Blog

  • ತೂಬಗೆರೆ : ಸಲ್ಲಾಪುರಮ್ಮ ದೇವಾಲಯ ಲೋಕಾರ್ಪಣೆ

    ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಗ್ರಾಮದೇವತೆ  ಶ್ರೀ ಸಲ್ಲಾಪುರಮ್ಮ ದೇವಾಲಯವು ಇತ್ತೀಚೆಗೆ ನವೀಕರಿಸಲ್ಪಟ್ಟು ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

     

    ದೇವಾಲಯದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಹೊಸದಾಗಿ ನಿರ್ಮಿಸಲಾದ ಕಪ್ಪುಕಲ್ಲಿನ ದೇವಿ ವಿಗ್ರಹವನ್ನು ವೈದಿಕ ಮಂತ್ರೋಚ್ಚಾರಣೆಯ ಮಧ್ಯೆ ಪ್ರತಿಷ್ಠಾಪಿಸಲಾಯಿತು.

    ಸಮಾರಂಭದ ಅಂಗವಾಗಿ ವೈದಿಕರು ಶಾಸ್ತ್ರೋಕ್ತ ವಿಧಾನದಲ್ಲಿ ಹೋಮ–ಹವನಗಳನ್ನು ನೆರವೇರಿಸಿ, ಪೂರ್ಣಾಹುತಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಕ್ತರು ಧಾರ್ಮಿಕ ಉತ್ಸಾಹದಿಂದ ದೇವಿಯನ್ನು ಪೂಜಿಸಿ ಆಶೀರ್ವಾದ ಪಡೆದರು.

     

    ಲೋಕಾರ್ಪಣಾ ಸಮಾರಂಭದಲ್ಲಿ ಗ್ರಾಮಸ್ಥರು, ಸುತ್ತಮುತ್ತಲಿನ ಹಳ್ಳಿಗಳ ಭಕ್ತರು, ಹಿರಿಯರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಗ್ರಾಮ ದೇವತೆ ದೇವಿ ಸಲ್ಲಾಪುರಮ್ಮನ ಆಶೀರ್ವಾದವನ್ನು ಕೋರಿದರು. ಧಾರ್ಮಿಕ ವಿಧಿವಿಧಾನಗಳ ಬಳಿಕ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು.

    ತೂಬಗೆರೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸಲ್ಲಾಪುರಮ್ಮ ದೇವಿ “ಗ್ರಾಮದ ಅಮ್ಮ” ಎಂಬ ನಂಬಿಕೆ ಜನಮನದಲ್ಲಿ ಬೇರೂರಿದ್ದು, ಪ್ರತಿವರ್ಷದ ಹಬ್ಬ–ಹರಿದಿನಗಳಲ್ಲಿ ನೂರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಇತ್ತೀಚಿನ ಜೀರ್ಣೋದ್ಧಾರ ಹಾಗೂ ವಿಗ್ರಹ ಪ್ರತಿಷ್ಠಾಪನೆಯಿಂದ ದೇವಸ್ಥಾನವು ಇನ್ನಷ್ಟು ಭಕ್ತರ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ದೇವಾಲಯದ ಪೂಜಾರಿ ವಿಜಯ್ ತಿಳಿಸಿದರು.

  • ಕುರುಬ ಸಮಾಜಕ್ಕೆ ವಿಶೇಷವಾದ ಇತಿಹಾಸವಿದೆ – ಗಿರಿಧರ್ ತಿಮ್ಮಪ್ಪ ನಾಯಕ

    ದೊಡ್ಡಬಳ್ಳಾಪುರ:ಸ್ವಾಭಿಮಾನ ಹಾಗೂ ಜನ್ಮಭೂಮಿಯ ಅಭಿಮಾನದ ವಿಚಾರದಲ್ಲಿ ರಾಯಣ್ಣ ಇತರರಿಗೆ ಮಾದರಿ ಹಾಗೂ ದೇಶಾಭಿಮಾನ ದೇಶಭಕ್ತಿ ನಿಷ್ಠೆ ಪ್ರಾಮಾಣಿಕತೆ, ಶೌರ್ಯ ಸಾಹಸಕ್ಕೆ ಮತ್ತೊಂದು ಹೆಸರೇ ಸಂಗೊಳ್ಳಿ ರಾಯಣ್ಣ ಎಂದು ಪ್ರಗತಿಪರ ಚಿಂತಕ ನಿಕೇತ್ ರಾಜ್ ಮೌರ್ಯ ಹೇಳಿದರು.

     

    ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಹಕಾರ ಸಂಘವತಿಯಿಂದ ನೆಡೆದ ಕುರುಬ ಸಮಾಜದ ಹತ್ತನೇ ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಸ್ವತಂತ್ರ ಚಳುವಳಿಯ ಪ್ರಾರಂಭವಾಗುವ ದಶಕಗಳ ಹಿಂದೆಯೇ ಬ್ರಿಟಿಷರ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದು ರಾಯಣ್ಣ. ಅದರಲ್ಲೂ ಪ್ರಥಮ ಗಂಡು ಮೆಟ್ಟಿದ ನೆಲದಲ್ಲಿ ಎನ್ನುವುದು ವಿಶೇಷ, ಆದರೆ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿದ ನಂತರ ನಡೆದ ಚಳುವಳಿಯಲ್ಲಿ ಹೋರಾಟ ಮಾಡಿ ಹುತಾತ್ಮರಾದ ಬೇರೆ ರಾಜ್ಯದ ಹೋರಾಟಗಾರರನ್ನು ಇತಿಹಾಸ ತಜ್ಞರು ಇತಿಹಾಸದಲ್ಲಿ ನಮೂದಿಸಿದರು. ದುರಂತವೆಂದರೆ ಸ್ವಾತಂತ್ರ್ಯ ಚಳುವಳಿಗೆ ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಚಾಲನೆ ನೀಡಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿ ಗಲ್ಲಿಗೇರಿದ ರಾಯಣ್ಣನನ್ನು ಇತಿಹಾಸಕಾರರು ಗುರುತಿಸಲಿಲ್ಲ ಎಂದರು.

    ಹೊರ ರಾಜ್ಯಗಳ ಚಳುವಳಿಗಾರರನ್ನು ದೇಶದ ಎಲ್ಲೆಡೆ ಬಿಂಬಿಸಿದ ಇತಿಹಾಸ ತಜ್ಞರೆನಿಸಿಕೊಂಡವರು ಕನ್ನಡಿಗ ಅದರಲ್ಲೂ ಹಿಂದುಳಿದ ಕುರುಬ ಸಮಾಜದ ರಾಯಣ್ಣನನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ನಿಜಕ್ಕೂ ಬೇಸರದ ಸಂಗತಿಯೇ ಸರಿ ಎಂದು ನಿಕೇತ್ ರಾಜ್ ಮೌರ್ಯ ಬೇಸರ ವ್ಯಕ್ತಪಡಿಸಿದರು.

     

    ರಾಯಣ್ಣ ಹೆಸರಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಸಂತಸದ ಸಂಗತಿ.ಹಾಗೆಯೇ ವಿದ್ಯಾರ್ಥಿಗಳು ಕೂಡಾ ರಾಯಣ್ಣನ ನಿಷ್ಠೆ, ದೇಶಪ್ರೇಮ, ಸ್ವಾಭಿಮಾನವನ್ನು ಆದರ್ಶವಾಗಿಟ್ಟುಕೊಂಡು ದೇಶದ ಸತ್ವಜೆ ಗಳಾಗಿ ರೂಪು ಗೊಳ್ಳಬೇಕಿದೆ. ಶಿಕ್ಷಣದಲ್ಲಿ ಅಂಕ ಮುಖ್ಯವಲ್ಲ. ಶಿಕ್ಷಣದಲ್ಲಿ ಹೆಚ್ಚಿನ ಅಂಕ ಗಳಿಸುವುದರ ಜೊತೆಗೆ ಹುಟ್ಟಿದ ಸಮಾಜಕ್ಕೆ ನಿಷ್ಠೆ ಹಾಗೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

     

    ಅಧ್ಯಕ್ಷರು, ಹಾಗು ಅಖಿಲ ಭಾರತೀಯ ಪಶುಪಾಲ ಕ್ಷತ್ರಿಯರ ಟ್ರಸ್ಟ್ ಕುರುಬ / ಋಷಿ ಇತಿಹಾಸ ಮತ್ತು ಪರಂಪರೆ ಸಂಶೋಧಕ. ತಜ್ಞ ಗಿರಿಧರ್ ತಿಮ್ಮಪ್ಪ ನಾಯಕ ಮಾತನಾಡಿ, ಕುರುಬ ಸಮಾಜದ ಮೂಲವನ್ನು ಹುಡುಕಿಕೊಂಡು ಹೊರಟರೆ ಆಫ್ರಿಕಾ, ಹರಪ್ಪ ಮಹಾಂಜೊದಾರೋ ಘಟನೆಗಳಲ್ಲಿ ಕುರುಬರ ಇತಿಹಾಸ ಕಾಣ ಸಿಗುತ್ತದೆ. ಆಫ್ರಿಕಾ ಖಂಡದಲ್ಲಿ ಪಶುಪಾಲಕರನ್ನು ಕುರುಮ್ಬರ್ ಎಂದೇ ಕರೆಯುತ್ತಿದ್ದುದು ಇತಿಹಾಸ. ಇದರರ್ಥ ಬರಿ ಕುರಿ ಕಾಯುವನು ಮಾತ್ರ ಕುರುಬನಲ್ಲ ದನಗಾಹಿ, ಹೈನುಗಾರಿಕೆ, ಕೃಷಿಯಲ್ಲಿ ತೊಡಗಿರುವವರೆಲ್ಲ ಕುರುಬರೇ ಎಂದು ಅರ್ಥ ಎಂದು ವಿದೇಶಿ ಇತಿಹಾಸಗಳಲ್ಲಿ ಅಡಕವಾಗಿದೆ ಹೀಗಾಗಿ ಕುರುಬ ಸಮಾಜಕ್ಕೆ ವಿಶೇಷವಾದ ಇತಿಹಾಸವಿದೆ. ಹಾಗಾಗಿ ಸಮಾಜದವರು ಮೊದಲು ಇತಿಹಾಸವನ್ನು ಅರಿತು ತಮ್ಮ ಮುಂದಿನ ಪೀಳಿಗೆಗಯವರಿಗೆ ಕುರುಬರ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದರು.

     

     

    ಶಾಸಕ ಧೀರಜ್ ಮುನಿರಾಜು ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ನೀಡುವ ಕಾರ್ಯ ಶ್ಲಾಘನೀಯ ಇಂತಹ ಕಾರ್ಯವನ್ನು ಪ್ರತಿ ವರ್ಷ ಹಮಿಕೊಳ್ಳುತ್ತಿರುವ ಕಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಅಭಿನಂದನಾರ್ಹರು. ಇಂತಹ ಪ್ರೋತ್ಸಾಹ ದಾಯಕ ಕಾರ್ಯಕ್ರಮಗಳಿಗೆ ನಾನು ಸದಾ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.

     

    ಕುರುಬ ಸಮಾಜಕ್ಕೆ ಜಮೀನು ಮಂಜೂರು ವಿಚಾರದಲ್ಲಿ ನಾಲೈದು ವರ್ಷಗಳ ಹಿಂದೆಯೇ ಪ್ರಯತ್ನಿಸಲಾಗಿತ್ತು. ಆದರೆ ಗುರುತಿಸಿದ ಜಾಗ ನಗರ ವ್ಯಾಪ್ತಿಗೆ ಬರುವುದರಿಂದ ಜಮೀನು ಕೈತಪ್ಪಲು ಕಾರಣವಾಯಿತು. ಪ್ರಸ್ತುತ ಕುರುಬ ಸಮಾಜದ ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಆಗಿರುವುದರಿಂದ ಬೇರೆ ಜಾಗವನ್ನು ಗುರ್ತಿಸಿ ಸಮಾಜಕ್ಕೆ ದಕ್ಕುವಂತೆ ಮಾಡಲು ಪ್ರಾಮಾಣಿಕವಾಗಿ ಪ್ರಯತಿಸುತ್ತೇನೆ. ಹಿಂದುಳಿದ ವರ್ಗಗಳ ಎಲ್ಲಾ ಸಮಾಜಗಳ ಜಮೀನು ಮಂಜೂರಾತಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೇ ಕಾರ್ಯ ಪ್ರವೃತ್ತನಾಗುತ್ತೇನೆ ಎಂದು ಹೇಳಿದರು.

     

     

    ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ, ಬಡವರ ಪರ ಕಾಳಜಿ ಇರುವ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ಯಾಗಿರುವುದು ಹೆಮ್ಮೆಯ ಸಂಗತಿ ಅದರಲ್ಲೂ ಸಿದ್ದರಾಮಯ್ಯನವರು ಕುರುಬ ಸಮಾಜದವರೆಂಬುದು ಗಮನಾರ್ಹ ವಾದುದು. ಕುರುಬ ಸಮಾಜದ ಅಶೋತ್ತರಗಳಿಗೆ ನನ್ನ ಅಧಿಕಾರಾವಧಿಯಲ್ಲಿ ಪೂರಕವಾಗಿ ಕೆಲಸ ಮಾಡಿದ್ದೇನೆ. ಸಮುದಾಯಕ್ಕೆ ಜಮೀನು ಮಂಜೂರಾತಿ ವಿಚಾರದಲ್ಲಿ ಈಗಾಗಲೇ ಹಲವಾರು ಬಾರಿ ಪ್ರಯತ್ನಿಸಿದ್ದು ಸಮುದಾಯದ ನಾಯಕರಿಂದ ಸರಿಯಾದ ಸಹಕಾರ ಸಿಗಲಿಲ್ಲ. ಈಗ ಸಮಾಜದ ಎಲ್ಲರೂ ಒಗ್ಗೂಡಿ ಪ್ರಯತ್ನಿಸಿದರೆ ಮುಖ್ಯಮಂತ್ರಿಯವರ ಬಳಿ ಖುದ್ದು ಮಾತನಾಡಿ ಜಮೀನು ಮಂಜೂರಾತಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘ ಇಂತಹ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಇದು ನಿರಂತರವಾಗಿ ನಡೆಯಲು ಸಮಾಜದ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಸಮಾಜದ ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಯಿತು.

     

    ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಖಜಾಂಚಿ ಕೆ. ಎಂ. ಕೃಷ್ಣಮೂರ್ತಿ, ನಗರಸಭೆ ಉಪಾಧ್ಯಕ್ಷ ಎಂ. ಮಲ್ಲೇಶ್, ತೂಬಗೆರೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ, ಅರಳು ಮಲ್ಲಿಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮಲ್ಲೇಶ್, ಕೆಂಪಣ್ಣ, ಆಲಳ್ಳಿ ಚಂದ್ರು, ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಎ. ಕೃಷ್ಣ ಮೂರ್ತಿ, ಲಾವಣ್ಯ ಕಾಲೇಜಿನ ಪ್ರಾಮುಪಾಲ ಎಂ.ಸಿ. ಮಂಜುನಾಥ್, ನಗರಸಭಾ ಸದಸ್ಯ ಚಂದ್ರಮೋಹನ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್. ರವಿ, ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಪಟೇಲ್ ಮುನಿರಾಜು, ಪಾಪಣ್ಣ, ಎಲ್. ಗಂಗರಾಜು, ಜಿ.ಎನ್. ವೆಂಕಟೇಶ್, ಆಟೋ ಮಂಜು, ಕೃಷ್ಣಮೂರ್ತಿ, ಮಾಧವಿ, ಗಜಲಕ್ಷ್ಮಿ, ಮುತ್ತು ರಾಜ್ ಸೇರಿದಂತೆ ಸಮುದಾಯದ ಹಲವಾರು ಮುಖಂಡರು ಭಾಗವಹಿಸಿದ್ದರು.

  • ವಿಷ್ಣು ಅಭಿಮಾನಿಗಳಿಗೆ ಗುಡ್ ನ್ಯೂಸ್.. ಸೆಪ್ಟೆಂಬರ್ 18ಕ್ಕೆ ಸ್ಮಾರಕಕ್ಕೆ ಅಡಿಗಲ್ಲು

    ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಇದೀಗ ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಅಭಿಮಾನಿಗಳು ಮುಂದಾಗಿದ್ದಾರೆ.

     

    ಸೆಪ್ಟೆಂಬರ್ 18ರಂದು ಅಮೃತಾ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಇದೇ ದಿನದಂದು ಮಹತ್ವದ ಕೆಲಸಕ್ಕೆ ವಿಷ್ಣು ದಾದಾ ಫ್ಯಾನ್ಸ್ ಮುಂದಾಗುತ್ತಿದ್ದಾರೆ.

    ಈ ಕುರಿತು ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಸುದ್ದಿ ಗೋಷ್ಟಿ ನಡೆಸಲಾಯಿತು.

    ಈ ವೇಳೆ ಮಾತನಾಡಿದ ವೀರಕಪುತ್ರ ಶ್ರೀನಿವಾಸ್ ಮಾತನಾಡಿ ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ದಿನದಂದು ಡಾ. ವಿಷ್ಣುವರ್ಧನ್ ಅವರ ಸ್ಮಾರಕದ ಬ್ಲ್ಯೂಪ್ರಿಂಟ್ ನ್ನು ಕಿಚ್ಚ ಅನಾವರಣ ಮಾಡಲಿದ್ದಾರೆ. ಸೆಪ್ಟೆಂಬರ್ 18ರಂದು ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನದಂದೇ ಅವರ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು ತಿಳಿಸದ್ದಾರೆ.

    ಅಮೃತವರ್ಷ ಆಚರಿಸಲು ಮೂರು ವರ್ಷದಿಂದ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ. ಅದೇ ದಿನದಂದು ಸ್ಮಾರಕ ಕೆಲಸ ನಿರ್ಮಾಣ ಕೆಲಸ ಆರಂಭಿಸುತ್ತಿದ್ದೇವೆ. ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಸರ್ ಬರ್ತಡೇ ದಿನದಂದು ಸ್ಮಾರಕ ಹೇಗಿರಲಿದೆ ಎಂಬ ಮಾಡೆಲ್ ಪರಿಚಯಿಸಲಿದ್ದೇವೆ. ಮೈಸೂರಿನಲ್ಲಿರುವ ಸ್ಮಾರಕಕ್ಕೆ ಪ್ಯಾರೆಲ್ ಎಂದು ಹೇಳುವುದಿಲ್ಲ. ಇದು ಅಸಂಖ್ಯಾತ ಭಾವನೆ ಬೆಸೆದ ಜಾಗ ಇದು. ಪುಣ್ಯಭೂಮಿ ಉಳಿಸಿಕೊಳ್ಳುತ್ತೇವೆ. ಅದಕ್ಕಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

    ಸಾಹಸ ಸಿಂಹ ವಿಷ್ಣುವರ್ಧನ್ ಅವರ ಯಜಮಾನರ ಅಮೃತ ಮಹೋತ್ಸವನ್ನ ಒಂದು ದಿನ ಮಾಡೋಕೆ ಪ್ಲಾನ್ ಮಾಡಲಾಗಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಈ ಸಂಭ್ರಮ ಮಾಡಲಾಗುತ್ತಿದೆ. ಈ ಒಂದು ಅಮೃತ ಮಹೋತ್ಸವದಲ್ಲಿ ಇಡೀ ಇಂಡಸ್ಟ್ರಿ ಭಾಗಿ ಆಗಲಿದೆ ಅಂತಲೂ ಹೇಳಬಹುದು ಎಂದರು.

  • ಹಿರೇ ಮುದ್ದೇನಹಳ್ಳಿ ಯಾದವ ವೇದಿಕೆ ವತಿಯಿಂದ ಕೃಷ್ಣ ಹಾಗೂ ರಾಧಾ ವೇಷಭೂಷಣ ಸ್ಪರ್ಧೆ ಆಯೋಜನೆ

    ತೂಬಗೆರೆ : ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಆಗಸ್ಟ್ 16 ರಂದು ಹಿರೇ ಮುದ್ದೇನಹಳ್ಳಿ ಯಾದವ ವೇದಿಕೆ ವತಿಯಿಂದ ಕೃಷ್ಣ ಹಾಗೂ ರಾಧಾ ವೇಷಭೂಷಣ ಸ್ಪರ್ಧೆ ಆಯೋಜನೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

     

    ಕಾರ್ಯಕ್ರಮವು ಹಿರೇಮುದ್ದೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನೆಡೆಯಲಿದ್ದು ತಾಲ್ಲೂಕಿನ ಜನತೆ ತಮ್ಮ ಮಕ್ಕಳೊಂದಿಗೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.

     

    ಕಾರ್ಯಕ್ರಮವು ಶನಿವಾರ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಗಾಗಿ ಹಳ್ಳಿ ರೈತ ಅಂಬರೀಶ್ (7259429132) ಅವರನ್ನು ಸಂಪರ್ಕಿಸಲು ಕೋರಿದೆ

  • ತಮ್ಮ ಮನೆಗಳ ಮೇಲೆ ಯಾರು ಕಪ್ಪು ಬಾವುಟ ಹಾರಿಸಬೇಡಿ – ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿ ಮುಖಂಡ ವಸಂತ್ ಕುಮಾರ್

    ದೊಡ್ಡಬಳ್ಳಾಪುರ : ಈ ಹಿಂದೆ ದೊಡ್ಡ ತುಮಕೂರು ಕೆರೆ ಏರಿ ಸಮೀಪ ದೊಡ್ಡ ತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮಸ್ಥರು ಪತ್ರಿಕಾಗೋಷ್ಠಿ ನಡೆಸಿ ಈ ಬಾರಿ ಆಗಸ್ಟ್ 15ರಂದು ಕಪ್ಪು ಬಾವುಟವನ್ನು ದೊಡ್ಡ ತುಮಕೂರು ಹಾಗೂ ಮಜರಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮನೆಗಳ ಮೇಲೆ ಹಾರಿಸಲಾಗುವುದು ಎಂದು ತಿಳಿಸಿದ್ದರು.

     

    ದೊಡ್ಡ ತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮಸ್ಥರು ಹಾಗೂ ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿಯು ಸದ್ಯಕ್ಕೆ ಕಪ್ಪು ಬಾವುಟ ಹಾರಿಸುವ ಕಾರ್ಯಕ್ರಮವನ್ನು ಹಿಂಪಡೆದಿದೆ.

     

    ಹೌದು ಜಿಲ್ಲಾಧಿಕಾರಿಗಳ ಸಂಧಾನ ಭೇಟಿ ಯಶಸ್ವಿಯಾಗಿದ್ದು ಪ್ರತಿಭಟನಾಕಾರರು ಕಪ್ಪು ಬಾವುಟ ಹಾರಿಸುವ ನಿರ್ಣಯವನ್ನು ಹಿಂಪಡೆದುಕೊಂಡಿದ್ದಾರೆ . ಈ ಕುರಿತು ಹೋರಾಟ ಸಮಿತಿಯ ಮುಖಂಡ ವಸಂತ್ ಕುಮಾರ್ ಮಾತನಾಡಿ ಸದ್ಯಕ್ಕೆ ಹೋರಾಟವನ್ನು ಹಿಂಪಡೆದಿದ್ದೇವೆ ಇನ್ನು ನಾಲ್ಕು ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ಕೊಟ್ಟಿದ್ದಾರೆ ಈ ಹಿನ್ನಲೆಯಲ್ಲಿ ಕಪ್ಪು ಬಾವುಟ ಹಾರಿಸುವ ಕಾರ್ಯಕ್ರಮವನ್ನು ಸದ್ಯಕ್ಕೆ ಕೈ ಬಿಟ್ಟಿದ್ದು ಯಾರು ಕಪ್ಪು ಬಾವುಟವನ್ನು ಹರಿಸಬಾರದು ಎಂದು ಮನವಿ ಮಾಡಿದ್ದಾರೆ.

     

     

  • ದಾಸಗೊಂಡನಹಳ್ಳಿ : ರಸ್ತೆಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ : ಅಕ್ರಮವಾಗಿ ನಿರ್ಮಾಣ ಮಾಡಿರುವ ಶೆಡ್ ತೆರವು ಮಾಡುವಂತೆ ಗ್ರಾಮಸ್ಥರ ಅಗ್ರಹ

    ದೊಡ್ಡಬಳ್ಳಾಪುರ : ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿದ್ದು, ಶೆಡ್ ನಿಂದ ಗ್ರಾಮಸ್ಥರ ದಿನನಿತ್ಯ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ದಾಸಗೊಂಡನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದು ಶೆಡ್ ಅನ್ನು ಕೂಡಲೇ ತೆರವು ಮಾಡುವಂತೆ ತಾಲ್ಲೂಕು ಹಾಗೂ ಸ್ಥಳೀಯ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

     

    ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿ ರಾಜಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸಗೊಂಡನಹಳ್ಳಿ ರಸ್ತೆಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಲಾಗಿದೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ. ದಾಸಗೊಂಡನಹಳ್ಳಿ ವೃತ್ತದಿಂದ ನಾರಾಯಣಸ್ವಾಮಿ ಮನೆಯವರೆಗೂ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಮನೆಯ ಮುಂಭಾಗದ ರಸ್ತೆಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

     

    ಈ ರಸ್ತೆಯು ಗ್ರಾಮದ ರೂಡಿಗತ ರಸ್ತೆಯಾಗಿದ್ದು ಈ ರಸ್ತೆ ಮುಂದುವರೆದು ಗ್ರಾಮದ ಕೆರೆಗೆ ಸಂಪರ್ಕಿಸುತ್ತದೆ, ಗ್ರಾಮದಲ್ಲಿ ಗೋಮಾಳ ಇಲ್ಲದೆ ಇರುವುದರಿಂದ, ಜಾನುವಾರುಗಳನ್ನು ಮೇಯಿಸಲು ಇದೇ ರಸ್ತೆಯನ್ನ ಬಹಳ ವರ್ಷದಿಂದ ಬಳಸಲಾಗುತ್ತಿದೆ, ಇರುವ ಕಾಲುದಾರಿಯನ್ನ ರಸ್ತೆಯನ್ನಾಗಿ ಮಾಡುವಂತೆಯು ಗ್ರಾಮಸ್ಥರು ಮನವಿ ಮಾಡಿದ್ದೇವೆ ಎನ್ನುತ್ತಾರೆ ಸ್ಥಳೀಯರು.

     

    ಅಕ್ರಮವಾಗಿ ನಿರ್ಮಾಣ ಮಾಡಿರುವ ಶೆಡ್ ತೆರವು ಮಾಡುವಂತೆ ಗ್ರಾಮಸ್ಥರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು, ಇಲ್ಲಿಯವರೆಗೂ ಶೆಡ್ ತೆರವು ಕಾರ್ಯ ಮಾಡಿಲ್ಲ ಎಂದು ಗ್ರಾಮಸ್ಥರು ಅಸಮಾಧನ ವ್ಯಕ್ತಪಡಿಸಿದ್ದಾರೆ.

  • ಬೆಲ್ ಕ್ಯಾನ್ಸಲ್ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿದ ಆರೋಪಿ ನಟ ದರ್ಶನ್ ಹಾಗೂ ಪವಿತ್ರಾ ಗ್ಯಾಂಗ್

    ಬೆಂಗಳೂರು : ಸ್ಯಾಂಡಲ್‌ವುಡ್‌ ನಟ ದರ್ಶನ್‌ ತೂಗುದೀಪ ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಯ ಜಾಮೀನನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಗುರುವಾರ (ಆ.14) ರದ್ದು ಮಾಡಿದೆ.

     

     

    ಈ ಹಿಂದೆ ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದ ಜೈಲು ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.

     

     

    ಜೈಲಿನಲ್ಲಿ ಕೊಲೆ ಆರೋಪಿಗೆ ವಿಶೇಷ ಆತಿಥ್ಯ ನೀಡಿದ್ದ ವಿಚಾರಕ್ಕೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು. ನ್ಯಾಯಮೂರ್ತಿ ಜೆ ಪರ್ದಿವಾಲಾ, ‘ನೀವು ಯಾರಿಗಾದರೂ ವಿಐಪಿ ಅತಿಥ್ಯ ನೀಡಲಾಗುತ್ತಿರುವ ಬಗ್ಗೆ ಛಾಯಾಚಿತ್ರಗಳು ಅಥವಾ ವೀಡಿಯೊವನ್ನು ನಾವು ನೋಡಿದರೆ, ಮೊದಲು ನಿಮ್ಮನ್ನು ಸಮನ್ಸ್ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.ಈಗ ಜಾಮೀನು ರದ್ದು ಮಾಡಿದ ಬೆನ್ನಲ್ಲಿಯೇ ದರ್ಶನ್‌ ಈಗ ಬಳ್ಳಾರಿ ಜೈಲಿಗೆ ಪುನಂ ವಾಪಾಸ್‌ ಹೋಗಬೇಕಾಗಿದೆ.

     

     

  • ಆಗಸ್ಟ್ 20 ರಂದು ಡಿ.ದೇವರಾಜ ಅರಸು ಜಯಂತಿ : ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ಕೊಟ್ಟ ಜಿಲ್ಲಾಧಿಕಾರಿ ಎ.ಬಿ ಬಸವರಾಜು

    ಹಿಂದುಳಿದ ವರ್ಗಗಳ ಧೀಮಂತ ನಾಯಕ, ಪರಿವರ್ತನೆಯ ಹರಿಕಾರ, ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆಯನ್ನು ಆಗಸ್ಟ್ 20 ರಂದು ದೇವನಹಳ್ಳಿ ಟೌನ್ ನ ದೇವರಾಜ ಅರಸು ಭವನದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಡಿ. ದೇವರಾಜ ಅರಸು ಜಯಂತಿ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     

    ರಾಜ್ಯ ಕಂಡ ಧೀಮಂತ ಮುಖ್ಯಮಂತ್ರಿಗಳಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಕೂಡ ಒಬ್ಬರು, ಹಿಂದುಳಿದ ವರ್ಗಗಳ ಮಹಾನ್ ನಾಯಕರು ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಆಗಸ್ಟ್ 20 ರಂದು ಬೆಳಗ್ಗೆ 10 ಗಂಟೆಗೆ ದೇವನಹಳ್ಳಿ ಟೌನ್ ನಲ್ಲಿರುವ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ದೇವರಾಜ ಅರಸು ಭವನದವರೆಗೆ ದೇವರಾಜ ಅರಸುರ ಭಾವಚಿತ್ರ ರಥಯಾತ್ರೆ ಮೆರವಣಿಗೆ ಹೊರಡಲಿದೆ. ನಂತರ ಭವನದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ.

     

    ವೇದಿಕೆಯಲ್ಲಿ ಗಣ್ಯರು ಭಾಷಣ, ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಕಲಾವಿದರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಉಪನ್ಯಾಸವಿರಲಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರು, ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದರು.

     

    ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು, ಹಾಸ್ಟೆಲ್ ಗಳಲ್ಲಿ, ತಾಲ್ಲೂಕು ಮಟ್ಟದಲ್ಲಿ ದೇವರಾಜ ಅರಸು ಜಯಂತಿ ಆಚರಿಸಲು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ವಹಿಸಿ ಎಂದರಲ್ಲದೆ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಗಳ ಮುದ್ರಿಸಿ ಎಲ್ಲಾ ಗಣ್ಯರನ್ನು ಆಹ್ವಾನಿಸಬೇಕು. ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

     

    ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿನೋದ ಬಿ ಮುಗಳಿ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಹಿಂದುಳಿದ ವರ್ಗಗಳ ಸಮಾಜದ ಮುಖಂಡರು ಉಪಸ್ಥಿತರಿದ್ದರು.

  • ಸ್ವಾತಂತ್ರ್ಯ ದಿನಾಚರಣೆಯಂದು ಸೋಮೇಶ್ವರ ಕುಂಟೆಯನ್ನು ಅಭಿವೃದ್ಧಿ ಪಡಿಸುವಂತೆ ಅಗ್ರಹಿಸಿ ಪ್ರತಿಭಟನೆ – ಬಿ.ಎಸ್.ಚಂದ್ರಶೇಖರ್

    ದೊಡ್ಡಬಳ್ಳಾಪುರ : ಸೋಮೇಶ್ವರ ಕುಂಟೆ ಒತ್ತುವರಿಯನ್ನು ತೆರವುಗೊಳಿಸಿ ಕುಂಟೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಸಮಯ ವ್ಯರ್ಥ ಮಾಡುತ್ತಿರುವುದನ್ನು ಖಂಡಿಸಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣಕ್ಕೆ ಗೌರವ ಸಲ್ಲಿಸಿದ ನಂತರ ಕಪ್ಪು ಪಟ್ಟಿ ಧರಿಸಿ ಹೋರಾಟಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಪರ ಸಂಘಟನೆಗಳ ಒಕ್ಕೂಟ)ಕನ್ನಡಿಗರ ಬಣದ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು ದೊಡ್ಡಬಳ್ಳಾಪುರ ತಾಲ್ಲೂಕು, ಕಸಬಾ ಹೋಬಳಿ ಗಂಗಾಧರಪುರ ಗ್ರಾಮದ ಸರ್ವೆ ನಂಬರ್ 17 ರ 2ಎಕರೆ 04ಗುಂಟೆ ಜಾಗವಿದ್ದು, ಇದು ಸರ್ಕಾರಿ ಕುಂಟೆ, ಸೋಮೇಶ್ವರ ಕುಂಟೆ ಎಂದು ದಾಖಲಾತಿಗಳಲ್ಲಿ ನಮೂದಾಗಿರುತ್ತದೆ. ಈ ಸದರಿ ಜಾಗವು ಸರ್ಕಾರಿ ಕುಂಟೆಯ ಜಾಗವಾಗಿದ್ದು, ಇದು ಸ್ವಯಂಭುವೇಶ್ವರ ದೇವಸ್ಥಾನದ ಹತ್ತಿರವಿದೆ. ಆದರೆ ಪಹಣಿಯಲ್ಲಿ 0.00 ಎಂದು ನಮೂದು ಆಗಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

     

    ಈ ಹಿಂದೆ ಇದೇ ಸದರಿ ಜಾಗದಲ್ಲಿ ಬಡವರೊಬ್ಬರು ಮನೆ ಕಟ್ಟಿದ್ದಾರೆಂದು, ಅಕ್ರಮವೆಂದು ಆ ಮನೆಯನ್ನು ಕೆಡವಿದ್ದು ಇದೆ. ಆದರೆ ಇದೀಗ ಸದರಿ ಜಾಗದ ವಿಸ್ತೀರ್ಣ 2.04ಎಕರ ಬದಲಿಗೆ 0.00 ಎಂದು ನಮೂದಾಗಿರುವುದನ್ನು ನಮ್ಮ ಸಂಘಟನೆ ಖಂಡಿಸಿತ್ತು. ಸದರಿ ಜಾಗವನ್ನು ಕುಂಟೆಯಾಗಿಯೇ ಉಳಿಸಿ ಅಭಿವೃದ್ಧಿ ಪಡಿಸಬೇಕೆಂದು ಹಾಗೂ ಯಾವುದಾದರು ಇತರ ಖಾತೆಗಳು ಇದ್ದಲ್ಲಿ ಅವುಗಳನ್ನು ರದ್ದು ಮಾಡಬೇಕೆಂದು ದಿನಾಂಕ: 25-03-2025 ರಂದು ನಮ್ಮ ಸಂಘಟನೆಯಿಂದ ಅರ್ಜಿಯನ್ನು ನಾವು ಈಗಾಗಲೇ ಮಾನ್ಯ ಶಾಸಕರಿಗೆ, ಮಾನ್ಯ ಜಿಲ್ಲಾಧಿಕಾರಿಗಳಿಗೆ, ಮಾನ್ಯ ತಹಶೀಲ್ದಾರ್ ರವರಿಗೆ, ಮಾನ್ಯ ಉಪವಿಭಾಗಾಧಿಕಾರಿಗಳಿಗೆ, ಮಾನ್ಯ ಪೌರಾಯುಕ್ತರಿಗೆ, ಹಾಗೂ ಮಾನ್ಯ ಭೂದಾಖಲೆಗಳ ಸಹಾಯಕ ನಿರ್ದೇಶಕರುಗಳಿಗೆ ಮನವಿಯನ್ನು ಸಲ್ಲಿಸಿದ್ದೆವೆ.

     

    ನಮ್ಮ ಸಂಘಟನೆಯ ಮನವಿಯ ಮೇರೆಗೆ ಇದೀಗ ಸರ್ಕಾರದಿಂದ ಸರ್ವೇ ನಡೆಸಿದ್ದು, ನಕಾಶೆಯಲ್ಲಿ ಭೂಗಳ್ಳರ ಹಸ್ತಕ್ಷೇಪ ದಿಂದ ಸದರಿ ಜಾಗದ ಒಂದಷ್ಟು ಭಾಗ ಒತ್ತುವರಿಯಾಗಿರುವುದು ಕಂಡುಬಂದಿದೆ. ಒತ್ತುವರಿಯನ್ನು ತೆರವುಗೊಳಿಸಿ ಕುಂಟೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಸಮಯ ವ್ಯರ್ಥ ಮಾಡುತ್ತಿದ್ದು ಇದನ್ನು ನಮ್ಮ ಸಂಘಟನೆ ಖಂಡಿಸಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣಕ್ಕೆ ಗೌರವ ಸಲ್ಲಿಸಿದ ನಂತರ ಕಪ್ಪು ಪಟ್ಟಿ ಧರಿಸಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.

     

  • ಯೂಟ್ಯೂಬರ್ ಗಳ ಮೇಲೆ ಹಲ್ಲೆ ಮಾಡಿದವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ – ಕಾರ್ಮಿಕ ಮುಖಂಡ ಪಿ ಎ ವೆಂಕಟೇಶ್

    ದೊಡ್ಡಬಳ್ಳಾಪುರ : ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ರಹಸ್ಯವಾಗಿ ಹೂತುಹಾಕಲಾಗಿದೆ ಎಂಬ ಪ್ರಕರಣ ಕುರಿತು ವರದಿ ಮಾಡಲು ಹೋಗಿದ್ದ ನಾಲ್ವರು ಯೂಟ್ಯೂಬರ್‌ಗಳ ಮೇಲೆ ಬುಧವಾರ ಧರ್ಮಸ್ಥಳದ ಕೆಲ ಕಿಡಿಗೇಡಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.ಯೂಟ್ಯೂಬರ್ ಗಳ ಮೇಲೆ ಹಲ್ಲೆ ಮಾಡಿದವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು ಎಂದು ಕಾರ್ಮಿಕ ಮುಖಂಡ ಪಿ ಎ ವೆಂಕಟೇಶ್ ಅಗ್ರಹಿಸಿದರು.

     

    ಇಂದು ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಮುಂಭಾಗ ತಾಲ್ಲೂಕು ಕನ್ನಡ ಪಕ್ಷ, ಕೆ.ಆರ್.ಎಸ್ ಸಮಿತಿ,ಸಿಐಟಿಯು ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ತಾಲ್ಲೂಕು ಸ್ವತಂತ್ರ ಬರಹಗಾರರು, ಹಾಗೂ ಪತ್ರಕರ್ತರು ಪ್ರತಿಭಟನೆ ನೆಡೆಸಿದರು ಈ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ರಹಸ್ಯವಾಗಿ ಹೂತುಹಾಕಲಾಗಿದ್ದ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಧರ್ಮಸ್ಥಳದ ಹಲವು ಪ್ರದೇಶಗಳಲ್ಲಿ ದೂರುದಾರ ಗುರುತಿಸಿರುವ ಸ್ಥಳಗಳಲ್ಲಿ ಮೃತದೇಹಗಳ ಕಳೇಬರಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ, ಹಲವಾರು ಕಳೇಬರಗಳು ಎಸ್‌ಐಟಿ ಅಧಿಕಾರಿಗಳಿಗೆ ದೊರೆತಿವೆ. ಪ್ರಕರಣವು ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು, ಹಲವರನ್ನು ಹತ್ಯೆ ಮಾಡಿ, ರಹಸ್ಯವಾಗಿ ಹೂತುಹಾಕಲಾಗಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡುತ್ತಿವೆ.

     

    ಬೇಡಿಕೆಗಳು:

    *ಧರ್ಮಸ್ಥಳದ ನಡೆದಿದೆ ಎನ್ನಲಾದ ಶವ ಹೂತಿಟ್ಟ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು.

    *ಪಕ್ಷಪಾತವಿಲ್ಲದೆ ನಿರ್ಭೀತಿಯಿಂದ ವರದಿ ಮಾಡುತ್ತಿರುವ ಎಲ್ಲಾ ಸ್ವತಂತ್ರ ಪತ್ರಕರ್ತರಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆ ನೀಡಬೇಕು.

    *ಯೂಟ್ಯೂಬರ್ ಗಳ ಮೇಲೆ ಹಲ್ಲೆ ಮಾಡಿದವರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು.

     

     

    ದೂರುದಾರ ಹೇಳಿರುವಂತೆ ಹೂತುಹಾಕಲಾಗಿರುವ ಮೃತದೇಹಗಳಲ್ಲಿ ಹೆಚ್ಚಿನ ಶವಗಳು ಮಹಿಳೆಯರು ಮತ್ತು ಹೆಣ್ಣು ಮಕ್ಕಳದ್ದಾಗಿವೆ. ಹೀಗಾಗಿ, ಸೌಜನ್ಯ ಪ್ರಕರಣ ಮತ್ತು ಅನನ್ಯ ಭಟ್ ಪ್ರಕರಣಗಳನ್ನು ಗಮನಿಸಿದರೆ, ಹೂತುಹಾಕಲಾಗಿರುವ ಮಹಿಳೆಯರನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂಬ ಅನುಮಾನ ರಾಜ್ಯಾದ್ಯಂತ ವ್ಯಕ್ತವಾಗುತ್ತಿದೆ.

    ಇಂತಹ ಗಂಭೀರ ಪ್ರಕರಣದ ತನಿಖೆಯ ಕುರಿತು ವರದಿಗೆ ಹೋಗಿದ್ದ ನಾಲ್ವರು ಯೂಟ್ಯೂಬರ್‌ಗಳಾದ ಅಜಯ್ ಅಂಚನ್, ಅಭಿಷೇಕ್, ವಿಜಯ್ ಮತ್ತು ಮತ್ತೋರ್ವನ ಮೇಲೆ ಬುಧವಾರ ಧರ್ಮಸ್ಥಳದ ಗೂಂಡಾಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪ್ರಕರಣದ ವರದಿ ಮಾಡದಂತೆ ತಡೆಯಲು ದೌರ್ಜನ್ಯ ಎಸಗಿದ್ದಾರೆ. ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಯೂಟ್ಯೂಬ್ ವರದಿಗಾರರ ಮೇಲೆ ಹಲ್ಲೆ ನಡೆಸಿರುತ್ತಾರೆ.

     

    ಗೂಂಡಾಗಳು ಧರ್ಮಸ್ಥಳದ ಪ್ರತಿಷ್ಠಿತ ಕುಟುಂಬವೊಂದರ ಕುಮ್ಮಕ್ಕಿನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೆ, ಬುಧವಾರ ಸಂಜೆ ವೈರಲ್ ಆದ ವಿಡಿಯೋದಲ್ಲಿ ಆ ಪ್ರತಿಷ್ಠಿತ ಕುಟುಂಬದ ಬೆಂಬಲಿಗರ ದಾಂಧಲೆಯನ್ನು ತಡೆಯಲು ಪೊಲೀಸರು ಯತ್ನಿಸಿದ್ದು ಈ ವೇಳೆ, ಆ ದಾಂಧಲೆಕೋರರು ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿರುವುದು ಕಂಡುಬಂದಿದೆ ಎಂದರು.

     

    ಆ ಗೂಂಡಾಗಳ ದಾಂಧಲೆ ಮತ್ತು ಹಲ್ಲೆಗಳು ಪ್ರಕರಣದ ತನಿಖೆಗೆ ಅಡ್ಡಿಯುಂಟು ಮಾಡುವ ಉದ್ದೇಶದಿಂದಲೇ ನಡೆದಿದೆ. ಗೂಂಡಾಗಳನ್ನು ತಕ್ಷಣವೇ ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ದಾಂದಲೆ ಮತ್ತು ಹಲ್ಲೆಗೆ ಗೊಂದಲಗಳಿಗೆ ಕುಮ್ಮಕ್ಕು ನೀಡಿದವರು ಯಾರು ಎಂಬುದನ್ನು ತನಿಖೆ ಮಾಡಿ ಅವರನ್ನೂ ಬಂಧಿಸಬೇಕು.

     

    23 ವರ್ಷಗಳ ಹಿಂದೆ ವಿದ್ಯಾರ್ಥಿನಿ ಅನನ್ಯ ಭಟ್, 13 ವರ್ಷಗಳ ಹಿಂದೆ ಯುವತಿ ಸೌಜನ್ಯ ಸೇರಿದಂತೆ ಹಲವಾರು ಹೆಣ್ಣು ಮಕ್ಕಳು ಧರ್ಮಸ್ಥಳದಲ್ಲಿ ಅಪಹರಣ, ಅತ್ಯಾಚಾರ ಹಾಗೂ ಕೊಲೆಗೆ ಬಲಿಯಾಗಿದ್ದಾರೆ. ಈ ಕೃತ್ಯಗಳ ಹಿಂದೆ ಧರ್ಮಸ್ಥಳದ ಸಿರಿವಂತ ಕುಟುಂಬದ ಕೈವಾಡವಿದೆ ಎಂಬ ಗಂಭೀರ ಆರೋಪಗಳು ದಶಕಗಳಿಂದ ಕೇಳಿಬರುತ್ತಿವೆ. ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಬೇಕು. ಆದಷ್ಟು ಬೇಗ ಅಪರಾಧಿಗಳನ್ನು ಬಂಧಿಸಿ, ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬೇಕು. ಎಂದು ಆಗ್ರಹಿಸುತ್ತೇವೆ ಎಂದರು.

     

    ಪ್ರತಿಭಟನೆಯಲ್ಲಿ ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ, ಕಾರ್ಮಿಕ ಮುಖಂಡ ರೇಣುಕಾರಾಧ್ಯ, ಕನ್ನಡ ಪಕ್ಷದ ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ಕೆಆರ್‌ಎಸ್ ಸಮಿತಿಯ ಮುಖಂಡ ಶಿವಶಂಕರ್, ಮಾನವ ಬಂಧುತ್ವ ವೇದಿಕೆಯ ವೆಂಕಟೇಶ್, ಪತ್ರಕರ್ತರಾದ ರಾಜುಸಣ್ಣಕ್ಕಿ, ಗುರುಪ್ರಸಾ್, ದಾಳಿಗಪ್ಪ, ದಲಿತ ಮುಖಂಡ ಮಂಜುನಾಥ್, ಕನ್ನಡಪರ ಹೋರಾಟಗಾರ ತೂಬಗೆರೆ ಷರೀಫ್, ಎಸ್‌ಡಿಯುಆರ್ ಸಂಘಟನೆಯ ಸಾಧಿಕ್ ಮುಂತಾದವರು ಉಪಸ್ಥಿತರಿದ್ದರು.