Blog

  • *ಜಿಲ್ಲಾ ನ್ಯಾಯಾಲಯದಲ್ಲಿ ಜವಾನರ ಹುದ್ದೆಗಳಿಗೆ ಅರ್ಜಿಗಳ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಘಟಕದಲ್ಲಿ ಖಾಲಿ ಇರುವ ಒಟ್ಟು 28 ಜವಾನರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

     

     

    ಎಸ್.ಎಸ್.ಎಲ್.ಸಿ., ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಮಾರ್ಚ್ 20 ಕೊನೆಯ ದಿನಾಂಕವಾಗಿರುತ್ತದೆ. ಅಧಿಸೂಚನೆಗಾಗಿ ಮತ್ತು ಇತರೆ ಸೂಚನೆಗಳಿಗಾಗಿ ಹಾಗೂ ಆನ್- ಲೈನ್ ಮೂಲಕ ಅರ್ಜಿ ಸಲ್ಲಿಸಲು ನ್ಯಾಯಾಲಯದ ವೆಬ್-ಸೈಟ್ https://bengalururural.dcourts.gov.in/online-recruitment/ ಗೆ ಭೇಟಿ ನೀಡಬಹುದಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಖ್ಯ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಚುನಾವಣೆ ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ*

    ಮುಂಬರುವ ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತಾ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ದೈನಂದಿನ ಕಚೇರಿ ಕಾರ್ಯಗಳ ಜೊತೆಗೆ ಚುನಾವಣಾ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಿ, ಚುನಾವಣೆ ಕಾರ್ಯಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ .ಎನ್ ಶಿವಶಂಕರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಇಂದು ನಡೆದ ಲೋಕಸಭಾ ಚುನಾವಣೆಯು ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಲೋಕಸಭಾ ಚುನಾವಣೆಗೆ ಯಾವುದೇ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಬಹುದು. ಆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಪೂರ್ವ ಸಿದ್ಧತೆಗಳನ್ನು ಇಂದಿನಿಂದಲೆ ಮಾಡಿಕೊಳ್ಳಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ ಪೂರ್ವ ತಯಾರಿ ಕಾರ್ಯಗಳನ್ನು ಚಾಚುತಪ್ಪದೆ ಜಿಲ್ಲೆಯಲ್ಲಿ ಪ್ರಾರಂಭ ಮಾಡಬೇಕು. ಅಧಿಕಾರಿ ಮತ್ತು ಸಿಬ್ಬಂದಿಗಳ ನಿಯೋಜನೆ, ಎಲ್ಲಾ ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ, ಭದ್ರತೆ, ಪೊಲೀಸ್ ಬಂದೋಬಸ್ತ್, ಚೆಕ್ ಪೋಸ್ಟ್ ನಿರ್ಮಾಣ, ಚುನಾವಣಾ ಲಿಪಿಕ ಪರಿಕರಗಳು ಹಾಗೂ ಇತರ ವಸ್ತುಗಳ ಖರೀದಿ, ಸಾರಿಗೆ ವ್ಯವಸ್ಥೆ, 24*7 ಕಂಟ್ರೋಲ್ ರೂಂ ತೆರೆಯಬೇಕು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವವರಿಗೆ ಒಂದು ಸುತ್ತಿನ ತರಬೇತಿ ಸೇರಿದಂತೆ ಇನ್ನಿತರ ಸಕಲ ತಯಾರಿಗಳನ್ನು ಮಾಡಿಕೊಳ್ಳಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಾರ್ಯಭಾರ ಹಂಚಿಕೆ ಮಾಡಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

    ಚುನಾವಣಾ ಕರ್ತವ್ಯಕ್ಕಾಗಿ 21 ವಿಷಯಗಳಿಗೆ 21 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವಣಾ ಆಯೋಗದ ಪ್ರಸ್ತುತದ ನಿರ್ದೇಶನಗಳನ್ವಯ ಕರಾರುವಕ್ಕಾಗಿ ಕಾರ್ಯನಿರ್ವಹಿಸಬೇಕು. ಮಾದರಿ ನೀತಿ ಸಂಹಿತೆಯ ಅಧಿಸೂಚನೆ ಪ್ರಕಟದ ದಿನಾಂಕದಿಂದ ಚುನಾವಣೆ ಫಲಿತಾಂಶದ ನಂತರವೂ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಅಧಿಕಾರಿಗಳು ಜಿಲ್ಲೆಯಾದ್ಯಂತ ಅವಶ್ಯಕತೆ ಇರುವ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸಬೇಕು. ಅನುಮತಿ ಇಲ್ಲದೆ ಯಾವುದೇ ರೀತಿಯ ಸಾರ್ವಜನಿಕ ಸಭೆ, ಸಮಾರಂಭಗಳು ಏರ್ಪಡದಂತೆ ನೋಡಿಕೊಳ್ಳಬೇಕು. ಅನಿವಾರ್ಯತೆ ಎಂಬ ಕಾರ್ಯಕ್ರಮಗಳಿಗೆ ಪೊಲೀಸ್ ಅಧಿಕಾರಿಗಳ ಅನುಮತಿ ಕಡ್ಡಾಯವಾಗಿರಬೇಕು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಜಾಹೀರಾತು ಪ್ರಕಟಿಸಲು ಸರಕಾರಿ ಮತ್ತು ಅನುದಾನಿತ ಕಟ್ಟಡಗಳನ್ನು ಬಳಸಿಕೊಳ್ಳದಂತೆ ನಿಗಾವಹಿಸಬೇಕು. ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗೆ ಸರ್ಕಾದ ಅಧೀನದಲ್ಲಿರುವ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ರೀತಿಯ ಪ್ರಚಾರ ಫಲಕಗಳಲ್ಲಿನ ಸರ್ಕಾರಿ ಜಾಹೀರಾತುಗಳನ್ನು ತೆರವುಗೊಳಿಸಬೇಕು. ಚುನಾವಣಾ ಸಭೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಕ್ಷಮದ ಅಧಿಕಾರಿಗಳ ಅನುಮತಿಯನ್ನು ಪಡೆಯಬೇಕು. ಸಾಮಾನ್ಯ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಿ ಪ್ರಚಾರ ಕೈಗೊಳ್ಳಬೇಕು. ಚುನಾವಣೆ ಕರ್ತವ್ಯಗಳನ್ನು ಚಾಚು ತಪ್ಪದೆ ಪಾಲಿಸಿ, ಒಟ್ಟಾಗಿ ಕೆಲಸ ಮಾಡೋಣ ಎಂದು ತಿಳಿಸಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಅಪರ ಪೋಲಿಸ್ ವರಿಷ್ಠಾಧಿಕಾರಿ ಪುರುಷೋತ್ತಮ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

  • *ಜನ ಜಾನುವಾರುಗಳಿಗೆ ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮ ವಹಿಸಿ:ಜಿಲ್ಲಾಧಿಕಾರಿ ಸೂಚನೆ*

    ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಆಭಾವ ಸೃಷ್ಟಿ ಆಗದಂತೆ ಮುನ್ನೆಚ್ಚರಿಕೆಯಾಗಿ ಅಗತ್ಯ ಸಿದ್ಧತೆ ಕೈಗೊಳ್ಳಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಅಧಿಕಾರಿಗಳಿಗೆ ಸೂಚಿಸಿದರು.

     

    ನಗರ ಸ್ಥಳೀಯ ಸಂಸ್ಥೆಗಳು ಹಾಗು ಇತರ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಗ್ರಾಮಾಂತರ ಜಿಲ್ಲೆಯ ಪಟ್ಟಣಗಳಲ್ಲಿ ಕುಡಿಯುವ ನೀರು ಸಮಸ್ಯೆ ಆಗದಂತೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಸೂಚಿಸಿದರು.

     

    ಮುಂಗಡವಾಗಿ ಖಾಸಗಿ ಕೊಳವೆ ಬಾವಿ ಗಳನ್ನು ಕಾಯ್ದಿರಿಸಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ವಹಿಸಿ. ಜಾನುವಾರುಗಳಿಗೆ ಮೇವಿನ ಅಭಾವ ಸೃಷ್ಟಿ ಆಗದಂತೆ ಮುಂಗಡ ಮೇವು ಸಂಗ್ರಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

     

    ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕಿ ಶಾಲಿನಿ, ಕೃಷಿ ಇಲಾಖೆ ಉಪ ನಿರ್ದೇಶಕರಾದ ಗಾಯತ್ರಿ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರಾದ ಜಗದೀಶ್, ರೇಷ್ಮೆ ಇಲಾಖೆ ಉಪ ನಿರ್ದೇಶಕರಾದ ಪ್ರಭಾಕರ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಕಡಿಮೆ ಸಮಯದಲ್ಲಿ ಅತ್ಯುತ್ತಮ ಆರೋಗ್ಯ ಸೇವೆ : ನೂತನವಾಗಿ ಸೇವೆ ಆರಂಬಿಸಿದ ಶ್ರೇಷ್ಠ ಡಯಾಗ್ನೋಸ್ಟಿಕ್ಸ್

    ದೊಡ್ಡಬಳ್ಳಾಪುರದಲ್ಲಿ ಪ್ರಪ್ರಥಮ ಬಾರಿಗೆ ನಮ್ಮಲ್ಲಿ 2 ಅಲ್ಟ್ರಾ ಸೌಂಡ್ ಯಂತ್ರಗಳನ್ನು ಒಳಗೊಂಡಿದೆ 2ಡಿ 3ಡಿ ಹಾಗೂ 4ಡಿ ಸೇವೆಗಳು ನಮ್ಮಲ್ಲಿ ಲಭ್ಯವಿದ್ದು , 300 mA ಕ್ಷ – ಕಿರಣ ಯಂತ್ರ ಸೇರಿದಂತೆ ಸಂಪೂರ್ಣ ಸ್ವಯಂ ಚಾಲಿತ ಲ್ಯಾಬ್ ವ್ಯವಸ್ಥೆ ಹಾಗೂ 32 ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರ ಹೊಂದಿರುವ ನಮ್ಮ ಶ್ರೇಷ್ಠ ಡಯಾಗ್ನೋಸ್ಟಿಕ್ಸ್ ತಾಲ್ಲೂಕಿನ ಸಾರ್ವಜನಿಕರಿಗೆ ಕಡಿಮೆ ಸಮಯದಲ್ಲಿ ಉತ್ತಮ ಹಾಗೂ ನಿಖರ ಪಲಿತಂಶ ನೀಡುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಡಾಕ್ಟರ್. ರಕ್ಷಿತ್ ತಿಳಿಸಿದರು

     

    ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನೂತನವಾಗಿ ಸೇವೆಯನ್ನು ಪ್ರಾರಂಭಿಸಿರುವ ಶ್ರೇಷ್ಠ ಡಯಾಗ್ನೋಸ್ಟಿಕ್ಸ್ ಅನ್ನು ಉದ್ಘಟಿಸಿ ಮಾತನಾಡಿದ ಅವರು ಎ ಯೂನಿಟ್ ಆಫ್ ಧನ್ವಂತರಿ ಹೆಲ್ತ್ ಸರ್ವಿಸಸ್ ಅಡಿಯಲ್ಲಿ ನಮ್ಮ ಸಂಸ್ಥೆ ಪ್ರಾರಂಭಿಸಿದ್ದು ನಮ್ಮಲ್ಲಿ 2ಡಿ ಎಕೋ, ಸಿಟಿ ಸ್ಕ್ಯಾನ್ ಮತ್ತು ಎಂ ಆರ್ ಐ ,ಯು, ಎಸ್. ಜಿ   ರಿದಂತೆ ಹೈಟೆಕ್ ಲ್ಯಾಬ್ ಸೇವೆಗಳು ನಮ್ಮಲ್ಲಿ ಲಭ್ಯವಿದ್ದು ಅನುಭವಿ ವೈದ್ಯರ ತಂಡ ಹಾಗೂ ನುರಿತ ಸಿಬ್ಬಂದಿಗಳೊಂದಿಗೆ ಸೇವೆ ಸಲ್ಲಿಸಲ್ಲಿದ್ದೇವೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು , ಸಾರ್ವಜನಿಕರ ಅನುಕೂಲಕ್ಕಾಗಿ ನಮ್ಮಲ್ಲಿ ಇಬ್ಬರು ರೇಡಿಯೋಲಜಿಸ್ಟ್ ನೇಮಿಸಲಾಗಿದೆ ಹಾಗೂ ಪರೀಕ್ಷೆಗೆ ಬಂದ ಸಾರ್ವಜನಿಕರ ಸಹಾಯಕ್ಕೆ ವಿಶೇಷ ಪಿ ಆರ್ ಓ ಗಳನ್ನು ನೇಮಿಸಲಾಗಿದೆ ಮೂಲಭೂತ ಸೌಕರ್ಯಗಳಲ್ಲಿ ಯಾವುದು ಕೊರತೆ ಇಲ್ಲದಂತೆ ಸಾರ್ವಜನಿಕರಿಗೆ ಅತ್ಯುತ್ತಮ ರೀತಿಯ ಸೇವೆ ಒದಗಿಸಲು ನಾವು ಶ್ರಮಿಸಲಿದ್ದೆವೆ ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಡಾಕ್ಟರ್.ವಿನಯ್,ಡಾಕ್ಟರ್. ದತ್ತ ಎಂ. ತೂಗಲೂರೆ ,ಡಾಕ್ಟರ್. ಸಚಿನ್,ಡಾಕ್ಟರ್. ಸಂಗಮೇಶ್ ಎಂ.ತೂಗಲೂರೆ, ಎಂ. ಜಿ ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು

  • ಉಚಿತ ಮೋಟಾರ್‌ ರಿವೈಂಡಿಂಗ್‌ ಮತ್ತು ರಿಪೇರಿ ತರಬೇತಿ*

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಮೋಟಾರ್‌ ರಿವೈಂಡಿಂಗ್‌ ಮತ್ತು ರಿಪೇರಿ ಕುರಿತ 30 ದಿನಗಳ ಉಚಿತ ತರಬೇತಿಯು 15 ಮಾರ್ಚ್ 2024 ರಿಂದ 30 ದಿನಗಳ ಕಾಲ ಆಯೋಜಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಬಹುದಾಗಿದೆ.

    ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಗಳು ಆಧಾರ್‌ ಕಾರ್ಡ್‌ನ್ನು ಹೊಂದಿರಬೇಕು ಹಾಗೂ ಬಿಪಿಎಲ್‌ ಕಾರ್ಡ್‌ ಅನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

    ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನವಾಗಿದೆ.

    ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್‌ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್‌ ಸಂಖ್ಯೆ: 9740982585, 9380162042, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್‌ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿಗೆ ನೂತನ ಸಾರಥಿ : ಸಮಿತಿಯ ನೂತನ ಅಧ್ಯಕ್ಷರಾಗಿ ಕನ್ನಡಪರ ಹೋರಾಟಗಾರರಾದ ಚಂದ್ರುಶೆಟ್ಟಿ ಅವಿರೋಧ ಆಯ್ಕೆ

    ದೊಡ್ಡಬಳ್ಳಾಪುರ : ಯುವ ಸಮುದಾಯವನ್ನು ಮುನ್ನಡೆಸುವ ಕಾರ್ಯಕ್ಕೆ ನನ್ನನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ ಅಂತೆಯೇ ಜವಾಬ್ದಾರಿಯು ಹೆಚ್ಚಿದೆ. ಮುಂದೆ ನಮ್ಮ ಸಮುದಾಯದ ವತಿಯಿಂದ ತಾಲೂಕಿನಾದ್ಯಂತ ಉತ್ತಮ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿಗೆ ತಾಲೂಕಿನಾದ್ಯಂತ ಶ್ರಮಿಸಿ ನೂತನ ಸದಸ್ಯರ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಮಿತಿಯ ಬಲವನ್ನು ಹೆಚ್ಚಿಸಲಾಗುವುದು , ನಮ್ಮ ಸಮುದಾಯಕ್ಕೆ ಸರ್ಕಾರದ ವತಿಯಿಂದ ಸಿಗಬೇಕಿರುವ ಸೌಲತ್ತುಗಳನ್ನು ಸೂಕ್ತ ರೀತಿಯಲ್ಲಿ ಸೂಕ್ತ ಸಮಯಕ್ಕೆ ತಲುಪಿಸುವ ಪ್ರಯತ್ನ ಮಾಡಲಾಗುವುದು , ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಸಮಿತಿಯ ಗೌರವವನ್ನು ಮತ್ತಷ್ಟು ಹೆಚ್ಚಿಸಲಾಗುವುದು .ಎಂದು ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿಯ ನೂತನ ಅಧ್ಯಕ್ಷರಾದ ಚಂದ್ರು ಶೆಟ್ಟಿ ತಿಳಿಸಿದರು

     

    ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಲಕ್ಷ್ಮಿ ಚಿತ್ರಮಂದಿರ ಸಮೀಪವಿರುವ ಗಾಣಿಗ ಸಮುದಾಯ ಕಚೇರಿಯಲ್ಲಿ ಸಮಿತಿಯ ಸರ್ವ ಸದಸ್ಯರ ಅಭಿಪ್ರಾಯದಂತೆ ಅವಿರೋಧವಾಗಿ ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಕನ್ನಡಪರ ಹೋರಾಟಗಾರರು ಹಾಗೂ ಸಮಾಜ ಸೇವಕರಾದ ಚಂದ್ರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸಭೆಯ ನಂತರ ಮಾತನಾಡಿದ ಅವರು ಇಂದು ಲಭಿಸಿರುವ ಅವಕಾಶ ನನಗೆ ಅನಿರೀಕ್ಷಿತ. ಸರ್ವ ಸದಸ್ಯರ ಅನುಮೋದನೆಯೊಂದಿಗೆ ಅವಿರೋಧವಾಗಿ ಗಾಣಿಗ ಸಮುದಾಯದ ಯುವ ಸೇವಾ ಸಮಿತಿಯ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ತಾಲ್ಲೂಕಿನಲ್ಲಿ ನಮ್ಮ ಗಾಣಿಗ ಸಮುದಾಯಕ್ಕೆ ಸಮಸ್ಯೆಗಳು ಸಾಕಷ್ಟು ಇದೆ ಸಾಧ್ಯವಾದಷ್ಟು ಪರಿಹಾರ ಕೊಡುವುದೇ ನಮ್ಮ ಸಮಿತಿಯ ಮೊದಲ ಆದ್ಯತೆ ಸಮುದಾಯ ಮುನ್ನಡೆಸುವ ಜವಾಬ್ದಾರಿ ಬಹಳ ದೊಡ್ಡದು, ತಾಲ್ಲೂಕಿನ ಯುವ ಪೀಳಿಗೆಗೆ ನಮ್ಮ ಸಮುದಾಯದ ಇತಿಹಾಸ ತಿಳಿಸುವ ಮೂಲಕ ಮುಂದೆ ಸಮುದಾಯವನ್ನು ಮತ್ತಷ್ಟು ಬಲಿಷ್ಠತೆಯಿಂದ ಕಟ್ಟಲು ಸಮಿತಿಯ ವತಿಯಿಂದ ಸೇವಾ ಕಾರ್ಯಗಳನ್ನು ನಡೆಸಲು ಸರ್ವಾನುಮತಿಯಿಂದ ಶ್ರಮಿಸುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

     

    ಸಮಿತಿಯ ಕಾರ್ಯದರ್ಶಿಗಳಾದ ಪ್ರಸನ್ನ ಕುಮಾರ್ ಮಾತನಾಡಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದಿದ್ದು ತಾಲೂಕಿನ ಮುಖಂಡರು ಸಮಾಜ ಸೇವಕರು ಕನ್ನಡಪರ ಹೋರಾಟಗಾರರಾದ ಚಂದ್ರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಸಮುದಾಯದ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನ ದೊರೆಯುವಲ್ಲಿ ಯಾವುದೇ ಸಂಶಯವಿಲ್ಲ. ಸರ್ವ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸಲ್ಲಿಸುವ ಮೂಲಕ ನೂತನ ಅಧ್ಯಕ್ಷರ ಆಯ್ಕೆ ನಡೆದಿದ್ದು ಸಮಿತಿಯ ಬೆಳವಣಿಗೆಗೆ ಅನುಕೂಲಕರವಾಗಿದೆ . ತಾಲೂಕಿನಾದ್ಯಂತ ತಮ್ಮ ಹೋರಾಟಗಳ ಮೂಲಕ ಯುವ ಪೀಳಿಗೆಗೆ ಹತ್ತಿರವಾಗಿರುವ ಚಂದ್ರಶೆಟ್ಟಿಯವರು ಇನ್ನು ಮುಂದೆ ಉತ್ತಮ ಸೇವಾ ಕಾರ್ಯಗಳ ಮೂಲಕ ನಮ್ಮ ಸಮುದಾಯವನ್ನು ಕೂಡ ನಡೆಸಲಿದ್ದಾರೆ . ಈಗಾಗಲೇ ಸಮುದಾಯದ ಬೆಳವಣಿಗೆಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು ಅತಿ ಶೀಘ್ರವಾಗಿ ತರಲಾಗುವುದು ಎಂದು ತಿಳಿಸಿದರು

     

     

    ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ:

    ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿಯ  ನೂತನ ತಾಲ್ಲೂಕುಅಧ್ಯಕ್ಷರಾಗಿ ಚಂದ್ರ ಶೆಟ್ಟಿ, ಉಪಾಧ್ಯಕ್ಷರಾಗಿ ಮಧುಚಂದ್ರ, ಕಾರ್ಯದರ್ಶಿಗಳಾಗಿ ಪ್ರಸನ್ನ ಕುಮಾರ್ ,ಸಹ ಕಾರ್ಯದರ್ಶಿಗಳಾಗಿ ವೆಂಕಟೇಶ್ ವಿ, ವಿಜಯ್ ಕುಮಾರ್ ,   ಖಜಾಂಚಿಗಳಾಗಿ ಲಕ್ಷ್ಮಣ್, ಸಲಹೆಗಾರರಾಗಿ ಸಂತೋಷ್ ತೂಬಗೆರೆ, ಸಂಚಾಲಕರಾಗಿ ಗೋಪಾಲಕೃಷ್ಣ ,ಸಹ ಸಂಚಾಲಕರಾಗಿ ಮಲ್ಲಿಕಾರ್ಜುನ್, ಆಯ್ಕೆಯಾಗಿದ್ದಾರೆ ಎಂದು ಸಮಿತಿಯು ತಿಳಿಸಿದೆ

     

    ಈ ಸಂದರ್ಭದಲ್ಲಿ  ನಿರ್ದೇಶಕರಾದ ತೂಪಗೆರೆ ಸುಬ್ರಮಣಿ. ಜೆ. ವಿ. ಸುಬ್ರಮಣಿ,ಜೆ. ಆರ್.  ರಾಜು,ಚಲಪತಿ ಭಾಶೆಟ್ಟಳ್ಳಿ,ಅಜಯ್ ಎನ್ ಸೇರಿದಂತೆ ತಾಲ್ಲೂಕಿನ ಗಾಣಿಗ ಸಮುದಾಯದ ಮುಖಂಡರು, ಸಮಿತಿಯ ಪದಾಧಿಕಾರಿಗಳು, ಚಂದ್ರ ಶೆಟ್ಟಿ ಅವರ ಅಭಿಮಾನಿ ಬಳಗ ಉಪಸ್ಥಿತರಿದ್ದರು.

  • *ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದಗೆ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಗುತ್ತಿಗೆ ಆಧಾರದ ಮೇಲೆ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಅಭ್ಯರ್ಥಿಯು ಸ್ನಾತ್ತಕೋತ್ತರ ಪದವಿ (ವಿಜ್ಞಾನ/ ಸಮಾಜವಿಜ್ಞಾನ/ ಗ್ರಾಮೀಣಾಭಿವೃದ್ಧಿ/ಪರಿಸರ ವಿಜ್ಞಾನ/ಮ್ಯಾನೇಜ್ ಮೆಂಟ್) ಯು.ಜಿ.ಸಿ. ಯಿಂದ ಗುರುತಿಸಲಾದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು, ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದಾದರೂ ಕ್ಷೇತ್ರದಲ್ಲಿ ಕನಿಷ್ಠ 3-5 ವರ್ಷಗಳ ಅನುಭವ ಹೊಂದಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳು ಡಿ.ಡಿ.ಎಂ.ಪಿ. ಮತ್ತು ಐ.ಡಿ.ಆರ್.ಎನ್ ಗೆ ಸಂಬಂಧಿಸಿದಂತೆ ಪರಿಣಿತಿ ಹೊಂದಿರಬೇಕು. ಆಂಗ್ಲ ಮತ್ತು ಕನ್ನಡ ಭಾಷೆಯ ಮೇಲೆ ಹಿಡಿತ ಹೊಂದಿರಬೇಕು ಮತ್ತು ಎಂ.ಎಸ್. ಆಫೀಸ್ ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರಬೇಕು.

    ಹುದ್ದೆಯ ವೇತನ ಪ್ರತಿ ತಿಂಗಳಿಗೆ ರೂ.48,400 ಮತ್ತು ಕರ್ತವ್ಯ ನಿರತ ಪ್ರಯಾಣ ಭತ್ಯೆ ನೀಡಲಾಗುವುದು.

    ಆಸಕ್ತಿಯುಳ್ಳ ಅಭ್ಯರ್ಥಿಗಳು ಫೆಬ್ರವರಿ 29 ರೊಳಗೆ ಅಂಚೆಯ ಮೂಲಕ ತಮ್ಮ ಸ್ವವಿವರ ದೊಂದಿಗೆ (ಪದವಿ ಪ್ರಮಾಣ ಪತ್ರ, ಅನುಭವ ಪ್ರಮಾಣ ಪತ್ರ ಹಾಗೂ ಇನ್ನಿತರೆ ದಾಖಲೆಗಳು) ಸ್ವಯಂ ದೃಡೀಕರಿಸಿ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿಗೆ ಕಳುಹಿಸತಕ್ಕದ್ದು.

    ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9900311690 ಹಾಗೂ ಇ-ಮೇಲ್ deo.bangalorer3@gmail.com ವಿಳಾಸಕ್ಕೆ ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ರಾಜ್ಯ ಮಟ್ಟದ ಉದ್ಯೋಗ ಮೇಳದಲ್ಲಿ ಭಾಗವಹಿಸಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ*

    ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ(ನಿ)ದ ವತಿಯಿಂದ “ರಾಜ್ಯ ಮಟ್ಟದ ಬೃಹತ್ ಉದ್ಯೋಗಮೇಳ”ವನ್ನು ಫೆಬ್ರವರಿ 26 ಹಾಗೂ 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ.

    ಈ ಉದ್ಯೋಗ ಮೇಳದಲ್ಲಿ 500ಕ್ಕಿಂತ ಹೆಚ್ಚು ಖಾಸಗಿ ಉದ್ಯೋಗದಾತರು(ಕಂಪನಿಗಳು) ಭಾಗವಹಿಸಿ ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲ್ಲಿದ್ದಾರೆ.

    ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ನರ್ಸಿಂಗ್, ಪದವಿ, ಸ್ನಾತಕೋತರ ಪದವಿ, ಇಂಜಿನಿಯರಿಂಗ್ ಹಾಗೂ ಇತರೆ ವಿದ್ಯಾರ್ಹತೆ ಹೊಂದಿರುವ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ವಿವರಗಳನ್ನು https://skillconnect.kaushalkar.com ವೆಬ್ಸೈಟ್ ನಲ್ಲಿ ನೊಂದಾಯಿಸಿ.

    ಅಭ್ಯರ್ಥಿಗಳು ಸ್ವವಿವರ(ಬಯೋಡಾಟ) ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳ ಪ್ರತಿಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಟಾಟಾ ಸಮೂಹದ ವತಿಯಿಂದ ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ 2,300ಕೋಟಿ ರೂ ಹೂಡಿಕೆ

    ಟಾಟಾ ಸಮೂಹದ ಭಾಗವಾಗಿರುವ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸಡ್ ಸಿಸ್ಟಮ್ಸ್ ಲಿಮಿಟೆಡ್ ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ 2,300 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿವೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಜೊತೆ ಒಡಂಬಡಿಕೆಗೆ ಸಹಿ ಹಾಕಿದರು.

     

    ಒಡಂಬಡಿಕೆ ಪತ್ರಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲರ ಮುಂದಾಳತ್ವದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಏರ್ ಇಂಡಿಯಾದ ಮುಖ್ಯ ವಾಣಿಜ್ಯ ವ್ಯವಹಾರ ಅಧಿಕಾರಿ ನಿಪುಣ್ ಅಗರವಾಲ್ ಹಾಗೂ ಟಿಎಎಸ್ಎಲ್ ಸಿಇಒ ಸುಕರಣ್ ಸಿಂಗ್ ಪರಸ್ಪರ ವಿನಿಮಯ ಮಾಡಿಕೊಂಡರು.

    ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1,650 ಉದ್ಯೋಗಗಳು ಸೃಷ್ಟಿಯಾಗಲಿವೆ. ಒಟ್ಟು ಹೂಡಿಕೆಯ ಪೈಕಿ ಏರ್ ಇಂಡಿಯಾ ಕಂಪನಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್-ಹಾಲ್ (ಎಂಆರ್ ಒ) ಘಟಕವನ್ನು ಸ್ಥಾಪಿಸಲು 1,300 ಕೋಟಿ ರೂ. ಹೂಡುತ್ತಿದೆ. ಇದರಿಂದಾಗಿ 1,200 ಜನರಿಗೆ ನೇರವಾಗಿ ಉದ್ಯೋಗ ಸಿಗಲಿದ್ದು, ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಇಡೀ ಭಾರತದಲ್ಲೇ ಇದು ಮೊಟ್ಟಮೊದಲ ಯೋಜನೆಯಾಗಿದೆ’.

    ಟಾಟಾ ಅಡ್ವಾನ್ಸಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕಂಪನಿಯು ಮೂರು ಯೋಜನೆಗಳಿಗೆ 1,030 ಕೋಟಿ ರೂ. ಬಂಡವಾಳ ಹೂಡಲಿದೆ. ಇವುಗಳ ಪೈಕಿ 420 ಕೋಟಿ ರೂ.ಗಳು ನಾಗರಿಕ ವಿಮಾನಗಳನ್ನು ಸರಕು ಸಾಗಣೆ ವಿಮಾನಗಳನ್ನಾಗಿ (ಫ್ರೈಟರ್) ಪರಿವರ್ತಿಸುವ ಘಟಕ ಸ್ಥಾಪನೆಗೆ ವಿನಿಯೋಗಿಸಲಿದೆ. ಜೊತೆಗೆ 310 ಕೋಟಿ ರೂ. ಹೂಡಿಕೆಯೊಂದಿಗೆ ಗನ್ ತಯಾರಿಕೆ ಘಟಕ ಮತ್ತು 300 ಕೋಟಿ ರೂ. ವೆಚ್ಚದಲ್ಲಿ ವಿಮಾನಯಾನ ಮತ್ತು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಿದೆ. ಇದರಿಂದ 450 ಉದ್ಯೋಗಗಳು ಸೃಷ್ಟಿಯಾಗಲಿವೆ.

    ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಮತ್ತು ಕೋಲಾರದಲ್ಲಿ ಟಿಎಎಸ್ಎಲ್ ಸ್ಥಾಪಿಸಲಿರುವ ಗನ್ ತಯಾರಿಕೆ ಘಟಕದ ಮೂಲಕ ಕಂಪನಿಗೆ ಅಗತ್ಯವಿರುವ 13 ಸಾವಿರ ಬಿಡಿಭಾಗಗಳ ಪೈಕಿ ಶೇಕಡ 50ರಷ್ಟನ್ನು ಪೂರೈಸಿಕೊಳ್ಳುವ ಆಲೋಚನೆ ಹೊಂದಿದೆ. ಇದರಿಂದಾಗಿ 300ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ 2-3 ಸಾವಿರ ಜನರಿಗೆ ಉದ್ಯೋಗಗಳು ಸಿಗಲಿವೆ. 1939ರಷ್ಟು ಹಿಂದೆಯೇ ಬೆಂಗಳೂರಿನಲ್ಲಿ ಎಚ್ಎಎಲ್ ಸ್ಥಾಪನೆಯಾಗುವುದರೊಂದಿಗೆ ರಾಜ್ಯವು ವೈಮಾನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.

    ರಕ್ಷಣಾ ಇಲಾಖೆಗೆ ಬೇಕಾಗುವ ವಿಮಾನಗಳು ಮತ್ತು ಹೆಲಿಕಾಪ್ಟರುಗಳ ಪೈಕಿ ಶೇಕಡ 67ರಷ್ಟು ಕರ್ನಾಟಕದಲ್ಲೇ ತಯಾರಾಗುತ್ತಿದೆ. ಜತೆಗೆ ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ರಫ್ತು ವಹಿವಾಟಿಗೆ ರಾಜ್ಯವು ಶೇಕಡ 65ರಷ್ಟು ಕೊಡುಗೆ ನೀಡುತ್ತಿದೆ. ದೇಶದಲ್ಲಿ ಈ ವಲಯದಲ್ಲಿರುವ ಕಂಪನಿಗಳ ಪೈಕಿ ಶೇ.70ರಷ್ಟು ಕಂಪನಿಗಳು ಕರ್ನಾಟಕದಲ್ಲೇ ನೆಲೆ ಹೊಂದಿವೆ ಎಂದು ತಿಳಿಸಿದರು.

     

    ಒಡಂಬಡಿಕೆಯ ವೇಳೆ ಸರಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಕಂಪನಿಗಳ ಪ್ರತಿನಿಧಿಗಳು ಹಾಜರಿದ್ದರು.

  • ಶೌರ್ಯ, ಸಾಹಸ, ದೈರ್ಯದ ಪ್ರತಿರೂಪ ಶಿವಾಜಿ ಮಹಾರಾಜರು – ಶಾಸಕ ಧೀರಜ್ ಮುನಿರಾಜು

    ದೊಡ್ಡಬಳ್ಳಾಪುರ : ಧರ್ಮದ ರಕ್ಷಣೆ ಹಾಗೂ ದೇಶಭಕ್ತಿಗೆ ಮತ್ತೊಂದು ಹೆಸರು ಛತ್ರಪತಿ ಶಿವಾಜಿ ಮಹಾರಾಜರು . .ಅವರ ಆಡಳಿತ ವೈಖರಿ ಸರ್ವರಿಗೂ ಮಾರ್ಗದರ್ಶಕ . ಇಂದಿನ ಯುವ ಸಮುದಾಯ ದೇಶಪ್ರೇಮ ಸ್ವಾಮಿನಿಷ್ಠೆ ಏನೆಂಬುದು ಛತ್ರಪತಿ ಶಿವಾಜಿ ಮಹಾರಾಜರಿಂದ ಕಲಿಯಬೇಕಿದೆ ಎಂದು ಬಿಜೆಪಿ ರಾಜ್ಯ ಯುವಘಟಕ ಅಧ್ಯಕ್ಷರು ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ತಿಳಿಸಿದರು .

    ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಇಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು . ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ಧೀರಜ್ ಮುನಿರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

     

    ನಂತರ ಮಾತನಾಡಿದ ಅವರು ಶೌರ್ಯ ಸಾಹಸ ದೈರ್ಯಕ್ಕೆ ಪ್ರತಿರೂಪ ಶಿವಾಜಿ ಮಹಾರಾಜರು .ಮೊಘಲರಿಗೆ ಸಿಂಹಸ್ವಪ್ನವಾಗಿ ನಡುಕ ಹುಟ್ಟಿಸಿದ ಮಹಾವೀರರು ,ಇಂದಿನ ಪೀಳಿಗೆಗೆ ಇವರ ಪರಿಚಯದ ಅವಶ್ಯಕತೆ ಬಹಳ ಇದೆ ದೇಶಪ್ರೇಮ ಎಂದೇರೇನು ಎಂದು ಕೇಳುವ ಪ್ರತಿಯೊಬ್ಬರಿಗೂ ಶಿವಾಜಿ ಮಹಾರಾಜರ ಜೀವನವೇ ಉತ್ತಮ ಸಂದೇಶವಾಗಿದೆ .ಭಾರತ ದೇಶದ ಇತಿಹಾಸದಲ್ಲಿ ಅವರು ಅಜರಮರ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದರು

     

     

    ತಾಲ್ಲೂಕು ದಂಡಾಧಿಕಾರಿಗಳಾದ ವಿಧ್ಯಾ ವಿಭಾ ರಾಥೋಡ್ ಮಾತನಾಡಿ ಶಿವಾಜಿ ಮಹಾರಾಜರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿ ಅಲ್ಲ , ಅವರು ಸರ್ವ ಭಾರತೀಯರ ಶಕ್ತಿ ,ಅವರ ದೇಶಪ್ರೇಮ ನಮ್ಮೆಲ್ಲರಿಗೂ ಮಾದರಿಯಾಗಿದೆ .ಇತಿಹಾಸದ ಪುಟಗಳಲ್ಲಿ ತಮ್ಮ ಶೌರ್ಯ ಪರಾಕ್ರಮಗಳಿಂದಲೇ ಹೆಚ್ಚು ಮನ್ನಣೆ ಪಡೆದಿರುವ ಮಹಾನ್ ವ್ಯಕ್ತಿ ಶಿವಾಜಿ ಮಹಾರಾಜರು,ಅವರ ನೈಪುಣ್ಯತೆ ,ಅಡಳಿತ ವೈಖರಿ , ನೇರ ನಿಲುವು , ದೈರ್ಯ ನಮ್ಮೆಲ್ಲರಿಗೂ ಆದರ್ಶ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

     

    ಈ ಸಂದರ್ಭದಲ್ಲಿ ಮುಖಂಡರಾದ ಖ್ಯಾತ ವಕೀಲರಾದ ರವಿ ಮಾವಿನಕುಂಟೆ,ಕಾಂಗ್ರೆಸ್ ಮುಖಂಡರಾದ ರಂಗರಾಜು, ಮುಖಂಡರಾದ ಬಿ.ಸಿ ಆನಂದ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು .