Blog

  • ದಶಕಗಳಿಂದ ಸರ್ವಿಸ್ ಪಡೆದು ಏಕಾಏಕಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡಿ ಎಂದ ಅರಣ್ಯ ಇಲಾಖೆ : ಮೌನ ಪ್ರತಿಭಟನೆಗೆ ಮುಂದಾದ ದಿನಗೂಲಿ ನೌಕರರು : ಪ್ರತಿಭಟನೆಗೆ ಕರವೇ ಸಾಥ್

    ದೊಡ್ಡಬಳ್ಳಾಪುರ : ಅರಣ್ಯ ಸಂಪನ್ಮೂಲ ರಕ್ಷಿಸಲು ದಶಕಗಳಿಂದ ಸೇವೆ ಪಡೆದ ಅರಣ್ಯ ಇಲಾಖೆ ಏಕ-ಏಕಿ ತನ್ನ 14 ದಿನಕೂಲಿ ಸಿಬ್ಬಂದಿಗಳನ್ನು ಹೊರಗುತ್ತಿಗೆ ಪಾಲುಮಾಡಿರುವ ಘಟನೆ ದೊಡ್ಡಬಳ್ಳಾಪುರ ಅರಣ್ಯ ಇಲಾಖೆಯಲ್ಲಿ ನೆಡೆದಿದೆ.

    ಹೊರಗುತ್ತಿಗೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸಲು ಇಷ್ಟವಿಲ್ಲದ ಸಿಬ್ಬಂದಿ ವರ್ಗ ತಾಲ್ಲೂಕಿನ ಅರಣ್ಯ ಇಲಾಖೆಯ ಕೇಂದ್ರ ಕಚೇರಿ ಮುಂಭಾಗ ಮೌನ ಪ್ರತಿಭಟನೆಗೆ ಮುಂದಾಗಿದೆ.

    ಅರಣ್ಯ ಇಲಾಖೆ ನೌಕರರ ಸಮಸ್ಯೆ ಅರಿತ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡರ ವೇದಿಕೆ )ಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು .

    ಅರಣ್ಯ ಇಲಾಖೆ ನೌಕರ ಸದಾನಂದಮೂರ್ತಿ ಮಾತನಾಡಿ ನಮ್ಮನ್ನು ಇಲಾಖೆಯವರು ನೌಕರರರಂತೆ ಕಾಣುತ್ತಿಲ್ಲ ನಮ್ಮನ್ನು ಪಶು ಎಂದು ಭಾವಿಸಿದಂತೆ ಕಾಣುತ್ತದೆ, ಹಾಗಾಗಿಯೇ ನಮ್ಮಗೆ ತಿಳಿಸದೇ ಒಮ್ಮೆಲೇ ಹೊರಗುತ್ತಿಗೆ ಅಡಿಯಲ್ಲಿ ಕರ್ತವ್ಯ ಮಾಡಲು ಹೇಳುತ್ತಿದ್ದಾರೆ.1998ರಲ್ಲಿ ನೌಕರರನ್ನು ಖಾಯಂಗೊಳಿಸಿದ ಸಂದರ್ಭದಲ್ಲಿ ನಮ್ಮ ಬಳಿ ಅಗತ್ಯ ದಾಖಲಾತಿ ಇರಲಿಲ್ಲ ಆದರೆ 2013ರಲ್ಲಿ ಖಾಯಂಗೊಳಿಸುವ ಸಂದರ್ಭದಲ್ಲಿ ನಮ್ಮ ಬಳಿ ಅನುಭವ ಹಾಗೂ ಸೂಕ್ತ ದಾಖಲಾತಿ ಇದ್ದರು ನಮ್ಮನ್ನು ಖಾಯಂಗೊಳಿಸಲಿಲ್ಲ, ಈಗ ಏಕಾ -ಏಕಿ ನಮ್ಮನ್ನು ಕೆಲಸದಿಂದ ತೆಗಿದಿದ್ದಾರೆ ಇದು ಯಾವ ನ್ಯಾಯ ಸದಾ ಮುಂಚೂಣಿಯಲ್ಲಿದ್ದು ಅರಣ್ಯ ಇಲಾಖೆಗಾಗಿ ನಮ್ಮ ಜೀವನ ಸವೆಸಿದ್ದೇವೆ ಆದರೆ ಈಗ ನಮ್ಮ ಬದುಕು ಬೀದಿಗೆ ಬಂದಿದೆ ಯಾವ ಅಧಿಕಾರಿ ಬಳಿ ಕೇಳಿದರು ಯಾರು ಸ್ಪಂದಿಸುತ್ತಿಲ್ಲ ಸುಮಾರು 30 ವರ್ಷಗಳ ಸುದೀರ್ಘ ನಿಸ್ವಾರ್ಥ ಸೇವೆಗೆ ಬೆಲೆ ಇಲ್ಲವೇ.. ಎಂದರು.

    ನಮಗೆ ಈ ಕೆಲಸಬಿಟ್ಟು ಬೇರೆ ಗೊತ್ತಿಲ್ಲ ಈ ಆದೇಶವನ್ನು ನಾವು ಒಪ್ಪೋಲ್ಲ ನಮಗೆ ಖಾಯಂ ಗೊಳಿಸದಿದ್ದರೂ ನಮೂನೆ ಎಫ್. ಎ ಸಿ -63 ಪ್ರಕಾರ ಸಂಬಳ ನೀಡಿಲಿ ಇಲ್ಲವೇ ನಮ್ಮ ಈ ಹೋರಾಟ ನಿರಂತರವಾಗಿ ನೆಡೆಯಲಿದೆ ಎಂದರು.

     

     

    ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣಗೌಡರ ವೇದಿಕೆ )ಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಆದೇಶದ ಮೇರೆಗೆ ನಮ್ಮ ಸಂಘಟನೆ ಸದಾ ನಾಡು ನುಡಿ ಭಾಷೆ ವಿಚಾರವಾಗಿ ಧ್ವನಿಯಾಗಿದೆ ಅಲ್ಲದೆ ನಾಡಿನ ರೈತರಿಗೆ,ಕಾರ್ಮಿಕರಿಗೆ, ದಲಿತ ಮೇಲೆ ದೌರ್ಜನ್ಯಗಳಾದ ಸಂದರ್ಭಗಳಲ್ಲಿ ಅವರ ಪರ ನಿಂತು ನ್ಯಾಯಕ್ಕಾಗಿ ಹೋರಾಟ ನೆಡೆಸುತ್ತಿದ್ದೇವೆ ಅಂತೆಯೇ ಇಂದು ದೊಡ್ಡಬಳ್ಳಾಪುರ ಅರಣ್ಯ ಇಲಾಖೆಯಲ್ಲಿ ಸತತ 25-30 ವರ್ಷಗಳಿಂದ ಸೇವೆ ಸಲ್ಲಿಸಿ ಇನೇನು ನಿವೃತ್ತಿ ಪಡೆಯುವ ಹಂತ ತಲುಪಿರುವ ಹಾಗೂ ಈ ಕೆಲಸದ ಮೂಲಕ ಜೀವನ ಕಟ್ಟಿಕೊಳ್ಳಲು ಮುಂದಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಸುಮಾರು 14 ನೌಕರರನ್ನು ಸರ್ಕಾರಿ ಖಾಯಂಗೊಳಿಸದೇ ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿರುವುದು ವಿಪರ್ಯಾಸ.

     

    ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸಿ ಎನ್ನುವ ಅಧಿಕಾರಿಗಳು ಒಮ್ಮೆ ಯೋಚಿಸಲಿ 30 ವರ್ಷ ಸೇವೆ ಪಡೆದುಕೊಂಡಿರುವ ಅರಣ್ಯ ಇಲಾಖೆಯೇ ನೌಕರರನ್ನು ಕೈಬಿಟ್ಟ ಮೇಲೆ ಹೊರಗುತ್ತಿಗೆ ನೌಕರರ ಕ್ಷೇಮ ಕಾಪಾಡುವುದೇ , ಅರಣ್ಯ ಇಲಾಖೆಯ ನೌಕರರ ಜೊತೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣ ಸದಾ ಬೆಂಬಲವಾಗಿ ನಿಲ್ಲುತ್ತದೆ ಈ ಹಿಂದೆ ನೌಕರರಿಗೆ ನೀಡುತ್ತಿದ್ದ ಸಂಬಳದಂತೆ ಮುಂದೆಯೂ ನೀಡಬೇಕು ಅಲ್ಲದೆ ನೌಕರರನ್ನು ಖಾಯಂಗೊಳಿಸಬೇಕೆಂದು ಮಾನ್ಯ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆಯವರನ್ನು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ನಾವು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.

     

     

    ಪರಿಸರ ಚಿಂತಕ ಚಿದಾನಂದ ಮೂರ್ತಿ ಮಾತನಾಡಿ ತಾಲೂಕಿಗೆ ಬರುವ ಎಲ್ಲಾ ಅಧಿಕಾರಿಗಳು ಅರಣ್ಯ ಸಂಬಂಧಿತ ಮಾಹಿತಿ ಹಾಗೂ ವ್ಯಾಪ್ತಿಯ ಬಗ್ಗೆ ತಿಳಿಯುವಷ್ಟರಲ್ಲಿ ಬೇರೆಡೆಗೆ ವರ್ಗಾವಣೆಯಾಗುತ್ತಾರೆ ಆದರೆ ಸ್ಥಳೀಯವಾಗಿ ಅರಣ್ಯದ ಎಲ್ಲಾ ಮಾಹಿತಿ ಲಭ್ಯವಿರುವುದು ಈ ನೌಕರರ ಬಳಿ ಮಳೆ ಬಿಸಿಲು ಎನ್ನದೆ ಸದಾಕಾಲ ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುವ ಇವರನ್ನು ಯಾವುದೋ ಕಾಯ್ದೆ ಹೇಳಿ ಏಕಏಕಿ ಕೆಲಸದಿಂದ ತೆಗೆಯುವುದು ಸರಿಯಲ್ಲ , ಅರಣ್ಯ ಕಾಯುವ ಸೈನಿಕರೇ ಪ್ರತಿಭಟನೆಗೆ ಮುಂದಾದರೆ ಅರಣ್ಯ ಕಾಯುವವರಾದರು ಯಾರು.? ಈ ಕೂಡಲೇ ಅಧಿಕಾರಿಗಳು ಈ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ , ಜೊತೆಗೆ ನೌಕರರನ್ನು ಈ ಹಿಂದೆ ಇದ್ದಂತೆ ಯಥಾವತ್ ಮುಂದುವರಿಸಬೇಕಾಗಿ ಈ ಮೂಲಕ ಒತ್ತಾಯಿಸುತ್ತೇನೆ ಎಂದರು.

     

    ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣಗೌಡರ ವೇದಿಕೆ )ಯ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಮಂಜುನಾಥ್ ನಾಯ್ಕ ಮಾತನಾಡಿ ಈಗಾಗಲೇ ಕಾಯಂ ಮಾಡುವ ಸಂದರ್ಭದಲ್ಲಿ ಎರಡು ಬಾರಿ ನೌಕರರನ್ನು ಯಾಮರಿಸಿ ಆಗಿದೆ ಇನ್ನಾದರೂ ಅಧಿಕಾರಿಗಳು ನೌಕರರ ಗೋಳು ಕೇಳಲಿ ಯಾವುದೇ ಮಾಹಿತಿ ನೀಡದೆ ಚೂರು ಮಾನವೀಯತೆ ಇಲ್ಲದೆ ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸಿ ಎಂದರೆ ಹೇಗೆ ಬೆಳಗಿನಿಂದಲೂ ಪ್ರತಿಭಟನೆ ಕುಳಿತಿರುವ ಅರಣ್ಯ ಇಲಾಖೆಯ ದಿನಗೂಲಿ ನೌಕರರನ್ನು ಕಚೇರಿಯ ಯಾರೊಬ್ಬರೂ ಸೌಜನ್ಯಕ್ಕಾದರೂ ಮಾತಾಡಿಸಿಲ್ಲ ಇದೆಂಥ ವ್ಯವಸ್ಥೆ ಇದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಗಟ್ಟಿ ಧ್ವನಿಯಾಗಿ ನಿಲ್ಲಲಿದೆ, ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ಕೊಡುವುದು ಬಿಟ್ಟು ಶೀಘ್ರಗತಿಯಲ್ಲಿ ಕ್ರಮ ಕೈಗೊಳ್ಳಲಿ ಅರಣ್ಯ ಇಲಾಖೆ ನೌಕರರ ಜೀವ ಜೀವನ ಉಳಿಸಲಿ ಎಂದರು.

     

  • ಒಳಮೀಸಲಾತಿ ಹೋರಾಟ : ಆಗಸ್ಟ್ 1ರಂದು ಅರೆಬೆತ್ತಲೆ ಮೂಲಕ ಸಾಂಕೇತಿಕ ಪ್ರತಿಭಟನೆ : ಒಳ ಮೀಸಲಾತಿ ಜಾರಿಗೊಳಿಸಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದ ದಲಿತ ಮುಖಂಡರು

    ದೊಡ್ಡಬಳ್ಳಾಪುರ: ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಘೋಷಣೆ ಮಾಡದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಆಗಸ್ಟ್ 1ರಂದು ದಲಿತ ಸಮುದಾಯದ ಮುಖಂಡರಿಂದ ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಬಚ್ಚಹಳ್ಳಿ ನಾಗರಾಜು ತಿಳಿಸಿದರು.

    ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿವಿವಿಧ ದಲಿತ ಸಂಘಟನೆಗಳ ಮುಖಂಡರಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದ್ದರು ಈವರೆಗೂ ನಮ್ಮ ರಾಜ್ಯದಲ್ಲಿ ಯಾವುದೇ ಒಣ ಮೀಸಲಾತಿ ಘೋಷಣೆಯಾಗಿಲ್ಲ , ಚುನಾವಣೆಗೂ ಮುನ್ನ ಒಳ ಮೀಸಲಾತಿ ನೀಡುವ ಭರವಸೆ ನೀಡಿದ್ದ ಸಿದ್ದರಾಮಯ್ಯನವರು ಈಗ ಮರೆತಿದ್ದಾರೆ ಎನಿಸುತ್ತದೆ, ಈಗಾಗಲೇ ಸಮೀಕ್ಷೆಗೂ ಮುಂದಾಗಿರುವ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ಮೀನಾ-ಮೇಷ ಎಣಿಸುತ್ತಿರುವುದು ಸರಿಯಲ್ಲ ನಮ್ಮ ತಾಳ್ಮೆಗೂ ಮಿತಿ ಇದೆ . ಆಗಸ್ಟ್ 1ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಎಲ್ಲ ದಲಿತಪರ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಮಾದಿಗ ಸಮುದಾಯದ ಎಲ್ಲಾ ಬಂಧುಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಿದ್ದೇವೆ. ಸರ್ಕಾರ ಕೂಡಲೇ ಎಚ್ಚೆದ್ದು ಆಗಸ್ಟ್ 12ರಂದು ನಡೆಯುವ ಸಚಿವ ಸಂಪುಟದ ಒಳಗಾಗಿ ವಿಶೇಷ ಸಂಪುಟ ಸಭೆಯನ್ನು ಕರೆಯುವ ಮೂಲಕ ನಮ್ಮ ಒಳ ಮೀಸಲಾತಿರ ಘೋಷಣೆ ಮಾಡಲಿ ಇಲ್ಲವಾದಲ್ಲಿ ಆಗಸ್ಟ್ 16ರ ನಂತರ ರಾಜ್ಯಾದ್ಯಂತ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ನಮ್ಮ ಸಮುದಾಯದ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.

    ದೊಡ್ಡ ತುಮಕೂರು ವೆಂಕಟೇಶ್ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳ ಭರವಸೆ ಮಾತಿಗೆ ಕಾದು ಕಾದು ಸಾಕಾಗಿದೆ, ನಮ್ಮ ತಾಳ್ಮೆಗೂ ಮಿತಿ ಇದೆ ನಾವು ಕೇಳುತ್ತಿರುವುದು ನಮ್ಮ ಹಕ್ಕು, ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ನಮ್ಮಗೆ ಒಳ ಮೀಸಲಾತಿ, ಈ ಕೂಡಲೇ ಕಲ್ಪಿಸಬೇಕು , ನುಡಿದಂತೆ ನಡೆದಿದ್ದೇವೆ ಎನ್ನುವ ಕಾಂಗ್ರೆಸ್ ಸರ್ಕಾರಕ್ಕೆ ಒಳ ಮೀಸಲಾತಿ ವಿಚಾರದಲ್ಲಿ ದಲಿತ ಸಮುದಾಯಗಳಿಗೆ ಕೊಟ್ಟಿರುವ ಮಾತು ಮರೆತಿದೆ ಇನ್ನಾದರೂ ಮಾನ್ಯ ಮುಖ್ಯಮಂತ್ರಿ ಎಚ್ಚೆತ್ತು ದಲಿತ ಸಮುದಾಯಗಳಿಗೆ ಸೇರಬೇಕಿರುವ ಸೂಕ್ತ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದರು.

    ದಲಿತ ಮುಖಂಡ ಅಪ್ಪಕಾರಹಳ್ಳಿ ಹನುಮಣ್ಣ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳೇ ಮೀಸಲಾತಿ ನಮ್ಮ ಹಕ್ಕು, ಮೀಸಲಾತಿಯನ್ನ ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ,ಮೀಸಲಾತಿ ನೀವು ನಮಗೆ ಕೊಡುವ ಭಿಕ್ಷೆಯಲ್ಲ ಅದು ಸಂವಿಧಾನ ನಮಗೆ ನೀಡಿರುವ ಗೌರವ, ಈ ಕೂಡಲೇ ನಮ್ಮ ಮೀಸಲಾತಿಯನ್ನು ನಮಗೆ ನೀಡದ ಪಕ್ಷದಲ್ಲಿ ಇಂದಿನಿಂದಲೇ ನಾವು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪ್ರತಿ ಹಳ್ಳಿಗಳಿಗೆ ಭೇಟಿ ಕೊಟ್ಟು ಅರಿವು ಮೂಡಿಸುವ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಉಗ್ರ ಹೋರಾಟ ಮಾಡುತ್ತೇವೆ ಎಂದರು.

     

    ಟಿ. ಡಿ ಮುನಿಯಪ್ಪ ಮಾತನಾಡಿ ದೇಶದಲ್ಲಿ ಶೋಷಿತ ಸಮುದಾಯಗಳ ಬಗ್ಗೆ ಅರಿತ ಸುಪ್ರೀಂ ಕೋರ್ಟ್ ಜನಸಂಖ್ಯೆ ಆಧಾರದ ಮೇಲೆ ತಮ್ಮ ತಮ್ಮ ರಾಜ್ಯಗಳಲ್ಲಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೂಕ್ತ ಒಳ ಮೀಸಲಾತಿ ಕಲ್ಪಿಸಿ ಎಂದು 2024ರ ಆಗಸ್ಟ್ 1ರಂದು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದ್ದು, ಆದೇಶ ನೀಡಿ ಈಗಾಗಲೇ ಒಂದು ವರ್ಷ ಪೂರ್ಣಗೊಳ್ಳುವ ಹಂತ ತಲುಪಿದೆ ಅಕ್ಕ ಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಒಳಬಹಿಸಲಾತಿ ಜಾರಿಯಾಗಿದ್ದು ನಮ್ಮ ಕರ್ನಾಟಕದಲ್ಲಿ ಜಾರಿಯಾಗದೇ ಇರುವುದು ದುರದೃಷ್ಟವೇ ಸರಿ , ಚುನಾವಣೆಗೂ ಮುನ್ನ ನಾವು ದಲಿತರ ಪರ ಒಳ ಮೀಸಲಾತಿ ಜಾರಿಗೊಳಿಸಿ ತೀರುತ್ತೇವೆ ಎಂದಿದ್ದ ಮಾನ್ಯ ಮುಖ್ಯಮಂತ್ರಿಗಳು ಸುಮ್ಮನಿದ್ದಾರೆ, ಈ ಧೋರಣೆ ನಾವು ಸಹಿಸುವುದಿಲ್ಲ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾದಿಗ ಸಮುದಾಯ ಮಾಡಲಿದೆ , ಈ ನಿಟ್ಟಿನಲ್ಲಿ ಸಾಂಕೇತಿಕವಾಗಿ ಆಗಸ್ಟ್ 1ರಂದು ಅರಬೆತ್ತಲೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ ನಮ್ಮ ಒಳ ಮೀಸಲಾತಿ ನಮಗೆ ನೀಡಲಿ ಎಂದರು .

    ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ತಳಗವಾರ ನಾಗರಾಜ್, ಕುಂಬಾರಪೇಟೆ ನಾರಾಯಣಪ್ಪ, ಹರ್ಷ ಹಾದ್ರಿಪುರ, ಕಾಂತರಾಜ್ ರಾಜಘಟ್ಟ, ನರಸಪ್ಪ ಗುಂಡುಮಗೆರೆ, ಗಂಗರಾಜು ನರಸಿಂಹನಹಳ್ಳಿ, ಕದಿರಪ್ಪ ಗಂಗಸಂದ್ರ, ಮುನಿಯಪ್ಪ ಕರೀಂಸೊಣ್ಣೆನಹಳ್ಳಿ, ಮುತ್ತುರಾಜ್ ಸುಲ್ಕುಂಟೆ, ಕೆ ವಿ ಮುನಿಯಪ್ಪ, ನರೇಂದ್ರ ಮಾಡೇಶ್ವರ, ಮಂಜುನಾಥ ನಾಯಕರಂಡಹಳ್ಳಿ, ಮೂರ್ತಿ ಮುತ್ತೂರು, ರವಿಕುಮಾರ್ ಹಾಲೇನಹಳ್ಳಿ, ಎಂಡಿ ನರಸಿಂಹಮೂರ್ತಿ, ಕನ್ನಡ ಪಕ್ಷ ವೆಂಕಟೇಶ್, ರಾಮಮೂರ್ತಿ( ರಾಾಮು ನೇರಳೆ ಘಟ್ಟ ), ಮುನಿರಾಜು ಸಿದ್ದನಾಯಕನಹಳ್ಳಿ, ಶ್ರೀರಾಮ್ ಮದುರೆ, ಗಜೇಂದ್ರ ಬೈಪ್ಪನಹಳ್ಳಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

  • ಮನೆ ಬಾಗಿಲಿಗೆ ಪೊಲೀಸ್ ಸೇವೆ : ಪೊಲೀಸ್ ವರಿಷ್ಠಾಧಿಕಾರಿಗಳಿಂದ “ಮನೆ ಮನೆಗೆ ಪೊಲೀಸ್ ” ಅಭಿಯಾನಕ್ಕೆ ಚಾಲನೆ

    ದೊಡ್ಡಬಳ್ಳಾಪುರ : ಮನೆ–ಮನೆಗೆ ಭೇಟಿ ನೀಡುವುದರಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಜನರಲ್ಲಿ ಸುರಕ್ಷತಾ ಮನೋಭಾವ ಮೂಡಲಿದೆ. ಸೈಬರ್ ಅಪರಾಧಗಳ ಅರಿವು ಮೂಡಿಸಲಾಗುವುದು, ಪೊಲೀಸ್ ಇಲಾಖೆ ನೆರವು ಪಡೆಯುವ ವಿಧಾನ ಸೇರಿದಂತೆ ಇಲಾಖೆಯ ಸಮಗ್ರ ಸೇವೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಹೇಳಿದರು.

    ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮನೆ ಮನೆಗೆ ಪೊಲೀಸ್‌ ಯೋಜನೆಗೆ ಚಾಲನೆ ಹಾಗೂ ಪರಿಶಿಷ್ಠ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಥಳೀಯರಿಂದ ಸೂಕ್ಷ್ಮ ಮಾಹಿತಿಗಳನ್ನು ಪಡೆದುಕೊಳ್ಳಲು, ಅಪರಾಧಗಳನ್ನು ತಡೆಯಲು ಹಾಗೂ ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಲು ಸಾಧ್ಯವಾಗುತ್ತದೆ. ಪೊಲೀಸ್‌ ವ್ಯವಸ್ಥೆಯಲ್ಲಿಸಾರ್ವಜನಿಕ ಸಹಭಾಗಿತ್ವ ಹೆಚ್ಚಾಗಿ, ಇಲಾಖೆ, ಸಾರ್ವಜನಿಕ ಸ್ನೇಹಿಯಾಗಿಸಿ, ಸಮಾಜಕ್ಕೆ ಉತ್ತಮ ಪೊಲೀಸ್‌ ಸೇವೆಯನ್ನು ಒದಗಿಸಬಹುದಾಗಿದೆ ಎಂದು ತಿಳಿಸಿದರು.

     

    ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಹಲವು ಪ್ರಕರಣಗಳಲ್ಲಿ ಜನರನ್ನು ಯಾಮಾರಿಸಿ ಹಣ ಕೀಳುವ, ಮೋಸ ಮಾಡುವ ಕೃತ್ಯಗಳು ಹೆಚ್ಚಾಗಿ ಕಂಡುಬರುತ್ತಿವೆ ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್‌ ಇಲಾಖೆಗೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ಈ ಅಭಿಯಾನ ಸಹಾಯವಾಗಲಿದೆ. ಸಾರ್ವಜನಿಕರೊಂದಿಗೆ ಪೊಲೀಸರು ಉತ್ತಮ ಹಾಗೂ ಸ್ನೇಹಪರ ಸಂಬಂಧವನ್ನು ಬೆಸೆದುಕೊಳ್ಳಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ

    ಈ ಹಿಂದೆ ದೂರುದಾರರು ಠಾಣೆಗೆ ಬಂದು ದೂರು ನೀಡಿದಾಗ ಅದನ್ನು ದಾಖಲಿಸಿ ಮುಂದಿನ ಕ್ರಮಕ್ಕೆ ಮುಂದಾಗುತ್ತಿದ್ದರು, ಈಗ ಪೊಲೀಸರು ಸಾರ್ವಜನಿಕರ ಮನೆಗೆ ಹೋಗಿ ಅಹವಾಲು ಆಲಿಸುವ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆ ಸ್ನೇಹಮಯಿಯಾಗಿದೆ, ಪೊಲೀಸರು ಮನೆಗೆ ಬಂದಾಗ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿ ಎಂದು ಹೇಳಿದರು.

    ಡಿವೈಎಸ್ಪಿ ರವಿ ಕುಮಾರ್ ಮಾತನಾಡಿ,ಪ್ರತಿಯೊಂದು ಪೊಲೀಸ್‌ ಠಾಣೆಗಳ ಇ–ಬೀಟ್‌ ವ್ಯವಸ್ಥೆ ಅನ್ವಯ ವಿಂಗಡಿಸಲಾದ ಪ್ರದೇಶದಲ್ಲಿರುವ ಮನೆಗಳ ಪಟ್ಟಿ ಮಾಡಿಕೊಂಡು ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳು ಭೇಟಿ ನೀಡಿ, ಆಹವಾಲು ಆಲಿಸಲಿದ್ದಾರೆ. ಸಮಾಜದ ಸುರಕ್ಷತೆ ಹಾಗೂ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ, ಸಮಾಜದಲ್ಲಿ ಆಗಬಹುದಾದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲಿದ್ದಾರೆ ಎಂದರು.

     

    ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದು ಕೊರತೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ಬಹಳಷ್ಟು ದೂರುಗಳು ಬಂದವು. ಶಾಲೆಯಲ್ಲಿ ಜಾತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ ಎಂದು ಶಾಲಾ ವಿದ್ಯಾರ್ಥಿ ಹೇಳಿದರು. ಅಟ್ರಾಸಿಟಿ ಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಪೊಲೀಸರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕುಂದು ಕೊರತೆ ಸಭೆಯಲ್ಲಿ ತಿಳಿಸಿದರು.

    ಸಭೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ, ನಗರ ಠಾಣೆಯ ಇನ್ಸಪೆಕ್ಟರ್ ಅಮರೇಶ್ ಗೌಡ, ಮಹಿಳಾ ಠಾಣೆಯ ಇನ್ಸಪೆಕ್ಟರ್ ಡಾ. ನವೀನ್ ಕುಮಾರ್ ಎಂ.ಬಿ, ದೊಡ್ಡಬೆಳವಂಗಲ ಠಾಣೆಯ ಇನ್ಸಪೆಕ್ಟರ್ ಕಲ್ಲಪ್ಪ, ಹೊಸಹಳ್ಳಿ ಠಾಣೆಯ ರಾವ್ ಗಣೇಶ ಹಾಗೂ ಸಿಬ್ಬಂದಿ, ದಲಿತ ಮುಖಂಡರು ಹಾಜರಿದ್ದರು.

  • Gitam : ಬೆಂಗಳೂರು ಗೀತಮ್ ವಿಶ್ವವಿದ್ಯಾನಿಲಯದಲ್ಲಿ ಅದ್ದೂರಿಯಾಗಿ ನೆಡೆದ ಪದವಿ ಪ್ರಧಾನ ಸಮಾರಂಭ

    “ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ, ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಮುಂದೆ ಸಾಗುವುದರಿಂದ ಸಮಾಜದಲ್ಲಿ ಮನ್ನಣೆ ಮತ್ತು ಪುರಸ್ಕಾರಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ ಎಂದು ಬೋಯಿಂಗ್ ಸಂಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (AI) ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟ‌ರ್ ಮತ್ತು ಹಿರಿಯ ತಂತ್ರಜ್ಞೆ ಡಾ. ಸೀಮಾ ಚೋಪ್ರಾ ತಿಳಿಸಿದರು.

    ದೊಡ್ಡಬಳ್ಳಾಪುರ ಹೊರವಲಯದಲ್ಲಿರುವ ಗೀತಮ್ ವಿಶ್ವವಿದ್ಯಾಲಯದಲ್ಲಿಂದು (ಡೀಮ್ಡ್ ಯೂನಿವರ್ಸಿಟಿ) ಪದವಿ, ಸ್ನಾತಕೋತ್ತರ, ಪಿಎಚ್ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿಜೀವನದಲ್ಲಿ ನಿರಂತರ ಕಲಿಕೆ, ಸ್ಪಷ್ಟ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿ ಅವಶ್ಯಕ. ಜೊತೆಗೆ ನಿಮ್ಮ ಸ್ನೇಹಿತರು ಮತ್ತು ಸಹಪಾಠಿಗಳಿಗೆ ಪ್ರಮುಖ್ಯತೆ ನೀಡಿ ಹಾಗೂ ಮುಂದೆ ಕೆಲಸದ ಒತ್ತಡ ಎಷ್ಟೇ ಇದ್ದರು ಸದಾ ಕುಟುಂಬಕ್ಕೆ ಆದ್ಯತೆ ನೀಡುವುದು ಅಗತ್ಯ ಎಂದು ಹೇಳಿದರು.

    ಬೆಂಗಳೂರಿನ ಗೀತಮ್ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಕೆಎನ್‌ಎಸ್ ಆಚಾರ್ಯ ಮಾತನಾಡಿ, ‘ಗೀತಮ್ ವಿಶ್ವವಿದ್ಯಾನಿಲಯದಲ್ಲಿ ನಾವು ಶಿಕ್ಷಣವನ್ನು ಸಾಮಾಜಿಕ, ವಾಸ್ತವಿಕತೆ ಜೊತೆಗೆ ಸಂಯೋಜಿತಗೊಳಿಸಿ ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸುವ ದಿಕ್ಕಿನೆಡೆಗೆ ಸಾಗುತ್ತಿದ್ದೇವೆ. ಗೀತಮ್ ವಿಶ್ವವಿದ್ಯಾನಿಲಯದ ಕೋರ್ಸ್ ಗಳನ್ನು ಉದ್ಯಮದ ಸಹಯೋಗದೊಂದಿಗೆ ವಿನ್ಯಾಸಗೊಳಸಲಾಗಿದ್ದು, ವಾಸ್ತವ ಪ್ರಪಂಚದ ಸಮಸ್ಯೆಗಳಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಮ್ಮ ಸಂಶೋಧನೆಗಳು ನಡೆಯುತ್ತವೆ ಎಂದರು.

    ನಮ್ಮ ವಿದ್ಯಾರ್ಥಿಗಳನ್ನು ನಿರ್ದಿಷ್ಟ ಉದ್ದೇಶದ ಹಿನ್ನೆಲೆಯಲ್ಲಿ ಯೋಚಿಸಲು, ಅದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲಾಗುತ್ತದೆ. ಈ ಸಮಾರಂಭವು ಕೇವಲ ಕೋರ್ಸ್ ನ ಅಂತ್ಯ ಮಾತ್ರವೇ ಅಲ್ಲ ಹೊಸ ಜವಾಬ್ದಾರಿಯ ಆರಂಭವಾಗಿದೆ. ಜ್ಞಾನವನ್ನು ಸಮಗ್ರತೆಯೊಂದಿಗೆ ಅನ್ವಯಿಸುವ, ಸದಾ ಕುತೂಹಲದಿಂದಿರುವ ಮತ್ತು ಸಮಾಜದಲ್ಲಿ ಅರ್ಥಪೂರ್ಣ ವ್ಯತ್ಯಾಸವನ್ನು ತರುವ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳು ಹೊರಟಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹೇಳಿದರು.

     

    1,310 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

    ಪದವಿ ಪ್ರದಾನ ಸಮಾರಂಭದಲ್ಲಿ ಒಟ್ಟು 1,310 ಮಂದಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 1,239 ಮಂದಿ ಪದವಿ, 54 ಮಂದಿ ಸ್ನಾತಕೋತ್ತರ ಪದವಿ ಮತ್ತು 17 ಮಂದಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ತಮ್ಮ ಕೋರ್ಸ್ ಗಳಲ್ಲಿ ಅತ್ಯುನ್ನತ ಶ್ರೇಣಿಯನ್ನು ಗಳಿಸಿದ 18 ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಿ ಗೌರವಿಸಲಾಯಿತು.

    ಗೀತಮ್ ಸ್ಕೂಲ್ ಆಫ್ ಬಿಸಿನೆಸ್ ನ ಅಸೋಸಿಯೇಟ್ ಪ್ರೊಫೆಸರ್ ಡಾ. ಜಿ. ಪಿ. ಸೆಂಥಿಲ್ ಕುಮಾರ್ ಅವರಿಗೆ ಅಕೌಂಟಿಂಗ್, ಫೈನಾನ್ಸ್ ಮತ್ತು ಅಪ್ಲೆಡ್ ಬಿಸಿನೆಸ್ ವಿಭಾಗದಲ್ಲಿ ನಡೆಸಿದ ಅದ್ಭುತ ಸಂಶೋಧನ ಕಾರ್ಯಕ್ಕಾಗಿ ಶ್ರೇಷ್ಠ ಸಂಶೋಧಕ ಪ್ರಶಸ್ತಿಯನ್ನು ನೀಡಲಾಯಿತು.

    ಕೋರ್ಸ್ ಮುಗಿಸಿ ಪದವಿ ಪಡೆದ ವಿದ್ಯಾರ್ಥಿಗಳು ಮಾತನಾಡಿ, ಬೆಂಗಳೂರು ಗೀತಮ್ ವಿಶ್ವವಿದ್ಯಾನಿಲಯದಲ್ಲಿ ನಾವು ವ್ಯಾಸಂಗ ಮಾಡಿ ಪದವಿ ಪಡೆದಿದ್ದೇವೆ ಎಂಬುದರ ಬಗ್ಗೆ ನಮಗೆ ಹೆಮ್ಮೆ ಇದೆ. ಉತ್ತಮ ವಾತಾವರಣದಲ್ಲಿ ನಮ್ಮ ಕೋರ್ಸ್ ಮುಗಿಸಿದ್ದೇವೆ. ನಮ್ಮ ಸಂಸ್ಥೆಯ ಮೇಲೆ ನಮಗೆ ಅಪಾರವಾದ ಗೌರವವಿದೆ. ನಮ್ಮ ಕಲಿಕೆ ಅತ್ಯುತ್ತಮವಾಗಲು ನಮ್ಮ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿ ನೀಡಿರುವ ಸಹಕಾರ ಮರೆಯಲು ಅಸಾಧ್ಯ, ನಮಗೆ ಶುಭ ಕೋರಿ ಪದವಿ ಪ್ರದಾನ ಮಾಡಲು ಹಲವು ಗಣ್ಯರು ಆಗಮಿಸಿರುವುದು ಸಂತಸ ತಂದಿದೆ ಎಂದರು.

     

    ಕಾರ್ಯಕ್ರಮದಲ್ಲಿ ಉಪಕುಲಪತಿ ಪ್ರೊ. ಕೆ.ಎನ್.ಎಸ್. ಆಚಾರ್ಯ,ಕುಲಪತಿಗಳಾದ ಪ್ರೊ. ಎರೋಲ್ ಡಿ’ಸೋಜಾ, ಮುಖ್ಯ ಅತಿಥಿ ಡಾ. ಸೀಮಾ ಚೋಪ್ರಾ, ಗೀತಂನ ಅಧ್ಯಕ್ಷ ಎಂ. ಭರತ್, ಉಪಾಧ್ಯಕ್ಷ ಪ್ರೊ. ಎಂ.ಗಂಗಾಧರ ರಾವ್, ಆಡಳಿತ ಮಂಡಳಿಯ ಸದಸ್ಯರು ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರು, ಅಸೋಸಿಯೇಟ್ ಡೀನ್‌ಗಳು, ಸಂಸ್ಥೆಗಳ ಮುಖ್ಯಸ್ಥರು, ರಿಜಿಸ್ಟ್ರಾರ್, ಕ್ರಿಯಾತ್ಮಕ ನಿರ್ದೇಶಕರು, ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.

  • ಸರ್ಕಾರಿ ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ : ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಶಾಲೆ ಉಳಿವಿಗೆ ಶ್ರಮಿಸಲಾಗುವುದು – ಟಿ ಜಿ ಮಂಜುನಾಥ್

    ದೊಡ್ಡಬಳ್ಳಾಪುರ: ನಮ್ಮ ದೊಡ್ಡ ತುಮಕೂರು ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸುಮಾರು 110 ಮಕ್ಕಳಿಗೆ ಅಗತ್ಯವಿರುವ ಕಲಿಕಾ ಪರಿಕರಗಳನ್ನು ಹಾಗೂ ಟ್ರ್ಯಾಕ್ ಸೂಟ್ ಗಳನ್ನು ವಿತರಣೆ ಮಾಡಲಾಗಿದೆ ಎಂದು ದೊಡ್ಡ ತುಮಕೂರು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ ಜಿ ಮಂಜುನಾಥ್ (LIC) ತಿಳಿಸಿದರು.

     

    ದೊಡ್ಡತುಮಕೂರು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಕಲಿಕಾ ಸಾಮಗ್ರಿ ಹಾಗೂ ಟ್ರಾಕ್ ಶೂಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ 35 ವರ್ಷಗಳಿಂದ ನಿರಂತರವಾಗಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಗಳ ವಿತರಣೆ ಮಾಡುತ್ತಿದ್ದೇವೆ. ಈ ಬಾರಿಯ ವಿಶೇಷವೇನೆಂದರೆ ಕೆಲವು ಸ್ನೇಹಿತರು ಹಾಗೂ ದಾನಿಗಳು ಜೊತೆಗೂಡುವ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು ಗಳು,ಜಾಮೆಟ್ರಿ ಬಾಕ್ಸ್, ಡ್ರಾಯಿಂಗ್ ಪೆನ್ಸ್, ಜೊತೆಗೆ ಟ್ರ್ಯಾಕ್ ಸೂಟ್ ಸಹ ವಿತರಣೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಸಿದ್ಧಪಡಿಸಿದ ಶಾಲಾ ಸಮವಸ್ತ್ರಗಳನ್ನು ನೀಡಲಾಗುವುದು ಎಂದರು.

    ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸರ್ಕಾರಿ ಶಾಲೆಗಳನ್ನು ಉಳಿಸುವುದೇ ಆಗಿದೆ , ತಾಲೂಕಿನಲ್ಲಿ ಸುಮಾರು ನೂರು ವರ್ಷಗಳ ಇತಿಹಾಸವಿರುವ ನಮ್ಮ ದೊಡ್ಡ ತುಮಕೂರು ಶಾಲೆಯು ಖಾಸಗಿ ಶಾಲೆಗಳ ಪ್ರಭಾವದಿಂದ ಕಾಲಕ್ರಮೇಣ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ ನಮ್ಮ ಸರ್ಕಾರಿ ಶಾಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಲಾ ಮಕ್ಕಳನ್ನು ಉತ್ತೇಜಿಸುವ ಸಲುವಾಗಿ ಈ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಮುಂದೆ ದಾನಿಗಳ ನೆರವು ಪಡೆಯುವ ಮೂಲಕ ನಮ್ಮ ಶಾಲೆಯನ್ನು ನವೀಕರಣಗೊಳಿಸಲು ಮುಂದಾಗಲಿದ್ದೇವೆ ಎಂದರು.

    ನಿವೃತ್ತ ಪ್ರಾಂಶುಪಾಲರಾದ ಕರಗಪ್ಪ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಹಾಗೂ ಸಲ್ಲಿಸುತ್ತಿರುವ ಪ್ರತಿಯೊಬ್ಬರು ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಸರ್ಕಾರಿ ಶಾಲೆ ಎಂದರೆ ಅಸಡ್ಡೆ ಬೇಡ , ಕೇವಲ ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಎಲ್ಲಾ ಪೋಷಕರು ಸರ್ಕಾರಿ ಶಾಲೆ ಸಿಗುವ ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಅರಿಯಬೇಕಿದೆ ಎಂದರು. ವಿಶ್ವ ವಿಖ್ಯಾತರಾದ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಎಪಿಜೆ ಅಬ್ದುಲ್ ಕಲಾಂ ರವರ ಬಾಲ್ಯ ಜೀವನ ಕುರಿತು ಮಾಹಿತಿ ನೀಡಿ ಶಿಕ್ಷಣದ ಶಕ್ತಿಯನ್ನು ಮಕ್ಕಳಿಗೆ ತಿಳಿಸಿದರು.

     

    ಸರ್ಕಾರಿ ನೌಕರರ ಸಂಘದ ಅದ್ಯಕ್ಷರಾದ ಎಮ್ ಎಸ್ ರಾಜಶೇಖರ್ ಮಾತನಾಡಿ ಸರ್ಕಾರಿ ಶಾಲೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಕ್ಕೆ ಪೋಷಕರ ಇಂಗ್ಲಿಷ್ ವ್ಯಾಮೋಹವೇ ಮುಖ್ಯ ಕಾರಣವಾಗಿದೆ, ಇದನ್ನು ಅರಿತಿರುವ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಿದೆ ಖಾಸಗಿ ಶಾಲೆಗಳಲ್ಲಿ ಹಣಕೊಟ್ಟು ಪಡೆಯುವ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಪಡೆಯಬಹುದಾಗಿದೆ ಅಲ್ಲದೆ ಪ್ರತಿ ವರ್ಷ ಪ್ರತಿ ಮಗುವಿಗೆ ಉಚಿತ ಸಮವಸ್ತ್ರ ಉಚಿತ ಪೋಷಕಾಂಶಯುಕ್ತ ಆಹಾರ ವಿತರಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಪೋಷಕರು ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಾತಿ ಮಾಡಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಸಹಕರಿಸಬೇಕಿದೆ ಎಂದರು.

     

    ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಕರಗಪ್ಪ,ಸರ್ಕಾರಿ ನೌಕರರ ಸಂಘದ ಅದ್ಯಕ್ಷರಾದ ಎಮ್ ಎಸ್ ರಾಜಶೇಖರ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಕುಮಾರ್,ಕಾರ್ಯಕ್ರಮದ ಆಯೋಜಕರಾದ ಟಿ.ಜಿ.ಮಂಜನಾಥ್ ಎಲ್ ಐ ಸಿ,ಮುಖಂಡರಾದ ದೀಪು, ಶ್ರೀರಾಮ್, ರಘು,ಚಂದ್ರಶೇಖರ್, ಚಿಕ್ಕಣ್ಣ,ಎಲೆಕ್ಟ್ರಿಕ್ ಆನಂದ್,ಗ್ರಾಮ ಪಂಚಾಯತಿ ಸದಸ್ಯ ಲೋಕೇಶ್, ಲಕ್ಷ್ಮಣ್,ದೊಡ್ಡತುಮಕೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯಾದ ಸತ್ಯವತಿ, ಕುಸುಮಾವತಿ, ಜ್ಯೋತಿ ಶಿಕ್ಷಕರಾದ ಶಬೀನಾಬಾನು,ನೇತ್ರಾವತಿ ಮತ್ತು ಸಹಶಿಕ್ಷಕರು, ವಿ ಎಸ್ ಎಸ್ ಏನ್ ಮಾಜಿ ಅಧ್ಯಕ್ಷ ನಾಗರಾಜ್,ಅಧ್ಯಕ್ಷರಾದ ಟಿ ಎ ಪ್ರಕಾಶ್ ಸೇರಿದಂತೆ ಗ್ರಾಮದ ಪ್ರಮುಖರು ಹಾಜರಿದ್ದರು

  • ಪ್ರತಿ ತಿಂಗಳ ಮೊದಲನೇ ಹಾಗೂ ಮೂರನೇ ಶನಿವಾರ ಜನಸ್ಪಂದನ ಕಾರ್ಯಕ್ರಮ: ಜಿಲ್ಲಾಧಿಕಾರಿ ಎ.ಬಿ ಬಸವರಾಜು

    ಪ್ರತಿ ತಿಂಗಳ ಮೊದಲನೇ ಶನಿವಾರ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದ್ದಾರೆ.

     

    ಸಾರ್ವಜನಿಕರು ತಮ್ಮ ಅಹವಾಲನ್ನು ಸಲ್ಲಿಸಲು ಒಂದೇ ವೇದಿಕೆಯನ್ನು ಕಲ್ಪಿಸುವ ಸಲುವಾಗಿ ಜನಸ್ಪಂದನ/ಸಾರ್ವಜನಿಕ ಕುಂದು ಕೊರತೆ ಸಭೆ ಆಯೋಜಿಸಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಜನರ ಅಹವಾಲನ್ನು ಆಲಿಸಿ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

     

    ಜಿಲ್ಲಾಮಟ್ಟದಲ್ಲಿ ನಡೆಯುವ ಜನಸ್ಪಂದನ ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರತಕ್ಕದ್ದು ಹಾಗೂ ತಾಲೂಕು ಮಟ್ಟದಲ್ಲಿ ನಡೆಯುವ ಜನಸ್ಪಂದನ ಕಾರ್ಯಕ್ರಮದಲ್ಲಿ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ಸಾರ್ವಜನಿಕರ ಅಹವಾಲು ಆಲಿಸಬೇಕು. ತಾಲ್ಲೂಕು ಮಟ್ಟದಲ್ಲಿ ನಡೆಯುವ ಜನಸ್ಪಂದನ ಕಾರ್ಯಕ್ರಮಗಳಲ್ಲಿ ಸಂಬಂಧಿತ ಉಪವಿಭಾಗಾಧಿಕಾರಿಗಳು ಒಂದೊಂದು ಮಾಹೆ ಒಂದೊಂದು ತಾಲ್ಲೂಕಿನಲ್ಲಿ ಹಾಜರಿರಬೇಕು. ಜನಸ್ಪಂದನ ಕಾರ್ಯಕ್ರಮದ ಸಮಯ ಹಾಗೂ ದಿನಾಂಕ, ಸ್ಥಳವನ್ನು ಆಯಾ ತಾಲ್ಲೂಕು, ಜಿಲ್ಲೆಯಲ್ಲಿ ಹೆಚ್ಚಿನ ಪ್ರಚುರ ಪಡಿಸಲಾಗುವುದು.

     

    *ಆನ್ಲೈನ್ ಮೂಲಕ ಅಹವಾಲು ದಾಖಲಿಸಿ*

    ಜಿಲ್ಲೆಯ ಎಲ್ಲಾ ರೈತಾಪಿ ವರ್ಗದವರಿಗೆ ಸಾರ್ವಜನಿಕರಿಗೆ ಹಾಗೂ ಗ್ರಾಮೀಣ ಜನತೆಗೆ ಸಾಮಾಜಿಕ ಶೈಕ್ಷಣಿಕ ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗೆ ವಿವಿಧ ಇಲಾಖೆಗಳಲ್ಲಿ ದೊರೆಯಬೇಕಾದ ಸೌಲಭ್ಯಗಳು ನಿಗದಿತ ಅವಧಿಯೊಳಗೆ ದೊರೆಯದೆ ಇದ್ದಾಗ ತಮ್ಮ ಅಹವಾಲನ್ನು ದಾಖಲಿಸಲು ಸರ್ಕಾರವು ಏಕೀಕೃತ ಸಾರ್ವಜನಿಕ ದೂರು ನಿವಾರಣ ತಂತ್ರಾಂಶ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದೆ.

     

    ಅದರಂತೆ ಏಕೀಕೃತ ಸಾರ್ವಜನಿಕ ಕುಂದು ಕೊರತೆ ವ್ಯವಸ್ಥೆಯು ಜನಸ್ಪಂದನ ಪೋರ್ಟಲ್ https://espandana.karnataka.gov.in ಅಥವಾ https://ipgrs.karnataka.gov.in, https://play.google.com/store/apps/details?id=com.csg.ipgrs ನಲ್ಲಿಯೂ ಲಭ್ಯವಿರುತ್ತದೆ. ಇದರಲ್ಲಿ ಸಾರ್ವಜನಿಕರು ನೇರವಾಗಿ ತಮ್ಮ ಹವಾಲುಗಳನ್ನು ತಂತ್ರಾಂಶದ ಮೂಲಕ ದಾಖಲಿಸಬಹುದಾಗಿರುತ್ತದೆ.

     

    ಏಕೀಕೃತ ಸಾರ್ವಜನಿಕ ಕುಂದು ಕೊರತೆ ವ್ಯವಸ್ಥೆಗೆ ಮೀಸಲಾದ 1902 ಸಹಾಯವಾಣಿಯು ಸಹ ನಾಗರಿಕರಿಗೆ ಲಭ್ಯವಿರುತ್ತದೆ. ಅಂತರ್ಜಾಲ ವ್ಯವಸ್ಥೆ ಇಲ್ಲದ ಕುಗ್ರಾಮಗಳಿಂದಲೂ ಸಹ ಸಾರ್ವಜನಿಕರು 1902 ಸಹಾಯವಾಣಿಗೆ ಕರೆ ಮಾಡಿ ದೂರು/ ಕುಂದು ಕೊರತೆಗಳನ್ನು ದಾಖಲಿಸಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • ನಿರ್ಗತಿಕ ಕಡುಬಡವರೊಂದಿಗೆ ನಿಮ್ಮ ವಿಶೇಷ ದಿನಗಳನ್ನು ಆಚರಿಸಿ – ಲಕ್ಷ್ಮೀಪತಿ

    ಸಾವಿರಾರು ನಿರ್ಗತಿಕರ ದಿನ ನಿತ್ಯದ ಬದುಕಿಗೆ ನಿರಂತರ ಅನ್ನ ದಾಸೋಹ ಆಧಾರವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಸಿದವರಿಗೆ ಆಹಾರ ವಿತರಣೆ ಮಾಡಿರುವುದು ಸಂತಸತಂದಿದೆ ಎಂದು ನಟ, ನಿರ್ಮಾಪಕರಾದ ಲಕ್ಷ್ಮೀಪತಿ ತಿಳಿಸಿದರು.

    1949 ನೇ ದಿನದ ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅವರು ನಂತರ ಮಧ್ಯಮಗಳೊಂದಿಗೆ ಮಾತನಾಡಿದರು ದಾನಗಳಲ್ಲೇ ಶ್ರೇಷ್ಠವಾದ ಅನ್ನದಾನವನ್ನು ಕಳೆದ 5ವರ್ಷಗಳಿಂದ ನಿರಂತರವಾಗಿ ಮಲ್ಲೇಶ್ ಮತ್ತು ತಂಡ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನೆಡೆಸಿಕೊಂಡು ಬರುತ್ತಿದೆ. ಇಲ್ಲಿ ಪ್ರತಿ ನಿತ್ಯ ನೂರಾರು ಬಡ ಹಾಗೂ ನಿರಾಶ್ರಿತರಿಗೆ ಆಹಾರ ವಿತರಣೆಯಾಗುತ್ತಿದ್ದು, ಈ ಕಾರ್ಯಕ್ರಮ ಕೇವಲ ಅನ್ನದಾನಕ್ಕೆ ಸೀಮಿತವಾಗದೆ ಶಾಲಾ ಮಕ್ಕಳಿಗೆ ಅವಶ್ಯಕವಿರುವ ಅಗತ್ಯ ಪರಿಕರಗಳನ್ನು ವಿತರಣೆ ಮಾಡುವ ಮೂಲಕ ವಿದ್ಯಾದಾನಕ್ಕೆ ಮುಂದಾಗಿರುವುದು ಶ್ಲಾಘನಿಯ ಸಂಗತಿ ಎಂದರು

     

    ಅನ್ನ ದಾಸೋಹದ ಜೊತೆಗೆ ಶಾಲಾಮಕ್ಕಳಿಗೆ ನೋಟ್ ಬುಕ್, ಹಾಗೂ ಪೆನ್ ವಿತರಣೆ ಮಾಡಿದರು.

    ಕಾರ್ಯಕ್ರಮದ ಆಯೋಜಕ ಅನ್ನ ದಾಸೋಹಿ ಮಲ್ಲೇಶ್ ಮಾತನಾಡಿ ಸದಾ ದಾನಿಗಳ ನೆರವಿಂದ ನೆಡೆಯುವ ಕಾರ್ಯಕ್ರಮ ಇದಾಗಿದ್ದು, ದಿನೇ ದಿನೇ ಇಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ, ಸಂಪನ್ಮೂಲದ ಕೊರತೆ ಉಂಟಾಗುತ್ತಿದ್ದೂ ಹಸಿದ ಹೊಟ್ಟೆಗಳಿಗೆ ಆಹಾರ ವಿತರಣೆ ಮಾಡಲು ದಾನಿಗಳು ಮುಂದಾಗಬೇಕಿದೆ, ನಿಮ್ಮ ಎಲ್ಲಾ ವಿಶೇಷ ದಿನಗಳನ್ನು ನಮ್ಮೊಟ್ಟಿಗೆ ಆಚರಿಸುವ ಮೂಲಕ ನಿರಾಶ್ರಿತರಿಗೆ ಕಡು ಬಡವರಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿದರು.

    ಇಂದಿನ ದಾನಿಗಳಾಗಿ ನಮ್ಮ ಸಮಿತಿಯೋಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಟ ನಿರ್ಮಾಪಕ ಸಮಾಜಸೇವಕರಾದ ಲಕ್ಷ್ಮೀಪತಿಯವರಿಗೆ ಒಳ್ಳೆಯದಾಗಲಿ ಅವರಿಂದ ಮತ್ತಷ್ಟು ಸಮಾಜಮುಖಿ ಕಾರ್ಯಗಳು ಹೆಚ್ಚಾಗಲಿ ಎಂದು ಶುಭಹಾರೈಸಿದರು.

     

  • ಆಗಸ್ಟ್ 7 ರವರೆಗೆ ಯುವನಿಧಿ ವಿಶೇಷ ನೋಂದಣಿ ಅಭಿಯಾನ

    ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆ ಅಡಿಯಲ್ಲಿ ಫಲಾನುಭವಿಗಳ ನೋಂದಣಿ ಚಾಲ್ತಿಯಲ್ಲಿದ್ದು 2025 ನೇ ಸಾಲಿನಲ್ಲಿ ತೇರ್ಗಡೆಯಾದ ಪದವಿ ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಅಭ್ಯರ್ಥಿಗಳು ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

     

    ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಯುವನಿಧಿ ಯೋಜನೆಯ ವಿಶೇಷ ನೋಂದಣಿ ಅಭಿಯಾನವನ್ನು ಜುಲೈ 07 ರಿಂದ ಆಗಸ್ಟ್ 07 ರವರೆಗೆ ಹಮ್ಮಿಕೊಂಡಿದ್ದು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ www.sevasindhugs.karnataka.gov.in ನೋಂದಾಯಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕಾನೂನು ಪದವೀಧರರ ಶಿಷ್ಯವೇತನಕ್ಕೆ ಅರ್ಜಿ

    ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಪಂಗಡದ ಕಾನೂನು ಪದವೀಧರರು ವೃತ್ತಿ ತರಬೇತಿ ಕಾರ್ಯಕ್ರಮದಡಿ ಶಿಷ್ಯವೇತನ ಪಡೆಯಲು ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

     

    ಅಭ್ಯರ್ಥಿಗಳು 40 ವರ್ಷ ವಯೋಮಿತಿಯೊಳಗಿರಬೇಕು. ವಾರ್ಷಿಕ ಆದಾಯ ರೂ.2.50 ಲಕ್ಷ ಮೀರಿರಬಾರದು. ವಕೀಲರ ಸಂಘದಲ್ಲಿ ಅಭ್ಯರ್ಥಿಯು ಹೆಸರನ್ನು ನೋಂದಾಯಿಸಿರಬೇಕು. ತರಬೇತಿ ಅವಧಿ ಎರಡು ವರ್ಷಗಳಾಗಿದ್ದು, ಮಾಸಿಕ ರೂ.10,000/-ಗಳ ಶಿಷ್ಯ ವೇತನ ನೀಡಲಾಗುವುದು.

     

    ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ 20 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ಹಿರಿಯ ವಕೀಲರಲ್ಲಿ ತರಬೇತಿ ನಿಯೋಜಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ತರಬೇತಿಯನ್ನು ಪೂರ್ಣಗೊಳಿಸದೆ ಮಧ್ಯಂತರದಲ್ಲಿ ಬಿಟ್ಟು ಹೋಗಬಾರದು ಹಾಗೆ ಬಿಟ್ಟು ಹೊದ ಪಕ್ಷದಲ್ಲಿ ತರಬೇತಿ ಅವಧಿಯಲ್ಲಿ ಪಾವತಿಸಿದ ಶಿಷ್ಯವೇತನ ವಾಪಸ್ಸು ಪಡೆಯಲಾಗುವುದು ಹಾಗೂ ಈ ನಿಯಮ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ದಿಮೆಯಲ್ಲಿ ನೇಮಕ ಹೊಂದುವವರಿಗೆ ಅನ್ವಯಿಸುವುದಿಲ್ಲ. ಸುಳ್ಳು ದಾಖಲೆ ಮಾಹಿತಿಯನ್ನು ಒದಗಿಸಿ ಆಯ್ಕೆಯಾದ ಅಭ್ಯರ್ಥಿಗನ್ನು ಕಾನೂನಿನ ಅನ್ವಯ ಶಿಕ್ಷೆಗೆ ಗುರಿ ಪಡಿಸಲಾಗುವುದು ಹಾಗೂ ತರಬೇತಿ ಅವಧಿಯಲ್ಲಿ ಪಾವತಿಸಿದ ಶಿಷ್ಯವೇತನ ಶೇ.10 ರಂತೆ ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು.

     

    ಅರ್ಹ ಅಭ್ಯರ್ಥಿಗಳು ಇಲಾಖಾ ವೆಬ್ಸೈಟ್ ಆದ www.twd.kar.nic.in ಮೂಲಕ ಅರ್ಜಿಗಳನ್ನು ವರ್ಷದ ಎಲ್ಲಾ ದಿನಗಳು(365 ದಿನಗಳು) ಸಲ್ಲಿಸಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಒಳ ಮೀಸಲಾತಿ ಅನುಷ್ಠಾನ ಕುರಿತು ಹೋರಾಟ ಮಾಡುವ ನೈತಿಕತೆ ಬಿಜೆಪಿಗೆ ಇಲ್ಲ ಸಚಿವ ಕೆಹೆಚ್. ಮುನಿಯಪ್ಪ.

    ಒಳ ಮೀಸಲಾತಿ ವರದಿ ಬಂದ ತಕ್ಷಣ ಇದರ ಕುರಿತು ಮುಖ್ಯಮಂತ್ರಿಗಳು ಸೂಕ್ತ ಕ್ರಮ ವಹಿಸಲಿದ್ದಾರೆ ಅನಗತ್ಯವಾಗಿ ವಿರೋಧ ಪಕ್ಷದವರು ಆಗಸ್ಟ್ 1ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಇದನ್ನು ಕೈಬಿಡಲು ಮನವಿ ಮಾಡಿದರು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ತಿಳಿಸಿದರು.

     

    ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಅವರು ಮಾತನಾಡಿದ ಅವರು ಒಳ ಮೀಸಲಾತಿ ಅನುಷ್ಠಾನ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ನೇತೃತ್ವದ ಏಕ ಸದಸ್ಯ ಆಯೋಗವನ್ನು ರಚಿಸಿ 101 ಜಾತಿಗಳ ನಿರ್ದಿಷ್ಠ ದತ್ತಾಂಶಗಳನ್ನು ಸಂಗ್ರಹಿಸಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ನೂರರಷ್ಟು ಸಮೀಕ್ಷೆಯಾಗಿದ್ದು ಬೆಂಗಳೂರು ನಗರದಲ್ಲಿ ಶೇ%60 ರಷ್ಟು ಸಮೀಕ್ಷೆ ಕಾರ್ಯ ಮುಗಿದಿದ್ದು ಅಂತಿಮ ವರದಿಯನ್ನು ಸಿದ್ದಪಡಿಸುತ್ತಿದ್ದು ಅತಿ ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಲ್ಲಿದ್ದಾರೆ ಎಂದರು.

     

     

     

    ಬಿಜೆಪಿಯ ಕೇಂದ್ರದ ಮಾಜಿ ಸಚಿವರಾದ ಎ. ನಾರಾಯಣಸ್ವಾಮಿಯವರು ಸಂಸತ್ತಿನಲ್ಲಿ ಮಾತನಾಡುತ್ತಾ ಮೀಸಲಾತಿ ಕಲ್ಪಿಸಲು ಸಾದ್ಯವಿಲ್ಲ ಎಂದಿದ್ದಾರೆ ಇದು ದಾಖಲೆಯಾಗಿದೆ ಈಗಿದ್ದಾಗ ಇವರಿಂದ ಏನೂ ನಿರೀಕ್ಷಿಸಲು ಸಾದ್ಯವಿಲ್ಲಾ ಗೋವಿಂದ ಕಾರಜೋಳ ರವರು ಲೋಕೋಪಯೋಗಿ ಸಚಿವರಿದ್ದಾಗ ಅವರ ಸರ್ಕಾರ ಮಾದುಸ್ವಾಮಿ ಆಯೋಗ ರಚಿಸಿ ಯಾವುದೇ ಒಳಮೀಸಲಾತಿ ಕಲ್ಪಿಸಿಲ್ಲಾ ಅಂದಿನ ಮುಖ್ಯಮಂತ್ರಿ ಎಸ್.ಎಮ್ ಕೃಷ್ಣ ರವರ ಸರ್ಕಾರ ಇದ್ದಾಗ ಸದಾಶಿವ ಆಯೋಗವನ್ನು ರಚಿಸಿದರು ಅದರ ವರದಿಯನ್ನು ಅನುಷ್ಠಾನ ಮಾಡದೆ ಕೈಬಿಟ್ಟ ಈ ಬಿಜೆಪಿಯವರು ಈಗ ಹೋರಾಟದಕ್ಕೆ ಮುಂದಾಗಿರುವುದು ಹಾಸ್ಯಸ್ಪದವಾಗಿದೆ ಎಂದರು.

     

    ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು ನಾವು ಚುನಾವಣೆಯ ಸಂದರ್ಭದಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಷೋಷಿಸಿರುವ ಹಾಗೆ ಒಳ ಮೀಸಲಾತಿಯನ್ನು ನಮ್ಮ ಸರ್ಕಾರ ಅನುಷ್ಠಾನ ಮಾಡಿಯೇ ತೀರುತ್ತದೆ ಎಂದರು.

     

    ಈ ಸಂದರ್ಭದಲ್ಲಿ ಕಾನೂನು ಸಚಿವ ಎಚ್.ಕೆ ಪಾಟೀಲ್, ಅಬಕಾರಿ ಸಚಿವ ತಿಮ್ಮಾಪುರ ಜೊತೆಗಿದ್ದರು.