Blog

  • “ಸರ್ಕಾರಿ ಶಾಲೆ ಉಳಿಸಿ – ಕನ್ನಡ ಬೆಳೆಸಿ” ಅಭಿಯಾನಕ್ಕೆ ಅಧಿಕೃತ ಚಾಲನೆ : ಕರ್ನಾಟಕ ಯುವಶಕ್ತಿ ವೇದಿಕೆಯ ಹೊಸ ಪ್ರಯತ್ನಕ್ಕೆ ಗಣ್ಯರ ಸಾಥ್

    ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಭವಿಷ್ಯ ಹಿನ್ನಡೆಯಾಗುತ್ತದೆ ಎಂಬ ಪೋಷಕರ ಧೋರಣೆ ಬೇಸರದ ಸಂಗತಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು ಅಭಿಪ್ರಾಯಪಟ್ಟರು.

    ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ತೂಬಗೆರೆ ಹೋಬಳಿಯ ಹಿರೇಮುದ್ದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಸರ್ಕಾರಿ ಶಾಲೆ ಉಳಿಸಿ – ಕನ್ನಡ ಬೆಳೆಸಿ” ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು.

    “ನಾನು ಸಹ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿ. ಪ್ರಾಥಮಿಕದಿಂದ ಹತ್ತನೇ ತರಗತಿವರೆಗೆ ಕನ್ನಡದಲ್ಲೇ ಓದಿದ್ದೇನೆ. ಕನ್ನಡ ಮಾಧ್ಯಮ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅನುಭವ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಭಾಷೆಯಲ್ಲಿಯೇ ಓದಿ ಯುಪಿಎಸ್‌ಸಿ ಸೇರಿದಂತೆ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದಾರೆ. ಇದು ಮಾತೃಭಾಷೆಯಲ್ಲಿಯೇ ಉನ್ನತ ವಿದ್ಯೆ ಸಾಧಿಸಬಹುದೆಂಬ ಜೀವಂತ ಸಾಕ್ಷ್ಯ,” ಎಂದರು.

    ಅವರು ಮುಂದುವರೆದು, “ಸರ್ಕಾರಿ ಶಾಲೆಗಳಲ್ಲಿ ಇಂದು ಅಗತ್ಯ ಮೂಲಸೌಕರ್ಯಗಳು ಲಭ್ಯವಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣ ಪಡೆದರೆ ಖಂಡಿತವಾಗಿಯೂ ಉತ್ತಮ ಫಲಿತಾಂಶ ಸಿಗಬಹುದು. ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಜಾಗರೂಕರಾಗಬೇಕು, ಆದರೆ ಭಾಷೆಯ ಆಧಾರದ ಮೇಲೆ ಶಾಲೆ ಆಯ್ಕೆ ಮಾಡುವ ಧೋರಣೆಗೆ ತಡೆವಿಡಬೇಕು. ಈ ಕುರಿತು ಜಾಗೃತಿ ಮೂಡಿಸಲು ನವ ಕರ್ನಾಟಕ ಯುವಶಕ್ತಿ ವೇದಿಕೆ ಆರಂಭಿಸಿರುವ ‘ಸರ್ಕಾರಿ ಶಾಲೆ ಉಳಿಸಿ – ಕನ್ನಡ ಬೆಳೆಸಿ’ ಅಭಿಯಾನ ಶ್ಲಾಘನೀಯ,” ಎಂದರು.

    ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಕೆಲ ಖಾಸಗಿ ಶಾಲೆಗಳ ಅತಿಯಾದ ಶುಲ್ಕ, ಸಾರಿಗೆ ವೆಚ್ಚ, ಪಠ್ಯವಸ್ತುಗಳ ದುಬಾರಿ ಬೆಲೆ, ಕಳಪೆ ಶಿಕ್ಷಣ ಹಾಗೂ ಪರೋಕ್ಷ ವಾಣಿಜ್ಯೀಕರಣದ ಪರಿಣಾಮವಾಗಿ ಸಾಮಾನ್ಯ ಮತ್ತು ಮಧ್ಯಮ ವರ್ಗದ ಪಾಲಕರು ತೀವ್ರ ಆರ್ಥಿಕ ಒತ್ತಡ ಅನುಭವಿಸುತ್ತಿದ್ದಾರೆ. ಇದರ ನಡುವೆ ಕೆಲ ಜಾಗೃತ ಪಾಲಕರು ಸಮಾಜದ ಬದಲಾವಣೆಗೆ ಮಾದರಿಯಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ನವ ಕರ್ನಾಟಕ ಯುವಶಕ್ತಿ ವೇದಿಕೆ ಇಂತಹ ಮುಂದಾಳು ಪೋಷಕರು ಹಾಗೂ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಇತರರಿಗೆ ಸಕಾರಾತ್ಮಕ ಸಂದೇಶ ನೀಡಲು ಯೋಜನೆ ರೂಪಿಸಿದೆ,” ಎಂದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕರಯ್ಯ ಮಾತಾನಾಡಿ “ಇದು ಶಿಕ್ಷಣ ಕ್ಷೇತ್ರದಲ್ಲಿ ಒಂದು ವಿಶಿಷ್ಟ ಪ್ರಯತ್ನ. ಸಾರ್ವಜನಿಕ ಶಿಕ್ಷಣದ ಮಹತ್ವವನ್ನು ಜನತೆಗೆ ತಿಳಿಸಿ, ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಲು ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ಈ ಕಾರ್ಯ ಶ್ಲಾಘನೀಯ. ಈ ಕಾರ್ಯಕ್ರಮದಿಂದ ಮಕ್ಕಳ ಮನೋಬಲ ಹೆಚ್ಚಿದೆ ಎಂದರು.

    ಕಾರ್ಯಕ್ರಮದಲ್ಲಿ ನವ ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ಹಳ್ಳಿರೈತ ಅಂಬರೀಶ್ ಮತ್ತು ಪದಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕರಯ್ಯ, ನಿವೃತ್ತ ಅರೆಸೇನಾ ಯೋಧರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಅನಂತರಾಜ್ ಗೋಪಾಲ್, ಹಿರಿಯ ಮಾಧ್ಯಮ ವರದಿಗಾರ ಗಂಗರಾಜು, ಕನ್ನಡ ಪರ ಹೋರಾಟಗಾರ ತೂಬಗೆರೆ ಷರೀಫ್, ಕನ್ನಡ ಸಾಹಿತ್ಯ ಪರಿಷತ್ ತೂಬಗೆರೆ ಹೋಬಳಿಯ ಅಧ್ಯಕ್ಷ ಕುಮಾರ್, ಮುಖ್ಯಶಿಕ್ಷಕ ವಸಂತ ಕುಮಾರ್ ಗೌಡ, ರಾಧಾಕೃಷ್ಣ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕಾಂತರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ ಟಿ ಎನ್, ಮಂಜುಳಾ ರಾಜಕುಮಾರ್, ನಾಗೇಶ್, ಯುವ ಮುಖಂಡರು ನರಸಿಂಹಮೂರ್ತಿ, ನಾಗರಾಜು ನಾಗೇನಹಳ್ಳಿ, ಮುಬಾರಕ್ ಷರೀಫ್, ಶ್ರೀಧರ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

  • ಗ್ರಾಮಸ್ಥರ ಪರ – ವಿರೋಧಗಳ ಚರ್ಚೆ ನಡುವೆ ಸಿಲುಕಿ ಅರ್ಧಕ್ಕೆ ನಿಂತ ಕಾಮಗಾರಿ

    ದೊಡ್ಡಬಳ್ಳಾಪುರ : ಇನ್ನೇನು ರಸ್ತೆ ಅಗಲೀಕರಣದ ಕಾಮಗಾರಿ ಮುಗಿದೆ ಹೋಯಿತು ಎನ್ನುವಷ್ಟರಲ್ಲಿ ಸ್ಥಳೀಯ ಕೆಲ ರೈತರ ಆಕ್ರೋಶದಿಂದ ಕಾಮಗಾರಿಯು ಅರ್ಧಕ್ಕೆ ನಿಂತಿದೆ.

    ವರದನಹಳ್ಳಿಯ ಕೆಲ ದಲಿತ ಹಾಗೂ ಹಿಂದುಳಿದ ವರ್ಗಗಳ ರೈತರು ರಸ್ತೆ ಅಗಲೀಕರಣದ ನೆಪದಲ್ಲಿ ನಾವು ಉಳುಮೆ ಮಾಡುತ್ತಿರುವ ಭೂಮಿಯನ್ನು ಆಕ್ರಮಿಸಲಾಗುತ್ತಿದೆ ಎಂದು ಸ್ಥಳೀಯ ಮುಖಂಡರ ವಿರುದ್ಧ ಆರೋಪ ಮಾಡಿದ್ದಾರೆ.

     

    ತಾಲೂಕಿನ ವರದನಹಳ್ಳಿ ಮೂಲಕ ಕೋಳಿಪಾಳ್ಯಕ್ಕೆ ಸೇರುವ ನಕಾಶೆ ರಸ್ತೆಯನ್ನು ಅಗಲೀಕರಣ ಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮದ ಯುವಕರು ಮುಂದಾಗಿದ್ದು , ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೆ ತಾವೇ ಹಣ ಒಟ್ಟುಗೂಡಿಸಿ ಕಾಮಗಾರಿಗೂ ಮುಂದಾಗಿದ್ದರು, ಆದರೆ ಸ್ಥಳೀಯವಾಗಿ ದಲಿತ ಕುಟುಂಬಗಳು ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ಜಮೀನಿನಲ್ಲಿ ರಸ್ತೆ ಅಗಲೀಕರಣಕ್ಕೆ ಜಾಗ ಪಡೆದಿದ್ದು ಸ್ಥಳೀಯ ಕೆಲ ರೈತರ ಆಕ್ರೋಶಕ್ಕೆ ಕಾರಣವಾಗಿದೆ .

     

    ಕೇವಲ 5 – 10 ಗುಂಟೆ ಜಾಗದಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳು ನಮ್ಮದಾಗಿದ್ದು, ಸ್ಥಳೀಯವಾಗಿ ನಾವೇನೂ ರಸ್ತೆ ಅಗಲೀಕರಣ ಮಾಡುವಂತೆ ಕೇಳಿಲ್ಲ, ಆದರೂ ಗ್ರಾಮದ ಕೆಲವು ಮುಖಂಡರು ಬೇಕಂತಲೇ ನಮ್ಮ ಜಮೀನಿನಿಂದ ಅಭಿವೃದ್ಧಿ ಮಾಡುತ್ತಿವೆ ಎಂಬ ನೆಪದಲ್ಲಿ ಜಾಗ ಕಸಿಯಲು ಮುಂದಾಗಿದ್ದಾರೆ , ನಾವು ಯಾವುದೇ ಕಾರಣಕ್ಕೂ ಜಾಗ ಕೊಡುವುದಿಲ್ಲ ಎಂದು ಸ್ಥಳೀಯ ದಲಿತ ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಈ ಕುರಿತು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ನಂದಗುಂದಿ ವೆಂಕಟೇಶ್ ಮಾತನಾಡಿ ಸ್ಥಳೀಯ ರೈತರು ನಮಗೆ ದೂರು ನೀಡಿರುವ ಹಿನ್ನೆಲೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ , ಇಲ್ಲಿ ಕೇವಲ ದಲಿತರ ಜಮೀನು ಅಷ್ಟೇ ಅಲ್ಲದೆ , ಹಿಂದುಳಿದ ಸಮುದಾಯಗಳ ಜಮೀನಲ್ಲಿ ಜೆಸಿಪಿ ಬಳಸಿ ಟ್ರಚ್ ಒಡೆಯಲಾಗಿದೆ. ವಾಸ್ತವಿಕವಾಗಿ ಈಗಾಗಲೇಸುಮಾರು 20 ಅಡಿಯ ರಸ್ತೆ ಇದ್ದು ಅದನ್ನು ಅಗಲೀಕರಣ ಗೊಳಿಸಲು ಕೆಲವರು ಮುಂದಾಗಿದ್ದಾರೆ , ರೈತರಿಗೆ ಅನ್ಯಾಯವಾದಲ್ಲಿ ನಮ್ಮ ಪಕ್ಷ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಸ್ಥಳೀಯವಾಗಿ ರೈತರ ಸಮಸ್ಯೆ ಒಟ್ಟಿಗೆ ನಾವಿದ್ದೇವೆ , ರೈತರ ಜೀವನಾಧಾರವಾಗಿರುವ ಭೂಮಿ ಉಳಿಸುವುದು ನಮ್ಮ ಆದ್ಯ ಕರ್ತವ್ಯ , ಅವಶ್ಯಕತೆ ಇಲ್ಲದ ರಸ್ತೆ ಮಾಡುವುದು ಅನಗತ್ಯ ಎಂದರು.

     

    ಸ್ಥಳೀಯ ಮುಖಂಡರಾದ ಕಸವನಹಳ್ಳಿ ಅಂಬರೀಶ್ ಮಾತನಾಡಿ ಗ್ರಾಮದ ಎಲ್ಲಾ ರೈತರ ಸಮ್ಮತಿಯ ಮೇರೆಗೆ ಎಲ್ಲರ ಸಮಕ್ಷಮದಲ್ಲಿ ರಸ್ತೆ ಅಗಲೀಕರಣ ಮಾಡುವ ನಿರ್ಣಯ ಕೈಗೊಳ್ಳಲಾಯಿತು. ಆದರೆ ಇಂದು ಕೆಲವರು ನಮಗೆ ತಿಳಿದೇ ಇಲ್ಲ ಎಂದು ಹೇಳುತ್ತಿದ್ದಾರೆ , ರಸ್ತೆ ಅಗಲೀಕರಣ ಮಾಡುವುದರಿಂದ ಗ್ರಾಮಸ್ಥರಿಗೆ, ಸ್ಥಳೀಯ ರೈತರಿಗೆ, ಸಾಕಷ್ಟು ಅನುಕೂಲಗಳಾಗಲಿವೆ . ಸ್ಥಳೀಯ ಗ್ರಾಮದ ಸ್ಮಶಾನಕ್ಕೆ ಸೇರುವ ಈ ರಸ್ತೆಯಲ್ಲಿ ಹೊಂಗೆ ಮರಗಳು ಹೆಚ್ಚಾಗಿ ಬೆಳೆದಿವೆ, ಆದಕಾರಣ ಶಾಲಾ ವಾಹನಗಳು, ಇತರೆ ಬಾರಿ ವಾಹನಗಳು ಸಂಚರಿಸುವುದು ಕಷ್ಟ ಎಂಬ ನಿಟ್ಟಿನಲ್ಲಿ ಎಲ್ಲ ಗ್ರಾಮಸ್ಥರ ಅಭಿಪ್ರಾಯದ ಮೇರೆಗೆ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದೆವು , ರಸ್ತೆ ಅಗಲೀಕರಣ ಬೇಡ ಎಂಬ ನಿರ್ಧಾರದೊಂದಿಗೆ ಸ್ಥಳೀಯ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವ ರೈತರಿಗೆ ಅರಿವಾಗಬೇಕಿರುವುದು ಏನೆಂದರೇ ರಸ್ತೆ ಅಗಲೀಕರಣದಿಂದ ಅವರ ಜಮೀನಿಗೆ ಹೆಚ್ಚು ಲಾಭದಾಯಕ ಎಂಬುದು , ಇನ್ನೇನು ಕೆಲಸ ಎರಡು ದಿನಗಳಿಗೆ ಮುಗಿದೇ ಹೋಗುತ್ತಿತ್ತು ಅಷ್ಟರಲ್ಲಿ ಸ್ಥಳೀಯ ಕೆಲ ಗ್ರಾಮಸ್ಥರು, ರೈತರ ಈ ವರ್ತನೆ ಬೇಸರ ಉಂಟು ಮಾಡಿದೆ . ಈ ಕುರಿತು ಸಂಪೂರ್ಣ ವಿಚಾರಣೆ ಮಾಡಿ ಅಧಿಕಾರಿಗಳೇ ಸೂಕ್ತ ಕ್ರಮ ಕೈಗೊಳ್ಳಲಿ ಎಂದರು.

    ಸ್ಥಳೀಯ ರೈತ ಕೆಂಪಯ್ಯ ಮಾತನಾಡಿ ನಾವೇನು ರೋಡ್ ಬೇಕು ಅಂತ ಕೇಳಿಲ್ಲ, ಏಕಾಏಕಿ ಜೆಸಿಪಿ ತಗೊಂಡು ಬಂದು ನಾವು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜಮೀನಿನಲ್ಲಿ ದೌರ್ಜನ್ಯವೆಸಗಿದ್ದಾರೆ, ನಮಗೆ ರಕ್ಷಣೆ ಬೇಕು ಅಂದರು.

     

    ಸ್ಥಳೀಯ ಮುಖಂಡರಾದ ಮುನೀಂದ್ರ ಮಾತನಾಡಿ ಸ್ಥಳೀಯವಾಗಿ ರಸ್ತೆ ಅಗಲೀಕರಣ ನೆಪದಲ್ಲಿ ರಸ್ತೆ ಬದಿಯಿಂದ ಮರಗಳು ಸಂಪೂರ್ಣ ಹಾಳಾಗಿವೆ, ಯಾವುದೇ ಆದೇಶ ಅನುಮತಿ ಇಲ್ಲದೆ ರಸ್ತೆ ಅಗಲೀಕರಣ ಸರಿಯಲ್ಲ ಈ ಕುರಿತು ಸೂಕ್ತ ತನಿಖೆಯಾಗಲಿ ಅಧಿಕಾರಿಗಳು ರೈತರ ಪರ ಧ್ವನಿಯಾಗಿ ಶ್ರಮಿಸಲಿ ಎಂದರು.

     

     

    ಸ್ಥಳೀಯ ರೈತ ಬೈರೇಗೌಡ ಮಾತನಾಡಿ ರಸ್ತೆ ಅಗಲೀಕರಣ ಯಾರೊಬ್ಬರ ವೈಯಕ್ತಿಕ ಲಾಭಕ್ಕಾಗಿ ಮಾಡುತ್ತಿರುವುದಲ್ಲ ಇದು ಎಲ್ಲರ ಹಿತಕ್ಕಾಗಿ ಕೈಗೊಂಡಿರುವ ಕಾಮಗಾರಿ , ಇದನ್ನು ಗ್ರಾಮದ ಗ್ರಾಮಸ್ಥರು ರೈತರು ಅರಿತುಕೊಳ್ಳಬೇಕಿದೆ. ರಸ್ತೆ ಅಗಲೀಕರಣದಿಂದ ಯಾರೊಬ್ಬರಿಗೂ ಸಮಸ್ಯೆ ಆಗುವುದಿಲ್ಲ , ಇಲ್ಲಿ ಯಾವುದೇ ರೀತಿಯ ದೌರ್ಜನ್ಯವಾಗಿಲ್ಲ ರೈತರ ಒಳಿತಿಗಾಗಿ ರಸ್ತೆ ಅಗಲೀಕರಣ ಅಗತ್ಯ ಎಂದರು.

     

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

     

     

     

     

  • ಅಧಿಕಾರ ದುರುಪಯೋಗ ಆರೋಪ: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ಪ್ರತಿಭಟನೆಗೆ ಮುಂದಾದ ಸದಸ್ಯರು

    ದೊಡ್ಡಬಳ್ಳಾಪುರ : ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ದೊಡ್ಡಬಳ್ಳಾಪುರ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆಯ ಸದಸ್ಯರು ನಗರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನೆಡೆಸಿದರು.

    ದಲಿತ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರ ವಾರ್ಡ್ ಗಳ ಅಭಿವೃದ್ಧಿಗೆ ಪ್ರಸ್ತುತ ಸ್ಥಾಯಿ ಸಮಿತಿ ಅಧ್ಯಕ್ಷರು ಇಲ್ಲ ಸಲ್ಲದ ಕಾರಣ ಹೇಳಿ ಅಡ್ಡಿ ಪಡಿಸುತ್ತಿದ್ದಾರೆ, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಜನ ಪ್ರತಿನಿದಿಗಳಾದ ನಮ್ಮ ಆದ್ಯಾ ಕರ್ತವ್ಯವಾಗಿದೆ ಆದರೆ ಸ್ಥಾಯಿ ಸಮಿತಿ ಅಧ್ಯಕ್ಷರು ನಗರದ ಎಲ್ಲಾ ವಾರ್ಡ್ ಗಳ ಅಭಿವೃದ್ಧಿ ಕಾರ್ಯಗಳಲ್ಲಿ ನುಸೂಳಿ ಅಡ್ಡಿ ಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಆರೋಪಿಸಿದ್ದಾರೆ.

     

    ನಗರದ ಕಚೇರಿ ಪಾಳ್ಯದಲ್ಲಿ ಒಳಚರಂಡಿ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಸಂಪರ್ಕ ಮಾರ್ಗ ಕಲ್ಪಿಸಲು ಮುಂದಾಗಿದ್ದು, ಸ್ಥಾಯಿ ಸಮಿತಿ ಅಧ್ಯಕ್ಷರು ನನ್ನ ಅಪ್ಪಣೆ ಪಡೆಯಬೇಕು ಎಂದು ಹೇಳುತ್ತಾರೆ ಇವರ ಅಪ್ಪಣೆ ಪಡೆಯಲು ಇವರೇನು ಸರ್ವಧಿಕಾರಿಯೇ… ನಮ್ಮ ವಾರ್ಡ್ ನ ಜನತೆಗೆ ಸೌಲಭ್ಯ ಕಲ್ಪಿಸುವುದು ಜನಪ್ರತಿನಿದಿಗಳ ಕರ್ತವ್ಯ ಅಲ್ಲವೇ ಇದಕ್ಕೆ ಅಡ್ಡಿ ಪಡಿಸುತ್ತಿರುವ ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ಪೌರಯುಕ್ತರು ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಅಗ್ರಹಿಸಿದರು.

    ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಆನಂದ್, ಚಂದ್ರ ಮೋಹನ್, ಮುಖಂಡರಾದ ಸುಬ್ರಮಣಿ ಸೇರಿದಂತೆ ಹಲವರು ಹಾಜರಿದ್ದರು.

  • ಅಧಿಕಾರಿಗಳು ದಲಿತ ಪರ ಧ್ವನಿಯಾಗಿ ಶ್ರಮಿಸಲಿ: ದಲಿತರ ವಿರುದ್ಧ ದೌರ್ಜನ್ಯ ಖಂಡಿಸಿ ನಮ್ಮ ಹೋರಾಟ ಸದಾ ಜೀವಂತ – ರಾಮು ನೇರಳೆಘಟ್ಟ

    ದೊಡ್ಡಬಳ್ಳಾಪುರ ( ವಿಜಯಮಿತ್ರ) : ಪ್ರೊಫೆಸರ್ ಬಿ ಕೃಷ್ಣಪ್ಪ ರವರು ಸ್ಥಾಪಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ(47/74/75) ಬೆಂಗಳೂರು ಗ್ರಾಮಾಂತರ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ರಾಜ್ಯ ಸಂಘಟನಾ ಸಂಚಾಲಕರಾದ ನೆಲಮಂಗಲ ಬಸವರಾಜು ನೇತೃತ್ವದಲ್ಲಿ ಸರ್ವ ಸದಸ್ಯರ ಸಭೆ ಹಾಗೂ ಕುಂದು ಕೊರತೆ ಸಭೆ ನೆಡೆಸಲಾಯಿತು.

    ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸಭೆಯ ನಂತರ ಜಿಲ್ಲಾ ಸಂಚಾಲಕರಾದ ರಾಮಮೂರ್ತಿ (ರಾಮು) ನೇರಳಘಟ್ಟ ಮಾತನಾಡಿ ಸಂಘಟನೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಪ್ರಬಲವಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ .ದಲಿತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ವಂದಿಸುವ ಮೂಲಕ ಸಹಕರಿಸಬೇಕಿದೆ, ಎಷ್ಟೋ ಭೂಮಿಗಳನ್ನು ದಲಿತರಿಂದ ಉಳ್ಳವರು ಮೇಲ್ಜಾತಿ ವರ್ಗದವರು ಕಬಳಿಸುತ್ತಿದ್ದಾರೆ, PTCL ಕಾಯ್ದೆ ಕೇವಲ ನಮ್ ಕಾ ವಾಸ್ತೆ ಆಗದೇ ದಲಿತರ ಭೂಮಿ ಉಳಿಸಲು ಉಪಯೋಗವಾಗಬೇಕಿದೆ ಎಂದರು.

    ರಾಜ್ಯ ಸಮಿತಿಯು ಸಮಿತಿ ಆದೇಶದ ಮೇರೆಗೆ ಪ್ರತಿ ತಾಲೂಕಿನ ವ್ಯಾಪ್ತಿಗೆ ಉಪ ಸಮಿತಿಗಳ ರಚನೆ ಮಾಡಲಾಗಿದೆ ಪ್ರತಿ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಜವಾಬ್ದಾರಿಯನ್ನು ಸ್ಥಳೀಯ ಪದಾಧಿಕಾರಿಗಳಿಗೆ ನೀಡಲಾಗಿದೆ. ರೈತರ ಸಾಗುವಳಿ ಚೀಟಿ ವಿತರಣಾ ಸಮಸ್ಯೆ, ವಸತಿ ಸಮಸ್ಯೆ, ದಲಿತರ ಮೇಲೆ ಹಲ್ಲೆ ಪ್ರಕರಣಗಳು ಕುರಿತಂತೆ ನಮಗೆ ದೂರು ಬಂದಿದ್ದು ಈ ಕುರಿತು ತಾಲ್ಲೂಕು ಹಾಗೂ ಜಿಲ್ಲಾ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು ಸೂಕ್ತ ಕ್ರಮಕೊಳ್ಳದ ಪಕ್ಷದಲ್ಲಿ ಸಂಘಟನೆವತಿಯಿಂದ ಉಗ್ರ ಹೊರಟ ರೂಪಿಸಲಾಗುವುದು ಎಂದರು

    ರಾಜ್ಯ ಸಮಿತಿ ಸದಸ್ಯ ನೆಲಮಂಗಲ ಬಸವರಾಜು ಮಾತನಾಡಿ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಅವರ ಆದೇಶದ ಮೇರೆಗೆ ಇಂದು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸಮಿತಿಯ ಸರ್ವ ಸದಸ್ಯರ ಸಭೆ ನೆಡೆಸಲಾಗಿದೆ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಹಾಗೂ ತಾಲ್ಲೂಕಿನ ಹಲವು ಸಮಸ್ಯೆ ಗಳನ್ನು ಅಲಿಸಿದ್ದೇವೆ, ಪ್ರಮುಖವಾಗಿ ಪ ದಲಿತರ ಭೂಮಿ ಕಬಳಿಕೆ ಆರೋಪ ಕೇಳಿಬಂದಿದ್ದು ಈ ಕುರಿತು ಅಧಿಕಾರಿಗಳ ಗಮನ ಸೆಳೆಯುವ ಮೂಲಕಪಿ ಟಿ ಸಿ ಎಲ್ ಕಾಯ್ದೆ ಅಡಿಯಲ್ಲಿ ದಲಿತರ ಭೂಮಿ ಸಂರಕ್ಷಣೆಗೆ ಮುಂದಾಗಲಿದ್ದೇವೆ ಎಂದರು

    ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರು ಬಸವರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕರಾದ ನೇರಳೆಘಟ್ಟ ರಾಮಮೂರ್ತಿ (ರಾಮು), ಬೆಂಗಳೂರು ನಗರ ಜಿಲ್ಲಾ ಸಂಚಾಲಕರು ಎಂ.ಶರವಣ, ರಾಮನಗರ ಜಿಲ್ಲಾ ಹಿರಿಯ ಹೋರಾಟಗಾರು ಜಯಣ್ಣ, ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕರು ಶ್ರೀನಿವಾಸ್, ದೊಡ್ಡಬಳ್ಳಾಪುರ ತಾಲೂಕು ಸಂಚಾಲಕರು ಮೈಲಾರಪ್ಪ, ತಾಲೂಕು ಗೌರವ ಸಂಚಾಲಕರು ಜೇಮ್ಸ್ ರಾಜಣ್ಣ, ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನ ಸಂಚಾಲಕರು ಜಿ.ನರಸಿಂಹಮೂರ್ತಿ,ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನಾ ಸಂಚಾಲಕ ಕುಕ್ಕನಹಳ್ಳಿ ನರಸಿಂಹಮೂರ್ತಿ, ಮುಖಂಡರಾದ ಕೃಷ್ಣಪ್ಪ, ಮಾರಪ್ಪ, ರಾಜಶೇಖರ್, ನರಸಿಂಹಯ್ಯ, ಮಹೇಂದ್ರ ಮುತ್ತದವರು ಇದ್ದರು.

  • AC ಆಫೀಸ್ ಬಳಿ ಗ್ರಾಮ ಪಂಚಾಯತಿ ಅಧ್ಯಕ್ಷನಿಗೆ ಹೊಡೆದ ಸದಸ್ಯರು… ಏನಿದು ಘಟನೆ ಸುದ್ದಿ ನೋಡಿ

    ದೊಡ್ಡಬಳ್ಳಾಪುರ :ಉಪವಿಭಾಗಾಧಿಕಾರಿಗಳಿಗೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಬಂದು ನಡು ರಸ್ತೆಯಲ್ಲಿ ಪಂಚಾಯತಿ ಅಧ್ಯಕ್ಷನಿಗೆ ಸದಸ್ಯರು ಹೊಡೆದಿದ್ದಾರೆ ಅವರಿಂದ ತಪ್ಪಿಸಿಕೊಳ್ಳಲು ದೊಡ್ಡಬಳ್ಳಾಪುರ ತಾಲ್ಲೂಕಿನ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ತ್ಯಾಮಗೊಂಡ್ಲು ಹೊಬಳಿಯ ಅರೆಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಡಗಿಕುಳಿತಿರುವ ಘಟನೆ ಸಂಭವಿಸಿದೆ

    ದೊಡ್ಡಬಳ್ಳಾಪುರ ತಾಲ್ಲೂಕಿನ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲೇ ನಾವು ರಾಜೀನಾಮೆ ನೀಡುತ್ತೇವೆ ಬನ್ನಿ ಎಂದು ನಮ್ಮ ಪಂಚಾಯತಿಯ ಸದಸ್ಯರು ನನ್ನನ್ನು ಕರೆದುಕೊಂಡು ಬಂದು ತಾಲ್ಲೂಕು ಕಚೇರಿ ಮುಂಭಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅರೆಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರಂಗಸ್ವಾಮಿ ಆರೋಪಿಸಿದ್ದಾರೆ.

    ಅರೆಬೊಮ್ಮನಹಳ್ಳಿ ಪಿ ಡಿ ಒ ವಿರುದ್ಧ ಆರೋಪಿಸಿರುವ ಅವರು ಪಂಚಾಯತಿಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ನೆಡೆಯುತ್ತಿದೆ ನಾನು ಅಧ್ಯಕ್ಷನಾದ ನಂತರ ನಿಲ್ಲಿಸಲು ಸಾಕಷ್ಟು ಪ್ರಯತ್ನ ಮಾಡಿದ ಹಿನ್ನಲೆ ನನ್ನ ಮೇಲೆ ಈ ಕೃತ್ಯಕ್ಕೆ ಸದಸ್ಯರು,ಪಿ ಡಿ ಒ ಸೇರಿದಂತೆ ಹಲವರು ಪ್ರಯತ್ನಿಸಿದ್ದಾರೆ, ನನ್ನ ರಕ್ಷಣೆಗಾಗಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅವಿತುಕೊಂಡೆ ಈಗ ಪೊಲೀಸ್ ಸಿಬ್ಬಂದಿ ಬಂದಿದ್ದಾರೆ ಠಾಣೆಯಲ್ಲಿ ಈ ಕುರಿತು ದೂರು ಸಲ್ಲಿಸಲಿದ್ದು, ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನನಗೆ ನ್ಯಾಯ ಕೊಡಿ ಎಂದು ಮನವಿ ಮಾಡಿದ್ದಾರೆ.

     

     

  • ನಿರಂತರ ಅನ್ನದಾಸೋಹ ಸುಲಭವಲ್ಲ – ಕೃಷ್ಣಪ್ಪ

    ದೊಡ್ಡಬಳ್ಳಾಪುರ : ನನ್ನ ಹುಟ್ಟು ಹಬ್ಬವನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸುತ್ತಿರುವುದು ಸಂತಸತಂದಿದೆ ಎಂದು ಅನ್ನ ದಾಸೋಹ ದಾನಿಗಳಾಗಿ ಸಹಾಯಹಸ್ತ ನೀಡಿದ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ತಿಳಿಸಿದರು.

    ನಿರಂತರ ಅನ್ನ ದಾಸೋಹ ಸಮಿತಿಯ 1944 ನೇ ದಿನದ ಅನ್ನ ದಾಸೋಹ ಭಾಗವಹಿಸಿ ಮಾತನಾಡಿದರು, ಹಸಿದ ಹೊಟ್ಟೆ ಗಳಿಗೆ ಆಹಾರ ವಿತರಣೆ ಮಾಡುವ ಮೂಲಕ ಇಂದು ನನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದೇನೆ, ಇದೊಂದು ಅರ್ಥಪೂರ್ಣ ಸಂಭ್ರಮಾಚರಣೆ ಎಂಬುದು ನನ್ನ ಭಾವನೆ, ದಾನ ಮಾಡುವ ಮನಸ್ಸುಳ್ಳ ಎಲ್ಲರೂ ನಿರಂತರ ಅನ್ನ ದಾಸೋಹ ಸಮಿತಿಯೊಟ್ಟಿಗೆ ಕೈಜೋಡಿಸುವ ಮೂಲಕ ತಮ್ಮ ವಿಶೇಷ ದಿನಗಳನ್ನು ಆಚರಿಸಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ದಾನಿಗಳ ನೆರವಿಂದ ನಡೆಯುತ್ತಿರುವ ಈ ಅನ್ನದಾಸೋಹ ಕಾರ್ಯಕ್ರಮವು ನಿತ್ಯ ನಿರಂತರ ಸಾಗುತ್ತಿದೆ. ದಿನೇ ದಿನೇ ಇಲ್ಲಿಗೆ ಬರುವ ನಿರಾಶ್ರಿತರು ಹೆಚ್ಚಾಗುತ್ತಿದ್ದಾರೆ, ದಾನಿಗಳ ಅವಶ್ಯಕತೆ ಹೆಚ್ಚಾಗಿದೆ ದಾನ ಮಾಡಲು ಇಚ್ಚಿಸುವ ಎಲ್ಲ ಮನಸ್ಸುಗಳಿಗೆ ನಮ್ಮ ಈ ಸೇವೆ ಉತ್ತಮ ವೇದಿಕೆಯಾಗಲಿದೆ ಬನ್ನಿ ನಮ್ಮೊಂದಿಗೆ ಭಾಗವಹಿಸಿ ಹಸಿದ ಹೊಟ್ಟೆ ಗಳಿಗೆ ಆಹಾರ ವಿತರಣೆ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಅನ್ನ ದಾಸೋಹ ಸಮಿತಿಯ ಸದಸ್ಯರು, ಸ್ಥಳೀಯ ಮುಖಂಡರು ಹಾಜರಿದ್ದರು.

  • ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

    2025-26ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪಿಯುಸಿ ಹಾಗೂ ಸಮನಾಂತರ ಕೋರ್ಸು ಮತ್ತು ಪದವಿ ಮಟ್ಟದ ಕೋರ್ಸುಗಳ ವಿದ್ಯಾರ್ಥಿಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ

     

    ರಾಜ್ಯ ವಿದ್ಯಾರ್ಥಿನಿಲಯದ ತಂತ್ರಾಂಶ https//shp.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

     

    ಆಗಸ್ಟ್ 2 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಘಾಟಿ ಸುಬ್ರಮಣ್ಯಕ್ಕೆ ರೈಲು ಸಂಪರ್ಕ ಸುಲಭಗೊಳಿಸಿ: ನವ ಕರ್ನಾಟಕ ಯುವ ಶಕ್ತಿ ವೇದಿಕೆಯಿಂದ ಸಂಸದ ಡಾ. ಕೆ. ಸುಧಾಕರ್ ಅವರಿಗೆ ಮನವಿ ಪತ್ರ ಸಲ್ಲಿಕೆ

    ನವ ಕರ್ನಾಟಕ ಯುವ ಶಕ್ತಿ ವೇದಿಕೆ ವತಿಯಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಕೆ. ಸುಧಾಕರ್ ಅವರಿಗೆ, ಒಡ್ಡರಹಳ್ಳಿ (ORH) ರೈಲು ನಿಲ್ದಾಣವನ್ನು “ಘಾಟಿ ಸುಬ್ರಮಣ್ಯ ರಸ್ತೆ ರೈಲು ನಿಲ್ದಾಣ” ಎಂದು ಮರುಹೆಸರಿಸುವಂತೆ ಹಾಗೂ ಭಕ್ತರ ಅನುಕೂಲಕ್ಕಾಗಿ ಇಲ್ಲಿ ಕೆಲವು ಪ್ರಮುಖ ರೈಲುಗಳಿಗೆ ನಿಲುಗಡೆ ಕಲ್ಪಿಸಲು ನಿರ್ದಿಷ್ಟ ಮನವಿ ಪತ್ರ ಸಲ್ಲಿಸಲಾಗಿದೆ.

     

    ತುಬಗೆರೆ ಸಮೀಪದ ಘಾಟಿ ಸುಬ್ರಮಣ್ಯ ದೇವಾಲಯವು ರಾಜ್ಯದ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದು. ಬೆಂಗಳೂರಿನಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಇಂತಹ ಪ್ರಸಿದ್ಧ ಕ್ಷೇತ್ರದ ಹತ್ತಿರವೇ ಇದ್ದರೂ, “ಒಡ್ಡರಹಳ್ಳಿ” ಎಂಬ ಹೆಸರಿನ ಕಾರಣದಿಂದ ರೈಲು ಪ್ರಯಾಣಿಕರಲ್ಲಿ ಇದರ ಅರಿವು ಕಡಿಮೆ ಇದ್ದು, ಹೆಚ್ಚಿನ ಭಕ್ತರು ರಸ್ತೆ ಮಾರ್ಗವನ್ನೇ ಆಯ್ಕೆ ಮಾಡುತ್ತಿದ್ದಾರೆ.

     

    ಮನವಿ ಪತ್ರದ ಮುಖ್ಯಾಂಶಗಳು ಹೀಗಿವೆ:

    ಒಡ್ಡರಹಳ್ಳಿ (ORH) ನಿಲ್ದಾಣವನ್ನು “ಘಾಟಿ ಸುಬ್ರಮಣ್ಯ ರಸ್ತೆ” ಎಂದು ಮರುಹೆಸರಿಸುವಂತೆ ಆಗ್ರಹ.ನಿಲ್ದಾಣದ ಮೂಲಕ ಹಾದುಹೋಗುವ ಪ್ರಮುಖ ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳಿಗೆ ವಿಶೇಷ ನಿಲ್ದಾಣ ವ್ಯವಸ್ಥೆ ಕಲ್ಪಿಸುವಂತೆ ವಿನಂತಿ.

    ರಸ್ತೆ ಸಾರಿಗೆ ಸಾಕಷ್ಟು ಅಸಮರ್ಪಕವಾಗಿದ್ದು, ವಿಶೇಷ ದಿನಗಳಲ್ಲಿ ಭಾರೀ ಸಂಚಾರ ಜಾಮಾಗಳಾಗುತ್ತಿರುವುದು.

    ಈ ಹೆಸರಿನ ಬದಲಾವಣೆ ಮತ್ತು ನಿಲ್ದಾಣ ಸೌಲಭ್ಯ ಹೆಚ್ಚಿದರೆ, ಭಕ್ತರಿಗೆ ಅನುಕೂಲವಾಗುವುದು ಮಾತ್ರವಲ್ಲ, ಸ್ಥಳೀಯ ಆರ್ಥಿಕತೆಗೂ ಉತ್ತೇಜನ ದೊರಕುವುದು.

    ಈ ಕುರಿತು ಮಾನ್ಯ ಸಂಸದರು ರೈಲ್ವೆ ಇಲಾಖೆಗೆ ಶಿಫಾರಸು ಮಾಡಿದರೆ, ಈ ಜನಪರ ಬೇಡಿಕೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಬಹಳ ಹೆಚ್ಚು, ಎಂದು ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ಮತ್ತು ಅಧ್ಯಕ್ಷ ಹಳ್ಳಿ ರೈತ ಅಂಬರೀಶ್ ತಿಳಿಸಿದರು.

  • ಕಾರ್ಮಿಕ ಇಲಾಖೆ ವತಿಯಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

    ಕಾರ್ಮಿಕ ಇಲಾಖೆ ವತಿಯಿಂದ ಪ್ರೌಢಶಾಲೆಯಿಂದ ಸ್ನಾತಕೋತ್ತರ ಪದವಿಯವರೆಗೆ ಹಾಗೂ ವೈದ್ಯಕೀಯ/ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ 2025-26 ನೇ ಸಾಲಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಅರ್ಹ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

     

    ಅರ್ಜಿಯನ್ನು www.klwbapps.karnataka.gov.in ವೆಬ್ಸೈಟ್ ಮೂಲಕ ಡಿಸೆಂಬರ್ 31 ರೊಳಗೆ ಸಲ್ಲಿಸಬೇಕು.

     

    ಕಾರ್ಮಿಕನ ಮಾಸಿಕ ವೇತನ 35,000 ಮೀರಿರಬಾರದು, ವಿದ್ಯಾರ್ಥಿಯ ಹಿಂದಿನ ವರ್ಷದಲ್ಲಿ ಸಾಮಾನ್ಯ ವರ್ಗ ಶೇ.50 ಹಾಗೂ ಪ.ಜಾತಿ/ಪ.ಪಂ ಶೇ 45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು,ಕುಟುಂಬದ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ನೀಡಲಾಗುವುದು,

     

    ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಕಾರ್ಮಿಕ ಕಲ್ಯಾಣ ಭವನ, ನಂ.48. 2ನೇ ಮಹಡಿ, ಮತ್ತಿಕೆರೆ ಮುಖ್ಯ ರಸ್ತೆ, ಯಶವಂತಪುರ, ಬೆಂಗಳೂರು -560022 ಖುದ್ದಾಗಿ ಅಥವಾ ದೂರವಾಣಿ ಸಂ: 080-23475188, 8277291175, 8277120505, 9141585402 ಹಾಗೂ 9141602561 ಗೆ ಸಂಪರ್ಕಿಸಬಹುದು ಎಂದು ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಸಗಟು ಮಳಿಗೆಗೆ ದಿಢೀರ್ ಬೇಟಿ ನೀಡಿದ ಆಹಾರ ಸಚಿವ ಮುನಿಯಪ್ಪ

    ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಇಂದು ಮೈಸೂರಿನ ದಕ್ಷಿಣ ನಗರದ ಸಗಟು ಮಳಿಗೆ ಬಂಡಿಪಾಲ್ಯಕ್ಕೆ ಬೇಟಿ ನೀಡಿ ಆಹಾರ ಧಾನ್ಯಗಳ ಪರಿಶೀಲನೆ ನಡೆಸಿದರು .

     

    ಅಕ್ಕಿ,ರಾಗಿಯ ಗುಣಮಟ್ಟದ ಕುರಿತು ಪರಿಶೀಲಿಸಿ ಉತ್ತಮವಾದ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು ಎಂದರು.

    ಸಗಟು ಮಳಿಗೆಯನ್ನು ಪರಿಶೀಲಿಸಿ ಸಗಟು ಮಳಿಗೆಯು ಗುಣಮಟ್ಟದ್ದಾಗಿದ್ದು ಉತ್ತಮವಾಗಿದೆ ಎಂದು ಸಿಬ್ಬಂದಿಗೆ ಪ್ರಶಂಸಿಸಿ ರಾಜ್ಯದ ಎಲ್ಲಾ ಸಗಟು ಮಳಿಗೆಗಳು ಈ ರೀತಿಯಲ್ಲಿ ಗುಣಮಟ್ಟವನ್ನು ಕಾಪಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

     

    ಸಗಟು ಮಳಿಗೆಯಲ್ಲಿ ಹಮಾಲಿ ಕೆಲಸಗಾರನ್ನು ಮಾತನಾಡಿಸಿ ಅವರ ಸಮಸ್ಯೆಗಳು ಏನೇ ಇದ್ದರು ಬಗೆಹರಿಸಲಾಗುವುದು ಎಂದರು.

    ಈ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್,ಜಂಟಿ ಉಪ ನಿರ್ದೇಶಕ ಮಂಟೇಸ್ವಾಮಿ,ಸಗಟು‌ಮಳಿಗೆಯ ಸಹಾಯ ನಿರ್ದೇಶಕ ಕಿರಣ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.