Blog

  • ದೇವಾಲಯಗಳ ಸ್ವಚ್ಛತಾ ಸಮಿತಿ ವತಿಯಿಂದ ಸ್ವಯಂ ಸೇವಕರಿಗೆ ಗೌರವ ಸಮರ್ಪಣೆ

    ದೊಡ್ಡಬಳ್ಳಾಪುರ : ದೇವಾಲಗಳ ಸ್ವಚ್ಛತಾ ಸಮಿತಿ ವತಿಯಿಂದ ಸುಮಾರು 75ಕ್ಕೂ ಅಧಿಕ ಸ್ವಯಂ ಸೇವಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.

    ನಗರದ ಕನ್ನಡ ಜಾಗೃತ ಪರಿಷತ್ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ
    ತಾಲ್ಲೂಕಿನ ಹಲವು ದೇವಾಲಯಗಳ ಸ್ವಚ್ಛತಾ ಕಾರ್ಯಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ಸುಮಾರು 30ಕ್ಕೂ ಹೆಚ್ಚು ಸ್ವಯಂ ಸೇವಕರಿಗೆ “ಸೇವಾ ರತ್ನ ಪ್ರಶಸ್ತಿ ” ಹಾಗೂ ಸೇವಾ ಮನೋಭಾವವನ್ನು ಉತ್ತೇಜಸಿದ 45ಕ್ಕೂ ಅಧಿಕ ಪ್ರೋತ್ಸಹಕರಿಗೆ “ಪೋಷಕ ಪ್ರಶಸ್ತಿ ” ನೀಡಿ ಗೌರವಿಸಲಾಯಿತು.

    ನಿರಂತರ ನಿಸ್ವಾರ್ಥ ಸೇವೆ ಮಾಡುತ್ತಿರುವ ಸುಂದರ ಮನಸುಗಳನ್ನು ಗುರುತಿಸಿ ಅವರ ಸೇವೆ ಹಾಗೂ ಕನಸುಗಳನ್ನ ಸಮಾಜಕ್ಕೆ ತಿಳಿಸುವ ಪ್ರಯತ್ನವಾಗಿ ನಮ್ಮ ದೇವಾಲಯಗಳ ಸ್ವಚ್ಛತಾ ಸಮಿತಿಯು ಅವರವರ ಕ್ಷೇತ್ರದ ಅನುಗುಣವಾಗಿ “ಸೇವಾರತ್ನ ಪ್ರಶಸ್ತಿ”ಗಳನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಗಳನ್ನು “ಸೇವೆಯಾಗಿದೆಬದುಕು “ಎಂಬ ಶೀರ್ಷಿಕೆಯಡಿಯಲ್ಲಿ ನೀಡಲಾಗುತ್ತಿದ್ದು ಈ ಕಾರ್ಯಕ್ರಮಕ್ಕೆ ಪ್ರಶಸ್ತಿ ಪುರಸ್ಕೃತರು ತಮ್ಮ ಕುಟುಂಬದವರೊಡನೆ ಬಂದು ಪ್ರಶಸ್ತಿ ಸ್ವೀಕರಿಸಿರುವುದು ಸಂತಸತಂದಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

  • ಬೆಂಗಳೂರು ಗ್ರಾಮಾಂತರ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ ವಿ ಮಂಜುನಾಥ್ ರವರು ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಲಿ – ಹಳ್ಳಿ ರೈತ ಅಂಬರೀಷ್ 

    ಬೆಂಗಳೂರು ಗ್ರಾಮಾಂತರ :  ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಕೆ ವಿ ಮಂಜುನಾಥ್ ರವರಿಗೆ ಹಳ್ಳಿ ರೈತ ಅಂಬರೀಷ್ ಶುಭ ಹಾರೈಸಿದ್ದಾರೆ.

     

    ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಮಂಜುನಾಥ್ ಕೆ.ವಿ. ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಗಿ ಆಯ್ಕೆಯಾಗಿದ್ದು. ರಾಜ್ಯ ಜೆಡಿಎಸ್ ಪ್ರಮುಖರ ಈ ನಿರ್ಣಯವನ್ನು ಸ್ವಾಗತಿಸುತ್ತೇನೆ ಪಕ್ಷದ ತತ್ವ–ಸಿದ್ಧಾಂತಗಳಿಗೆ ನಿಷ್ಠರಾಗಿರುವ, ಸಹಕಾರಿ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ಮಂಜುನಾಥ್ ರವರು ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನುಇನ್ನಷ್ಟು ಬಲಿಷ್ಠಗೊಳಿಸುವ ಕಾರ್ಯ ಮಾಡಲಿದ್ದಾರೆ ಎಂಬ ಭರವಸೆ ಇದೆ ಅವರ ನಾಯಕತ್ವಕ್ಕೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ ಎಂದು ಹಳ್ಳಿ ರೈತ ಅಂಬರೀಷ್ ತಿಳಿಸಿದ್ದಾರೆ.

     

    ಸ್ಥಳೀಯವಾಗಿ ಈ ಹಿಂದೆ ನಡೆದ ಕಾರ್ಯಕರ್ತರ ಸಭೆಯಲ್ಲಿ  ಪಕ್ಷ ಸಂಘಟನೆ ಹಾಗೂ ಕಾರ್ಯ ವೈಕರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು ನೂತನ ಅಧ್ಯಕ್ಷರ  ನೇತೃತ್ವ ಕಾರ್ಯಕರ್ತರ ಅಸಮಾಧಾನವನ್ನು ಸರಿಪಡಿಸುವುದೇ ಕಾದುನೋಡಬೇಕಿದೆ   ಎಂದಿದ್ದಾರೆ.

     

     

     

  • ಗ್ರಾಮಾಂತರ ಜೆಡಿಎಸ್‌ಗೆ ಅನುಭವಿ ನಾಯಕತ್ವ

    ಬೆಂಗಳೂರು ಗ್ರಾಮಾಂತರ: ಪಕ್ಷದ ತತ್ವ–ಸಿದ್ಧಾಂತಗಳಿಗೆ ನಿಷ್ಠರಾಗಿರುವ, ಸಹಕಾರಿ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಶ್ರೀ ಮಂಜುನಾಥ್ ಕೆ.ವಿ., ಮುಂದಿನ ದಿನಗಳಲ್ಲಿ ಗ್ರಾಮಾಂತರ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸುವ ವಿಶ್ವಾಸವನ್ನು ಪಕ್ಷದ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

    ರೈತ ಕುಟುಂಬದ ಹಿನ್ನೆಲೆಯಿರುವ ಶ್ರೀ ಮಂಜುನಾಥ್ ಕೆ.ವಿ. ಅವರು ದೇವನಹಳ್ಳಿ ಎಪಿಎಂಸಿ ಅಧ್ಯಕ್ಷರಾಗಿ ಹಾಗೂ ಬಿದಲೂರು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ, ರೈತರು, ಗ್ರಾಮಾಂತರ ಜನತೆ ಮತ್ತು ಸಹಕಾರಿ ವಲಯದಲ್ಲಿ ಜನಪರ ಆಡಳಿತದ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಪಾರದರ್ಶಕತೆ, ಶಿಸ್ತು ಮತ್ತು ಸೇವಾಭಾವನೆ ಇವರ ಕಾರ್ಯಶೈಲಿಯ ಪ್ರಮುಖ ಲಕ್ಷಣಗಳಾಗಿವೆ.

    ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ ಅರಿವು ಹೊಂದಿರುವ ಅವರು, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಜೊತೆಗೆ ಯುವಕರು, ರೈತರು ಹಾಗೂ ಮಹಿಳೆಯರನ್ನು ಜೆಡಿಎಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

    ಗ್ರಾಮಾಂತರ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಕಾರ್ಯಕರ್ತರೊಂದಿಗೆ ನಿರಂತರ ಸಂವಾದ ನಡೆಸಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಪರಿಣಾಮಕಾರಿ ನಾಯಕತ್ವವನ್ನು ಅವರು ನೀಡಲಿದ್ದಾರೆ ಎಂದು ಪಕ್ಷದ ಯುವ ಮುಖಂಡ ಉದಯ ಆರಾಧ್ಯ ಅಭಿಪ್ರಾಯಪಟ್ಟಿದ್ದಾರೆ.

  • ಬೆಂಗಳೂರು ಗ್ರಾಮಾಂತರ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾಗಿ ಮಂಜುನಾಥ್ ಕೆ.ವಿ ನೇಮಕ

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ಅಧ್ಯಕ್ಷರಾಗಿ ಶ್ರೀ ಮಂಜುನಾಥ್ ಕೆ.ವಿ ಅವರನ್ನು ನೇಮಕ ಮಾಡಲಾಗಿದೆ.

     

    ಈ ಕುರಿತು ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ನೇಮಕಾತಿ ಆದೇಶ ಹೊರಡಿಸಿದ್ದು, ಈ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬಂದಿದೆ.

     

    ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷವನ್ನು ಸಂಘಟಿಸಿ ಬಲಿಷ್ಠಗೊಳಿಸುವ ಜವಾಬ್ದಾರಿಯನ್ನು ಮಂಜುನಾಥ್ ಕೆ.ವಿ ಅವರು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವನ್ನು ಹೆಚ್.ಡಿ. ದೇವೇಗೌಡ ಅವರು ವ್ಯಕ್ತಪಡಿಸಿದ್ದಾರೆ.

     

    ನೂತನ ಅಧ್ಯಕ್ಷರಿಗೆ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಶುಭಾಶಯಗಳನ್ನು ಸಲ್ಲಿಸಿದ್ದಾರೆ.

  • ಫೆಬ್ರವರಿ 12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ : ಮುಷ್ಕರಕ್ಕೆ ವಿವಿಧ ಸಂಘಟನೆಗಳ ಬೆಂಬಲ ಕೋರಿದ ಮುಖಂಡರು 

    ದೊಡ್ಡಬಳ್ಳಾಪುರ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ಮಸೂಧೆಗಳನ್ನು ರದ್ದುಪಡಿಸುವಂತೆ ಅಗ್ರಹಿಸಿ ಫೆಬ್ರವರಿ 12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಲಿದೆ ಈ ಮುಷ್ಕರವನ್ನು ಉತ್ಪಾದನೆ, ಸೇವೆ ಸ್ಥಗಿತಗೊಳಿಸ

    ಸುವ ಮೂಲಕ ಕಾರ್ಮಿಕರು, ರೈತರು, ದಲಿತರು, ಯುವ ಸಮುದಾಯ ಮಹಿಳಾ ಸಂಘಟನೆಗಳು ಹಾಗೂ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತ ಬಂದ್ ಗೆ ಬೆಂಬಲ ನೀಡಬೇಕೆಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (JCTU) ಮತ್ತು ಸಂಯುಕ್ತ ಹೋರಾಟ ಕರ್ನಾಟಕ (SHK)ದ ಪ್ರಮುಖರು ಮನವಿ ಮಾಡಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ- ಕರ್ನಾಟಕ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರವು ದೇಶದ ಕಾರ್ಮಿಕರ ವಿರುದ್ಧ 4 ಕಾರ್ಮಿಕ ಮಸೂದೆ ಗಳನ್ನು ಜಾರಿಗೋಳಿಸಿದ್ದು ಕಾರ್ಮಿಕರಿಗೆ ಮಾರಕವಾದ ಈ ಮಸೂದೆಗಳನ್ನು ರದ್ದುಗೊಳಿಸಬೇಕು.ಬಡವರ ಜೀವನಧಾರವಾಗಿರುವ ನರೇಗಾ ಯೋಜನೆಯನ್ನು ಪುನ‌ರ್ ಸ್ಥಾಪಿಸಿ ಜಿ-ಬಿರಾಮ್‌ಜಿ ಕಾಯ್ದೆ ಹಾಗೂ ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕಾರ್ಮಿಕರು ಮುಂದಾಗಿದ್ದೇವೆ ಎಂದರು.

     

    ಮುಖಂಡರಾದ ವೆಂಕಟೇಶ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ಭೂಸುಧಾರಣಾ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು.ದೇಶದ ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿಲುವು ಬದಲಾಗಬೇಕು, ರೈತರಿಗೆ ಮಾರಕವಾಗಿರುವ ಬೀಜ ಮಸೂದೆ ಕಾಯ್ದೆಯನ್ನ ಹಿಂಪಡೆಯಬೇಕು, ವಿಮಾ ತಿದ್ದುಪಡಿ ಕಾಯ್ದೆ. ಶಾಂತಿ ಕಾಯ್ದೆರದ್ದುಗೊಳಿಸಿ ಕರ್ನಾಟಕ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಈಗ ತಂದಿರುವ ಗೆಜೆಟ್ ನೋಟಿಫಿಕೇಷನ್ನನ್ನು ವಾಪಸ್ಸು ಪಡೆಯಬೇಕು. ಮತ್ತು ಒಕ್ಕೂಟ ಸರ್ಕಾರ ತಂದಿರುವ ಜನವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು ಎಂದರು.

    ಫೆಬ್ರವರಿ 12 ರಂದು ರಾಜ್ಯದಲ್ಲಿ ಕೇಂದ್ರ ಮತ್ತು ಸ್ವತಂತ್ರ ಕಾರ್ಮಿಕ ಸಂಘಗಳು ಎಲ್ಲಾ ರೈತ ಸಂಘಗಳು, ಕೂಲಿಕಾರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ವಿದ್ಯಾರ್ಥಿ-ಯುವಜನ ಸಂಘಟನೆಗಳು ಸೇರಿ ಮುಷ್ಕರ ನಡೆಸಲಾಗುತ್ತಿದೆ. ಅಂದು ಎಲ್ಲಾ ವಿಭಾಗದ ಜನತೆ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬೇಕಾಗಿ ಈ ಮೂಲಕ ವಿನಂತಿಕೊಳ್ಳುತ್ತೇವೆ ಎಂದರು

     

    ಈ ವೇಳೆ ಜೆಸಿಟಿಯು ಜಿಲ್ಲಾ ಸಂಚಾಲಕರು ಮತ್ತು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್,ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಆರ್ ಚಂದ್ರು ತೇಜಸ್ವಿ, ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವ್ ನಾಯಕ್,ಪ್ರಜಾ ವಿಮೋಚನಾ ಚಳುವಳಿ ಮುಖಂಡ ಗೂಳ್ಯ ಹನುಮಣ್ಣ, ಸಿಐಟಿಯು ಜಿಲ್ಲಾ ಖಜಾಂಚಿ ಎಚ್ಎನ್ ಮೋಹನ್ ಬಾಬು,ಕೆಐಇಇಎಫ್ ಕಾರ್ಮಿಕ ಸಂಘದ ಮುಖಂಡ ಪ್ರಭಾಕರ್ ಎಂಜೆ,ಶಿವಕುಮಾರ್ ಹೆಚ್,ಎಐಟಿಯುಸಿ ಮುಖಂಡರಾದ ಒಟ್ಟು ಬಿಲ್ಜ್,ಮಂಜುನಾಥ್ ಎನ್, ಓಮಿನಿ,ಎಚ್ ಎಲ್ ಹೇಮಂತ್ ಕುಮಾರ್,ಎ ಐ ಯು ಟಿ ಯು ಸಿ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್,ಕರ್ನಾಟಕ ರಾಜ್ಯ ರೈತ ಸಂಘದ ಮುತ್ತೇಗೌಡ,ನಾರಾಯಣಪ್ಪ,ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಂಜಪ್ಪ,ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ ) ಎಚ್ಎಸ್ ವೆಂಕಟೇಶ್, ಬಿರ್ಲಾ ಸೂಪರ್ ಕಾರ್ಮಿಕ ಸಂಘದ ಮುಖಂಡ ರೇಣುಕಾ ರಾಧ್ಯ, ಅನಿಲ್ ಗುಪ್ತ, ಬೀರೇಂದ್ರ ಗುಪ್ತ,ಎ ಆರ್ ಡಿ ಯು ಆಟೋ ಚಾಲಕರ ಸಂಘದ ಅಧ್ಯಕ್ಷ ಸಾಧಿಕ್ ಪಾಷಾ,ಶಿವರಾಜ್ ಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ್,ಡಾ. ರಾಜಕುಮಾರ್ ಕನ್ನಡ ಅಭಿಮಾನಿಗಳ ಸಂಘದ ಆರ್ ಎಂ ಮಹದೇವಯ್ಯ,ಡಿಎಸ್ಎಸ್ ಸಂಚಾಲಕರಾದ ಸುರೇಶ್,ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದಸಿ ಎಚ್ ರಾಮಕೃಷ್ಣಯ್ಯ, ಸದಾಶಿವಪ್ಪ,ಇಂಡೇನ ಕಾರ್ಮಿಕ ಸಂಘದ ವಿನಯ್ ಕೆ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

  • ಛಲವಾದಿ ಮಹಾಸಭಾದ ನೂತನ ಜಿಲ್ಲಾಧ್ಯಕ್ಷರಾಗಿ ನರೇಶ್ ಆಯ್ಕೆ : ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದ ಸಮುದಾಯದ ಮುಖಂಡರು

    ದೊಡ್ಡಬಳ್ಳಾಪುರ : ರಾಜ್ಯದಲ್ಲಿ ಛಲವಾದಿ ಸಮುದಾಯ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದನ್ನು ಸರಕಾರದ ಗಮನಕ್ಕೆ ತರುವ ಮೂಲಕ ಅದನ್ನು ಪರಿಹರಿಸಿ, ಸಮುದಾಯದ ಅಭಿವೃದ್ದಿಗೆ ಕೆಲಸ ಮಾಡೋಣ ಎಂದು ಛಲವಾದಿ ಮಹಾಸಭಾದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ನರೇಶ್ ತಿಳಿಸಿದರು.

     

    ನಗರದ ಪ್ರವಾಸಿಮಂದಿರಲ್ಲಿ ಛಲವಾದಿ ಮಹಾಸಭಾ ವತಿಯಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು ರಾಜ್ಯದಲ್ಲಿ ಬೇರೆ ಅನೇಕ ಸಮುದಾಯಗಳ ಅಭಿವೃದ್ದಿಗಾಗಿ ನಿಗಮ ಮಂಡಳಿಗಳಿವೆ. ಆದರೆ ನಮ್ಮ ಸಮುದಾಯಕ್ಕಿಲ್ಲ. ನಮ್ಮಲ್ಲಿ ಭಿನ್ನಾಭಿಪ್ರಾಯ ಇದ್ದರೂ ಕೂಡ ಎಲ್ಲರೂ ಒಟ್ಟಿಗೆ ಇರಬೇಕು. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ೪ ತಾಲೂಕುಗಳಿಂದ ಅರ್ಜಿ ಬಂದಿತ್ತು.ನನ್ನನ್ನ ಆಯ್ಕೆ ಮಾಡಿದ್ದಾಗಿ ಧನ್ಯವಾದಗಳು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸಮಾಡಲಾಗುತ್ತದೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸಮುದಾಯ ಎದುರಿಸಲಾಗುತ್ತಿದೆ. ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ನಮ್ಮಲ್ಲಿ ಮುಖ್ಯಮಂತ್ರಿ ಆಗುವ ಸಾಮರ್ಥ್ಯ ವಿದೆ. ಆದರೂ ರಾಜಕೀಯ ,ಶೈಕ್ಷಣಿಕ,ಸಾಮಾಜಿಕವಾಗಿ ಹಿನ್ನಡೆಯಾಗಿದೆ. ಸಮುದಾಯದ ಅಭಿವೃದ್ದಿಗಾಗಿ ಎಲ್ಲರೂ ಶ್ರಮಿಸೋಣ ಎಂದರು.

     

    ಸೊಣ್ಣಪ್ಪನಹಳ್ಳಿ ರಮೇಶ್ ಮಾತನಾಡಿ ಈ ಹಿಂದೆ ನಮ್ಮಲ್ಲೇ ಇದ್ದ ಕೆಲ ಗೊಂದಲಗಳಿಂದ ನೂತನ ಸಂಘಟನೆ ಸ್ಥಾಪಿಸಿದ್ದೆವು ಆದರೆ ಈಗ ನೂತನ ಜಿಲ್ಲಾಧ್ಯಕ್ಷರು ಅವರೊಂದಿಗೆ ನಾವಿದ್ದೇವೆ ನಮ್ಮಲ್ಲಿ ಯಾವುದೇ ಒಡಕು ಇಲ್ಲ ಸಮುದಾಯದ ಅಭಿವೃದ್ಧಿಗಾಗಿ ನಾವು ಸದಾ ದುಡಿಯುತ್ತೇವೆ ರಾಜ್ಯ ಸಮಿತಿಯ ಈ ನಿರ್ಣಯಕ್ಕೆ ನಮ್ಮೆಲ್ಲರ ಒಪ್ಪಿಗೆ ಇದೆ ಎಂದರು.

     

    ಸಮುದಾಯದ ಮುಖಂಡರಾದ ಗೂಳ್ಯ ಹನುಮಯ್ಯ ಮಾತನಾಡಿ ನಮ್ಮ ನಮ್ಮಲ್ಲಿ ಇದ್ದ ಕೆಲ ಗೊಂದಲಗಳನ್ನು ರಾಜ್ಯ ಸಮಿತಿ ಹಾಗೂ ನೂತನ ಜಿಲ್ಲಾಧ್ಯಕ್ಷರು ಸರಿಪಡಿಸಿದ್ದಾರೆ . ನಮ್ಮ ಹೋರಾಟವೂ ಕೂಡ ಸಮುದಾಯದ ಏಳಿಗೆಗಾಗಿ ನಮ್ಮನೆಲ್ಲ ವಿಶ್ವಾಸಕ್ಕೆ ಪಡೆದು ಛಲವಾದಿ ಮಹಾಸಭಾ ಸಂಘಟನೆಯನ್ನು ಮುಂದುವರಿಸುವ ಉತ್ತಮ ನಾಯಕತ್ವವುಳ್ಳ ನರೇಶ್ ರವರನ್ನು ರಾಜ್ಯ ಸಮಿತಿಯು ನಮ್ಮ ಜಿಲ್ಲೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಅವರ ನಿರ್ಣಾಯವನ್ನು ನಾವು ಸ್ವಾಗತಿಸುತ್ತೇವೆ ಎಂದರು.

     

     

    ಈ ವೇಳೆಯಲ್ಲಿ ಮುಖಂಡರಾದ ಗೂಳ್ಯ ಹನುಮಣ್ಣ, ರಾಜಶೇಖರ್, ನಾರಾಯಣ, ಮರಿಯಪ್ಪಣ್ಣ, ತಿಮ್ಮರಾಯಪ್ಪ, ಮದ್ದೂರಣ್ಣ, ಸುರೇಶ್ ನಾರಾಯಣ, ಅಜಯ್, ರಾಮಣ್ಣ ಸೇರಿದಂತೆ ಅನೇಕರು ಹಾಜರಿದ್ದರು.

     

     

     

  • ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ಬಂದ ಭಕ್ತದಿಗಳಿಗೆ ಕರ್ನಾಟಕ ಕದಂಬ ಪಡೆ ವತಿಯಿಂದ ಅನ್ನದಾಸೋಹ ಆಯೋಜನೆ

    ದೊಡ್ಡಬಳ್ಳಾಪುರ : ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಕರ್ನಾಟಕ ಕದಂಬ ಪಡೆ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.


    ಜಿಲ್ಲಾಧ್ಯಕ್ಷ ಲಕ್ಕಣ್ಣ ಮಾತನಾಡಿ ರಾಜ್ಯ ಸಮಿತಿಯ ಎಲ್ಲಾ ಪ್ರಮುಖರ ಸಹಕಾರದೊಂದಿಗೆ ಇಂದು ತಾಲ್ಲೂಕಿನ ಪ್ರಸಿದ್ಧ ರಥೋತ್ಸವದಲ್ಲಿ ಅನ್ನದಾನ ಮಾಡುವ ಮೂಲಕ ಭಾಗವಹಿಸಿದ್ದು ಸಂತಸ ತಂದಿದೆ.ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಈ ವೇಳೆ  ಕರ್ನಾಟಕ ಕದಂಬ ಪಡೆಯ ರಾಜ್ಯ, ಜಿಲ್ಲಾ  ಹಾಗೂ ತಾಲ್ಲೂಕು ಮಟ್ಟದ ಪ್ರಮುಖರು ಸಾರ್ವಜನಿಕರಿಗೆ 2026 ರ  ಕ್ಯಾಲೆಂಡರ್ ವಿತರಿಸಿ  ಶುಭ ಹಾರೈಸಿದರು.


    ಕಾರ್ಯಕ್ರಮ ಕುರಿತು ತಾಲ್ಲೂಕು ಘಟಕದ ಅಧ್ಯಕ್ಷ ಕೆ ಟಿ ಆಂಜಿನಪ್ಪ ಮಾತನಾಡಿ ಇತಿಹಾಸ ಪ್ರಸಿದ್ಧವಾದ ಈ ಬ್ರಹ್ಮರಥೋತ್ಸವಕ್ಕೆ ತಾಲ್ಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದಷ್ಟೇ ಅಲ್ಲದೇ ಬೇರೆ ಬೇರೆ ಊರುಗಳಿಂದ ಜನರು ಬರುವುದು ವಾಡಿಕೆ ಜಾತ್ರೆಗೆ ಬರುವ ಎಲ್ಲಾ ಭಕ್ತದಿಗಳಿಗೂ ನಮ್ಮ ಕರ್ನಾಟಕ ಕದಂಬ ಪಡೆ ವತಿಯಿಂದ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ನಮ್ಮ ಸಂಘಟನೆಯ ಸಂಸ್ಥಾಪಕರಾದ ಮಂಜು ಗಣಪತಿಪುರ ಹಾಗೂ ರಾಜ್ಯಾಧ್ಯಕ್ಷರಾದ ಚೇತನ್ ಗೌಡ ರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದೆ ಎಂದರು.


    ಈ ವೇಳೆ ರಾಜ್ಯ ಕಾರ್ಯದರ್ಶಿ ಕೆ. ರಾಮಂಜಿ, ರಾಜ್ಯ ಕಾರ್ಯಧ್ಯಕ್ಷ ವೆಂಕಟೇಶ್ ಗೌಡ, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎ.ನಾರಾಯಣ ಸ್ವಾಮಿ,ಯುವ ಘಟಕ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸೋಮಶೇಖರ್ ಗೌಡ,ತಾಲೂಕು ಗೌರವಾಧ್ಯಕ್ಷ ಎಂ. ಲಕ್ಷ್ಮೀನಾರಾಯಣ, ಯುವ ಘಟಕ ತಾಲ್ಲೂಕು ಅಧ್ಯಕ್ಷ ಮುರಳಿ, ತಾಲ್ಲೂಕು ಉಪಾಧ್ಯಕ್ಷ ತಿಲಕ್ ಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ. ಶ್ರೀನಿವಾಸ್, ರೈತ ಘಟಕ ತಾಲ್ಲೂಕು ಅಧ್ಯಕ್ಷ, ವಿ. ಕೇಶವ, ತಾಲೂಕು ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ, ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ಎಂ. ರಮೇಶ್, ಉಪಾಧ್ಯಕ್ಷ ಮಂಜುನಾಥ್, ಸಹ ಕಾರ್ಯದರ್ಶಿ ರಾಮಕೃಷ್ಣಯ್ಯ, ಮಹಿಳಾ ಘಟಕ ಅಧ್ಯಕ್ಷರಾದ ಮಂಜುಳಾ, ಪ್ರಮುಖರಾದ ಹೆಚ್. ಮುತ್ತುರಾಜ್, ಆರ್ ಗೋವಿಂದ ರಾಜು, ಹೆಚ್. ಕೆ.ಮುತ್ತ ರಾಜು, ಎಸ್ ಎನ್ ಆನಂದ್ ಸೇರಿದಂತೆ ಹಲವರು ಹಾಜರಿದ್ದರು.

  • ಸರ್ವೇ ನಂಬರ್ ಜಾಗದಲ್ಲಿ ಅಂಗಡಿ ನಿರ್ಮಾಣ ಸಲ್ಲದು, ಅಂಗಡಿಗಳನ್ನು ತೆರವುಗೊಳಿಸಿ ನ್ಯಾಯಾಲಯದ ಆದೇಶವನ್ನು ಗೌರವಿಸಿ – ರೂಪ

    ದೊಡ್ಡಬಳ್ಳಾಪುರ : ನಗರದ ಜಗದೀಶ್ ವೃತ್ತದ ಸಮೀಪದಲ್ಲಿ ರಸ್ತೆಯ ಪಕ್ಕದಲ್ಲಿ ಕಂಪೌಂಡ್ ಗೆ ಹೊಂದಿಕೊಂಡಂತೆ ನಿರ್ಮಾಣ ಮಾಡಿಕೊಂಡು ವ್ಯಾಪಾರ ಸಾಗಿಸುತ್ತಿದ್ದ ಅಂಗಡಿಗಳನ್ನು ಏಕಾಏಕಿ ಯಾವುದೇ ನೋಟಿಸ್ ನೀಡದೆ ತೆರವು ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನೆನ್ನೆ(ಫೆ. 3) ಕೆಲ ಅಂಗಡಿ ಮಾಲೀಕರು ಪ್ರತಿಭಟನೆ ನಡೆಸಿದ್ದರು ಇಂದು(ಫೆ.4) ಜಮೀನು(ಸರ್ವೇ ನಂಬರ್ 143/1 ) ಕುರಿತು ನ್ಯಾಯಾಲಯದಲ್ಲಿ ದಾವೆ ಹೊಡಿರುವ ರೂಪ, ನಂದಿನಿ ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ ಈ ಕುರಿತು ಮಾಹಿತಿ ನೀಡಿದರು.

    ದೂರುದಾರರಾದ ರೂಪ ಮಾತನಾಡಿ (ಸರ್ವೇ ನಂಬರ್ 143/1 ) ಈ ಜಮೀನು ನಮ್ಮ ಪೂರ್ವಜರ ಅಸ್ತಿಯಾಗಿದ್ದು ಇಂದಿಗೂ ಈ ಜಮೀನನ್ನು ಬೇರೆಯವರು ಅನುಭವಿಸುತ್ತಿದ್ದಾರೆ. ಈಗ ನಾವುಗಳು ನ್ಯಾಯಾಲಯದಲ್ಲಿ ದಾವೆ ಹೂಡಿ ಸ್ಟೇಟಸ್ ಕ್ಯೂ ಆದೇಶ ಪಡೆದಿದ್ದೇವೆ. ಆದರೆ ಈ ಸರ್ವೇ ನಂಬರ್ ನಲ್ಲಿ ಹಲವಾರು ಅಂಗಡಿಗಳು ನಿರ್ಮಾಣವಾಗಿದ್ದು ಹಲವು ವರ್ಷಗಳಿಂದ ವ್ಯಾಪಾರ ವಹಿವಾಟು ನೆಡೆಸಿಕೊಂಡು ಬರುತ್ತಿವೆ ಅಂಗಡಿಗಳು ಸರ್ವೇ ನಂಬರ್ ನಲ್ಲಿ ಇರುವ ಕಾರಣ ತೆರವುಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ ಅಲ್ಲದೇ ನಗರಸಭಾ ವತಿಯಿಂದ ನೋಟಿಸ್ ಕೂಡ ನೀಡಿದ್ದು, ನಮ್ಮ ಜಮೀನು ನಮಗೆ ಬಿಟ್ಟು ಕೊಡಲು ಈ ಮೂಲಕ ಮನವಿ ಮಾಡುತ್ತೇವೆ ಎಂದರು.

    ಕುಟುಂಬದ ಸದಸ್ಯರಾದ ನಂದಿನಿ ಮಾತನಾಡಿ ನಾವು ಕಳೆದ ಮೂರ್ನಾಲ್ಕು ತಿಂಗಳುಗಳ ಹಿಂದೆಯೇ ನಗರಸಭೆ ಸಹಯೋಗದೊಂದಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಕೋರಿ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದ್ದೇವೆ . ಆದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಅಲ್ಲದೆ ನೂತನವಾಗಿ ಹಲವಾರು ಅಂಗಡಿಗಳನ್ನು ನಮ್ಮ ಸರ್ವೇ ನಂಬರ್ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ರಸ್ತೆಯ ಫುಟ್ಪಾತ್ ಗೂ ನಮಗೂ ಸಂಬಂಧವಿಲ್ಲ ಆದರೆ ನಮ್ಮ ಜಾಗದಲ್ಲಿ ಯಾವುದೇ ಅಂಗಡಿಗಳನ್ನು ಇಡಲು ನಾವು ಬಿಡುವುದಿಲ್ಲ ಎಂದರು.

    ನ್ಯಾಯಾಲಯದಲ್ಲಿ ನಮಗೆ ಸ್ಟೇಟಸ್ ಕ್ಯೂ ಆದೇಶವಾಗಿದ್ದು ಜಮೀನಲ್ಲಿ ಯಾವುದೇ ರೀತಿಯ ಚಟುವಟಿಕೆ ನಡೆಯಬಾರದು ಆದರೆ ದಿನೇ ದಿನೇ ಹೊಸ ಅಂಗಡಿಗಳು ನಮ್ಮ ಜಾಗದಲ್ಲಿ ಸೇರ್ಪಡೆಯಾಗುತ್ತಿವೆ ಹಾಗಾಗಿ ಎಲ್ಲಾ ಅಂಗಡಿಗಳ ತೆರವುಗೊಳಿಸಲು ನಾವು ಮುಂದಾಗಿದ್ದೇವೆ ಎಂದರು.

    ಈ ವೇಳೆ ಕುಪ್ಪಮ್ಮ,ಶಾಂತಮ್ಮ, ಮುನಿಯಪ್ಪ, ಪ್ರಭು, ವಾಸು, ನಂದಿನಿ, ಹರೀಶ್, ರೂಪ ಸೇರಿದಂತೆ ಕುಟುಂಬಸ್ಥರು ಹಾಜರಿದ್ದರು.

  • ಗೀತಮ್ ಯೂನಿವರ್ಸಿಟಿಯಲ್ಲಿ N-GEN POST OFFICE ಗೆ ಚಾಲನೆ : ಏನಿದರ ವಿಶೇಷತೆ….???ಸುದ್ದಿ ನೋಡಿ 

    ದೊಡ್ಡಬಳ್ಳಾಪುರ : ತಾಲೂಕಿನ ಹೆಸರಾಂತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಗೀತಮ್ ಯುನಿವರ್ಸಿಟಿಯಲ್ಲಿ ಇಂದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಕಾರಣ ಇದೇ ಮೊದಲ ಬಾರಿಗೆ ಭಾರತೀಯ ಅಂಚೆ ಇಲಾಖೆ ಸಹಕಾರದೊಂದಿಗೆ ಗೀತಮ್ ವಿಶ್ವವಿದ್ಯಾಲಯದ ಆವರಣದಲ್ಲಿ ಮುಂದಿನ ಪೀಳಿಗೆಯ ಅಂಚೆ ಕಚೇರಿ(N-GEN POST OFFICE )ಯನ್ನು ಉದ್ಘಾಟನೆ ಮಾಡಲಾಯಿತು.

    ಹಲವು ಪ್ರಮುಖರಿಂದ ಉದ್ಘಾಟನೆಗೊಂಡ ನೂತನ ಅಂಚೆ ಕಚೇರಿಯು ತನ್ನ ವಿಶೇಷತೆಗಳಿಂದ ವಿದ್ಯಾರ್ಥಿಗಳನ್ನು ಅಚ್ಚರಿಗೋಳಿಸಿತು.

    ಈ ಕುರಿತು ಭಾರತೀಯ ಅಂಚೆ ಸೇವೆ(ಬೆಂಗಳೂರು ವಿಭಾಗ ) ಗಳ ನಿರ್ದೇಶಕರಾದ ತಾರಾ ಮಾತನಾಡಿ ಭಾರತೀಯ ಅಂಚೆ ಇಲಾಖೆಯು ಯೂನಿವರ್ಸಿಟಿಗಳಲ್ಲಿ ಸ್ಥಾಪಿತವಾಗಿರುವ ಅಂಚೆ ಕಚೇರಿಗಳನ್ನು ಆಯ್ಕೆ ಮಾಡಿಕೊಂಡು ಅಂತಹ ಅಂಚೆ ಕಚೇರಿಗಳನ್ನು ಯುವ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಈ ನೆಕ್ಸ್ಟ್ ಜನ್ ಪೋಸ್ಟ್ ಆಫೀಸ್ (NEXT-GEN POST OFFICE ) ಯುವ ಸಮುದಾಯವನ್ನು ಆಕರ್ಷಿಸಿ ಅಂಚೆ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ ಬಳಕೆ ಮಾಡಲು ಸಹಕಾರಿಯಾಗಲಿದೆ ಎಂದರು.

     

    N-GEN POST OFFICE ನ ವಿಶೇಷತೆಗಳೇನು…??

     

    ವಿದ್ಯಾರ್ಥಿಗಳು ಪೋಷಕರು ಹಾಗೂ ಸಾರ್ವಜನಿಕರು ಈ ಅಂಚೆ ಕಚೇರಿಗೆ ಭೇಟಿ ಕೊಟ್ಟ ತಕ್ಷಣವೇ ಅವರನ್ನು ಸ್ವಾಗತ ಮಾಡಲು ವೆಲ್ಕಮ್ ಲಾಂಚ್ ಸ್ಥಾಪಿಸಲಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಬಳಕೆದಾರರು ಹೆಚ್ಚಿರುವ ಕಾರಣ ತಮ್ಮ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಲು ಚಾರ್ಜಿಂಗ್ ಸ್ಪಾಟ್ ಕೂಡ ಆಯೋಜನೆ ಮಾಡಲಾಗಿದೆ. ಯುವ ಸಮುದಾಯವು ಹೆಚ್ಚಿನ ಸಮಯವನ್ನು ರಿಲ್ಸ್ ಮಾಡುವುದರಲ್ಲಿ ಕಳೆಯುವುದು ಸರ್ವೇ ಸಾಮಾನ್ಯ ಸಂಗತಿಯಾಗಿದ್ದು ಅಂತಹ ರಿಲ್ಸ್ ಮಾಡುವವರಿಗೆ ಅಗತ್ಯ ಪರಿಕರಗಳನ್ನು ಈ ಅಂಚೆ ಕಚೇರಿಯಲ್ಲಿ ಬಳಸಿ ವಿಶೇಷ ರೀಲ್ಸ್ ಮಾಡಬಹುದಾಗಿದೆ. ಅಲ್ಲದೆ ಸೆಲ್ಫಿ ತೆಗೆದುಕೊಳ್ಳಲು ಚಂದ ಕಾಣುವ ಹಸಿರು ಗಿಡಗಳಿಂದ ತುಂಬಿದ ಅತ್ಯುತ್ತಮ ಸೆಲ್ಫಿ ಸ್ಪಾಟ್ ವಾಲ್ ರೂಪಿಸಿದ್ದು, ಓದುಗರನ್ನು ತಣಿಸಲು ಪುಟಾಣಿ ಲೈಬ್ರರಿ ಕೂಡ ಇದೆ. ಜೊತೆಗೆ ಭಾರತೀಯ ಅಂಚೆ ಸೇವೆಗಳನ್ನು ಕುರಿತ ಸಂಕ್ಷಿಪ್ತ ಮಾಹಿತಿ ನೀಡಲು ಪೋಸ್ಟಲ್ ಟ್ರೀ ಸಿದ್ಧವಿದೆ. ಅಲ್ಲದೆ ಈ ಅಂಚೆ ಕಚೇರಿಯಲ್ಲಿ ಪಾರ್ಸೆಲ್ ತಂದು ಗಂಟೆಗಟ್ಟಲೆ ಕಾಯುವ ಅವಶ್ಯಕತೆ ಇಲ್ಲ ಕಾರಣ ಆಧುನಿಕ ಯಂತ್ರೋಪಕರಣದ ಸಹಾಯದಿಂದ ತಾವೇ ಖುದ್ದಾಗಿ ಪಾರ್ಸಲ್ ಅನ್ನು ಯಂತ್ರದಲ್ಲಿ ಸೆಲ್ಫ್  ಬುಕಿಂಗ್ ಮಾಡುವ ಮೂಲಕ ನಮೂದಿಸಿ ಸ್ವೀಕೃತಿ ಚೀಟಿ ಪಡೆಯಬಹುದಾಗಿದೆ.

     

     

    ಗೀತಮ್ ರೆಸಿಡೆನ್ಸಿಯಲ್ ನಿರ್ದೇಶಕರಾದ ವಿಜಯ್ ಗಿಜ್ಜಿ ಮಾತನಾಡಿ ಇಂದಿರಾ ವಿದ್ಯಾರ್ಥಿಗಳು ಅಂಚೆ ಇಲಾಖೆ ಬಳಸಬೇಕೆಂಬ ಮಹದಾಸೆಯಿಂದ ಅಂಚೆ ಇಲಾಖೆಯ ಸೇವೆಗಳನ್ನು ಆಧುನಿಕರಣದೊಂದಿಗೆ ಬೆಸೆದು ಈ ವಿನೂತನ ಪ್ರಯತ್ನವನ್ನು ಭಾರತೀಯ ಅಂಚೆಸೇವೆ ಮಾಡಿದೆ ಈ ವಿಶೇಷ ಪ್ರಯತ್ನಕ್ಕೆ ನಮ್ಮ ಗೀತಂ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಾವು ಧನ್ಯವಾದಗಳು ಅರ್ಪಿಸುತ್ತೇವೆ ಎಂದರು.

    ಈ ವೇಳೆ ಗೀತಾಮ್ ವಿಶ್ವವಿದ್ಯಾಲಯದ ಪ್ರಮುಖರು, ಭಾರತೀಯ ಅಂಚೆ ಇಲಾಖೆ(ಬೆಂಗಳೂರು ವಿಭಾಗ )ಯ ಸಿಬ್ಬಂದಿ ವರ್ಗ ಹಾಜರಿದ್ದರು.

     

     

  • ಪುಸ್ತಕಗಳ ಮೂಲಕ ಜಗತ್ತಿನ ಅರಿವು ಮೂಡಿಸಲು ಸಾಧ್ಯ – ಶ್ರೀಕಾಂತ್ 

    ದೊಡ್ಡಬಳ್ಳಾಪುರ : ಕನ್ನಡ ಪುಸ್ತಕ ಓದಿ ಬಹುಮಾನ ಗೆಲ್ಲಿ’ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ  ಮತ್ತು ಸಾರ್ವಜನಿಕರಲ್ಲಿ ಕನ್ನಡ ಓದುವ ಹವ್ಯಾಸವನ್ನು ಉತ್ತೇಜಿಸುತ್ತಿರುವ  ಅತ್ಯಂತ ಶ್ಲಾಘನೀಯವಾಗಿದೆ ಎಂದು ಸಿ.ವಿ.ರಾಮನ್ ಪುಸ್ತಕ ಪ್ರಕಟಣೆಯ  ಪ್ರಾಯೋಜಕರಾದ ಎಸ್.ಶ್ರೀಕಾಂತ್ ತಿಳಿಸಿದರು

    ಅವರು ದೊಡ್ಡಬಳ್ಳಾಪುರ ನಗರದ ಕನ್ನಡ ಜಾಗೃತ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು , ಕನ್ನಡ ಜಾಗೃತ ಪರಿಷತ್ತು, ವಿಕಾಸ ಪ್ರಕಾಶ ಸಂಸ್ಥೆ ಎಸ್.ರಾಜಲಕ್ಷ್ಮಿ ಸ್ಮರಣಾರ್ಥ ಪ್ರಕಟಿಸಿರುವ ನೋಬಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ.ರಾಮನ್  ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.   ಪುಸ್ತಕ ಓದುವ ಸ್ಪರ್ಧೆಯು ಜ್ಞಾನಾರ್ಜನೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ, ಪುಸ್ತಕಗಳ ಪ್ರೀತಿಯನ್ನು ಬೆಳೆಸುತ್ತದೆ. ಇಂತಹ ಕಾರ್ಯಕ್ರಮಗಳು ಓದುಗರನ್ನು ಪುಸ್ತಕಗಳ ಮೂಲಕ ಜಗತ್ತಿನ ಅರಿವು ಮೂಡಿಸಲು ಪರಿಣಾಮಕಾರಿ ಮಾರ್ಗವಾಗಿದೆ. ಪುಸ್ತಕ ಓದಿ ಬಹುಮಾನ ಗೆಲ್ಲಿ ಕಾರ್ಯಕ್ರಮ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ ಎಂದರು.

    ಕನ್ನಡ ಜಾಗೃತ ಪರಿಷತ್ತು ಟ್ರಸ್ಟಿ  ಎಸ್.ಮಹಾಬಲೇಶ್ವರ್ ಮಾತನಾಡಿ,  ಮೊಬೈಲ್ ವ್ಯಸನವು ವಿದ್ಯಾರ್ಥಿಗಳಲ್ಲಿ ಓದಿನಿಂದ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಇದು ಮುಖಾಮುಖಿ ಸಂವಹನವನ್ನು ಕಡಿಮೆ ಮಾಡಿ, ಸಾಮಾಜಿಕ ಪ್ರತ್ಯೇಕತೆಗೆ ಕಾರಣವಾಗುತ್ತದೆ. ಅತಿಯಾದ ಮೊಬೈಲ್ ಬಳಕೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದರು.

    ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಬಿ.ಗುರುದೇವ್ ಮಾತನಾಡಿ, ಸರ್ ಸಿ.ವಿ. ರಾಮನ್ ಅವರು ಅಸಾಧಾರಣ ಸಮಯಪ್ರಜ್ಞೆ ಮತ್ತು ಕಟ್ಟುನಿಟ್ಟಿನ ಶಿಸ್ತಿಗೆ ಹೆಸರಾಗಿದ್ದರು.  ಸಿ.ವಿ.ರಾಮನ್  ಜೀವನದ ಕೊನೆಯವರೆಗೂ ಸಂಶೋಧನೆ ಮತ್ತು ಅಧ್ಯಯನದಲ್ಲಿ ನಿರತರಾಗಿ, ಶಿಸ್ತಿನ ಪ್ರತಿರೂಪವಾಗಿ ಬದುಕಿದವರು.  ರಾಮನ್  ಅವರ ಜನಪ್ರಿಯ ಆವಿಷ್ಕಾರ ‘ರಾಮನ್ ಎಫೆಕ್ಟ್’ ಪ್ರಕಟವಾದ ದಿನದ ನೆನಪಿಗಾಗಿ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

    ಜನಪ್ರಿಯ ವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ ಮಾತನಾಡಿ,  ಶ್ರೀ ಕೊಂಗಾಡಿಯಪ್ಪ. ವಿದ್ಯಾಸಂಸ್ಥೆಯ ನಿರ್ದೇಶಕಿಯಾಗಿದ್ದ ಎಸ್.ರಾಜಲಕ್ಷ್ಮಿ ಅವರ ಸ್ಮರಣಾರ್ಥ ಸಿ.ವಿ.ರಾಮನ್ ಪುಸ್ತಕ ಪ್ರಕಟಿಸಲಾಗಿದೆ. ಈ ಪುಸ್ತಕವನ್ನು ಪುಸ್ತಕ ಓದಿ ಬಹುಮಾನ ಗೆಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ನಡೆಯುತ್ತಿರುವ  ಕನ್ನಡ ಪುಸ್ತಕ ಓದಿ ಬಹುಮಾನ ಗೆಲ್ಲಿ ‌ಸ್ಪರ್ಧಾತ್ಮಕ ಪರೀಕ್ಷೆ  ಫೆ.22 ರಂದು ನಡೆಯಲಿದೆ. ದೊಡ್ಡಬಳ್ಳಾಪುರ ನಗರದ  ಎಂ.ಎ.ಬಿ.ಎಲ್ ಮತ್ತು ಸ್ವಾಮಿ ವಿವೇಕಾನಂದ ಪ್ರೌಢಶಾಲೆಗಳು ಪರೀಕ್ಷಾ ಕೇಂದ್ರಗಳಾಗಿವೆ. ಈ  ಸ್ಪರ್ಧಾತ್ಮಕ ಪರೀಕ್ಷೆಗೆ  ನೂರು ವಿದ್ಯಾರ್ಥಿಗಳನ್ನು ಪ್ರೇರಣೆ ಮಾಡಿದವರಿಗೆ  ಕನ್ನಡ ಪ್ರೇರಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.

    ಕಾರ್ಯಕ್ರಮದಲ್ಲಿ   ಸಿ.ವಿ. ರಾಮನ್  ಪುಸ್ತಕ ಸಂಪಾದಕ ಮಂಡಲಿಯ ಸದಸ್ಯರುಗಳಾದ ಪಿ.ಗೋವಿಂದರಾಜು, ಎಚ್.ಎನ್.ಪ್ರಕಾಶ್,  ಡಿ.ಪುಷ್ಪವತಿ, ಸಂಚಾಲಕ ಸಿ.ವೆಂಕಟರಾಜು, ನಗರಸಭಾ ಮಾಜಿ ಸದಸ್ಯ ಜಿ.ಸತ್ಯನಾರಾಯಣ್, ನಿವೃತ್ತ ಉಪನ್ಯಾಸಕರುಗಳಾದ ಎಸ್.ಇಕ್ಬಾಲ್ ಅಹಮದ್, ಜಿ.ಸತ್ಯನಾರಾಯಣ,  ಕನ್ನಡ ಜಾಗೃತ ಪರಿಷತ್ತು ಕಾರ್ಯದರ್ಶಿ ಡಿ.ಪಿ.ಆಂಜನೇಯ,   ಕನ್ನಡಪರ ಸಂಘಟನೆಗಳ  ಮುಖಂಡರುಗಳಾದ  ಸಂಜೀವ್ ನಾಯಕ್, ಗುರುರಾಜಪ್ಪ, ಡಿ.ವೆಂಕಟೇಶ್,  ಕನ್ನಡ ಸಾಹಿತ್ಯ ಪರಿಷತ್ತು ಮತ್ತು  ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಜಿ.ಸುರೇಶ್, ಕೋದಂಡರಾಮ್, ಸಿ.ಅಣ್ಣಯ್ಯ, ರಂಗಸ್ವಾಮಯ್ಯ, ಸೂರ್ಯನಾರಾಯಣ್,  ಮುಖ್ಯಶಿಕ್ಷಕಿ ಲಕ್ಷ್ಮೀಕಾಂತಮ್ಮ, ಕರಾಟೆ ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು.