Blog

  • *ನಾಮಫಲಕಗಳಲ್ಲಿ ಕನ್ನಡ ಬಳಕೆ ಕುರಿತು ಜಿಲ್ಲಾಧಿಕಾರಿಗಳ ಆದೇಶ ಸ್ವಾಗತರ್ಹ : ಇದು ನಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಫಲ – ಪುರುಷೋತ್ತಮ್ ಗೌಡ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ಕನ್ನಡ ಭಾಷೆಯನ್ನು ಫಲಕಗಳ ಮೇಲ್ಬಾಗದಲ್ಲಿ ಶೇ 60%ರಷ್ಟು ಕಾಣುವಂತೆ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಲು ಜಿಲ್ಲಾಧಿಕಾರಿ ಶಿವಶಂಕರ್ ಆದೇಶ ಮಾಡಿದ್ದಾರೆ.

     

    ತಮ್ಮ ಆದೇಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ರಾಜ್ಯ ಸರ್ಕಾರದ ಇಲಾಖೆಗಳು, ಸ್ವಾಯುತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಬ್ಯಾಂಕುಗಳು, ಟ್ರಸ್ಟ್ ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್ ಗಳು ಇತರೆ ಹಣಕಾಸು ಸಂಸ್ಥೆಗಳು, ಖಾಸಗಿ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ವಿಶ್ವವಿದ್ಯಾಲಯಗಳ ಫಲಕಗಳಲ್ಲಿ ಸರ್ಕಾರಿ ಆದೇಶದಂತೆ ಕಡ್ಡಾಯವಾಗಿ ಶೇ60%ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

    ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡರ ಬಣ )ಯ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ ಸ್ವಾಗತಿಸಿದ್ದಾರೆ.

    ಈ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣಗೌಡರ ಆದೇಶದಂತೆ ಜಿಲ್ಲೆಯಾದ್ಯಂತ ಸಂಚರಿಸಿ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಬಳಸುವಂತೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆಗಳನ್ನು ಮಾಡಿದ್ದೇವೆ. ಇದನ್ನು ಮನಗಂಡು ಜಿಲ್ಲಾಧಿಕಾರಿಗಳು ಇಂದು(ಮಾ.12) ಹೊರಡಿಸಿರುವ ಆದೇಶವು ಸ್ವಾಗತರ್ಹ. ಇನ್ನಾದರೂ ವಾಣಿಜ್ಯ ಮಳಿಗೆಯ ಮಾಲೀಕರು ಎಚ್ಚೆದ್ದು ಸರ್ಕಾರದ ಆದೇಶದಂತೆ ತಮ್ಮ ಮಳಿಗೆಗಳ ನಾಮಫಲಕಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಕನ್ನಡ ಭಾಷೆ ಬಳಸುವ ಮನಸ್ಸು ಮಾಡಲಿ. ಇದು ನಾರಾಯಣಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಕ್ಕೆ ಸಿಕ್ಕ ಪ್ರತಿಫಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

  • ಕರ್ನಾಟಕ ಯಾದವ ಯುವ ವೇದಿಕೆ ವತಿಯಿಂದ ಮಹಿಳಾ ದಿನದ ಆಚರಣೆ : ಮಹಿಳೆಯರಿಗಾಗಿ ವಿಶೇಷ ಕ್ರೀಡಾಕೂಟ ಆಯೋಜನೆ

    ಕರ್ನಾಟಕ ಯಾದವ ಯುವ ವೇದಿಕೆ ರಾಜ್ಯ ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ತಾಲೂಕಿನ ಭೂಮೇನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು.

     

    ಗ್ರಾಮದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸಂಗೀತ ಕುರ್ಚಿ, ಬಾಟಲಿಗೆ ನೀರು ತುಂಬಿಸುವ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಸ್ಪರ್ಧೆಯಲ್ಲಿ ಜಯಗಳಿಸಿದ ಹಾಗೂ ಭಾಗಿಯಾದ ಎಲ್ಲಾ ಮಹಿಳೆಯರಿಗೂ ಬಹುಮಾನ ವಿತರಣೆ ಮಾಡಲಾಯಿತು.

     

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಮಾಜಿ ಸದಸ್ಯರು, ವಕೀಲರು ಆದ ಕಣಿವೇಪುರ ಸುನಿಲ್ ಕುಮಾರ್ ಮಾತನಾಡಿ ನಮ್ಮ ವೇದಿಕೆ ವತಿಯಿಂದ ರಾಜ್ಯಾದ್ಯಂತ ಸಮುದಾಯದ ಸಂಘಟನೆ ಮಾಡುತ್ತಾ ಸಮುದಾಯದಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸುವ ಪ್ರಯತ್ನ ನೆಡೆಸುತ್ತಿದ್ದೇವೆ.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗುರುತಿಸುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು ವೇದಿಕೆಯು ಇನ್ನು ಹೆಚ್ಚಿನ ರೀತಿಯಲ್ಲಿ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಇನ್ನಷ್ಟು ಸೇವೆಯನ್ನು ನೀಡಲಿ ಎಂದು ಶುಭ ಹಾರೈಸಿದರು.

    ಕಾರ್ಯಕ್ರಮದ ಅಧ್ಯಕ್ಷರಾದ ರಾಜೇಶ್ವರಿ ಯಾದವ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹೆಣ್ಣು ಆಬಲೆಯಲ್ಲ ಸಬಲೇಯಾಗಿದ್ದಾಳೆ ಎಂದು ತೋರಿಸುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಹೆಣ್ಣಿಗೆ ಸೇವೆ ಸಲ್ಲಿಸಲು ಎಲ್ಲಾ ಹಂತದಲ್ಲಿ ಪುರುಷರು ಸಹಕಾರ ನೀಡಬೇಕಿದೆ ಹಾಗೂ ಹೆಣ್ಣು ಮಕ್ಕಳು ಮೂಡನಂಬಿಕೆಗಳಿಂದ ಹೊರಬಂದು ತಮ್ಮ ಕುಟುಂಬವನ್ನು ಸದೃಢವಾಗಿ ನಿರ್ವಹಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು .

     

    ಕಾರ್ಯಕ್ರಮದಲ್ಲಿ ಕರ್ನಾಟಕ ಯಾದವ ಯುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಸುಧಾಕರ್ ಯಾದವ್, ಕಾನೂನು ಘಟಕದ ಅಧ್ಯಕ್ಷರಾದ ಮುನಿರಾಜ್, ಕಾರ್ಮಿಕರ ಘಟಕದ ಅಧ್ಯಕ್ಷರಾದ ವೇಣು ಯಾದವ್ , ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಯಾದವ್ ಕೆ ಸಿ, ಭೂಮೇನಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಪಿಲ್ಲಣ್ಣ, ಮುನಿರಾಜ್, ರಾಜ್ಯದ ಯಾದವ ಯುವ ಮುಖಂಡರು ಹಳ್ಳಿ ರೈತ ಅಂಬರೀಶ್ , ಕೃಷ್ಣ,ಬಾಬು, ಅನಿಲ್, ನರಸಿಂಹಮೂರ್ತಿ,ರಾಜ್ಯ ಮಹಿಳಾ ಘಟಕದ ಕಾರ್ಯಧ್ಯಕ್ಷರಾದ ತೇಜಸ್ವಿನಿ ಯಾದವ್ , ಅನಿತಾ, ನಾಗರತ್ನ, ಮಂಜುಳಾ, ಸುಜಾತ, ದಿವ್ಯ ಸೇರಿದಂತೆ ಎಲ್ಲಾ ಮಹಿಳಾ ಪದಾಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.

  • *ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 12 : “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022” ನ್ನು ಸಮರ್ಪಕವಾಗಿ ಜಾರಿಗೊಳಿಸುವ ಸಂಬಂಧ ಹಾಗೂ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ(ತಿದ್ದುಪಡಿ) ವಿಧೇಯಕ-2024” ರನ್ವಯ ಕನ್ನಡ ಭಾಷೆಯನ್ನು ಫಲಕಗಳ ಮೇಲ್ಬಾಗದಲ್ಲಿ ಶೇ 60%ರಷ್ಟು ಕಾಣುವಂತೆ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಲು ಆದೇಶವಾಗಿರುತ್ತದೆ. ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ರಾಜ್ಯ ಸರ್ಕಾರದ ಇಲಾಖೆಗಳು, ಸ್ವಾಯುತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಬ್ಯಾಂಕುಗಳು, ಟ್ರಸ್ಟ್ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್ ಗಳು ಇತರೆ ಹಣಕಾಸು ಸಂಸ್ಥೆಗಳು, ಖಾಸಗಿ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ವಿಶ್ವವಿದ್ಯಾಲಯಗಳ ಫಲಕಗಳಲ್ಲಿ ಸರ್ಕಾರಿ ಆದೇಶದಂತೆ ಕಡ್ಡಾಯವಾಗಿ ಶೇ60%ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ಕ್ರೀಡಾಕೂಟ ಆಯೋಜನೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 12 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ಮಾರ್ಚ್ 16 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದಲ್ಲಿ ಮಹಿಳೆಯರಿಗಾಗಿ ಕೆಳಕಂಡ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗಿದೆ.

    ಮಹಿಳೆಯರು ಮಾರ್ಚ್ 16 ರಂದು ಬೆಳಿಗ್ಗೆ 9.00 ಗಂಟೆಗೆ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಂಡು ನೋಂದಣಿ ಮಾಡಿಕೊಳ್ಳುವುದು. ಕ್ರೀಡಾ ಸ್ಪರ್ಧೆಗಳು ಬೆಳಿಗ್ಗೆ 10.30 ಗಂಟೆಗೆ ಪ್ರಾರಂಭವಾಗುವುದು.

    19 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ‘ಹಗ್ಗ ಜಗ್ಗಾಟ'(ಗುಂಪು ಕ್ರೀಡೆ) ಇದರಲ್ಲಿ 6 ಜನ ಭಾಗಿಯಾಗಬಹುದು.

     

    19-40 ವರ್ಷ ಒಳಪಟ್ಟ ಮಹಿಳೆಯರಿಗೆ(ತಲಾ ಒಬ್ಬರು) ಮ್ಯೂಸಿಕಲ್ ಚೇರ್, ಮೆಮೋರಿ ಟೆಸ್ಟ್, ಬಾಲ್‌ಇನ್ ದಿ ಬಕೆಟ್, 50 ಮೀ ವಾಕ್‌ರೇಸ್, ಹೂಪ್ಸ್ ರಿಲೇ ಕ್ರೀಡೆಗಳಲ್ಲಿ 40 ವರ್ಷ ಮೇಲ್ಪಟ್ಟ ಮಹಿಳೆಯರು ಭಾಗಿಯಾಗಬಹುದು.

     

    ಸೂಚನೆ :-

    • ಕ್ರೀಡಾ ಸ್ಪರ್ಧೆಗಳು ಬೆಳಿಗ್ಗೆ 10.30 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ನೋಂದಣಿ ಕಡ್ಡಾಯವಾಗಿರುತ್ತದೆ.

    • ಆಧಾರ್ ಗುರುತಿನ ಚೀಟಿ, 10 ನೇ ತರಗತಿಯ ಜೆರಾಕ್ಸ್ ಪ್ರತಿ ಕಡ್ಡಾಯ

    • ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

    • ಭಾಗವಹಿಸುವ ಮಹಿಳಾ ಕ್ರೀಡಾಪಟುಗಳಿಗೆ ಮಧ್ಯಾಹ್ನದ ಊಟೋಪಹಾರದ ವ್ಯವಸ್ಥೆ ಮಾಡಲಾಗುವುದು.

    • ವಿಜೇತರಿಗೆ ಬಹುಮಾನಗಳನ್ನು ನೀಡಲಾಗುವುದು.

     

    ಈ ಕ್ರೀಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ. ಮಾಹಿತಿಗಾಗಿ 9980590960 / 9632778567 / 080-29787443 ಈ ಸಂಖ್ಯೆಗೆ ಸಂಪರ್ಕಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • 12.5ಕೋಟಿ ವೆಚ್ಚದಲ್ಲಿ ಕರ್ಗೋ ಟರ್ಮಿನಲ್ ನಿರ್ಮಾಣ : ಕಾಮಗಾರಿ ಆರಂಭಿಸಿದ ಬಾಲಾಜಿ ಮೂವರ್ಸ್ ಅಂಡ್ ಸೈಡಿಂಗ್ಸ್ ಪ್ರೈವೇಟ್ ಲಿಮಿಟೆಡ್

    ದೊಡ್ಡಬಳ್ಳಾಪುರ : ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ, ಗತಿಶಕ್ತಿ ಕಾರ್ಗೋ ಟರ್ಮಿನಲ್‌ಗಳು, ಗೂಡ್ಸ್ ಶೆಡ್. ಒನ್ ಸ್ಪೇಷನ್ ಬನ್ ಉತ್ಪನ್ನ ಮಳಿಗೆಗಳು ಮತ್ತು ಇತರ ರೈಲು ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಅಡಿಪಾಯ ಕಾರ್ಯಕ್ಕೆ ವಿಡಿಯೋ ಮಾಧ್ಯಮದ ದೇಶದಾದ್ಯಂತ ಮೂಲಕ ಏಕಕಾಲದಲ್ಲಿ ಚಾಲನೆ ನೀಡಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ತಿಳಿಸಿದರು.

     

    ತಾಲೂಕಿನ ವಡ್ಡರಹಳ್ಳಿ ಸಮೀಪದಲ್ಲಿ ಬಾಲಾಜಿ ಮೂವರ್ಸ್ ಅಂಡ್ ಸೈಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ರೈಲ್ವೆ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗತಿಶಕ್ತಿ ಎಂಬುವ ವಿಶೇಷ ಯೋಜನೆ ಅಡಿಯಲ್ಲಿ ಸರಕು ಸಾಗಾಣಿಕೆಗೆ ಅನುಕೂಲವಾಗುವಂತೆ ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿಜಿ ಅವರು ನೂತನ ರೈಲ್ವೆ ಮಾರ್ಗಗಳನ್ನು ನಿರ್ಮಿಸುವ ಯೋಜನೆ ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿಗೆ ಒಂದು ಕಾರ್ಗೋ ಟರ್ಮಿನಲ್ ತರುವ ಉದ್ದೇಶವಿದ್ದು,ಈ ಯೋಜನೆಯಿಂದ ಕಾರ್ಖಾನೆಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. ನರೇಂದ್ರ ಮೋದಿಜಿ ಅವರ ಆಡಳಿತದಲ್ಲಿ ಭಾರತ ರೈಲ್ವೆ ಮತ್ತಷ್ಟು ಅಭಿವೃದ್ಧಿಗೊಂಡಿದೆ ಎನ್ನುವುದಕ್ಕೆ ಇಂದಿನ ಶಂಕುಸ್ಥಾಪನಾ ಹಾಗೂ ಉದ್ಘಾಟನಾ ಕಾರ್ಯಕ್ರಮವೇ ಉತ್ತಮ ಉದಾಹರಣೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

    ಬೆಂಗಳೂರು ವಿಭಾಗದಲ್ಲಿ 02 ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ, 40 ಒಎಸ್‌ಪಿ ಸ್ಟಾಲ್‌ಗಳು, 01 ಗತಿಶಕ್ತಿ ಕಾರ್ಗೋ ಟರ್ಮಿನಲ್, 01 ಗೂಡ್ಸ್ ಶೆಡ್, 01 ವರ್ಕ್‌ ಶಾಪ್ ಜೊತೆಗೆ 02 ವಂದೇ ಭಾರತ್ ಎಕ್ಸ್ ಪ್ರೆಸ್ ಸಮರ್ಪಿಸಲಾಗಿದೆ ಎಂದು ತಿಳಿಸಿದರು.

     

    ರೈಲ್ವೆ ಇಲಾಖೆ ಸಿಬ್ಬಂದಿ ಕೃಷ್ಣಾರೆಡ್ಡಿ ಮಾತನಾಡಿ ಇಂದು ರಾಷ್ಟ್ರದಲ್ಲಿ ಹಲವು ಬಾಗಗಳಲ್ಲಿ ಹಲವಾರು ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ ಹಾಗೂ ರಾಷ್ಟ್ರ ಸಮರ್ಪಣೆ ಕಾರ್ಯವನ್ನು ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಜಿ ಮಾಡಿದ್ದಾರೆ. ಇದರಲ್ಲಿ ಒಂದೇ ಭಾರತ್ ರೈಲುಗಳು ಸೇರಿದಂತೆ ಒನ್ ಸ್ಟೇಷನ್ ಒನ್ ಪ್ರಾಡಕ್ಟ್ ಮಳಿಗೆಗಳು, ವರ್ಕ್ ಶಾಪ್, ಸೇರಿದಂತೆ ಗತಿಶಕ್ತಿ ಕಾರ್ಗೋ ಟರ್ಮಿನಲ್, ಗೂಡ್ಸ್ ಶಡ್ಸ್, ಜನೌಷಧಿ ಕೇಂದ್ರಗಳನ್ನು ಒಳಗೊಂಡಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ರೈಲ್ವೆ ನಿಯಮಗಳ ಅನುಸಾರವಾಗಿ 12.5 ಕೋಟಿ ವೆಚ್ಚದಲ್ಲಿ ತಾಲೂಕಿನ ವಡ್ಡರಹಳ್ಳಿ ಸಮೀಪ ಬಾಲಾಜಿ ಮೂವರ್ಸ್ ಅಂಡ್ ಸೈಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಗೋ ಟರ್ಮಿನಲ್ ನಿರ್ಮಾಣ ಮಾಡುತ್ತಿದ್ದು. ಈ ಟರ್ಮಿನಲ್ ಮುಖ್ಯವಾಗಿ ಸ್ಟಿಲ್ ಸಾಗಾಣಿಕೆಗೆ ಅನುಕೂಲವಾಗಲಿದೆ.ಈ ಕಾಮಗಾರಿಯ ಮೂಲಕ ಹಲವಾರು ಉದ್ಯೋಗಾವಕಾಶಗಳು ರೂಪುಗೊಳ್ಳಲಿದ್ದು. ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ಪ್ರದೇಶವು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳ್ಳುತ್ತದೆ ಎಂದರು

     

    ಜೆ ಎಸ್ ಡಬ್ಲ್ಯೂ ಸ್ಟೀಲ್ ಕಂಪನಿಯ ಸಹಾಯಕ ಉಪಾಧ್ಯಕ್ಷರಾದ ಸಂಜಯ್ ಅನುಮೋಲ್ಕರ್ ಮಾತನಾಡಿ ಈ ಯೋಜನೆಗಳು ದೇಶಕ್ಕೆ ಶಕ್ತಿ ತುಂಬುವ ಯೋಜನೆಗಳಾಗಿದ್ದು ದೇಶದ ಪ್ರಧಾನಿಯ ಮುಂದಾಲೋಚನೆ ತಿಳಿಸುತ್ತವೆ. ಗತಿಶಕ್ತಿ ಯೋಜನೆಯ ಅಡಿಯಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದರ ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಗಳು ಸಾಗಲಿವೆ.ಈ ಕಾರ್ಯಕ್ಕೆ ಸ್ಥಳೀಯರ ಸಹಕಾರ ಅತ್ಯವಶ್ಯಕವಾಗಿದ್ದು ದೇಶವು ಮತ್ತಷ್ಟು ಅಭಿವೃದ್ಧಿ ಹೊಂದಲು ಇಂತಹ ಯೋಜನೆಗಳು ಸಹಾಯಕಾರಿಯಾಗಿವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ಕಾರ್ಯಕ್ರಮದಲ್ಲಿ ಕೃಷ್ಣ ಮೂರ್ತಿ ಕಂಟನ ಕುಂಟೆ,ಮಾಜಿ ಅಧ್ಯಕ್ಷರು ಶೋಭಾ ರಾಜಗೋಪಾಲ್, ಸದಸ್ಯರು ರಾಮ ಚಂದ್ರ ರೆಡ್ಡಿ, ಮಹಾದೇವ ವಡ್ಡರ ಪಾಳ್ಯ, ನಾಗೇಶ್ ಮಲ್ಲತ್ ಹಳ್ಳಿ, , ವಿ.ಏನ್ ಸುನಿತಾ ವಡ್ಡರಹಳ್ಳಿ, ಜಿ ಆರ್ ಬಾಲಾಜಿ, ಜಿ ಆರ್ ರಘು ಮತ್ತಿತರರು ಉಪಸ್ಥಿತರಿದ್ದರು.

  • *ಉಚಿತ ಟೈಲರಿಂಗ್ ತರಬೇತಿಗೆ ಆಸಕ್ತ ಮಹಿಳೆಯರಿಂದ ಅರ್ಜಿ ಆಹ್ವಾನ*

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಫ್ಯಾಶನ್‌ ಡಿಸೈನಿಂಗ್(ಟೈಲರಿಂಗ್) ಕುರಿತ 30 ದಿನಗಳ ಉಚಿತ ತರಬೇತಿಯು ಏಪ್ರಿಲ್‌ 12 ರಿಂದ ಆರಂಭವಾಗಲಿದ್ದು, ಏಪ್ರಿಲ್‌ 12 ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಮಹಿಳೆಯರು ಭಾಗವಹಿಸಬಹುದಾಗಿದೆ.

    ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಗಳು ಆಧಾರ್‌ ಕಾರ್ಡ್‌ನ್ನು ಹೊಂದಿರಬೇಕು ಹಾಗೂ ಬಿಪಿಎಲ್‌ ಕಾರ್ಡ್‌ ಅನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

    ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

    ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್‌ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್‌ ಸಂಖ್ಯೆ: 9380162042, 9740982585, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್‌ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಮೈಸೂರು ಪೇಂಟ್ಸ್ ಕಾರ್ಖಾನೆಗೆ ಸದ್ಯದಲ್ಲೇ ಬ್ರ್ಯಾಂಡ್ ವರ್ಚಸ್ಸು ಮನೆ ಪೇಂಟ್ ಉತ್ಪಾದನೆಗೂ ಅಸ್ತು, ತಜ್ಞ ಸಲಹೆಗಾರ ನೇಮಕಕ್ಕೆ ಸೂಚನೆ

    ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆ MPVL ನ ಆಡಳಿತ ಮಂಡಳಿಯ ಮಹತ್ವದ ಸಭೆ.ರಾಜ್ಯದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾಗಿರುವ MPVL ಉತ್ಪಾದನೆ ಮತ್ತು ಆರ್ಥಿಕ ವಹಿವಾಟನ್ನು ಹೆಚ್ಚಿಸಿ, ಉದ್ದಿಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಅಗತ್ಯವಾದ ಕಾರ್ಯಕ್ರಮ ರೂಪಿಸುವಂತೆ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಸಂಪುಟ ಸಚಿವರಾದ ಎಂ. ಬಿ ಪಾಟೀಲ್ ತಿಳಿಸಿದರು.

     

    ಈ ಕುರಿತು ಮಾತನಾಡಿದ ಅವರು ಕಾರ್ಖಾನೆಯು ಸದ್ಯಕ್ಕೆ ವಾರ್ಷಿಕ 34-35 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಲೋಕಸಭಾ ಚುನಾವಣೆ ಕಾರಣ ಶಾಯಿ ತಯಾರಿಕೆಗೆ ಬೇಡಿಕೆ ಬಂದಿದ್ದು, ಈ ವರ್ಷ ವಹಿವಾಟು 77 ಕೋಟಿ ರೂ. ತಲುಪಲಿದೆ. ಸ್ಪರ್ಧಾತ್ಮಕವಾಗಿ ಮುಂದುವರೆಯಲು ಕಾರ್ಖಾನೆಗೆ ಹೆಚ್ಚಿನ ಶಕ್ತಿ ತುಂಬಲಾಗವುದು.

     

    ಮನೆ ಗೋಡೆ ಬಣ್ಣಗಳನ್ನು ತಯಾರಿಸಲು ಸಹ ಸೂಚಿಸಿರುವೆ. ಮುಕ್ತ ಮಾರುಕಟ್ಟೆ ಅಲ್ಲದೆ, ಸರಕಾರಿ ಕಟ್ಟಡಗಳು, ಶಾಲಾ- ಕಾಲೇಜು, ಹಾಸ್ಟೆಲ್ ಗಳಿಗೆ ಬೇಕಾಗುವ ಬಣ್ಣ, ಎಮಲ್ಶನ್ ಇತ್ಯಾದಿಗಳನ್ನು ಈ ಕಾರ್ಖಾನೆಯಲ್ಲೇ ತಯಾರಿಸುವ ಚಿಂತನೆ ನಡೆಸಲಾಯಿತು. ಈ ಯೋಜನೆ ಅನುಷ್ಠಾನಗೊಳಿಸಲು ಬಣ್ಣಗಳ ಉದ್ಯಮದ ಪರಿಣತರೊಬ್ಬರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆ

     

    `ಮೈಸೂರು ಪೇಂಟ್ಸ್ ಅನ್ನು ಬ್ರ್ಯಾಂಡ್ ಆಗಿ ಬೆಳೆಸಲಾಗುವುದು. KSDL ನ ಉತ್ಪನ್ನಗಳ ವಹಿವಾಟನ್ನು ವಿಸ್ತರಿಸಿರುವಂತೆ MPVL ನ್ನೂ ಹೊಸ ಸ್ತರಕ್ಕೆ ಕೊಂಡೊಯ್ಯಲು ಅಗತ್ಯದ ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದರು.

     

    ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಎಸ್ ಸೆಲ್ವಕುಮಾರ್, ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಹಮದ್ ಇರ್ಫಾನ್ ಉಪಸ್ಥಿತರಿದ್ದರು.

  • ಹಾಸ್ಟೇಲ್ ವಿದ್ಯಾರ್ಥಿಗಳಿಂದ ಕೊಲೆ ಯತ್ನದ ಆರೋಪ : ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿರುದ್ದ ಭಾಸ್ಕರ್ ಪ್ರಸಾದ್ ದೂರು

    ದೊಡ್ಡಬಳ್ಳಾಪುರ: 9ನೇ ತರಗತಿ ವಿದ್ಯಾರ್ಥಿಗೆ ಕಳ್ಳಿ ಹಾಲು ಕುಡಿಸಿ ಕೊಲೆ ಯತ್ನ ಮಾಡಲಾಗಿದ್ದು, ವಸತಿ ಶಾಲಾ ಸಿಬ್ಬಂದಿಯ ವೈಫಲ್ಯವೇ ಈ ಘಟನೆಗೆ ಕಾರಣವಾಗಿದೆ ಎಂದು ಸಾಮಾಜಿಕ ಹೋರಾಟಗಾರರಾದ ಭಾಸ್ಕರ್ ಪ್ರಸಾದ್ ಆರೋಪಿಸಿದ್ದಾರೆ.

    ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು, 9ನೇ ತರಗತಿ ವಿದ್ಯಾರ್ಥಿ ನಾಗಾರ್ಜುನ ಕಳ್ಳಿ ಹಾಲು ಸೇವನೆಯಿಂದ ತೀರ್ವ ಅಸ್ವಸ್ಥಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಸದ್ಯ ಬಾಲಕನನ್ನು 48 ಗಂಟೆಗಳ ಅಬ್ಸರ್ವೇಷನ್‌ನಲ್ಲಿ ಇಡಲಾಗಿದ್ದು, ಗಂಟಲು, ರಕ್ತ, ಶ್ವಾಸಕೋಶ ಹಾಗೂ ಸಣ್ಣ ಕರುಳಿನಲ್ಲಿ ನಂಜು ಹರಡಿದ್ದು ಬಾಲಕನ ಸ್ಥಿತಿ ಗಂಭೀರವಾಗಿದೆ.

     

    ಈ ಕುರಿತು ಸುದ್ಧಿಗಾರರೊಂದಿಗೆ ಭಾಸ್ಕರ್ ಪ್ರಸಾದ್ ಮಾತನಾಡಿ ಶಾಲಾ ಸಿಬ್ಬಂದಿ ಘಟನೆಯನ್ನು ಮುಚ್ಟಿಟ್ಟು ವಿದ್ಯಾರ್ಥಿಯ ಜೀವಕ್ಕೆ ಕುತ್ತು ತಂದಿದ್ದಾರೆ,ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನ್ ಮತ್ತು ಆರೋಗ್ಯ ಸಹಾಯಕಿಯ ವಿರುದ್ಧ ಕೊಲೆ ಯತ್ನ ಆರೋಪದ ಮೇಲೆ ದೂರು ನೀಡಲಾಗಿದೆ.ಅಸ್ವಸ್ಥಗೊಂಡಿರುವ ಬಾಲಕ ನಾಗಾರ್ಜುನ ನನ್ನ ತಂಗಿಯ ಮಗ, ನಾಲ್ಕು ದಿನಗಳ ಹಿಂದೆ ವಸತಿ ಶಾಲೆಯವರು ನನಗೆ ಫೋನ್ ಕರೆ ಮಾಡಿ, ನಾಗಾರ್ಜುನನಿಗೆ ಜ್ವರ ಮತ್ತು ಗಂಟಲು ನೋವಿ ನರಳುತ್ತಿದ್ದಾನೆ, ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು, ಮನೆಗೆ ಕಳೆದುಕೊಂಡ ಬಂದ ನಂತರ ಬಾಲಕನ ಸ್ಥಿತಿ ತೀರ್ವ ಗಂಭೀರವಾಗಿದ್ದು ತಕ್ಷಣವೇ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಅಸ್ವಸ್ಥಗೊಂಡ ನಾಗಾರ್ಜುನನ್ನು ಕೇಳಿದ್ದಾಗ ಸ್ನೇಹಿತರು ಕಳ್ಳಿ ಹಾಲನ್ನು ಬಲವಂತ ಮಾಡಿ ಕುಡಿಸಿದ್ದಾರೆಂದು ಹೇಳಿದ್ದಾನೆ, ಹಾಸ್ಟೇಲ್ ನ ಪುಂಡ ಹುಡುಗರು ನಾಗಾರಾಜುನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು, ಇಷ್ಟೇ ಅಲ್ಲದೆ ಖಾಸಗಿ ಭಾಗವನ್ನು ಆತನ ಬಾಯಿಗೆ ಇಟ್ಟು ಕಿರುಕುಳ ನೀಡುತ್ತಿದ್ದರಂದು ತಿಳಿಸಿದ್ದಾನೆ. ಈ ಹಿನ್ನಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

  • ಕೃತಕ ಬಣ್ಣಗಳ ಬಳಕೆ 7 ವರ್ಷಗಳವರೆಗೆ ಜೈಲು ಹಾಗು 10 ಲಕ್ಷದವರೆಗೆ ದಂಡ – ದಿನೇಶ್ ಗುಂಡೂರಾವ್

    ಗೋಬಿ ಮಂಚೂರಿ ಹಾಗು ಕಾಟನ್ ಕ್ಯಾಂಡಿಗಳಲ್ಲಿ ಕಳಪೆ ಗುಣಮಟ್ಟ ಹಾಗು ಕೃತಕ ಬಣ್ಣಗಳ ಬಳಕೆಯಾಗುತ್ತಿದ್ದಿದ್ದು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ರೋಡಮೈನ್-ಬಿ ಸೇರಿದಂತೆ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ

     

     

    ಇನ್ನುಮುಂದೆ ನಿಷೇಧಿತ ಈ ಕೃತಕ ಬಣ್ಣಗಳ ಬಳಕೆ ಮಾಡುವವರಿಗೆ 7 ವರ್ಷಗಳವರೆಗೆ ಜೈಲು ಹಾಗು 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಸಾರ್ವಜನಿಕರ ಆರೋಗ್ಯ ಹಿತರಕ್ಷಣೆಯ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

  • *ದೇವನಹಳ್ಳಿ ಅಂ.ವಿಮಾನ ನಿಲ್ದಾಣದಲ್ಲಿ ಸಿ.ಎಂ ರಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನೆ*

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು.

    ನಂತರ ಮಾತನಾಡಿದ ಮುಖ್ಯಮಂತ್ರಿಗಳು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಟ್ಟು 600 ಇಂದಿರಾ ಕ್ಯಾಂಟೀನ್‍ಗಳು ತಲೆ ಎತ್ತಲಿವೆ. 188 ಹೊಸ ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸುತ್ತಿದ್ದೇವೆ. ಈ ಪೈಕಿ ಈಗಾಗಲೇ 40 ಸಿದ್ಧವಾಗಿವೆ. ವಿಮಾನನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಬೇಕೆಂದು ಟ್ಯಾಕ್ಸಿ ಚಾಲಕರು ಹಾಗೂ ಇತರೆ ಚಾಲಕರ ಬೇಡಿಕೆಯಿತ್ತು. ಇಲ್ಲಿಗೆ ಇಂದಿರಾ ಕ್ಯಾಂಟೀನ್ ಅಗತ್ಯವಿತ್ತು. ಅದಕ್ಕಾಗಿ ಇಂದು ಒಂದು ಕ್ಯಾಂಟೀನನ್ನು ಉದ್ಘಾಟಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಒಟ್ಟು 2 ಇಂದಿರಾ ಕ್ಯಾಂಟೀನ್ ಸ್ಥಾಪನೆಯಾಗಲಿದೆ.

    ಬಡವರಿಗೆ ಕಡಿಮೆ ದರಗಳಲ್ಲಿ ಊಟ ತಿಂಡಿ ದೊರೆಯಬೇಕೆನ್ನುವುದು ಇದರ ಉದ್ದೇಶ. ಬೆಳಗಿನ ಉಪಾಹಾರ 5 ರೂ. ಮಧ್ಯಾಹ್ನ ಮತ್ತು ರಾತ್ರಿ ಊಟ 10. ರೂ.ಗಳಿಗೆ ದೊರಕಲಿದೆ. ಆಹಾರದ ಮೆನು ಕೂಡ ಬದಲಾಯಿಸಲಾಗಿದೆ. ಕುಳಿತು ತಿನ್ನಲು ಅನುಕೂಲವಾಗಲೆಂದು ಡೈನಿಂಗ್ ಹಾಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನ ಪ್ರತಿ ವಾರ್ಡ್‍ನಲ್ಲಿ ಹಾಗೂ ರಾಜ್ಯದ ಇತರೆಡೆಗಳಲ್ಲಿ ಕೂಡ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದೆ. ಹಿಂದಿನ ಸರ್ಕಾರ ಊಟ ಪೂರೈಸದೇ, ಕೆಲವನ್ನು ಮುಚ್ಚಿಯೂಬಿಟ್ಟಿತ್ತು. ಬಡವರು ಊಟ ಮಾಡಬೇಕೆಂಬ ಕಾರಣಕ್ಕೆ ನಾವು ಪುನ: ಪ್ರಾರಂಭಿಸಿದ್ದೇವೆ.

    ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಕೂಡ 2-3 ಸಭೆಗಳನ್ನು ನಡೆಸಿದ್ದು, ಎಷ್ಟೇ ಹಣ ವೆಚ್ಚವಾದರೂ ಟ್ಯಾಂಕರ್ ಮೂಲಕ, ಹೊಸ ಕೊಳವೆಬಾವಿಗಳಿರಬಹುದು ಅಥವಾ ಕಾವೇರಿ ನೀರನ್ನಾದರೂ ಕೊಡುವ ಮೂಲಕ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ.

    ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು , ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸೇರಿದಂತೆ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.