Blog

  • ತಾಲ್ಲೂಕಿನ ಸಕ್ಕರೆ ಗೊಲ್ಲಹಳ್ಳಿ ತಲುಪಿದ ಸಂವಿಧಾನ ಜಾಗೃತಿ ಜಾಥಾ : ಗ್ರಾಮಸ್ಥರಿಂದ ಭರ್ಜರಿ ಸ್ವಾಗತ

    75 ನೇ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಪ್ರತಿ ಪಂಚಾಯಿತಿ ಮಟ್ಟದಲ್ಲಿ ಆಯೋಜನೆ ಮಾಡಿದ್ದು ಸಾಂಕೇತಿಕವಾಗಿ ಸಂವಿಧಾನ ರಥದ ಆಯೋಜನೆ ಮಾಡಿದ್ದು. ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಸಂವಿಧಾನ ಜಾಗೃತಿ ಜಾಥಾ ವಾಹನ ಬಂದಿದ್ದು ಸ್ಥಳೀಯರು ಕುಂಭ ಸಹಿತ, ವಾದ್ಯ ,ನೃತ್ಯ ಹಾಗೂ ವೇದಿಕೆ ಕಾರ್ಯಕ್ರಮದ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಜೈ ಭೀಮ್ ಹರ್ಷೋದ್ಗಾರ ಮುಗಿಲು ಮುಟ್ಟಿತು.

    ಸಂವಿಧಾನ ಜಾಗೃತಿ ಕುರಿತು ಪಂಚಾಯಿತಿ ಮಟ್ಟದಲ್ಲಿ ಅಷ್ಟೇ ಅಲ್ಲದೆ ಪ್ರತಿ ಮನೆಮನೆಗೂ ತಲುಪುವಂತಾಗಬೇಕು. ಈ ರೀತಿಯ ವಿಶೇಷ ಕಾರ್ಯಕ್ರಮ ರೂಪಿಸಿದ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹನುಮಯ್ಯ ತಿಳಿಸಿದರು

    ಸ್ಥಳೀಯರಾದ ಗಿರೀಶ್ ಮಾತನಾಡಿ ಈ ರೀತಿಯ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಪುಣ್ಯವೇ ಸರಿ ಕಾರಣ ನಮ್ಮ ಕಾಲಘಟ್ಟದಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರದ ವತಿಯಿಂದ ವಾಹನವೊಂದು ಪ್ರತಿ ಪಂಚಾಯಿತಿಗೆ ತಲುಪಿ ಸಂವಿಧಾನ ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಅರಿವು ಮೂಡಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ ಅವರು ಸಮುದಾಯಗಳನ್ನು ಮೀರಿದ ಶಕ್ತಿಯಾಗಿದ್ದಾರೆ ಯುವಕರಲ್ಲಿ ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತು ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

    Ad

     

    ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಎಂಪಿ ಗಂಗಾಧರ್ ಮಾತನಾಡಿ ಇಂದು ಅತ್ಯಂತ ಸಂತೋಷದ ದಿನವಾಗಿದೆ . ಕಾರಣ ಸರ್ವ ಸಮುದಾಯದವರು ಒಟ್ಟಾಗಿ ಸೇರಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ನಮ್ಮ ಸಂಘಟನೆಯ ವತಿಯಿಂದ ಪ್ರೊಫೆಸರ್ ಬಿ.ಕೃಷ್ಣಪ್ಪ ರವರ ಆಶಯದಂತೆ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತೇವೆ. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಬದಲಾವಣೆ ಮಾಡಲು ಕೆಲವು ಕಿಡಿಗೇಡಿಗಳು ಹೊರಟಿದ್ದಾರೆ ಈ ಕುರಿತು ದಲಿತ ಸಮುದಾಯ ಸುಮ್ಮನೆ ಕೂರುವ ಮಾತಿಲ್ಲ. ಸಂವಿಧಾನ ಬದಲಿಸುವ ಮಾತನ್ನು ನಾವು ಎಂದಿಗೂ ಒಪ್ಪುವುದಿಲ್ಲ ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಸ್ಥಳೀಯರಾದ ರಾಮು , ದೊಡ್ಡಯ್ಯ, ಎಂ . ಕೆ.ನರೇಂದ್ರಮೂರ್ತಿ ,ಹನುಮಯ್ಯ ,ಹನುಮಂತಯ್ಯ, ಆನಂದ್, ಕೆಂಪರಾಜು, ನರಸಿಂಹಮೂರ್ತಿ , ಮುನಿರಾಜು ಸೇರಿದಂತೆ ಹಲವು ದಲಿತ ಮುಖಂಡರು ಪ್ರಗತಿಪರ ಚಿಂತಕರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು

  • ಫೆಬ್ರವರಿ 14ರಂದು ಮಾಜಿ ಯೋಧರ ಬೃಹತ್ ಸಮಾವೇಶ : ಅರೆಸೇನಾ ಪಡೆಗಳ ಪ್ರತ್ಯೇಕ ಬೋಡ್ ಸ್ಥಾಪಿಸುವಂತೆ ಒತ್ತಾಯ

    ಪುಲ್ವಾಮಾ ದಾಳಿಯಲ್ಲಿ ದೇಶಕ್ಕಾಗಿ ಮಡಿದ ಯೋಧರ ಸವಿನೆನಪಿನಲ್ಲಿ ಮಾಜಿ ಅರೇಸೇನಾಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದು ಸದರಿ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ,ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸೇರಿದಂತೆ ರಾಜ್ಯದ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದು ಐಜಿ ಅರ್ಕೇಶ್ ತಿಳಿಸಿದರು.

    ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಯಲಹಂಕದಲ್ಲಿ ಆಯೋಜನೆ ಮಾಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2019ನೇ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿ ಆರ್ ಪಿ ಎಫ್ ನ ವೀರ ಯೋಧರ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲಾ ಹುತಾತ್ಮ ಯೋಧರಿಗೂ 5ನೇ ವಾರ್ಷಿಕ ಸ್ಮರಣಾಂಜಲಿ ಕಾರ್ಯಕ್ರಮವನ್ನು ಗ್ರೂಪ್ ಸೆಂಟರ್, ಸಿ ಆರ್ ಪಿ ಎಫ್ ಕ್ಯಾಂಪಸ್ ದೊಡ್ಡಬಳ್ಳಾಪುರ ರಸ್ತೆ ,ಯಲಹಂಕ ಬೆಂಗಳೂರು ಇಲ್ಲಿ ಆಯೋಜನೆ ಮಾಡಲಾಗಿದೆ .

    ದೇಶಕ್ಕಾಗಿ 24 ಗಂಟೆಗಳ ಸೇವೆ ಸಲ್ಲಿಸುವ ಅರೇಸೇನಾ ಪಡೆಗಳ ಕುಂದು ಕೊರತೆಗಳು ಸಾಕಷ್ಟಿವೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲು ಹಾಗೂ ದೇಶಕ್ಕಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ಅರೆಸೇನಾ ಪಡೆಗಳ ಯೋಧರ ಸ್ಮರಣಾರ್ಥವಾಗಿ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಈ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು

    ಭೂ ಸೇನೆ ,ವಾಯು ಸೇನೆ ಹಾಗೂ ನೌಕಾ ಸೇನೆಗೆ ಸಿಗುವ ಸೌಲಭ್ಯಗಳು ಅರೆಸೇನಾ ಪಡೆಗಳಿಗೆ ಸಿಗುತ್ತಿಲ್ಲ, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ, ನಿವೃತ್ತಿ ನಂತರ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳಿಗೆ ಪರದಾಡುವ ಪರಿಸ್ಥಿತಿ ಅರೆಸೇನಾಪಡೆಯ ಯೋಧರಿಗೆ ಎದುರಾಗಿದೆ . ಈ ಕುರಿತು ಸರ್ಕಾರದ ಮಟ್ಟದಲ್ಲಿ ಅರೆಸೇನಾ ಪಡೆಗಳ ಯೋಧರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಬೋರ್ಡ್ ವ್ಯವಸ್ಥೆಯಾಗಬೇಕಿದೆ . ಕೇವಲ ಸೌಲಭ್ಯಕ್ಕಾಗಿ ಅಲ್ಲದೆ ದೇಶ ಸೇವೆ ಸಲ್ಲಿಸಿರುವ ಯೋಧರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವಲ್ಲಿ ಸರ್ಕಾರ ಶ್ರಮಿಸಬೇಕಿದೆ ಈ ಕುರಿತು ನಮ್ಮ ಬೃಹತ್ ಸಮಾವೇಶದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಲಿದ್ದೇವೆ ಎಂದು ತಿಳಿಸಿದರು

     

    ಸಂಘದ ಅಧ್ಯಕ್ಷರಾದ ನರಸಿಂಹ ರೆಡ್ಡಿ ಮಾತನಾಡಿ ಕಾರ್ಯಕ್ರಮದಲ್ಲಿ 5000ಕ್ಕೂ ಹೆಚ್ಚು ಮಾಜಿ ಯೋಧರು ಭಾಗವಹಿಸುವ ನಿರೀಕ್ಷೆಯಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ, ಸರ್ಕಾರಕ್ಕೆ ನಮ್ಮ ಬೇಡಿಕೆ ಹಾಗೂ ಒತ್ತಾಯಗಳನ್ನು ಮಂಡಿಸಲಿದ್ದೇವೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಿಟ್ಟ ಯೋಧರ ಕುಂದು ಕೊರತೆಗಳಿಗೆ ಸರ್ಕಾರ ಸ್ಪಂದಿಸಬೇಕಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತ ರಾಜಗೋಪಾಲ ಮಾತನಾಡಿ ಈ ಕಾರ್ಯಕ್ರಮವು ವಿಶೇಷವಾಗಿದ್ದು ಇದು ಕೇವಲ ಪುಲ್ವಾಮ ದಾಳಿಯಲ್ಲಿ ಹುತಾತ್ಮರ ಯೋಧರಿಗೆ ಅಷ್ಟೇ ಅಲ್ಲದೆ ಈವರೆಗೂ ದೇಶಕ್ಕೆ ಸೇವೆ ಸಲ್ಲಿಸಿ ಹುತಾತ್ಮರಾಗಿರುವ 35,000 ಯೋಧರ ಸ್ಮರಣಾರ್ಥವಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರೇಸೇನಾ ಪಡೆಗಳಿಗೆ ಪ್ರತ್ಯೇಕ ಬೋರ್ಡ್ ಘೋಷಣೆ ಮಾಡಿದ್ದರು ಕಾರಣಾಂತರಗಳಿಂದ ಆ ಬೋರ್ಡ್ ತೆಗೆಯಲಾಗಿದೆ. ಅರೆಸೇನಾ ಪಡೆಗಳಿಗೆ ಘೋಷಣೆ ಮಾಡಿದ್ದ ಪ್ರತ್ಯೇಕ ಬೋರ್ಡನ್ನು ಮರು ಸ್ಥಾಪಿಸುವಂತೆ ಈ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು

    ಸುದ್ದಿಗೋಷ್ಠಿಯಲ್ಲಿ ಮಾಜಿ ಯೋಧರಾದ ನರಸಿಂಹಮೂರ್ತಿ, ಕೃಷ್ಣಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

  • ನಮ್ಮೂರು ನಮ್ಮ ಕೆರೆ ಅಭಿಯಾನದ ಅಡಿಯಲ್ಲಿ ಅಂತರಹಳ್ಳಿ ಕೆರೆಗೆ ಮರುಜೀವ

    ಎಲ್ಲೆಡೆಯೂ ನೀರಿನ ಅಭಾವ ತಾಂಡವವಾಡುತ್ತಿದ್ದು.ನಮ್ಮೂರು ನಮ್ಮ ಕೆರೆ ಅಭಿಯಾನದ ಅಡಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಅಂತರಹಳ್ಳಿ ಗ್ರಾಮದ ಕೆರೆ ಪೂರ್ಚೆತನಕ್ಕೆ ಯೋಜನೆ ರೂಪಿಸಲಾಗಿದೆ. ನೀರಿನ ಬವಣೆ ನೀಗಿಸಲು ಹಾಗೂ ಅಂತರ್ಜಲ ಮಟ್ಟವನ್ನು ಸುಧಾರಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಆಯೋಜನೆ ಮಾಡಲಾಗಿದೆ.ರೈತರ ವ್ಯವಸಾಯಕ್ಕೆ ಕೆರೆಗಳು ಅತ್ಯಂತ ಸಹಕಾರಿಯಾಗಲಿವೆ ಎಂದು ಜಿಲ್ಲಾ ನಿರ್ದೇಶಕರಾದ ಉಮರಬ್ಬ ತಿಳಿಸಿದರು .

     

    ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು .ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ವತಿಯಿಂದ ಸುಮಾರು125 ಕೋಟಿ ವೆಚ್ಚದಲ್ಲಿ ಸುಮಾರು 750 ಕೆರೆಗಳ ಅಭಿವೃದ್ಧಿ ಮಾಡಲಾಗಿದೆ ,ರೈತರ ಬೆಂಬಲವಾಗಿ ನಮ್ಮ ಯೋಜನೆ ಸದಾ ಶ್ರಮಿಸುತ್ತಿದ್ದು. ಕುಡಿಯುವ ನೀರಿನ ಅಭಾವ ಮತ್ತು ವ್ಯವಸಾಯಕ್ಕೆ ನೀರನ್ನು ಒದಗಿಸುವಲ್ಲಿ ನಮ್ಮೂರು ನಮ್ಮ ಕೆರೆ ಅಭಿಯಾನ ರೂಪಿಸಲಾಗಿದೆ ,ಕೆರೆಗಳ ಪುನಶ್ಚೇತನದ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸುವುದು ನಮ್ಮ ಮುಖ್ಯ ಉದ್ದೇಶ. ದೊಡ್ಡಬಳ್ಳಾಪುರ ತಾಲ್ಲೂಕಿನ ಅಂತರ ಹಳ್ಳಿ ಗ್ರಾಮದ ಕೆರೆ ಸುಮಾರು 28 ಏಕ್ಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು ಕೆರೆ ಅಭಿವೃದ್ಧಿ ಕಾಮಗಾರಿಗೆ 15 ಲಕ್ಷ ಮಂಜೂರಾತಿಯನ್ನು ಈಗಾಗಲೇ ನಮ್ಮ ಯೋಜನೆ ವತಿಯಿಂದ ನೀಡಲಾಗಿದೆ ಒಟ್ಟು ಕಾಮಗಾರಿಯ ವೆಚ್ಚ 22 ಲಕ್ಷ ಎಂದು ಅಂದಾಜು ಮಾಡಲಾಗಿದ್ದು . ಕೆರೆ ಅಭಿವೃದ್ಧಿಗೆ ಉಳಿಕೆ 7 ಲಕ್ಷ ಹಣವನ್ನು ಪಂಚಾಯಿತಿ ವತಿಯಿಂದ ನೀಡಲಾಗುತ್ತದೆ .ಕೆರೆಯ ಸಂಪೂರ್ಣ ಅಭಿವೃದ್ದಿಯ ನಂತರ ಅಂತರಹಳ್ಳಿ ಕೆರೆ ಸಂರಕ್ಷಣಾ ಸಮಿತಿಗೆ ಹಸ್ತಾಂತರ ಮಾಡಲಾಗುವುದು ಕೆರೆಯ ನಿರ್ವಹಣೆ ಹಾಗೂ ಸಂರಕ್ಷಣಾ ಜವಾಬ್ದಾರಿ ಸಮಿತಿ ನಿಭಾಯಿಸಬೇಕಾಗುತ್ತದೆ .ಕೆರೆಯನ್ನು ಸ್ವಚ್ಛವಾಗಿ ಇಡುವ ಕಾರ್ಯ ಗ್ರಾಮದ ಎಲ್ಲಾ ಸಾರ್ವಜನಿಕರ ಹೊಣೆಯಾಗಿದೆ ,ನಮ್ಮೂರು ನಮ್ಮ ಕೆರೆ ಅಭಿಯಾನದ ಅಡಿಯಲ್ಲಿ ನೂರಾರು ಕೆರೆಗಳು ಸಂಪೂರ್ಣ ಅಭಿವೃದ್ದಿ ಹೊಂದಿದ್ದು ಸಾರ್ವಜನಿಕರ ದೈನಂದಿಕ ಕಾರ್ಯಗಳಿಗೆ ಬಳಕೆಯಾಗುತ್ತಿರುವುದು ಸಂತಸ ತಂದಿದೆ. ಈ ಅಭಿಯಾನದ ಅಡಿಯಲ್ಲಿ ಸ್ಥಳೀಯ ಬೋರ್ವೆಲ್ ಗಳಲ್ಲಿ ನೀರು ಬರಲು ಸಾಧ್ಯವಾಗುತ್ತದೆ . ಕೆರೆ ಅಭಿವೃದ್ಧಿ ಕಾರ್ಯದಲ್ಲಿ ಸ್ಥಳೀಯ ರೈತರ ಅನುಕೂಲಕ್ಕಾಗಿ ಉಚಿತ ಮಣ್ಣು ಪೂರೈಕೆ ಮಾಡಲಾಗುವುದು. ಕೇವಲ ಕೆರೆ ಅಷ್ಟೇ ಅಲ್ಲದೆ ರಾಜಕಾಲುವೆ ,ಕೆರೆಯಂಗಳದ ರಸ್ತೆ ಅಭಿವೃದ್ಧಿ ಕಾರ್ಯ ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ನಡೆಯಬೇಕಿದೆ ಎಂದು ತಿಳಿಸಿದರು

    ತಾಲ್ಲೂಕು ಯೋಜನಾಧಿಕಾರಿಗಳಾದ ಸುಧಾ ಭಾಸ್ಕರ್ ನಾಯಕ್ ಮಾತನಾಡಿ ಸ್ಥಳೀಯ ರೈತರಿಗೆ ಅತ್ಯಂತ ಅನುಕೂಲ ಕಲ್ಪಿಸುವ ಕಾರ್ಯಕ್ರಮ ಇದಾಗಿದೆ ಜೊತೆಗೆ ಕೆರೆ ಸಂರಕ್ಷಣೆ ಕುರಿತು ಗ್ರಾಮಸ್ಥರಿಗೆ ಅರಿವು ಮೂಡಿಸುವ ಸದಾವಕಾಶ ನಮ್ಮದಾಗಿದೆ .ನಮ್ಮ ಯೋಜನೆಯೊಂದಿಗೆ ಸಹಾಯಹಸ್ತ ನೀಡಿ ಸಹಕರಿದ ಗ್ರಾಮದ ಪ್ರತಿಯೊಬ್ಬರಿಗೂ ನಮ್ಮ ಯೋಜನೆ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

    ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಗವಿ ಸಿದ್ದಯ್ಯ ಮಾತನಾಡಿ” ನಮ್ಮೂರು ನಮ್ಮ ಕೆರೆ ” ವಿಶೇಷ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಅಂತರಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿರುವುದು ನಮ್ಮೆಲ್ಲರ ಪುಣ್ಯವೇ ಸರಿ ,ಈ ಅಭಿಯಾನದಿಂದಾಗಿ ಸ್ಥಳೀಯ ರೈತರಿಗೆ ಹಾಗೂ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು

     

    ಕಾರ್ಯಕ್ರಮದಲ್ಲಿ ಗಣ್ಯರಾದ ನಾಗರಾಜು, ರಾಮಕೃಷ್ಣಪ್ಪ,ಸದಾಶಿವಪ್ಪ,ಬೈಯಣ್ಣ,ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ,ವಲಯ ಮೇಲ್ವಿಚಾರಕರಾದ ಗಿರೀಶ್ ಸೇರಿದಂತೆ ವಲಯದ ಸೇವಾಪ್ರತಿನಿಧಿಗಳು , ಗ್ರಾಮಸ್ಥರು ಉಪಸ್ಥಿತರಿದ್ದರು .

  • ಬಿಜೆಪಿಯ 10 ವರ್ಷದ ಸಾಧನೆಯನ್ನು ಗೋಡೆ ಬರಹ ಹಾಗೂ ಕರಪತ್ರ ಮನೆ ಮನೆಗೆ ತಲುಪಿಸುವ ಮೂಲಕ ಗ್ರಾಮ ಚಲೋ ಅಭಿಯಾನ

    ದೊಡ್ಡಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಯನ್ನು ಗೋಡೆ ಬರಹ ಹಾಗೂ ಕರಪತ್ರ ಹಂಚುವ ಮೂಲಕ ಗ್ರಾಮಚಲೋ ಅಭಿಯಾನ ಪ್ರಾರಂಭಿಸಿದ್ದೇವೆ .ಸ್ಥಳೀಯವಾಗಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಸಂತಸ ತಂದಿದೆ ಎಂದು ಸ್ಥಳೀಯ ಮುಖಂಡರಾದ ರಮೇಶ್ ತಿಳಿಸಿದರು

     

    ರಾಜೀವ್ ಗಾಂಧಿ ಆಶ್ರಯ ಬಡಾವಣೆ 72 ನೇ ಬೂತ್ ನಲ್ಲಿ ಕೇಂದ್ರ ಸರ್ಕಾರದಿಂದ ದೇಶದ ಜನತೆಗೆ ನೀಡಿರುವ ವಿವಿಧ ಯೋಜನೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಜೀ ಯವರು ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳು ಮತ್ತು ಕೇಂದ್ರ ಸರ್ಕಾರದ 10 ವರ್ಷದ ಸಾಧನೆಯ ಕುರಿತಂತೆ ಜನ ಜಾಗೃತಿ ಮೂಡಿಸುವ ಸಲುವಾಗಿ ಗೋಡೆ ಬರಹ ಹಾಗೂ ಕರಪತ್ರಗಳನ್ನು ಪ್ರತಿ ಮನೆಗೂ ನೀಡುವ ಮೂಲಕ ಗ್ರಾಮ ಚಲೋ ಅಭಿಯಾನವನ್ನು ಸ್ಥಳೀಯ ಬಿಜೆಪಿ ಮುಖಂಡರಾದ ರಮೇಶ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಮತ್ತೊಮ್ಮೆ ಮೋದಿ ಎಂಬ ಧ್ಯೇಯ ವಾಕ್ಯದೊಂದಿಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಜನರ ಮನೆ ಬಾಗಿಲಿಗೆ ಬಂದಿದ್ದೇವೆ .ಸಾರ್ವಜನಿಕರ ಉತ್ತಮ ಸ್ಪಂದನೆ ನಮ್ಮ ಕಾರ್ಯಕರ್ತರಿಗೆ ಮತ್ತಷ್ಟು ಹುಮ್ಮಸ್ಸು ನೀಡಿದೆ . ಸ್ಥಳೀಯ ಬೂತ್ ಮಟ್ಟದಲ್ಲಿ ಸಾರ್ವಜನಿಕರಿಂದ ಉತ್ತಮ ಬೆಂಬಲ ದೊರೆತ್ತಿದ್ದು ,ಜನರಲ್ಲಿ ದೇಶದ ಪ್ರಧಾನಿ ಮೋದಿಜೀ ಕುರಿತು ಅಪಾರ ಗೌರವವಿದೆ .ಜನರ ಈ ಬೆಂಬಲ ಪ್ರೋತ್ಸಹ ನೋಡಿದಾಗ ಈ ಭಾರಿ ಮತ್ತೊಮ್ಮೆ ನಮ್ಮ ನೆಚ್ಚಿನ ನಾಯಕ ಮೋದಿಜೀ ಭಾರತದ ಪ್ರಧಾನ ಮಂತ್ರಿ ಯಾವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

    ಮಹಿಳಾ ಮುಖಂಡರಾದ ಪುಷ್ಪ ಶಿವಶಂಕರ್ ಮಾತನಾಡಿ ಮೋದಿಜೀ ಪ್ರಧಾನ ಮಂತ್ರಿಯಾಗಬೇಕಿರುವುದು ಕೇವಲ ಬಿಜೆಪಿ ಪಕ್ಷಕ್ಕಲ್ಲ ಅವರು ದೇಶದ ಪ್ರಜೆಗಳಿಗಾಗಿ ಪ್ರಧಾನಮಂತ್ರಿಯಾಗಬೇಕಿದೆ . ಅಭಿವೃದ್ಧಿ ಭಾರತ ನಮ್ಮೆಲ್ಲರ ಕನಸು ಅದನ್ನು ನನಸು ಮಾಡುವ ಶಕ್ತಿ, ಯುಕ್ತಿ, ಸಾಮರ್ಥ್ಯ ಇರುವುದು ಕೇವಲ ನಮ್ಮ ನಾಯಕರಾದ ನರೇಂದ್ರ ಮೋದಿಜೀಯವರಿಗೆ ಮಾತ್ರ. ಭಾರತವನ್ನು ವಿಶ್ವಕ್ಕೆ ಮಾದರಿ ರಾಷ್ಟ್ರವನ್ನಾಗಿ ನಿರ್ಮಾಣಮಾಡುವ ಕನಸು ಹೊತ್ತಿರುವ ನಾಯಕ ಮೋದಿಜೀಯವರ ಬೆಂಬಲಕ್ಕೆ ಭಾರತೀಯ ಜನತಾ ಪಕ್ಷದ ಎಲ್ಲಾ ಕಾರ್ಯಕರ್ತರು ನಿಂತಿದ್ದೇವೆ . ದೇಶದ ಅಭಿವೃದ್ಧಿ ಬಯಸುವ ಪ್ರತಿಯೊಬ್ಬ ಪ್ರಜೆಯು ಮತ್ತೊಮ್ಮೆ ಮೋದಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ವಿ.ರಮೇಶ್ , ಪಕ್ಷದ ಮುಖಂಡರಾದ ಶ್ರೀಮತಿ ಪುಷ್ಪಾ ಶಿವಶಂಕರ್ , 1ನೇ ವಾರ್ಡ್ ನಗರಸಭಾ ಸದಸ್ಯರಾದ ಶ್ರೀಮತಿ ಹಂಸಪ್ರಿಯಾ ದೇವರಾಜ್ ಹಾಗೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಉಪಸ್ಥಿತರಿದ್ದರು

  • 2ನೇ ವರ್ಷದ ವಾರ್ಷಿಕೋತ್ಸವ ಆಚರಣೆ : ವಿಶೇಷ ಅಲಂಕಾರದೊಂದಿಗೆ ಕಂಗೊಳಿಸಿದ ಹಾಡೋನಹಳ್ಳಿ ಚೌಡೇಶ್ವರಿ ದೇವಾಲಯ

    Doddaballapur : ದೇವಾಲಯ ನಿರ್ಮಾಣ ಮಾಡಿ 2 ವರ್ಷವಾಗಿದೆ . ಸಾವಿರಾರು ಭಕ್ತಾದಿಗಳು ದಿನನಿತ್ಯ ತಾಯಿಯ ದರ್ಶನ ಪಡೆಯುತ್ತಿದ್ದಾರೆ .ನಿತ್ಯ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದ್ದು ದಿನದಿಂದ ದಿನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ನಾರಾಯಣಪ್ಪ ತಿಳಿಸಿದರು

    ದೊಡ್ಡಬಳ್ಳಾಪುರ ತಾಲ್ಲೂಕಿನ ಆಡೋನಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಚೌಡೇಶ್ವರಿ ದೇವಸ್ಥಾನದ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷವಾಗಿ ಸಾಮೂಹಿಕ ಕುಂಕುಮಾರ್ಚನೆ , ಭಜನೆ, ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ದೇವಾಲಯದ ಆಡಳಿತ ಮಂಡಳಿ ಹಮ್ಮಿಕೊಂಡಿದೆ ಈ ಕುರಿತು ಮಾತನಾಡಿದ ಅವರು ದೇವಾಲಯದ ನಿರ್ಮಾಣದ ಹಿಂದೆ ಸ್ಥಳೀಯ ಮುಖಂಡರಾದ ಅಪ್ಪಯ್ಯಣ್ಣ ಸೇರಿದಂತೆ ಹಲವರ ಶ್ರಮ ನೆನಪಾಗುತ್ತದೆ .ಇದು ಈ ಕ್ಷೇತ್ರ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ ದಿನಕ್ಕೆ ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಭೇಟಿ ಕೊಡುತ್ತಿರುವುದು ಸಂತಸ ತಂದಿದೆ.ನಿತ್ಯ ಅನ್ನದಾಸೋಹ ಸದಾ ವಿಶೇಷ ಪೂಜಾ ಕಾರ್ಯಗಳು ಅಮಾವಾಸ್ಯೆ ಹುಣ್ಣಿಮೆ ದಿನದಂದು ವಿಶೇಷ ಅಲಂಕಾರಗಳ ಸಹಿತ ಪೂಜೆ ಈ ದೇವಾಲಯದ ವೈಶಿಷ್ಟ್ಯವಾಗಿದೆ ಎಂದು ತಿಳಿಸಿದರು

    ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ ವರ್ಷದಲ್ಲಿ ಹಲವಾರು ಬಾರಿ ಈ ದೇವಾಲಯಕ್ಕೆ ಭೇಟಿ ಕೊಟ್ಟು ತಾಯಿ ಆಶೀರ್ವಾದ ಪಡೆದುಕೊಳ್ಳುತ್ತೇವೆ. ದೇವಾಲಯದ ಅಡಳಿತ ಮಂಡಳಿ ದೇವಾಲಯದ ಕಾರ್ಯಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು . ದಿನದಿಂದ ದಿನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ.2 ನೇ ವಾರ್ಷಿಕೋತ್ಸವದ ಅಂಗವಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ದೇವಾಲಯ ಆಡಳಿತ ಮಂಡಳಿ ದೈವಿಕ ಹಾಗೂ ಸಾಂಸ್ಕೃತಿಕ ಪರಂಪರೆ ಕಾಪಾಡುವಲ್ಲಿ ಯಶಸ್ವಿಯಾಗಿ ಶ್ರಮಿಸುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

    ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಭಕ್ತಾದಿಗಳು ಉಪಸ್ಥಿತರಿದ್ದರು .

  • ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ : ಸೌಹಾರ್ದಯುತ ಜೀವನ ಸಾಗಿಸಲು ಸ್ಥಳೀಯ ಮುಖಂಡರ ನಿರ್ಧಾರ

    ದೊಡ್ಡಬಳ್ಳಾಪುರ: ಈ ಹಿಂದೆ ಸ್ಥಳೀಯವಾಗಿ ಹಾಕಲಾಗಿದ್ದ ಬ್ಯಾನರ್ ಹರಿದು ಕಿಡಿಗೇಡಿಗಳು ಪುಂಡಾಟ ಮೆರೆದಿದ್ದರು. ಈ ಹಿನ್ನಲೆ ಪೊಲೀಸ್ ಇಲಾಖೆ ವತಿಯಿಂದ ಸ್ಥಳೀಯವಾಗಿ ಶಾಂತಿ ಸಭೆ ಆಯೋಜನೆ ಮಾಡಲಾಗಿದ್ದು. ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಮುಖಂಡರು ಇನ್ನು ಮುಂದೆ ಸೌಹಾರ್ದಯುತವಾಗಿ ಜೀವನ ಸಾಗಿಸಲು ನಿರ್ಧರಿಸಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ರಾಮು ತಿಳಿಸಿದರು

     

    ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿಯ ನೆರಳೇಘಟ್ಟ ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ನೂತನ ನಾಮಫಲಕವನ್ನು ಪೊಲೀಸ್ ಅಧಿಕಾರಿ ಸಾಧಿಕ್ ಪಾಷ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಮುಖಂಡರು, ಹಲವು ಪದಾಧಿಕಾರಿಗಳು ಅನಾವರಣ ಮಾಡಿದರು.

    ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಸಾಧಿಕ್ ಪಾಷಾ ಮಾತನಾಡಿ ಸ್ಥಳೀಯವಾಗಿ ದಲಿತರ ಕುಂದು ಕೊರತೆ ಆಲಿಸುವ ಸಲುವಾಗಿ ಪೊಲೀಸ್ ಇಲಾಖೆ ವತಿಯಿಂದ ತಾಲ್ಲೂಕಿನ ನೇರಳೆಘಟ್ಟ ಗ್ರಾಮದಲ್ಲಿ ಶಾಂತಿ ಸೌಹಾರ್ದ ಸಭೆಯನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ಮುಖಂಡರಿಂದ ಉತ್ತಮ ಸ್ಪಂದನ ದೊರೆತಿದ್ದು. ಈ ಸಭೆಯು ಯಶಸ್ವಿಯಾಗಿದೆ. ಸೌಹಾರ್ದಯುತವಾಗಿ ಬಾಳುವ ಭರವಸೆಯನ್ನು ಸ್ಥಳೀಯ ಮುಖಂಡರು ನೀಡಿದ್ದಾರೆ. ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಪೊಲೀಸ್ ಇಲಾಖೆ ಸದಾ ಬೆಂಬಲವಾಗಿರುತ್ತದೆ ಎಂದು ತಿಳಿಸಿದರು.

    ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ರಾಮು ಮಾತನಾಡಿ ಈ ಹಿಂದೆ ಪ್ರೊಫೆಸರ್ ಬಿ ಕೃಷ್ಣಪ್ಪ ರವರ 50ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೇರಳೆ ಘಟ್ಟ ಗ್ರಾಮದಲ್ಲಿ ಬ್ಯಾನರ್ ಹಾಕಿದ್ದು ಕಿಡಿಗೇಡಿಗಳು ಬ್ಯಾನರ್ ಹರಿದು ಪುಂಡಾಟಿಕೆ ಮೆರೆದಿದ್ದರು. ಈ ಕುರಿತು ಕಸಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಸ್ಥಳೀಯ ಪೊಲೀಸ್ ಅಧಿಕಾರಿಗಳಾದ ಸಾಧಿಕ್ ಪಾಷಾ ರವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನೆರಳೇಘಟ್ಟ ಗ್ರಾಮದಲ್ಲಿ ಸರ್ವ ಜನಾಂಗದ ಶಾಂತಿ ಹಾಗೂ ಸೌಹಾರ್ದ ಸಭೆ ಹಾಗೂ ದಲಿತ ಕುಂದು ಕೊರತೆ ಸಭೆಯನ್ನು ನೆಡೆಸಲು ಮುಂದಾಗಿದ್ದು .ಸಭೆಯು ಯಶಸ್ವಿಯಾಗಿದೆ . ಇದೇ ಸಂದರ್ಭದಲ್ಲಿ ನಮ್ಮ ಸಂಘಟನೆಯ ನಾಮಫಲಕವನ್ನು ಅನಾವರಣಗೊಳಿಸಿರುವುದು ಮತ್ತಷ್ಟು ಸಂತೋಷ ತಂದಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ಜಿಲ್ಲಾ ಘಟಕದ ಸಂಚಾಲಕರಾದ ಎಂ. ಪಿ ಗಂಗಾಧರ್ ಮಾತನಾಡಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಕೇವಲ ದಲಿತರಿಗಷ್ಟೇ ಅಲ್ಲದೆ ಸರ್ವರಿಗೂ ಅನುಕೂಲ ಮಾಡುವ ಸಂಘಟನೆಯಾಗಿದ್ದು . ಕರ್ನಾಟಕ ರಾಜ್ಯದ ಪ್ರಬಲ ಸಂಘಟನೆಯಾಗಿದೆ. ಸ್ಥಳೀಯವಾಗಿ ರಾಮು ರವರ ನೇತೃತ್ವದಲ್ಲಿ ಸಂಘಟನೆಯು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು. ಮುಂದೆ ಸಾರ್ವಜನಿಕರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಹಾರೈಸಿದರು .

     

     

    ಜಿಲ್ಲಾ ಸಂಚಾಲಕರಾದ ದೊಡ್ಡಯ್ಯ ಲಿಂಗಾಪುರ ಮಾತನಾಡಿ ಈ ಹಿಂದೆ ಕೆಲ ಕಿಡಿಗೇಡಿಗಳು ನಮ್ಮ ಸಂಘಟನೆಯ ಬ್ಯಾನರ್ ಹರಿದು ವಿಕೃತ ಮೆರೆದಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳ ಸಹಾಯದಿಂದ ಇಂದು ಅದೇ ಜಾಗದಲ್ಲಿ ನಮ್ಮ ಸಂಘಟನೆಯ ನಾಮಫಲಕವನ್ನು ಅಧಿಕೃತವಾಗಿ ಅನಾವರಣ ಮಾಡಲಾಗಿದೆ. ಪೊಲೀಸ್ ಇಲಾಖೆಯ ಸಹಕಾರ ಶ್ಲಾಘನೀಯ. ತಾಲೂಕಿನ ರಾಮು ನೇತೃತ್ವದ ತಂಡ ದಲಿತಪರ ಧ್ವನಿಯಾಗಿ ಶ್ರಮಿಸಲಿದೆ ಎಂದು ಅಭಿಪ್ರಾಯ ಪಟ್ಟರು .

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಸಕ್ಕರೆ ಗೊಲ್ಲಹಳ್ಳಿ ಹನುಮಂತಯ್ಯ ಮಾತನಾಡಿ ಕಾರ್ಯಕ್ರಮದಲ್ಲಿ ನಮ್ಮ ತಾಲೂಕಿನ ಎಲ್ಲಾ ಭಾಗಗಳಿಂದ ಕಾರ್ಯಕರ್ತರು ಭಾಗವಹಿಸಿದ್ದು. ಸಂಘಟನೆಯ ಬಲ ಹೆಚ್ಚಿದೆ. ದಲಿತರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಮ್ಮೆಲ್ಲರ ಮೊದಲ ಆದ್ಯತೆ. ಪ್ರೊಫೆಸರ್ ಬಿ ಕೃಷ್ಣಪ್ಪ ಅವರ ಆಶಯದಂತೆ ಸಂಘಟನೆ ಮುನ್ನಡೆಸಲಾಗುವುದು ಎಂದು ತಿಳಿಸಿದರು .

     

    ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಸಕ್ಕರೆ ಗೊಲ್ಲಹಳ್ಳಿ ಹನುಮಂತಯ್ಯ, ದೊಡ್ಡಯ್ಯ ಲಿಂಗಾಪುರ, ನರೇಂದ್ರ ಮಾಡೇಶ್ವರ, ಹನುಮಯ್ಯ ಸಕ್ಕರೆ ಗೊಲ್ಲಹಳ್ಳಿ, ರಮೇಶ್ ಹಾಲೇನಳ್ಳಿ, ನರಸಿಂಹಮೂರ್ತಿ ದೊಡ್ಡ ಕುಕ್ಕನಹಳ್ಳಿ, ಆನಂದ್ ಸಕ್ಕರೆ ಗೊಲ್ಲಹಳ್ಳಿ,ಘಟಕದ ಸಂಘಟನಾ ಸಂಚಾಲಕರಾದ ಹನುಮಯ್ಯ, ಕಾರ್ಯದರ್ಶಿ ರಮೇಶ್ ಜಾಲಗೆರೆ, ಎನ್.ಎ.ನಾಗರಾಜ್ ನಾಗದೇನಹಳ್ಳಿ,.ಕುಮಾರ್ ತೂಬುಕುಂಟೆ, ಚೌಡಮೂರ್ತಿ ಕಸಘಟ್ಟ, ನರಸಿಂಹಯ್ಯ ಬೊಮ್ಮನಹಳ್ಳಿ, ಹನುಮಂತರಾಜು ಲಿಂಗಾಪುರ, ರಾಮಚಂದ್ರಪ್ಪ ಸಾಸಲು, ವೆಂಕಟೇಶ್ ಸೂಲುಕುಂಟೆ ಇದ್ದರು. ಹಾಗೂ ಸಂಘಟನೆಯ ತಾಲ್ಲೂಕು ಹೋಬಳಿ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು

  • ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಶ್ರೀ ಗುರುದೇವ್ ಗುರೂಜಿ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ : ಫೆಬ್ರವರಿ 15 ಮತ್ತು 16ರಂದು ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ

    ಪರಮ ಪೂಜ್ಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಫೆಬ್ರವರಿ 15 ಮತ್ತು 16ರಂದು ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಶ್ರೀ ಜಗದ್ಗುರು ಹಸರಂಗಿ ಅಜ್ಜಯ್ಯನವರ ಹಾಗೂ ಬಾಲ ತ್ರಿಪುರ ಸುಂದರಿ ಅಮ್ಮನವರ ವಿಗ್ರಹ ಪ್ರಾಣಾ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಲಿದೆ ಎಂದು ಶ್ರೀ ಕ್ಷೇತ್ರ ಪುಣ್ಯಧಾಮದ ಪೀಠಾಧ್ಯಕ್ಷರಾದ ಗುರುದೇವ್ ಗುರೂಜಿ ತಿಳಿಸಿದರು

    ದೊಡ್ಡಬಳ್ಳಾಪುರ ತಾಲ್ಲೂಕಿನ ಲಕ್ಕಸಂದ್ರ ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಕ್ತರ ಉದ್ಧಾರಕ್ಕಾಗಿಯೇ ಇರುವ ಜಗದ್ಗುರು ಶ್ರೀ ಹಸರಂಗಿ ಅಜ್ಜಯ್ಯನವರ ಹಾಗೂ ಬಾಲ ತ್ರಿಪುರ ಸುಂದರಿ ಅಮ್ಮನವರ ವಿಗ್ರಹಗಳನ್ನು ಫೆಬ್ರವರಿ 15 ಮತ್ತು 16ನೇ ದಿನಾಂಕದಂದು ಪ್ರಾಣ ಪ್ರತಿಷ್ಠಾಪನೆಯನ್ನು ಮಾಡುವ ಮೂಲಕ ಭಕ್ತ ಲೋಕಕ್ಕೆ ಅರ್ಪಿಸಲಾಗುತ್ತದೆ .

    ಫೆಬ್ರವರಿ 15ರಂದು ವಿಶೇಷವಾಗಿ ಗೋಪೂಜೆ ,ಪ್ರಾಣ ಪ್ರತಿಷ್ಠಾಪನೆ, ಗೋ ಪ್ರವೇಶ, ಮಹಾ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ ಸೇರಿದಂತೆ ಹಲವು ವಿಶೇಷ ಪೂಜೆಗಳನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಹಲವು ಮಠಗಳ ಪರಮ ಪೂಜ್ಯ ಮಠಾಧ್ಯಕ್ಷರು, ಪೂಜ್ಯ ಸ್ವಾಮೀಜಿಗಳು ಆಗಮಿಸಲಿದ್ದಾರೆ. ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಶಾಸಕರಾದ ಶ್ರೀ ಧೀರಜ್ ಮುನಿರಾಜು ನೆರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ಪೊಲೀಸ್ ಅಧಿಕಾರಿಗಳಾದ ಕೆ. ಏನ್.ನಾಗರಾಜು, ಬಮುಲ್ ನಿರ್ದೇಶಕರಾದ ಬಿಸಿ ಆನಂದ್, ಸೇರಿದಂತೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಶ್ರೀ ಹಸರಂಗಿ ಅಜ್ಜಯ ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿಗಳು, ಹಾಗೂ ಭಕ್ತಗಣ ಉಪಸ್ಥಿರಿದರು

  • ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೇಲೆ ಕುಮಾರಸ್ವಾಮಿಯವರಿಗೆ ಒಲವು : ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡ್ತಾರ ಮಾಜಿ ಮುಖ್ಯಮಂತ್ರಿ…??

    ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕುರಿತು ಅಪಾರ ಒಲವಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಜೆಪಿ ವರಿಷ್ಠರ ಮನವಿ ಮೇರೆಗೆ ಕುಮಾರಸ್ವಾಮಿಯವರು ಚಿಕ್ಕಬಳ್ಳಾಪುರದಿಂದ ಸ್ವರ್ಥಿಸುವ ಸಾಧ್ಯತೆ ಇದೆ .ಬಿಜೆಪಿ ಪಕ್ಷದಿಂದ ಸ್ವರ್ಥಿಸಲು ಈಗಾಗಲೇ ಯಲಹಂಕ ಶಾಸಕರಾದ ಎಸ್.ಆರ್. ವಿಶ್ವನಾಥ್ ಮಗ ಅಲೋಕ್ ವಿಶ್ವನಾಥ್ ಹಾಗೂ ಮಾಜಿ ಸಚಿವರಾದ ಡಾ.ಕೆ.ಸುಧಾಕರ್ ನಡುವೆ ಪೈಪೋಟಿ ನಡೆಯುತ್ತಿದೆ . ವರಿಷ್ಠರ ಮನವಿ ಮೇರೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಸ್ಪರ್ಧಿಸಿದ್ದೆ ಆದಲ್ಲಿ , ಕಾರ್ಯಕರ್ತರು ಒಮ್ಮತದಿಂದ ಶ್ರಮಿಸಿ ಅಭೂತಪೂರ್ವ ಯಶಸ್ಸುಸಾಧಿಸುವಲ್ಲಿ ಸಂಶಯವಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಹರೀಶ್ ಗೌಡರವರು ಹೇಳಿದರು.

     

    ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯ ಚೌಡೇಶ್ವರಿ ದೇವಸ್ಥಾನದ ಎರಡನೇ ವರ್ಷದ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗವಹಿಸಿದ ಹರೀಶ್ ಗೌಡರವರು ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಪುಟ್ಟಣ್ಣಯ್ಯ ಕಳೆದ ಚುನಾವಣೆಯಲ್ಲಿ ಬೋಗಸ್ ಮತಗಳ ಮೂಲಕ ಗೆಲವು ಸಾಧಿಸುತ್ತಿದ್ದರು, ಈ ಬಾರಿ ನಕಲಿ ಮತದಾರರ ಹಾವಳಿಗೆ ಕಡಿವಾಣ ಹಾಕಲಾಗಿದೆ. ಶಿಕ್ಷಕರು ಪ್ರಜ್ಞಾವಂತರಿದ್ದಾರೆ . ಪುಟ್ಟಣ್ಣಯ್ಯ ನವರು ಅಧಿಕಾರದ ಆಸೆಗೆ ಎರಡು ವರ್ಷಕ್ಕೂಮ್ಮೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ, ಈ ಚುನಾವಣೆಯಲ್ಲಿ ಶಿಕ್ಷಕರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಮೈತ್ರಿಯಾಗಿರುವುದರಿಂದ ಗೆಲವು ಮತ್ತಷ್ಟು ಸುಲಭವಾಗಲಿದೆ ಎಂದರು. ನಮ್ಮ ಪಕ್ಷದಿಂದ ಮೈತ್ರಿ ಅಭ್ಯರ್ಥಿಯಾಗಿರುವ ಎ.ಪಿ.ರಂಗನಾಥ್ ಗೆಲುವು ಸಾಧಿಸಲಿದ್ದಾರೆ.

     

     

    ಲೋಕಸಭಾ ಚುನಾವಣಾ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಎರಡು ಸ್ಥಾನಗಳಲ್ಲಿ ಗೆಲುವು ಸಾಧ್ಯತೆ ಇದೆ ಈ ಕುರಿತು ಪ್ರತಿಕ್ರಿಯಿಸಿದ ಅವರು ಚುನಾವಣಾ ಸಮೀಕ್ಷೆಗಳ ಬಗ್ಗೆ ನಮಗೆ ನಂಬಿಕೆ ಇಲ್ಲ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ವು, ಆದರೆ ಚುನಾವಣಾ ಫಲಿತಾಂಶ ಬೇರೆಯೇ ಆಗಿತ್ತು, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ 28 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಸೀಟ್ ಹಂಚಿಕೆಯಲ್ಲಿ ಜೆಡಿಎಸ್ ಗೆ ಸಿಗುವ ಎಲ್ಲಾ ಸ್ಥಾನಗಳಲ್ಲೂ ಗೆಲ್ಲುವುದಾಗಿ ಹೇಳಿದರು

     

     

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿನ ಸ್ವರ್ಥೆಗಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಷ್ ನಡುವೆ ಪೈಪೋಟಿ ಇದ್ದು ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಕ್ರಿಯೆ ನೀಡಿದ ಅವರು ಸ್ಥಳೀಯ ಮುಖಂಡರು ನಿಖಿಲ್ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿ ಇಬ್ಬರಿಗೂ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ವರ್ಥಿಸುವಂತೆ ಮನವಿ ಮಾಡಿದ್ದಾರೆ, ಇತ್ತಾ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿ ಪಕ್ಷದಿಂದಲೇ ಮೂವರು ಪೈಪೋಟಿ ಇದ್ದು, ಬಿಜೆಪಿಯ ಮುಖಂಡರಿಂದಲೇ ಕುಮಾರಸ್ವಾಮಿಯವರು ಸ್ವರ್ಥಿಸುವಂತೆ ಸೂಚನೆ ಬಂದಿದೆ, ಕುಮಾರಸ್ವಾಮಿ ಸ್ವರ್ಥಿಸಿದ್ದಾರೆ ಅವರ ಗೆಲುವಿಗಾಗಿ ನಾವು ಕ್ಷೇತ್ರದಲ್ಲಿ ಇನ್ನೂ ಹೆಚ್ಚಾಗಿ ದುಡಿಯುತ್ತೆವೆ. ಅವರ ಹಿಂದಿನ ಸೋಲಿನ ನೋವು ಮರೆಸುವುದ್ದಾಗಿ ಹೇಳಿದರು.

  • ಮಾರ್ಚ್ 8 ರಂದು ಹಳ್ಳಿಕಾರ್ ಫ್ಯಾಷನ್ ಶೋ : ನೂತನ ಕಾರ್ಯಕ್ರಮಕ್ಕೆ ನವ ಕರ್ನಾಟಕ ಯುವಶಕ್ತಿ ವೇದಿಕೆ ಪ್ಲಾನ್

    ದೊಡ್ಡಬಳ್ಳಾಪುರ(ತೂಬಗೆರೆ) : ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಮಾರ್ಚ್ 8 2024 ರಂದು ನವ ಕರ್ನಾಟಕ ಯುವ ಶಕ್ತಿ ವೇದಿಕೆ ವತಿಯಿಂದ ಮಹಾ ಶಿವರಾತ್ರಿ ಪ್ರಯುಕ್ತ ಹಳ್ಳಿಕಾರ್ ಹಸುಗಳ ಸೌಂದರ್ಯ ಪ್ರದರ್ಶನ ಸ್ಪರ್ಧೆ ಆಯೋಜಿಸಲಾಗಿದೆ.

     

    ಈ ಕುರಿತ ಸುದ್ದಿಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷರಾದ ಹಳ್ಳಿ ರೈತ ಅಂಬರೀಶ್ ರವರು ಮಾತನಾಡಿ ಮಹಾ ಶಿವರಾತ್ರಿ ಅಂಗವಾಗಿ ಹಳ್ಳಿಕಾರ್ ಹಸುಗಳ ಫ್ಯಾಶನ್ ಶೋ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. ಈ ಕಾರ್ಯಕ್ರಮದ ಮೂಲಕ ಹಳ್ಳಿಕಾರ್ ತಳಿಯ ಸೌಂದರ್ಯ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪ್ರದರ್ಶಿಸುವ ಗುರಿ ಹೊಂದಿದ್ದೇವೆ. ಹಾಗೂ ಸ್ಥಳೀಯ ತಳಿಗಳನ್ನು ಸಂರಕ್ಷಿಸುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾಗುತ್ತಿದೆ ಎಂದರು.

     

     

    ನವ ಕರ್ನಾಟಕ ಯುವಶಕ್ತಿ ವೇದಿಕೆಯ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ ಹಳ್ಳಿಕಾರ್ ಹಸುಗಳ ಸೌಂದರ್ಯ ಸ್ಪರ್ಧೆಯ ನಿಯಮಗಳು ಮತ್ತು ಬಹುಮಾನ ಆಯ್ಕೆ ವಿಧಾನ ಶೀಘ್ರದಲ್ಲಿ ತಿಳಿಸಲಾಗುವುದು ಎಂದರು. ಹಾಗೂ ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ರೈತ ಮುಖಂಡರು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

    ವೇದಿಕೆಯ ಮಾರ್ಗದರ್ಶಕರಾದ ಅಪ್ಪಯ್ಯಣ್ಣನವರು ಮಾತನಾಡಿ ನವ ಕರ್ನಾಟಕ ಯುವಶಕ್ತಿ ವೇದಿಕೆಯು ರೈತರ ಕಲ್ಯಾಣಕ್ಕಾಗಿ ಮತ್ತು ಕನ್ನಡ ಭಾಷೆ-ಸಂಸ್ಕೃತಿಯಯನ್ನು ಉತ್ತೇಜಿಸಲು ಶ್ರಮಿಸುತ್ತಿರುವ ಯುವ ಸಂಘಟನೆಯಾಗಿದೆ. ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಯುವಕರು ತೊಡಗಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಪ್ಪಯಣ್ಣ, ಹಾಡೋನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣಪ್ಪ. ನವ ಕರ್ನಾಟಕ ಯುವಶಕ್ತಿ ವೇದಿಕೆಯ ಕಾರ್ಯದರ್ಶಿ ಉದಯ ಆರಾಧ್ಯ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

  • ಸಿ ಆರ್ ಪಿ ಎಫ್ ಪೆರೇಡ್ ಗ್ರೌಂಡ್ ನಲ್ಲಿ 5ನೇ ವರ್ಷದ ಸ್ಮರಣಾಂಜಲಿ ಕಾರ್ಯಕ್ರಮ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿ

    ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2019ನೇ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿ ಆರ್ ಪಿ ಎಫ್ ನ ವೀರ ಯೋಧರ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲಾ ಹುತಾತ್ಮ ಯೋಧರಿಗೂ 5ನೇ ವಾರ್ಷಿಕ ಸ್ಮರಣಾಂಜಲಿ ಕಾರ್ಯಕ್ರಮವನ್ನು ಗ್ರೂಪ್ ಸೆಂಟರ್, ಸಿ ಆರ್ ಪಿ ಎಫ್ ಕ್ಯಾಂಪಸ್ ದೊಡ್ಡಬಳ್ಳಾಪುರ ರಸ್ತೆ ,ಯಲಹಂಕ ಬೆಂಗಳೂರು ಇಲ್ಲಿ ದಿನಾಂಕ 14 2 2024ರಂದು ಆಯೋಜನೆ ಮಾಡಲಾಗಿದ್ದು.

     

    ಪುಲ್ವಾಮಾ ದಾಳಿಯಲ್ಲಿ ದೇಶಕ್ಕಾಗಿ ಮಡಿದ ಯೋಧರ ಸವಿನೆನಪಿನಲ್ಲಿ ಮಾಜಿ ಅರೇಸೇನಾಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದು ಸದರಿ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ,ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸೇರಿದಂತೆ ರಾಜ್ಯದ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದೆ .

    ಈ ಕುರಿತು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತ ರಾಜಗೋಪಾಲ ಮಾತನಾಡಿ ನಮ್ಮ ತಂಡದ ಸತತ ಪರಿಶ್ರಮದಿಂದಾಗಿ ಫೆಬ್ರುವರಿ 14 ರಂದು ನೆಡೆಯುವ ಕಾರ್ಯಕ್ರಮಕ್ಕೆ ನಮ್ಮ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಭಾಗವಹಿಸುವ ಭರವಸೆ ನೀಡಿದ್ದಾರೆ ಸಚಿವರು ಹಾಗೂ ಶಾಸಕರಾದ ಜಮೀರ್ ಅಹಮ್ಮದ್, ಕೆ ಹೆಚ್ ಮುನಿಯಪ್ಪ, ಯಲಹಂಕ ಶಾಸಕರಾದ ಎಸ್. ಆರ್. ವಿಶ್ವನಾಥ್ ಸೇರಿದಂತೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಹಾಗೂ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ನಮ್ಮ ಅರೆಸೇನಾ ಪಡೆಗಳ ಮಾಜಿ ಯೋಧರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ ಸಂಗತಿಯಾಗಿದೆ .ಈ ವೇದಿಕೆಯಲ್ಲಿ ಪ್ಯಾರಾ ಮಿಲಿಟರಿ ಮಾಜಿ ಯೋಧರ ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದರು

    ಕಾರ್ಯಕ್ರಮ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಕೃಷ್ಣಪ್ಪ ಮಾತನಾಡಿ ಕಾರ್ಯಕ್ರಮದಲ್ಲಿ ಅರೆಸೇನಾ ಪಡೆಗಳ ಮಾಜಿ ಯೋಧರು 17000ಕ್ಕು ಹೆಚ್ಚು ಭಾಗವಹಿಸುವ ನಿರೀಕ್ಷೆ ಇದ್ದು .ರಾಜ್ಯದ ಇತಿಹಾಸದಲ್ಲಿ ಇದೊಂದು ಬೃಹತ್ ಸಮಾವೇಶವಾಗಲಿದೆ .ನಮ್ಮ ಮಾಜಿ ಯೋಧರ ಕಷ್ಟ ಹಾಗೂ ಬೇಡಿಕೆಗಳನ್ನು ಸರ್ಕಾರಕ್ಕೆ ಮುಟ್ಟಿಸುವಲ್ಲಿ ಈ ಸಮಾವೇಶ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು