Blog

  • ಅಸ್ಪೃಶ್ಯತೆ ವಿರುದ್ದ ಕೆ ಡಿ ಎಸ್ ಎಸ್ ಪ್ರತಿಭಟನೆ : ಸಾಂಕೇತಿಕವಾಗಿ ಕ್ಷೌರ ಮಾಡಿಸಿ ಅಸ್ಪೃಶ್ಯತೆಗೆ ಅಂತ್ಯ ಹಾಡಿದ ದಲಿತ ಮುಖಂಡರು

    ತಾಲ್ಲೂಕಿನ ಕಾಡನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದಲಿತರಿಗೆ ಕ್ಷೌರಿಕ ಮಾಡದೇ ಅಸ್ಪೃಶ್ಯತೆ ಮೇರೆಯಲಾಗುತ್ತಿತ್ತು ಆದರೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ದಲಿತ ಮುಖಂಡರು ಕ್ಷೌರಿಕ ಅಂಗಡಿಯನ್ನು ಮುತ್ತಿಗೆ ಹಾಕಲಾಗಿ ಮುಂದೆ ಈ ರೀತಿ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಅಂಗಡಿ ಮಾಲೀಕರು ಹಾಮಿ ಕೊಟ್ಟಿದ್ದಾರೆ . ಸಾಂಕೇತಿಕವಾಗಿ ನಮ್ಮ ದಲಿತ ಮುಖಂಡರೇ ಕ್ಷೌರ ಮಾಡಿಸಿಕೊಳ್ಳುವ ಮೂಲಕ ಈ ಅನಿಷ್ಠ ಪದ್ಧತಿಯನ್ನು ಅಂತ್ಯಗಳಿಸಿದ್ದೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷರಾದ ರಾಮು ತಿಳಿಸಿದರು

     

     

    ತಾಲ್ಲೂಕಿನ ಮಧುರೆ ಹೋಬಳಿಯ ಕಾಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತರಿಗೆ ಕಟಿಂಗ್ ಶೇವಿಂಗ್ ಮಾಡದೇ ಇರುವ ಕಾರಣ ತಾಲ್ಲೂಕಿನ ಕೆಡಿಎಸ್ಎಸ್ ಸಂಘಟನೆ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮಕ್ಷಮದಲ್ಲಿ ಕ್ಷೌರಿಕ ಅಂಗಡಿಯನ್ನು ಮುತ್ತಿಗೆ ಹಾಕಲಾಗಿತ್ತು .ಈ ಸಂದರ್ಭದಲ್ಲಿ ಮಾತನಾಡಿದ ಅವರು 21ನೇ ಶತಮಾನದಲ್ಲಿ ನಾವು ಜೀವಿಸುತ್ತಿದ್ದರು ನಮ್ಮ ಮಧ್ಯೆ ಈ ಅಸ್ಪೃಶ್ಯತೆಯ ಬೂತ ಇನ್ನೂ ಜೀವಂತವಾಗಿರುವುದು ವಿಪರ್ಯಾಸವೇ ಸರಿ , ಮಾನವೀಯತೆ ಮರೆತು ಮೇಲು ಕೀಳು ಎಂಬ ಭಾವನೆಯಲ್ಲಿ ಜೀವನ ಸಾಗಿಸುತ್ತಿರುವ ಮೌಢ್ಯ ಸಮಾಜ ಬದಲಾಗಬೇಕಿದೆ . ಇಂತಹ ಸಮಸ್ಯೆಗಳ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟ ಸದಾ ಜಾಗೃತ ಎಂದು ತಿಳಿಸಿದರು

     

     

    ಸಂಘಟನೆಯ ಜಿಲ್ಲಾ ಸಂಚಾಲಕರಾದ ಎಂ. ಪಿ. ಗಂಗಾಧರ್ ಮಾತನಾಡಿ ಸ್ಥಳೀಯ ದಲಿತರ ಮನೆಗಳಿಗೆ ಭೇಟಿಕೊಟ್ಟಗ ನಮ್ಮಗೆ ಇಲ್ಲಿನ ಸಮಸ್ಯೆ ಅರಿವಾಯಿತು ಸಮಾಜದಲ್ಲಿ ಇನ್ನೂ ಜಾತಿ ಭೇದ ಭಾವ ಜೀವಂತವಾಗಿರುವುದು ನಾಚಿಕೆಯ ವಿಷಯ ,ನಾವು ಎಲ್ಲರಂತೆ ಮನುಷ್ಯರಲ್ಲವೇ ನಮಗೆ ಯಾಕೆ ಈ ಅನ್ಯ ದೋರಣೆ, ವೇದಿಕೆಗಳ ಮೇಲೆ ಮಾತುಗಳಲ್ಲಿ ಹೇಳುವ ಸಮಾನತೆ ಇಲ್ಲಿ ಸತ್ತುಹೋಯಿತೇ.. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯ ಬರಿ ಮಾತಿಗೆ ಸೀಮಿತವಾಯಿತೇ.. ಈ ಧೋರಣೆ ನಿಲ್ಲಬೇಕಿದೆ ನಮ್ಮ ಹೋರಾಟ ನಿರಂತರ ನೆಡೆಯುವುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

     

    ಜಿಲ್ಲಾ ಘಟಕದ ದೊಡ್ಡಯ್ಯ ಲಿಂಗಾಪುರ ಮಾತನಾಡಿ ಕೇವಲ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅಷ್ಟೇ ಅಲ್ಲ ರಾಜ್ಯದ ಹಲವು ಭಾಗಗಳಲ್ಲಿ ಈ ಅಸ್ಪೃಶ್ಯತೆಯ ಸಮಸ್ಯೆ ಇನ್ನೂ ಜೀವಂತವಾಗಿದೆ .ಇದು ಕೇವಲ ಒಂದು ಉದಾಹರಣೆ ಅಷ್ಟೇ ಆಡಳಿತ ಮಾಡುವ ಸರ್ಕಾರಗಳಿಗೆ ಹಾಗೂ ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುವ ಜಾಣ್ಮೆ ಹೇಳಲು ಅಸಾಧ್ಯ ..ದಲಿತಪರ ಚಿಂತಕರು ಅಥವಾ ಮುಖಂಡರು ಪ್ರತಿಭಟಿಸಿದಾಗ ಮಾತ್ರ ಮುಂದೆ ಬಂದು ಕ್ರಮ ಕೈಗೊಳ್ಳುವ ನಟನೆ ಮಾಡುತ್ತಾರೆ ಈ ವರ್ತನೆ ಬದಲಾಗಬೇಕಿದೆ ನಮ್ಮ ದಲಿತ ಸಮುದಾಯಗಳ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಬೇಕಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು

     

     

     

    ದಲಿತ ಮುಖಂಡರಾದ ಆನಂದ್ ಮಾತನಾಡಿ ಇಂತಹ ಸಮಸ್ಯೆಗಳು ಸಾವಿರಾರು ದಲಿತರು ಶಕ್ತಿಹಿನರಲ್ಲ ಅವರನ್ನು ಶಕ್ತಿಹಿನರನ್ನಾಗಿ ಮಾಡಲಾಗುತ್ತಿದೆ . ಸ್ಥಳೀಯ ಮುಖಂಡರು ಈ ಸಮಸ್ಯೆಗೆ ಪರಿಹಾರ ನೀಡಿದ್ದಾರೆ ನಾವು ಪ್ರತಿಭಟಿಸಿ ನ್ಯಾಯ ಪಡೆಯುವ ಅವಶ್ಯಕತೆ ಇರಲಿಲ್ಲ .ಆದರೆ ನಮ್ಮ ಮತಗಳಿಗೆ ಇಲ್ಲದ ಅಸ್ಪೃಶ್ಯತೆ ನಮ್ಮ ಜನರನ್ನು ಮುಟ್ಟಿದರೆ ಬರುತ್ತದೆ ಎಂಬುದು ಶೋಚನೀಯ ಸಂಗತಿ .ಇಂದು ಸಾಂಕೇತಿಕವಾಗಿ ದಲಿತ ವ್ಯಕ್ತಿಗೆ ಕ್ಷೌರ ಮಾಡಿಸುವ ಮೂಲಕ ಪ್ರತಿಭಟನೆ ಅಂತ್ಯಗೊಳಿಸಿದ್ದೇವೆ . ಈ ಸಮಸ್ಯೆ ಮತ್ತೆ ಮರುಕಳಿಸಿದೆ ಜಾಗೃತಿ ವಹಿಸಬೇಕಿದೆ .ಮುಂದೆ ಈ ಸಮಸ್ಯೆ ಎದುರಾದಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು .

     

    ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡಯ್ಯ, ನರೇಂದ್ರ ಮೂರ್ತಿ ,ಸಕ್ಕರೆ ಗೊಲ್ಲಹಳ್ಳಿ ಆನಂದ್, ಕುಮಾರ್ ದೊಡ್ಡಬೆಳವಂಗಲ ,ಶಂಕರ್ ಮೂರ್ತಿ ,ನಾಗರತ್ನಮ್ಮ , ಸೇರಿದಂತೆ ನೂರಾರು ದಲಿತ ಮುಖಂಡರು ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು .

  • ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಕುರಿತು ಜನತೆಗೆ ಮಾಹಿತಿ : ಸಮಾವೇಶದಲ್ಲಿ ಸಚಿವರಾದ ಕೆ.ಎಚ್ ಮುನಿಯಪ್ಪ ಸೇರಿದಂತೆ ಹಲವು ಗಣ್ಯರು ಭಾಗಿ

    ರಾಜ್ಯದ ಜನತೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ಗ್ಯಾರೆಂಟಿ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ .ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ನೀಡಿರುವ ಅವಕಾಶವನ್ನು ಪ್ರತಿ ಮನೆ ಬಾಗಿಲಿಗೆ 5 ಯಶಸ್ವಿ ಯೋಜನೆಗಳನ್ನು ತಲುಪಿಸುವ ಮೂಲಕ ಸದ್ಭಳಕೆ ಮಾಡಿಕೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾದ ಕೆ ಏಚ್ ಮುನಿಯಪ್ಪ ತಿಳಿಸಿದರು

     

    ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಜನರಿಗೆ ಮಾಹಿತಿ ನೀಡುವ ಸಮಾವೇಶವನ್ನು ತಾಲ್ಲೂಕಿನ ತೂಬಗೆರೆ ಹೋಬಳಿಯ , ಮೆಳೇಕೋಟೆ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು . ಮೆಳೆಕೋಟೆ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಮಾನ್ಯ ಸಚಿವರು ಉದ್ಘಾಟಿಸಿದರು ನಂತರ ಮಾತನಾಡಿದ ಅವರು ರಾಜ್ಯದ ಜನತೆಯ ಅಭಿವೃದ್ದಿಗಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬದ ಯಜಮಾನಿಕೆ 2000ರೂಪಾಯಿಗಳನ್ನು ನೀಡುತ್ತಿದ್ದು , ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ಗಳ ವರೆಗಿನ ಉಚಿತ ವಿದ್ಯುತ್ ಕಲ್ಪಿಸಲಾಗಿದೆ , ಅನ್ನಭಾಗ್ಯಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿದ್ದೆವು ಆದರೆ ಪ್ರಸ್ತುತ 5 ಕೆಜಿ ಅಕ್ಕಿ ನೀಡುತ್ತಿದ್ದು ಉಳಿಕೆ ನಗದು ರೂಪದಲ್ಲಿ ನೀಡಲಾಗುತ್ತಿದೆ , ಯುವನಿಧಿ ಪ್ರತಿ ನಿರುದ್ಯೋಗಿ ಪದವೀಧರ ಯುವಕ ಯುವತಿಯರಿಗೆ ತಿಂಗಳಿಗೆ 3000 ಮತ್ತು ಡಿಪ್ಲೊಮೊ ಮಾಡಿದವರಿಗೆ ತಿಂಗಳಿಗೆ 1500ಸಾವಿರ ರೂಪಾಯಿಗಳನ್ನು ನೀಡುತ್ತಿದ್ದೇವೆ , ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೂ ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ಸಾಮಾನ್ಯ ಬಸ್ಸು ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿದ್ದು .ಯೋಜನೆಗಳು ರಾಜ್ಯದ ಜನತೆಯ ಸಬಲೀಕರಣಕ್ಕೆ ಅನುವು ಮಾಡಿಕೊಟ್ಟಿವೆ ಹಾಗೂ ನಮ್ಮ ಸರ್ಕಾರವನ್ನು ಮತ್ತಷ್ಟು ರಾಜ್ಯದ ಜನತೆಗೆ ಹತ್ತಿರ ಮಾಡಿವೆ ಎಂದು ಅಭಿಪ್ರಾಯ ಪಟ್ಟರು .

    ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ರಾದ ಮುನಿರಾಜು, ಕೆಪಿಸಿಸಿ ಸದಸ್ಯರಾದಎಸ್ ಆರ್ ಮುನಿರಾಜು , ತೂಬಗೆರೆ ಕಾಂಗ್ರೆಸ್ ಅಧ್ಯಕ್ಷರಾದ ರಂಗಪ್ಪ,ಮುಂಡರಾದ ರವಿ ಸಿದ್ದಪ್ಪ , ಜಗನ್ನಾಥ, ಪ್ರಸನ್ನ ಕುಮಾರ್ ,ಶಾಂತ ಕುಮಾರ್, ಮಹಿಳಾ ಮುಖಂಡರು, ರೈತ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಪರೇಡ್.

    ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೌಡಿ ಶೀಟರ್ ಗಳ ಪರೇಡ್ ನಲ್ಲಿ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ರಾಜಕೀಯ ಸಮಾರಂಭಗಳು, ರಾಜಕೀಯ ಮಾಡುವ ವೇಳೆ ಕಾನೂನು ಬಾಹಿರ, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮಾಂತರ ಠಾಣಾ ಆರಕ್ಷಕ ನಿರೀಕ್ಷಕ ಸಾದಿಕ್ ಪಾಷ ರೌಡಿಶೀಟರ್ ಗಳಿಗೆ ಎಚ್ಚರಿಕೆ ನೀಡಿದರು.

     

    ಜೀವನದಲ್ಲಿ ಬದಲಾವಣೆ ಸಹಜ ಹೀಗಾಗಿ ಭವಿಷ್ಯದಲ್ಲಿ ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ. ನೆಮ್ಮದಿ ಕಳೆದುಕೊಂಡು, ಕುಟಂಬದಿಂದ ದೂರಾವಾಗಿ ಭಯಭೀತಿಯಲ್ಲಿ ಜೀವನ ಮಾಡಬೇಕಷ್ಟೇ. ಅಕ್ರಮ, ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣವಾಗಿ ತ್ಯಜೀಸಿ ಉತ್ತಮ ನಾಗರಿಕರಾಗಿ ಜೀವನ ಮಾಡಬೇಕು ಎಂದು ತಿಳಿಸಿದರು.

     

     

    ರೌಡಿ ಶೀಟರ್ ಪಟ್ಟಿಯಿಂದ ನಮ್ಮನ್ನು ತೆಗೆಯಿರಿ ಎಂದು ಕೇಳುವ ಬದಲು.. ನಾವು ಬದಲಾಗಿದ್ದೇವೆ ಎಂದು ನೀವೆ ಪೊಲೀಸ್ ಅಧಿಕಾರಿಗಳನ್ನು ಕೇಳುವಂತಾಗಬೇಕು. ರೌಡಿಯಿಸಂ ಜೀವನವನ್ನು ಹಾಳು ಮಾಡುವುದಲ್ಲದೆ ಜೀವನ ಪರ್ಯಂತ ರೌಡಿಶೀಟರ್ ಪಟ್ಟ ಕಟ್ಟಿಕೊಂಡು ಬದುಕಬೇಕಾಗುತ್ತದೆ. ಆದರೆ ನೆಮ್ಮದಿ ಜೀವನಕ್ಕಾಗಿ ಕೂಲಿ ಕೆಲಸ ಮಾಡಿದರೂ ಪರವಾಗಿಲ್ಲ ಕುಟುಂಬದೊಂದಿಗೆ ಖುಷಿಯಿಂದ ಜೀವನ ಸಾಗಿಸಬಹುದು. ರೌಡಿ ಚಟುವಟಿಕೆ, ಕಾನೂನು ಬಾಹಿರ ಕೆಲಸಗಳು

    ಹೀಗೆ ಮುಂದುವರೆದರೆ ಜಿಲ್ಲೆಯಿಂದಲೇ ಗಡಿಪಾರು ಮಾಡಲಾಗುವುದು. ಹತ್ತು, ಇಪ್ಪತ್ತು ವರ್ಷಗಳಾದರೂ ರೌಡಿಶೀಟರ್ ಪಟ್ಟ ಹೋಗುವುದಿಲ್ಲ. ಕಳ್ಳತನ, ಕೊಲೆ, ದೌರ್ಜನ್ಯ ಮಾಡಿದರೆ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕಾನೂನು ಬಿಗಿಯಾಗಿದೆ. ಕುಟುಂಸ್ಥರು ಗೌರವ ನೀಡುವಷ್ಟು ರೀತಿಯಲ್ಲಿಯಾದರೂ ಜೀವನ ಮಾಡಿ.

    ಚುನಾವಣಾ ಸಂಧರ್ಬವಾಗಿರುವುದರಿಂದ ಪೊಲೀಸರಿಗೆ ತಿಳಿಯದಂತೆ ಸ್ಥಳ, ಫೋನ್ ನಂಬರ್ ಬದಲಾವಣೆ ಮಾಡಬಾರದು. ಕಾನೂನಿಗೆ ಬೆಲೆ ಕೊಟ್ಟು ಸಮಾಜದಲ್ಲಿ ಒಳ್ಳೆಯವರಾಗಿ ಬದುಕಿ. ಮಾದರಿ ಜೀವನ ನಡೆಸಿದರೆ ರೌಡಿ ಶೀಟರ್ ಬಂದ್ ಮಾಡಲಾಗುವುದು ಎಂದರು. ರೌಡಿಶೀಟರ್ ಗಳ ಜೀವನ ಶೈಲಿ ಸರಿ ಹೋದರೆ ಕೇವಲ ಎರಡು ತಿಂಗಳಲ್ಲಿ ರೌಡಿ ಶೀಟರ್ ಪಟ್ಟದಿಂದ ಮುಕ್ತಿಕಾಣಿಸಲಾಗುವುದು. ಮುಂದುವರೆದಿರೆ ಮತ್ತೊಂದು ಕೇಸ್ ಓಪನ್ ಆಗುತ್ತದೆ. ಎರಡ್ಮೂರು ತಿಂಗಳಿಗೆ ಮತ್ತೊಮ್ಮೆ ಪರಾಮರ್ಶೆ ಮಾಡಲಾಗುವುದು ಎಂದರು.

     

    ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ ರಾಮಚಂದ್ರಯ್ಯ,ಉದಯ್ ಕುಮಾರ್, ರಂಗಸ್ವಾಮಿ, ರಂಗನಾಥ, ಅರ್ಜುನ್ ಲಮಾಣಿ, ಮುತ್ತುರಾಜು ಮತ್ತಿತ್ತರರು ಉಪಸ್ಥಿತರಿದ್ದರು .

  • ಬಾಶೆಟ್ಟಿಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ : ಮೃತ ಮೀನುಗಳನ್ನು ತೆರವುಗೊಳಿಸುವಂತೆ ಸ್ಥಳೀಯರ ಅಗ್ರಹ

    ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮವಾಗಿದೆ. ಕಸಬಾ ಹೋಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಬಾಶೆಟ್ಟಿಹಳ್ಳಿ ಕೆರೆಯಲ್ಲಿ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ನೀರು ಕೆರೆಗೆ ಸೇರಿರುವ ಪರಿಣಾಮ ಸಾವಿರಾರು ಮೀನುಗಳು ಮೃತಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆಯಲ್ಲಿ ಸಾವಿರಾರು ಮೀನುಗಳ ಸಾವಿನಿಂದ ದರ್ವಾಸನೆ ಉಂಟಾಗಿದ್ದು. ಕಳೆದ ಎರಡು ಮೂರು ದಿನಗಳ ಹಿಂದೆ ಕೆರೆಗೆ ಕಾರ್ಖಾನೆಗಳ ರಾಸಯನಿಕ ಮಿಶ್ರಿತ ತ್ಯಾಜ್ಯ ನೀರು ಹರಿದಿದ್ದರಿಂದ ಕಾರಣ ಮೀನುಗಳು ಸಾವನ್ನಪ್ಪಿವೆ ಎಂದು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಸೊಣ್ಣೇಗೌಡ ಆರೋಪಿಸಿದ್ದಾರೆ.

     

    ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿ ಈಗಾಲೇ ಮೂರು ದಿನಗಳು ಕಳೆದಿವೆ. ದಡಕ್ಕೆ ಬಂದು ಸೇರಿರುವ ರಾಶಿ ರಾಶಿ ಮೀನುಗಳು ಕೊಳೆತು ಗಬ್ಬುನಾರುತ್ತಿವೆ. ನೀರಿನಲ್ಲಿಯೇ ಹಾಗೆ ಬಿಟ್ಟರೆ ನೀರು ಮತ್ತಷ್ಟು ಮಲೀನಗೊಳ್ಳುವ ಆತಂಕ ಎದುರಾಗಿದೆ. ಮೀನುಗಾರಿಕೆ ಇಲಾಖೆ ಅಥವಾ ಸಂಬಂಧಟ್ಟ ಇಲಾಖೆಯವರು ಮೃತ ಮೀನುಗಳನ್ನು ಕೆರೆಯಿಂದ ತೆಗೆದು ಗುಂಡಿಯಲ್ಲಿ ಹಾಕಿ ವಿಲೇವಾರಿ ಮಾಡಬೇಕಿದೆ.

     

    ದೊಡ್ಡಬಳ್ಳಾಪುರದಲ್ಲಿ ಸಾವಿರಾರು ಕೈಗಾರಿಕೆಗಳು, ಕಾರ್ಖಾನೆಗಳು, ಗಾರ್ಮೆಂಟ್ಸ್ ಗಳು ಚಾಲ್ತಿಯಲ್ಲಿವೆ. ಜಿಲ್ಲಾಧಿಕಾರಿಗಳ ಕಾರ್ಯಾಲಯವು ಜಿಲ್ಲೆಗೆ ಸ್ಥಳಾಂತರವಾಗಿದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮಾತ್ರ ವರ್ಷಾನುಗಟ್ಟಲೆ ಕಳೆದರೂ ಸಹ ಬೆಂಗಳೂರಿನಿಂದ ಗ್ರಾಮಾಂತರಕ್ಕೆ ಬಂದಿಲ್ಲ. ಇಂತಹ ಘಟನೆಗಳು ಸಂಭವಿಸಿದಾಗ ದೂರು ಕೊಡಲು ಬೆಂಗಳೂರಿಗೆ ಹೋಗಿ ಬರುವಷ್ಟರಲ್ಲಿ ಘಟನೆ ಮಾಸಿ ಹೋಗಿರುತ್ತದೆ ಎಂದು ಬಾಶೆಟ್ಟಿಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕನ್ನಡಪರ ಹೋರಾಟಗಾರರಾದ ರಾಜಘಟ್ಟರವಿ ಮಾತನಾಡಿ ಈ ಭಾಗದ ಕೆರೆಗಳಲ್ಲಿ ಮೀನುಗಳ ಮಾರಣ ಹೋಮ ಇದೇ ಮೊದಲಲ್ಲ. ಕೊನೆಯೂ ಅಲ್ಲ. ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಲೇ ಇದೆ. ಕೈಗಾರಿಕಾ ತ್ಯಾಜ್ಯ ನೀರನ್ನು ರಾತ್ರೋರಾತ್ರಿ ಕಳ್ಳದಾರಿಯಲ್ಲಿ ಕೆರೆಗೆ ಹರಿಸಿರುವುದರಿಂದ ಇಂದು ಮೀನುಗಳು ಸಾವನ್ನಪ್ಪಿವೆ. ಇದಕ್ಕೆ ಕಾರಣರಾದವರ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು

     

    ಈ ಸಂದರ್ಭದಲ್ಲಿ ಸ್ಥಳೀಯರಾದ ಲೋಹಿತ್, ವಿಶ್ವನಾಥ್, ಜನಾರ್ಧನ,ಕಾರ್ತಿಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

  • ಗ್ರಾಹಕರ ಕುಂದು ಕೊರತೆ ಸಭೆ : ವಿದ್ಯುತ್ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವಂತೆ ರೈತರ ಮನವಿ

    ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಗ್ರಾಮೀಣಾ ಉಪ ವಿಭಾಗ ಕಚೇರಿಯ ವತಿಯಿಂದ ಗ್ರಾಹಕರ ಕುಂದು ಕೊರತೆ ಸಭೆ ಆಯೋಜನೆ ಮಾಡಲಾಗಿತ್ತು . ಸಭೆಯಲ್ಲಿ ವಿದ್ಯುತ್ ಸಮಸ್ಯೆ ಕುರಿತು ಗ್ರಾಹಕರು ಹಲವು ವಿಚಾರಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ವ್ಯಕ್ತಪಡಿಸಿದರು

    ಸಭೆಯನ್ನು ತಾಲ್ಲೂಕಿನ ಕಾರ್ಯಪಾಲಕ ಇಂಜಿನಿಯರ್ ಧನಂಜಯ ರವರ ನೇತೃತ್ವದಲ್ಲಿ ಕರೆಯಲಾಗಿದ್ದು ಗ್ರಾಹಕರ ಸಮಸ್ಯೆಗಳಿಗೆ ಸೂಕ್ತ ಸೇವೆ ಒದಗಿಸುವಂತೆ ಸೂಚನೆ ನೀಡಲಾಯಿತು .ಸಭೆಯಲ್ಲಿ ರೈತರು ಮಾತನಾಡಿ ವಿದ್ಯುತ್ ಸರಬರಾಜು ಮಾಡುವಲ್ಲಿ ವ್ಯತ್ಯಯ ವಾಗುತ್ತಿದ್ದು ಅವಶ್ಯಕವಿರುವ ವಿಧ್ಯುತ್ ಸಹ ಸಿಗುತ್ತಿಲ್ಲ ಕನಿಷ್ಠ ಪಕ್ಷ 7 ಗಂಟೆಗಳ ವಿಧ್ಯುತ್ ಸರಬರಾಜು ಒದಗಿಸುವ ಮೂಲಕ ರೈತರಿಗೆ ಸಹಕರಿಸುವಂತೆ ಮನವಿ ಮಾಡಿದರು

     

    ರೈತರ ಹಾಗೂ ಗ್ರಾಹಕರ ಮನವಿಗೆ ಸ್ಥಳೀಯ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಸಾಸಲು ಶಾಖಾ ಅಧಿಕಾರಿ ಮಣಿ ನಾಯಕ್, ದೊಡ್ಡಬೆಳವಂಗಲ ಶಾಖಾ ಅಧಿಕಾರಿ ಜಯರಾಜ್ ಅಧಿಕಾರಿಗಳ ವಿರುದ್ಧ ಹಲವು ಆರೋಪ ಮಾಡಿದರು .

    ತಂಬೇನಹಳ್ಳಿ ಗ್ರಾಮಸ್ಥರು ಮಾತನಾಡಿ ಗ್ರಾಮದಲ್ಲಿ ಹಲವು ಕಡೆ ವಿದ್ಯುತ್ ತಂತಿಗಳು ಕೆಳಗೆ ಬಂದಿರುವ ಕಾರಣ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ . ಈಗಾಗಲೇ ಒಂದು ಹಸು ವಿಧ್ಯುತ್ ಸ್ಪರ್ಶದಿಂದ ಪ್ರಾಣ ಕಳೆದು ಕೊಂಡಿದೆ ಈ ಕುರಿತು ಅಧಿಕಾರಿಗಳು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು . ಕಲ್ಲುದೇವನಹಳ್ಳಿ ಗ್ರಾಮಸ್ಥರು ಮಾತನಾಡಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಸಮಸ್ಯೆಯಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಈ ಸಮಸ್ಯೆಗೆ ವಿದ್ಯುತ್ ಸರಬರಾಜು ಮುಖ್ಯ ಕಾರಣ ಎಂದು ತಿಳಿಸಿದರು

     

    ಸಭೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಇನಾಯತ್ ಉಲ್ಲ ಖಾನ್,ಸೇರಿದಂತೆ ಎಲ್ಲಾ ಶಾಖಾ ಅಧಿಕಾರಿಗಳು ,ಮರಳೇನಹಳ್ಳಿ , ಚೆನ್ನವೀರನಹಳ್ಳಿ, ಬೂಚನಹಳ್ಳಿ ,ಹಳೇಕೋಟೆ, ತಂಬೇನ ಹಳ್ಳಿ ,ಸೇರಿದಂತೆ ಸುತ್ತಮುತ್ತಲಿನ ರೈತರು ,ಗ್ರಾಹಕರು ಉಪಸ್ಥಿತರಿದ್ದರು

  • 2024-25ನೇ ಸಾಲಿಗೆ 3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ

    2024-25ನೇ ಸಾಲಿನ ಆಯವ್ಯಯವನ್ನು ಮಂಡಿಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ ಅವರು ರಾಜ್ಯದ ಬಡವರು, ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ವರ್ಗದವರು, ಅಲ್ಪಸಂಖ್ಯಾತರಿಗೆ ಕೊಂಡುಕೊಳ್ಳುವ ಶಕ್ತಿ ಹೆಚ್ಚು ಮಾಡುವ ಪ್ರಯತ್ನ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ಪ್ರಯತ್ನವೂ ಬಜೆಟ್ ನಲ್ಲಿ ಆಗಿದೆ.

     

    ದೇಶದಲ್ಲಿ ನಿರುದ್ಯೋಗ, ಹಣದುಬ್ಬರ ಸಮಸ್ಯೆಗಳಿಂದ ಬಡವರು ಜೀವನ ಸಾಗಿಸುವುದು ಕಷ್ಟವಾಗಿದೆ. ಬಡವರ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಲು ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ ನಾವು ಅಧಿಕಾರಕ್ಕೆ ಬಂದು 9 ತಿಂಗಳಾಗುವ ಮೊದಲೇ ಜನತೆಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಾಗಿದೆ. ಇದರೊಂದಿಗೆ ಕೃಷಿ, ನೀರಾವರಿ, ಲೋಕೋಪಯೋಗಿ, ಇಂಧನ, ಗ್ರಾಮೀಣಾಭಿವೃದ್ಧಿ, ಬರಗಾಲ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ ಹಾಗೂ ಅಭಿವೃದ್ಧಿಗೆ ಹಣ ಕೊಡುವ ಕೆಲಸವನ್ನೂ ಮಾಡಲಾಗಿದೆ.

     

    2024-25ನೇ ಸಾಲಿಗೆ 3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿದೆ. ಕಳೆದ ವರ್ಷದ ಬಜೆಟ್ ಗಾತ್ರ 3,27,747 ಕೋಟಿ ರೂ.ಇತ್ತು. ಕಳೆದ ಬಜೆಟ್ ಗಿಂತ 46,636 ಕೋಟಿ ರೂ. ಗಾತ್ರ ಹೆಚ್ಚಾಗಿದೆ. ಜುಲೈನಲ್ಲಿ ಮಂಡಿಸಿದ ಬಜೆಟ್ ಗಾತ್ರಕ್ಕಿಂತ ಬೆಳವಣಿಗೆಯಲ್ಲಿ ಶೇ.13 ರಷ್ಟು ಬೆಳವಣಿಗೆಯಾಗಿದೆ.

     

    ಈ ವರ್ಷ 36,000 ಕೋಟಿ ರೂ. ಗ್ಯಾರಂಟಿಗಳಿಗೆ ಕೊಟ್ಟಿದ್ದರೂ ಕೂಡ ಅಭಿವೃದ್ಧಿಗೂ ಅನುದಾನವನ್ನು ಮೀಸಲಿರಿಸಿದ್ದೇವೆ. 240 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಸುಮಾರು 35,000 ಕೋಟಿ ರೂ. ಕೃಷಿ ಉತ್ಪಾದನೆಯಲ್ಲಿ ನಷ್ಟವಾಗಿದೆ. 18,171 ಕೋಟಿ ರೂ.ಗಳನ್ನು ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಬರಪರಿಹಾರವನ್ನು ಕೇಂದ್ರ ಸರ್ಕಾರದಿಂದ ಕೋರಲಾಗಿದೆ.

    ಆದರೆ ಎನ್.ಡಿ.ಆರ್ ಎಫ್ ಅನುದಾನ ನಿಗದಿ ಮಾಡುವುದು ಹಣಕಾಸು ಆಯೋಗದವರು. ಅದು ರಾಜ್ಯದಿಂದ ಸಂಗ್ರಹಿಸಿರುವ ಹಣ. ಕೇಂದ್ರ ಸರ್ಕಾರದ ಅನುದಾನವಲ್ಲ. ಐದು ತಿಂಗಳಾದರೂ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ, ಸಭೆಯನ್ನೂ ಕರೆದಿಲ್ಲ.

     

    ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ವಿಧಾನಸಭೆಯಲ್ಲಿ ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಬಜೆಟ್ ಓದಲು ಪ್ರಾರಂಭ ಮಾಡಿದ ಕೂಡಲೇ ಸುನೀಲ್ ಕುಮಾರ್ ಅವರು ಏನಿಲ್ಲ ಏನಿಲ್ಲ ಎಂದು ಘೋಷಣೆ ಕೂಗುತ್ತಿದ್ದರು. ಬಿಜೆಪಿ ಪಕ್ಷಕ್ಕೆ ಸಂಸದೀಯ, ಪ್ರಜಾಫ್ರಭುತ್ವ ಹಾಗೂ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಅವರ ತಲೆ ತುಂಬ ರಾಜಕೀಯ ಮಂಜು ತುಂಬಿದೆ. ಕಾಮಾಲೆ ರೋಗಿಗಳಿಗೆ ಕಂಡಿದ್ದೆಲ್ಲಾ ಹಳದಿಯಂತೆ ಆಗಿದೆ. ರಾಜಕೀಯ ಹೇಳಿಕೆ ಬೇಡ ಎನ್ನುವುದಿಲ್ಲ. ಆದರೆ ಟೀಕೆಗಳು ಆರೋಗ್ಯಕರವಾಗಿರಬೇಕು. ಪ್ಲಕಾರ್ಡ್ ಇಡಿದು ಪ್ರತಿಭಟನೆ ಮಾಡಿದ್ದಾರೆ.ಬಜೆಟ್ ಕೇಳಬಾರದು ಎಂದು ಯೋಚಿಸಿಕೊಂಡೇ ಬಂದಿದ್ದರು. ನಾನು ವಸ್ತುಸ್ಥಿತಿಯನ್ನು ಹೇಳಿದರೆ ಅವರಿಗೆ ಅದು ನುಂಗಲಾರದ ತುತ್ತು. ಸತ್ಯ ಹೇಳಿದರೆ ತಡೆದುಕೊಳ್ಳಲು ಆಗುವುದಿಲ್ಲ.

     

    ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯವನ್ನು ಜನರಿಗೆ ಹೇಳುವುದು ನನ್ನ ಕರ್ತವ್ಯ ಹಾಗೂ ಜವಾಬ್ದಾರಿ. ಅವರು ಕೂಡ ಕೋಲೆಬಸವನ ಹಾಗೆ ತಲೆ ಅಲ್ಲಾಡಿಸದೇ ಕೇಂದ್ರದವರನ್ನು ಕೇಳಬೇಕಿತ್ತು. ಕೋಲಾರ ಸಂಸದರಾದ ಮುನಿಸ್ವಾಮಿಯವರು ಸಂಸತ್ತಿನಲ್ಲಿ ಒಂದು ದಿನವೂ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಬಾಯಿ ಬಿಡಲಿಲ್ಲ. ಐದು ವರ್ಷದಲ್ಲಿ ಒಂದು ಬಾರಿಯಾದರೂ ಮಾತನಾಡಿದ್ದಾರಾ?

    ಕೇಂದ್ರ ಸರ್ಕಾರದಿಂದ ನ್ಯಾಯಯುತವಾದದ್ದು ಕೇಳಲು ಇವರಿಗೆ ಸಾಧ್ಯವಿಲ್ಲ ಎಂದರೇ ಏನು ಸೂಚಿಸುತ್ತದೆ. ನಾನು ಈ ಹಿಂದೆ ಬಸವರಾಜ ಬೊಮ್ಮಾಯಿ ಯವರು ಸಿಎಂ ಆಗಿದ್ದಾಗ, ಕೇಂದ್ರದ ಅನುದಾನವನ್ನು ಪಡೆಯಿರಿ ಎಂದು ಒತ್ತಾಯಿಸಿದ್ದೆ. 15ನೇ ಹಣಕಾಸು ಆಯೋಗದವರು ಶಿಫಾರಸು ಮಾಡಿದ್ದ 5,495 ಕೋಟಿ ರೂ. ವಿಶೇಷ ಅನುದಾನ ಪಡೆಯಲು ಹೇಳಿದ್ದೆ. ಬೆಂಗಳೂರು ಅಭಿವೃದ್ಧಿಗೆ 6,000 ಕೋಟಿ ಕೊಟ್ಟಿದ್ದಾರೆ. ಅದನ್ನು ಪಡೆಯಿರಿ ಎಂದು ಹೇಳಿದ್ದೆ. ಒಟ್ಟು 11,495 ಕೋಟಿ ರೂ. ಶಿಫಾರಸ್ಸು ಮಾಡಿರುವುದನ್ನು ಒತ್ತಾಯ ಮಾಡಿ ಎಂದು ಅವರಿಗೆ ಆಗ್ರಹಿಸಿದ್ದೆ.

     

    ಕನ್ನಡಿಗರಿಗೆ ಅನ್ಯಾಯವಾದರೂ ಸುಮ್ಮನಿರಬೇಕೇ? ಭದ್ರಾ ಮೇಲ್ದಂಡೆಗೆ 2023-24 ಕೇಂದ್ರ ಬಜೆಟ್ ನಲ್ಲಿ ರೂ.5,300 ಕೋಟಿ ಕೊಡುತ್ತೇವೆ ಎಂದಿದ್ದರು. ಅದನ್ನೇ ಇಲ್ಲಿನ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿ ಪ್ರಧಾನಿ ನರೇಂದ್ರಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ರಾಷ್ಟ್ರೀಯ ಯೋಜನೆಯಾಗಲಿದೆ ಎಂದು ಹೇಳಿದವರು ಇವರೇ ಆದರೆ ಇನ್ನೂ ಆಗಿಲ್ಲವೆಂದರೆ ಅವರಿಗೆ ಕೋಪ ಏಕೆ? ಇದು ಕನ್ನಡ ಜನರಿಗೆ ಮಾಡುತ್ತಿರುವ ದ್ರೋಹ. ಇದು ಪ್ರಜಾಪ್ರಭುತ್ವದ ವಿರೋಧವಲ್ಲವೇ?

     

    ನಾನು ಈ ವರ್ಷ ಗ್ಯಾರಂಟಿಗಳಿಗೆ ರೂ.36,000 ಕೋಟಿ ಕೊಟ್ಟಿಲ್ಲ ಎಂದು ಸಾಬೀತು ಪಡಿಸಲಿ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಿಲ್ಲ ಎಂದು ಸಾಬೀತು ಮಾಡಲಿ. ಚರ್ಚೆ ಮಾಡಬಹುದಿತ್ತು. ಅದಕ್ಕೆ ಇವರ ತಲೆಯಲ್ಲಿ ಏನೂ ಇಲ್ಲ, ರಾಜಕೀಯ ಮಂಜು ಕವಿದಿದೆ. ಕನ್ನಡಿಗರಿಗೆ ದ್ರೋಹ ಎಸಗಿದ್ದಾರೆ.

     

    ಸಾಲ ಮಾಡಿರುವುದಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ನಾನು ಸ್ವಾತಂತ್ರ್ಯ ಬಂದಾಗಿನಿಂದ ಹಣಕಾಸಿನ ಮಂತ್ರಿಯಾಗಿರುವವರೆಗೆ ಈ ರಾಜ್ಯದ ಮೇಲೆ 2,46,000 ಕೋಟಿ ಸಾಲವಿದ್ದು , ನಾನು ಮಾಡಿರುವದು 1.12 ಲಕ್ಷ ಕೋಟಿ ರೂ.ಗಳು ಮಾತ್ರ. ಇವರ ಬಜೆಟ್ ನಲ್ಲಿ ಕಳೆದ ವರ್ಷ 80 ಸಾವಿರ ಕೋಟಿ ರೂ.ಗಳ ಸಾಲ ಮಾಡಿದ್ದಾರೆ. ಎಂದು ಆರೋಪಿಸಿದರು

  • ನೆಚ್ಚಿನ ನಾಯಕನಟ ದರ್ಶನ್ ಹುಟ್ಟುಹಬ್ಬದ ಸಂಭ್ರಮ : ಶಾಲಾ ಮಕ್ಕಳಿಗೆ ಸಿಹಿ ಹಂಚಿದ ಅಭಿಮಾನಿಗಳು

    ರಾಜ್ಯಾದ್ಯಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬದ ಆಚರಣೆಯನ್ನು ಅಭಿಮಾನಿಗಳು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದು. ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ದರ್ಶನ್ ಅಭಿಮಾನಿಗಳಿಂದ ವಿಶೇಷ ರೀತಿಯಲ್ಲಿ ತಮ್ಮ ನೆಚ್ಚಿನ ನಾಯಕ ನಟನ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.

    ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಹಚ್ಚುವ ಮೂಲಕ ವಿಶೇಷವಾಗಿ ನವೀನ್ ಮತ್ತು ತಂಡ ನಟದರ್ಶನ್ ರವರ ಹುಟ್ಟು ಹಬ್ಬವನ್ನು ಆಚರಿಸಿದರು.

     

    ಈ ಸಂದರ್ಭದಲ್ಲಿ ನವೀನ್ ಮಾತನಾಡಿ ನಟ ದರ್ಶನ್ ಸದಾ ರೈತರ ಪರ ಹಾಗೂ ಸಮಾಜಕ್ಕೆ ಸಂದೇಶ ಸಾರುವ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ನಮ್ಮೆಲ್ಲರಿಗೂ ಉತ್ತಮ ಸಂದೇಶ ನೀಡುತ್ತಿದ್ದಾರೆ. ಅಂತೆಯೇ ನಾವು ಇಂದು ನಮ್ಮ ನೆಚ್ಚಿನ ನಾಯಕ ನಟ ದರ್ಶನ್ ರವರ ಹುಟ್ಟು ಹಬ್ಬದ ಅಂಗವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಮಕ್ಕಳೊಂದಿಗೆ ಸಂಭ್ರಮದ ಆಚರಣೆ ಮಾಡುತ್ತಿದ್ದೇವೆ. ಅದ್ದೂರಿಯಾಗಿ ಪಟಾಕಿ ಸಿಡಿಸಿ ದುಂದು ವೆಚ್ಚ ಮಾಡುವ ಬದಲು ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಹಚ್ಚುವುದು ಉತ್ತಮ ಎಂದು ನಮ್ಮೆಲ್ಲರ ಅಭಿಪ್ರಾಯ ಹಾಗಾಗಿ ಶಾಲಾ ಮಕ್ಕಳಿಗೆ ಸಿಹಿ ಹಂಚುತ್ತಿದ್ದೇವೆ ಎಂದು ತಿಳಿಸಿದರು

    ಅಭಿಮಾನಿ ಮಂಜುನಾಥ್ ಮಾತನಾಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕಲಾ ಸೇವೆಯನ್ನು ಗುರುತಿಸಿ ಅವರಿಗೆ ಭೂಮಿಪುತ್ರ ಎಂಬ ಬಿರುದು ನೀಡಲಾಗಿದೆ. ಸದಾ ರೈತರ ಬಗ್ಗೆ ಕಾಳಜಿ ಹೊಂದಿದ್ದು ತಮ್ಮ ನೇರ ಮಾತುಗಳಿಂದಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ಸಾಮ್ರಾಟ ದರ್ಶನ್ ರವರ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದೇವೆ. ಮಕ್ಕಳಲ್ಲೂ ರಂಗಭೂಮಿ, ಸಿನಿಮಾ ಕ್ಷೇತ್ರ, ನಾಟಕ ಸೇರಿದಂತೆ ಕಲೆ ಕುರಿತು ಅಭಿಮಾನ ಮೂಡಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳಾದಂತಹ ನವೀನ್, ಸುನಿಲ್ ,ಉಮೇಶ್, ನಾರಾಯಣ, ಸಿ ಮಂಜುನಾಥ, ಎಂ ಮಂಜುನಾಥ, ಕಿರಣ್, ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

  • ಈ ಸುಕ್ಷೇತ್ರವು ಮುಂದೆ ಸಾವಿರಾರು ಭಕ್ತಾದಿಗಳ ಬರುವಿಕೆಯಿಂದ ಪ್ರಕಾಶಮಾನವಾಗಿ ಬೆಳಗಲಿದೆ – ಗುರುದೇವ್ ಗುರೂಜಿ

    ಪರಮ ಪೂಜ್ಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಫೆಬ್ರವರಿ 15 ಮತ್ತು 16ರಂದು ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಶ್ರೀ ಜಗದ್ಗುರು ಹಸರಂಗಿ ಅಜ್ಜಯ್ಯನವರ ಹಾಗೂ ಬಾಲ ತ್ರಿಪುರ ಸುಂದರಿ ಅಮ್ಮನವರ ವಿಗ್ರಹ ಪ್ರಾಣಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ರಾಜ್ಯದ ಹಲವು ಮಠಾಧಿಪತಿ ಹಾಗೂ ಸ್ವಾಮೀಜಿಗಳ ನೇತೃತ್ವದಲ್ಲಿ ನೆರವೇರಿಸಲಾಗಿದೆ ಎಂದು ಶ್ರೀ ಕ್ಷೇತ್ರ ಪುಣ್ಯಧಾಮದ ಪೀಠಾಧ್ಯಕ್ಷರಾದ ಗುರುದೇವ್ ಗುರೂಜಿ ತಿಳಿಸಿದರು

    ದೊಡ್ಡಬಳ್ಳಾಪುರ ತಾಲ್ಲೂಕಿನ ಲಕ್ಕಸಂದ್ರ ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಕ್ತರ ಉದ್ಧಾರಕ್ಕಾಗಿಯೇ ಇರುವ ಜಗದ್ಗುರು ಶ್ರೀ ಹಸರಂಗಿ ಅಜ್ಜಯ್ಯನವರ ಹಾಗೂ ಬಾಲ ತ್ರಿಪುರ ಸುಂದರಿ ಅಮ್ಮನವರ ವಿಗ್ರಹಗಳನ್ನು ಫೆಬ್ರವರಿ 15 ಮತ್ತು 16ನೇ ದಿನಾಂಕದಂದು ಪ್ರಾಣ ಪ್ರತಿಷ್ಠಾಪನೆಯನ್ನು ಮಾಡುವ ಮೂಲಕ ಭಕ್ತ ಲೋಕಕ್ಕೆ ಅರ್ಪಿಸಲಾಯಿತು . ಫೆಬ್ರವರಿ 15ರಂದು ವಿಶೇಷವಾಗಿ ಗೋಪೂಜೆ ,ಪ್ರಾಣ ಪ್ರತಿಷ್ಠಾಪನೆ, ಗೋ ಪ್ರವೇಶ, ಮಹಾ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ ಸೇರಿದಂತೆ ಹಲವು ವಿಶೇಷ ಪೂಜೆಗಳನ್ನು ನಡೆಸಿದರು ಇಂದು (ಫೆ .16) ಕಾರ್ಯಕ್ರಮಕ್ಕೆ ಹಲವು ಮಠಗಳ ಪರಮ ಪೂಜ್ಯ ಮಠಾಧ್ಯಕ್ಷರು, ಪೂಜ್ಯ ಸ್ವಾಮೀಜಿಗಳು ಆಗಮಿಸಿದ್ದು. ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೂಜ್ಯರು ಮಾತನಾಡಿ ಈ ಸುಕ್ಷೇತ್ರವು ಮುಂದೆ ಸಾವಿರಾರು ಭಕ್ತಾದಿಗಳ ಬರುವಿಕೆಯಿಂದ ಪ್ರಕಾಶಮಾನವಾಗಿ ಬೆಳಗಲಿದೆ.ಹಲವು ಪೂಜ್ಯರ ಅಮೃತ ಹಸ್ತದಿಂದ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆಯಾಗಿದೆ .ಹಲವು ವರ್ಷಗಳ ಶ್ರಮ ಇಂದು ಪಾಲಿಸಿದೆ ಭಕ್ತಿ ಶ್ರದ್ಧೆ ಭಾವನೆಗೆ ಈ ಕ್ಷೇತ್ರ ಹೆಸರುವಾಸಿಯಾಗಿದೆ ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಶ್ರೀ ಪ್ರವೀಣಸಿದ್ದ ಮಹಾಸ್ವಾಮಿಗಳು ಮಾತನಾಡಿ ಶ್ರೀ ಗುರುದೇವ್ ಗುರೂಜಿಯವರ ನೇತೃತ್ವದಲ್ಲಿ ಇಂದು ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಹಸರಂಗಿ ಅಜ್ಜಯ್ಯ ಹಾಗೂ ಬಾಲ ತ್ರಿಪುರ ಸುಂದರಿ ಅಮ್ಮನವರ ವಿಗ್ರಹ ಪ್ರಾಣಾ ಪ್ರತಿಷ್ಠಾಪನಾ ಕಾರ್ಯದಲ್ಲಿ ಮಹೋತ್ಸವ ನಡೆದಿದೆ. ಸಾವಿರಾರು ಭಕ್ತಾದಿಗಳಿಗೆ ನೆಮ್ಮದಿ,ಮತ್ತು ಶಕ್ತಿ ಪ್ರಧಾನವಾಗಿರುವ ಈ ಕ್ಷೇತ್ರ ಸಾಕಷ್ಟು ಅಭಿವೃದ್ದಿ ಹೊಂದಲಿ .ಗುರುಗಳ ಪ್ರೀತಿಯ ಕರೆಗೆ ಇಂದು ರಾಜ್ಯದ ಹಲವು ಭಾಗಗಳಿಂದ ಹಲವು ಮಠಗಳ ಮಹಾಸ್ವಾಮಿಗಳು ಇಲ್ಲಿಗೆ ಆಗಮಿಸಿ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದೆವೆ . ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು

    ಶ್ರೀ ಕ್ಷೇತ್ರ ಪುಣ್ಯ ಧಾಮ ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ.ಸೌಮ್ಯ ಮಾತನಾಡಿ ಕೊರೋನ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಭೇಟಿ ಕೊಟ್ಟ ನನಗೆ ಗುರುಗಳ ಶಕ್ತಿ ಅರಿವಾಯಿತು ಅಂದಿನಿಂದ ಇಂದಿನ ವರೆಗೂ ಗುರುಗಳ ಬಳಿ ಆಶೀರ್ವಾದ ಪಡೆದು ಕೊಳ್ಳುತ್ತಿದ್ದೇನೆ ಇಂದು ನಮ್ಮೆಲ್ಲರಿಗೂ ಸಂಭ್ರಮದ ಸಂಗತಿ ಗುರುಗಳ ಆಶಯ ಕಾರ್ಯರೂಪಕ್ಕೆ ಬಂದಿದ್ದು ಅಜ್ಜಯ್ಯ ಹಾಗೂ ತ್ರಿಪುರ ಸುಂದರಿ ಅಮ್ಮನವರ ವಿಗ್ರಹ ಪ್ರಾಣಾ ಪ್ರತಿಷ್ಠಾಪನಾ ಕಾರ್ಯದಲ್ಲಿ ನೆರವೇರಿದೆ .ಗುರುಗಳ ಮಾರ್ಗದರ್ಶನ ಸರ್ವರಿಗೂ ಸಿಗುವಂತಾಗಲಿ ಎಂದು ಹಾರೈಸಿದರು .

    ಈ ಸಂದರ್ಭದಲ್ಲಿ ಶ್ರೀ ಹಸರಂಗಿ ಅಜ್ಜಯ ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿಗಳು, ಹಾಗೂ ಭಕ್ತಗಣ ಉಪಸ್ಥಿರಿದರು

  • ಕಾಡನೂರು ಕೈಮರ ಕ್ರಾಸ್ ಬಳಿ ಭೀಕರ ಅಪಘಾತ : ಗಾಯಾಳುಗಳು ಆಸ್ಪತ್ರೆಗೆ ದಾಖಲು

    ದೊಡ್ಡಬಳ್ಳಾಪುರ ತಾಲೂಕಿನ ನೆಲಮಂಗಲ ಹೆದ್ದಾರಿಯ ಕಾಡನೂರು ಕೈಮರ ಮಾರ್ಗದಲ್ಲಿ ಸರಕು ಸಾಗಣೆ ಮಾಡುವ ಎರಡು ಟಾಟಾ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ . ವಾಹನಗಳ ರಭಸಕ್ಕೆ ಗಾಡಿಗಳ ಮುಂಭಾಗ ಸಂಪೂರ್ಣ ಹಾಳಾಗಿದ್ದು ಓರ್ವ ಚಾಲಕನಿಗೆ ಕಾಲು ಮುರಿದಿದೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಸರಕು ಸಾಗಣೆ ಮಾಡುವ ವಾಹನಗಳು ಅತ್ಯಂತ ವೇಗವಾಗಿ ಚಲಾಯಿಸುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಮುಖಮುಖಿ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ . ಸ್ಥಳೀಯ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಯಾವುದೇ ಸಾವಾಗಿಲ್ಲ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲು ಮುಂದಾಗಿದ್ದಾರೆ

    ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

  • ಮಾಜಿ ಯೋಧರಿಂದ ಪ್ರತ್ಯೇಕ ಸೈನಿಕ್ ಬೋರ್ಡ್ ಗೆ ಮನವಿ : ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರ ಪರಿಹಾರಕ್ಕೆ ಚಿಂತನೆ – ಡಿಸಿಎಂ ಡಿಕೆ ಶಿವಕುಮಾರ್

    ಯಲಹಂಕ : ಕೇಂದ್ರದ ಅಡಿಯಲ್ಲಿ ಶ್ರಮಿಸುವ ಯೋಧರು ಇಂದು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸುವ ಪರಿಸ್ಥಿತಿ ಎದುರಾಗಿದೆ ಇದು ಕೇಂದ್ರ ಸರ್ಕಾರದ ವೈಫಲ್ಯ ,ದೇಶ ಕಾಯುವ ಯೋಧ ತನ್ನ ಸೌಲಭ್ಯಗಳಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ . ಸದಾ ದೇಶ ಸೇವೆಯಲ್ಲಿ ಮುಳುಗಿರುವ ಯೋಧ ನಿವೃತ್ತಿ ನಂತರ ತನ್ನ ಸೌಲಭ್ಯಗಳನ್ನು ಬೇಡಿ ಪಡೆಯುವ ಈ ಪರಿಸ್ಥಿತಿ ಬದಲಾಗಬೇಕಿದೆ. ಬೆಂಗಳೂರು ನಗರ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವ ನಾನು ನಗರ ಅಭಿವೃದ್ಧಿ ಇಲಾಖೆಯಲ್ಲಿ ಯೋಧರಿಗೆ ನೀಡಬಹುದಾದ ಹುದ್ದೆಗಳನ್ನು ಕುರಿತು ಚರ್ಚಿಸಿ ಉತ್ತಮ ತೀರ್ಮಾನ ಕೈಗೊಳ್ಳುತ್ತೇನೆ ಹಾಗೂ ಮಾಜಿ ಯೋಧರ ಮನವಿಯನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೀಘ್ರವಾಗಿ ಬಗೆಹರಿಸಲಾಗುವುದು ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು

    ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2019ನೇ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿ ಆರ್ ಪಿ ಎಫ್ ನ ವೀರ ಯೋಧರ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲಾ ಹುತಾತ್ಮ ಯೋಧರಿಗೂ 5ನೇ ವಾರ್ಷಿಕ ಸ್ಮರಣಾಂಜಲಿ ಕಾರ್ಯಕ್ರಮವನ್ನು ಗ್ರೂಪ್ ಸೆಂಟರ್, ಯಲಹಂಕದಲ್ಲಿ ಆಯೋಜನೆ ಮಾಡಲಾಗಿತ್ತು . ಕಾರ್ಯಕ್ರಮವನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು .

    ನಂತರ ಮಾತನಾಡಿದ ಅವರು ದೇಶಕ್ಕೆ ರೈತ, ಕೃಷಿಕ,ಕಾರ್ಮಿಕ, ಯೋಧ ನಾಲ್ಕು ಪ್ರಮುಖ ಆಧಾರ ಸ್ಥಭಗಳಂತೆ , ಅರೇಸೇನಾ ಪಡೆ ಯೋಧರ ಸಮಸ್ಯೆ ಕುರಿತು ಸುಧೀರ್ಘವಾಗಿ ಚರ್ಚಿಸಿ ಉತ್ತಮ ನಿರ್ಧಾರ ಕೈಗೊಳ್ಳಲಾಗುವುದು ,ಸದಾ ಪರರ ಹಿತಕ್ಕಾಗಿ ಶ್ರಮಿಸುವ ಯೋಧರ ನೋವನ್ನು ಶೀಘ್ರವಾಗಿ ಬಗೆಹರಿಸಲಾಗುವುದು ಈ ಹಿಂದೆ ನಮ್ಮ ಸರ್ಕಾರ ನೀಡಿದ ಪ್ರತ್ಯೇಕ ಸೈನಿಕ್ ಬೋರ್ಡನ್ನು ನಂತರ ಬಂದ ಸರ್ಕಾರ ತೆರವುಗೊಳಿಸಿದೆ ಎಂದು ತಿಳಿಸಿದ್ದಾರೆ ಈ ಕುರಿತು ಚರ್ಚಿಸಿ ಮಾಜಿ ಸೈನಿಕರ ಬೋರ್ಡ್ ಅನ್ನು ಮರುಸ್ಥಾಪನೆ ಮಾಡುವ ಕುರಿತು ಚಿಂತಿಸಲಾಗುವುದು ಎಂದು ತಿಳಿಸಿದರು

    ಕಾರ್ಯಕ್ರಮದ ಅಧ್ಯಕ್ಷರಾದ ನಿವೃತ್ತ ಐಜಿ ಅರ್ಕೆಷ್ ದೇಶಕ್ಕಾಗಿ 24 ಗಂಟೆಗಳ ಸೇವೆ ಸಲ್ಲಿಸುವ ಅರೇಸೇನಾ ಪಡೆಗಳ ಕುಂದು ಕೊರತೆಗಳು ಸಾಕಷ್ಟಿವೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲು ಹಾಗೂ ದೇಶಕ್ಕಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ಅರೆಸೇನಾ ಪಡೆಗಳ ಯೋಧರ ಸ್ಮರಣಾರ್ಥವಾಗಿ ಈ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ . ನಮ್ಮ ಸೇವಾ ಸಮಯದಲ್ಲಿ ಯಾರಿಂದಲೂ ಲಂಚ ಪಡೆದಿಲ್ಲ ಮುಂದೆ ನಮ್ಮ ಹಕ್ಕನ್ನು ಪಡೆಯಲು ಲಂಚ ನೀಡುವ ಅವಶ್ಯಕತೆ ಇಲ್ಲ . ಭೂ ಸೇನೆ ,ವಾಯು ಸೇನೆ ಹಾಗೂ ನೌಕಾ ಸೇನೆಗೆ ಸಿಗುವ ಸೌಲಭ್ಯಗಳು ಅರೆಸೇನಾ ಪಡೆಗಳಿಗೆ ಸಿಗುತ್ತಿಲ್ಲ, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ, ನಿವೃತ್ತಿ ನಂತರ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳಿಗೆ ಪರದಾಡುವ ಪರಿಸ್ಥಿತಿ ಅರೆಸೇನಾಪಡೆಯ ಯೋಧರಿಗೆ ಎದುರಾಗಿದೆ . ಈ ಕುರಿತು ಸರ್ಕಾರದ ಮಟ್ಟದಲ್ಲಿ ಅರೆಸೇನಾ ಪಡೆಗಳ ಯೋಧರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಬೋರ್ಡ್ ವ್ಯವಸ್ಥೆಯಾಗಬೇಕಿದೆ . ಕೇವಲ ಸೌಲಭ್ಯಕ್ಕಾಗಿ ಅಲ್ಲದೆ ದೇಶ ಸೇವೆ ಸಲ್ಲಿಸಿರುವ ಯೋಧರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವಲ್ಲಿ ಸರ್ಕಾರ ಶ್ರಮಿಸಬೇಕಿದೆ . ಸರ್ಕಾರಕ್ಕೆ ಮುಂದೆ ಈ ಮೂಲಕ ನಮ್ಮ ಯೋಧರ ಸಮಸ್ಯೆಗಳನ್ನು ಮಂಡಿಸಲಾಗುತ್ತಿದ್ದು ತ್ವರಿತವಾಗಿ ನಮ್ಮ ಕುಂದು ಕೊರತೆಗಳನ್ನು ಬಗೆಹರಿಸುವಂತೆ ಒತ್ತಾಯಿಸುತ್ತಿವೆ ಎಂದರು .

    ಜನರಲ್ ಹೆಚ್.ಆರ್. ಸಿಂಗ್ ಮಾತನಾಡಿ ಪುಲ್ವಾಮ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸುವ ಈ ಬೃಹತ್ ಸಮಾವೇಶ ವಿಶೇಷವಾಗಿದ್ದು .ಮಾಜಿ ಯೋಧರ ಹಲವು ಕುಂದು ಕೊರತೆಗಳನ್ನು ಸ್ಥಳೀಯ ಸರ್ಕಾರದ ಪ್ರತಿನಿಧಿಗಳ ಮುಂದೆ ಮಂಡಿಸಲು ಉತ್ತಮ ವೇದಿಕೆಯಾಗಿರುವುದು ಮಾಜಿ ಯೋಧರ ಭಾಗ್ಯವೆಂದರೆ ತಪ್ಪಾಗಲಾರದು .ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅರೇಸೇನಾ ಪಡೆಗಳ ಬೇಡಿಕೆಗಳನ್ನು ಅರಿತು ತ್ವರಿತವಾಗಿ ಈಡೇರಿಸಬೇಕು ಎಂದು ಆಗ್ರಹಿಸಿದರು

     

    ಕಾಂಗ್ರೆಸ್ ವಕ್ತಾರರಾದ ನಿಕೇತ್ ರಾಜ್ ಮೌರ್ಯ ಮಾತನಾಡಿ ಹಲವಾರು ಸಂದರ್ಭಗಳಲ್ಲಿ ದೇಶದ ಗೌರವ ಹಾಗೂ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವ ಅರೆಸೇನಾ ಪಡೆಗಳ ಮಾಜಿ ಯೋಧರು ತಮ್ಮ ಹಕ್ಕಿಗಾಗಿ ಬೀದಿಯಲ್ಲಿ ನಿಂತಿರುವುದು ಶೋಚನೀಯ ಸಂಗತಿ .ಮಾಜಿ ಯೋಧರು ಕೇಳುತ್ತಿರುವುದು ಬಿಕ್ಷೆಯಲ್ಲ ಅವರ ಹಕ್ಕನ್ನು ಕೇಳುತ್ತಿದ್ದಾರೆ . ಈಗಿನ ಸರ್ಕಾರಗಳು ಅರೆಸೇನಾ ಪಡೆಗಳ ಮಾಜಿ ಯೋಧರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರಗಳ ಆದ್ಯಕರ್ತವ್ಯವಾಗಿದೆ .ದೇಶ ಕಾಯುವ ಯೋಧನಿಗೆ ಯಾವುದೇ ಜಾತಿ,ಧರ್ಮ,ಪಕ್ಷಗಳಿಲ್ಲ. ಯೋಧರ ಸೇವೆ ಬಯಸುವ ಸರ್ಕಾರಗಳಿಗೆ ಯೋಧರ ಕಷ್ಟ ಕೇಳುವ ಕಿವಿ ಇಲ್ಲದಿರುವುದು ವಿಪರ್ಯಾಸವೇ ಸರಿ .ಯೋಧರ ಈ ಮನವಿಯನ್ನು ಸರ್ಕಾರದ ಗಮನಕ್ಕೆ ಖಂಡಿತ ತರಲಾಗುವುದು ಎಂದು ತಿಳಿಸಿದರು .

     

    ಸಿ ಎ ಪಿ ಎಫ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸೈನಿಕರಾದ ಅನಂತ ರಾಜಗೋಪಾಲ ಮಾತನಾಡಿ ದೇಶದ ಗಡಿಯನ್ನು ಹಗಲು ರಾತ್ರಿ ಎನ್ನದೆ ಕಾವಲು ಕಾಯುವ ,ದೇಶಕ್ಕೆ ಯಾವುದೇ ಅಪತ್ತು ಎದುರಾದಲ್ಲಿ ಮೊದಲು ನಿಂತು ಸೆಣಸಾಡುವ ಯೋಧ ತನ್ನ ಕರ್ತವ್ಯದಿಂದ ನಿವೃತ್ತಿ ಹೊಂದು ತನ್ನ ತಾಯ್ನಾಡಿಗೆ ಬಂದರೆ ಇಲ್ಲಿ ಅವನು ಒಬ್ಬ ಸೆಕ್ಯೂರಿಟಿ (ಭದ್ರತೆ) ಗಾರ್ಡ್ ಆಗಿ ಸೇವೆ ಸಲ್ಲಿಸುವ ಪರಿಸ್ಥಿತಿ ಇದೆ .ಕೇಂದ್ರ ಹಾಗೂ ರಾಜ್ಯದಿಂದ ಮಾಜಿ ಯೋಧರಿಗೆ ಸಲ್ಲಬೇಕಿರುವ ಸೌಲಭ್ಯಗಳನ್ನು ಪಡೆಯುವಲ್ಲಿ ಹರಸಾಹಸ ಪಡಬೇಕಿದೆ . ಈ ಹಿಂದೆ ಅರೇ ಸೇನಾ ಪಡೆಗಳ ಬೋರ್ಡ್ ಅನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಘೋಷಿಸಿದ್ದರು ಆದರೆ ನಂತರ ಬಂದ ಸರ್ಕಾರ ಸೈನಿಕ್ ಬೋರ್ಡ್ ಅನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದ್ದು ಈಗ ಮತ್ತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತ ಮಾಡುತ್ತಿದ್ದು ಈ ಬಾರಿ ನಮ್ಮ ಸೈನಿಕರಿಗಾಗಿ ಪ್ರತ್ಯೇಕ ಬೋರ್ಡ್ ಸ್ಥಾಪನೆಯಾಗುವ ಭರವಸೆ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

    ಈ ಸಂದರ್ಭದಲ್ಲಿ  ವೀರ ಮರಣ ಹೊಂದಿದ ಹುತಾತ್ಮ ಯೋಧರ ಕುಟುಂಬಗಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಸೇರಿದಂತೆ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

     

    ಕಾರ್ಯಕ್ರಮದಲ್ಲಿ ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನರಸಿಂಹ ರೆಡ್ಡಿ ,ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಹೆಚ್. ಕೃಷ್ಣಪ್ಪ ,ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಅನಂತ ರಾಜಗೋಪಾಲ, ನರಸಿಂಹಮೂರ್ತಿ ಸೇರಿದಂತೆ ಸಾವಿರಾರು ಮಾಜಿ ಯೋಧರು ಉಪಸ್ಥಿತರಿದ್ದರು .