Blog

  • ಆರಕ್ಷಕ ಠಾಣಾ ಸಿಬ್ಬಂದಿಗಳಿಗೆ ಉಚಿತ ಅರೋಗ್ಯ ತಪಾಸಣಾ ಶಿಬಿರ

     

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ದೃಷ್ಟಿ ಕಣ್ಣಿನ ಆಸ್ಪತ್ರೆ ಸಹಭಾಗಿತ್ವದಲ್ಲಿ ದೊಡ್ಡಬಳ್ಳಾಪುರ ಆರಕ್ಷಕ ಇಲಾಖೆಯ ಸಹಕಾರದೊಂದಿಗೆ ಆರಕ್ಷಕ ಠಾಣಾ ಸಿಬ್ಬಂದಿಗಳಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

     

    ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜನಕುಂಟೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀ ದಿಲೀಪ್ ಕುಮಾರ್ ರವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಪೊಲೀಸ್ ಇಲಾಖೆಗೆ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಿದರು.

     

     

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಶ್ರೀ ಉಮಾರಬ್ಬ ರವರು ಯೋಜನೆಯ ಕಾರ್ಯಕ್ರಮದ ಬಗ್ಗೆ ಹಾಗೂ ಆರೋಗ್ಯ ತಪಾಸಣೆ ಶಿಬಿರದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು ದೊಡ್ಡಬಳ್ಳಾಪುರ ತಾಲೂಕಿನ 9 ಆರಕ್ಷಕ ಠಾಣೆಯ ಒಟ್ಟು 120 ಸಿಬ್ಬಂದಿಗಳು ಹಾಜರಾಗಿ ರಕ್ತ ಪರೀಕ್ಷೆ ಬಿಪಿ ಪರೀಕ್ಷೆ ಹಾಗೂ ಕಣ್ಣಿನ ತಪಾಸಣೆ ಪಡೆದಿದ್ದಾರೆ ಎಂದು ತಿಳಿಸಿದರು.

     

    ಈ ಕಾರ್ಯಕ್ರಮದಲ್ಲಿ ನಗರ ಠಾಣೆಯ ಪಿಎಸ್ಐ ಕೃಷ್ಣಮೂರ್ತಿ ಹಾಗೂ ತಾಲೂಕು ಯೋಜನಾಧಿಕಾರಿಗಳಾದ ದಿನೇಶ್ ಕಣ್ಣಿನ ಆಸ್ಪತ್ರೆ ನೇತ್ರಾದಿಕಾರಿ ಡಾ ನಾಯ್ಡು ಧರ್ಮಸ್ಥಳ ಸಂಸ್ಥೆಯ ಸಿಬ್ಬಂದಿಗಳು, ಆಸ್ಪತ್ರೆ ಸಿಬ್ಬಂದಿಗಳು ಮತ್ತು ಆರಕ್ಷಕ ಠಾಣಾ ಸಿಬ್ಬಂದಿಗಳು ಹಾಜರಿದ್ದರು.

  • ಗುಳ್ಯ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಆಚರಣೆ :ದೇವಸ್ಥಾನ ಪ್ರವೇಶಿಸುವ ಮೂಲಕ ಅನಿಷ್ಟ ಪದ್ಧತಿಗೆ ಅಂತ್ಯವಾಡಿದ ದಲಿತರು

    ದೊಡ್ಡಬಳ್ಳಾಪುರ : ತಾಲ್ಲೂಕಿನ ಗೂಳ್ಯ ಗ್ರಾಮದ ವೇಯಿಗಣ್ಣಮ್ಮ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಆಚರಣೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಾಲ್ಲೂಕಿನ ದಂಡಾಧಿಕಾರಿ ವಿಭಾ ವಿದ್ಯಾ ರಾಥೋಡ್ ಅವರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿ ದಲಿತರು ದೇವಸ್ಥಾನ ಪ್ರವೇಶಿಸಿದರು.

    ತಾಲೂಕಿನ ತೂಬಗೆರೆ ಹೋಬಳಿಯ ಗೂಳ್ಯ ಗ್ರಾಮದ ವೇಯಿಗಣ್ಣಮ್ಮ ದೇವಸ್ಥಾನಕ್ಕೆ ದಲಿತರ ಪ್ರವೇಶ ನಿಷೇಧಿಸಲಾಗಿತ್ತು, ಈ ಕುರಿತು ಗ್ರಾಮದ ಶಕುಂತಲಮ್ಮ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಗ್ರಾಮದಲ್ಲಿನ ಅಸ್ಪೃಶ್ಯತೆ ಆಚರಣೆಯನ್ನು ತೊಲಗಿಸುವಂತೆ ಮನವಿ ಮಾಡಿದ್ರು ಈ ಹಿನ್ನೆಲೆಯಲ್ಲಿ ಶುಕ್ರವಾರ ಕಂದಾಯ, ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ದಲಿತರು ದೇವಾಲಯ ಪ್ರವೇಶಿಸಿದರು, ದೇವರಿಗೆ ಪೂಜೆ ಮಾಡಿಸಿದ ದಲಿತರು ಗ್ರಾಮದಲ್ಲಿನ ಅನಿಷ್ಟ ಪದ್ಧತಿಗೆ ಅಂತ್ಯವಾಡಿದರು.

    ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಗೂಳ್ಯ ಗ್ರಾಮದಲ್ಲಿ 100 ವರ್ಷಗಳ ವೇಯಿಗಣ್ಣಮ್ಮ ದೇವಾಲಯವಿದೆ. ಕಳೆದ ಕೆಲವು ವರ್ಷಗಳ ಹಿಂದೆ ಊರಿನ ಸರ್ವರೂ ಸೇರಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಆದರೆ, ಇಂದಿಗೂ ಈ ದೇವಾಲಯಕ್ಕೆ ದಲಿತರಿಗೆ ಪ್ರವೇಶ ಇರಲಿಲ್ಲ, ದೇವಾಲದ ಆರ್ಚಕ ದಲಿತರು ದೇವಾಲಯ ಪ್ರವೇಶಿಸದಂತೆ ನಿಂದನಾತ್ಮಕವಾಗಿ ದಲಿತರನ್ನು ಹಿಯಾಳಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.

    ಶುಕ್ರವಾರ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಡಿವೈಎಸ್ಪಿ ರವಿ.ಪಿ, ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಸಾಧಿಕ್ ಪಾಷ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪ್ರೇಮ, ಹಾಗೂ ಸಹಾಯಕ ನಿರ್ದೇಶಕರಾದ ಉಮಾಪತಿ, ರಾಜಸ್ವ ನಿರೀಕ್ಷಕ ನರಸಿಂಹ ಅವರುಗಳು ಭೇಟಿ ನೀಡಿ, ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅಧಿಕಾರಿಗಳು ದೇವಸ್ಥಾನ ಸಾರ್ಜನಿಕರ ಸ್ವತ್ತಾಗಿದ್ದು ಯಾರು ಬೇಕಾದರೂ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಬಹುದು, ಅಸ್ಪೃಷ್ಯತೆ ಆಚರಣೆ ಸಂವಿಧಾನ ವಿರೋಧಿಯಾಗಿದ್ದು, ತಾರತಮ್ಯ ನಡೆಸುವವರು ಕಠಿಣ ಕಾನೂನು ಕ್ರಮ ಎಸುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಾವೆಲ್ಲರೂ ಸೋದರ ಸಹೋದರಿಯರಂತೆ ಬದುಕಬೇಕು. ಇಂತಹ ಅನಿಷ್ಟ ಪದ್ದತಿಯನ್ನು ತೊಲಗಿಸಲು ನಾವೆಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.

    ದೇವಸ್ಥಾನ ಪ್ರವೇಶಿಸಿದ ದಲಿತರು ದೇವರಿಗೆ ಪೂಜೆ ಮಾಡಿಸುವ ಮೂಲಕ ಗ್ರಾಮಕ್ಕೆ ಅಂಟಿದ ಅನಿಷ್ಟ ಪದ್ಧತಿಗೆ ಅಂತ್ಯವಾಡಿದರು.

     

     

     

     

  • ಶುದ್ಧ ಗಾಳಿ,ನೀರು, ಅರೋಗ್ಯಕ್ಕಾಗಿ ಪರಿಸರ ಉಳಿಸಿ – ಲೋಹಿತ್ ಗೌಡ

    ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತೂಬಗೆರೆ ಹೋಬಳಿಯ ಕಾರನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

     

    ಶಾಲಾ ಆವರಣದಲ್ಲಿ ಗಿಡ ನಾಟಿ ಮಾಡಿಸದಸ್ಯರಿಗೆ ಮತ್ತು ವಿಧ್ಯಾರ್ಥಿಗಳಿಗೆ ಗಿಡ ವಿತರಣೆ ಮಾಡಲಾಯಿತು

     

     

    ತಾಲೂಕಿನ ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು ಹವಾಮಾನ ವೈಪರೀತ್ಯ,ಕೈಗಾರಿಕರಣದಿಂದ ನಮ್ಮ ಸುತ್ತಮುತ್ತಲಿನ ವಾತಾವರಣ ಅಶುದ್ಧವಾಗುತ್ತಿದೆ. ಜನಸಾಮಾನ್ಯರು ಅನಾರೋಗ್ಯಕಿಡಾಗುತ್ತಿದ್ದಾರೆ ಆದ ಕಾರಣ ಪ್ರತಿಯೊಬ್ಬರೂ ತಮ್ಮ ಗಿಡ ನಾಟಿ ಮಾಡಿ ಪೋಷಣೆ ನೀಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕೆಂದು ಮಾಹಿತಿ ನೀಡಿದರು.

     

    ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ್ ಶಿಕ್ಷಕರಾದ ಗೀತಾ , ಪುಷ್ಪಾವತಿ, ಹೋಬಳಿ ಆಶಾ ಕಾರ್ಯಕರ್ತೆ ಪ್ರೇಮ, ಅಂಗನವಾಡಿ ಕಾರ್ಯಕರ್ತೆ ಭಾಗ್ಯಲಕ್ಷ್ಮಿ, ಒಕ್ಕೂಟದ ಅಧ್ಯಕ್ಷರಾದ ಸಂತೋಷ್, ಸೇವಾಪ್ರತಿನಿಧಿ ಚೈತ್ರ,VLE ಮಂಜುಳ, ಶೃತಿ ಸಂಘದ ಸದಸ್ಯರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

  • ವಸತಿ ಶಾಲೆ ಉಳಿಕೆ ಸೀಟು ಭರ್ತಿಗೆ ಅರ್ಜಿ ಆಹ್ವಾನ

    ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯ ನಿರ್ವಹಿಸುತ್ತಿರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ 6,7 ಮತ್ತು 8ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳಿಗೆ ಮಾತ್ರ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

     

    ಅರ್ಜಿಗಳನ್ನು ನಿಗದಿತ ವೇಳೆಯೊಳಗೆ ಸಂಬಂಧಪಟ್ಟ ಶಾಲೆಗಳಿಗೆ ಸಲ್ಲಿಸುವುದು.

     

    ಹೆಚ್ಚಿನ ವಿವರಗಳಿಗಾಗಿ ಆಯಾ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸುವುದು. ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ರಾಜ್ಯ ಪಠ್ಯಕ್ರಮ), ದೇವನಾಯಕನಹಳ್ಳಿ,ದೂ.ಸಂ- 9632249214.ಪ್ರಾಂಶುಪಾಲರು, ಡಾ॥ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ (ಸಿ.ಬಿ.ಎಸ್.ಸಿ) ಗಿಡ್ಡಪ್ಪನಹಳ್ಳಿ, ಹೊಸಕೋಟೆ ತಾಲ್ಲೂಕು, ದೂ.ಸಂ- 8660971267. ಮೌಲಾನಾ ಆಜಾದ್ ಮಾದರಿ ಶಾಲೆ, ವಿಜಯಪುರ(ದೇವನಹಳ್ಳಿ)ದೂ.ಸಂ- 9066296080, ಮೌಲಾನಾ ಆಜಾದ್ ಮಾದರಿ ಶಾಲೆ, ಮುತ್ತೂರು(ದೊಡ್ಡಬಳ್ಳಾಪುರ)ದೂ.ಸಂ-9743239154, ಮೌಲಾನಾ ಆಜಾದ್ ಮಾದರಿ ಶಾಲೆ, ಇಸ್ಲಾಂಪುರ(ನೆಲಮಂಗಲ)ದೂ.ಸಂ 9019847874, ಮೌಲಾನಾ ಆಜಾದ್ ಮಾದರಿ ಶಾಲೆ,ಹೊಸಕೋಟೆ ಟೌನ್, ದೂ.ಸಂ-9632249214.

     

    ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಛೇರಿ ಹೊಸಕೋಟೆ ಮತ್ತು ದೊಡ್ಡಬಳ್ಳಾಪುರ ಉಪ-ವಿಭಾಗ ಹಾಗೂ ತಾಲೂಕು ಮಾಹಿತಿ ಕೇಂದ್ರಗಳು ದೂ.ಸಂ- 7676905779, 8861926851,9986874875,8660197516 ಹಾಗೂ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು (ಗ್ರಾ) ಜಿಲ್ಲೆ. ನಂ.216, 2ನೇ ಮಹಡಿ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ-562110. ದೂ.ಸಂ- 080-29787455. ಸಂಪರ್ಕಿಸಬಹುದಾಗಿದೆ. ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಬೆಂಗಳೂರು ಗ್ರಾಮಾಂತರ ಜಿಲ್ಲೆ *ಬೆಂಗಳೂರು ಉತ್ತರ ಜಿಲ್ಲೆಯಾಗಿ* ಮರು ನಾಮಕರಣ 14 ನೇ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡ ಸರ್ಕಾರ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಲು ಸಂಪುಟ ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

    ನಂದಿ ಗಿರಿಧಾಮದಲ್ಲಿ ನಡೆದ 2025ನೇ ಸಾಲಿನ 14ನೇ ಸಚಿವ ಸಂಪುಟ ಸಭೆಯ ನಂತರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ ಅವರು ಎತ್ತಿನಹೊಳೆ ಯೋಜನೆಯಡಿ 24.1 TMC ನೀರಿನಲ್ಲಿ ಕುಡಿಯುವ ನೀರಿಗೆ 14 TMC ಬೇಕಾಗಿದೆ. ಆದ್ದರಿಂದ ಮೊದಲು ಕುಡಿಯುವ ನೀರನ್ನು ಕೊಡುವ ಯೋಜನೆ ಮುಗಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಅಲ್ಲದೇ 9807 ಕೋಟಿ ಮೊತ್ತದಲ್ಲಿ ಗ್ರಾವಿಟಿ ಮುಖ್ಯ ಕೆನಲ್ ನ‌ ಕೆಲಸ 85% ಮಗಿದಿದೆ. ಹೆಚ್ಚುವರಿಯಾಗಿ ಇದಕ್ಕೆ 8000 ಕೋಟಿ ಬೇಕಾಗಿದೆ. ಬಾಕಿ ಉಳಿದಿರುವುದು 6000 ಚಿಲ್ಲರೆ ಕೋಟಿ. ಎತ್ತಿನಹೊಳೆ ಯೋಜನೆಯಿಂದ ಒಟ್ಟು 9 ಜಿಲ್ಲೆಗಳ 75 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಲಾಗುವುದು ಎಂದರು.

     

    ಬೆಂಗಳೂರು ಭಾಗದ ಜಿಲ್ಲೆಗಳ 31 ವಿಷಯಗಳು ಚರ್ಚೆಯಾಗಿ 2050 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.ಪ್ರತೀ ಜಿಲ್ಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದ್ದು ಇದಕ್ಕೆ 1125.25 ಕೋಟಿ ಮಂಜೂರು ಮಾಡಲಾಗಿದೆ ಎಂದರು.

    ಹಿಂದುಳಿದ ವರ್ಗದ ಅಭ್ಯರ್ಥಿಗಳು IAS, IRS, IPS ಸೇರಿ ಸ್ಪರ್ಧಾತ್ಮಕ ಪರೀಕ್ಷಾ‌ ತರಭೇತಿಗೆ 10 ಕೋಟಿ ವೆಚ್ಚದ ಎರಡು ವಸತಿ ಶಾಲೆಗಳನ್ನು ಬೆಂಗಳೂರಿನಲ್ಲಿ ನಿರ್ಮಿಸಲಾಗುವುದು ಬೆಂಗಳೂರು ಕೇಂದ್ರ ವಿವಿಗೆ ದಿವಂಗತ ಮಾಜಿ ಪ್ರಧಾನಿ “ಡಾ.ಮನಮೋಹನ್ ಸಿಂಗ್ ಹೆಸರಿಡಲು ತೀರ್ಮಾನಿಸಲಾಗಿದೆ ಸಭೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ನೀರಾವರಿ, ಪ್ರವಾಸೋದ್ಯಮ, ರಸ್ತೆ- ಸೇತುವೆ ಮುಂತಾದ ವಿಷಯಗಳಿಗೆ ಆದ್ಯತೆ ನೀಡಿ ಅನುಮೋದನೆ ನೀಡಲಾಗಿದೆ ಎಂದರು

    ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ಎಪಿಎಂಸಿ ವತಿಯಿಂದ 141.5 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.

     

    ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ.

     

    ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಇದುವರೆಗೆ ಆಗಿರುವ ಪ್ರಗತಿ, ಆಗಬೇಕಾಗಿರುವ ಕ್ರಮಗಳು ಸೇರಿದಂತೆ ಹಲವು ವಿಷಯಗಳ ಕುರಿತು ಪರಿಶೀಲಿಸಲು ಶ್ರೀಯುತ ಹೆಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ.

    ಒಟ್ಟಾರೆ ಈ ಭಾಗದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು / ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲು ಈ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾನ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್,ಕೆ ಪಾಟೀಲ್, ಗೃಹ ಮಂತ್ರಿ ಹೆಚ್.ಕೆ ಪಾಟೀಲ್, ಸಚಿವ ಮುನಿಯಪ್ಪ, ಎಂಸಿ ಸುಧಾಕರ್, ಬೈರತಿ ಸುರೇಶ್, ಸಚಿವ ಸಂಪುಟ ಸಚಿವರು, ಅಧಿಕಾರಿಗಳು ಉಪಸ್ಥಿತರಿದ್ದರು.

  • ಇಂದು ಬೆಂಗಳೂರು ಡಿವಿಷನ್ ಕ್ಯಾಬಿನೇಟ್ ಮೀಟಿಂಗ್ : ಮಾಧ್ಯಮಗಳಿಗೆ ಫಸ್ಟ್ ರಿಯಾಕ್ಷನ್.. ಏನ್ ಹೇಳಿದ್ರು ಸಿಎಂ…???

    ಚಿಕ್ಕಬಳ್ಳಾಪುರ : ರಾಜ್ಯದ ಪ್ರತಿ ಡಿವಿಷನ್ಗಳಲ್ಲಿ ಸಚಿವ ಸಂಪುಟ ಸಭೆ ನೆಡೆಸುತ್ತಿದ್ದೇವೆ, ಅಂತೆಯೇ ಇಂದು ಬೆಂಗಳೂರು ವಿಭಾಗದ ಸಚಿವ ಸಂಪುಟ ಸಭೆ ನೆಡೆಸುತ್ತಿದ್ದೇವೆ, ಈ ಸಭೆ ಕೇವಲ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಸೀಮಿತವಲ್ಲ ಈ ಸಭೆಯಲ್ಲಿ ಬೆಂಗಳೂರು ವಿಭಾಗದ ಎಲ್ಲಾ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

     

    ನಂದಿಗಿರಿಧಾಮದಲ್ಲಿ ಹಮ್ಮಿಕೊಂಡಿರುವ ಸಚಿವ ಸಂಪುಟ ಸಭೆಗೂ ಮೊದಲು ಭೋಗ ನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

     

    ಸ್ಥಳೀಯರಿಗೆ ವಿಶೇಷ ಪ್ಯಾಕೇಜ್ ಅಥವಾ ಘೋಷಣೆ ಉಂಟೆ…??

    ಸಚಿವ ಸಂಪುಟದಲ್ಲಿ ಹೊಸದಾಗಿ ಯಾವುದೇ ಘೋಷಣೆ ಇಲ್ಲ,ನಮ್ಮ ಬಜೆಟ್ ನಲ್ಲಿ ಹೇಳಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಚಿವ ಸಂಪುಟ ಶ್ರಮಿಸಲಿದೆ, ಅಲ್ಲದೇ ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳಿದ್ದರೆ ಮಾಡಲಾಗುವುದು ಎಂದು ಹೇಳಿದರು.

     

    ಬಿಜೆಪಿಯವರು ಹಗಲು ಕನಸು ಕಾಣುವುದನ್ನು ಬಿಡಲಿ

    ಸರ್ಕಾರ ಪತನವಾಗಲಿದೆ ಸೆಪ್ಟೆಂಬರ್ ನಲ್ಲಿ ಕಾಂಗ್ರೆಸ್ ಸರ್ಕಾರ ಮುಕ್ತಾಯವಾಗಲಿದೆ ಎಂಬ ಬಿಜೆಪಿ ಮಾತುಗಳಿಗೆ ಉತ್ತರ ನೀಡಿದ ಅವರು ಬಿಜೆಪಿ ಪಕ್ಷದವರು ಶುದ್ಧ ಸುಳ್ಳು ಹೇಳುತ್ತಾರೆ ನಾನು ಈಗಾಗಲೇ ಮೈಸೂರಿನಲ್ಲಿ ಹೇಳಿದ್ದೇನೆ ನಮ್ಮ ಸರ್ಕಾರ ಬಂಡೆಯಂತೆ ದೃಢವಾಗಿಇರಲಿದೆ. ನಾವೆಲ್ಲರೂ ಒಗ್ಗಟ್ಟಿನಲ್ಲಿ ಇದ್ದೀವೆ, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಅವರು ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಅವರ ಸೇವೆ ಏನ್ಎಂಬುದನ್ನು ಅವರೇ ತಿಳಿಸಲಿ ಎಂದರು.

     

     

    ಐದು ವರ್ಷ ನಾನೇ ಸಿಎಂ’-ಸಿದ್ದರಾಮಯ್ಯ ದೃಢ ಹೇಳಿಕೆ

    ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೃಢವಾಗಿ ಹೇಳಿದ್ದಾರೆ.ಬಿಜೆಪಿಯವರು ನೀವು ಬೇಗ ಅಧಿಕಾರದಿಂದ ಇಳಿಯಲಿದ್ದೀರಿ ಎಂದು ಹೇಳುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಬಿಜೆಪಿಯವರು ನಮ್ಮ ಹೈಕಮಾಂಡಾ ಹೇಳಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು ಅವರೇನು ನಮ್ಮ ಹೈ ಕಮಾಂಡಾ ಇಲ್ಲವಲ್ಲ ಅವರೆಲ್ಲ ಬಿಜೆಪಿ ಪಕ್ಷದವರು ಅವರ ಅಭಿಪ್ರಾಯ ಅವರದು ನಮ್ಮಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲ ಸಂಪೂರ್ಣ 5ವರ್ಷ ನಾನೇ ಸಿಎಂ ಆಗಿ ಇರ್ತೀನಿ ಅಂದರು.

     

    ಒಲಮೀಸಲಾತಿ ಸಮೀಕ್ಷೆ ಕುರಿತು ಮಾತನಾಡಿದ ಅವರು ಜಾತಿ ಸಮೀಕ್ಷೆಯನ್ನು ಪರಿಶಿಷ್ಟ ಸಮುದಾಯಕ್ಕೆ ಸಹಕಾರಿಯಾಗುವಂತೆ 3ಹಂತಗಳಲ್ಲಿ ಮಾಡಲಾಗುತ್ತಿದೆ.ಮನೆಬಾಗಿಲಿಗೆ ಅಧಿಕಾರಿಗಳ ಮೂಲಕ ಇಲ್ಲವೇ ಬೂತ್ ಮಟ್ಟದ ಸಭೆಗಳ ಮೂಲಕ ಅಲ್ಲದೇ ಆನ್ಲೈನ್ ನಲ್ಲೂ ಸಮೀಕ್ಷೆ ನೆಡೆಸುತ್ತಿದ್ದು ಜನರಿಗೆ ಯಾವುದು ಅನುಕೂಲವೋ ಆ ಮಾರ್ಗದಲ್ಲಿ ತಮ್ಮ ಜಾತಿ ನೋಂದಣಿ ಮಾಡಿಸಲಿ ಎಂದರು.

     

     

     

     

  • ರಾಜ್ಯ ವಿ-ಕರವೇ ವತಿಯಿಂದ ತಾಲ್ಲೂಕಿನ ವೈದ್ಯರಿಗೆ ಸನ್ಮಾನ

    ದೊಡ್ಡಬಳ್ಳಾಪುರ: ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ( ರಿ ) ವತಿಯಿಂದ ಸನ್ಮಾನಿಸಲಾಯಿತು.

     

    ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಿರೀಶ್ ಮತ್ತು ಮಹಿಳಾ ವೈದ್ಯೆ ಡಾ. ಅರ್ಚನಾ ರವರನ್ನು ವೈದ್ಯರ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.

     

    ಈ ಸಮಯದಲ್ಲಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್, ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್, ಪ್ರಮುಖರಾದ ಚಂದ್ರು ಸೋಮು, ಮಹಿಳಾ ಘಟಕದ ರಾಜ್ಯ ಪದಾಧಿಕಾರಿಗಗಳಾದ ಕುಮುದ ಜಗದೀಶ್ ಸೇರಿದಂತೆ ಹಲವರು ಹಾಜರಿದ್ದರು.

  • ಸ್ಥಳೀಯ ಸಮಸ್ಯೆಗಳನ್ನು ಕುರಿತು ಸಚಿವರಿಗೆ ಮನವಿ ಸಲ್ಲಿಕೆ : ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ಕೊಟ್ಟ ಸಚಿವರು

    ದೊಡ್ಡಬಳ್ಳಾಪುರ ಕನ್ನಡ ಪಕ್ಷ ಹಾಗೂ ರೈತ ಸಂಘ ಹಾಗೂ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಎಲ್ಲಾ ಸದಸ್ಯರ ವತಿಯಿಂದ ಕರ್ನಾಟಕ ರಾಜ್ಯ ಆಹಾರ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಗಳಾದ ಕೆ ಹೆಚ್ ಮುನಿಯಪ್ಪ ರವರಿಗೆ ಮನವಿ ಸಲ್ಲಿಸಲಾಯಿತು.

    ಬೆಂಗಳೂರು ಗ್ರಾಮಾಂತರ ,ಚಿಕ್ಕಬಳ್ಳಾಪುರ, ಹಾಗೂ ದೇವನಹಳ್ಳಿ ಭಾಗದ ರೈತರಿಗೆ ಕಾರ್ಮಿಕರಿಗೆ ಹಾಗೂ ನೇಕಾರರಿಗೆ ಆಗುತ್ತಿರುವ ಅನಾನುಕೂಲತೆಗಳು ಹಾಗೂ ತೊಂದರೆಗಳನ್ನು ಹೋರಾಟಗಾರರು ಸಚಿವರಿಗೆ ತಿಳಿಸಿದರು .

    ದೇವನಹಳ್ಳಿ ಚನ್ನರಾಯಪಟ್ಟಣದ ರೈತರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಮತ್ತು ಭಾಷೆಟ್ಟಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಲುಷಿತವಾಗಿರುವ ನೀರನ್ನು ಬಿಡುತ್ತಿರುವ ಕೈಗಾರಿಕೆಗಳಿಗೆ ಎಚ್ಚರಿಕೆಯನ್ನು ಕೊಟ್ಟು ಕಂಪನಿಗಳಲ್ಲೇ ನೀರನ್ನು ಶುದ್ಧ ಕರಿಸಲು, ಸುತ್ತಮುತ್ತಲಿನ ಊರಿನ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಈಗಾಗಲೇ ಸ್ಥಾಪನೆಯಾಗಿರುವ ಇಎಸ್ಐ ಆಸ್ಪತ್ರೆಯನ್ನು ಈ ಕೂಡಲೇ ಪ್ರಾರಂಭಿಸುವಂತೆ ಮನವಿ ಮಾಡಿದರು .

     

    ಈ ವಿಚಾರವನ್ನು ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಗಳು ಹಾಗೂ ಮಾನ್ಯ ಉಪಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಈ ಭಾಗದ ರೈತರು ಕಾರ್ಮಿಕರು ನೇಕಾರರ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆಂದು ಮಾನ್ಯ ಉಸ್ತುವಾರಿ ಸಚಿವರು ಆಶ್ವಾಸನೆ ನೀಡಿದರು.

     

    ಈ ಸಂದರ್ಭದಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸಂಜೀವ್ ನಾಯಕ್ , ರೈತ ಸಂಘದ ಹನುಮೇಗೌಡ, ಮುತ್ತೇಗೌಡ, ಕನ್ನಡ ಪಕ್ಷದ ಜಿಲ್ಲಾ ಅಧ್ಯಕ್ಷ ಎಚ್ ಮುನಿ ಪಾಪಯ್ಯ ,ತಾಲೂಕು ಅಧ್ಯಕ್ಷರಾದ ಡಿ ವೆಂಕಟೇಶ್, ತೂಬಗೆರೆ ಶರಿಫ಼್, ಸಂಘಟನಾ ಕಾರ್ಯದರ್ಶಿ ಪರಮೇಶ್‍, ಶಿವರಾಜ್ ಕುಮಾರ್ ಸೇನಾ ಸಮಿತಿಯ ಅಧ್ಯಕ್ಷ ರಮೇಶ್, ಗುರುರಾಜ್ , ಹೊನ್ನಘಟ್ಟ ಮೂರ್ತಿ, ಮುರಳಿ, ಕೃಷ್ಣ ಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.

  • 1923 ನೇ ದಿನದ ಅನ್ನದಾಸೋಹ : ವಿಶೇಷ ಕಾರ್ಯಕ್ರಮಗಳ ಆಯೋಜನೆ ಜೊತೆಗೆ ನಿರ್ಗತಿಕರಿಗೆ ವೃದ್ಧರಿಗೆ ಆಹಾರ ಮತ್ತು ವಸ್ತ್ರ ವಿತರಣೆ

    ದೊಡ್ಡಬಳ್ಳಾಪುರ : ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಯಾವುದೇ ಅಡೆತಡೆಗಳಿಲ್ಲದೆ ನಿರಂತರ ಅನ್ನದಾಸೋಹ ಕಾರ್ಯಕ್ರಮವು ಹಸಿದವರಿಗೆ ಆಹಾರ ವಿತರಣೆ ಮಾಡುತ್ತಿದೆ . ಈ ಕಾರ್ಯಕ್ರಮಕ್ಕೆ ಈಗ 1923 ನೇ ದಿನದ ಸಂಭ್ರಮ.

    ಹೌದು ತಾಲೂಕಿನ ದರ್ಗಾ ಜೋಗಿಹಳ್ಳಿಯಲ್ಲಿ ನಿತ್ಯ ನಿರಂತರವಾಗಿ ಅನ್ನದಾಸೋಹವನ್ನು ಮಲ್ಲೇಶ್ ಮತ್ತು ತಂಡ ನೆರವೇರಿಸಿಕೊಂಡು ಬರುತ್ತಿದ್ದು , ಇಂದು ತಾಲ್ಲೂಕಿನ ಹಲವಾರು ದಾನಿಗಳ ನೆರವಿನಿಂದ ಅದ್ದೂರಿ ಕಾರ್ಯಕ್ರಮವನ್ನು ನಿರಂತರ ಅನ್ನದಾಸೋಹ ಸಮಿತಿ ಆಯೋಜನೆ ಮಾಡಿತ್ತು.

     

    ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ ನಿರಂತರ ಅನ್ನದಾಸೋಹ ಕುರಿತಂತೆ ಹಲವು ಮಂದಿ ಹಲವು ಬಗ್ಗೆ ಮಾತನಾಡುತ್ತಾರೆ ಪ್ರಮುಖವಾಗಿ ಈ ಕಾರ್ಯಕ್ರಮವು ಅವಶ್ಯಕತೆ ಇತ್ತಾ ಈ ರೀತಿ ಆಹಾರ ವಿತರಣೆ ಮಾಡುವ ಮೂಲಕ ಜನರನ್ನ ಸೋಮಾರಿಯಗಳನ್ನಾಗಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ ಈ ಸ್ಥಳಕ್ಕೆ ಭೇಟಿ ಕೊಟ್ಟು ವಾಸ್ತವಿಕತೆ ಅರಿತರೆ ಮಾತ್ರ ನಮಗೆ ತಿಳಿಯುತ್ತದೆ ಈ ಕಾರ್ಯಕ್ರಮದ ಅವಶ್ಯಕತೆ ಇಲ್ಲಿ ಖಂಡಿತವಾಗಿಯೂ ಇದೆ ಎಂದು ಎಷ್ಟೇ ಅಡ್ಡಿ ಆತಂಕಗಳು ಬಂದರೂ ಹಿಂದೆ ಸರಿಯದೆ ಮಲ್ಲೇಶ್ ರವರು ನಿತ್ಯ ಅನ್ನದಾಸೋಹ ಮಾಡುತ್ತಿದ್ದಾರೆ ಅವರಿಗೆ ದೇವರು ಮತ್ತಷ್ಟು ಶಕ್ತಿ ನೀಡುವ ಮೂಲಕ ಈ ಕಾರ್ಯಕ್ರಮವು ಮತ್ತಷ್ಟು ಮುಂದೆ ಸಾಗಲಿ ಎಂದರು.

    ಸ್ಥಳೀಯ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ಮಾತನಾಡಿ ನಿರಂತರ ಅನ್ನದಾಸೋಹ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ನಾನು ಸದಾ ಬೆಂಬಲವಾಗಿ ನಿಂತಿರುತ್ತೇನೆ, ಮಾತನಾಡುವ ಮಂದಿ ಕೆಲಸ ಮಾಡಲು ಬರುವುದಿಲ್ಲ, ಯಾವುದೇ ಅಪೇಕ್ಷೆ ಇಲ್ಲದೆ ಮಲ್ಲೇಶ್ ಪ್ರತಿನಿತ್ಯ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡುತ್ತಾರೆ. ಅವರ ಈ ಜನಪರ ಕಾಳಜಿ ಮತ್ತಷ್ಟು ಹೆಚ್ಚಾಗಲಿ ಅವರಿಗೆ ನಮ್ಮ ಸಹಕಾರ ಸದಾ ಇದ್ದೇ ಇರುತ್ತದೆ ಎಂದರು.

    ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದಲ್ಲಿ ನಿರ್ಗತಿಕ ಕಡುಬಡವರಿಗೆ ಆಹಾರ ವಿತರಣೆ ಜೊತೆಗೆ ವಯೋವೃದ್ಧರಿಗೆ ಮಹಿಳೆಯರಿಗೆ ಬಟ್ಟೆ ವಿತರಣೆ ಮಾಡಲಾಗಿದೆ ಮಲ್ಲೇಶ್ವರ ಕಾರ್ಯ ಶ್ಲಾಘನೀಯ, ನಮ್ಮ ಕೈಲಾದ ಸೇವೆಯನ್ನು ಸಮಾಜಕ್ಕೆ ಮಲ್ಲೇಶ್ ಮುಖಾಂತರ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

    ನಾಯಕ ನಟ ಹಾಗೂ ನಿರೂಪಕ ರಾಕೇಶ್ ರಾಮೇಗೌಡ ಮಾತನಾಡಿ ಇದೊಂದು ಹೆಮ್ಮೆಯ ಸಂಗತಿ ಪ್ರತಿನಿತ್ಯ ನೂರಾರು ಹಸಿದ ಹೊಟ್ಟೆಗಳಿಗೆ ಆಹಾರ ವಿತರಣೆ ಮಾಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಮಲ್ಲೇಶ್ ರವರ ಸಂಗಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮ್ಮ ಪುಣ್ಯ ಎಂದರು ಹಾಗೂ ಇಂತಹ ಉತ್ತಮ ಕಾರ್ಯಕ್ರಮವು ನಿತ್ಯ ನಿರಂತರ ಸಾಗಲಿ ಎಂದು ಹಾರೈಸಿದರು.

     

    ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜು ಮಾತನಾಡಿ ಈ ಕಾರ್ಯಕ್ರಮದಲ್ಲಿ ಆಹಾರ ಪಡೆಯಲು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಾನಿಗಳ ಅವಶ್ಯಕತೆ ಹೆಚ್ಚಾಗಿದೆ , ಯುವ ಸಮುದಾಯವು ತಮ್ಮ ವಿಶೇಷ ದಿನಗಳನ್ನು ಹುಟ್ಟು ಹಬ್ಬದ ಆಚರಣೆಗಳನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸುವ ಮೂಲಕ ಸಂಭ್ರಮಾಚರಣೆ ಮಾಡುವುದು ಉತ್ತಮ ನಿಮ್ಮಿಂದ ನೂರಾರು ಹಸಿದ ಹೊಟ್ಟೆಗಳಿಗೆ ಆಹಾರ ದೊರೆಯಲಿದೆ ಎಂದರು.

     

     

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಕಾರ್ಯಕ್ರಮವು ತಾಲೂಕಿನ ಎಲ್ಲಾ ಸಂಘಟನೆಗಳು ಹಾಗೂ ದಾನಿಗಳ ನೆರವಿನಿಂದ ವಕೀಲರಾದ ರವಿಮಾವಿನಕುಂಟೆ ಅನುಪಸ್ಥಿತಿಯಲ್ಲಿ ಹಲವು ಪ್ರಮುಖರ ಸಹಾಯಸ್ತದೊಂದಿಗೆ ಹಸಿದವರಿಗೆ ಆಹಾರ ವಿತರಣೆ ಮಾಡುವ ಕಾರ್ಯಕ್ರಮವು ಹಬ್ಬದಂತೆ ನಡೆದಿದೆ ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸುವ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದರು.

     

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಕಲಾವಿದರ ಸಂಘದ ಅಧ್ಯಕ್ಷರಾದ ಎ. ಸಿ ಅಶೋಕ್, ವಿಶ್ವ ಮಾನವ ಡಾ.ರಾಜಕುಮಾರ್ ಸಂಘದ ರಾಜ್ಯಾಧ್ಯಕ್ಷರಾದ ಬನಾಮು ರಾಜು, ಮುಖಂಡರಾದ ರಂಗಸ್ವಾಮಿ, ಸಂಗೀತಾ ನಿರ್ದೇಶಕ ರಾಜನ್ ನಾಗೇಂದ್ರ ರವರ ಧರ್ಮಪತ್ನಿ ಜಯಲಕ್ಷ್ಮಮ್ಮ , ಚಿತ್ರ ನಟಿ ಮೈಸೂರ್ ಮಂಜುಳಾ,ಚಿತ್ರ ನಟ ನಾಗರಾಜ್, ನಿರೂಪಕ ಹಾಗೂ ನಟರಾದ ರಾಕೇಶ್ ರಾಮೇಗೌಡ, ನಿರೂಪಕಿ ಹಾಗೂ ನಟಿ ಸುಷ್ಮಾ ಗೌಡ, ನಾಗರಾಜು, ಬಿಎಂಟಿಸಿ ಚಾಲಕ ಸೇಲ್ವಮ್ ರವರ ಕುಟುಂಬಸ್ಥರು, ನಮ್ಮ ಜೇನುಗೂಡು ತಂಡದ ಎಲ್ಲಾ ಸದಸ್ಯರು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

  • ಜಾಲಪ್ಪ ಲಯನ್ಸ್ ಸಂಸ್ಥೆಗೆ ಅತ್ಯುತ್ತಮ ಕ್ಲಬ್ ಪುರಸ್ಕಾರ : ಸತತ 4ನೇ ವರ್ಷವೂ 23 ಪಾರಿತೋಷಕಗಳೊಂದಿಗೆ 11 ವಿಭಾಗಗಳಲ್ಲಿ ಪ್ಲಾಟಿನಮ್ ಸೇವಾ ಪ್ರಶಸ್ತಿ

    ದೊಡ್ಡಬಳ್ಳಾಪುರ: ತಾಲ್ಲೂಕಿನ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ಗೆ 2024-25ನೇ ಸಾಲಿನ ಅತ್ಯುತ್ತಮ ಲಯನ್ಸ್ ಸಂಸ್ಥೆ ಪುರಸ್ಕಾರ ಲಭಿಸಿದೆ.

    ಈ ಕುರಿತು ನಗರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ನಿರ್ಗಮಿತ ಅಧ್ಯಕ್ಷ ಜೆ.ಆರ್.ರಾಕೇಶ್‌ ಮಾತನಾಡಿದರು ಲಯನ್ಸ್ ಜಿಲ್ಲೆ 317ಎಫ್ ವ್ಯಾಪ್ತಿಯ 88 ಲಯನ್ಸ್ ಸಂಸ್ಥೆಗಳ ಪೈಕಿ ಸೇವಾ ಹಾಗೂ ಆಡಳಿತಾತ್ಮಕ ಕಾರ್ಯಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕ್ಲಬ್ ಎಂಬ ಹೆಗ್ಗಳಿಕೆಗೆ ನಮ್ಮ ಕ್ಲಬ್ ಪಾತ್ರವಾಗಿದ್ದು, 23 ಮಹತ್ವದ ಪಾರಿತೋಷಕಗಳನ್ನು ಪಡೆದಿದೆ.ಕಳೆದ 4 ವರ್ಷಗಳ ಹಿಂದೆಯಷ್ಟೇ ಸ್ಥಾಪನೆಯಾದ ನಮ್ಮ ಈ ಸಂಸ್ಥೆ ಸತತ 4ನೇ ಬಾರಿಯೂ ಅತ್ಯುತ್ತಮ ಲಯನ್ಸ್ ಕ್ಲಬ್ ಪುರಸ್ಕಾರ ಪಡೆಯುತ್ತಿರುವುದು ಮಹತ್ವದ ಸಾಧನೆಯಾಗಿದೆ ಎಂದರು.

    ಸಾಧನೆಯ ಪ್ರತಿ ಹಂತದಲ್ಲೂ ಶ್ರೀ ದೇವರಾಜ ಅರಸ್‌ ಶಿಕ್ಷಣ ಸಂಸ್ಥೆಯ ಸಹಕಾರವೂ ಪ್ರಮುಖವಾದದ್ದು. ಮಹತ್ವದ ಸಾಧನೆಯಲ್ಲಿ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ತಿಳಿಸಿದರು.

     

    ಲಯನ್ಸ್‌ ಜಿಇಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್‌ ಮಾತನಾಡಿ, ಸತತ 4ನೇ ಬಾರಿಗೆ ಅತ್ಯುತ್ತಮ ಕ್ಲಬ್‌ ಪುರಸ್ಕಾರಕ್ಕೆ ಪಾತ್ರವಾಗಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ನಂಬರ್‌ 1 ಉತ್ತಮ ಕ್ಲಬ್‌ ಪುರಸ್ಕಾರ, ಉತ್ತಮ ಅಧ್ಯಕ್ಷ, ಖಜಾಂಚಿ ಪ್ಲಾಟಿನಂ ಪುರಸ್ಕಾರ, ಉತ್ತಮ ಕಾರ್ಯದರ್ಶಿ ಡೈಮಂಡ್‌ ಪುರಸ್ಕಾರ ಸೇರಿದಂತೆ ಜಿಇಟಿ ಸಂಯೋಜಕ, ಡಿಸಿ ಮಧುಮೇಹ, ಮಧುಮೇಹ ತಪಾಸಣೆ, ದೃಷ್ಟಿ ತಪಾಸಣೆ-ಚಿಕಿತ್ಸೆ, ಹಸಿವು ನಿವಾರಣೆ, ಕ್ಲಬ್‌ ವಿಸ್ತರಣೆ, ಮಾನವೀಯ ಸೇವೆ, ಸ್ಕಾಪ್‌ಬುಕ್‌, ಕ್ವೆಸ್ಟ್‌ ವಿಭಾಗಗಳಲ್ಲಿ ಪ್ಲಾಟಿನಂ, ದಂತ ತಪಾಸಣೆ, ಪರಿಸರ, ಫೂಟ್‌ಪಲ್ಸ್‌ ಥೆರಪಿಯಲ್ಲಿ ಡೈಮಂಡ್, ಇಮೇಜ್‌ ಬಿಲ್ಡಿಂಗ್, ಸ್ವಚ್ಛಭಾರತ್‌ ಅಭಿಯಾನ, ಆರೋಗ್ಯ ಶಿಬಿರಗಳು, ಯುವ ಸಬಲೀಕರಣ, ರಕ್ತದಾನ ವಿಭಾಗಗಳಲ್ಲಿ ಸುವರ್ಣ ಹಾಗೂ ಪಶುವೈದ್ಯಕೀಯ ವಿಭಾಗದಲ್ಲಿ ಬೆಳ್ಳಿ ಪುರಸ್ಕಾರಗಳನ್ನು ಸಂಸ್ಥೆ ಪಡೆದಿದೆ ಎಂದು ವಿವರಿಸಿದರು.

    ಕ್ಲಬ್‌ನ ನಿಯೋಜಿತ ಅಧ್ಯಕ್ಷ ಪ್ರೊ.ರವಿಕಿರಣ್‌.ಕೆ.ಆರ್ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಕ್ಲಬ್‌ನ ಸೇವಾ ಕಾರ್ಯಗಳ ಮೂಲಕ ತಲುಪಲಾಗಿದೆ. ಪ್ರಸಕ್ತ ಅವಧಿಯಲ್ಲಿ ಜೆ.ಆರ್.ರಾಕೇಶ್‌ ಅವರ ನೇತೃತ್ವದಲ್ಲಿ ನಡೆಸಿದ ಸೇವಾ ಕಾರ್ಯಗಳು ಗಣನೀಯ. ಮಧುಮೇಹ ವಿಶೇಷ ಕ್ಲಬ್‌ ಆಗಿ ನೊಂದಾಯಿತವಾಗಿರುವ ಸಂಸ್ಥೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸೇವಾ ಕಾರ್ಯಗಳು ನಡೆಯುತ್ತಿವೆ. ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಸಹಯೋಗದಲ್ಲೂ ಮಹತ್ವದ ಯೋಜನೆಗಳು ಅನುಷ್ಠಾನಗೊಂಡಿವೆ. ಜಿಲ್ಲೆ 317ಎಫ್‌ನ ಹಲವು ಮುಖಂಡರ ಮಾರ್ಗದರ್ಶನವೂ ಗಣನೀಯ ಎಂದು ತಿಳಿಸಿದರು.

     

     

    *ಜಿಲ್ಲಾ ರಾಜ್ಯಪಾಲರಿಂದ ಪುರಸ್ಕಾರ:*

    ಬೆಂಗಳೂರಿನ ಹೆಬ್ಬಾಳ ಬಳಿಯ ಯುಎಎಸ್ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಜಿಲ್ಲೆ317ಎಫ್‌ನ 2024-25ನೇ ಸಾಲಿನ ಪುರಸ್ಕಾರ ಪ್ರದಾನ, ಅಭಿನಂದನಾ ಕಾರ್‍ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲ ಸಿ.ಎಂ.ನಾರಾಯಣಸ್ವಾಮಿ, ಅತ್ಯುತ್ತಮ ಲಯನ್ಸ್ ಕ್ಲಬ್ ಬ್ಯಾನರ್ ಅನ್ನು ಸಂಸ್ಥೆಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಇದೇ ವೇಳೆ ವಿವಿಧ 23 ಪಾರಿತೋಷಕಗಳನ್ನು ಪ್ರದಾನ ಮಾಡಲಾಯಿತು ಎಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಶ್ರೀದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಲಯನ್ಸ್‌ ಜಿಲ್ಲಾ ಮಧುಮೇಹ ಸಂಯೋಜಕ ಎಲ್.ಎನ್.ಪ್ರದೀಪ್‌ಕುಮಾರ್‌, ಲಯನ್ಸ್‌ ಕಾರ್ಯದರ್ಶಿ ಕೆ.ಸಿ.ನಾಗರಾಜ್, ಖಜಾಂಚಿ ಎಸ್.ರವಿಕುಮಾರ್, ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್, ಲಯನ್ಸ್‌ ಉಪಾಧ್ಯಕ್ಷ ಮುನಿರಾಮೇಗೌಡ, ನಿಯೋಜಿತ ಕಾರ್ಯದರ್ಶಿ ಸುಮಾ ಪ್ರಸನ್ನ, ಮುಕೇಶ್, ಪದಾಧಿಕಾರಿಗಳಾದ ವರದರಾಜು, ವೀಣಾ, ಬಾಬುಸಾಬಿ, ಜಿಯಾವುಲ್ಲಾಖಾನ್, ಅರುಂಧತಿ, ಲಕ್ಷ್ಮಿಶ್ರೀನಿವಾಸ್, ಪ್ರಸನ್ನಕುಮಾರ್, ಹರ್ಷ, ಮಂಜುನಾಥ್, ಕಾವ್ಯ, ಮಂಜುಳಾ, ರೋಜಾ, ವೆಂಕಟೇಶ್, ರಮೇಶ್, ರಾಘವೇಂದ್ರಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.