Blog

  • *ಇಂದಿನಿಂದ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 16 (ವಿಜಯಮಿತ್ರ ): ಭಾರತ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯ ಅಧಿಸೂಚನೆ ಹೊರಡಿಸಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ 2024 ರ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಜೂನ್ 04ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆ ಮಾದರಿ ನೀತಿ ಸಂಹಿತೆಯು ದಿನಾಂಕ 16.03.2024 ರಿಂದ ಜಿಲ್ಲೆಯಾದ್ಯಂತ ಜಾರಿಯಲ್ಲಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿ ಡಾ.ಶಿವಶಂಕರ. ಎನ್ ತಿಳಿಸಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಭಾರತ ಚುನಾವಣಾ ಆಯೋಗದ ಚುನಾವಣಾ ವೇಳಾ ಪಟ್ಟಿಯಂತೆ ಚುನಾವಣಾ ಅಧಿಸೂಚನೆ ದಿನಾಂಕ 28 ಮಾರ್ಚ್ 2024 (ಗುರುವಾರ), ನಾಮಪತ್ರ ಸಲ್ಲಿಸಲು ಕೊನೆಯ ದಿನ 04 ಏಪ್ರಿಲ್ 2024 (ಗುರುವಾರ) ನಾಮಪತ್ರಗಳ ಪರಿಶೀಲನೆ ದಿನಾಂಕ 05 ಏಪ್ರಿಲ್ 2024 (ಶುಕ್ರವಾರ), ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕ – 08 ಏಪ್ರಿಲ್ 2024 (ಸೋಮವಾರ), ಮತದಾನದ ದಿನಾಂಕ -26 ಏಪ್ರಿಲ್ 2024 (ಶುಕ್ರವಾರ), ಮತದಾನದ ಸಮಯ- ಬೆಳಿಗ್ಗೆ 7:00 ರಿಂದ ಸಂಜೆ 6:00 ಗಂಟೆ, ಮತ ಎಣಿಕೆ ದಿನಾಂಕ- 04 ಜೂನ್ 2024 (ಮಂಗಳವಾರ), ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳುವ ದಿನಾಂಕ- 06 ಜೂನ್ 2024 (ಗುರುವಾರ).

    ಜಿಲ್ಲೆಯಲ್ಲಿ ಪ್ರಕಟಿಸಲಾಗಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಇಲ್ಲಿಯವರೆಗೆ ಜಿಲ್ಲೆಯ ನಾಲ್ಕು ತಾಲೂಕುಗಳಿಂದ 8,91,762 ಮತದಾರರು ಇದ್ದಾರೆ. ಇದರಲ್ಲಿ 4,40,884 ಪುರುಷರು,4,50,737 ಮಹಿಳೆಯರು ಹಾಗೂ 141 ಇತರೆ ಮತದಾರರು ಇದ್ದಾರೆ. ಒಟ್ಟು ಮತದಾರರ ಸಂಖ್ಯೆಯಲ್ಲಿ 18 ರಿಂದ 19 ವರ್ಷದೊಳಗಿನ 20,862 ಯುವ ಮತದಾರರು,

    85 ವರ್ಷ ಮೇಲ್ಪಟ್ಟ 10,010

    ಹಿರಿಯ ಮತದಾರರು , 13,107 ಅಂಗವಿಕಲ ಮತದಾರರು ಹಾಗೂ 123 ಸೇವಾ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

    ಜಿಲ್ಲೆಯ 4 ತಾಲೂಕುಗಳಲ್ಲಿನ ಮತದಾರರ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರೇ ಇದ್ದಾರೆ. ದೊಡ್ಡಬಳ್ಳಾಪುರದಲ್ಲಿ ಒಟ್ಟು 2,18,521 ಮತದಾರರಿದ್ದು, ಅದರಲ್ಲಿ 1,10,406 ಮಹಿಳಾ ಮತದಾರರು ಹಾಗೂ 1,08,090 ಪುರುಷ ಮತದಾರರಿದ್ದಾರೆ. ಹೊಸಕೋಟೆಯಲ್ಲಿ ಒಟ್ಟು 2,37,367ಮತದಾರರಿದ್ದು, ಅದರಲ್ಲಿ 1,19,598ಮಹಿಳೆ ಹಾಗೂ 1,17,748 ಪುರುಷ ಮತದಾರರು ಇದ್ದಾರೆ. ದೇವನಹಳ್ಳಿಯಲ್ಲಿ ಒಟ್ಟು 2,15,027 ಮತದಾರರಿದ್ದು, 1,08,548 ಮಹಿಳಾ ಹಾಗೂ 1,06,463 ಪುರುಷ ಮತದಾರರಿದ್ದಾರೆ. ನೆಲಮಂಗಲದಲ್ಲಿ 2,20,847 ಮತದಾರರ ಪೈಕಿ 1,12,161 ಮಹಿಳೆ ಹಾಗೂ 1,08,583 ಪುರುಷ ಮತದಾರರಿದ್ದಾರೆ.

    ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತದಲ್ಲಿ 1 ಸಾವಿರ ಪುರುಷರಿಗೆ 1021 ಮಹಿಳೆಯರಿದ್ದಾರೆ. ಅದರಲ್ಲಿ ದೊಡ್ಡಬಳ್ಳಾಪುರದಲ್ಲಿ 1018, ಹೊಸಕೋಟೆಯಲ್ಲಿ 1014, ದೇವನಹಳ್ಳಿ 1017 ಹಾಗೂ ನೆಲಮಂಗಲದಲ್ಲಿ 1018 ಲಿಂಗಾನುಪಾತ ಕಂಡುಬಂದಿದೆ.

    ಜಿಲ್ಲೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಒಟ್ಟಾಗಿ 1137 ಮತಗಟ್ಟೆಗಳಿವೆ. ಅದರಲ್ಲಿ ದೊಡ್ಡಬಳ್ಳಾಪುರ 276, ಹೊಸಕೋಟೆ 293, ದೇವನಹಳ್ಳಿ 292 ಹಾಗೂ ನೆಲಮಂಗಲ್ಲಿ 276 ಮತಗಟ್ಟೆಗಳಿದೆ.

    ಜಿಲ್ಲೆಯ ಒಟ್ಟು ನಾಲ್ಕು ಮತಕ್ಷೇತ್ರಗಳಿಗೆ 21 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿರುತ್ತದೆ. ಪ್ರತಿ ಚೆಕ್ ಪೋಸ್ಟ್ ಗಳಲ್ಲಿ ಎಸ್.ಎಸ್.ಟಿ ತಂಡ ಹಾಗೂ ಪೋಲಿಸ್ ಸಿಬ್ಬಂದಿಗಳನ್ನು ನೇಮಿಸಲಾಗಿರುತ್ತದೆ.

    ಜಿಲ್ಲೆಯ ನಾಲ್ಕು ತಾಲೂಕುಗಳಿಂದ 104 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.

    ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಇತರೆ ವಿಷಯಗಳ ಬಗ್ಗೆ ಸಾರ್ವಜನಿಕರಿಂದ ಸ್ವೀಕರಿಸುವ ದೂರು ಅಹವಾಲುಗಳನ್ನು ನಿವಾರಿಸುವ ಸಲುವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ಚುನಾವಣಾ ಅಧಿಕಾರಿ ಸಹಾಯಕ ಚುನಾವಣಾ ಅಧಿಕಾರಿ ಅವರ ಕಚೇರಿಗಳಲ್ಲಿ ದೂರು ನಿವಾರಣ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ 080 29902025 ದೂರವಾಣಿ ಸಂಖ್ಯೆ, ಉಚಿತ ಸಹಾಯವಾಣಿ ಸಂಖ್ಯೆ 08119-1950, ಹೊಸಕೋಟೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಅವರ ಕಚೇರಿಯಲ್ಲಿ ದೂರವಾಣಿ ಸಂಖ್ಯೆ 080 27931237, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಅವರ ದೂರವಾಣಿ ಸಂಖ್ಯೆ 080 22122999, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಅವರ ದೂರವಾಣಿ ಸಂಖ್ಯೆ 080 27622037, ನೆಲಮಂಗಲ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಅವರ ದೂರವಾಣಿ ಸಂಖ್ಯೆ 080 27722126 ಸಂಖ್ಯೆಗೆ ಕರೆ ಮಾಡಿ ದೂರು ಅಥವ ಅಹವಾಲು ಸಲ್ಲಿಸಬಹುದು.

    ಅಂತಿಮ ಮತದಾರ ಪಟ್ಟಿಯನ್ನು ಈಗಾಗಲೇ ಪ್ರಚಾರ ಪಡಿಸಲಾಗಿದ್ದು, ಮತದಾರರ ನಿರಂತರ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಮುಂದುವರಿಸುತ್ತಾ ಹೊಸದಾಗಿ ನೋಂದಾಯಿಸಬೇಕಾದ ಮತದಾರರಿಗೆ ಮಾರ್ಚ್ 26ರ ವರೆಗೆ ನೋಂದಣಿಗಾಗಿ ಅರ್ಜಿಯನ್ನು ಸ್ವೀಕರಿಸುವ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುತ್ತದೆ ಕಾರಣ ಅರ್ಹರಿರುವ ಮತದಾರರು ನಿಗದಿಪಡಿಸಿದ ಕಾಲಮಿತಿಯೊಳಗೆ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿ ಸೂಕ್ತ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಮತದಾನದ ಹಕ್ಕನ್ನು ಚಲಾಯಿಸಿ ಸುಭದ್ರವಾದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸೂಕ್ತ ಪಾತ್ರ ವಹಿಸಲು ಸಾರ್ವಜನಿಕರಲ್ಲಿ ವಿನಂತಿಸಿದರು ಒಟ್ಟಾರೆಯಾಗಿ ಈ ಚುನಾವಣೆಯು ಅತ್ಯಂತ ಶಾಂತ ರೀತಿಯಿಂದ ಮುಕ್ತವಾಗಿ ನಡೆಸಲು ಸಹಕರಿಸಿ ಜಿಲ್ಲೆಯ ಎಲ್ಲಾ ಮತದಾರರು ನ್ಯಾಯ ಸಮ್ಮತವಾಗಿ ಹಾಗೂ ನಿಷ್ಪಕ್ಷಪಾತವಾಗಿ ಜರುಗುವಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಲು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಸಿಬ್ಬಂದಿ ವರ್ಗದವರಿಗೆ ಕಟ್ಟುನಿಟ್ಟಾಗಿ ನಿರ್ದೇಶಿಸಲಾಗಿದೆ ಜಿಲ್ಲೆಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮತದಾನ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಅವರು ಸಾರ್ವಜನಿಕರಲ್ಲಿ ಕೋರಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಮಾದರಿ ನೀತಿ ಸಂಹಿತೆ ನೋಡಲಾಧಿಕಾರಿ ಡಾ.ಕೆ.ಎನ್ ಅನುರಾಧ ಅವರು ಮಾತನಾಡಿ

    ಜಿಲ್ಲೆಯಲ್ಲಿ ಮತದಾನ ಹೆಚ್ಚಿಸಲು ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮತದಾನ ನಡೆದ ಮತದಾನ ಕೇಂದ್ರಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದ್ದು, ಮತದಾನ‌ ಹೆಚ್ಚಿಸಲು ಅಗತ್ಯ ಸಿದ್ಧತೆ ಕೈಗೊಳುತ್ತೇವೆ. ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಉಲ್ಲಂಘನೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದ್ದು ಸಾರ್ವಜನಿಕರು ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಉಲ್ಲಂಘನೆಯಲ್ಲಿ ಮಾಹಿತಿ ನೀಡಬಹುದು ಎಂದು ಅವರು ಹೇಳಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ಮಾತನಾಡಿ ಜಿಲ್ಲೆಯಲ್ಲಿ ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಜಿಲ್ಲೆಯಾದ್ಯಂತ 21 ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗುತ್ತಿದ್ದು, ತಮಿಳುನಾಡಿಗೆ ಹೊಂದಿಕೊಂಡಂತೆ ಹೊಸಕೋಟೆ ಬಳಿಯ ಬಾಗೂರು ಬಳಿ ಚೆಕ್ಪೋಸ್ಟ್ ನಿರ್ಮಿಸಲಾಗಿದೆ, ಅಂತರ್ ಜಿಲ್ಲೆಯಲ್ಲಿ 13 ಚೆಕ್ ಪೋಸ್ಟ್ ಗಳು, ಜಿಲ್ಲೆಯ ಒಳಗೆ 08 ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲಾ ಫ್ಲೆಕ್ಸ್ ಬ್ಯಾನರ್ ಗಳನ್ನು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ತೆರವುಗೊಳಿಸಲಾಗಿದೆ. ಪರವಾನಿಗೆ ಹೊಂದಿದ ಶಸ್ತ್ರಾಸ್ರಗಳನ್ನು ಹಿಂಪಡೆಯಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಂಡು ಶಾಂತ ರೀತಿಯಲ್ಲಿ ಚುನಾವಣೆ ನಡೆಸಲು ಸನ್ನದ್ಧರಾಗಿದ್ದೇವೆ ಎಂದು ಹೇಳಿದರು.

    ಪತ್ರಿಕಾ ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಮತ್ತಿತರರು ಉಪಸ್ಥಿತರಿದ್ದರು.

  • *ಉಪನಗರ ರೈಲು ಯೋಜನೆಯ ಮೊದಲ ಮಾರ್ಗ 2025ರ ಡಿಸೆಂಬರ್ ಗೆ ಪೂರ್ಣ: ಸಚಿವ ಎಂ.ಬಿ ಪಾಟೀಲ*

    ಬೆಂಗಳೂರು: ಬಿ ಎಸ್ ಆರ್ ಪಿ (ಬೆಂಗಳೂರು ಉಪನಗರ ರೈಲು ಯೋಜನೆ) ಮೊದಲ ಭಾಗವಾದ ಚಿಕ್ಕಬಾಣಾವರ-ಯಶವಂತಪುರ ನಡುವಿನ 7.4 ಕಿ‌.ಮೀ. ಮಾರ್ಗದಲ್ಲಿ 2025ರ ಡಿಸೆಂಬರ್ ವೇಳೆಗೆ ರೈಲು ಸಂಚಾರ ಆರಂಭವಾಗಲಿದ್ದು, ಇದರಲ್ಲಿ ದೇಶದಲ್ಲೇ ಅತಿ ಉದ್ದದ ಗರ್ಡರ್ ಬಳಸಲಾಗುತ್ತಿದೆ ಎಂದು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಶನಿವಾರ ಹೇಳಿದರು.

     

    ದೇಶದಲ್ಲೇ ಅತಿ ಉದ್ದದ (100 ಅಡಿ ಅಥವಾ 31 ಮೀಟರ್) ಯು-ಗರ್ಡರ್ ನಿರ್ಮಾಣ ಪ್ರಕ್ರಿಯೆಯನ್ನು ವೀಕ್ಷಿಸಲು ದೇವನಹಳ್ಳಿ ಬಳಿಯ ಗೊಲ್ಲಹಳ್ಳಿಯ ಕ್ಯಾಸ್ಟಿಂಗ್ ಕಾರ್ಯಾಗಾರಕ್ಕೆ ಭೇಟಿ ನೀಡಿದ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

     

    ಎಂಜಿನಿಯರಿಂಗ್ ಅದ್ಭುತ ಈ ಎನ್ನಲಾಗಿರುವ ಈ 100 ಅಡಿ ಉದ್ದದ ಯು-ಗರ್ಡರ್ ಅನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ಉಪನಗರ ರೈಲು ಯೋಜನೆಗೆ ಬಳಸಲಾಗುತ್ತಿದೆ. ಮಲ್ಲಿಗೆ ಕಾರಿಡಾರ್ ನ (ನಂಬರ್ 2) ಭಾಗವಾದ ಹೆಬ್ಬಾಳ- ಯಶವಂತಪುರದ 8 ಕಿಮೀ ನಡುವೆ ಇಂತಹ ಸುಮಾರು 450 ಯು-ಗರ್ಡರ್ ಗಳನ್ನು ಬಳಸಲಾಗುತ್ತದೆ. ಇದಕ್ಕೆ ಮುಂಚೆ, ದೇಶದಲ್ಲಿ ಬೇರೆ ರೈಲ್ವೆ ಯೋಜನೆಗಳಲ್ಲಿ 28 ಮೀ. ಉದ್ದದ ಯು- ಗರ್ಡರ್ ಗಳನ್ನು ಬಳಸಲಾಗುತ್ತಿತ್ತು.

     

    ಈ ಎಲ್ ಅಂಡ್ ಟಿ ಕ್ಯಾಸ್ಟಿಂಗ್ ಯಾರ್ಡ್ ನಲ್ಲಿ ಐ-ಗರ್ಡರ್ ಮತ್ತು ಫೈಯರ್ ಕ್ಯಾಪ್ ಗಳನ್ನು ಕೂಡ ಕ್ಯಾಸ್ಟಿಂಗ್ ಮಾಡಲಾಗುತ್ತದೆ. ಮೇಲಿನ ಮಾರ್ಗದಲ್ಲಿ ಇಂತಹ 323 ಐ-ಗರ್ಡರ್, 283 ಫೈಯರ್ ಕ್ಯಾಪ್ ಗಳನ್ನು ಬಳಸಲಾಗುತ್ತದೆ.

     

    ಈ ಗರ್ಡರ್ ನ ಅನುಕೂಲಗಳ ಬಗ್ಗೆ ಪ್ರಸ್ತಾಪಿಸಿದ ಸಚಿವ ಪಾಟೀಲ ಅವರು, ಇದರಿಂದ ವಯಾಡಕ್ಟ್ ಕೂರಿಸಲು ಹಿಡಿಯುವ ಸಮಯವನ್ನು ಕಡಿಮೆಗೊಳಿಸುತ್ತದೆ, ನೋಡುವುದಕ್ಕೆ ಸುಂದರವಾಗಿರುತ್ತದೆ, ಬಾಳಿಕೆಯ ಅವಧಿ ಹೆಚ್ಚುತ್ತದೆ ಹಾಗೂ ಹಣ ಉಳಿತಾಯವೂ ಆಗುತ್ತದೆ ಎಂದು ವಿವರಿಸಿದರು.

     

    ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಈವರೆಗೆ ಶೇಕಡ 20ರಷ್ಟು ಕಾಯಂ ಕಾಮಗಾರಿಗಳು ಮುಗಿದಿವೆ. ಕಾರಿಡಾರ್ -2ರಲ್ಲಿ (ಚಿಕ್ಕಬಾಣಾವರ-ಬೆನ್ನಿಗಾನಹಳ್ಳಿ) ಅಗತ್ಯವಿರುವ 120.44 ಎಕರೆ ಭೂಮಿಯ ಪೈಕಿ 119.18 ಎಕರೆ ಜಮೀನು (ಶೇಕಡ 98.5 ರಷ್ಟು) ಈಗಾಗಲೇ ಸ್ವಾಧೀನಗೊಂಡಿದೆ ಎಂದು ತಿಳಿಸಿದರು.

     

    ಕಾರಿಡಾರ್ – 2ರಲ್ಲಿ ಉತ್ತಮವಾಗಿ ಕೆಲಸ ನಡೆಯುತ್ತಿದೆ. ನಾಗರಿಕ ಸೇವೆಗಳನ್ನು ಸ್ಥಳಾಂತರಿಸುವ ಬಗ್ಗೆ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಸ್ಎನ್ಎಲ್ ಹಾಗೂ ಇನ್ನಿತರ ಖಾಸಗಿ ಸಂಸ್ಥೆಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಪಾಟೀಲ ಹೇಳಿದರು.

     

    ಕೆಂಗೇರಿ- ವೈಟ್ ಫೀಲ್ಡ್ ಕಾರಿಡಾರನಲ್ಲಿ ಕೆಂಗೇರಿ- ಕಂಟೋನ್ಮೆಂಟ್ ನಡುವೆ ಉಪನಗರ ಯೋಜನೆ ಜಾರಿಗೆ ಯಾವ ಆತಂಕವೂ ಇಲ್ಲ. ಆದರೆ ಕಂಟೋನ್ಮೆಂಟ್- ವೈಟ್ ಫೀಲ್ಡ್ ನಡುವೆ ಜಾಗದ ಸಮಸ್ಯೆ ಇದ್ದು, ಇಲ್ಲಿ ಎತ್ತರಿಸಿದ ಮಾರ್ಗ ನಿರ್ಮಿಸಬೇಕೆ ಅಥವಾ ಬೇರೆ ಯಾವ ರೀತಿಯಲ್ಲಿ ಯೋಜನೆ ಅನುಷ್ಠಾನ ಮಾಡಬಹುದು ಎಂಬುದರ ಬಗ್ಗೆ ರೈಲ್ವೆ ಜತೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.

     

    ಒಟ್ಟಾರೆ, ರೂ 15,677 ಕೋಟಿಯ ಯೋಜನೆಯ ನಾಲ್ಕೂ ಕಾರಿಡಾರ್ ಗಳ 148.17 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ಡಿಸೆಂಬರ್ 2027ಕ್ಕೆ ಮುಗಿಯಲಿದೆ. ಈ ಗುರಿಗೆ ಪೂರಕವಾಗಿ ರೈಲ್ವೆ ಇಲಾಖೆಯು ಸಿ-1 ಮತ್ತು ಸಿ- 3 ಕಾರಿಡಾರ್ ಗಳ ಕಾಮಗಾರಿಗಾಗಿ ಒತ್ತುವರಿ ತೆರವುಗೊಳಿಸಿದ ಭೂಮಿಯನ್ನು ನಮಗೆ ಹಸ್ತಾಂತರಿಸಬೇಕು ಹಾಗೂ ಡಿಪಿಆರ್ ನಲ್ಲಿ ಇರುವಂತೆ ಅಲೈನ್ಮೆಂಟಿಗೆ ಅನುಮತಿ ನೀಡಬೇಕು ಎಂದು ಕೋರಿದರು.

     

    ರೈಲ್ವೆ ಇಲಾಖೆಯು ಮುಂಬರುವ ವರ್ಷಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವರ್ತುಲ ರೈಲ್ವೆ ಯೋಜನೆಗೆ ಉಪನಗರ ರೈಲು ಯೋಜನೆಯನ್ನು ಸಂಪರ್ಕಿಸುವ ಜೊತೆಗೆ ಅದನ್ನು ಬೆಂಗಳೂರು ಸುತ್ತಲ ಉಪನಗರಗಳಿಗೆ ವಿಸ್ತರಿಸುವ ಬಗ್ಗೆಯೂ ಕೆ-ರೈಡ್ ಈಗಾಗಲೇ ಚಿಂತನೆ ನಡೆಸುತ್ತಿದೆ. ಇದರ ಬಗ್ಗೆ ರೈಲ್ವೆ ಇಲಾಖೆ ಜೊತೆ ಚರ್ಚಿಸಿ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

    ಕೆ- ರೈಡ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.ಮಂಜುಳಾ ಸೇರಿದಂತೆ ಇತರರು ಇದ್ದರು.

     

    ಬಾಕ್ಸ್…

     

    *ಕೆ-ರೈಡ್ ಸಮರ್ಥವಾಗಿದೆ*

    ಸಚಿವ ಪಾಟೀಲ ಅವರು ಇದೇ ಸಂದರ್ಭದಲ್ಲಿ ಕೆ-ರೈಡ್ ನ ಪರಿಣತಿಯನ್ನು ಸಮರ್ಥಿಸಿಕೊಡರು. ಉಪನಗರ ರೈಲು ಯೋಜನೆಯಂತಹ ದೊಡ್ಡ ಯೋಜನೆಗಳನ್ನು ಕಾರ್ಯಗತಗೊಳಿಸಲು ಬೇಕಾದ ತಾಂತ್ರಿಕ ಪರಿಣತಿ ಕೆ-ರೈಡ್ ಬಳಿ ಇಲ್ಲ ಎಂಬ ರೈಲ್ವೆ ಇಲಾಖೆಯ ಅಭಿಪ್ರಾಯದಲ್ಲಿ ಯಾವ ಸತ್ಯಾಂಶವೂ ಇಲ್ಲ ಎಂದು ಅವರು ತಿರುಗೇಟು ನೀಡಿದರು.

     

    ಉಪನಗರ ರೈಲು ಯೋಜನೆ ರೈಲ್ವೆ ಇಲಾಖೆಯು ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಡಿ ನಡೆಯುತ್ತಿದ್ದಾಗ ಕೆಲಸ ಹಿಂದೆ ಬಿದ್ದಿತ್ತು. ಈಗ ಕೆ-ರೈಡ್ ಕೆಲಸವನ್ನು ಚುರುಕುಗೊಳಿಸಿ, ಸಮರ್ಥವಾಗಿ ನಿರ್ವಹಿಸುತ್ತಿದೆ. ನಮ್ಮಲ್ಲಿ ತಾಂತ್ರಿಕ ತಜ್ಞರು ಹಾಗೂ ಅನುಭವಿಗಳು ಇದ್ದಾರೆ. ರೈಲ್ವೆ ಇಲಾಖೆಯ ಹೇಳಿಕೆ ಯೋಜನೆಯ ವಿಷಯವನ್ನು ರಾಜಕೀಯ ಕಾರಣಗೊಳಿಸುವ ದುರುದ್ದೇಶ ಹೊಂದಿದೆ. ಯಾವುದೇ ಕೆಸರೆರಚಾಟಕ್ಕೆ ರೈಲ್ವೆ ಇಲಾಖೆ ಆಸ್ಪದ ಕೊಡಬಾರದು ಎಂದು ಪಾಟೀಲ ಮತ್ತೆ ಹೇಳಿದರು.

  • ನಮ್ಮ ಪ್ರಾಧಿಕಾರ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಕೆಲಸ ಮಾಡುವುದು – ವಿಶ್ವನಾಥ್ ರೆಡ್ಡಿ

    ದೊಡ್ಡಬಳ್ಳಾಪುರ ಮಾ.16 (ವಿಜಯಮಿತ್ರ ):ತಾಂತ್ರಿಕ ಕಾರಣದಿಂದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ, ನಮ್ಮ ಪ್ರಾಧಿಕಾರ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಕೆಲಸ ಮಾಡುವುದು, ಯೋಜನೆಗಳ ಫಲಾನುಭವಿಗಳಾಗಲು ನಮ್ಮ ಪ್ರಾಧಿಕಾರವನ್ನ ಸಂಪರ್ಕಿಸಿದ್ದಾರೆ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಲಾಗುವುದು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ್ ರೆಡ್ಡಿ ತಿಳಿಸಿದರು.

     

    ನಗರ ಭಾಗದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರ ಸ್ವೀಕಾರ ಮತ್ತು ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಚುಂಚೇಗೌಡ, ಕೆಪಿಸಿಸಿ ವಕ್ತಾರರಾದ ಜಿ.ಲಕ್ಷ್ಮೀಪತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ವೆಂಕಟೇಶ್ (ಅಪ್ಪಿ ), ಆದಿತ್ಯ ನಾರಾಯಣ್, ಅಂಜನ್ ಮೂರ್ತಿ ಸೇರಿದಂತೆ ತಾಲ್ಲೂಕಿನ ಹಲವು ಮುಖಂಡರು ಭಾಗವಹಿಸಿ ನೂತನ ಅಧ್ಯಕ್ಷರಿಗೆ ಶುಭಕೋರಿದರು.

     

    ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವನ್ನು ಜಾರಿ ಮಾಡಲಾಗಿದ್ದು, ದೊಡ್ಡಬಳ್ಳಾಪುರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾಗಿ ವಿಶ್ವನಾಥ್ ರೆಡ್ಡಿ ಇಂದು ಅಧಿಕಾರ ಸ್ವೀಕರಿಸಿದರು ಜೊತೆಗೆ ಪ್ರಾಧಿಕಾರದ 15 ಸದಸ್ಯರ ಪದಗ್ರಹಣ ಸಹ ನಡೆಯಿತು.

     

    ಅಧ್ಯಕ್ಷರಾದ ವಿಶ್ವನಾಥ್ ರೆಡ್ಡಿ ಮಾತನಾಡಿ ರಾಜ್ಯದ ಬಡವರು ಸ್ವಾವಲಂಬಿ ಜೀವನ ನೆಡೆಸಲು ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿದೆ, ಅಸಮಾನತೆ ಮತ್ತು ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಜಾರಿ ಮಾಡಲಾಗಿದ್ದು, ಈ ಮೂಲಕ ಬಡವರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ,ಜೊತೆಗೆ ಕುಟುಂಬ ನಿರ್ವಹಣೆ ಸಮರ್ಪಕ ರೀತಿಯಲ್ಲಿ ಮಾಡಲು ಸಹಕರಿಯಾಗಿದೆ.

     

    ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರು ಸರ್ಕಾರದ ನಾಲ್ಕು ನಿಗಮಗಳ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು, ಪ್ರಯಾಣಕ್ಕೆ ಖರ್ಚಾಗುತ್ತಿದ್ದ ಹಣ ಉಳಿತಾಯ ವಾಗುವುದರಿಂದ, ಉಳಿಕೆಯ ಹಣ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಿದೆ.ಗೃಹಲಕ್ಷ್ಮೀ ಯೋಜನೆ ಜಾರಿಯಿಂದ ಬೆಲೆ ಏರಿಕೆಯಿಂದ ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣ ನೀಡಲಾಗುತ್ತಿದೆ.ಗೃಹಜ್ಯೋತಿ ಯೋಜನೆಯಿಂದ ಪ್ರತಿ ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ, ಯುವನಿಧಿ ಯೋಜನೆಯಿಂದ ವಿದ್ಯಾಭ್ಯಾಸ ಮುಗಿಸಿ ನಿರುದ್ಯೋಗಸಮಸ್ಯೆ ಎದುರಿಸುತ್ತಿರುವ ಯುವಕರಿಗೆ ಉದ್ಯೋಗ ಸಿಗುವ ತನಕ ಪ್ರತಿ ತಿಂಗಳು ಹಣ ನೀಡಲಾಗುತ್ತಿದೆ ಎಂದರು.

     

    ಕೆಪಿಸಿಸಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ವಕ್ತರರಾದ ಜಿ.ಲಕ್ಷ್ಮೀಪತಿ ಮಾತನಾಡಿ ರಾಜ್ಯ ಸರ್ಕಾರದ ಉತ್ತಮ ಯೋಜನೆಗಳನ್ನು ತಾಲ್ಲೂಕಿನ ಪ್ರತಿ ಮನೆ ಮನೆಗೆ ತಲುಪಿಸುವ ಅವಕಾಶವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಲ್ಪಿಸಿದ್ದು ಈ ಅವಕಾಶವನ್ನು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

    ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಬಿಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಚುಂಚೇ ಗೌಡ ಮಾತನಾಡಿ ಪಕ್ಷದ ನಾಯಕರು ಹಾಗೂ ಹಿರಿಯ ಮುಖಂಡರು ನೀಡಿರುವ ಜವಾಬ್ದಾರಿಯನ್ನು ವಿಶ್ವನಾಥ್ ರೆಡ್ಡಿ ಮತ್ತು ತಂಡ ಉತ್ತಮ ರೀತಿಯಲ್ಲಿ ನಿರ್ವಹಿಸುವ ಮೂಲಕ ತಮ್ಮ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳನ್ನು ಪ್ರತಿ ಕುಟುಂಬಕ್ಕೆ ತಲುಪಿಸಲಿ ಎಂದು ಹಾರೈಸಿದರು.

    ಈ ಸಂದರ್ಭದಲ್ಲಿ ತಾ.ಪಂ ಇಒ ಮುಜಿರಾಜು, ಡಿಪಿಎ ಅಧ್ಯಕ್ಷ ಚುಂಚೇಗೌಡ, ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ಮುಖಂಡರಾದ ಜಗದೀಶ್ ರೆಡ್ಡಿ, ಅಲ್ತಾಫ್, ಕಿಟ್ಟಿ, ರಾಜಗೋಪಾಲ್, ಕೆಂಪಣ್ಣ, ಅಣ್ಣಯ್ಯಪ್ಪ, ಆರೂಢಿ ವೆಂಕಟೇಶ್ ಮತ್ತಿತ್ತರು ಇದ್ದರು

  • ನಮ್ಮ ಭಾಷೆ,ಸಂಸ್ಕೃತಿ,ನೆಲ, ಜಲಕ್ಕೆ ಗೌರವ ಕೊಡಿ – ಎ. ನಂಜಪ್ಪ

    ದೊಡ್ಡಬಳ್ಳಾಪುರ ( ವಿಜಯಮಿತ್ರ ) : ಸರ್ಕಾರದ ಆದೇಶದಂತೆ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡಕ್ಕೆ ಆದ್ಯತೆ ನೀಡಬೇಕು ಹಾಗೂ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಪಾಲಿಸುವಂತೆ ಅಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ನಡೆಸಲಾಯಿತು.

    ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ, ಆಸ್ಪತ್ರೆ, ಹೋಟೆಲ್ ಸೇರಿದಂತೆ ಹಲವು ವಾಣಿಜ್ಯ ಮಳಿಗೆಗಳಿಗೆ ಭೇಟಿಕೋಟ್ಟು ತಮ್ಮ ನಾಮಫಲಕಗಳಲ್ಲಿ ಕನ್ನಡ ಬಳಸುವಂತೆ ಒತ್ತಾಯಿಸಲಾಯಿತು

     

    ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎ.ನಂಜಪ್ಪ ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ಬೇರೆ ರಾಜ್ಯದ ಹಲವು ಭಾಷೆಯ ಜನರು ಇಲ್ಲಿ ತಮ್ಮ ಜೀವನವನ್ನು ಒಂದಲ್ಲ ಒಂದು ರೀತಿಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಟ್ಟಿಕೊಂಡಿದ್ದಾರೆ .

     

    ನಮ್ಮ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ಮತ್ತು ಕಟ್ಟಡ ಕಾರ್ಮಿಕ ವೃತ್ತಿಯಲ್ಲಿ ಸಾವಿರಾರು ಜನರು ತೊಡಗಿಸಿಕೊಂಡಿದ್ದಾರೆ ಆದರೆ ಸಕಲ ಸೌಲಭ್ಯಗಳನ್ನು ಪಡೆಯುವ ಅನ್ಯರಿಗೆ ನಮ್ಮ ಭಾಷೆ ಮಾತ್ರ ಬೇಡ.ಇಲ್ಲಿ ಬಂದು ನೆಲೆಸಿರುವ ಬೇರೆ ರಾಜ್ಯದ ಜನ ಇಲ್ಲಿಯ ಭಾಷೆ, ಸಂಸ್ಕೃತಿ, ನೆಲ, ಜಲಕ್ಕೆ ಗೌರವ ಕೊಡುವುದು ಅವರ ಆದ್ಯಕರ್ತವ್ಯ ಎಂಬುದು ತಿಳಿದಿರಲಿ . ಸ್ಥಳೀಯ ರಾಜಕೀಯ ನಾಯಕರಿಗೆ ಭಾಷೆ ಕುರಿತು ಕಾಳಜಿ ಇಲ್ಲ ಎಂದು ದೂರಿದರು.

     

    ರಾಜ್ಯ ಸರ್ಕಾರ ಹೊರಡಿಸಿದ ನಾಮ- ಫಲಕಗಳಲ್ಲಿ ಕನ್ನಡ ಭಾಷೆ ಶೇ 60ರಷ್ಟು ಕಡ್ಡಾಯ ಪಾಲನೆ ಮಾಡದವರ ವಿರುದ್ಧ ನಗರಸಭೆ ಅಧಿಕಾರಿಗಳು ಅಂಗಡಿ ಪರವಾನಗಿ ಅಥವಾ ನವೀಕರಣ ಮಾಡುವಾಗ ಕನ್ನಡ ಕಡ್ಡಾಯದ ನಿಯಮ ತಿಳಿಸಬೇಕು. ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

     

     

    ಕನ್ನಡಪರ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತರದಾಳ ಶ್ರೀನಿವಾಸ್, ಉಪಾಧ್ಯಕ್ಷ ನಯಾಜ್ ಖಾನ್, ಕಾರ್ಮಿಕ ಘಟಕದಗಂಗರಾಜು, ಸಂಘಟನೆಗಳ ಮುಖಂಡ ಹರಿಕುಮಾ‌ರ್, ಪ್ರವೀಣ್‌ಕುಮಾ‌ರ್, ಗೌರಮ್ಮ, ಕುಮುದಾ, ನಂದಿನಿ, ದರ್ಶನ್, ವಿಶ್ವನಾಥ್, ಮಹೇಶಪ್ಪ, ಭವಿಷ್ಯತ್, ಮಂಜುನಾಥ್, ಕೆಂಪೇಗೌಡ, ರಾಜು ಸಣ್ಣಕ್ಕಿ, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

  • ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಎಲ್ಲರಂಗಗಳಲ್ಲೂ ಸಾಧನೆ ಮಾಡಿರುವುದನ್ನು ನಾವು ನೋಡಬಹುದು – ಎಂ ನಾಗಮಣಿ

    ದೊಡ್ಡಬಳ್ಳಾಪುರ (ವಿಜಯಮಿತ್ರ) : ಮಹಿಳೆಯರು ವ್ಯಾಪಾರ, ಕ್ರೀಡೆ, ಸ್ವ ಉದ್ಯೋಗ, ಇತ್ಯಾದಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಸಹಾಯಕ ಯೋಜನಾಧಿಕಾರಿ ಎಂ ನಾಗಮಣಿ ಹೇಳಿದರು.

    ಅವರು ತಾಲ್ಲೂಕಿನ ಮದುರೆ ಹೋಬಳಿಯ ಕೊಡಿಹಳ್ಳಿಪಾಳ್ಯ ಗ್ರಾಮದಲ್ಲಿ ಚೆನ್ನದೇವಿ ಅಗ್ರಹಾರ ಗ್ರಾಮ ಪಂಚಾಯತಿ ಹಾಗೂ ಜೈಭಾರತಿ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ‌ ದಿನಾಚರಣೆಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರ ಹಲವು ಸಾಧನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.ಮಹಿಳೆಯರು ಸ್ವಾವಲಂಬಿ ಬದುಕಿನ ಕಡೆ ಹೆಚ್ಚು ಗಮನ‌ ನೀಡಿದಾಗ ಮಾತ್ರ ಅವರ ಆರ್ಥಿಕ ಸ್ಥಿತಿ ಉತ್ತಮ‌ಗೊಳ್ಳಲು ಸಾಧ್ಯವಾಗುತ್ತದೆ. ಭಾರತದಲ್ಲಿ ಮಹಿಳೆಯರು ವಿವಿಧ ರೀತಿಯ ಚಟುವಟಿಕೆಗಳನ್ನು ತೊಡಗಿಸಿಕೊಂಡಿದ್ದಾರೆ.

     

    ಇಂತಹ ಸಂದರ್ಭದಲ್ಲಿ ಸ್ಥಳೀಯ ಮಹಿಳಾ ಒಡೆತನದ ಹಲವು ಸಂಸ್ಥೆಗಳನ್ನು ಗುರುತಿಸುವುದು. ಮಹಿಳಾ ಚಾರಿಟಿಗಾಗಿ ನಿಧಿಯನ್ನು ಸಂಗ್ರಹಿಸುವುದು. ಸ್ಪೂರ್ತಿದಾಯಕ ಮಹಿಳೆಯರ ಬಗ್ಗೆ ಕಲಿಯುವುದು. ಒಬ್ಬರ ಜೀವನದಲ್ಲಿ ಬದಲಾವಣೆಯನ್ನು ತಂದ ಮಹಿಳೆಯರನ್ನು ಗುರುತಿಸುವುದು. ಪುರುಷರಷ್ಟೆ ಸಮಾನವಾಗಿ ಎಲ್ಲಾ ರಂಗಗಳಲ್ಲಿ ಸಾದನೆ ಮಾಡಿರುವುದನ್ನು ನಾವು ನೋಡಬಹುದು.ಇದು ಲಿಂಗ ಸಮಾನತೆ ಹಾಗೂ ಜಗತ್ತನ್ನು ರೂಪಿಸುವಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಎಂಬ ಅಂಶವನ್ನು ಬಲವಾಗಿ ಹೇಳಲು ಒಂದು ಉತ್ತಮ ಉದಾಹರಣೆ. ಮಹಿಳಾ ಸಾಧಕರನ್ನು ನೆನೆದು ಸಮಾನತೆಯನ್ನು ಸಾರುವ ದಿನ ಎಂದು ಹೇಳಬಹುದು. ಈ ದಿನವನ್ನು ಸಣ್ಣ ಕಂಪನಿಗಳಿಂದ ಹಿಡಿದು, ದೊಡ್ಡ ಕಂಪನಿಗಳು, ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳಲ್ಲೂ ಮೌಲ್ಯಯುತ ಭಾಷಣಗಳನ್ನು ಮಾಡುವ ಮೂಲಕ ಆಚರಣೆ ಮಾಡುವುದು. ಹಾಗೆ ಬಹುಮುಖ್ಯವಾದ ವಿಷಯಗಳ ಬಗ್ಗೆ ಪತ್ರಿಕಾಗೋಷ್ಠಿಗಳು ಸಹ ನೆಡೆಸುವುದು. ಮಹಿಳೆಯರ ಸಮಾನತೆಯನ್ನು ಎಲ್ಲರಿಗೂ ತಿಳಿಯುವಂತೆ ಹೇಳುವ ದಿನವಾಗಿದೆ ಎಂದರು.

     

    ಗ್ರಾಮ ಪಂಚಾಯತಿ ಸದಸ್ಯೆ ಎಸ್ ಜಿ ಕಾಂತಲಕ್ಷ್ಮೀ ಮಾತನಾಡಿ ಮದುರೆ ಹೋಬಳಿಯ ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರ ಕ್ಕೆ‌ ಹೆಚ್ವಿನ‌ ಆದ್ಯತೆ ನೀಡಬೇಕಾಗಿದೆ. ಮಹಿಳೆಯರು ಸಂಘದಿಂದ‌ ಸಾಲ ಸೌಲಭ್ಯ ಪಡೆದು ಕೊಂಡು ಸ್ವ ಉದ್ಯೋಗ ಅಂದರೆ ಕುರಿ, ಮೇಕೆ, ಕೋಳಿ, ಹಸು ಸಾಗಾಣಿಕೆ ಮಾಡಿಕೊಳ್ಳಬಹುದು. ಇದಲ್ಲದೆ ಕೃಷಿಯಲ್ಲಿ ಅನೇಕ ಮಾದರಿಯ‌ ಬೆಳೆಗಳನ್ನು ನಾವು ಬೆಳೆದಾಗ ಮಾತ್ರ ಉತ್ತಮ ಲಾಭದಾಯಕ ಕೃಷಿ ಮಾಡಲು ಸಾಧ್ಯವಾಗುತ್ತದೆ. ಸಮಗ್ರ ಕೃಷಿಯನ್ನ ನಮ್ಮ ಜಮೀನುಗಳಲ್ಲಿ ಅಳವಡಿಸಿಕೊಂಡು ಉತ್ತಮ ಇಳುವರಿ ಉತ್ತಮ ಬೆಳೆ. ಬೆಳಗ್ಗೆ ತಕ್ಕಂತೆ ಲಾಭ ಪಡೆದು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು. ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸರಕಾರದ ವಿವಿದ ಇಲಾಖೆಯ ಅನೇಕ ಯೋಜನೆಗಳ ಮಾಹಿತಿ ಪಡೆದುಕೊಂಡು ಅದನ್ನು ಸದುಉಪಯೋಗ ಪಡಿಸಿಕೊಳ್ಳಬೇಕು ಎಂದರು.

     

    ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮಕುಮಾರಿ, ಸದಸ್ಯರಾದ ರೂಪಶ್ರೀ, ಪ್ರಮೀಳಾ, ಸುಧಾ, ಮಂಜುನಾಥ್, ಜಗದೀಶ್ ಅಮರೇಶ್ ಕುಮಾರ್, ಪಿಡಿಒ ನಂದಕುಮಾರ್, ಎಂಬಿಕೆ ಬೀರಮ್ಮ, ಸಿಬ್ಬಂದಿಗಳಾದ ನವೀನ್.‌ ಬಾಗ್ಯಮ್ಮ, ಮಂಜುಳ ಸೇರಿದಂತೆ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

  • ಮಾರ್ಚ್ 19ರಂದು ನಡೆಯಲಿದೆ ಇತಿಹಾಸ ಪ್ರಸಿದ್ಧ ಮದುರೆ ಶನಿಮಹಾತ್ಮ ಸ್ವಾಮಿಯ 69ನೇ ಬ್ರಹ್ಮರಥೋತ್ಸವ

    ದೊಡ್ಡಬಳ್ಳಾಪುರ, (ಮಾ.15)ವಿಜಯ ಮಿತ್ರ : ಚಿಕ್ಕಮಧುರೆ (ಕನಸವಾಡಿ) ಶ್ರೀ ಶನಿಮಹಾತ್ಮ ಸ್ವಾಮಿಯ 69ನೇ ಬ್ರಹ್ಮರಥೋತ್ಸವ ಮಾರ್ಚ್ 19ರಂದು ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಧರ್ಮದರ್ಶಿ ಕೆ.ವಿ.ಪ್ರಕಾಶ್ ತಿಳಿಸಿದರು.

    ತಾಲ್ಲೂಕಿನ ಚಿಕ್ಕಮಧುರೆಯ ಶ್ರೀ ಶನಿಮಹಾತ್ಮ ಸ್ವಾಮಿ ಅನ್ನ ದಾಸೋಹ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು ಇತಿಹಾಸ ಪ್ರಸಿದ್ಧ ಬ್ರಹ್ಮರಥೋತ್ಸವ ಕಾರ್ಯಕ್ಕೆ ಸಕಲ ಸಿದ್ಧತೆಗಳು ನೆಡೆದಿದ್ದು. 69ನೇ ಬ್ರಹ್ಮ ರಥೋತ್ಸವ  ಕಾರ್ಯಕ್ರಮವು ಮಾರ್ಚ್ 19ರಂದು ಮಧ್ಯಾಹ್ನ 01-10 ರಿಂದ 01-55ರ ವರೆಗೆ ಸಲ್ಲುವ ಮಿಥುನ ಲಗ್ನದಲ್ಲಿ ಅದ್ಧೂರಿಯಾಗಿ ನೆಡೆಯಲಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ  ಜಾತ್ರಾ ಮಹೋತ್ಸವದ ವಿವಿಧ ದಿನಗಳ ವಿಶೇಷ ಕಾರ್ಯಕ್ರಮಗಳು ಹಾಗೂ ಉತ್ಸವಗಳ ವಿವರಗಳನ್ನು ಒಳಗೊಂಡ ಬ್ರಹ್ಮ ರಥೋತ್ಸವದ  ಆಹ್ವಾನ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು.

    ಈ ಬ್ರಹ್ಮರಥೋತ್ಸವದಲ್ಲಿ ರಾಜ್ಯದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಕ್ತದಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಜಾತ್ರಮಹೋತ್ಸವಕ್ಕೆ ಬರುವ ಎಲ್ಲಾ ಭಕ್ತದಿಗಳಿಗೆ ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

     

     

    ಬ್ರಹ್ಮರಥೋತ್ಸವದ ಅಂಗವಾಗಿ ಮಾರ್ಚ್ 18 ರಿಂದ ಮಾರ್ಚ್ 25ರ ವರೆಗೆ ವಿವಿಧ ಪೌರಾಣಿಕ ನಾಟ ಉತ್ಸವ, ಕೀಲು ಕುದುರೆ, ಸಂಗೀತ ಸಂಜೆ, ಕರ ಕುಣಿತ, ಗಿಚ್ಚಿ ಗಿಲಿಗಿಲಿ ತಂಡದವರಿಂದ ಹಾಸ್ಯ ಕಾರ್ಯಕ್ರಮ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆಡೆಯಲಿವೆ. ಎಂದು ತಿಳಿಸಿದರು.

     

    ಈ ಸಂದರ್ಭದಲ್ಲಿ ದೇವಾಲಯದ ಧರ್ಮಾಧಿಕಾರಿಗಳಾದ ಜಿ ಸತ್ಯನಾರಾಯಣ, ಕಾರ್ಯದರ್ಶಿಗಳಾದ ಸಿ.ಡಿ.ಸತ್ಯನಾರಾಯಣಗೌಡ, ಧರ್ಮದರ್ಶಿಗಳಾದ ಆದ ಕೆ ವಿ ಪ್ರಕಾಶ್ ರವರು ದೇವಾಲಯದ ಅರ್ಚಕರು ಉಪಸ್ಥಿತರಿದ್ದರು.

  • *ರಾಜಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ : ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ ಎಸ್ ಸುರೇಶ್ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆ*

    ದೊಡ್ಡಬಳ್ಳಾಪುರ, ಮಾ.14 (ವಿಜಯ ಮಿತ್ರ ಸುದ್ದಿ ) : ಹಾಲು ಉತ್ಪಾದಕ ರೈತರನ್ನು ಹೆಚ್ಚಿಸುವುದು ನಮ್ಮ ಮುಂದಿನ ಗುರಿಯಾಗಿದೆ. ಸಂಘದ ಅಭಿವೃದ್ಧಿಗೆ ಹಲವು ವಿಶೇಷ ಯೋಜನೆ ರೂಪಿಸುವ ಮೂಲಕ ಶ್ರಮಿಸಲಾಗುವುದು ಎಂದು ರಾಜಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಬಿ ಎಸ್ ಸುರೇಶ್ ತಿಳಿಸಿದರು.

    ತಾಲ್ಲೂಕಿನ ರಾಜಘಟ್ಟ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಚುನಾವಣೆ ನೆಡೆಸಲಾಯಿತು . ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಬಿ ಎಸ್ ಸುರೇಶ್ ರವರು ಸಂಘದ ಅಧ್ಯಕ್ಷರಾಗಿ ಮತ್ತು ರತ್ನಮ್ಮಸಂಜೀವಪ್ಪ ಉಪಾಧ್ಯಕ್ಷರಾಗಿ ಸರ್ವ ಸದಸ್ಯರ ಅನುಮೋದನೆಯೊಂದಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಬಿ ಎಸ್ ಸುರೇಶ್ ಮಾತನಾಡಿ ಸರ್ವ ಸದಸ್ಯರು ನಮ್ಮ ಮೇಲೆ ವಿಶ್ವಾಸ ಹಾಗೂ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದು. ಸರ್ವ ಸದಸ್ಯರ ನಂಬಿಕೆ ಕಾಪಾಡುವಲ್ಲಿ ಹಾಗೂ ಹಾಲು ಉತ್ಪಾದಕರ ಉನ್ನತಿಗಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.

    ಸ್ಥಳೀಯ ಮುಖಂಡರಾದ ರಾಜಘಟ್ಟ ಹರೀಶ್ ಮಾತನಾಡಿ ಚುನಾವಣೆಯಲ್ಲಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಅವಿರೋಧವಾಗಿ ಸುರೇಶ್ ಮತ್ತು ರತ್ನಮ್ಮ ಆಯ್ಕೆಯಾಗಿದ್ದಾರೆ. ಸಂಘದ ಚಟುವಟಿಕೆಗಳು ಮತ್ತಷ್ಟು ಚುರುಕಾಗುವುದರ ಜೊತೆ ಜೊತೆಗೆ ರೈತರಿಗೆ ಅನುಕೂಲಗಳು ಹೆಚ್ಚಲಿ. ಹಾಲು ಉತ್ಪಾದಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವಲ್ಲಿ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶ್ರಮಿಸಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ರಾಜಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರವೀಶ್ ಮಾತನಾಡಿ 12 ಸದಸ್ಯರು ಈ ಹಿಂದೆ ಸಂಘದ ಸದಸ್ಯರಾಗಿ ಆಯ್ಕೆಯಾಗಿದ್ದು ಇಂದು ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನೆಡೆದಿದೆ. ಸರ್ವ ಸದಸ್ಯರು ಅವಿರೋಧವಾಗಿ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಸಂಘಕ್ಕೆ ಹೆಚ್ಚಿನ ಅನುದಾನ ತರುವ ಮೂಲಕ ಸಹಕಾರ ಸಂಘದ ಅಭಿವೃದ್ಧಿಗೆ ನೂತನ ಪದಾಧಿಕಾರಿಗಳು ಸಹಕರಿಸಲಿ ಎಂದು ಶುಭ ಹಾರೈಸಿದರು.

    ಮುಖಂಡರಾದ ಶಿವಕುಮಾರ್ ಮಾತನಾಡಿ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದು. ನೂತನ ಪದಾಧಿಕಾರಿಗಳು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮತ್ತಷ್ಟು ಅನುದಾನ ತರುವ ಮೂಲಕ ಹಾಗೂ ವಿನೂತನ ಯೋಜನೆ ರೂಪಿಸುವ ಮೂಲಕ ಸ್ಥಳೀಯ ರೈತರನ್ನು ಅಭಿವೃದ್ಧಿಪಡಿಸಲಿ ಎಂದು ಹಾರೈಸಿದರು. ತಾಲೂಕಿನಲ್ಲಿ ಈಗಾಗಲೇ ಪ್ರಥಮ ಸ್ಥಾನದಲ್ಲಿರುವ ರಾಜಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರತಿದಿನ ಸರಿಸುಮಾರು 2500 ಲೀಟರ್ ಹಾಲನ್ನು ಉತ್ಪಾದಿಸುತ್ತಿದ್ದು. ಈ ಪ್ರಮಾಣವು ಮತ್ತಷ್ಟು ಹೆಚ್ಚ ಬೇಕಿದೆ ಈ ಸಂಬಂಧ ನೂತನ ಪದಾಧಿಕಾರಿಗಳು ವಿಶೇಷ ಯೋಜನೆಗಳ ರೂಪಿಸುವ ಮೂಲಕ ಹಾಲು ಉತ್ಪಾದಕರಿಗೆ ಉತ್ತೇಜನ ನೀಡಬೇಕಿದೆ ಎಂದರು.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆರ್ ಸಿ ಮುನಿರಾಜು,ಗ್ರಾಮದ ಹಿರಿಯ ಮುಖಂಡರಾದ ಕೋಡಿ ನರಸಿಂಹ ಮೂರ್ತಿ, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಹರೀಶ್,ಆರ್ ಎ ಆನಂದ್,ಎಂ ಪಿ ಸಿ ಎಸ್ ಮಾಜಿ ಅಧ್ಯಕ್ಷರಾದ ಟಿ. ಕೃಷ್ಣಪ್ಪ, ಆರ್ ಡಿ ಬೈರೇಗೌಡ, ಮಾಜಿ ಗ್ರಾಮಪಂಚಾಯಿತಿ ಸದಸ್ಯರಾದ ಬಿ ಎಸ್ ಹರೀಶ್, ಗ್ರಾಮಸದಸ್ಯರಾದ ಎ ಶಿವಕುಮಾರ್, ಗ್ರಾಮದ ಮುಖಂಡರಾದ ಆರ್ ಸಿ ಮಂಜುನಾಥ್,ಕೆಂಪೇಗೌಡ ಸೇರಿದಂತೆ ಹಲವು ಮುಖಂಡರು, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.

  • 31 ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಣೆ : ಫಲಾನುಭವಿಗಳಿಗೆ ಗಣ್ಯರಿಂದ ಶುಭ ಹಾರೈಕೆ

    ಸ್ಥಳೀಯ ಶಾಸಕರ ಸಹಯೋಗದೊಂದಿಗೆ 31 ವಿಕಲಚೇತನರ ದೈನಂದಿಕ ಅನುಕೂಲಕ್ಕಾಗಿ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಗಳಾದ ಕೆ.ಎಚ್. ಮುನಿಯಪ್ಪ ತಿಳಿಸಿದರು

     

     

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು

    ಕುಟುಂಬ ವಾರ್ಷಿಕ ವರಮಾನ ರೂ.2.00 ಲಕ್ಷಗಳಿಗಿಂತ ಕಡಿಮೆ ಇರುವ 20 ರಿಂದ 60 ವರ್ಷದೊಳಗಿನ ತೀವ್ರತರನಾದ ದೈಹಿಕ ವಿಕಲಚೇತನರಿಗೆ ಜೀವಿತ ಕಾಲದಲ್ಲಿ ಒಂದು ಬಾರಿ ಯಂತ್ರಚಾಲಿತ ದ್ವಿಚಕ್ರ ಮೋಟಾರು ವಾಹನವನ್ನು ನೀಡುವ ಯೋಜನೆಯನ್ನು ಸರ್ಕಾರವು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ

    14ನೇ ಮಾರ್ಚ್ 2017ರ ಅನುಸಾರ ಮಾನ್ಯ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಪ್ರತಿ ವರ್ಷ ರೂ.20.00 ಲಕ್ಷಗಳನ್ನು ಒದಗಿಸಲು ಅವಕಾಶ ಕಲ್ಪಿಸಿದ್ದು, ಸ್ಥಳೀಯ ವಿಕಲಚೇತನರಿಗೆ ಅನುಕೂಲವಾಗುವಂತೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗಿದೆ ಎಂದರು. ಹಾಗೂ ಫಲಾನುಭವಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನದಲ್ಲಿ ಮತ್ತಷ್ಟು ಉನ್ನತಿ ಪಡೆಯಲಿ ಎಂದು ಹಾರೈಸಿದರು.

     

     

    ಸ್ಥಳೀಯ ಶಾಸಕರು ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಧೀರಜ್ ಮುನಿರಾಜು ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಕಲಚೇತನರಿಗೆ ಮೀಸಲಿಟ್ಟ ಅನುದಾನದಲ್ಲಿ ರೂ.29.29 ಲಕ್ಷ ಮೊತ್ತದ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 31 ದೈಹಿಕ ವಿಕಲಚೇತನರಿಗೆ ಈ ದಿನ ವಿತರಿಸಲಾಗಿದೆ ಎಂದರು.

     

    ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ಶಿವಶಂಕರ್, ತಾಲೂಕು ದಂಡಾಧಿಕಾರಿಗಳಾದ ವಿದ್ಯಾವಿಭಾ ರಾಥೋಡ್, ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷರಾದ ಸುಧಾರಣಿ ಲಕ್ಷ್ಮಿನಾರಾಯಣ್, ನಗರಸಭಾ ಸದಸ್ಯರಾದ ವೆಂಕಟೇಶ್ (ಬಂತಿ ) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

  • ಸಂಸದ ಅನಂತ್ ಕುಮಾರ್ ಹೇಳಿಕೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಸಜ್ಜಾದ ಕೆಪಿಸಿಸಿ

    ಸಂವಿಧಾನ ತಿದ್ದುಪಡಿ ಕುರಿತು ಸಂಸದರಾದ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಕೆಪಿಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ಜಿ.ಲಕ್ಷ್ಮೀಪತಿ ಹೇಳಿದರು.

     

     

    ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂವಿಧಾನವನ್ನು ತಿದ್ದುಪಡಿ ಮಾಡಲು ಬಹುಮತದ ಅಗತ್ಯ ಇದೆ. ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲಲೇ ಬೇಕು ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದು ಅವರ ಹೇಳಿಕೆ ಸಂವಿಧಾನದಕ್ಕೆ ಮಾಡಿದ ಅಪಮಾನ ಹಾಗೂ ಅಕ್ಷಮ್ಯ ಅಪರಾಧವಾಗಿದೆ,ಕಾಂಗ್ರೆಸ್ ಪಕ್ಷವು ಇಂತಹ ಸಂವಿಧಾನ ವಿರೋಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ, ಈ ಹೇಳಿಕೆ ನೀಡಿರುವ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ರಾಜ್ಯದ್ಯಂತ ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು. ಸಂವಿಧಾನದ ಅಡಿಯಲ್ಲಿ ಅಧಿಕಾರ ಸ್ವೀಕರಿಸಿ ಅನುಭವಿಸುತ್ತಿರುವ ಅನಂತಕುಮಾರ್ ಹೆಗ್ಗಡೆಯವರು ಸಂವಿಧಾನವನ್ನು ಬದಲಿಸುವ ಮಾತನ್ನು ಆಡಿರುವುದು ಸರಿಯಲ್ಲ,ಪದೇ ಪದೇ ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನ ನೀಡುವ ಮೂಲಕ ಜನರಲ್ಲಿ ಗೊಂದಲದ ವಾತವರಣ ಸೃಷ್ಟಿ ಮಾಡುವುದು ಅವರ ಉದ್ದೇಶ ಎಂದು ಆರೋಪಿಸಿದರು.

     

    ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿರುವ ಸಂಸದರ ಬಗ್ಗೆ ರಾಷ್ಟ್ರ ಹಾಗೂ ರಾಜ್ಯ ಬಿಜೆಪಿ ಪಕ್ಷದ ನಾಯಕರು ಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರುವುದು ಖಂಡನೀಯ.

     

    ಸಂಸದ ಅನಂತ ಕುಮಾ‌ರ್ ಹೆಗಡೆ ಅವರನ್ನು ಇನ್ನು 8 ದಿನಗಳೊಳಗಾಗಿ ಪಕ್ಷದಿಂದ ಉಚ್ಚಾಟನೆ ಮಾಡದಿದ್ದರೆ.. ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದರು.

     

     

    *ಜನರ ಗಮನ ಸೆಳೆಯಲು ಸಿಎಎ ಜಾರಿ*

    ಸುಪ್ರೀಂ ಕೋರ್ಟ್ ಗೆ ಎಸ್‌ಬಿಐ ಸಲ್ಲಿಸಿರುವ ಚುನಾವಣೆ ಬಾಂಡ್ ಬಹಿರಂಗ ಮಾಡಿದರೆ ಬಿಜೆಪಿಗೆ ಭಾರೀ ಮುಖಭಂಗ ಆಗುತ್ತದೆ. ಹೀಗಾಗಿ ಬಿಜೆಪಿ ಪಕ್ಷವು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಿಎಎ ಜಾರಿ ಮಾಡಿದೆ ಎಂದರು..

     

    ಈ ವೇಳೆ ಕೆಪಿಸಿಸಿ ಸದಸ್ಯ ಬಿ.ಜಿ.ಹೇಮಂತರಾಜು, ಕಸಬಾ ಬ್ಲಾಕ್ ‌ ಕಾಂಗ್ರೆಸ್‌ ಅಧ್ಯಕ್ಷ ಭೈರೆಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಜಗನ್ನಾಥ್ ಉಪಸ್ಥಿತರಿದ್ದರು.

  • ಪ್ರತಿಷ್ಠಿತ ಗೀತಂ ಕಾಲೇಜಿನಲ್ಲಿ ಆಂಧ್ರ ಮೂಲದ ವಿದ್ಯಾರ್ಥಿ ಸಾವು

    ದೊಡ್ಡಬಳ್ಳಾಪುರ : ತಾಲ್ಲೂಕಿನ ನಾಗದೇನಹಳ್ಳಿ ಸಮೀಪದ ಗೀತಮ್ ಕಾಲೇಜಿನಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

     

    ಆಂಧ್ರ ಮೂಲದ ವಿದ್ಯಾರ್ಥಿ ದಾಸರಿ ಬ್ರಹ್ಮಾ ಸಾಯಿ ರೆಡ್ಡಿ(19) ಮೃತಪಟ್ಟ ದುರ್ದೇವಿ ಸ್ಥಳೀಯ ಪ್ರತಿಷ್ಠಿತ ಗೀತಮ್ ಕಾಲೇಜಿನಲ್ಲಿ ಬಿ.ಟೆಕ್ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದು. ಈ ಕುರಿತು ಸೂಕ್ತ ತನಿಖೆ ಆಗಬೇಕಿದೆ ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.

     

    ಕಾಲೇಜು ವಿದ್ಯಾರ್ಥಿಗಳ ಮೊಬೈಲ್ ನಲ್ಲಿ ವಿದ್ಯಾರ್ಥಿ ದಾಸರಿ ಬ್ರಹ್ಮಾ ಸಾಯಿ ರೆಡ್ಡಿಯ ಮೃತ ದೇಹವನ್ನು ಕೊಂಡೊಯ್ಯುತ್ತಿರುವ ದೃಶ್ಯಾವಳಿಗಳು ಸೆರೆಯಾಗಿದ್ದು. ಯಾವ ಕಾರಣದಿಂದಾಗಿ ವಿದ್ಯಾರ್ಥಿ ಮೃತ ಪಟ್ಟಿದ್ದಾನೆ ಎಂಬುದು ತನಿಖೆ ಮೂಲಕ ಹೊರಬಿಳಬೇಕಿದೆ.