Blog

  • ಬಹುತ್ವಕ್ಕಾಗಿ ನಾಗರಿಕ ಪ್ರಜ್ಞೆಯನ್ನು ಹೆಚ್ಚಿಸಬೇಕು – ಚಿಂತಕ ಡಾ.ರಹಮತ್ ತರೀಕೆರೆ

    ಬಹುತ್ವ ಕರ್ನಾಟಕವನ್ನು ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಪ್ರಜ್ಞೆಯ ಮೂಲಕ ಕಟ್ಟಬೇಕಾಗಿದೆ. ಏಕರೂಪೀಕರಣದ ಆತಂಕದ ಪ್ರಸ್ತುತ ಈ ಕಾಲಘಟ್ಟದಲ್ಲಿ ಬಹುತ್ವದ ಅಗತ್ಯವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಡಾ.ರಹಮತ್ ತರೀಕೆರೆ ತಿಳಿಸಿದರು.

     

    ಅವರು ದೊಡ್ಡಬಳ್ಳಾಪುರ ನಗರದ ಆರ್.ಡಿ.ಕನ್ವೆನ್ಷನ್ ಹಾಲ್ ನಲ್ಲಿ ದೊಡ್ಡಬಳ್ಳಾಪುರ ಡಾ.ಡಿ.ಆರ್.ನಾಗರಾಜ್ ಬಳಗ ಮತ್ತು ಬೆಂಗಳೂರಿನ ಆಕೃತಿ ಪುಸ್ತಕ ಇವರ ಸಹಯೋಗದಲ್ಲಿ ಬಹುತ್ವ ಕರ್ನಾಟಕ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಸಂಸ್ಕೃತಿ, ಪರಂಪರೆ ದೊರೆಯುವ ಬಹುತ್ವದ ಅರಿವನ್ನು ಶೋಧಿಸಬೇಕಾಗಿದೆ. ಬಹುತ್ವಕ್ಕಾಗಿ ನಾಗರಿಕ ಪ್ರಜ್ಞೆಯನ್ನು ಹೆಚ್ಚಿಸಬೇಕು. ಭಾರತದ ಸಂವಿಧಾನದಲ್ಲಿ ಅಂಬೇಡ್ಕರ್ ಅವರಯ ಹೇಳುವ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವ ಇವುಗಳನ್ನು ಬಹುತ್ವದ ಮೌಲ್ಯವಾಗಿ ರೂಪಿಸಬೇಕು. ಶಾಲಾ ಕಾಲೇಜುಗಳು ಬಹುತ್ವ ಕಲಿಸುವ ತಾಣಗಳಾಗಬೇಕಾಗಿದೆ ಎಂದರು.

     

    ಭಾರತವು ವೈವಿಧ್ಯಮಯತೆಯಿಂದ ಕೂಡಿದೆ. ವೈವಿಧ್ಯತೆಯೇ ಬಹುತ್ವವಲ್ಲ, ಸಮಾನ ಅವಕಾಶಗಳೇ ಬಹುತ್ವ. ಬಹುತ್ವದ ಮೇಲೆ ಏಕಸಂಸ್ಕೃತಿಯನ್ನು ಹೇರುವ ಸಾಂಸ್ಕೃತಿಕ ರಾಜಕಾರಣ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿದೆ. ಒಂದೇ ಸಂಸ್ಕೃತಿ, ನಾಯಕತ್ವ, ಧರ್ಮವನ್ನು ಹೇರುವುದು ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವವಿರುವ ರಾಷ್ಟ್ರಗಳಲ್ಲಿ ಸಾಮಾಜಿಕ ಪ್ರಜಾಭುತ್ವ ನಾಶವಾಗುತ್ತದೆ. ಭಾರತದ ಆರ್ಥಿಕ ಹಿಡಿತ ಶೇ.10 ಜನರಲ್ಲಿದೆ ಎಂಬುದು ಅಸಮಾನತೆಯನ್ನು ತೋರಿಸುತ್ತದೆ. ಹಲವು ಭಾಷೆ, ಸಂಸ್ಕೃತಿ, ಧರ್ಮ, ಪ್ರಾದೇಶಿಕತೆ ಹೊಂದಿರುವ ಭಾರತಕ್ಕೆ ಬಹುತ್ವ ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದರು.

     

    ಸಾಹಿತಿ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ ಮಾತನಾಡಿ, ಬಹುತ್ವದಲ್ಲಿ ವೈಜ್ಞಾನಿಕ ಸತ್ಯವು ಅಡಗಿದೆ. ಮನುಷ್ಯಪರವಾದ ಬಹುತ್ವ ಉಳಿದರೆ ಮನುಷ್ಯ ಉಳಿಯುತ್ತಾನೆ. ಕೋಮುವಾದ ಮತ್ತು ಮತೀಯವಾದದ ಸಂಘರ್ಷಕ್ಕೆ ಅನುಮಾನ ಕಾರಣವಾಗುತ್ತದೆ. ಅನುಮಾನ ದ್ವೇಷವಾಗಿ, ಹಿಂಸೆ ರೂಪತಾಳಿ ವಿನಾಶದ ಕಡೆಗೆ ದೂಡುತ್ತದೆ. ಕೋಮು ಸೌಹಾರ್ದತೆಗೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಬಹುತ್ವದ ಅಗತ್ಯವಿದೆ ಎಂದರು.

     

    ವಿಮರ್ಶಕ ಡಾ.ಕಂಟನುಕುಂಟೆ ರಂಗನಾಥ ಮಾತನಾಡಿ, ಪ್ರಭುತ್ವ ಮತ್ತು ಜನತೆ ಎರಡು ಕಡೆಯಿಂದಲೂ ಬಹುತ್ವ ಸಾಧಿಸಬೇಕಾಗಿದೆ. ಪ್ರಜಾಪ್ರಭುತ್ವ ಆಶಯದೊಂದಿಗೆ ಬಹುತ್ವ ಒಂದಾಗಬೇಕು. ಬಹುತ್ವವನ್ನು ಜೀವನ ಕ್ರಮದ ಪ್ರಕ್ರಿಯೆ ಆಗಬೇಕು. ಬಹುತ್ವಕ್ಕಿರುವ ಅಪಾಯಗಳನ್ನು ಅರಿಯಬೇಕೆಂದರು.

     

    ವಿಮರ್ಶಕ ಡಾ.ರವಿಕುಮಾರ್ ನೀಹ ಮಾತನಾಡಿ, ಯಾವುದೇ ಧರ್ಮದಲ್ಲಿ ಏಕರೂಪತೆ ತರಲು ಸಾಧ್ಯವಿಲ್ಲ. ಒಂದೇ ರೀತಿಯ ಊಟ, ಸಿದ್ಧಾಂತವನ್ನು ಹೇರುವುದು ಅಪಾಯಕಾರಿ. ಬಹುತ್ವದ ಮೇಲೆ ಏಕಸಂಸ್ಕೃತಿಯನ್ನು ಹೇರುವುದು ಸರಿಯಲ್ಲ ಎಂದರು.

     

    ಬಹುತ್ವ ಕರ್ನಾಟಕ ಪುಸ್ತಕದ ಲೇಖಕರಾದ ಡಾ.ರಹಮತ್ ತರೀಕೆರೆ ಅವರೊಂದಿಗೆ ನಡೆದ ಸಂವಾದದಲ್ಲಿ ದೊಡ್ಡಬಳ್ಳಾಪುರ ಡಾ.ಡಿ.ಆರ್.ನಾಗರಾಜ್ ಬಳಗದ ಡಾ.ಪ್ರಕಾಶ್ ಮಂಟೆದ, ಹೇಮಂತ್ ಲಿಂಗಪ್ಪ, ಉಪನ್ಯಾಸಕರುಗಳಾದ ವನಿತಾ, ಪ್ರಸನ್ನ ಲಕ್ಷ್ಮೀಪುರ, ಎಚ್.ಎನ್.ರೇಣುಕಾರಾಧ್ಯ, ದೊಡ್ಡಬಳ್ಳಾಪುರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

  • ನಿಧನ ವಾರ್ತೆ : ದೇವನಹಳ್ಳಿ THO ಡಾ. ಸಂಜಯ್ ಇನ್ನಿಲ್ಲ

    ದೇವನಹಳ್ಳಿ ತಾಲೂಕು ಆರೋಗ್ಯಧಿಕಾರಿ   (THO) ಡಾ.ಸಂಜಯ್ ( 52 ವರ್ಷ ) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ

     

     

    ವೈದ್ಯರ ಸಮಾವೇಶದಲ್ಲಿ ಭಾಗವಹಿಸಲು ಚನ್ನೈಗೆ ತೆರಳಿದ್ದ ಅವರಿಗೆ ಇಂದು ಸಂಜೆ 7.30 ರ ಸುಮಾರಿಗೆ ತೀವ್ರ ಸ್ವರೂಪದ ಹೃದಯಾಘಾತ ಸಂಭವಿಸಿದೆ ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

     

    ಪ್ರಸ್ತುತ ದೇವನಹಳ್ಳಿಯ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಜಿಲ್ಲೆಯ ವೈದ್ಯಾಧಿಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಡಾ.ಸಂಜಯ್ ಸದಾ ವೈದ್ಯರು, ಸಿಬ್ಬಂದಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಆಕಾಶ್ ಆಸ್ಪತ್ರೆ, ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ನಿಯಂತ್ರಣ ಸೇವೆಯ ಜಿಲ್ಲಾ ಸಮನ್ವಯಕರಾಗಿ ಶ್ಲಾಘನೀಯ ಸೇವೆ ಸಲ್ಲಿಸಿದ್ದರು ಹಾಗೂ ಉತ್ತಮ ಆಡಳಿತಗಾರರಾಗಿ ಆರೋಗ್ಯ ಇಲಾಖೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದರು ಅವರ ಅಗಲಿಕೆಯು ಆರೋಗ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಿಬ್ಬಂದಿ ವರ್ಗ ತಿಳಿಸಿದ್ದು ಸಂತಾಪ ಸೂಚಿಸಿದೆ.

     

    ನಾಳೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

  • ಸಾರ್ವಜನಿಕ ಆಸ್ಪತ್ರೆ : ಹಾವು ಕಡಿತಕ್ಕೆ ಒಳಗಾದ ಪುಟ್ಟ ಕಂದಮ್ಮನನ್ನು ಉಳಿಸಲು ಆಸ್ಪತ್ರೆ ಸಿಬ್ಬಂದಿಗಳ ಹರಸಾಹಸ : ಸದ್ಯ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂದಮ್ಮ

    ದೊಡ್ಡಬಳ್ಳಾಪುರ : ನಾಗರ ಹಾವು ಕಡಿತಕ್ಕೆ ಒಳಗಾದ ಏಳು ವರ್ಷದ ಅಮೀದ್ ಕುಮಾರ್ ಎಂಬ ಮಗುವಿನ ಪ್ರಾಣ ಉಳಿಸಲು ಸಾಕಷ್ಟು ಪ್ರಯತ್ನ ಮಾಡುವ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

     

    ತಾಲ್ಲೂಕಿನ ಕೋಡಿಹಳ್ಳಿ ಸಮೀಪದಲ್ಲಿ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರ ಕುಟುಂಬ ವಾಸವಿದ್ದು ಇಂದು ಏಳು ವರ್ಷದ ಕಂದಮ್ಮ ಅಮೀದ್ ಕುಮಾರ್ ಗೆ ನಾಗರ ಹಾವು ಕಚ್ಚಿದ್ದು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ಪೋಷಕರು ಕರೆತಂದಿದ್ದಾರೆ. ಮಗುವಿನ ಪರಿಸ್ಥಿತಿ ಬಹಳ ಗಂಭೀರವಾಗಿದ್ದು ಉಸಿರಾಟ ಬಹುತೇಕ ನಿಂತು ಹೋಗಿದ್ದ ಕಾರಣ ಆಸ್ಪತ್ರೆ ವೈದ್ಯರಾದ ಡಾ. ರಾಜು, ಡಾ. ವಿಜಯ ರವರು ಶುಶ್ರೂಷಕ ಅಧಿಕಾರಿಗಳಾದ ದೀಪು, ರಂಜಿತ, ಭವ್ಯ ಹಾಗೂ ಸಿಬ್ಬಂದಿ ವಿಜಯ್ ಸಹಕಾರದೊಂದಿಗೆ ತುರ್ತು ಚಿಕಿತ್ಸೆ ನೀಡಲು ಮುಂದಾಗಿದ್ದು ಸತತ ಪ್ರಯತ್ನದ ಫಲವಾಗಿ ಮಗು ಸ್ವಲ್ಪ ಮಟ್ಟಿಗೆ ಉಸಿರಾಟ ಮಾಡಲು ಪ್ರಾರಂಭಿಸಿದೆ.

    ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲೆನ್ಸ್‌ ನಲ್ಲಿ ಚಾಲಕ ಮಧು ಅವರು ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು,ಸದ್ಯ ಏಳು ವರ್ಷದ ಅಮೀದ್ ಕುಮಾರ್ ರನ್ನು ಮಕ್ಕಳ ತುರ್ತುನಿಗಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

     

    ಮಗುವಿನ ಆರೋಗ್ಯ ಸ್ಥಿತಿ ಈಗಲೂ ಗಂಭೀರವಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ . ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪುಟ್ಟ ಬಾಲಕ ಗುಣಮುಖಲಾಗಲೆಂದು ಆಸ್ಪತ್ರೆ ಸಿಬ್ಬಂದಿ, ಸಾರ್ವಜನಿಕರು ಹಾರೈಸಿದ್ದಾರೆ.

  • ಒಳ ಮೀಸಲಾತಿ ಜಾರಿ : ವಲ್ಲದಮನಸ್ಸಿನಲ್ಲಿ ರಾಜ್ಯಸರ್ಕಾರದ ಘೋಷಣೆಯನ್ನು ಸ್ವಾಗತಿಸಿದ ಮಾದಿಗ ಸಮುದಾಯದ ಮುಖಂಡರು

    ದೊಡ್ಡಬಳ್ಳಾಪುರ : ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ಫಲವಾಗಿ ಒಳ ಮೀಸಲಾತಿ ಜಾರಿಯಾಗಿದೆ. ಈ ಹಿನ್ನಲೆ ಮಾದಿಗ ಸಮುದಾಯದ ಮುಖಂಡರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.

    ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯಗಳ ಒಕ್ಕೂಟದ ವತಿಯಿಂದ ನೆಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳ ಮೀಸಲಾತಿಯನ್ನು ಮಾದಿಗ ಸಮುದಾಯದ ಮುಖಂಡರು ಸ್ವಾಗತಿಸಿದರು.

     

    ಇದೇ ವೇಳೆ ಮುಖಂಡರಾದ ರಾಮಕೃಷ್ಣಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲೇ ಒಳ ಮೀಸಲಾತಿ ಜಾರಿ ಮಾಡುವುದ್ದಾಗಿ ಭರವಸೆ ನೀಡಿತ್ತು. ಅದರಂತೆ ಆಗಸ್ಟ್ 19ರ 2025ರಲ್ಲಿ ಸರ್ಕಾರ ಒಳ ಮೀಸಲಾತಿಯನ್ನ ಜಾರಿ ಮಾಡಿದೆ ಎಂದರು.

     

    101 ಜಾತಿಗಳಲ್ಲಿ ಮಾದಿಗ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಬಗ್ಗೆ ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿಯೂ ಉಲ್ಲೇಖವಾಗಿದೆ.

    ನಾಗಮೋಹನ್ ದಾಸ್ ವರದಿಯಲ್ಲಿ ಪರಿಶಿಷ್ಟ ಜಾತಿಗಳನ್ನ 5 ಭಾಗಗಳಾಗಿ ವಿಂಗಡಿಸಿದ್ದರು, ಸರ್ಕಾರ 3 ಭಾಗಗಳಾಗಿ ವಿಂಗಡಿಸಿ ಒಳ ಮೀಸಲಾತಿ ಜಾರಿ ಮಾಡಿದೆ. ಅತಿ ಹಿಂದುಳಿದ ಜಾತಿಗಳಾಗಿ ಎಡಗೈ ಮತ್ತು ಸಂಬಂಧಿತ ಜಾತಿಗಳನ್ನ ಪವರ್ಗ 1ಕ್ಕೆ ಸೇರಿಸಿ ಶೇಕಡಾ 6ರಷ್ಟು ಮೀಸಲಾತಿ ನೀಡಲಾಗಿದೆ, ಬಲಗೈ ಮತ್ತು ಸಂಬಂಧಿತ ಜಾತಿಗಳನ್ನ ಪವರ್ಗ 2 ಗೆ ಸೇರಿಸಲಾಗಿದ್ದು ಶೇಕಡಾ 6 ರಷ್ಟು ಮೀಸಲಾತಿ ಮತ್ತು ಸ್ಪೃಷ್ಯ ಮತ್ತು ಅಲೆಮಾರಿ ಜಾತಿಗಳಿಗನ್ನ ಪವರ್ಗ 3ರಲ್ಲಿ ಶೇಕಡಾ 5 ರಷ್ಟು ಮೀಸಲಾತಿಯನ್ನ ಘೋಷಣೆ ಮಾಡಲಾಗಿದೆ.

     

    ದೇವರಾಜು ಅರಸುರವರು ಮಾಡಿದ ಒಂದು ಸಣ್ಣ ತಪ್ಪಿನಿಂದ ಸ್ಪೃಷ್ಯ ಜಾತಿಗಳನ್ನ ಎಸ್ಸಿ ಪಟ್ಟಿಗೆ ಸೇರಸಲಾಗಿತು. ಅಲೆಮಾರಿ ಸಮುದಾಯ ಇವತ್ತು ಸ್ಪೃಷ್ಯ ಜಾತಿಗಳನ್ನೊಂದಿಗೆ ಪೈಪೋಟಿ ಮಾಡಲು ಸಾಧ್ಯವಿಲ್ಲ, ಅವರಿಗೆ ಶೇಕಡಾ 1 ರಷ್ಟು ಮೀಸಲಾತಿಯನ್ನ ನೀಡ ಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಗೈ ಮತ್ತು ಎಡಗೈ ಸಮುದಾಯದ ನಾಯಕರೊಂದಿಗೆ ಚರ್ಚಿಸುತ್ತಿದ್ದು, ಅಲೆಮಾರಿ ಸಮುದಾಯಕ್ಕೆ 1ರಷ್ಟು ಮೀಸಲಾತಿ ಸಿಗುವ ಸಾಧ್ಯತೆ ಇದೆ ಎಂದರು .

     

    ನಾಗರಾಜು ಬಚ್ಚಹಳ್ಳಿ ಮಾತನಾಡಿ , ನಾಗಮೋಹನ್ ದಾಸ್ ಕೊಟ್ಟ ವರದಿಯನ್ನ ಸರ್ಕಾರ ಗಾಳಿಗೆ ತೂರಿ ವೊಲೈಕೆ ರಾಜಕೀಯ ಮತ್ತು ಸಮುದಾಯದ ವೋಟ್ ಬ್ಯಾಂಕ್ ಗಾಗಿ ಮಣಿದಿದೆ. ಅಲೆಮಾರಿಗಳು ನಮಗಿಂತ ಕೆಟ್ಟ ಸ್ಥಿತಿಯಲ್ಲಿದ್ದಾರೆ, ಅವರನ್ನ ಸ್ಪೃಶ್ಯ ಜಾತಿಗಳಿಗೆ ಸೇರಿಸಿದ್ದಾರೆ, ಜನಸಂಖ್ಯೆಯಲ್ಲಿ ಹೆಚ್ಚಿರುವು ನಾವೇ ಅವರೊಂದಿಗೆ ಹೋರಾಟ ಮಾಡಿಕೊಂಡು ಬಂದಿದ್ದೇವೆ, ಈ ಇಂತಹ ಪರಿಸ್ಥಿತಿಯಲ್ಲಿ ಅಲೆಮಾರಿಗಳು ಸ್ಪೃಷ್ಯ ಜಾತಿಗಳೊಂದಿಗೆ ಸ್ವರ್ಥಿಸಲು ಸಾಧ್ಯವೇ ಎಂದರು

     

    ದೇವರಾಜು ಅರಸು ನಂತರ ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯನವರ ಕಣ್ಣಿಗೆ ಪೊರೆ ಬಂದಿದೇಯಾ, ಒಳ ಮೀಸಲಾತಿ ಕಾನೂನು ಆಗುವ ಮುನ್ನವೇ ಅಲೆಮಾರಿಗಳನ್ನ ಪವರ್ಗ 1ಕ್ಕೆ ಸೇರಿಸ ಬೇಕು, ಸೇರಿಸದಿದ್ದರೆ ಉಗ್ರ ಹೋರಾಟ ಮಾಡುವುದ್ದಾಗಿ ಹೇಳಿದರು.

     

    ಅಪ್ಪಕಾರನಹಳ್ಳಿ ಹನುಮಯ್ಯ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಸಮುದಾಯದ ಜನಸಂಖ್ಯೆ ಹೆಚ್ಚಿದೆ, ಆದರೆ ನಮಗೆ ಸಿಗಬೇಕಾದ ಪಾಲು ನಮಗೆ ಸಿಕ್ಕಿಲ್ಲ, ಶೇಕಡಾ 1 ರಷ್ಟು ಕಡಿಮೆ ಮೀಸಲಾತಿ ಸಿಕ್ಕಿರುವುದು ವೈಯಕ್ತಿವಾಗಿ ನನಗೆ ಬಹಳ ನೋವಿದೆ. 35 ವರ್ಷಗಳ ಕಾಲ ಒಳ ಮೀಸಲಾತಿಗಾಗಿ ಹೋರಾಟ ಮಾಡಿದ ಹೋರಾಟಗಾರರಿಗೆ ನಾವು ಕೃತಜ್ಞತೆ ಸಲ್ಲಿಸಬೇಕು, ನಮ್ಮ ಅವಿರತ ಹೋರಾಟದ ಫಲ ಸರ್ಕಾರ ಒಳ ಮೀಸಲಾತಿಯನ್ನ ಜಾರಿ ಮಾಡಿದೆ ಎಂದರು.

     

    ಮುಖಂಡರಾದ ವೆಂಕಟೇಶ್ ಮಾತನಾಡಿ, ಒಳ ಮೀಸಲಾತಿಯ ಕೂಗು ಪ್ರಾರಂಭವಾಗಿದ್ದು ದಲಿತ ಮುಖಂಡರಾದ ಮಂದ ಕೃಷ್ಣ ಮಾದಿಗರವರಿಂದ, ರಾಜ್ಯದಲ್ಲಿ ಮಾದಿಗ ದಂಡೋರ ಹೋರಾಟಗಾರರ ಶ್ರಮದಿಂದ ಹೋರಾಟ ತೀರ್ವ ಸ್ವರೂಪವನ್ನ ಪಡೆಯಿತು, ಸ್ವಂತ ಕೆಲಸ ಬಿಟ್ಟು ಹೋರಾಟ ಮಾಡಿದ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಕೆ.ಎಚ್.ಮುನಿಯಪ್ಪ. ಹೆಚ್.ಆಂಜನೇಯ, ಹಾಲ್ಕೋಡ್ ಹನುಮಂತಪ್ಪ, ನಾರಾಯಣಸ್ವಾಮಿಯವರ ಹೋರಾಟ ಸಹ ಒಳ ಮೀಸಲಾತಿ ಜಾರಿಯಾಗಲು ಕಾರಣವಾಗಿದೆ ಅವರಿಗೂ ಅಭಿನಂದನೆ ಸಲ್ಲಿಸುವುದ್ದಾಗಿ ಹೇಳಿದರು.

     

     

    ವಕೀಲರಾದ ಕಾಂತರಾಜು ಮಾತನಾಡಿ, ಒಳ ಮೀಸಲಾತಿಗೆ ಕಳೆದ 35 ವರ್ಷಗಳ ಹೋರಾಟ ಮಾಡಿದ ಸಮುದಾಯ ಮತ್ತು ಮೂರು ದಿನ ಹೋರಾಟ ಮಾಡಿದ ಸಮುದಾಯಕ್ಕೆ ಸಮವಾಗಿ ಶೇಕಡಾ 6ರಷ್ಟು ಮೀಸಲಾತಿಯನ್ನ ನೀಡಿರುವುದು ಅನ್ಯಾಯ, ನಮ್ಮ ಹೋರಾಟದಲ್ಲಿ ಮಡಿದವರಿಗೆ ಸಿಕ್ಕ ಫಲವೇ ಇದು. ನಮಗೆ ಇದು ತೃಪ್ತಿ ನೀಡಿಲ್ಲ, ಮತ್ತೆ ಹೋರಾಟ ಮಾಡುವ ಶಕ್ತಿ ಇಲ್ಲದ ಕಾರಣಕ್ಕೆ ಇದನ್ನೇ ಒಪ್ಪಿಕೊಳ್ಳುತ್ತೇವೆ. ಅಲೆಮಾರಿಗಳ ಸಿಗಬೇಕಾದ 1ರಷ್ಟು ಮೀಸಲಾತಿಯನ್ನ ಕಿತ್ತುಕೊಳ್ಳಲಾಗಿದೆ, ಅವರಿಗೆ 1 ರಷ್ಟು ಮೀಸಲಾತಿಯನ್ನ ಕೊಡುವವರೆಗೂ ಮಾದಿಗ ಸಮುದಾಯ ಅವರೊಂದಿಗೆ ಇರುವುದ್ದಾಗಿ ಹೇಳಿದರು.

     

    ರಾಮಾಮೂರ್ತಿ (ರಾಮು) ನೇರಳಘಟ್ಟ ಮಾತನಾಡಿ, ಒಳ ಮೀಸಲಾತಿಗಾಗಿ ಹೋರಾಟ ಮಾಡಿದ ಹೋರಾಟಗಾರರಿಗೆ ಗೌರವ ಸಲ್ಲಿಸುವೆ. ಸರ್ಕಾರ ಜಾರಿ ಮಾಡಿರುವ ಒಳ ಮೀಸಲಾತಿ ಅನ್ಯಾಯದಿಂದ ಕೂಡಿದೆ, ಅಲೆಮಾರಿಗಳಿಗೆ ಘೋರ ಅನ್ಯಾಯ ಮಾಡಲಾಗಿದೆ, ಅವರಿಗೆ ಒಳ ಮೀಸಲಾತಿ ಸಿಕ್ಕಾಗ ಮಾತ್ರ ನಾವು ಖುಷಿಯಿಂದ ಆಚರಿಸುತ್ತವೆ ಎಂದರು.

    ತಳವಾರ ನಾಗರಾಜು ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನ ನೀಡದೆ, ಬಲಾಢ್ಯರ ಒತ್ತಡಕ್ಕೆ ಮಣಿದು ಒಳ ಮೀಸಲಾತಿಯನ್ನ ನೀಡಿರುವುದು ನಮಗೆ ಬಹಳ ನೋವು ತಂದಿದೆ, ನಮ್ಮ ಪಾಲು ನಮಗೆ ನೀಡಿದ್ದಾರೆ ನಮ್ಮ ಮಾದಿಗ ಸಮುದಾಯ ನಿಮ್ಮನ್ನು ರಾಜರಂತೆ ಮೇರೆಸುತ್ತಿದ್ದೇವು. ಅದರೆ ಸಂಭ್ರಮಾಚರಣೆ ಮಾಡುವ ಮನಸ್ಸು ನಮಗಿಲ್ಲ, ಈ ನೋವಿನಲ್ಲೇ ನಾವು ಒಳ ಮೀಸಲಾತಿಯನ್ನ ಒಪ್ಪಿಕೊಳ್ಳುತ್ತಿದ್ದೇವೆ ಎಂದರು.

    ಟಿ.ಡಿ.ಮುನಿಯಪ್ಪ ಮಾತನಾಡಿ, ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿರುವುದು ನಮಗೆ ಖುಷಿ ಇದೆ. ಆದರೆ ಖುಷಿಯಲ್ಲಿಯೂ ನೋವಿದೆ, ನಮ್ಮ ಪಾಲು ನಮಗೆ ಸಿಕ್ಕಿಲ್ಲ, ಸಿಕ್ಕಿರುವ ಪಾಲನ್ನು ನಾವು ಸ್ವೀಕರಿಸುತ್ತೇವೆ. ಒಳ ಮೀಸಲಾತಿಗಾಗಿ ಪಕ್ಷಾತೀತವಾಗಿ ಹೋರಾಟ ಮಾಡಿದ ರಾಜಕೀಯ ನಾಯಕರು, ಹೋರಾಟಗಾರರು ಮತ್ತು ಅಧಿಕಾರಿಗಳಿಗೆ ವಿಶೇಷ ಕೃತಜ್ಞತೆಯನ್ನ ಸಲ್ಲಿಸುತ್ತೇವೆ ಎಂದರು.

     

    ಶಿವಣ್ಣ ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಸರ್ಕಾರ ಒಳ ಮೀಸಲಾತಿಯನ್ನ ಜಾರಿ ಮಾಡಿದೆ, ಸರ್ಕಾರಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರರವರ ಶ್ರಮ ಸಹ ಇದೆ, ಒಳ ಮೀಸಲಾತಿಯನ್ನ ಜಾರಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವನ್ನ ದೊಡ್ಡಬಳ್ಳಾಪುರಕ್ಕೆ ಕರೆಸಿ ಅವರಿಗೆ ಸನ್ಮಾನಿಸುವ ಮೂಲಕ ನಾವು ಕೃತಜ್ಞತೆ ಸಲ್ಲಿಸಬೇಕೆಂದರು.

    ಪತ್ರಿಕಾಗೋಷ್ಠಿಯಲ್ಲಿ ನಾಗರಾಜು ಬಚ್ಚಹಳ್ಳಿ, ರಾಮಕೃಷ್ಣಪ್ಪ ದೊಡ್ಡ ತುಮಕೂರು, ವೆಂಕಟೇಶ್ ದೊಡ್ಡತುಮಕೂರು, ಹನುಮಣ್ಣ ಅಪಕಾರನಹಳ್ಳಿ, ಟಿ ಡಿ ಮುನಿಯಪ್ಪ, ಗಂಗರಾಜು ನರಸಿಂಹನಹಳ್ಳಿ, ರಾಮು ನೇರಳಘಟ್ಟ, ನರಸಪ್ಪ ಗುಂಡುಮಗೆರೆ , ಮೈಲಾರಪ್ಪ ಎಸ್ ನಾಗೇನಹಳ್ಳಿ, ತಳವಾರ ನಾಗರಾಜು, ಕೆ ನಾರಾಯಣಪ್ಪ, ಹರ್ಷ ಹಾದ್ರಿಪುರ, ಕಾಂತರಾಜು ರಾಜಘಟ್ಟ, ಮುನಿಯಪ್ಪ ಕರೀಂ ಸೊಳ್ಳೆನಹಳ್ಳಿ, ಗಂಗರಾಜು ತಿಪ್ಪಾಪುರ ಹಾಜರಿದ್ದರು.

  • ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಬಳಸದೆ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ

    ಇದೇ ಆಗಸ್ಟ್ 26 ಮತ್ತು 27 ರಂದು ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬದ ಆಚರಣೆ ಮಾಡುವ ಸಲುವಾಗಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಇನ್ನೂ ಮುಂದೆ ರಾಜ್ಯದ ಯಾವುದೇ ಕೆರೆ ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜಿಸುವುದನ್ನು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ನಿಷೇಧಿಸಿದೆ.

     

    ಸಾರ್ವಜನಿಕರು ಸಾಮಾನ್ಯವಾಗಿ ಪಿ.ಒ.ಪಿ ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ,ಬಾವಿ, ಕಲ್ಯಾಣಿಗಳಲ್ಲಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು ಸಂಪ್ರದಾಯವಾಗಿದ್ದು, ಈ ರೀತಿ ವಿಸರ್ಜಿಸುವುದರಿಂದ ನೈಸರ್ಗಿಕ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಪಿಒಪಿ ವಿಗ್ರಹಗಳಿಂದ ಭೌತಿಕ ಹಾಗೂ ರಾಸಾಯನಿಕವಾಗಿ ನೀರಿನ ಗುಣಗಳು ಮಾರ್ಪಟ್ಟು ಪರಿಸರದ ಮೇಲೆ ಆಗುವ ದುಷ್ಪರಿಣಾಮದಿಂದ ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಅದಲ್ಲದೆ ಅ ನೀರನ್ನು ಬಳಸುವುದರಿಂದ ಮನುಷ್ಯನ ಆರೋಗ್ಯದಲ್ಲಿ ಏರು-ಪೇರು ಉಂಟಾಗುತ್ತದೆ.

     

    ಪಿಒಪಿ ವಿಗ್ರಹಗಳು ನೀರಿನಲ್ಲಿ ಕರಗುವುದಿಲ್ಲ ಮತ್ತು ನೀರಿನ ಮೂಲಗಳ ಆಮ್ಲೀಯತೆಯನ್ನು ಹೆಚ್ಚಿಸುವುದರಿಂದ ಜಲಚರಗಳಿಗೆ ಹಾನಿಕಾರಕವಾಗಿದೆ. ಜಲಮೂಲಗಳ ಮಾಲಿನ್ಯದಿಂದಾಗಿ ಇಡೀ ಪರಿಸರ ವ್ಯವಸ್ಥೆಯು ಅಸಮತೋಲನಗೊಳ್ಳುತ್ತದೆ. ಪ್ಲಾಸ್ಟರ್ ಅಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ತಯಾರಿಸಬಾರದೆಂದು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ ಕಾಯ್ದೆ ಅನ್ವಯ ರಾಜ್ಯದ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ.

     

    ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಬಣ್ಣರಹಿತ ಮಣ್ಣಿನ ಅಥವಾ ನೈಸರ್ಗಿಕ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ,

    ತದನಂತರ ಗೌರಿ ಗಣೇಶ ಮೂರ್ತಿಗಳನ್ನು ನಗರಸಭೆ/ಪುರಸಭೆ/ಪಟ್ಟಣ ಪಂಚಾಯಿತಿ ವತಿಯಿಂದ ನಿಗಧಿಪಡಿಸಿರುವ ಸ್ಥಳಗಳಲ್ಲಿ ಅಥವಾ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಚಾರಿ ವಾಹನದಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸುವುದು.

     

    ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಹಸಿ ಕಸ (ಹೂ, ಹಣ್ಣು, ಬಾಳೆ ಕಂಬ,ಮಾವಿನ ತೋರಣ ಇತ್ಯಾದಿ ಅಲಂಕಾರಿಕ ವಸ್ತುಗಳು) ಮತ್ತು ಒಣಕಸವಾಗಿ ಪ್ರತ್ಯೇಕಿಸಬೇಕು.

    ಸಾರ್ವಜನಿಕವಾಗಿ ನಡೆಸುವ ಗಣೇಶ ಮೂರ್ತಿಯ ಉತ್ಸವದ ಅಲಂಕಾರಕ್ಕೆ ಮತ್ತು ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು, ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬೇಡಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

  • ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸರ್ವಸದಸ್ಯರ ಮಹಾಸಭೆ ಮತ್ತು ಜಿಲ್ಲಾ ಪತ್ರಿಕಾ ದಿನದ ಆಚರಣೆ

    ದೊಡ್ಡಬಳ್ಳಾಪುರ : ಪತ್ರಕರ್ತರು ಸಮಾಜದ ಅಂಕು ಡೊಂಕು ಗಳನ್ನು ತಮ್ಮ ಬರವಣಿಗೆ ಯಿಂದ ಯಾವುದೇ ಪಕ್ಷಪಾತವಿಲ್ಲದೆ ತಿದ್ದಬೇಕು, ಸಮಾಜದಲ್ಲಿ ನೆಡೆಯುವ ತಪ್ಪುಗಳನ್ನು ಯಾವುದೇ ಅಂಜಿಕೆ ಇಲ್ಲದೇ ಪ್ರಶ್ನಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಮುಖ್ಯವಾದುದ್ದು ಎಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ ತಿಳಿಸಿದರು.

    ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯದ ಎ.ಎಸ್.ವಿ.ಎನ್.ವಿ ಸಮುದಾಯ ಭವನದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವಸದಸ್ಯರ ಮಹಾಸಭೆ ಮತ್ತು ಜಿಲ್ಲಾ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಮನರಂಜನೆಗೆ ಪತ್ರಿಕೋದ್ಯಮ ಹೆಚ್ಚಾಗಿ ಪ್ರಾಮುಖ್ಯತೆ ನೀಡಲು ಮುಂದಾಗುತ್ತಿದೆ. ಅನ್ಯಾಯದ ಪರ ಧ್ವನಿಯಾಗಿ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ , ಸಮಾಜದಲ್ಲಿ ನಡೆಯುವ ಮೋಸ, ವಂಚನೆ, ಅನ್ಯಾಯವನ್ನು ನಮ್ಮ ಬರವಣಿಗೆ ಮೂಲಕ ಪ್ರಶ್ನಿಸುವುದನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು.

    ಇಂದಿನ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

     

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್ ಮಾತನಾಡಿ ಪತ್ರಕರ್ತರಲ್ಲಿ ದೈನಂದಿಕ,ವಾರ,ಅಥವಾ ಮಾಸಿಕ ವರದಿ ಮಾಡುವ ವಿಧಾನ ಬೇರೆಯಾಗಿರುತ್ತದೆ ಅಷ್ಟೇ ಆದರೇ ಪತ್ರಿಕೋದ್ಯಮದಲ್ಲಿ ಎಲ್ಲರು ಸಮಾನರೇ ಹಾಗಾಗಿ ನಮ್ಮಿಂದ ಬರವಣಿಗೆ ರೂಪದಲ್ಲಿ ಸಮಾಜಕ್ಕೆ ನೀಡುವ ಕೊಡುಗೆ ಸಾಕಷ್ಟಿದೆ ಎಂಬುದನ್ನು ನಾವೆಲ್ಲರೂ ಅರಿಯಬೇಕು, ನ್ಯಾಯ ಪರವಾಗಿ ಸುದ್ದಿ ಮಾಡಿ.ರಾಜ್ಯದ ಯಾವುದೇ ಪತ್ರಕರ್ತರಿಗೆ ಸಮಸ್ಯೆ ಉಂಟಾದಲ್ಲಿ ನಿಮ್ಮೊಟ್ಟಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿಂತು ಹೋರಾಟ ನೆಡೆಸುತ್ತದೆ.

    ಇತಿಹಾಸ ಹೊಂದಿರುವ ನಮ್ಮ ಸಂಘಟನೆ ಅಧಿಕೃತವಾಗಿದ್ದು ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ತನ್ನದೇ ಆದ ಶಕ್ತಿ, ಘಟಕ, ಹಾಗೂ ಸಕ್ರಿಯ ಪದಾಧಿಕಾರಿಗಳನ್ನು ಹೊಂದಿದೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಹೊಂದಿದ್ದೇವೆ ಎಂಬುದೇ ಒಂದು ರೀತಿಯ ಹೆಮ್ಮೆಯ ಸಂಗತಿಯಾಗಿದೆ ಅದನ್ನು ನಾವೆಲ್ಲ ಅರಿತು ಕೊಳ್ಳಬೇಕು ಎಂದರು.

    ಇದೆ ಸಂದರ್ಭದಲ್ಲಿ ಸಕ್ರಿಯ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು.

     

     

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ಕಾರ್ಯನಿರತ ಪತ್ರಕರ್ತರ ರಾಷ್ಟ್ರೀಯಾಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್ . ಸಿ.ಪಿ.ಕುಸುಮಾ ಪರ್ವತರಾಜ್, ಬಸವರಾಜು, ಶ್ರೀ ಕ್ಷೇತ್ರ ಘಾಟಿ ಅಭಿವೃದ್ಧಿ ಕಾರ್ಯದರ್ಶಿ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್,ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ರಮೇಶ್, ದೊಡ್ಡಬಳ್ಳಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್ ಡಿ.ಉಪ್ಪಾರ್ , ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ನೆಲಗುದಿಗೆ, ಸೇರಿದಂತೆ ಜಿಲ್ಲಾ ಹಾಗು ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

  • ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗದಿಂದ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ*

    ಜಿಲ್ಲೆಯಲ್ಲಿ 2025-26ನೇ ಸಾಲಿಗೆ ಸಂಬಂಧಿಸಿದಂತೆ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭಿವೃದ್ದಿಗಾಗಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗದಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

     

    ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಕುರಿ ಸಾಕಾಣಿಕೆ ಯೋಜನೆ (ಕಿರು ಆರ್ಥಿಕ ಚಟುವಟಿಕೆಗಳಿಗೆ)ಮತ್ತು ನೇರ ಸಾಲ ಯೋಜನೆ (ಸಹಾಯಧನ ಗರಿಷ್ಠ ರೂ,2 ಲಕ್ಷ). ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಲ್ಲಿ ಹೈನುಗಾರಿಕೆ (ಸಹಾಯಧನ ಗರಿಷ್ಠ ರೂ, 1.25 ಲಕ್ಷ), ಫಾಸ್ಟ್ ಫುಡ್ ಟ್ರಕ್, ಟ್ರೈಲರ್/ ಮೊಬೈಲ್ ಕಿಚನ್ ಫುಡ್ ಕಿಯೋಸ್ಟ್ (ಸಹಾಯಧನ ಗರಿಷ್ಠ ರೂ, 4 ಲಕ್ಷ), ಸ್ವಾವಲಂಭಿ ಸಾರಥಿ ಯೋಜನೆ (ಸರಕು ವಾಹನ/ಟ್ಯಾಕ್ಸಿ ಹಳದಿ ಬೋರ್ಡ್, ಸಹಾಯಧನ ಗರಿಷ್ಠ ರೂ,4 ಲಕ್ಷ). ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಯಡಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ. ಭೂ ಒಡೆತನ ಯೋಜನೆಯಡಿ ಭೂ ರಹಿತ ಮಹಿಳಾ ಕಾರ್ಮಿಕರಿಗೆ ಭೂಮಿಯನ್ನು ಖರೀದಿಸಲು ಸಹಾಯಧನ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸುವ ಸೌಲಭ್ಯ.

     

    ಅರ್ಹ ಫಲಾನುಭವಿಗಳು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯದವರು ಅರ್ಜಿಗಳನ್ನು ನೇರವಾಗಿ ಅನ್ ಲೈನ್ ಮೂಲಕ ಅಧಿಕೃತ ಜಾಲತಾಣವಾದ https://sevasindhu.karnataka.gov.in ನಲ್ಲಿ ಅಥವಾ ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಗಳಲ್ಲಿ ಅರ್ಜಿಯನ್ನು ಸೆಪ್ಟೆಂಬರ್ 10 ರೊಳಗೆ ಸಲ್ಲಿಸಬೇಕು.

     

    2023-24 ಮತ್ತು 2024-25ನೇ ಸಾಲಿನಲ್ಲಿ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

     

    ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಚೇರಿ ಅಥವಾ ಆಯಾ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳನ್ನು ದೇವನಹಳ್ಳಿ – 8050854019, ದೊಡ್ಡಬಳ್ಳಾಪುರ – 8050854020, ಹೊಸಕೋಟೆ – 8050854021, ನೆಲಮಂಗಲ – 8050854022 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

  • ತಾಲ್ಲೂಕು ಕಛೇರಿಯಲ್ಲಿ ಲಂಚವಿಲ್ಲದೆ ಯಾವ ಸರ್ಕಾರಿ ಕೆಲಸಗಳು ನಡೆಯುವುದಿಲ್ಲ – ಎ. ನಂಜಪ್ಪ

    ದೊಡ್ಡಬಳ್ಳಾಪುರ : ತಾಲ್ಲೂಕು ಆಡಳಿತ ಕಛೇರಿಗಳಾದ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ದಳ್ಳಾಳಿಗಳ ಹಾವಳಿ ಹೆಚ್ಚಾಗಿದ್ದು, ತಮ್ಮ ಕೆಲಸಗಳ ನಿಮಿತ್ಯ ತಾಲ್ಲೂಕು ಕಛೇರಿಗೆ ಬರುವ ಸಾಮಾನ್ಯ ಜನರನ್ನು ದಿಕ್ಕುತಪ್ಪಿಸಿ ವಂಚಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ತಾಲ್ಲೂಕು ಕಛೇರಿಯಲ್ಲಿ ಲಂಚವಿಲ್ಲದೆ ಯಾವ ಸರ್ಕಾರಿ ಕೆಲಸಗಳು ನಡೆಯುವುದಿಲ್ಲ ಎಂದು ತಾಲ್ಲೂಕಿನ ನಾಗರೀಕರು ನಮ್ಮ ಸಂಘಟನೆಗೆ ನೂರಾರು ದೂರುಗಳುನಮ್ಮನೀಡಿದ್ದಾರೆ ಎಂದು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎ. ನಂಜಪ್ಪ ಆರೋಪಿಸಿದರು.

     

    ಪ್ರತಿಭಟನೆ ಕುರಿತು ಸಂಘಟನೆಯ ಪ್ರಮುಖರು  ಉಪವಿಭಾಗ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು

     

    ಇಂದು ನಗರದ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಮುಂಭಾಗ ತಾಲ್ಲೂಕು ಆಡಳಿತ ಕಛೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಸಾಮಾನ್ಯ ಜನರ ಕೈಗೆ ಸಿಗದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿಯುಂಟಾಗಿದೆ ಎಂದು ಆರೋಪಿಸಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ನೆಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದೊಡ್ಡಬಳ್ಳಾಪುರ ತಾಲ್ಲೂಕು ಸಾಸಲು ಹೋಬಳಿ ಹಳೇಕೋಟೆ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಜಲ್ಲಿ ಕ್ಲಸ್ಟರ್ ನಿರ್ಮಿಸಿ ದಿನನಿತ್ಯ ಬಾರಿ ಗಾತ್ರದ ಟಿಪ್ಪರ್ ವಾಹನಗಳ ಸಂಚರಿಸುವ ಮುಖೇನ ಸಾರ್ವಜನಿಕರು ದಿನನಿತ್ಯ ಸಂಚರಿಸುವ ರಸ್ತೆಯು ಹದಗೆಟ್ಟು ಅಪಘಾತ ಅನಾಹುತಗಳು ಸಂಭವಿಸುತ್ತಿವೆ. ಅಲ್ಲದೆ ಇದರಿಂದ ಗ್ರಾಮದ ಸುತ್ತಮುತ್ತಲ ರೈತರಿಗೂ ಪರಿಸರಕ್ಕೂ ತುಂಬಾ ತೊಂದರೆಯಾಗುತ್ತಿದ್ದು, ಈ ಕುರಿತು ಉಪವಿಭಾಗಾಧಿಕಾರಿಗಳು ಹಾಗೂ ಮಾನ್ಯ ತಹಶೀಲ್ದಾರ್ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು

     

    ಪ್ರತಿಭಟನೆಯಲ್ಲಿ ರಾಜ್ಯ ಮುಖಂಡರಾದ ಬಿ.ನಯಜ್ ಖಾನ್, ಸೋಮರಾಜು, ಗಂಗರಾಜಪ್ಪ, ಜಿಲ್ಲಾ ಪ್ರಮುಖರಾದ ಮಂಜುನಾಥ್, ಪ್ರವೀಣ್ ಕುಮಾರ್, ಫಿರ್ ಪಾಷಾ, ನಾಗರಾಧ್ಯಕ್ಷ ಚಂದ್ರ,ನಾಗಮಣಿ, ಮುಖಂಡರಾದ ಚಂದ್ರಶೇಖರಯ್ಯಾ, ಮಹಿಳಾ ಮುಖಂಡರಾದ ಕುಮುದಾ, ಶಶಿಕಲಾ, ರಾಗಿಣಿ, ನಗರತ್ನಮ್ಮ, ಹಾಜರಿದ್ದರು.

  • ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಡಾ.ಪ್ರದೀಪ್ತಾ ಕುಮಾರ್ ನಾಯಕ್

    ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕುಷ್ಠರೋಗವು ಒಂದು ಬಾಧಿತ ರೋಗವಾಗಿದ್ದು, ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಅಧಿಕಾರಿಗಳು ನಿರಂತರ ಕಾರ್ಯ ಪ್ರವೃತ್ತರಾಗಿರಬೇಕು ಎಂದು ಕೇಂದ್ರ ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಡಾ.ಪ್ರದೀಪ್ತಾ ಕುಮಾರ ನಾಯಕ್ ಅವರು ಹೇಳಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಷ್ಠರೋಗ ಪ್ರಕರಣಗಳ ಸಮೀಕ್ಷೆ ಹಾಗೂ ಸರ್ಕಾರದ ಸೌಲಭ್ಯಗಳ ಬಗೆಗಿನ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು ರೋಗದ ಆರಂಭಿಕ ಲಕ್ಷಣಗಳ ಪತ್ತೆಯಿಂದ ಕುಷ್ಠರೋಗವನ್ನು ನಿಯಂತ್ರಿಸಬಹುದು. ರೋಗದ ಲಕ್ಷಣಗಳು ಕಂಡುಬಂದ ತಕ್ಷಣವೇ ಅದನ್ನು ಪತ್ತೆ ಹಚ್ಚಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜೊತೆಗೆ, ಪ್ರಾಥಮಿಕ ಹಂತದಲ್ಲಿಯೇ ವೈದ್ಯಕೀಯ ಸೇವೆಗಳನ್ನು ನೀಡುವುದರಿಂದ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

     

    ಆರೋಗ್ಯ ಇಲಾಖೆ ಜೊತೆಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಸ್ಥೆಗಳು ಸಾರ್ವಜನಿಕರಿಗೆ ಅರಿವು ಮೂಡಿಸಿ. ಎಲ್ಲಾ ಇಲಾಖೆಗಳ ಸಹಕಾರ ಮತ್ತು ಸಮನ್ವಯತೆ ಇಂದ ಕುಷ್ಠರೋಗ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದರು.

     

    *ಜಿಲ್ಲೆಯಲ್ಲಿ 202 ಸಕ್ರಿಯ ಪ್ರಕರಣಗಳು*

     

     

    ಕುಷ್ಠರೋಗ ಹೊಂದಿರುವ ಮತ್ತು ಕುಷ್ಠರೋಗದಿಂದ ಅಂಗವಿಕಲತೆಗೆ ಬಾಧಿತರಾದ ಐವರು ಮಕ್ಕಳು ಸೇರಿದಂತೆ ಒಟ್ಟು 202 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಈ ರೋಗದಿಂದ ಬಳಲುವವರಿಗೆ ಇಲಾಖೆಯಿಂದ ದೃಢೀಕರಣ ಪತ್ರಗಳನ್ನು ನೀಡಿ ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳನ್ನು ಅವರಿಗೆ ಪೂರೈಸುವಂತೆ ಮಾಡಬೇಕು.

     

    ಸಂಬಂಧಪಟ್ಟ ಇಲಾಖೆಗಳು ಸರ್ಕಾರದಿಂದ ಸಿಗುವ ಆರೋಗ್ಯ ಸೇವೆ, ಪಿಂಚಣಿ ಸೌಲಭ್ಯ, ಮನೆ ಸೌಲಭ್ಯ, ರೇಷನ್, ಶಿಕ್ಷಣ ಹಾಗೂ ಇತರೆ ಸವಲತ್ತುಗಳು ಎಲ್ಲಾ ಸಂತ್ರಸ್ತರಿಗೆ ಸಿಗಬೇಕು. ಸಮಾಜದ ಮುನ್ನೆಲೆಗೆ ಅವರನ್ನು ತಂದು ಸಾಮಾನತೆಯಿಂದ ಕಾಣುವುದು ಮಾನವವೀಯತೆ ಗುಣ. ಆ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಿ ಎಂದರು.

     

    ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಡಾ.ಕೆಎನ್ ಅನುರಾಧ, ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಅಧಿಕಾರಿ ಡಾ. ಉಮಾ ಎಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಜಿಲ್ಲಾ ಆರೋಗ್ಯಾಧಿಕಾರಿ ಲಕ್ಕಾ ಕೃಷ್ಣ ರೆಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ನಾಗರಾಜ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

     

  • ಬ್ಯಾಂಕ್ ನಿಂದ ಗ್ರಾಹಕರಿಗೆ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ – ನಂಜಮರಿಯಪ್ಪ

    ದೊಡ್ಡಬಳ್ಳಾಪುರ : ಕೆನರಾಬ್ಯಾಂಕ್ ವತಿಯಿಂದ ತಾಲ್ಲೂಕಿನ ಕೊನಘಟ್ಟ ಗ್ರಾಮದಲ್ಲಿ 3 ತಿಂಗಳ ಹಣಕಾಸು ಸೇರ್ಪಡೆ ಅಭಿಯಾನ ಕಾರ್ಯಕ್ರಮ ನೆಡೆಯಿತು.

    ಕೊನಘಟ್ಟ ಗ್ರಾಮದ ಕೆನರಾಬ್ಯಾಂಕ್ ಮುಂಭಾಗದ ನೆಡೆದ ಕಾರ್ಯಕ್ರಮದಲ್ಲಿ PMJDY, APY, REKYC, PMSBY, PMJJYY ಯೋಜನೆಗಳಗೆ ಬಗ್ಗೆ ಹಾಗೂ ಬ್ಯಾಂಕ್ ನಿಂದ ಗ್ರಾಹಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಕೊನಘಟ್ಟ ಕೆನರಾಬ್ಯಾಂಕ್ ಘಟಕದ ವ್ಯವಸ್ಥಾಪಕರಾದ ಉದಯ್ ಕಿರಣ್ ತಿಳಿಸಿದರು.

    ಬ್ಯಾಂಕಿನಿಂದ ವರ್ಷಕ್ಕೆ 20 ರೂಗಳ ವಿಮೆಪಡೆಯುವ ಮೂಲಕ ಅಫಘಾತಗಳಲ್ಲಿ ಮೃತಪಟ್ಟರ ಕುಟುಂಬಕ್ಕೆ ಕನಿಷ್ಠ ಎರಡು ಲಕ್ಷ ರೂಪಾಯಿಗಳ ವಿಮಾಹಣ ದೊರೆಯಲಿದ್ದು ಈ ವಿಮೆಯನ್ನು ಎಲ್ಲಾ ಗ್ರಾಹಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.

    ಇತ್ತೀಚಿನ ದಿನಗಳಲ್ಲಿ ಕೆಲವರು ಬ್ಯಾಂಕಿನ ಹೆಸರಲ್ಲಿ ಜನರಿಗೆ ಹಲವರು ವಂಚನೆ ಮಾಡಲು ಮುಂದಾಗಿದ್ದಾರೆ. ವಂಚನೆಗೆ ಒಳಗಾದ ಸಂದರ್ಭಗಳಲ್ಲಿ ಗ್ರಾಹಕರು 1930 ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸುವುದರಿಂದ ಶೀಘ್ರ ಸಹಾಯ ಪಡೆಯಬಹುದಾಗಿದೆ ಎಂದರು.

    ಲಿಂಗನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ನಂಜಮರಿಯಪ್ಪನವರು ಮಾತನಾಡಿ ನಮ್ಮ ಗ್ರಾಮದಜನ ಮೊದಲು ಬ್ಯಾಂಕಿನ ವಹಿವಾಟು ನೆಡೆಸಲು ದೊಡ್ಡಬಳ್ಳಾಪುರ ನಗರಕ್ಕೆ ಹೋಗಬೇಕಿತ್ತು. ದೇವರ ದಯೆಯಿಂದ ಈಗ ಕೊನಘಟ್ಟ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಕರ್ತವ್ಯ ನಿರ್ವಹಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ನಮ್ಮೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಐಎಡಿಬಿ ಯಿಂದ ಬಹಳಷ್ಟು ಹಣ ಬಂದಿದೆ. ಇಂತಹ ಸಂದರ್ಭದಲ್ಲಿ ಕೊನಘಟ್ಟ ಕೆನರಾ ಬ್ಯಾಂಕಿನಲ್ಲಿ ಹಣ ಠೇವಣಿ ಮಾಡುವುದರಿಂದ ಬ್ಯಾಂಕ್ ಸಹ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾಣಬಹುದಾಗಿದೆ ಎಂದು ತಿಳಿಸಿದರು.

     

    ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಶ್ರೀಶಂಬುಲಾಲ್, ಕೊನಘಟ್ಟ ಕೆನರಾಬ್ಯಾಂಕ್ ಘಟಕದ ವ್ಯವಸ್ಥಾಪಕರಾದ ಉದಯಕಿರಣ್, ದೇವನಹಳ್ಳಿ ಪ್ರಾದೇಶಿಕ ಕಛೇರಿ ಕೆನರಾ ಬ್ಯಾಂಕ್ ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀಕೃಷ್ಣ ಚೈತನ್ಯರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀರಾಮಾಂಜಿ ಹಾಗೂ ಸ್ಥಳೀಯ ಮುಖಂಡರಾದ ರಾಮಾಂಜಿನಪ್ಪ. ನಂಜಮರಿಯಪ್ಪ, ಸುಬ್ಬಣ್ಣ ಸೇರಿದಂತೆ ಕೊನಘಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.