Blog

  • ಮೈತ್ರಿ ಸರ್ವ ಸೇವಾ ಸಮಿತಿ ವತಿಯಿಂದ ಸಾವಯವ ಸಂತೆ ಮತ್ತು ಸ್ಥಳೀಯ ರೈತರಿಗೆ ಅರಿವು ಕಾರ್ಯಕ್ರಮ

    ಮೈತ್ರಿ ಸರ್ವ ಸೇವಾ ಸಮಿತಿ (ಸಮಗ್ರ ಕೃಷಿ ಘಟಕ) ವತಿಯಿಂದ ಹಾಡೋನಹಳ್ಳಿ ಕೆವಿಕೆ ಸಹಯೋಗದೊಂದಿಗೆ ಸಾವಯವ ಸಂತೆ ಮತ್ತು ಸ್ಥಳೀಯ ರೈತರಿಗೆ ಅರಿವು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

    ಕೆವಿಕೆ ಹಿರಿಯ ವಿಜ್ಞಾನಿ ಹನುಮಂತ ರಾಯಪ್ಪ ಮಾತನಾಡಿ ಯಾವುದೇ ವ್ಯವಸಾಯ ಮಾಡಿದರೆ ಮುಂದೆ ಬೆಳೆ ಬೆಳೆಯಲು ರೈತರಿಗೆ ಸಹಾಯಕ ಹಾಗೂ ಪೂರಕವಾಗಿರಬೇಕು.. ನಮ್ಮ ವ್ಯವಸಾಯ ಭೂಮಿಯ ಫಲವತ್ತಾತೆ ಕಾಪಾಡುವ ನಿಟ್ಟಿನಲ್ಲಿ ಕೃಷಿ ಮಾಡಬೇಕಾಗಿದೆ. ರಾಸಾಯನಿಕ ಗೊಬ್ಬರ ಹೆಚ್ಚಾಗಿ ಬಳಸದೆ ಸಾವಯವ ಕೃಷಿಗೆ ಮುಂದಾಗಬೇಕು ಎಂದರು.

     

    ಹಾಡೋನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ನಾಗರಾಜ್ ಮಾತನಾಡಿ ಈ ಕಾರ್ಯಕ್ರಮವು ಪ್ರಾರಂಭವಾಗಿ 2ವರ್ಷ ಕಳೆದಿದೆ. ಅನಿರೀಕ್ಷಿತ ಭೇಟಿ ಮೈತ್ರಿ ಸರ್ವ ಸೇವಾ ಸಮಿತಿ ಹಾಡೋನಹಳ್ಳಿ ಗೆ ಬರಲು ಸಾಧ್ಯವಾಯಿತು. ಈ ಭಾಗದ ಹಲಸಿನ ಹಣ್ಣಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರೆತಿದ್ದು, ನಮ್ಮಲ್ಲಿ ಯಾವುದೇ ತರಕಾರಿ ಹಣ್ಣು ಹೂ ವ್ಯವಸಾಯ ಮಾಡಲು ಅತ್ಯಂತ ಅನುಕೂಲಕರವಾಗಿದ್ದು, ನಮ್ಮ ಭಾಗದಲ್ಲಿ ಈ ಸಾವಯವ ಕೃಷಿಗೆ ಸೂಕ್ತ, ಹಾಗಾಗಿ ಸಾವಯವ ಕೃಷಿಯನ್ನು ರೈತರಿಗೆ ಅಭ್ಯಾಸ ಮಾಡಿಸುವ ಮೂಲಕ ಸಂಪ್ರದಾಯಿಕ ಕೃಷಿ ಪದ್ಧತಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು.

     

    ಜೈ ಕಿಸಾನ್ ಸಂಸ್ಥೆಯ ಸತೀಶ್ ಮಾತನಾಡಿ ರೈತರಿಗೆ ವ್ಯವಸಾಯ ಕುರಿತು ತಿಳುವಳಿಕೆ ಕೊರತೆಯಿಂದಾಗಿ ಈಗಿನ ಭೂ ಫಲವತ್ತತೆ ಸಮಸ್ಯೆಗೆ ಕಾರಣವಾಗಿದೆ. ಸಮಗ್ರ ಕೃಷಿ ನಿರ್ವಹಣೆಯಿಂದಾಗಿ ಭೂಮಿಯ ಫಲವತ್ತತೆ ಕಾಪಾಡಬಹುದಾಗಿದೆ ಈ ಬಗ್ಗೆ ರೈತರಿಗೆ ತಿಳುವಳಿಕೆ ನೀಡುವ ಮೂಲಕ ಸರಿಯಾದ ಪ್ರಮಾಣದಲ್ಲಿ ರಾಸಾಗೊಬ್ಬರಗಳನ್ನು ಭೂಮಿಗೆ ಒದಗಿಸುವ ಬಗ್ಗೆ ಸ್ಥಳೀಯ ಕೃಷಿಕರಿಗೆ ಮಾಹಿತಿ ನೀಡುವ ಸಲುವಾಗಿ ಹಲವಾರು ತರಬೇತಿ ನೀಡುತ್ತಿದ್ದೇವೆ.ರಸಗೊಬ್ಬರಗಳ ಸಮರ್ಪಕ ಬಳಕೆ ಮುಖ್ಯ ಅದನ್ನು ರೈತರು ಅರಿತುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.

     

    ಈ ಸಂದರ್ಭದಲ್ಲಿ ಮೈತ್ರಿ ಸರ್ವ ಸೇವಾ ಸಮಿತಿ (ಸಮಗ್ರ ಕೃಷಿ ಘಟಕ)ಯ ಪದಾಧಿಕಾರಿಗಳು, ಜೈ ಕಿಸಾನ್ ಸಂಸ್ಥೆಯ ಪ್ರಮುಖರು, ಸ್ಥಳೀಯ ರೈತರು ಹಾಜರಿದ್ದರು.

     

     

  • ದೊಡ್ಡಬಳ್ಳಾಪುರದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾರ್ಗದರ್ಶಿ ಕಾರ್ಯಾಗಾರ

    *ದೊಡ್ಡಬಳ್ಳಾಪುರ* : ಮಕ್ಕಳು ಕಷ್ಟುಪಟ್ಟು ಓದುವುದಕ್ಕಿಂತ ಇಷ್ಟ ಪಟ್ಟು ಓದುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಒತ್ತಡಕ್ಕೊಳಗಾಗದೆ ಧನಾತ್ಮಕ ಆಲೋಚನೆಗಳ ಮೂಲಕ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಥಟ್‌ ಅಂತ ಹೇಳಿ ಖ್ಯಾತಿಯ ಡಾ.ನಾ.ಸೋಮೇಶ್ವರ ಹೇಳಿದರು.

     

    ಇಲ್ಲಿನ ಲಯನ್ಸ್‌ ಕ್ಲಬ್‌ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್, ಭಾರತೀಯ ವೈದ್ಯಕೀಯ ಸಂಘ, ಭಾರತ ವಿದ್ಯಾರ್ಥಿ ಫೆಡರೇಶನ್‌ ಹಾಗೂ ಶ್ರೀ ದೇವರಾಜ ಅರಸ್‌ ಅಂತಾರಾಷ್ಟ್ರೀಯ ವಸತಿ ಪ್ರೌಢಶಾಲೆಯ ಸಹಯೋಗದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಮಕ್ಕಳು ಹಾಗೂ ಅವರ ಪೋಷಕರಿಗೆ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಜಗತ್ತಿನಲ್ಲಿ ಯಾವ ವಿದ್ಯಾರ್ಥಿಯೂ ದಡ್ಡನಲ್ಲ ಎಂಬ ಸತ್ಯವನ್ನು ಬೋಧಕರು ಮತ್ತು ಪೋಷಕರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಆಲೋಚನೆ, ವಿಚಾರ, ಸಾಮಾಜಿಕ ವರ್ತನೆ ಹಾಗೂ ನಡವಳಿಕೆ ನಮ್ಮ ಮಕ್ಕಳ ವ್ಯಕ್ತಿತ್ವದ ಮೇಲೆ ಪರಿಣಾಮವನ್ನು ಬೀರುತ್ತದೆ. ಅವರ ಶೈಕ್ಷಣಿಕ ಬೆಳವಣಿಗೆಯನ್ನು ಅದು ಪ್ರಭಾವಿಸುತ್ತದೆ ಎಂಬ ಅಂಶ ಅತ್ಯಂತ ಪ್ರಮುಖ. ಸಾಧನೆಯ ಹಾದಿಯಲ್ಲಿ ಮುನ್ನಡೆವಾಗ ಸೋಲುಗಳನ್ನು ಸಮರ್ಥವಾಗಿ ಎದುರಿಸುವ ಧೈರ್ಯ ಅತ್ಯಂತ ಅಗತ್ಯವಾಗಿರುತ್ತದೆ ಎಂದು ತಿಳಿಸಿದರು.

     

    ಮಕ್ಕಳ ಸ್ನೇಹಕೂಟ, ಹವ್ಯಾಸಗಳು ಮತ್ತು ಅವರ ದೈನಂದಿನ ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸುವುದರಿಂದ ಅಡ್ಡದಾರಿ ಹಿಡಿಯುವುದನ್ನು ತಪ್ಪಿಸಬಹುದು. ತಪ್ಪುಗಳನ್ನು ತಿದ್ದುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಮಾರ್ಗದರ್ಶನ ಮಾಡುವ ಹೊಣೆಗಾರಿಕೆಯಿಂದ ಪೋಷಕರು ಹಾಗೂ ಶಿಕ್ಷಕರು ದೂರ ಉಳಿಯಬಾರದು ಎಂದು ಮಾರ್ಗದರ್ಶನ ನೀಡಿದರು.

     

    ಲಯನ್ಸ್‌ ಕ್ಲಬ್‌ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದ್ಯೆ ಡಾ.ಆರ್.ಇಂದಿರಾ, ಮಾನವಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ಕಾರ್ಯದರ್ಶಿ ಎ.ಎಸ್.ಸುಮಾ, ಖಜಾಂಚಿ ಕೆ.ಸಿ.ನಾಗರಾಜ್, ಶಾಲಾ ಮುಖ್ಯಶಿಕ್ಷಕ ಜಿಯಾವುಲ್ಲಾಖಾನ್,ಭಾರತ ವಿದ್ಯಾರ್ಥಿ ಫೆಡರೇಶನ್‌ ನ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಅಧ್ಯಯನದ ವೇಳೆ ಎದುರಾಗುವ ತೊಡಕುಗಳ ನಿವಾರಣೆ ಕುರಿತು ಸಮಾಲೋಚನೆ ನಡೆಸಲಾಯಿತು.

     

  • ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ರವರಿಗೆ ವಿಶ್ವ ಕನ್ನಡ ವಿದ್ಯಾರತ್ನ ಪ್ರಶಸ್ತಿ

    ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ರವರಿಗೆ ವಿಶ್ವ ದರ್ಶನ ಪತ್ರಿಕೆ “ವಿಶ್ವ ಕನ್ನಡ ವಿದ್ಯಾರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

     

    ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ರವರು ವೈಜ್ಞಾನಿಕ ಕ್ಷೇತ್ರಗಳಲ್ಲಿ ಮಾಡಿರುವ ಗಣನೀಯ ಸಾಧನೆಗಳ ಜೊತೆಗೆ ”STUDIES ON CELL SUSPENSION CULTURE & IN VITROGENE EXPRESSION OF PLUMULE DERIVED EMBRYOGENIC CALLI IN COCONUT ” ಎಂಬ ಮಹಾಪ್ರಬಂಧದ ಪ್ರಾಮುಖ್ಯತೆಯನ್ನು ಗುರುತಿಸಿ ಕರ್ನಾಟಕ ರಾಜ್ಯದ ಧಾರವಾಡದ ವಿಶ್ವ ದರ್ಶನ ಪತ್ರಿಕೆ ‘ರಾಷ್ಟ್ರೀಯ ಮತ್ತು ಐಕಾನ್ ಅವಾರ್ಡ್ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ “ವಿಶ್ವ ಕನ್ನಡ ವಿದ್ಯಾರತ್ನ ರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಿದೆ.

     

    ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ (ರಿ) ರಾಜ್ಯಕಾರ್ಯದ್ಯಕ್ಷರಾದ ಹೆಚ್.ರಾಘವೇಂದ್ರ ಮತ್ತು ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ (ರಿ) ಬೆಂ.ಗ್ರಾ.ಜಿಲ್ಲಾಧ್ಯಕ್ಷರುಪ್ರಜಾ ವಿಮೋಚನಾ ಚಳವಳಿಯ ಮುಖಂಡರಾದ ಹೆಚ್.ಶಿವಕುಮಾರ್ ಮತ್ತು ಗೆಳೆಯರ ಬಳಗ ಸನ್ಮಾನಿತ ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ರವರಿಗೆ ಶುಭ ಹಾರೈಸಿದರು

     

    ಈ ಕುರಿತು ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ಮಾತನಾಡಿ ಇಂದು ನನ್ನ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ನಮ್ಮ ಪ್ರಾಮಾಣಿಕ ಪರಿಶ್ರಮಕ್ಕೆ ವಿಶ್ವ ದರ್ಶನ ಪತ್ರಿಕೆ ‘ರಾಷ್ಟ್ರೀಯ ಮತ್ತು ಐಕಾನ್ ಅವಾರ್ಡ್ ಪ್ರಶಸ್ತಿಗಳ ಪ್ರದಾನ ಸಮಾರಂಭದ ಮೂಲಕ ಪ್ರೋತ್ಸಹ ನೀಡಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮಗೆ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗುತ್ತದೆ ಅಲ್ಲದೆ ಸೇವೆಗಳು ಮತ್ತಷ್ಟು ಹೆಚ್ಚಾಗಲಿದೆ. ನನ್ನ ಸೇವೆ ಗುರುತಿಸಿ ಅಭಿನಂದಿಸಿದ ವಿಶ್ವ ದರ್ಶನ ಪತ್ರಿಕೆ ತಂಡಕ್ಕೆ ಶುಭವಾಗಿಲಿ ಎಂದರು.

     

     

     

     

  • ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್‌ ಮತ್ತು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಜನ್ಮದಿನದ ಆಚರಣೆ

    ದೊಡ್ಡಬಳ್ಳಾಪುರ: ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಲಯನ್ಸ್‌ ಕ್ಲಬ್‌, ಎನ್‌ಎಸ್‌ಎಸ್‌ ನೇತೃತ್ವದಲ್ಲಿ ಬುಧವಾರ ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸ್‌ ಹಾಗೂ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಜನ್ಮದಿನಾಚರಣೆ, ಸದ್ಭಾವನಾ ದಿನ ಕಾರ್ಯಕ್ರಮ ನಡೆಯಿತು.

     

    ದೇವರಾಜ್‌ ಅರಸ್‌ ಹಾಗೂ ರಾಜೀವ್‌ಗಾಂಧಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ, ಹಿಂದುಳಿದ ವರ್ಗಗಳ ಸಮಗ್ರ ಅಭ್ಯುದಯದ ಆಶಯವನ್ನು ಬಿತ್ತುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅರಸು ಹಾಗೂ ರಾಜೀವ್‌ಗಾಂಧಿ ತಮ್ಮ ಕಾರ್ಯವ್ಯಾಪ್ತಿ ಮತ್ತು ಆಲೋಚನಾ ಬದ್ದತೆಯಿಂದ ದೇಶದ ಭವಿಷ್ಯವನ್ನು ಸದೃಢಗೊಳಿಸಿದ್ದಾರೆ ಎಂದರು.

     

     

    ಜಾಲಪ್ಪನವರ ರಾಜಕಾರಣದ ದಿಕ್ಕುದೆಸೆಯನ್ನು ಸ್ಪಷ್ಟಗೊಳಿಸಿದ್ದು ದೇವರಾಜ್‌ ಅರಸ್‌. ಹೀಗಾಗಿಯೇ ಅವರ ಹೆಸರನ್ನೇ ವಿದ್ಯಾ ಸಂಸ್ಥೆಗೆ ಇಡಲಾಗಿದೆ. ಎಲ್ಲ ವರ್ಗಗಳ ದನಿಯಾಗಿ, ಯುವಜನರ ಆಶೋತ್ತರಗಳನ್ನು ಪ್ರಭಾವಿಸಿದ್ದು, ಅವರ ಆದರ್ಶಗಳು ಪಾಲನೀಯ ಎಂದರು.

     

    *ಜಾಲಪ್ಪ ರಾಜಕೀಯ ನಡೆಗೆ ಅರಸು ಪ್ರಭಾವ:*

     

    ಮುಖ್ಯಭಾಷಣಕಾರರಾಗಿ ಮಾತನಾಡಿದ ಜಾಲಪ್ಪ ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ಕೆ.ಆರ್.ರವಿಕಿರಣ್‌, ದೇವರಾಜ ಅರಸ್‌ ಮುಖ್ಯಮಂತ್ರಿಗಳಾಗಿದ್ದ ವೇಳೆ ಉಳುವವನೇ ಭೂಮಿಯ ಒಡೆಯ ಎಂಬ ಘೋಷವಾಕ್ಯದಡಿ ಭೂ ಒಡೆತನವನ್ನು ಶೋಷಿತವರ್ಗಗಳಿಗೆ ನೀಡಿದರು. ಎಲ್.ಜಿ.ಹಾವನೂರ್‌ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ, ಪ್ರಬಲ ಸಮುದಾಯಗಳ ನಡುಗೆ ಹಿಂದುಳಿದ ವರ್ಗಗಳಿಗೂ ಅವಕಾಶ ಮತ್ತು ಸಮಾನತೆಯನ್ನು ಒದಗಿಸುವ ಸಂಕಲ್ಪ ಮಾಡಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಹೆಗ್ಗಳಿಕೆ ಅವರದು. ಆರ್.ಎಲ್.ಜಾಲಪ್ಪನವರ ರಾಜಕೀಯ ನಡೆಯಲ್ಲಿ ಅರಸು ಅವರ ಒತ್ತಾಸೆ ಪ್ರಮುಖ ಎಂದು ಅಭಿಪ್ರಾಯಪಟ್ಟರು.

     

    ಯುವಜನರ ಶಕ್ತಿಯಾಗಿದ್ದ ರಾಜೀವ್‌ಗಾಂಧಿ ಡಿಜಿಟಲ್‌ ಇಂಡಿಯಾದ ಪರಿಕಲ್ಪನೆಯನ್ನು ಜಾರಿಗೆ ತರುವ ಸಾಹಸ ಮಾಡಿದವರು. ಆರಂಭಿಕ ಕಾಲಘಟ್ಟದಲ್ಲಿ ದೂರ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆದ ಅವರು, ಮತದಾನದ ಹಕ್ಕು ವಯೋಮಿತಿಯನ್ನು 18 ವರ್ಷಕ್ಕೆ ಇಳಿಸುವ ಮೂಲಕ ಯುವಶಕ್ತಿಯ ಪ್ರೇರಕರಾದರು. ಅವರ ಜನ್ಮದಿನದ ಸಂದರ್ಭದಲ್ಲಿ ಸದ್ಭಾವನಾ ದಿನಾಚರಣೆ ಆಚರಿಸುತ್ತಿರುವುದು ಅರ್ಥಪೂರ್ಣ ಎಂದರು.

     

    ಇದೇ ವೇಳೆ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು. ವಿದ್ಯಾ ಸಂಸ್ಥೆಯ ಗೌರ್ನಿಂಗ್‌ ಕೌನ್ಸಿಲ್‌ ಸದಸ್ಯರಾದ ಎನ್.ತೇಜಸ್ವಿನಿ, ಜೆ.ಆರ್.ರಾಕೇಶ್, ವಿದ್ವತ್‌, ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಡೀನ್‌ ಡಾ.ಶ್ರೀನಿವಾಸರೆಡ್ಡಿ, ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರಾದ ಡಾ.ವಿಜಯ್‌ಕಾರ್ತಿಕ್‌, ಡಾ.ಗೌರಪ್ಪ, ಡಾ.ನರಸಿಂಹರೆಡ್ಡಿ, ಡಾ.ಚಿಕ್ಕಣ್ಣ, ಮಹಂತೇಶಪ್ಪ, ರವಿಕುಮಾರ್, ಧನಂಜಯ್, ಜಿಯಾವುಲ್ಲಾಖಾನ್, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ವ್ಯವಸ್ಥಾಪಕ ಯತಿನ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ವಿವಿಧ ಘಟಕಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಹಾಜರಿದ್ದರು.

     

    ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಬುಧವಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್‌ ಮತ್ತು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

  • ದುರ್ಬಲ ವರ್ಗಗಳ ಸಮುದಾಯದವರಿಗೆ ಆತ್ಮಾಭಿಮಾನ ಮೂಡಿಸಿದವರು ಡಿ ದೇವರಾಜು ಅರಸು – ಜಿಲ್ಲಾಧಿಕಾರಿ ಎ.ಬಿ ಬಸವರಾಜು

    ಬಡವರ, ಹಿಂದುಳಿದವರ, ದೀನ ದಲಿತರ ಅಭಿವೃದ್ಧಿಗೆ ಶ್ರಮಿಸಿದ ಕರ್ನಾಟಕ ಕಂಡ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯಕ್ಕೆ ಅವರ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಹೇಳಿದರು.

     

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದು ಡಿ.ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು ಡಿ.ದೇವರಾಜು ಅರಸು ಅವರು 1915 ರಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿ ಬಿಎಸ್ಸಿ ಪದವಿಯನ್ನು ಪೂರ್ಣಗೊಳಿಸಿದ ನಂತರ, ಕಲ್ಲಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಳ್ಳುವರು, ಅವರು 1952 ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ. ವಿಧಾನಸಭೆಯಲ್ಲಿ 10 ವರ್ಷಗಳ ಕಾಲ ಶಾಸಕರಾಗಿದ್ದರು.

     

    ಇವರು ಎರಡು ಅವಧಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು, ಅಧಿಕಾರಾವಧಿಯ ವಿಷಯದಲ್ಲಿ ಅವರು ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದು. ಅವರು ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿರುತ್ತಿರುವ ಸಮಯದಲ್ಲಿ ಮೈಸೂರು ಎಂಬುದು ಒಂದು ಪ್ರಾಂತ್ಯಕ್ಕೆ ಸೀಮಿತವಾಗಬಾರದು ಎಂದು 1973 ನವೆಂಬರ್ 01 ರಂದು ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿದ ಏಕೈಕ ವ್ಯಕ್ತಿ. ಇವರು ಮೃದು ಮತ್ತು ಮೌನ ಸ್ವಭಾವದ ವ್ಯಕ್ತಿತ್ವದವರು.

     

    ಡಿ.ದೇವರಾಜು ಅರಸು ಅವರ ಕೊಡುಗೆ, ಆದರ್ಶಗಳನ್ನು ನಾವೆಲ್ಲರೂ ಪಾಲಿಸುವುದರ ಜೊತೆಗೆ ರಾಜ್ಯದ ಅಭಿವೃದ್ಧಿಗೆ ನಾವೆಲ್ಲರೂ ಜೊತೆಯಾಗಿ ಸಾಗೋಣ ಎಂದರು.

     

    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಬಿ.ಕೆ.ನಾರಾಯಣಸ್ವಾಮಿ ಅವರು ಡಿ.ದೇವರಾಜು ಅರಸು ಅವರ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡುವ ಮೂಲಕ ಮಾತನಾಡಿದರು, ತಮ್ಮ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಎಂಟು ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ನವ ಸಮಾಜದ ನಿರ್ಮಾಣಕ್ಕಾಗಿ ಭದ್ರ ಬುನಾದಿಯನ್ನು ಹಾಕಿದರು, ಇವರು ಶಿಕ್ಷಣವನ್ನು ಮುಗಿಸಿ ಕೃಷಿಯಲ್ಲಿ ಪಾಲ್ಗೊಂಡಿದ್ದರು, ಬಳಿಕ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ 1941ರಲ್ಲಿ ಚುನಾಯಿತರಾದರು, ಸ್ವಾತಂತ್ರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಚಲೇ ಜಾವ್ ಚಳುವಳಿಯಲ್ಲಿ ಭಾಗವಹಿಸಿದರು.

     

    ಇವರು ಮಾನವತಾವಾದಿ, ವಿಚಾರವಾದಿ ಸಮಾಜದಲ್ಲಿ ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಉತ್ತಮ ಜೀವನ ನಡೆಸಲು ವೃದ್ದಾಪ್ಯ ವೇತನ ಮತ್ತು ಮಾಸಾಶನ ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಗ್ರಾಮಾಂತರ ಮಕ್ಕಳು ಆರೋಗ್ಯ ಮತ್ತು ಶಿಕ್ಷಣದಲ್ಲಿ ಯಾವುದೇ ಕಾರಣಕ್ಕೂ ವಂಚಿತರಾಗಬಾರದು ಎನ್ನುವುದು ಅವರ ಆಶಯ. ಹಿಂದುಳಿದ ವರ್ಗದವರಿಗೆ ಉಚಿತ ನಿವೇಶನ, ಮತ್ತು ಮನೆ ಕಟ್ಟಿಸಿ ಕೊಡುವುದು, ಇವರು ಬಡವರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕ. ಕನ್ನಡ ನಾಡಿನ ಮೇಲಿನ ಪ್ರೀತಿಯಿಂದ ಆರ್ಥಿಕ,ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕೊಡುಗೆಯನ್ನು ನೀಡಿದ್ದಾರೆ. ದುರ್ಬಲ ವರ್ಗಗಳ ಸಮುದಾಯದವರಿಗೆ ಆತ್ಮಾಭಿಮಾನ ಮೂಡಿಸಿದವರು ಡಿ ದೇವರಾಜು ಅರಸು ಎಂದು ಹೇಳಿದರು.

     

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್ ಅನುರಾಧ, ದೇವನಹಳ್ಳಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಜಗನ್ನಾಥ್, ದೇವನಹಳ್ಳಿ ಟೌನ್ ಪುರಸಭೆ ಅಧ್ಯಕ್ಷರಾದ ಮುನಿಕೃಷ್ಣ ಹಾಗೂ ಉಪಧ್ಯಕ್ಷರಾದ ರವೀಂದ್ರ, ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿನೋದಾ ಬಿ.ಮುಗಳಿ, ತಹಶೀಲ್ದಾರ್ ಅನಿಲ್, ಇಒ ಶ್ರೀನಾಥ್ ಗೌಡ, ನಗರಸಭೆ ಮತ್ತು ಪುರಸಭೆಯ ಎಲ್ಲಾ ಸದಸ್ಯರು, ಸಾಮಾಜದ ಮುಖಂಡರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

  • ಗರ್ಭಿಣಿ, ಮಕ್ಕಳ ಆರೋಗ್ಯಕ್ಕೆ ಕಾಲಕಾಲಕ್ಕೆ ಲಸಿಕೆ ಪಡೆಯುವುದು ಅವಶ್ಯಕ:ಎಡಿಸಿ ಸೈಯಿದಾ ಅಯಿಷಾ

    ಗರ್ಭಿಣಿ ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕಾಲಕಾಲಕ್ಕೆ ಲಸಿಕೆ ಪಡೆಯುವುದು ಅವಶ್ಯಕವಾಗಿದ್ದು ಗರ್ಭಿಣಿ, ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರಿಗೆ ಅರಿವು ಮೂಡಿಸಿ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆ ಹಾಗೂ ಜಿಲ್ಲಾ ಮಟ್ಟದ ತಾಯಿ ಹಾಗೂ ಶಿಶು ಮರಣ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರುಮಕ್ಕಳ ಹಾಗೂ ಗರ್ಭಿಣಿ ಬಾಣಂತಿಯರ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಿ ಶಿಶು ಮತ್ತು ತಾಯಿ ಮರಣ ಆಗದಂತೆ ಜಾಗೃತಿ ವಹಿಸಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಗರ್ಭಿಣಿ, ಬಾಣಂತಿಯರ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಬಗ್ಗೆ ಅರಿವು ಮೂಡಿಸಿ ಶಿಶು ಹಾರೈಕೆ ಮತ್ತು ಗರ್ಭಿಣಿ, ಬಾಣಂತಿಯರ ಹಾರೈಕೆಯಲ್ಲಿ ನಿರತರಾಗಿ ಎಂದರು.

     

    ವಾತಾವರಣ ಬದಲಾವಣೆ ಸಂಧರ್ಭದಲ್ಲಿ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯ ಪ್ರಕರಣಗಳು ಉಲ್ಬಣಗೊಳ್ಳುವ ಸಂಭವ ಇರುತ್ತದೆ

    ಹಾಗಾಗಿ ಆರೋಗ್ಯಾಧಿಕಾರಿಗಳು ಜಾಗೃತರಾಗಿ ಸ್ಥಳೀಯ ಮಟ್ಟದಲ್ಲಿ ಜನ ನಿಬಿಡ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಅರಿವು ಮೂಡಿಸಿ. ತೊಟ್ಟಿ, ಚರಂಡಿ ಹಾಗೂ ಇನ್ನಿತರ ಘನ ತ್ಯಾಜ್ಯಗಳಲ್ಲಿ ನೀರು ಶೇಖರಣೆ ಯಾಗಿ ಸೊಳ್ಳೆಗಳು ಉತ್ಪತ್ತಿಗೊಂಡು ರೋಗಗಳು ಕಂಡು ಬರುತ್ತಿವೆ ಅದಕ್ಕಾಗಿ ರೋಗಗಳ ಬಗ್ಗೆ ಅರಿವು ಮೂಡಿಸಿ ಎಂದರು.

    ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಕ್ಕ ಕೃಷ್ಣ ರೆಡ್ಡಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಸೀಮಾ ರುದ್ರಪ್ಪ ಮಹಾಬಳೆ, ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ನಾಗೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ ನಗರದ ಹಲವು ಕಡೆ ಆಗಸ್ಟ್ 22 ರಂದು ಕರೆಂಟ್ ಇರಲ್ಲ… ಎಲ್ಲಿ ಸುದ್ದಿ ನೋಡಿ…

    ದೊಡ್ಡಬಳ್ಳಾಪುರ ನಗರದಲ್ಲಿ ಡಿ.ಕ್ರಾಸ್ ಉಪಕೇಂದ್ರ(66/11ಕೆವಿ)ದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಉಪಕೇಂದ್ರದಲ್ಲಿರುವ ಎಲ್ಲಾ ವಿದ್ಯುತ್ ಮಾರ್ಗಗಳಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ ಎಂದು ತಿಳಿಸಿದ್ದಾರೆ.

     

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

    ದೊಡ್ಡಬಳ್ಳಾಪುರ ನಗರದ, ಡಿಕ್ರಾಸ್, ಮುತ್ಸಂದ್ರ, ಟಿ.ಬಿ.ಬಡಾವಣೆ, ಪ್ರಿಯರ್ದಶಿನಿ ಬಡಾವಣೆ, ರೋಜಿಪುರ, ಗಂಗಧರಪುರ, ವಿನಾಯಕನಗರ, ಸೋಮೇಶ್ವರ ಬಡಾವಣೆ, ಬಸವೇಶ್ವರನಗರ, ಮಾರುತಿನಗರ, ಕುಂಭಾರಪೇಟೆ, ದರ್ಜಿಪೇಟೆ, ಗಾಣಿಗರಪೇಟೆ, ವಡ್ಡರಪೇಟೆ, ದೇಶದಪೇಟೆ, ಸಿನಿಮಾ ರಸ್ತೆ, ಹಳೇಬನ್ಸ್ ನಿಲ್ದಾಣ, ಕಛೇರಿಪಾಳ್ಯ, ಇಸ್ಲಾಂಪುರ, ಕಲ್ಲುಪೇಟೆ, ತ್ಯಾಗರಾಜನಗರ, ದೇವರಾಜನಗರ, ಶಾಂತಿನಗರ, ಕರೇನಹಳ್ಳಿ, ದರ್ಗಾಜೋಗಿಹಳ್ಳಿ, ಕುರುಬರಹಳ್ಳಿ, ಕೊಡಿಗೇಹಳ್ಳಿ, ಪಾಲನಜೋಗಿಹಳ್ಳಿ, ಕುರುಬರಹಳ್ಳಿ ಆಶ್ರಯ ಬಡಾವಣೆ, ತಳಗವಾರ ಮಾದಗೊಂಡನಹಳ್ಳಿ, ಹಸನ್‌ಘಟ್ಟಾ,’ ಕೋಳುರು, ಕಂಟನಕುಂಟೆ, ಆಳ್ಳಾಲಸಂದ್ರ, ಅಂತರಹಳ್ಳಿ ಗೊಲ್ಲಹಳ್ಳಿ, ಮೇಲಿನ ನಾಯಕರಾಂಡಹಳ್ಳಿ, ಕೆಳಗಿನ ನಾಯಕರಾಂಡಹಳ್ಳಿ, ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಗಂಗಸಂದ್ರ, ಪೆರಮಗೊಂಡನಹಳ್ಳಿ, ಹಾಡೋನಹಳ್ಳಿ, ಎಸ್.ನಾಗೇನಹಳ್ಳಿ, ಮುದ್ದನಾಯಕನಪಾಳ್ಯ, ರಾಮಯ್ಯನಪಾಳ್ಯ, ತೊಗರಿಘಟ್ಟಾ, ಗಡ್ಡಂಬಚ್ಚಹಳ್ಳಿ, ತಿಮ್ಮಸಂದ್ರ, ಜಯನಗರ, ಪಿಂಡಕೂರು ತಿಮ್ಮನಹಳ್ಳಿ, ರಘುನಾಥಪುರ, ನಾಗದೇನಹಳ್ಳಿ, ಮೋಪರಹಳ್ಳಿ, ಆದಿನಾರಾಯಣ ಹೊಸಹಳ್ಳಿ, ಹೀರೆಗುಡ್ಡದಹಳ್ಳಿ, ಕುರುವಿಗೆರೆ, ನಂದಿಮೋರಿ, ರಾಜಘಟ್ಟಾ, ಕಂಚಿಗನಾಳ, ದಾಸಗೊಂಡನಹಳ್ಳಿ, ಗಂಡರಾಜಪುರ, ಅಂಚರಹಳ್ಳಿ, ಬೀಡಿಕೆರೆ, ಹಮಾಮ್, ಶಿವಪುರ, ಸೊಣ್ಣಪ್ಪನಹಳ್ಳಿ, ಕೋಡಿಹಳ್ಳಿ, ಕೊನಘಟ್ಟಾ, ಲಿಂಗನಹಳ್ಳಿ, ಕಮಲೂರು, ನೆಲ್ಲುಕುಂಟೆ, ನಾಗಶೆಟ್ಟಿಹಳ್ಳಿ, ಮಜರಾಹೊಸಹಳ್ಳಿ, ಶಿರವಾರ, ಮೆಲಿಸಿ, ಅಣಗಲಪುರ, ನೇರಳೆಘಟ್ಟಾ: ಹೊನ್ನಾಘಟ್ಟಾ, ಕೆಸ್ತೂರು, ಹಣಬೆ, ಮರಳೇನಹಳ್ಳಿ, ಶ್ರೀನಿವಾಸಪುರ, ಸೋಮಶೆಟ್ಟಿಹಳ್ಳಿ, ಕಲ್ಲುದೇವನಹಳ್ಳಿ, ಶಿರವಾರ, ತಿಷ್ಟೂರು ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾಸವಾಗಲಿದೆ.

  • ಅಕ್ರಮ ಹೆಂಡ ಸಾಗಾಣಿಕೆ ಮತ್ತು ಮಾರಾಟ : ನಿಖರ ಮಾಹಿತಿ ಪಡೆದು ಆರೋಪಿಯನ್ನು ಸಾಕ್ಷಿ ಸಮೇತ ವಶಕ್ಕೆ ಪಡೆದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್

    Doddaballapura : ಆಂಧ್ರ ಮೂಲದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಹೆಂಡವನ್ನು ಇಂದು ಮುಂಜಾನೆ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ತಾಲ್ಲೂಕಿನ ವರದನಹಳ್ಳಿ ನಿವಾಸಿ ಪವಿತ್ರಾ ಎಂಬಾಕೆ ಪ್ರತಿನಿತ್ಯ ಆಂಧ್ರ ಮೂಲದಿಂದ ನೀರಾ (ಹೆಂಡ ) ವನ್ನು ತಂದು ಮಾರಾಟ ಮಾಡುತ್ತಿದ್ದಾಳೆ ಎಂಬ ದೂರಿನ ಹಿನ್ನಲೆ ಇಂದು ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಮತ್ತು ತಂಡ ಆರೋಪಿಯನ್ನು ಸಾಕ್ಷಿ ಸಮೇತ ಪವಿತ್ರಳನ್ನು ಬಂಧಿಸಿದ್ದಾರೆ.

    ಆರೋಪಿ ಪವಿತ್ರಳ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆಗೆ ಪೊಲೀಸ್ ಇಲಾಖೆ ಮುಂದಾಗಿದೆ ತನಿಖೆ ನಂತರ ಮತ್ತಷ್ಟು ಮಾಹಿತಿ ಹೊರಬೀಳಲಿದೆ.

     

     

     

  • ಅರಿವು ಕೇಂದ್ರಗಳಿಗೆ ಅಲೆಕ್ಸಾ ಮತ್ತು ಬುಕ್ಸ್ ಕಿಟ್ ವಿತರಣೆ

    ಪ್ರತಿಯೊಬ್ಬರ ಜ್ಞಾನಾರ್ಜನೆಗೆ ಗ್ರಂಥಾಲಯ ಅವಶ್ಯಕವಾಗಿದೆ. ಇತಿಹಾಸ,ಕಲೆ,ವಿಜ್ಞಾನ,ಪ್ರಯೋಗ, ಹೊಸ ಹೊಸ ತಂತ್ರಜ್ಞಾನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುವಂತೆ ನೂರು ಪುಸ್ತಕಗಳಿರುವ ಕಿಟ್ ಮತ್ತು ದೃಷ್ಟಿ ಸವಾಲಿರುವವರಿಗೆ ಹೆಚ್ಚು ಉಪಯುಕ್ತವಾಗುವ ಅಲೆಕ್ಸಾವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ ಕೆ ಎನ್ ಅನುರಾಧ ಅವರು ಹೇಳಿದರು

     

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮತ್ತು ಪಾಲಕರಿಗೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸಮಯಕ್ಕೆ ಸರಿಯಾಗಿ ಗ್ರಂಥಾಲಯವನ್ನು ತೆರೆಯಬೇಕು. ಗ್ರಂಥಾಲಯದಲ್ಲಿ ಅಚ್ಚುಕಟ್ಟಾಗಿ ಪುಸ್ತಕಗಳ ಜೋಡಣೆ, ಸ್ವಚ್ಛತೆಯನ್ನು ಕಾಪಾಡಬೇಕು, ಸರ್ಕಾರದಿಂದ ಬರುವ ಎಲ್ಲಾ ಪುಸಕಗಳನ್ನು ಆಯಾ ಪಂಚಾಯಿತಿಯ ಪಿ.ಡಿ.ಒ ಗಳ ಬಳಿ ಗ್ರಂಥಾಲಯದ ಮೇಲ್ವಿಚಾರಕರು ಅಥವಾ ಪಾಲಕರು ನೋಂದಾಯಿಸಿಕೊಂಡು ಪಡೆದುಕೊಳ್ಳಬೇಕು. ಮಕ್ಕಳಿಗೆ ಓದುಗರಿಗೆ ಉತ್ತಮ ರೀತಿಯಲ್ಲಿ ಓದಲು ಪುಸ್ತಕ ನೀಡಬೇಕು ಎಂದರು.

     

    ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಿಎಸ್ಆರ್ ಅನುದಾನದಡಿ ಕ್ಯಾಟರ್ಪಿಲ್ಲರ್ ಸಂಸ್ಥೆ ವತಿಯಿಂದ ಅರಿವು ಕೇಂದ್ರಗಳಿಗೆ ಬುಕ್ಸ್ ಕಿಟ್ ವಿತರಣೆ ಮತ್ತು ವಿಶೇಷವಾಗಿ ದೃಷ್ಟಿ ಸವಾಲಿರುವವರಿಗೆ ಕೇಳುವಿಕೆಯೇ ಕಲಿಕೆಯ ವಿಧಾನವಾಗಿದೆ ಅದಕ್ಕಾಗಿ ಅಲೆಕ್ಸಾ ಸಾಧನ ವಿತರಿಸಲಾಯಿತು.

    ಸಂಪನ್ಮೂಲ ವ್ಯಕ್ತಿಯಾಗಿ ಅಗಮಿಸಿದ್ದ ಜಯಲಕ್ಷ್ಮಿ ಅವರು ಗ್ರಂಥಾಲಯ ಮೇಲ್ವಿಚಾರಕರಿಗೆ ಮತ್ತು ಪಾಲಕರಿಗೆ ಪುಸ್ತಕಗಳ ಜೋಡಣೆ, ಮಕ್ಕಳ ಆಸಕ್ತಿ ತಿಳಿದು ಅವರಿಗೆ ಬೇಕಾದ ಪುಸ್ತಕ ವಿತರಣೆ, ಕಲಿಕೆ ಆಕರ್ಷಣೆ ಹೀಗೆ ಹಲವಾರು ವಿಷಯಗಳ ಬಗ್ಗೆ ಕಾರ್ಯಗಾರವನ್ನು ನಡೆಸಿದರು.

     

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ,ಪ್ರಥಮ್ ಬುಕ್ ಅಸೋಸಿಯೇಟ್ ಅಧಿಕಾರಿ ಪ್ರದೀಪ್ ದೇವರಾಜ್, ಕ್ಯಾಟರ್ಪಿಲ್ಲರ್ ಸಂಸ್ಥೆಯ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.

  • *ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ*

    ಜಿಲ್ಲೆಯಲ್ಲಿ 2025-26ನೇ ಸಾಲಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಯ ಆರ್ಥಿಕ ಅಭಿವೃದ್ದಿಗಾಗಿ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

     

    ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಕುರಿ ಸಾಕಾಣಿಕೆ ಯೋಜನೆ (ಕಿರು ಆರ್ಥಿಕ ಚಟುವಟಿಕೆಗಳಿಗೆ)ಮತ್ತು ನೇರ ಸಾಲ ಯೋಜನೆ (ಸಹಾಯಧನ ಗರಿಷ್ಠ ರೂ,2 ಲಕ್ಷ). ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಲ್ಲಿ ಹೈನುಗಾರಿಕೆ (ಸಹಾಯಧನ ಗರಿಷ್ಠ ರೂ, 1.25 ಲಕ್ಷ), ಫಾಸ್ಟ್ ಫುಡ್ ಟ್ರಕ್, ಟ್ರೈಲರ್/ ಮೊಬೈಲ್ ಕಿಚನ್ ಫುಡ್ ಕಿಯೋಸ್ಟ್ (ಸಹಾಯಧನ ಗರಿಷ್ಠ ರೂ, 4 ಲಕ್ಷ), ಸ್ವಾವಲಂಭಿ ಸಾರಥಿ ಯೋಜನೆ (ಸರಕು ವಾಹನ/ಟ್ಯಾಕ್ಸಿ ಹಳದಿ ಬೋರ್ಡ್, ಸಹಾಯಧನ ಗರಿಷ್ಠ ರೂ,4 ಲಕ್ಷ). ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಯಡಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ. ಭೂ ಒಡೆತನ ಯೋಜನೆಯಡಿ ಭೂ ರಹಿತ ಮಹಿಳಾ ಕಾರ್ಮಿಕರಿಗೆ ಭೂಮಿಯನ್ನು ಖರೀದಿಸಲು ಸಹಾಯಧನ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸುವ ಸೌಲಭ್ಯ.

     

    ಅರ್ಹ ಫಲಾನುಭವಿಗಳು ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯದವರು ಅರ್ಜಿಗಳನ್ನು ನೇರವಾಗಿ ಅನ್ ಲೈನ್ ಮೂಲಕ ಅಧಿಕೃತ ಜಾಲತಾಣವಾದ https://sevasindhu.karnataka.gov.in ನಲ್ಲಿ ಅಥವಾ ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಗಳಲ್ಲಿ ಅರ್ಜಿಯನ್ನು ಸೆಪ್ಟೆಂಬರ್ 10 ರೊಳಗೆ ಸಲ್ಲಿಸಬಹುದು.

     

    *ವಿಶೇಷ ಸೂಚನೆ:*

     

    2023-24 ಮತ್ತು 2024-25ನೇ ಸಾಲಿನಲ್ಲಿ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

     

    ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಚೇರಿ ಅಥವಾ ಆಯಾ ತಾಲ್ಲೂಕು ಅಭಿವೃದ್ಧಿ ಅಧಿಕಾರಿಗಳನ್ನು ದೇವನಹಳ್ಳಿ – 8050854019, ದೊಡ್ಡಬಳ್ಳಾಪುರ – 8050854020, ಹೊಸಕೋಟೆ – 8050854021, ನೆಲಮಂಗಲ – 8050854022 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.