ್ಲಿ ಬರುವಂತಹ ಗಂಗಾ ಕಲ್ಯಾಣ ಯೋಜನೆಯನ್ನು ಶೀಘ್ರವೇ ಅನುಷ್ಠಾನಕ್ಕೆ ತಂದು ಫಲಾನುಭವಿಗಳಿಗೆ ತಲುಪಿಸಿ ಎಂದರು.

    ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳಿಗೆ ಸಮರ್ಪಕ ನೀರು ಪೂರೈಕೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ. ವರದಿಗಳ ಪ್ರಕಾರ ಬರಗಾಲದಿಂದ ಜಿಲ್ಲೆಯಲ್ಲಿ 25 ಅಡಿ ಅಂತರ್ಜಲ ಕುಸಿದಿದೆ. ಜನ ಜಾನುವಾರುಗಳಿಗೆ ನೀರು, ಮೇವು ಅಭಾವ ಆಗದಂತೆ ಕ್ರಮ ವಹಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

    ಸರ್ಕಾರಿ ಯೋಜನೆಗಳನ್ನು ವಿಳಂಬ ಮಾಡದೆ ಶೀಘ್ರವೇ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿ, ಅಧಿಕಾರಿಗಳು ಸಮಯಪ್ರಜ್ಞೆ ಪಾಲಿಸಿ ಕರ್ತವ್ಯವನ್ನು ಜವಾಬ್ದಾರಿಯಾಗಿ ನಿರ್ವಹಿಸಬೇಕು. ಜಿಲ್ಲೆಯನ್ನು ಎಲ್ಲಾ ವಿಧದಲ್ಲೂ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಅನುರಾಧ ಕೆ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಉಪ ಕಾರ್ಯದರ್ಶಿ ರಮೇಶ್, ಯೋಜನಾಧಿಕಾರಿ ವಿಠ್ಠಲ ಕಾವ್ಳೆ ಸೇರಿದಂತೆ ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ಗ್ರಾಮ ಪಂಚಾಯಿತಿ ಹಣ ದುರ್ಬಳಕೆ : ಹೊನ್ನಾವರ ಪಿಡಿಓ ಶಶಿದರ್ ಅಮಾನತ್ತು.

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ನೆಲಮಂಗಲ ಮೂಲದ ಪಿಡಿಓ ಶಶಿದರ್ ರವರು ಪ್ರಸ್ತುತ ದೊಡ್ಡಬಳ್ಳಾಪುರ ಹೊನ್ನಾವರ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಮ ಪಂಚಾಯಿತಿ ಹಣ ದುರ್ಬಳಕೆ ಆರೋಪದಲ್ಲಿ ಶಿಸ್ತು ಕ್ರಮಕ್ಕೆ ಗುರಿಯಾಗಿ ಅಮಾನತ್ತು ಗೊಂಡಿದ್ದಾರೆ.

    ಇನ್ನೂ ನೆಲಮಂಗಲ ತಾಲ್ಲೂಕಿನ ಟಿ.ಬೇಗೂರು ಗ್ರಾಮಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿ ಸರ್ಕಾರದ ಹಣ ದುರುಪಯೋಗ ಮಾಡಿರುವ ಆರೋಪಕೂಡ ಇವರ ಮೇಲಿದ್ದು ಸಾಮಾಜಿಕ ಹೋರಾಟಗಾರ ಗಂಗಾಧರ್ ಟಿ ಜಿ ರವರು ನೀಡಿದ್ದ ದೂರನ್ನು ಆದರಿಸಿ ಪಿಡಿಓ ಶಶಿಧರ್ ಗ್ರಾಮ ಪಂಚಾಯಿತಿ ಹಣ ದುರ್ಬಳಕೆ ಮಾಡಿರುವುದು ಕಂಡು ಬಂದಿರುವುದಾಗಿ ಗ್ರಾಮೀಣಾಭಿರುದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ನಡೆಸಿರುವ ತನಿಖೆಯಿಂದ ದೃಢಪಟ್ಟಿದೆ.ಹಾಗೂ ದೇವನಹಳ್ಳಿ ತಾಲ್ಲೂಕಿನ ಅಣ್ಣೆಶ್ವರ ಗ್ರಾಮ ಪಂಚಾಯಿತಿಯಲ್ಲಿಯೂ ಸಹ ಪಿಡಿಓ ಶಶಿದರ್ ಲಕ್ಷಾಂತರ ರೂಪಾಯಿ ಸರ್ಕಾರದ ಹಣ ದುರುಪಯೋಗ ಮಾಡಿರುವ ಬಗ್ಗೆ ತನಿಖೆಯಿಂದ ದೃಢ ಪಟ್ಟ ಹಿನ್ನೆಲೆ ಪಿಡಿಓ ಶಶಿದರ್ ರವರನ್ನು ದಿನಾಂಕ:- 29-02-2024 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಿಇಓ ಡಾ. ಅನುರಾಧರವರು ಅಮಾನತ್ತು ಗೊಳಿಸಿ ಆದೇಶ ಮಾಡಿದ್ದಾರೆ .

     

    ಈ ಹಿಂದೆಯೂ ಕೂಡ ಪಿಡಿಓ ಶಶಿಧರ್ ರವರು ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 203 ನಕಲಿ ಖಾತೆ ಮಾಡಿ ಸರ್ಕಾರಕ್ಕೆ ಬರಬೇಕಿದ್ದ ಕೋಟಿ ಗಟ್ಟಲೆ ಹಣವನ್ನು ಸರ್ಕಾರಕ್ಕೆ ವಂಚಿಸಿ ದುರುಪಯೋಗ ಮಾಡಿದ್ದ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವನ್ನು ಹಿರಿಯ ಅಧಿಕಾರಿಗಳು ಪಿಡಿಓ ಶಶಿಧರ್ ವಿರುದ್ಧ ದಾಖಲಿಸಿದ್ರು ಸಧ್ಯ ಈ ಪ್ರಕರಣದಲ್ಲಿ ಪಿಡಿಓ ಶಶಿಧರ್ ಜಾಮೀನು ಪಡೆದಿದ್ರು ಎಂಬ ಮಾಹಿತಿ ಲಭ್ಯವಾಗಿದೆ .

  • ದೊಡ್ಡಬಳ್ಳಾಪುರ ಹೊರವಲಯದಲ್ಲಿದೆ ಪಿಯುಸಿ ಪರೀಕ್ಷಾ ಕೇಂದ್ರ : ಬಸ್ ಸೌಲಭ್ಯಇಲ್ಲದ ಕಾರಣ 2 ಕಿ.ಮೀ ನಡೆದು ಹೋಗವ ಪರೀಕ್ಷಾರ್ಥಿಗಳು

    ದೊಡ್ಡಬಳ್ಳಾಪುರ : ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು. ಪರೀಕ್ಷಾರ್ಥಿಗಳು ತುಂಬಾ ಉತ್ಸಾಹದಿಂದ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.

     

    ದೊಡ್ಡಬಳ್ಳಾಪುರ ತಾಲ್ಲೂಕಿನ ಮಾದಗೊಂಡನ ಹಳ್ಳಿ ರಸ್ತೆಯಲ್ಲಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿ ಯೂ ಸಿ ಪರೀಕ್ಷಾ ಕೇಂದ್ರವಾಗಿದ್ದು. ಈ ಬಾರಿ ಬರೋಬ್ಬರಿ 641ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಈ ಕೇಂದ್ರ ತಲುಪಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸವೇ ಸರಿ. ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು ಎಂಬ ಆತುರದಲ್ಲಿ ವಿದ್ಯಾರ್ಥಿಗಳ ಪರದಾಟ ನೋಡಲು ಅಸಾಧ್ಯ. ನಗರದ ಬಸವ ಭವನ ದಿಂದ ಕಾಲೇಜಿನವರೆಗೂ ಯಾವುದೇ ಬಸ್ ವ್ಯವಸ್ಥೆ ಇಲ್ಲ, ಕಾಲ್ನಡಿಗೆಯಲ್ಲಿ ಪರೀಕ್ಷಾ ಕೇಂದ್ರ ಸೇರುವಷ್ಟರಲ್ಲಿ ಸುಸ್ತಾಗುವ ಯುವ ಮನಸ್ಸುಗಳು ಪರೀಕ್ಷೆ ಬರೆಯುವುದಾದರು ಹೇಗೆ…?

     

    ಬಿಸಿಲಿನಲ್ಲಿ ನೆಡೆದು ಬರುವುದು ಕಷ್ಟಕರವಾಗಿದೆ. ಆಟೋ ಕೇಳುವ ಎಂದರೇ ದುಬಾರಿ, ನಮ್ಮಲ್ಲಿ ಆಟೋಗೆ ನೀಡುವಷ್ಟು ಹಣವಿಲ್ಲ, ಬಸ್ ಕೇವಲ ಬಸವಭವನ ಸಮೀಪ ನಿಲುಗಡೆಗೊಳ್ಳುತ್ತದೆ ಅಲ್ಲಿಂದ ಇಲ್ಲಿಯವರೆಗೆ ನೆಡೆಯುವುದು ಕಷ್ಟವಾಗಿದೆ. ಅಲ್ಲಿಂದ ಪರೀಕ್ಷಾ ಕೇಂದ್ರ ತಲುಪಲು ಕನಿಷ್ಠ 20ರಿಂದ 30ನಿಮಿಷಗಳ ಅವಧಿ ಬೇಕು. ಬಿಸಿಲಿನ ಈ ಬೆಗೆಯಲ್ಲಿ ನೆಡೆಯುವುದು ಅಸಾಧ್ಯ ನಮಗೊಂದು ಬಸ್ ವ್ಯವಸ್ಥೆ ಮಾಡಿ ಅಂತರೇ ಪರೀಕ್ಷಾರ್ಥಿಗಳು

     

     

    ಪರೀಕ್ಷಾ ಮೇಲ್ವಿಚಾರಕರಾದ ಸುಜಾತಾ ಮಾತನಾಡಿ ನಮ್ಮಲ್ಲಿ ಈ ಬಾರಿ 641 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಹಲವು ಶಾಲೆಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಬರುತ್ತಿದ್ದು ಕೆಲ ಪೋಷಕರು ತಮ್ಮ ಸ್ವಂತ ವಾಹನಗಳಲ್ಲಿ ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರುತ್ತಿದ್ದಾರೆ. ಹಲವು ಮಕ್ಕಳು ಕಾಲ್ನಡಿಗೆಯಲ್ಲಿ ಬರುತ್ತಿದ್ದು ಪರೀಕ್ಷಾರ್ಥಿಗಳು ಆಯಾಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.

     

    ಪರೀಕ್ಷಾರ್ಥಿಗಳು ಯಾವುದೇ ತೊಂದರೆ ಇಲ್ಲದಂತೆ ಪರೀಕ್ಷೆ ಬರೆಯಲು ಹಾಗೂ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲು ಸಂಬಂಧಪಟ್ಟವರು ಗಮನಹರಿಸಿ ಅನುವು ಮಾಡಿ ಕೊಡಲಿ ಎಂಬುದೇ ನಿಮ್ಮ ವಿಜಯ ಮಿತ್ರ ಕೋರಿಕೆ

  • *ಕುಶಲಕರ್ಮಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ*

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಇಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ.ಎನ್ ಮತ್ತು ಅಪರ ಜಿಲ್ಲಾಧಿಕಾರಿ ಅಮರೇಶ್ ರವರು ಕಾರ್ಯಕ್ರಮ ಉದ್ಘಾಟಿಸಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 30 ಸಾವಿರ ಕುಟುಂಬಗಳು ಗ್ರಾಮ ಪಂಚಾಯಿತಿಯ ಹಂತದಲ್ಲಿ ಪಿ.ಎಮ್.ವಿಶ್ವಕರ್ಮ ಯೋಜನೆ ನೋಂದಾಯಿಸಿಕೊಂಡಿದ್ದಾರೆ. ಗ್ರಾಮೀಣ ಹಾಗೂ ನಗರ ಪ್ರದೇಶದ 18 ವರ್ಗದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಹಾಗೂ ಬ್ಯಾಂಕ್‌ ಖಾತರಿ ರಹಿತ ಸಾಲ ಸೌಲಭ್ಯ ದೊರೆಯಲಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ಯೋಜನೆ ಸದುಪಯೋಗ ಮಾಡಿಕೊಳ್ಳುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ ಎನ್ ರವರು ತಿಳಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ ಕೆ ರಮೇಶ್, ಸಾಕ್ರೆಟಿಸ್ ನ ಜಿಂಟಿ ನಿರ್ದೇಶಕರು, ಉಪ ನಿರ್ದೇಶಕರಾದ ಗೋಪಿನಾಥ, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ನರೇಂದ್ರ ಬಾಬು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕುಶಲಕರ್ಮಿಗಳು ಉಪಸ್ಥಿತರಿದ್ದರು.

  • ಭಕ್ತದಿಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 27ನೇ ವರ್ಷದ ಪಾದಯಾತ್ರೆ : ಭಕ್ತಿ, ಭಾವೈಕ್ಯ, ಆತ್ಮಶುದ್ಧಿಕಾರಣಕ್ಕಾಕಾಗಿ ನಮ್ಮ ಪಾದಯಾತ್ರೆ – ತೂಬಗೆರೆ ವೆಂಕಟೇಶಪ್ಪ

    ದೊಡ್ಡಬಳ್ಳಾಪುರ : ಗುರುಗಳಾದ ಬಸವರಾಜುರವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಹಾಶಿವರಾತ್ರಿ ಅಂಗವಾಗಿ ಪಾದಯಾತ್ರೆ ಮೂಲಕ ಸಾವಿರಾರು ಭಕ್ತದಿಗಳು ತೆರಳಿ ದೇವರ ದರ್ಶನ ಪಡೆಯಲಿದ್ದೇವೆ.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಹ ಭಕ್ತಾದಿಗಳೊಂದಿಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಎಂದು ತೂಬಗೆರೆ ವೆಂಕಟೇಶಪ್ಪ ( ಬಳೆ ಸ್ವಾಮಿ )ತಿಳಿಸಿದರು.

     

    ದೊಡ್ಡಬಳ್ಳಾಪುರ ತಾಲೂಕಿನ ನಗರ ಭಾಗದ ಬಯಲು ಬಸವಣ್ಣ ದೇವಾಲಯದ ಬಳಿ ಶ್ರೀ ಪುಷ್ಪಾಂಡಜಾ ಗುರೂಜಿಯವರ ಶುಭ ಹಾರೈಕೆಯೊಂದಿಗೆ ಚಾಲನೆಗೊಂಡ ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದವರು ಕಳೆದ 9 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಹಾಶಿವರಾತ್ರಿ ಅಂಗವಾಗಿ ನಡೆಯುವ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ನೂರಾರು ಭಕ್ತರು ಮಳೆ ಗಾಳಿ ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆಗೆ ಮುಂದಾಗಿರುವುದು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ತಿಳಿಸಿದರು

     

    ಪಾದಯಾತ್ರೆಯ ಆಯೋಜಕರಾದ ಬಸವರಾಜು ಮಾತನಾಡಿ ಕಳೆದ 27 ವರ್ಷಗಳಿಂದ ಸತತವಾಗಿ ಧರ್ಮಸ್ಥಳ ಶ್ರೀ ಮಂಜುನಾಥರ ದರ್ಶನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದೇವೆ. ಹಗಲು ರಾತ್ರಿ ಎನ್ನದೆ ಭಕ್ತಾದಿಗಳು ನಮ್ಮೊಂದಿಗೆ ಕೈಜೋಡಿಸಿ ಸತತವಾಗಿ ನಡೆದು ದೇವರ ದರ್ಶನ ಪಡೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ದೊಡ್ಡಬಳ್ಳಾಪುರದಿಂದ ನೆಲಮಂಗಲ ಮಾರ್ಗವಾಗಿ ಚಲಿಸುವ ನಮ್ಮ ತಂಡಕ್ಕೆ ನೂರಾರು ಮಂದಿ ಸಹಕಾರ ನೀಡಿ ನಮ್ಮೊಂದಿಗೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಾದಯಾತ್ರೆ ಸಂಕಲ್ಪಕ್ಕೆ ವರ್ಷದಿಂದ ವರ್ಷಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು

     

     

    ಈ ಸಂದರ್ಭದಲ್ಲಿ ವೆಂಕಟೇಶಪ್ಪ ತೂಬಗೆರೆ (ದೇವೇಗೌಡರು ಬಳೆ ಸ್ವಾಮಿ), ಬಸವರಾಜ್ ಸ್ವಾಮಿ. ಈರಣ್ಣ. ಗುರುಮೂರ್ತಿ. ರಮೇಶ್. ರಾಮಾಂಜಿನಪ್ಪ. ಸಂತೋಷ್ ಸೇರಿದಂತೆ ಹಲವು ಭಕ್ತಾದಿಗಳು ಉಪಸ್ಥಿತರಿದ್ದರು

  • ಬೆಂಗಳೂರಿನ ಗೀತಂನಲ್ಲಿ MURTI ಸಂಶೋಧನಾ ಕೇಂದ್ರ ಉದ್ಘಾಟನೆ : ಖ್ಯಾತ ವೈಮಾನಿಕ ಎಂಜಿನಿಯರ್ ಡಾ.ಕೋಟ ಹರಿನಾರಾಯಣ ಸೇರಿದಂತೆ ಹಲವು ಗಣ್ಯರು ಭಾಗಿ

    ದೊಡ್ಡಬಳ್ಳಾಪುರ : ಸುಸ್ಥಿರ ತಂತ್ರಜ್ಞಾನವು ಹೇಗೆ ಬೆಳೆಯಬೇಕೆಂಬುದರ ಬಗ್ಗೆ ಸಂಪೂರ್ಣ ಮರುಚಿಂತನೆಯನ್ನು ನಡೆಸುವ ಅಗತ್ಯವಿದೆ. ಗೀತಂ ದಾಖಲೆಯ ಸಮಯದಲ್ಲಿ MURTI ಯನ್ನು ಸ್ಥಾಪಿಸಿರುವುದು ನನಗೆ ಸಂತೋಷ ಎನಿಸಿದೆ. 13 ಪ್ರಮುಖ ಕ್ಷೇತ್ರಗಳೊಂದಿಗೆ ಇದು ಸರಿಯಾದ ಆರಂಭವಾಗಿದೆ ಮತ್ತು ಇವುಗಳು ನಾವು ಬದಲಾವಣೆಯನ್ನು ಮಾಡುವ ಕ್ಷೇತ್ರಗಳಾಗಿವೆ. ಗೀತಂ ಮಾತ್ರವಲ್ಲದೇ ಸಮಾಜಕ್ಕೂ ಇದರಿಂದ ಪ್ರಯೋಜನವಾಗುತ್ತದೆ. ವಿಶ್ವವಿದ್ಯಾನಿಲಯವನ್ನು ಉದ್ಯಮ ಮತ್ತು ಸಮಾಜದೊಂದಿಗೆ ಸಂಪರ್ಕಿಸುವುದು ನಮ್ಮ ಪ್ರಮುಖ ಗುರಿಯಾಗಿದೆ’’ ಎಂದು ಖ್ಯಾತ ಎಂಜಿನಿಯರ್, ಶಿಕ್ಷಣ ತಜ್ಞ ಮತ್ತು ಹಗುರ ಯುದ್ಧ ವಿಮಾನ (LCA) ತೇಜಸ್ ಯೋಜನೆಯ ಕಾರ್ಯಕ್ರಮ ನಿರ್ದೇಶಕ ಹಾಗೂ ಮುಖ್ಯ ವಿನ್ಯಾಸಕಾರ ಡಾ.ಕೋಟ ಹರಿನಾರಾಯಣ ತಿಳಿಸಿದರು.

     

    ರಾಷ್ಟ್ರೀಯ ವಿಜ್ಞಾನ ದಿನದ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಸಂಶೋಧನೆಯ ಮೂಲಭೂತ ತತ್ತ್ವಕ್ಕೆ ಅನುಗುಣವಾಗಿ ಅತ್ಯುತ್ತಮ ಶಿಕ್ಷಣ ಮತ್ತು ಅಭಿವೃದ್ಧಿಗೆ ಪೂರಕವಾಗಿ ಬೆಂಗಳೂರಿನ ಗೀತಂ ಭಾಷಾಂತರ ಉಪಕ್ರಮಗಳ ಸಂಶೋಧನಾ ಕೇಂದ್ರದ ಬಹುಶಿಸ್ತೀಯ ಸಂಶೋಧನಾ ಕೇಂದ್ರವನ್ನು (Multidisciplinary Unit of Research on Translational Initiatives (MURTI) Research Centre) ಇಂದು ಉದ್ಘಾಟನೆ ಮಾಡಲಾಯಿತು. ಸದರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು

    ಈ ಬಹುಶಿಸ್ತೀಯ ಸಂಶೋಧನಾ ಉಪಕ್ರಮವು ಆವಿಷ್ಕಾರಕ ಮತ್ತು ಅರ್ಥಪೂರ್ಣವಾದ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸಮಾನಮನಸ್ಕರ ಸಹಯೋಗವನ್ನು ಒಟ್ಟುಗೂಡಿಸಲು ನೆರವಾಗುತ್ತದೆ. ವಿವಿಧ ಕ್ಷೇತ್ರಗಳ ಸಂಶೋಧಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ MURTI ಅನೇಕ ಸವಾಲುಗಳನ್ನು ಎದುರಿಸುವ ಸಲುವಾಗಿ ವಿವಿಧ ಹಿನ್ನೆಲೆಗಳ ಸಂಶೋಧಕರ ಸಾಮೂಹಿಕ ಪರಿಣತಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.ಎಂಜಿನಿಯರಿಂಗ್ ಅನ್ನು ಮರು-ಎಂಜಿನಿಯರ್ ಅನ್ನಾಗಿ ರೂಪಿಸುವ ಅಗತ್ಯವಿದೆ. ಇದು ಮೂಲಭೂತ ಅಗತ್ಯತೆಯೂ ಆಗಿದೆ. ನಾವು ಇಂಧನವನ್ನು ಉತ್ಪಾದಿಸುವ ವಿಧಾನ ಮತ್ತು ಅದನ್ನು ಸಂಗ್ರಹಿಸುವ ವಿಧಾನ, ರವಾನಿಸುವ ವಿಧಾನ. ಹೀಗೆ ಎಲ್ಲವನ್ನೂ ಮರು-ನೋಡಬೇಕಾದ ಅಗತ್ಯವಿದೆ. ಕ್ರಿಸ್ಟೋಫರ್ ಡಬ್ಲ್ಯೂ ಹೋಡ್ಜಸ್ ಅವರ ಉಪಸ್ಥಿತಿಯು ಯುಎಸ್ ಅಕಾಡೆಮಿ, ಯುಎಸ್ ಉದ್ಯಮ, ಭಾರತೀಯ ಶಿಕ್ಷಣ, ಭಾರತೀಯ ಉದ್ಯಮ ಮತ್ತು ಸಾಮಾನ್ಯವಾಗಿ ಸಮಾಜದ ನಡುವಿನ ಬಲವಾದ ಸಹಯೋಗವನ್ನು ಖಚಿತಪಡಿಸುತ್ತದೆ ಎಂಬುದನ್ನು ನಾನು ನಂಬಿದ್ದೇನೆ’’ ಎಂದೂ ಅವರು ಹೇಳಿದರು.

     

     

    ಈ ಉದ್ಘಾಟನಾ ಕಾರ್ಯಕ್ರಮದಲ್ಲಿ MURTI ಕೇಂದ್ರವು ಕೈಗೊಂಡಿರುವ ಸಂಶೋಧನಾ ಉಪಕ್ರಮಗಳ ವಿಶೇಷವಾದ ಒಳನೋಟಗಳನ್ನು ನೀಡಿತು. ಇಲ್ಲಿ ಪಾಲ್ಗೊಂಡಿದ್ದವರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಪರಿಚಯಿಸಲಾಯಿತು ಮತ್ತು ಖ್ಯಾತನಾಮ ಅಧ್ಯಾಪಕರು ಮತ್ತು ಸಂಶೋಧಕರೊಂದಿಗೆ ಪರಸ್ಪರ ಚರ್ಚೆ ನಡೆಸಲು ಅವಕಾಶವನ್ನು ಕಲ್ಪಿಸಲಾಗಿತ್ತು.

     

    ಚೆನ್ನೈನಲ್ಲಿ ಯುಎಸ್ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್ ಅವರು ಮಾತನಾಡಿ, “ MURTI ಸಂಸ್ಥೆಯು ನಾವೀನ್ಯತೆ ಮತ್ತು ಸಹಭಾಗಿತ್ವಕ್ಕಾಗಿ ನಮಗೆ ಅಗತ್ಯವಿರುವ ಸಂಯೋಜನೆ ಮತ್ತು ಕ್ರಿಯಾತ್ಮಕವಾದ ಸಂಶೋಧನೆಗೆ ಒಂದು ಮಾದರಿಯಾಗಿದೆ. ಇದು ನಮ್ಮ ಆರ್ಥಿಕತೆ ಮತ್ತು ಸಂಬಂಧವನ್ನು ವೃದ್ಧಿಸಲು ನೆರವಾಗುತ್ತದೆ’’ ಎಂದು ಅಭಿಪ್ರಾಯಪಟ್ಟರು.

     

    ಗೀತಂನ ಬೆಂಗಳೂರು ಕ್ಯಾಂಪಸ್ ನ ಪ್ರೊವಿಸಿ ಪ್ರೊ.ಕೆ.ಎನ್.ಎಸ್.ಆಚಾರ್ಯ ಮಾತನಾಡಿ, “ಭಾರತದಲ್ಲಿನ ಶೈಕ್ಷಣಿಕ ಸಂಸ್ಥೆಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ಣಾಯಕ ಅಂಶಗಳಾಗಿವೆ. ಹೊಸತನವನ್ನು ಬೆಳೆಸುವ ನಿಟ್ಟಿನಲ್ಲಿ, ಜ್ಞಾನವನ್ನು ವೃದ್ಧಿ ಮಾಡುವಲ್ಲಿ ಮತ್ತು ಇತ್ತೀಚಿನ ಬೆಳವಣಿಗೆಗಳೊಂದಿಗೆ ಶೈಕ್ಷಣಿಕ ಪಠ್ಯಕ್ರಮಗಳು ಹಾಗೂ ಕಾರ್ಯಕ್ರಮಗಳನ್ನು ನವೀಕರಿಸುವ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದು ನಿರ್ಣಾಯಕವೆನಿಸುವ ಸವಾಲುಗಳನ್ನು ಪರಿಹಾರ ಮಾಡುತ್ತದೆ. ಇದರ ಜೊತೆಗೆ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಉದ್ಯಮ, ಸಮಾಜದ ಶ್ರೇಯಸ್ಸಿಗೆ ಅಗತ್ಯವಾದ ಪರಿಹಾರಗಳನ್ನು ಒದಗಿಸುತ್ತದೆ. ವಿದ್ಯಾರ್ಥಿ-ಕೇಂದ್ರಿತ ಶಿಕ್ಷಣದ ದೃಷ್ಟಿಕೋನದಿಂದ ನೋಡಿದರೆ, MURTI ಉಪಕ್ರಮವು ವಿದ್ಯಾರ್ಥಿಗಳಿಗೆ ಕೇವಲ ಕಂಠಪಾಠ ಆಧಾರಿತ ಶಿಕ್ಷಣ ಪದ್ಧತಿಯನ್ನು ಮೀರಿ ಪ್ರಯೋಗಾಲಯದ ರಚನೆಗಳಲ್ಲಿ ನೈಜ ಪ್ರಪಂಚದ ಸಮಸ್ಯೆ ಪರಿಹಾರದ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ವಿಮರ್ಶಾತ್ಮಕವಾದ ಚಿಂತನೆ ಮತ್ತು ಪ್ರಾಯೋಗಿಕ ತಾರ್ಕಿಕ ಕೌಶಲ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತಾ, ಪ್ರಯೋಗ ಪ್ರಕ್ರಿಯೆಯ ನೈಸರ್ಗಿಕ ಭಾಗವಾಗಿ ವೈಫಲ್ಯಗಳನ್ನೂ ಸ್ವೀಕರಿಸುವ ಮನಸ್ಥಿತಿಯನ್ನು ಪೋಷಣೆ ಮಾಡುತ್ತದೆ’’ ಎಂದು ತಿಳಿಸಿದರು.

    ಉಪಕುಲಪತಿ ಪ್ರೊ.ದಯಾನಂದ ಸಿದ್ದವಟ್ಟಂ ಅವರು ಮಾತನಾಡಿ, “ಖ್ಯಾತನಾಮ ವಿದ್ವಾಂಸರು, ಯುವ ಸಂಶೋಧಕರು ಮತ್ತು ಉತ್ಸಾಹಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಂತರಶಸ್ತೀಯ ಸಂಶೋಧನಾ ಸಂಸ್ಕೃತಿಯನ್ನು ರಚಿಸುವ ಗುರಿಯನ್ನು MURTI ಹೊಂದಿದೆ. ಸ್ಥಳೀಯ ವಿಷಯವನ್ನು ಬಳಸಿಕೊಂಡು ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ. ವಿಶ್ವವಿದ್ಯಾನಿಲಯವು ಸಂಶೋಧನಾ ಮೂಲಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಮತ್ತು ದೇಶಾದ್ಯಂತ ಇರುವ ಯುವ, ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿಗಳನ್ನು ಎಕ್ಸಲೆನ್ಸ್ ಫೆಲೋಗಳನ್ನಾಗಿ ನೇಮಕ ಮಾಡಿಕೊಳ್ಳಲು MURTI 100 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಈ ಮೂಲಕ ಬೆಂಗಳೂರಿನ MURTI ಯನ್ನು ಜ್ಞಾನದ ಹಬ್ ಅನ್ನಾಗಿ ಮಾಡುವ ನಿಟ್ಟಿನಲ್ಲಿ MURTI ವಿಜ್ಞಾನ ಪಾರ್ಕ್ ಅನ್ನಾಗಿ ರೂಪಾಂತರಗೊಳಿಸಲು ಉದ್ದೇಶ ಹೊಂದಲಾಗಿದೆ. ಅಲ್ಲದೇ, ಈ ಪ್ರದೇಶದ ಸುಸ್ಥಿರ ಅಭಿವೃದ್ದಿ ನೆರವಾಗಲು ಅಗತ್ಯವಿರುವ ಜ್ಞಾನ ತಂತ್ರಜ್ಞಾನಗಳನ್ನು ತಯಾರು ಮಾಡುವ ಕೇಂದ್ರಬಿಂದುವಾಗಿದೆ. ಆಧುನಿಕ ಸಮಾಜಗಳ ಜಟಿಲವಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ MURTI ಕೇಂದ್ರವು ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (NCBS), ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರೀಸರ್ಚ್ (NCAR) ಮತ್ತು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಯಂತಹ ವಿಶ್ವವಿಖ್ಯಾತ ಸಂಶೋಧನಾ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಸಹಭಾಗಿತ್ವವನ್ನು ಹೊಂದಲಿದೆ. ಅಲ್ಲದೇ, ಈ ದಿಸೆಯಲ್ಲಿ ಹೆಸರಾಂತ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಉದ್ಯಮಗಳ ನಾಯಕರೊಂದಿಗೂ ಸಹಭಾಗಿತ್ವವನ್ನು ಹೊಂದಲಿದೆ. ಈ ಕೇಂದ್ರವು ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದೊಂದಿಗೆ ಸಹಭಾಗಿತ್ವ ಮಾಡಿಕೊಳ್ಳಲಿದ್ದು, ಬೆಳೆ ರಕ್ಷಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದು, ಬೆಳೆ ನಿರ್ವಹಣೆ, ನೀರು ಸಂರಕ್ಷಣೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಎಐ-ಬೆಂಬಲಿತ ಕೃಷಿ ಪದ್ಧತಿಗಳನ್ನು ಅನುಸರಿಸಲು ಅಗತ್ಯವಾದ ಸಂಶೋಧನೆಗಳನ್ನು ಕೈಗೊಳ್ಳುವ ಕಾರ್ಯದಲ್ಲಿ ತೊಡಗಲಿದೆ’’ ಎಂದರು.

     

    MURTI ಸಂಶೋಧನಾ ಕೇಂದ್ರದ ಉದ್ಘಾಟನೆಯು ಬಹುಶಿಸ್ತೀಯ ಸಹಯೋಗ ಮತ್ತು ಅತ್ಯಾದುನಿಕ ಸಂಶೋಧನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಂಸ್ಥೆಯ ಬದ್ದತೆಯನ್ನು ಸೂಚಿಸುತ್ತದೆ. ಮೂಲಭೂತ ವಿಜ್ಞಾನಗಳು, ಚಲನಶೀಲತೆಯ ತಂತ್ರಜ್ಞಾನಗಳು, ಪರಿಕರಗಳು ಮತ್ತು ಉತ್ಪಾದನೆ, ಸಂವಹನ ತಂತ್ರಜ್ಞಾನಗಳು, ಕೃಷಿ ತಂತ್ರಜ್ಞಾನಗಳು ಹಾಗೂ ಸಂವೇದಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಆರು ಪ್ರಮುಖ ಕ್ಷೇತ್ರಗಳೊಂದಿಗೆ ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಹೊಸತನವನ್ನು ತರುವ ಗುರಿಯನ್ನು ಈ ಕೇಂದ್ರ ಹೊಂದಿದೆ. MURTI ಸಂಶೋಧನಾ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾದ 13 ಆಧುನಿಕ ಪ್ರಯೋಗಾಲಯಗಳನ್ನು ಹೊಂದಿದ್ದು, ಪ್ರಸಿದ್ಧ ಜಾಗತಿಕ ವಿಶ್ವವಿದ್ಯಾಲಯಗಳ ಅಧ್ಯಾಪಕರು ಮತ್ತು ಸಂಶೋಧಕರನ್ನು ಒಳಗೊಂಡಿರುವ ಹೆಮ್ಮೆಯ ಸಂಸ್ಥೆಯಾಗಿದೆ. ಡ್ರೋನ್ ತಂತ್ರಜ್ಞಾನದಿಂದ ಕ್ವಾಂಟಂ ಇನ್ಫೋಕಾಮ್ ವರೆಗೆ ಪ್ರತಿಯೊಂದು ಪ್ರಯೋಗಾಲಯವು ಜ್ಞಾನದ ಗಡಿಗಳನ್ನು ಮೀರಿ ಮತ್ತು ನೈಜ ಪ್ರಪಂಚದ ಪ್ರಭಾವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೂಪುಗೊಂಡಿದೆ.ಬೆಂಗಳೂರಿನ ಗೀತಂ ವಿಶ್ವದಾದ್ಯಂತ ಸಂಶೋಧಕರು, ನಾವೀನ್ಯಕಾರರು ಮತ್ತು ಸಹಯೋಗಿಗಳನ್ನು ಸ್ವಾಗತಿಸುತ್ತದೆ. ಬಹುಶಿಸ್ತೀಯ ಸಂಶೋಧನೆಯ ಶಕ್ತಿಯನ್ನು ಬಳಸಿಕೊಂಡು ಧನಾತ್ಮಕವಾದ ಬದಲಾವಣೆಯನ್ನು ಹೆಚ್ಚಿಸಲು ಮತ್ತು ಎಲ್ಲರಿಗೂ ಉಜ್ವಲ ಭವಿಷ್ಯವನ್ನು ಸೃಷ್ಟಿಸುವ ನಮ್ಮ ಮಿಷನ್ ನಲ್ಲಿ ಕೈಜೋಡಿಸಲು ಕರೆ ನೀಡುತ್ತದೆ ಎಂದರು.

     

     

    ಈ ಕಾರ್ಯಕ್ರಮದಲ್ಲಿ ಹಗುರ ಯುದ್ಧ ವಿಮಾನ (LCA) ತೇಜಸ್ ಯೋಜನೆಯ ಕಾರ್ಯಕ್ರಮ ನಿರ್ದೇಶಕ ಮತ್ತು ಮುಖ್ಯ ವಿನ್ಯಾಸಕಾರ ಡಾ.ಕೋಟ ಹರಿನಾರಾಯಣ, ಚೆನ್ನೈನಲ್ಲಿ ಯುಎಸ್ ಕಾನ್ಸುಲೇಟ್ ನ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್, ಗೀತಂ ಕುಲಪತಿ ಡಾ.ವೀರೇಂದ್ರ ಸಿಂಗ್ ಚೌಹಾಣ್, ಉಪಕುಲಪತಿ ಪ್ರೊ. ದಯಾನಂದ ಸಿದ್ದವಟ್ಟಂ ಮತ್ತು ಬೆಂಗಳೂರು ಕ್ಯಾಂಪಸ್ ನ ಪ್ರೊ ವಿಸಿ ಪ್ರೊ.ಕೆಎನ್ಎಸ್ ಆಚಾರ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.