Blog

  • ಸುಸಜ್ಜಿತ ಬಾಡಿಗೆ ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನ

    ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನ ಅಜಾದ್ ಮಾದರಿ ಶಾಲೆ ನಡೆಸಲು ನೆಲಮಂಗಲ ತಾಲ್ಲೂಕಿನಲ್ಲಿ ಸುಸಜ್ಜಿತ ಬಾಡಿಗೆ ಕಟ್ಟಡ ಬೇಕಾಗಿದ್ದು, ಅದಕ್ಕಾಗಿ ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.

     

    6ನೇ ತರಗತಿಯಿಂದ 10ನೇ ತರಗತಿಯವರೆಗೆ ಸುಮಾರು 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಹಿತದೃಷ್ಟಿಯಿಂದ ಸುಸಜ್ಜಿತವಾದ 05 ತರಗತಿ ಕೊಠಡಿಗಳು, 06 ಶೌಚಗೃಹ, ಡೈನಿಂಗ್ ಹಾಲ್, ಅಡುಗೆ ಕೋಣೆ ಹಾಗೂ ಕನಿಷ್ಠ 01 ರಿಂದ 02 ಸಿಬ್ಬಂದಿಗಳಿಗೆ ಆಪೀಸ್ ಕೊಠಡಿಗಳು, ಯು.ಪಿ.ಎಸ್, ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳುಳ್ಳ ಕಟ್ಟಡ ಬೇಕಾಗಿದೆ.

     

    ಸರ್ಕಾರಿ ಶಾಲೆ ನಡೆಸಲು ಕಟ್ಟಡವನ್ನು ಬಾಡಿಗೆಗೆ ನೀಡಲಿಚ್ಚಿಸುವ ಮಾಲೀಕರು ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮುಖ್ಯೋಪಾಧ್ಯಾಯರು ಮೌಲಾನ ಅಜಾದ್ ಮಾದರಿ ಶಾಲೆ, ನೆಲಮಂಗಲ ಟೌನ್ ದೂರವಾಣಿ ಸಂಖ್ಯೆ: 9731017483, 080-29787455 ಗೆ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಗೃಹ ಆರೋಗ್ಯ ಯೋಜನೆ: ಮನೆ ಮನೆ ಭೇಟಿ ನೀಡಿ ಅರೋಗ್ಯ ತಪಾಸಣೆ ನಡೆಸಲಿರುವ ಆರೋಗ್ಯ ಸಿಬ್ಬಂದಿ

    ಗೃಹ ಆರೋಗ್ಯ ಯೋಜನೆಯಡಿ ಆರೋಗ್ಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಮನೆ ಮನೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ಜಿ.ಪಂ ಸಿಇಓ ಡಾ. ಕೆ.ಎನ್ ಅನುರಾಧ ಅವರು ತಿಳಿಸಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ವೇಕ್ಷಣಾ ಘಟಕ ಇವರ ವತಿಯಿಂದ ಹಮ್ಮಿಕೊಂಡಿದ್ದ ಗೃಹ ಅರೋಗ್ಯ ಯೋಜನೆ ಕಾರ್ಯಗಾರ ಮತ್ತು ಜಿಲ್ಲಾದ್ಯಂತ ಗೃಹ ಅರೋಗ್ಯ ಯೋಜನೆ ವಿಸ್ತರಣೆ ಮತ್ತು ಆಶಾ ಕೈಪಿಡಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗೃಹ ಆರೋಗ್ಯ ಯೋಜನೆಯು ಅಗತ್ಯ ಆರೋಗ್ಯ ಸೇವೆಗಳನ್ನು ನೇರವಾಗಿ ನಿವಾಸಿಗಳ ಮನೆ ಬಾಗಿಲಿಗೆ ಒದಗಿಸುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳ ಆರಂಭಿಕ ಪತ್ತೆ ಮತ್ತು ನಿರ್ವಹಣೆಯನ್ನು ಹೆಚ್ಚಿಸುವ ಮೂಲಕ ತೊಡಕುಗಳು ಮತ್ತು ಅಕಾಲಿಕ ಮರಣಗಳನ್ನು ಕಡಿಮೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.

     

    ಯೋಜನೆಯಲ್ಲಿ 30 ವರ್ಷ ಮೇಲ್ಪಟ್ ಎಲ್ಲರಿಗೂ ಉಚಿತವಾಗಿ ತಪಾಸಣೆ ನಡೆಸಲಾಗುತ್ತದೆ. ಪ್ರಮುಖ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ,ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ರೋಗಗಳ ತಪಾಸಣೆ ಮತ್ತು ನಿರ್ವಹಣೆಯನ್ನು ನಡೆಸಲಾಗುವುದು.

     

    ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಜನರಲ್ಲಿ ಅಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ರಕ್ತದೊತ್ತಡ, ಡಯಾಬಿಟಿಸ್ ಹೊಂದಿದವರಿಗೆ ಸ್ಥಳದಲ್ಲೇ ಔಷಧಿಗಳನ್ನ ಉಚಿತವಾಗಿ ಒದಗಿಸುವ ವ್ಯವಸ್ಥೆಯನ್ನ ಗೃಹ ಆರೋಗ್ಯ ಯೋಜನೆಯಲ್ಲಿ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಸಂಪನ್ಮೂಲ ವ್ಯಕ್ತಿಯಾಗಿ ಅಗಮಿಸಿದ್ದ ಡಾ॥ ಸುಷ್ಮಾ ಅವರು ಅಸಾಂಕ್ರಾಮಿಕ ರೋಗಗಳಿಗೆ ಮನೆಗಳಿಗೆ ತೆರಳಿ ಚಿಕಿತ್ಸೆ ಹೇಗೆ ನೀಡಬೇಕು ಮತ್ತು ಅವರುಗಳು ಆರೋಗ್ಯಕ್ಕೆ ಮಾಡಬೇಕಾದ ವ್ಯಾಯಾಮ, ಆಹಾರ ಪದ್ಧತಿ ಎಲ್ಲಾದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು.

     

    ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ॥ ಲಕ್ಕಾ ಕೃಷ್ಣಾ ರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ॥ ಹೇಮಾವತಿ ಎ.ವಿ, ಆರ್.ಸಿ.ಹೆಚ್ ಆದ ಡಾ॥ ಸಿಮಾ, ಡಿ.ಟಿ.ಒ ಡಾ॥ ನಾಗೇಶ್, ಡಿ.ಎಲ್.ಒ ಡಾ॥ ನಾಗರಾಜ್, ಡಾ॥ ಕೋಮಲಾ ಹಾಗೂ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ದಲಿತನೆಂಬ ಕಾರಣಕ್ಕೆ ಜಮೀನಿಗೆ ತಂತಿಬೇಲಿ ಹಾಕಲು ತಡೆ, ಕೋರ್ಟ್ ಆದೇಶದಂತೆ ತಂತಿಬೇಲಿ ಹಾಕಿದ ಭಾರತೀಯ ಶೂದ್ರ ಸೇನೆ

    ಹೆಗ್ಗಡಿಹಳ್ಳಿ : ಕೋರ್ಟ್ ನಿಂದ ದಲಿತರ ಪರ ಆದೇಶವಾಗಿದ್ದರೂ ಜಮೀನು ಮಾಲೀಕರಿಗೆ ಪಕ್ಕದ ಜಮೀನಿನ ಮಾಲೀಕರಿಂದ ದೌರ್ಜನ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ಶೂದ್ರ ಸೇನೆ ವತಿಯಿಂದ ಸಂಕೇತಿಕ ಪ್ರತಿಭಟನಾ ಧರಣಿ ಮಾಡಲಾಯಿತು.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿ ಹೆಗ್ಗಡಿಹಳ್ಳಿ ಗ್ರಾಮದ ಸ.ನಂ.100/1 ರಲ್ಲಿ 0.02.08 ಗುಂಟೆ ಜಮೀನು ಓ.ಎಂ.ನಾರಾಯಣಸ್ವಾಮಿ, ಬಾಬು, ನಾಗರಾಜು ಎಂಬುವರಿಗೆ ಸೇರಿದ್ದು ಎಂಬ ಆದೇಶವಾಗಿದ್ದರು, ಜಮೀನ ಮಾಲೀಕರು ದಲಿತರು ಎಂಬ ಕಾರಣಕ್ಕೆ ಪಕ್ಕದ ಜಮೀನಿನ ಮಾಲೀಕರು ಹಾಗೂ ಸ್ಥಳೀಯರಾದ ಕೆಲವರು ನಾರಾಯಣಸ್ವಾಮಿಯವರನ್ನು ಜಮೀನಿಗೆ ಬಾರದಂತೆ ಕಾಂಪೌಂಡ್ ನಿರ್ಮಾಣ ಮಾಡಿದಂತೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

    ಈ ಕುರಿತು ಭಾರತೀಯ ಶೂದ್ರ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ ಹೆಗ್ಗಡಿಹಳ್ಳಿ ಗ್ರಾಮದ ಸ.ನಂ.100/1 ಜಾಗವುಓ.ಎಂ.ನಾರಾಯಣಸ್ವಾಮಿ, ಬಾಬು, ನಾಗರಾಜುರವರಿಗೆ ಸೇರಿದ್ದು ಅವರೇ ವಾರಸುದಾರರೆಂದು ನ್ಯಾಯಾಲಯದ ಆದೇಶ ನೀಡಿದ್ದರು, ಇಲ್ಲಿ ಕೆಲವರು ದೌರ್ಜನ್ಯ ತೊಂದರೆ ಕೊಡುತ್ತಿದ್ದಾರೆ ನಮಗೆ ನ್ಯಾಯ ಬೇಕೆಂದು ಸಹಾಯಕೋರಿ ನಮ್ಮ ಭಾರತೀಯ ಶೂದ್ರ ಸೇನೆಗೆ ಅಹವಾಲು ಬಂದಿದ್ದು ಈ ವಿಚಾರವಾಗಿ ಕಳೆದ ನಾಲ್ಕು ಬಾರಿ ಸ್ಥಳಕ್ಕೆ ಭೇಟಿ ನೀಡಿದ್ದೆವು ಆದರೆ ಸ್ಥಳೀಯ ಕೆಲವರ ದೌರ್ಜನ್ಯಕ್ಕೆ ಮಿತಿ ಇಲ್ಲದಂತಾಗಿದೆ ನ್ಯಾಯಾಲಯದ ಆದೇಶಕ್ಕೂ ಧಿಕ್ಕರಿಸಿ ದಲಿತರ ಮೇಲೆ ದೌರ್ಜನಕ್ಕೆ ಮುಂದಾಗುತ್ತಿದ್ದಾರೆ, ನ್ಯಾಯಾಲಯಕ್ಕೆ ಬೆಲೆಕೊಟ್ಟು ಈ ದೌರ್ಜನವನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಮುಂದೆ ನಮ್ಮ ಭಾರತೀಯ ಶೂದ್ರ ಸೇನೆ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

     

    ಪಹಣಿದಾರರಾದ ಓ.ಎಂ.ನಾರಾಯಣಸ್ವಾಮಿ ಯವರ ಪುತ್ರ ರಂಜಿತ್ ಬಾಬು ಮಾತನಾಡಿ ನಮಗೆ ವಿನಃಕಾರಣ ತೊಂದರೆ ಕೊಡುತ್ತಿದ್ದಾರೆ ನಾವು ಕೇವಲ ದಲಿತರು ಎಂಬ ಕಾರಣಕ್ಕೆ ಈ ರೀತಿ ದೌರ್ಜನ್ಯಕ್ಕೆ ಮುಂದಾಗಿದ್ದಾರೆ ದೌರ್ಜನ್ಯ ಮತ್ತು ದಬ್ಬಾಳಿಕೆ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ನ್ಯಾಯಾಲಯದ ಆದೇಶದಂತೆ ನಾವು ನಮ್ಮ ಸ್ಥಳಕ್ಕೆ ಬಂದಿದ್ದೇವೆ ಆದರೆ ಇಲ್ಲಿ ಕಂಪೌಂಡ್ ನಿರ್ಮಿಸಲು ವಿನಾಕಾರಣ ತೊಂದರೆ ಕೊಡುತ್ತಿದ್ದು ಕಂಪೌಂಡ್ ಬಿಳಿಸುವ ಬೆದರಿಕೆ ಕೂಡ ಹಾಕಲಾಗುತ್ತಿದೆ ಎಂದರು.

     

    ಜಮೀನಿನ ಸಹ ಮಾಲೀಕರಾದ ನಾಗರಾಜ್, ನರೇಂದ್ರಬಾಬು ಮಾತನಾಡಿ ಈಗಾಗಲೇ ಹಲವು ಬಾರಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸ್ಥಳ ನಮಗೆ ಬಿಟ್ಟು ಕೊಡಿ ಎಂದು ಮನವಿ ಮಾಡಿಕೊಂಡಿದ್ದೇವೆ ಆದರೆ ನಾವು ದಲಿತರು ಎಂಬ ಕಾರಣಕ್ಕೆ ನಮಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ನಮಗೆ ಯಾರ ಆಸ್ತಿಯು ಬೇಡ , ಕೋರ್ಟ್ ಆದೇಶದಂತೆ ನಮಗೆ ಬಂದಿರುವ ಜಾಗ ನಮಗೆ ಬಿಟ್ಟುಕೊಟ್ಟರೆ ಸಾಕು, ಇಂದು ಕಾಂಪೌಂಡ್ ನಿರ್ಮಾಣ ಮಾಡಿದ್ದೇವೆ, ಈ ರೀತಿಯ ದಬ್ಬಾಳಿಕೆ ನಾವು ಸಹಿಸೋಲ್ಲ ಎಂದರು.

     

     

  • ದೊಡ್ಡಬಳ್ಳಾಪುರ : ರಾಜಘಟ್ಟದಲ್ಲಿ ಬೌದ್ಧನೆಲೆಯ ಉತ್ಖನನಕ್ಕೆ ಸಚಿವ ಡಾ.ಎಚ್.ಕೆ ಪಾಟೀಲ್ ಸೇರಿದಂತೆ ಹಲವು ಗಣ್ಯರಿಂದ ಚಾಲನೆ

    ಬೌದ್ಧ ನೆಲೆಗಳನ್ನು ಪ್ರತಿಬಿಂಬಿಸುವ ಚೈತ್ಯ-ವಿಹಾರ ಸಂಕೀರ್ಣದ ಸಂಪೂರ್ಣ ಚಿತ್ರಣವನ್ನು ಬೆಳಕಿಗೆ ತರಲು ಬೌದ್ಧ ನೆಲೆ ಉತ್ಖನನಕ್ಕೆ ಚಾಲನೆ ನೀಡಲಾಗಿದ್ದು ರಾಜಘಟ್ಟವು ಮುಂದೆ ಮಹತ್ವದ ನೆಲೆಯಾಗಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವರಾದ ಡಾ.ಎಚ್.ಕೆ ಪಾಟೀಲ್ ಅವರು ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಗ್ರಾಮದ ಬೂದಿಗುಂಡಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ರಾಜ್ಯದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬೌದ್ಧನೆಲೆಯ ಉತ್ಖನನಕ್ಕೆ ಚಾಲನೆ ನೀಡುವ ಮೂಲಕ ಅವರು ಮಾತನಾಡಿದರು ರಾಜಘಟ್ಟ ಗ್ರಾಮದಲ್ಲಿ ಬೌದ್ಧನೆಲೆಯ ಕುರಿತಾದ ಸ್ತೂಪಗಳು, ಹಾಗೂ ವಿವಿ‍ಧ ಅವಶೇಷಗಳು ಪತ್ತೆಯಾಗಿದ್ದು, ಕಾರಣಾಂತರದಿಂದ ಅಪೂರ್ಣಗೊಂಡಿದ್ದ ಉತ್ಖನನಕ್ಕೆ, ಕೇಂದ್ರ ಪುರಾತತ್ವ ಇಲಾಖೆ ಅನುಮೋದನೆಯೊಂದಿಗೆ ಈಗ ರಾಜ್ಯ ಸರ್ಕಾರದಿಂದ ಮರು ಚಾಲನೆ ನೀಡಲಾಗಿದೆ. ಪ್ರೋ ಎಮ್.ಎಸ್ ಕೃಷ್ಣ ಮೂರ್ತಿ ಅವರು ಈ ಉತ್ಖನನದ ಪ್ರಧಾನ ನಿರ್ದೇಶಕರಾಗಿರುತ್ತಾರೆ.

     

    2001 ಮತ್ತು 2004ರಲ್ಲಿ ಸಂಶೋಧಕ ಪ್ರೊ.ಎಂ.ಎಸ್.ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ರಾಜಘಟ್ಟದಲ್ಲಿ ಕ್ರಮಬದ್ಧವಾಗಿ ಉತ್ಖನನ ಕಾರ್ಯ ನಡೆದಿತ್ತು. ಅದರ ಫಲವಾಗಿ ಬೌದ್ದ ಧರ್ಮಿಯರು ಚೈತ್ಯಾಲಯ ಮತ್ತು ಅದರ ಸುತ್ತಲೂ ನಿರ್ಮಿತವಾಗಿದ್ದ ಬೌದ್ಧ ವಿಹಾರದ ಪಾಯದ ಅವಶೇಷಗಳು ಬೆಳಕಿಗೆ ಬಂದವು.

    ಈಗ ನಡೆಯಲಿರುವ ಈ ಮಹತ್ತರ ಉತ್ಖನನ ಕಾರ್ಯಕ್ರಮದಿಂದ ಬೌದ್ಧಧರ್ಮದ ಇತಿಹಾಸ, ಕುರುಹುಗಳು, ಮಾರ್ಗದರ್ಶನ ಹಾಗೂ ಬುದ್ದನ ಸಂದೇಶ ಅರಿಯಲು ಸಹಕಾರಿಯಾಗಲಿದೆ ಎಂದರು.

     

    ಬುದ್ಧನ ಸಂದೇಶಗಳು ಜನರ ಬದುಕಿಗೆ ಸಮೀಪವಾಗಿದ್ದು ನಾವೇಲ್ಲರು ಬುದ್ಧನ ಸಂದೇಶಗಳನ್ನು ಅರಿಯಬೇಕು, ಅವರ ಸಂದೇಶಗಳೆ ನಮಗೆ ಪ್ರೇರಣೆ ಎಂದರಲ್ಲದೆ ಉತ್ಖನನ ಕಾರ್ಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರಾದ ಡಾ.ಎಚ್.ಕೆ ಪಾಟೀಲ್ ಅವರು ಸೂಚಿಸಿದರು.

     

    ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರಿಂದ ಪುಸ್ತಕ ಬಿಡುಗಡೆ : ಉತ್ಖನನ ಕಾರ್ಯಕ್ಕೆ ಅಗತ್ಯ ನೆರವು ನೀಡುವ ಭರವಸೆ ಕೊಟ್ಟ ಸಚಿವರು 

    ಕರ್ನಾಟಕದಲ್ಲಿ ಬೌದ್ಧಕಲೆ ಮತ್ತು ಸಂಸ್ಕೃತಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಬೌದ್ಧ ಧರ್ಮವನ್ನು ಈಡಿ ಜಗತ್ತು ಒಪ್ಪಿಕೊಂಡಿದೆ. ನಾವು ಬುದ್ಧನನ್ನು ಮಾತ್ರ ನೋಡುತ್ತೇವೆ ಅವನ ಸಿದ್ದಾಂತ ಅವನು ತೋರಿಸಿದ ಸುಖ ಜೀವನದ ದಾರಿ ದೀಪವನ್ನು ತಿಳಿದುಕೊಳ್ಳಬೇಕು.

    ರಾಜ್ಯ ಪುರತತ್ವ ಇಲಾಖೆ ರಾಜಘಟ್ಟದಲ್ಲಿ ಸಿಕ್ಕಿರುವ ಬೌದ್ಧ ಧರ್ಮದ ಚೈತ್ಯ- ವಿಹಾರ ಸಂಕೀರ್ಣದ ಸಂಪೂರ್ಣ ಚಿತ್ರಣವನ್ನು ಬೆಳಕಿಗೆ ತರುವ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಭೂಗರ್ಭದಲ್ಲಿ ಅಡಗಿರುವ ಬೌದ್ಧ ಮಂತ್ರ ಮುದ್ರಿತ ಮಣ್ಣಿನ ಬಿಲ್ಲೆಗಳು ಅವುಗಳ ಗಾತ್ರ ಅಗಲ ಚೈತ್ಯ ವಿಹಾರ ಎಲ್ಲಾವೂ ಬೌದ್ಧ ಧರ್ಮದ ಧಾರ್ಮಿಕ ಶಕ್ತಿ ಮತ್ತು ಮೌಲ್ಯವನ್ನು ಪ್ರತಿಬಿಂಬಿಸುತ್ತದೆ ಹಾಗಾಗಿ ಇದರ ಸಂಪೂರ್ಣ ಅಭಿವೃದ್ಧಿಗೆ ನಾವೆಲ್ಲರು ಕೈಜೋಡಿಸಬೇಕು. ನಮ್ಮ ಇತಿಹಾಸವನ್ನು ಅರಿಯುವ ನಿಟ್ಟಿನಲ್ಲಿ ಉತ್ಖನನ ಕಾರ್ಯಗಳಿಗೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.

     

    ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು ಹಾಗೂ ಸಂಶೋಧಕರಾದ ಎಂ.ಎಸ್ ಕೃಷ್ಣಮೂರ್ತಿ, ಸಾಹಿತಿಗಳಾದ ಡಾ.ಎಲ್ ಹನುಮಂತಯ್ಯ, ನಾಡೋಜ ಪ್ರೊ.ಹಂಪ ನಾಗರಾಜ್, ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರು ದೇವರಾಜು ಎ, ದೊಡ್ಡಬಳ್ಳಾಪುರ ಮಾಜಿ ಶಾಸಕರಾದ ವೆಂಕಟರಮಣಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ರಾಜಣ್ಣ, ರಾಜಾಘಟ್ಟ ಉತ್ಖನನ ಭೂಮಾಲೀಕರು ಕೃಷ್ಣಪ್ಪ ಎನ್.ಅಂಜಿನಪ್ಪ, ಸ್ಥಳೀಯ ಜನ ಪ್ರತಿನಿಧಿಗಳು, ಇತರರು ಉಪಸ್ಥಿತರಿದ್ದರು.

  • ಮಾಹಿತಿ ಕೊಡದ ಅಧಿಕಾರಿಗಳ ವಿರುದ್ಧ ಕೆ ಆರ್ ಎಸ್ ಆಕ್ರೋಶ : ಜಿಲ್ಲಾಧ್ಯಕ್ಷ ಬಿ ಶಿವಶಂಕರ್ ನೇತೃತ್ವದಲ್ಲಿ ಸರ್ಕಾರಿ ಕಛೇರಿಗೆ ಭೇಟಿ

    ಈಗಾಗಲೇ ಹತ್ತಾರು ಬಾರಿ ಹತ್ತಾರು ಮನವಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು ಈವರೆಗೂ ಆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವ ರೀತಿಯ ಕ್ರಮ ಕೈಗೊಂಡಿದ್ದಾರೆ, ಅದರ ವಾಸ್ತವಿಕ ಪರಿಸ್ಥಿತಿ ಏನು ಎಂಬುದರ ಬಗ್ಗೆ ಮಾಹಿತಿಯನ್ನು ಅರ್ಜಿದಾರರಾದ ನಮಗೆ ನೀಡಿಲ್ಲ ಇಂದು ಅಧಿಕಾರಿಗಳಿಂದ ನಾವು ನೀಡಿದ್ದ ಮನವಿ ಸಂಬಂಧಿತ ಮಾಹಿತಿಯನ್ನು ಪಡೆಯಲು ಬಂದಿದ್ದೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ KRS ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ತಿಳಿಸಿದರು.

    ಬುಧವಾರ ತಾಲ್ಲೂಕು ದಂಡಾಧಿಕಾರಿಗಳ ಕಚೇರಿಗೆ ಭೇಟಿಕೋಟ್ಟು ಮಾತನಾಡಿದ ಅವರು ಹಲವಾರು ಬಾರಿ ತಾಲೂಕಿನ ಹಲವಾರು ಸಮಸ್ಯೆಗಳಿಗೆ ಕುರಿತಂತೆ ನಮ್ಮ ಪಕ್ಷದ ವತಿಯಿಂದ ಮನವಿ ಸಲ್ಲಿಸಿದ್ದೇವೆ ಆದರೆ ಈವರೆಗೂ ನಾವು ನೀಡಿರುವ ಮನವಿಗಳಿಗೆ ಅಧಿಕಾರಿಗಳು ಕೈಗೊಂಡಿರುವ ಕ್ರಮ, ಸಮಸ್ಯೆ ಪರಿಹಾರ ಕುರಿತಂತೆ ಯಾವುದೇ ರೀತಿಯ ಮಾಹಿತಿಯನ್ನು ಕೊಟ್ಟಿಲ್ಲ , ನಾವು ಸದಾಕಾಲ ಕೇವಲ ಮನವಿಯನ್ನು ಕೊಡುತ್ತಾ ಹೋದರೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದು ಯಾವಾಗ, ಸೂಕ್ತ ಕ್ರಮ ಕೈಗೊಂಡಿದ್ದಲ್ಲಿ ಮನವಿ ಸಲ್ಲಿಸಿದ್ದ ಅರ್ಜಿದಾರರಿಗೆ ತಿಳಿಸಬೇಕು ಅಲ್ಲವೇ ಎಂದರು.

    ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಅನ್ಯಾಯದ ವಿರುದ್ಧ ನಮ್ಮ ಕೆಆರ್‌ಎಸ್ ಪಕ್ಷವು ನಿತ್ಯ ನಿರಂತರ ಹೋರಾಟಗಳು ಕೈಗೊಳ್ಳುವ ಮೂಲಕ ತಾಲೂಕಿನ ಅಧಿಕಾರಿಗಳ ಗಮನಕ್ಕೆ ತರುವುದಲ್ಲದೆ ಅಂತಹ ಪ್ರಕರಣಗಳ ವಿರುದ್ಧ ಅಧಿಕೃತವಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿಗಳನ್ನು ಸಹ ನೀಡುತ್ತೇವೆ ಆದರೆ ಈವರೆಗೂ ಕ್ರಮ ಕೈಗೊಂಡಿರುವ ಬಗ್ಗೆ ನಮಗೆ ಯಾವುದೇ ರೀತಿಯ ಹಿಂಬರಹ ದೊರೆಯುತ್ತಿಲ್ಲ ಹಾಗಾಗಿ ಇಂದು ತಾಲೂಕು ಕಚೇರಿಗೆ ಭೇಟಿ ನೀಡಿದ್ದು ಅಧಿಕಾರಿಗಳು ಸೂಕ್ತ ಮಾಹಿತಿ ಕೊಡುವವರೆಗೂ ನಾವು ಕಚೇರಿಯಿಂದ ಹೋಗಲ್ಲ ಎಂದರು .

    ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ , ಜಿಲ್ಲಾ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಾರುತಿ,ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಬಿ ಎಲ್ ರಾಮ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ, ಅಲೀಮ್,ಶ್ರೀನಿವಾಸ್, ವೆಂಕಟೇಶ್, ಫಾರೂಕ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

  • ನಿಮ್ಮದು ಆಟೋ ಇದೆಯಾ ಹಾಗಾದರೆ ದಂಡ ಬೀಳುತ್ತೆ ಹುಷಾರ್ ಏಕೆ ಅಂತೀರಾ ಈ ಸುದ್ದಿ ನೋಡಿ….

    ಆಟೋ ಚಾಲಕರೇ ಎಚ್ಚರ ಆಟೋ ಹಿಂದೆ ಜಾಹಿರಾತು ಹಾಕುವ ಮುಂಚೆ ಯೋಚಿಸಿ ಯಾಕಂದ್ರೆ ಈಗಾಗಲೇ ಬೆಂಗಳೂರು ನಗರದಲ್ಲಿ ಗೊತ್ತಿಲ್ಲದೆ ಹಣದ ಆಸೆಗೋ ಅಥವಾ ಉಚಿತವಾಗಿ ಆಟೋ ಟಾಪ್ ಸಿಗುತ್ತೆ ಅನ್ನೋ ಕಾರಣಕ್ಕೋ ತಮ್ಮ ಆಟೋ ಹಿಂದೆ ಜಾಹಿರಾತು ಹಾಕಿದ್ದ ಹಲವಾರು ಆಟೋ ಚಾಲಕರು ಫೈನ್ ಕಟ್ಟಿದ್ದಾರೆ.

     

    ಹೌದು ನಿತ್ಯ ಜೀವನ ಸಾಗಿಸಲು ಹಲವಾರು ಸವಾಲುಗಳನ್ನು ಎದುರಿಸುತ್ತಾ ಊಟ ತಿಂಡಿ ಮಾಡಿದೆ ಸಾರ್ವಜನಿಕರ ಸೇವೆ ಮಾಡ್ತೀವಿ ಅಂತ ಪಣತೊಟ್ಟು ಆಟೋ ಓಡಿಸುತ್ತಿರೋ ಎಷ್ಟು ಆಟೋ ಚಾಲಕರು ಈ ತಪ್ಪು ಮಾಡುತ್ತಿದ್ದಾರೆ , ತಮಗೆ ಗೊತ್ತಿಲ್ದೆ ಯಾರೋ ಕೊಟ್ರು ಅಂತ ಅಥವಾ ಸ್ವಲ್ಪ ಕಾಸ್ ಸಿಗುತ್ತೆ ಅಂತ ತಮ್ಮ ಆಟೋಯಿಂದಗಡೆ ಸಿಕ್ಕಸಿಕ್ಕ ಜಾಹೀರಾತುಗಳನ್ನು ಹಾಕಿಕೊಳ್ಳುತ್ತಾರೆ

    ಈಗ ಅಂತ ಆಟೋಗಳಿಗೆ ದಂಡ ಫಿಕ್ಸ್, ಟ್ರಾಫಿಕ್ ಪೊಲೀಸ್ ಈ ರೀತಿಯ ಒಂದು ಹೊಸ ಕ್ರಮಕ್ಕೆ ಮುಂದಾಗಿದ್ದು ಜಾಹೀರಾತುಗಳನ್ನು ಹಾಕೊಂಡು ಓಡಾಡೋ ಆಟೋಗಳಿಗೆ ಸುಮಾರು 5000ಫೈನ್ ಹಾಕ್ತಿದ್ದಾರೆ. ಆಟೋ ಚಾಲಕರೇ ಮಾಲೀಕರೇ ಹುಷಾರ್ ಫ್ರೀ ಟಾಪು ಬೇಡ, ಯಾರೋ ಕೊಡೋ 100 200 ಕಾಸು ಬೇಡ ಅಲ್ವಾ… ಜಾಗೃತಾರಾಗಿ ದಂಡ ಕಟ್ಟದೆ ಸೇಫ್ ಆಗಿ…

  • ಇಂದು ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ

    ಶಿವಮೊಗ್ಗ (ವಿಜಯಮಿತ್ರ) : ಸೋಮವಾರ (ಜು. 14) ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ (Nithin Gadkari) ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆಗೊಳಿಸಲಿದ್ದಾರೆ.

     

     

     

    ಹತ್ತಾರು ಪ್ರವಾಸಿ ತಾಣಗಳನ್ನ ತನ್ನ ಮಡಿಲಿನಲ್ಲಿ ಇಟ್ಟುಕೊಂಡಿರುವ ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಹೆಮ್ಮೆ ಸೇರ್ಪಡೆಗೊಳ್ಳುತ್ತಿದೆ. ಅದೇ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣ ಆಗಿರುವ ಸಿಗಂದೂರಿನ ಹೊಸ ಸೇತುವೆ (Sigandur Bridge).

     

    ಶರಾವತಿ ಹಿನ್ನೀರು ಪ್ರದೇಶಗಳಾದ ಕರೂರು ಬಾರಂಗಿ ಹೋಬಳಿಯ ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗೆ ಹಾಗೂ ಪ್ರಸಿದ್ಧ ಸಿಗಂದೂರು, ಕೊಲ್ಲೂರು ದೇವಾಲಯಗಳ ಸಂಪರ್ಕಕ್ಕಾಗಿ ಲಾಂಚ್ ಒಂದೇ ಆಧಾರವಾಗಿತ್ತು. ಹೀಗಾಗಿ ಕಳೆದ ಆರು ದಶಕಗಳಿಂದ ಈ ಭಾಗದ ಜನರು ಸಿಗಂದೂರು ಸೇತುವೆ ಮಾಡುವಂತೆ ಅಗ್ರಹಿಸಿದ್ದರು .

     

     

    ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 450 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು 2019ರಲ್ಲಿ ಉದ್ಘಾಟನೆಯನ್ನು ಮಾಡಿದ್ದರು. 2020ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿದ್ದ ಕಾಮಗಾರಿಯು ಅಂತ್ಯಗೊಂಡಿದ್ದು , ಇಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

     

    ಈ ಸೇತುವೆಯು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರು ಮತ್ತು ಸಿಗಂದೂರು ದೇವಸ್ಥಾನಗಳನ್ನು ಸಂಪರ್ಕಿಸಲಿದೆ.

     

    ಈ ಸೇತುವೆ ಸ್ಪೆಷಾಲಿಟಿ ಏನು…??

     

    2.24 ಕಿ.ಮೀ ಉದ್ದದ ದೇಶದಲ್ಲೇ ಎರಡನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ ಇದಾಗಿದ್ದು . ಈ ಸೇತುವೆಯ ಸುಮಾರು 2.24ಕಿ.ಮೀ. ಉದ್ದ ಹಾಗೂ 16 ಮೀಟರ್ ಅಗಲವನ್ನು ಹೊಂದಿದೆ. 740 ಮೀ. ಕೇಬಲ್‌ನ ಆಧಾರದ ಮೇಲೆ ನಿಂತಿರುವ ಸೇತುವೆ ಇದಾಗಿದ್ದು, ರಸ್ತೆಯ ಎರಡು ಬದಿ ಸಾರ್ವಜನಿಕರ ಓಡಾಡಟಕ್ಕೆ ಫುಟ್ ಪಾಥ್ ಕೂಡ ಲಭ್ಯವಿದೆ.

     

    ಮೊದ್ಲು ಹೇಗಿತ್ತು..??

    ಇಲ್ಲಿ ಹತ್ತಾರು ವರ್ಷಗಳಿಂದಲೂ ಶರಾವತಿ ಹಿನ್ನೀರು ಪ್ರದೇಶಗಳಾದ ಕರೂರು ಬಾರಂಗಿ ಹೋಬಳಿಯ ಗ್ರಾಮಗಳಿಗೆ  ಹಾಗೂ ಪ್ರಸಿದ್ಧ ಸಿಗಂದೂರು, ಕೊಲ್ಲೂರು ದೇವಾಲಯಗಳ ಸಂಪರ್ಕಕ್ಕಾಗಿ ಲಾಂಚ್ ಒಂದೇ ಮಾರ್ಗವಾಗಿತ್ತು, ಈ ಲಾಂಚ್ ಬೆಳಗ್ಗೆ 7ರಿಂದ ಸಂಜೆ 6ವರೆಗೆ ಮಾತ್ರ ಲಭ್ಯವಿರುತ್ತಿತ್ತು, ಈ ಮಾರ್ಗ ಬಿಟ್ಟರೆ ಸರಿಸುಮಾರು 85km ಗಳನ್ನು ಕ್ರಮಿಸುವ ಮೂಲಕ ಸಾಗರ ತಾಲೂಕು ಸೇರಬಹುದಿತ್ತು , ಅಗತ್ಯ ಸಮಯಗಳಲ್ಲಿ ತುರ್ತು ಸಂದರ್ಭಗಳಲ್ಲಿ  ಈ ಮಾರ್ಗ ಬಳಸುವುದು ಕಷ್ಟಸದೇವೆ ಸರಿ ಎಂಬುದು  ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯ, ಆದರೆ ಈಗ ಕೇವಲ 36 ನಿಮಿಷಗಳಲ್ಲಿ  ತಾಲೂಕು ಸೇರಬಹುದು  ಅಲ್ಲದೆ  ತುರ್ತು ಅಗತ್ಯ ಸಂದರ್ಭಗಳಲ್ಲಿ  ಈ ಸೇತುವೆ  ಅತ್ಯಂತ ಸಹಾಯಕಾರಿಯಾಗಲಿದೆ .

     

     

     

     

     

  • ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಲೂರು ವೆಂಕಟರಾಯರ ಜನ್ಮದಿನಾಚರಣೆ

    ಕರ್ನಾಟಕ ಏಕೀಕರಣ ಚಳುವಳಿ ಮೂಲಕ‌ ಕನ್ನಡ ನಾಡನ್ನು ಒಗ್ಗೂಡಿಸಿದವರು ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು ಎಂದು ಹಿರಿಯ ಸಾಹಿತಿ ಶರಣಯ್ಯ ಹಿರೇಮಠ ತಿಳಿಸಿದರು.

     

    ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಆಲೂರು ವೆಂಕಟರಾಯರು ಜನ್ಮದಿನಾಚರಣೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ಇತಿಹಾಸ ಮತ್ತು ಕನ್ನಡ ಸಾಹಿತ್ಯದ  ಬಗ್ಗೆ ಅಪಾರ ಆಸಕ್ತಿ,  ಅಧ್ಯಯನಶೀಲರಾಗಿದ್ದ  ಆಲೂರು ವೆಂಕಟರಾಯರು  ಕನ್ನಡ ಸಾಹಿತಿಗಳಿಗೆ ಮತ್ತು  ಅವರ ಪುಸ್ತಕ ಪ್ರಕಟಣೆಗೆ ಪ್ರೋತ್ಸಾಹ ನೀಡಿದರು ಎಂದರು.

     

    ಜಯಕರ್ನಾಟಕ ಪತ್ರಿಕೆಯ ಮೂಲಕ ದ.ರಾ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಶಂ.ಭಾ ಜೋಷಿ  ಮುಂತಾದ ಹಲವು ಸಾಹಿತಿಗಳಲ್ಲದೆ ಕನ್ನಡ ನಾಡಿನ ಎಲ್ಲಾ ಪ್ರದೇಶದ ಸಾಹಿತಿಗಳ ಸಾಹಿತ್ಯ ರಚನೆಗೆ ಸಹಕಾರ ನೀಡಿದರು.   ಆಲೂರು ವೆಂಕಟರಾಯರ  ಬಹುಮುಖ ಪ್ರತಿಭೆ,   ಕನ್ನಡ ಮತ್ತು ಕನ್ನಡಿಗರ ಬಗ್ಗೆ ಅವರಿಗಿದ್ದ ಕಾಳಜಿ, ಕಾರ್ಯಪ್ರವೃತ್ತಿ   ಅನನ್ಯವಾದದ್ದು.  ಇದರಿಂದಾಗಿ ಆಲೂರು ವೆಂಕಟರಾಯರನ್ನು  ಕರ್ನಾಟಕದ ಪ್ರಾಣೋಪಾಸಕರು   ಎಂದು  ವರಕವಿ ದ.ರಾ.ಬೇಂದ್ರೆ ಕರೆದಿದ್ದಾರೆ ಎಂದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ  ಪ್ರೊ.ಬಿ.ಎನ್.ಕೃಷ್ಣಪ್ಪ ಮಾತನಾಡಿ, ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿ  ಆಲೂರು ವೆಂಕಟರಾಯರು ಮಹತ್ವದ ಪಾತ್ರ ವಹಿಸಿದ್ದಾರೆ.  ಕನ್ನಡ  ಗ್ರಂಥಕರ್ತರ  ಸಮ್ಮೇಳನ ನಡೆಸುವ ಮೂಲಕ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳನ್ನು ವಿಸ್ತಾರಗೊಳಿಸಿದರು. ಕರ್ನಾಟಕ ಗತವೈಭವ ಸೇರಿದಂತೆ ಹಲವಾರು ಮಹತ್ವದ ಕೃತಿಗಳನ್ನು  ಆಲೂರು ವೆಂಕಟರಾಯರು ರಚಿಸಿದ್ದಾರೆ. ಕರ್ನಾಟಕದ ಏಕೀಕರಣ ಮತ್ತು  ಭಾರತದ ಸ್ವಾತಂತ್ರ್ಯ ಹೋರಾಟ ಎರಡು ಚಳವಳಿಗಳಲ್ಲಿ  ಸಕ್ರಿಯವಾಗಿ ಭಾಗವಹಿಸಿದ್ದರು ಎಂದರು.

     

     

    ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿಗಳಾದ ಪ್ರೊ.ಕೆ.ಆರ್.ರವಿಕಿರಣ್, ಎ.ಎಸ್. ಅಶ್ವತ್ಥಗೌಡ, ಕೋಶಾಧ್ಯಕ್ಷ ಡಾ.ಮುನಿರಾಜು, ಸಂಘಟನಾ ಕಾರ್ಯದರ್ಶಿ ರಾಜಘಟ್ಟ ರವಿ,   ಪ್ರತಿನಿಧಿ ರಮೇಶ್ ಕುಮಾರ್,   ನೆಲಮಂಗಲ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಪ್ರಕಾಶಮೂರ್ತಿ, ಗೌರವ ಕಾರ್ಯದರ್ಶಿ ಭಾನುಪ್ರಕಾಶ್,  ದೊಡ್ಡಬಳ್ಳಾಪುರ ತಾಲ್ಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಜಿ.ಸುರೇಶ್,  ಹೊಸಕೋಟೆ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ತಾವರೆಕೆರೆ ನಾಗರಾಜು, ಪ್ರತಿನಿಧಿಗಳಾದ  ಮುನಿವೀರಪ್ಪ, ಮಾರ್ಕೊಂಡಪ್ಪ ಮುಂತಾದವರು ಭಾಗವಹಿಸಿದ್ದರು.

  • ತೂಬಗೆರೆಯಲ್ಲಿ ಬಾಬಯ್ಯನ ಹಬ್ಬದ ಸಂಭ್ರಮ

    ದೊಡ್ಡಬಳ್ಳಾಪುರ: ಸೌಹಾರ್ದಕ್ಕೆ ಹೆಸರಾದ ಬಾಬಯ್ಯನ ಹಬ್ಬವನ್ನು ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಗುರುವಾರ ಭಕ್ತಿಭಾವದಿಂದ ಆಚರಿಸಲಾಯಿತು. ಮುಸ್ಲಿಮರ ಈ ಪವಿತ್ರ ಹಬ್ಬದಲ್ಲಿ ಹಿಂದೂ ಸಹೋದರರು ಭಾಗವಹಿಸಿ ಧಾರ್ಮಿಕ ಸೌಹಾರ್ದತೆಗೆ ಉತ್ತೇಜನ ನೀಡಿದರು.

     

    ಹಿಂದು-ಮುಸ್ಲಿಂ ಬಾಂಧವ್ಯದ ಸಂಕೇತವಾಗಿ, ಹಿಂದೂಗಳು ಮುಸ್ಲಿಮರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಿದ ಬಳಿಕ, ಒಂದು ವಾರದ ಹಿಂದೆ ನಿರ್ಮಿತವಾದ ಗುಂಡಿಯಲ್ಲಿ ಕೊಂಡ ಹಾಕಲಾಯಿತು. ಶುಕ್ರವಾರ ಬೆಳಿಗ್ಗೆ, ಹಲವು ವರ್ಷಗಳಿಂದ ಈ ಹಬ್ಬ ಆಚರಿಸುತ್ತಿರುವ ಬಾಬಯ್ಯ ವಂಶಸ್ಥ ಭಾಷಾ ನೇತೃತ್ವದಲ್ಲಿ  ಹಸೇನ್-ಹುಸೇನ್ ದೇವರ ಹಸ್ತಗಳನ್ನು ಹೊತ್ತು, ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಗ್ರಾಮದ ಮಧ್ಯದಲ್ಲಿರುವ ಚಾವಡಿ ಬಳಿ ಕರೆತರಲಾಯಿತು. ಅನೇಕರು ಹರಕೆ ಹೊತ್ತು ಕೊಂಡು ಹಾಯಿವುದರಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಜಾತಿ-ಭೇದವಿಲ್ಲದೆ ಎಲ್ಲರೂ ಒಂದಾಗಿ ಹಬ್ಬವನ್ನು ಯಶಸ್ವಿಯಾಗಿ ಆಚರಿಸಿದರು.

    ಈ ಸಂದರ್ಭದಲ್ಲಿ, ಗ್ರಾಮದ ಹಿರಿಯರಾದ ಕೃಷ್ಣಪ್ಪ ಮಾತನಾಡುತ್ತಾ, “ನಮ್ಮ ತಾತಮುತ್ತಾತನ ಕಾಲದಿಂದಲೇ ಈ ಹಬ್ಬವನ್ನು ಹಿಂದುಗಳು-ಮುಸ್ಲಿಂ ಸಹೋದರತ್ವದ ಸಂಕೇತವಾಗಿ ಆಚರಿಸುತ್ತಿದ್ದಾರೆ. ಯಾವುದೇ ರೋಗ-ರುಜಿನಗಳು ಗ್ರಾಮದಲ್ಲಿ ಹರಡದಿರಲಿ, ಗ್ರಾಮಕ್ಕೆ ಒಳ್ಳೆಯದುಂಟಾಗಲಿ ಎಂಬ ಉದ್ದೇಶದಿಂದ ಈ ಹಬ್ಬವನ್ನು ಪ್ರತಿವರ್ಷ ಆಚರಿಸುತ್ತೇವೆ,” ಎಂದು ತಿಳಿಸಿದರು.

     

    ಯುವ ಮುಖಂಡ ಉದಯ ಆರಾಧ್ಯ ಮಾತನಾಡಿ, “ನಮ್ಮ ಹಿರಿಯರು ಬಾಬಯ್ಯನ ಹಬ್ಬವನ್ನು ಸೌಹಾರ್ದದ ಸಂಕೇತವಾಗಿ ಆಚರಿಸುತ್ತಾ ಬಂದಿದ್ದಾರೆ. ಗ್ರಾಮದಲ್ಲಿ ಮತಭೇದವಿಲ್ಲದೆ ಎಲ್ಲ ಧರ್ಮ ಹಾಗೂ ಜಾತಿಯವರು ಶಾಂತಿ ಮತ್ತು ಸೌಹಾರ್ದದಿಂದ ಭಾಗವಹಿಸಿದ್ದು, ಇದು ನಮ್ಮ ಬಹುಸಂಸ್ಕೃತಿಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ,” ಎಂದು ಅಭಿಪ್ರಾಯಪಟ್ಟರು.

     

    ಈ ಹಬ್ಬದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ, ಮಾಜಿ ಸದಸ್ಯ ದೇವೇಂದ್ರಪ್ಪ, ಮುಖಂಡರಾದ ಹುಸೇನ್, ರವಿ, ಅಸ್ಲಾಂ, ಯುವ ಮುಖಂಡರಾದ ಉದಯ ಆರಾಧ್ಯ, ಮಧು ಮತ್ತು ಇತರರು ಹಾಜರಿದ್ದರು.

  • ಅಂಗವಿಕಲರ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    2025-26ನೇ ಸಾಲಿನ ಕೇಂದ್ರ ಸರ್ಕಾರದ ನ್ಯಾಷನಲ್ ಇ-ಸ್ಕಾಲರ್ ಶಿಪ್ ಯೋಜನೆಯಡಿ ವಿಕಲಚೇತನ ವಿದ್ಯಾರ್ಥಿಗಳಿಗೆ ಅನ್ ಲೈನ್ ಮುಖಾಂತರ National Scholarship Portal ನಲ್ಲಿ ಅಗತ್ಯ ದಾಖಲೆಗಳೊಂದಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳು ನಿಗಧಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು.

     

    ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಫ್ರಿ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಆಗಸ್ಟ್ 31, ಪೋಸ್ಟ್ ಮೆಟ್ರಿಕ್ ಹಾಗೂ ಟಾಪ್ ಕ್ಲಾಸ್ ವಿದ್ಯಾರ್ಥಿಗಳಿಗೆ ಅಕ್ಟೋಬರ್ 10 ಕೊನೆಯ ದಿನವಾಗಿರುತ್ತದೆ.

     

    ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: 080-29787441 ಗೆ ಸಂಪರ್ಕಿಸಹುದು ಅಥವಾ ನೇರವಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ನಂ.3 ನೆಲಮಹಡಿ, ಜಿಲ್ಲಾಡಳಿತ, ಬೀರಸಂದ್ರ ಗ್ರಾಮ ಕುಂದಾಣ ಹೋಬಳಿ ಹಾಗೂ ಹತ್ತಿರದ ಗ್ರಾಮ ಪಂಚಾಯಿತಿ/ ಪುರಸಭೆ/ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ/ ನಗರ/ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸತೀಶ ಪಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.