Blog

  • ಚಂದ್ರಗ್ರಹಣದ ನಡುವೆಯೇ ಮಾರ್ಚ್ 3ರಂದು ತೂಬಗೆರೆ ಲಕ್ಷ್ಮೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ

    ದೊಡ್ಡಬಳ್ಳಾಪುರ (ತೂಬಗೆರೆ):ಇತಿಹಾಸ ಪ್ರಸಿದ್ಧ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 3ರಂದು ಚಂದ್ರಗ್ರಹಣದ ನಡುವೆಯೇ ಬ್ರಹ್ಮರಥೋತ್ಸವವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಗುವುದು. ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ರಥೋತ್ಸವವನ್ನು ಬೆಳಿಗ್ಗೆ 11.15ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಭಿಜಿತ್ ಮುಹೂರ್ತದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಉಪತಹಸೀಲ್ದಾರ್ ಯಶೋಧಮ್ಮ ತಿಳಿಸಿದ್ದಾರೆ.

     

    ಶನಿವಾರ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಬ್ರಹ್ಮರಥೋತ್ಸವದ ದಿನ ಮಧ್ಯಾಹ್ನ ಚಂದ್ರಗ್ರಹಣ ಇರುವುದರಿಂದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗದಂತೆ ರಥೋತ್ಸವವನ್ನು ಮುಂಚಿತವಾಗಿ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

     

    ಸುಮಾರು ಆರು ಶತಮಾನಗಳ ಇತಿಹಾಸ ಹೊಂದಿರುವ ಈ ದೇವಾಲಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಪಾಳೇಗಾರರು, ಹೊಯ್ಸಳರು, ಗಂಗರು ಸೇರಿದಂತೆ ಹಲವು ರಾಜವಂಶಗಳ ಆಳ್ವಿಕೆಯ ಗುರುತುಗಳು ದೇವಾಲಯದಲ್ಲಿ ಕಂಡುಬರುತ್ತವೆ. ಮೂಲತಃ ಇದು ಕಂಬದ ನರಸಿಂಹಸ್ವಾಮಿ ದೇವಾಲಯವಾಗಿದ್ದು, ನಂತರ ತಿರುಪತಿಯಿಂದ ರಕ್ತಚಂದನದ ವೆಂಕಟರಮಣನ ಮೂರ್ತಿಯನ್ನು ತಂದು ಇಲ್ಲಿ ಲಕ್ಷ್ಮೀ ವೆಂಕಟರಮಣ ಸ್ವಾಮಿಯಾಗಿ ಪ್ರತಿಷ್ಠಾಪಿಸಲಾಗಿದೆ ಎಂಬ ಐತಿಹ್ಯವಿದೆ.

     

    ಈ ಹಿನ್ನೆಲೆಯಿಂದ ತಿರುಪತಿ ವೆಂಕಟರಮಣನ ಮೂಲ ಪ್ರಾಣ ದೇವರು ಇಲ್ಲಿಯೇ ನೆಲೆಸಿದ್ದಾರೆ ಎಂಬ ನಂಬಿಕೆ ಸ್ಥಳೀಯರಲ್ಲಿ ವ್ಯಾಪಕವಾಗಿದೆ. ಪಾಳೇಗಾರರ ಕಾಲದಲ್ಲಿ ಪ್ರತಿಷ್ಠಾಪಿತವಾದ ಈ ದೇವಾಲಯದಲ್ಲಿ ಪರಂಪರೆಯ ಧಾರ್ಮಿಕ ಆಚರಣೆಗಳು ಇಂದಿಗೂ ನಿರಂತರವಾಗಿ ನಡೆಯುತ್ತಿದ್ದು, ವಾರ್ಷಿಕ ಬ್ರಹ್ಮರಥೋತ್ಸವ, ವೈಕುಂಠ ಏಕಾದಶಿ ಸೇರಿದಂತೆ ಪ್ರಮುಖ ಹಬ್ಬಗಳು ಭಕ್ತರ ಭಾರಿ ಭಾಗವಹಿಸುವಿಕೆಯಿಂದ ವಿಜೃಂಭಣೆಯಿಂದ ನಡೆಯುತ್ತವೆ.

     

    ಪೂರ್ವಭಾವಿ ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್, ಕೆಪಿಸಿಸಿ ಸದಸ್ಯ ಮುನಿರಾಜು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತ್ಯನಾರಾಯಣಪ್ಪ, ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಪ್ಪ, ಮುನಿಕೃಷ್ಣಪ್ಪ,  ದೇವಸ್ಥಾನ ಆಡಳಿತ ಮಂಡಳಿ ಹಿರಿಯ ಸದಸ್ಯರಾದ ಪುಟ್ಟಣ್ಣ, ಕೇಬಲ್ ಮಂಜು, ಗಂಗಾಧರ್, ವೆಂಕಟೇಶ್, ಮುಖಂಡ ಕನಕದಾಸ, ರವಿಸಿದ್ದಪ್ಪ, ಗಿರಿಯಪ್ಪ, ಯುವ ಮುಖಂಡ ಉದಯ ಆರಾಧ್ಯ, ಆಗಮಿಕ ಶ್ರೀನಿವಾಸನ್ ರಾಘವನ್, ಅರ್ಚಕ ನಾರಾಯಣ, ಕಂದಾಯ ನಿರೀಕ್ಷಕ ನರಸಿಂಹ, ವಿ.ಎ. ಕಿರಣ್ ಸೇರಿದಂತೆ ಮತ್ತಿತರರು ಹಾಜರಿದ್ದರು.

  • ಎಸ್. ನಾಗೇನಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ :ಹುಲ್ಲಿನ ಬಣವೆ, ಹಲಸಿನ ಮರ, ಹನಿ ನೀರಾವರಿ ವ್ಯವಸ್ಥೆ ಸಂಪೂರ್ಣ ಭಸ್ಮ

    ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿಯ ಎಸ್. ನಾಗೇನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಏಕಾಏಕಿ ಕಾಣಿಸಿಕೊಂಡ ಬೆಂಕಿ ಕೆಲವೇ ನಿಮಿಷಗಳಲ್ಲಿ ವ್ಯಾಪಿಸಿಕೊಂಡು,

    ಗ್ರಾಮದ ರೈತ ವೆಂಕಟಪ್ಪ ಅವರಿಗೆ ಸೇರಿದ ಕೃಷಿಭೂಮಿಯಲ್ಲಿ ಇಟ್ಟುಕೊಂಡಿದ್ದ ಸುಮಾರು ಐದು ಟ್ರಾಕ್ಟರ್ ಲೋಡ್ ರಾಗಿ ಹುಲ್ಲಿನ ಬಣವೆ, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಹಲಸಿನ ಮರ, ಜೊತೆಗೆ ಟೊಮೋಟೊ ಬೆಳೆಗೆ ಅಳವಡಿಸಲಾಗಿದ್ದ ಅಪಾರ ಮೌಲ್ಯದ ಹನಿ ನೀರಾವರಿ ಪೈಪುಗಳು ಹಾಗೂ ಟೊಮೇಟೊ ಕಡ್ಡಿಗಳು ಬೆಂಕಿಗಾಹುತಿಯಾಗಿವೆ. ಈ ಅವಘಡದಿಂದ ರೈತರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

    ಬೆಂಕಿ ಕಾಣಿಸಿಕೊಂಡ ಕೂಡಲೇ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ನೀರು, ಮಣ್ಣು ಬಳಸಿ ಬೆಂಕಿ ನಂದಿಸಲು ಯತ್ನಿಸಿದರೂ, ಬಿಸಿಲಿನ ತೀವ್ರತೆ, ಒಣಹವಾಮಾನ ಹಾಗೂ ಗಾಳಿಯ ವೇಗದಿಂದಾಗಿ ಬೆಂಕಿ ಇನ್ನಷ್ಟು ವ್ಯಾಪಿಸಿಕೊಂಡಿದೆ. ಪರಿಸ್ಥಿತಿ ಕೈ ಮೀರುವುದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

     

    ಸುದ್ದಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರೂ, ಅಷ್ಟರೊಳಗೆ ಬಹುತೇಕ ಕೃಷಿ ಸಾಮಗ್ರಿಗಳು ಭಸ್ಮವಾಗಿದ್ದರಿಂದ ನಷ್ಟ ತಪ್ಪಿಸಲು ಸಾಧ್ಯವಾಗಲಿಲ್ಲ. ನಂತರ ಬೆಂಕಿ ಇನ್ನಷ್ಟು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಯಿತು.

     

    ರೈತ ವೆಂಕಟಪ್ಪ ಅವರ ಕುಟುಂಬಕ್ಕೆ ರಾಗಿ ಹುಲ್ಲು, ಹಲಸಿನ ಕಾಯಿ ಹಾಗೂ ಟೊಮೇಟೊ ಬೆಳೆ ಮುಖ್ಯ ಆದಾಯದ ಮೂಲವಾಗಿತ್ತು. ಇಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವರ ಜೀವನಾಧಾರಕ್ಕೆ ಭಾರೀ ಹೊಡೆತ ನೀಡಿದೆ. ಮುಂದಿನ ಬೆಳೆಗಾಗಿ ಬಳಸಲು ಸಂಗ್ರಹಿಸಿದ್ದ ಹುಲ್ಲು ಹಾಗೂ ನೀರಾವರಿ ವ್ಯವಸ್ಥೆ ನಾಶವಾದುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

     

    ಘಟನೆಯ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಹಾಗೂ ರೈತ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಯುವ ಮುಖಂಡ ಉದಯ ಆರಾಧ್ಯ ಮಾತಾನಾಡಿ, ಆಕಸ್ಮಿಕ ಬೆಂಕಿಯಿಂದ ಸಂಪೂರ್ಣ ನಷ್ಟಕ್ಕೆ ಒಳಗಾದ ರೈತ ವೆಂಕಟಪ್ಪ ಅವರಿಗೆ ತಕ್ಷಣ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು, ಜೊತೆಗೆ ಹಾನಿಯ ಸಮೀಕ್ಷೆ ನಡೆಸಿ ಪರಿಹಾರ ಮೊತ್ತ ಘೋಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು.

  • ಪೂರ್ಣಗೊಳ್ಳದ ರಸ್ತೆ ಕಾಮಗಾರಿ : ಪ್ರಶ್ನೆ ಮಾಡಿದ ಪತ್ರಕರ್ತರಿಗೆ ಉಡಾಫೆ ಉತ್ತರ ಕೊಟ್ಟ ಗುತ್ತಿಗೆದಾರ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಹೊಸಹಳ್ಳಿ ವ್ಯಾಪ್ತಿಯ ದೊಡ್ಡಹಳ್ಳ ಸಮೀಪದಿಂದ ಗುಂಡಮಗೆರೆ-ಹೊಸಹಳ್ಳಿ ಮಾರ್ಗವಾಗಿ ಸಾಗುವ ರಸ್ತೆಗೆ ಹಲವು ದಶಕಗಳ ನಂತರ ಡಾಂಬರು ಕೆಲಸ ನಡೆಯುತ್ತಿದೆ. ಆದರೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

     

    ಕಾಮಗಾರಿಯ ಗುತ್ತಿಗೆದಾರರಾದ ಕಾರನಾಳ ಅಶ್ವಥನಾರಾಯಣ ಅವರಿಗೆ ಕಾಮಗಾರಿ ಕುರಿತು ಮಾಹಿತಿ ಪಡೆಯಲು ಓರ್ವ ಪತ್ರಕರ್ತರೊಬ್ಬರು ಕರೆ ಮಾಡಿದಾಗ ಬೇಜವಾಬ್ದಾರಿಯಾಗಿ ಉತ್ತರಿಸಿದ್ದಾರೆ.ರಸ್ತೆ ಕಾಮಗಾರಿ ಬೇಗ ಮುಗಿಸುವಂತೆ ಹೇಳಿದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ ಅವರಿಗೂ ಡೋಂಟ್ ಕೇರ್ ಎಂಬಂತೆ ಉತ್ತರ ನೀಡಿದ್ದಾರೆ.

     

    ರಸ್ತೆಯ ಅಧ್ವಾನದ ಕುರಿತು ವರದಿ ಮಾಡಲು ಗುತ್ತಿಗೆದಾರರಿಗೆ ದೂರುವಾಣಿ ಕರೆ ಮಾಡಿ ‘ಈ ರಸ್ತೆ ಕಾಮಗಾರಿ ಇಷ್ಟು ನಿಧಾನವಾಗಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಪಘಾತಗಳು ಆಗುತ್ತಿವೆ ಎಂದು ಸಾರ್ವಜನಿಕರ ಪರ ಕಳಕಳಿ ವ್ಯಕ್ತಪಡಿಸಿದರೆ, ಗುತ್ತಿಗೆದಾರ ನೀನ್ಯಾರು ಕೇಳಲಿಕ್ಕೆ, ನನ್ನತ್ರ ದುಡ್ಡಿಲ್ಲ, ದುಡ್ಡು ಬಂದಾಗ ಮಾಡುತ್ತೇನೆ ಎಂದು ಮಾತನಾಡಿದರು ಎಂದು ಪತ್ರಕರ್ತ ರಮೇಶ್ ಬಾಬು ತಿಳಿಸಿದ್ದಾರೆ.

     

    ಇನ್ನು ದಿನಾಂಕ 24-10-2025ರಂದು ಕಾಮಗಾರಿ ಪ್ರಾರಂಭ ಮಾಡಲಾಗಿದ್ದು, ಇದೂವರೆಗೂ ಮುಕ್ತಾಯಗೊಳಿಸದೇ ಮೀನಾಮೇಷ ಎಣಿಸಲಾಗುತ್ತಿದೆ.ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸದ ಕಾರಣ ಮನೆಯೊಳಗೆ ಧೂಳು ಆವರಿಸುತ್ತಿದೆ. ಮೇಲಾಗಿ ರಸ್ತೆ ಅಕ್ಕಪಕ್ಕದ ಹೊಲಗಳ ಬೆಳೆಗಳಿಗೆ ಸಮಸ್ಯೆ ಎದುರಾಗಿದೆ ಎಂದು ಹೊಸಹಳ್ಳಿ ಗ್ರಾಮಸ್ಥರು ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

     

    ಪ್ರತಿನಿತ್ಯ ಓಡಾಡುವ ವಾಹನ ಸವಾರರಿಗೆ ನರಕಯಾತನೆ

    ತಾಲೂಕಿನ ಗುಂಡಮಗೆರೆ ರಸ್ತೆಯ ಬಂಡಿಹಳ್ಳದಿಂದ ಹೊಸಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ(3.70KM) ಸಂಪೂರ್ಣ ಗುಂಡಿ ಬಿದ್ದು ಹಾಳಾಗಿತ್ತು. ಈ ಭಾಗದ ಜನರ ಅನುಕೂಲಕ್ಕಾಗಿ ಕೆಲವು ತಿಂಗಳ ಹಿಂದೆ ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭ ಮಾಡಲಾಗಿತ್ತು. ರಸ್ತೆಗೆ ಜಲ್ಲಿಕಲ್ಲು ಹಾಕಲಾಗಿದೆ ಅಷ್ಟೇ. ಸಂಪೂರ್ಣವಾಗಿ ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರ ಹಿಂದೇಟು ಹಾಕುತ್ತಿರುವುದರಿಂದ ಕಾಮಗಾರಿ ನೆನಗುದಿಗೆ ಬಿದ್ದಿದೆ. ಇದರಿಂದಾಗಿ ಈ ರಸ್ತೆಯ ಇಕ್ಕೆಲಗಳಲ್ಲಿರುವ ಹೊಲಗಳು, ಈ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುವ ವಾಹನ ಸವಾರರು ನರಕಯಾತನೆ ಅನುಭವಿಸಲಾಗುತ್ತಿದೆ.

     

    ಈ ಕುರಿತು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಲಕ್ಷ್ಮೀಪತಿ ಪ್ರತಿಕ್ರಿಯಿಸಿ, ಗುತ್ತಿಗೆದಾರ ದರ್ಪ ಮೆರೆದಿದ್ದರೆ ನಾವು ಖಂಡಿಸುತ್ತೇವೆ. ಸರ್ಕಾರ ಹಣ ಕೊಟ್ಟಿಲ್ಲ ಅಂತಾ ಹೇಳಬಾರದು, ಕಾಮಗಾರಿ ಪೂರ್ಣಗೊಂಡ ನಂತರ ಸರ್ಕಾರ ಹಣ ಬಿಡುಗಡೆ ಮಾಡೋದು. ಕಾಮಗಾರಿ ವಿಳಂಬಕ್ಕೆ ಸೂಕ್ತ ಕಾರಣ ನೀಡಬೇಕೆ ಹೊರೆತು ದುರಾಹಂಕಾರ ಮಾತುಗಳನ್ನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

     

    ಕಾಮಗಾರಿ ಪೂರ್ಣಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸಲಿ ಎಂಬ ಮಾತುಗಳು ಸಾಮಾಜಿಕ ವಲಯದಲ್ಲಿ ಕೇಳಿಬರುತ್ತಿವೆ.

  • ಖ್ಯಾತ ಉದ್ಯಮಿ ಸಿಜೆ ರಾಯ್ ಆತ್ಮ*ತ್ಯೆ

    ಬೆಂಗಳೂರು: ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಆ್ಯಕ್ಟೀವ್ ಆಗಿದ್ದ ಖ್ಯಾತ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ಸ್‌ ಚೇರ್ಮನ್ (chairman of Confident Groups) ಸಿಜೆ ರಾಯ್ (CJ Roy) ಆತ್ಮಹ*ತ್ಯೆಗೆ ಶರಣಾಗಿದ್ದಾರೆ.

     

    ಸಿಜೆ ರಾಯ್ ಕುರಿತು ಸಣ್ಣ ಮಾಹಿತಿ 

    ಡಾ. ರಾಯ್ ಸಿ.ಜೆ ಅವರು ಪ್ರತಿಷ್ಠಿತ ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಕೇರಳ ಮತ್ತು ಬೆಂಗಳೂರು ಮೂಲದ ಈ ರಿಯಲ್ ಎಸ್ಟೇಟ್ ಸಂಸ್ಥೆಯು 150ಕ್ಕೂ ಹೆಚ್ಚು ಯೋಜನೆಗಳನ್ನು ನಿರ್ಮಿಸಿದೆ. ಮರ್ಚೆಂಟ್ ನೇವಿ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿದ ಇವರು, ಬಳಿಕ ನಿರ್ಮಾಣ ಕ್ಷೇತ್ರದಲ್ಲಿ ಛಾಪು ಮೂಡಿಸಿ, ಶಿಕ್ಷಣ, ಆತಿಥ್ಯ ಮತ್ತು ಚಾರಿಟಿಯಲ್ಲಿ ತೊಡಗಿಸಿಕೊಂಡಿದ್ದರು.

     

    ಬೆಂಗಳೂರಿನ ಆನೇಪಾಳ್ಯದಲ್ಲಿರುವ ತಮ್ಮ ಕಚೇರಿಯಲ್ಲಿ ಗನ್ ನಿಂದ ತಮ್ಮ ತಲೆಗೆ ಶೂಟ್ ಮಾಡಿಕೊಂಡು ಸಿ ಜೆ ರಾಯ್ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಸ್ಥಳಕ್ಕೆ ಅಶೋಕ ನಗರ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

     

     

     

  • ಹಂದಿ ಸಾಕಾಣಿಕೆ ಕೇಂದ್ರದ ವಿರುದ್ಧ ಭೈರಸಂದ್ರ ಗ್ರಾಮಸ್ಥರ ಆಕ್ರೋಶ : ಕೆಟ್ಟ ವಾಸನೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಚಾಯಿತಿಗೆ ಮನವಿ

    ದೊಡ್ಡಬಳ್ಳಾಪುರ : ಗ್ರಾಮದ ಗಡಿಗೆ ಸೇರಿದಂತೆ ಇರುವ ಹಂದಿ ಸಾಕಾಣಿಕ ಕೇಂದ್ರದಿಂದ ಬರುವ ತ್ಯಾಜ್ಯ ನೀರಿನಿಂದಾಗಿ ಗ್ರಾಮದಲ್ಲಿ ಮೂಗು ಮುಚ್ಚಿಕೊಂಡಿರುವಂತ ವಾತಾವರಣ ಸೃಷ್ಟಿಯಾಗಿದೆ.ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕೆಟ್ಟ ವಾಸನೆಯ ನಡುವೆ ಜೀವನ ಸಾಗಿಸುವ ಪರಿಸ್ಥಿತಿ ನಮಗೆ ಎದುರಾಗಿದೆ. ಹಲವಾರು ಬಾರಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಂಚಾಯಿತಿಗೆ ಮನವಿ ಮಾಡಿದರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ , ಹಂದಿ ಸಾಕಾಣಿಕೆ ಕೇಂದ್ರದ ಮಾಲೀಕರಿಗೂ ಮನವಿ ಮಾಡಿದ್ದೇವೆ ಆದರೂ ವಾಸನೆ ನಿಂತಿಲ್ಲ ಎಂದು ಬೈರಸಂದ್ರ ಗ್ರಾಮದ ನಿವಾಸಿ ಸಾಗರ್ ತಿಳಿಸಿದರು.

    ಗ್ರಾಮದಲ್ಲಿ ಹಂದಿ ಸಾಕಾಣಿಕೆ ಕೇಂದ್ರದಿಂದ ಉಂಟಾಗುತ್ತಿರುವ ಕೆಟ್ಟ ವಾಸನೆ ತಡೆಗಟ್ಟುವಂತೆ ಆಗ್ರಹಿಸಿ ಮಾತನಾಡಿದ ಅವರು ನಮ್ಮ ಗ್ರಾಮದಲ್ಲಿ ಹಂದಿ ಸಾಗಾಣಿಕೆ ಮಾಡಲಾಗುತ್ತಿದೆ ಅದರಿಂದ ಸಾಕಷ್ಟು ಕೆಟ್ಟ ವಾಸನೆ ಉಂಟಾಗಿ ಗ್ರಾಮದ ತುಂಬೆಲ್ಲ ಹಬ್ಬುತ್ತಿದೆ . ಈ ವಾಸನೆಯೂ ದಿನೇ ದಿನೇ ಹೆಚ್ಚಾಗುತ್ತಿದ್ದು ಮನೆಯಲ್ಲಿ ಊಟ ಮಾಡಲು ಸಹ ಆಗುತ್ತಿಲ್ಲ, ಮನೆಗೆ ಬರುವ ಸಂಬಂಧಿಕರು ವಾಸನೆಯಿಂದಾಗಿ ಮನೆಗೆ ಬಾರದಂತಾಗಿದ್ದಾರೆ. ಹಲವಾರು ಬಾರಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರು ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ , ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಸನೆ ಬಾರದಂತೆ ಕ್ರಮ ಕೈಗೊಳ್ಳಬೇಕು ಇಲ್ಲವೇ ಹಂದಿ ಸಾಕಾಣಿಕೆ ಕೇಂದ್ರವನ್ನು ಸ್ಥಳಾಂತರಗೊಳಿಸಬೇಕು ಎಂದು ಅಗ್ರಹಿಸಿದರು.

    ಕೆರೆಗೆ ನಾವು ಕೆಮಿಕಲ್ ಬಿಡುತ್ತಿಲ್ಲ – ಸಾಗರ್

    ಕೋಳಿ ಮೋಸ ಸಂಸ್ಕರಣೆಗೆ ಬಳಸುವ ಕೆಮಿಕಲ್ ಅನ್ನು ತಮ್ಮ ಜಮೀನಿಗೆ ಬಿಟ್ಟುಕೊಳ್ಳುತ್ತಿದ್ದಾರೆ ಮಳೆ ಬಂದಾಗ ಆ ಕೆಮಿಕಲ್ ನೀರು ಕೆರೆ ಸೇರುತ್ತದೆ ಎಂದು ಹಂದಿ ಸಾಕಾಣಿಕೆ ಕೇಂದ್ರದ ಮಾಲೀಕ ದಿವಾಕರ್ ಮಾಡಿದ್ದ ಆರೋಪಗಳು ತಳ್ಳಿ ಹಾಕಿರುವ ಸಾಗರ್ ನಾವು ಕೋಳಿ ಮಾಂಸ ಸಂಸ್ಕರಣೆಗೆ ಯಾವುದೇ ಕೆಮಿಕಲ್ ಬಳಸುವುದಿಲ್ಲ. ಅಲ್ಲದೆ ಸಂಸ್ಕರಣ ಘಟಕದಲ್ಲಿ ಬಳಸುವ ನೀರನ್ನು ಶುದ್ಧೀಕರಿಸಿ ತದನಂತರ ವ್ಯವಸಾಯಕ್ಕೆ ಬಳಸಲಾಗುತ್ತಿದೆ. ನಮ್ಮಲ್ಲಿ ಯಾವುದೇ ಕೆಮಿಕಲ್ ಬಳಕೆ ಇಲ್ಲ.ನಾವು ಕೆರೆಗೆ ಕೆಮಿಕಲ್ ಬಿಡುತ್ತಿಲ್ಲ ಎಂದು ತಿಳಿಸಿದ್ದಾರೆ.

    ಸ್ಥಳೀಯವಾಗಿ ಕಾರ್ಯ ನಿರ್ವಹಿಸುತ್ತಿರುವ ಹಂದಿ ಫಾರಂ ನಿಂದ ದುರ್ವಾಸನೆ ಬರುತ್ತಿದ್ದು ಮನೆಗಳಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಮಾಲೀಕರಿಗೆ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಈಗಾಗಲೇ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಈಗಲಾದರೂ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತು ಹಂದಿ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ವಹಿಸುವಂತೆ ತಿಳಿಸಬೇಕು, ಈ ವಾಸನೆಯ ಕಾರಣದಿಂದಾಗಿ ಜನರು ರಸ್ತೆಯಲ್ಲಿ ಓಡಾಡುವುದನ್ನು ಬಿಟ್ಟಿದ್ದಾರೆ. ಪ್ರತಿನಿತ್ಯ ವಾಸನೆಯಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದೆ ನಾವು ತಾಳ್ಮೆಯಿಂದ ಜೀವನ ಸಾಗಿಸಿದ್ದೇವೆ ನಮ್ಮ ತಾಳ್ಮೆಗೂ ಮಿತಿಯಿದೆ ಎಂದು ಸ್ಥಳೀಯ ಗ್ರಾಮಸ್ಥರು ತಮ್ಮ ಆಕ್ರೋಶವ್ಯಕ್ತಪಡಿಸಿದ್ದಾರೆ.

  • ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ಭಾರತ ಹೊಂದಿದೆ – ಹುಲಿಕಲ್ ನಟರಾಜು

    ದೊಡ್ಡಬಳ್ಳಾಪುರ : ಪ್ರತಿಯೊಬ್ಬ‌ ಭಾರತೀಯರ ಅಭಿಮಾನದ ದಿನಾಚರಣೆ ಗಣರಾಜ್ಯೋತ್ಸವ ಆಗಿದೆ. ಪ್ರಜೆಗಳಿಂದಲೇ ಪ್ರಜೆಗಳಿಗಾಗಿ ಆಡಳಿತ ನಡೆಸುವ ಪ್ರಜಾಪ್ರಭುತ್ವ ವ್ಯವಸ್ಥೆಯ ನಿಜವಾದ ಅಸ್ತಿತ್ವ ಸ್ಥಾಪನೆಯಾದ ದಿನವೇ ಗಣರಾಜ್ಯೋತ್ಸವ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕವಾಗಿ ಸಂಶೋಧನಾ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ತಿಳಿಸಿದರು.

    ಅವರು  ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾ ಮಂದಿರದ ಆವರಣದಲ್ಲಿ ನಡೆದ 77 ನೇ  ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ  ಮಾತನಾಡಿದರು. ಪ್ರಜಾಪ್ರಭುತ್ವದ ಮೌಲ್ಯಗಳು, ಕಾನೂನಿನ ಆಳ್ವಿಕೆ ಮತ್ತು ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿಯುವ ಮೂಲಕ ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ಭಾರತ ಹೊಂದಿದೆ. ಭಾರತದ ಭಾವೈಕ್ಯತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಭಾರತೀಯರು ಮಾಡಬೇಕಾಗಿದೆ ಎಂದರು.

    ದೊಡ್ಡಬಳ್ಳಾಪುರ ಮಹಿಳಾ ಸಮಾಜದ ಅಧ್ಯಕ್ಷೆ ವತ್ಸಲಾ ಮಾತನಾಡಿ,   ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶಪ್ರೇಮದ ಸಂಕೇತವಾಗಿ, ಜನರಲ್ಲಿ ಏಕತೆ ಮತ್ತು ಬ್ರಿಟಿಷರ ವಿರುದ್ಧ ಹೋರಾಡುವ ಸ್ಫೂರ್ತಿಯನ್ನು ಮೂಡಿಸಿದ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದೆ. ಈ ಗೀತೆಯಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ತ್ಯಾಗವನ್ನು ಸದಾ ನೆನಪಿಸುತ್ತದೆ ಎಂದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಜವಾಬ್ದಾರಿಯನ್ನು ನೆನಪಿಸುವ ನಮ್ಮ ಸಂವಿಧಾನದಲ್ಲಿ ದೇಶದ ಅಭಿವೃದ್ಧಿಗೆ ಸೂಕ್ತ ನಾಯಕರನ್ನು ಆರಿಸುವ ಮತದಾನ ಹಕ್ಕು ಪ್ರಧಾನ ಅಂಶವಾಗಿದೆ. ಪ್ರಬುದ್ಧ ಮತ್ತು ನೈತಿಕ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ಅವಕಾಶ ಭಾರತೀಯರಿಗೆ ಇದೆ ಎಂದರು.

    ಕಾರ್ಯಕ್ರಮದಲ್ಲಿ  ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು, ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್, ಗೌರವ ಕಾರ್ಯದರ್ಶಿ ಎ.ಜಯರಾಮ್,  ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು,  ಕಸಬಾ ಹೋಬಳಿ ಘಟಕದ ಅಧ್ಯಕ್ಷ    ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜು, ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಸಿ ಅಣ್ಣಯ್ಯ,  ನಿವೃತ್ತ ಮುಖ್ಯಶಿಕ್ಷಕ ಕೆ.ವಿ.ವೆಂಕಟೇಶರೆಡ್ಡಿ,  ಪ್ರಾಂಶುಪಾಲ ಎಂ.ಸಿ.ಮಂಜುನಾಥ್,  ಕಸಾಪ ಪ್ರತಿನಿಧಿಗಳಾದ ಕೋದಂಡರಾಮ್,  ಮುನಿರಾಜು, ರಂಗಸ್ವಾಮಯ್ಯ, ಸಫೀರ್,  ಕಲಾವಿದರಾದ ಬಾಶೆಟ್ಟಿಹಳ್ಳಿ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.

     

  • ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ 10ನೇ ವರ್ಷದ ವಾರ್ಷಿಕೋತ್ಸವ : ಅನ್ನದಾಸೋಹ,ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ ಮೂಲಕ ಸಂಭ್ರಮಾಚರಣೆ   

    ದೊಡ್ಡಬಳ್ಳಾಪುರ : ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯು ತನ್ನ ಹತ್ತನೇ ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ನಿರ್ಗತಿಕ ಕಡುಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳನ್ನು ಹಾಗೂ ಸಿಹಿ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿತು.

    ತಾಲೂಕಿನ ದರ್ಗಾಜೋಗಿಹಳ್ಳಿಯಲ್ಲಿ ಆಯೋಜನೆ ಮಾಡಲಾಗಿದ್ದ 77ನೇ ಗಣರಾಜ್ಯೋತ್ಸವ ಹಾಗೂ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ 10ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಮಿತಿಯ ಸಂಸ್ಥಾಪಕರು, ಖ್ಯಾತ ವಕೀಲರು ಆದ ರವಿ ಮಾವಿನಕುಂಟೆ ಭಾಗವಹಿಸಿ ಮಾತನಾಡಿದರು, ಇಂದು ನಮ್ಮ ಸಂಘಟನೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂದಿದೆ. ನಿಸ್ವಾರ್ಥ ಸೇವಾ ಮನೋಭಾವದಿಂದ ನಿರಂತರ ವಿಶೇಷ ಕಾರ್ಯಕ್ರಮಗಳ ರೂಪಿಸುವ ಮೂಲಕ ಸಾರ್ವಜನಿಕರಿಗೆ ಕೈಲಾದ ಸೇವೆಯನ್ನು ನಮ್ಮ ಸಮಿತಿ ಮಾಡುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಪ್ರಮುಖವಾಗಿ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ.ಸದಾ ವಿಶೇಷ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜಕ್ಕೆ ಮಾದರಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಸಮಿತಿಯ ಎಲ್ಲ ಸದಸ್ಯರಿಗೂ, ಹಾಗೂ ನಮ್ಮ ಸಮಿತಿಯ ಎಲ್ಲಾ ಕಾರ್ಯಕ್ರಮಗಳಿಗೂ ಸದಾ ಬೆಂಬಲವಾಗಿ ಶ್ರಮಿಸುವ ಮಲ್ಲೇಶ್ ಅವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು .

    ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಸುಬ್ರಮಣಿ ಮಾತನಾಡಿ ಕನ್ನಡ ನಾಡು,ಜಲ, ಭಾಷೆ ವಿಚಾರವಾಗಿ ಸಮಿತಿಯ ಸಂಸ್ಥಾಪಕರಾದ ರವಿ ಮಾವಿನಕುಂಟೆ ಅವರ ಮಾರ್ಗದರ್ಶನದಲ್ಲಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ . ಅಲ್ಲದೆ ವಿವಿಧ ಸಾಮಾಜಿಕ ಕಾರ್ಯಗಳಲ್ಲೂ ನಮ್ಮ ಸಮಿತಿ ತೊಡಗಿರುವುದು ವಿಶೇಷ ಸದಾ ನೊಂದವರ ಧ್ವನಿಯಾಗಿ ಅನ್ಯಾಯದ ವಿರುದ್ಧ ಹೋರಾಟ ನಡೆಸುವುದು ನಮ್ಮ ಸಮಿತಿಯ ಹೆಮ್ಮೆ ಎಂದರೆ ತಪ್ಪಾಗಲಾರದು.

    ನಮ್ಮ ಸಮಿತಿಯ ಹತ್ತನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಉಪಯುಕ್ತ ಕಲಿಕಾ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ಮಕ್ಕಳೊಂದಿಗೆ ಇಂದಿನ ದಿನವನ್ನು ಅರ್ಥಪೂರ್ಣವಾಗಿ ಕಳೆದಿದ್ದೇವೆ. ಅಲ್ಲದೆ ವಯೋವೃದ್ಧರಿಗೆ ಕಡು ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ನಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದೇವೆ ಹತ್ತು ವರ್ಷಗಳು ಕಳೆದಿವೆ ನಮ್ಮ ಜವಾಬ್ದಾರಿ ಹೆಚ್ಚಾಗಿದೆ ನಮ್ಮ ಸಮಿತಿ ವತಿಯಿಂದ ಸಮಾಜಕ್ಕೆ ಮತ್ತಷ್ಟು ಉತ್ತಮ ಕಾರ್ಯಗಳನ್ನು ಲಭಿಸುವಂತಗಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ ಎಂದರು.

     

    ಕಾರ್ಯಕ್ರಮದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸುಬ್ರಮಣಿ, ಕಾರ್ಮಿಕ ಘಟಕದ ಅಧ್ಯಕ್ಷ ಆನಂದ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ,ತಾಲ್ಲೂಕು ಅಧ್ಯಕ್ಷ ಶ್ರೀರಾಮ್, ಬಸವರಾಜ್ ಎಸ್ ಎಂ ಗೊಲ್ಲಹಳ್ಳಿ, ಅನಿಲ್ ರೆಡ್ಡಿ,ವಿಠಲ್ ರಾವ್, ದೇಶಪಾಂಡೆ, ರಮೇಶ್ ಸೊಣಪನಹಳ್ಳಿ, ಶಿವು ತಿಪ್ಪಾಪುರ,ಪರ್ದೀನ್ ಖಾನ್,ಮುನೀರ್ ಬಾಬು ಎಸ್. ಎನ್, ರಂಗಸ್ವಾಮಿ, ಚಂದ್ರಶೇಖರ್ ಸೇರಿದಂತೆ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಪದಾಧಿಕಾರಿಗಳು ಹಾಜರಿದ್ದರು

  • ದೊಡ್ಡಬಳ್ಳಾಪುರ : 77ನೇ ಗಣರಾಜ್ಯೋತ್ಸವ ದಿನಾಚರಣೆ : ಪತ್ರಕರ್ತರು, ಪೊಲೀಸ್, ಪೌರಕಾರ್ಮಿಕರಿಗೆ ಸನ್ಮಾನ

    ದೊಡ್ಡಬಳ್ಳಾಪುರ : “77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ “ರಾಷ್ಟ್ರ ಧ್ವಜಾರೋಹಣ” ನೆರವೇರಿಸಿ, ತ್ರಿವರ್ಣ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.

     

    ಇದಕ್ಕೂ ಮುನ್ನ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.

     

    ನಂತರ ‌ಪತ್ರಕರ್ತ ಗುರುಪ್ರಸಾದ್, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ಸಾದಿಕ್ ಪಾಷಾ, ಪೌರಕಾರ್ಮಿಕರಾದ ಮುತ್ಯಾಲಕ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು…

     

    ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್, ತಹಶೀಲ್ದಾರ್ ಮಲ್ಲಪ್ಪ, ಬಿಇಒ ಶಂಕ್ರಪ್ಪ, ತಾ.ಪಂ ಇಒ ಮಂಜುನಾಥ್ ಹರ್ತಿ, ನಗರಸಭಾ ಪೌರಾಯುಕ್ತ ಕಾರ್ತಿಕೇಶ್ವರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ : ತ್ರಿವರ್ಣ ಬಾವುಟದಂತೆ ಕಂಗೊಳಿಸಿದ ಆಸ್ಪತ್ರೆ 

     

    ದೊಡ್ಡಬಳ್ಳಾಪುರ : ಗಣರಾಜ್ಯೋತ್ಸವದ ಅಂಗವಾಗಿ ತ್ರಿವರ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಲ್ಲಿ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಕಂಗೊಳಿಸುತ್ತಿದೆ.

    ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಜನವರಿ 26ರ ಗಣರಾಜ್ಯೋತ್ಸವದ ಆಚರಣೆ ಸಲುವಾಗಿ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಸಂಭ್ರಮಿಸಿದೆ.

    ಹೌದು ತ್ರಿವರ್ಣ ಧ್ವಜವನ್ನು ಪ್ರತಿನಿಧಿಸುವ ಕೇಸರಿ ಬಿಳಿ ಹಸಿರು ಬಣ್ಣಗಳ ವಿದ್ಯುತ್ ದೀಪಗಳನ್ನು ಬಳಸಿ ಆಸ್ಪತ್ರೆಯನ್ನು ವಿಶೇಷವಾಗಿ ಕಾಣುವಂತೆ ಮಾಡಲಾಗಿದೆ. ಸಾರ್ವಜನಿಕ ಆಸ್ಪತ್ರೆ ಸುಂದರವಾಗಿ ಕಾಣುತ್ತಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

     

     

  • ಸ್ಕೈ ಎಜುಕೇಷನಲ್ ಟ್ರಸ್ಟ್ ವತಿಯಿಂದ ಮಂಥನ-2026 ಕಾರ್ಯಕ್ರಮ : ಪೋಷಕರ ಗಮನ ಸೆಳೆದ ಪುಟಾಣಿಗಳು 

    ದೊಡ್ಡಬಳ್ಳಾಪುರ : ಮಕ್ಕಳ ಶೈಕ್ಷಣಿಕ ಸಾಧನೆ ಜೊತೆಗೆ ಕ್ರೀಡೆ ಹಾಗೂ ಸಂಸ್ಕೃತಿಕ ಚಟುವಟಿಕೆಗಳು ಅತ್ಯಗತ್ಯವಾಗಿರುತ್ತದೆ . ಈ ನಿಟ್ಟಿನಲ್ಲಿ ಪ್ರತಿ ವರ್ಷ ನಡೆಸುವ ವಾರ್ಷಿಕೋತ್ಸವ ಸಮಾರಂಭವು ವಿಶೇಷವಾಗಿರುತ್ತದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸ್ಕೈ ಎಜುಕೇಷನಲ್ ಟ್ರಸ್ಟ್ ಸದಾ ಶ್ರಮಿಸುತ್ತದೆ ಎಂದು ಲೋಕನಾಥ್ ಏಸ್ ಕೃಷ್ಣ ತಿಳಿಸಿದರು.

    ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಸರ್ ಎಂ ವಿಶ್ವೇಶ್ವರಯ್ಯ ಆಂಗ್ಲ ಶಾಲೆ ಹಾಗೂ ಐ ಪ್ಲೇ ಐ ಲರ್ನ್ ಫೌಂಡೇಶನ್ ಶಾಲೆಯ ವಾರ್ಷಿಕೋತ್ಸವ(ಮಂಥನ-2026) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಮಕ್ಕಳಿಗೆ ಆಟದಿಂದ ಪಾಠವನ್ನು ಕಲಿಸುವ ವಿನೂತನ ಶಿಕ್ಷಣ ತಂತ್ರಗಳಲ್ಲಿ ಪರಿಣಿತಿ ಹೊಂದಿರುವ ಶಿಕ್ಷಕರ ತಂಡವನ್ನು ಹೊಂದಿರುವ ನಮ್ಮ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಉತ್ತಮ ಶಿಕ್ಷಣ ನೀಡುತ್ತಿದ್ದು ಶಿಕ್ಷಣಕ್ಕೆ ಸೀಮಿತವಾಗದೆ ಕ್ರೀಡೆ ವಿಜ್ಞಾನ ಸಂಸ್ಕೃತಿಗಳಲ್ಲಿ ಮಕ್ಕಳ ವಿಶೇಷ ಸಾಮರ್ಥ್ಯಗಳನ್ನು ಹೊರ ತರುವ ಮೂಲಕ ಸಾರ್ಥಕ ಸೇವೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು .

     

    ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಉಪನಿರ್ದೇಶಕರಾದ ಅಶ್ವತಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ, ಡಾ. ಪಿ ಏಸ್ ಲಕ್ಷ್ಮಿ ನಾರಾಯಣ್, ಎಂ ನಾಗೇಶ್, ಸಿ ಆರ್ ಪಿ ಮುತ್ತುರಾಜ್ ಶಾಲೆಯ ಅಧ್ಯಕ್ಷರಾದ ಲೋಕನಾಥ್ ಏಸ್ ಕೃಷ್ಣ ಮೊದಲಾದ ಗಣ್ಯರೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಲಾಯಿತು.

    ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಪೋಷಕರು ಭಾಗವಹಿಸಿ ಕಾರ್ಯಕ್ರಮ ಹಾಗೂ ಶಾಲೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.

     

    ಪ್ರಸ್ತುತ ಸಾಲಿನ ಪರೀಕ್ಷೆಗಳು ಇನ್ನೇನು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಹೆಚ್ಚಿನ ಗಮನವನ್ನು ಕೊಡುತ್ತಾ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಉಪನಿರ್ದೇಶಕರಾದ ಅಶ್ವತಮ್ಮ ತಿಳಿಸಿದರು.

     

    ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಶಾಲಾ ಅಧ್ಯಕ್ಷರಿಗೆ ಸನ್ಮಾನ 

    ಜನವರಿ 12ರಂದು ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ” ಸರ್ ಎಂ ವಿಶ್ವೇಶ್ವರಯ್ಯ ಶಾಲೆಯ ಅಧ್ಯಕ್ಷರಾದ ಲೋಕನಾಥ್ ಎಸ್ ಕೃಷ್ಣರವರಿಗೆ “ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸ್ಪೂರ್ತಿ ಪ್ರಶಸ್ತಿ – 2026 ” ಪ್ರಶಸ್ತಿ ಲಭಿಸಿದ್ದು. ಇವರ ಸಾಧನೆ ಗುರುತಿಸಿ ದೊಡ್ಡಬಳ್ಳಾಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕರಯ್ಯ ಹಾಗೂ ಬಿ ಆರ್ ಸಿ ನಾರಾಯಣ ಸ್ವಾಮಿ ಯವರು ಲೋಕನಾಥ್ ಅವರನ್ನು ಸನ್ಮಾನಿಸಿ ಗೌರವಿಸಿದರು.

     

    ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಮಾತನಾಡಿ ಶಾಲೆಯಲ್ಲಿ ಪ್ರತಿ ಮಗುವಿಗೂ ವಿಶೇಷ ಗಮನ ಕೊಡುವ ಮೂಲಕ ಮಕ್ಕಳಲ್ಲಿನ ವಿಶೇಷ ಗುಣಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯ ಎಲ್ಲಾ ಶಾಲೆಗಳಲ್ಲಿಯೂ ಆಗಬೇಕಿದೆ. ಉತ್ತಮ ಶೈಕ್ಷಣಿಕ ಬೆಳವಣಿಗೆ ಜೊತೆಜೊತೆಗೆ ಕಲೆ, ಸಂಸ್ಕೃತಿ, ಕ್ರೀಡೆ, ಹಾಗೂ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಶ್ರಮ ಅತ್ಯಗತ್ಯ ಎಂದರು.

     

     

    ಈ ವೇಳೆ ಡಾ. ಪಿ ಏಸ್ ಲಕ್ಷ್ಮಿ ನಾರಾಯಣ್, ಎಂ ನಾಗೇಶ್, ಸಿ ಆರ್ ಪಿ ಮುತ್ತುರಾಜ್, ಕೆ ವಿ ಪಾಪಣ್ಣ, ಲತಾ ಹಾಗೂ ಸ್ಕೈ ಶಿಕ್ಷಣ ಸಂಸ್ಥೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪೋಷಕರು ಹಾಜರಿದ್ದರು .