Blog

  • ಶುದ್ಧ ನೀರಿಗಾಗಿ ಗ್ರಾಮಸ್ಥರ ಹೋರಾಟ : ರೈತರ ಪ್ರತಿಭಟನೆಗೆ ಕರವೇ ಸಾಥ್ | ಹೋರಾಟದಲ್ಲಿ ನಾವು ಭಾಗವಹಿಸುತ್ತೇವೆ – ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ  

    ದೊಡ್ಡಬಳ್ಳಾಪುರ : ತಾಲ್ಲೂಕಿನ ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕೆರೆಗೆ ಸಂಸ್ಕರಿಸದ ಕಲುಷಿತ ನೀರನ್ನು ಹರಿಸದಂತೆ ಅಗ್ರಹಿಸಿ ಅರ್ಕಾವತಿ ನದಿ ಪಾತ್ರ ಕೆರೆಗಳ ಹೋರಾಟ ವೇದಿಕೆ ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ರಕ್ಷಣಾ ವೇದಿಕೆ(ಟಿ ಎ ನಾರಾಯಗೌಡರ ವೇದಿಕೆ) ಬೆಂಬಲ ಸೂಚಿಸಿದೆ.

    ಹೌದು ಜಲ ಸಂಪನ್ಮೂಲ ಉಳಿಸುವಂತೆ ಆಗ್ರಹಿಸಿ ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾಕಾರರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಬೆಂಬಲ ಸೂಚಿಸಿದ್ದಾರೆ.

     

     

    ಈ ಕುರಿತು ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸ್ಥಳೀಯ ರೈತರು ದೊಡ್ಡ ತುಮಕೂರು ಕೆರೆಗೆ ಕಾರ್ಖಾನೆಗಳಿಂದ ಹರಿದು ಬರುತ್ತಿರುವ ಕಲುಷಿತ ನೀರನ್ನು ಹಾಗೂ ದೊಡ್ಡಬಳ್ಳಾಪುರ ನಗರದಿಂದ ಹರಿದು ಹೋಗುವ ಕೊಳಚೆ ನೀರನ್ನು ಶುದ್ದಿಕರಿಸಿ ಕೆರೆಗೆ ಬಿಡುವಂತೆ ಆಗ್ರಹಿಸಿ ಕೆರೆಗೆ ಬಿಡುವಂತೆ ಆಗ್ರಹಿಸಿ ಹಲವಾರು ರೀತಿ ಪ್ರತಿಭಟನೆ ನಡೆಸಿದರು ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ರೈತರ ತಾಳ್ಮೆಗೂ ಮಿತಿ ಇದೆ ರೈತರು ಹೋರಾಟಗಾರರು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದರು.

     

     

    ಅಲ್ಲದೆ ನಾಡು-ನುಡಿ ಜಲ ಭಾಷೆ ವಿಚಾರ ಬಂದಾಗ ನಮ್ಮ ಟಿ ಎ ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ ಸದಾ ಮುಂದೆ ಇರುತ್ತದೆ. ರೈತರಿಗೆ ಸಮಸ್ಯೆ ಉಂಟಾದಾಗ ಇತರೆ ಸಂಘ ಸಂಸ್ಥೆಗಳಿಗಿಂತ ಮೊದಲು ಕಾರ್ಯರ್ಮುಖರಾಗಿ ಅವರ ಬೆಂಬಲಕ್ಕೆ ನಿಂತು ಹೋರಾಟಕ್ಕೆ ಮುಂದಾಗುವುದು ನಮ್ಮ ಕರವೇ ದೊಡ್ಡ ತುಮಕೂರು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಹೋರಾಟಕ್ಕೆ ರಾಜ್ಯಾಧ್ಯಕ್ಷರಾದ ಟಿಎ ನಾರಾಯಣಗೌಡರ ಆದೇಶದ ಮೇರೆಗೆ ಜಿಲ್ಲಾ ಹಾಗೂ ತಾಲೂಕು ಘಟಕಗಳು ಬೆಂಬಲ ನೀಡುತ್ತಿದ್ದು ನಾವು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇವೆ ಎಂದರು.

     

    ಹಲವಾರು ಬಾರಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ,ಕೆರೆ ನೀರು, ಕೊಳವೆ ಬಾವಿ ನೀರು, ಶುದ್ಧ ಕುಡಿಯುವ ಘಟಕದ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ, ಗ್ರಾಮ ಪಂಚಾಯಿತಿಯ 2023ರಲ್ಲಿ ಎರಡು ಪಂಚಾಯಿತಿಯ 36 ಕೊಳವೆ ಬಾವಿಗಳಿಗೆ 34 ಕೊಳವೆ ಭಾವಿಗಳು ಉಪಯೋಗಿಸಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ.ಕೊಳವೆ ಬಾವಿಗಳಲ್ಲಿ ಕಪ್ಪು ನೀರು ಬರುತ್ತಿದೆ ಇಷ್ಟೆಲ್ಲ ಸಮಸ್ಯೆಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು ಅದ್ಯಾಕೋ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದರು.

     

     

    ಈ ಹಿಂದೆ ಜಿಲ್ಲಾಧಿಕಾರಿಗಳು ಇನ್ನು ನಾಲ್ಕು ತಿಂಗಳಲ್ಲಿ STP ಘಟಕ ಶುರು ಮಾಡುತ್ತೇವೆ ಎಂದು ತಿಳಿಸಿದರು ಎರಡು ವರ್ಷ ಕಳೆದರೂ ಇನ್ನೂ ಶುರು ಮಾಡಿಲ್ಲ. ಬೀದಿ ನಾಯಿಗಳಿಗೆ ಕೋಳಿ ಮಾಂಸ ಹಾಕಲು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ ಒಂದು ನದಿ ಉಳಿಸಲು ಜನರ ಆರೋಗ್ಯ ಕಾಪಾಡಲು ಹಣ ಇಲ್ಲ ಎಂಬುವುದು ಯಾವ ನ್ಯಾಯ. ನಾಯಿಗಿಂತ ಕಡೆಯಾಗಿ ಹೋಯಿತೇ ಜನರ ಬಾಳು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

     

    ರೈತರ ಹೋರಾಟ ಕುರಿತು ಮುಖಂಡರಾದ ವಸಂತ್ ಕುಮಾರ್ ಅವರೊಂದಿಗೆ ಮಾತನಾಡಿದ್ದೇನೆ ನಾಳೆಯಿಂದ  ನಾವು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, ಪ್ರತಿ ಬಾರಿ ಅಧಿಕಾರಿಗಳ ವರ್ಗ ಪ್ರತಿಭಟನಾ ಸ್ಥಳಕ್ಕೆ  ಭೇಟಿ ಕೊಟ್ಟು ಸಾಂತ್ವನ ಹೇಳುವ ಮೂಲಕ ಸಂಧಾನಕ್ಕೆ ಮುಂದಾಗುವುದು ನಂತರ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗುವುದು  ಸರ್ವೇಸಾಮಾನ್ಯವಾಗಿದೆ . ಈ ಬಾರಿಯಾದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರ ಜೀವ ಉಳಿಸುವ ಕಾರ್ಯ ಮಾಡಬೇಕಾಗಿದೆ ಇಲ್ಲಾವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದರು ತಿಳಿಸಿದರು.

  • ದರ್ಗಾಜೋಗಿಹಳ್ಳಿಯಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ : ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅಂಗನವಾಡಿ ಪೂರಕ: ಸಚಿವ ಕೆ.ಹೆಚ್ ಮುನಿಯಪ್ಪ

    ದೊಡ್ಡಬಳ್ಳಾಪುರ : ಮಕ್ಕಳ ಬೌದ್ಧಿಕ ಬೆಳವಣಿಗೆ ಪಡೆದುಕೊಳ್ಳಲು ಪೂರ್ವ ಪ್ರಾಥಮಿಕ ಶಿಕ್ಷಣದ ಪಾತ್ರ ಪ್ರಮುಖವಾಗಿದ್ದು, ಮಾಜಿ ಪ್ರಧಾನಿ ಇಂದಿರಾಗಾಂಧಿ ಕಾಲದಲ್ಲಿ ಅಂಗನವಾಡಿಗಳ ಸ್ಥಾಪನೆ ಆರಂಭಿಸಿ, ಪೌಷ್ಟಿಕ ಆಹಾರದ ಜತೆಗೆ ಉಚಿತವಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಲಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ  ಹೇಳಿದರು.

     

    ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಾಜೋಗಿಹಳ್ಳಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ನಿವೇಶನ ಸೌಲಭ್ಯವನ್ನು ಸ್ಥಳೀಯ ಗ್ರಾಮ ಪಂಚಾಯಿತಿಗಳು ಒದಗಿಸಲು ಸಹಕರಿಸಬೇಕು. ಇದರಿಂದ 6 ವರ್ಷದೊಳಗಿನ ಪ್ರತಿಯೊಬ್ಬ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಅನುಕೂಲವಾಗುತ್ತದೆ ಎಂದರು.

     

    ಜಿಲ್ಲೆಯಲ್ಲಿ 139 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡಗಳಿದ್ದು, 40 ಕಡೆ ಖಾಲಿ ನಿವೇಶನಗಳನ್ನು ಗುರುತಿಸಲಾಗಿದೆ. ಸದ್ಯ 40 ಅಂಗನವಾಡಿ ಕಟ್ಟಡ ನಿರ್ಮಾಣ ಹಂತದಲ್ಲಿವೆ ಎಂದು ಹೇಳಿದರು.

     

    ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು ಮಾತನಾಡಿ, ಅಂಗನವಾಡಿ ಬಾಡಿಗೆ ಕಟ್ಟಡದ ದರವನ್ನು 6,000 ದಿಂದ 10,000 ಕ್ಕೆ ಏರಿಸಿದರೆ ಉತ್ತಮ, ನಗರಸಭೆ ವಾರ್ಡ್ ಗಳಲ್ಲಿ 1000 ಜನಕ್ಕಿಂತ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚುವರಿ ನ್ಯಾಯಬೆಲೆ ಅಂಗಡಿ ಸ್ಥಾಪಿಸಲು, ಕಾವೇರಿ ನೀರು ಹಾಗೂ ಮೆಟ್ರೋ ಸಂಪರ್ಕ ದೊಡ್ಡಬಳ್ಳಾಪುರಕ್ಕೆ ಒದಗಿಸಲು ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.

     

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ವಿಶ್ವನಾಥ್ ರೆಡ್ಡಿ, ದರ್ಗಾಜೋಗಹಳ್ಳಿ ಗ್ರಾ.ಪಂ ಅಧ್ಯಕ್ಷರಾದ ಶಶಿಕಲಾ ನಾಗರಾಜು, ಉಪಾಧ್ಯಕ್ಷರಾದ ಶೋಭಾ ಭಾಯಿ, ಇಒ ಮಂಜುನಾಥ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜಘಟ್ಟ ಗ್ರಾಮದ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ

     

    ದೊಡ್ಡಬಳ್ಳಾಪುರ : ಕೆರೆ ಹೂಳೆತ್ತುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಪ್ರಾಣಿ ಹಾಗೂ ಸಸ್ಯ ಸಂಕುಲಕ್ಕೆ ಜಲ ಮೂಲ ಅತೀ ಅಮೂಲ್ಯವಾದದ್ದು ಅದನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ದೇಶಕ ಉಮಾರಬ್ಬ ತಿಳಿಸಿದರು.

     

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ರಾಜಘಟ್ಟ ಗ್ರಾಮದ ನಂದಿಕುಂಟೆ ಕೆರೆಯ ಹೂಳೆತ್ತುವ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ದಿನೇ ದಿನೇ ಜಲ ಮೂಲಗಳು ಸಂಪೂರ್ಣ ಕಣ್ಮರೆಯಾಗುತ್ತಿವೆ. ಅನ್ನದಾತ ರೈತರಿಗೆ ಆಧಾರವಾದ ವ್ಯವಸಾಯಕ್ಕೆ ನೀರನ್ನು ಒದಗಿಸುವ ಕೆರೆಗಳು ಸಂಪೂರ್ಣ ನೆಲಕಚ್ಚಿವೆ. ರೈತರ ಉಳಿವಿಗಾಗಿ ಜನರ ಸಮೃದ್ಧ ಜೀವವಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರೀ ವೀರೇಂದ್ರ ಹೆಗ್ಗಡೆ ಯವರ ನೇತೃತ್ವದಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮವು ಗ್ರಾಮೀಣ ಭಾಗದ ಜನರಲ್ಲಿ ಹೊಸ ಚೇತನ ಮೂಡಿಸಲಿದೆ ಎಂದರು.

     

    ಕಾರ್ಯಕ್ರಮದಲ್ಲಿ ರಾಜಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುನಿರಾಜು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಣ್ಣ, ತಾಲೂಕು ಯೋಜನಾಧಿಕಾರಿಗಳಾದ ದಿನೇಶ್ ಕೆರೆ ಸಮಿತಿ ಕಾರ್ಯದರ್ಶಿ ಗಣೇಶ್, ಮಹೇಶ್ ಸದಸ್ಯರಾದ ಬೈರೆಗೌಡ,ಶಿವಣ್ಣ,ಶಿವಕುಮಾರ್,ಶೇಖರ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರ್, ಒಕ್ಕೂಟದ ಅಧ್ಯಕ್ಷರಾದ ಭಾರತಿ,ವಿಜಯಮ್ಮ ಹಾಗೂ ಕೆರೆ ನೋಡೆಲ್ ಅಧಿಕಾರಿ ಹಾಗೂ ತಾಲೂಕು ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ ,ವಲಯ ಮೇಲ್ವಿಚಾರಕರಾದ ರಘು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ ಹಿಂದೂ ಸಮಾಜ್ಯೋತ್ಸವ : ಬೃಹತ್ ಶೋಭಯಾತ್ರೆಗೆ ಸಕಲ ಸಿದ್ಧತೆ 

    ದೊಡ್ಡಬಳ್ಳಾಪುರ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಶತಮಾನೋತ್ಸವದ ಸುಸಂದರ್ಭದಲ್ಲಿ  ಹಿಂದೂ ಸಮಾಜ್ಯೋತ್ಸವ ಸಮಿತಿ, ತಾಲ್ಲೂಕಿನ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಹಾಗೂ ಇತರೆ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಜ.28 ಮತ್ತು ಜ. 29 ತಾರೀಕಿನಂದು ಹಿಂದೂ ಸಮಾಜ್ಯೋತ್ಸವ ಆಯೋಜನೆ ಮಾಡಲಾಗಿದೆ ಎಂದು ಹಿಂದೂ ಮುಖಂಡರಾದ ಹನುಮಂತರಾಯಪ್ಪ ತಿಳಿಸಿದರು.

     

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಂಪಿ ಹೇಮಕೂಟ ಗಾಯತ್ರಿ ಪೀಠ ಮಹಾಸಂಸ್ಥಾನ ಮತ್ತು ದೇವಾಂಗ ಜಗದ್ಗುರು ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿ , ತಪಸೀಹಳ್ಳಿಪುಷ್ಪಾಂಡಜ ಮಹರ್ಷಿ ಆಶ್ರಮದಶ್ರೀ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ ವಹಿಸಲಿದ್ದಾರೆ. ವೇದಿಕೆಯಲ್ಲಿ ದಿಕ್ಕೂಚಿ ಭಾಷಣ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಡೆ ಮಾಡಲಿದ್ದಾರೆ. ಹಿಂದೂ ಸಮಾಜೋತ್ಸವ ಕಾರ್ಯಕ್ರಮವು ಕೇವಲ ಒಂದು ಧಾರ್ಮಿಕ ಉತ್ಸವವಲ್ಲ. ಸಮಾಜದ ಏಕತೆ, ಸಂಸ್ಕೃತಿ ಉಳಿವು ಮತ್ತು ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವೀಗೊಳಿಸಬೇಕೆಂದು ಮನವಿ ಮಾಡಿದರು.

     

    ಹಿಂದೂ ಸಮಾಜ್ಯೋತ್ಸವ ಸಮಿತಿ ಅಧ್ಯಕ್ಷರಾದ ಮುನಿರಾಮೇಗೌಡ ಮಾತನಾಡಿ ಗುರುವಾರ (ಜ.29)ಬೆಳಿಗ್ಗೆ 8:00 ಕ್ಕೆ ತಾಲ್ಲೂಕಿನ ಎಲ್ಲಾ ಶಕ್ತಿ ದೇವತೆಗಳ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು ನಂತರ ಸುದರ್ಶನ ಹೋಮ, ಎಲ್ಲಾ ಭಜನಾ ಮಂಡಳಿಗಳಿಂದ “ಭಕ್ತಿ ಪಾರಾಯಣ” ನಡೆಯಲಿದೆ ಎಂದರು.

     

    ಜ. 28 ರಂದು ಸಂಜೆ 4.00ಕ್ಕೆ ಬೈಕ್ ರ್ಯಾಲಿ 

     ನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಿಂದ ಡಿ.ಕ್ರಾಸ್, ಎಲ್.ಐ.ಸಿ. ರಸ್ತೆ, ಗಾಂಧಿ ಸರ್ಕಲ್ ಸೌಂದರ್ಯಮಹಲ್ ಸರ್ಕಲ್, ಬಸ್ ಸ್ಟ್ಯಾಂಡ್, ಲಕ್ಷ್ಮೀ ಟಾಕೀಸ್, ಶ್ರೀಕಂಠೇಶ್ವರ ದೇವಸ್ಥಾನ, ಅರಳುಮಲ್ಲಿಗೆ ಸರ್ಕಲ್, ಕೆ.ಸಿ.ಪಿ. ಸರ್ಕಲ್, ಕೊಂಗಾಡಿಯಪ್ಪ ಕಾಲೇಜು ರಸ್ತೆ, ಮುಗವಾಳಪ್ಪ ಸರ್ಕಲ್.ತಾಲ್ಲೂಕು ಆಫೀಸ್ ಸರ್ಕಲ್ ನಂತರ ಭಗತ್‌ಸಿಂಗ್ ಕ್ರೀಡಾಂಗಣ ತಲುಪುವುದು.

     

    ಜ. 29ಕ್ಕೆ ಬೃಹತ್ ಶ್ರೀ ರಾಮ ಶೋಭಾಯಾತ್ರೆ

    ಗುರುವಾರ ಮಧ್ಯಾಹ್ನ 2:30ಕ್ಕೆ ನಗರದ ನೆಲದಾಂಜನೇಯ ದೇವಾಲಯದಿಂದ ಭಗತ್ ಸಿಂಗ್ ಕ್ರೀಡಾಂಗಣದವರೆಗೂ ಬೃಹತ್ ಶ್ರೀ ರಾಮ ಶೋಭಾಯಾತ್ರೆ ನಡೆಯಲಿದ್ದು ಎಲ್ಲಾ ಹಿಂದೂ ಭಾಂದವರು ಭಾಗವಹಿಸಬೇಕೆಂದು ಹಿಂದೂ ಮುಖಂಡರು ವಿನಂತಿಸಿದರು.

     

     

    ವಿಶಾಲ ಜನಜಾಗೃತಿ ಸಭೆಯ ಮೂಲಕ ಹಿಂದೂಗಳೆಲ್ಲ ನಾವು ಸೋದರರೆಂಬ ಭಾವನೆಯನ್ನುಅಭಿವ್ಯಕ್ತಿಗೊಳಿಸಬಹುದಾಗಿದೆ.ಈ ಹಿಂದೂ ಸಮ್ಮೇಳನದಲ್ಲಿ ಸಾವಿರ ಸಾವಿರಾರು ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದ್ದು.ಹಿಂದೂ ಶಕ್ತಿಯ ಅರಿವು ಮೂಡಿಸಲು ಒಟ್ಟಾಗಿ ಸೇರಿ ಬೆಂಬಲಿಸಬೇಕೆಂದು ಮನವಿ ಮಾಡಿದರು.

     

     

     

    ಈ ವೇಳೆ ಹಿಂದೂ ಸಮಾಜ್ಯೋತ್ಸವ ಸಮಿತಿಯ ಪ್ರಮುಖರಾದ ಮುನಿರಾಮೇಗೌಡ, ಡಾ|| ಇಂದಿರಾ .ಆರ್. (ಸ್ತ್ರೀರೋಗ ತಜ್ಞರು),ಪೂರ್ಣಚಂದ್, ಭಾಸ್ಕರ್ .ಎಸ್,ವಿರಾಜ್,ಬಿ.ಜಿ.ಶ್ರೀನಿವಾಸ್,ರವಿಕುಮಾರ್,ಮಧು ಬೇಗಲಿ, ಅಗ್ನಿ ವೆಂಕಟೇಶ್, ಮಹಿಳಾ ಮುಖಂಡರಾದ ವತ್ಸಲ, ದಾಕ್ಷಾಯಿಣಿ, ವಾಣಿ, ಅಂಬಿಕಾ, ಉಮಾ ಮಹೇಶ್ವರಿ, ಮಂಜುಳಾ, ಯಶೋದಾ ಸೇರಿದಂತೆ ಹಲವರು ಹಾಜರಿದ್ದರು.

     

     

  • ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ : ಬೈಕ್‍ ಸವಾರರಿಗೆ 35 ಹೆಲ್ಮೆಟ್ ವಿತರಣೆ

    ಚಿಕ್ಕಮಗಳೂರು ಜಿಲ್ಲೆ : ನರಸಿಂಹರಾಜಪುರ ತಾಲ್ಲೂಕಿನ ಎನ್ ಆರ್ (NR)ಪುರ ಪೊಲೀಸ್ ಠಾಣೆ ಮುಂಭಾಗ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸುವ ಸಲುವಾಗಿ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಣೆ ಮಾರಲಾಯಿತು.

     

    ಸಿ ಜೆ (CJ) & ಜೆ ಎಂ ಎಫ್ ಸಿ (JMFC) ನ್ಯಾಯಾಧೀಶರಾದ ರಘುನಾಥ್ ಗೌಡ ಹಾಗೂ ಜೀತು ಆರ್.ಎಸ್ ರವರ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ನಡೆಯಿತು ಈ ವೇಳೆ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಣೆ ಮಾಡಲಾಯಿತು

    ಈ ವೇಳೆ ಮಾತನಾಡಿದ ಅವರು ರಸ್ತೆ ಅಪಘಾತವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಸ್ತೆ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ಬೈಕ್ ಸವಾರರು ರಸ್ತೆ ನಿಯಮಗಳನ್ನು ಪಾಲನೆಮಾಡಬೇಕು. ಇತ್ತೀಚಿನ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಸವಾರರು ಸಾವನಪ್ಪುತ್ತಿದ್ದಾರೆ. ಹೆಲ್ಮೆಟ್ ಧರಿಸುವುದರಿಂದ ಅಪಘಾತ ಸಮಯದಲ್ಲಿ ಪ್ರಾಣಪಾಯದಿಂದ ಪಾರಾಗಬಹುದಾಗಿದೆ ಎಂದರು.

     

    ನರಸಿಂಹರಾಜಪುರ ಪೊಲೀಸ್ ಇಲಾಖೆ ಸಹಕಾರದೊಂದಿಗೆ CJ & JMFC ಹೆಲ್ಮೆಟ್ ವಿತರಣೆ ಮಾಡಲಾಗಿದೆ

    ಕಾರ್ಯಕ್ರಮದಲ್ಲಿ N.R ಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಗುರುಕಾಮಥ್, ಎನ್ ಆರ್ ಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.

     

  • ಒಳ ಮೀಸಲಾತಿಯಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಮಾದರ ಚನ್ನಯ್ಯ ಮಹಾಸಭಾ ಮುಖಂಡರ ಅಗ್ರಹ   

    ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರ ಒಳ ಮೀಸಲಾತಿ ಕುರಿತಂತೆ ರಾಜ್ಯಪಾಲರಿಗೆ ಸಲ್ಲಿಸಿದ್ದ ವರದಿಯನ್ನು ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ವಾಪಾಸ್ ಕಳಿಸಿದ್ದಾರೆ. ಈಗಲಾದರೂ ವರದಿಯಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಯಥಾವತ್ ಜಾರಿ ಮಾಡಿ ಎಂದು ಮಾದರ ಚನ್ನಯ್ಯ ಮಹಾಸಭಾ ಮುಖಂಡ ಬಚ್ಚಹಳ್ಳಿ ನಾಗರಾಜು ತಿಳಿಸಿದರು.

     

    ನಗರದ ಪ್ರವಾಸಿ ಮಂದಿರದಲ್ಲಿ ಮಾದರ ಚನ್ನಯ್ಯ ಮಹಾಸಭಾದಿಂದ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸತತವಾಗಿ 30 ವರ್ಷಗಳ ಹೋರಾಟದ ನಂತರ ಒಳ ಮೀಸಲಾತಿ ದೊರೆಯುತ್ತಿದ್ದು, ರಾಜ್ಯ ಸರ್ಕಾರ ಕೆಲ ರಾಜಕೀಯ ಪ್ರಭಾವಗಳಿಗೆ ಒಳಗಾಗಿ ಮಾದಿಗ ಹಾಗೂ ಅಲೆಮಾರಿ ಸಮುದಾಯಗಳಿಗೆ ಅರ್ಹ ಮೀಸಲಾತಿ ನೀಡುವಲ್ಲಿ ಎಡವಿದೆ ಆದರೆ ಅದನ್ನು ಸರಿ ಪಡಿಸಲು ಈಗ ಅವಕಾಶವಿದ್ದು ರಾಜ್ಯಪಾಲರಿಂದ ಮರಳಿ ಬಂದಿರುವ ವರದಿಯನ್ನು ಸರಿ ಪಡಿಸುವ ಮೂಲಕ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದರು.

     

    ಮುಖಂಡ‌ ತಳಗವಾರ ನಾಗರಾಜ್ ಮಾತನಾಡಿ ಮೀಸಲಾತಿ ನಮ್ಮ ಹಕ್ಕು ಅದನ್ನು ನಾವು ಕೇಳುತ್ತಿದ್ದೇವೆ ಅಷ್ಟೇ ಜನಸಂಖ್ಯೆ ಹೆಚ್ಚಿರುವ ಮಾದಿಗ ಸಮುದಾಯಕ್ಕೆ ಅರ್ಹ ಮೀಸಲಾತಿ ನೀಡಬೇಕು ಹಾಗೂ ಅಲೆಮಾರಿ ಸಮುದಾಯವನ್ನು ಬಲಿಷ್ಠ ಸಮುದಾಯಗಳ ಪಟ್ಟಿಯಲ್ಲಿ ಸೂಚಿಸಲಾಗಿದೆ ದಯವಿಟ್ಟು ಅವರನ್ನು ಪ್ರತ್ಯೇಕಗೊಳಿಸಿ ಮೀಸಲಾತಿ ಜಾರಿಗೊಳಿಸಬೇಕು ಎಂದರು.

     

    26ಕ್ಕೆ ಕಪ್ಪು ಪಟ್ಟಿ ಧರಿಸಿ ಸರ್ಕಾರದ ವಿರುದ್ಧ ಹೋರಾಟ

    ಒಳ ಮೀಸಲಾತಿ ಕುರಿತಂತೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಅಲೆಮಾರಿ ಸಮುದಾಯಕ್ಕೆ ಹಾಗೂ ಮಾದಿಗ ಸಮುದಾಯಕ್ಕೆ ಅರ್ಹ ಮೀಸಲಾತಿ ನೀಡಿ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕುತ್ತಿರುವ ಗುಲಾಮರ ಅಪ್ಪ ಎಂಬ ಗ್ರೂಪಿನ ಅಡ್ಮಿನನ್ನು ಜನವರಿ 26ರ ಒಳಗಾಗಿ ಬಂಧಿಸಬೇಕು ಇಲ್ಲವೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.

     

    ಶೀಘ್ರ‌ ಕ್ರಮ ಕೈಗೊಳ್ಳಲು ಒತ್ತಾಯ:

    ಇನೇನು ಸಿಇಟಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು ಸಮುದಾಯದ ಮಕ್ಕಳಿಗೆ ಮೀಸಲಾತಿ ಸಹಾಯವಗಲಿದೆ. ಸರ್ಕಾರ ಶೀಘ್ರವಾಗಿ ಒಳ ಮೀಸಲಾತಿ ವರದಿ ವಿಚಾರದಲ್ಲಿನ ಲೋಪದೋಷಗಳನ್ನ ಸರಿಪಡಿಸಿ ರಾಜ್ಯಪಾಲರಿಗೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

     

    ಈ ವೇಳೆ ಮುಖಂಡರಾದ ನಾಗರಾಜು ಬಚ್ಚಹಳ್ಳಿ, ರಾಮಕೃಷ್ಣಪ್ಪ, ವೆಂಕಟೇಶ್, ಹನುಮಣ್ಣ, ಟಿ ಡಿ ಮುನಿಯಪ್ಪ, ಗಂಗರಾಜು ನರಸಿಂಹನಹಳ್ಳಿ, ಕೆ ವಿ ಮುನಿಯಪ್ಪ, ರಾಮ, ನರಸಪ್ಪ, ಮೈಲಾರಪ್ಪ, ತಳವಾರ ನಾಗರಾಜು, ಕೆ ನಾರಾಯಣಪ್ಪ, ಹರ್ಷ, ಕಾಂತರಾಜ, ಮುನಿಯಪ್ಪ, ಗಂಗರಾಜು ಮತ್ತಿತ್ತರರಿದ್ದರು.

  • ಶಾಲಾ- ಕಾಲೇಜು ಸುತ್ತ ತಂಬಾಕು ಉತ್ಪನ್ನಗಳ ಮಾರಾಟ ಮಾಡುವವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ ಎ.ಬಿ ಬಸವರಾಜು

    ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳ ಸುತ್ತ 100 ಗಜ ಅಂತರದಲ್ಲಿ ತಂಬಾಕು ಮಾರಾಟ ನಿಷೇಧ ಮಾಡಲಾಗಿದ್ದು, ತಂಬಾಕು ಮಾರಾಟ ಮಾಡುತ್ತಿದ್ದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಹೇಳಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆ ಮತ್ತು ಜಿಲ್ಲಾ ಕಣ್ಗಾವಲು ಸಮಿತಿ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     

    ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ/ ಕಾಲೇಜು/ ವಿಶ್ವವಿದ್ಯಾಲಯಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲು ಹಾಗೂ COTPA Sec 6bಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಶೈಕ್ಷಣಿಕ ಸಂಸ್ಥೆಗಳ ಸುತ್ತಲೂ ಯಾರಾದರೂ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ನಮಗೆ ದೂರು ನೀಡಬಹುದು.

     

    ಶೈಕ್ಷಣಿಕ ಸಂಸ್ಥೆಗಳ ಹತ್ತಿರ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿದ್ದಾರೆ ಎಂದು ಸಂಘಟನೆಗಳು ದೂರು ನೀಡಿದ್ದಾರೆ. ಅಧಿಕಾರಿಗಳು ಅನಿರೀಕ್ಷಿತ ದಾಳಿ ಕೈಗೊಂಡು ಕೂಡಲೇ ಎಲ್ಲಾ ಶಾಲಾ ಕಾಲೇಜುಗಳ ಬಳಿ ಪರಿಶೀಲನೆ ನಡೆಸಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರು.

     

    18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾರಾಟ ಮಾಡುವಂತಿಲ್ಲ. ಬೀಡಿ, ಸಿಗರೇಟು ಗುಟ್ಕಾವನ್ನು ಮಕ್ಕಳಿಗೆ ಮಾರಾಟ ಮಾಡಬಾರದೆಂಬ ನಿಯಮಗಳಿದ್ದರೂ ವ್ಯಾಪಾರಿಗಳು ಪಾಲಿಸುತ್ತಿಲ್ಲ.

     

    ನಿಷೇಧಿತ ಸ್ಥಳಗಳಲ್ಲಿ ತಂಬಾಕು ಮಾರಾಟ ಮತ್ತು ಸೇವನೆ ಹಾಗೂ ತಂಬಾಕು ಮಾರಾಟ ಪರವಾನಗಿ ಇಲ್ಲದೇ ಮಾರಾಟ ಮಾಡಿದವರಿಗೆ ದಂಡ ವಿಧಿಸಲಾಗಿತ್ತದೆ ಜೊತೆಗೆ ಶಿಕ್ಷೆಗೆ ಗುರಿಯಾಗಬಹುದು. ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ತಂಬಾಕು ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಿ ಎಂದರು.

     

    *178 ದಾಳಿಗಳು, ರೂ.69241 ದಂಡ*

    ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ಕೋಟ್ಪಾ-2003 ಕಾಯ್ದೆ ಅನ್ವಯ ಏಪ್ರಿಲ್ 2025 ರಿಂದ ಅಕ್ಟೋಬರ್ ವರೆಗೆ ಜಿಲ್ಲೆಯಾದ್ಯಂತ ವಿವಿಧ ಅಂಗಡಿ ಮುಂಗಟ್ಟುಗಳ ಮೇಲೆ 156 ದಾಳಿ ನಡೆಸಿದ್ದು, ನಿಯಮಗಳ ಉಲ್ಲಂಘನೆ ಮಾಡಿದವರ ವಿರುದ್ಧ ಸೆಕ್ಷನ್ 4 ರ ಅಡಿಯಲ್ಲಿ 538 ಪ್ರಕರಣ ದಾಖಲಿಸಿ 69241 ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ ಎಂದು ತಂಬಾಕು ನಿಯಂತ್ರಣಾಧಿಕಾರಿಗಳು ಮಾಹಿತಿ ನೀಡಿದರು.

     

    *ವರ್ಷದಲ್ಲಿ 9,967 ನಾಯಿ ಕಡಿತ ವರದಿ*

    2025 ರ ಜನವರಿ ಮಾಹೆಯಿಂದ ಡಿಸೆಂಬರ್ ಅಂತ್ಯಕ್ಕೆ 9,967 ನಾಯಿ ಕಡಿತದ ವರದಿ ಆಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಹೆಚ್ಚಾಗಿದೆ.

     

    ನಾಯಿ ಹಾವಳಿ ನಿಯಂತ್ರಣಕ್ಕೆ ಸಂತಾನಹರಣ ಚಿಕಿತ್ಸೆ ಮಾಡಿಸಬೇಕು, ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ, ನಾಯಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಸೂಕ್ತ ಜಾಗ ಗುರುತಿಸಿ , ಜೊತೆಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಾರಂಭ ಮಾಡಿ ಎಂದರು.

     

    ಸಾರ್ವಜನಿಕರು ಕೂಡ ನಾಯಿ, ಹಾವು ಕಡಿತದ ಬಗ್ಗೆ ನಿರ್ಲಕ್ಷ್ಯ ತೋರದೇ ತಕ್ಷಣವೇ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

     

    ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ॥ ಲಕ್ಕಾ ಕೃಷ್ಣಾ ರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ॥ ಹೇಮಾವತಿ ಎ.ವಿ, ತಂಬಾಕು ನಿಯಂತ್ರಣಾಧಿಕಾರಿ ಡಾ॥ ವಿದ್ಯಾರಾಣಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಬೃಹತ್‌ ಜಾಗೃತಿ ಜಾಥಾ/ ವೇಷಭೂಷಣಗಳೊಂದಿಗೆ ಸಾರ್ವಜನಿಕರಿಗೆ ಮಹತ್ವದ ಅರಿವು

    ದೊಡ್ಡಬಳ್ಳಾಪುರ :ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ಕ್ಷಣದ ನಿರ್ಲಕ್ಷ್ಯ ಇಡೀ ಬದುಕನ್ನೇ ದುಸ್ತರ ಮಾಡುತ್ತದೆ. ಅವಲಂಭಿತರನ್ನು ಅನಾಥವಾಗಿರುವ ಇಂತಹ ಅವಘಡಗಳ ತಡೆಗೆ ನಿಯಮಪಾಲನೆ ಅತ್ಯಗತ್ಯ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಕ್ರಾಂತಿ ಕಿರಣ್‌ ಅಭಿಪ್ರಾಯಪಟ್ಟರು.

    ಇಲ್ಲಿನ ಜಿಲ್ಲಾ ಪೊಲೀಸ್‌ ಇಲಾಖೆ, ಆಲ್ಟ್ರಾಟೆಕ್‌ ಸಿಮೆಂಟ್, ಲಯನ್ಸ್‌ ಕ್ಲಬ್‌ ಆಫ್‌ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌, ಜಾಲಪ್ಪ ಪಾಲಿಟೆಕ್ನಿಕ್‌, ಶ್ರೀರಾಮ ನರ್ಸಿಂಗ್‌ ಕಾಲೇಜು, ಸುಜ್ಞಾನ ದೀಪಿಕಾ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಬುಧವಾರ ಆಯೋಜಿಸಲಾಗಿದ್ದ ಜಾಗೃತಿ ಜಾಥಾ ಕಾರ್ಯಕ್ರಮದ ಬಳಿಕ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ನೀಡುವುದು. ದ್ವಿಚಕ್ರ ವಾಹನ ಚಾಲಕಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ಕಾರು-ಇತರೆ ವಾಹನಗಳ ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸುವುದು ಮತ್ತು ಅತಿ ವೇಗವಾಗಿ ವಾಹನ ಚಲಾಯಿಸುವುದನ್ನು ತಡೆಯುವುದು ಅತ್ಯಗತ್ಯ ಎಂದು ಹೇಳಿದರು.

    ಶ್ರೀರಾಮ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್‌ ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ವನ್ನು ಆಚರಿಸಲಾಗುತ್ತದೆ. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮತ್ತು ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

     

    ಅಲ್ಟ್ರಾಟೆಕ್‌ ಸಿಮೆಂಟ್‌ನ ಲಾಜಿಸ್ಟಿಕ್‌ ಜಿಎಂ ಪಂಕಜ್‌ ಶರ್ಮ, ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಬಾರದು. ನಿಗದಿತ ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸುವುದು ಅಕ್ಷಮ್ಯ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಜೀವಕ್ಕೆ ಅಪಾಯಕಾರಿ. ಈ ಬಗ್ಗೆ ನಿರಂತರ ಜಾಗೃತಿ ಮೂಡಿಸಲಾಗುವುದು ಎಂದರು.

     

    ಸುಜ್ಞಾನ ದೀಪಿಕ ಸಂಸ್ಥೆಯ ಮಂಜುನಾಥ್, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಅತಿಥಿಗಳಿಗೆ ರಸ್ತೆ ಸುರಕ್ಷತಾ ನಿಯಮ ಪಾಲನೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

     

    ಲಯನ್ಸ್‌ ಕ್ಲಬ್‌ ಆಫ್‌ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ವಲಯ ಅಧ್ಯಕ್ಷ ಜೆ.ಆರ್.ರಾಕೇಶ್, ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್ ಕುಮಾರ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಡಿ.ಎಂ.ರೇಣುಕಾಮೂರ್ತಿ, ಜಾಲಪ್ಪ ಪಾಲಿಟೆಕ್ನಿಕ್‌ ಪ್ರಾಂಶುಪಾಲ ನರಸಿಂಹರೆಡ್ಡಿ ಸೇರಿದಂತೆ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳು, ಶ್ರೀರಾಮ ನರ್ಸಿಂಗ್‌ ಕಾಲೇಜು ಮತ್ತು ಜಾಲಪ್ಪ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

     

    *ಬೃಹತ್‌ ವಾಕಥಾನ್; ಗಮನ ಸೆಳೆದ ಯಮ-ಚಿತ್ರಗುಪ್ತ:*

     

    ಇಲ್ಲಿನ ನೆಲದಾಂಜನೇಯಸ್ವಾಮಿ ದೇವಾಲಯದಿಂದ ಆರಂಭವಾದ ವಾಕಥಾನ್‌ ಭಗತ್‌ಸಿಂಗ್‌ ಕ್ರೀಡಾಂಗಣದವರೆಗೆ ನಡೆಯಿತು. ಯಮಧರ್ಮರಾಯ ಮತ್ತು ಚಿತ್ರಗುಪ್ತನ ವೇಷ ಧರಿಸಿದ್ದ ವಿದ್ಯಾರ್ಥಿಗಳು ಹೆಲ್ಮೆಟ್‌ ಧರಿಸದೆ ವಾಹನ ಚಲಾಯಿಸುವ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ಸಾರ್ವಜನಿಕರಿಗೆ ಕರಪತ್ರ ನೀಡಿ, ಜಾಗೃತಿ ಮೂಡಿಸುವ ಮೂಲಕ ವಿನೂತನ ರೀತಿಯಲ್ಲಿ ಗಮನ ಸೆಳೆದರು.

     

     

     

  • ಮಕ್ಕಳ ಸಂಭ್ರಮದೊಂದಿಗೆ ಸಂಕ್ರಾಂತಿ ಹಬ್ಬವನ್ನು ಸ್ವಾಗತಿಸಿದ ಸ್ಕೈ ಎಜುಕೇಷನಲ್ ಟ್ರಸ್ಟ್ 

    ದೊಡ್ಡಬಳ್ಳಾಪುರ : ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆ ಅಂಗವಾಗಿ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸ್ಕೈ ಎಜುಕೇಷನಲ್ ಟ್ರಸ್ಟಿನ ಸರ್ ಎಂ ವಿಶ್ವೇಶ್ವರಯ್ಯ ಶಾಲೆ ಮತ್ತು ಐ ಪ್ಲೇ ಲರ್ನ್ ಫೌಂಡೇಶನ್ ಸ್ಕೂಲ್ ಪುಟಾಣಿ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಕ್ಕಳಿಂದ ಸಂತೆ ಆಯೋಜನೆ ಮಾಡಲಾಗಿತ್ತು.

    ದರ್ಗಾ ಜೋಗಹಳ್ಳಿ ವ್ಯಾಪ್ತಿಯ ಸಮೂಹ ಸಂಪನ್ಮೂಲ ವ್ಯಕ್ತಿ (CRP) ಮುತ್ತುರಾಜ್ ಮಾತನಾಡಿ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ವಿವಿಧ ಬಣ್ಣಗಳ ರಂಗೋಲಿ, ಹಸಿರು ತೋರಣ ಕಬ್ಬು ಎಳ್ಳು ಬೆಲ್ಲ ಒಳಗೊಂಡಂತೆ ಪುಟಾಣಿ ಮಕ್ಕಳಿಂದ ಮಾರುಕಟ್ಟೆ ನಿರ್ಮಾಣ ಹಾಗೂ ವಿಜ್ಞಾನ ವಸ್ತು ಪ್ರದರ್ಶನಗಳ ಆಯೋಜನೆ ಮೂಲಕ ಸರ್ ಎಂ ವಿಶ್ವೇಶ್ವರಯ್ಯ ಶಾಲೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಸ್ವಾಗತಿಸಿದ್ದಾರೆ. ಮಕ್ಕಳಲ್ಲಿ ಕ್ರಿಯಾತ್ಮಕ ಭಾವನೆ ಹೆಚ್ಚಿಸುವುದಷ್ಟೇ ಅಲ್ಲದೆ ಆ ಮೂಲಕ ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸುವ ರೀತಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.

    ನಮ್ಮ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಈ ರೀತಿ ವಿಶೇಷವಾಗಿ ಹಬ್ಬ ಆಚರಣೆಗಳನ್ನು ಮಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಬಹುದಾಗಿದೆ. ಮಕ್ಕಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿ ಪ್ರತಿ ವರ್ಷವೂ ಇಂತಹ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಾರುಕಟ್ಟೆ ಮಕ್ಕಳಿಂದ ಸಂತೆ ಆಯೋಜನೆಯಂತಹ ಕಾರ್ಯಕ್ರಮಗಳನ್ನು ರೂಪಿಸುವುದು ಅವಶ್ಯಕತೆ ಎಂದರು.

     

    ಈ ವೇಳೆ ಶಾಲೆಯ ಸಿಬ್ಬಂದಿ ವರ್ಗ ಹಾಗೂ ಮಕ್ಕಳಿಂದ ಗೋಪೂಜೆ,ದಾನ್ಯರಾಶಿಪೂಜೆ ನೆಡೆಯಿತು. ನಂತರ ಮಕ್ಕಳಿಂದ ವಿವಿಧ ಕ್ರಿಯಾತ್ಮಕ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪುಟಾಣಿ ಮಕ್ಕಳಿಂದ ಸಂತೆ ನೆಡೆಯಿತು. ಶಾಲೆಗೆ ಆಗಮಿಸಿದ ಪೋಷಕರು ಹಾಗೂ ಅತಿಥಿಗಳಿಗೆ ಮಕ್ಕಳ ಚಟುವಟಿಕೆ ಸಂತಸತಂದಿತು.

    ಈ ವೇಳೆ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿಗಳಾದ ಲೋಕನಾಥ್ ಮಾತನಾಡಿ ಇಂದು ವರ್ಷದ ಮೊದಲ ಹಬ್ಬ ಸಂಕ್ರಾಂತಿಯೊಟ್ಟಿಗೆ ವಿಶೇಷವಾಗಿ ನಮ್ಮ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಕ್ಕಳಿಂದ ಸಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮಕ್ಕಳ ಕಳೆದ ಹಲವು ದಿನಗಳ ಪರಿಶ್ರಮ ಇಂದು ಸಾರ್ಥಕವಾಗಿದೆ ವೈಜ್ಞಾನಿಕವಾಗಿ ನಮಗೆ ತಿಳಿಯದ ಎಷ್ಟೋ ವಿಷಯಗಳನ್ನು ಮಕ್ಕಳು ನಿರ್ಗಳವಾಗಿ ಸರಾಗವಾಗಿ ಪ್ರಾಯೋಗಿಕವಾಗಿ ತಿಳಿಸುತ್ತಿದ್ದಾರೆ. ಮಕ್ಕಳನ್ನು ಕಂಡು ಹೆಮ್ಮೆಯಾಗುತ್ತಿದೆ ಎಂದರು .

     

    ಅಲ್ಲದೇ ಪುಟಾಣಿ ಮಕ್ಕಳಿಂದ ಸಂತೆ ಯೋಜನೆ ಮಾಡಲಾಗಿದ್ದು ಮಕ್ಕಳ ಮುದ್ದು ಮಾತುಗಳಿಗೆ ಅವರ ವ್ಯಾಪಾರಶೈಲಿಗೆ ಮನಸೋಲದ ಪೋಷಕರೇ ಇಲ್ಲ, ನಾನು ಕೂಡ ಪುಟಾಣಿ ವ್ಯಾಪಾರಿಯ ಬಳಿ ನಿಂಬೆಹಣ್ಣು ಖರೀದಿ ಮಾಡಿದ್ದೇನೆ. ಮಕ್ಕಳ ಈ ಲವಲವಿಕೆಯ ಚಟುವಟಿಕೆಯಿಂದ ಅವರ ಕಲಿಕೆ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದರು.

    ಇಂದು ಬೆಳಗಿನಿಂದಲೇ ಸಂಕ್ರಾಂತಿ ಸಂಭ್ರಮ ನಮ್ಮ ಶಾಲೆಯಲ್ಲಿ ಮನೆ ಮಾಡಿದೆ ಹಳ್ಳಿ ಸಂಸ್ಕೃತಿಯಿಂದ ಕೂಡಿರುವ ಈ ಹಬ್ಬ, ಸಂಭ್ರಮಾಚರಣೆ, ವಿವಿಧ ಸಾಂಪ್ರದಾಯಿಕ ಸಾಂಸ್ಕೃತಿಕ ಆಚರಣೆಗಳನ್ನ ಮಕ್ಕಳಿಗೆ ತಿಳಿಸುವ ಸಲುವಾಗಿ ಸಂಕ್ರಾಂತಿ ಹಬ್ಬವನ್ನು ಮಕ್ಕಳೊಟ್ಟಿಗೆ ಆಚರಿಸಲಾಯಿತು. ಸಂಕ್ರಾಂತಿ ಹಬ್ಬಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ ನಮ್ಮ ವಿದ್ಯಾರ್ಥಿ ಮಕ್ಕಳು ಪರಸ್ಪರ ಎಳ್ಳು–ಬೆಲ್ಲ ವಿನಿಮಯ ಮಾಡಿಕೊಳ್ಳುವ ಮೂಲಕ ವರ್ಷದ ಮೊದಲ ಹಬ್ಬವನ್ನು ಸ್ವಾಗತಿಸಿದ್ದಾರೆ ಎಂದರು.

     

    ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರಾದ ಶಂಕ್ರಪ್ಪ, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪೋಷಕರು ಹಾಜರಿದ್ದರು.

     

    Ad

  • ಅಂಗನವಾಡಿ ಕೇಂದ್ರದಲ್ಲಿ ಸಂಕ್ರಾಂತಿ ಸಂಭ್ರಮ.

    ದೊಡ್ಡಬಳ್ಳಾಪುರ :ನಗರದ ರಾಜೀವ್ ಗಾಂಧಿ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಆಹಾರ ಹಾಗೂ ವಿವಿಧ ಬಗೆಯ ಆಹಾರ ಧಾನ್ಯ ನೀಡುವ ಮೂಲಕ ಸಂಕ್ರಾಂತಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಯಿತು.

    ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಭಾಗ್ಯಮ್ಮ ಮಾತನಾಡಿ ಮಕ್ಕಳಿಗೆ ಸಂಕ್ರಾಂತಿ ಹಬ್ಬದ ಹಳ್ಳಿ ಸಂಸ್ಕೃತಿ, ಸಂಭ್ರಮಾಚರಣೆ, ವಿವಿಧ ಸಾಂಪ್ರದಾಯಿಕ ಸಾಂಸ್ಕೃತಿಕ ಆಚರಣೆಗಳನ್ನ ಮಕ್ಕಳಿಗೆ ತಿಳಿಸುವ ಸಲುವಾಗಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು. ಸಂಕ್ರಾಂತಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ ಎಂದು ತಿಳಿಸಲು ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.

    ಮಕ್ಕಳು ಪರಸ್ಪರ ಎಳ್ಳು–ಬೆಲ್ಲ ವಿನಿಮಯ ಮಾಡಿಕೊಂಡರು. ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಿದರು.

    ಈ ವೇಳೆ ನಗರಸಭಾ ಸದಸ್ಯೆ ಹಂಸಪ್ರಿಯ, ಅಂಗನವಾಡಿ ಮೇಲ್ವಿಚಾರಕಿ ಚೈತನ್ಯ, ಕಾರ್ಯಕರ್ತರಾದ ಭಾಗ್ಯಮ್ಮ, ಚಂದ್ರಮ್ಮ,ನಂದಿನಿ, ಸಹಾಯಕಿ ಸರಸ್ವತಮ್ಮ, ಆಶಾ, ಶಿಕ್ಷಕ ಚಿಕ್ಕಗಂಗಯ್ಯ, ಪೋಷಕರಾದ ಅನುಸೂಯಮ್ಮ, ಶೋಭಮ್ಮ, ಸುಮಾ, ಲಕ್ಷ್ಮಿ, ಧೀಶ, ಭಾವನ ಇದ್ದರು.